‘ವಾಸುದೇವ ಕೀರ್ತನ ಮಂಜರಿ’.
ಸಂಕಲನ ಮತ್ತು ಸಂಪಾದನೆ: ಸಂಗೀತ ಕಲಾರತ್ನ ಎಸ್. ಕೃಷ್ಣಮೂರ್ತಿ.
ಸಜ್ಜಿಕೆ ಮತ್ತು ನಿರ್ವಹಣೆ: ಸಂಗೀತ ಕಲಾರತ್ನ ವಿದ್ವಾನ್ ಎಸ್. ಶಂಕರ್.
ಪ್ರಕಾಶಕ-ವಿತರಕರು: ಪ್ರಿಸಂ ಬುಕ್ಸ್, ನಂ. ೧೮೬೫, ೩೨ನೇ ಕ್ರಾಸ್,
೧೦ನೇ ಮೇಯ್ನ್, ಬನಶಂಕರಿ ೨ನೇ ಸ್ಟೇಜ್, ಬೆಂಗಳೂರು – ೫೬೦ ೦೭೦.
ವಿನ್ಯಾಸ: ಅಹಲ್ಯಾ ಮುರಳೀಧರ್.
ಪುಟಗಳು: (ಕ್ರೌನ್ ಚತುರ್ಥ) xviii + ೫೨೫. ಬೆಲೆ: ರೂ. ೫೪೫. (೨೦೧೫).
ಮೈಸೂರು ವಾಸುದೇವಾಚಾರ್ಯರ ರಚನೆಗಳ ಸ್ವರಸಹಿತ ಪಾಠವನ್ನೊಳಗೊಂಡ ‘ವಾಸುದೇವ ಕೀರ್ತನ ಮಂಜರಿ’ ಗ್ರಂಥದ ಪ್ರಕಟನೆ ಒಂದು ವಿಶೇಷ ಉಲ್ಲೇಖಾರ್ಹ ಸಾಧನೆಯಾಗಿದೆ. ಈ ಹಿಂದೆ ಆಚಾರ್ಯರ ಕೃತಿಗಳ ಒಂದೆರಡು ಆವೃತ್ತಿಗಳು ಪ್ರಕಟಗೊಂಡಿದ್ದರೂ, ಈಗ ಬಿಡುಗಡೆಯಾಗಿರುವುದರಷ್ಟು ಪರಿಷ್ಕೃತ ಆವೃತ್ತಿ ಇದುವರೆಗೆ ಬಂದಿರಲಿಲ್ಲವೆಂದು ನಿಸ್ಸಂದೇಹವಾಗಿ ಹೇಳಬಹುದು. ಇಂತಹ ಕೃತಿ ಇಂತಹ ವಿನ್ಯಾಸದಲ್ಲಿ ಇಷ್ಟು ಸುಂದರವಾಗಿ ಇದುವರೆಗೆ ಏಕೆ ಹೊರಬಂದಿರಲಿಲ್ಲ ಎನ್ನಲು ಹಲವು ಕಾರಣಗಳು ಇರಬಹುದು. ಒಂದು ಪ್ರಮುಖ ಕಾರಣವೆಂದರೆ – ಇದು ಕಷ್ಟದ ಕೆಲಸ. ಕೃತಿಗಳ ಸಾಹಿತ್ಯದ ಮತ್ತು ಸ್ವರನಿರ್ದೇಶಗಳ ಉಸ್ತುವಾರಿಯನ್ನು ಕೂಲಂಕಷವಾಗಿ ನಿರ್ವಹಿಸಬಲ್ಲವರು ಸ್ವಯಂ ಗಾಯನಾನುಭವವನ್ನೂ ಮುದ್ರಣಕಲೆಯ ಆವಶ್ಯಕತೆಗಳ ಪರಿಜ್ಞಾನವನ್ನೂ ಪಡೆದಿರುವವರು ಮಾತ್ರ. ಅಲ್ಲದೆ ಶಾಸ್ತ್ರನಿಷ್ಠವಾದ ಈ ಕೃತಿಗಳನ್ನು ಆಸಕ್ತ ಸಂಗೀತಾಭ್ಯಾಸಿಗಳಿಗೆ, ‘ರೀಡರ್-ಫ್ರೆಂಡ್ಲಿ’ ರೀತಿಯಲ್ಲಿ ಒದಗಿಸಲೂ ಹೆಚ್ಚಿನ ಕೌಶಲ ಬೇಕಾಗುತ್ತದೆ. ಈ ವಿವಿಧ ತಜ್ಞತೆಗಳನ್ನು ಸಂಗೀತ ಕಲಾರತ್ನ ಎಸ್. ಕೃಷ್ಣಮೂರ್ತಿಯವರೂ ಈ ಕೃತಿಯ ಸಜ್ಜಿಕೆಯ ಹೊಣೆಯನ್ನು ನಿರ್ವಹಿಸಿರುವ ಶಂಕರಾಭರಣಂ ಕಲಾಮಂದಿರದ ಸ್ಥಾಪಕರಾದ ಸಂಗೀತ ಕಲಾರತ್ನ ವಿದ್ವಾನ್ ಎಸ್. ಶಂಕರ್ ಅವರೂ ಪಡೆದಿರುವುದರಿಂದ ಈ ಅಮೂಲ್ಯ ಕೃತಿ ಹೀಗೆ ಪ್ರಕಟಗೊಳ್ಳುವುದು ಸಾಧ್ಯವಾಗಿದೆ. ವಾಸುದೇವಾಚಾರ್ಯರ ೧೫೦ನೇ ಜನ್ಮವರ್ಷದಲ್ಲಿ ಇದು ಹೊರಬಂದಿರುವುದು ಸಂಭ್ರಮಾಸ್ಪದವಾಗಿದೆ.
