ಕನಸೆಂದರೆ ಕಲ್ಪನೆಯ ಅರಮನೆ. ಎಚ್ಚರದ ಸ್ಥಿತಿಯಲ್ಲಿ ಎಂದೂ ಕಂಡಿರದ ವ್ಯಕ್ತಿಗಳು, ಪ್ರದೇಶಗಳು ಕನಸಿನಲ್ಲಿ ಕಾಣಿಸಿಕೊಳ್ಳುತ್ತವೆ. ಸತ್ತವರನ್ನು ಮತ್ತೆ ಬದುಕಿಸಿ ನಮ್ಮೆದುರಿಗೆ ನಿಲ್ಲಿಸುವ ಶಕ್ತಿ ಕನಸಿಗಿದೆ. ಮುರಿದುಹೋದ ಸಂಬಂಧಗಳು ಕನಸಿನಲ್ಲಿ ಬೆಸೆದುಕೊಳ್ಳುತ್ತವೆ.
ಕನಸುಕಾಣುವುದೆಂದರೆ ನನಗೆ ಅತ್ಯಂತ ಪ್ರಿಯ. ನಿದ್ದೆಮಾಡುವುದು ಸೋಮಾರಿತನದ ಪ್ರತೀಕವಿರಬಹುದು, ಆದರೆ ಕನಸುಕಾಣುವುದು ಕ್ರಿಯಾಶೀಲತೆ. ಅಬ್ದುಲ್ ಕಲಾಂರವರೇ ’ಕನಸನ್ನು ಕಾಣಿ’ ಎಂದು ಆದೇಶಿಸಿಲ್ಲವೇ? ಕನಸುಕಾಣುವುದಕ್ಕೆ ಅದು ನಮ್ಮ ಅಕ್ಷಿಪಟಲದ ಮೇಲೆ (ಕಣ್ಣುಮುಚ್ಚಿಕೊಂಡಿದ್ದರೂ) ಬೀಳಬೇಕಲ್ಲವೆ? ಈ `ಬೀಳುವುದು’ ಏಕೆ? ಎಂದು ಯೋಚಿಸಿದಾಗಲೆಲ್ಲ ನನಗೆ ಹೊಳೆಯುವುದು `ನಾವು ಫೋಟೊದಲ್ಲಿ ಚೆನ್ನಾಗಿ ಬೀಳಬೇಕು’ ಎಂದು ಸಿದ್ಧತೆ ಮಾಡಿಕೊಳ್ಳುವ ವಿಷಯ.
ಬಿದ್ದ ಕನಸನ್ನು ಮನೆಯವರ ಮುಂದೆ ಹಂಚಿಕೊಳ್ಳುವ ಹವ್ಯಾಸ ನನಗೆ ಚಿಕ್ಕಂದಿನಿಂದಲೂ ಬಂದಿದೆ. ಹುಟ್ಟಿದಾಗಿನಿಂದಲೇ ಕನಸುಕಾಣುತ್ತೇವೆ ಎಂಬುದಕ್ಕೆ ತೊಟ್ಟಿಲಲ್ಲಿ ಮಲಗಿದ ಮಗು ನಿದ್ದೆಯಲ್ಲಿ ನಗುವುದೇ ಸಾಕ್ಷಿಯಂತೆ. ಹೂಗನಸನ್ನು ಅಥವಾ ಹೊಂಗನಸನ್ನು ಕಂಡ ಈ ಹಸುಗೂಸಿನ ಮಂದಸ್ಮಿತ ನೋಡಿ ಸಂತೋಷಪಡದವರ್ಯಾರು?
ಕನಸುಗಳ ಬೆನ್ನೇರಿ
ಕನಸಿನಲ್ಲಿ ಇಂತಹ ವ್ಯಕ್ತಿಗಳು ಯಾಕೆ ಕಾಣಿಸಿಕೊಂಡರು? ಇಂತಹ ಸನ್ನಿವೇಶಗಳು ಏಕೆ ಬಂದವು? – ಎಂದು ಕಾರಣ ಕೆದಕುವ ಮರಣೋತ್ತರಪರೀಕ್ಷೆ ನನಗೆ ಯಾವಾಗಲೂ ನೆಮ್ಮದಿ ತಂದಿದೆ. “ಓಹ್!
ನಿನ್ನೆ ಆ ಹೆಸರಿನ ವ್ಯಕ್ತಿಯನ್ನು ನೆನಪಿಸಿಕೊಂಡೆ, ಅದಕ್ಕೆ ಕನಸಿನಲ್ಲಿ ಅದೇ ಹೆಸರಿನ ಇನ್ನೊಬ್ಬ ವ್ಯಕ್ತಿ ಬಂದಿದ್ದು” ಎಂಬ ಸಮಾಧಾನ. ನನ್ನ ಸಂಶೋಧನೆಯಲ್ಲಿ ಹೊಸ ತಿರುವು ಪಡೆದ? ಸಂತೋ?ಪಡುತ್ತೇನೆ.
