`ಬುರುಡೆ ತಲೆಯೊಳಗೋ ತಲೆಯು ಬುರುಡೆಯ ಒಳಗೋ, ಬುರುಡೆ ತಲೆಗಳು ಎರಡೂ ನಿನ್ನೊಳಗೋ ಅರಿಯೆ…’
‘ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ?’ ಎಂದು ದಾಸರು ಹೇಳಿದ್ದರೂ, ಸಂಗ ಮತ್ತು ತೀರ್ಥಕ್ಕೆ ಒಂದು ರೀತಿಯ ನಂಟಿದ್ದೇ ಇದೆ. ನಾಲ್ಕು ತಲೆಗಳು ಸೇರಿದ ಮೇಲೆ ಅಲ್ಲಿ ತೀರ್ಥ ಇರಲೇಬೇಕಾಗುತ್ತದೆ. ಹಾಗೆಯೇ ತೀರ್ಥವಿದ್ದಲ್ಲಿ ನಾಲ್ಕು ತಲೆಗಳು ಒಟ್ಟಾಗಿ ಸೇರುವುದೇನು ಗುಟ್ಟಿನ ವಿಷಯವಲ್ಲ. ಚಹಾಗೋಷ್ಠಿಗಳಿಗಿಂತ ತೀರ್ಥಕ್ಷೇತ್ರಗಳಲ್ಲಿಯೇ ಹೊಸ ಹೊಸ ಐಡಿಯಾಗಳು ಉಕ್ಕುವುದು ಎಂಬ ವಿಷಯ ರಾಜಕೀಯದಲ್ಲಿ ಅಪಾರ ಅನುಭವ ಪಡೆದ ನಮ್ಮ ಸಿಎಂ ಸಾಹೇಬರಿಗೆ ಸ್ವತಃ ಅನುಭವವೇದ್ಯವಾದ ಸತ್ಯವಾಗಿತ್ತು. ಬರಗಾಲ, ಬೆಲೆ ಏರಿಕೆ, ನಿರುದ್ಯೋಗ, ರೈತರ ಸರಣಿ ಆತ್ಮಹತ್ಯೆ, ಕಾರ್ಮಿಕರ ಮುಷ್ಕರ ಇವುಗಳಿಂದೆಲ್ಲ ರೋಸಿಹೋದ ಜನತೆ ಹಾಡುಹಗಲಲ್ಲೇ ಸರ್ಕಾರಕ್ಕೆ ಧಿಕ್ಕಾರ ಹಾಕುತ್ತಿದ್ದುದು ಮಾನ್ಯ ಸಿಎಂ ಸಾಹೇಬರ ನಿದ್ದೆಗೆಡಿಸಿತ್ತು. ಇದಕ್ಕೆಲ್ಲ ಒಂದು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಒಂದು ರಾತ್ರಿ ಒಂದು ಪಾನಗೋಷ್ಠಿಯನ್ನು ಏರ್ಪಡಿಸಿಯೇ ಬಿಟ್ಟರು.
`ಬುರುಡೆ ಕಾಯ್ದೆ’
ಸದರಿ ಗೋಷ್ಠಿಗೆ ತೀರ ಆಪ್ತರಿಗೆ ಮಾತ್ರ ಆಹ್ವಾನವಿತ್ತು. ರಾಜ್ಯದ ಜನರ ಹಿತಕಾಯುತ್ತೇನೆಂದು ಚುನಾವಣಾ ಸಂದರ್ಭದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಹೇಗೆ? ಎಂಬ ಪ್ರಶ್ನೆಯೇ ಈ ಗೋಷ್ಠಿಯ ಮುಖ್ಯ ಅಜೆಂಡಾ ಆಗಿತ್ತು. ಸಿಎಂ ಅವರ ಆಪ್ತ ಸ್ನೇಹಿತ ಬಳ್ಳಾರಿ ಬಸ್ಯಾ ಆದಿಯಾಗಿ ಎಲ್ಲರೂ ಸಮಯಕ್ಕೆ ಸರಿಯಾಗಿ ಬಂದು ನಿಗದಿತ ಸ್ಥಳದಲ್ಲಿ ಸೇರಿದರು. ಸರ್ಕಾರದ ಸಮಸ್ಯೆಗಳಿಗೆಲ್ಲ ತಲೆ ಕೊಟ್ಟೂ ಕೊಟ್ಟೂ ಈ ಬಳ್ಳಾರಿ ಬಸ್ಯಾನ ತಲೆಯಲ್ಲಿದ್ದ ನಾಲ್ಕು ಕೂದಲೂ ಉದುರಿ ಹೋಗಿ ನೆತ್ತಿ ಬೋಳಾಗಿತ್ತು. ಈಗ ಆತನಿಗೆ ತನ್ನೂರಿನ ರಣ ಬಿಸಿಲನ್ನು ಸಹಿಸುವುದು ಅಸಾಧ್ಯವಾಗಿ ಬಳ್ಳಾರಿ ಕಡೆ ಹೋದಾಗಲೆಲ್ಲ ತಲೆ ಬುರುಡೆಯಂತಹ ಒಂದು ಶಿರಸ್ತ್ರಾಣವನ್ನು ಒಟ್ಟಿಗೆ ಒಯ್ಯುತ್ತಿದ್ದ. ಜನರ ಹಿತ ಕಾಯುವ ವಿಷಯದಲ್ಲಿ ಬಿರುಸಿನ ಚರ್ಚೆಯಾಯಿತು. ಒಬ್ಬೊಬ್ಬರು ಒಂದೊಂದು ಐಡಿಯಾಗಳನ್ನು ಹರಿಯ ಬಿಟ್ಟರು. ಇದೇ ಸಂದರ್ಭದಲ್ಲಿ ನಮ್ಮ ಬಳ್ಳಾರಿ ಬಸ್ಯಾನ ಬೋಳು ಬುರುಡೆಗೆ ಒಂದು ಅಮೂಲ್ಯವಾದ ಐಡಿಯಾ ಹೊಳೆದು ಆ ಐಡಿಯಾ ತರಂಗಗಳನ್ನು ಸಿ.ಎಂ. ಸಾಹೇಬರ ಕಿವಿಗೆ ವರ್ಗಾಯಿಸಿದ್ದೇ ತಡ ಅವರೋ ಈ ಸ್ಪೆಶಲ್ ಐಡಿಯಾದಿಂದ ಫುಲ್ ಖುಷಿಯಾಗಿ ಹೋದರು. ಸರ್ಕಾರದ ಎಲ್ಲಾ ಸಚಿವರುಗಳಿಗೂ ಇದು ಒಪ್ಪಿಗೆಯಾಗಿ ಬಸ್ಯಾನ ಐಡಿಯಾವು ‘ಬುರುಡೆ ಕಾಯ್ದೆ’ಯಾಗಿ ಬಹುಮತದಿಂದ ಪಾಸಾಯಿತು. ಜನರ ಹಿತ ಕಾಯುತ್ತೇನೆಂದ ಸರ್ಕಾರ ಈಗ ಅದಕ್ಕಿಂತಲೂ ಸ್ವಲ್ಪ ಮುಂದೆಹೋಗಿ ಜನರ ತಲೆಕಾಯುವ ನಿರ್ಧಾರವನ್ನು ಈ ಕಾಯ್ದೆಯ ಮೂಲಕ ತೆಗೆದುಕೊಂಡಿತ್ತು.
ಈ ಕಾಯ್ದೆಯ ಅನ್ವಯ ಎರಡು, ಮೂರು, ನಾಲ್ಕು, ಆರು ಹೀಗೆ ಎಷ್ಟೇ ಚಕ್ರಗಳಿರಲಿ ಅದರೊಳಗಿರುವ ಎಲ್ಲಾ ತಲೆಗಳಿಗೂ ಕೃತಕ ಬುರುಡೆ ಕಡ್ಡಾಯ. ಹಾಗೆಯೇ ವಾಹನ ಓಡಾಡುವ ದಾರಿಯಲ್ಲಿ ನಡೆಯುವ ಪಾದಚಾರಿಗಳಿಗೂ, ದಾರಿ ಬದಿಯ ಅಂಗಡಿ ಮುಂಗಟ್ಟಿನವರಿಗೂ, ಹೆದ್ದಾರಿ ಬದಿಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೂ, ಅಧ್ಯಾಪಕರಿಗೂ, ಆಸತ್ರ್ರೆ ಸಿಬ್ಬಂದಿಗಳಿಗೂ, ರೋಗಿಗಳಿಗೂ ಹೀಗೆ ಎಲ್ಲರಿಗೂ ತಲೆಯಲ್ಲಿ ಒಂದು ತ್ರಾಣ ಬೇಕೇ ಬೇಕು. ಇದನ್ನು ಮೀರಿದವರಿಗೆ ಕಠಿಣ ದಂಡ ಶಿಕ್ಷೆ. ಹತ್ತು ವರ್ಷದ ಕೆಳಗಿನ ಮಕ್ಕಳ ತಲೆಯನ್ನು ಕಾಯುವ ಜವಾಬ್ದಾರಿಯನ್ನು ಮಾತ್ರ ಸರಕಾರ ತಾನು ಹೊತ್ತುಕೊಳ್ಳದೆ ಅದನ್ನು ಕೃತಕ ಬುರುಡೆ ಧರಿಸಿದ ಪಾಲಕರ ತಲೆಗೇ ವರ್ಗಾಯಿಸಿಬಿಟ್ಟಿತ್ತು. ಇದರಿಂದ ಸಣ್ಣ ಮಕ್ಕಳಿರುವ ಮನೆಯ ದಂಪತಿ ಎರಡೇ ಬುರುಡೆಯಲ್ಲಿ ಸುಧಾರಿಸಬಹುದು ಎಂದು ನಿಟ್ಟುಸಿರುಬಿಟ್ಟಿತು.
