ಉತ್ಥಾನ ವಾರ್ಷಿಕ ಕಥಾಸ್ಪರ್ಧೆ ೨೦೧೩ರಲ್ಲಿ ಮೆಚ್ಚುಗೆ ಬಹುಮಾನ ಪಡೆದ ಕಥೆ
ಎಲ್ಲರ ಬದುಕೂ ಒಂದು ತೆರೆದಿಟ್ಟ ಪುಸ್ತಕ. ಆ ಪುಸ್ತಕದಲ್ಲಿ ಎಷ್ಟು ಪುಟಗಳಿವೆ ಅಂತ ಯಾರಿಗೂ ಗೊತ್ತಿರೋಲ್ಲ. ಮುಂದಿನ ಪುಟದಲ್ಲಿ ಏನಿದೆ ಅಂತ ಗೊತ್ತಿಲ್ಲ. ನಾವು ಪುಟ ತೆಗೆಯೋ ಹಾಗಿಲ್ಲ. ಅದೇ ಪುಟ ತೆಗೆದುಕೊಳ್ಳುತ್ತದೆ. ಅದರಲ್ಲಿ ಏನು ಬರೆದಿದೆಯೋ ಅದರಂತೆ ಆಗುತ್ತದೆ. ಅದರಲ್ಲಿ ಬರೆದಿರುವುದನ್ನು ನಾವು ಅಳಿಸುವಂತೆಯೂ ಇಲ್ಲ, ಬೇರೆ ಬರೆಯುವಂತೆಯೂ ಇಲ್ಲ.
ಎಂಟು ದಿನಗಳಿಂದ ಮಳೆ ನಿಂತಿರಲಿಲ್ಲ. ಸೂರ್ಯನನ್ನು ನೋಡಿಯೇ ತುಂಬಾ ದಿನಗಳಾಗಿತ್ತು. ಇಡೀ ವಾತಾವರಣವೇ ಚಳಿಮಯವಾಗಿತ್ತು. ಮೂಲೆಯಲ್ಲಿ ಕಂಬಳಿಯೊಂದನ್ನು ಹೊದ್ದು ಕೂತು ಹಾಗೇ ತೂಕಡಿಸುತ್ತಿದ್ದ ರಂಗಯ್ಯನವರನ್ನು ನೋಡಿ ಒಳಗಿನಿಂದ ಬಂದ ಅವರ ಹೆಂಡತಿ ಕಮಲಮ್ಮ ಈ ವಾತಾವರಣ ನಿಮಗೆ ಹೇಳಿ ಮಾಡಿಸಿದಂತಿದೆ. ನಾನು ನೋಡಿ ಈ ವಾತಾವರಣದಲ್ಲಿ ತಿಂಡಿ ಮಾಡ್ತೀನಿ, ಅಡುಗೆ ಮಾಡ್ತೀನಿ, ಪಾತ್ರೆ ತೊಳೀತೀನಿ, ಬಟ್ಟೆ ಒಗೀತೀನಿ. ನಿಮ್ಮ ತರಹ ಮುದುರಿ ಕೂತ್ಕೊಂಡ್ರೆ ಕೆಲಸ ಆದೀತಾ. ಬನ್ನಿ, ತಿಂಡಿ ಆಗಿದೆ; ಇಬ್ಬರೂ ತಿನ್ನೋಣ ಎಂದರು. ಹೆಂಡತಿ ಕಡೆ ನೋಡಿದ ರಂಗಯ್ಯ, ಅದಕ್ಕೇ ನಿನ್ನನ್ನು ಹೆಂಡ್ತಿ ಅನ್ನೋದು, ನನ್ನನ್ನು ಗಂಡ ಅನ್ನೋದು ಅಂದು ನಕ್ಕು, ಕಂಬಳಿ ಕಿತ್ತೆಸೆದು ಅಡುಗೆ ಮನೆಗೆ ಹೋಗಿ ಸೌದೆ ಒಲೆಯ ಮುಂದೆ ಕುಳಿತರು.
ಬಿಸಿಬಿಸಿ ಅಕ್ಕಿತರಿ ಉಪ್ಪಿಟ್ಟು ಜೊತೆಗೆ ತುಪ್ಪ, ಚಟ್ನಿಪುಡಿ ಹಿತವಾಗಿತ್ತು. ಕಮಲಮ್ಮ ಗಂಡನಿಗೆ ಒರಗಿ ಕೂತು ಯಾಕೋ ಜೀವನಾನೇ ಬೇಜಾರಾಗಿದೆ ರೀ, ಈ ಭೂಮಿಗೆ ಬಂದ ನನ್ನ ಕೆಲಸ ಮುಗಿಯಿತು, ಇನ್ನು ಹೊರಡೋಣ ಅನಿಸ್ತಿದೆ ಅಂದರು.
ಈ ಮಾತಿನ ಪೀಠಿಕೆಗೆ ಕಾರಣ ಏನು ಎಂದು ರಂಗಯ್ಯನಿಗೆ ಹೇಳಬೇಕಾಗಿರಲಿಲ್ಲ. ಸದಾ ಚೈತನ್ಯದ ಚಿಲುಮೆಯಾಗಿರುತ್ತಿದ್ದ ಹೆಂಡತಿ ಈಗೊಂದೆರಡು ಎರಡು ತಿಂಗಳಿನಿಂದ ಹೀಗೇ ಮಾತಾಡ್ತಾಳೆ. ಹಾಗೆ ನೋಡಿದರೆ ರಂಗಯ್ಯನ ಅಭಿಪ್ರಾಯವೂ ಅದೇ. ಇದಕ್ಕೆ ಕಾರಣ ಅವರ ಜೀವನದಲ್ಲಿ ಈಗೊಂದಾರು ತಿಂಗಳುಗಳಿಂದ ನಡೆದುಕೊಂಡು ಬರುತ್ತಿರುವ ಬದಲಾವಣೆಗಳು. ನಮಗೆ ಯಾರೂ ಬೇಡ, ನಾವೂ ಯಾರಿಗೂ ಬೇಡ ಅನಿಸಿದರೆ ಇನ್ನು ಬದುಕು ಏತಕ್ಕಾಗಿ, ಯಾರಿಗಾಗಿ?
