ಎಲ್ಲ ಅನುಭವಗಳಲ್ಲಿ ಸ್ವಾನುಭವವೇ ನಿಜವಾದದ್ದು. ಬೇರೆಯವರು ಬಹಳಷ್ಟು ಅನುಭವ ಹೇಳಿದರೂ ನಮಗೆ ಬಂದ ಅನುಭವವೇ ಮಹತ್ತ್ವದ ಅನುಭವವಾಗಿರುತ್ತದೆ. ಸ್ವಾನುಭವದಿಂದ ಜಾಗೃತಿಯುಂಟಾಗುತ್ತದೆ, ಭಾವ ಬೆಳೆಯುತ್ತದೆ, ಸಾಧನೆಯಲ್ಲಿ ತೀವ್ರತೆ ಬರುತ್ತದೆ ಹಾಗೂ ಭಗವತ್ಪ್ರಾಪ್ತಿಯೂ ಶೀಘ್ರವಾಗಿ ಆಗುತ್ತದೆ. ಸತ್ಪುರುಷರು ನಮಗೆ ಈವರೆಗೆ ಸಾಕಷ್ಟು ವಿಚಾರ ಹೇಳಿರುತ್ತಾರೆ. ಆದರೆ ಅವರಿಗೆ ಭಗವಂತನು ಬೇಕೆನಿಸುವಂತೆ ನಮಗೆ ಬೇಕೆನಿಸುವನೆ? ಪ್ರಪಂಚದಲ್ಲಿ ವ್ಯಸ್ತರಾಗಿರುವ ನಮಗೆ ಭಗವಂತನ ಆವಶ್ಯಕತೆ ಇದೆ ಅನಿಸುತ್ತದೆಯೆ? ನಾವು ಚಿಕ್ಕವರಿಂದ ದೊಡ್ಡವರಾದೆವು, ವಿದ್ಯೆ ಸಂಪಾದಿಸಿದೆವು, ಉದ್ಯೋಗ ಪಡೆದುಕೊಂಡೆವು, ಮದುವೆ ಮಾಡಿಕೊಂಡೆವು. ಮಕ್ಕಳುಮರಿಗಳಾದವು, ಮನೆಮಾರು ಸಂಪಾದಿಸಿಕೊಂಡೆವು. ಆದರೆ ನಮಗೆ ಇನ್ನೂ ಏನಾದರೂ ಬೇಕು ಎಂದೇ ಅನಿಸುತ್ತದೆ! ನಮ್ಮ ಈ ಅಪೇಕ್ಷೆಯು ಎಂದಿಗೆ ಪೂರ್ಣವಾದೀತು?
ನಾವು ನೌಕರಿ ಮಾಡುತ್ತೇವೆ. ನೌಕರಿ ಮಾಡುವ ನಾವು ನಮ್ಮ ಯಜಮಾನರಿಗೆ ನಮ್ಮ ಹೊರತಾಗಿ ಬೇರೆ ನೌಕರರು ಸಿಗಲಿಲ್ಲವೆಂದು ನೌಕರಿ ಮಾಡಲಿಲ್ಲ. ವೈದ್ಯರು, ರೋಗಿಗಳಿಗೆ ಬೇರೆ ವೈದ್ಯರು ಸಿಗಲಿಲ್ಲವೆಂದು ವೈದ್ಯಕೀಯ ವೃತ್ತಿ ಮಾಡುವುದಿಲ್ಲ. ವಕೀಲರು ಕಕ್ಷಿದಾರರಿಗೆ ಬೇರೆ ವಕೀಲರು ಸಿಗಲಿಲ್ಲವೆಂದು ವಕೀಲಿ ವೃತ್ತಿ ಮಾಡುವುದಿಲ್ಲ. ಅಂದರೆ ನೌಕರಿ ಮಾಡುವವರಾಗಲಿ, ವೈದ್ಯರಾಗಲಿ, ವಕೀಲರಾಗಲಿ ಕೇವಲ ಕರ್ಮಕ್ಕಾಗಿಯೇ ಕರ್ಮವನ್ನು ಮಾಡುವುದಿಲ್ಲ. ಅದರಿಂದ ತಮಗೆ ಸುಖ ಸಿಗುವುದೆಂಬ ಛಲದಿಂದ ಮಾಡುತ್ತಾರೆ. ಆದರೆ ನಮ್ಮ ನಿತ್ಯದ ಅನುಭವವೇನೆಂದರೆ ಮನುಷ್ಯನು ತನ್ನ ಆಯುಷ್ಯ ಮುಗಿಯುವವರೆಗೆ ಮಾಡುತ್ತಲೇ ಇರುತ್ತಾನೆ, ಆದರೂ ಏನಾದರೊಂದು ಮಾಡುವುದು ಉಳಿದೇ ಇರುತ್ತದೆ! ಅದಕ್ಕೆ ಪೂರ್ಣತೆ ಬರುವುದಿಲ್ಲ. ಯಾವುದಾದರೊಂದು ವಸ್ತು ಪ್ರಾಪ್ತವಾಯಿತೆಂದರೆ ತನಗಿನ್ನು ಏನೂ ಮಾಡಬೇಕಾದುದಿಲ್ಲ ಎಂದು ಅನಿಸುವುದಿಲ್ಲ. ನಮಗಿನ್ನು ಏನೂ ಬೇಡ, ಏನು ಇದೆಯೊ ಅದರಲ್ಲಿಯೇ ಸಮಾಧಾನವಿರುತ್ತದೆ, ಹೀಗೆ ಎಂದಾದರೂ ಅನಿಸುತ್ತದೆಯೆ? ಮುಂದೆ ಏನಾಗುತ್ತದೆಯೋ ಹೇಗೆ ಆದೀತು, ಇದೆಲ್ಲವೂ ಉಳಿಯುತ್ತದೆಯೊ ಅಥವಾ ಇಲ್ಲವೊ, ಇದರಲ್ಲಿ ಮತ್ತಷ್ಟು ಹೇಗೆ ಹೆಚ್ಚಿಗೆ ಆದೀತು – ಎಂಬ ವಿವಂಚನೆಯು ಯಾವಾಗಲೂ ಇರುತ್ತದೆ. ಉದಾಹರಣೆಗೆ ಒಬ್ಬನ ಮದುವೆ ನಿಶ್ಚಿತವಾಯಿತು. ಅವನ ಮದುವೆಯಾದ ಮೇಲೆ ಅವನ ಪ್ರಪಂಚದ ಚಿಂತೆಗಳೆಲ್ಲ ದೂರವಾದವೆಂದು ತಿಳಿಯುವಿರಾ? ಮದುವೆಯಾದ ಮೇಲೆ ನಾಲ್ಕೈದು ವರ್ಷ ಮಕ್ಕಳಾಗದಿದ್ದರೆ ಅವನು ಚಿಂತೆ ಮಾಡುತ್ತಾನೆ; ಅಥವಾ ಕೇವಲ ಗಂಡುಮಕ್ಕಳೇ ಅಥವಾ ಹೆಣ್ಣುಮಕ್ಕಳೇ ಆದರೂ ಚಿಂತೆ ತಪ್ಪುವುದಿಲ್ಲ.
ಆದ್ದರಿಂದ ಈ ಪ್ರಪಂಚದ ವಸ್ತುಗಳೆಲ್ಲ ಅಪೂರ್ಣವೇ ಆಗಿರುತ್ತವೆ. ಅಂದ ಮೇಲೆ ಅವುಗಳಿಂದ ಸಮಾಧಾನ ಹೇಗೆ ತಾನೇ ಸಿಗಲು ಶಕ್ಯ? ಪ್ರಪಂಚದ ಈ ಎಲ್ಲ ವಿಷಯಗಳು ಒಂದರಿಂದ ಮತ್ತೊಂದು ನಿರ್ಮಾಣವಾಗುವಂಥವುಗಳಾಗಿ ಇರುತ್ತವೆ. ಪ್ರಪಂಚದಲ್ಲಿಯ ಸುಖ ಕೊಡುವ ವಸ್ತುಗಳೆಂದು ತಿಳಿದವುಗಳೆಲ್ಲವನ್ನು ಒಂದೆಡೆ ಸೇರಿಸಿದರೂ ಅವುಗಳಿಂದ ಸಮಾಧಾನ ಪ್ರಾಪ್ತವಾಗಲಾರದು. ಅಪೂರ್ಣ ವಸ್ತುಗಳಿಂದ ಪೂರ್ಣ ಸಮಾಧಾನ ಹೇಗೆ ಸಿಗಲು ಶಕ್ಯ? ಉದಾಹರಣೆಗೆ ಒಂದು ಹುಚ್ಚರ ಆಸ್ಪತ್ರೆಯಲ್ಲಿ ಎರಡುನೂರು ಜನ ಹುಚ್ಚರಿರುತ್ತಾರೆ. ಯಾರಾದರೂ ಇನ್ನೂ ಒಂದು ನೂರು ಜನ ಹುಚ್ಚರು ಸೇರಿದರೆ, ಅವರೆಲ್ಲರೂ ಕೂಡಿ ಒಬ್ಬ ಜಾಣಮನುಷ್ಯನು ನಿರ್ಮಾಣವಾಗುತ್ತಾನೆ ಎಂದು ಅಂದರೆ ಹೀಗೆ ಆಗುವುದು ಎಂದಾದರೂ ಶಕ್ಯವಿದೆಯೆ?
[ಮಹಾರಾಜರ ಪ್ರವಚನಗಳಿಂದ.
ಕೃಪೆ: ಚೈತನ್ಯಾಶ್ರಮ, ಹೆಬ್ಬಳ್ಳಿ]
Comments are closed.