ಹೀಗೆಲ್ಲ ಆಗಿ ಬಸ್ಯಾನ ಬುರುಡೆ ವಿಪರೀತ ಓಡಿದ್ದರ ಫಲವಾಗಿ ಊರು ತುಂಬಾ ಬುರುಡೆ ಹೆಲ್ಮೆಟ್ ಅಂಗಡಿಗಳೇ ಎದ್ದು ನಿಂತವು. ಮಂಗಳಗ್ರಹದ ಜೀವಿಗಳಂತೆ ಬುದ್ಧಿವಂತರು, ದಡ್ಡರು, ಹೆಡ್ಡರು ಆದಿಯಾಗಿ ಎಲ್ಲರ ತಲೆಯಲ್ಲಿಯೂ ಮಡಕೆಯಂತಹ ಸಾಧನವೊಂದು ಕಂಗೊಳಿಸತೊಡಗಿತು. ಈ ‘ಬುರುಡೆ ಕಾಯ್ದೆ’ಯಿಂದಾಗಿ ಹೆಲ್ಮೆಟ್ ತಯಾರಕರು, ವಿತರಕರು ಹಾಗೂ ಮಾರಾಟಗಾರರು ಯಾರೂ ಊಹಿಸಲೂ ಸಾಧ್ಯವಾಗದ ರೀತಿಯ ಅನುಕೂಲಗಳನ್ನು ಪಡೆದುಕೊಂಡರು. ಕೆಲವು ಗುಜರಿ ವ್ಯಾಪಾರಸ್ಥರು ಹಳೆಯ ಹೆಲ್ಮೆಟ್ಗಳಿಗೆ ಪೈಂಟ್ಕೊಟ್ಟು ಐಎಸ್ಐ ಸ್ಟಿಕ್ಕರ್ ಅಂಟಿಸಿ, ದಾರಿ ಬದಿಯಲ್ಲಿ ವ್ಯಾಪಾರ ಕುದುರಿಸಿಕೊಂಡರು. ಕೆಲವು ಕಡೆ ಒಂದು ಕೊಂಡಲ್ಲಿ ಒಂದು ಉಚಿತ; ಹಾಗೆಯೇ ಮುಂಬದಿ ಸವಾರರ ಬುರುಡೆ ಕೊಂಡರೆ ಹಿಂಬದಿಯದು ಉಚಿತ, ಎಂಬಿತ್ಯಾದಿ ಗ್ರಾಹಕರಿಗೆ ಟೋಪಿ ಮಾತ್ರವಲ್ಲದೆ ಹೆಲ್ಮೆಟ್ ಹಾಕಿಸುವ ಕ್ರಿಯೆಯೂ ನಿರಾತಂಕವಾಗಿ ನಡೆಯುತ್ತಿತ್ತು. ಹೀಗೆಲ್ಲ ಪರಿಸ್ಥಿತಿ ಇರುವಾಗ ರಾಜ್ಯದ ಯುವ ಪ್ರೇಮಿಗಳಿಗೆ ಒಂದು ರೀತಿಯ ಅನುಕೂಲ ಪ್ರಾಪ್ತವಾಗಿತ್ತು. ಇವರು ಬಣ್ಣಬಣ್ಣದ ಕೃತಕ ಬುರುಡೆಗಳನ್ನು ಧರಿಸಿಕೊಂಡು ಹೆದ್ದಾರಿಬದಿಯಲ್ಲಿ ವಿಹರಿಸಬಹುದಿತ್ತು. ಬಸ್ಗಳಲ್ಲಿ ಒಟ್ಟೊಟ್ಟಿಗೇ ಕುಳಿತು ಓಡಾಡಬಹುದಿತ್ತು. ಹೆತ್ತವರು ಎದುರು ಬಂದರೂ ಹೆದರಬೇಕಾಗಿರಲಿಲ್ಲ. ಇವರ ಹಾಗೆಯೇ ಊರಿನಲ್ಲಿ ಕಳ್ಳತನ ಮಾಡಿಕೊಂಡು ತಲೆತಪ್ಪಿಸಿ, ಓಡಾಡುತ್ತಿದ್ದ ಕಳ್ಳಕಾಕರಿಗೆಲ್ಲ ಈಗ ಲಾಟರಿ ಹೊಡೆದಷ್ಟು ಸಂತೋಷವಾಗಿ ಹೋಗಿತ್ತು. ಅವರೀಗ ಪೊಲೀಸರೆದುರೇ ನಿರ್ಭಿಡೆಯಿಂದ ಸಂಚರಿಸಿ ತಮ್ಮ ಸೇವಾ ಕ್ಷೇತ್ರವನ್ನು ವಿಸ್ತರಿಸಿಕೊಳ್ಳಬಹುದಿತ್ತು. ಹಾಗೆಯೇ ಸದಾ ನಿದ್ರಾದೇವಿಯ ಆಲಿಂಗನದಲ್ಲಿಯೇ ಇರುವ ಸೋಂಬೇರಿ ಜಗತ್ತಿನವರಿಗಂತೂ ಸರ್ಕಾರವನ್ನು ಗಟ್ಟಿಯಾಗಿ ಅಪ್ಪಿ ಆಲಂಗಿಸುವಷ್ಟು ಸಂತೋಷವಾಗಿ ಹೋಗಿತ್ತು. ಊಟ, ತಿಂಡಿ, ಸಿಗರೇಟು, ಮೊಬೈಲ್ನ ಮಾತುಕತೆಗಾಗಿ ಮಾತ್ರವೇ ತಮ್ಮ ಬುರುಡೆಯನ್ನು ತೆಗೆದಿರಿಸಿ ಉಳಿದ ಸಮಯದಲ್ಲಿ ಹಾಡುಹಗಲಲ್ಲೇ ನಿದ್ದೆಗೆ ಜಾರಬಹುದಿತ್ತು. ಆದರೆ ಹೆದ್ದಾರಿ ಬದಿಯ ಎಲ್ಲಾ ಸರ್ಕಾರಿ ಕಛೇರಿಗಳಲ್ಲೂ, ‘ಹಾಜರಿ ಪುಸ್ತಕಕ್ಕೆ ಸಹಿ ಹಾಕುವಾಗ ಕಡ್ಡಾಯವಾಗಿ ಬುರುಡೆ ತೆಗೆದಿರಿಸತಕ್ಕದ್ದು’ ಎಂಬ ಬೋರ್ಡ್ ತಗಲುಹಾಕಲಾಯಿತು. ದಿನಪತ್ರಿಕೆಗಳ ತುಂಬೆಲ್ಲಾ ಈಗ ಈ ಕೃತಕ ಬುರುಡೆಗಳ ಜಾಹಿರಾತುಗಳೇ ಕಾಣಿಸಿಕೊಳ್ಳತೊಡಗಿತು. ‘ನಿಮ್ಮ ಉತ್ತಮಾಂಗವನ್ನು ರಕ್ಷಿಸಿಕೊಳ್ಳಲು ಇಂದೇ ಕೊಳ್ಳಿರಿ – ಶ್ರೀಕೃಷ್ಣ ಬುರುಡೆ ಹೆಲೈಟ್ಗಳು’ ಇತ್ಯಾದಿ ಬರಹಗಳ ಫ್ಲೆಕ್ಸ್ಗಳೂ ರಸ್ತೆಬದಿಯಲ್ಲಿ ಎದ್ದುನಿಂತವು. ಹೆದ್ದಾರಿ ಬದಿಯಲ್ಲಿ ನಿಂತು ಇದೇನು ಶ್ರೀಕೃಷ್ಣ ಬುರುಡೆ ಹೆಲ್ಮೆಟ್ ಎಂದು ತಲೆಕೆಡಿಸಿಕೊಂಡು ತಲೆತುರಿಸಿಕೊಳ್ಳಲು ಹೊರಟಿರೋ ಜೋಕೆ!
