ಹಾಗೆ ನೋಡಿದರೆ ಆಂಬೆಯನ್ನು ತಿರಸ್ಕರಿಸುವುದಕ್ಕೆ ಕಾರಣ ನನ್ನ ಪ್ರತಿಷ್ಟೆ .ಅವಳ ಚಾರಿತ್ರ್ಯದ ಶಂಕೆಯಲ್ಲ…..
ಅಬ್ಬಾ! ಅವಳು ಹೊರಟೇ ಹೋದಳು.
ಆದರೆ ಹೋಗುವ ಮುನ್ನ ನನ್ನ ಅಂತರಂಗವನ್ನು ಕಲಕಿ ರಾಡಿಯೆಬ್ಬಿಸಿ ಇನ್ನೆಂದೆಂದೂ ಅವಳ ಮುಖವನ್ನು ಮರೆಯದಂತೆ ಅಚ್ಚೊತ್ತಿ ಹೋದಳು. ಹೋಗಿಯೇ ಬಿಟ್ಟಳು. ಇನ್ನೆಂದಿಗೂ ಹಿಂದಿರುಗಿ ಬಾರದವಳಂತೆ.
ಅವಳು ಅಂಬೆ. ಒಂದು ಸಮಯದಲ್ಲಿ ನನ್ನ ಪ್ರಣಯಿನಿಯಾಗಿದ್ದವಳು. ತನ್ನ ಸೌಂದರ್ಯದಿಂದ, ಸುಸಂಸ್ಕೃತ ನಡೆ-ನುಡಿಗಳಿಂದ ನನ್ನನ್ನು ಗೆದ್ದುಕೊಂಡಿದ್ದಳು. ಅವಳು ನನ್ನ ನಗರಕ್ಕೆ ನನ್ನ ಮನೆಗೆ ಬಂದರೆ ಸಾಕು ಎಂದು ಹಂಬಲಿಸಿದ್ದೆ. ಆದರೆ ಅವಳು ಬಂದಾಗ ಹೀಗೆ? ಒಮ್ಮೆ ಹಿಂದೆ ಹೋದರೆ ಸಾಕಪ್ಪಾ ಎಂದು ಅಂದುಕೊಂಡೆ.
ಅವಳು ಕಣ್ಣೀರು ಸುರಿಸಿ ಆರ್ತಳಾಗಿ ಹತ್ತಾರು ಬಾರಿ ಬೇಡಿಕೊಂಡಾಗಲೂ ಚಲಿಸದೇ ಕುಳಿತಿದ್ದವನು ನಾನು. ನನ್ನ ತಿರಸ್ಕಾರದ ನುಡಿಗಳನ್ನು ಕೇಳಿದ ಅವಳ ಮುಖದಲ್ಲಿ ಕಂಡ ಭಾವ! ಕ್ರೋಧ, ಉದ್ವಿಗ್ನತೆಯಲ್ಲೂ ಎಂತಹ ಉಜ್ಜ್ವಲ ಸೌಂದರ್ಯ! ಸಿಟ್ಟಿನಿಂದ ಅರಳಿದ ಕಣ್ಣುಗಳು, ಬೆವರಿ ಕೆಂಪೇರಿದ ಮುಖ, ಕಂಪಿಸುತ್ತಿದ್ದ ದೇಹ. ಹೆಚ್ಚು ಹೊತ್ತು ಹಾಗೆಯೇ ನೋಡುತ್ತಿದ್ದರೆ ನಾನೆಲ್ಲಿ ಕರಗಿಬಿಡುತ್ತೇನೋ ಎಂಬ ಭಯದಿಂದ ಅವಳನ್ನು ಹೊರಗೆ ಕಳುಹಿಸುವಂತೆ ಭಟರಿಗೆ ಆದೇಶಿಸಿದ್ದೆ.
“ಬೇಕಾಗಿಲ್ಲ ಭೂಪತಿ, ನಿನ್ನ ಎದೆಯಲ್ಲಿ ನನ್ನ ಕುರಿತು ಪ್ರೇಮಭಾವವಿಲ್ಲವೆಂದಮೇಲೆ ನಾನಿಲ್ಲಿ ಉಳಿಯುತ್ತೇನೆಂಬ ಭಯ ನಿನಗೆ ಬೇಡ. ರಾಜಭಟರಿಂದ ಹೊರಗೆ ತಳ್ಳಿಸಬೇಕಾಗಿಲ್ಲ. ಇದೋ ನಾನೇ ಹೊರಟೆ.” ಉಚ್ಚ ಸ್ವರದಲ್ಲಿ ಇಷ್ಟನ್ನಾಡಿ ಹೊರಟುಹೋದಳಾಕೆ.
ಹೀಗೆ ಹಿಂದಿರುಗಿಬಾರದಂತೆ ಹೊರಟೇಹೋದ ಮೇಲೆ ಈಗ ಇದೇನಾಗುತ್ತಿದೆ ನನಗೆ?
ಒಂದು ಗಳಿಗೆ ನನಗೆ ಬಿಡುಗಡೆಯ ಭಾವ ಬಂದದ್ದು ನಿಜ. ನಿರಾಳತೆಯ ಅನುಭವವಾದ ಬೆನ್ನಿಗೆ ಏನೋ ಶೂನ್ಯತೆ ಬಾಧಿಸತೊಡಗಿತ್ತು. ಯಾಕೆ ಹೀಗೆ? ಅಂತರಂಗದಲ್ಲೆದ್ದ ಬಿರುಗಾಳಿಯ ಬಿಸಿಗೆ ನಾನು ತತ್ತರಿಸಿಹೋದೆ. ನನ್ನ ಸ್ಥಿತಿಯನ್ನು ಗಮನಿಸಿದಂತೆ ಸಭಾಸದರೂ ಮೌನವಾಗಿದ್ದರು. ಆಡಳಿತಕ್ಕೆ ಸಂಬಂಧಿಸಿದ ಅಮಾತ್ಯರ ಪ್ರಶ್ನೆಗೆ ಏನೋ ಉತ್ತರಿಸಿದೆ. ಅವರು ಅಚ್ಚರಿಯಿಂದ ನನ್ನತ್ತ ನೋಡಿದಾಗಲೇ ನಾನೇನೋ ಅಸಂಬದ್ಧ ನುಡಿಯಾಡಿದೆನೆಂದು ಅರಿವಿಗೆ ಬಂತು. ಕೂಡಲೇ ರಾಜಕಾರ್ಯಗಳನ್ನೆಲ್ಲ ಮರುದಿನಕ್ಕೆ ಮುಂದೂಡಿ ಸಭಾವಿಸರ್ಜನೆಗೆ ಅನುಮತಿ ನೀಡಿದೆ. ಅಂತಃಪುರಕ್ಕೆ ಬಂದೆ.
