ಮನೋಹರನ ಯೋಜನೆಯಂತೆ ಇಂಟರ್ನ್ಯಾಷನಲ್ ಮ್ಯಾತ್ ಕ್ವಿಝ್ನಲ್ಲಿ ವಿವೇಕನೇ ಗೆದ್ದ. ಬಹುಮಾನದ ಹಣ ಮತ್ತು ಕಾರು ಒಂದು ವಾರದಲ್ಲಿ ಮನೆಗೆ ಬಂತು. ಆದರೆ….
೨೦೧೫ರ ವಾರ್ಷಿಕ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಕಥೆ
ಅಧ್ಯಾಯ ೧
ಪಕ್ಕದಲ್ಲಿದ್ದ ಕಂಬಕ್ಕೆ ಒರಗಿ ಕಣ್ಣುಮುಚ್ಚಿಕೊಂಡು ಕುಳಿತಳು, ರಾಧ. ಕಣ್ಣುಗಳು ಆಗಲೇ ತೇವಗೊಂಡಿದ್ದವು. ಮುಚ್ಚಿದ್ದ ರೆಪ್ಪೆಗಳನ್ನೂ ಮೀರಿ ಬರುತ್ತಿದ್ದ ಕಣ್ಣೀರನ್ನು ಸೀರೆಯ ಸೆರಗಿನಿಂದ ಒರೆಸಿದಳು.
ಪಕ್ಕದಲ್ಲಿದ್ದ ಮನೋಹರ ಅವಳ ಭುಜ ತಟ್ಟಿ ಹೇಳಿದ, “ರಾಧಾ, ಸಮಾಧಾನ ಮಾಡ್ಕೊ. ಏನೂ ಆಗಲ್ಲ.”
“ಇನ್ನೇನ್ರಿ ಆಗ್ಬೇಕು. ಅವಳು ಕಾಲಿಟ್ಟಿದ್ದೆ ಕಾಲಿಟ್ಟಿದ್ದು, ನೋಡಿ ಎಂಥ ಗತಿ ಬಂತು.”
ರಾಧಾ ಕುಳಿತ ಬೆಂಚಿನ ಹಿಂದಿನ ಬೆಂಚಿನಲ್ಲಿ ಕುಳಿತಿದ್ದ ಚಿತ್ರಾಳಿಗೆ ತನ್ನ ಅತ್ತೆಯ ಮಾತು ಕೇಳಿ ತಡೆಯಲಾರದಷ್ಟು ಸಂಕಟವಾಯಿತು. ಉಸಿರು ಬಿಗಿಹಿಡಿದು, ಅಳುವನ್ನು ತಡೆದುಕೊಂಡಳು. ಅದನ್ನು ಗಮನಿಸಿದ ಮನೋಹರ, “ಲೇ ನಿನಗೆ ಯಾವಾಗ ಏನು ಮಾತಾಡಬೇಕು, ಏನು ಮಾತಾಡಬಾರದು ಅಂತಲೇ ಗೊತ್ತಾಗಲ್ವಲ್ಲೇ. ಪಾಪ ಚಿತ್ರಾಳಿಗೂ ಸಂಕಟ ಇದೆ, ಈ ಸಂದರ್ಭದಲ್ಲಿ ಅವಳನ್ನು ಹಾಗನ್ನೋದು ಸರಿಯಿಲ್ಲ. ಧೈರ್ಯ ತಂದುಕೊ. ಡಾಕ್ಟರ್ ಏನಂತಾರೋ ನೋಡೋಣ” ಎಂದ.
“ಇಲ್ಲಿ ವಿವೇಕ್ ಎಂಬ ಪೇಷೆಂಟ್ ಯಾವ ರೂಮಲ್ಲಿದ್ದಾರೆ?”
ರಿಸೆಪ್ಷನಿಸ್ಟ್ ಬಳಿಯಲ್ಲಿ ಯಾರದೋ ಮಾತು ಕೇಳಿಸಿತು. ಕತ್ತೆತ್ತಿ ನೋಡಿದಳು, ಚಿತ್ರಾ. ಕಣ್ಣೊರೆಸಿಕೊಂಡು ರಿಸೆಪ್ಷನ್ ಕಡೆ ಹೋಗುತ್ತಾ “ಅಮ್ಮಾ, ಬಾ” ಎಂದಳು.
ಶಾರದ ಅವಳನ್ನು ತಬ್ಬಿಕೊಳ್ಳುತ್ತಾ “ಏನೇ, ಏನಾಯ್ತೇ? ಗಾಬರಿಯಿಂದ ಫೋನ್ ಮಾಡಿದ್ಯಲ್ಲ. ಅಳಿಯಂದ್ರು ಈಗ ಹೇಗಿದ್ದಾರೆ?”
“ಶಾರದಾ, ಎಲ್ಲ ಒಂದೇ ಉಸಿರಲ್ಲಿ ಕೇಳಿದರೆ, ಅವಳು ತಾನೇ ಹೇಗೆ ಹೇಳ್ತಾಳೆ, ಮೊದಲು ಎಲ್ಲಾದರೂ ಕೂತು ನಿಧಾನವಾಗಿ ಮಾತಾಡೋಣ” ಎಂದ, ಶಾರದಳ ಜೊತೆ ಬಂದಿದ್ದ ಅವಳ ಗಂಡ ಅನಂತರಾಮ್.
ಅಲ್ಲೇ ಇದ್ದ ಬೆಂಚಿನಮೇಲೆ ಕುಳಿತರು. ಚಿತ್ರಾ ನಿಧಾನವಾಗಿ ಶುರು ಮಾಡಿದಳು. “ನನಗೆ ಇವತ್ತು ಬೆಳಗ್ಗೆ ನಾಲ್ಕು ಗಂಟೆಗೇ ಎಚ್ಚರ ಆಗ್ಬಿಡ್ತು. ಇವರನ್ನೂ ಎಬ್ಬಿಸಿದೆ. ಹೇಗೂ ಭಾನುವಾರ, ಚಳಿ ಬೇರೆ ಇತ್ತು. ಯಾವುದಾದರೂ ರೊಮ್ಯಾಂಟಿಕ್ಕಾಗಿರೋ ಸಿನಿಮಾ ನೋಡೋಣ ಅಂದೆ. ನಿದ್ದೆಗಣ್ಣಲ್ಲೆ ತಲೆ ಆಡಿಸಿದರು. ಡಿವಿಡಿ ಹಾಕಿಬಿಟ್ಟು ಬಂದು ಅವರ ಪಕ್ಕ ಕೂತುಕೊಂಡೆ. ಅವರೂ ಎದ್ದು ಕೂತರು. ಒಂದು ಸ್ವಲ್ಪ ಹೊತ್ತಿಗೆ ಹಾಸಿಗೆ ಮೇಲೆ ಅನಾಮತ್ತು ಬಿದ್ದರು. ನಿದ್ದೆ ಬಂದುಬಿಡ್ತೇನೊ ಅಂದ್ಕೊಂಡೆ. ಸರಿಯಾಗಿ ದಿಂಬಿನ ಮೇಲೆ ಮಲಗಿ ಅಂತ ತಡವಿದೆ. ಎಷ್ಟೇ ಅಲುಗಾಡಿಸಿದರೂ ಅವರಿಗೆ ಎಚ್ಚರಾನೇ ಆಗ್ಲಿಲ್ಲ. ನೀರು ಚಿಮುಕಿಸಿದೆ. ಆದರೂ ಪ್ರಜ್ಞೆ ಬರಲಿಲ್ಲ. ಆಗ ಗಾಬರಿ ಆಯಿತು. ಅತ್ತೆ ಮಾವನಿಗೆ ಹೇಳಿದೆ. ತಕ್ಷಣ ಈ ಆಸ್ಪತ್ರೆಗೆ ಬಂದ್ವಿ.”
ಡಾಕ್ಟರ್ ಹೊರಬಂದರು. ಚಿತ್ರಾಳ ಅತ್ತೆ ಮಾವ ವೈದ್ಯರ ಬಳಿ ಹೋಗುತ್ತಿದ್ದದ್ದು ಕಂಡು ಚಿತ್ರಾ, ಶಾರದಾ, ಅನಂತರಾಮ್ ಸಹ ವೈದ್ಯರ ಬಳಿ ಸಾಗಿದರು.
“ಏನೂ ಗಾಬರಿ ಆಗುವಂಥಾದ್ದಿಲ್ಲ. ಅವರ ಹೃದಯ ಬಡಿತ, ಉಸಿರಾಟ, ನಾಡಿ, ರಕ್ತದ ಒತ್ತಡ ಎಲ್ಲ ಸರಿಯಾಗಿದೆ” ಎಂದರು ಡಾಕ್ಟರ್ ಅಶೋಕ್.
ಚಿತ್ರಾ ಸಣ್ಣದಾಗಿ ಕೇಳಿದಳು “ಪ್ರಜ್ಞೆ ಬಂತ ಡಾಕ್ಟ್ರೇ?”
“ಇನ್ನೂ ಇಲ್ಲ. ಅದೇನೂ ಯೋಚನೆ ಮಾಡೋ ಅಂಥಾದ್ದಿಲ್ಲ.”
ಶಾರದಾ ಕೇಳಿದಳು “ಅವರಿಗೆ ಯಾಕೆ ಪ್ರಜ್ಞೆ ತಪ್ಪಿತು ಗೊತ್ತಾಯ್ತಾ, ಡಾಕ್ಟ್ರೆ?”
“ನನಗೆ ಅನ್ನಿಸುವ ಹಾಗೆ ಯಾವುದೋ ಆಘಾತ ಆಗಿದೆ. ಆಘಾತ ಅಂದ್ರೆ, ಕೆಟ್ಟ ಸುದ್ದಿ, ನೋವು, ಸಂಕಟ ಅಂತಲೇ ಏನೂ ಇಲ್ಲ. ಯಾವುದೇ ಭಾವೋದ್ರೇಕ ತನ್ನ ಮಿತಿ ಮೀರಿದಾಗಲೂ ಆಘಾತ ಆಗಬಹುದು. ಈ ಪ್ರಸ್ತುತ ಸನ್ನಿವೇಶದಲ್ಲಿ ಅವರು ಮೊಟ್ಟಮೊದಲ ಬಾರಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡು ಅದರಿಂದ ಹೀಗಾಗಿರಬಹುದು ಅಂತ ನಾನು ಊಹಿಸ್ತಾ ಇದ್ದೇನೆ.”
ಶಾರದಾ ಸ್ವಲ್ಪ ಬೆರಗಾಗಿ ಚಿತ್ರಾಳ ಕಡೆ ನೋಡಿದಳು. ಸಣ್ಣದಾಗಿ ಕಿವಿಯಲ್ಲಿ ಏನೋ ಹೇಳಿದಳು. ಚಿತ್ರಾ ಅದಕ್ಕೆ ತುಂಬ ಸಣ್ಣದಾಗಿ “ಅಮ್ಮಾ, ಆಮೇಲೆ ಮಾತಾಡೋಣ” ಎಂದು ಡಾಕ್ಟರ್ ಮುಂದೇನು ಹೇಳುತ್ತಾರೆ ಎಂದು ನೋಡುತ್ತಿದ್ದಳು.
ಅಶೋಕ್ ಮುಂದುವರಿಸಿದರು. “ಒಮ್ಮೆಲೆ ಹೆಚ್ಚಿನ ಪ್ರಮಾಣದ ವಿದ್ಯುತ್ ಒಳಹರಿದರೆ, ಅಪಾಯ ತಪ್ಪಿಸಲು ಫ್ಯೂಸ್ ವಿದ್ಯುತ್ತಿನ ಹರಿವನ್ನು ನಿಲ್ಲಿಸುತ್ತದೆಯಲ್ಲ, ಹಾಗೇ ತಡೆಯಲಾರದಷ್ಟು ಭಾವೋದ್ರೇಕದ ಲಹರಿಯಿಂದ ಮೆದುಳನ್ನು ರಕ್ಷಿಸಲು ಮೆದುಳಿನ ಒಂದು ಭಾಗ ಇವರ ಪ್ರಜ್ಞೆ ತಪ್ಪಿಸಿದೆ. ಪ್ರಜ್ಞೆ ಒಂದು ಗಂಟೆಯಲ್ಲಿ ಮರಳುತ್ತದೆ. ಇಲ್ಲವಾದರೂ, ನಾವು ಔಷಧಿಯ ಮೂಲಕ ಪ್ರಚೋದನೆ ನೀಡಿ ಅವರು ಜಾಗೃತವಾಗುವಂತೆ ಮಾಡಬಹುದು. ಅದೇನೂ ಗಾಬರಿಯಾಗುವ ವಿಷಯವಲ್ಲ. ಸಧ್ಯಕ್ಕೆ ವಿವೇಕನಿಗೆ ಯಾವ ತೊಂದರೆಯೂ ಇಲ್ಲ. ನೀವು ಯಾರೂ ಏನೇನೋ ಯೋಚನೆ ಮಾಡಿ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ನೀವೆಲ್ಲ ಇಲ್ಲೇ ಕಾಯುತ್ತಿರಿ, ನಾನು ಮುಂದಿನ ಪರೀಕ್ಷೆ ಮಾಡಿ ಬರ್ತೀನಿ.”