ತ್ಯಾಗರಾಜರಿಗಿಂತ ಹಿಂದೆ, ಪುರಂದರದಾಸರಿಗಿಂತಲೂ ಹಿಂದೆಯೂ ಅಸಂಖ್ಯ ವಾಗ್ಗೇಯಕಾರರು ಆಗಿಹೋಗಿದ್ದರು. ಆ ಹಿಂದಿನವರ ರಚನೆಗಳ ಬಹುಪಾಲು ವಿಸ್ಮೃತಿಗೆ ಒಳಗಾಗಿರುವುದು ಅಲಕ್ಷ್ಯದ ಕಾರಣದಿಂದ ಮಾತ್ರವಲ್ಲ; ಅವು ಉಳಿಯಲಿಲ್ಲ, ಅಷ್ಟೆ. ತ್ಯಾಗರಾಜಕೃತಿಗಳು ಕರ್ನಾಟಕ ಸಂಗೀತಕ್ಕೇ ವಿಶಿಷ್ಟ ಆಕಾರವನ್ನೂ ರೂಪವನ್ನೂ ನಿರ್ಮಿಸಿರುವುದಲ್ಲದೆ ಈಗಲೂ ಸಂಗೀತಶಿಕ್ಷಣಕ್ಕೂ ಪರಂಪರೆಯ ಮುಂದುವರಿಕೆಗೂ ಮುಖ್ಯ ಅಧಿಷ್ಠಾನವಾಗಿದೆಯೆಂಬುದೂ ವಿವಾದಾತೀತವಾಗಿದೆ. ಅವರ ಕೃತಿಗಳಲ್ಲಿ ಅನಿತರಸಾಧಾರಣ ಗುಣವಂತಿಕೆ ಇರುವುದರಿಂದಲೇ ಇದು ಸಾಧ್ಯವಾಯಿತೆಂಬುದು ಸ್ಪಷ್ಟವಾಗಿದೆ.
ಭಕ್ತಿಯ ದಟ್ಟಣೆ ಮೂಲದ್ರವ್ಯವಾದರೂ ತ್ಯಾಗರಾಜರ ತಾಂತ್ರಿಕ ಕೊಡುಗೆಯೂ ದೊಡ್ಡದಿದೆ. ಭಕ್ತಿಯ ಪ್ರಕಟೀಕರಣಕ್ಕೆ ಮನೋಜ್ಞವಾದ ಸಂಗೀತಪರಿವೇಷವನ್ನು ತ್ಯಾಗರಾಜರು ಸೃಷ್ಟಿಸಿದರು. ವೆಂಕಟಮಖಿ ಪ್ರಸ್ತಾವಿಸಿರುವ ವಿವಾದಿ ಮೇಳ ರಚನಸಾಧ್ಯತೆಗಳನ್ನು ಪ್ರಯೋಗರಂಗಕ್ಕೆ ತಂದವರು ತ್ಯಾಗರಾಜರೇ.
ಒಂದೊಂದು ಕೃತಿಯಲ್ಲೂ ವಿಶಿಷ್ಟ ಸಂಗತಿಗಳನ್ನು ಅಳವಡಿಸುವ ತಂತ್ರವನ್ನೂ ಬೆಳೆಸಿದವರು ತ್ಯಾಗರಾಜರೇ. ೭೨ ಮೇಳಕರ್ತರಾಗಗಳು ಇದ್ದುದು ಜನರಿಗೆ ಪರಿಚಯವಾಗತೊಡಗಿದುದು ೧೯ನೇ ಶತಮಾನದ ಕೊನೆಕೊನೆಗೆ, ಅಷ್ಟೆ. ಹಲವು ವರ್ಣಗಳು ಇತ್ಯಾದಿ ಸಂಗೀತಶಿಕ್ಷಣೋಪಯೋಗಿ ಪರಿಕರಗಳೂ ಆವಿಷ್ಕರಣಗೊಂಡದ್ದು ಆಗಲೇ – ಬೇಗಡೆ ವರ್ಣ ಇತ್ಯಾದಿ. ಪುರಂದರರನ್ನು ನಮ್ಮ ಸಂಗೀತದ ಪಿತಾಮಹರೆಂದೂ ತ್ಯಾಗರಾಜರನ್ನು ಈ ಪರಂಪರೆಯ ಧ್ರುವತಾರೆಯೆಂದೂ ಒಪ್ಪಿದ್ದೇವೆ.
ತ್ಯಾಗರಾಜರ ನಂತರವೂ ಅಸಂಖ್ಯ ಕೃತಿರಚನಕಾರರು ಶ್ರಮ ಪಟ್ಟಿದ್ದಾರೆ. ಆದರೆ ಕಾಲದ ಆಘಾತವನ್ನು ಎದುರಿಸಿ ಉಳಿದವು ಕೆಲವೇ.
ಪುರಂದರ ತ್ಯಾಗರಾಜರಿಗೆ ಇರದಿದ್ದ ಎಷ್ಟೊ ಸೌಕರ್ಯಗಳು ಕಳೆದ ನೂರು ವರ್ಷಗಳಲ್ಲಿ ಲಬ್ಧವಾಗಿವೆ. ಕೇವಲ ‘ಮಾರ್ಕೆಟಿಂಗ್’ ಮೂಲಕ ಕೃತಿಗಳನ್ನು ಲೋಕಪ್ರಿಯಗೊಳಿಸುವುದು ಸಾಧ್ಯವಿದ್ದಿದ್ದರೆ ಸಾವಿರಾರು ಹೊಸ ಕೃತಿಗಳು ಪಸರಿಸಬೇಕಾಗಿತ್ತು. ಆದರೆ ಹಾಗೆ ಆಗಿಲ್ಲ. ಈ ವಾಸ್ತವವನ್ನು ನಾವು ಅರ್ಥಮಾಡಿಕೊಳ್ಳಬೇಕು. ಬಾಹ್ಯ ಪರಿಕರಗಳ ಪ್ರಪಂಚ ಬೇರೆ; ಪ್ರತಿಭೆಯ ಪ್ರಪಂಚ ಬೇರೆ. ಶ್ಯಾಮಶಾಸ್ತ್ರಿಗಳು ರಚಿಸಿದ್ದು ಕೆಲವೇ ಕೃತಿಗಳು. ಆದರೆ ಅವು ಒಂದೊಂದೂ ಶಾಶ್ವತಸ್ಥಾನ ಪಡೆದುಬಿಟ್ಟವು. ಬೇರೆ ಕೆಲವರು ವಾಗ್ಗೇಯಕಾರರು ನೂರಾರು ಕೃತಿಗಳನ್ನು ರಚಿಸಿದರೂ ಸಮಾಜದ ನೆನಪಿನಲ್ಲಿ ಉಳಿದವು ತೀರಾ ಕಡಮೆ. ಪುರಂದರರು ನಾಲ್ಕೂಮುಕ್ಕಾಲು ಲಕ್ಷ ಕೃತಿಗಳನ್ನು ರಚಿಸಿದ್ದರಂತೆ. ಹಾಡಿಕೆ ಇರಲಿ; ಮುದ್ರಿತ ರೂಪದಲ್ಲಿ ಉಳಿದಿರುವವೂ ಹಲವು ನೂರಷ್ಟೆ.
ವಾಸುದೇವಾಚಾರ್ಯರು ಸುಮಾರು ಮುನ್ನೂರು ಕೃತಿಗಳನ್ನು ರಚಿಸಿದ್ದಾರೆಂದು ಹೇಳಿಕೆ ಇದೆ. ಹಿಂದಿನ ವಾಸುದೇವ ಕೀರ್ತನ ಮಂಜರಿಯಲ್ಲಿ ನೂರಾ ನಲವತ್ತು ಕೃತಿಗಳು ಪ್ರಕಟವಾಗಿದ್ದವು. ಈಗಿನ ಆವೃತ್ತಿಯಲ್ಲಿ ಆಚಾರ್ಯರ ೧೫೧ ಕೀರ್ತನಕೃತಿಗಳೂ ೧೫ ವರ್ಣಗಳೂ ೬ ಜಾವಳಿಗಳೂ ೧೦ ತಿಲ್ಲಾನಗಳೂ ಸ್ವರಪ್ರಸ್ತಾರಸಮೇತ ಲಭ್ಯವಾಗಿವೆ. ಕೃತಿಗಳ ಸಾಹಿತ್ಯವನ್ನು ಇಂಗ್ಲಿಷ್, ದೇವನಾಗರಿ – ಎರಡು ಲಿಪಿಗಳಲ್ಲಿಯೂ ನೀಡಲಾಗಿದೆ.
೧೬ ರಾಗಗಳಲ್ಲಿ ಆಚಾರ್ಯರು ವರ್ಣಗಳನ್ನು ರಚಿಸಿದ್ದಾರೆ. ೮೫ಕ್ಕೂ ಹೆಚ್ಚು ರಾಗಗಳಲ್ಲಿ ಆಚಾರ್ಯರ ಕೀರ್ತನೆಗಳು ಇವೆ. ಮಾಯಾಮಾಳವಗೌಳ, ಸಿಂಹೇಂದ್ರಮಧ್ಯಮ ಮೊದಲಾದ ಎಲ್ಲ ಪ್ರಸಿದ್ಧ ರಾಗಗಳಲ್ಲಿ ಮಾತ್ರವಲ್ಲದೆ ಮಂದಾರಿ (ಕಾಮವರ್ಧಿನಿ ಜನ್ಯ), ಪುಷ್ಪಲತಾ (ಖರಹರಪ್ರಿಯ ಜನ್ಯ), ಜನಕರಾಗಗಳೇ ಆದ ರಿಷಭಪ್ರಿಯ ಮತ್ತು ವರುಣಪ್ರಿಯ ಮೊದಲಾದ ವಿರಳ ರಾಗಗಳಲ್ಲಿಯೂ ಆಚಾರ್ಯರ ರಚನೆಗಳು ಉಪಲಬ್ಧವಿವೆ. ಶಂಕರಾಭರಣ, ಮಾಯಾಮಾಳವಗೌಳ, ಸಿಂಹೇಂದ್ರಮಧ್ಯಮ ಮೊದಲಾದ ಒಂದೊಂದು ರಾಗದಲ್ಲಿಯೂ ಹಲವಾರು ಕೃತಿಗಳನ್ನು ಆಚಾರ್ಯರು ನೀಡಿದ್ದಾರೆ.
ಸುನಾದವಿನೋದಿನಿಯ ‘ದೇವಾದಿದೇವ ಶ್ರೀವಾಸುದೇವ’ ಅಂತೂ ಈ ವಿರಳರಾಗದ ಪರಿಚಾಯಕವೇ ಆಗಿಬಿಟ್ಟಿದೆ; ವಾಸುದೇವಾಚಾರ್ಯರದೆಂದು ಗೊತ್ತಿಲ್ಲದವರಿಗೂ ಕರ್ಣತಾಡಿತವಾಗಿಬಿಟ್ಟಿದೆ. ಹಾಗೆಯೇ ಮೋಹನರಾಗದ ‘ರಾರಾ ರಾಜೀವಲೋಚನ’ ಸಂಗೀತಕ್ಷೇತ್ರದ ಸಂಪರ್ಕವೇ ಇಲ್ಲದವರಿಗೂ ನಿತ್ಯಪರಿಚಿತವಾಗಿದೆ. ಆಚಾರ್ಯರ ಹೆಸರನ್ನು ಶಾಶ್ವತಗೊಳಿಸಿರುವ ಕಮಾಚ್ರಾಗದಲ್ಲಿ ಆಚಾರ್ಯರ ಐದಾರು ಕೃತಿಗಳು ಇವೆ. ಇನ್ನು ‘ಬ್ರೋಚೇವಾರೆವರುರಾ’ ವಿಷಯ ಹೇಳಲೇಬೇಕಾಗಿಲ್ಲ. ಅದು ಕಮಾಚ್ ರಾಗಕ್ಕೆ ಮಾನದಂಡವೇ ಆಗಿಬಿಟ್ಟಿದೆ. ಇದರಷ್ಟು ವ್ಯಾಪಕ ಪ್ರಸಾರ ಪಡೆದ ಕೃತಿಗಳು ನಮ್ಮ ಸಂಗೀತದ ಇತಿಹಾಸದಲ್ಲಿ ಕೆಲವೇ ಇದ್ದಾವು. ಎಷ್ಟುಮಟ್ಟಿಗೆ ಎಂದರೆ – ಸಂಗೀತಪ್ರಧಾನವಾದ ‘ಶಂಕರಾಭರಣಂ’ ಚಲನಚಿತ್ರದಲ್ಲಿ ‘ಬ್ರೋಚೇವಾರೆವರುರಾ’ ಒಂದು ಹಳೆಯ ಪಾರಂಪರಿಕ ಕೃತಿ ಎಂಬಂತೆ ಬಳಕೆಯಾಗಿದೆ – ಆ ಚಿತ್ರದ ಕಥಾಪ್ರಸಂಗ ಹಿಂದಿನ ಯುಗಕ್ಕೆ ಸೇರಿದ್ದಾಗಿದ್ದರೂ ಕೂಡಾ.
ಈಗ್ಗೆ ಎಪ್ತತ್ತೆಂಬತ್ತು ವರ್ಷ ಹಿಂದೆ ಕಮಾಚ್ರಾಗದ ಲಕ್ಷಣದ ಬಗ್ಗೆ ವಿದ್ವಾಂಸರಲ್ಲಿ ತುಂಬಾ ಚರ್ಚೆ ಸದಾ ನಡೆಯುತ್ತಿತ್ತು: ವಿಶೇಷವಾಗಿ ಕಮಾಚ್ನಲ್ಲಿ ಬರುವ ನಿಷಾದದ ಪ್ರಕಾರದ ಬಗ್ಗೆ. ಆದರೆ ಆಚಾರ್ಯರ ‘ಬ್ರೋಚೇವಾರೆವರುರಾ’ ಸುಸ್ಥಾಪಿತವಾಗಿಬಿಟ್ಟ ಮೇಲೆ ಆ ಶಾಸ್ತ್ರಚರ್ಚೆಯೆಲ್ಲ ಅಸಂಗತವೆನಿಸಿಬಿಟ್ಟಿತು.
ಸ್ವೀಯ ಪ್ರತ್ಯೇಕ ಕೃತಿ ರಚನೆಗಳಲ್ಲದೆ ಆಚಾರ್ಯರ ನವರತ್ನ ರಾಗಮಾಲಿಕಾ, ರಾಮಾಯಣ ನೃತ್ಯರೂಪಕ ಸಂಯೋಜನೆ, ಆ ಯುಗದ ಸಂಗೀತ ಕಲಾವಿದರನ್ನು ಕುರಿತ ನೆನಪಿನ ದಾಖಲೆಗಳು – ಮೊದಲಾದ ಕೊಡುಗೆಗಳೂ ವಿಶಿಷ್ಟವಾದವೇ.
