ನನ್ನ ತೀರ್ಮಾನದಿಂದ ಅತೀವ ಸಂಕಟವಾಗಿತ್ತಾದರೂ ನನ್ನವರು ಕೊರಗುವುದನ್ನು ನಾನೆಂದೂ ಬಯಸಿರಲಿಲ್ಲ…
೨೦೧೫ರ ವಾರ್ಷಿಕ ಕಥಾಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ಕಥೆ
ಮನಬಂದಂತೆ ಮರಳಿನಲ್ಲಿ ಚಿತ್ತಾರ ಬಿಡಿಸುತ್ತಾ….. ತಿಳಿನೀಲಿಯ ಸಾಗರದ ಅನಂತತೆಯನ್ನು ನಿಬ್ಬೆರಗಾಗಿ ವೀಕ್ಷಿಸುತ್ತಿದ್ದೆ. ಸುತ್ತಲೂ ಗಾಳಿಮರಗಳು ತೊನೆದಾಡುತ್ತಿದ್ದವು….. ಗೂಡು ಸೇರಿಕೊಳ್ಳುವ ತವಕದ ಹಕ್ಕಿಗಳ ಹಾರಾಟ…… ಇಂಪಾದ ಕಲರವ…… ಅಲೆಗಳ ಆ ಏರಿಳಿತ-ಭೋರ್ಗರೆತದ ನಿರಂತರ ಸದ್ದಿಗೆ ಮನ ಮುದಗೊಂಡಿತ್ತು. ಸೂರ್ಯಾಸ್ತದ ಕ್ಷಣಗಣನೆಯಲ್ಲಿದ್ದೆ. ರವಿ-ಭುವಿಯ ನಿತ್ಯನೂತನ ಪ್ರಣಯದಾಟದ ಆ ಕ್ಷಣಗಳಿಗೆ ಸಾಕ್ಷಿಯೆಂಬಂತೆ ಇಡೀ ಪಡುವಣವೇ ರಂಗೇರಿತ್ತು! ಸುಂದರ ಪರಿಸರದ ಆಸ್ವಾದದಲ್ಲಿದ್ದ ನಾನು ಮೋಡಿಗೊಳಗಾದಂತೆ ಕೈಗಳೆರಡನ್ನೂ ಬೆನ್ನಹಿಂದೆ ಊರುತ್ತಾ ದಿಗಂತದತ್ತ ಹಾಗೆಯೇ ದಿಟ್ಟಿಸಿದೆ…… ಆಹಾ! ಆ ಮೋಹಕ ಆಗಸದಲ್ಲಿ ಬೆಳ್ಳಕ್ಕಿಗಳ ಹಾರಾಟ ಎಷ್ಟು ಚೆಂದ! ಗುಂಪುಗುಂಪಾಗಿ ಹಾರಾಡುತ್ತಲೇ ಚಿತ್ತಾರ ಬಿಡಿಸುತ್ತಿರುವ ಬೆಳ್ಳಕ್ಕಿಗಳ ಕೌಶಲಕ್ಕೆ ಮನಸೋತು ಆ ಸ್ವಚ್ಛಂದ ಹಾರಾಟವನ್ನೇ ದಿಟ್ಟಿಸುತ್ತಿದ್ದಂತೆ ಸಮ್ಮೋಹಕ್ಕೊಳಗಾದ ನನ್ನಲ್ಲೂ ಹಾರಾಡುವ ಬಯಕೆ ಜಾಗೃತ ಗೊಳ್ಳತೊಡಗಿತು……….
ಬಯಕೆಯ ಉತ್ಕಟಕ್ಕೆ ಇಂಬುಕೊಡುವಂತೆ ನಿಧಾನವಾಗಿ ಮೇಲೆದ್ದೆ…. `ಹೇ ದೇವ! ನನಗೂ ಹಾರಾಡುವ ಶಕ್ತಿಯನ್ನು ದಯಪಾಲಿಸು…..’ ಬೇಡಿಕೊಳ್ಳುತ್ತ ಹತ್ತಿರದಲ್ಲಿದ್ದ ಬಂಡೆಗಲ್ಲೊಂದನ್ನು ಏರಿ ನಿಂತೆ. ಪರವಶತೆಗೊಳಗಾದ ನನ್ನ ಕೈಗಳೆರಡೂ ರೆಕ್ಕೆಯಂತೆ ಆಡತೊಡಗಿದವು……
ಏನಾಶ್ಚರ್ಯ! ಇದೀಗ ನಿಜಕ್ಕೂ ನನ್ನ ಶರೀರ ಮೆಲ್ಲಮೆಲ್ಲಗೆ ಗಾಳಿಯಲ್ಲಿ ಮೇಲೇರತೊಡಗಿದೆಯಲ್ಲ…. ಕೈಗಳ ಬಡಿತವೂ ತೀವ್ರಗೊಂಡಿವೆ……. ಅದ್ಯಾವ ಮಾಯದಲ್ಲಿ ರೆಕ್ಕೆಯಾಕಾರ ಪಡೆದುಕೊಂಡಿವೆ ಅವು! ಅರೆರೇ……! ನಾನು ನಿಜಕ್ಕೂ ಹಾರುತ್ತಿರುವೆ….. ತಂಪುಗಾಳಿ ಮುಖವನ್ನು ಮುದ್ದಿಸುತ್ತಾ ಕಚಗುಳಿಯಿಡುತ್ತಿತ್ತು. ಯಾರ-ಯಾವ ಅಂಕೆಯೂ ಇಲ್ಲದೇ ಮನಬಂದಲ್ಲಿ ಮುಕ್ತವಾಗಿ ಹಾರುತ್ತಾ ಎಲ್ಲೆಡೆ ವೀಕ್ಷಿಸಿದೆ….. ದೈತ್ಯಾಕಾರದ ಬೆಟ್ಟಗುಡ್ಡಗಳು, ಮರಗಳು, ಮನೆಗಳೆಲ್ಲಾ ಈಗ ಆಟಿಕೆಯಂತೆ ತೋರುತ್ತಿದ್ದವು. ತಿಳಿನೀಲಿ ಬಣ್ಣದ ಬೃಹತ್ ಸಮುದ್ರದ ಪರಿಧಿ ನನ್ನ ಕಣ್ಣಳತೆಯಲ್ಲಿತ್ತು…… ದೊಡ್ಡ ದೊಡ್ಡ ಮರಗಳ ಗುಂಪು ಪುಟ್ಟ ಹಸಿರು ಗುಚ್ಛದಂತೆ ತೋರುತ್ತಿತ್ತು…. ಆಹ್! ಅದೆಷ್ಟು ಚೆಂದದ ಹಸಿರು…..
ಮನಬಂದಲ್ಲಿ ಹಾರುತ್ತಾ ಕಣ್ಮುಚ್ಚಿ ಹಾರಾಟದ ಸುಖವನ್ನು ಅನುಭವಿಸುತ್ತಿದ್ದಾಗ……. ದೈತ್ಯಾಕಾರದ ನೆರಳೊಂದು ಅಡ್ಡಬಂದಂತೆ ಭಾಸವಾಯಿತು. ತಲ್ಲೀನತೆಗೆ ಭಂಗ ಉಂಟಾದ್ದರಿಂದ ಫಕ್ಕನೆ ಕಣ್ಬಿಟ್ಟೆ……… ಅಯ್ಯೋ….! ಅದೇನದು ಕಪ್ಪಗಿನ ದೈತ್ಯಾಕಾರ? ನನ್ನೆಡೆಗೇ ನುಂಗುವಂತೆ ಬರುತ್ತಿದೆಯಲ್ಲಾ……. ಇಲ್ಲಇಲ್ಲ….. ನಾನೇ ಅದರೆಡೆಗೆ ಹೋಗುತ್ತಿರುವೆ……. ಹೆದರಿಕೆಯಿಂದ ಮೈ ಕಂಪಿಸತೊಡಗಿತು. ಸಾಕಪ್ಪಾ ಸಾಕು ಈ ಹಾರಾಟ, ಮೊದಲು ಇಲ್ಲಿಂದ ಪಾರಾಗಬೇಕು…… ಆದರೆ ಇದೇನಿದು, ಎಷ್ಟೇ ಪ್ರಯತ್ನಿಸಿದರೂ ಕೈಗಳ ಬಡಿತವೇಕೆ ನಿಲ್ಲಿಸಲಾಗುತ್ತಿಲ್ಲ……. ನನ್ನ ಹತೋಟಿಯಲ್ಲೇಕೆ ಇಲ್ಲ ಅವು? ಏನು ಮಾಡಲಿ ನಾನೀಗ…….
“ಹೇ ದೇವರೇ, ನನ್ನ ಅಂಕೆಯಲ್ಲಿಲ್ಲದ ಈ ಹಾರಾಟ ಸಾಕಿನ್ನು. ಇದರಿಂದ ಮುಕ್ತಿಗೊಳಿಸಿ ಕಾಪಾಡು ತಂದೆ……” ಭಯದ ತೀವ್ರತೆಗೆ ಮೈ ಬೆವರತೊಡಗಿತು. ಬೀಸುವ ತಂಗಾಳಿಯೂ ಸೇರಿ ಶರೀರವೋ ತಂಪು ತಂಪು! ನಡುಕ ಹೆಚ್ಚಿತು…… `ಧಡಾರ್….’ ಡಿಕ್ಕಿ ಹೊಡೆದ ರಭಸಕ್ಕೆ ಹತೋಟಿ ತಪ್ಪಿ ಕೆಳಗೆ ಬೀಳತೊಡಗಿದೆ…… ಬದುಕುಳಿಯುವುದು ಅಸಾಧ್ಯವೇ ಸರಿ…… ಆದರೆ ನಾ ಸಾಯಲಾರೆ, ನನಗೀ ಸಾವು ಖಂಡಿತ ಬೇಡ. ಬದುಕನ್ನು ಅದೆಷ್ಟು ಪ್ರೀತಿಸುತ್ತಿದ್ದೆ. ಹೌದು, ತುಂಬು ಬದುಕನ್ನು ಬದುಕಲೇಬೇಕು…… ಆದರೇನು ಮಾಡಲಿ…. ಕೆಳಗೆ ಬೀಳುತ್ತಿರುವೆನಲ್ಲ……. `ಅಯ್ಯೋ’ ಅತಿಯಾದ ವಿಹ್ವಲತೆಯಿಂದ ಬೆಚ್ಚಿ ಎಚ್ಚರಗೊಂಡೆ.