ಶಿವರಾಮ ಕಾರಂತರು ಹೇಳುವ ಹಾಗೆ ನಮ್ಮ ಪುಟ್ಟ ಮೆದುಳಿನಲ್ಲಿ ನೆನಪಿನ ಚೂರುಗಳು ಸಂಗ್ರಹವಾಗಿರುತ್ತದೆ. ನಿದ್ದೆಯಲ್ಲಿ ಅವು ಏಳುತ್ತವೆ. ಒಬ್ಬ ವ್ಯಕ್ತಿಯ ಹೆಸರು ಆಯ್ದುಕೊಂಡು ಅದರ ಸುತ್ತಮುತ್ತ ಎಳೆಗಳು ಒಂದಕ್ಕೊಂದು ಹೆಣೆದುಕೊಂಡು ಒಂದು ಚಿತ್ರಣ ಮೂಡುತ್ತದೆ. ನೆನಪಿನ ಸುರುಳಿಯ ಟ್ರಾಫಿಕ್ ಮೇಲೆ ನಿಯಂತ್ರಣವಿಲ್ಲದಿದ್ದರೂ ಎಲ್ಲ ಘಟನೆಗಳೂ ತಾರ್ಕಿಕವಾಗಿರುತ್ತವೆ. ಆದರೆ ಮಾನಸಿಕವಾಗಿ ಅಸ್ವಸ್ಥನಾದವನಿಗೆ ಕನಸಿನಲ್ಲಿ ಉಂಟಾದ ಗೊಂದಲ ಅವನು ಜಾಗೃತನಾಗಿದ್ದಾಗಲೂ ಕೂಡ ಇರುತ್ತದೆ. ಅದಕ್ಕೇ ಅವನ ಮಾತೆಲ್ಲ ಅಸಂಬದ್ಧವಾಗಿರುತ್ತದೆ ಎಂದು ಕಾರಂತರು ಕನಸಿನ ವಿಶ್ಲೇಷಣೆಯನ್ನು ಬಹು ಸೊಗಸಾಗಿ ವಿವರಿಸುತ್ತಾರೆ. ಕನಸುಗಳು ಕಾರಂತರನ್ನು ಬಹುವಾಗಿ ಕಾಡಿರಬೇಕು. ಅವರ ಅತ್ಯಂತ ಜನಪ್ರಿಯ ಕಾದಂಬರಿಗಳ ಹೆಸರೇ ಅದಕ್ಕೆ ಸಾಕ್ಷಿ. ಒಂದು ’ಮೂಕಜ್ಜಿಯ ಕನಸು’ ಆದರೆ ಇನ್ನೊಂದು ’ಚಿಗುರಿದ ಕನಸು’.
ಕನಸಿನ ಪ್ರಾರಂಭ ಎಷ್ಟು ಅನಿರೀಕ್ಷಿತವೋ ಮುಕ್ತಾಯವೂ ಅಷ್ಟೇ ಅನಿರೀಕ್ಷಿತ. ಒಂದು ದಿನದ ಕ್ರಿಕೆಟ್ ಮ್ಯಾಚಿನಂತೆ. ಅದಕ್ಕೆ ಕನಸು ಎಲ್ಲರನ್ನೂ ಆಕರ್ಷಿಸುವುದು. ಕೆಲವು ಕನಸುಗಳು ಏಕೆ ಅಷ್ಟು ಅವಸರದಲ್ಲಿ ಕೊನೆಗೊಂಡಿತು ಎನಿಸಿದರೆ ಇನ್ನು ಕೆಲವು ಏಕೆ ಇನ್ನೂ ಮುಗಿಯಲಿಲ್ಲವೆಂದುಕೊಳ್ಳುವಷ್ಟು ದೀರ್ಘವಾಗಿರುತ್ತವೆ. ಅಂತಹ ಕನಸು ಬೀಳಬಹುದೆಂಬ ಭಯದಿಂದ ಕೆಲವು ಸಲ ನಿದ್ದೆ ಬರುವುದಿಲ್ಲ. ಹಗಲುಗನಸು ಬೀಳಬೇಕಾದರೆ ನಿದ್ದೆ ಬರದಿದ್ದರೂ ಆಯಿತು. ದುಃಸ್ವಪ್ನ ಅಥವಾ ಭಯಾನಕ ಕನಸನ್ನು `ನೈಟ್ಮೇರ್’ ಎನ್ನುತ್ತೇವೆ. ಅದಕ್ಕೆ ಬೆಚ್ಚಿಬೀಳಲು ನೈಟ್ಗಾಗಿ ಕಾಯಬೇಕಾಗಿಲ್ಲ. ಅದು ಯಾವಾಗ ಬೇಕಾದರೂ ಕಾಡಬಹುದು.