ಆಚಾರ್ಯರ ಕೃತಿಗಳಲ್ಲಿ ಒಂದು ಅನನ್ಯತೆಯೂ ವಿಶೇಷ ಆಸ್ವಾದ್ಯ ಗುಣವೂ ಇದ್ದಿತೆಂಬುದು ಅವರು ಕೃತಿರಚನೆಯಲ್ಲಿ ತೊಡಗಿಕೊಂಡ ಅಲ್ಪಕಾಲದಲ್ಲಿಯೆ ಸಿದ್ಧಪಟ್ಟಿತು. ಉದಾಹರಣೆಗೆ: ಆಚಾರ್ಯರು ಆಗತಾನೇ – ಎಂದರೆ ೧೯೧೫ಕ್ಕೆ ಸ್ವಲ್ಪ ಮುಂಚೆ – ರಚಿಸಿದ್ದ ದೇವಮನೋಹರಿ ರಾಗದ ‘ಪಲುಕವದೇಮಿರಾ ರಾಮ’ ಕೃತಿಯನ್ನು ಕೇಳಿ ಪ್ರಸಿದ್ಧ ವೇಣುವಾದಕ ಪಲ್ಲಡಂ ಸಂಜೀವರಾಯರು ಎಷ್ಟು ಮೋಹಿತರಾದರೆಂದರೆ ಒಡನೆಯೇ ಅದನ್ನು ಆಚಾರ್ಯರಿಂದ ಕಲಿತುಕೊಂಡು ಅನಂತರದ ದಿನಗಳಲ್ಲಿ ತಮ್ಮ ಎಲ್ಲ ಕಚೇರಿಗಳಲ್ಲಿ ಅದನ್ನು ನುಡಿಸಿ ಜನಪ್ರಿಯಗೊಳಿಸಿದರು – ಎಂದು ರಾಳ್ಳಪಲ್ಲಿ ಅನಂತಕೃಷ್ಣಶರ್ಮರು ಸ್ಮರಿಸಿದುದಿದೆ.
ಮೈಸೂರು ವಾಸುದೇವಾಚಾರ್ಯರ ಸಾಧನೆಯ ಕಾಲ ಮೈಸೂರಿನ ಸಾಂಸ್ಕೃತಿಕ ಇತಿಹಾಸದ ದೃಷ್ಟಿಯಿಂದ ಚರಿತ್ರಾರ್ಹವಾಗಿತ್ತು. ಸಂಗೀತಕ್ಷೇತ್ರವನ್ನು ಅಭೂತಪೂರ್ವವಾಗಿ ಬೆಳಗಿದ ಮತ್ತು ಮೈಸೂರು ಸಂಸ್ಥಾನಕ್ಕೆ ಜಾಗತಿಕ ಸ್ತರದಲ್ಲಿ ಅತಿಶಯವಾದ ಮನ್ನಣೆಯನ್ನು ದೊರಕಿಸಿಕೊಟ್ಟ ವೀಣೆ ಶೇಷಣ್ಣನವರು, ಬಿಡಾರಂ ಕೃಷ್ಣಪ್ಪನವರು ಮೊದಲಾದವರು ಮೈಸೂರಿನಲ್ಲಿಯೂ ಪಟ್ಣಂ ಸುಬ್ರಹ್ಮಣ್ಯ ಅಯ್ಯರ್, ಮಹಾವೈದ್ಯನಾಥ ಅಯ್ಯರ್ ಮೊದಲಾದವರು ನೆರೆಯ ತಮಿಳುನಾಡಿನಲ್ಲಿಯೂ ಪ್ರವರ್ಧಮಾನವಾಗಿದ್ದ ಕಾಲ ಅದು. ಈ ಹಲವಾರು ಮಹನೀಯರು ತಮ್ಮ ಸಾಧನೆಯ ಬಲದಿಂದ ದಾಕ್ಷಿಣಾತ್ಯ ಸಂಗೀತಪದ್ಧತಿಯ ಅಪ್ರತಿಮ ವಾರಸುದಾರರಾಗಿ ಪ್ರತಿಷ್ಠೆ ಗಳಿಸಿಕೊಂಡಿದ್ದುದು ಮಾತ್ರವಲ್ಲದೆ ಕರ್ನಾಟಕ ಸಂಗೀತದ ಶ್ರೇಷ್ಠತೆಗೆ ಹೊಸ ಮಾನದಂಡಗಳನ್ನೇ ನಿರ್ಮಾಣ ಮಾಡಿದ್ದರು. ಇದು ಕೇವಲ ತಾಂತ್ರಿಕ ಪರಿಣತಿಯ ವಿಷಯ ಆಗಿರಲಿಲ್ಲ. ಶಾಸ್ತ್ರದಲ್ಲಿ ದೃಢವಾಗಿ ಬೇರುಬಿಟ್ಟಿರುವುದರ ಜೊತೆಗೆ ಈ ಸಂಗೀತಪದ್ಧತಿಯ ಒಳಗಿನ ಸೌಂದರ್ಯಾಂಶಗಳನ್ನು ಉತ್ಖನನ ಮಾಡಿ ತೆಗೆದು ಪ್ರಕಟೀಕರಿಸುವ ಅಭಿಯಾನವಾಗಿತ್ತು ಅದು. ನಾವು ಇಂದು ನಮ್ಮ ಸಂಗೀತದ ವಿಶೇಷ ಆಕರ್ಷಣೆಗಳೆಂದು ಸಹಜವಾಗಿ ಗುರುತಿಸುತ್ತಿರುವ ಎಷ್ಟೊ ಪರಿಣತಿಗಳೂ ಕೌಶಲಗಳೂ ಸ್ಪಷ್ಟರೂಪವನ್ನು ಪಡೆದುಕೊಂಡದ್ದು ತ್ಯಾಗರಾಜರ ಕಾಲದಿಂದೀಚಿನ ನೂರೈವತ್ತು ವರ್ಷಗಳಲ್ಲಿ. ಇದು ಅತ್ಯಂತ ಶ್ರಮಸಾಧ್ಯವಾದ ಮತ್ತು ಜಟಿಲವೂ ಸಂಕೀರ್ಣವೂ ಆದ ರಸಸಿದ್ಧಿಪ್ರಕ್ರಿಯೆಯಾಗಿತ್ತು. ಆ ವಾರಸಿಕೆಯನ್ನು ಧರಿಸಿದ್ದ ವಾಸುದೇವಾಚಾರ್ಯರನ್ನು ಈಗ್ಗೆ ಅರವತ್ತು ವರ್ಷ ಹಿಂದೆ The Grand Old Man of Carnatic Music ಎಂದು ವರ್ಣಿಸುವುದು ವಾಡಿಕೆಯಾಗಿತ್ತು. ಕರ್ನಾಟಕ ಸಂಗೀತಕ್ಷೇತ್ರದಲ್ಲಿ ಇಪ್ಪತ್ತನೇ ಶತಮಾನದ ಪೂರ್ವಾರ್ಧದ ಒಂದು ಗೌರೀಶಂಕರವೆಂದರೆ ಮೈಸೂರು ವಾಸುದೇವಾಚಾರ್ಯರು ಎಂದು ಅವರ ಸಮಕಾಲೀನರಾದ ಡಿ.