ಅರೇ……! ನನಗೇನೇನೂ ಆಗಿಲ್ಲ…. ನಾನಿನ್ನೂ ಬದುಕಿಯೇ ಇದ್ದೇನೆ. ಹಾಗಾದರೆ ಆ ತಲ್ಲಣದ ಅನುಭವ…….? ಬರೀ ಕನಸಾಗಿತ್ತೇ? ಅಯ್ಯಬ್ಬ! ವಿನಾಕಾರಣ ಅದೆಷ್ಟು ಹೆದರಿದ್ದೆನಲ್ಲ…. ಎಂತಹ ಕೆಟ್ಟ ಕನಸದು…… ತಾಯಗರ್ಭದ ಭದ್ರಕೋಟೆಯಲ್ಲಿ ಸುರಕ್ಷಿತವಾಗಿ ನಿರಾಳತೆಯಿಂದ ಪುನಃ ಮುದುಡಿ ಮಲಗಲು ಅಣಿಯಾಗುವಷ್ಟರಲ್ಲಿ ಅದೇನೋ ಚೂಪಾದದ್ದು ನನ್ನ ಮೃದು ಶರೀರವನ್ನು ಬಲವಾಗಿ ಚುಚ್ಚಿದಂತಾಗಿ ಯಮಯಾತನೆಯಿಂದ ಚಿಟ್ಟನೆ ಚೀರಿದೆ…..
`ಯಾರದು ನನ್ನನ್ನು ಘಾಸಿಗೊಳಿಸುತ್ತಿರುವವರು…..?’ ಚೀರಾಟ ವ್ಯರ್ಥವೆಂಬಂತೆ ನಿರಂತರವಾಗಿ ಚುಚ್ಚಿ ಛಿದ್ರಗೊಳಿಸಲ್ಪಟ್ಟ ನನ್ನ ಶರೀರ ಗರ್ಭದ ಭದ್ರಕೋಟೆಯಿಂದ ಕಳಚಿ ಜಾರತೊಡಗಿತು. ಶಿಥಿಲಗೊಂಡ, ಆ ಶರೀರವನ್ನು ತ್ಯಜಿಸಿ ಹೊರಬಂದುಬಿಟ್ಟೆ. ಹತ್ತಿಯಂತೆ ಹಗುರವಾದ ಅನುಭವ…. ನಾನೀಗ ಗಾಳಿಯಲ್ಲಿ ತೇಲುತ್ತಿದ್ದೆ. ಅಲ್ಲಿಯ ವಿದ್ಯಮಾನಗಳನ್ನು ಗಮನಿಸತೊಡಗಿದೆ. ಛಿದ್ರಗೊಂಡ ನನ್ನದಾಗಿದ್ದ ಆ ಮೃದು ಶರೀರವನ್ನು ಕೈಗವಸುಗಳುಳ್ಳ ಕೈಗಳು ನಿರ್ದಯವಾಗಿ ಮೂಲೆಯಲ್ಲಿದ್ದ ಕಸದ ತೊಟ್ಟಿಗೆ ಚೆಲ್ಲಿಬಿಟ್ಟವು. ಕಟ್ಟಕಡೆಯದಾಗಿ ನನ್ನದಾಗಿದ್ದ ಆ ಶರೀರವನ್ನೊಮ್ಮೆ ಸಂಕಟದಿಂದಲೇ ವೀಕ್ಷಿಸಿದೆ. ಇನ್ನೂ ಸರಿಯಾಗಿ ರೂಪುಗೊಂಡಿರದ ಆ ಪುಟ್ಟ ಶರೀರದಿಂದೇನು ಹಾನಿಯಿತ್ತು…. ಅದನ್ನೇಕೆ ಘಾಸಿಗೊಳಿಸಿದರು…. ಯಾವ ಕಾರಣಕ್ಕಾಗಿ…. ದೇವರೇ! ನಾನು ಬದುಕಬೇಕೆಂದು ಆಸೆಪಟ್ಟಿದ್ದೇ ಅಪರಾಧವಾಯಿತೇ? ನನಗೇಕೆ ಎಲ್ಲರಂತೆ ಬದುಕುವ ಹಕ್ಕಿಲ್ಲ….. ಏನೂ ಅರಿಯದ ಯಾವ ತಪ್ಪೂ ಮಾಡದ ಅಸಹಾಯಕ ಜೀವವೊಂದನ್ನು ವಿನಾಕಾರಣ ಅಮಾನುಷವಾಗಿ ಕೊಂದರಲ್ಲ…….. ಸುಸಂಸ್ಕೃತರೇ ಇವರು….. ಛೇ….. ದುರಾತ್ಮರು!
ಸುತ್ತಲೂ ಹೆದರಿಕೆ ಹುಟ್ಟಿಸುವಷ್ಟು ಶಾಂತತೆಯಿತ್ತು. ಹಸಿರು ಉಡುಗೆ ಧರಿಸಿದ ಹೆಣ್ಣುಜೀವವೊಂದು ಎಚ್ಚರವಿಲ್ಲದೇ ಮೈಚೆಲ್ಲಿ ಮಲಗಿತ್ತು. ಆ ಕೊಠಡಿಯಲ್ಲಿ ಹಸಿರು ಬಣ್ಣದ ಬಟ್ಟೆಗಳೇ ಇದ್ದವು. ಯಾಕೋ ಆ ಹಸಿರು ಹೆದರಿಕೆ ಹುಟ್ಟಿಸಿತ್ತು. ಅದೇ ಹಸಿರು ಕನಸಿನಲ್ಲಿ ಎಷ್ಟೊಂದು ಆಹ್ಲಾದವಿತ್ತಲ್ಲ….. ಮಲಗಿರುವ ಆ ಹೆಣ್ಣುಜೀವ ನನ್ನ ಅಮ್ಮನೇ…..? ಅಮ್ಮ, ನಿನ್ನದೇ ಕುಡಿ ನಾನು. ನಿರುಪದ್ರವಿಯಾದ ನನ್ನನ್ನೂ ರಕ್ಷಿಸಲಾಗಲಿಲ್ಲವೇ…. ನೀನು ಅಷ್ಟೊಂದು ಅಸಹಾಯಕಳೇನು? ದೇವರು ಬರೀ ಜೀವ ತುಂಬುತ್ತಾನಷ್ಟೇ. ಒಂಭತ್ತು ತಿಂಗಳು ಬೆಚ್ಚಗಿನ ಗರ್ಭದಲ್ಲಿರಿಸಿಕೊಂಡು ರಕ್ಷಿಸಿ ಜೀವಕ್ಕೊಂದು ಸರಿಯಾದ ಸಶಕ್ತ ಆಕಾರ ಮೂಡುವವರೆಗೂ ರಕ್ತ-ಮಾಂಸ, ಆಹಾರ-ಉಸಿರು, ನಿನ್ನದಾದ ಎಲ್ಲವನ್ನೂ ನಿಃಸ್ವಾರ್ಥಿಯಾಗಿ ಹಂಚಿ ಭಗವಂತನ ಸೃಷ್ಟಿಕಾರ್ಯದಲ್ಲಿ ಯಶಸ್ವಿಯಾಗಿ ಕೈಜೋಡಿಸುವ ನೀನು ಆ ದೇವನಿಗೆ ಸರಿಸಾಟಿಯೇ ಹೌದು. ನೀನೇಕೆ ಹೀಗೆ ಅಸಹಾಯಳಂತೆ ಮಲಗಿರುವೆ…….. ಅಥವಾ….. ನಿನಗೂ ನನ್ನ ಅವಸಾನವೇ ಬೇಕಿತ್ತೇ?
