ಅದೇನೂ ಆಕೆಗೆ ಚಿಂತೆಯ ವಿಷಯವಾಗಿಲ್ಲ. ಏಕೆಂದರೆ ಜಗತ್ತಿನ ಅತ್ಯುನ್ನತ ಮೌಂಟ್ ಎವರೆಸ್ಟ್ ಏರಿದಾಗ ಅರುಣಿಮಾಗೆ ಕಾಲೇ ಇರಲಿಲ್ಲ…
ಆಕೆ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರ್ತಿ. ಅದೊಂದು ದುರಂತ ನಡೆಯದಿದ್ದರೆ ಆಕೆ ವಾಲಿಬಾಲ್ ಆಟಗಾರ್ತಿಯಾಗಿ ಚಾಂಪಿಯನ್ ಪಟ್ಟ ಏರುತ್ತಿದ್ದಳೇನೋ! ಆದರೇನು, ಆಕೆ ಬದುಕಿನಲ್ಲಿ ಅಮೋಘ ಸಾಧನೆ ಮಾಡಿದಳು. ಕಾಲು ಕಳೆದುಕೊಂಡಿದ್ದರೂ ಹಿಮಾಲಯ ಪರ್ವತದ ತುದಿಗೇರಿ ಇತಿಹಾಸ ಬರೆದಳು. ‘ಮೂಕಂ ಕರೋತಿ ವಾಚಾಲಂ, ಪಂಗುಂ ಲಂಘಯತೇ ಗಿರಿಂ’ ಎಂಬ ಗೀತೆಯ ಮಾತನ್ನು ನಿಜಗೊಳಿಸಿದಳು.
ಬದಲಾದ ಬದುಕಿನ ದಾರಿ
ಹೌದು, ಅರುಣಿಮಾ ಸಿನ್ಹ ಪಾಲಿಗೆ ಅದೊಂದು ದುರ್ದಿನ. ವಿದ್ಯಾಭ್ಯಾಸದ ಬಳಿಕ ಮನೆಯ ನಿರ್ವಹಣೆಗೆ ಅನಿವಾರ್ಯವಾಗಿ ಉದ್ಯೋಗ ಅರಸಬೇಕಾಗಿತ್ತು. ಹಲವು ಕಡೆ ಅರ್ಜಿಯನ್ನೂ ಹಾಕಿದ್ದಳು. ಆದರೆ ಎಲ್ಲೂ ಕೆಲಸ ಸಿಕ್ಕಿರಲಿಲ್ಲ. ಕೊನೆಗೆ ಸಿ.ಎಸ್.ಐ.ಎಫ್.ಗೆ ಅರ್ಜಿ ಹಾಕಿದಾಗ ಅಲ್ಲಿಂದ ಉತ್ತರವೇನೋ ಬಂತು. ಆದರೆ ಅದರಲ್ಲಿ ಆಕೆಯ ಹುಟ್ಟಿದ ದಿನಾಂಕ ಸರಿಯಾಗಿಲ್ಲವೆಂದು ತಿಳಿಸಲಾಗಿತ್ತು. ಇದನ್ನು ಹೇಗಾದರೂ ಸರಿಪಡಿಸಬೇಕೆಂದು ಅರುಣಿಮಾ ಲಕ್ನೋದಿಂದ ದೆಹಲಿಗೆ ಸಿಕ್ಕಿದ ರೈಲೊಂದರ ಜನರಲ್ ಬೋಗಿ ಏರಿ ಹೊರಟಳು. ಹುಟ್ಟಿದ ದಿನಾಂಕದ ಕುರಿತ ಗೊಂದಲ ಸರಿಹೋದರೆ ಕೆಲಸ ಸಿಗಬಹುದೆಂಬ ವಿಶ್ವಾಸ. ಆದರೆ ಆಕೆ ಹತ್ತಿದ ಪದ್ಮಾವತಿ ಎಕ್ಸ್ಪ್ರೆಸ್ ರೈಲು ಆಕೆಯ ಬದುಕಿನ ದಾರಿಯನ್ನೇ ಬದಲಿಸಿತು.