ದುಃಖಮೂಲ
ಆದರೆ ವಿರೋಧಪಕ್ಷದವರಿಗೆ ಇದೆಲ್ಲ ಸರಿಕಾಣಲಿಲ್ಲ. ಚುನಾವಣಾ ಪ್ರಣಾಳಿಕೆಗೆ ಬದ್ಧರಾಗದೆ ಸರ್ಕಾರ ಜನರಿಗೆಲ್ಲ ಟೋಪಿ ಹಾಕಿ ಮೂರ್ಖ ಕಾಯ್ದೆಗಳನ್ನು ತರುತ್ತಿದೆ ಎಂದು ವಿರೋಧಪಕ್ಷದ ನಾಯಕ ನೆಟ್ಟಗಣ್ಣಪ್ಪ ಆದಿಯಾಗಿ ಎಲ್ಲರೂ ಸದನದಿಂದ ಹೊರನಡೆದರು. ಆಡಳಿತಪಕ್ಷದ ನಡೆಯನ್ನು ಕಾವಲುಗಣ್ಣಿನಿಂದ ವೀಕ್ಷಿಸುತ್ತಲೇ ತಮ್ಮ ಜೀವನದ ಇಪ್ಪತ್ತೈದು ಸಂವತ್ಸರಗಳನ್ನು ಕಳೆದುಬಿಟ್ಟಿದ್ದರಿಂದ ನೆಟ್ಟಗಣ್ಣಪ್ಪ ಎಂಬ ಹೆಸರು ಅನ್ವರ್ಥವಾಗಿಯೇ ಅವರಿಗೆ ಒಪ್ಪುತ್ತಿತ್ತು. ಆದರೆ ಸದನದಲ್ಲಿ ಅವರನ್ನು ಎಲ್ಲರೂ `ವಿಗ್ನರಾಜ’ ಎಂದೇ ಕರೆಯುತ್ತಿದ್ದರು. ಇವರ ತಲೆಯಲ್ಲಿ ಸದಾ ವಿಗ್ಗೊಂದು ರಾರಾಜಿಸುತ್ತಿದ್ದುದರಿಂದ ಅವರನ್ನು ತಮಾಷೆಗಾಗಿ ಈ ರೀತಿ ಕರೆದರೂ, ಆಡಳಿತಪಕ್ಷದ ವ್ಯವಹಾರಗಳಲ್ಲಿ ಮೂಗುತೂರಿಸಿ ಆಗಾಗ ವಿಘ್ನಗಳನ್ನು ತಂದೊಡ್ಡುತ್ತಿದ್ದುದರಿಂದ ಈ ಹೆಸರೂ ಒಂದು ರೀತಿಯಲ್ಲಿ ಅನ್ವರ್ಥವೇ ಆಗಿತ್ತು. ಇವರು ಯಾವ ಸಮಯದಲ್ಲಿ ಏನು ಮಾಡುತ್ತಾರೆಂದು ಯಾರಿಗೂ ಊಹಿಸಲು ಸಾಧ್ಯವಾಗದ ಕಾರಣ ಇವರ ಅಸಲೀ ಮುಖ ಕಾಣಸಿಗುವುದು ಅವರ ಹೆಂಡತಿಗೆ ಮಾತ್ರ ಎಂದು ತಮಾಷೆಗಾಗಿ ಆಡಿಕೊಳ್ಳುತ್ತಿದ್ದುದೂ ಉಂಟು. ‘ಬುರುಡೆ ಕಾಯ್ದೆ’ಯನ್ನು ವಿರೋಧಿಸಲು ಅವರಿಗಿದ್ದ ಪ್ರಬಲವಾದ ಕಾರಣವೇ ಈ ವಿಗ್ಗು. ಹೆಲ್ಮೆಟ್ನಿಂದಾಗಿ ತಾನು ಅಪಾರವಾಗಿ ಪ್ರೀತಿಸುತ್ತಿದ್ದ ತನ್ನ ತಲೆಯ ನಿಜವಾದ ಸಂರಕ್ಷಕ ಮೂಲೆಗುಂಪಾಗುವುದು ನಿಶ್ಚಿತ ಎಂಬುದು ಅವರ ದುಃಖಕ್ಕೆ ಕಾರಣವಾಗಿತ್ತು.