ಕೆಟ್ಟ ಕನಸುಗಳು ಬೀಳದಿರಲು ನಾವು ಸಾಕಷ್ಟು ಮುಂಜಾಗ್ರತೆ ವಹಿಸುತ್ತೇವೆ. ಮಲಗುವ ಮುನ್ನ ’ರಾಮಸ್ಕಂದಂ ….’ ಶ್ಲೋಕ ಹೇಳಿಕೊಳ್ಳುತ್ತೇವೆ. ಆದರೂ ಒಮ್ಮೊಮ್ಮೆ ದುಃಸ್ವಪ್ನ ಬೀಳುತ್ತದೆ. ಆಗ ಗಾಬರಿಯಾಗಿ ಎದ್ದು ಮತ್ತೊಮ್ಮೆ ರಾಮಸ್ಕಂದಂ ಹೇಳಿ ಮಲಗುತ್ತೇವೆ. ಮೊದಲನೇ ಸಲ ಸರಿಯಾಗಿ ಹೇಳಲಿಲ್ಲವೆಂದುಕೊಳ್ಳುತ್ತೇವೆ. ಕೆಟ್ಟ ಸ್ವಪ್ನ ಬೀಳದಿರಲಿ ಎಂದಷ್ಟೇ ದೇವರಲ್ಲಿ ನನ್ನ ಮೊರೆ. ಕನಸೇ ಬೀಳುವುದು ಬೇಡವೆಂದು ನಾವು ಯಾವ ಶ್ಲೋಕವನ್ನೂ ಹೇಳಿ ಮಲಗುವುದಿಲ್ಲ.
ಕುಂಭಕರ್ಣ ನಿದ್ರೆ
ಗೊರಕೆಹೊಡೆಯುವ ಸಮಯದಲ್ಲಿ ಕನಸುಗಳು ಬೀಳುವುದಿಲ್ಲ ಎಂದು ನನ್ನ ನಂಬಿಕೆ. ಏಕೆಂದರೆ ಗೊರಕೆ ಕನಸಿನ ಓಟಕ್ಕೆ, ಓಘಕ್ಕೆ ತಡೆಯಾಗುತ್ತದೆ ಎಂದೆನಿಸುತ್ತದೆ. ಗೊರಕೆ ನಮ್ಮ ಕನಸಿನಲ್ಲಷ್ಟೇ ಅಲ್ಲ ಪಕ್ಕದಲ್ಲಿ ಮಲಗಿದವರ ಕನಸನ್ನು, ಮೂಲತಃ ನಿದ್ದೆಯನ್ನು ಕೆಡಿಸಬಲ್ಲದು. ನಿರಂತರವಾಗಿ ಆರು ತಿಂಗಳ ಕಾಲ ನಿದ್ದೆ ಮಾಡುತ್ತಿದ್ದ ಕುಂಭಕರ್ಣನಿಗೆ ಅದೆಷ್ಟು ಕನಸುಗಳು ಬಿದ್ದಿರಬಹುದು? ಬಹುಶಃ ಅವನಿಗೆ ಕನಸೇ ಬೀಳುತ್ತಿರಲಿಲ್ಲವೆನಿಸುತ್ತದೆ. ಏಕೆಂದರೆ ಬಿದ್ದ ಕನಸುಗಳಲ್ಲಿ ಕೆಲವು ಕೆಟ್ಟ ಕನಸುಗಳು ಅವನನ್ನು ಎಬ್ಬಿಸಿರಲಿಲ್ಲವೇ? ಅಥವಾ ನಿದ್ರಾರಹಿತ ಆರು ತಿಂಗಳಲ್ಲಿ ಕುಂಭಕರ್ಣ ಬರೀ ಕನಸು ಕಾಣುತ್ತಿದ್ದನೇ ಅಥವಾ ನೈಟ್ಮೇರ್ಗಳನ್ನು ಕಾಣುತ್ತಿದ್ದನೇ? ಎಂಬ ಅನುಮಾನ. ಸರಿಯಾದ ಪುರಾವೆಗಳು ಪುರಾಣದಲ್ಲಿ ಇನ್ನೂ ಸಿಕ್ಕಿಲ್ಲ.
’ಮನಸ್ಸಿದ್ದಂತೆ ಕನಸು’ ಎಂಬ ಮಾತಿದೆ. ’ಒಳ್ಳೆಯವರಿಗೆ ಒಳ್ಳೆ ಕನಸು, ಕೆಟ್ಟವರಿಗೆ ಕೆಟ್ಟ ಕನಸು’ ಎಂಬ ನಿಯಮವೇನಿಲ್ಲ. ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿಯವರ ಕವನಸಂಕಲನದ ಬಿಡುಗಡೆ ಸಮಾರಂಭದಲ್ಲಿ ಪು.ತಿ.ನ.ರವರು “….ನಮ್ಮ ನರಸಿಂಹಸ್ವಾಮಿಗೆ ಕನಸಿನಲ್ಲೂ ತನ್ನ ಹೆಂಡತಿಯೇ ಕಾಣುತ್ತಾಳೆ” ಎಂದು ಹೇಳಿ ನಕ್ಕಿದ್ದು ಈಗಲೂ ನನ್ನ ಕಣ್ಮುಂದೆ ಇದೆ. ಅಂದ ಹಾಗೆ ಎಲ್ಲರಿಗಿಂತ ಹೆಚ್ಚಾಗಿ ಕವಿಗಳು, ಕವಿ ಮನಸ್ಸುಳ್ಳವರು ಹೆಚ್ಚುಹೆಚ್ಚು ಕನಸು ಕಾಣುತ್ತಾರೆಂಬುದು ನಿಜ. ಅದಕ್ಕೇ ಇರಬೇಕು ’ರವಿ ಕಾಣದ್ದನ್ನು ಕವಿ ಕಂಡ’ ಎಂಬ ಮಾತು ಬಂದಿದ್ದು. ನನ್ನ ಪ್ರಕಾರ ಹಾಗೆ ಕವಿ ಕಂಡಿದ್ದು ಕನಸೇ ಇರಬೇಕು.
