ರೈತನ ಹಾಡು-ಪಾಡು
೧
ಭೂಮಿತಾಯಿಯ ಬೆವರು
ಅಂತರ್ಜಲವಾಗಿ ಜಿನುಗಿ
ಜುಳುಜುಳು ನಾದವಾಗಿ
ಬಂತೈ ಗಂಗೆಯ ತೇರು!
ಝರಿ, ಹಳ್ಳ, ತೊರೆಯಾಗುತ್ತ
ತೊರೆ ತುಂಬಿ ಹೊಳೆಯಾಗಿ
ಕಾಡುಮೇಡಲೆಯುತ್ತ ಸಾಗಿ
ಬೆಟ್ಟ ಹತ್ತಿ ಕಣಿವೆಗೆ ಧುಮುಕುತ್ತ
ನಿರಂತರ ಓಟವೇ ಆತ್ಮಬಲ!
ದಣಿದಷ್ಟು ಚಿಮ್ಮೋ ಹುಮ್ಮಸ್ಸು
ಹರಿವ ಹುಳಿಕಿಯೇ ಯಶಸ್ಸು
ಜಗವೇ ಬೆವರ ಮಾಯಾಜಾಲ
ಮಳೆ ಹೊಳೆ ಬೆವರ ರೂಪಾಂತರ;
ಜಂಗಮವೆಲ್ಲ ಸಂಗಮಿಸೆ ಮಹಾಸಾಗರ!
೨
ಕಿಸಾನ್ ಚಾನೆಲ್ಲಿಗೆ
ರಾಯಭಾರಿಯಾದರೆ
ಅಮಿತಾಭ ಬಚ್ಚನ್‌ಗೆ
ರೂಪಾಯಿ
ಆರು ಕೋಟಿ!
ಖರೆ ಖರೆ…..
ಉತ್ತಿ ಬಿತ್ತಿ ಬೆಳೆದ
ಅಪ್ರತಿಮ ಕಿಸಾನ್‌ಗೆ
ಉಳಿದದ್ದು ಬರೆ
ಹರಕು ಲಂಗೋಟಿ!
೩
ಅವನದು
ಎಂದಿಗೂ
ಮುಗಿಯದ
ಜೀತ;
ಏಕೆಂದರೆ,
ದೇಶಕ್ಕೆ
ಅವನೇ
ಅನ್ನದಾತ!
೪
ಎಮ್ಮೆನ್ಸಿ ಕಂಪನಿಗಳ ಬೀಜ ಗೊಬ್ಬರಕ್ಕೆ
ಸಹಾಯಧನ! ರೆಕ್ಕೆ ಉಂಟು ಪುಕ್ಕ ಉಂಟು
ಸಾಲ ಬೇಕೆ ಸಾಲ ದವಸಧಾನ್ಯ ಬೆಳೆಯಲಿಕ್ಕೆ?
ಸಾಲಕೂ ಬೇಸಾಯಕೂ ಸಾವಿರದ ನಂಟು!
ಕೇಳಿ ಕಂಗೆಟ್ಟವರುಂಟೇ ಈ ನಿಲ್ಲದ ಗೋಳ?
ಒಂದು ಕಣ್ಣಿಗೆ ಸುಣ್ಣ, ಮತ್ತೊಂದಕೆ ಬೆಣ್ಣೆ!
ಅದನೆ ಮೂಗಿಗೂ ಒರೆಸಿದಂತೆ ಪರಿಮಳ!
ಮೋಸಕ್ಕೀಡೆ? ಕುರುಡಾಯ್ತು ಸಾಕ್ಷಾತ್ ಕಣ್ಣೆ!
ಆಹಾ! ಏನು ಸ್ವಾದಿಷ್ಟ! ಕೊಟ್ಟಿದ್ದನ್ನೇ ನೆಕ್ಕಿ ನೆಕ್ಕಿ
ಹೈಬ್ರೀಡು ಕಾಲಕ್ಕೆ ಸುಣ್ಣಬಣ್ಣ ನೆಕ್ಕುವುದೇ ಊಟ!
ರಾಗಿಮುದ್ದೆ, ಜೋಳದರೊಟ್ಟಿ ತಿನ್ನೋದ್ಬಿಟ್ಟ ಹಕ್ಕಿ
ಹಾರೋದ..ಹಾಡೋದ ಮರೆತೇ ಬಿಟ್ಟಿದೆ ಅಪ್ಪಟ!
ರೆಕ್ಕೆಪುಕ್ಕ ಒತ್ತೆಯಿಟ್ಟ ಹಕ್ಕಿಗೆ ಈಗ ಜೀವವೇ ಭಾರ!
ರಸ್ತೆಗೆ ಬಿದ್ದ ಗೂಡಿನ ಆಕ್ರಂದನವ ತುಸು ಕೇಳುವಿರ?
—— ಚಂಸು ಪಾಟೀಲ
ಲೇಖಕರು ಪ್ರಗತಿಪರ ಕೃಷಿಕರು
www.facebook.com/chamsupatil