ಜನರಲ್ ಬೋಗಿಯಲ್ಲಿ ನಿಂತುಕೊಳ್ಳಲೂ ಸಾಧ್ಯವಾಗದಷ್ಟು ಜನಸಂದಣಿ. ಅರುಣಿಮಾ ಕಷ್ಟಪಟ್ಟು ಸೀಟೊಂದರ ಕೊನೆಯಲ್ಲಿ ಕುಳಿತಳು. ಅಷ್ಟರಲ್ಲಿ ನಾಲ್ಕೈದು ಮಂದಿ ಕಳ್ಳರು ಅತ್ತಬಂದು ಆಕೆಯನ್ನು ತಳ್ಳತೊಡಗಿದರು. ಇಡೀ ಬೋಗಿಯಲ್ಲಿ ಈಕೆಯೊಬ್ಬಳೇ ಹೆಂಗಸು. ಈಕೆಯನ್ನು ಆ ಕಳ್ಳರು ತಳ್ಳಿದ್ದು ಸೀಟಿಗಾಗಿ ಅಲ್ಲ, ಆಕೆಯ ಕೊರಳಲ್ಲಿದ್ದ ಚಿನ್ನದ ಸರ ಕಸಿಯುವುದಕ್ಕಾಗಿ. ಚಿನ್ನದ ಸರ ಕಸಿಯುವುದಕ್ಕೆ ಅರುಣಿಮಾ ಬಿಡಲಿಲ್ಲ. ಆ ಕಳ್ಳರೊಡನೆ ಸೆಣೆಸಿದಳು. ಒಬ್ಬನಿಗೆ ಸರಿಯಾಗಿ ಒದ್ದಳು. ಇಷ್ಟೆಲ್ಲಾ ಗಲಾಟೆ ನಡೆಯುತ್ತಿದ್ದರೂ ಆಕೆಯ ರಕ್ಷಣೆಗೆ ಯಾರೊಬ್ಬರೂ ಬರಲಿಲ್ಲ. ಸಿಟ್ಟಿಗೆದ್ದ ಕಳ್ಳರು ಕೊನೆಗೆ ಆಕೆಯನ್ನು ಚಲಿಸುತ್ತಿದ್ದ ರೈಲಿನಿಂದ ಹೊರತಳ್ಳಿದರು. ಅರುಣಿಮಾ ಹೊರಗೆ ಹಳಿಯ ಮೇಲೆ ಬಿದ್ದಳು. ಅದೇ ವೇಳೆಗೆ ಎದುರುಗಡೆಯಿಂದ ಇನ್ನೊಂದು ರೈಲು ವೇಗವಾಗಿ ಬರುತ್ತಿತ್ತು. ಅರುಣಿಮಾಳ ಎಡಗಾಲು ಹಳಿಯ ಮೇಲಿತ್ತು. ಅದನ್ನು ಸರಿಸುವಷ್ಟರಲ್ಲಿ ವೇಗವಾಗಿ ಬರುತ್ತಿದ್ದ ಆ ಇನ್ನೊಂದು ರೈಲು ಕಾಲಿನ ಮೇಲೆಯೇ ಹರಿದುಹೋಯಿತು. ಪ್ರಜ್ಞೆ ತಪ್ಪಿದ ಅರುಣಿಮಾಗೆ ಮುಂದೇನು ನಡೆಯಿತೆಂದು ಗೊತ್ತಾಗಲೇ ಇಲ್ಲ.
ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಒಂದು ಕುಗ್ರಾಮದಲ್ಲಿ. ಬೆಳಗ್ಗೆ ಬಯಲು ಶೌಚಕ್ಕೆಂದು ಬಂದ ಕೆಲವು ಗ್ರಾಮಸ್ಥರು ರಕ್ತ ಸುರಿಸುತ್ತ ಹಳಿಯ ಮೇಲೆ ಬಿದ್ದಿದ್ದ ಅರುಣಿಮಾಳನ್ನು ನೋಡಿದವರೇ ಆಕೆಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ಯೋಚಿಸಿದರು. ಮೊದಲು ಆಕೆಯನ್ನು ರೈಲ್ವೇ ಫ್ಲಾಟ್ಫಾರಂಗೆ ಕರೆತಂದರು. ಅನಂತರ ಬರೇಲಿ ಜಿಲ್ಲಾ ಆಸ್ಪತ್ರೆಗೆ ಆಕೆಯನ್ನು ಸಾಗಿಸಲಾಯಿತಾದರೂ ಅಲ್ಲಿ ಆಕೆಗೆ ಅಗತ್ಯವಾಗಿದ್ದ ರಕ್ತ ಹಾಗೂ ಚಿಕಿತ್ಸೆಗೆ ಅರಿವಳಿಕೆ ಎರಡೂ ಇರಲಿಲ್ಲ. ಆಘಾತಕ್ಕೆ ತುತ್ತಾದ ಎಡಗಾಲನ್ನು ತಕ್ಷಣ ಕತ್ತರಿಸದಿದ್ದರೆ ಗ್ಯಾಂಗ್ರೀನ್ ಆಗಬಹುದೆಂದು ವೈದ್ಯರು ಎಚ್ಚರಿಸಿದರು. ಆದರೆ ಅರಿವಳಿಕೆಯೇ ಇಲ್ಲ. ಏನಾದರಾಗಲಿ ಎಂದು ಅರುಣಿಮಾ ಕಾಲನ್ನು ಕತ್ತರಿಸಲು ತಿಳಿಸಿದಳು. ತನ್ನ ಎಡಗಾಲನ್ನು ವೈದ್ಯರು ಕತ್ತರಿಸುವಾಗ ಆಕೆ ಎಚ್ಚರದಲ್ಲಿಯೇ ಇದ್ದಳು. ಆಸ್ಪತ್ರೆಯ ಫಾರ್ಮಾಸಿಸ್ಟ್ ಬಿ.ಸಿ. ಯಾದವ್ ಅರುಣಿಮಾಗೆ ಅಗತ್ಯವಿರುವ ರಕ್ತವನ್ನು ತಾನೇ ನೀಡಿದ.
ಈ ವೇಳೆಗೆ ಅರುಣಿಮಾ ಅನುಭವಿಸಿದ ದುರಂತ ಪತ್ರಿಕೆಗಳಲ್ಲಿ, ಟಿವಿ ಚಾನಲ್ಗಳಲ್ಲಿ ಪ್ರಸಾರವಾಗಿ ಉತ್ತರ ಪ್ರದೇಶ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆದಿತ್ತು. ಆಗಿನ ಕೇಂದ್ರ ಸರ್ಕಾರದ ಕ್ರೀಡಾ ಸಚಿವ ಅಜಯ್ ಮಕೇನ್ ಅರುಣಿಮಾಳನ್ನು ತಕ್ಷಣ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಆಲ್ ಇಂಡಿಯಾ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಿದರು. ಅಲ್ಲಿ ಆಕೆಗೆ ಉತ್ತಮ ಚಿಕಿತ್ಸೆ ನೀಡಲಾಯಿತು.
ದೃಢ ನಿರ್ಧಾರ
ಈ ವೇಳೆಗೆ ಅರುಣಿಮಾ ಪ್ರಕರಣಕ್ಕೆ ರಾಜಕೀಯ ಬಣ್ಣ ನೀಡಲು ಕೆಲವು ರಾಜಕೀಯ ಪಕ್ಷಗಳು ನಿರ್ಧರಿಸಿದ್ದವು. ಈ ಪ್ರಕರಣದಿಂದ ತಮಗೆ ಯಾವ ಬಗೆಯ ರಾಜಕೀಯ ಲಾಭ ಆಗಬಹುದೆಂಬ ಲೆಕ್ಕಾಚಾರ ಶುರುವಾಗಿತ್ತು. ಅರುಣಿಮಾ ಅಪಘಾತಕ್ಕೆ ತುತ್ತಾಗಿದ್ದು ಹೇಗೆ? ಇದಕ್ಕೆ ಯಾರು ಹೊಣೆ? ಇತ್ಯಾದಿ ಚರ್ಚೆ ಶುರುವಾಗಿತ್ತು. ಪ್ರಕರಣದ ಹೊಣೆಯನ್ನು ಯಾರಾದರೊಬ್ಬರ ಮೇಲೆ ಹೊರಿಸಲೇಬೇಕಾಗಿತ್ತು. ಅದಕ್ಕೆ ಮಾಧ್ಯಮಗಳು ಮೊಟ್ಟಮೊದಲು ಬಲಿಪಶು ಮಾಡಿದ್ದು ಅರುಣಿಮಾ ಅವಳನ್ನೇ. ಅರುಣಿಮಾ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ಟಿಕೆಟ್ ಕಲೆಕ್ಟರ್ ಬಂದಾಗ ತಪ್ಪಿಸಿಕೊಳ್ಳಲು ರೈಲಿನಿಂದ ಹೊರಗೆ ಹಾರಿದಳು ಎಂಬ ಕಥೆ ಪ್ರಸಾರವಾಯಿತು. ಆದರೆ ಸಿಸಿಟಿವಿಯ ತುಣುಕೊಂದರಲ್ಲಿ ಅರುಣಿಮಾ ಕ್ಯೂನಲ್ಲಿ ನಿಂತು ರೈಲ್ವೇ ಟಿಕೆಟ್ ಪಡೆಯುತ್ತಿದ್ದ ದೃಶ್ಯ ದಾಖಲಾಗಿತ್ತು. ಅರುಣಿಮಾ ಆತ್ಮಹತ್ಯೆ ಮಾಡಿಕೊಳ್ಳಲೆಂದೇ ರೈಲಿನಿಂದ ಹೊರಗೆ ಹಾರಿದಳು ಎಂಬ ಕಥೆಯೂ ಪ್ರಸಾರವಾಯಿತು. ಹೀಗೆ ಅರುಣಿಮಾ ಕಾಲು ಕಳೆದುಕೊಂಡು ಪ್ರಾಣಸಂಕಟದಿಂದ ಒಂದೆಡೆ ನರಳುತ್ತಿದ್ದರೆ, ಇನ್ನೊಂದೆಡೆ ಆಕೆಗೆ ಇಂತಹ ದುಸ್ಥಿತಿ ಒದಗಿದ್ದಕ್ಕೆ ಆಕೆಯೇ ಕಾರಣ ಎಂಬ ವೃಥಾ ಆರೋಪ. ಅರುಣಿಮಾ ಸ್ಥಾನದಲ್ಲಿ ಬೇರೆ ಯಾರೇ ಇದ್ದರೂ ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಸನ್ನಿವೇಶ. ಆದರೆ ಅರುಣಿಮಾ ಮಾತ್ರ ತನ್ನ ಮೇಲೆ ಬಂದೆರಗಿದ ನಿಂದನೆಗಳಿಗೆ ಹೆದರಲಿಲ್ಲ. `ಇಂದು ನಿಮ್ಮ ದಿನ ಆಗಿರಬಹುದು. ನೀವು ನನ್ನ ಬಗ್ಗೆ ಏನು ಬೇಕಾದರೂ ಹೇಳಿಕೊಳ್ಳಿ. ಆದರೆ ಮುಂದೆ ನನ್ನ ದಿನವೂ ಬರುತ್ತದೆ. ಆಗ ನಾನೇನೆಂದು, ಸತ್ಯ ಏನೆಂದು ಸಾಬೀತು ಪಡಿಸುವೆ’ ಎಂದು ಮನದಲ್ಲೇ ನಿರ್ಧರಿಸಿದಳು. ಒಂದು ಕಾಲನ್ನು ಮೊದಲೇ ಕತ್ತರಿಸಲಾಗಿತ್ತು. ಮುರಿದ ಎಲುಬನ್ನು ಆಧರಿಸಲು ಆಕೆಯ ಬಲಗಾಲಿಗೆ ರಾಡ್ ಅಳವಡಿಸಲಾಗಿತ್ತು. ಹೀಗಾಗಿ ಆಕೆಗೆ ನಡೆಯುವುದೇ ಕಷ್ಟವಾಗಿತ್ತು.
ಇಂತಹ ಸಂಕಟದ ಸಮಯದಲ್ಲೇ ಅರುಣಿಮಾ ಕೈಗೊಂಡಿದ್ದು ಮಹತ್ತ್ವದ ನಿರ್ಧಾರವೊಂದನ್ನು. ಅತಿ ಎತ್ತರದ ಮೌಂಟ್ ಎವರೆಸ್ಟ್ ಏರುವ ದಿಟ್ಟತನದ ನಿರ್ಧಾರ ಅದು. ಆಕೆಯ ಈ ನಿರ್ಧಾರವನ್ನು ಕೇಳಿ ಆಸ್ಪತ್ರೆಯಲ್ಲಿದ್ದ ವೈದ್ಯರು, ಸಿಬ್ಬಂದಿ ಪಕಪಕನೆ ನಕ್ಕರು. ಇನ್ನು ಕೆಲವರು ಆಕೆಗೆ ಮಾನಸಿಕಸ್ವಾಸ್ಥ್ಯ ಕೆಟ್ಟಿದೆ ಎಂದೂ ಆಡಿಕೊಂಡರು.