ಅದೇ ಕಸದತೊಟ್ಟಿಗೆ ತನ್ನ ಕೈಗವಸುಗಳನ್ನು ಬಿಸುಟು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ಬಿಚ್ಚಿದ ಆ ವ್ಯಕ್ತಿಯ ಚಹರೆಯನ್ನೇ ದಿಟ್ಟಿಸಿದೆ ಕೋಪದಿಂದ. ಅರೇ! ಅದೂ ಕೂಡ ತಾಯಿಯಂತಹದ್ದೇ ಒಂದು ಹೆಣ್ಣಿನದ್ದಾಗಿತ್ತು. ಸಹನೆ, ವಾತ್ಸಲ್ಯ, ಪ್ರೀತಿಗೆ ಹೆಸರಾದ ಹೆಣ್ಣುಜೀವದ ಪ್ರತಿನಿಧಿಯಾದ ಇವಳೇಕೆ ನನ್ನನ್ನು ಹಿಂಸಿಸಿ ಕೊಂದಳು; ನಾನೇನು ಕೇಡುಬಗೆದಿದ್ದೆ….. ಉಕ್ಕಿಬಂದ ರೋಷದಿಂದ ನನ್ನೆಲ್ಲಾ ಶಕ್ತಿಯನ್ನು ಒಟ್ಟುಗೂಡಿಸಿ ಆಕೆಯ ಕೆನ್ನೆಗೆ ಬಲವಾಗಿ ಬೀಸಿದೆ….. ಹೊಡೆದ ಅನುಭವವೇ ಆಗಲಿಲ್ಲ. ಆಕೆಯೋ ಯಾಂತ್ರಿಕವಾಗಿ ಹೊರನಡೆದಳು. ಅವುಡುಗಚ್ಚಿ ಆಕೆಯನ್ನು ಹಿಂಬಾಲಿಸಿದೆ. ಅಲ್ಲೊಬ್ಬ ವೃದ್ಧೆ ಹಾಗೂ ನಲವತ್ತರ ಆಸುಪಾಸಿನ ಒಬ್ಬ ಗಂಡಸು ಕುಳಿತಿದ್ದರು. ಆಕೆಯನ್ನು ಕಂಡವರೇ ಆತಂಕದಿಂದ ಸಮೀಪಿಸಿದರು. ಬಹುಶಃ ನನ್ನ ಅಪ್ಪ ಮತ್ತು ಅಜ್ಜಿಯಿರಬಹುದು. ಅಮ್ಮನಿಗೆ ಹುಷಾರಿಲ್ಲವೆಂದು ಎಷ್ಟೊಂದು ಆತಂಕಗೊಂಡಿದ್ದಾರೆ. ನನ್ನನ್ನು ಕೊಂದ ಘನಕಾರ್ಯಕ್ಕೆ ಆಕೆಗೀಗ ತಕ್ಕ ಶಾಸ್ತಿಯಾಗುತ್ತದೆ…. ಆ ಕೊಲೆಗಾರ್ತಿಯನ್ನು ಬೈಯುವುದನ್ನು ಮನಸೋ ಇಚ್ಛೆ ಕೇಳಿ ಆನಂದಿಸಬೇಕೆಂದು ಆತುರದಿಂದ ಸಮೀಪಿಸಿದೆ. ಕಾತರಳಾಗಿ ಕಿವಿಗೊಟ್ಟೆ. “ಮಗು ಹೆಣ್ಣಾದ್ದರಿಂದ ನಿಮ್ಮ ಇಚ್ಛೆಯಂತೆ ಗರ್ಭಪಾತ ಮಾಡಿಸಿದ್ದೇನೆ……”
ಹಠಾತ್ತನೆ ಸಿಡಿಲೆರಗಿದಂತಾಗಿ ಮುಂದಿನ ಮಾತು ಕೇಳಿಸಿಕೊಳ್ಳುವಷ್ಟು ಸಹನೆ ಉಳಿಯದೇ ಅವರೆಲ್ಲರ ಮುಖಗಳನ್ನು ನೋಡಲೂ ಇಚ್ಛೆಯಿಲ್ಲದೆ ಹೊರಗೆ ಬಂದುಬಿಟ್ಟೆನಾದರೂ ಪುನಃ ಆಕ್ರೋಶದಿಂದ ಅಪ್ಪನನ್ನು ಸಮೀಪಿಸಿದೆ.
“ಅಪ್ಪ, ನಿಮಗೇಕೆ ನನ್ನ ಮೇಲೆ ದ್ವೇಷ, ಸಿಟ್ಟು? ಅಸಹಾಯಕ ಸ್ಥಿತಿಯಲ್ಲಿದ್ದ ನನ್ನನ್ನೇಕೆ ಕೊಂದಿರಿ? ನಾನೇನು ಅನ್ಯಾಯ ಮಾಡಿದ್ದೆ ನಿಮಗೆ…. ನರಹಂತಕರು ನೀವು……” ಘಾಸಿಗೊಂಡಿದ್ದ ನನ್ನ ಪ್ರಲಾಪ ವ್ಯರ್ಥಾಲಾಪವೆಂಬುದನ್ನು ಅವರ ಶೂನ್ಯ ಮುಖಭಾವವೇ ತಿಳಿಸಿತ್ತು. ಹೌದಲ್ಲವೇ? ಅಶರೀರಿಯಾದ ನನಗೆ ಯಾವ ಅಸ್ತಿತ್ವವೂ ಇಲ್ಲ. ನಾನೊಂದು ಅತೃಪ್ತ ಆತ್ಮವಷ್ಟೇ. ಯಾವ ತಪ್ಪೂ ಮಾಡದ ನಾನು ಈ ಅಸಹನೀಯ ಸ್ಥಿತಿಯನ್ನೇಕೆ ಅನುಭವಿಸಬೇಕು?
***
ಗೊತ್ತುಗುರಿಯಿಲ್ಲದೇ ಗಾಳಿಯಲ್ಲಿ ತೇಲುತ್ತ ತೇಲುತ್ತ ಸಾಗಿದ್ದೆ. ಅಮ್ಮನ ಗರ್ಭದಲ್ಲಿದ್ದಾಗ ಕನಸಿನ ಆ ಹಾರಾಟ ಎಷ್ಟೊಂದು ಮಜವಾಗಿತ್ತು, ಮುದನೀಡಿತ್ತು. ಅಲ್ಲಿ ಅನುಭವಿಸಲೊಂದು ಶರೀರವಿತ್ತು. ಅಸಾಧ್ಯವಾದದ್ದನ್ನು ನಾನೀಗ ಮಾಡಬಲ್ಲೆನಾದರೂ ಪ್ರಯೋಜನವಿಲ್ಲ. ಕಾರಣ ಅನುಭವ ಶೂನ್ಯ. ನನ್ನೆಲ್ಲಾ ಸಾಧನೆಗಳೂ ಭಾವನೆಯಷ್ಟೆ, ಕಲ್ಪನೆಯಷ್ಟೆ. ನಾನು ಯಾರಿಗೂ ಕಾಣಿಸಲಾರೆ. ನನ್ನದಲ್ಲದ ತಪ್ಪಿಗೆ ನಾನೇಕೆ ಅಶರೀರಿಯಾಗಿ ಪರಿತಪಿಸಲಿ? ಮೊದಲು ನನ್ನಾಸೆಯಂತೆ ಬದುಕುವ ನಿಟ್ಟಿನಲ್ಲಿ ಯೋಚಿಸಬೇಕು. ಅನಂತರ ಸಾಧಿಸುವ ಮಾತು…… ಈ ವಿಚಾರಧಾರೆಯೊಂದಿಗೆ ಅದೆಷ್ಟು ದೂರ ಸಾಗಿದ್ದೆನೋ, ಹಿಂದಿನ ಜನ್ಮದ ನೆನಪುಗಳು ಒತ್ತರಿಸಿ ಬರತೊಡಗಿದವು……
***
ಕುಡುಕ ಅಪ್ಪ, ರೋಗಿಷ್ಠ ಅಮ್ಮನ ಚೊಚ್ಚಲ ಮಗಳಾದ್ದರಿಂದ ಎಳವೆಯಲ್ಲೇ ತಮ್ಮ ತಂಗಿಯರ ಜವಾಬ್ದಾರಿಯ ಹೊಣೆ ಅನಿವಾರ್ಯವಾಗಿತ್ತು. ಅವರೆಲ್ಲರಿಗೂ ಪುಟ್ಟ ತಾಯಿಯಾಗಿದ್ದೆ. ಎರಡನೇ ಇಯತ್ತೆಗೇ ಶಾಲೆಯ ಸಹವಾಸ ಮುಗಿದಿತ್ತು. ರೋಗಿಷ್ಠ ಅಮ್ಮನನ್ನೂ ನೋಡಿಕೊಳ್ಳಬೇಕಿತ್ತು. ವರ್ಷಗಳುರುಳಿದ್ದವು. ನಾನೆಂದೂ ಬೇಸರಿಸದೇ ಎಲ್ಲವನ್ನೂ ನಿಃಸ್ವಾರ್ಥಿಯಾಗಿ ನಿಭಾಯಿಸಿದ್ದೆ. ಎಲ್ಲರಂತೆ ನನ್ನ ಜೀವನದಲ್ಲೂ ಹರೆಯ ಕಾಲಿಟ್ಟಿತ್ತು. ತಾಯಿಯ ತಮ್ಮ ಆಗಾಗ ಮನೆಗೆ ಬರುತ್ತಿದ್ದವ ಪ್ರೀತಿಯಿಂದ ಮಾತಾಡಿಸುತ್ತಿದ್ದ. ಬಳೆ, ಸರ ಹೂವು – ಹೀಗೆ ಏನಾದರೊಂದನ್ನು ತಂದು ನನಗೊಬ್ಬಳಿಗೇ ಕೊಟ್ಟು ಕಕುಲಾತಿ ತೋರಿದ್ದ. ಹರೆಯದ ಹೊಸ್ತಿಲಲ್ಲಿದ್ದ ನಾನು ಅವನನ್ನು ಸಂಪೂರ್ಣವಾಗಿ ನಂಬಿದ್ದೆ; ಮನಸಾರೆ ಪ್ರೀತಿಸಿದ್ದೆ. ಚಿಕ್ಕ ವಯಸ್ಸಿನಲ್ಲೇ ಜವಾಬ್ದಾರಿಯ ನೊಗ ಹೊತ್ತ ನನಗೂ ಆಸರೆ ಬೇಕಿತ್ತು; ಸಾಂತ್ವನ ಬಯಸಿದ್ದೆ. ವಯಸ್ಸಿನ ಅಂತರ ಹೆಚ್ಚೇ ಇದ್ದರೂ ಅವನೊಟ್ಟಿಗೆ ನನ್ನ ಮದುವೆ ನೆರವೇರಿತ್ತು. ಕೆಲವೇ ದಿನಗಳಲ್ಲಿ ಅವನು ಬರೀ ಸೋಮಾರಿಯಷ್ಟೇ ಅಲ್ಲ ನಿರುಪಯೋಗಿಯೂ ಹೌದು ಎಂಬುದು ಮನದಟ್ಟಾಗಿತ್ತು. ಆದರವ ನಿರುಪದ್ರವಿಯಾಗಿದ್ದ. ತಾನಾಯಿತು ತನ್ನ ಪಾಡಾಯಿತು ಎಂಬಂತಿದ್ದ. ಬೆಟ್ಟದಷ್ಟು ಆಸೆಗಳಿದ್ದರೂ ನಾನು ಕೊರಗುತ್ತಾ ಕೂರಲಿಲ್ಲ. ಮನೆಯ ಹತ್ತಿರದಲ್ಲಿದ್ದ ಅನುಕೂಲಸ್ಥ ವೃದ್ಧದಂಪತಿಗಳ ಮನೆಗೆಲಸ, ಅಡುಗೆ ಕೆಲಸಗಳಲ್ಲಿ ಸಹಾಯ ಮಾಡುತ್ತಾ ಅವರ ಸೇವೆಯನ್ನು ಪ್ರೀತಿಯಿಂದ ಮಾಡುತ್ತಿದ್ದೆ. ಬೆಳಗ್ಗೆಯಿಂದ ಸಂಜೆಯವರೆಗೂ ಇದ್ದು ಮನೆಗೆ ಹಿಂದಿರುಗುತ್ತಿದ್ದೆ. ಅವರೂ ಅಷ್ಟೇ, ತಂದೆ ತಾಯಿಯ ಪ್ರೀತಿ ತೋರಿದ್ದರು. ಬಿಡುವಿನ ವೇಳೆಯಲ್ಲಿ ಓದು ಬರಹ ಕಲಿಸುತ್ತಾ ನನ್ನ ಓದುವ ತುಡಿತಕ್ಕೆ ನೀರೆರೆದು ಪೋಷಿಸಿದ್ದರು ರಾಮಜ್ಜ. ಸೀತಜ್ಜಿ ಕೂಡ ಕಸೂತಿ, ಹೊಲಿಗೆ ಕಲಿಸುತ್ತಿದ್ದರು. ಮನಸ್ಸಿಗೆ ನೆಮ್ಮದಿ ಕೊಡುವ ಹವ್ಯಾಸದಲ್ಲಿ ತೊಡಗಿದ್ದ ನನ್ನ ನೆಮ್ಮದಿ ಸ್ವಲ್ಪ ದಿನದ್ದಾಗಿತ್ತು. ಆಗಾಗ ಕಾಡುತ್ತಿದ್ದ ಹೊಟ್ಟೆನೋವು ಒಮ್ಮೆ ವಿಪರೀತಕ್ಕೆ ಹೋಗಿತ್ತು. ಸರಕಾರೀ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಪರೀಕ್ಷೆಗಳೂ ಮುಗಿದು ನೋವಿಗೆ ಕಾರಣ `ಕ್ಯಾನ್ಸರ್’ ಎಂದಾದ ಬಳಿಕ ನಾನು ಹೆಚ್ಚು ದಿನ ಬದುಕುಳಿಯಲಿಲ್ಲ. ಜೀವಿಸುವ ಉತ್ಕಟ ಬಯಕೆಯೊಂದಿಗೆ ಮಣ್ಣಲ್ಲಿ ಮಣ್ಣಾಗಿ ಹೋದೆ. ಅತೃಪ್ತ ಆತ್ಮವಾದ್ದರಿಂದಲೇ ಇರಬೇಕು ನನಗರಿವಿಲ್ಲದೇ ಭ್ರೂಣವಾಗಿ ಬೆಚ್ಚಗಿನ ಗರ್ಭದಲ್ಲಿ ಆಶ್ರಯ ಪಡೆದಿದ್ದೆ. ಆದರೇನಾಗಿಹೋಯಿತು? ಇಲ್ಲೂ ನೆಮ್ಮದಿ ಮರೀಚಿಕೆಯಾಯಿತೇ? ಹಿಂದಿನ ಜನ್ಮದ ನೆನಪು ಅಳಿಸುವ ಮೊದಲೇ ಈ ಜನ್ಮದ್ದೂ ಕೊಲೆಯಾಗಿಹೋಯಿತೇ? ಬಾಳಿ ಬದುಕುವ ನನ್ನಾಸೆ ತೀರದೇ ಹೋಯಿತೇ? ಇಲ್ಲ, ನಾ….. ಸೋಲಲಾರೆ…. ನಾನು ನಾನಾಗಿ ಬಾಳಿ ನನ್ನೆಲ್ಲ ಆಸೆ ತೀರುವವರೆಗೆ ಅತೃಪ್ತ ಮನದ ಈ ತೊಳಲಾಟ ನಿಲ್ಲದು. ಮುಖ್ಯವಾಗಿ `ನಾನು’ ಎಂದು ಗುರುತಿಸಿಕೊಳ್ಳಲು ನನಗೊಂದು ಶರೀರ ಅತ್ಯವಶ್ಯ… ಆದರೆ ನಾನೋ ಅಶರೀರಿ…. ಈ ತ್ರಿಶಂಕು ಸ್ಥಿತಿ ಅಸಹನೀಯವಾಗಿತ್ತು…. ಗೊತ್ತುಗುರಿಯಿಲ್ಲದೇ ಅದೆಷ್ಟು ಹೊತ್ತು ಹಾಗೇ ಶೂನ್ಯದಲ್ಲಿ ಸಾಗಿದ್ದೆನೋ…. ಅಲ್ಲೊಂದು ದೇವಾಲಯ ಕಂಡಿತು. ತಡಮಾಡದೇ ಒಳಹೊಕ್ಕೇಬಿಟ್ಟೆ.
“ಹೇ ದಯಾಮಯ, ನನ್ನ ಅಪರಾಧವಾದರೂ ಏನು? ಪಾಲಿಗೆ ಬಂದದ್ದು ಪಂಚಾಮೃತವೆಂದು ಪರಿಸ್ಥಿತಿ ಹೇಗೇ ಇದ್ದರೂ ಧೈರ್ಯವಾಗಿ ಎಲ್ಲವನ್ನೂ ನಿಭಾಯಿಸುತ್ತಿದ್ದೆ. ಕೊರಗದ ನನಗೇಕೆ ಎಳವೆಯಲ್ಲಿ ಕ್ಯಾನ್ಸರ್ ನೆಪಮಾಡಿಕೊಂಡು ಅಕಾಲಿಕ ಸಾವನ್ನಿತ್ತೆ? ಎಂತಹ ಕಷ್ಟದಲ್ಲೂ ನಿನ್ನನ್ನೆಂದೂ ದೂಷಿಸಲಿಲ್ಲ. ಆ ಜನ್ಮದ ನೆನಪು ಮಾಸುವ ಮೊದಲೇ ಸಿಕ್ಕ ಇನ್ನೊಂದು ಜನ್ಮವೂ `ಹೆಣ್ಣು’ ಎಂಬ ಕ್ಷುಲ್ಲಕ ಕಾರಣದಿಂದ ಕೈ ತಪ್ಪಿತಲ್ಲ….. ಬದುಕನ್ನು ಪ್ರೀತಿಸುವಂತೆ ಮನಸ್ಸನ್ನೇನೋ ಧಾರಾಳವಾಗಿ ಕೊಟ್ಟವ, ಶರೀರವೇಕೆ ಕೊಡಲಾರೆ? ನಿನ್ನಿಂದ ಅತಿಯಾದದ್ದೇನನ್ನೂ ಬಯಸುತ್ತಿಲ್ಲ. ನನ್ನಾಸೆ ಹಾಗೂ ನನಗೆ ಬೇಕಿರುವುದು ಸಂಪೂರ್ಣವಾದ ಒಂದು `ಹೆಣ್ಣಿನ ಜೀವನ’ ಮಾತ್ರ. ದಯವಿಟ್ಟು ಇಲ್ಲವೆನ್ನದೆ ಅನುಗ್ರಹಿಸು ದೇವ, ಬದುಕನ್ನು ಪ್ರೀತಿಸುವ ನನಗೊಂದು ದಾರಿತೋರಿ ಅತೃಪ್ತಮನದ ಈ ಅತಂತ್ರ ಸ್ಥಿತಿಯ ತೊಳಲಾಟದಿಂದ ಮುಕ್ತಿಗೊಳಿಸು…..” ದೀನಳಾಗಿ ಬೇಡಿಕೊಂಡೆ. ಪರಮಾತ್ಮನಿಗೆ ಕರುಣೆಯುಕ್ಕಿರಬೇಕು-
“ಅತೃಪ್ತ ಆತ್ಮಗಳಿಗೆ ಮತ್ತೊಂದು ಅವಕಾಶ ಇದ್ದೇ ಇರುತ್ತದೆ. ಆದರೆ ನೀನು ಅದನ್ನೂ ಕಳೆದುಕೊಂಡಿರುವೆ. ನಿನಗೆ ನಿಜಕ್ಕೂ ಅನ್ಯಾಯವಾದ ಕಾರಣ ಕಟ್ಟಕಡೆಯದಾಗಿ ಇದೋ ನಿನಗೀ ಅವಕಾಶ. ಹೋಗು, ನಿನಗಿಷ್ಟವಾದ ಕಡೆ ನಿನಗೆ ಬೇಕಾದ ಶರೀರ ನೀನೇ ಹುಡುಕಿಕೋ…… ಆ ಸ್ವಾತಂತ್ರ್ಯ ನಿನಗಿತ್ತಿದ್ದೇನೆ. ಆದರೆ ನೆನಪಿರಲಿ, ಇದು ನಿನಗೆ ಕಡೆಯ ಅವಕಾಶ…..” ಎಚ್ಚರಿಸಿ ಪುನಃ ಶಿಲೆಯಾದ ದೇವನಿಗೆ ಭಕ್ತಿಯಿಂದ ನಮಸ್ಕರಿಸಿ ಹುಮ್ಮಸ್ಸಿನಿಂದಲೇ ಹೊಸ ಶರೀರದ, ಹೊಸ ಬದುಕಿನ ಅನ್ವೇಷಣೆಯಲ್ಲಿ ಹೊರಟೆ.