***
ಅಂತಃಪುರದಲ್ಲಿ ಸುಖಾಸನದಲ್ಲಿ ಕುಳಿತ ನನಗೆ ಕಣ್ಣುಮುಚ್ಚಿದರೂ, ತೆರೆದರೂ ಅವಳ ಕಣ್ಣೀರು ತುಂಬಿದ ಮುಖವೇ ಕಾಣಿಸುತ್ತಿತ್ತು. ನಾನು ಅವಳಲ್ಲಿ ಪರುಷವಾಕ್ಯಗಳನ್ನಾಡಿ ನೋಯಿಸಿದ್ದು ಸರಿಯಲ್ಲವೇನೋ ಅಂತನಿಸುವುದಕ್ಕೆ ತೊಡಗಿತು. ಅವಳನ್ನು ಬೇಡವೆಂದು ದೂರಮಾಡುವ ಉದ್ದೇಶವಿದ್ದರೂ ಅವಮಾನಿಸಿ ಕಳುಹಿಸಬೇಕಿರಲಿಲ್ಲ. `ನನಗೆ ನೀನು ಬೇಡ’ ಎಂಬ ಒಂದೇ ವಾಕ್ಯ ಸಾಕಾಗುತ್ತಿತ್ತು. ನಾನು ಸೌಭದ ರಾಜನಿದ್ದೆ. ಅದು ನನ್ನ ಸಭಾಸ್ಥಾನ. ನನ್ನನ್ನು ಮೀರಿ ಅಲ್ಲಿ ಯಾವ ಕಲಾಪವೂ ನಡೆಯುವುದು ಸಾಧ್ಯವಿರಲಿಲ್ಲ. ಹಾಗಾಗಿ ಅವಳನ್ನು ತಿರಸ್ಕರಿಸುವಾಗ ಕೋಪಿಸಿಕೊಂಡು ಕೆಡುನುಡಿಯಾಡಿ ನೋಯಿಸಬೇಕಿರಲಿಲ್ಲವೆಂದು ತೀವ್ರವಾಗಿ ಅನಿಸತೊಡಗಿತು. ಆದರೇನು? ಎಲ್ಲ ಮುಗಿದುಹೋಯಿತು.
ಅವಳು ಕಾಶೀರಾಜಪುತ್ರಿ. ಅಂಬೆ. ಮೂವರು ಕನ್ಯೆಯರಲ್ಲಿ ಹಿರಿಯಳು. ನಮ್ಮ ಮೊದಲ ಭೇಟಿಯೇ ವಿಚಿತ್ರವಾದುದು. ಕಾಶಿಯ ಸ್ವಯಂವರದ ವಾರ್ತೆಯನ್ನು ಕೇಳಿ ಅಲ್ಲಿಗೆ ಹೊರಟವನು ನಾನು. ನಗರದ ಹೊರಗೆ ಅವಳನ್ನು ಸಂಧಿಸಿದೆ. ಹಾಗೆ ನೋಡಿದರೆ ಈ ಸ್ವಯಂವರವಾಗಲೀ ಕಾಶೀರಾಜ್ಯವಾಗಲೀ ನಾನು ಹೋಗಬೇಕಾದ ಸ್ಥಳಗಳಲ್ಲ. ನನಗೆ ಅಂತಹವುಗಳಿಗೆ ಆಮಂತ್ರಣವೂ ಇರುತ್ತಿರಲಿಲ್ಲ. ಇದಕ್ಕೂ ಇರಲಿಲ್ಲ. ಆದರೆ ಕಾಶೀಕನ್ಯೆಯರ ಸೌಂದರ್ಯವನ್ನು ಕೇಳಿ ಅವರನ್ನು ಮದುವೆಯಾಗುವ ಹಂಬಲ ಹುಟ್ಟಿತ್ತು. ಹಾಗಾಗಿ ಆಹ್ವಾನ ಇಲ್ಲದೆಯೂ ಕಾಶಿಗೆ ಹೊರಟಿದ್ದೆ. ಅದರ ಹಿಂದೆ ಇನ್ನೊಂದು ಉದ್ದೇಶವೂ ಇತ್ತು. ನಮ್ಮ ಸ್ವಭಾವವೇ ಆ ರೀತಿ. ಮದುವೆಯೋ, ಅಪರ ಸಂಸ್ಕಾರವೋ ಪ್ರಶ್ನೆಯಲ್ಲ. ಅದರಲ್ಲಿ ರಾಜಕೀಯದ ಅನುಕೂಲವುಂಟೋ ಎಂಬ ದೃಷ್ಟಿಯೊಂದನ್ನು ಇಟ್ಟೇ ಇರುತ್ತೇವೆ. ಇದರಿಂದಾಗಿ ನಮ್ಮ ಖಾಸಗಿ ಜೀವನದಲ್ಲಿ ಕೂಡಾ ವ್ಯವಹಾರ ಬುದ್ಧಿ ತಲೆಹಾಕುತ್ತಿತ್ತು. ಭಾವನೆಗಳಿಲ್ಲದ ಬದುಕಿನಲ್ಲಿ ಸುಖವಿದೆಯೇ ಎಂದರೆ ಏನು ಹೇಳಲಾದೀತು? ಕೊಲ್ಲುವುದೇ ಚಟವಾದವನಿಗೆ ಸ್ವಂತ ಮಕ್ಕಳನ್ನು ಕೊಲ್ಲುವುದೂ ಸುಖವೆಂದೇ ತೋರುವ ಹಾಗೆ ನಮ್ಮ ಬದುಕು.
