|
ಅತ್ಯಂತ ಕ್ರೂರ ರೀತಿಯಲ್ಲಿ ಕೋವಿಯು ಲೇಖನಿಯ ಸದ್ದಡಗಿಸಿತೇ ಎನ್ನುವಂತಹ ಸನ್ನಿವೇಶವಿದು. ಪ್ಯಾರಿಸ್‌ನಲ್ಲಿ ಭಯೋತ್ಪಾದಕರು ವ್ಯಂಗ್ಯಚಿತ್ರಕಾರರನ್ನು ಕೊಂದ ರೀತಿ ಜಗತ್ತನ್ನು ಗಾಬರಿಗೊಳಿಸಿದೆ. ಇದರಿಂದ ಹಲವು ಪ್ರಶ್ನೆಗಳು ಮೇಲೆದ್ದಿವೆ: ಅಭಿವ್ಯಕ್ತಿಸ್ವಾತಂತ್ರ್ಯದ ಬಗ್ಗೆ, ಇಸ್ಲಾಮ್‌ನ ಬಗ್ಗೆ, ಕೇವಲ ಭಯಹುಟ್ಟಿಸುವ ಸಲುವಾಗಿ ಇತರರನ್ನು ಕೊಲ್ಲುವಲ್ಲಿ ಮನುಷ್ಯರು ಎಷ್ಟು ಮುಂದೆ ಹೋಗಬಹುದು ಎಂಬ ಬಗ್ಗೆ, ಇತ್ಯಾದಿ. ಇವು ನಾನು ಈ ವಿಶೇಷ ಕಾರ್ಯಕ್ರಮದಲ್ಲಿ ಎತ್ತಬಯಸುವ ಪ್ರಶ್ನೆಗಳು. ‘ಜೆ ಸ್ವೀ ಚಾರ್ಲಿ’ ಜಗತ್ತಿನ ಒಂದು ಪ್ರಮುಖವಾದ ಭಿನ್ನಸ್ವರವಾಗಿದ್ದು, ಸ್ವಯಂ ದೇಶಭ್ರಷ್ಟರಾದ ಲೇಖಕಿ ತಸ್ಲೀಮಾ ನಸ್ರೀನ್ ಇಲ್ಲಿದ್ದಾರೆ. ವಿಶೇಷವಾಗಿ ಮತೀಯ ನಂಬಿಕೆಗಳ ವಿರುದ್ಧ ನಾವು ಧ್ವನಿಯೆತ್ತುವಾಗ ನಮ್ಮ ಅಭಿಪ್ರಾಯದ ಪ್ರಕಟಣೆ ಎಷ್ಟು ಅಪಾಯಕಾರಿ ಆಗಬಹುದು ಎಂಬುದಕ್ಕೆ ಇದು ಇನ್ನೊಂದು ಉದಾಹರಣೆ ಆಗಬಹುದು; ನಿಮಗೆ ಇದರಿಂದ ಆಶ್ಚರ್ಯವಾಯಿತೆ? |
|
ನೋಡಿ, ನೀವು ಕ್ರೈಸ್ತ, ಯಹೂದಿ ಹಾಗೂ ಬೇರೆ ಮತಗಳನ್ನು ಟೀಕಿಸಿದರೆ ಅದು ಅಪಾಯಕಾರಿ ಎನಿಸುವುದಿಲ್ಲ. ಆದರೆ ಇಸ್ಲಾಂ ಹಾಗಲ್ಲ. ಇದನ್ನು ಟೀಕಿಸುವುದು ಅಪಾಯಕಾರಿ. ಇದು ಇತರ ಮತಗಳಿಗಿಂತ ಹೆಚ್ಚು ಹಿಂಸಾಪರವಾಗಿದೆ; ಇಸ್ಲಾಮೀ ಮೂಲಭೂತವಾದಿಗಳು ಇತರರಿಗಿಂತ ಹೆಚ್ಚು ಕ್ರೂರಿಗಳು. ನಾನು ನನ್ನ ದೇಶ ಬಿಟ್ಟು ಈ ಸ್ಥಿತಿಗೆ ಬಂದು ೨೦ ವರ್ಷಗಳಾದವು; ನನಗೆ ದೇಶಭ್ರಷ್ಟೆಯಾಗಿ ಬದುಕುವುದಕ್ಕೆ ಬದಲಿಯಾದ ಮಾರ್ಗ ಇರಲಿಲ್ಲ. ನಾನು ಇಸ್ಲಾಂ ಮಾತ್ರ ಅಲ್ಲ; ಬೇರೆ ಮತಗಳನ್ನು ಕೂಡಾ ಟೀಕಿಸಿದ್ದೇನೆ. ಆದರೆ ನನ್ನನ್ನು ಕೊಲ್ಲಲು ಕಾಯುತ್ತಿರುವವರು ಇಸ್ಲಾಮೀ ಮೂಲಭೂತವಾದಿಗಳು ಮಾತ್ರ. ನಾನು ಕ್ರೈಸ್ತ, ಯಹೂದಿ ಅಥವಾ ಹಿಂದೂ ಮೂಲಭೂತವಾದಿಗಳನ್ನು ಟೀಕಿಸಿದರೂ ಅವರು ನನ್ನನ್ನು ಕೊಲ್ಲಬಯಸುವವರಲ್ಲ |
|