***
ಆ ಮನೆಯೆಡೆ ನನ್ನ ಲಕ್ಷ್ಯ ಸೆಳೆದಂತಾಗಿ ಸಮೀಪಿಸಿ ಕೂಲಂಕಶವಾಗಿ ಗಮನಿಸತೊಡಗಿದೆ. ಬಂಗಲೆಯಂತಿರುವ ಆ ಮನೆ, ನೋಟಮಾತ್ರದಿಂದಲೇ ತಿಳಿಯಲ್ಪಟ್ಟಿತ್ತು ಅಷ್ಟೈಶ್ವರ್ಯದ ಸಿರಿವಂತರದ್ದು ಎಂದು. ಮೇಲಾಗಿ ಯಾವುದೋ ಸಮಾರಂಭದ ಲಕ್ಷಣ. ಆದರೆ ಕಾರಣ ತಿಳಿದಾಗ ಪಿಚ್ಚೆನ್ನಿಸಿತು. ಅಲ್ಲಿ ಗಂಡು ಸಂತಾನಕ್ಕಾಗಿ ಹೋಮ ನಡೆದಿತ್ತು! ಲಕ್ಷಣವಾದ ಸ್ಥಿತಿವಂತರ ಆ ಮನೆ ಅದೇಕೋ ನನ್ನಲ್ಲಿ ಅವ್ಯಕ್ತ ಭಾವ ಹುಟ್ಟಿಸಿಬಿಟ್ಟಿತ್ತು. ಅಲ್ಲೇ ಜನ್ಮಿಸುವ ಉತ್ಕಟ ಬಯಕೆಯಿದ್ದರೂ ಹೆಣ್ಣಿನ ಆತ್ಮ ನಾನು….. ನಾನಿಲ್ಲಿ ಬೇಡದ ಅತಿಥಿ. ಅಂದಮೇಲೆ ನನಗಿಲ್ಲೇನು ಕೆಲಸ…… ಇನ್ನೇನು ಹೊರಟುಬಿಡಬೇಕೆನ್ನುವಷ್ಟರಲ್ಲಿ ಆ ಮುದ್ದು ಮಕ್ಕಳು ಕಂಡವು. ಮುದ್ದುಮುದ್ದಾಗಿ ಹರಟುತ್ತಿದ್ದವು. ಚೆಂದದ ಉಡುಗೆತೊಡುಗೆ, ಬಳೆ, ಸರ ಓಲೆ ಧರಿಸಿ ಆಡಿಕೊಳ್ಳುತ್ತಿದ್ದ ಆ ಮೂರು ಹೆಣ್ಣುಮಕ್ಕಳು ಆತ್ಮೀಯತೆ ಹುಟ್ಟಿಸಿಬಿಟ್ಟವು. ಆ ಮನೆಯ ಮಕ್ಕಳಾದ ಅವರ ನಡೆನುಡಿಗೆ ಮರುಳಾದ ನಾನು ಮೋಡಿಗೊಳಗಾದಂತೆ ಅವರೊಟ್ಟಿಗೆ ಹರಟುತ್ತ ಆಡತೊಡಗಿದೆ. `ನನ್ನವರಿವರು’ ಎಂಬ ಭಾವಕ್ಕೊಳಗಾಗಿ ಸಣ್ಣವಳ ಹಾಲ್ಗೆನ್ನೆ ಸವರಿದೆ. ಕೆನ್ನೆ ಸೋಕಿದ ಅನುಭವವಾಗಲಿಲ್ಲ. ದುಂಬಿಯಂತಹ ಕಪ್ಪು ಕಣ್ಣುಗಳು ನನ್ನನ್ನು ಅಯಸ್ಕಾಂತದಂತೆ ಸೆಳೆದುಬಿಟ್ಟವು. ನಾನಿಲ್ಲೇ ಜನಿಸಬೇಕು ….. ಆದರಿದು ಹೇಗೆ ಸಾಧ್ಯ? ಖಂಡಿತವಾಗಿಯೂ ನಾನಿಲ್ಲಿ ಬೇಡದವಳು. ಇವರೆಲ್ಲ ನನ್ನವರೆಂಬ ಭಾವ ಅದಾಗಲೇ ಮೂಡಿಬಿಟ್ಟಿದೆ ನನ್ನಲ್ಲಿ. ಇಲ್ಲಿಂದ ಹೋಗಲು ಮನಸ್ಸಾಗುತ್ತಿಲ್ಲ….. ಏನಾದರಾಗಲಿ, ನಾನಿಲ್ಲೇ ಜನಿಸಬೇಕು….. ಇದೇ ನನ್ನ ಮನೆ….. ತುಡಿತವೇ ಮೇಲುಗೈ ಸಾಧಿಸಿತು.
***
ಅಲ್ಲಿ ನನಗಾವ ಭವಿಷ್ಯವೂ ಇರಲಿಲ್ಲ. ಆದರೂ ಆ ಮುದ್ದು ಮಕ್ಕಳೊಡನೆ ಒಡನಾಡುವ ತವಕ ಹತ್ತಿಕ್ಕಲಾರದೆ ಅವರೊಟ್ಟಿಗೆ ಇರತೊಡಗಿದೆ. ಆಟ ಪಾಠ ವಿಹಾರ ಎಲ್ಲವೂ ಒಟ್ಟಿಗೇ ಮಾಡುತ್ತಿದ್ದೆವು. ಮುದ್ದಾಗಿ ಹಾಡಿ ನರ್ತಿಸುತ್ತಾ ಅವರು ಎಲ್ಲರ ಚಪ್ಪಾಳೆ ಗಿಟ್ಟಿಸುತ್ತಿದ್ದರು. ನಾನೂ ಉತ್ಸಾಹದಿಂದ ಅದನ್ನೆಲ್ಲಾ ಅವರಂತೆಯೇ ಮಾಡುತ್ತಿದ್ದೆ. ಕಾತರದಿಂದ ಹೊಗಳಿಕೆ, ಚಪ್ಪಾಳೆಗೆ ಕಾದದ್ದೊಂದೇ ಬಂತು. ಬಯಸಿದ ಪ್ರತಿಕ್ರಿಯೆ ಸಿಗುತ್ತಿರಲಿಲ್ಲ. ಅಷ್ಟಕ್ಕೂ ನನ್ನನ್ನು ಯಾರು ಹೊಗಳಿಯಾರು? ಎಷ್ಟೆಂದರೂ ಅಶರೀರಿ ನಾನು. ಇಷ್ಟು ದಿನಗಳಿಂದ ಒಡನಾಡಿದ್ದರೂ ಆ ಮಕ್ಕಳಿಗೇ ನನ್ನಿರವು ತಿಳಿದಿರಲಿಲ್ಲ. ಅವರನ್ನಾಗಲೇ ಅಕ್ಕಂದಿರನ್ನಾಗಿ ಮಾಡಿಕೊಂಡುಬಿಟ್ಟಿದ್ದೆ. ಅಂದಮೇಲೆ ಆಕೆಯೂ ನನ್ನ ಅಮ್ಮನೇ ಅಲ್ಲವೇ……. ಅಮ್ಮನ ಸನಿಹವೂ ಅಪ್ಯಾಯಮಾನವಾಗಿತ್ತು. ಅವರೆಲ್ಲರೊಟ್ಟಿಗೆ ಆನಂದದಿಂದ ಇದ್ದೆನಾದರೂ ಆತ್ಮತೃಪ್ತಿ ಮಾತ್ರ ಶೂನ್ಯವಾಗಿತ್ತು.
***
ಅದೊಂದು ದಿನ ಅಮ್ಮ ತಲೆಸುತ್ತಿ ಬಿದ್ದರೆಂದು ಡಾಕ್ಟರ್ರನ್ನು ಕರೆಸಲಾಗಿತ್ತು. ಆತಂಕದಲ್ಲಿ ನಾನಲ್ಲೇ ಸುಳಿದಾಡಿದ್ದೆ. ಡಾಕ್ಟರ್ ಹೇಳುತ್ತಿದ್ದರು….. ಅಮ್ಮ ಬಸುರಿ ಎಂದು. ಈ ಸುಸಂಧರ್ಭ ಬಿಡಲು ಸಾಧ್ಯವೇ, ಗಡಬಡಿಸಿ ಹಿಂದುಮುಂದು ಯೋಚಿಸದೇ ಅಮ್ಮನ ಗರ್ಭದಲ್ಲಿ ನುಸುಳಿಬಿಟ್ಟೆ! ಅರೇ…. ನನ್ನ ಅದೃಷ್ಟವೋ ಅದೃಷ್ಟ! ಎರಡು ಭ್ರೂಣಗಳಿದ್ದವು ಅಲ್ಲಿ. ಒಂದು ಹೆಣ್ಣಿನದ್ದಾದರೆ ಇನ್ನೊಂದು ಗಂಡಿನದ್ದು. ನಾ ಬಯಸಿದ್ದದ್ದು ಈಡೇರಿತ್ತು. ತಡಮಾಡದೇ ಆ ಹೆಣ್ಣಿನ ಶರೀರ ಹೊಕ್ಕೆ. ಅಂದರೆ ಈ ಬಾರಿ ನಿಜಕ್ಕೂ ಅದೃಷ್ಟ ನನ್ನದೇ…… ಎರಡೂ ಹೆಣ್ಣಾಗಿದ್ದರೆ ಉಳಿಗಾಲವೆಲ್ಲಿತ್ತು ನನಗೆ? ಅಬ್ಬ! ಅಂತೂ ಬಚಾವಾದೆ. ಆ ಗಂಡುಭ್ರೂಣ ನೋಡಿದೊಡನೆ ಪ್ರೀತಿ ವಾತ್ಸಲ್ಯ ಉಕ್ಕಿತು. ಇವನಿಂದಲೇ ನನಗೆ ಜೀವದಾನ ಹಾಗೂ ಮನ್ನಣೆ. ಮೇಲಾಗಿ ಕುಲಪುತ್ರನ ಜೊತೆಗೂಡಿ ಬಂದವಳೆಂದು ನನಗೂ ಆದರ ಪ್ರೀತಿ ತೋರುತ್ತಾರೆ…… ಇನ್ನು ಈ ಜನ್ಮಕ್ಕಂತೂ ಧಕ್ಕೆಯಿಲ್ಲ. ಮುಂಬರುವ ಚಂದದ ದಿನಗಳ ಕನಸಿನ ಲೋಕದಲ್ಲಿ ಮುಳುಗಿದೆ…. ನಿಶ್ಚಿಂತಳಾದೆ.
