ಎರಡು ಬೃಹತ್ ಕಂಬಗಳು ಮತ್ತು ಉದ್ದಕ್ಕೂ ಹರಡಿ ನಿಂತ ಕೇಬಲ್ಗಳು, ತೂಗಾಡುವ ಸೇತುವೆ….
ಓಹ್…. ಮೊಮ್ಮಗುವನ್ನು ನೋಡಿಕೊಳ್ಳೋಕೆ ಅಂತ ಹೋಗ್ತಿದ್ದೀರಾ? ಹೋಗೀಪ್ಪ…. ಜುಂ ಅಂತ ಆರು ತಿಂಗಳು ಅಮೆರಿಕದಲ್ಲಿದ್ದು ಬನ್ನಿ…. ಎಲ್ಲರಿಗೂ ಅಂಥಾ ಅವಕಾಶ ಬೇಕೂಂದ್ರೆ ಸಿಕ್ಕತ್ತಾ?
ಯಾರೋ ಹೇಳ್ತಾ ಇದ್ದ್ರು…. ನಿಮ್ಮ ಮಗ ಅಲ್ಲೇ ಮನೆ ತಗೊಂಡಿದ್ದಾನಂತೆ…. ನೀವು ಗೃಹಪ್ರವೇಶಕ್ಕೆ ಅಂತ ಹೋಗ್ತಾ ಇರೋದಾ? ಅಲ್ಲೂ ವಾಸ್ತು ಹೋಮ, ಸುದರ್ಶನ ಹೋಮ ಎಲ್ಲಾ ಮಾಡ್ತಾರ? ಮರದ್ದೇ ಮನೆಯಂತೆ…. ದೇವರ ದೀಪ ಹತ್ತಿಸೋದೂ ಕಷ್ಟ ಅಂತೆ….. ಮತ್ತೆ ಶಾಸ್ತ್ರೋಕ್ತವಾಗಿ ಎಲ್ಲವನ್ನೂ ಮಾಡೋಕೆ ಆಗತ್ತಾ?
ಮಗ ಬರ್ತಾನೆ ಇಲ್ಲೇ ಇರ್ತಾನೆ ಅಂತ ನೀವು ನಮ್ಮ ಹತ್ತಿರ ಸುಮ್ಮನೆ ಬುರುಡೆ ಬಿಡ್ತಿದ್ದ್ರಿ…. ಅಲ್ಲಿಗೆ ಹೋದ್ಮೇಲೆ ಅಷ್ಟು ಸುಲಭವಾಗಿ ಇಲ್ಲಿಗೆ ಬರಕ್ಕಾಗತ್ತಾ ನೀವೇ ಹೇಳಿ…. ಈ ಟ್ರಾಫಿಕ್ಕು, ಪೊಲ್ಯೂಶನ್ನು, ಕರೆಂಟಿನ ಗೋಳು, ನೀರಿನ ಪಾಡು…. ನಮಗೇನೋ ವಿಧಿ ಇಲ್ಲ ಅಂದ್ರೆ ಅವ್ರಿಗೇನು ಹುಚ್ಚೇ ಇಲ್ಲಿ ಬಂದು ಒದ್ದಾಡೋಕೆ….
ಹೀಗೆ ನಾನಾ ಪ್ರತಿಕ್ರಿಯೆಗಳಿಗೆ ಉತ್ತರಿಸುವ ಅವಶ್ಯಕತೆಯೇ ಇಲ್ಲವೆಂದು ಮುಗುಳ್ನಕ್ಕು ಸುಮ್ಮನಾಗುವ ಪ್ರವೃತ್ತಿ ರಘೋತ್ತಮರದ್ದು. ಆದರೆ ಕನಕಾರಿಗೆ ಹಾಗಾಗುತ್ತದೆಯೆ? ಯಾವ ಉತ್ತರ ಕೊಟ್ಟರೆ ಹೇಗೋ ಎಂಬ ಚಿಂತೆ.
ಅದೇನೆ ಇರಲಿ, ನಾಲ್ಕು ತಿಂಗಳ ಪುಟ್ಟ ಮೊಮ್ಮಗಳನ್ನು ಮುದ್ದಿಸುವ ಕ್ಷಣಕ್ಕಾಗಿ ಕಾತರಿಸಿದ್ದಂತೂ ಹೌದು. ಸೊಸೆಯ ತಾಯಿ, ಬಾಣಂತನ ಮುಗಿಸಿ ಭಾರತಕ್ಕೆ ಬರುವವರಿದ್ದಾರೆ; ತಾವೀಗ ಹೋದರೆ ಒಂದಾರು ತಿಂಗಳು ಅಜಯ್, ರಕ್ಷಾರಿಗೆ ನಿಶ್ಚಿಂತೆ…. ಅವಳಿಗೆ ಸನ್ನಿವೇಲ್ನಲ್ಲಿ ಕೆಲಸವಾದರೆ ಅಜಯನಿಗೆ ಸುಮಾರು ೫೦೦ ಕಿ.ಮೀ. ದೂರವಿರುವ ಲಾಸ್ಎಂಜಲೀಸಿನಲ್ಲಿ. ವೀಕೆಂಡ್ ಸಂಸಾರ…. ರಕ್ಷಾಳಿಗೆ ಈಗಾಗಲೇ ಸಂಬಳದ ರಜೆ ಆಗಿಹೋಗಿದೆ.
ಶಿಕಾಗೊದಲ್ಲಿರುವ ಮಗಳನ್ನು ಮುಖತಃ ನೋಡಿ ಮೂರು ವರ್ಷಗಳೇ ಕಳೆದುಹೋಗಿವೆ.
ಅಷ್ಟರಲ್ಲಿ ಮಗನಿಗೆ ಮನೆಯೊಡೆಯನಾಗುವ ಸೌಭಾಗ್ಯ. ಅದೂ ಸನ್ನಿವೇಲಿನಲ್ಲಿ…
ಮನೆ ತಗೊಳ್ಳೊ ಆಲೋಚನೆಯೇ ಇರಲಿಲ್ಲಮ್ಮ, ನನ್ನ ಫ್ರೆಂಡ್ ಜಯಂತ್ ನಿಮಗೂ ಗೊತ್ತಲ್ಲ…. ಅವನನ್ನ ಕಂಪನಿಯವರು ಇಂಡಿಯಾಗೆ ಯೂನಿಟ್ ಹೆಡ್ ಆಗಿ ಕಳಿಸ್ತಾ ಇದ್ದಾರೆ. ನನಗಾದ್ರೆ ಅವನ ಮನೆಯನ್ನ ಚೀಪಾಗಿಯೇ ಕೊಟ್ಟುಬಿಡ್ತೀನಿ ಅಂದ. ಕ್ರೆಡಿಟ್ ಬಿಸಿನೆಸ್ಸೇ…. ಇನ್ನೂ ಒಂದು ಮಾತು ಹೇಳಿದ, ಬೆಂಗಳೂರಿನ ಮನೆ ಕೊಡೋದಾದ್ರೆ ಅವನೇ ತೊಗೊಳ್ತಾನಂತೆ. ನೀವಿಲ್ಲೇ ಇದ್ದುಬಿಡಬಹುದು ಅಂತ ಅವನ ಅನಿಸಿಕೆ. ಎನೀ ಹೌ, ಈಗ ಅರ್ಜೆಂಟ್ ಆಗಿ ಆ ವಿಷಯ ಬೇಡ ಅಂತ ಹೇಳಿದ್ದೀನಿ.
ಹೌದು. ವಿದೇಶದಲ್ಲಿ ಮಗ ಮನೆ ಕೊಳ್ಳುತ್ತೇನೆಂದರೆ ಸಂತೋಷಪಡಬೇಕು, ಆದರೆ ಜೊತೆಯಲ್ಲೇ ಮನೆ ಮಾರುವ ಪ್ರಸ್ತಾಪ…. ಅದೂ ಗೆಳೆಯನೇ ಕೇಳಿದ್ದಿರಬಹುದು. ಅಷ್ಟು ಸಾಕಲ್ಲ ಮೆದುಳಿಗೆ ಹುಳಬಿಡಲು… ಅಕ್ಕ, ಭಾವನಿಗೆ ಹೇಗೂ ಇಲ್ಲಿಯ ಸಿಟಿಜ಼ನ್ಶಿಪ್ ಸಿಕ್ಕಿದೆ, ಮಗ ಮಗಳು ಒಂದೇ ದೇಶದಲ್ಲಿರೋವಾಗ ನೀವೂ ಯಾಕೆ ಇಲ್ಲೇ ಇದ್ದುಬಿಡಬಾರದು ಅನ್ನೋದು ಅವನ ತರ್ಕ.
ಮಗ ಹೀಗೆ ಆತ್ಮೀಯವಾಗಿ ಆಹ್ವಾನಿಸುವುದು ಮನಸ್ಸಿಗೆ ಹಿತವೇ; ಹಿಂದೆ ಅಲ್ಲಿಗೆ ಹೋಗಿ ನಾಲ್ಕು ತಿಂಗಳು ಇದ್ದು ಬಂದಿದ್ದೂ ಆಗಿದೆ. ಲಕ್ಷಗಟ್ಟಲೆ ಸುರಿದು ಮತ್ತೆ ಬರುವ ಮಾತೇ ಬೇಡವೆಂದು ಹೇಳಿದ್ದೂ ಆಗಿತ್ತು.
ಆಗಿನ್ನೂ ಅವನಿಗೆ ಮದುವೆ ಆಗಿರಲಿಲ್ಲ. ಈಗ ಅವನದೂ ಸಂಸಾರ. ಪುಟ್ಟ ಮಗು…. ಎಂ.ಎಸ್. ಅಲ್ಲಿಯೇ ಮಾಡಿ ಕೆಲಸ ಮಾಡುತ್ತಿರುವ ರಕ್ಷ…. ತೀರಾ ಚಿಕ್ಕ ಮಗುವನ್ನು ನ್ಯಾನಿಯೊಂದಿಗೆ ಬಿಟ್ಟುಹೋಗುವುದಕ್ಕಿಂತ ನೀವೇ ಇಲ್ಲಿಗೆ ಬಂದರೆ ಒಳ್ಳೆಯದು ಅತ್ತೆ ಎಂದು ಸೊಸೆ ವಿನಯದಿಂದ ಕೇಳಿಕೊಂಡಾಗ ಇಲ್ಲವೆನ್ನಲಾದೀತೆ?