ವಿ.ಜಿ., ರಾಳ್ಳಪಲ್ಲಿ ಅನಂತಕೃಷ್ಣಶರ್ಮಾ, ವಿ. ದೊರೆಸ್ವಾಮಿ ಅಯ್ಯಂಗಾರ್ ಮೊದಲಾದವರೆಲ್ಲರ ಏಕಕಂಠದ ಅಭಿಮತವಿದೆ. ವಾಸುದೇವಾಚಾರ್ಯರ ಶಾರೀರದ ವ್ಯಾಪ್ತಿ ತಾರಸ್ಥಾಯಿಗಿಂತ ಸ್ವಲ್ಪ ಕೆಳಗಿನವರೆಗಷ್ಟೆ. ಆದರೆ ಇದಕ್ಕೆ ಪ್ರತಿಭಾರವೆನಿಸುವಂತೆ ಮಂದ್ರಸ್ಥಾಯಿಯಲ್ಲಿ ಅವರಿಂದ ಹೊಮ್ಮತ್ತಿದ್ದುದು ನಾದದ ಗಂಗಾಪ್ರವಾಹ. ಅದು ಓಜಃಪೂರ್ಣವೂ ಆಗಿರುತ್ತಿತ್ತು. ಆದರೆ ಸವಾಲು ಎದುರಾದಾಗ ಆಚಾರ್ಯರದು ಹಿಮ್ಮೆಟ್ಟುವ ಸ್ವಭಾವವಾಗಿರಲಿಲ್ಲ. ಅವರ ತಯಾರಿಯೇ ಹಾಗೆ ಇತ್ತು. ಅವರೊಬ್ಬ ‘ಕಂಪ್ಲೀಟ್ ಮ್ಯುಸಿಶಿಯನ್’. ಪೂಣಾಯುಷಿ ಕೂಡಾ – ೯೫ ವರ್ಷ ಬದುಕಿದರು. (೨೮.೫.೧೮೬೫ – ೧೭.೫.೧೯೬೧).
ಬಿಡಾರಂ ಕೃಷ್ಣಪ್ಪನವರಿಗೆ ಮೂರೂ ಕಾಲಗಳಲ್ಲಿ ವಿಹರಿಸುವ ಶಾರೀರಸೌಲಭ್ಯವಿದ್ದಿತು; ವಾಸುದೇವಾಚಾರ್ಯರದು ಬಹುಮಟ್ಟಿಗೆ ಮಧ್ಯಮಕಾಲದ ವಿಜೃಂಭಣೆ – ಎಂದು ಪ್ರಥೆ ಇದ್ದಿತು. ಆದರೆ ತಾನದ ಮೆರುಗು ಮೊದಲಾದ ಅಂಶಗಳಲ್ಲಿ ಆಚಾರ್ಯರದು ಮೇಲುಗೈ ಎಂದು ಕೃಷ್ಣಪ್ಪನವರೇ ಶ್ಲಾಘನೆ ಮಾಡಿದ್ದಿದೆ.
ವಾಗ್ಗೇಯಕಾರರಾಗಿ ವಾಸುದೇವಾಚಾರ್ಯರು ಬಹು ಮಟ್ಟಿಗೆ ತೆಲುಗಿನಲ್ಲಿ, ಕೆಲವು ಕೃತಿಗಳನ್ನು ಸಂಸ್ಕೃತದಲ್ಲಿ, ಒಂದೋ ಎರಡೋ ಮಾತ್ರ ಕನ್ನಡದಲ್ಲಿ ರಚಿಸಿದ್ದಾರೆ. ಇದರ ಹಿನ್ನೆಲೆಯನ್ನು ಅನುಭವಿಗಳಾದ ಡಿ.ವಿ.ಜಿ.ಯವರೂ ರಾಳ್ಳಪಲ್ಲಿ ಅನಂತಕೃಷ್ಣಶರ್ಮರೂ ಪರಾಮರ್ಶಿಸಿದ್ದಾರೆ. ಡಿ.ವಿ.ಜಿ.ಯವರು ಆಚಾರ್ಯರೊಡನೆಯೇ ಇದರ ಬಗ್ಗೆ ಸಂವಾದವನ್ನು ನಡೆಸಿದ್ದರು. ಕೃತಿರಚನೆಗೆ ಬೇಕಾದ ಹೆಚ್ಚು ಪರಿಕರಗಳು ಹೆಚ್ಚಾಗಿ ಯಾವ ಭಾಷೆಯಲ್ಲಿ ತನಗೆ ಒದಗುತ್ತವೋ ಆ ಭಾಷೆಯಲ್ಲಿ ವಾಗ್ಗೇಯಕಾರ ಕೃತಿರಚನೆಗೆ ಮುಂದಾಗುತ್ತಾನೆ – ಎಂಬುದು ಸರಳ ತರ್ಕ. ಬೇಕಾದರೆ ಇದರ ಬಗ್ಗೆ ಚರ್ಚೆ ಬೆಳೆಸಬಹುದು; ಅದರ ಆವಶ್ಯಕತೆ ಇಲ್ಲ. ಆದರೆ ಸಂಗೀತಕ್ಷೇತ್ರದಿಂದ ಆಚೆಗೂ ಭಾಷಾರಚನೆಯ ವಿಶಿಷ್ಟತೆಯಿಂದಾಗಿ ಐರೋಪ್ಯರೂ ತೆಲುಗನ್ನು Italian of the East ಎಂದು ಕರೆದಿದ್ದುದು ಉಂಟು. ಈ ಚರ್ಚೆ ಬೆಳೆಸಿ ಪ್ರಯೋಜನವಿಲ್ಲ. ತ್ಯಾಗರಾಜಾದಿಗಳಿಂದ ಏರ್ಪಟ್ಟಿದ್ದ ಮಾರ್ಗದ ವಾರಸಿಕೆ ಹೊಂದಿದ್ದವರು ಆಚಾರ್ಯರು – ಎಂದು ನೆನಪಿನಲ್ಲಿ ಇರಿಸಿಕೊಂಡರೆ ಸಾಕು.