`ಕಾಯ್ದೆಭಂಗ ಚಳುವಳಿ’
ಅಷ್ಟೇ ಅಲ್ಲ, ಮಿದುಳನ್ನು ರಕ್ಷಿಸಲು ಒಂದು ಬುರುಡೆ ಇದ್ದೇ ಇದೆಯಲ್ಲ. ಅದರ ಮೇಲೆ ಇನ್ನೊಂದು ಯಾಕೆ? ಹೀಗೆ ಮೇಲೆ ಮೇಲೆ ಅಟ್ಟಿ ಪೇರಿಸುತ್ತಾ ಹೋದರೆ, ಇದಕ್ಕೆ ಕೊನೆಯೆಲ್ಲಿ? ಎಂಬುದು ನೆಟ್ಟಗಣ್ಣಪ್ಪನವರ ಗಟ್ಟಿ ವಾದ. ಇವರೊಂದಿಗೆ ವಿಗ್ ತಯಾರಕರ ಹಾಗೂ ವಿಗ್ಧಾರಿಗಳ ಸಂಘದವರೂ ನೆಟ್ಟಗಣ್ಣಪ್ಪನವರನ್ನು ಅನುಮೋದಿಸಿ ಕಾಯ್ದೆಯನ್ನು ಖಂಡತುಂಡವಾಗಿ ವಿರೋಧಿಸಿದ್ದವು. ರಾಜ್ಯಾದ್ಯಂತ ಇವರ ಪ್ರತಿಭಟನೆಗಳು ನಡೆದವು. ನಾವು ಅಲ್ಪ ಸಂಖ್ಯಾತರು, ಮೇಲಾಗಿ ದಿವ್ಯಾಂಗಿಗಳು. ಹಾಗಾಗಿ ಈ ಕಾಯ್ದೆಯಡಿ ನಮ್ಮನ್ನು ತರದೆ ವಿನಾಯಿತಿ ನೀಡಬೇಕಾಗಿ ವಿಗ್ಧಾರಿಗಳ ಸಂಘದವರು ಎಲ್ಲಾ ಊರುಗಳಲ್ಲಿಯೂ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಬಿಸಿಲು ಮಳೆಯಿಂದ ತಲೆಯನ್ನು ರಕ್ಷಿಸುವ ಈ ವಿಗ್ಗಿಂತ ಹೆಚ್ಚಿನ ಕೆಲಸವನ್ನೇನೂ ಹೆಲ್ಮೆಟ್ ಎಂಬ ಕೃತಕ ಬುರುಡೆ ಮಾಡಲಾರದು. ಒಂದು ವೇಳೆ ಅಪಘಾತವಾಗಿ ಸತ್ತವರ ಗುರುತು ಹಿಡಿಯಲು ಮಾತ್ರ ಈ ಬುರುಡೆಗಳು ನೆರವಾಗಬಹುದು ಎಂಬುದು ಪ್ರತಿಭಟನಾಕಾರರ ವಾದ. ವಾದಗಳೇನೇ ಇರಲಿ, ಪ್ರತಿಭಟನೆಯಿಂದ ಈ ಕಾಯ್ದೆಯ ವಿರೋಧಿಗಳಿಗೆ ಒಂದು ಬಲ ಬಂದಂತೆ ಆಯ್ತು. ಬಗೆ ಬಗೆಯ ಕೇಶವಿನ್ಯಾಸಗಳಿಂದ ಶೋಭಿಸುತ್ತಿದ್ದ ಲಲನೆಯರ ಸಂಘದವರೂ, ಇವರ ಸೌಂದರ್ಯವನ್ನು ಹೆಚ್ಚಿಸಲು ಸದಾ ಶ್ರಮಿಸುವ ಬ್ಯೂಟಿಪಾರ್ಲರ್ಗಳ ಸಂಘದವರೂ ಬಸ್ ಪ್ರಯಾಣಿಕರ ಸಂಘದವರೂ, ಲಾರಿಚಾಲಕರ ಸಂಘದವರೂ, ಚೋರನಿಗ್ರಹ ದಳದವರೂ, ತಲೆ ಇದೆ ಎಂದು ತೋರಿಸಿಕೊಳ್ಳುವುದನ್ನು ಇಷ್ಟಪಡುವ ಇನ್ನೂ ಅನೇಕ ಸಂಘ ಸಂಸ್ಥೆಗಳೆಲ್ಲ ಇವರೊಂದಿಗೆ ಕೈ ಜೋಡಿಸಿದರು. ‘ನಮ್ಮ ಬುರುಡೆಯ ಮೇಲೆ ಸರಕಾರಕ್ಕೆ ಯಾವ ಹಕ್ಕೂ ಇಲ್ಲ; ತಲೆ ಮರೆಸಿಕೊಳ್ಳಲು ನಾವೇನು ದೇಶದ್ರೋಹಿಗಳಲ’, ‘ಓಟು ಹಾಕಿದವರಿಗೆ ಟೋಪಿ ಹಾಕದಿರಿ’, ‘ತಲೆಬುರುಡೆಗೆ ಬೆಲೆ ಕೊಡದವರಿಗೆ ಧಿಕ್ಕಾರ’ ಇತ್ಯಾದಿ ಫಲಕಗಳನ್ನು ಹಿಡಿದು ಬೀದಿ ತುಂಬ ಓಡಾಡಿದರು. ಏನು ಮಾಡಿದರೂ ಸರ್ಕಾರ ಜಗ್ಗಲಿಲ್ಲ. ಬದಲಿಗೆ ಈ ಕಾಯ್ದೆಯನ್ನು ವಿರೋಧಿಸುವವರೆಲ್ಲ ತಲೆಯಿಲ್ಲದವರು ಎಂಬ ತೀರ್ಪು ಕೊಟ್ಟುಬಿಟ್ಟಿತು.
ಈ ಕಾಯ್ದೆಭಂಗ ಚಳುವಳಿ ಹೆಚ್ಚು ದಿನ ನಡೆಯಲಿಲ್ಲ. ಬಸ್ ಪ್ರಯಾಣಿಕರ ಸಂಘ ಮೊದಲು ತನ್ನ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿತು. ಕಾರಣ, ಅಪರೂಪಕ್ಕೊಮ್ಮೆಯಾದರೂ ಟಿಕೇಟ್ ಇಲ್ಲದೆ ಪ್ರಯಾಣಿಸುವ ಕನಸು ಅವರದಾಗಿತ್ತು. ಬ್ಯೂಟೀಪಾರ್ಲರ್ನವರೂ ಇದರಿಂದ ಹಿಂದೆ ಬಂದರು. ಬುರುಡೆ ಹೆಲ್ಮೆಟ್ ಧರಿಸಿ ಪೇಲವವಾದ ಕೂದಲಿಗೆ ವಿಶೇಷ ಚಿಕಿತ್ಸೆಯನ್ನು ಅವರು ಪ್ರಾರಂಭಿಸಿದ್ದರು. ಹಾಗೆಯೇ ಹೆಲ್ಮೆಟ್ನಿಂದಾದ ಬೆವರುಸಾಲೆ ತುರಿಕೆಗಳಿಗೆ ಅವರಲ್ಲಿ ವಿಶೇಷ ಲೇಸರ್ ಟ್ರೀಟ್ಮೆಂಟುಗಳೂ ಈಗ ಲಭ್ಯವಿದ್ದವು. ಚೋರನಿಗ್ರಹದಳದವರೂ ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು. ಕಳ್ಳ ತನ್ನ ಬುರುಡೆಗೆ ಹೆಲ್ಮೆಟ್ ಧರಿಸಿದ್ದರಿಂದ ಆತನನ್ನು ಪತ್ತೆಹಚ್ಚಲಾಗಲಿಲ್ಲ ಎಂದು ಬುರುಡೆ ಬಿಟ್ಟು ಸದ್ದಿಲ್ಲದೆ ತಮ್ಮತಮ್ಮ ಬುರುಡೆಯನ್ನು ಹೆಲ್ಮೆಟ್ನೊಳಗೆ ತೂರಿಸಿ ನಿದ್ದೆಗೆ ಜಾರುವ ಅವಕಾಶವನ್ನು ಕಳೆದುಕೊಳ್ಳಲು ಅವರು ಇಷ್ಟಪಡಲಿಲ್ಲ. ಹೀಗೆ ವಿಗ್ನರಾಜರಾದಿಯಾಗಿ ಎಲ್ಲರೂ ಪ್ರತಿಭಟನೆಯಿಂದ ಹಿಂದಕ್ಕೆ ಸರಿದು ‘ಹೆಲ್ಮೇಟ್’ ಎಂದು ಬಯ್ಯುತ್ತಾ ಕ್ರಮೇಣ ತಮ್ಮ ತಲೆಯನ್ನೂ ಅದರೊಳಗೆ ಸೇರಿಸಿ ಬುರುಡೆ ಹೆಲ್ಮೆಟ್ನೊಂದಿಗೆ ರಾಜಿಯಾಗಿದ್ದರು. ವಿಗ್ ತಯಾರಕರು ಈಗ ಕೂದಲು ಇರುವ ವಿಶೇಷ ಬುರುಡೆಗಳನ್ನು ತಯಾರಿಸಲು ಪ್ರಾರಂಭಿಸಿದ್ದರು. ಮೊದಲ ನೋಟಕ್ಕೆ ಇದು ತಲೆಯಂತೆಯೇ ಕಾಣಬೇಕೆಂಬುದು ಅವರ ಇರಾದೆ.