ಇದರಿಂದಾಗಿ ಪ್ರತಿಯೊಬ್ಬ ರಾಜನೂ ಸಂಬಂಧ ಬೆಳೆಸುವಾಗ ವ್ಯಾವಹಾರಿಕ ಚಾತುರ್ಯವನ್ನು ತೋರಿಸುತ್ತಿದ್ದ. ಕಾಶಿಯ ಸ್ವಯಂವರದ ವಾರ್ತೆ ಕೇಳಿ ನನಗೂ ಅಂತಹ ಒಂದು ಆಲೋಚನೆ ಬಂದಿತ್ತು. ಈ ಸ್ವಯಂವರವನ್ನು ನನ್ನ ಅನುಕೂಲಕ್ಕೆ ಬಳಸಿಕೊಳ್ಳಬಹುದೆಂಬ ಮುಂದಾಲೋಚನೆಯದು. ಯಾಕೆಂದರೆ ನಮಗೆ ಅಂದರೆ ಸೌಭನಗರಿಯನ್ನಾಳುವವರಿಗೆ ಇತರ ಕ್ಷತ್ರಿಯ ರಾಜರು ಗೌರವ ನೀಡುತ್ತಿರಲಿಲ್ಲ. ಅವರ ಸಮಾನರೆಂದು ನಮ್ಮನ್ನು ಕಾಣುತ್ತಿರಲಿಲ್ಲ. ನಾವು ಅರ್ಧಕ್ಷತ್ರಿಯರೆಂದು ಪರಿಗಣಿಸಲ್ಪಟ್ಟಿದ್ದೆವು. ಕ್ಷತ್ರಿಯರೇನೋ ನಿಜ. ಆದರೆ ಉತ್ತಮ ಕ್ಷತ್ರಿಯರಲ್ಲ. ಅವರೊಂದಿಗೆ ನಮಗೆ ಸಮಾನ ಪಂಕ್ತಿಯಿರಲಿಲ್ಲ. ಹಿಂದಿನ ಯಾವುದೋ ಘಟನೆಯೋ ಪೂರ್ವಾಚಾರದ ವ್ಯತ್ಯಾಸವೋ ಕಾರಣವಾಗಿ ನಾವು ಅವಗಣನೆಗೆ, ಅವಹೇಳನೆಗೆ ಒಳಗಾಗಿದ್ದೆವು. ನಾವು ಮದುವೆಯಾಗಲು ಹೊರಟರೆ ಕ್ಷತ್ರಿಯಕನ್ಯೆಯರನ್ನು ಕೊಡಲು ಕನ್ಯಾಪಿತೃಗಳು ಒಪ್ಪುತ್ತಿರಲಿಲ್ಲ. ನಮ್ಮ ಹಾಗೆಯೇ ದ್ವಿತೀಯ ಪಂಕ್ತಿಯವರನ್ನೇ ನಾವು ಹುಡುಕಬೇಕಿತ್ತು. ಧನವನ್ನು ಕೊಟ್ಟೋ, ಅಪಹರಣ ಮಾಡಿಯೋ ಮದುವೆಯಾಗುವುದೂ ಇತ್ತು. ಅಂತೂ ಮದುವೆಯಾಗುತ್ತಿತ್ತು.
ನನಗೆ ಇದು ಅಸಹನೀಯವೆನಿಸುತ್ತಿತ್ತು. ಆದರೆ ಬದಲಿಸುವುದು ಸುಲಭವಿರಲಿಲ್ಲ. ತಮ್ಮ ಕ್ಷಾತ್ರದ ಘನತೆಯ ಕುರಿತು ಅಹಂಕಾರವನ್ನು ಹೊಂದಿದ್ದ ರಾಜರು ನಮ್ಮಂತಹವರನ್ನು ಅಂಗೀಕರಿಸುವುದಕ್ಕೆ ಒಪ್ಪುತ್ತಿರಲಿಲ್ಲ. ಅಂತಹ ಪ್ರಬಲರ ಮಧ್ಯೆ ನನ್ನಂತಿದ್ದ ಅನೇಕರು ವ್ಯವಸ್ಥೆಗೆ ಹೊಂದಿಕೊಂಡು ನೆಮ್ಮದಿಯಿಂದಲೇ ಇದ್ದರು. ಪ್ರಶ್ನಿಸುವ ಮನೋಧರ್ಮ ಅವರದಾಗಿರಲಿಲ್ಲ. ಅಥವಾ ಪ್ರಶ್ನಿಸಬೇಕೆಂದು ತೋರುತ್ತಿರಲಿಲ್ಲವೋ, ಅಂಜಿದರೋ ಏನೋ ಒಂದು. ಸಹಿಸಿಕೊಂಡಿದ್ದರೆಂಬುದು ಸತ್ಯ. ಮತ್ತೊಂದು ವಿಚಾರವೂ ಇದರಲ್ಲಿತ್ತು. ವ್ಯವಸ್ಥೆಯೊಂದನ್ನು ಪ್ರಶ್ನಿಸಬೇಕಿದ್ದರೆ ಪ್ರಶ್ನಿಸುವವನು ಪ್ರಬಲನಾಗಿರಬೇಕು. ಇಲ್ಲವಾದರೆ ಅದಕ್ಕೆ ಬೆಲೆಯಿರುವುದಿಲ್ಲ. ಅಥವಾ ಬಲಪ್ರಯೋಗದಿಂದ ಅವನ ಧ್ವನಿಯನ್ನು ಹತ್ತಿಕ್ಕಲಾಗುತ್ತದೆ. ಇಂತಹ ವಿಚಾರಗಳಲ್ಲಿ ಅವರಲ್ಲಿ ಅದ್ಭುತವಾದ ಒಗ್ಗಟ್ಟು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಈ ಸ್ಥಿತಿ ನನ್ನ ಕಾಲದಲ್ಲೂ ಮುಂದುವರಿಯುತ್ತಿತ್ತು.