ಕನಸಿನಿಂದಲೂ ಲಾಭ
ಕನಸು ನಿದ್ದೆಯ ಕಾವಲುಗಾರನೆಂದು ಮನಃಶಾಸ್ತ್ರಿಗಳು ಹೇಳುತ್ತಾರೆ. ಇದೆನೇ ಇರಲಿ, ನನ್ನ ದೃಷ್ಟಿಯಲ್ಲಿ ಕನಸಿಲ್ಲದ ನಿದ್ರೆ ನಿದ್ರೆಯೇ ಅಲ್ಲ. ಪ್ರತಿಯೊಂದು ಕನಸು ಹೊಸ ಆಲೋಚನೆ ತರುತ್ತದೆ. ಅದು ನಮ್ಮನ್ನು ಸಲೀಸಾಗಿ ಚಿಕ್ಕವಯಸ್ಸಿಗೆ ಕರೆದುಕೊಂಡುಹೋಗುತ್ತದೆ. ನಿವೃತ್ತಿಹೊಂದಿದ ಮೇಲೂ ನಾನು ಕಾಲೇಜಿನ ವಿದ್ಯ್ಯಾರ್ಥಿಯಾಗಿ ಪರೀಕ್ಷಾಕೊಠಡಿಗೆ ಹೋದಾಗ ಗಣಿತದ ಪರೀಕ್ಷೆಯ ಬದಲು ವಿಜ್ಞಾನದ ಪರೀಕ್ಷೆಯ ಪ್ರಶ್ನೆಪತ್ರಿಕೆ ತೆಗೆದುಕೊಂಡಾಗ ಮೈಯಲ್ಲಿ ಬೆವರುತ್ತಾ ಎಚ್ಚರವಾಗುತ್ತದೆ!
ನಿಜಜೀವನದಲ್ಲಿ ಯಾರನ್ನೊ ಬಯ್ಯಬೇಕೆಂದು ಬಯಸುತ್ತೇವೆಯೋ ಅದು ಸಾಧ್ಯವಾಗಿರುವುದಿಲ್ಲ. ಆದರೆ ಕನಸಿನಲ್ಲಿ ನಾವು ಮನಸೋ ಇಚ್ಛೆ ಅವರನ್ನು ಬಯ್ದು ನಮ್ಮ ಬಯಕೆಯನ್ನು ತೀರಿಸಿಕೊಂಡಿರುತ್ತೇವೆ. ನಮ್ಮ ಮೆದುಳು ನಿರಾತಂಕವಾಗಿ ನೆಮ್ಮದಿ ಹೊಂದುತ್ತದೆ. ಭಯ, ಹತಾಶೆ, ನಿರಾಸೆಗಳು ತಲೆಯಲ್ಲಿ ಸೇರಿಕೊಳ್ಳುವುದು ಮೆದುಳಿಗೆ ಹಾನಿಕರ. ಕನಸಿನ ರೂಪದಲ್ಲಿ ಅದನ್ನು ಹೊರಹಾಕಿದಾಗ ಮಿದುಳು ನಿರಾಳ. ಒಂದು ರೀತಿಯ ಸಮನ್ವಯ ಕಾಪಾಡಿಕೊಳ್ಳುತ್ತದೆ. ಹಾಗಾಗಿ ಜೀವನಕ್ಕೆ ಹೊಸ ಹುರುಪನ್ನು ಕನಸುಗಳು ತಂದುಕೊಟ್ಟು ನಮ್ಮ ಆರೋಗ್ಯವನ್ನು ಕಾಪಾಡುತ್ತದೆ.