ಡಾಕ್ಟರ್ ಅಶೋಕ್ ಮನಃಶಾಸ್ತ್ರ ಮತ್ತು ನರರೋಗ ತಜ್ಞ. ಕೇವಲ ವೈದ್ಯವೃತ್ತಿಯಲ್ಲಲ್ಲದೆ ಅನೇಕ ಅಧ್ಯಯನಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಅಪರೂಪದ ವ್ಯಕ್ತಿ. ಮನುಷ್ಯನ ಮೆದುಳನ್ನು ಕುರಿತು ದೀರ್ಘವಾದ ಅಧ್ಯಯನ ನಡೆಸಿ ವಿಶ್ವಮಟ್ಟದ ಪತ್ರಿಕೆಯಲ್ಲಿ ಲೇಖನ ಪ್ರಕಟಿಸಿ ವಿಶ್ವದ ಗಮನ ಸೆಳೆದ ಕೀರ್ತಿ ಅಶೋಕನಿಗೆ ಸಲ್ಲುತ್ತದೆ.
ಅಶೋಕ್ ಹೋಗುತ್ತಿದ್ದಂತೆಯೇ ಚಿತ್ರಾಳನ್ನು ಯಾರೂ ಇಲ್ಲದ ಒಂದು ಮೂಲೆಗೆ ಕರೆದುಕೊಂಡು ಹೋಗಿ ಕೇಳಿದಳು ಶಾರದ. “ಏನೇ ಈ ಡಾಕ್ಟ್ರು ಹೀಗೆ ಹೇಳಿದರು. ನಿಮ್ಮ ಮದುವೆ ಆಗಿ ಒಂದು ತಿಂಗಳಾಯಿತು. ಮೊದಲನೇ ಸರ್ತಿ ಅಂದರಲ್ಲೇ! ಅಂದರೆ, ನಿಮ್ಮಿಬ್ಬರಿಗೂ ಇಷ್ಟೂ ದಿನ ಏನೂ ಆಗೇ ಇಲ್ಲವಾ?”
ಚಿತ್ರಾ ಮುಖ ಜೋತುಹಾಕುತ್ತಾ ಹೇಗೆ ಹೇಳುವುದು ಎಂದು ಗೊತ್ತಾಗದೇ ನಿಂತಿದ್ದಳು. ಅವಳ ಮುಖವನ್ನು ಓದುತ್ತಲೇ ಶಾರದಾಳಿಗೆ ಅರ್ಥವಾಯಿತು. “ಇವೆಲ್ಲ ಮದುವೆಗೆ ಮುಂಚೇನೆ ಗೊತ್ತಾಗೋ ಹಾಗಿದ್ರೆ ಎಷ್ಟೋ ಚೆನ್ನಾಗಿರೋದು. ತುಂಬಾ ಮೇಧಾವೀನೇ ಇರಬಹುದು, ಪ್ರಪಂಚದಲ್ಲಿ ಅತಿ ಹೆಚ್ಚು ಸಂಬಳ ತೆಗೆದುಕೊಳ್ಳುವವನೇ ಆಗಿರಬಹುದು, ಎಲ್ಲ ಕ್ವಿಝ್ಗಳಲ್ಲೂ ಗೆದ್ದು ಕೋಟಿ ಕೋಟಿ ಗಳಿಸಬಹುದು, ಆದರೆ ಅವನು ಗಂಡಸೇ ಅಲ್ಲ ಅಂದರೆ, ಅವನನ್ನು ನೀನು ಗಂಡ ಅಂತ ಹೇಗೆ ಒಪ್ಪಿಕೊಳ್ಳುತ್ತೀ?”
ಚಿತ್ರಾಳ ಬಳಿ ಇದ್ದ ಒಂದೇ ಉತ್ತರ ಅಳು.
ಅಧ್ಯಾಯ – ೨
ಡಾಕ್ಟರ್ ಮುಂದಿನ ಪರೀಕ್ಷೆ ನಡೆಸಲು ಒಳಗೆ ಹೋಗುತ್ತಿದ್ದಂತೆಯೇ ರಾಧಾ ಮತ್ತೊಮ್ಮೆ ಬೆಂಚಿನ ಮೇಲೆ ಕುಳಿತಳು. ಅವಳ ಮನಸ್ಸು ಸುಮಾರು ಹದಿನೈದು ವರ್ಷಗಳ ಹಿಂದೆ ಪ್ರಯಾಣ ಮಾಡಿತ್ತು.
ವಿವೇಕನಿಗೆ ಆಗಿನ್ನೂ ಹತ್ತು ವರ್ಷ. ನಾಲ್ಕನೇ ತರಗತಿಯಲ್ಲಿದ್ದ. ಹೆಚ್ಚೇನು ಮಾತನಾಡದ, ಯಾರೊಡನೆಯೂ ಬೆರೆಯದ ಅಂತರ್ಮುಖಿ ಸ್ವಭಾವದ ವಿವೇಕ ತಂದೆಯ ಮಾತನ್ನು ಅತಿ ವಿಧೇಯವಾಗಿ ಕೇಳುವ ಹುಡುಗ.
“ಲೋ ಇಂಟರ್ಸ್ಕೂಲ್ ಗಣಿತದ ಕ್ವಿಝ್ ಕಾಂಪಿಟಿಷನ್ ಇದೆ. ನಿನಗೆ ಆಸಕ್ತಿಯಿದ್ದರೆ ಹೋಗುತ್ತೀಯಾ?” ಮನೋಹರ ಕೇಳಿದ.
“ಸರಿ ಅಪ್ಪ.”
“ತಗೋ ಈ ಅಪ್ಲಿಕೇಷನ್, ಭರ್ತಿ ಮಾಡು.”
ಮುಂದಿನ ವಾರ ಮನೋಹರ ಮತ್ತು ರಾಧಾ ಇಬ್ಬರೂ ವಿವೇಕನ ಜೊತೆ ಗಣಿತದ ಕ್ವಿಝ್ಗೆ ಹೋದರು. ಅವರು ನಿರೀಕ್ಷಿಸಿಯೂ ಇರಲಿಲ್ಲ. ವಿವೇಕ ಆ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿ ಗೆದ್ದ. ಅಷ್ಟೇ ಅಲ್ಲದೆ, ಅವನು ಪ್ರತಿಯೊಂದು ಪ್ರಶ್ನೆಗೂ ಸರಿಯಾದ ಉತ್ತರಕೊಟ್ಟು ಎಲ್ಲರನ್ನೂ ದಂಗುಬಡಿಸಿದ. ಸ್ಪರ್ಧೆ ನಡೆಸುತ್ತಿದ್ದ ವ್ಯಕ್ತಿ ವಿವೇಕನ ಗಣಿತದ ಜ್ಞಾನಕ್ಕೆ ಮಾರುಹೋದ. ಸುಮ್ಮನೆ ಇವನನ್ನು ಪರೀಕ್ಷಿಸಲು, ಇವನ ಮಟ್ಟವನ್ನು ಮೀರಿದ ಟ್ರಿಗ್ನಾಮೆಟ್ರಿ, ಕ್ಯಾಲ್ಕ್ಯುಲಸ್, ಸ್ಟಾಟಿಸ್ಟಿಕ್ಸ್ ಸಿದ್ಧಾಂತಗಳನ್ನೊಳಗೊಂಡ ಪ್ರಶ್ನೆಗಳನ್ನು ಕೇಳಿದ. ಸ್ವಲ್ಪವೂ ತಡವರಿಸದೆ ಎಲ್ಲ ಪ್ರಶ್ನೆಗಳಿಗೂ ತೀರ ಸರಳವೆಂಬಂತೆ, ಯಾವ ದೊಡ್ಡ ಪ್ರೊಫೆಸರಿಗೂ ಕಡಮೆಯಿಲ್ಲದಂತೆ ಹತ್ತು ವರ್ಷದ ಪೋರ ವಿವೇಕ ಉತ್ತರಿಸುತ್ತಿದ್ದರೆ, ಹೆತ್ತವರೂ ಸೇರಿದಂತೆ ಅಲ್ಲಿದ್ದ ಎಲ್ಲರೂ ಮೂಕವಿಸ್ಮಿತರಾದರು.
ಈಗ ಸ್ಪರ್ಧೆ ನಡೆಸುತ್ತಿದ್ದವನು ಬಾಯಿಗೆ ಬಂದ ಎರಡು ದೊಡ್ಡ ಸಂಖ್ಯೆಗಳನ್ನು ಹೇಳಿ, “ಇವುಗಳನ್ನು ಗುಣಿಸಿದರೆ ಸಿಗುವ ಮೊತ್ತ ಏನು?” ಎನ್ನುತ್ತಾ ತನ್ನ ಕ್ಯಾಲಿಕುಲೇಟರ್ನಲ್ಲಿ ಆ ಸಂಖ್ಯೆಗಳನ್ನು ಮುದ್ರಿಸಿ “=” ಎಂದು ಟಂಕಿಸುವುದರೊಳಗೆ ವಿವೇಕನ ಬಾಯಿಂದ ಉತ್ತರ ಬಂದಿತ್ತು. ಆ ಉತ್ತರ ಕ್ಯಾಲಿಕುಲೇಟರಿನ ಉತ್ತರಕ್ಕೆ ತಾಳೆಯಾಗುತ್ತಿದ್ದಂತೆ, ಅವನು ತನ್ನ ಸೀಟಿನಿಂದ ಪುಟಿದೆದ್ದ. ಓಡಿಹೋಗಿ ವಿವೇಕನನ್ನು ಬಾಚಿ ತಬ್ಬಿಕೊಂಡು ಮೇಲೆತ್ತಿದ. ನೆರೆದ ಜನರೆಲ್ಲ ಮುಗಿಲುಮುಟ್ಟುವಂತೆ ಕರತಾಡನ ಮಾಡಿದರು. ವಿವೇಕನ ಮುಖದಲ್ಲಿ ಯಾವುದೇ ಭಾವನೆಯೂ ಇರದಿದ್ದದ್ದು ಮಾತ್ರ ಯಾರ ಗಮನಕ್ಕೂ ಬರಲಿಲ್ಲ.
ಗಂಡನ ಕೂಗು ಅವಳನ್ನು ನೆನಪಿನ ಲೋಕದಿಂದ ಹೊರಬರುವಂತೆ ಮಾಡಿತು.
“ಬೀಗರು ಬಂದಿದ್ದಾರೆ, ಬಾ ಹೋಗಿ ಮಾತಾಡಿಸಿಕೊಂಡು ಬರೋಣ.”
ಶಾರದ, ಅನಂತರಾಮ್ ಕುಳಿತಿದ್ದ ಕಡೆ ಬಂದರು ರಾಧಾ, ಮನೋಹರ.
“ಚೆನ್ನಾಗಿದ್ದೀರಾ” ಮನೋಹರ ಬೀಗರ ಸೌಖ್ಯ ವಿಚಾರಿಸಿದ.
ಅನಂತರಾಮ್ “ಹಾಂ, ಚೆನ್ನಾಗಿದ್ದೇವೆ. ಏನಿದು ಗ್ರಹಚಾರ, ಈ ಕಾಲದಲ್ಲಿ ಎಂಥೆಂಥ ರೋಗ ಬರುತ್ತೆ ನೋಡಿ. ಚೆನ್ನಾಗಿ ಆರೋಗ್ಯವಾಗಿದ್ದ ಅಳಿಯಂದ್ರು ಒಮ್ಮೆಲೆ ಪ್ರಜ್ಞೆ ಕಳೆದುಕೊಂಡರು ಅಂದರೆ, ನನಗೆ ಕೇಳಿಯೇ ಶಾಕ್ ಆಯಿತು.”