ಅವಳ ಅಪ್ಪ ಅಮ್ಮ ವಾಪಸು ಬರುವುದರೊಳಗೆ, ತಾವಲ್ಲಿ ತಲಪಿದ ಮೇಲೆ ಗೃಹಪ್ರವೇಶ. ಅದರ ಮರುದಿನವೇ ಅವರಿಗೆ ಟಿಕೆಟ್ ಬುಕ್ ಆಗಿದೆ.
ಮಗಳಿಗಂತೂ ಇಲ್ಲಿಗೆ ಬರಬೇಕೆಂದು ಅನ್ನಿಸುವುದೇ ಇಲ್ಲವೆ? ಅಳಿಯ ಫೋನ್ ಸಂಭಾಷಣೆಗೂ ಸಿಕ್ಕುವುದೇ ಇಲ್ಲ.
ಕನ್ಸಲ್ಟೆಂಟ್ ಆಗಿ ಬೇರೆ ಬೇರೆ ಕಡೆ ಟೂರ್ ಅಂತೆ. ಹಾಗಾಗಿ ಮನೆಯ ಪೂರ್ತಿ ಜವಾಬ್ದಾರಿ ಆರತಿಯದೇ. ಬಾಗಿಲು ಸಾರಿಸುವುದು, ಗುಡಿಸುವುದು, ಒರೆಸುವುದು, ಇಲ್ಲವೆಂದರೂ ಅಗತ್ಯವಾಗಿ ಮಾಡಲೇಬೇಕಾದ ಒಂದಿಷ್ಟು ಕೆಲಸಗಳು ಇರುವುದಿಲ್ಲವೇ?
ಮೊಮ್ಮಗಳು ದಿಶಾ ಈಗ ಐದನೇ ಗ್ರೇಡ್, ಫೋನಿನಲ್ಲಾದರೂ ಅಷ್ಟೆ. ಚುಟುಕು ಸಂಭಾಷಣೆಯೆ!
ಸಮಯದ ಅಂತರ ಬೇರೆ, ಆಫೀಸಿನ ಕೆಲಸದ ಒತ್ತಡ. ಏನೋ…. ಒಟ್ಟಾರೆ ಅವರು ಎಲ್ಲಿದ್ದರೂ ಹೇಗಿದ್ದರೂ ಸುಖವಾಗಿದ್ದರೆ ಸಾಕು ಎಂಬ ಹಾರೈಕೆ.
ತಮಗೆ ಮದುವೆಯಾಗಿ ತೀರ್ಥಹಳ್ಳಿಯಿಂದ ಬೆಂಗಳೂರಿಗೆ ಬರುವಾಗ ಅಪ್ಪ-ಅಮ್ಮ, ಮನೆಯವರೆಲ್ಲರೂ ಕಣ್ಣೀರು ಕರೆದಿದ್ದೆಷ್ಟು! ಮಗಳನ್ನು ನೋಡಲು ಬಸ್ ಹತ್ತಿ ಗಂಟೆಗಟ್ಟಲೆ ಪ್ರಯಾಣ ಮಾಡಬೇಕೆನ್ನುವ ದುಗುಡ…. ‘ಹೋದ ಕೂಡಲೆ ಕಾಗದ ಬರಿ…. ಮರೀಬೇಡ ಮತ್ತೆ…. ಜೋಪಾನವಾಗಿ ಹೋಗಿಬನ್ನಿ’ ಎಂದು ಕಂಗಳಲ್ಲಿ ನೀರುತುಂಬಿಕೊಂಡು, ಮತ್ತೇನೋ ಮರೆತವರಂತೆ ಒಳಗೆ ಓಡಿ ತರಲು ಹೋಗುವ ಅಮ್ಮ…. ಮರೆತದ್ದಕ್ಕಿಂತ ಇನ್ನೊಂದು ಕ್ಷಣ ಮಗಳನ್ನು ನೋಡಬಹುದಲ್ಲಾ ಎಂಬ ಮಮಕಾರವೇ ಇದ್ದೀತೆ ? ನಿನ್ನದೊಂದು ಹಾಳು ಮರೆವು…. ಮೊದಲೇ ಎಲ್ಲಾ ನೆನಪುಮಾಡಿಕೊಳ್ಳಬಾರದೆ? ಒಟ್ಟಾರೆ ನೀನು ಅವರಿಗೆ ಬಸ್ ತಪ್ಪಿಸಿ ಹಾಕೋದೇ ಸೈ ಎಂದು ದೂರುತ್ತಲೇ, ಕಾಗದ ಬರೆಯೋಕೆ ಉದಾಸೀನ ಮಾಡಬೇಡ ಪುಟ್ಟಿ” ಎಂದು ಮತ್ತೆ ಮತ್ತೆ ಎಚ್ಚರಿಸುತ್ತಲೇ ಇರುವ ಅಪ್ಪ…. ಮತ್ತೆ ಒಂದು ದಿನ ಬಿಟ್ಟು ಅಂಚೆಗೆ ಕಾಯುವ ಮನೆ ಮಂದಿ; ಆ ದಿನ ಬರಲಿಲ್ಲವೆಂದರೆ ಅಂಚೆಯವನದೇ ತಪ್ಪೇನೋ ಎನ್ನುವಂತಹ ಹಪಹಪಿಕೆ…. ಈಗಿನ ಹಾಗೆ ಕ್ಷಣಕ್ಷಣಕ್ಕೂ ಕಾಮೆಂಟರಿ ಹೇಳುತ್ತಿರಲು, ವಿಡಿಯೋ ಚಾಟ್ ಮಾಡಲು ಮೊಬೈಲ್ ಇರಲಿ ಲ್ಯಾಂಡ್ಲೈನ್ ಆದರೂ ಇರುತ್ತಿತ್ತೆ?
ಹೊರಡುವಾಗಲೇ ಮತ್ತೆಂದು ತವರಿಗೆ ಭೇಟಿ ಎಂದು ಲೆಕ್ಕ ಹಾಕುವ ಮನಸ್ಸು…. ಹುಟ್ಟಿ ಬೆಳೆದ ಊರಿನ ಪಾಶ. ತವರಿನಿಂದ ಮುನ್ನೂರೈವತ್ತು ಕಿ.ಮೀ.ಗಳ ದೂರದಲ್ಲಿದ್ದೇನಲ್ಲ ಎಂದು ಮಿಡುಕುವ ಹೃದಯ…. ಮತ್ತೆ ಮತ್ತೆ ಸರಿದು ಹೋಗುವ ಹಚ್ಚ ಹಸಿರಿನ ತವರಿನ ದೃಶ್ಯಾವಳಿ….
“ಊಟ ತಿಂಡಿ ಸರಿಯಾಗಿ ಮಾಡ್ತಿದ್ಯಾ…. ಅಥವಾ ಇನ್ನೂ ದಾಕ್ಷಿಣ್ಯವಾ…. ನೋಡು ಹಂಚಿಕಡ್ಡಿ ಥರ ಒಣಗಿಕೊಂಡಿದ್ದಿ….” ಅಮ್ಮನ ಅಕ್ಕರೆಯ ಕಣ್ಣುಗಳಿಗೆ ಮಗಳು ಯಾವಾಗಲೂ ತೆಳ್ಳಗಾದಂತೆಯೇ ಭಾಸ…. ತಮಗೂ ಅಷ್ಟೆ, ಏನಾದರೂ ನೆವ ಸಿಕ್ಕರೆ ಸಾಕು ತವರಿಗೆ ಹೋಗುವ ಧಾವಂತ…. ಬರಬರುತ್ತಾ ಮನೆ-ಮಕ್ಕಳು, ಜವಾಬ್ದಾರಿ…. ಆದರೂ ತಪ್ಪದ ಆ ಸೆಳೆತ….
ಈಗ ತಮ್ಮ ಮಗಳಿಗೇಕೆ ಹಾಗನಿಸುವುದಿಲ್ಲ…. ಮಾನಸಿಕವಾಗಿ ಅವರು ಅಷ್ಟು ದೃಢವಾಗಿರಲೇಬೇಕಲ್ಲವೆ…. ಹಾಗಿಲ್ಲವಾದರೆ ವಿದೇಶದಲ್ಲಿ ಅವರು ಬಾಳಿದಂತೆಯೆ…. ತುಟಿಯಂಚಿನಲ್ಲಿ ನಗು ಸುಳಿದಿತ್ತು ಕನಕಾರಿಗೆ. ಮದುವೆ ಮಾಡಿ ಗಂಡನ ಮನೆಗೆ ಹೆಣ್ಣುಮಕ್ಕಳನ್ನು ಕಳಿಸುವ ಸಂಪ್ರದಾಯವೇನೋ ಹಿಂದಿನಿಂದ ಬಂದಿದ್ದು. ಆದರೀಗ…. ಗಂಡುಮಕ್ಕಳನ್ನೂ ಓದಲೆಂದು ಹೊರಗೆ ಕಳುಹಿಸಿಬಿಟ್ಟರೆ ಅವರು ಮತ್ತೆ ತಮ್ಮೊಂದಿಗೆ ಇರುತ್ತಾರೆಂಬ ನಂಬಿಕೆಯೇ ಹುಸಿಯಾಗಿಬಿಟ್ಟಿದೆ. ಹೆಚ್ಚಿನ ಓದು.. ನಂತರ ಒಳ್ಳೆಯ ಉದ್ಯೋಗ…. ಆಮೇಲೆ ಅಲ್ಲೇ ಮನೆ, ಸಂಸಾರ….
ದೂರವೆಂದರೆ ಎಷ್ಟಮ್ಮ…. ಈಗ ಬೇರೆ ಗ್ರಹಗಳೇ ಹತ್ತಿರ ಎಂಬಂತಹ ಕಾಲ…. ಇನ್ನು ಅಮೆರಿಕದಿಂದ ಹೊರಟರೆ ಒಂದೇ ಒಂದು ದಿನ ಸಾಕಲ್ಲಮ್ಮ ಬರೋಕೆ…. ಮತ್ತ್ಯಾಕೆ ಚಿಂತೆ…. ನನ್ನ ಮುಖ ನೋಡ್ಬೇಕು ಅನ್ನಿಸೋ ಅಷ್ಟು ಹೊತ್ತೂ ಲ್ಯಾಪ್ಟಾಪ್ ಮುಂದೆ ಕುಳಿತುಬಿಡಿ…. ನಾವೂ ಹಾಜರಾಗಿಬಿಡುತ್ತೇವೆ ಎಂದು ನಗೆ ತೂರುವ ಮಗ.