ಹೆಂಡತಿಯ ಕೆನ್ನೆಯನ್ನು ಸವರಿದರು. ಹೆಂಡತಿ ಏನಾದರೂ ಅಳುತ್ತಿರಬಹುದೇ ಅಂತ ನೋಡಲು ಬೆರಳನ್ನು ಹಾಗೇ ಕಣ್ಣಿನ ಬಳಿ ತೆಗೆದುಕೊಂಡು ಹೋದರು, ಇಲ್ಲ ಅವಳು ಅಳುತ್ತಿರಲಿಲ್ಲ. ಸುಮ್ಮನೆ ತಿಂಡಿ ತಿಂದರು. ನಂತರ ಕಮಲಮ್ಮ ಎರಡೂ ತಟ್ಟೆಗಳನ್ನು ತೆಗೆದುಕೊಂಡು ಆಚೆ ಹೋಗಿ ಮಳೆಯ ನೀರಿನಲ್ಲಿ ತೊಳೆದುಕೊಂಡು ಒಳಗೆ ತಂದರು. ನಂತರ ಇಬ್ಬರೂ ಬಿಸಿಬಿಸಿ ಕಾಫಿ ಕುಡಿದರು.
ಕಾಫಿ ಗುಟುಕರಿಸುತ್ತಾ ಹೆಂಡತಿಯ ಮುಖವನ್ನೇ ನೋಡುತ್ತಾ ಒಂದು ಬಸ್ಸು ನಮ್ಮನ್ನು ಇಲ್ಲಿ ಇಳಿಸಿ ಹೋಗಿದೆ, ಇನ್ನೊಂದು ಬಸ್ಸು ಬಂದು ಕರೆದುಕೊಂಡು ಹೋಗೋ ತನಕ ನಾವು ಇಲ್ಲಿ ಇರೋದು ಅನಿವಾರ್ಯ. ಬಸ್ಸು ಬರುತ್ತೋ ಇಲ್ವೋ ನಾನು ನಡೆದುಕೊಂಡೇ ಹೋಗ್ತೀನಿ, ಅಥವಾ ಬೇರೆ ಯಾವ ವಾಹನ ಸಿಗುತ್ತೋ ಅದನ್ನೇ ಹತ್ತಿಕೊಂಡು ಹೋಗ್ತೀನಿ ಅಂತ ಹೊರಡೋದು ಸರಿಯಲ್ಲ. ಇನ್ನು ನಮ್ಮಿಬ್ಬರ ಬಸ್ಸು ಯಾವಾಗ ಬರುತ್ತೋ, ನಿನ್ನದು ಮೊದಲು ಬರುತ್ತೋ, ನನ್ನದು ಮೊದಲು ಬರುತ್ತೋ, ಅಥವಾ ಬರೋ ಬಸ್ಸಿನಲ್ಲಿ ಇಬ್ಬರೂ ಒಟ್ಟಿಗೇ ಹೋಗಬಹುದೋ ಗೊತ್ತಿಲ್ಲ. ಅದಕ್ಕೇ ನಾವು ಹೋಗೋ ವಿಚಾರ ಮರೆತು ಇರೋ ವಿಚಾರದ ಚಿಂತೆ ಮಾಡೋಣ. ಹೋಗಲೇಬೇಕಾಗಿ ಬಂದರೆ ಅದಕ್ಕೆ ಪರ್ಯಾಯವಿಲ್ಲ. ಯಾರಿಗೂ ಹೇಳದೇ ಕೇಳದೇ ಹೋಗೋದೇ ಜೀವನ ಅಂದರು ರಂಗಯ್ಯ.
ರಂಗಯ್ಯನವರ ಮಾತು ಕಮಲಮ್ಮನವರಿಗೆ ಅರ್ಥವಾಯಿತು. ಏಕೆಂದರೆ ರಂಗಯ್ಯನವರು ಹೀಗೇ ಮಾತಾಡೋದು. ಈಗೊಂದು ಮೂವತ್ತು ವರ್ಷಗಳಿಂದ ಇಂಥಾ ಮಾತುಗಳನ್ನು ಕೇಳಿ ಕೇಳಿ ಕಮಲಮ್ಮನವರಿಗೆ ಅಭ್ಯಾಸವಾಗಿದೆ, ಮಾತುಗಳು ಅವರಿಗೆ ಚೆನ್ನಾಗಿ ಅರ್ಥವಾಗುತ್ತಲೂ ಇದೆ.
ಹಾಗಾದರೆ ಏನು ಮಾಡೋಣ ಅಂತೀರ ಅಂತ ಕಮಲಮ್ಮ ಕೇಳಿದರು.
ರಂಗಯ್ಯನವರಿಗೆ ನಗು ಬಂತು. ಯಾಕೋ ಹೆಂಡತಿಗೆ ಏನು ಹೇಳಬೇಕೆಂದರೂ ಅದನ್ನು ಸುತ್ತಿ ಬಳಸಿ, ಬೇರೆ ಯಾವುದೋ ಉಪಮೆಯ ಮೂಲಕ ಹೇಳೊ ಹಾಗಾಗುತ್ತೆ ಅಂದುಕೊಂಡು ತಲೆ ಎತ್ತಿ ಹೆಂಡತಿಯ ಮುಖವನ್ನು ನೋಡಿದರು.