“ವಿವೇಕನಿಗೆ ಯಾವ ಖಾಯಿಲೆಯೂ ಇಲ್ಲ, ಈಗಷ್ಟೆ ಡಾಕ್ಟರ್ ಹೇಳಿದರಲ್ಲ.” ತಕ್ಷಣ ಹೇಳಿದ ಮನೋಹರ.
“ಏನೋಪ್ಪ. ಖಾಯಿಲೆ ಕಸಾಲೆ ಇಲ್ಲದೆ ಮಕ್ಕಳು ನೆಮ್ಮದಿಯಾಗಿದ್ದರೆ, ಅಷ್ಟೇ ಸಾಕು” ಎಂದಳು ಶಾರದ.
ರಾಧಾ ಬೇಸರದಲ್ಲಿದ್ದದ್ದು ಕಂಡು ಅನಂತರಾಮ್ ಕೇಳಿದ “ನೀವು ಇನ್ನೂ ತುಂಬ ಡಲ್ ಆಗಿದ್ದೀರ. ಧೈರ್ಯ ತಂದುಕೊಳ್ಳಿ. ಡಾಕ್ಟರ್ ಹೇಳಿದರಲ್ಲ, ಆತಂಕ ಪಡಬೇಕಿಲ್ಲ ಅಂತ. ಸರಿ ಎಲ್ಲರೂ ಹೋಗಿ ಕಾಫಿ ಕುಡಿದು ರಿಫ್ರೆಷ್ ಆಗಿ ಬರೋಣ. ಬನ್ನಿ.”
ಮೂರಂತಸ್ತಿನ ಆ ಆಸ್ಪತ್ರೆಯ ಕೊನೆಯ ಅಂತಸ್ತಿನಲ್ಲಿ ಕ್ಯಾಫಿಟೀರಿಯಾ ಇತ್ತು. ಎಲ್ಲರೂ ಅಲ್ಲಿಗೆ ಹೋದರು.
ಶಾರದ ಹೇಳಲೋ ಬೇಡವೋ ಯೋಚಿಸುತ್ತಾ ಅಸ್ಥಿರ ಧ್ವನಿಯಲ್ಲಿ ಹೇಳಿದಳು, “ಅಲ್ಲಾ, ನಾನು ಹೀಗೆ ಹೇಳ್ತೀನಿ ಅಂತ ಬೇಜಾರು ಮಾಡಿಕೋಬೇಡಿ. ಪ್ರಸ್ಥ ಮಾಡಬೇಕಾದರೆ ಮುಹೂರ್ತ ನೋಡಬೇಕಿತ್ತು. ಮದುವೆಗೇನೊ ನಾನೇ ಖುದ್ದು ಪುರೋಹಿತರ ಹತ್ತಿರ ಮುಹೂರ್ತ ಇಡಿಸಿದ್ದೆ. ಆದರೆ, ಪ್ರಸ್ಥಕ್ಕೆ ಮುಹೂರ್ತ ಇಡಬೇಕು ಅಂತ ನಾನು ಹೇಳಿದಾಗ ನೀವ್ಯಾರು ನನ್ನ ಮಾತು ಕೇಳಲಿಲ್ಲ.”
ಪ್ರಸ್ಥಕ್ಕೆ ಮುಹೂರ್ತ ಇಡುವ ವಿಷಯವಾಗಿ ಶಾರದ ಮತ್ತು ರಾಧಾ ನಡುವೆ ಸ್ವಲ್ಪ ಭಿನ್ನಾಭಿಪ್ರಾಯ ಇತ್ತು. “ಇಂತಹ ಗೊಡ್ಡು ಆಚರಣೆ, ಮೂಢನಂಬಿಕೆಗಳನ್ನು ನಾನು ಬೆಂಬಲಿಸುವುದಿಲ್ಲ. ಯಾವ ಪುರೋಹಿತನೂ ನನ್ನ ಮಗ ಸೊಸೆ ಯಾವಾಗ ಸೇರಬೇಕೆಂದು ನಿರ್ಧರಿಸಬೇಕಿಲ್ಲ” ಎಂದು ತನ್ನ ಹಠವನ್ನೇ ಸಾಧಿಸಿದ್ದಳು, ರಾಧಾ.
ಶಾರದ ಈ ವಿಷಯ ಪ್ರಸ್ತಾಪಿಸಿದಾಗ ರಾಧಾಳ ಮನಸ್ಸು ಕಹಿಯಾಯಿತು. ತಾನು ದೊಡ್ಡವರ ಮಾತು ಕೇಳಬೇಕಿತ್ತು, ತಾನು ದುಡುಕಿದೆ ಎನ್ನಿಸಿತು. “ಹೌದು, ನಾನು ತುಂಬ ದೊಡ್ಡ ತಪ್ಪು ಮಾಡಿಬಿಟ್ಟೆ. ನಿಮ್ಮ ಮಾತು ಕೇಳಬೇಕಿತ್ತು. ಇವತ್ತು ನನ್ನ ಮಗನ ಈ ಸ್ಥಿತಿಗೆ ನಾನೇ ಕಾರಣ ಆದೆ” ಎನ್ನುತ್ತಾ ತಡೆಯಲಾರದೇ ಅಳುವುದಕ್ಕೆ ಶುರುಮಾಡಿದಳು.
ದುಃಖದಲ್ಲಿ ಎಲ್ಲರೂ ಸಮಭಾಗಿಗಳು ಎಂದು ಅರಿತ ಶಾರದ “ನೊಂದುಕೊಳ್ಳಬೇಡಿ. ಒಂದೊಂದು ಸರ್ತಿ ಹೀಗಾಗುತ್ತದೆ. ದೇವರ ಮೇಲೆ ಭಾರ ಹಾಕೋಣ” ಎಂದು ಸಮಾಧಾನದ ನುಡಿ ನುಡಿದಳು.
ಅಧ್ಯಾಯ ೩
ಹೊಗೆಯಾಡುವ ಕಾಫಿಲೋಟದ ಮುಂದೆ ಕುಳಿತ ರಾಧಾಳ ಮನಸ್ಸು ಪುನಃ ಹತ್ತು ವರ್ಷಗಳ ಹಿಂದೆ ಹೋಯಿತು.
ರಾಧಾಳ ತಮ್ಮ ರಾಘವನ ಮದುವೆ ನಿಶ್ಚಯವಾಗಿತ್ತು. ರಾಘವ ಮದುವೆ ಖರೀದಿಯ ಸಲುವಾಗಿ ಶಿವಮೊಗ್ಗದಿಂದ ಬೆಂಗಳೂರಿಗೆ ಬಂದಿದ್ದ. “ಮದುವೆ ಖರೀದಿಗೆ ಇಲ್ಲಿ ಚಿಕ್ಕಪೇಟೆ ಹೇಳಿ ಮಾಡಿಸಿದ ಜಾಗ” ಎಂದು ರಾಧಾ ರಾಘವನನ್ನು ಚಿಕ್ಕಪೇಟೆಯ ಗಲ್ಲಿಗಲ್ಲಿಗಳಲ್ಲಿ ಸುತ್ತಿಸಿದ್ದಳು. ಆಮಂತ್ರಣ ಪತ್ರದ ಖರೀದಿ ಉಳಿದಿತ್ತು. ಬೇಸಿಗೆ ರಜೆಯಿದ್ದುದರಿಂದ ವಿವೇಕ ಮನೆಯಲ್ಲೇ ಇದ್ದ. ಆಗ ಅವನು ಒಂಭತ್ತನೇ ತರಗತಿಯಲ್ಲಿದ್ದ. ಮನೆಯಲ್ಲಿದ್ದರೆ, ಬೋರ್ ಆಗಬಹುದು ಎಂದು ಅವನನ್ನೂ ಜೊತೆಗೆ ಕರೆದೊಯ್ದರು.
“ಬಿವಿಕೆ ಐಯಂಗಾರ್ ರಸ್ತೆಯಲ್ಲಿ ಷರೀಫನ ಅಂಗಡಿ ಇದೆ. ಅಲ್ಲಿ ತುಂಬ ಒಳ್ಳೆಯ ಸೆಲೆಕ್ಷನ್ ಇರುತ್ತದೆ” ಎಂದು ರಾಧಾ ಅದೇ ಅಂಗಡಿಗೆ ಹೋದಳು.
ಅರ್ಧ ಗಂಟೆ ಬೇರೆ ಬೇರೆ ಕಾರ್ಡುಗಳನ್ನು ಜಾಲಾಡಿದ ಮೇಲೆ ರಾಘವ ಒಂದು ಕಾರ್ಡನ್ನು ಆಯ್ಕೆ ಮಾಡಿದ.
“ಇದು ತುಂಬ ಒಳ್ಳೆಯ ಕಾರ್ಡು ಇದೆ. ನಿಮ್ದು ಮದುವೆಗೆ ಹೇಳಿ ಮಾಡಿಸಿದ ಹಾಗಿದೆ” ಎಂದ ಷರೀಫ.
ರಾಘವ ರಾಧಳನ್ನು ನೋಡುತ್ತಾ “ಎಷ್ಟು ಬೇಕಾಗಬಹುದು” ಎಂದು ಕೇಳಿದ.
“ಮುನ್ನೂರರಿಂದ ಮುನ್ನೂರೈವತ್ತು” ಎಂದಳು ರಾಧಾ.
ಷರೀಫ “ಬಿಡಿಯಾಗಿ ಮಾರುವುದಿಲ್ಲ. ಎಲ್ಲ ಕಟ್ಟಿನಲ್ಲಿ ಬರುತ್ತದೆ. ಒಂದು ಕಟ್ಟಿನಲ್ಲಿ ನೂರು ಕಾರ್ಡ್ ಇರುತ್ತದೆ. ನಾನೂರು ತಗೊಂಬಿಡಿ” ಎಂದ.
ಒಂದು ಕ್ಷಣ ಬಿಟ್ಟು, “ನಿಮ್ಗೆ ಚೀಪ್ ಆಗಿ ಆಗ್ಬೇಕು ಅಂದ್ರೆ ದೊಡ್ಡ ಕಟ್ಟು ತಗೊಂಬಿಡಿ. ಅದರಲ್ಲಿ ಐನೂರು ಕಾರ್ಡ್ ಬರುತ್ತದೆ. ಎಕ್ಸ್ಟ್ರಾ ಇರೋ ಕಾರ್ಡು ಮುಂದೆ ಸಾಹೇಬರ ಮಗು ನಾಮಕರಣಕ್ಕೆ ಬರುತ್ತದೆ” ಎಂದು ಚಟಾಕಿ ಹಾರಿಸಿದ.
ಅವನ ಮಾತು ಸರಿ ಅನಿಸಿತು. “ಸರಿ, ಐನೂರರ ಒಂದು ಕಟ್ಟು ಕೊಡಿ” ಎಂದಳು ರಾಧಾ.
ರಾಘವ ಆಯ್ಕೆ ಮಾಡಿದ್ದ ಸ್ಯಾಂಪಲ್ ಕಾರ್ಡನ್ನು ಕೈಲಿ ಹಿಡಿದು “ಹೇ ಭಯ್ಯಾ, ಈಥರದ್ದು ಬಡಾ ಕಟ್ಟು ತಗೊಂಡು ಬಾ ಗೋಡೌನಿಂದ” ಎಂದು ಕೆಲಸದವನಿಗೆ ಹೇಳಿದ.
ಆ ಹುಡುಗ ಐದು ನಿಮಿಷದ ಅನಂತರ ಒಂದು ಕೈಲಿ ಕಾರ್ಡಿನ ಕಟ್ಟು ಮತ್ತು ಇನ್ನೊಂದು ಕೈಲಿ ಅದರ ಕವರಿನ ಕಟ್ಟು ತೆಗೆದುಕೊಂಡು ಬಂದು ಮೇಜಿನ ಮೇಲಿಟ್ಟ.
ವಿವೇಕ ಆ ಎರಡೂ ಕಟ್ಟುಗಳನ್ನೂ ನೋಡಿ, “ಅಮ್ಮಾ, ಎಲ್ಲ ಕಾರ್ಡುಗಳಿಗೂ ಆಗುವಷ್ಟು ಕವರುಗಳಿಲ್ಲ ಇಲ್ಲಿ” ಎಂದ.
