ಏಪ್ರಿಲ್ ಮೇಗಳ ಕಾವಿನಲಿ
ಕಳೆದು ಹೋಗಿದೆ ಚೈತ್ರ
ಹೊಸತು ಉಲ್ಲಾಸಗಳಿಗಿಲ್ಲಿ
ಬೇರೆಯಾಗಿದೆ ಅರ್ಥ.
ಮಾಮರ ಕೋಗಿಲೆಗಳು
ಕಂಪ್ಯೂ ಪರದೆಯಲಿ ಮೂಡಿ
ಹ್ಯಾಪಿ ನ್ಯೂ ಇಯರ್ಗಳು
ಈವ್ನಿಂದಲೆ ಹರಿದಾಡಿ
ಯುಗದಾದಿಯವರೆಗೂ
ಕಾಯುವವರಾರಿಲ್ಲಿ ?
ಜೀನ್ಸಿನ ಲಲನೆಯರಲ್ಲಿ
ದೀಪ ಹಚ್ಚುವವರಾರು ?
ಪಬ್ಬು ಕ್ಲಬ್ಲುಗಳ ಪಾನಗೋಷ್ಠಿಗಳಲಿ
ವಸಂತರಸವನು ತುಂಬುವವರಾರು?
ಧೂಳಿನಲಿ ಮಿಂದ ಮರಗಳಲಿ
ಕೆಂಜಿಗುರುಗಳ ಮೂಡಿಸುವವರಾರು?
ಸಂವತ್ಸರದುದ್ದಕೂ ಮಾರುಕಟ್ಟೆಯಲಿ
ಸೊನೆ ಮಾವಿನ ಗಂಧ
ಮಾನಿನಿಯರ ಮುಡಿಯಲ್ಲಿ
ನಿತ್ಯ ಜಾಸ್ಮೀನ್ ಕಂಪು
ಮಾರನ ಬಿಲ್ಲಿನಂತೆ ಕಳೆಯೇರಿಸುವ
ವಿದ್ಯುತ್ತಿನ ಬಣ್ಣಗಳಲಿ ಸದಾ ಸುಗ್ಗಿಯ ಸೊಬಗು
ಧನ್ಯೋಸ್ಮಿ! ಧನ್ಯೋಸ್ಮಿ
ಜನವರಿಯೆ ಯುಗದಾದಿ
ಉನ್ಮಾದ ಉದ್ರೇಕಗಳಿಗಿಲ್ಲ್ಲಿದೆ
ಸುಲಭ ಹಾದಿ!
– ರೇಶ್ಮಾ ಭಟ್, ಕನ್ನಡ ಉಪನ್ಯಾಸಕಿ
ನವಯುಗದ ಹಾದಿ
Month : May-2016 Episode : Author : ರೇಶ್ಮಾ ಭಟ್