ಮಗ, ಮಗಳು ಇಬ್ಬರೂ ಅಲ್ಲಿಯೇ ಇದ್ದಾರೆ. ತಮಗೇನೂ ಇಲ್ಲಿ ಸೂರೆ ಹೋಗುವಂತಹ ಆಸ್ತಿ ಇಲ್ಲ. ಅತ್ತೆ, ಮಾವ, ತಾಯಿ, ತಂದೆ ತೀರಿಕೊಂಡಿದ್ದಾಗಿದೆ. ತಮ್ಮನ್ನು ಅಷ್ಟಾಗಿ ನೆಚ್ಚಿಕೊಂಡಿರುವವರು, ಹಚ್ಚಿಕೊಂಡಿರುವವರು ಯಾರೂ ಇಲ್ಲ. ಎಲ್ಲರಿಗೂ ಅವರವರದೇ ಜವಾಬ್ದಾರಿ, ಗೋಜಲುಗಳು…. ಆನ್ಲೈನಿನಲ್ಲಿ ಸುಧಾರಿಸಬಹುದಾದ ಸಂಬಂಧಗಳು; ಇರುವ ಮನೆಯೊಂದನ್ನು ಬಾಡಿಗೆಗೋ ಅಥವಾ ಕ್ರಯಕ್ಕೋ ಕೊಟ್ಟುಬಿಟ್ಟರೆ ಮತ್ತೇನಿದೆ ಇಲ್ಲಿ….
ಇಲ್ಲಿಯ ಟ್ರಾಫಿಕ್ಕು, ಜನದಟ್ಟಣೆ, ಹೊಗೆ, ಧೂಳು, ಎಲ್ಲವೂ ಒಮ್ಮೊಮ್ಮೆ ಹುಚ್ಚು ಹಿಡಿಸುತ್ತದೆ. ಕಾರೇನೋ ಇದೆ. ಅದೊಂದು ಡಬ್ಬಾ ಕಾರು…. ಹೊಸದು ತೆಗೆದುಕೊಳ್ಳಬಾರದೆ ಎಂದು ಮಗ ಹೇಳಿದರೂ ತಮ್ಮ ಕಾರಿನ ಬಗ್ಗೆ ರಘೋತ್ತಮರಿಗೆ ಇರುವ ಮೋಹವೋ, ತಮಗೆ ಅದು ಸಾಕಲ್ಲಾ, ಸುಮ್ಮನೆ ಮತ್ತಷ್ಟು ಹಣ ಸುರಿಯುವುದೇಕೆ ಎಂಬ ಮನೋಭಾವವೋ, ತಾವು ಹೋಗುವುದು ಅಷ್ಟರಲ್ಲೇ ಇದೆ ಎಂಬ ಸಕಾರಣವೋ ಅಂತೂ ಅದೇ ಕಾರಿನಲ್ಲಿ ಮೆರವಣಿಗೆ….
ಅಪರೂಪಕ್ಕೆ ದೂರವೇನಾದರೂ ಹೊರಟರೆ ಕ್ಷಣಕ್ಷಣಕ್ಕೂ ಸಿಗ್ನಲ್ಗಳಿಗೆ ನಿಲ್ಲಿಸುತ್ತಾ, ಇಲ್ಲವಾದರೆ ಯರ್ರಾಬಿರ್ರಿ ತಟ್ಟಿಕೊಂಡಂತೆಯೇ ಹೋಗುವ ಆಟೋಗಳ ಉಪಟಳವನ್ನು ಸಹಿಸುತ್ತಾ, ಮೆಟ್ರೋ, ಓವರ್ ಬ್ರಿಡ್ಜ್ ಕಟ್ಟುವ ಭರಾಟೆಯಲ್ಲಿ ದಿನಕ್ಕೊಂದು ಕಡೆ ಬದಲಾಗುವ ಒನ್ವೇಗಳ ಅರಿವಿಲ್ಲದೇ ತಡಬಡಾಯಿಸುತ್ತಾ, ರಾತ್ರಿಯಾದರೆ ಎದುರಿನಿಂದ ಕಣ್ಣಿಗೆ ಚುಚ್ಚುವ ಹೆಡ್-ಲೈಟುಗಳ ಬೆಳಕಿಗೆ ಕಣ್ಣುಕಣ್ಣು ಬಿಡುತ್ತಾ, ಸುಖವಾಗಿ ಮನೆ ತಲಪುತ್ತೇವೆಯೇ ಎಂಬಂತಹ ತಳಮಳ. ಮನೆ ತಲಪಿದೊಡನೆಯೇ ಒಂದಷ್ಟು ಹೊತ್ತು ಮಂಚದ ಮೇಲೆ ಉಸ್ಸಪ್ಪಾ ಎಂದು ಮಲಗಿ ಹೊರಳಾಡಿದಾಗ ನಿಟ್ಟುಸಿರಿನೊಂದಿಗೆ ನೆಮ್ಮದಿಯ ಭಾವ.
ಎಲ್ಲವೂ ಹೌದಾದರೂ ತಮ್ಮದು ಎಂಬ ಊರಿನಲ್ಲಿ, ತಮ್ಮದೇ ಸೂರಿನಲ್ಲಿ ಸಿಗುವ ಸಂತೃಪ್ತಿಗಿಂತ ಮಿಗಿಲಾದುದಿದೆಯೇ?
ಆದರೆ ಕರುಳ ಕುಡಿಗಳ ವ್ಯಾಮೋಹ…. ದೂರದಲ್ಲಿದ್ದೂ ತಮಗಾಗಿ ಹಂಬಲಿಸುವ ಹೃದಯಗಳು…. ಹೆತ್ತ ಮಕ್ಕಳಿಗಲ್ಲದೇ ಬೇರಾರಿಗೆ ಬರಲು ಸಾಧ್ಯ?
ತಾಯಿ ಮಕ್ಕಳ ಸಂಬಂಧದ ಬಗ್ಗೆ ಹೀಗೊಮ್ಮೆ ಮಾತನಾಡುತ್ತಿರುವಾಗ ಅಜಯ್ ಹೇಳಿದ್ದನಲ್ಲ, ಇಂತಾ ಸೆಂಟಿಮೆಂಟ್ಸ್ ಎಲ್ಲಾ ನಮ್ಮ ದೇಶದಲ್ಲೇ…. ಅಮೆರಿಕದಲ್ಲಿ ಹನ್ನೆರಡನೆ ಗ್ರೇಡ್ವರೆಗೂ ಫ್ರೀ ಎಜುಕೇಶನ್…. ಆಮೇಲೆ ಮಕ್ಕಳು ಅಪ್ಪ ಅಮ್ಮನಿಗೆ ದೂರವಾಗಿದ್ದು ಓದಲು ಹೋಗುತ್ತಾರೆ, ಅಥವಾ ಕಳಿಸಿಬಿಡುತ್ತಾರೆ. ಸಾಲ ಮಾಡಿ ಓದುತ್ತಾರೆ. ಪಾರ್ಟ್ಟೈಮ್ನಲ್ಲಿ ದುಡೀತಾರೆ. ಅಪ್ಪ ಅಮ್ಮ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳಿಗೆ ಮೊಮ್ಮಕ್ಕಳಿಗೆ ಅಂತ ಉಳಿಸೋದು ಭಾರತದಲ್ಲೇ
ಹೌದು…. ಸಾಲ ಮಾಡಿ ತುಪ್ಪ ತಿನ್ನೋ ಜನಗಳು…. ಕ್ರೆಡಿಟ್ ಕಾರ್ಡ್ ಹುಚ್ಚು ಹಿಡಿಸಿದವರೇ ಅವರು…. ದುಡಿ, ತಿನ್ನು, ಕುಡಿ, ಸುತ್ತು, ಮಜಾ ಮಾಡು, ಅಷ್ಟೇ ತಾನೆ? ಅನ್ನೋ ಪ್ರತಿಕ್ರಿಯೆಗೆ, `ಛೇ ಛೇ…. ಇಲ್ಲಮ್ಮಾ ಕೆಲವರದಂತೂ ಎಂತಹ ಡೆಡಿಕೇಶನ್ ಗೊತ್ತಾ? ಎಂತಹಾ ಸಾಹಸ ಪ್ರವೃತ್ತಿ…. ಓದಿನಲ್ಲೂ ಹಾಗೆ…. ಸುಮ್ಮನೆ ಡಿಗ್ರಿಗೋ, ಉದ್ಯೋಗಕ್ಕೋ ಅಂತಾ ಅಲ್ಲದೇ ಪೂರ್ತಿ ತಮ್ಮ ತೃಪ್ತಿಗಾಗಿ, ಜ್ಞಾನದ ದಾಹ ಅಂತ್ಲೇ ಹೇಳಬಹುದು. ಊಟ-ತಿಂಡಿ, ನಿದ್ದೆ ಎಲ್ಲಾ ಬಿಟ್ಟು ಓದ್ತಾರೆ’ ಮಗನ ಮಾತು ತುಸು ವಿಸ್ಮಯ ಹುಟ್ಟಿಸಿತ್ತು.
ಒಂದು ಬ್ಯಾಗ್ ಪೂರ್ತಿ ಉಪ್ಪಿನಕಾಯಿ, ಮಸಾಲೆ ಪುಡಿ, ಹಪ್ಪಳ-ಸಂಡಿಗೆ, ತರತರಹ ತಿಂಡಿಗಳು…. ಅವರ ಹೆಸರಿನಲ್ಲಿ. ನಾವೇ ತಿನ್ನಬಹುದು ಬಿಡು…. ಬಿ.ಪಿ., ಶುಗರ್ಗೂ ಒಳ್ಳೆಯದೇ.. ಆದ್ರೆ ಆ ಪಾಟಿ ತುಂಬಿದ್ರೆ ಬ್ಯಾಗ್ ಡ್ಯಾಮೇಜ್ ಆಗ್ಬಿಟ್ಟ್ರೆ ಅನ್ನೋದೇ ಚಿಂತೆ…. ರಘೋತ್ತಮರ ವ್ಯಂಗ್ಯ ತೀವ್ರವಾಗಿಯೇ ತಟ್ಟಿದ್ದರಿಂದ ಯಾವುದನ್ನು ಕಡಮೆ ಮಾಡಬಹುದು ಎಂಬ ಯೋಚನೆಯಲ್ಲಿ ತೊಡಗಿದ್ದರು ಕನಕ.