ನೋಡು ಬೆಳಗ್ಗೆ ತಿಂಡಿ ಅಂತ ತಿನ್ತೀವಿ- ಉಪ್ಪಿಟ್ಟೋ ರೊಟ್ಟಿಯೋ, ದೋಸೆಯೋ. ನಂತರ ಊಟಕ್ಕೆ ಅನ್ನ, ಸಾರು, ಪಲ್ಯ, ಹುಳಿ, ಇತ್ಯಾದಿ; ಇನ್ನು ಸಂಜೆ ಕಾಫಿ ಜೊತೆ ಕುರುಕೋಕ್ಕೆ ಚಕ್ಕುಲಿ, ಕೋಡುಬಳೆ; ಮತ್ತೆ ರಾತ್ರಿ ಊಟಕ್ಕೆ ಒಂದೆರಡು ಚಪಾತಿ, ಮೊಸರನ್ನ ಹೀಗೆ. ನೋಡು, ನಾವು ನಮ್ಮ ಹೊಟ್ಟೆಗೆ ಹೀಗೆ ದಿನಾ ನಾಲ್ಕು ಹೊತ್ತು ಬೇರೆ ಬೇರೆ ಆಹಾರ ಹಾಕ್ತೀವಿ. ಹೊಟ್ಟೆಯೇನೂ ಅದನ್ನು ಕೇಳಲ್ಲ. ಆದರೆ ನಾವೇ ಅದಕ್ಕೆ ಹಾಗೆ ಹಾಕ್ತೀವಿ. ಹೀಗಿರುವಾಗ ಈ ರೀತಿಯ ಬದಲಾವಣೆ ಬದುಕಿಗೆ ಬೇಡವೇ? ಅಂದರು.
ಏನು ಹಾಗಂದ್ರೆ, ಬದುಕಿಗೆ ಬದಲಾವಣೆ ಅಂದ್ರೆ ನೀವೇನಾದರೂ ಇನ್ನೊಬ್ಬಳನ್ನು ಕಟ್ಟಿಕೊಳ್ಳೋ ಯೋಚನೆ ಮಾಡಿದ್ದೀರಾ? ಅಂತ ಕಮಲಮ್ಮ ತಮಾಷೆಯಾಗಿ ಕೇಳಿದರು.
ಯಾವುದೇ ಮನುಷ್ಯ ತನಗೆ ಸಿಕ್ಕರೆ ಯಾಕೆ ಬೇಡ ಅಂದುಕೊಳ್ಳುವ ಅನೇಕ ವಸ್ತುಗಳಲ್ಲಿ ಇದೂ ಒಂದು. ನನ್ನ ವಿಚಾರ ಅದಲ್ಲ. ನಾವು ಯಾಕೆ ಊರು ಬದಲಿಸಬಾರದು. ಈ ಊರೇ ಬೇಡ. ಯಾವುದಾದರೂ ಸಣ್ಣ ಊರಿಗೆ ಹೋಗೋಣ. ಅಲ್ಲಿ ಖರ್ಚು ಕಡಮೆ, ನೆಮ್ಮದಿ ಹೆಚ್ಚು. ನೋಡೋಣ ಇರೋಷ್ಟು ದಿನ ನೆಮ್ಮದಿಯಾಗಿರೋಣ.
ಹೌದುರೀ ನೀವು ಹೇಳೋದು ಸರಿ, ನನ್ನ ದೊಡ್ಡಕ್ಕ ರಾಜಮ್ಮ ಕೂಡಾ ಹೀಗೇ ಯೋಚನೆ ಮಾಡಿಕೊಂಡು ಸೀತಾಪುರಕ್ಕೆ ಹೋಗಿ ನೆಲೆಸಿ ನಾಲ್ಕು ವರ್ಷ ಆಯಿತು. ಅವಳು ನೆಮ್ಮದಿ ಬೇಕಾದರೆ ಇಂಥಾ ಊರಿಗೆ ಬಂದು ಇದ್ದುಬಿಡಬೇಕು. ನೀನೂ ಬರೋಹಾಗಿದ್ರೆ ಬಂದುಬಿಡು ಅಂದಿದ್ಲು.
ಸರಿ, ಈ ಊರಲ್ಲಿ ಇದ್ದು ಏನು ಮಾಡೋದು? ನೀನೇ ಯೋಚನೆ ಮಾಡು ಯಾವತ್ತು ಹೊರಡಬೇಕು ಅಂತ” ಎಂದು ರಂಗಯ್ಯ ಎದ್ದು ಹೊರಗೆ ಹೊರಟರು. ಗಂಡನನ್ನೇ ನೋಡುತ್ತಾ ಕಮಲಮ್ಮ ಗೋಡೆಗೊರಗಿ ನಿಂತುಬಿಟ್ಟರು. ಬದುಕು ನಮ್ಮನ್ನು ಎಲ್ಲಿಂದ ಎಲ್ಲಿಗೆ ಕರೆದುಕೊಂಡು ಬಂತು ಅಂತ ಅವರ ಯೋಚನಾಲಹರಿ ಹರಿಯಿತು. ಒಂದು ಗಂಟೆಗೆ ಅವರಿಗೆ ಥಟ್ಟನೆ ನೆನಪಾಯಿತು. ಸ್ಕೂಲು ಬಿಡೋ ಸಮಯ. ಒಂದು ಹೆಜ್ಜೆ ಹೋಗಿ ಬರಲೇ, ದೂರದಿಂದಲೇ ಮೊಮ್ಮಗನನ್ನು ನೋಡಿ ಬರಲೇ ಅಂತ. ನಂತರ ನನ್ನ ಈ ಕೆಲಸ ಮಗನಿಗೂ ಸೊಸೆಗೂ ಇಷ್ಟವಾಗಲ್ಲ, ಇನ್ನು ಇವರಿಗೆ ಬೇಜಾರಾಗುತ್ತೆ ಅಂತ ತಮ್ಮ ಆಸೆಯನ್ನು ಅದುಮಿಕೊಂಡರು.