ಆದರೆ ನನ್ನ ವಿಚಾರಧಾರೆಯೇ ಭಿನ್ನ. ಬದಲಾವಣೆಗೆ ಯಾರಾದರೊಬ್ಬ ಯತ್ನಿಸಲೇಬೇಕಷ್ಟೆ? ಅದು ತನ್ನಷ್ಟಕ್ಕೆ ತಾನೇ ಸಂಭವಿಸಲಾರದಷ್ಟೆ? ಅಂತಹ ಒಂದು ಯತ್ನವನ್ನು ತಾನೇ ಮಾಡಬಾರದು ಯಾಕೆ ಎಂಬ ಯೋಚನೆ ನನ್ನ ಅಂತರಂಗವನ್ನು ಕಾಡುತ್ತಿತ್ತು. ನಾನಂತೂ ಸದ್ಯಃ ಬಲಿಷ್ಠನೆಂದೇ ಪರಿಗಣಿಸಲ್ಪಟ್ಟಿದ್ದೆ. ನನ್ನ ಕಾಲದಲ್ಲಿ ಸೌಭದೇಶ ಸಮೃದ್ಧಿಯನ್ನು ಹೊಂದಿ ಮೆರೆಯುತ್ತಿತ್ತು. ನನಗೆ ಸಂಚರಿಸುವುದಕ್ಕೆ ವಿಶಿಷ್ಟವಾದ ವಿಮಾನವೊಂದಿತ್ತು. ಅದಕ್ಕೂ ಸೌಭವೆಂದೇ ಹೆಸರು. ಹೀಗಾಗಿ ನಾನು ನಿರ್ಲಕ್ಷಿಸತಕ್ಕವನಾಗಿರಲಿಲ್ಲ. ಅನೇಕ ಮಂದಿ ಉತ್ತಮ ಕ್ಷತ್ರಿಯರೆನಿಸಿಕೊಂಡವರು ನನ್ನನ್ನು ಕಂಡರೆ ಒಳಗೊಳಗೆ ಅಂಜುತ್ತಿದ್ದರು. ಸದ್ಯ ಗೌರವವನ್ನು ಸಂಪಾದಿಸುವುದಕ್ಕೆ ನನಗೆ ಅನುಕೂಲ ಸಂದರ್ಭ ಬೇಕಾಗಿತ್ತು. ಕ್ಷತ್ರಿಯರಿಗೆ ಉಚಿತವಾದ ಪರಾಕ್ರಮದಿಂದಲೇ ಅದನ್ನು ನಾನು ಸಾಧಿಸಬೇಕಿತ್ತು. ಇಲ್ಲಿಯವರೆಗೆ ಸೂಕ್ತ ಸಂದರ್ಭ ಒದಗಿ ಬಂದಿರಲಿಲ್ಲ. ಅಷ್ಟಲ್ಲದೆ ಗಂಭೀರವಾಗಿ ಚಿಂತಿಸಬೇಕಾಗಿದ್ದ ವಿಚಾರವೊಂದು ಪ್ರತ್ಯೇಕವಾಗಿತ್ತು. ಅದು ಹಸ್ತಿನಾವತಿ. ಅಲ್ಲಿ ಆಳುತ್ತಿದ್ದ ದೊರೆಗಳು ಚಂದ್ರವಂಶೀಯರು. ಇತರ ಕ್ಷತ್ರಿಯರಿಗಿಂತ ಹೆಚ್ಚು ಸ್ಥಾನಮಾನಗಳ ಪ್ರಜ್ಞೆ ಇದ್ದವರು. ನಾನೇನಾದರೂ ಅವಸರಿಸಿದರೆ ನೇರ ಹಸ್ತಿನಾವತಿಯ ಚಕ್ರವರ್ತಿ ಪೀಠವನ್ನೇ ಎದುರಿಸಬೇಕಾಗಿ ಬರುತ್ತಿತ್ತು. ಅದು ನನಗೆ ಅಪೇಕ್ಷಣೀಯವಾಗಿರಲಿಲ್ಲ. ಅಲ್ಲಿಯ ದೊರೆ ವಿಚಿತ್ರವೀರ್ಯನ ಬಗೆಗೆ ನಾನು ಯೋಚಿಸಬೇಕಿರಲಿಲ್ಲ. ಅವನ ಅಣ್ಣ ಭೀಷ್ಮನ ಬಗೆಗೆ ನನಗೆ ಅಳುಕಿತ್ತು. ಮಹಾ ಪರಾಕ್ರಮಶಾಲಿ ಮಾತ್ರವಲ್ಲ ತನ್ನ ವರ್ಚಸ್ಸಿನಿಂದ ಸರ್ವರಲ್ಲಿಯೂ ಮಾನ್ಯನಾದವನು ಭೀಷ್ಮ. ಇದೆಲ್ಲದರಿಂದಾಗಿ ಅವಸರಿಸುವ ಹಾಗಿರಲಿಲ್ಲ. ಸಮಯಾನುಕೂಲಕ್ಕೆ ಕಾಯುತ್ತಾ ಇದ್ದ ನನಗೆ ಈ ಸ್ವಯಂವರವೆಂಬುದು ಸದವಕಾಶವಾಗಿ ಒದಗಿ ಬಂತು.
ಬೇಹುಗಾರರು ಹೇಳಿದ ವಾರ್ತೆ ಕೇಳಿದೊಡನೆಯೇ ಇದರಲ್ಲಿ ನನ್ನ ಉದ್ದೇಶ ಸಾಧನೆಯ ದಾರಿ ಕಂಡಿತು ನನಗೆ. ನಾನು ಕಾಶಿಗೆ ಹೋಗಬೇಕು. ಅಲ್ಲಿ ಪರಾಕ್ರಮವೇ ಪಣವಷ್ಟೆ? ಅಷ್ಟು ಮಂದಿ ರಾಜರನ್ನು ಗೆಲ್ಲುವುದು ನನಗೇನೂ ದುಷ್ಕರವಲ್ಲ. ಇಂತಹ ಸಾರ್ವತ್ರಿಕ ಸ್ಪರ್ಧೆಯ ಗೆಲವಿನಿಂದ ನಾನು ಕ್ಷತ್ರಿಯರಲ್ಲಿ ಅಧಿಕನೆಂಬುದು ಸ್ಥಾಪಿತವಾಗುತ್ತದೆ. ಮೇಲಾಗಿ ಕಾಶಿಯ ರಾಜ ಪ್ರತಾಪಸೇನನಂತಹ ಆಚಾರನಿಷ್ಠನ ಪುತ್ರಿಯರನ್ನು ವೀರೋಚಿತ ವಿಧಾನದಲ್ಲಿ ವಿವಾಹವಾದರೆ ನನ್ನ ವರ್ಚಸ್ಸು ಹೆಚ್ಚುತ್ತದೆ. ದುಷ್ಟ ಕ್ಷತ್ರಿಯನೆಂಬ ಕಳಂಕವೂ ತೊಳೆದುಹೋಗುತ್ತದೆ. ನಾನು ಹೀಗೆ ಪ್ರಿಯವಾದ ಯೋಚನೆಗಳಲ್ಲಿ ಮುಳುಗಿರುವಾಗಲೇ ವರ್ತಮಾನವನ್ನು ತಂದ ಬೇಹಿನವ ನುಡಿದ, “ಮಹಾರಾಜ, ಸ್ವಯಂವರಕ್ಕೆ ನಮಗೆ ಮಾತ್ರ ಆಮಂತ್ರಣವಿಲ್ಲದಿರುವುದಲ್ಲ. ಹಸ್ತಿನಾಪುರದ ಚಕ್ರವರ್ತಿಗಳಿಗೂ ಆಹ್ವಾನವಿಲ್ಲವಂತೆ. ಅವಮರ್ಯಾದೆಯಾದರೆ ಅದು ಅವರಿಗೂ ಅನ್ವಯಿಸುವುದಲ್ಲವೇ ಪ್ರಭೂ?”