ರಸಭಾವ, ಆಲಂಕಾರಿಕ ಔಚಿತ್ಯಾದಿ ಅಂಶಗಳ ದೃಷ್ಟಿಯಿಂದ ಅವಲೋಕಿಸಿದರೂ ಆಚಾರ್ಯರ ಕೃತಿಗಳು ಮೇಲ್ಮಟ್ಟದವಾಗಿ ಅನುಭವಕ್ಕೆ ಬರುತ್ತವೆ.
ಅದೆಲ್ಲ ಹೇಗೇ ಇರಲಿ. ಒಬ್ಬ ವಾಗ್ಗೇಯಕಾರರ ಕೃತಿಗಳು ಅವರ ಜೀವಿತಕಾಲದಲ್ಲಿಯೆ ವ್ಯಾಪಕವಾಗಿ ಪ್ರಸಾರಗೊಂಡು ‘ಕಾನ್ಸರ್ಟ್ ಸ್ಟೇಜ್’ ಮೇಲೆಯೂ ಪದೇಪದೇ ವಿನಿಕೆಯಾಗುವುದು ಸಾಮಾನ್ಯ ಸಂಗತಿಯಲ್ಲ. ಈ ಅದೃಷ್ಟಕ್ಕೆ ಭಾಜನರಾಗುವವರು ಕೆಲವರೇ. ವಾಸುದೇವಾಚಾರ್ಯರು ಈ ವಿರಳಪಂಕ್ತಿಗೆ ಸೇರಿದವರು. ಆಚಾರ್ಯರು ರಚಿಸಿದ ಆಭೇರಿಯ ‘ಭಜರೇ ಮಾನಸ’, ರೀತಿಗೌಳದ ‘ಮಮ ಹೃದಯೇ ವಿಹರ ದಯಾಳೋ’, ಹಿಂದೋಳದ ‘ಮಾಮವತು ಸರಸ್ವತಿ’ ಮೊದಲಾದ ಕೃತಿಗಳನ್ನು ಎಷ್ಟೊ ತ್ಯಾಗರಾಜಕೃತಿಗಳಷ್ಟೆ ಮೇಲಿಂದ ಮೇಲೆ ವೇದಿಕೆಗಳಲ್ಲಿ ಕೇಳುತ್ತಿದ್ದೇವೆ. ಇಪ್ಪತ್ತನೇ ಶತಮಾನದ ಮಧ್ಯದ ದಶಕಗಳ ಅಗ್ರಪಂಕ್ತಿಯ ಗಾಯಕರೆಲ್ಲ ವಾಸುದೇವಾಚಾರ್ಯರ ಕೃತಿಗಳನ್ನು ಕಚೇರಿಗಳಲ್ಲಿ ಹಾಡಿದರು. ಎಂ.ಎಸ್. ಸುಬ್ಬುಲಕ್ಷ್ಮಿ, ಡಿ.ಕೆ. ಪಟ್ಟಮ್ಮಾಳ್, ಚಂಬೈ ವೈದ್ಯನಾಥ ಭಾಗವತರ್, ಎಂ.ಡಿ. ರಾಮನಾಥನ್, ಬಾಲಮುರಳೀಕೃಷ್ಣ ಮೊದಲಾದವರೆಲ್ಲರೂ ಆಚಾರ್ಯರ ಕೃತಿಗಳನ್ನು ಎಲ್ಲ ವೇದಿಕೆಗಳಲ್ಲಿಯೂ ಹಾಡಿದರು.