ಉದರ ನಿಮಿತ್ತಂ ಬಹುಕೃತವೇಷಂ ವಿಮಾನದಲ್ಲಿರುವ ಗಗನಸಖಿಯರು ಧರಿಸಿರುವ ಉಡುಪು ನೋಡಿದಾಗ ಅನ್ನಿಸಿತು. ಎಷ್ಟೆಲ್ಲಾ ತರಬೇತಿ ಅವರಿಗೆ, ಎಂತಹ ತಾಳ್ಮೆ ಇರಬೇಕು; ಯಾರು ಏನು ಕೇಳಿದರೂ ಬೇಸರಿಸುವಂತಿಲ್ಲ. ಮುಖ ಸಿಂಡರಿಸುವುದಿರಲಿ, ಹುಬ್ಬು ಕೊಂಕಿಸುವಂತೆಯೂ ಇಲ್ಲ. ಒಬ್ಬರಂತೂ ಟಿಶ್ಯೂನಲ್ಲೇ ಚೆನ್ನಾಗಿ ಮೂಗೊರೆಸಿ ಅದನ್ನೇ ಕಾಫಿ ಕುಡಿದ ಕಪ್ನಲ್ಲಿ ಹಾಕಿಕೊಟ್ಟಿದ್ದರು. ಮುಂದಿನವರೊಬ್ಬರು ಕೈ ಎತ್ತಿ ಮೈ ಮುರಿದದ್ದು ಇನ್ನೇನು ಗಗನ ಸಖಿ ಹಿಡಿದಿದ್ದ ತಿಂಡಿಯ ಟ್ರೇಯನ್ನು ಬೀಳಿಸುವುದರಲ್ಲಿತ್ತು. ಹೇಗೋ ಮುಂದಕ್ಕೆ ಸರಿದು ಸಾವರಿಸಿಕೊಂಡಿದ್ದರಿಂದ ಸರಿ ಹೋಗಿತ್ತು.
ವಿಮಾನದಲ್ಲಿ ತಮ್ಮಂತೆ ನಾಲ್ಕಾರು ಮಹಿಳೆಯರು ಸೀರೆ ಉಟ್ಟವರು, ಮತ್ತೆ ಕೆಲವರು ನಡು ವಯಸ್ಸಿನವರೇ ಪ್ಯಾಂಟು ಹಾಕಿಕೊಂಡವರು, ಬಾಣಂತನಕ್ಕೆ ಹೋಗುತ್ತಿರುವವರು, ವಿದೇಶಕ್ಕೆ ಪ್ರಥಮ ಭೇಟಿ ಮಾಡುವ ಉತ್ಸಾಹದಿಂದಿರುವವರು, ಶಾಶ್ವತವಾಗಿ ಅಲ್ಲೇ ನೆಲೆಸಲು ಹೋಗುವವರು, ಅವರ ಮನದಲ್ಲಿ ದುಗುಡವಿದೆಯೆ, ಸಂತಸವಿದೆಯೆ, ಅರಿಯಲಾಗದ ಮುಖಭಾವ.
ತಾವಾದರೂ ಏತಕ್ಕಾಗಿ ಎಲ್ಲರ ಮುಖಗಳನ್ನೂ ಪರೀಕ್ಷಾರ್ಥವಾಗಿ ದೃಷ್ಟಿಸುವುದು…. ಕಿಟಕಿಯ ಪಕ್ಕದ ಸೀಟು…. ಸಾಕೆನಿಸುವಷ್ಟು ಆಕಾಶ, ಸೂರ್ಯ, ಮೋಡಗಳನ್ನು ದಿಟ್ಟಿಸುತ್ತಾ ಅನಂತತೆಯ ಬಗ್ಗೆ, ಖಗೋಳದ ಬಗ್ಗೆ ಯೋಚಿಸಿದ್ದಾಯಿತು.
ಕೆಳಗಿನ ಸಮುದ್ರ ಮರುಭೂಮಿಗಳನ್ನು ಲೆಕ್ಕಿಸದೆ ಹಾರುತ್ತಿರುವ ಲೋಹದ ಹಕ್ಕಿ. ಒಂದೊಮ್ಮೆ ಏನಾದರೂ ತೊಂದರೆಯಾಗಿಬಿಟ್ಟರೆ…. ತಟ್ಟನೆ ಮೈ ಬೆವೆತಿತ್ತು. ಈಗ ಏಕಾದರೂ ಅಂತಹ ಯೋಚನೆ ಮಾಡಬೇಕು…. ಯಾವಾಗ ಏನು ಬೇಕಾದರೂ ಆಗಬಹುದು. ಅದೇ ಹಕ್ಕಿಯಾದರೆ ಏನೂ ಸಿದ್ಧತೆಯಿಲ್ಲದೆ ಕೆಳಕ್ಕಿಳಿಯಬಹುದು, ಹಾರಬಹುದು. ಎಲ್ಲಾ ಯೋಜನೆಯಂತಿದ್ದರೆ ಮಾತ್ರ ಪೈಲಟಿಗೆ ಸುಸೂತ್ರ. ಅನಿವಾರ್ಯ ಪ್ರಸಂಗಗಳಲ್ಲಿ ನದಿ, ಸಮುದ್ರಗಳಲ್ಲಿ ವಿಮಾನ ಲ್ಯಾಂಡ್ ಮಾಡಿಸಿ, ಜನರನ್ನು ಉಳಿಸಿದ ಉದಾಹರಣೆಗಳಿದ್ದರೂ ಅದು ಬೆರಳೆಣಿಕೆಯಷ್ಟು ಮಾತ್ರ.
ಲಕ್ಷಣವಾಗಿ ಮಕ್ಕಳ ಸಂಸಾರ ನೋಡಬೇಕೆಂದು ಹೋಗುತ್ತಿರುವಾಗ ಇದೆಂತಹ ಅಪಶಕುನದ ಯೋಚನೆ…. ಅಂದರೆ ಬದುಕಿನ ಬಗ್ಗೆ ಎಂತಹ ಆಸಕ್ತಿ, ಎಂತಹ ನಂಬಿಕೆ! ನಮಗೇನೂ ಆಗಬಾರದೆನ್ನುವ ಸದಾಶಯ…. ಮಧ್ಯೆ ಮಧ್ಯೆ ದೇಶಗಳು ಬದಲಾಗುತ್ತಿದ್ದಂತೆ ಕಾಲದ ವ್ಯತ್ಯಾಸ! ಒಟ್ಟಾರೆ ತಮಗೆ ಸುದೀರ್ಘ ಹಗಲಾದರೂ ಭಾರತದ ರಾತ್ರಿಗೆ ಮುಚ್ಚಿಹೋಗುವ ಕಣ್ಣುಗಳು…. ಮನೆಯಲ್ಲಿ ಅಮೂಲ್ಯವಾದುದೇನನ್ನೂ ಇಡದೆ ಸುರಕ್ಷತೆಯ ಬಗ್ಗೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದರೂ ಆಗಲೇ ಶುರುವಾದ ಭೀತಿ…. ಇರುವುದೊಂದು ಮನೆಯಷ್ಟೆ ಎಂದುಕೊಂಡರೂ ಬೇಕಾದ, ಬೇಡವಾದ, ಬದುಕಿಗೆ ಪೂರಕವಾದ ಎಷ್ಟೋ ವಸ್ತುಗಳು; ಜೀವನ ಚಿತ್ರಗಳು…. ಅಲ್ಲಿ ಸರಿದುಹೋದ ಘಟನೆಗಳು…. ಮದುವೆಯಾಗಿ ಪಡಿ ಎಡವಿ ಬಂದಾಗಿನಿಂದ ಆ ಮನೆ ಸಾಕ್ಷಿಯಾದದ್ದೇನು ಸ್ವಲ್ಪವೆ? ಕಾಲಕ್ಕೆ ತಕ್ಕಂತೆ ಕೆಲವೊಂದು ಬದಲಾವಣೆಗಳನ್ನು ಕಂಡ ನೆಲ, ಮಹಡಿ, ಗೋಡೆಗಳು….
ಸುಮಾರು ಒಂದು ವರ್ಷದೊಳಗಿನ ಮಗುವೆಂದು ಕಾಣುತ್ತದೆ…. ಆಚೀಚೆ ಹೋಗಲಾರದ ನಿರ್ಬಂಧದಿಂದ ಚಡಪಡಿಸುತ್ತಾ ಅಳುತ್ತಿತ್ತು. ಅಮ್ಮನ ಓಲೈಕೆಗೂ ಸುಮ್ಮನಾಗದೆ ಕೊನೆಗೆ ಗಗನಸಖಿಯೊಬ್ಬರು ಚಾಕ್ಲೆಟ್ ಬಾಯಿಗಿಡುತ್ತಿದ್ದಂತೆ ಅಳು ನಿಲ್ಲಿಸಿತ್ತು.