“ಇದೆಲ್ಲ ಸೀಲ್ ಆಗಿರೋ ಪ್ಯಾಕುಗಳು. ಐನೂರು ಇದೆ ಅಂದರೆ, ಅಷ್ಟು ಇದ್ದೇ ಇರುತ್ತೆ. ಚೋಟ ಸಾಹೇಬ್ಗೆ ಅನುಮಾನ ಬೇಡ” ಎಂದ ಷರೀಫ.
“ಅಮ್ಮಾ, ಇಲ್ಲಿ ೪೮೮ ಕಾರ್ಡುಗಳಿವೆ, ಆದರೆ ೪೭೬ ಕವರುಗಳಿವೆ” ಎಂದು ವಿವೇಕ ಹೇಳಿದಾಗ ರಾಧಾಳಿಗೆ ಒಂದು ಕ್ಷಣ ಶಾಕ್ ಆಯಿತು. ಅವನು ತಮಾಷೆ ಮಾಡುತ್ತಿದ್ದಾನೇನೋ ಎಂದುಕೊಂಡಳು. ಆದರೆ, ವಿವೇಕ ಎಂದೂ ತಮಾಷೆ ಮಾಡಿದವನಲ್ಲ.
ಅವನ ಮಾತು ಕೇಳುತ್ತಿದ್ದಂತೆಯೇ ರಾಘವ “ಇವನೇನು ನಳಮಹಾರಾಜನ ತುಂಡು ಅನ್ನೋಹಾಗೆ ಮಾತಾಡ್ತಾನಲ್ಲ” ಎಂದು ವ್ಯಂಗ್ಯವಾಗಿ ನುಡಿದ.
ಷರೀಫ ಗಲಿಬಿಲಿಗೊಂಡು “ನಿಮಗೆ ಅಷ್ಟು ಅನುಮಾನ ಇದ್ದರೆ, ಈಗಲೇ ಲೆಕ್ಕ ಮಾಡೋಣ” ಎಂದು ಪ್ಯಾಕೇಟುಗಳ ಸೀಲ್ ಬಿಚ್ಚಿ ಒಂದೊಂದೇ ಎಣಿಸಲು ಶುರುಮಾಡಿದ. ಷರೀಫ ಕಾರ್ಡುಗಳನ್ನು ಒಂದೊಂದೇ ಕೆಳಗೆ ಹಾಕುತ್ತಿದ್ದಾಗ ಎಲ್ಲರೂ `ಒಂದು, ಎರಡು….’ ಎಂದು ಜೋರಾಗಿ ಹೇಳುತ್ತಿದ್ದರು.
ಅಲ್ಲಿದ್ದ ಒಟ್ಟು ಕಾರ್ಡುಗಳು ೪೮೮. ವಿವೇಕ ಹೇಳಿದಷ್ಟೆ ಇತ್ತು. ಎಲ್ಲರೂ ನಿಬ್ಬರಗಾದರು. ಅದೇ ರೀತಿ ಕವರುಗಳನ್ನು ಎಣಿಸಿದರು, ಅದೂ ಸಹ ವಿವೇಕ ಹೇಳಿದಂತೆ ೪೭೬ ಇದ್ದವು.
“ಚೋಟ ಸಾಹೇಬ್ ತುಂಬ ಚಾಲಾಕಿ ಇದ್ದಾರೆ; ನಿಮಗೆ ಅಷ್ಟು ಕರೆಕ್ಟಾಗಿ ಹೇಗೆ ಗೊತ್ತಾಯ್ತು ಅಲ್ಲಿ ಅಷ್ಟೇ ಇದೆ ಅಂತ” ಷರೀಫ ಕುತೂಹಲದಿಂದ ಕೇಳಿದ.
ವಿವೇಕ ಏನೂ ಉತ್ತರಿಸದೆ, ಗರುಡಗಂಭದಂತೆ ಸುಮ್ಮನೆ ನಿಂತಿದ್ದ.
ವಿವೇಕನಲ್ಲಿ ಏನೋ ಅಸಾಮಾನ್ಯ ಶಕ್ತಿ ಅಡಗಿದೆ ಎಂಬುದಂತೂ ರಾಧಾಳಿಗೆ ಆಗಲೇ ಸಾಬೀತಾಯಿತು. ಇವನು ನಿಜಕ್ಕೂ ರಾಘವ ಹೇಳಿದಂತೆ ನಳಮಹಾರಾಜನ ತುಂಡು ಅನಿಸಿತು. ಅದರ ಬೆನ್ನಲ್ಲೆ ಸಣ್ಣದೊಂದು ಭಯ ಕಾಡಿತು. ಒಂದು ದೊಡ್ಡ ಆಲದ ಮರವನ್ನು ನೋಡುತ್ತಲೆ ಅದರಲ್ಲಿ ಎಷ್ಟು ಎಲೆಗಳಿವೆ ಎಂದು ಹೇಳುವ ಚಮತ್ಕಾರಿಕ ಶಕ್ತಿಹೊಂದಿದ್ದ ನಳಮಹಾರಾಜ ಕಲಿಯ ಅವಕೃಪೆಗೆ ಒಳಗಾಗಿ ನಾನಾ ಕಷ್ಟಗಳನ್ನು ಎದುರಿಸಿದನಲ್ಲ; ವಿವೇಕನ ಜೀವನದಲ್ಲಿ ಹೀಗೇನಾದರೂ ಕಷ್ಟಗಳು ಬಂದೀತೆ? ಯೋಚಿಸುತ್ತಿದ್ದಂತೆ ಸಣ್ಣಗೆ ನಡುಗಿದಳು.
“ರಾಧಾ, ಇನ್ನೂ ಕಾಫಿ ಕುಡಿಯಲೇ ಇಲ್ವಾ, ತಣ್ಣಗೆ ಆಗ್ತಾ ಇದೆ. ಬೇಗ ಕುಡಿ, ಡಾಕ್ಟರ್ ಹತ್ತಿರ ಹೋಗಿ ನೋಡೋಣ” ಎಂದು ಮನೋಹರ ಹೇಳಿದಾಗ ರಾಧಾ ಕಲ್ಪನಾಲೋಕದಿಂದ ಹೊರಬಂದಳು.
ಏನೋ ಯೋಚಿಸಿ “ರೀ ಈ ಆಸ್ಪತ್ರೆಯಿಂದ ಹೋದ ನಂತರ ನಾವು ನವಗ್ರಹಹೋಮ ಮಾಡಿಸೋಣ. ಈ ಸಮಸ್ಯೆ ಶನಿಕಾಟಾನೋ, ಕಲಿ ಕಾಟನೋ ಇರಬೇಕು” ಎಂದಳು.
ಅಧ್ಯಾಯ ೪
ವಿವೇಕನ ತಲೆಯ ಸುತ್ತ ಸಣ್ಣ ಬ್ಯಾಂಡ್ ಸುತ್ತಲಾಗಿತ್ತು. ಪ್ರಜ್ಞಾಹೀನಸ್ಥಿತಿಯಲ್ಲಿ ಆಸ್ಪತ್ರೆಯ ಕೊಠಡಿಯ ಮಂಚದ ಮೇಲೆ ಮಲಗಿದ್ದ. ಮಂಚದ ಪಕ್ಕದಲ್ಲಿ ಕುರ್ಚಿಯ ಮೇಲೆ ಕುಳಿತು ಮಾನಿಟರ್ನಲ್ಲಿ ಬರುತ್ತಿದ್ದ ವಿವೇಕನ ಮೆದುಳಿನ ಚಿತ್ರವನ್ನು ಗಮನಿಸುತ್ತಿದ್ದ, ಡಾಕ್ಟರ್ ಅಶೋಕ್.
ಮಾನಿಟರಿನ ಪರದೆಯ ಮೇಲೆ ಮೂಡಿದ ಚಿತ್ರ ಮೇಲ್ನೋಟಕ್ಕೆ ಮಾಮೂಲಿಯಂತೆ ಕಂಡರೂ, ಒಳಗಿನ ಭಾಗಗಳು ಸ್ವಲ್ಪ ವಿಚಿತ್ರವಾಗಿ ಕಂಡಿತು. ಝೂಮ್ ಮಾಡಿ ನೋಡಿದ. ಮೆದುಳಿನ ಆಳದಲ್ಲಿರುವ ಭಾಗಗಳನ್ನು ಗುರುತಿಸುತ್ತಾ ಹೋದ. ತಾಲಮಸ್, ಹೈಪೊತಾಲಮಸ್, ಹಿಪೊಕ್ಯಾಂಪಸ್, ಪಿಟ್ಯುಇಟರಿ ಗ್ಲಾಂಡ್. ಇದರ ನಡುವೆ ಇದ್ದ ಇನ್ನೊಂದು ಸಣ್ಣ ಭಾಗ ಯಾವುದೆಂದು ಗೊತ್ತಾಗಲಿಲ್ಲ. ತಾನು ನೋಡಿದ ಯಾವ ಮೆದುಳಿನಲ್ಲೂ ಈ ಭಾಗವನ್ನು ಇವನು ನೋಡಿರಲಿಲ್ಲ.
ಮೆದುಳಿನ ಬೇರೆ ಬೇರೆ ಭಾಗಗಳಲ್ಲಿ ತರಂಗಗಳನ್ನು ಗಮನಿಸಿದ. ಎಲ್ಲವೂ ಸಾಧಾರಣವಾಗಿ ತೋರಿತು. ಇವನು ಗುರುತಿಸಿದ ಹೊಸ ಭಾಗ ಹೈಪೊತಾಲಮಸ್ನಿಂದ ಸಂದೇಶ ಪಡೆದು ಅದನ್ನು ಪರಿವರ್ತಿಸುತ್ತಿದ್ದಂತೆ ಕಂಡಿತು. ಆದರೂ ಯಾವುದೂ ಸ್ಪಷ್ಟವಾಗಿ ತಿಳಿಯಲಿಲ್ಲ.
ಇವನು ಹಾಗೇ ಪರೀಕ್ಷಿಸುತ್ತಿದಂತೆ ವಿವೇಕನಿಗೆ ಎಚ್ಚರವಾಯಿತು. ಈಗ ಮೆದುಳಿನಲ್ಲಿ ತರಂಗಗಳ ಸಂಚಾರ ಗಮನೀಯವಾಗಿ ಜಾಸ್ತಿಯಾಯಿತು. ಸಾಧಾರಣವಾಗಿ ಗಾಬರಿ, ಭಯ, ಆಶ್ಚರ್ಯವಾದಾಗ ಹೈಪೊತಾಲಮಸ್ ಎಂಬ ಭಾಗ ಸಕ್ರಿಯವಾಗಿ ಭಾವನೆಗಳು ಮೂಡಲು ನೆರವಾಗುತ್ತದೆ. ಅಶೋಕ ನಿರೀಕ್ಷಿಸಿದಂತೆ, ಆ ಭಾಗ ಸಕ್ರಿಯವಾಯಿತು. ಆದರೆ, ಅದಕ್ಕೆ ಹೊಂದಿಕೊಂಡಂತಿದ್ದ ಹೊಸದಾದ ಇನ್ನೊಂದು ಭಾಗ ಹೈಪೊತಾಲಮಸ್ನಿಂದ ಬಂದ ತರಂಗಗಳನ್ನು ಬೇರೆ ರೀತಿಯಲ್ಲಿ ಪರಿವರ್ತಿಸಿತು.
ಈಗ ಅಶೋಕ ವಿವೇಕನ ಎದ್ದ ತಕ್ಷಣದ ಪ್ರತಿಕ್ರಿಯೆಯನ್ನು ಗಮನಿಸಿದ. ಅವನ ಮುಖದಲ್ಲಿ ಗಾಬರಿಯಾಗಲೀ, ಆಶ್ಚರ್ಯವಾಗಲಿ, ಪ್ರಶ್ನೆಯಾಗಲಿ ಇರಲಿಲ್ಲ. ತನ್ನ ತಲೆಗೆ ಹಾಕಿದ್ದ ಪಟ್ಟಿಯನ್ನು ಬಿಚ್ಚಿ ಮೇಜಿನ ಮೇಲಿಟ್ಟ. ಅಲ್ಲಿಗೆ ಮಾನಿಟರ್ನಲ್ಲಿ ಮೂಡುತ್ತಿದ್ದ ಮೆದುಳಿನ ಚಿತ್ರಣ ನಿಂತಿತು. ಮುದುರಿಹೋಗಿದ್ದ ಹಾಸಿಗೆಯನ್ನು ಕೈನಲ್ಲಿ ನೇರ್ಪಡಿಸಿದ. ಒಮ್ಮೆ ಗಂಟೆ ನೋಡಿಕೊಂಡು, ಅಶೋಕನನ್ನು ನೋಡಿ, “ನೀವು ಡಾಕ್ಟರ್ ಅಲ್ವಾ? ಇದು ಯಾವ ಆಸ್ಪತ್ರೆ?” ಎಂದು ಕೇಳಿದ.