ಅದು ಏಕೆಂದು ಕೇಳಬಹುದೆ? ಮತದ ಹೆಸರಿನಲ್ಲಿ ಕೊಲ್ಲುವವರು ಮುಸ್ಲಿಂ ಮೂಲಭೂತವಾದಿಗಳು ಮಾತ್ರವೆ? ಇಸ್ಲಾಮೀ ಮೂಲಭೂತವಾದಿಗಳು ಅಥವಾ ರ್‍ಯಾಡಿಕಲಿಸ್ಟ್‌ಗಳು ಮುಗ್ಧ ವ್ಯಂಗ್ಯಚಿತ್ರಕಾರರನ್ನು ಅಲ್ಲಾನ ಹೆಸರಿನಲ್ಲಿ ಕೊಲ್ಲುವ ಹಂತಕ್ಕೆ ತಲಪಿದ್ದಾರೆಂದರೆ ಅದಕ್ಕೇನು ಕಾರಣ ಇರಬಹುದು? |
|
ನೋಡಿ, ಇತರ ಮತಗಳು ಯಾವ ವಿಮರ್ಶಾತ್ಮಕ ಪರಿಶೀಲನೆಗೆ ಒಳಪಟ್ಟಿವೆಯೋ ಅಂತಹ ಪ್ರಕ್ರಿಯೆಗೆ ಇಸ್ಲಾಂ ಗುರಿಯಾಗಿಲ್ಲ. ಕ್ರೈಸ್ತ ಮತದ ವಿಮರ್ಶೆ (ಟೀಕೆ) ನಡೆದಿದೆ. ವಿದ್ಯಾವಂತರಾದ ಕ್ರೈಸ್ತರು ಮತೀಯ ನಿಯಮಗಳು ಮತ್ತು ಸರಕಾರ ಬೇರೆ ಬೇರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹಿಂದೆ ಕ್ರೈಸ್ತ ಜಗತ್ತಿನಲ್ಲಿ ಕೂಡಾ ನಂಬದಿರುವವರನ್ನು ಮತೀಯ ವಿಚಾರಣೆ (ಇನ್‌ಕ್ವಿಸಿಷನ್) ಮೂಲಕ ಕೊಲ್ಲುತ್ತಿದ್ದರು. ಇಸ್ಲಾಮೀ ಮೂಲಭೂತವಾದಿಗಳು ಇಪ್ಪತ್ತೊಂದನೇ ಶತಮಾನದಲ್ಲೂ ಇಸ್ಲಾಮೀ ಇನ್‌ಕ್ವಿಸಿಷನ್ ನಡೆಸುತ್ತಿದ್ದಾರೆ. |
|
ನೀವದನ್ನು ‘ಇಸ್ಲಾಮೀ ಇನ್‌ಕ್ವಿಸಿಷನ್’ ಎಂದು ಕರೆಯುತ್ತೀರಾ? ನಾನು ಹೇಳುತ್ತೇನೆ, ಹಿಂದೂ ದೇವಮಾನವರ ಟೀಕೆ ಮಾಡಿದರೆ ಪ್ರತಿಭಟನೆಗಳು ನಡೆಯುತ್ತವೆ. ತುಂಬ ಯಶಸ್ವಿಯಾದ ‘ಪಿಕೆ’ ಸಿನೆಮಾದ ವಿರುದ್ಧ ಪ್ರತಿಭಟನೆಗಳು ನಡೆದು ಚಿತ್ರಮಂದಿರಗಳಿಗೆ ಹಾನಿ ಎಸಗಲಾಗಿದೆ. ಒಬ್ಬರನ್ನೂ ಕೊಂದಿಲ್ಲ; ಆ ಮಟ್ಟಿಗೆ ನಿಮ್ಮ ವಾದವನ್ನು ನಾನು ಒಪ್ಪುತ್ತೇನೆ. ಹಾಗಾದರೆ ನೀವು ವ್ಯಾಪಕವಾದ ಸಾಮಾನ್ಯೀಕರಣ ಮಾಡುವಿರಾ? ಅಂದರೆ ಮತೀಯ ನಂಬಿಕೆಗಳನ್ನು ಪ್ರಶ್ನಿಸಿದಾಗ ಮುಖ್ಯವಾಗಿ ಹಿಂದೂಧರ್ಮ ಇಸ್ಲಾಮ್‌ಗಿಂತ ಹೆಚ್ಚು ಸಹನಶೀಲ ಧರ್ಮ ಎನ್ನುವಿರಾ? ಅದಕ್ಕೆ ಕಾರಣ ಹಿಂದೂಧರ್ಮದ ಸ್ವರೂಪ ಎನ್ನುವಿರಾ? |
|
ಹೌದು. ಇಸ್ಲಾಮಿಗೆ ಹೊರತಾದ ಇತರ ಮತಗಳಲ್ಲಿ ಸಹನೆ ಇದೆ. ಕೆಲವು ಸಲ ಹಿಂದೂ ಮೂಲಭೂತವಾದಿಗಳು ಮುಸ್ಲಿಂ ಮೂಲಭೂತವಾದಿಗಳ ಹಾಗೆ ವರ್ತಿಸಿದಂತೆ ಕಂಡರೂ ಕೂಡಾ ಅವರು ಅದಕ್ಕಿಂತ ಸಹನಶೀಲರು. ನಾನು ‘ಪಿಕೆ’ ಚಿತ್ರವನ್ನು ನೋಡಿದ್ದೇನೆ. ಹಿಂದೂ ಮೂಲಭೂತವಾದಿಗಳು ಕೆಲವರು ಚಿತ್ರವನ್ನು ನಿಷೇಧಿಸಬೇಕೆಂದು ಹೇಳುತ್ತಿದ್ದಾರಾದರೂ ಚಿತ್ರ ನೋಡುವ ಜನರನ್ನು ಎಲ್ಲೂ ಕೊಂದಿಲ್ಲ. ಆದರೆ ಇಸ್ಲಾಮ್‌ನಲ್ಲಿ ಹಾಗಿಲ್ಲ. |