ಒಂದು ಸನ್ನಿವೇಶಕ್ಕೆ ಇನ್ನೊಂದು ವಿಷಯ ಬೆರತುಹೋಗಿ ಕಲಸುಮೇಲೋಗರವಾಗುತ್ತದೆ. ಅದನ್ನು ಕನಸುಮೇಲೋಗರವೆನ್ನುವುದೇ ಹೆಚ್ಚು ಸೂಕ್ತವೆನಿಸುತ್ತದೆ. ಸುಪ್ತಮನಸ್ಸಿನಲ್ಲಿ ಅಡಗಿಸಿಕೊಂಡ ಅನೇಕ ಭಾವನೆಗಳು ಕನಸಿನಲ್ಲಿ ಸ್ಫೋಟಗೊಂಡ ಉದಾಹರಣೆಗಳಿವೆ. ಒಂದಕ್ಕೊಂದು ಸಂಬಂಧಪಡದ ವಿಷಯಗಳು ಹೇಗೆ ಬೆಸೆದುಕೊಂಡು ನಮ್ಮನ್ನು ಬೆರಗುಗೊಳಿಸುತ್ತವೆ ಎಂಬುದನ್ನು ನಾ. ಕಸ್ತೂರಿಯವರು ವಿವರಿಸುವ ಒಂದು ಕನಸಿನ ವಿಶ್ಲೇಷಣೆಯಿಂದ ತಿಳಿಯಬಹುದು:
ಕಸ್ತೂರಿಯವರು ಮೈಸೂರು ಮಹಾರಾಜ ಕಾಲೇಜಿನಲ್ಲಿದ್ದಾಗ ಅವರ ಸಹೋದ್ಯೋಗಿ ನಾರಾಯಣಶಾಸ್ತ್ರಿಗಳಿಗೆ ಒಂದು ಕನಸು ಬಿದ್ದಿತು. ಒಂದು ಸಭೆಯಲ್ಲಿ ಗಾಂಧಿಯವರ ಉಪಸ್ಥಿತಿ, ನೇಪಥ್ಯದಲ್ಲಿ ’ಕಸ್ತೂರಬಾ’ರನ್ನು ಯಾರೋ ಕೈಕಾಲು ಕಟ್ಟಿಹಾಕಿ ಉರುಳಿಸಿಬಿಟ್ಟಿದ್ದಾರೆ. ಈ ಕನಸಿನ ಗೊಂದಲದ ಬೆನ್ನುಹತ್ತಿದಾಗ ತಿಳಿದ ವಿಷಯ – ಶಾಸ್ತ್ರಿಗಳು ಒಂದು ಸಭೆಯಲ್ಲಿ ಸ್ವಾಗತಭಾಷಣ ಮಾಡಬೇಕಾಗಿತ್ತು. ಶಾಸ್ತ್ರಿಗಳ ಸುಪ್ತಮನಸ್ಸಿನಲ್ಲಿ ನಾ. ಕಸ್ತೂರಿ ವಾಚಾಳಿ. ಅವರು ಬೇರೆಯವರಿಗೆ ಮಾತನಾಡಲು ಅವಕಾಶವೇ ಕೊಡುತ್ತಿರಲಿಲ್ಲ. ಆದ್ದರಿಂದ ನಾ. ಕಸ್ತೂರಿಯವರ ಬಾಯನ್ನು ಕಟ್ಟಿಹಾಕಬೇಕೆಂದು ಯೋಚನೆ. ಇದು ಕನಸಿನಲ್ಲಿ ನಾ. ಕಸ್ತೂರಿ ಬಾಯಿ ಕಟ್ಟಿಹಾಕುವುದರ ಬದಲಾಗಿ ಗಾಂಧಿಯವರ ಪತ್ನಿ ಕಸ್ತೂರಬಾ ಅವರನ್ನು ಕಟ್ಟಿಹಾಕಿದ ಕ್ರಿಯೆಯಲ್ಲಿ ಪರ್ಯಾವಸಾನವಾಯಿತು!
ನಾ. ಕಸ್ತೂರಿಯವರು ಈ ವಿಷಯವನ್ನು ತಮ್ಮ `ಶೈಕ್ಷಣಿಕ ಸಾಹಸಗಳು’ ಎಂಬ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.
ಕವಿ-ಕಾವ್ಯ ಮತ್ತು ಕನಸು
ಹೇಮಾಮಾಲಿನಿಯನ್ನು `ಕನಸಿನಕನ್ಯೆ’ ಎಂದು ಪ್ರಚಾರಮಾಡುವ ಮೊದಲೇ ಕೆ.ಸಿ. ಶಿವಪ್ಪ ವನಮಾಲಿಯನ್ನು `ಕನಸು ಮಾರುವ ಚೆಲುವ/ನೀ ಹಾಡ ನಿಲ್ಲಿಸಬೇಡ/ರಾಗದೆಳೆ ನೂಲುತಿರು ಸಿರಿಗನಸ ಹಂಚುತಿರು’ ಎಂದು ಬಣ್ಣಿಸಿದ್ದಾರೆ. ಮನಸು-ಕನಸು ಬೆರೆಯುವ ಪ್ರಕ್ರಿಯೆಗೆ ಯಾವುದೋ ಸಂಚಿರಬೇಕೆಂದು ಕವಿ ಲಕ್ಷೀನಾರಾಯಣ ಭಟ್ಟರ ಗುಮಾನಿ.
ಯಾವುದೀ ಹೊಸ ಸಂಚು
ಎದೆಯಂಚಿನಲಿ ಮಿಂಚಿ
ಮನಸು ಕನಸುಗಳನು ಕಲೆಸಿರುವುದು.
– ಎನ್ನುತ್ತಾರೆ ಕವಿ.