ಅವನ ಮಾತಿನಲ್ಲಿ ಕುತೂಹಲವಿರಲಿಲ್ಲ, ಬದಲಿಗೆ ಕೇವಲ ಉತ್ತರ ತಿಳಿಯವುದು ಬೇಕಿತ್ತು.
ಅಶೋಕ ಉತ್ತರ ನೀಡುತ್ತಿದ್ದಂತೆಯೇ, ಕಿಸೆಯಿಂದ ಮೊಬೈಲ್ ತೆಗೆದು ಏನೋ ಟಂಕಿಸಿದ.
“ಏನು ಮಾಡ್ತಾ ಇದೀರಿ, ವಿವೇಕ್” – ಕೇಳಿದ ಅಶೋಕ್.
“ಆಫೀಸಿಗೆ ಹೋಗಕ್ಕಾಗಲ್ಲ, ತಡ ಆಗಿದೆ. ಅದಕ್ಕೆ ಈಮೇಲ್ ಮಾಡಿದೆ” ಎಂದು ಕೇಳಿದ ಪ್ರಶ್ನೆಗೆ ನಿಖರವಾದ ಉತ್ತರ ನೀಡಿದ.
ಅವನ ಮಾತು ತುಂಬ ನೇರವಾಗಿಯೂ, ಮಿತವಾಗಿಯೂ ಇತ್ತು, ಮಾತಿನಲ್ಲಿ ಯಾವುದೇ ಏರಿಳಿತವೂ ಇರಲಿಲ್ಲ.
ವಿವೇಕ್ ಮಂಚದಿಂದ ಕೆಳಗಿಳಿದು ಮಂಚದ ಇನ್ನೊಂದು ಬದಿಯಲ್ಲಿ ಮೇಜಿನ ಮೇಲಿಟ್ಟಿದ್ದ ನೀರು ತೆಗೆದುಕೊಂಡು ಕುಡಿದ.
ಅವನ ನಡೆಯನ್ನು ಅಶೋಕ ಗಮನಿಸಿದ. ತುಂಬಾ ನೇರವಾಗಿ ಗುರಿಯಿಟ್ಟು, ಚೌಕಾಕಾರವಾಗಿ ನಡೆಯುತ್ತಿದ್ದ, ವಿವೇಕ.
ಅಶೋಕ ವಿವೇಕನ ಮನಸ್ಸನ್ನು ತಿಳಿಯುವ ಸಲುವಾಗಿ ಕೆಲವು ಪ್ರಶ್ನೆಗಳನ್ನು ಕೇಳಿದ.
“ವಿವೇಕ್, ನಿಮಗೆ ತುಂಬ ಆಸಕ್ತಿ ಇರುವ ವಿಷಯ ಯಾವುದು?”
“ಯಾವುದೂ ಇಲ್ಲ” ವಿವೇಕನ ಉತ್ತರ ನೇರವಾಗಿತ್ತು.
“ನೀವು ತುಂಬ ಇಷ್ಟ ಪಡುವ ವ್ಯಕ್ತಿ ಯಾರು? ಅಪ್ಪ, ಅಮ್ಮ, ಹೆಂಡತಿ?”
“ಯಾರೂ ಇಲ್ಲ.”
“ನಿಮ್ಮ ನೆಚ್ಚಿನ ತಿನಿಸು ಯಾವುದು?”
“ಗೊತ್ತಿಲ್ಲ.”
ಪ್ರಶ್ನೆಯ ಗತಿಯನ್ನು ಸ್ವಲ್ಪವೂ ಬದಲಿಸದೆ, “೫,೬೪೭ x ೬,೭೪೫ ಎಷ್ಟು?”
“೩,೮೦,೮೯,೦೧೫”
ಅಶೋಕನಿಗೆ ತಾನು ಮಾತನಾಡಿಸುತ್ತಿರುವ ವ್ಯಕ್ತಿ ವಾಸ್ತವದಲ್ಲಿ ವ್ಯಕ್ಯಿಯಾಗಿ ಕಾಣದೆ, ಕೇವಲ ಒಂದು ಗಣಕಯಂತ್ರದಂತೆ ತೋರಿದ. ತಾನು ಅವನನ್ನು ಯಾಕೆ ಪ್ರಶ್ನಿಸುತ್ತಿದ್ದೇನೆಂದು ಅವನು ಯೋಚಿಸುತ್ತಿಲ್ಲ. ಅವನ ಮೆದುಳು ಕೇವಲ ಬುದ್ಧಿಯನ್ನು ಮಾತ್ರ ಓಡಿಸುತ್ತಿದೆ, ಭಾವನೆಗೆ ಅಲ್ಲಿ ಜಾಗವೇ ಇಲ್ಲ.
ಅಶೋಕನಿಗೆ ಸ್ಥೂಲವಾಗಿ ವಿವೇಕನ ಮಾನಸಿಕ ಸ್ಥಿತಿಯ ಬಗ್ಗೆ ಒಂದು ಅಂದಾಜು ಸಿಕ್ಕಿತು. ಮೆದುಳನ್ನು ಸ್ಕ್ಯಾನ್ ಮಾಡಿದ್ದರ ಪ್ರಕಾರ ಅವನ ಮೆದುಳಿನಲ್ಲಿ ಭಾವನೆಗಳನ್ನು ಯಾವುದೋ ಒಂದು ಭಾಗ ನಿಯಂತ್ರಿಸುತ್ತಿತ್ತು. ಅವನು ಭಾವನೆಗಳನ್ನು ಅನುಭವಿಸುವುದಕ್ಕೆ ಆ ಅಂಗ ತಡೆಯೊಡ್ಡುತ್ತಿತ್ತು. ಈ ವಿಷಯವನ್ನು ವಾಸ್ತವದಲ್ಲೂ ಅಶೋಕ ಮನಗಂಡಿದ್ದ. ಯಾರಾದರೂ ಪ್ರಜ್ಞಾಹೀನಸ್ಥಿತಿಯಿಂದ ಹೊರಬಂದೊಡನೆ ಗಾಬರಿ, ಕುತೂಹಲ, ತಾನೆಲ್ಲಿದ್ದೀನೆಂಬ ಪ್ರಶ್ನೆ ಮೂಡುವುದು ಅತಿ ಸಹಜ. ಆದರೆ, ವಿವೇಕನ ವಿಷಯದಲ್ಲಿ ಅದಾಗಲಿಲ್ಲ. ಮೊದಲನೇ ಬಾರಿಗೆ ಅಶೋಕನನ್ನೂ, ಈ ಆಸ್ಪತ್ರೆಯನ್ನೂ ನೋಡಿದಾಗಲೂ ವಿವೇಕನಿಗೆ ಅದರ ಬಗ್ಗೆ ತಿಳಿಯುವ ಆಸಕ್ತಿ ಮೂಡಲೇ ಇಲ್ಲ. ಅವನ ನಡೆ ನುಡಿ ಮಾತುಕತೆಯಿಂದ ತಿಳಿದ ಅಂಶ, ವಿವೇಕನ ಮೆದುಳು ತುಂಬ ನಿಯಮಬದ್ಧ. ಅದು ಕಂಪ್ಯೂಟರಿನಂತೆ ತರ್ಕವನ್ನು ಪಾಲಿಸುತ್ತದೆಯೇ ಹೊರತು ಭಾವನೆಗಳನ್ನಲ್ಲ.
ಅಧ್ಯಾಯ ೫
“ವಿವೇಕನ ಆರೋಗ್ಯದಲ್ಲಿ ಸಮಸ್ಯೆ ಏನೂ ಇಲ್ಲದಿದ್ದರೆ, ಅವನನ್ನು ಯಥಾಸ್ಥಿತಿಯಲ್ಲಿ ಕಳಿಸಿಕೊಟ್ಟುಬಿಡಿ, ಡಾಕ್ಟ್ರೆ” ಮನೋಹರ ಅಶೋಕನಲ್ಲಿ ಕೇಳಿಕೊಳ್ಳುತ್ತಿದ್ದ.
ಅಶೋಕ ವಿವೇಕನ ಬಗ್ಗೆ ತಿಳಿದುಕೊಳ್ಳಲು ರಾಧಾ ಮತ್ತು ಮನೋಹರನನ್ನು ಖಾಸಗಿಯಾಗಿ ಮಾತನಾಡಿಸುತ್ತಿದ್ದ. ರಾಧಾ ವಿವೇಕ ಬಾಲ್ಯದಲ್ಲೇ ಗಣಿತದ ಕ್ವಿಝ್ನಲ್ಲಿ ಗೆದ್ದಿದ್ದು, ರಾಘವನ ಮದುವೆ ಸಮಯದಲ್ಲಿ ನೋಡುತ್ತಲೇ ಕಾರ್ಡುಗಳ ನಿಖರ ಸಂಖ್ಯೆಯನ್ನು ಹೇಳಿದ್ದು, ಎಲ್ಲವನ್ನೂ ವಿವರಿಸಿದಳು.
“ನೀವು ಹೇಳಿ ಮನೋಹರ್, ವಿವೇಕನ ಬಗ್ಗೆ ನೀವು ಏನಾದರೂ ಹೇಳುತ್ತೀರ?” ಪ್ರಶ್ನಿಸಿದ ಅಶೋಕ್.
“ವಿವೇಕ ಮೊದಲಿನಿಂದಲೂ ತುಂಬ ಮೌನಿ. ಅವನು ಹುಟ್ಟಿದ ದಿನ ನನಗೆ ಚೆನ್ನಾಗಿ ನೆನಪಿದೆ. ನಾನು ಲೇಬರ್ ರೂಮಿನ ಹೊರಗೆ ಚಡಪಡಿಸುತ್ತಾ ಕಾಯುತ್ತಾ ಇದ್ದೆ. ಎಷ್ಟು ಹೊತ್ತಾದರೂ ಮಗುವಿನ ಅಳು ಕೇಳದೆ ಸ್ವಲ್ಪ ಆತಂಕಗೊಂಡೆ. ಅಷ್ಟರಲ್ಲಿ ನರ್ಸ್ ಹೊರಬಂದು, `ಗಂಡು ಮಗು’ ಎಂದಳು. ಮಗು ಸದ್ದಿಲ್ಲದೆ ಇದ್ದದ್ದು ನೋಡಿ, `ಅದೇನು ಮೂಕನೇ?’ ಎಂದು ದಿಗಿಲಾಯಿತು. ಎತ್ತಿ ಆಡಿಸಿದೆ. ಆದರೂ ಸದ್ದಿಲ್ಲ. ಹಸಿವಾದಾಗ ತುಂಬ ಕ್ಷೀಣವಾಗಿ ಕೊಯ್ ಅಂದ. `ಸಧ್ಯ ಧ್ವನಿ ಹೊರಟಿತಲ್ಲ’ ಅಂತ ಸಮಾಧಾನ ಆಯಿತು. ದಿನ ಕಳೆದಂತೆ, ಕೇವಲ ಏಳು ತಿಂಗಳಿಗೆಲ್ಲ ಮಾತು ಬಂದುಬಿಟ್ಟಿತು. ಇತರ ಮಕ್ಕಳ ಥರ ಮೊದಲು ಅಮ್ಮ, ಆಮೇಲೆ ಅಪ್ಪ, ಹೀಗೆ ಒಂದೊಂದೆ ಪದ ಪದವಾಗಿ ಇವನು ಮಾತು ಕಲಿತಿದ್ದು ನಾವು ನೋಡಲೇ ಇಲ್ಲ. ಮಾತು ಬಂತು ಎಂದರೆ, ಪೂರ್ತಿಯಾಗಿ ಸ್ಪಷ್ಟವಾಗಿ ಮಾತನಾಡುತ್ತಿದ್ದ.”
ಅಶೋಕ ಈಗ ಗಂಭೀರವಾಗಿ ಕೇಳಿದ “ಅವನ ಕಲಿಕೆ, ಚತುರತೆ ಬಗ್ಗೆ ನಿಮಗೆ ಹೆಮ್ಮೆ ಇದೆ ಅಲ್ವಾ?”
“ಇದೇನು ಡಾಕ್ಟ್ರೆ, ಹೀಗೆ ಕೇಳುತ್ತೀರಾ? ಎಷ್ಟೋ ಜನ ತಮ್ಮ ಮಕ್ಕಳು ಓದಿನಲ್ಲಿ ಮುಂದೆ ಇಲ್ಲವಲ್ಲ, ಚುರುಕಾಗಿಲ್ಲವಲ್ಲ ಅಂತ ತಲೆಕೆಡಿಸಿಕೊಳ್ಳುವಾಗ, ನಮ್ಮ ವಿವೇಕ ಅತ್ಯಂತ ಪ್ರತಿಭಾವಂತ ಅಂತ ಹೇಳುವುದಕ್ಕೆ ನಮಗೆ ತುಂಬ ಹೆಮ್ಮೆ. ಅವನು ಈಗಾಗಲೇ ಅತಿ ವೇಗವಾಗಿ ಗಣಿತದ ಸಮಸ್ಯೆ ಬಗೆಹರಿಸುವ ವ್ಯಕ್ತಿ ಎಂದು ಹೆಸರು ಮಾಡಿದ್ದಾನೆ; ಹೀಗೇ ಮುಂದುವರಿದು ಅವನ ಕೀರ್ತಿ ವಿಶ್ವವ್ಯಾಪಿಯಾಗಬೇಕೆಂಬುದೇ ನನ್ನ ಕನಸು. ನಾನು ಈಗಾಗಲೇ ಅವನು ಇನ್ನು ಯಾವ ಸ್ಪರ್ಧೆಗಳಲ್ಲಿ ಭಾಗವಹಿಸಬೇಕೆಂದು ನೋಡುತ್ತಿದ್ದೇನೆ” ಎಂದ ಮನೋಹರ.
“ನೀವು ಯಾರಾದರೂ ಅವನ ಮನಸ್ಸಿನಲ್ಲಿ ಏನಿದೆ? ಎಂದು ತಿಳಿಯುವ ಪ್ರಯತ್ನ ಮಾಡಿದ್ದೀರಾ?”
ರಾಧಾ ಮನೋಹರ ಒಬ್ಬರ ಮುಖ ಒಬ್ಬರು ನೋಡಿಕೊಂಡರು. “ಡಾಕ್ಟ್ರೆ, ನಾವು ಅವನಿಗೆ ಯಾವುದಕ್ಕೂ ಕಡಮೆ ಮಾಡಿಲ್ಲ. ಅವನಿಗೆ ಯಾವ ಕೊರಗೂ ಇರುವುದು ಸಾಧ್ಯವೇ ಇಲ್ಲ” ಎಂದಳು ರಾಧಾ.
ಅವಳ ಮಾತನ್ನು ಪುಷ್ಟೀಕರಿಸುತ್ತಾ, “ಅವನು ನಮ್ಮ ಬಳಿ ಯಾವ ಸಮಸ್ಯೆಯನ್ನೂ ಚರ್ಚಿಸಿಲ್ಲ. ಅವನ ಮನಸ್ಸಲ್ಲಿ ಏನಾದರೂ ಬೇಸರ ಇದೆಯಾ? ನಿಮಗೆ ಅವನು ಏನಾದರೂ ಹೇಳಿದನಾ?” ಎಂದು ಕೇಳಿದ ಮನೋಹರ.
“ಇಲ್ಲ. ಅವನಿಗೆ ಯಾವುದೇ ಸಮಸ್ಯೆಯೂ ಇಲ್ಲ.”
ಅಶೋಕ ಈಗ ಗಂಭೀರವಾಗಿ ಹೇಳಿದ, “ನಿಜ ಹೇಳಬೇಕೆಂದರೆ ಅವನಿಗೆ ಮನಸ್ಸೇ ಇಲ್ಲ. ಅಂದರೆ, ಭಾವನೆಗಳೇ ಇಲ್ಲ. ಅವನು ಎಂದಾದರೂ ಯಾವುದೇ ವಿಷಯವಾಗಿ ನಿಮ್ಮೊಡನೆ ಜಗಳವಾಡಿದ ನೆನಪಿದೆಯಾ?”
ರಾಧಾ ಮನೋಹರ ಯೋಚಿಸಿದರು. ರಾಧಾಳ ಮನಸ್ಸಿನಲ್ಲಿ ಆ ದಿನ ತಾನು ಮನೋಹರನ ಜೊತೆ ಜಗಳವಾಡಿದ ದಿನ ನೆನಪಾಯಿತು. ಜಗಳಕ್ಕೆ ಇಂಥದ್ದೇ ಕಾರಣ ಬೇಕಿಲ್ಲ. ರಾಧಾ ತನ್ನ ತವರಿಗೆ ಹೋಗುವ ಯೋಚನೆಯಲ್ಲಿದ್ದಳು, ಮನೋಹರನಿಗೆ ಮನೆಯವರೆಲ್ಲ ಒಂದು ಸಿನಿಮಾಕ್ಕೆ ಹೋಗಲು ಯೋಚನೆಯಿತ್ತು. ರಾಧಾ ತಾನು ತವರಿಗೆ ಹೋಗುತ್ತೇನೆಂದೊಡನೆ ಮನೋಹರನಿಗೆ ತುಂಬ ಕೋಪ ಬಂತು. ಕೋಪ ಬಂದಾಗ ಅವನು ಮಾತು ನಿಲ್ಲಿಸಿ ಮುಖ ಗಂಟಿಕ್ಕಿಕೊಂಡು ಸಪ್ಪಗಾಗುತ್ತಾನೆ. ಮಾತನಾಡಿ ಜಗಳವಾಡುವುದಕ್ಕಿಂತ ಮೌನವಾಗಿ ಇವನು ಕೊಡುವ ಮಾನಸಿಕ ವೇದನೆ ರಾಧಾಳನ್ನು ತುಂಬ ಹೆಚ್ಚು ಕಾಡುತ್ತದೆ. ಕೂಗಾಡುತ್ತಾಳೆ. ಜಗಳ ತಾರಕಕ್ಕೆ ಹೋಗುತ್ತದೆ. ಇಷ್ಟಾದರೂ ವಿವೇಕ ಒಂದು ಮಾತೂ ಆಡಿರಲಿಲ್ಲ. ಮಾತನಾಡಿಸಿದರೂ, ಅವನು ಗರುಡಗಂಭದಂತೆ ಸುಮ್ಮನೆಯೇ ಇರುತ್ತಿದ್ದ.
“ಹೇಳಿ, ಅವನು ಯಾವಾಗಲಾದರೂ ಜಗಳ ಆಡಿದ್ದಾನಾ?” ಅಶೋಕ ರಾಧಾಳನ್ನು ನೋಡುತ್ತಾ ಕೇಳಿದ.
ರಾಧಾಳಿಗೆ ಮನವರಿಕೆಯಾಗುತ್ತಾ ಹೋಯಿತು. ಜಗಳವಿರಲಿ, ಅವನು ಎಂದೂ ಮನಬಿಚ್ಚಿ ಮಾತೂ ಆಡಿಲ್ಲ ಎನಿಸಿತು. ರಾಧಾ ಸುಮ್ಮನೆ ಇಲ್ಲವೆಂಬಂತೆ ತೆಲೆಯಾಡಿಸಿದಳು.
ಅಶೋಕ ಈಗ ಕೇಳಿದ, “ಹೇಳಿ, ವಿವೇಕನಿಗೆ ತುಂಬ ಇಷ್ಟವಾದ ಹಣ್ಣು ಯಾವುದು?”
“ಅವನು ಎಲ್ಲವನ್ನೂ ತಿನ್ನುತ್ತಾನೆ” ಮನೋಹರ ಉತ್ತರಿಸಿದ.
“ಎಲ್ಲವನ್ನೂ ತಿನ್ನುವುದಕ್ಕೂ ಇಷ್ಟಪಟ್ಟು ತಿನ್ನುವುದಕ್ಕೂ ಬಹಳ ವ್ಯತ್ಯಾಸ ಇದೆ, ಮನೋಹರ್. ನಿಮಗೆ ಯಾವ ಹಣ್ಣು ಇಷ್ಟ?”
“ಇವರಿಗೆ ಹಲಸಿನಹಣ್ಣು ತುಂಬ ಇಷ್ಟ. ಬಿಡಿಯಾಗಿ ತಂದರೆ, ತುಂಬ ದುಡ್ಡು ಜಾಸ್ತಿಯಾಗುತ್ತದೆ ಎಂದು ಮಾಗಡಿ ರೋಡಿನಿಂದ ಇಡೀ ಹಣ್ಣು ತಂದೂ ತಂದೂ ನನ್ನ ಕೈ ಬಿದ್ದುಹೋಗಿದೆ” ಎಂದು ನಕ್ಕಳು ರಾಧಾ.
ಅಶೋಕ ಹೇಳಿದ “ನಿಮ್ಮ ಗಂಡನ ಇಷ್ಟದ ಹಣ್ಣು ನಿಮಗೆ ಗೊತ್ತಿರುವಂತೆ ನಿಮ್ಮ ಮಗನ ಇಷ್ಟದ ಹಣ್ಣು ನಿಮಗೆ ತಿಳಿದಿಲ್ಲ. ಯಾಕೆಂದರೆ, ಅವನಿಗೆ ಇಷ್ಟ ಕಷ್ಟ ಯಾವುದೂ ಇಲ್ಲ. ವಿವೇಕನ ಸಮಸ್ಯೆ – ಅವನಿಗೆ ಭಾವನೆಗಳಿಲ್ಲ; ಕೋಪ, ದುಃಖ, ಸಂತೋಷ, ಆಶ್ಚರ್ಯ ಇದ್ಯಾವುದು ಅವನಿಗೆ ಅನ್ನಿಸುವುದಿಲ್ಲ. ಅಷ್ಟೇ ಏಕೆ, ದಾಂಪತ್ಯದ ಸುಖವೂ ಅವನಿಗೆ ತಿಳಿದಿಲ್ಲ. ಮೊದಲ ಬಾರಿ ಅವನ ಮನಸ್ಸನ್ನು ಕಾಮಸುಖಕ್ಕೆ ಪ್ರೇರೇಪಿಸಿದಾಗ ಅವನಲ್ಲಿ ಎಡವಟ್ಟಾಗಿ ಅವನು ಪ್ರಜ್ಞಾಹೀನನಾದ.”
“ಡಾಕ್ಟರೆ, ಹಾಗಾದರೆ, ನಿಜವಾದ ಸಮಸ್ಯೆ ಏನು? ಅವನು ಅಷ್ಟೊಂದು ಬುದ್ಧಿವಂತ, ಅಂಥವನಿಗೆ ಯಾಕೆ ಇಂಥ ಸಮಸ್ಯೆ?” ಕೇಳಿದ ಮನೋಹರ.
ಅಶೋಕ ನಗುತ್ತಾ, “ನಿಮ್ಮ ಪ್ರಶ್ನೆಯಲ್ಲೇ ಉತ್ತರ ಅಡಗಿದೆ. ಅವನು ಅಷ್ಟೊಂದು ಬುದ್ಧಿವಂತನಾಗಿರುವುದೂ, ಅವನಿಗೆ ಭಾವನೆಗಳಿಲ್ಲದಿರುವುದೂ ಎರಡಕ್ಕೂ ಸಂಬಂಧವಿದೆ.”