|
ನೀವು ಇಸ್ಲಾಂ ವಿಭಿನ್ನ ಎನ್ನುತ್ತೀರಿ. ಆದರೆ ಹಲವರು ಪ್ರವಾದಿಯನ್ನು ಲೇವಡಿ ಮಾಡಿ ತೋರಿಸುವಾಗ ಎಚ್ಚರ ವಹಿಸಬೇಕಿತ್ತು, ಎನ್ನುತ್ತಾರೆ. ಜಗತ್ತಿನಾದ್ಯಂತ ಮಿಲಿಯಗಟ್ಟಲೆ ಜನರಿಗೆ ಸ್ಫೂರ್ತಿ ನೀಡುವ ಇಸ್ಲಾಮಿನ ಕೇಂದ್ರವ್ಯಕ್ತಿಯಾದ ಪ್ರವಾದಿಯವರನ್ನು ಲೇವಡಿಮಾಡುವ ಮೂಲಕ ಆತ (ವ್ಯಂಗ್ಯಚಿತ್ರಕಾರ) ಅಪಾಯವನ್ನು ಆಹ್ವಾನಿಸಿದ, ಎಂದು ಹೇಳುತ್ತಾರೆ. |
|
ಪ್ರವಾದಿಯನ್ನು ಹಾಸ್ಯಮಾಡುವ ವಿಷಯದಲ್ಲಿ ನಾವೇಕೆ ಎಚ್ಚರ ವಹಿಸಬೇಕು? ನಾವು ಬಯಸುವ ಯಾರನ್ನು ಕೂಡಾ ಹಾಸ್ಯಮಾಡುವ ಹಕ್ಕು ನಮಗಿರುತ್ತದೆ. ಅಸಹನಶೀಲರು ಹಾಗೂ ಹುಚ್ಚು ಜನ ಇದ್ದಾಗಲೂ ಅವರು ಅಶಾಂತಿ ಸೃಷ್ಟಿಸಲು ಯತ್ನಿಸಬಹುದಲ್ಲವೆ? ಎಚ್ಚರ ವಹಿಸಬೇಕಾದದ್ದು ಅವರು; ಪ್ರಜಾಪ್ರಭುತ್ವ ಮತ್ತು ವ್ಯಕ್ತಿಸ್ವಾತಂತ್ರ್ಯಗಳ ಅರ್ಥವನ್ನು ಅವರು ತಿಳಿದುಕೊಳ್ಳಬೇಕು. |
|
ಅವರು ಅಭಿವ್ಯಕ್ತಿಸ್ವಾತಂತ್ರ್ಯ ಎಂದರೇನೆಂದು ಕಲಿತುಕೊಳ್ಳಬೇಕೆಂದು ನೀವು ಹೇಳುತ್ತೀರಿ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಯಾರನ್ನಾದರೂ ಲೇವಡಿ ಮಾಡಲು, ಬೈಯಲು ಅವಕಾಶ ಇದೆಯೆ? |
|
ಸಹನೆ ಇಲ್ಲದ ಒಂದು ದೊಡ್ಡ ಗುಂಪಿದೆ ಎಂಬುದು ನನಗೆ ಗೊತ್ತು. ಮುಸ್ಲಿಮರ ದಮನ ಮಾಡುತ್ತಾರೆಂದು ಇಸ್ರೇಲ್ ವಿರುದ್ಧ ಪ್ರತಿಭಟಿಸಲು ಸಾವಿರಾರು ಮುಸ್ಲಿಮರು ಬೀದಿಗಿಳಿಯುತ್ತಾರೆ. ಆದರೆ ಅವರು ಐಸಿಸ್, ಬೊಕೋ ಹರಾಮ್, ಅಲ್‌ಖೈದಾ, ಅಲ್‌ಸಬಾದಂತಹ ಭಯೋತ್ಪಾದಕ ಸಂಘಟನೆಗಳು ಮುಗ್ಧ ಜನರನ್ನು ಕೊಂದು ನಡೆಸುವ ಅತ್ಯಂತ ಕ್ರೂರ ಕೃತ್ಯಗಳ ವಿರುದ್ಧ ಪ್ರತಿಭಟಿಸುವುದಿಲ್ಲ. |
|
ನಾನು ಯಾವುದೋ ಪಾಶ್ಚಾತ್ಯ ಪತ್ರಿಕೆಯಲ್ಲಿ ಓದುತ್ತಿದ್ದೆ: ಪಶ್ಚಿಮದಲ್ಲೀಗ ಇಸ್ಲಾಮನ್ನು ಟೀಕಿಸುವುದು ಒಂದು ಚಟವಾಗಿದೆ; ಅದೊಂದು ಇಸ್ಲಾಂಫೋಬಿಯಾ ಆಗಿದೆ ಎಂಬುದಾಗಿ. ಇಸ್ಲಾಂ ವಿರುದ್ಧ ಲೇವಡಿ, ಟೀಕೆ ಮಾಡುವುದರಿಂದ ತಾವು ಪ್ರಸಿದ್ಧರಾಗುತ್ತೇವೆಂದು ಕೆಲವರು ತಿಳಿಯುತ್ತಿದ್ದಾರೆ. ಈ ಘಟನೆಯಲ್ಲಿ ವ್ಯಂಗ್ಯಚಿತ್ರಕಾರರು ಅದೇ ರೀತಿ ಮಾಡಿರಬಹುದೆ? |