ಮೊಮ್ಮಗು ಅಚಿಂತ್ಯ ಏನು ಮಾಡುತ್ತಿರಬಹುದು ಈಗ…. ಗುರುತಿಲ್ಲದಿರುವುದರಿಂದ ತಮ್ಮೊಡನೆ ಬಾರದಿರಬಹುದು. ಆ ಮಗುವಿಗೆ ತಾಯ್ನಾಡೆಂದರೆ ಅಮೆರಿಕವೇ ಅಲ್ಲವೇ? ಆರತಿಯ ಮಗಳು ದಿಶಾಗೂ ಹಾಗೆ…. ಅವಳಿಗೀಗಾಗಲೇ ಹತ್ತು ವರ್ಷ. ಅಲ್ಲಿಯೇ ಹುಟ್ಟಿ ಬೆಳೆಯುತ್ತಿರುವ ಮಕ್ಕಳಿಗೆ ಭಾರತದ ಬಗ್ಗೆ ಅಭಿಮಾನವಿರುತ್ತದೆಯೆ? ಅಲ್ಲಿಯ ಭವ್ಯ ಇತಿಹಾಸ, ಸಂಸ್ಕೃತಿ ಕುರಿತು ಹೇಳಿದರೆ, `ಮತ್ತೆ ಯಾಕೆ ಅಪ್ಪ ಅಮ್ಮ ಅವೆಲ್ಲವನ್ನೂ ಬಿಟ್ಟು ಬಂದಿದ್ದಾರೆ’ ಎಂದು ಯೋಚಿಸುವುದಿಲ್ಲವೇ? ಅನಿವಾರ್ಯತೆ ಎಂದರೆ ನಂಬುತ್ತಾರೆಯೇ? ಅದು ದಿಟವೇ? ಏನು ಮಾಡಬಹುದು ಈಗ? ಅಲ್ಲಿಯ ಬೇರುಗಳನ್ನು ಕಳಚಿಕೊಂಡು ಇಲ್ಲಿ ಬೇರಿಳಿಸುವ ಯತ್ನದಲ್ಲಿರುವಾಗಲೇ ಹೊಸ ಸಸಿಯನ್ನಾದರೂ ಮೂಲದಲ್ಲೇ ಊರಲಾಗುವುದಿಲ್ಲವೇ? ಇಲ್ಲಿಗೆ ಒಗ್ಗಿದ ಗಿಡ ಅಲ್ಲಿ ನಳನಳಿಸೀತೇ? ಬಾಡಿ ಹೋಗುವುದಿಲ್ಲವೇ? ತಾಯಿ ಬೇರು ಅದಕ್ಕೆ ಸಮ್ಮತಿಸೀತೇ?
ಅಚಿಂತ್ಯಳನ್ನು ನೋಡಿದೊಡನೆ ಪ್ರಯಾಣದ ಆಯಾಸವೆಲ್ಲಾ ಮಾಯವಾಗಿತ್ತು. ಇದಕ್ಕೇ ಅಲ್ಲವೇ ರಕ್ತಸಂಬಂಧ ಎನ್ನುವುದು. ಅಜಯನನ್ನೇ ಹೋಲುವ ಮುದ್ದು ಮೊಮ್ಮಗಳು…. ಹೆಚ್ಚು ಹಟವಿಲ್ಲವೆಂದು ರಕ್ಷಳ ತಾಯಿಯೂ ಮಗುವಿನ ಪರವಾಗಿ ಒಳ್ಳೆಯ ಅಭಿಪ್ರಾಯವನ್ನೇ ಕೊಟ್ಟಾಗ ತಮ್ಮ ಮುಂದಿರುವ ಮಗುವಿನ ಹೊಣೆಯ ಬಗ್ಗೆ ಸಮಾಧಾನವಾಗಿತ್ತು ಕನಕಾಗೆ. ಗೃಹಪ್ರವೇಶದ ಹಿಂದಿನ ದಿನದ ರಾತ್ರಿ ಆರತಿ ದಿಶಾಳೊಂದಿಗೆ ಬಂದಿದ್ದು ಎಲ್ಲರಿಗೂ ಸಂತೋಷವಾಯಿತಾದರೂ, ಅಭಿನವ್ ಬಾರದ ನಿರಾಶೆ ಹಾಗೇ ಕೊರೆಯುತ್ತಿತ್ತು. ಮದುವೆಯಾಗಿ ಅಮೆರಿಕಕ್ಕೆ ಬಂದಮೇಲೆ ಒಮ್ಮೆ ಮಾತ್ರ ಮಾವನ ಮನೆಗೆಂದು ಬಂದಿದ್ದು. ಅದೂ ಕೇವಲ ಒಂದೆರಡು ಗಂಟೆಗಳ ಮಟ್ಟಿಗಷ್ಟೆ. ಕೆಲಸದ ಒತ್ತಡಗಳಿಂದಾಗಿ ಆರತಿ ಬಂದಾಗಲೂ ಅವರು ಭಾರತಕ್ಕೆ ಬಂದಿರಲಿಲ್ಲ. ಹಾಗಾಗಿ ಅಷ್ಟು ಆತ್ಮೀಯತೆ ಅಳಿಯನೊಂದಿಗೆ ಬೆಳೆಯಲೇ ಇಲ್ಲ.
ಚೆನ್ನಾಗಿದ್ದೀಯಾ…. ಎಷ್ಟು ಸೋತುಹೋಗಿದ್ದೀಯಲ್ಲೇ…. ಮಗಳು ಚೆನ್ನಾಗಿ ಆಗಿದ್ದಾಳೆ…. ನೀನೇ ಸ್ವಲ್ಪ ಹೇಳಿ ಅಳಿಯಂದಿರನನ್ನು ಕರ್ಕೊಂಡು ಬರಬಹುದಿತ್ತಲ್ಲೇ…. ಸಹಜವಾಗಿ ಕೇಳಿದ್ದರು ಕನಕ.
ಬಂದವರ ಬಗ್ಗೆ ಸಂತೋಷ ಪಡುವುದು ಬಿಟ್ಟು ಬರದೇ ಇರುವವರ ಬಗ್ಗೆ ಚಿಂತೆ ಯಾಕೆ? ಆಕ್ಷೇಪದ ಧ್ವನಿಗೆ ಸುಮ್ಮನಾಗಿದ್ದರು ತಾಯಿ. ಮಗಳಿಗೆ ಪ್ರಯಾಣದ ಆಯಾಸವಾಗಿರಬಹುದು ಎಂದೆನಿಸಿತ್ತು. ಮೊಮ್ಮಗಳಿಗೆ ಶಾಲೆಗೆ ರಜೆ. ಮಗಳು ಇಲ್ಲೇ ನಾಲ್ಕು ದಿನಗಳಿರುವಂತೆ ಹೇಗೋ ಹೊಂದಿಸಿಕೊಂಡು ಬಂದಿದ್ದಾಳೆ. ಅಮ್ಮಾ…. ಜೆಟ್ ಲಾಗ್ ಎಲ್ಲ ಹೋಯ್ತಾ. ನೀನು, ಅಪ್ಪ ಆರಾಮಿದ್ದೀರಾ? ಅಕ್ಕರೆಯ ದನಿಯಲ್ಲಿ ಮಗಳು ವಿಚಾರಿಸಿಕೊಂಡಾಗ ಹಾಯೆನಿಸುವ ಭಾವ.
ಮೊಮ್ಮಗಳು ಈಗಾಗಲೇ ಅಷ್ಟುದ್ದದ ಹುಡುಗಿಯಾಗಿಬಿಟ್ಟಾದಳಲ್ಲಾ…. ಮುದ್ದಾಗಿರುವ ದಿಶಾಳನ್ನು ಹತ್ತಿರಕ್ಕೆ ಎಳೆದುಕೊಂಡರೆ, ಲೀವ್ ಮಿ ಅಮ್ಮಮ್ಮಾ ಎಂದು ಕೊಸರಿಕೊಂಡಳು ಬಾಲೆ. ಕನಕಾರ ಅನುಭವಸ್ತ ಕಣ್ಣುಗಳು ಅವಳ ಮೈಕಟ್ಟನ್ನು ಅಂದಾಜಿಸುತ್ತಿದ್ದವು. ಸಧ್ಯದಲ್ಲೇ ಮೈನೆರೆದುಬಿಡಬಹುದು ಹುಡುಗಿ…. ಈಗೆಲ್ಲಾ ಬೇಗ ತಾನೆ? ಮಾತಿನ ರೀತಿಯೆಲ್ಲವೂ ಅಮೆರಿಕನ್ನರ ರೀತಿಯಂತೆಯೇ…. ಇನ್ನೊಂದು ಮೂರು-ನಾಲ್ಕು ವರ್ಷಗಳೊಳಗಾಗಿಯಾದರೂ ಆರತಿ ಭಾರತದಲ್ಲೇ ಇರುವಂತೆ ಬಂದುಬಿಟ್ಟಿದ್ದರೆ ಚೆನ್ನಾಗಿತ್ತು.’ ಮಾತೃಹೃದಯ ಕನಸು ಕಟ್ಟುತ್ತಿರುವಾಗಲೇ ರಘೋತ್ತಮ್ ತಡೆಯಲಾರದೆ ಮಗಳಿಗೆ ಹೇಳಿದ್ದರು ಅಭಿನವ್ ಹೇಗಾದರೂ ಅಡ್ಜಸ್ಟ್ ಮಾಡಿಕೊಂಡು ಬಂದಿದ್ದರೆ ಚೆನ್ನಾಗಿತ್ತು. ಅಳಿಯನ ಮುಖ ನೋಡಿದ್ದೇ ಮರೆಯುವಹಾಗೆ ಆಗಿದೆ.
ಮರೆತರೇನೂ ಚಿಂತೆಯಿಲ್ಲ ತಂದೆಯ ಕಳಕಳಿಯ ದನಿಗೆ ಹೀಗೆ ಉತ್ತರಿಸಬಾರದಿತ್ತೇನೋ ಎಂದು ಮಿಡುಕುತ್ತಾ ಮರುದಿನದ ಸಿದ್ಧತೆಯ ನೆವ ಹೇಳಿ ಒಳ ನಡೆದಿದ್ದಳು. ಬಂದಿರುವವಳೊಂದಿಗೆ ಖುಷಿಯಾಗಿ ಮಾತನಾಡುವುದು ಬಿಟ್ಟು ಅಳಿಯನ ಪ್ರಸ್ತಾಪವನ್ನು ತೆಗೆದದ್ದು ಸರಿಯಾಗಲಿಲ್ಲವೆನೋ ಎಂದು ಪೇಚಾಡಿಕೊಂಡಿದ್ದರು ರಘೋತ್ತಮ್.