ಕನಸಿನಲಿ ನಾನು ಗೊಣಗುತ್ತೇನೆ, ಮಾತನಾಡುತ್ತೇನೆ, ಭಾಷಣ ಮಾಡುತ್ತೇನೆ, ಪಾಠ ಮಾಡುತ್ತೇನೆ ಎಂದು ನನ್ನ ಹೆಂಡತಿ ಹೇಳುತ್ತಿರುತ್ತಾಳೆ. ನಾನು ಅವಳನ್ನು ನಂಬುತ್ತೇನೆ. ಏಕೆಂದರೆ ಅವಳು ಸ್ಪಷ್ಟ ಮಾಹಿತಿ ಕೊಡುತ್ತಾಳೆ. ಆದರೂ ಅವಳು ನನ್ನನ್ನು ಯಾವ ಮನೋವೈದ್ಯರ ಬಳಿಯೂ ಕರೆದುಕೊಂಡು ಹೋಗುವ ಮಾತನಾಡಿಲ್ಲ. ನಿದ್ದೆಯಲ್ಲಿ ಓಡಾಡುವುದು, ಕಾರು ಚಲಿಸುವುದು….. ಇಂತಹ ಅಪಾಯಗಳಿಗಿಂತ ನಿದ್ದೆಯಲ್ಲಿ ಮಾತನಾಡುವುದು ಪರವಾಗಿಲ್ಲ ಅನ್ನಿಸಿರಬೇಕು. ಅಥವಾ ಬಹಳ ಜನಪ್ರಿಯವಾದ ಜೋಕ್ನಂತೆ ’ನೀವು ನಿಮ್ಮ ಯಜಮಾನ್ರಿಗೆ ಹಗಲು ಹೊತ್ತು ಮಾತನಾಡಲು ಬಿಡಿ, ಅವರು ನಿದ್ದೆಯಲ್ಲಿ ಮಾತನಾಡುವುದನ್ನು ಬಿಡುತ್ತಾರೆ’ ಎಂದು ವೈದ್ಯರು ಹೇಳಬಹುದೆಂಬ ಅನುಮಾನ ನನ್ನ ಪತ್ನಿಗೆ ಇರಬೇಕು.
ಮುಂದಾಗುವ ಘಟನೆಗಳು ಕೆಲವರಿಗೆ ಹಿಂದಣ ದಿನವೇ ಕನಸಿನಲ್ಲಿ ಬೀಳುತ್ತದೆ ಎನ್ನುತ್ತಾರೆ. ಜೂಲಿಯಸ್ ಸೀಸರ್ನ ಹೆಂಡತಿಗೆ ಬಿದ್ದ ಕನಸಿನ ಬಗ್ಗೆ ಓದಿದ್ದೇವೆ. ಯಾವುದೋ ಒತ್ತಡಕ್ಕೆ ಮಣಿದು ಕನಸಾಗಿ ಹೊರಬರಬಹುದು. ಎಷ್ಟು ವೇಳೆ ನಮ್ಮ ಯಾವುದೇ ಸಮಸ್ಯೆಗೆ ಕನಸಿನಲ್ಲಿ ಪರಿಹಾರ ಸಿಕ್ಕಲೂಬಹುದು. ಸಂತಸ ತಂದ ಭವಿಷ್ಯವನ್ನು ಮುನ್ಸೂಚನೆಯಾಗಿ ಕಾಣುವ ಸಾಧ್ಯತೆಯೂ ಇದೆ. ಸರಿ-ತಪ್ಪು ಸಾಧ್ಯಾಸಾಧ್ಯತೆ, ಸಲಹೆ-ಸೂಚನೆಗಳನ್ನು ಕನಸಿನರೂಪದಲ್ಲಿ ಹೊರಗೆಡಹಿ ನಮ್ಮನ್ನು ಎಚ್ಚರಿಸುವ, ತಪ್ಪುನಡೆಯನ್ನು ತಪ್ಪಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ನೀರೆತ್ತುವ ಪಂಪನ್ನು ಹೋಲುವ, ಗಾಳಿಯನ್ನು ಒಂದು ಶಕ್ತಿಯಾಗಿ ಮಾರ್ಪಡಿಸುವ ಒಂದು ಯಂತ್ರ ಮೊದಲಿಗೆ ನ್ಯೂಟನ್ಗೆ ಕಾಣಿಸಿದ್ದು ಕನಸಿನಲ್ಲಿ. ಮಾರ್ಕಟ್ವೈನ್ರ ಹೆಚ್ಚಿನ ಕಥೆಗಳು ಕನಸಿನಲ್ಲಿ ರೂಪುಗೊಂಡಿದ್ದು ಎಂದು ಕೇಳಿದ್ದೇವೆ. ಚರ್ಚಿಲ್ ಪದೇಪದೇ ಕನಸಿನಲ್ಲಿ ಒಂದು ತೆರನಾದ ಪೆಟ್ಟಿಗೆ ಕಾಣುತ್ತಿದ್ದರು. ಅದರೊಳಗೆ ಒಂದು ಪುರುಷ ದೇಹ. ನಂತರ ಗೊತ್ತಾದುದು ಅದು ಅವರದೇ ಮುಖ! ಕನಸಿನಲ್ಲಿ ಶವದ ಪೆಟ್ಟಿಗೆ ಮೇಲಿದ್ದ ದಿನಾಂಕವೇ ಮುಂದೆ ಚರ್ಚಿಲ್ ಸತ್ತ ದಿನ. ಇದೊಂದು ವಿಸ್ಮಯ ಕಾಕತಾಳೀಯವೇ ಇರಬಹುದು.