|
ನಾನು ಹಾಗೆ ಭಾವಿಸುವುದಿಲ್ಲ. ಕೆಲವು ಪಾಶ್ಚಾತ್ಯ ಚಿಂತಕರು ಇಸ್ಲಾಂ ಒಂದು ಅಲ್ಪಸಂಖ್ಯಾತರ ಮತ ಎಂದು ಸಮರ್ಥನೆಗೆ ನಿಲ್ಲುತ್ತಾರೆ; ಮುಸ್ಲಿಮರನ್ನು ಕೂಡಾ ಅಲ್ಪಸಂಖ್ಯಾತರೆಂದು ಸಮರ್ಥಿಸುತ್ತಾರೆ; ಆಫಘನಿಸ್ತಾನ ಮತ್ತು ಇರಾಕ್‌ಗಳಲ್ಲಿ ಅವರ ದಮನ ನಡೆಯಿತು ಎನ್ನುತ್ತಾರೆ. ತಮ್ಮ ಉದಾರವಾದಿ ಪ್ರಜಾಪ್ರಭುತ್ವ ಪರಂಪರೆಯನ್ನು ಉಳಿಸಿಕೊಳ್ಳಬಯಸುವ ಅವರು ಮುಸ್ಲಿಮರ ವಿರುದ್ಧ ಹೋಗಲು ಬಯಸುವುದಿಲ್ಲ. ಆದರೆ ಒಂದಂತೂ ಸತ್ಯ: ಈಚಿನ ದಿನಗಳಲ್ಲಿ ಜನ ಇಸ್ಲಾಂವಿರೋಧಿಗಳಾಗುತ್ತಿದ್ದಾರೆ; ಏಕೆಂದರೆ ಅವರು ಇಸ್ಲಾಂನಲ್ಲಿರುವ ಭಯೋತ್ಪಾದನೆಯನ್ನು ಕಣ್ಣೆದುರೇ ನೋಡುತ್ತಿದ್ದಾರೆ. |
|
ನೀವು ಇಸ್ಲಾಂ ಬಗೆಗೇ ಮಾತನಾಡುತ್ತಿದ್ದೀರಿ. ನಾವು ಪ್ಯಾರಿಸ್‌ನ ದುರ್ಘಟನೆಯ ನೆನಪಿನಲ್ಲೇ ಇದ್ದೇವೆ. ಇದನ್ನು ಕ್ರೈಸ್ತಮತದ ಬಗೆಗೂ ಹೇಳಬಹುದಲ್ಲವೆ? ಕ್ರೈಸ್ತಮತವನ್ನು ಟೀಕಿಸುವ ‘ಲಾಸ್ಟ್ ಟೆಂಪ್ಟೇಶನ್ ಆಫ್ ಕ್ರೈಸ್ಟ್’ ಅನ್ನು ಈ ಹಿಂದೆ ನಿಷೇಧಿಸಲಾಯಿತು. ಹಿಂದೂ ದೇವರನ್ನು ಕುರಿತ ಎಂ.ಎಫ್. ಹುಸೇನ್ ಅವರ ಕಲಾಕೃತಿಗಳನ್ನು ನಾಶಪಡಿಸಲಾಯಿತು. ಹಿಂದೂಧರ್ಮ ಮತ್ತು ಕ್ರೈಸ್ತಮತಗಳು ಇಸ್ಲಾಮಿನಂತೆ ಹಿಂಸೆಯನ್ನು ತೋರಿಸುವುದಿಲ್ಲ ಎನ್ನುತ್ತಿದ್ದೀರಿ. ಇದು ಎಲ್ಲ ಮತಗಳ ಸಮಸ್ಯೆ ಅಲ್ಲವೆ? ಇದರಲ್ಲಿ ಇಸ್ಲಾಂನ ಪ್ರತ್ಯೇಕತೆ ಎಲ್ಲಿದೆ? |
|
ಸರಿ, ಅಂತಹ ಘಟನೆಗಳಿವೆ. ಆದರೂ ಅವು ಇಸ್ಲಾಮಿನಂತಲ್ಲ. ‘ಲಾಸ್ಟ್ ಟೆಂಪ್ಟೇಶನ್ ಆಫ್ ಕ್ರೈಸ್ಟ್’ಗಾಗಿ ಎಷ್ಟು ಜನರನ್ನು ಕೊಂದರು? ಪ್ರವಾದಿಯರಿಗಾಗಿ ಎಷ್ಟು ಜನರನ್ನು ಕೊಂದರು? |
|
ಹಾಗಾದರೆ ಬಂದೂಕಿನ ಬಳಕೆಯಲ್ಲಿ ಇಸ್ಲಾಂ ಇತರರಿಗಿಂತ ಭಿನ್ನ; ಅದು ಬೆಳೆಸಿದ ಸೈನಿಕರು ಇತರ ಮತಗಳಿಗಿಂತ ಭಿನ್ನವಾಗಿ ನೋಡುತ್ತಾ ಇರುತ್ತಾರೆ ಎನ್ನುವಿರಾ? |
|