***
ಡಾಕ್ಟರ್ರಲ್ಲಿಗೆ ಹೋಗಿ ಪರೀಕ್ಷಿಸಿಕೊಂಡು ಬಂದ ಅಪ್ಪ ಅಮ್ಮನ ಸಂತೋಷ ಎಲ್ಲೆ ಮೀರಿತ್ತು. ಹೋಮ ಹವನದ ಪರಿಣಾಮವಾಗಿ ಹುಟ್ಟಲಿರುವ ಮಗನ ಬಗ್ಗೆಯೇ ಅತೀ ಕಾಳಜಿ, ಸಂಭ್ರಮ. ಜೊತೆಯಲ್ಲೇ ಇರುವ ನನ್ನ ಇರುವಿಕೆ ತಿಳಿದಿದ್ದರೂ ನನ್ನ ಬಗ್ಗೆ ಚಕಾರವಿಲ್ಲ. ನನ್ನ ಅಸ್ತಿತ್ವವೇ ಗೌಣವಾಗಿತ್ತು. ಪಾಪ…..! ಅವರೆಲ್ಲರ ಸಂಭ್ರಮವೂ ಸಹಜವೇ. ಸಮಾಧಾನಿಸಿಕೊಂಡೆ. ಅಮ್ಮನಿಗೋ ಉಪಚಾರವೇ ಉಪಚಾರ. ದಿನವೂ ಭೂರಿ ಭೋಜನ. ನಾನೂ, ತಮ್ಮನೂ ರುಚಿಕಟ್ಟಾದ ಬಗೆಬಗೆಯ ತಿನಿಸನ್ನು ಆಸ್ವಾದಿಸುತ್ತಿದ್ದೆವು.
“ತಮ್ಮನಿಗೆ ಆದಿತ್ಯ ಎಂದು ಕರೆಯುತ್ತೇನೆ….” ದೊಡ್ಡಕ್ಕ ತನುವಿನ ಮಾತು ಕೇಳಿಸಿತು.
“ದಿನವೂ ನಾನೇ ಅವನಿಗೆ ಸ್ನಾನ ಮಾಡಿಸುತ್ತೇನೆ….” ಎರಡನೇ ಅಕ್ಕ ಅನುವಿನ ಧ್ವನಿಯೇ ಹೌದು.
“ನನ್ನ ಕಾಲಮೇಲೆಯೇ ಮಲಗಿಸಿಕೊಳ್ಳುತ್ತೇನೆ……” ಚೋಟುದ್ದದ ಕಿರಿ ಅಕ್ಕ ಮಾನುವಿನ ಮುದ್ದಿನ ಧ್ವನಿ.
“ಸರಿಯೇ ಸರಿ, ನನಗೇನೇನು ಮಾಡುವಿರಿ…..” ಚೀರಿದೆ. ಕಾತರದಿಂದ ಆಲಿಸಿದೆ….. ನನ್ನ ಕುರಿತಾಗಿ ಯಾವ ಮಾತೂ ಇಲ್ಲ. ನವಿರಾದ ಹಾಸ್ಯ-ಸಂಭಾಷಣೆ ಸದಾ ತಮ್ಮನ ಬಗ್ಗೆಯೇ. ನಿರಂತರವಾಗಿ ನಡೆಯುವ ಮಾತುಕತೆಗಳಲ್ಲಿ ಕೇಂದ್ರಬಿಂದು `ತಮ್ಮ’ನೇ ಆಗಿರುವಾಗ ನನ್ನ ಇರುವಿಕೆ ಹೇಗೆ ತಿಳಿದೀತು ಅವರಿಗೆ? ಎಷ್ಟೇ ದೊಡ್ಡಮನಸ್ಸು ತೋರಿ ಸಮಾಧಾನಿಸಿಕೊಂಡರೂ ಕೆಲವೊಮ್ಮೆ ಅಸಹನೆಯಿಂದ ಅಸೂಯೆ ಇಣುಕುತ್ತಿತ್ತು. ಈಗ ಆದದ್ದೂ ಅದೇ. ಸಿಟ್ಟಿನಲ್ಲಿ ಜೋರಾಗಿ ಒದ್ದುಬಿಟ್ಟೆ. ತಮ್ಮ ಮುಲುಗಿದ. ಆ ಮುಲುಗಾಟಕ್ಕೆ ಹೃದಯ ದ್ರವಿಸಿತು…. ಅಯ್ಯೋ ದೇವರೇ! ನಾನೇನು ಮಾಡಿಬಿಟ್ಟೆ…… ನನ್ನ ಬಗ್ಗೆಯೇ ಅಸಹ್ಯವೆನ್ನಿಸಿತು. ಪಾಪ! ಅವನದ್ದೇನು ತಪ್ಪು? ಎಷ್ಟೆಂದರೂ ಅವ ನನ್ನ ಪ್ರೀತಿಯ ತಮ್ಮನೇ……. ಅಸೂಯೆ ಬದಿಗೊತ್ತಿ ಸಮಾಧಾನಿಸಿಕೊಂಡೆ. ಪ್ರೀತಿಗಾಗಿ ಹಂಬಲಿಸಿ ದೊರಕದಿದ್ದಾಗ ಆದ ನಿರಾಶೆ ಸಿಟ್ಟು-ದ್ವೇಷಕ್ಕೆ ತಿರುಗಿತ್ತಾದರೂ ಅದು ಕ್ಷಣಿಕವಾಗಿತ್ತು.
***
ದಿನಗಳುರುಳಿದ್ದವು. ಇಬ್ಬರೂ ಒಟ್ಟಿಗೇ ಬೆಳೆಯುತ್ತಿದ್ದೆವು. ತಮ್ಮನೊಡನೆ ಆಡಿಕೊಳ್ಳುತ್ತಿದ್ದೆ. ಅಪ್ಪ, ಅಮ್ಮ, ಅಕ್ಕಂದಿರು ಮತ್ತು ತಮ್ಮನೊಡನೆ ಮುಂಬರುವ ದಿನಗಳ ಸುಖದ ಕಲ್ಪನೆಯೇ ಅಪ್ಯಾಯಮಾನವಾಗಿತ್ತು. ಈಗಲೂ ನನಗೆ ಸಮುದ್ರದ ಪರಿಸರದಲ್ಲಿ ಹಕ್ಕಿಯಂತೆ ಹಾರಾಡುವ ಕನಸು ಬೀಳುತ್ತಿತ್ತು. ಆದರೀಗ ಕನಸಿನ ಅಂತ್ಯ ಬದಲಾಗಿದೆ. ಕನಸಲ್ಲಿ ನಾನು ಎಷ್ಟು ಹೊತ್ತು ಬೇಕಾದರೂ ಹಾರಾಡುತ್ತೇನೆ…. ಮನಬಂದಾಗ ಹಾರಾಟ ನಿಲ್ಲಿಸುತ್ತೇನೆ.
***
ನಾನು ಸುಂದರ ಲೋಕಕ್ಕೆ ಬರುವ ದಿನ ಸಮೀಪಿಸಿತ್ತು. ಅಮ್ಮನ ಕಾಲುಗಳು ಊದತೊಡಗಿದ್ದವು. ರಕ್ತದೊತ್ತಡ ಏರಿತ್ತಂತೆ, ಡಾಕ್ಟರ್ ಎಚ್ಚರದಿಂದಿರುವಂತೆ ಸೂಚಿಸಿದ್ದರು. ಹೆರಿಗೆಗೆ ಹದಿನೈದು ದಿನಗಳಿರುವಾಗ ಅಮ್ಮನನ್ನು ಡಾಕ್ಟರ್ ಸಲಹೆಯಂತೆ ಆಸ್ಪತ್ರೆಗೆ ದಾಖಲಿಸಿದ್ದರು. ಅವರ ಮುತುವರ್ಜಿಯಲ್ಲಿ ಅಮ್ಮ ಜೋಪಾನವಾಗಿದ್ದರು. ನಾನೇನೋ ಆರೋಗ್ಯದಿಂದಿದ್ದೆ. ಆದರೆ ತಮ್ಮನ ಸ್ಥಿತಿ ನನ್ನನ್ನು ಚಿಂತಿಸುವಂತೆ ಮಾಡಿತ್ತು. ಏನೋ ತಳಮಳ….. ಇತ್ತೀಚೆಗೇಕೆ ಇವ ನನ್ನಂತೆ ಮಿಸುಕಾಡುತ್ತಿಲ್ಲ… ಮೊದಲೆಲ್ಲ ಎಷ್ಟು ಚೆನ್ನಾಗಿ ನನ್ನೊಡನೆ ಆಡಿಕೊಂಡಿದ್ದ. ಈಗೀಗ ಅವನ ಉಸಿರಾಟವೂ ಕ್ಷೀಣವಾಗಿದೆಯಲ್ಲ. ಯಾಕೋ ಅವ್ಯಕ್ತವಾದ ಭಯ ಜೀವವನ್ನು ಹಿಂಡುತ್ತಿದೆ… ದೇವರೇ! ಇವನಿಗೇನೂ ಕೆಡುಕಾಗದಿರಲಿ…. ಆಗಾಗ ತಮ್ಮನನ್ನು ಮಾತಾಡಿಸುತ್ತಿದ್ದೆ. ಪ್ರಯತ್ನಪೂರ್ವಕವಾಗಿ ಅಲುಗಿಸುತ್ತಿದ್ದೆ. ಅದಕ್ಕವ ಹೌದೋ ಅಲ್ಲವೋ ಎಂಬಂತೆ ಸ್ಪಂದಿಸಿದ್ದ. ನನ್ನ ಆತಂಕ ಹೆಚ್ಚಾಗಿ ತಲ್ಲಣಗೊಂಡಿದ್ದೆ. ಆಗಬಾರದ್ದೇನಾದರೂ ಆದಲ್ಲಿ ಅಷ್ಟೆಲ್ಲಾ ಪೂಜೆಪುನಸ್ಕಾರ ಮಾಡಿ ಮಗನನ್ನು ಬಯಸುತ್ತಿರುವವರಿಗೆ ಎಂತಹ ಆಘಾತ. ಅವರಿಗಾಗಿ ಸಂಕಟಪಟ್ಟೆ. ಬೇಡ… ಯಾವ ಕೆಡುಕೂ ಘಟಿಸುವುದು ಬೇಡ.
