“ಇದು ಪ್ರಪ್ರಥಮ ಕಾಲಯಂತ್ರ” ಪ್ರೊಫೆಸರ್ ಸುರೇಂದ್ರನ್ ತಮ್ಮ ಇಬ್ಬರು ಸಹಾಯಕರತ್ತ ಹೆಮ್ಮೆಯಿಂದ ಘೋಷಿಸಿದರು. “ನಿಜ, ಇದೊಂದು ಸಣ್ಣ ಪ್ರಮಾಣದ ಪ್ರಾಯೋಗಿಕ ಯಂತ್ರ. ೫ ಗ್ರಾಂಗಿಂತ ಕಡಮೆ ತೂಕದ ವಸ್ತುಗಳ ಮೇಲೆ ಮಾತ್ರ ಇದು ಪರಿಣಾಮ ಬೀರುತ್ತದೆ. ಜತೆಗೇ ಭೂತಕಾಲ ಅಥವಾ ಭವಿಷ್ಯತ್ಕಾಲದಲ್ಲಿ ಕೇವಲ ೧೨ ನಿಮಿಷಗಳ ಕಾಲ ಮಾತ್ರ ಅದರಲ್ಲಿ ಪ್ರಯಾಣ ಸಾಧ್ಯ.”
ಅದೊಂದು ಪುಟ್ಟ ಯಂತ್ರವಾಗಿತ್ತು. ಅದರಲ್ಲಿ ಸಣ್ಣದೆರಡು ಕಾಲಸೂಚಕ ಡಯಲ್ಗಳಿದ್ದವು.
ಸುರೇಂದ್ರನ್ ಸಣ್ಣದೊಂದು ಲೋಹಘನಾಕೃತಿಯನ್ನು ಎತ್ತಿ ಹಿಡಿದರು. “ಇದು ೨ ಗ್ರಾಂ ತೂಕದ ಕಂಚಿನ ಘನಾಕೃತಿ. ಮೊದಲಿಗೆ ಇದನ್ನು ೫ ನಿಮಿಷಗಳ ಭವಿಷ್ಯಕ್ಕೆ ಕೊಂಡೊಯ್ಯುತ್ತೇನೆ.”
ಅವರು ಯಂತ್ರದಲ್ಲಿನ ಡಯಲ್ನ್ನು ಸ್ವಲ್ಪ ತಿರುಗಿಸಿದರು. “ಈಗ ನಿಮ್ಮ ವಾಚ್ ನೋಡಿ” ಎಂದು ನುಡಿದರು. ಬಳಿಕ ಘನಾಕೃತಿಯನ್ನು ಯಂತ್ರದ ಫ್ಲಾಟ್ಫಾರಂ ಮೇಲಿಟ್ಟರು. ಘನಾಕೃತಿಯು ಒಮ್ಮೆಗೆ ಮಾಯವಾಯಿತು.
ಅವರು ವಾಚ್ನೆಡೆಗೆ ದೃಷ್ಟಿ ಹಾಯಿಸಿ ಕಾದುಕುಳಿತರು. ಸರಿಯಾಗಿ ೫ ನಿಮಿಷಗಳ ಬಳಿಕ ಘನಾಕೃತಿಯು ಯಂತ್ರದ ಮೇಲೆ ಪ್ರತ್ಯಕ್ಷವಾಯಿತು.
ಸುರೇಂದ್ರನ್ ಅದನ್ನು ಕೈಗೆತ್ತಿಕೊಂಡರು. “ಈಗ ೫ ನಿಮಿಷ ಗತಕ್ಕೊಯ್ಯೋಣ” ಎನ್ನುತ್ತಾ ಡಯಲ್ ನಿಗದಿಪಡಿಸಿದರು. ತಮ್ಮ ವಾಚ್ನೆಡೆಗೆ ದೃಷ್ಟಿ ಹಾಯಿಸುತ್ತಾ ನುಡಿದರು “ಈಗ ಗಂಟೆ ೩ ಗಂಟೆಗೆ ಇನ್ನೂ ೬ ನಿಮಿಷಗಳಿವೆ. ನಾನು ಈ ಡಯಲ್ ಅನ್ನು ೩ ಗಂಟೆಗೆ ನಿಗದಿಪಡಿಸಿ, ಘನಾಕೃತಿಯನ್ನು ಯಂತ್ರದ ಮೇಲಿಟ್ಟು ಚಾಲೂ ಮಾಡುತ್ತೇನೆ. ಈ ಘನಾಕೃತಿಯು ೩ ಗಂಟೆಗೆ ೫ ನಿಮಿಷಗಳಿರುವಾಗ ಮಾಯವಾಗಿ ಸರಿಯಾಗಿ ೩ ಗಂಟೆಗೆ ಪ್ರತ್ಯಕ್ಷವಾಗಬೇಕು.”
“ಹಾಗಿದ್ದರೆ ಅದನ್ನು ನೀವು ಹೇಗೆ ಫ್ಲಾಟ್ಫಾರಂ ಮೇಲಿಡುತ್ತೀರಿ?” ಒಬ್ಬಾತ ಪ್ರಶ್ನಿಸಿದ.
“ನನ್ನ ಕೈ ಅದನ್ನು ಸಮೀಪಿಸಿದಂತೆ ವಸ್ತುವು ನನ್ನ ಕೈಯಿಂದ ಮಾಯವಾಗುತ್ತದೆ. ೩ ಗಂಟೆಯಾಗುವಾಗ ನನ್ನ ಕೈ ಅಲ್ಲಿಡುತ್ತೇನೆ. ಅದು ಕೈಯಲ್ಲಿ ಪ್ರತ್ಯಕ್ಷವಾಗುತ್ತದೆ” ಅವರು ಉತ್ತರಿಸಿದರು.
ಅದರಂತೆಯೆ ಆಯಿತು. ಘನಾಕೃತಿಯು ಅವರ ಕೈಯಿಂದ ಮಾಯವಾಯಿತು. ಬಳಿಕ ೫ ನಿಮಿಷಗಳಲ್ಲಿ ಪ್ರತ್ಯಕ್ಷವಾಯಿತು.
“ನೋಡಿದಿರಾ? ನಾನು ಅಲ್ಲಿ ಇಡುವ ೫ ನಿಮಿಷ ಮೊದಲೇ ಅದು ಪ್ರತ್ಯಕ್ಷವಾಗಿದೆ” ಉದ್ಗರಿಸಿದರವರು.
ಆದರೆ ಇನ್ನೊಬ್ಬ ಸಹಾಯಕನ ಹುಬ್ಬುಗಳು ಏನೋ ಚಿಂತಿಸುತ್ತಿರುವಂತೆ ಗಂಟಿಕ್ಕಿದವು. ಆತ ನುಡಿದ “ನೀವು ಅದನ್ನು ಯಂತ್ರದ ಮೇಲಿಡುವ ೫ ನಿಮಿಷಗಳ ಮೊದಲೇ ಅದು ಪ್ರತ್ಯಕ್ಷವಾಯಿತೆನ್ನುವುದು ನಿಜ. ಆದರೆ, ಒಂದು ವೇಳೆ ನೀವು ಮನಸ್ಸು ಬದಲಿಸಿ ೩ ಗಂಟೆಗೆ ಅದನ್ನು ಯಂತ್ರದ ಮೇಲಿಡಲಿಲ್ಲವೆಂದಾದರೆ ಆಗ ಏನು? ಆಗ ಯಾವುದೋ ವೈರುದ್ಧ್ಯ ಘಟಿಸಿದಂತಾಗುವುದಿಲ್ಲವೆ?”
“ನಿಜಕ್ಕೂ ಕುತೂಹಲಕಾರಿ ಐಡಿಯಾ” ಸುರೇಂದ್ರನ್ ನುಡಿದರು “ನಾನು ಆ ಬಗ್ಗೆ ಆಲೋಚಿಸಿರಲಿಲ್ಲ. ಆ ಬಗ್ಗೆ ಪ್ರಯತ್ನಿಸುವುದು ಕುತೂಹಲಕಾರಿಯಾದೀತು. ಇರಲಿ, ನಾನು ಘನಾಕೃತಿಯನ್ನು ಅಲ್ಲಿ ಇಡಲಾರೆ….”
ಯಾವುದೇ ವೈರುಧ್ಯ ಸಂಭವಿಸಲಿಲ್ಲ. ಘನಾಕೃತಿಯು ಹಾಗೇ ಉಳಿದಿತ್ತು.
ಆದರೆ, ಸುರೇಂದ್ರನ್, ಅವರ ಇಬ್ಬರು ಸಹೋದ್ಯೋಗಿಗಳೂ ಸೇರಿದಂತೆ ಇಡೀ ವಿಶ್ವವು ಮಾಯವಾಗಿತ್ತು!
(ಆಧಾರ: ಫ್ರೆಡ್ರಿಕ್ ಬ್ರೌನ್ ಅವರ ಪುಟ್ಟ ಕಥೆ)