ಇಬ್ಬರು ಮಕ್ಕಳ ಸಂಸಾರ ಅವರದು. ರಂಗಯ್ಯನವರು ತೋಟದ ಮಾಲೀಕರು. ತೋಟ ಎಂದರೆ ಅದೇನು ಭಾರೀ ತೋಟ ಅಲ್ಲ. ಏನೋ ಸಂಸಾರಕ್ಕೆ ಕೊರತೆ ಆಗದ ಹಾಗೆ ಅದು ಅವರಿಗೆ ಸಹಾಯಕವಾಗಿತ್ತು. ಆದರೆ ಅದು ಬರುತ್ತಾ ಬರುತ್ತಾ ಸಣ್ಣದಾಗಿ ಹೋಯಿತು. ಕಡೆಗೆ ಅವರ ಕೈ ಬಿಟ್ಟೇ ಹೋಯಿತು. ಇದಕ್ಕೆ ಕಾರಣ ಮಗನ ಓದು; ಮತ್ತು ಮಗಳ ಓದಿನ ಜೊತೆ ಅವಳ ಮದುವೆ. ಮಕ್ಕಳಿಬ್ಬರ ಮದುವೆಯಾಗಿ ಅವರು ನೆಲೆ ನಿಂತರು ಎನ್ನುವ ಹೊತ್ತಿಗೆ ರಂಗಯ್ಯನವರ ನೆಲೆ ಕಿತ್ತಿತ್ತು. ಸ್ವಂತ ಮನೆಯಿಂದ ಬಾಡಿಗೆ ಮನೆಗೆ ಬಂದಿದ್ದರು. ರಟ್ಟೆ ಗಟ್ಟಿಯಾಗಿರುವ ದಿನಗಳಲ್ಲಿ ಇನ್ನಷ್ಟು ದುಡಿದು ಇನ್ನೊಂದಿಷ್ಟು ಕೂಡಿಡಬೇಕಿತ್ತು ಅಂತ ಈಗ ಅನಿಸುತ್ತಿತ್ತು.
ಅವರವರ ಕುಟುಂಬ ಅಂತ ಆದ ಮೇಲೆ ಹೊಟ್ಟೇಲಿ ಹುಟ್ಟಿದ ಮಕ್ಕಳೂ ಕೂಡಾ ಸ್ವಾರ್ಥಿಗಳಾಗಿಬಿಡುತ್ತಾರೆಯೇ ಎನ್ನುವಂತೆ ಮಕ್ಕಳು ಬದಲಾದರು. ಒಂದು ದಿನ ಮಗ ಸುರೇಶ ನಾನೂ ಸೀಮಾನೂ ಬೇರೆ ಮನೇಲಿ ಇರ್ತೀವಿ ಎಂದು ಅದೇ ಊರಿನಲ್ಲಿ ಬೇರೆ ಮನೆ ಮಾಡಿಕೊಂಡು ಹೊರಟುಹೋದರು. ಈಗಿನ ಕಾಲದಲ್ಲಿ ಇದು ತೀರ ಸಹಜ. ಅದಕ್ಕಾಗಿ ಕೊರಗೋದು ಸರಿಯಲ್ಲ ಅಂತ ಪರಿಸ್ಥಿತಿಗೆ ಹೊಂದಿಕೊಳ್ಳೋ ಪ್ರಯತ್ನ ಮಾಡಿದ್ದರು. ಮಗಳು ರಂಜಿತಾ ಒಂದು ದಿನ ಬಂದು, ಅಮ್ಮ ನಿನ್ನ ಅಳಿಯ ಒಂದು ದೊಡ್ಡ ಬಿಸಿನೆಸ್ಗೆ ಕೈಹಾಕಿದ್ದಾರೆ. ಅದಕ್ಕೆ ತುಂಬಾ ಹಣ ಬೇಕು. ಈಗ ಬ್ಯಾಂಕಿನಲ್ಲಿ ವಿಪರೀತ ಬಡ್ಡಿ; ಅದಕ್ಕೆ ನಿನ್ನ ಒಡವೆಗಳನ್ನು ಕೊಟ್ಟುಬಿಡು. ಹೇಗೂ ಅದು ನನಗೆ ಸೇರಬೇಕು ತಾನೇ. ಆಮೇಲೆ ಕೊಡೋದನ್ನು ಈಗಲೇ ಕೊಡು ಅಂತ ಕೇಳಿದಳು. ತಾಯಿ ಒಡವೆ ಕೊಡೋಕೆ ಹಿಂದು ಮುಂದು ನೋಡ್ತಾ ಇದಾಳೆ ಅನಿಸಿದಾಗ ತಾನೇ ಮಾತು ಕಲಿಸಿದ ಮಗಳು ಹೊಟ್ಟೆ ಸಂಕಟವಾಗುವಂತೆ ಮಾತಾಡಿದಳು. ಅದೇ ಸಮಯಕ್ಕೆ ಮನೆಗೆ ಬಂದ ಸೀಮಾ ನಾನು ಮನೆ ಸೊಸೆ; ಅತ್ತೆ ಒಡವೆಗಳಲ್ಲಿ ನನಗೂ ಸೇರಬೇಕು. ನೀನೊಬ್ಬಳೇ ಅದು ಹೇಗೆ ತಗೊಳ್ತೀಯ ಅಂತ ಜಗಳವನ್ನೇ ಷುರುಮಾಡಿದಳು. ಮಾತು ಕೈಮೀರಿ ಹೋಗುತ್ತಿದೆ ಅಂತ ರಂಗಯ್ಯನವರಿಗೂ ಕಮಲಮ್ಮನವರಿಗೂ ಅರಿವಾದಾಗ ಅವರಿಬ್ಬರೂ ಇದ್ದ ಒಡವೆಗಳನ್ನು ತಂದು ಹಾಕಿ, ನೋಡಿ ಈ ಒಡವೆಗಳು ನಮಗಂತೂ ಬೇಡ, ನೀವು ನೀವೇ ಹಂಚಿಕೊಳ್ಳಿ ಅಂದರು. ಆಗ ನನಗೆ ಇದರ ಆವಶ್ಯಕತೆ ಹೆಚ್ಚು ಇದೆ ಅಂತ ಮಗಳು ಎಲ್ಲಾ ಒಡವೆಗಳನ್ನು ತೆಗೆದುಕೊಂಡಳು. ಅತ್ತಿಗೆ ನಾದಿನಿ ಜಗಳ ಆಡಿದರು. ಕಡೆಗೆ ಸೀಮಾ ಮನೆಗೆ ಹೋಗೋ ಮುಂಚೆ ಎಲ್ಲಾ ಒಡವೆಗಳೂ ನಿಮ್ಮ ಮಗಳಿಗೇ ಸೇರಲಿ ಅಂತ ನೀವು ಆಡಿದ ನಾಟಕ ಇದು ಅಂತ ದೂರಿದಳು.