ಪ್ರೀತಿ ವಾತ್ಸಲ್ಯದ ಜೊತೆಗೆ ಖಂಡಿತವಾಗಿಯೂ ಇಲ್ಲಿ ಸ್ವಾರ್ಥವಿತ್ತು. ಇವನಿದ್ದರೆ ನಾನಿದ್ದಂತೆ. ಇವನಿಲ್ಲದಿದ್ದರೆ ನಾನೇನೂ ಅಲ್ಲ. ಗೌಣವಾಗಿರುವ ನನ್ನ ಅಸ್ತಿತ್ವಕ್ಕೆ ಬೆಲೆಯೇ ಇರುವುದಿಲ್ಲ. ಮೇಲಾಗಿ ಕುಲಪುತ್ರನನ್ನು ನುಂಗಿಕೊಂಡು ಹುಟ್ಟಿದವಳು ಎನ್ನುವ ಹಣೆಪಟ್ಟಿ ಹೊತ್ತರೆ ನನ್ನನ್ನು ಬದುಕಲು ಬಿಡುವರೇ? ಜರೆತದಿಂದಲೇ ಸಾಯಿಸಿಯಾರು
ಭಯದಿಂದ ತಮ್ಮನನ್ನು ಅಲುಗಿಸಿದೆ. ವಾತ್ಸಲ್ಯದಿಂದ ಮೈದಡವಿದೆ… ಇವನೇಕೆ ಸ್ಪಂದಿಸುತ್ತಿಲ್ಲ…. ಅಯ್ಯೋ! ಇದೇನಾಗಿಹೋಯಿತು… ನನ್ನ ಹೆದರಿಕೆ ನಿಜವಾಗಿಬಿಟ್ಟಿತೇ?… ಸಂಕಟ ತಳಮಳ ಹೆಚ್ಚಿತು. ಇಷ್ಟು ದಿನಗಳು ಎಲ್ಲವನ್ನೂ ಹಂಚಿಕೊಂಡು ಒಡನಾಡಿದ್ದೆ. ಅವನೊಡನೆ ಪ್ರೀತಿ ವಾತ್ಸಲ್ಯದ ಬಾಂಧವ್ಯ ಬೆಸೆದಿತ್ತು. ಸುಂದರವಾದ ಬದುಕಿನ ನಿರೀಕ್ಷೆಯಲ್ಲಿದ್ದೆ. ಇಲ್ಲಿತನಕ ಎಲ್ಲವೂ ನಿರಾತಂಕವಾಗಿ ಸಾಗಿತ್ತು. ಆದರೀಗ…? ಇಷ್ಟಪಟ್ಟು ಆರಿಸಿಕೊಂಡ ಈ ನನ್ನ ಕಡೆಯ ಜನ್ಮವೂ ವ್ಯರ್ಥವೇ… ಕವಡೆಕಾಸಿನ ಕಿಮ್ಮತ್ತೂ ದೊರಕದಿದ್ದಲ್ಲಿ ಈ ಜನ್ಮದಿಂದೇನು ಪ್ರಯೋಜನ… ಪ್ರೀತಿ ವಾತ್ಸಲ್ಯದ ಸುಂದರ ಬದುಕಿನ ನನ್ನ ಕನಸು ನುಚ್ಚುನೂರಾಗುವುದೇ… ಇಲ್ಲ… ಎಂದಿಗೂ ಇಲ್ಲ! ನನ್ನಾಸೆ ಮರೀಚಿಕೆಯಾಗಲು ನಾ ಬಿಡಲಾರೆ. ಆದರೆ ನನ್ನ ಪ್ರೀತಿಯ ತಮ್ಮನೂ ಬೇಕು ನನಗೆ. ಮೇಲಾಗಿ ಅವನಿಲ್ಲದೇ ನಾನಿಲ್ಲ…
***
ಹೂವು, ಮುತ್ತಿನ ಹಾರಗಳು ಮೃದು ರೇಷ್ಮೆ ವಸ್ತ್ರಗಳಿಂದ ಅಲಂಕೃತಗೊಂಡ ತೊಟ್ಟಿಲು ಬಲು ಸುಂದರವಾಗಿತ್ತು. ಹಬ್ಬದ ವಾತಾವರಣದಿಂದ ಕಂಗೊಳಿಸುತ್ತಿದ್ದ ಆ ಮನೆ ಜನರಿಂದ ಗಿಜಿಗುಡುತ್ತಿತ್ತು. ಅಲ್ಲಿ ಮಗುವಿನ ನಾಮಕರಣ ಹಾಗೂ ತೊಟ್ಟಿಲ ಶಾಸ್ತ್ರದ ಸಂಭ್ರಮ…
“ಕಮಲಾ… ಏ… ಕಮಲಾ… ಆಯಿತೇನೆ? ಬೇಗ ಬಾ. ಮುಹೂರ್ತ ಮೀರುತ್ತಿದೆ…” ಬಂದವರನ್ನು ಉಪಚರಿಸುತ್ತ ಷೋಡಶಿಯರನ್ನೂ ಮೀರಿಸುವ ಉತ್ಸಾಹದಿಂದ ರೇಷ್ಮೆಸೀರೆಯುಟ್ಟು ಸರಬರ ಓಡಾಡುತ್ತ ಬಂದವರನ್ನು ಉಪಚರಿಸುತ್ತಿರುವ ಕಾಶೀಬಾಯಿ ಸೊಸೆಯನ್ನು ಅವಸರಿಸಿದರು. ಹೆಮ್ಮೆಯ ನಗೆ ಸೂಸುತ್ತ ಮೃದು ರೇಷ್ಮೆವಸ್ತ್ರದಿಂದ ಅಲಂಕರಿಸಲ್ಪಟ್ಟ ಶಿಶುವನ್ನು ಎದೆಗಪ್ಪಿಕೊಂಡು ಸಾವಕಾಶವಾಗಿ ಹೊರಬಂದಳು ಕಮಲಾದೇವಿ. ಆಕೆಯ ಸುತ್ತಲೂ ಸಡಗರದಿಂದ ಸುಳಿದಾಡುತ್ತಿರುವ ಅನು, ತನು, ಮಾನು. ಹೊರಬಂದ ಹೆಂಡತಿಯನ್ನು ನೋಡಿ ಹರಟುತ್ತಿದ್ದ ಗುಂಪನ್ನು ಬಿಟ್ಟು ಧಾವಿಸಿ ಬಂದ ಮೋಹನರಾವ್ರ ಮುಖದಲ್ಲಿ ಸಾರ್ಥಕತೆಯಿತ್ತು. ನಾಮಕರಣದ ವಿಧಿವಿಧಾನಗಳು ಪ್ರಾರಂಭವಾಗಿ ದೇವರ ವರಪ್ರಸಾದವಾದ ಶಿಶುವಿಗೆ ಕುಲದೇವರ ಹೆಸರು `ಆದಿಶೇಷ’ ಎಂದಿಟ್ಟರೂ ಮಕ್ಕಳ ಆಸೆಯಂತೆ ಕರೆಯುವ ಹೆಸರು ‘ಆದಿತ್ಯ’ ಎಂದು ಘೋಷಿಸಲಾಯಿತು. ತೊಟ್ಟಿಲಶಾಸ್ತ್ರ ಅದ್ದೂರಿಯಾಗಿ ನೆರವೇರಿತು. ಅಜ್ಜಿ ಕಾಶೀಬಾಯಿ ಮನೆತನದ ಗೌರವದ ಕುರುಹಾಗಿ ಚಿನ್ನದ ಸರವನ್ನು ಮಗುವಿಗೆ ತೊಡಿಸುವಾಗ ಹೆಮ್ಮೆಯಿಂದ ಬೀಗಿದರು. ಅಪ್ಪ ಮೋಹನರಾವ್ ಮಗುವಿಗೆ ಚಿನ್ನದ ಉಂಗುರ, ಬಳೆಗಳನ್ನು ತೊಡಿಸಿದರು. ಉಡುಗೊರೆಗಳ ಮಹಾಪೂರವೇ ಹರಿದಿತ್ತು. ಮಗುವಿನ ಮೃದು ಕೆನ್ನೆಯನ್ನು ಅನೇಕ ಕೈಗಳು ಸವರುತ್ತಿದ್ದವು. ಇನ್ಯಾರೋ ತೊಟ್ಟಿಲು ತೂಗುತ್ತಿದ್ದರು. ಒಟ್ಟಿನಲ್ಲಿ ಬಲು ಸಂಭ್ರಮದ ವಾತಾವರಣ…
“ಕುಲವ ಬೆಳಗುವ ಕುಲದೀಪಕನೇ
ದೇವರ ವರಪ್ರಸಾದ ವಂಶೋದ್ಧಾರಕನೆ…”
ಆರತಿ ಎತ್ತುತ್ತಾ ಹೆಂಗಸರು ಸಂಪ್ರದಾಯದ ಹಾಡನ್ನು ರಾಗಬದ್ಧವಾಗಿ ಹಾಡುತ್ತಿದ್ದರು.