ಬೇರೆ ಸಂದರ್ಭದಲ್ಲಿ ಇಂತಹ ಮೀರಿದ ನುಡಿಯಾಡುತ್ತಿದ್ದರೆ ಅವನನ್ನು ಶಿಕ್ಷಿಸುತ್ತಿದ್ದೆ. ಈ ಸ್ವಯಂವರಕ್ಕೆ ಹಸ್ತಿನಾವತಿಗೆ ಆಮಂತ್ರಣವಿಲ್ಲ ಎನ್ನುವುದನ್ನು ಕೇಳಿದಾಕ್ಷಣ ನಾನು ಉತ್ತೇಜಿತನಾದೆ. ಆ ಭೀಷ್ಮನೊಬ್ಬ ಬಾರದಿದ್ದರೆ ಉಳಿದ ರಾಜರೆಲ್ಲ ನನಗೆ ಗಣ್ಯವಲ್ಲ. ಸದ್ಯ ವಿಚಿತ್ರವೀರ್ಯನೇನಾದರೂ ಹೊರಟಿದ್ದರೆ ಅವನೊಂದಿಗೆ ಭೀಷ್ಮ ಬಾರದಿರುವವನಲ್ಲ. ಅವನು ಬಂದರೆ ಕನ್ಯೆಯರಂತೂ ಹೇಗೂ ದಕ್ಕುವವರಲ್ಲ. ಜತೆಗೆ ನನ್ನ ಗೌರವ ಸಂಪಾದನೆಯ ದಾರಿಯೂ ಮುಚ್ಚಿಹೋಗುತ್ತಿತ್ತು. ಈಗ ಅಂತಹ ದಾರಿಯೊಂದು ತೆರೆದುಕೊಂಡಿದೆ. ಆಮಂತ್ರಣವಿಲ್ಲದ ಸ್ವಯಂವರಕ್ಕೆ ಹಸ್ತಿನಾವತಿಯವರು ಬರಲಾರರು. ಅವರಿಗದು ಪ್ರತಿಷ್ಠೆಯ ಪ್ರಶ್ನೆ. ನನಗೆ ವಿಧಿ-ನಿಷೇಧಗಳಿಲ್ಲ ತಾನೇ. ಹಾಗಾಗಿ ಕಾಶಿಗೆ ತೆರಳಿ ಉಳಿದ ರಾಜರನ್ನು ಗೆದ್ದು ಕನ್ಯೆಯರನ್ನು ವರಿಸಿ ಬರುವುದೆಂದು ನಿರ್ಧರಿಸಿದೆ. ಹೊರಟೆ.
ಕಾಶಿಯ ಹೊರವಲಯದಲ್ಲಿ ಗಂಗಾ ತೀರದಲ್ಲೇ ಅವಳು ಮತ್ತು ನಾನು ಸಂಧಿಸಿದೆವು. ಅದ್ಭುತ ರೂಪವತಿಯವಳು. ಕಾಶೀರಾಜನ ಕುವರಿಯೆಂದು ತಿಳಿಯುವ ಮುನ್ನವೇ ನಾನವಳಿಂದ ಆಕರ್ಷಿತನಾಗಿದ್ದೆ. ಸ್ವಯಂವರಕ್ಕೆ ಮಣ್ಣು ಬೀಳಲಿ, ಇವಳನ್ನಿಲ್ಲಿಂದಲೇ ಅಪಹರಿಸಿದರೇನು ಅಂತಲೂ ಒಮ್ಮೆ ಅನಿಸಿದ್ದುಂಟು. ಆದರೆ ಅವಳು ಅಂತಹ ಯೋಚನೆ ಕಾರ್ಯಗತವಾಗುವ ಮೊದಲೇ ನನ್ನನ್ನು ಮೆಚ್ಚಿದ್ದೇನೆಂದು ಹೇಳಿಕೊಂಡಳು. ಕಾಶೀರಾಜನ ಮಗಳೆಂದು ನನಗೆ ತಿಳಿದುದು ಆಬಳಿಕವೇ. ಆಮೇಲೂ ಅವಳೊಪ್ಪಿದ್ದರೆ ರಥವೇರಿಸಿ ಸೌಭದ ದಾರಿ ಹಿಡಿಯುತ್ತಿದ್ದೆ ನಾನು. ಆದರೆ ಅಂಬೆ ಅದನ್ನೊಪ್ಪಲಿಲ್ಲ. “ಸೌಭೇಶ, ನಾನು ನಿನಗೊಲಿದಿದ್ದೇನೆ. ಇಂದೇನಾದರೂ ನಾನು ನಿನ್ನೊಂದಿಗೆ ಬಂದರೆ ನನ್ನ ತಂದೆಯವರು ಅಷ್ಟೂ ರಾಜರ ಮುಂದೆ ಅವಮಾನಿತರಾಗುತ್ತಾರೆ. ಅದರ ಬದಲಾಗಿ ನಾಳೆಗೆ ಕಾಯೋಣ. ತಂಗಿಯರನ್ನು ಯಾರು ಬೇಕಾದರೂ ಗೆದ್ದುಕೊಳ್ಳಲಿ, ಸ್ವಯಂವರದ ಪರಿಣಾಮವೇನೇ ಇರಲಿ, ನಾನು ನಿನ್ನನ್ನೇ ವರಿಸುವುದು ನಿಶ್ಚಯ. ನಿನ್ನ ಕೊರಳಿಗೆ ವರಣಮಾಲಿಕೆ ತೊಡಿಸುವ ಅಧಿಕಾರ ವಧುವಾದ ನನಗುಂಟಷ್ಟೆ? ನೀನು ಆ ಬಗೆಗೆ ಚಿಂತಿಸಬೇಡ” ಎಂಬ ವಾಗ್ದಾನವನ್ನಿತ್ತಳು. ನಾನು ಸಮ್ಮತಿಸಿದೆ.