ಎಲ್ಲಾ ಬದಲಾಗಿಹೋಯಿತು. ಮಗನ ಮನೆಗೆ ಹೋದರೆ ಅವನು ಸರಿಯಾಗಿ ಮಾತಾಡಿಸಲಿಲ್ಲ. ಅವನಿಗೆ ಮಗು ಆಯಿತು. ಅದನ್ನೂ ಹೇಳಲಿಲ್ಲ. ಮನೆಗೆ ಹೋದಾಗ ಮಗು ತೋರಿಸಲಿಲ್ಲ. ‘ನನ್ನ ಮೊಮ್ಮಗನನ್ನು ನೋಡ್ತೀನಿ ಕಣೋ’ ಅಂದರೆ ಬಿಡಲಿಲ್ಲ. ಹೊಟ್ಟೆ ಉರಿಸಿದ. ಒಂದೇ ಊರಿನಲ್ಲಿ ಇದ್ದರೂ ಮೊಮ್ಮಗನ ನಾಮಕರಣಕ್ಕೆ, ವರ್ಷದ ಹುಟ್ಟಿದ ಹಬ್ಬಕ್ಕೆ, ಅಕ್ಷರಾಭ್ಯಾಸಕ್ಕೆ, ಎಲ್ಲಕ್ಕೂ ನಾವು ದೂರವೇ. ಒಡವೆಗಳನ್ನು ತೆಗೆದುಕೊಂಡು ಹೋದ ಮಗಳು ಈಗ ಬಿಸಿನೆಸ್ ಕೈಹತ್ತುತ್ತಾ ಇದೆ. ಈಗ ನನಗೆ ತುಂಬಾ ಹಣದ ಆವಶ್ಯಕತೆ ಇದೆ. ಇಬ್ಬರಿಗೇ ಇಷ್ಟು ದೊಡ್ಡ ಮನೆ ಯಾಕೆ? ಅದನ್ನು ಮಾರಿ ನನಗೆ ದುಡ್ಡು ಕೊಡಿ ಅಂತ ದುಂಬಾಲು ಬಿದ್ದಳು. ರಂಗಯ್ಯನವರು ಏನೂ ಮಾತಾಡದೇ ಮನೆ ಮಾರಿ ಮಗಳಿಗೆ ದುಡ್ಡು ಕೊಟ್ಟು ಕಳಿಸಿದರು. ಕಳಿಸುವಾಗ ನೋಡಮ್ಮಾ, ಇನ್ನು ನೀನು ಏನಾದರೂ ಕೇಳಿಕೊಂಡು ತವರಿಗೆ ಬರ್ತೀನಿ ಅಂದ್ರೆ ಅದು ನನ್ನ ಅಥವಾ ನಿಮ್ಮಮ್ಮನ ಪ್ರಾಣ ಕೇಳ್ಕೊಂಡು ಅಂದರು.
ಒಂದೇ ವಾರದಲ್ಲಿ ದೂರಾಗಿದ್ದ ಮಗ ಮನೆಗೆ ಬಂದ. ಮನೆಯಲ್ಲಿ ನನಗೂ ಪಾಲಿಲ್ವಾ? ಅದು ಹೇಗೆ ಅವಳೊಬ್ಬಳಿಗೇ ಎಲ್ಲಾನೂ ಕೊಟ್ಟು ಕಳಿಸಿದ್ದೀರ? ನನಗೆ ಅದರಲ್ಲಿ ಅರ್ಧ ಬರಬೇಕು. ಒಳ್ಳೆ ಮಾತಲ್ಲಿ ಕೊಟ್ಟರೆ ಸರಿ ಇಲ್ಲದಿದ್ದರೆ ಕೋರ್ಟಿಗೆ ಹೋಗಬೇಕಾಗುತ್ತೆ ಅಂದ. ಆ ಊರಿನಲ್ಲಿ ರಂಗಯ್ಯನನ್ನು ಎಲ್ಲರೂ ಬಲ್ಲವರಾಗಿದ್ದರಿಂದ, ಅವನ ಸ್ವಭಾವದ ಪರಿಚಯ ಇದ್ದಿದ್ದರಿಂದ ಯಾರೂ ಮಗನ ಕೇಸ್ ತಗೊಳ್ಲಿಲ್ಲ. ಅದಕ್ಕೆ ಅವನು ಮೈಸೂರಿನ ಲಾಯರನ್ನು ಗೊತ್ತುಮಾಡಿಕೊಂಡು ಬಂದ. ಅಪ್ಪನನ್ನ ಮಗ ಕೋರ್ಟಿಗೆ ಎಳೆದಿದ್ದ. ಮಗಳಿಗೆ ಕಾಗದ ಬರೆದು ‘ನೋಡಮ್ಮ, ಹೀಗ್ಹೀಗೆ ಆಗಿದೆ’ ಅಂದ್ರೆ ಅವಳು ‘ಈಗ ನಾನು ಏನೂ ಮಾಡೋ ಪರಿಸ್ಥಿತಿ ಇಲ್ಲ’ ಅಂದುಬಿಟ್ಟಳು.