ಸತ್ಯನಾರಾಯಣ ಪೂಜೆ, ಊಟಕ್ಕೆ ಕೇಟರಿಂಗ್, ಸುಮಾರು ಮೂವತ್ತು ಜನರಿಗೆ ಬಫೆ. ಎಲ್ಲವೂ ಅಚ್ಚ ಕರ್ನಾಟಕ ರೀತಿಯಲ್ಲಿಯೇ. ಇಲ್ಲಿಯೂ ಇಷ್ಟೆಲ್ಲಾ ಮಾಡಲು ಸಾಧ್ಯವಲ್ಲ ಎಂಬ ಹಿಗ್ಗು ಬೀಗಿತ್ತಿಯರಿಗೆ. ಮನೆ ಚೆನ್ನಾಗಿದೆಯೆಂಬ ಸಂತಸವೂ ಸೇರಿಕೊಂಡಿತ್ತು. ಮೂರು ಬೆಡ್ರೂಮುಗಳ ಮಹಡಿ ಮನೆ, ಮುಂದೆ ಬಟನ್ ರೋಜ಼್ ಗಿಡಗಳು, ಅಚ್ಚುಕಟ್ಟಾಗಿ ಇಕ್ಕೆಡೆಗಳಲ್ಲಿ ಹಚ್ಚಹಸಿರಾಗಿ ಕಂಗೊಳಿಸುವ ಲಾನ್. ಅಕ್ಕ-ಪಕ್ಕದಲ್ಲೂ ಇಂತಹುದೇ ಮನೆಗಳು. ಅದರಲ್ಲೂ ಅನೇಕರು ಭಾರತೀಯರು, ವಿಶೇಷವೆಂದರೆ ಕನ್ನಡಿಗರು ಇದ್ದಾರೆಂಬುದು ಮತ್ತಷ್ಟು ಖುಷಿ.
ಲಕ್ಷಣವಾಗಿ ಸೀರೆ ಉಟ್ಟು, ಕಳೆಕಳೆಯಾಗಿದ್ದು, ಕನ್ನಡದಲ್ಲೇ ಮಾತನಾಡುತ್ತಿದ್ದ ರತ್ನ ಗೃಹಪ್ರವೇಶದ ಸಮಾರಂಭಕ್ಕೆ ಬಹಳ ಸಹಕಾರಿಯಾಗಿದ್ದರು. ರಕ್ಷಾಳಿಗೆ ಸಂಬಂಧವಂತೆ; ಅವರ ಮನೆ ನಡೆದುಹೋಗುವ ಅಂತರದಲ್ಲಿದೆಯಂತೆ. ನಲವತ್ತು ವರ್ಷಗಳಿಂದ ಅಮೆರಿಕದಲ್ಲಿಯೆ ವಾಸ್ತವ್ಯ; ಭಾರತದಿಂದ ಬರುವ ಅನೇಕರಿಗೆ, ಇವರ ಆತಿಥ್ಯ ಅವರವರ ಅಮ್ಮನನ್ನು ನೆನಪಿಸುತ್ತದಂತೆ. ಅದೂ ಇದೂ ಮಾತನಾಡುತ್ತಾ, ಈಗಾದ್ರೂ ಆನ್ಲೈನ್, ವಿಡಿಯೊ ಚಾಟ್ ಎಲ್ಲಾ ಇವೆ. ಆಗ ಅಮ್ಮನನ್ನ ಅಪ್ಪನನ್ನ ನೆನೆಸ್ಕೊಂಡು ಅಳ್ತಾ ಕೂರ್ತಿದ್ದೆ ರತ್ನ ಹಳೆಯ ನೆನಪುಗಳನ್ನು ನೆನಪಿಸಿಕೊಳ್ಳುತ್ತಿದ್ದರು.
ಇವರು ಇದ್ದಿದ್ದು ನನಗೂ ಎಷ್ಟೋ ಸಹಾಯ ಆಯ್ತು. ಇಲ್ಲಿ ಬಾಣಂತನ ಮಾಡೋದು ಅಂದ್ರೆ ನಮ್ಮ ಮನೆಯಲ್ಲಿ ಮಾಡಿದ ಹಂಗೆ ಆಗತ್ತಾ? ರಕ್ಷಾಳ ಅಮ್ಮನ ಕೃತಜ್ಞತೆಯ ನುಡಿಗಳಿಗೆ ಅದೇನು ಮಹಾ, ನನಗೆ ಗೊತ್ತಿದ್ದಿದ್ದು ಒಂದಿಷ್ಟು ಏನೋ ಹೇಳೋದು, ಕೈಲಾಗಿದ್ದು ಚೂರು ಪಾರು ಮಾಡಿಕೊಡೋದು, ಅಲ್ಲಿ ಕಳ್ಕೊಂಡಿದ್ದು ಇಲ್ಲಿ ಪಡ್ಕೊಳ್ಳೋ ಆಸೆ’ ಅವರ ನಗುವಿನಲ್ಲಿದ್ದ ಸಂಪೂರ್ಣ ಭಾವ ಅರಿವಾಗುವಂತಿರಲಿಲ್ಲ.
ನೀವು ಇಲ್ಲೇ ಸೆಟ್ಲ್ ಆಗ್ತೀರಾ ಆಂಟೀ…. ಹೇಗೂ ಮೂರು ಬೆಡ್ ರೂಮ್ಸ್ ಮನೆ…. ಇಲ್ಲಿ ಇಷ್ಟು ಚೀಪ್ ಆಗಿ ಸಿಕ್ಕಿರೋದು ಅಜಯ್ ಅದೃಷ್ಟ. ಮಗನ ಸ್ನೇಹಿತರ ಮೆಚ್ಚುಗೆಗೆ ಸ್ಪಂದಿಸುವ ಬಗೆ ಕನಕಾಗೆ ತಿಳಿಯಲಿಲ್ಲ.
ಯಾಕೆ ಆಂಟಿ.. ಏನು ಯೋಚಿಸ್ತಿದ್ದೀರ.. ಇಲ್ಲಿ ಹೇಗಪ್ಪಾ ಇರೋದು ಅನ್ನಿಸತ್ತಾ? ನಾವು ಎಲ್ಲಿದ್ದರೂ ಇಂಡಿಯನ್ಸೇ…. ಹೊರಗೆ ಅಮೆರಿಕನ್ಸ್ ಆಗಿದ್ದರೂ ಮನೆಯ ಒಳಗೆ ಇಂಡಿಯನ್ಸ್ ಆಗಿರ್ತೀವಿ. ಅಲ್ಲಿ ಬೆಂಗಳೂರಿನಲ್ಲಿ ಹೊರಗೆ ಇಂಡಿಯನ್ಸ್ ಆಗಿದ್ದರೆ ಮನೆಯೊಳಗೆ ಅಮೆರಿಕನ್ಸ್ ಆಗಿರ್ತಾರೆ. ಎಲ್ಲಾ ಹಣದ ಮಹಿಮೆ ಆಂಟಿ. ನಗುತ್ತ ತಲೆಯಲ್ಲಾಡಿಸಿದ್ದರು ಕನಕ.
ಹಣವೊಂದೇ ಕಾರಣವೇ…. ಅದಕ್ಕೆ ಸರಿಸಮಾನವಾದ ವಿಧ, ವಿಧ ಆಕರ್ಷಣೆಗಳು…. ಮತ್ತೆ ಅಜಯ್ ಹೇಳುತ್ತಿದ್ದನಲ್ಲಾ ಇಲ್ಲಿಯ ಕೆಲವರಿಗೆ ಹೊರಗಿನವರನ್ನು ಕಂಡರೆ ಸಿಟ್ಟು, ಅಸೂಯೆ. ತಮ್ಮ ಪಾಲಿನದನ್ನು ಅವರು ಕಿತ್ತುಕೊಳ್ಳುತ್ತಿದ್ದಾರೆಂಬ ಭಾವ…. ಹಾಗೆಯೇ ಜಾಬ್ ರಿಸ್ಕ್ ಕೂಡಾ ಇದ್ದೇ ಇರುತ್ತದೆ. ಬೆಳಗ್ಗೆ ಡ್ಯೂಟಿಗೆ ಹಾಜರಾಗಿ, ಒಂದು ಮೀಟಿಂಗ್ ಮುಗಿಸಿದ ಟೆಕ್ನಿಕಲ್ ಮ್ಯಾನೇಜರ್ ಮತ್ತೊಂದು ಮೀಟಿಂಗಿಗೆ ನಾಪತ್ತೆ. ಅವರನ್ನು, ಎಂ.ಡಿ., ಎರಡು ವಾರಗಳ ಸಂಬಳ ಕೊಟ್ಟು ಮನೆಗೆ ಕಳುಹಿಸಿದ್ದರಂತೆ. ಕೆಲಸದ ಸುರಕ್ಷತೆ ಎನ್ನುವುದು ಇಲ್ಲವೇ ಇಲ್ಲ. ಇನ್ನು ಇಲ್ಲಿಯವರೊಂದಿಗ ಬೆರೆಯುವುದೂ ಅಷ್ಟು ಸುಲಭವಲ್ಲ. ಅವರ ರೀತಿ ನೀತಿ ವ್ಯವಹರಿಸಲು ತುಸು ಕಷ್ಟವೇ! ಅವೆಲ್ಲಕ್ಕೂ ನಾವು ಸಿದ್ಧರಾಗಲೇಬೇಕು.
ಆಗಲೇ ರಕ್ಷಾಳ ತಾಯಿ, ತಂದೆಯರಿಗೆ ಹೊರಡುವ ಗಡಿಬಿಡಿ. ಮೊಮ್ಮಗುವನ್ನು ಅಗಲುವ ಬೇಸರ. ಮತ್ತೆ ಮತ್ತೆ ಮಗಳಿಗೆ ಎಚ್ಚರಿಕೆಯ ಮಾತುಗಳು ಎಲ್ಲಾ ಭಾರತೀಯ ತಾಯಿ, ತಂದೆಯರಂತೆ…. ಅತ್ತೆ, ಮಾವನನ್ನು ಬಿಡಲು ಏರ್ಪೋರ್ಟ್ಗೆ ಅಜಯ್ನೊಂದಿಗೆ ರಕ್ಷಾಳೂ ಹೊರಟಿದ್ದಳು. ಇದೀಗ ರಘೋತ್ತಮ್, ಕನಕಾಗೆ ಸೂಕ್ತ ಸಂದರ್ಭ ಒದಗಿತ್ತು. ಯಾಕೋ, ಏನೋ ಚಿಂತೆಯಲ್ಲಿ ಕೊರಗ್ತಾ ಇದ್ದೀ ಅನ್ನಿಸತ್ತೆ ಪುಟ್ಟಿ… ಏನಾದ್ರೂ ಸಮಸ್ಯೆಯಾ…. ಅಮ್ಮನ ಹತ್ತಿರ ಹೇಳಬಹುದಾಗಿದ್ದರೆ ಹೇಳು ಮಾತೃ ಹೃದಯದ ಮಮತೆಗೆ ಕರಗಿ ಕಣ್ಣೀರಾಗಿ ಬಿಡುವುದನ್ನು ಹೇಗೋ ತಡೆದು ಮುಖ ಪಕ್ಕಕ್ಕೆ ತಿರುಗಿಸಿಕೊಂಡಿದ್ದಳು ಆರತಿ.