ಅರಮನೆಗೆ ಬಂದ ನನ್ನನ್ನು ಸ್ವಾಗತಿಸಿ ಉಪಚರಿಸುವುದು ಕಾಶೀರಾಜನಿಗೆ ಅನಿವಾರ್ಯವಾಯಿತು. ನನ್ನಂತಹ ಬಲಾಢ್ಯನನ್ನು ಎದುರುಹಾಕಿಕೊಂಡು ಅವನು ಸ್ವಯಂವರ ನಡೆಸುವುದು ಕಷ್ಟವಿತ್ತು. ನನಗೆ ಬಿಡದಿಯ ಏರ್ಪಾಡು ಮಾಡಿಸಿದ. ಇರುಳು ಸುಖಸ್ವಪ್ನಗಳಲ್ಲಿ ಕಳೆಯಿತು. ಸ್ವಯಂವರದ ದಿನದ ಬೆಳಗು ಯುದ್ಧದಿಂದಲೇ ಆರಂಭವಾಯಿತು. ನನಗೂ ಅಂಬೆಯ ಯೋಜನೆಯೇನೆಂದು ಗೊತ್ತಿಲ್ಲದಿದ್ದುದರಿಂದ ಹೋರಾಟಕ್ಕಿಳಿಯುವುದು ಅನಿವಾರ್ಯವಾಯಿತು. ಬಂದಿದ್ದ ರಾಜರುಗಳನ್ನು ಗೆಲ್ಲುವುದೇನೂ ನನಗೆ ಮಹತ್ಕಾರ್ಯವಾಗಿರಲಿಲ್ಲ. ಯುದ್ಧ ತೊಡಗುವ ಮೊದಲೇ ನಾನು ವಿಜಯಿಯಾಗುತ್ತೇನೆಂಬ ವಿಶ್ವಾಸವಿತ್ತು. ಒಬ್ಬೊಬ್ಬರನ್ನೇ ಸೋಲಿಸುತ್ತ ಮುಂದುವರಿಯುತ್ತಿದ್ದೆ. ಮಧ್ಯಾಹ್ನದ ಹೊತ್ತಿಗೆ ತೀರಾ ಅನಿರೀಕ್ಷಿತವಾಗಿ ಸ್ವಯಂವರ ಮಂಟಪಕ್ಕೆ ಭೀಷ್ಮನ ಪ್ರವೇಶವಾಯಿತು. ಸ್ವಯಂವರ ಸಭೆಯಲ್ಲಿ ಕೋಲಾಹಲವೆದ್ದು ಕಾಶೀರಾಜನ ಸನ್ನಾಹವೆಲ್ಲ ಮಣ್ಣುಪಾಲಾಗುವ ಸ್ಥಿತಿಯುಂಟಾಯಿತು. ಅದರೊಂದಿಗೆ ನನ್ನ ಹಂಚಿಕೆಯೂ ಬುಡಮೇಲಾಯಿತು.
ಭೀಷ್ಮನನ್ನು ನೋಡಿದ್ದೇ ತಡ, ಸಮಸ್ತ ಅರಸರೂ ಆಯುಧಗಳನ್ನು ಕೆಳಗೆಹಾಕಿ ಶರಣಾಗತರಾದರು. ನನಗೋ ಬಿಸಿತುಪ್ಪ ಗಂಟಲಲ್ಲಿ ಸಿಕ್ಕಂತಾಯಿತು. ಸಭಾಮಧ್ಯದಲ್ಲಿ ಭೀಷ್ಮ ಘೋಷಣೆ ಮಾಡಿದ, “ನಾನು ಶಂತನುಪುತ್ರ, ಭೀಷ್ಮ, ರಾಕ್ಷಸ ವಿವಾಹವಿಧಿಯಂತೆ ಈ ಅರಗುವರಿಯರನ್ನು ಅಪಹರಿಸುತ್ತಿದ್ದೇನೆ. ಸಾಮರ್ಥ್ಯವಿದ್ದವರು ತಡೆಯಿರಿ.” ಅವನ ಈ ವೀರವಾಕ್ಕುಗಳನ್ನು ಕೇಳಿದ ಕಾಶೀರಾಜನ ಸಹಿತ ಎಲ್ಲ ರಾಜರೂ ನಿಸ್ತೇಜರಾಗಿಹೋದರು.
ಅವನ ಆದೇಶದಂತೆ ರಾಜಕನ್ಯೆರು ಹಸ್ತಿನಾವತಿಯ ರಥವನ್ನೇರಿದರು. ಅವಳು, ಅಂಬೆಯೂ ಭೀಷ್ಮನ ವಶವಾಗಿಬಿಟ್ಟಳು. ನನಗಿದನ್ನು ಮಾತ್ರ ಸಹಿಸುವುದಾಗಲಿಲ್ಲ. ಪರಿಣಾಮದ ಕುರಿತು ಯೋಚಿಸದೆ ಭೀಷ್ಮನಿಗೆ ಎದುರಾದೆ. ಅವನೆದುರು ಹೆಚ್ಚು ಹೊತ್ತು ನಿಲ್ಲುವುದು ನನ್ನಿಂದಾಗಲಿಲ್ಲ. ಸೋತುಹೋದೆ ಆ ಅವಮಾನದ ಗಳಿಗೆಯಲ್ಲಿ ಅಂಬೆಯತ್ತ ನೋಡುವುದೂ ನನಗೆ ಸಾಧ್ಯವಾಗಲಿಲ್ಲ. ತಲೆತಗ್ಗಿಸಿ ನಿಂತೆ. ಭೀಷ್ಮ ಅವರನ್ನು ಹಸ್ತಿನಾಪುರಕ್ಕೊಯ್ದ. ನನ್ನ ಗೌರವ ಸಂಪಾದನೆಯ ಮಹತ್ತ್ವಾಕಾಂಕ್ಷೆ ಹೀಗೆ ಮಣ್ಣುಪಾಲಾಗಿ ಬಿಟ್ಟಿತು. ನನ್ನನ್ನೊಲಿದ ಅಂಬೆಯನ್ನೂ ಕಳಕೊಂಡು ಅದೃಷ್ಟಹೀನನ ಸ್ಥಿತಿಯಲ್ಲಿ ನಾನು ಸೌಭಕ್ಕೆ ಮರಳಿದೆ.
