ನಮ್ಮ ಬದುಕನ್ನು ಸಾರ್ಥಕಗೊಳಿಸುವುದಕ್ಕೆ ನಮ್ಮಲ್ಲಿರುವ ಸಾಧನಗಳು ಐದು. ಒಂದು ಹೂವಿಗೆ ದಳಗಳು, ಕೇಶರುಗಳು, ದೇಟು, ಸುಗಂಧ, ಮಕರಂದ ಎಂದು ಐದು ಘಟಕಗಳಿವೆ. ಈ ಘಟಕಗಳಲ್ಲಿ ಒಂದೇ ಒಂದು ಘಟಕ ಇಲ್ಲವಾದರೂ ಆ ಹೂವು ಹೂವಾಗಿ ಉಳಿಯುವುದಿಲ್ಲ. ಹಾಗೆಯೇ ನಮ್ಮ ಬದುಕಿನಲ್ಲಿ ಐದು ಮುಖ್ಯ ಘಟಕಗಳಿವೆ – ದೇಹ, ಇಂದ್ರಿಯ, ಮನ, ಬುದ್ಧಿ, ಮಾತು! ಈ ಐದು ಘಟಕಗಳನ್ನು ಬಳಸಿಕೊಂಡು ನಾವು ನಮ್ಮ ಜೀವನದ ಕೊನೆಯ ಗಳಿಗೆಯವರೆಗೂ ಸಂತಸದಿಂದ ಇರಬಹುದು. ದೇವನ ಸದನಕ್ಕೆ ಹೋದಾಗಲೂ ತಂದೆಯೆ, ನಾನು ಆನಂದವಾಗಿದ್ದು ಬಂದೆ! ಎಂದು ಹೇಳುವಂತಾಗಬೇಕು. ಈ ಆನಂದವೇ ನಮ್ಮ ಮುಖ್ಯ ಗುರಿ; ಉಳಿದುದೆಲ್ಲವೂ ಗೌಣ. ಧನ ಕನಕಾದಿಗಳೆಲ್ಲವೂ ನಮಗಾಗಿಯೇ, ನಾವು ಅವುಗಳಿಗಾಗಿ ಅಲ್ಲ! ಎಂಬುದನ್ನು ನಾವು ಎಂದಿಗೂ ಮರೆಯಬಾರದು.
ಗೀಜಗನ ಪಕ್ಷಿ ತನಗಿರುವ ದೇಹವನ್ನೇ ಬಳಸಿಕೊಂಡು ಎಷ್ಟು ಕಲಾತ್ಮಕವಾಗಿ ಬದುಕುತ್ತದೆ. ಅದು ಕಟ್ಟುವ ಗೂಡು ನೋಡಲು ಅದೆಷ್ಟು ಚಂದ! ಆ ಗೂಡು ನೂರಕ್ಕೆ ನೂರು ಹವಾ ನಿಯಂತ್ರಿತ. ಚಳಿಯಲ್ಲಿ ಬೆಚ್ಚಗೆ, ಬಿಸಿಲಲ್ಲಿ ತಂಪು! ಯಾವ ತಂತ್ರಜ್ಞರಿಗೇನೂ ಕಡಮೆ ಇಲ್ಲದ ಮನೆಯ ವಿನ್ಯಾಸ ಹಾಗೂ ರಚನೆ ಗೀಜಗನ ಗೂಡಿನದು! ಇಷ್ಟಿದ್ದರೂ ಗೂಡಿನ ವ್ಯಾಮೋಹ ಅದಕ್ಕಿಲ್ಲ. ಅದರ ಮರಿಗಳು ಕಣ್ತೆರೆಯುವುದೇ ತಡ ಅವುಗಳನ್ನು ಹೊರಗೆ ತಂದು ಹಾರಲು ಹಾಡಲು ಕಲಿಸುತ್ತದೆ; ತಾಯಿ ಗೀಜಗ! ಏಕೆಂದರೆ ಪಕ್ಷಿಗಳು ಈ ಜಗತ್ತಿಗೆ ಬಂದುದು ಹಾರಲು, ಹಾಡಲು ವಿನಾ ಮನುಷ್ಯರಂತೆ ಮನೆಯನ್ನು ಹಿಡಿದು ಕೂಡಲು ಅಲ್ಲ!
ಎಷ್ಟೋ ಜನರು ಮುದುಕರಾದರೂ ಮನೆಯಿಂದ ಹೊರಗೆ ಬಿದ್ದಿರುವುದಿಲ್ಲ. ವಿಶಾಲ ಪ್ರಪಂಚವನ್ನು ನೋಡಿರುವುದಿಲ್ಲ. ಇನ್ನು ಕೆಲವರು ಪದವಿ ಪ್ರಶಸ್ತಿಗಾಗಿಯೇ ಆಯುಷ್ಯವನ್ನು ಕಳೆಯುತ್ತಾರೆ. ಒಂದೇ ಒಂದು ದಿನ ಸತ್ಸಂಗ, ಸಚ್ಚಿಂತನೆ ಮಾಡುವುದಿಲ್ಲ. ನಾವು ಮಹಾದೇವನ ಮೆಚ್ಚುಗೆ ಗಳಿಸಬೇಕೇ ವಿನಾ ಬರೀ ಮಾನವರ ಮೆಚ್ಚುಗೆ ಗಳಿಸುವುದಲ್ಲ!
ಇರುವ ಸಾಧನವನ್ನು ಕಲಾತ್ಮಕವಾಗಿ ಬಳಸಿಕೊಂಡು ಬೆಳೆಯುವ ಜಾಣ್ಮೆಯೂ ಸಾಧಕನಲ್ಲಿ ಇರಬೇಕಾಗುತ್ತದೆ.
[ಪೂಜ್ಯ ಸ್ವಾಮಿಗಳ ‘ಸತ್ಸಂಗಶ್ರದ್ಧಾ’ ಪ್ರವಚನ ಸಂಕಲನದಿಂದ.
ಸಂಪಾದನೆ: ಡಾ|| ಶ್ರದ್ಧಾನಂದ ಸ್ವಾಮಿಗಳು.
ಸೌಜನ್ಯ: ಜ್ಞಾನಯೋಗ ಫೌಂಡೇಶನ್, ವಿಜಾಪುರ]