ನಾನು, ಅಭಿನವ್ ಒಟ್ಟಿಗಿಲ್ಲ.. ಡೈವೋರ್ಸ್ ಆಗಿದೆ.
ಆಂ…. ದಂಪತಿಯ ದೀರ್ಘ ಉದ್ಗಾರದಲ್ಲಿ ಅರಗಿಸಿಕೊಳ್ಳಲಾಗದ ಅಚ್ಚರಿ, ದುಗುಡದ ಲೇಪ…. ನಿಂತ ನೆಲ ಬಿರಿದಂತಹ ಅನುಭವ…. ಇಂತಹ ದುರಂತವನ್ನು ಇದುವರೆಗೂ ತನ್ನಲ್ಲೇ ಅಡಗಿಸಿಟ್ಟುಕೊಂಡ ಪರಿ ತಂದ ನೋವು, ತಾವಿದ್ದೂ ಏನೂ ಮಾಡಲಾಗದ ಅಸಹಾಯಕತೆಯ ಚಡಪಡಿಕೆ…. ಏಕೆ ಹೀಗಾಯಿತು, ಯಾರ ತಪ್ಪು…. ಹೊಂದಾಣಿಕೆಗೆ ಆಸ್ಪದವೇ ಇರಲಿಲ್ಲವೇ? ಹೆತ್ತವರೊಂದಿಗೂ ಹಂಚಿಕೊಳ್ಳಬೇಕೆನಿಸದ ಕಾಠಿಣ್ಯವೇ? ಅದರಿಂದೇನು ಲಾಭ, ದೂರವಿದ್ದವರು ನಿರಾಳವಾಗಿರಲಿ ಎಂದು ಎಲ್ಲವನ್ನೂ ನುಂಗಿಕೊಂಡಳೇ…. ಅಜಯ್ನೊಂದಿಗಾದರೂ ಹಂಚಿಕೊಂಡಿದ್ದಾಳೋ ಇಲ್ಲವೋ…. ಯಾರ ಬಳಿಯೂ ನಿಷ್ಠುರವಾಗಿ ಮಾತನಾಡದಂತಹ ಹುಡುಗಿ, ಗೋತ್ರ, ಜಾತಕ, ನಕ್ಷತ್ರ ಎಲ್ಲವನ್ನೂ ತಾಳೆ ಹಾಕಿ ಮಾಡಿದಂತಹ ಮದುವೆ…. ತಪ್ಪಿದ್ದೆಲ್ಲಿ? ಯಾವ ಹುತ್ತದಲ್ಲಿ ಯಾವ ಹಾವೋ…. ದೂರದ ದೇಶದಲ್ಲಿ ದೂರವಾದರೂ ತಿಳಿಯದು.
ನನಗೆ ಗೊತ್ತಮ್ಮ ಯಾಕೆ ಹೀಗಾಯ್ತೋ ಅನ್ನೋ ಸಂಕಟ ನಿಮಗೆ. ಕೊರಗುವುದು ಬೇಡ ಅಂತ ವಿಷಯ ಮುಚ್ಚಿಟ್ಟಿದ್ದು. ನಾನು ದುಡುಕಿದ್ದೀನಿ ಅನ್ನೋ ಪಶ್ಚಾತ್ತಾಪ ನನಗೆ ಖಂಡಿತ ಇಲ್ಲ.. ದಯವಿಟ್ಟು ಕ್ಷಮಿಸಿಬಿಡಿ ಅಪ್ಪಾ…. ಇಲ್ಲಿ ನಮ್ಮಂಥವರ ಬಗ್ಗೆ ಮಾತನಾಡಿಕೊಳ್ಳೋಕೆ, ವ್ಯಂಗ್ಯ ನುಡಿಯೋಕೆ ಜನರಿಗೆ ಪುರುಸೊತ್ತಿಲ್ಲ, ಅದು ಅವರಿಗೆ ಬೇಕಾಗಿಯೂ ಇಲ್ಲ.
ಒಬ್ಬಳೇ ಎಷ್ಟು ದುಃಖ ನುಂಗಿಕೊಂಡಿದ್ದೀಯಲ್ಲಾ ಮಗಳೆ? ಅಪ್ಪ ವಾತ್ಸಲ್ಯದಿಂದ ಬೆನ್ನು ನೇವರಿಸಿದಾಗ ಕಂಗಳು ತುಂಬಿಕೊಂಡು, ಗಂಟಲು ಕಟ್ಟಿತ್ತು.
ಈಗ ಅಲ್ಲೂ ಹಾಗೆಲ್ಲಾ ಮಾತನಾಡೋ ಕಾಲ ಹೋಗಿದೆ ಆರತಿ.. ಇಂತಹುದು ಸಾಮಾನ್ಯ ಅನ್ನೋ ಹಾಗಾಗಿದೆ. ಆದರೆ ಅವರ ಮನೆ, ಇವರ ಮನೆಯಲ್ಲಿ ಕೇಳಿದ ಕಥೆ ನಮ್ಮ ಮನೆಯಲ್ಲೂ ಯಾವತ್ತೋ ಆಗಿಹೋಗಿರೋದು ಈ ಅಪ್ಪನಿಗೆ ಗೊತ್ತೇ ಆಗಲಿಲ್ಲ ನೋಡು. ನಿಟ್ಟುಸಿರೊಂದು ಬಂದಿತ್ತು.
ಪ್ಲೀಸ್ ಅಪ್ಪಾ…. ಸಾರಿ….ಸಾರಿ…. ಅಲವತ್ತುಕೊಂಡಿದ್ದಳು.
ಮಲಗಿದ್ದ ಅಚಿಂತ್ಯ ನಿದ್ದೆಯೆಂದ ಎದ್ದ ಸದ್ದು. ತೊಟ್ಟಿಲು ತೂಗುತ್ತಿದ್ದಂತೆ ಕನಕಾರ ಮನದಲ್ಲಿ ಕಾಡಿದ ಯೋಚನೆ…. ಮಗಳೀಗ ಸಂಗಾತಿಯಿಲ್ಲದೆ ಸುಖವಾಗಿದ್ದಾಳೆಯೆ? ಮೂವತ್ತ್ನಾಲ್ಕರ ಪ್ರಾಯವಷ್ಟೆ…. ಇನ್ನೂ ಬದುಕಿನಲ್ಲಿ ಕ್ರಮಿಸಬೇಕಾದ ದೂರ ಬಹಳ…. ಒಡೆದ ಮನಗಳು ಒಂದಾಗಲು ಒಂದೂ ಅವಕಾಶವೇ ಇರಲಿಲ್ಲವೇ? ಹಿರಿಯರ ಮಧ್ಯಸ್ಥಿಕೆ ಬೇಡವಾಯಿತೆ? ದೂರವಿರುವುದೆಂದರೆ ಕಷ್ಟದಲ್ಲಿರುವಾಗ ರಕ್ತಸಂಬಂಧವನ್ನೂ ಮರೆತುಬಿಡುವುದೇ…. ಮತ್ತೊಂದು ಮದುವೆಯಾಗುವ ಇಚ್ಛೆ ಇದೆಯೇ…. ಯಾರನ್ನಾದರೂ ನೋಡಿಕೊಂಡಿದ್ದಾಳೆಯೆ? ತಾವು ಜೊತೆಯಲ್ಲಿದ್ದರೆ ಅವಳಿಗೆ ಸುಖವಾದೀತೆ ಅಥವಾ ಮತ್ತಷ್ಟು ಕಷ್ಟವೆ…. ಈಗಾದರೂ ಭಾರತಕ್ಕೆ ಮಗಳೊಂದಿಗೆ ಹಿಂತಿರುಗುವ ಮನಸ್ಸು ಮಾಡಿದರೆ…. ದಿಶಾಗೆ ಭಾರತದ ನಂಟು ಅಂಟುವಂತಾದರೆ…. ರೆ….
ನಾನೀಗ ಆರಾಮವಾಗಿದ್ದೀನಮ್ಮಾ ನನ್ನ ಬಗ್ಗೆ ಏನೂ ಯೋಚನೆ ಮಾಡ್ಬೇಡಿ…. ಅಜಯ್, ರಕ್ಷಾ ನನಗೆ ಸಹಾಯ ಮಾಡಿದ್ದಾರೆ. ನಾನು ಒಬ್ಬೊಂಟಿಯಲ್ಲ.
ಇಂಡಿಯಾಕ್ಕೆ ಹೋಗುವ ಮೊದಲು ಒಂದು ವಾರದ ಮಟ್ಟಿಗಾದರೂ ನಮ್ಮ ಮನೆಗೆ ಬನ್ನಿ. ಸೆಪ್ಟೆಂಬರ್ ಒಳಗೆ ಬಂದರೆ ಒಳ್ಳೆಯದು. ಅಲ್ಲಿ ಸನ್ನಿವೇಲಿಗಿಂತ ಚಳಿ ಹೆಚ್ಚು. ಮುಂದೆ ಆ ಬಗ್ಗೆ ಚರ್ಚೆಗೆ ಇತಿಶ್ರೀ ಹಾಡಿದ್ದಳು.
ಅಂತೂ ಎಲ್ಲಾದರೂ ಹೇಗಾದರೂ ಬದುಕೋ ಛಾತಿ ಇದೆಯಲ್ಲಾ ನಮ್ಮ ಮಕ್ಕಳಿಗೆ…. ಅಷ್ಟೇ ಸಾಕು. ತೂಗಿ ನೋಡಿದಂತೆ ಬಂದಿದ್ದವು ರಘೋತ್ತಮರ ಮಾತುಗಳು.