ವಾಸುದೇವಾಚಾರ್ಯರ ವಯಸ್ಸು ೭೦ರ ಸುಮಾರಿನಲ್ಲಿದ್ದಾಗ ಅವರ ಗಾಯನವನ್ನು ಭವಿಷ್ಯಕ್ಕಾಗಿ ಧ್ವನಿಮುದ್ರಣ ಮಾಡಿರಿಸಬೇಕೆಂದು ಸಲಹೆಮಾಡಿ ಡಿ.ವಿ.ಜಿ. ಆಕಾಶವಾಣಿ ಅಧಿಕಾರಿಗಳೊಡನೆಯೂ ಸ್ವಯಂ ಆಗಿನ ರಾಷ್ಟ್ರಪತಿಗಳೊಡನೆಯೂ ದೀರ್ಘ ಪತ್ರವ್ಯವಹಾರ ಮಾಡಿದರು. ಆ ದಿನಗಳಲ್ಲಿ ಧ್ವನಿಮುದ್ರಣ ಸರ್ಕಾರದಿಂದ ಮಾತ್ರ ಸಾಧ್ಯವಿತ್ತು. ಆದರೆ ಆ ಕೆಲಸ ಆಗಲಿಲ್ಲವೆಂಬ ಕೊರಗು ಡಿ.ವಿ.ಜಿ.ಯವರಿಗೆ ಉಳಿದುಬಿಟ್ಟಿತು.
ಗಾಯಕರಾಗಿ ವಾಸುದೇವಾಚಾರ್ಯರ ಕೀರ್ತಿಗೆ ಸಾಕ್ಷಿರೂಪರಾಗಿದ್ದವರು ಅವರ ಸಮಕಾಲೀನರು ಮಾತ್ರ. ಅವರ ಗಾಯನದ ವಿಶಿಷ್ಟತೆಯನ್ನು ಇದ್ದದ್ದಿದ್ದಂತೆ ಉಳಿಸಲು ಆಗ ಯಂತ್ರಸೌಕರ್ಯಗಳಿರಲಿಲ್ಲ. ಈ ಸೌಕರ್ಯಗಳು ಒದಗುವ ವೇಳೆಗೆ ಆಚಾರ್ಯರಿಗೆ ಇಳಿವಯಸ್ಸು ಪ್ರಾಪ್ತವಾಗಿತ್ತು. ಹೀಗಾಗಿ ಆಚಾರ್ಯರ ಕೀರ್ತಿಯನ್ನು ಮುಂದಿನ ಕಾಲಕ್ಕೆ ಉಳಿಸಬಲ್ಲವು ಅವರ ರಚನೆಗಳು ಮಾತ್ರ – ಎಂದು ರಾಳ್ಳಪಲ್ಲಿಯವರು ೧೯೬೦ರ ದಶಕದಲ್ಲಿಯೇ ಹೇಳಿದ್ದರು.
ಆ ಅನಿಸಿಕೆ ವಾಸ್ತವವೂ ಆಗಿದೆ. ವಿದ್ವಾನ್ ಎಸ್. ಶಂಕರ್ ಅವರೂ ಸೇರಿದಂತೆ ಈಗಿನ ಗಾಯಕರೆಲ್ಲ ಆಚಾರ್ಯರ ಕೃತಿಗಳನ್ನು ವೇದಿಕೆಯಲ್ಲಿ ಉಳಿಸಿದ್ದಾರೆ. ನಮಗೆಲ್ಲ ತಿಳಿದಂತೆ ಆಚಾರ್ಯರ ಪ್ರಮುಖ ಕೃತಿಗಳು ವಿದ್ವಾನ್ ಎಸ್. ಶಂಕರ್ ಅವರ ‘ರಿಪರ್ಟರಿ’ಯ ಅಖಂಡ ಭಾಗವಾಗಿವೆ.
ವಾಸುದೇವಾಚಾರ್ಯರ ರಚನೆಗಳ ಸಾಹಿತ್ಯವೂ ಸ್ವರಸಂಯೋಜನೆಯೂ ಶಾಶ್ವತರೂಪದಲ್ಲಿ ಮುಂದಿನ ಪೀಳಿಗೆಗಳಿಗೆ ಉಳಿಯುವಂತೆ ಇದೀಗ ಪ್ರಕಟಗೊಂಡಿರುವ ‘ವಾಸುದೇವ ಕೀರ್ತನ ಮಂಜರಿ’ಯನ್ನು ಅತ್ಯಂತ ಶ್ರಮಪೂರ್ವಕ ಸಿದ್ಧಪಡಿಸಿ ಸಂಗೀತಕಲಾರತ್ನ ಎಸ್. ಕೃಷ್ಣಮೂರ್ತಿಯವರೂ ಸಂಗೀತಕಲಾರತ್ನ ಎಸ್. ಶಂಕರ್ ಅವರೂ ಸಂಗೀತಕ್ಷೇತ್ರಕ್ಕೆ ಉನ್ನತಮಟ್ಟದ ಮತ್ತು ಸ್ಮರಣೀಯ ಸೇವೆಸಲ್ಲಿಸಿದ್ದಾರೆ. ಈ ಇಬ್ಬರು ಕಲಾವಿದರಿಗೂ ಇಡೀ ಸಮಾಜದ ಪರವಾಗಿ ನಮನವನ್ನು ಸಲ್ಲಿಸಬೇಕಾಗಿದೆ. ಇಂತಹ ಜಟಿಲವಾದ ಕೃತಿಯನ್ನು ಪ್ರಕಟಿಸುವ ಉತ್ಸಾಹ ತೋರಿರುವ ಪ್ರಿಸಂ ಬುಕ್ಸ್ನ ಶ್ರೀ ಪ್ರಾಣೇಶ ಸಿರಿವಾರ ಮತ್ತು ಪರಿವಾರಕ್ಕೂ ವಂದನೆ ಸಲ್ಲುತ್ತದೆ.