ಮಾತುತಪ್ಪದ ಸರ್ಕಾರ ಎಂದು ಹೆಲ್ಮೆಟ್ ತಯಾರಿಕಾ ಕಂಪೆನಿಯಿಂದ ಹೊಗಳಿಸಿಕೊಂಡ ಸಿ.ಎಂ ಆದಿಯಾಗಿ ಎಲ್ಲಾ ಸಚಿವರುಗಳಿಗೆ ಅಭಿನಂದನೆ ಸಲ್ಲಿಸುವ ಅದ್ದೂರಿ ಸಮಾರಂಭವೊಂದು ನಗರದಲ್ಲಿ ಏರ್ಪಾಟಾಯಿತು. ಕಂಪೆನಿ ಮುಖ್ಯಸ್ಥರು ಶಾಲುಹೊದೆಸಿ ತಿರುಪತಿ ತಿಮ್ಮಪ್ಪನ ತಲೆಯಲ್ಲಿರುವಂತಹ ಚಿನ್ನದ ಬುರುಡೆಯೊಂದನ್ನು ಸಿ.ಎಂ ಅವರಿಗೆ ತೊಡಿಸಿದ್ದು, ಮರುದಿನ ಎಲ್ಲಾ ಪತ್ರಿಕೆಗಳಲ್ಲೂ ಅದು ಬಣ್ಣದ ಚಿತ್ರವಾಗಿ ಮುಖಪುಟದಲ್ಲಿಯೇ ಅಚ್ಚಾದದ್ದು, ತಲೆಬುರುಡೆ ತೆಗೆದು ಕೆಲವರು, ತಲೆಬುರುಡೆ ಧರಿಸಿ ಹಲವರು ಹುಬ್ಬೇರಿಸಿ ಅದನ್ನು ಓದಿದ್ದು, ಎಲ್ಲವೂ ಈಗ ರದ್ದಿ ಮನೆಗೆ ಹೋದ ಹಳೆಯ ಸುದ್ದಿಯಾಗಿದೆ. ಯಾವುದರ ಬಗೆಗೂ ಅತೀ ತಲೆಕೆಡಿಸಿಕೊಳ್ಳದ ನಗರದ ಜನತೆ ಈಗ ತಲೆಮರೆಸಿಕೊಂಡು ದಿನನಿತ್ಯ ಸಾಗುತ್ತಿದೆ. ‘ಬುರುಡೆ ತಲೆಯೊಳಗೋ ತಲೆಯು ಬುರುಡೆಯ ಒಳಗೋ, ಬುರುಡೆ ತಲೆಗಳು ಎರಡೂ ನಿನ್ನೊಳಗೋ ಅರಿಯೆ’ ಎನ್ನುತ್ತಾ ಎಲ್ಲದಕ್ಕಿಂತಲೂ ಜೀವನದೊಡ್ಡದು ಎಂಬ ಪರಮಸತ್ಯವನ್ನು ಈ ಬುರುಡೆಧಾರಿ ತಲೆಗಳು ಈಗ ಮೌನವಾಗಿ ಎಲ್ಲೆಡೆಗೂ ರವಾನಿಸುತ್ತಿವೆ.