ಮರಳುಗಾಡಿನಲ್ಲಿ ಬಂಡಿ ಬಂಡಿ ನೀರು ಸಿಕ್ಕಿದಂತೆ ಒಂದು ದಿನ ಕಮಲಮ್ಮ ಪೆಟ್ಟಿಗೆ ತೆಗೆದು ಅದರಿಂದ ಹಳೇ ಕಾಗದ ಪತ್ರಗಳನ್ನು ನೋಡುತ್ತಿದ್ದಾಗ ಅವರಿಗೆ ಒಂದು ನಿಧಿ ಸಿಕ್ಕಿದಂತಾಯಿತು. ರೀ… ಬನ್ನಿ, ನೋಡಿ ಇಲ್ಲಿ… ಅಂದು ತೋರಿಸಿದರು. ಅದು ಅವರ ತವರು ಮನೆಯವರು ಅವರ ಹೆಸರಿಗೆ ಮಾಡಿಟ್ಟಿದ್ದ ಸುಮಾರು ಹತ್ತು ಎಕರೆ ಜಮೀನಿನ ಪತ್ರ. ಅದು ಅವರಿಗೆ ಮರೆತೇ ಹೋಗಿತ್ತು. ಗಂಡನ ಮನೇಲಿ ಸುಭಿಕ್ಷವಾಗಿತ್ತು. ಹೀಗಾಗಿ ಮಗ ಹುಟ್ಟಿದಾಗ ಇದು ನನ್ನ ಉಡುಗೊರೆ ಅಂತ ತಂದೆ ಕೊಟ್ಟಿದ್ದ ಕವರನ್ನು ತೆಗೆದಿಟ್ಟಿದ್ದಳು. ಅದು ಏನು ಅಂತ ಕೂಡಾ ನೋಡಿರಲಿಲ್ಲ.
ರೀ… ಸುರೇಶನನ್ನು ಬರಹೇಳಿ. ಇದನ್ನು ಅವನಿಗೆ ಕೊಟ್ಟುಬಿಡೋಣ. ಅವನ ಸಿಟ್ಟು ಸ್ವಲ್ಪ ಮಾತ್ರವಾದರೂ ಕಡಮೆಯಾಗಲಿ ಅಂದರು. ಸಂಜೆ ಸುರೇಶ ಮನೆಗೆ ಬಂದ. ಪತ್ರವನ್ನು ಅವನ ಕೈಗಿಟ್ಟು, ಬೇಕಾದ್ರೆ ಇದನ್ನು ಮಾರಿ ದುಡ್ಡು ತಗೋ. ಇಲ್ಲದಿದ್ದರೆ ಇದನ್ನು ನೀನೇ ಇಟ್ಕೊಂಡು ಏನು ಬೇಕಾದರೂ ಮಾಡು. ಒಟ್ಟಿನಲ್ಲಿ ಇದು ನಿನಗೆ. ಈಗಲಾದರೂ ನೀನು ಹಾಕಿರುವ ಕೇಸ್ ಹಿಂದಕ್ಕೆ ತಗೋ ಅಂದು ಮಗನನ್ನು ಬೇಡಿದರು. ಮಗ ಹೊರಟಾಗ ಈಗಲಾದರೂ ನಿನ್ನ ಸಿಟ್ಟು ಕಡಮೆಯಾಗಿರಬಹುದು. ನಮ್ಮ ಮೊಮ್ಮಗನನ್ನು ನೋಡೋಕೆ ಬಿಡೋ. ಅವನನ್ನು ನಮ್ಮ ಮನೆಗೆ ಕಳಿಸೋ ಅಂತ ಬೇಡಿಕೊಂಡರು. ಸುರೇಶ ಏನೂ ಮಾತಾಡದೇ ಹೊರಟುಹೋದ. ಒಂದೇ ವಾರದಲ್ಲಿ ಸುರೇಶ ಊರು ಬಿಟ್ಟು ಮೈಸೂರಿಗೆ ಹೋದ ಅಂತ ಯಾರೋ ಹೇಳಿದ್ದು ಕೇಳಿ ಅವರಿಬ್ಬರ ಹೊಟ್ಟೆಗೆ ಬೆಂಕಿ ಸುರಿದಂತಾಯಿತು.
ವಾರದಲ್ಲಿ ಸುರೇಶ ಕೇಸ್ ವಾಪಸ್ ತಗೊಂಡ. ಜಮೀನನ್ನು ತನ್ನ ಹೆಸರಿಗೆ ಮಾಡಿಕೊಂಡ. ಮಗಳು ರಂಜಿತಾ ಮತ್ತೆ ಬಂದು, ನಿನ್ನ ಆಸ್ತೀನ ಅದು ಹೇಗಮ್ಮಾ ಸುರೇಶ ಒಬ್ಬನಿಗೇ ಕೊಟ್ಟೆ. ಅದರಲ್ಲಿ ನನಗೂ ಪಾಲಿಲ್ವಾ…. ಅವನಿಗೆ ನನಗೆ ಅರ್ಧ ಕೊಡೋಕೆ ಹೇಳು ಅಂದಳು. ‘ಒಡವೆ, ಮನೆ ಎಲ್ಲ ನಿನಗೆ ಕೊಟ್ಟಿದೀನಲ್ಲೇ’ ಅಂದರೂ ಕೇಳಲಿಲ್ಲ. ಅವಳೂ ಕೇಸ್ ಹಾಕುವುದಾಗಿ ಹೆದರಿಸಿ ಹೋದಳು.