ನೋಡಿ, ನೀವು ಕುರಾನನ್ನು ಓದಿದರೆ ಅಲ್ಲಿ ‘ಅವಿಶ್ವಾಸಿಗಳನ್ನು (ನಂಬದವರನ್ನು) ಕೊಲ್ಲಿ’ ಎಂದು ಉಪದೇಶಿಸುವಂತಹ ಹಲವಾರು ಸಾಲುಗಳನ್ನು ನೋಡಬಹುದು; ಮತವನ್ನು ನಂಬದವರನ್ನು (infidel) ಮತ್ತು ನಾಸ್ತಿಕರನ್ನು ಕೊಲ್ಲಿ ಎಂಬುದಾಗಿ ಸ್ಪಷ್ಟವಾಗಿ ಹೇಳಲಾಗಿದೆ. ಅಂತಹ ಪಠ್ಯವನ್ನು ನೀವು ಗಮನಿಸದೆ ಇರುವಂತಿಲ್ಲ. ಅಂತಹ ಸಾಲುಗಳನ್ನು ಮಕ್ಕಳ ತಲೆಗೆ ತುರುಕುವ (ಇಂಡಾಕ್ಟ್ರಿನೇಶನ್) ಕೆಲಸ ಕೂಡಾ ನಡೆಯುತ್ತಿದೆ. |
|
ನೀವು ಇಂಡಾಕ್ಟ್ರಿನೇಶನ್ ಬಗ್ಗೆ ಹೇಳುತ್ತಿದ್ದೀರಿ; ಆದರೆ ಹಲವರು ಅದು ಇಸ್ಲಾಮಿನ ತಪ್ಪು ವ್ಯಾಖ್ಯಾನ ಎನ್ನುತ್ತಾರೆ. ಎಲ್ಲ ಮತಧರ್ಮಗಳಲ್ಲಿ ಚಿಂತನೆಗೆ ಸಂಬಂಧಿಸಿ ಒಂದು ಸಂದರ್ಭ ಎಂಬುದು ಇರುತ್ತದೆ; ‘ನಂಬದವರನ್ನು ಕೊಲ್ಲಬೇಕು’ ಎಂಬುದು ಅದೇ ರೀತಿ ಸಂದರ್ಭವನ್ನು ತಪ್ಪಿಸಿ ಮಾಡಿದಂತಹ ಒಂದು ತಪ್ಪು ವ್ಯಾಖ್ಯಾನ ಇರಬಹುದೆ? |
|
ಇಲ್ಲ; ನನಗೆ ಅದು ಸರಿ ಎನಿಸುವುದಿಲ್ಲ. |
|
ನಿಮ್ಮ ಪ್ರಕಾರ ಕುರಾನ್ ಅಂತಹ ಹತ್ಯೆಗಳಿಗೆ ಅನುಮತಿ ನೀಡುತ್ತದೆಯೆ? ಮುಗ್ಧರ ಹತ್ಯೆಯನ್ನು ಮಂಜೂರು ಮಾಡುತ್ತದೆಯೆ? |
|
ಹೌದು, ಇಸ್ಲಾಂ ಅಂತಹ ಹತ್ಯೆಗಳಿಗೆ ಅನುಮತಿ ನೀಡುತ್ತದೆ. |
|
ನೀವು ಅಷ್ಟೊಂದು ನೇರವಾಗಿ ಹೇಳುವುದರಿಂದ ಮತವನ್ನು ನಂಬುವ ಎಲ್ಲರನ್ನೂ ರಾಕ್ಷಸರಂತೆ ಚಿತ್ರಿಸಿದಂತಾಗಲಿಲ್ಲವೆ? ಇಡೀ ಮತವನ್ನು ಹಾಗೆ ಮಾಡಬಹುದೆ? ಏಕೆಂದರೆ, ಪ್ಯಾರಿಸ್‌ನಲ್ಲಿ ನಡೆದುದರ ಆಧಾರದಲ್ಲಿ ಹೇಳುವುದಾದರೆ, ‘ನೋಡಿ, ನಾವು ಆ ರೀತಿ ಇಲ್ಲ’ ಎಂದು ಇಡೀ ಮತ ಈಗ ಎದ್ದು ನಿಂತು ಹೇಳುವ ಪರಿಸ್ಥಿತಿ ಬಂದಿದೆ. ಅಥವಾ, ಅಲ್ಲಿ ಬೇರೆ ಏನಾದರೂ ಸಮಸ್ಯೆ ಬರಬಹುದೆ? ಕೆಲವರ ತಪ್ಪು ಕೆಲಸಕ್ಕಾಗಿ ಇಡೀ ಇಸ್ಲಾಮನ್ನು ರಾಕ್ಷಸನಂತೆ ಕಾಣಲಾಗುತ್ತಿದೆ ಎಂಬ ದೂರು ಬರಬಹುದೆ? |
|
ಇಸ್ಲಾಮಿಗೆ ಸೇರಿದ ಹಲವರು ಕೊಲ್ಲಲು ಬಯಸದಿರುವ ಕಾರಣವೆಂದರೆ ಅವರು ಒಳ್ಳೆಯ ಮನುಷ್ಯರು. ಹೆಚ್ಚಿನ ಮುಸ್ಲಿಮರು ಭಯೋತ್ಪಾದಕರ ರೀತಿಯಲ್ಲಿ ಇತರರನ್ನು ಕೊಲ್ಲಲು ಬಯಸುವುದಿಲ್ಲ. ಆದರೆ ಅದಕ್ಕೆ ಕುರಾನ್ ಶಾಂತಿ ಸಾರುವ ಗ್ರಂಥ ಎಂದು ಅರ್ಥಮಾಡಲಾಗದು; ಇಸ್ಲಾಂ ಒಂದು ಶಾಂತಿಯ ಪರವಾದ ಮತ ಎಂದು ಅದರ ಅರ್ಥವಲ್ಲ. |