ಸ್ಯಾನ್ ಫ್ರಾನ್ಸಿಸ್ಕೋದ ಗೊಲ್ಡನ್ ಗೇಟ್ಬ್ರಿಡ್ಜ್ಗೆ ಅಪ್ಪ-ಅಮ್ಮ, ಆರತಿ, ದಿಶಾರನ್ನು, ಕರೆದುಕೊಂಡು ಹೊರಟಿದ್ದ ಅಜಯ್.
ವಿಶಾಲವಾದ ರಸ್ತೆಗಳು, ಹೈವೇಗಳಲ್ಲಂತೂ ನಾಲ್ಕೈದು ಲೇನ್ಗಳು, ಮಧ್ಯೆ ಮಧ್ಯೆ ಇದ್ದಕ್ಕಿದ್ದಂತೆ ಓವರ್ ಟೇಕ್ ಮಾಡುವ, ನುಸುಳುವ ಪ್ರಶ್ನೆಯೇ ಇಲ್ಲ…. ಅಲ್ಲಿ ಪಾದಚಾರಿಗಳಿಗೂ ಅವಕಾಶವಿಲ್ಲ. ಉಳಿದ ರಸ್ತೆಗಳಲ್ಲಿ, ನಡೆಯುವವರಿಗೆ ಮತ್ತು ಸೈಕಲ್ ಸವಾರರಿಗೆಂದೇ ಫುಟ್ಪಾತ್ಗಳು, ಅವರಿಗೆಂದೇ ಸಿಗ್ನಲ್ಗಳು…. ಸಿಗ್ನಲ್ ಇಲ್ಲದ ಕಡೆಗಳಲ್ಲಿ ನಡೆಯುವವರಿಗೆ ದಾರಿ ಬಿಡುವ ವಾಹನ ಚಾಲಕರ ಸೌಜನ್ಯ.. ಜೀವಕ್ಕೆ ಭಾರೀ ಬೆಲೆ ಇಲ್ಲಿ…. ಪಾದಚಾರಿಗಳ ದಾರಿಯಿಂದಾಚೆ ಯೋಜನಾಬದ್ಧವಾಗಿ ನೆಟ್ಟ ಗಿಡ, ಮರಗಳು, ಲಾನಿನ ಪಾತಿಗಳು…. ಗಿಡಗಳ ಬುಡದಲ್ಲಿ ಸುರಿದ ಮರದ ಚಕ್ಕೆ ಪುಡಿ…. ಹಾರ್ನ್ ಇಲ್ಲ, ಧೂಳು ಇಲ್ಲ, ಪೆಟ್ರೋಲ್, ಡೀಜ಼ೆಲ್ ಹೊಗೆಯಿಲ್ಲ, ಉಚ್ಚೆ, ಉಗುಳು, ಹಾರಾಡುವ ಪ್ಲಾಸ್ಟಿಕ್…. ಉಹುಂ…. ಇಲ್ಲವೇ ಇಲ್ಲ.
ಆದರೆ ಅಲ್ಲಿಯ ಜನಸಂಖ್ಯೆಗೂ, ಇಲ್ಲಿಗೂ ಹೋಲಿಸಲಾದೀತೆ…. ಎಂತಹ ಯೋಜನೆಯೂ ಅಲ್ಲಿ ಹೊಳೆಯಲ್ಲಿ ಹುಣಿಸೇಹಣ್ಣು ತೊಳೆದಂತೆ; ಏನೇಇದ್ದರೂ ತಾವಿಲ್ಲಿ ಪರಕೀಯರೆ! ಕನಕ ಇಂತಹ ಯೋಚನೆಯಲ್ಲಿರುವಾಗಲೆ ಅಜಯ್ ಕಾರು ಪಾರ್ಕ್ ಮಾಡಿಯಾಗಿತ್ತು. ದಿಶಾಗಂತೂ ಉತ್ಸಾಹವೇ ಉತ್ಸಾಹ…. ‘ಹೌ ವಂಡರ್ಫುಲ್….’ ಅವಳದ್ದು ಸಂಪೂರ್ಣ ಅಮೆರಿಕನ್ನರ ಉಚ್ಚಾರವೇ…. ಓಡಿ ಓಡಿ ಮುಂದೆ ಮುಂದೆ ಹೋಗುತ್ತಿದ್ದಳು.
ಇಂಜಿನಿಯರ್ ಒಬ್ಬರ ಅತ್ಯದ್ಭುತ ಕ್ರಿಯಾಶೀಲತೆಗೆ, ದೃಢವಿಶ್ವಾಸಕ್ಕೆ, ಕಲ್ಪನೆಯ ಸಾಕಾರಕ್ಕೆ ಸಾಕ್ಷೀಭೂತವಾಗಿರುವ ಗೊಲ್ಡನ್ ಗೇಟ್ ಬ್ರಿಡ್ಜ್…. ತೂಗುಸೇತುವೆಯ ನೀಲನಕ್ಷೆಯತ್ತ ಕಣ್ಣು ಹಾಯಿಸಿ ಜನಸಾಗರದ ನಡುವೆ ಕಾಲು ಹಾಕಿದರು. ಅಲ್ಲಿರುವ ಸೀರೆಗಳ ಸಂಖ್ಯೆ ಕನಕಾರ ಕಣ್ಣು ಸೆಳೆದಿತ್ತು. ಎರಡು ಬೃಹತ್ ಕಂಬಗಳು ಮತ್ತು ಉದ್ದಕ್ಕೂ ಹರಡಿ ನಿಂತ ಕೇಬಲ್ಗಳು, ತೂಗಾಡುವ ಸೇತುವೆ…. ಕೆಳಗೆ ಸಮುದ್ರ, ಓಡಾಡುವ ಹಡಗುಗಳು.
ಅಂತಹ ಅಚ್ಚರಿಯ ನೋಟದಲ್ಲಿಯೂ ಏನೋ ಅತೃಪ್ತಿಯ ಭಾವ…. ಮುಂದೆ ಹೆಜ್ಜೆ ಹಾಕುತ್ತಿದ್ದಂತೆ ಕನಕಾರ ಕಾಲುಗಳು ಗಕ್ಕನೆ ನಿಂತಿದ್ದವು.
ದೇರ್ ಈಸ್ ಹೋಪ್, ಮೇಕ್ ದಿ ಕಾಲ್…” ಇಲ್ಲಿ ಸೇತುವೆಯಿಂದ ಕೆಳಗೆ ಹಾರುವುದು ತುಂಬಾ ಮೂರ್ಖತನದ್ದು ಮತ್ತು ದುರಂತಮಯ. ಎಂಬ ಒಕ್ಕಣೆ.
‘ಇಲ್ಲಿ ಹೀಗೆ ಪ್ರಾಣ ಕಳೆದುಕೊಳ್ಳಬೇಕೆನ್ನುವ ಮನಸ್ಥಿತಿಯಲ್ಲಿರುವವರು ಈ ಫಲಕವನ್ನಾದರೂ ನೋಡಿ ಕರೆ ಮಾಡಿದರೆ ಆಪ್ತ ಸಲಹೆ ಕೊಡಲು ಮನೋವೈದ್ಯರು ಬರುತ್ತಾರೆ. ಹಾಗೇ ಪೊಲೀಸ್ ಕಾರ್ ನೋಡು, ಏನು ಅನಾಹುತವೂ ಸಂಭವಿಸದಂತೆ ಕಾಯಲು ಓಡಾಡುತ್ತಿರುತ್ತದೆ’ ಅಜಯ್ ವಿವರಿಸುತ್ತಿದ್ದಂತೆ, ‘ಅಮ್ಮಾ ನೋಡು, ನಾನು ಎಷ್ಟು ಗಟ್ಟಿ ಇದ್ದೀನಿ ಅಂತ, ಅಪ್ಪಿತಪ್ಪಿಯೂ ಇಂತಹ ಯೋಚನೆ ಮಾಡುವುದಿಲ್ಲ!’ ಮಗಳು ನುಡಿದಾಗ ಮೈ ಜುಮ್ಮೆಂದಿತ್ತು.
ಹಣವೊಂದರಿಂದಲೇ ಎಲ್ಲವೂ ಸಾಧ್ಯವೇ? ವಿಶ್ವಕ್ಕೇ ದೊಡ್ಡಣ್ಣನೆನಿಸಿಕೊಂಡಿರುವವರ ಆಸರೆಯಲ್ಲೂ ಮನಶ್ಶಾಂತಿ ಮರೀಚಿಕೆಯೇ ಹಾಗಾದರೆ…. ಗಿಜಿಗುಟ್ಟುವ ಜನರು, ವಾಹನ ದಟ್ಟಣೆ, ಶಬ್ದಮಾಲಿನ್ಯ, ಹೊಗೆ, ಧೂಳು, ಉಗುಳು, ಹರಿದು ನಿಂತ ಉಚ್ಚೆ, ಕಸದ ಗುಪ್ಪೆ, ಕೊಂಕು, ವ್ಯಂಗ್ಯ, ಹದ್ದುಕಂಗಳ ಪರೀಕ್ಷಕ ನೋಟ ಇವೆಲ್ಲವುಗಳ ನಡುವೆಯೂ ಧುತ್ತೆಂದು ಎದ್ದು ನಿಲ್ಲುವ ನಮ್ಮದೆನ್ನುವ ಆತ್ಮೀಯತೆ, ಅದನ್ನೇ ಅರ್ತಿಯಿಂದ ಅಪ್ಪಿ-ಒಪ್ಪಿಕೊಳ್ಳುವಿಕೆ.. ಅಲ್ಲಿಯೇ ಮನಶ್ಶಾಂತಿ….
ಏನನ್ನಿಸಿತೋ ಕನಕಾರಿಗೆ, ದಿಶಾ ನಂಜೊತೆ ಬರ್ತೀಯಾ ಚಿನ್ನ…. ಭಾರತಕ್ಕೆ ಎಂದು ಒಲುಮೆಯಿಂದ ಕೇಳುತ್ತಿದ್ದರೆ,
ಓನ್ಲೀ ಟೂ ಮೋರ್ ವೀಕ್ಸ್ ಹಾಲೀಡೇಸ್, ಯೂ ನೋ ಅಮ್ಮಮ್ಮ ಎಂದು ಪ್ರಶ್ನಾರ್ಥಕವಾಗಿ ಅಮ್ಮನ ಮುಖ ನೋಡತೊಡಗಿದ್ದಳು ದಿಶ.