ಈ ಮಕ್ಕಳು ಯಾಕಾದರೂ ಹೀಗಾದರೋ ಅಂತ ರಂಗಯ್ಯ, ಕಮಲಮ್ಮ ಇಬ್ಬರೂ ತುಂಬಾ ಬೇಜಾರು ಮಾಡಿಕೊಂಡರು. ಆಗಲೇ ಕಮಲಮ್ಮನಿಗೆ ಅನಿಸಿದ್ದು ಇನ್ನು ಏನಿದೆ ಅಂತ ಬದುಕಿರಬೇಕು ಅಂತ. ಇಳಿ ವಯಸ್ಸಿನಲ್ಲಿ ಇಬ್ಬರೂ ಕೊರಗಿದರು. ಬೇಜಾರು ಅಂತ ಮಗಳ ಮನೆಗೆ ಹೋದರೆ ಅವಳು ಸಣ್ಣ ಸಣ್ಣ ಲೋಟದಲ್ಲಿ ಕಾಫಿ ತಂದುಕೊಟ್ಟು ನಾನು ನಿಮ್ಮ ಅಳಿಯ ಈಗ ಊರಿಗೆ ಹೊರಟಿದ್ದೀವಿ ಅಂದಳು. ಅಂದ್ರೆ ನೀವೂ ಹೊರಡಿ ಅಂತ. ಈ ಬೆಳವಣಿಗೆಗಳನ್ನೆಲ್ಲ ಕಂಡೇ ಕಮಲಮ್ಮನವರು ನಾವು ಯಾರಿಗೂ ಬೇಡದವರಾಗಿದ್ದೀವಿ, ಇನ್ನು ಯಾವ ಪುರುಷಾರ್ಥಕ್ಕಾಗಿ ಬದುಕಿರಬೇಕು ಅನಿಸಿರೋದು. ಆದರೆ ರಂಗಯ್ಯನವರು ಹಾಗಲ್ಲ. ಈ ಎಲ್ಲಾ ಬೆಳವಣಿಗೆಗಳನ್ನೂ ಅವರು ಏಕಪ್ರ್ರಕಾರವಾಗಿ ತೆಗೆದುಕೊಂಡಿದಾರೆ. ಹೀಗೇ ನಡೆಯಬೇಕು ಅಂತ ಬರೆದಿದ್ದರೆ ಯಾರು ತಪ್ಪಿಸೋಕೆ ಆಗುತ್ತೆ ಅಂತ ಅವರಿಗೆ ಅವರೇ ಸಮಾಧಾನ ಮಾಡಿಕೊಂಡಿದಾರೆ.
ಮಗನೇ ಊರುಬಿಟ್ಟು ಹೋದ ಮೇಲೆ ಇನ್ನು ನಾವು ಯಾಕೆ ಊರು ಬಿಡಬೇಕು ಇಲ್ಲೇ ಇರೋಣ ಅಂದುಕೊಂಡು ಅಲ್ಲೇ ಇದ್ದಾರೆ. ಕಮಲಮ್ಮನಿಗೆ ‘ಮೊಮ್ಮಕ್ಕಳನ್ನು ಎತ್ತಿ ಆಡಿಸಿ, ಆನಂದ ಪಡೋ ಆ ಸಂಭ್ರಮದ ದಿನಗಳು ತಮ್ಮ ಪಾಲಿಗೆ ಇಲ್ಲದೇ ಹೋಯಿತಲ್ಲ. ಒಂದೇ ಊರಿನಲ್ಲಿದ್ದ ಮೊಮ್ಮಗನನ್ನು ನೋಡೋ ಅವಕಾಶವನ್ನೂ ಮಗ ಕಿತ್ತುಕೊಂಡ; ಇನ್ನು ಆ ದಿನಗಳು ಬಂದಾವೇ? ಬಂದರೂ ಅವು ಮತ್ತೆ ಸುಖ-ಸಂತೋಷವನ್ನು ಕೊಡುವುವೇ?’ ಅಂತ ಅವರಿಗೆ ಅನುಮಾನ ಬಂದಿದೆ.
ಹೀಗೆ ಅವರು ಒಂಟಿಯಾಗಿ ಕೂತಾಗ ಸುಮ್ಮನೇ ಯೋಚನೆ ಮಾಡುತ್ತಾರೆ. ಕಂತೆಗೆ ಒಂದು ಬೊಂತೆ ಅನ್ನೋ ಹಾಗೆ ರಂಗಯ್ಯನವರು ಯೋಚನೆ ಮಾಡುತ್ತಾ ಕೂತರೆ ಕಮಲಮ್ಮ ಬಂದು ಸಮಾಧಾನ ಮಾಡುತ್ತಾರೆ. ಕಮಲಮ್ಮ ಯೋಚನೆ ಮಾಡುತ್ತಾ ಕೂತರೆ ರಂಗಯ್ಯನವರು ಬಂದು ಸಮಾಧಾನ ಮಾಡುತ್ತಾರೆ.
ನೋಡು, ಎಲ್ಲರ ಬದುಕೂ ಒಂದು ತೆರೆದಿಟ್ಟ ಪುಸ್ತಕ. ಆ ಪುಸ್ತಕದಲ್ಲಿ ಎಷ್ಟು ಪುಟಗಳಿವೆ ಅಂತ ಯಾರಿಗೂ ಗೊತ್ತಿರೋಲ್ಲ. ಮುಂದಿನ ಪುಟದಲ್ಲಿ ಏನಿದೆ ಅಂತ ಗೊತ್ತಿಲ್ಲ. ನಾವು ಪುಟ ತೆಗೆಯೋ ಹಾಗಿಲ್ಲ. ಅದೇ ಪುಟ ತೆಗೆದುಕೊಳ್ಳುತ್ತದೆ. ಅದರಲ್ಲಿ ಏನು ಬರೆದಿದೆಯೋ ಅದರಂತೆ ಆಗುತ್ತದೆ. ಅದರಲ್ಲಿ ಬರೆದಿರುವುದನ್ನು ನಾವು ಅಳಿಸುವಂತೆಯೂ ಇಲ್ಲ, ಬೇರೆ ಬರೆಯುವಂತೆಯೂ ಇಲ್ಲ. ನಮ್ಮ ಹಿಂದಿನ ಜನ್ಮದ ಸಂಗತಿಗಳನ್ನು ಆಧರಿಸಿ ಈ ಪುಸ್ತಕ ರಚನೆಯಾಗಿದೆ. ಇನ್ನು ನಮ್ಮ ಮುಂದಿನ ಜನ್ಮದ ಪುಸ್ತಕ ಹೆಚ್ಚು ಆಕರ್ಷಣೀಯವಾಗಿರಬೇಕು ಅಂದರೆ ಈಗಿನ ಬದುಕಿನಲ್ಲಿ ನಮ್ಮ ರೀತಿನೀತಿಗಳನ್ನು ಬದಲಿಸಿಕೊಳ್ಳಬೇಕು. ಅದಕ್ಕೇ ನಾವು ಇನ್ನುಳಿದ ಬದುಕಿನ ದಿನಗಳನ್ನು ಸಾರ್ವಜನಿಕ ಸೇವೆಗೆ ಬಳಸಿಕೊಳ್ಳೋಣ. ಎಲ್ಲೋ ಕಳೆದುಕೊಂಡಿರುವುದನ್ನು ಇನ್ನೆಲ್ಲೋ ಹುಡುಕಿ ಸಮಾಧಾನ ಮಾಡಿಕೊಳ್ಳೋಣ ಅಂದಿದ್ದಾರೆ.