ಅಶೋಕ ಈಗ ತಾನು ವಿವೇಕನ ಮೇಲೆ ನಡೆಸಿದ ಪರೀಕ್ಷೆಯನ್ನು ಪದರ ಪದರವಾಗಿ ವಿಶ್ಲೇಷಿಸತೊಡಗಿದ. “ನಾನು ವಿವೇಕನ ಮೆದುಳನ್ನು ಸ್ಕ್ಯಾನ್ ಮಾಡಿದ್ದೇನೆ. ನನಗೆ ತಿಳಿದಂತೆ ಅವನ ಮೆದುಳು ಬೇರೆಯವರ ಮೆದುಳಿನಂತಿಲ್ಲ. ಅವನ ಮೆದುಳಿನಲ್ಲಿ ವಿಶೇಷವಾದ ಒಂದು ಭಾಗವನ್ನು ನಾನು ಗುರುತಿಸಿದ್ದೇನೆ. ಮೆದುಳಿನ ಒಳಗೆ ಭಾವನೆಗಳನ್ನು ಪ್ರಚೋದಿಸುವ ಅಂಗ ಹೈಪೊತಾಲಮಸ್. ಅದು ಭಾವನೆಗಳನ್ನು ಹೊರಡಿಸಿದಾಗ ರಕ್ತಕ್ಕೆ ಹಾರ್ಮೋನ್ಗಳು ಸರಬರಾಜಾಗುತ್ತದೆ ಮತ್ತು ಅದರ ಜೊತೆಗೆ ಅನೇಕ ತರಂಗಗಳು ಉಂಟಾಗುತ್ತವೆ. ಒಬ್ಬ ವ್ಯಕ್ತಿಯ ಮೆದುಳಿನಲ್ಲಿ ನಿರ್ದಿಷ್ಟ ತರಂಗಗಳುಂಟಾದಾಗ ಆ ವ್ಯಕ್ತಿಗೆ ಸಂತೋಷ, ದುಃಖ, ಕೋಪ, ಆಶ್ಚರ್ಯ ಮೊದಲಾದ ಅನುಭವವಾಗುತ್ತದೆ. ನಾನು ಹೇಳಿದ ವಿಶೇಷ ಅಂಗ ಹೈಪೊತಾಲಮಸ್ನ ಮೇಲೆ ಹಿಡಿತ ಸಾಧಿಸಿ, ಅದು ಹೊರಡಿಸುವ ತರಂಗಗಳನ್ನು ನಿಸ್ತೇಜಗೊಳಿಸುತ್ತದೆ. ಹಾಗಾಗಿ, ವಿವೇಕನ ಮನಸ್ಸಿನಲ್ಲಿ ಯಾವ ಭಾವನೆಗಳೂ ಮೂಡುವುದಿಲ್ಲ. ಪ್ರತಿ ಮನುಷ್ಯನ ಮನಸ್ಸಿನಲ್ಲಿ ಹೀಗೆ ಭಾವನೆಗಳು ಉಂಟಾದಾಗ ಅವರು ಭಾವನೆಗಳ ಸುಳಿಯಲ್ಲಿ ಸಿಲುಕುತ್ತಾರೆ. ಆಗ ಅವರ ತಾರ್ಕಿಕಬುದ್ಧಿ ತನ್ನ ಪೂರ್ಣಪ್ರಮಾಣದಲ್ಲಿ ಕೆಲಸ ಮಾಡುವುದಿಲ್ಲ. ವಿವೇಕನ ಸನ್ನಿವೇಶದಲ್ಲಿ, ಭಾವನೆಗಳಿಲ್ಲದಿರುವುದರಿಂದ ತಾರ್ಕಿಕಬುದ್ಧಿ ತುಂಬ ಅದ್ಭುತವಾಗಿ ಕೆಲಸ ನಿರ್ವಹಿಸುತ್ತದೆ. ಹೀಗಾಗಿ ಅವನು ಗಣಿತದ ಯಾವ ಸಮಸ್ಯೆಯನ್ನಾದರೂ ಅತ್ಯಂತ ಚುರುಕಾಗಿ ಬಗೆಹರಿಸಬಲ್ಲ.”
ಅಶೋಕನ ವಿವರಣೆ ರಾಧಾ ಮತ್ತು ಮನೋಹರನಿಗೆ ತುಂಬ ಸಮಂಜಸವಾಗಿ ತೋರಿತು. “ನೀವು ಹೇಳಿದ ಆ ಹೊಸ ಭಾಗ ಯಾವುದು?” ಮನೋಹರ ಕೇಳಿದ.
“ನಾನು ಮನುಷ್ಯನ ಮೆದುಳನ್ನು ಕುರಿತು ಹಲವಾರು ವರ್ಷಗಳ ಅಧ್ಯಯನ ನಡೆಸಿದ್ದೇನೆ. ಈ ಹೊಸಭಾಗ ನಾನೆಂದೂ ಕಂಡಿಲ್ಲ. ಹಾಗಾಗಿ ಇದಕ್ಕೆ ಯಾವ ಹೆಸರೂ ಇಲ್ಲ. ಮನುಷ್ಯನ ಮೆದುಳಿನ ಆಳದಲ್ಲಿ ತಾಲಮಸ್ ಎಂಬ ಭಾಗವಿರುತ್ತದೆ. ದೇಹದ ಬೇರೆಬೇರೆ ಭಾಗಗಳಿಗೆ ಸಂದೇಶ ಮುಟ್ಟಿಸುವುದು ಇದರ ಕೆಲಸ. ಗ್ರೀಕಿನಲ್ಲಿ ತಾಲಮಸ್ ಎಂದರೆ ಕೊಠಡಿ. ಈ ಭಾಗದ ಕೆಳಗಿರುವ ಭಾಗದ ಹೆಸರು ಹೈಪೊತಾಲಮಸ್. ಇದು ಭಾವನೆಗಳ ಉಗಮಸ್ಥಾನ. ತಾಲಮಸ್ನ ಕೆಳಗಿರುವುದರಿಂದ ಇದನ್ನು ಹೈಪೊತಾಲಮಸ್ ಎಂದು ಕರೆದಿದ್ದಾರೆ. ಈ ಭಾಗ ಹೆಣ್ಣಿನಂತೆ ಚಂಚಲ ಎನ್ನಬಹುದು. ವಿವೇಕನ ಮೆದುಳಿನಲ್ಲಿ ನಾನು ಗುರುತಿಸಿರುವ ಭಾಗ ಹೈಪೊತಾಲಮಸ್ ಭಾಗವನ್ನು ತನ್ನ ಹತೋಟಿಯಲ್ಲಿಟ್ಟುಕೊಂಡು, ಅದರ ನಿರ್ವಹಣೆಯನ್ನು ತಡೆಯುತ್ತದೆ. ತನ್ನ ರೂಮಿನಲ್ಲಿ ಕನ್ನಡಿಯ ಮುಂದೆ ನಿಂತ ಹೆಣ್ಣು ಅದರಲ್ಲೇ ಲೀನಳಾಗಿ ತನ್ನ ಕೆಲಸ ಮರೆಯುತ್ತಾಳಲ್ಲ, ಹಾಗೆ. ನಾನು ಇದನ್ನು ಕನ್ನಡಿ ಎನ್ನಲು ಬಯಸುತ್ತೇನೆ. ಇತರೆ ಹೆಸರಿನಂತೆ ಇದನ್ನು ಗ್ರೀಕಿನಲ್ಲಿ ಹೇಳುವುದಾದರೆ, ಇದನ್ನು ಕ್ಯಾತೊರೆಪ್ತಿಸ್ ಎನ್ನಬಹುದು.”
ರಾಧಾ ಕೇಳಿದಳು “ಡಾಕ್ಟ್ರೆ, ವಿವೇಕನ ಮೆದುಳಿನಿಂದ ಆಪರೇಷನ್ ಮೂಲಕ ಕ್ಯಾತೊರೆಪ್ತಿಸ್ ಎಂಬ ಭಾಗವನ್ನು ತೆಗೆದು ಅವನು ನಾರ್ಮಲ್ ಆಗುವಂತೆ ಮಾಡಬಹುದು, ಅಲ್ವಾ?”
“ಹೌದು, ಖಂಡಿತಾ. ಅವನು ಪರಿಪೂರ್ಣವಾಗಿ ಗುಣವಾಗುತ್ತಾನೆ. ಆದರೆ, ಇದುವರೆಗೆ ಅವನಿಗಿದ್ದ ಆ ಅಪ್ರತಿಮ ಬೌದ್ಧಿಕ ಸಾಮರ್ಥ್ಯವೂ ಕಡಮೆಯಾಗುತ್ತದೆ. ಆದರೆ, ಅವನನ್ನು ಒಬ್ಬ ವ್ಯಕ್ತಿಯಾಗಿ ಬದಲಾಯಿಸಬೇಕಾದರೆ, ನಾವು ಈ ಶಸ್ತ್ರಚಿಕಿತ್ಸೆ ಮಾಡಲೇಬೇಕು.”
ಮನೋಹರ “ಒಂದು ನಿಮಿಷ ಬಂದೆ” ಎಂದು ಹೇಳಿ ರಾಧಾಳನ್ನು ಹೊರಗೆ ಕರೆದುಕೊಂಡು ಹೋದ.
“ರಾಧಾ, ನಾನು ಯೋಚಿಸಿದ ಪ್ರಕಾರ, ನಾವು ಅವನಿಗೆ ಇನ್ನು ಐದು ತಿಂಗಳು ಏನೂ ಮಾಡುವುದು ಬೇಡ. ನಾನು ಅವನನ್ನು ಇಂಟರ್ನ್ಯಾಷನಲ್ ಮ್ಯಾತ್ ಕ್ವಿಝ್ಗೆ ನೋಂದಾಯಿಸಿದ್ದೇನೆ. ಆ ಸ್ಪರ್ಧೆ ಇನ್ನು ಐದು ತಿಂಗಳಲ್ಲಿ ನಡೆಯಲಿದೆ. ಅವನು ಅದರಲ್ಲಿ ಗೆಲ್ಲಬೇಕಾದರೆ, ಈಗ ಹೇಗಿದ್ದಾನೋ ಹಾಗೇ ಇರಬೇಕು. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಹತ್ತು ಸಾವಿರ ಡಾಲರ್ ಬಹುಮಾನ, ಜೊತೆಗೆ ಬಿ.ಎಂ.ಡಬ್ಲ್ಯೂ. ಕಾರು ಸಿಗುತ್ತದೆ. ಈ ಅವಕಾಶ ಕಳೆದುಕೊಳ್ಳುವುದು ಬೇಡ” ಎಂದು ಅವಳ ಮನವೊಲಿಸಿದ.
ಅವಳಿಗೆ ಮನೋಹರನ ಮಾತು ಅಷ್ಟಾಗಿ ಹಿಡಿಸಲಿಲ್ಲ. “ರೀ, ಅವನು ನಮ್ಮ ಮಗ. ಅವನ ಆರೋಗ್ಯ ಹೆಚ್ಚೋ ಈ ದುಡ್ಡು ಹೆಚ್ಚೋ? ಮೊದಲು ಅವನು ಗುಣ ಆಗಲಿ.”
“ರಾಧಾ, ನನಗೆ ನನ್ನ ಮಗನ ಬಗ್ಗೆ ಪ್ರೀತಿ ಇಲ್ವಾ? ಗುಣ ಆಗಲಿ, ಇಷ್ಟು ವರ್ಷಗಳೇ ಕಳೆದವಂತೆ, ಒಂದು ಐದು ತಿಂಗಳು ಹೆಚ್ಚು ಕಾದರೆ ಏನೂ ಆಗುವುದಿಲ್ಲ, ಅಲ್ವ.”
ಆಶೋಕನ ಬಳಿ ಬಂದು “ಡಾಕ್ಟರೆ, ಈ ಆಪರೇಷನನ್ನು ಐದು ತಿಂಗಳು ಮುಂದೂಡಬಹುದಾ?” ಎಂದ ಮನೋಹರ.
“ಯಾಕೆ? ನನ್ನ ಪ್ರಕಾರ ತಡಮಾಡಿದರೆ ಒಳ್ಳೆಯದಲ್ಲ. ಮುಂದೂಡಲು ಬಲವಾದ ಕಾರಣವಿದ್ದರೆ ಪರಿಗಣಿಸಬಹುದು. ಆದರೂ ಬೇಗ ಮಾಡಿದರೆ ಒಳ್ಳೆಯದು.”
ಮನೋಹರ ಒಂದು ಕ್ಷಣ ಯೋಚಿಸಿ, “ವಿವೇಕನ ಚಿಕ್ಕತಾತ ಅಂದರೆ ನಮ್ಮ ಚಿಕ್ಕಪ್ಪ ಅಮೆರಿಕದಲ್ಲಿದ್ದಾರೆ. ಈಗ ಹಾಸಿಗೆ ಹಿಡಿದಿದ್ದಾರೆ, ಕೊನೆಯದಾಗಿ ಒಂದು ಸಲ ವಿವೇಕನನ್ನು ನೋಡಲು ಉಸಿರುಹಿಡಿದುಕೊಂಡು ಕಾಯ್ತಾ ಇದ್ದಾರೆ. ಒಮ್ಮೆ ಅಮೆರಿಕಕ್ಕೆ ಹೋಗಿ ಬಂದಮೇಲೆ ಈ ಆಪರೇಷನ್ ಮಾಡಬಹುದಲ್ವ?”