ನಡೆದುದೇನೋ ನಡೆದುಹೋಯಿತು. ಇನ್ನು ಮರುಗಿ ಮಾಡುವುದೇನು? ಯಥಾಪ್ರಕಾರ ರಾಜ್ಯಾಡಳಿತದ ದಿನಚರಿಯಲ್ಲಿ ನೋವು ನಿರಾಶೆಗಳನ್ನು ಮರೆಯುವ ಪ್ರಯತ್ನದಲ್ಲಿದ್ದೆ. ಆದರೆ ಈಗ ಅದೇ ಅಂಬೆ ಬಂದು “ನಾನು ಭೀಷ್ಮನ ಅನುಮತಿ ಪಡೆದು ಬಂದಿದ್ದೇನೆ. ನನ್ನನ್ನು ಸ್ವೀಕರಿಸು” ಎಂದು ಕೇಳಿದಾಗ? ಒಂದು ಕ್ಷಣ ಮೈಮರೆತುದು ಹೌದು. ಆದರೆ ನಾನು ಸಭಾ ಮಧ್ಯದಲ್ಲಿದ್ದೆ. ಹಿಂದೆ ಮುಂದೆ ನೋಡದೆ ಅವಳನ್ನು ಒಪ್ಪಿಕೊಂಡರೆ ನಾಳೆ ನನ್ನ ಪ್ರಜೆಗಳ ದೃಷ್ಟಿಯಲ್ಲಿ ನನ್ನ ಗೌರವದ ಪಾಡೇನು ಎನ್ನುವುದನ್ನು ಆಲೋಚಿಸಿದಾಗ ಅಳುಕಾಯಿತು. ಅದೇ ಎಚ್ಚರದಿಂದ ನಾನು ಅವಳನ್ನು ನಿರಾಕರಿಸಿದೆ. ಪರಪುರುಷನೊಬ್ಬನ ವಶದಲ್ಲಿದ್ದ ನಿನ್ನನ್ನು ಸ್ವೀಕರಿಸುವುದು ನನ್ನ ರಾಜತ್ವಕ್ಕೆ ಸಲ್ಲದೆಂದೆ. ಅವಳ ಶೀಲದ ಕುರಿತು ಶಂಕೆಯ ನುಡಿಯಾಡಿದೆ. ದಿಕ್ಕುಗಾಣದ ಅವಳು ನನ್ನನ್ನು ನಿಂದಿಸಿದಳು. ಮಾತಿಗೆ ಮಾತು ಬೆಳೆಯಿತು. ನನ್ನ ನಿಲವು ಕಠಿಣವಾಯಿತು. “ನೀನು ಒಳ್ಳೆಯ ಮಾತಿನಿಂದ ಇಲ್ಲಿಂದ ಹೊರಡು ಇಲ್ಲವಾದರೆ ಭಟರ ಮೂಲಕ ಹೊರಗಟ್ಟುತ್ತೇನೆ” ಎಂದುಬಿಟ್ಟೆ. ಅವಳು ಹೊರಟುಹೋದಳು. ಹೊರಟೇಹೋದಳು.
***
ಎಲ್ಲ ಮುಗಿದುಹೋದ ಮೇಲೆ ಅಂತಃಪುರದ ಏಕಾಂತದಲ್ಲಿ ಆತ್ಮಶೋಧಕ್ಕೆ ತೊಡಗಿದಾಗ ಅಪರಾಧೀಭಾವವೊಂದು ಮನಸ್ಸನ್ನು ಕಲಕತೊಡಗಿತು. ನಾನು ಅವಳನ್ನು ತಿರಸ್ಕರಿಸಿದ್ದು ಸರಿಯೇ? ಸ್ವಯಂವರ ಮಂಟಪದಲ್ಲಿ ನಡೆದುದರಲ್ಲಿ ಅವಳ ಅಪರಾಧವೇನು? ಅಲ್ಲಿ ಅವಳಿಗಾವ ಸ್ವಾತಂತ್ರ್ಯವಿತ್ತು? ಭೀಷ್ಮನನ್ನು ಪ್ರತಿಭಟಿಸಿ ಸುಕೋಮಲೆಯೊಬ್ಬಳು ಸಭೆಯೆದುರು ತಲೆಯೆತ್ತುವುದು ಸುಲಭವೆ; ಸಾಧ್ಯವೆ? ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದಕ್ಕಾಗಿ ಕಾಲವನ್ನು ಕಾದು ಭೀಷ್ಮನನ್ನು ಒಪ್ಪಿಸಿ ಇಲ್ಲಿಯವರೆಗೆ ಬಂದಳಲ್ಲ, ಯಾರಿಗಾಗಿ? ನನಗಾಗಿ ತಾನೆ? ಅದೂ ಚಂದ್ರವಂಶದ ಚಕ್ರವರ್ತಿಯನ್ನು ಮದುವೆಯಾಗಿ ವೈಭವದ ಜೀವನವನ್ನು ನಡೆಸುವ ಅವಕಾಶವನ್ನು ಕಸದಂತೆ ಕಂಡು? ನನ್ನ ಪ್ರೇಮಕ್ಕೆ ಅವಳು ಕಲ್ಪಿಸಿದ ಮೌಲ್ಯ ಎಷ್ಟು ದೊಡ್ಡದು! ನಾನು ಹೃದಯಹೀನನಂತೆ ತಿರಸ್ಕರಿಸಿ ಅವಳ ಬದುಕು ಬೀದಿಪಾಲಾಗುವಂತೆ ಮಾಡಿಬಿಟ್ಟೆನೆಂಬ ಭಾವವೊಂದು ತೀವ್ರವಾಗಿ ಚುಚ್ಚತೊಡಗಿತು. ಇಷ್ಟಕ್ಕೂ ಅವಳ ಚಾರಿತ್ರ್ಯವನ್ನು ಶಂಕಿಸಿದ್ದು ನನ್ನ ಅಪರಾದವೆಂದೇ ಅಂತರಂಗ ಬೆರಳೆತ್ತಿ ತೋರಿತು. ಛೇ! ಏನು ಮಾಡಿಬಿಟ್ಟೆ! ಕೈವಶವಾದ ಅಮೂಲ್ಯ ರತ್ನವನ್ನು ಬಿಸುಟು ಮೂರ್ಖನಾದೆನಲ್ಲ. ನನ್ನ ಕಟುಕ ಬುದ್ಧಿಯನ್ನು ನೋಡಿ ಅವಳೆಷ್ಟು ನೊಂದಿರಬಹುದು. ನಾನೆಷ್ಟು ಅಲ್ಪನಾದೆ.