|
ಅಂದರೆ ನಿಮ್ಮ ಪ್ರಕಾರ ಮುಸ್ಲಿಂ ಜಗತ್ತಿನ ಮೌನಿ ಬಹುಸಂಖ್ಯಾತರು ಹಿಂಸೆಯನ್ನು ಬಯಸುವುದಿಲ್ಲ. ಆದರೆ ಇದನ್ನು ಹೇಗೆ ಎದುರಿಸುವುದು ಎನ್ನುವ ಸಂದಿಗ್ಧದಲ್ಲಿದ್ದಾರೆ, ಎನ್ನುವಿರಾ? ಅದು ವಾಸ್ತವ ಪರಿಸ್ಥಿತಿಯೆ? ಇಸ್ಲಾಮೀ ಜಗತ್ತಿನ ಮಧ್ಯೆ ಆ ಬಂದೂಕುಧಾರಿಗಳನ್ನು ಎದುರಿಸುವುದು ಸಮಸ್ಯೆಯಾಗಿ ಕುಳಿತಿದೆಯೆ? |
|
ನಮ್ಮಲ್ಲಿ ಉತ್ತಮ ಕಾನೂನುಗಳಿವೆ; ನಾವು ಮಾನವಹಕ್ಕುಗಳ ಬಗ್ಗೆ ಮಾತನಾಡುತ್ತೇವೆ; ಮಹಿಳೆಯರ ಹಕ್ಕಿನ ಬಗ್ಗೆ ಮಾತನಾಡುತ್ತೇವೆ. ಹೆಚ್ಚಿನ ಮುಸ್ಲಿಮರು ಇತರರನ್ನು ಮತದ ಹೆಸರಿನಲ್ಲಿ ಕೊಲ್ಲಲು ಇಷ್ಟಪಡುವುದಿಲ್ಲ. ಹೆಚ್ಚಿನ ಮುಸ್ಲಿಮರು ಐಸಿಸ್ ಮುಗ್ಧರ ಹತ್ಯೆ ನಡೆಸುವುದನ್ನು ಬಯಸುವುದಿಲ್ಲ. ಏಕೆಂದರೆ ಅವರು ಒಳ್ಳೆಯ ಜನ; ಒಳ್ಳೆಯ ಮುಸ್ಲಿಮರು. ಅಂದರೆ, ಅದರ ಅರ್ಥ ಇಸ್ಲಾಂ ಒಳ್ಳೆಯದು ಎಂದಲ್ಲ; ಬದಲಾಗಿ ಅವರು ಒಳ್ಳೆಯವರು ಎಂದರ್ಥ.
ಹಾಗಾದರೆ ಇಂದು ಹೆಚ್ಚಿನ ಮುಸ್ಲಿಮರು ಐಸಿಸ್‌ನ ಕೃತ್ಯಕ್ಕೆ ಹೆಮ್ಮೆಪಡುತ್ತಾರಾ? ತಮ್ಮ ಪ್ರವಾದಿಗೆ ಅವಮಾನಮಾಡಿದವರನ್ನು ಶಿಕ್ಷಿಸಲಾಯಿತು ಎಂದು ಸಂತೋಷಪಡುತ್ತಾರಾ? |
|
ನೋಡಿ, ಬಹಳಷ್ಟು ಮುಸ್ಲಿಮರು ಮೌನವಾಗಿ ವ್ಯಂಗ್ಯಚಿತ್ರಕಾರರು ಮತ್ತು ಪತ್ರಕರ್ತರ ಹತ್ಯೆಗಳನ್ನು ಸೆಲಬ್ರೇಟ್ ಮಾಡುತ್ತಿರಬಹುದು. ಏಕೆಂದರೆ ಅವರು ಹಿಂಸೆಯನ್ನು ಬಯಸದಿದ್ದರೂ ಕೂಡ ಪ್ರವಾದಿಯನ್ನು ಟೀಕಿಸಿ ವಿಡಂಬನೆಮಾಡಿ ಬರೆದವರನ್ನು ಕ್ಷಮಿಸಲು ಬಯಸಲಾರರು. |
|
ಇನ್ನೊಂದು ದೊಡ್ಡ ಪ್ರಶ್ನೆಯೆಂದರೆ, ನಿಮ್ಮ ಪ್ರಕರಣದಲ್ಲಿ ನೀವು ಅನುಭವಿಸಿದ್ದು. ಸರಕಾರ ಮೂಲಭೂತವಾದಿಗಳ ವಿರುದ್ಧ ಕ್ರಮಕೈಗೊಳ್ಳುವಲ್ಲಿ ಸೋತಿದೆ. ಬಂಗ್ಲಾದೇಶ ಇರಲಿ, ನಮ್ಮ ದೇಶ ಇರಲಿ, ಸರ್ಕಾರಗಳು ಮೂಲಭೂತವಾದಿಗಳ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ. ಅದರಿಂದಾಗಿ ಅವು ಇನ್ನಷ್ಟು ಬಲಶಾಲಿಗಳಾಗಿ, ಏನು ಬೇಕಾದರೂ ಮಾಡಿ ಜಯಿಸಿಕೊಳ್ಳಬಹುದೆಂದು ತಿಳಿಯುತ್ತಿವೆ. ಅದು ಎದ್ದುಕಾಣುವ ವಿಷಯ. ನಿಮ್ಮ ವಿಷಯ ಇರಲಿ, ಬೇರೆಯವರದೇ ಇರಲಿ, ಮತವನ್ನು ಪ್ರಶ್ನಿಸುವವರಿಗೆ ಹೀಗಾಗುತ್ತದೆ – ಎನ್ನುವ ಅಭಿಪ್ರಾಯ ಮೂಡುವಂತಾಗಿದೆ. |