“ತಡ ಮಾಡುವುದು ಖಂಡಿತಾ ಒಳ್ಳೆಯದಲ್ಲ. ನೀವು ಐದು ತಿಂಗಳು ಬಿಟ್ಟು ಬಂದಾಗ ಪರಿಸ್ಥಿತಿ ಹೇಗಿರುತ್ತದೆ ಯಾರಿಗೆ ಗೊತ್ತು? ಈಗ ಶಸ್ತ್ರಚಿಕಿತ್ಸೆ ಮುಗಿಸುವುದು ನನ್ನ ಪ್ರಕಾರ ತುಂಬ ಒಳ್ಳೆಯದು. ಯೋಚಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳಿ” ಎಂದು ಅಶೋಕ ತನ್ನ ಸಲಹೆ ನೀಡಿ ಕಳುಹಿಸಿಕೊಟ್ಟ.
ಡಾಕ್ಟರ್ ಕೊಠಡಿಯಿಂದ ಹೊರಬರುತ್ತಾ ರಾಧಾ ಕೇಳಿದಳು – “ಯಾರ್ರೀ ಅದು, ನಿಮ್ಮ ಚಿಕ್ಕಪ್ಪ, ಅಮೆರಿಕದಲ್ಲಿರೋದು?”
“ಲೇ ಹೀಗೆಲ್ಲ ಹೇಳಿದರೆ, ಶಸ್ತ್ರಚಿಕಿತ್ಸೆ ಮುಂದೂಡುವುದಕ್ಕೆ ಡಾಕ್ಟ್ರು ಒಪ್ಪಿಕೊಳ್ಳುತ್ತಾರೇನೋ ಅಂತ ಹೇಳಿದೆ. ಇಂಟರ್ನ್ಯಾಷನಲ್ ಕ್ವಿಝ್ನಲ್ಲಿ ಗೆಲ್ಲಬೇಕಾದರೆ, ವಿವೇಕ ಈಗ ಹೇಗಿದ್ದಾನೋ ಹಾಗೇ ಇರಬೇಕು.”
“ರೀ ಆದರೂ ನನಗೆ ಯಾಕೋ ಸರಿ ಕಾಣಿಸ್ತಾ ಇಲ್ಲ ಇದು.”
ಅಧ್ಯಾಯ ೬
“ಅತ್ತೆ, ತುಂಬ ಹೊತ್ತು ಮಾತಾಡಿದರಲ್ಲ, ಡಾಕ್ಟರ್ ಹತ್ತಿರ, ಏನು ಹೇಳಿದರು?” ಮನೆಗೆ ಬಂದ ತಕ್ಷಣ ಚಿತ್ರಾಳ ಪ್ರಶ್ನೆ ಶುರುವಾಯಿತು.
“ಏನೂ ಗಾಬರಿಯಿಲ್ಲ. ಒಂದು ಸಣ್ಣ ಆಪರೇಷನ್ ಆಗ್ಬೇಕು ಅಷ್ಟೆ” ಎಂದಳು, ರಾಧಾ.
“ಯಾವಾಗ ಮಾಡ್ತಾರಂತೆ?”
“ಯಾವಾಗ ಬೇಕಾದರೂ ಮಾಡಬಹುದು, ಆದರೆ, ನಾವೇ ಐದು…”
ರಾಧಾ ಮಾತು ಮುಗಿಸುವುದರೊಳಗೆ ಮನೋಹರ ಹೇಳಿದ “ಐದು ತಿಂಗಳು ಬಿಟ್ಟು ಆಪರೇಷನ್ ಮಾಡುತ್ತಾರಂತೆ, ಅಲ್ಲಿಯವರೆಗೂ ಮೆಡಿಟೇಷನ್ನಲ್ಲಿ ಇರುವುದಕ್ಕೆ ಹೇಳಿದರು.”
ಮನೋಹರ ಚಿತ್ರಾಳಿಂದ ಸತ್ಯವನ್ನು ಮುಚ್ಚಿಡಲು ಪ್ರಯತ್ನಿಸಿದ್ದು ರಾಧಾಳಿಗೆ ತಿಳಿಯಿತು. ಆದರೂ, ಈ ವಿಷಯ ಹೆಚ್ಚು ಕೆದಕದೇ ಸುಮ್ಮನಾದಳು.
ಐದು ತಿಂಗಳು ಕಾಯಬೇಕು ಎಂದು ಚಿತ್ರಾ ಮನಸ್ಸು ಗಟ್ಟಿ ಮಾಡಿಕೊಂಡಳು.
ಮನೋಹರನ ಯೋಜನೆಯಂತೆ ಇಂಟರ್ನ್ಯಾಷನಲ್ ಮ್ಯಾತ್ ಕ್ವಿಝ್ನಲ್ಲಿ ವಿವೇಕನೇ ಗೆದ್ದ. ಬಹುಮಾನದ ಹಣ ಮತ್ತು ಕಾರು ಒಂದು ವಾರದಲ್ಲಿ ಮನೆಗೆ ಬಂತು. ವಿವೇಕನನ್ನು ಹೊರತುಪಡಿಸಿ ಮನೆಯಲ್ಲಿ ಪ್ರತಿಯೊಬ್ಬರಿಗೂ ಸಂತೋಷವಾಯಿತು. ವಿವೇಕನಿಗೆ ಯಾವ ಭಾವನೆಯೂ ಇಲ್ಲ.
“ರಾಧಾ, ವಿವೇಕನನ್ನು ಈವತ್ತು ಆಸ್ಪತ್ರೆಗೆ ಕರೆದುಕೊಂಡು ಹೋಗೋಣ.”
ಎಲ್ಲರೂ ಆಸ್ಪತ್ರೆಗೆ ಬಂದರು. ಅಶೋಕನನ್ನು ಭೇಟಿಯಾದರು.
ಅಶೋಕ ವಿವೇಕನನ್ನು ಪರೀಕ್ಷೆಗೆಂದು ಒಳಗೆ ಕರೆದುಕೊಂಡು ಹೋದ. ಸುಮಾರು ಒಂದು ಗಂಟೆಯ ಬಳಿಕ ಮುಖ ಸ್ವಲ್ಪ ಪೆಚ್ಚಗೆ ಮಾಡಿಕೊಂಡು ಹೊರಬಂದ. ವಿವೇಕನನ್ನು ಚಿತ್ರಾಳ ಬಳಿಯಿರಲು ಹೇಳಿ ರಾಧಾ ಮತ್ತು ಮನೋಹರನನ್ನು ತನ್ನ ಕೊಠಡಿಗೆ ಕರೆದೊಯ್ದ.
“ಮನೋಹರ್, ನೀವು ನನ್ನ ಮಾತು ಕೇಳದೆ ತಪ್ಪು ಮಾಡಿಬಿಟ್ರಿ. ನಾವು ಆವತ್ತೇ ಅವರ ಆಪರೇಷನ್ ಮಾಡಬೇಕಿತ್ತು. ನಾನು ನಿಮಗೆ ಮೊದಲೇ ಹೇಳಿದ್ದೆ.”
ಮನೋಹರ ಗಾಬರಿಯಿಂದ ಕೇಳಿದ, “ಯಾಕೆ ಡಾಕ್ಟ್ರೆ, ಏನಾಯಿತು?”
“ನಾನು ಗುರುತಿಸಿದ ಕ್ಯಾತೊರೆಪ್ತಿಸ್ ಎಂಬ ಅಂಗ ಈಗ ಮೆದುಳಿನ ನಾನಾ ಭಾಗಗಳಿಗೆ ಬಲೆ ಹೆಣೆದುಬಿಟ್ಟಿದೆ. ನಾವು ಈಗ ಅದನ್ನು ಮೆದುಳಿನಿಂದ ಬೇರ್ಪಡಿಸುವುದು ತುಂಬ ಜಟಿಲ. ಮೆದುಳು ಸೂಕ್ಷ್ಮವಾಗಿದ್ದು; ಅವನ ಜೀವಕ್ಕೇ ಸಂಚಕಾರ ತರಬಹುದು” ಎಂದು ವಿವರವಾಗಿ ತಿಳಿಸಿದ.
ರಾಧಾ ಕೇಳಿದಳು, “ಅದು ಹೇಗೆ ಬಲೆ ಹೆಣೆದಿದೆ; ಮೊದಲು ಪರೀಕ್ಷಿಸಿದಾಗ ಹಾಗಿರಲಿಲ್ಲವೇ?”
ಅಶೋಕ ಯೋಚಿಸುತ್ತಾ, “ಇದು ನನಗೂ ಸೋಜಿಗವಾಗಿದೆ. ಐದು ತಿಂಗಳ ಕೆಳಗೆ ಹೀಗಿರಲಿಲ್ಲ. ಅದು ಹೇಗೆ ಏಕಾಯೇಕಿ ಈ ರೀತಿ ಬದಲಾಗಿದೆ ತಿಳಿಯುತ್ತಿಲ್ಲ. ನನ್ನಲ್ಲಿರುವ ಒಂದೇ ವಿವರಣೆಯೆಂದರೆ ಡಾರ್ವಿನ್ ಮಂಡಿಸಿದ ವಿಕಾಸವಾದ. ಪ್ರತಿ ಜೀವಿಯೂ ತನ್ನ ಅಸ್ತಿತ್ವದ ಉಳಿವಿಗಾಗಿ ನಿರಂತರವಾಗಿ ಹೋರಾಟದಲ್ಲಿರುತ್ತದೆ ಎಂಬುದು ಆ ವಾದ. ಪ್ರಸ್ತುತ ಸನ್ನಿವೇಶದಲ್ಲಿ ನಾವು ಶಸ್ತ್ರಚಿಕಿತ್ಸೆಯ ಮೂಲಕ ಕ್ಯಾತೊರೆಪ್ತಿಸ್ ಅಂಗವನ್ನು ತೆಗೆಯುವ ವಿಷಯ ವಿವೇಕನಿಗೆ ಅದು ಹೇಗೋ ಯಾರದೋ ಮಾತಿನ ಮೂಲಕ ತಿಳಿದಿದೆ. ಆ ವಿಷಯವನ್ನು ಅವನ ಮೆದಳು ಪ್ರೋಸಸ್ ಮಾಡಿದಾಗ ಕ್ಯಾತೊರೆಪ್ತಿಸ್ ಅಂಗ ತನ್ನ ಉಳಿವಿಗಾಗಿ ಈ ರೀತಿ ಮಾರ್ಪಾಡಾಗಿದೆ ಎಂದೆನಿಸುತ್ತದೆ.”
ಮನೋಹರ ಗದ್ಗದಿತನಾದ; “ನಾನೆ ನನ್ನ ಕೈಯಾರೆ ಮಗನ ಜೀವನ ಹಾಳುಮಾಡಿದೆ ಅಯ್ಯೋ…” ಎಂದು ದುಃಖಿಸಿದ.
ಎಲ್ಲರೂ ಹೊರಗೆ ಬಂದರು. ವಿವೇಕ ಕಾಣಿಸಲಿಲ್ಲ. ಚಿತ್ರಾ ಸಹ ಹುಡುಕಿ ಕಂಗಾಲಾಗಿದ್ದಳು. ಹೊರಗೆ ಪಾರ್ಕಿಂಗ್ ಲಾಟಿನಲ್ಲಿ ನೋಡೋಣವೆಂದು ಹೊರಬಂದರು. ತಮ್ಮ ಹೊಚ್ಚ ಹೊಸ ಬಿ.ಎಂ.ಡಬ್ಲ್ಯೂ. ಕಾರಿನ ಮುಂದೆ ವಿವೇಕ ನಿಂತಿದ್ದ! ಕೈನಲ್ಲಿ ಒಂದು ಪೇಂಟ್ ಬ್ರಷ್ ಹಿಡಿದಿದ್ದ. ಕಾರಿನ ಹಿಂದೆ ಏನೋ ಬರೆದಿದ್ದ. ಎಲ್ಲರೂ ಅದೇನೆಂದು ನೋಡಿದರು:
“ಕ್ಯಾತೊರೆಪ್ತಿಸ್!”
ವಿವೇಕ ಬರೆದ ಹಿಂಬರಹ ನೋಡಿ ಅವರೆಲ್ಲ ಬೆಚ್ಚಿಬಿದ್ದರು!
Comments are closed.