ಕನಸನ್ನು ಕುರುಡರೂ ಕೂಡ ಕಾಣಬಹುದಂತೆ. ಜಾಹಿರಾತಿನ ಮುಕ್ಕಾಲು ಭಾಗ ಕನಸನ್ನು ಮಾರುವ ಕೆಲಸ. ನಿಮ್ಮ ಕನಸಿನ ಮನೆ, ಕಾರಿನ ಕನಸುಗಳನ್ನು ರಿಯಾಲಿಟಿ ಷೋಗಳಲ್ಲಿ ತೋರಿಸುತ್ತಾರೆ. ಪ್ರಾಣಿಗಳಿಗೆ ಕನಸು ಬೀಳುವುದೋ ಇಲ್ಲವೋ, ನಮ್ಮ ಕನಸುಗಳಲ್ಲಿ ಪ್ರಾಣಿಗಳು ನಮ್ಮನ್ನು ಕಾಡುತ್ತವೆ. ಅದಕ್ಕೆ ಇರಬೇಕು ’ಸಿಂಹಸ್ವಪ್ನ’ದಿಂದ ಪೀಡಿತರಾಗುತ್ತೇವೆ. ನಿದ್ದೆ ಬರುವುದಕ್ಕೆ ಮಾತ್ರೆಗಳಿವೆ. ಕನಸು ಬೀಳುವುದಕ್ಕೆ ಅಥವಾ ಬೀಳದಿರುವುದಕ್ಕೆ ಮಾತ್ರೆಗಳು ಬಂದಿಲ್ಲವೆಂದು ನನಗನಿಸುತ್ತದೆ. ಅಜೀರ್ಣವಾದಾಗ ಕನಸು ಬೀಳುತ್ತವೆ ಎಂಬುದು ಕೆಲವರ ಅಭಿಪ್ರಾಯ. ಆದರೆ ನನಗೆ ಕೆಲವು ಕನಸುಗಳು ಈಗಲೂ ಜೀರ್ಣವಾಗುವುದಿಲ್ಲ.
ಎಲ್ಲರಿಗಿಂತ ನಾವು ಮುಂದಿರಬೇಕೆಂಬುದು ಮನು?ನ ಸಹಜ ಆಸೆ. ಅದಕ್ಕೇ ಇರಬೇಕು ಕನಸಿಗೂ ಕುದುರೆಗೂ ಅವಿನಾಭಾವ ಸಂಬಂಧ. ವೇಗದ ಓಟ ಮುಖ್ಯ ನಿಜ. ಆದರೆ ಲಂಗುಲಗಾಮು ಇಲ್ಲದೆ ಕನಸ್ಸನ್ನೇರಿ ಹೋದರೆ ಗುರಿ ಮುಟ್ಟುವ ಬದಲು ಗುಂಡಿಯೊಳಗೆ ಕೆಡವಬಹುದು.
ಕನಸಿನ ವೇಗ ನಾವು ಊಹಿಸಿಕೊಳ್ಳಲಾರದಷ್ಟು. ಕನಸಿನಲ್ಲಿ ಸ್ಲೊ-ಮೋಶನ್ ಇಲ್ಲ. ಕನಸಿನ ಬಣ್ಣ ಈಸ್ಟಮನ್ ಕಲರ್. ನಾವು ಪ್ರಕೃತಿಯಲ್ಲಿ ಕಾಣುವ ಬಣ್ಣವೇ! ಕನಸಿನಲ್ಲಿ ದೃಷ್ಟಿದೋಷ ಮಾಯವಾಗುತ್ತದೆ. ಚೆನ್ನಾಗಿ ಕಾಣಲೆಂದು ಮಲಗಿದಾಗ ಕನ್ನಡಕ ಹಾಕಿಕೊಂಡು ಮಲಗಿದ್ದ ಎಂಬುದು ಕೇವಲ ಜೋಕ್ಗಾಗಿ. ಕ್ಯಾಟರಾಕ್ಟ್ ಆಪರೇಷನ್ ಆದಾಗಲೂ ಸ್ಪಷ್ಟವಾಗಿ ನೋಡಿದೆ ಎಂದು ನನ್ನ ಭಾವ ಹೇಳಿದ್ದು ಜ್ಞಾಪಕ ಬರುತ್ತದೆ.
ಮುಂಜಾವಿನ ಕನಸಿನಲಿ
ಬೆಳಗಿನ ಜಾವ ಬೀಳುವ ಕನಸು ನಿಜವಾಗುತ್ತದೆ ಎಂದು ನಾವು ಒಳ್ಳೆಯದನ್ನು ಆಯ್ಕೆ ಮಾಡಿಕೊಂಡೇ ಹೇಳುವ ಮಾತು. ಕೆಟ್ಟ ಕನಸಾದರೆ ಅದು ಬೆಳಗಿನ ಜಾವ ಅಲ್ಲ ಮಧ್ಯರಾತ್ರಿ ಇರಬೇಕು ಎಂದು ನಾವೇ ಸಮಾಧಾನ ಮಾಡಿಕೊಳ್ಳುವುದು ರೂಢಿ.