|
ಸರಕಾರಗಳು ಅಭಿವ್ಯಕ್ತಿಸ್ವಾತಂತ್ರ್ಯವನ್ನು ರಕ್ಷಿಸುತ್ತಿಲ್ಲ. ಬದಲಾಗಿ ಅವು ಮತಗಳನ್ನು ರಕ್ಷಿಸುತ್ತಿವೆ. ಅಂದರೆ ಸರಕಾರಗಳು ಅಭಿವ್ಯಕ್ತಿಸ್ವಾತಂತ್ರ್ಯದ ವಿರುದ್ಧ ಇವೆ. ದೈವನಿಂದೆ (blasphemy) ಬಗ್ಗೆ ಜಗತ್ತಿನ ಈ ಭಾಗದಲ್ಲಿ, ಅಂದರೆ ಭಾರತೀಯ ಉಪಖಂಡದಲ್ಲಿ ಕಾನೂನುಗಳಿವೆ. ಆ ಕಾನೂನುಗಳನ್ನು ವಜಾ ಮಾಡುವುದು ಅಗತ್ಯ. ನೋಡಿ, ಪಶ್ಚಿಮ ಬಂಗಾಳ ಸರಕಾರ ನನ್ನ ಪುಸ್ತಕವನ್ನು ನಿಷೇಧಿಸಿತು. ಕಾರಣವೆಂದರೆ ನಾನು ಅದರಲ್ಲಿ ಇಸ್ಲಾಮನ್ನು ಮತ್ತು ಪ್ರವಾದಿ ಮೊಹಮ್ಮದರನ್ನು ಟೀಕಿಸಿದ್ದೇನೆ ಎಂಬುದು. |
|
ಇನ್ನು ಲಘುವಾದ ಇನ್ನೊಂದು ಮುಖ ಇದೆ. ವಿಶೇಷವಾಗಿ ನಮ್ಮಂತಹ ದೈವಭಕ್ತರಿರುವ ದೇಶದಲ್ಲಿ ಮತೀಯ ಭಾವನೆಗಳನ್ನು ನೋಯಿಸುವುದು ಸಲ್ಲದೆಂದು ಹಲವರು ಹೇಳುತ್ತಾರೆ. ಅದಕ್ಕಾಗಿ ಜನರ ಮತೀಯ ನಂಬಿಕೆಗಳ ಬಗೆಗಿನ ಪ್ರಜ್ಞೆ ನಿಮಗಿರಬೇಕು; ಬಹುಮತೀಯ ಸಮಾಜಗಳು, ವಿಶೇಷವಾಗಿ ನಮ್ಮ ಉಪಖಂಡದ ಸಮಾಜಗಳಿಗೆ ಇದು ಅನ್ವಯಿಸುವಂಥದ್ದು. |
|
ಆದರೆ ನೋಡಿ, ನಿಜವೆಂದರೆ ಮತಗಳ ಸುಧಾರಣೆ (reforms) ಆಗಬೇಕಾಗಿದೆ. ಇತರ ಮತಗಳ ಸುಧಾರಣೆ ಮಾಡಲಾಗಿದೆ; ಇಸ್ಲಾಮ್‌ನ ಸುಧಾರಣೆ ಆಗಿಲ್ಲ. ಅದರ ಸುಧಾರಣೆ ಕೂಡಾ ಆಗಬೇಕು. ಮಕ್ಕಳ ತಲೆಗೆ ಮತವನ್ನು ತುರುಕುವುದು (ಇಂಡಾಕ್ಟ್ರಿನೇಶನ್) ಸಲ್ಲದು; ಜನ ವೈಜ್ಞಾನಿಕ ದೃಷ್ಟಿಕೋನ, ತರ್ಕಬದ್ಧ ಹಾಗೂ ವೈಚಾರಿಕ ಮನಸ್ಸುಗಳನ್ನು ಹೊಂದಿರಬೇಕು. ಅವೈಚಾರಿಕ ಕುರುಡುನಂಬಿಕೆಗಳಿಗೆ ಅವಕಾಶ ಸಲ್ಲದು. ಆದ್ದರಿಂದ ಮತಗಳ ವಿಮರ್ಶೆ ಮಾಡದೆ ಸಮಾಜದಲ್ಲಿ ಬದಲಾವಣೆ ಬರುವುದು ಅಶಕ್ಯ. ಬಹಳ ಮುಖ್ಯವೆಂದರೆ ಇಸ್ಲಾಂ ವಿಮರ್ಶಾತ್ಮಕ ಪರಿಶೀಲನೆಗೆ ಒಪ್ಪಿಕೊಳ್ಳಬೇಕು. ಇತರ ಮತಗಳಿಗೆ ಅನ್ವಯವಾದದ್ದನ್ನು ತಾನು ಕೂಡಾ ಕಾರ್ಯಗತಗೊಳಿಸಬೇಕು. |
|
|
|