ಸಾಧಾರಣವಾಗಿ ಕಾಲು ಕಳೆದುಕೊಂಡವರಿಗೆ ಕೃತಕಕಾಲು ಜೋಡಿಸಲು ಹಲವಾರು ತಿಂಗಳು ಅಥವಾ ವರ್ಷವೇ ಬೇಕಾಗುತ್ತದೆ. ಕತ್ತರಿಸಿದ ಕಾಲು ಸಂಪೂರ್ಣ ಗುಣಮುಖವಾದ ಮೇಲೂ ಕೃತಕಕಾಲು ತಕ್ಷಣ ಜೋಡಿಸಲಾಗುವುದಿಲ್ಲ. ಆದರೆ ಅರುಣಿಮಾ ಎರಡೇ ದಿನಗಳಲ್ಲಿ ಕೃತಕಕಾಲು ಜೋಡಿಸಿಕೊಂಡು ನಡೆದಾಡಲು ಶುರು ಮಾಡಿದಳು. ಮನಸ್ಸು ಗಟ್ಟಿಯಾಗಿದ್ದರೆ ಶರೀರ ಮನಸ್ಸಿನ ಮಾತನ್ನು ಕೇಳಲೇಬೇಕು. ಅರುಣಿಮಾಳ ಮನಸ್ಸು ಗಟ್ಟಿಯಾಗಿತ್ತು. ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದಾಗ ಮೂಡಿದ ಮೌಂಟ್ ಎವರೆಸ್ಟ್ ಏರುವ ಕನಸನ್ನು ನನಸಾಗಿಸುವುದು ಹೇಗೆ? ಇದೊಂದೇ ಯೋಚನೆ ಅವಳಿಗೆ. ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಲೇ ಅರುಣಿಮಾ ತನ್ನ ಮನೆಗೆ ತಾಯಿ, ಸೋದರಿಯನ್ನು ನೋಡಲು ಹೋಗಲಿಲ್ಲ. ಆಕೆ ನೆಟ್ಟಗೆ ತೆರಳಿದ್ದು ಮೌಂಟ್ ಎವರೆಸ್ಟ್ ಏರಿದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡ ಬಚೇಂದ್ರಿಪಾಲ್ ಮನೆಗೆ. ಬಚೇಂದ್ರಿಪಾಲ್ ಮಾತ್ರ ಅರುಣಿಮಾಗೆ ಹೇಳಿದ್ದು: “ನೀನು ನಿನ್ನ ಮನಸ್ಸಿನ ಮೂಲಕ ಈಗಾಗಲೇ ಮೌಂಟ್ ಎವರೆಸ್ಟ್ ಏರಿರುವೆ. ಈಗ ಉಳಿದಿರುವುದು ನಿನ್ನ ಶರೀರದ ಮೂಲಕ ಆ ಉನ್ನತ ಪರ್ವತವನ್ನು ಹತ್ತುವುದಷ್ಟೇ.” ಅರುಣಿಮಾಗೆ ಆ ಮಾತು ಕೇಳಿ ಆದ ಆನಂದ ಅಷ್ಟಿಷ್ಟಲ್ಲ.