ಕನಸಿನ ದುರುಪಯೋಗಮಾಡಿಕೊಂಡು ಕೆಲವರನ್ನು ವಂಚಿಸುತ್ತೇವೆ. ಕೆಲವರನ್ನು ಬ್ಲ್ಯಾಕ್ಮೇಲ್ ಮಾಡುತ್ತೇವೆ. ಕನಸಿನಲ್ಲಿ ದೇವರು ಬಂದು ಆಜ್ಞೆಮಾಡಿದ್ದಾನೆ, ಒಂದು ದೇವಾಲಯ ಕಟ್ಟಿಸು, ಧನಸಹಾಯಕ್ಕೆ ಇಂತಿಂಥವರನ್ನು ಕೇಳು ಎಂದು ಹೇಳಿ ಕೆಲವರು ಮನವಿ ಮಾಡಿಕೊಳ್ಳುತ್ತಾರೆ. ಊರಿಗೆ ಹೋಗಲು, ಹರಕೆ ತೀರಿಸಲು ಸಹಾಯವಾಯಿತು ಎಂದು ಎಚ್ಚರಿಸಲು ಸ್ವತಃ ದೇವರೇ ಬಂದು ಹೇಳಿ ಮನೆಯವರನ್ನು ಹೆದರಿಸಬಹುದು. ಅವರೇನೂ ಸುಳ್ಳು ಹೇಳುವುದಿಲ್ಲ – ಅಪರಾಧಿಪ್ರಜ್ಞೆ ಕನಸಿನಲ್ಲಿ ಆ ರೀತಿ ರೂಪುಗೊಂಡಿರುವ ಸಾಧ್ಯತೆಯಿದೆ.
ಕನಸು ನನಸಾಗುವ ಬಯಕೆ ಯಾರಿಗಿರುವುದಿಲ್ಲ ಹೇಳಿ? ಆದರೆ ಒಮ್ಮೊಮ್ಮೆ ನಮ್ಮ ಕನಸು ಬೇರೆಯವರಲ್ಲಿ ನನಸಾಗುತ್ತದೆ. ಒಮ್ಮೆ ಲಾಟರಿಯಲ್ಲಿ ಬಹುಮಾನ ಬಂದ ಕನಸು ಬಿತ್ತು. ಅದು ನಿಜವೂ ಆಯಿತು; ಆದರೆ ನಮ್ಮ ಎದುರು ಮನೆಯವರಿಗೆ ಲಾಟರಿಯಲ್ಲಿ ಬಹುಮಾನ ಬಂತು!
ಕನಸಿನ ಮನಶ್ಶಾಸ್ತ್ರೀಯ ರೂಪ
ಸಿಗ್ಮಂಡ್ನ ಸಿದ್ಧಾಂತದ ಪ್ರಕಾರ ಸುಪ್ತಮನಸ್ಸಿನಲ್ಲಿ ಅದುಮಿಟ್ಟ ವಿ?ಯ, ಬಯಕೆ, ಅನುಭವಗಳು ಜಾಗೃತಮನಸ್ಸಿನ ಒಳಗೆ ನುಗ್ಗಲು ಸದಾ ಪ್ರಯತ್ನಿಸುತ್ತಲೇ ಇರುತ್ತದೆ. ಆದರೆ ಅನುಮತಿ ಸಿಗದೆ ಹಿಂದೊತ್ತಲ್ಪಡುತ್ತದೆ. ಕನಸಾಗಿ ಪ್ರಕಟವಾಗುವ ಮೊದಲು ಕನಸಿನ ಪರಿಶೀಲನ ಅನುಮತಿ ಬೇಕು. ಎಚ್ಚರದ ಸ್ಥಿತಿಯಲ್ಲಿ ಈಡೇರದ್ದು ಈಗ ಒತ್ತಡದ ಅನುಮತಿ ಪಡೆದು ನಿದ್ರೆಯಲ್ಲಿ ಕನಸಿನ ರೂಪದಲ್ಲಿ ಪ್ರಕಟಗೊಳ್ಳುತ್ತದೆ.
ಕನಸೆಂದರೆ ಕಲ್ಪನೆಯ ಅರಮನೆ. ಎಚ್ಚರದ ಸ್ಥಿತಿಯಲ್ಲಿ ಎಂದೂ ಕಂಡಿರದ ವ್ಯಕ್ತಿಗಳು, ಪ್ರದೇಶಗಳು ಕನಸಿನಲ್ಲಿ ಕಾಣಿಸಿಕೊಳ್ಳುತ್ತವೆ. ಸತ್ತವರನ್ನು ಮತ್ತೆ ಬದುಕಿಸಿ ನಮ್ಮೆದುರಿಗೆ ನಿಲ್ಲಿಸುವ ಶಕ್ತಿ ಕನಸಿಗಿದೆ. ಮುರಿದುಹೋದ ಸಂಬಂಧಗಳು ಕನಸಿನಲ್ಲಿ ಬೆಸೆದುಕೊಳ್ಳುತ್ತವೆ.
ಲೇಖಕರು ನಿವೃತ್ತ ಬ್ಯಾಂಕ್ ಮ್ಯಾನೇಜರ್ ಹಾಗೂ ಹಿರಿಯ ಬರಹಗಾರರು