ಆದರೆ ನಿಮ್ಮಂತಹ ಕೆಲವರು, ಚಾರ್ಲಿ ಹೆಬ್ಡೋದ ವ್ಯಂಗ್ಯಚಿತ್ರಕಾರರಂತಹ ಕೆಲವರು ಕೇವಲ ವಿವಾದಾಸ್ಪದ ಆಗುವ ಉದ್ದೇಶದಿಂದ ಇಸ್ಲಾಮನ್ನು ಟೀಕಿಸುತ್ತಿರಬಹುದೆ? ಪರಿಣಾಮದಲ್ಲಿ ಅದು ಉದ್ರೇಕಕಾರಿಯಾಗಿ ಕಾಣುತ್ತದೆಯಲ್ಲವೆ? ಅದರಿಂದ ಸಂಘರ್ಷ ಉಂಟಾಗಬಹುದು, ಹಿಂಸೆ ಹೆಚ್ಚಬಹುದು ಎಂದು ತಿಳಿದೂ ಹಾಗೆ ಮಾಡುತ್ತೀರಾ? |
|
ಹೌದು; ಮತ್ತು ಅದು ಪ್ರಜಾಪ್ರಭುತ್ವದ ಅಂಗ. |
|
ಕೊನೆಯದಾಗಿ ಈ ಪ್ರಶ್ನೆ – ಚಾರ್ಲಿ ಹೆಬ್ಡೋ ಬೆಂಬಲಿಗರೆಲ್ಲ ಈಗ ಜೆ ಸ್ವೀ ಚಾರ್ಲಿ ಎನ್ನುತ್ತಾ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ; ಒಬ್ಬನಲ್ಲಿ ಗನ್ನು, ಇನ್ನೊಬ್ಬನಲ್ಲಿ ಪೆನ್ನು – ಹೀಗೆ ಈ ಸಮರ ಅಸಮಾನರ ನಡುವೆ ನಡೆಯುತ್ತಿದೆ; ಒಬ್ಬ ಭಯ ಹಬ್ಬಿಸುತ್ತಾನೆ, ಬಲಾತ್ಕರಿಸುತ್ತಾನೆ; ಆದರೆ ಇನ್ನೊಂದೆಡೆ ಲಕ್ಷಾಂತರ ಜನ ಚಾರ್ಲಿ ಹೆಬ್ಡೋ ಪರ ನಿಲ್ಲುತ್ತಿದ್ದಾರೆ. ಅವರಿಗೆ ನಿಮ್ಮ ಸಂದೇಶವೇನು? |
|
ಸರಿ, ಭಯ ಬೇಡ ಎಂದು ನಾನು ಅವರಿಗೆ ಹೇಳುತ್ತೇನೆ. ಪ್ರವಾದಿಯನ್ನು ಹಾಸ್ಯ ಮಾಡಬೇಕು ಅಂತ ಅವರಿಗೆ ಅನ್ನಿಸಿದರೆ ಅದನ್ನು ಮಾಡಬೇಕು. ಅವರು ತುಂಬ ಜನ ಇದ್ದರೆ ಸಮಸ್ಯೆ ಇರಲಾರದು. ನಾನು ಒಬ್ಬಳೇ ಇದ್ದು ಇಸ್ಲಾಮನ್ನು ಟೀಕಿಸಿದೆ; ಬಂಗ್ಲಾದಲ್ಲಿ ಪ್ರವಾದಿಯನ್ನು ತಮಾಷೆ (mock) ಮಾಡಿದೆ; ಆದ್ದರಿಂದ ನಾನು ನನ್ನ ದೇಶವನ್ನು ಬಿಡಬೇಕಾಯಿತು. ಆಗ ಅಲ್ಲಿ ನನ್ನ ಜೊತೆ ತುಂಬ ಜನ ಇದ್ದಿದ್ದರೆ ನಾನು ದೇಶಬಿಡುವ ಪರಿಸ್ಥಿತಿ ಬರುತ್ತಿರಲಿಲ್ಲ; ಮೂಲಭೂತವಾದಿಗಳಿಗೆ ನನ್ನ ವಿರುದ್ಧ ಫತ್ವಾ ಹೊರಡಿಸುವಷ್ಟು ಬಲ ಇರುತ್ತಿರಲಿಲ್ಲ. ಅವರಿಂದ ಎಷ್ಟು ಫತ್ವಾ ಹೊರಡಿಸಲು ಸಾಧ್ಯ? ಎಷ್ಟು ಜನರ ವಿರುದ್ಧ ಹೊರಡಿಸಲು ಸಾಧ್ಯ? ಚಾರ್ಲಿ ಹೆಬ್ಡೋ ಮುಂದಿನ ಸಂಚಿಕೆ ಪ್ರಕಟವಾಗಲಿದೆ ಮತ್ತು ಒಂದು ಮಿಲಿಯ ಪ್ರತಿ ಮುದ್ರಿಸುತ್ತಾರೆಂದು ತಿಳಿದು ನನಗೆ ಸಂತೋಷವಾಗಿದೆ; ಇದು ಭಯೋತ್ಪಾದಕರ ಮತ್ತು ಮುಸ್ಲಿಂ ಮೂಲಭೂತವಾದದ ವಿರುದ್ಧ ನಡೆಸುವ ಬಹುದೊಡ್ಡ ಪ್ರತಿಭಟನೆ ಆಗಲಿದೆ; ಮತ್ತು ಅದು ಅಭಿವ್ಯಕ್ತಿಸ್ವಾತಂತ್ರ್ಯವನ್ನು ಎತ್ತಿಹಿಡಿಯಲಿದೆ. |