ನೆನಸಾದ ಕನಸು
ಅನಂತರ ನೆಹರು ಪರ್ವತಾರೋಹಣ ಸಂಸ್ಥೆಯಿಂದ ಪರ್ವತ ಹತ್ತಲು ಅಗತ್ಯವಿರುವ ತರಬೇತಿ ಆರಂಭ. ೧೮ ತಿಂಗಳು ಆ ಸಂಸ್ಥೆಯಲ್ಲಿ ಕಠಿಣ ತರಬೇತಿ. ಸಣ್ಣಸಣ್ಣ ಪರ್ವತಗಳನ್ನು ಹತ್ತಿದ್ದಾಯಿತು. ಕಾಲಿನಲ್ಲಿ ಅಸಹನೀಯ ನೋವು. ಆದರೆ ಇಟ್ಟ ಗುರಿಯನ್ನು ಮರೆತಿರಲಿಲ್ಲ. ಇದಕ್ಕೆ ಪೂರಕವಾಗಿ ಟಾಟಾ ಸ್ಟೀಲ್ ಸಂಸ್ಥೆ ಆಕೆಯ ಪರ್ವತಾರೋಹಣಕ್ಕೆ ಪ್ರಾಯೋಜಕತ್ವ ವಹಿಸಲು ಮುಂದೆಬಂದಿದ್ದು ವರದಾನವಾಯಿತು. ಅರುಣಿಮಾಗೆ ಅಳವಡಿಸಿದ್ದ ಕೃತಕಕಾಲು ಆಗಾಗ ತೀವ್ರ ಬಾಧೆ ಕೊಡುತ್ತಿತ್ತು. ಪರ್ವತ ಏರುತ್ತಿದ್ದಾಗ ಹೇಳತೀರದ ಯಮಯಾತನೆ. ಈಕೆಯ ಜೊತೆಗಿದ್ದ ಸಹಾಯಕ ಶೆರ್ಪಾ ಅರುಣಿಮಾ ಜೊತೆ ಮುಂದುವರಿಯಲು ನಿರಾಕರಿಸಿದ. `ನಿನಗೆ ಮೌಂಟ್ ಎವರೆಸ್ಟ್ ಏರಲು ಸಾಧ್ಯವಿಲ್ಲ. ದಾರಿ ಮಧ್ಯದಲ್ಲೇ ಸಾಯುತ್ತೀಯಾ’ ಎಂದು ಬೆದರಿಸಿದ. ಆದರೆ ಅದಾವುದೂ ಅರುಣಿಮಾಳ ನಿರ್ಧಾರವನ್ನು ಸಡಿಲಿಸಲಿಲ್ಲ. ಬೆನ್ನಿಗೆ ಕಟ್ಟಿಕೊಂಡಿದ್ದ ಆಮ್ಲಜನಕದ ಸಿಲಿಂಡರ್ನಲ್ಲಿ ಆಮ್ಲಜನಕ ಖಾಲಿಯಾಗುತ್ತಾ ಬಂದಿತ್ತು. ಅರುಣಿಮಾಳ ಅಚಲ ನಿರ್ಧಾರದ ಆಮ್ಲಜನಕ ಮಾತ್ರ ಖಾಲಿಯಾಗಿರಲಿಲ್ಲ. ಈಗಲ್ಲದಿದ್ದರೆ ಇನ್ನು ಎಂದೆಂದಿಗೂ ನೀನು ಮೌಂಟ್ ಎವರೆಸ್ಟ್ ಏರಲಾರೆ ಎಂದು ಆಕೆಯ ಒಳಮನಸ್ಸು ಉಲಿಯಿತು. ದಿಟ್ಟ ನಿರ್ಧಾರದಿಂದ ಗಟ್ಟಿ ಹೆಜ್ಜೆ ಇಡುತ್ತ ಕೊನೆಗೂ ೨೦೧೩ರ ಮೇ ೨೧ರಂದು ಆಕೆ ಎವರೆಸ್ಟ್ ಪರ್ವತದ ತುದಿಗೆ ತಲಪಿ ತ್ರಿವರ್ಣ ಧ್ವಜ ಹಾರಿಸಿಯೇ ಬಿಟ್ಟಳು. ಜೊತೆಗೆ ಒಯ್ದಿದ್ದ ವಿವೇಕಾನಂದರ ಭಾವಚಿತ್ರವನ್ನು ಆ ಹಿಮದ ಬಂಡೆಯ ಮೇಲೆ ಇಟ್ಟಳು. ಅರುಣಿಮಾಳ ಕನಸು ಕೊನೆಗೂ ನೆನಸಾಗಿತ್ತು. ಅಲ್ಲಿಂದಾಚೆಗೆ ನಡೆದದ್ದೆಲ್ಲ ಇತಿಹಾಸ. ಆಕೆಯ ಈ ಸಾಹಸವನ್ನು ಎಲ್ಲರೂ ಕೊಂಡಾಡುವವರೇ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಆಕೆಗೆ ಪ್ರಶಸ್ತಿಗಳನ್ನು ನೀಡಿz ನೀಡಿದ್ದು. ೨೦೧೫ರಲ್ಲಿ ಅರುಣಿಮಾಗೆ ದೇಶದ ೪ನೇ ಅತ್ಯುನ್ನತ ಪ್ರಶಸ್ತಿ `ಪದ್ಮಶ್ರೀ’ ಕೂಡ ದೊರಕಿತು. ಆಕೆ ಬರೆದ ‘Born again on the Mountain’ ‘ ಕೃತಿಯನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ೨೦೧೪ರಲ್ಲಿ ಲೋಕಾರ್ಪಣ ಮಾಡಿದ್ದರು.