ಹಾಗೆ ನೋಡಿದರೆ ಅಂಬೆಯನ್ನು ತಿರಸ್ಕರಿಸುವುದಕ್ಕೆ ಕಾರಣ ನನ್ನ ಪ್ರತಿಷ್ಠೆ, ಅವಳ ಚಾರಿತ್ರ್ಯದ ಶಂಕೆಯಲ್ಲ. ಅವಳು ಸಭೆಗೆ ಬರುವ ಬದಲು ಏಕಾಂತದಲ್ಲಿ ಸಂಧಿಸುತ್ತಿದ್ದರೆ? ಆಗ ಈ ಯಾವ ಪ್ರಕರಣವೂ ಬಹಿರಂಗವಾಗುತ್ತಿರಲಿಲ್ಲ. ನಾನು ಬಹು ಸುಲಭದಲ್ಲಿ ಕರಗಿಬಿಡುತ್ತಿದ್ದೆ. ಅವಳು ಸಭಾಮಧ್ಯದಲ್ಲಿ ನಮ್ಮ ಪ್ರಣಯರಹಸ್ಯವನ್ನು ಬಿಚ್ಚಿಟ್ಟು ಅವಸರಿಸಿದಳು. ಈ ದುಡುಕಿನ ಕಾರಣ ಎಲ್ಲರೆದುರು ಭೀಷ್ಮನ ವಶಳಾದವಳೆಂದು ಬಹಿರಂಗವಾದಮೇಲೆ ನನಗೂ ಅವಳನ್ನು ರಾಣಿಯಾಗಿ ಒಪ್ಪಿಕೊಳ್ಳುವುದು ಸಾಧ್ಯವಿರಲಿಲ್ಲ. ಅದರೂ ನನ್ನ ಪ್ರಥಮ ಪ್ರಣಯಿನಿಯವಳು. ನನ್ನಂತಹ ಒರಟನಲ್ಲೂ ಯೋಗ್ಯತೆಯನ್ನು ಕಲ್ಪಿಸಿಕೊಂಡು ಪ್ರೇಮಿಸಿದವಳು. ಸಂಕಷ್ಟಗಳನ್ನು ಅನುಭವಿಸಿದವಳು. ಇಲ್ಲಿಂದಲೇ ಸೌಭಕ್ಕೆ ಹೋಗೋಣ ಎಂಬ ಮಾತಿಗೊಪ್ಪದೆ ಹೊಣೆಯರಿತು ನಡೆದವಳು. ತನ್ನಿಂದಾಗಿ ತಂಗಿಯರ ಬಾಳು ಹಾಳಾಗಬಾರದೆಂಬ ಎಚ್ಚರವಿಟ್ಟುಕೊಂಡವಳು. ತಂದೆಯ ಗೌರವಕ್ಕೆ ಚ್ಯುತಿಯಾಗದಂತೆ ಸುಸಂಸ್ಕೃತೆಯಾಗಿ ನಡೆದುಕೊಂಡವಳು. ಒಬ್ಬ ಪುರುಷನ ಜೀವನದಲ್ಲಿ ಜನ್ಮಾಂತರದ ಭಾಗ್ಯವಿಶೇಷದಿಂದ ಮಾತ್ರ ಲಭಿಸಬಲ್ಲ ಸ್ತ್ರೀರತ್ನ. ಅಯ್ಯೋ ಕಳೆದುಕೊಂಡೆನಲ್ಲಾ. ಒಳಗೊಳಗೆ ಮರುಗಿದೆ. ಇನ್ನೂ ಕಾಲ ಮಿಂಚಿಲ್ಲ, ರಾಜಭಟರನ್ನು ರಥಸಮೇತ ಅಟ್ಟು. ಬಹಳ ದೂರವೇನೂ ಹೋಗಿರಲಾರಳು ಎಂದಿತು ಅಂತಃಕರಣ. ಆದರೆ ಮನಸ್ಸಿನ ಮಾತು ಮೈಗೆ ಬರಲಿಲ್ಲ. ಮತ್ತೆ ಸಭಾಸದರ, ಪ್ರಜೆಗಳ ಭಯ. ಇಷ್ಟಾದ ಮೇಲೆ ನಾನು ಬೇಡಿಕೊಂಡರೂ ಅವಳು ಅಂಬೆ, ಹಿಂದೆ ಬರಲಾರಳು ಸ್ವಾಭಿಮಾನದ ಹೆಣ್ಣವಳು ಎಂದಿತು ನನ್ನ ತರ್ಕ. ಅಂತೂ ಶಾಶ್ವತವಾಗಿ ಅವಳನ್ನು ಕಳಕೊಂಡೆ. ಹೀಗೆ ಚಿಂತಿಸುತ್ತ ಎಷ್ಟೋ ಹೊತ್ತು ಭ್ರಮಿಷ್ಠನಂತೆ ನಾನು ಕುಳಿತೇ ಇದ್ದೆ.
ತುಂಬಾ ಚೆನ್ನಾಗಿದೆ ಸರ್.