“ದೇವರು ದೊಡ್ಡೋನು, ಅವನ ಹಾರೈಕೆಯಿಂದಲೇ ಇವನು ಬದುಕಿ ಉಳಿದದ್ದು. ಜಾತಕ ತೋರಿಸಿದಾಗ ಕೆಟ್ಟ ಕಂಟಕವಿತ್ತೆಂದು ಜ್ಯೋತಿಷಿಗಳು ಹೇಳಿದ್ದು ಕೇಳಿಯೇ ಸಂಕಟವಾಗಿತ್ತು. ಆದರೆ ಆ ದಯಾಮಯನ ಕೃಪಾಕಟಾಕ್ಷದಿಂದಲೇ ಇವನಿಗೇನೂ ಆಗದೇ ಇದ್ದದ್ದು. ಸದ್ಯಃ, ಆ ಹೆಣ್ಣು ಮಗುವನ್ನು ನುಂಗಿಕೊಂಡು ಹೋಗುವುದರಲ್ಲೇ ಕಂಟಕ ನಿವಾರಣೆಯಾಯಿತು. ಒಂದುವೇಳೆ ಇವನಿಗೇ ಏನಾದರೂ ಆಗಬಾರದ್ದು ಆಗಿದ್ದಿದ್ದರೆ ನಾನು ಬದುಕುಳಿಯುವ ಮಾತೇ ಇರಲಿಲ್ಲ…” ಯಾರೊಡನೆಯೋ ಮಾತಾಡುತ್ತಿದ್ದ ಅಮ್ಮನ ಮಾತಿಗೆ ವಿಷಾದವೆನ್ನಿಸಿತು.
“ಅಮ್ಮ, ಇದೇ ಕಾರಣಕ್ಕಾಗಿಯೇ ಅಲ್ಲವೇ ತಮ್ಮನ ಬದುಕಿಗೆ ನಾನೇ ಸೂತ್ರಧಾರಳಾದದ್ದು. ನನ್ನವರಾದ ನಿಮ್ಮೆಲ್ಲರ ವೇದನೆ-ನಿರಾಶೆಯನ್ನೆಂದೂ ನಾನು ಬಯಸಿರಲಿಲ್ಲ. ನಿಮ್ಮೆಲ್ಲರ ಕೇಡು ಬಯಸದ್ದರಿಂದಲೇ ಅತೀವವಾಗಿ ಪ್ರೀತಿಸುತ್ತಿದ್ದ ನನ್ನ ದೇಹದ ಅವಸಾನಕ್ಕೆ ನಾನೇ ಕಾರಣಳಾದದ್ದು. ನಿನಗೆ ನನ್ನ ಮೇಲೆ ಪ್ರೀತಿ ಇದೆಯೋ ಇಲ್ಲವೋ, ನಿನ್ನ ನೆಮ್ಮದಿಗಾಗಿಯೇ ನಾನು ನನ್ನ ದೇಹತ್ಯಾಗ ಮಾಡಿಬಿಟ್ಟೆ. ತಮ್ಮನ ನಿರ್ಜೀವ ದೇಹ ಹೊಗುವಾಗ ಒಂದರೆಕ್ಷಣ ಜಿಜ್ಞಾಸೆ ಕಾಡಿತ್ತು. ಗಂಡುದೇಹದಲ್ಲಿ ಹೆಣ್ಣಿನ ಆತ್ಮವೇ… ಇದು ಸಾಧ್ಯವೇ… ಯಾಕಾಗಬಾರದು….? ಸದ್ಯದ ಈ ಪರಿಸ್ಥಿತಿಯಲ್ಲಿ ಹೆಣ್ಣಿನ ಹುಟ್ಟು ನಿಜಕ್ಕೂ ಸ್ವಾಗತಾರ್ಹವಾಗಿರಲಿಲ್ಲ. ಅಂಥಾದ್ದರಲ್ಲಿ ಮನ್ನಣೆ…? ಅಸಾಧ್ಯವಾಗಿತ್ತು. ದೇಹ ಯಾವುದಾದರೇನು ಬದುಕಬಹುದಲ್ಲ… ಬರೀ ಬದುಕೇನು… ರಾಜನಂತೆ ಮೆರೆಯಬಹುದು.
ನನ್ನ ಮೊದಲ ಜನ್ಮ ಅನಾರೋಗ್ಯದ ಕಾರಣ ಅಪೂರ್ಣವಾಗಿತ್ತು. ಎರಡನೇ ಜನ್ಮ ಹೆಣ್ಣೆಂಬ ಕ್ಷುಲ್ಲಕ ಕಾರಣಕ್ಕೆ ಕೊಲೆಯಾಗಿ ಹೋಗಿತ್ತು. ವಿಪರ್ಯಾಸವೆಂದರೆ ಬಯಸೀ ಬಯಸೀ ಆರಿಸಿಕೊಂಡ ಈ ಮೂರನೇ ಹಾಗೂ ಕಡೆಯ ಹೆಣ್ಣಿನ ಜೀವನವನ್ನು ಹೆಣ್ಣಾದ ನಾನೇ ಕೈಯಾರೆ ದೂರ ತಳ್ಳಿದ್ದೆ… ಬೇರೆ ದಾರಿಯಾದರೂ ಎಲ್ಲಿತ್ತು? ತರ್ಕಿಸುವುದೇ ಆದಲ್ಲಿ ನಾನು ಮಾಡಿದ್ದೇ ಸರಿ. ನನ್ನ ತೀರ್ಮಾನದಿಂದ ಅತೀವ ಸಂಕಟವಾಗಿತ್ತಾದರೂ ನನ್ನವರು ಕೊರಗುವುದನ್ನು ನಾನೆಂದೂ ಬಯಸಿರಲಿಲ್ಲ. ಆದರೀಗ ನನ್ನ ಈ ನಿಲವಿನಿಂದ ಎಲ್ಲರೂ ಸುಖಿಗಳು. ಇಲ್ಲಿ ಸ್ವಾರ್ಥಸಾಧನೆಯ ಜೊತೆಗೆ ಪರಾರ್ಥಸಾಧನೆಯೂ ಆದಂತಾಯಿತು. ತಮ್ಮನ ದೇಹದಿಂದಲೇ `ನಾನು’ ನಾನಾಗಿ ಯಾವ ನಿರ್ಭಂಧವೂ ಇಲ್ಲದೇ ರಾಜಾರೋಷದಿಂದ ಬದುಕನ್ನು ಅನುಭವಿಸಬಹುದು… ಅಕ್ಕಂದಿರಂತೆ ಚಂದದ ಬಳೆ ಸರ ಓಲೆ ಉಡುಗೆಗಳನ್ನು ತೊಟ್ಟು ಮೆರೆಯಬಹುದು… ಗಂಡಿನ ದೇಹದಲ್ಲಿದ್ದುಕೊಂಡೇ ಹೆಣ್ಣಾಗಿ ಬಾಳಿ ತೋರಿಸುತ್ತೇನೆ… ಸಂಪೂರ್ಣವಾಗಿ ಜೀವನವನ್ನು ಅನುಭವಿಸಿ ನನ್ನಾಸೆಗಳನ್ನು ತೀರಿಸಿಕೊಳ್ಳುತ್ತೇನೆ…
ಯಾವುದೋ ನಿಗೂಢಭಾವ ನಗೆಯುಕ್ಕಿಸಿತು. ಕುಹಕತನದಿಂದ ಸೊಟ್ಟಗೆ ನಕ್ಕೆ.
“ಮುಂಡೇದು, ನಿದ್ದೇಲಿ ಅದೆಷ್ಟು ಚೆನ್ನಾಗಿ ನಗ್ತಿದೆ… ಲೇ ಕಮಲಾ, ಸಮಾರಂಭ ಮುಗಿದ ಮೇಲೆ ರಂಗಜ್ಜಿನ ಕರೆಸಿ ದೃಷ್ಟಿ ತೆಗೆಸಬೇಕು… ತಿಳೀತಾ… ಇಂತಹ ಗದ್ದಲದಲ್ಲಿ ಮಕ್ಕಳು ರಚ್ಚೆಹಿಡಿಯುವುದು ಸರ್ವೇಸಾಮಾನ್ಯ. ಆದರೆ ನೋಡಿಲ್ಲಿ, ಇವನು ಹೇಗೆ ನಿದ್ದೆಯಲ್ಲೇ ನಗುತ್ತಿದ್ದಾನೆ. ಎಷ್ಟು ಹಾಯಾಗಿ ಮಲಗಿದ್ದಾನೆ. ಯಾಕೋ ಆದಿತ್ಯ ಪುಟ್ಟ ದೇವರ ಹತ್ತಿರ ಅದೇನ್ ಹೇಳ್ಕೊಂಡು ನಗ್ತಿದ್ದೀಯೋ… ಮುಂಡೇದು ನಗ್ತಿರೋದು ನೋಡು… ಛೀ… ಕಳ್ಳ…”