ಅರುಣಿಮಾಳ ಸಾಧನೆ ಅಲ್ಲಿಗೇ ಮುಗಿಯಲಿಲ್ಲ. ಅದಾದ ಬಳಿಕ ಆಕೆ ಜಗತ್ತಿನ ಎತ್ತರದ ಇನ್ನಿತರ ಶಿಖರಗಳಾದ ಆಫ್ರಿಕಾದ ಕಿಲಿಮಂಜಾರೋ, ಯೂರೋಪ್ನ ಎಲ್ಬ್ರಸ್ ಹಾಗೂ ಆಸ್ಟ್ರೇಲಿಯಾದ ಕೊಸಿಜ್ಕೊ ಪರ್ವತಗಳನ್ನೇರಿ ದಾಖಲೆ ಬರೆದಿದ್ದಾಳೆ. ಅಂಟಾರ್ಟಿಕಾದ ಅತ್ಯನ್ನುತ ಶಿಖರ ವಿನ್ಸನ್ ಮಾಸಿಫ್ ಏರಬೇಕೆಂಬುದು ಆಕೆಯ ಹೆಬ್ಬಯಕೆ. ಉತ್ತರ ಅಮೆರಿಕಾದ ಡೆನಾಲಿ ಶಿಖರ ಏರಬೇಕೆಂಬುದು ಇನ್ನೊಂದು ಬಯಕೆ. ಅದಕ್ಕೆ ತಗಲುವ ವೆಚ್ಚವೇ ೫೫ ಲಕ್ಷ ರೂ.!
ಪರ್ವತಾರೋಹಣದಿಂದ ಆಕೆ ಕಲಿತ ಪಾಠಗಳು ಹಲವಾರು. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಕಲಿತದ್ದು ಮಾನವೀಯ ಕಾಳಜಿ ಬೆಳೆಸಿಕೊಳ್ಳುವ ಗುಣ. ಅರುಣಿಮಾ ಈಗಾಗಲೇ ವಿಕಲಚೇತನ ಹಾಗೂ ಬಡ ಕ್ರೀಡಾಪಟುಗಳಿಗಾಗಿ ಶಹೀದ್ ಚಂದ್ರಶೇಖರ್ ಆಜಾದ್ ಖೇಲ್ ಅಕಾಡೆಮಿ ಸ್ಥಾಪಿಸಿದ್ದಾಳೆ. ಅಕಾಡೆಮಿಯ ಹೆಸರೇನೋ ದೊಡ್ಡದು. ಆದರೆ ಅಸಲಿಗೆ ಅದಕ್ಕೊಂದು ಕಟ್ಟಡವಿಲ್ಲ. ಆಟವಾಡಲು ಮೈದಾನ ಅಥವಾ ಕೋರ್ಟ್ ಸೌಲಭ್ಯವೂ ಇಲ್ಲ. ಆದರೂ ವಿಕಲಚೇತನ ಮಕ್ಕಳಿಗೆ ತರಬೇತಿ ಮುಂದುವರಿದಿದೆ. ೨೫ ಕೋಟಿ ಮೌಲ್ಯದ ಯೋಜನೆ ಕೂಡ ಸಿದ್ಧವಾಗಿದೆ. ಆಕೆಯ ಕೈಯಲ್ಲಿ ಮಾತ್ರ ೨೫ ಸಾವಿರ ರೂ. ಕೂಡ ಇಲ್ಲ. ಅದೇನೂ ಆಕೆಗೆ ಚಿಂತೆಯ ವಿಷಯವಾಗಿಲ್ಲ. ಏಕೆಂದರೆ ಜಗತ್ತಿನ ಅತ್ಯುನ್ನತ ಮೌಂಟ್ ಎವರೆಸ್ಟ್ ಏರಿದಾಗ ಅರುಣಿಮಾಗೆ ಕಾಲೇ ಇರಲಿಲ್ಲ. ಹಾಗಿರುವಾಗ ೨೫ ಕೋಟಿ ಹಣ ತನ್ನ ಬಳಿ ಇಲ್ಲವೆಂಬ ಚಿಂತೆ ಆಕೆಯನ್ನು ಕಾಡಲು ಸಾಧ್ಯವೆ?