ಅವರ ಊರಿನಿಂದ ಸುಮಾರು ಇಪ್ಪತ್ತು ಕಿಲೋಮೀಟರು ದೂರದಲ್ಲಿ ಇರುವ ಸಂಪಂಗಿ ನಗರದ ಒಂದು ವೃದ್ಧಾಶ್ರಮಕ್ಕೆ ಸೇವೆ ಸಲ್ಲಿಸಲು ಈಗ ಇಬ್ಬರೂ ಹೋಗುತ್ತಿದ್ದಾರೆ. ಅಲ್ಲಿ ವಯಸ್ಸಾದ ಗಂಡಸರಿದ್ದಾರೆ, ಹೆಂಗಸರಿದ್ದಾರೆ, ಪಕ್ಕದಲ್ಲೇ ಮಕ್ಕಳ ಅನಾಥಾಶ್ರಮವೂ ಇದೆ. ಅವರನ್ನೆಲ್ಲ ಕಂಡು ‘ಸದ್ಯಃ ಭಗವಂತ ನಮ್ಮನ್ನು ಎಷ್ಟು ಚೆನ್ನಾಗಿ ಇಟ್ಟಿದ್ದಾನೆ’ ಅಂದುಕೊಂಡು ಅವರ ಸೇವೆಗೆ ನಿರತರಾಗಿದ್ದಾರೆ.
ಒಂದು ದಿನ ವೃದ್ಧಾಶ್ರಮದಲ್ಲಿ ನಾರಾಯಣ ಮೂರ್ತಿ ಎಂಬ ಹಿರಿಯರ ಆರೈಕೆ ಮಾಡುತ್ತಿದ್ದರು. ಆಗ ಅವರ ಮಗ, ಸೊಸೆ ಇಬ್ಬರೂ ಅಲ್ಲಿಗೆ ಬಂದರು. ತಂದೆಯನ್ನು ವಿಚಾರಿಸಿದ ಮಗ ಕೇಶವ ರಂಗಯ್ಯನವರ ಹತ್ತಿರ ತಿರುಗಿ, ನೀವು ರಂಗಯ್ಯ ಅಲ್ಲವೇ, ನಮ್ಮ ತಂದೆ ನಾನು ಫೋನು ಮಾಡಿದಾಗೆಲ್ಲ ನಿಮ್ಮ ವಿಚಾರ ಹೇಳುತ್ತಿರುತ್ತಾರೆ. ನಾವಿರೋದು ಬೊಂಬಾಯಿಯಲ್ಲಿ. ಅಲ್ಲಿನ ಬದುಕಿಗೆ ಅಪ್ಪ ಹೊಂದಿಕೊಳ್ಳೋದಕ್ಕೆ ಆಗೋದಿಲ್ಲ. ಇನ್ನು ನಾನೂ ನನ್ನ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋದರೆ ಬರೋದು ರಾತ್ರಿಯೇ. ಅವರು ಅಲ್ಲಿಯೂ ಒಂಟಿಯಾಗೇ ಇರಬೇಕು. ಅದಕ್ಕೇ ಇಲ್ಲಿ ವ್ಯವಸ್ಥೆ ಮಾಡಿದ್ದೆ. ನಿಮ್ಮ ವಿಚಾರ ಕೇಳಿ ನಮ್ಮಿಬ್ಬರಿಗೂ ಸ್ವಲ್ಪ ನೆಮ್ಮದಿಯಾಗಿದೆ ಅಂದ. ರಂಗಯ್ಯನವರು ಹೊಗಳಿಕೆಗೆ ನಾಚುತ್ತಾರೆ. ಅದಕ್ಕೇ ಅವರು ಏನೂ ಮಾತಾಡಲಿಲ್ಲ. ಕೇಶವ ಎರಡು ಜೊತೆ ಪಂಚೆ, ಷರಟು ಎಲ್ಲಾ ರಂಗಯ್ಯನವರಿಗೆ ಕೊಟ್ಟು ಅವರ ಕಾಲಿಗೆ ನಮಸ್ಕರಿಸಿದ. ನನ್ನನ್ನೂ ನಿಮ್ಮ ಮಗ ಅಂದುಕೊಳ್ಳಿ. ಬೇಡ ಅನ್ನಬೇಡಿ ಅಂದ. ಕೇಶವನ ಹೆಂಡತಿ ಕಮಲಮ್ಮನಿಗೆ ಸೀರೆ ಕೊಟ್ಟು ನಮಸ್ಕರಿಸಿದಳು. ಎಲ್ಲರೂ ತುಂಬಾ ಹೊತ್ತು ಮಾತಾಡ್ತಾ ಕೂತಿದ್ದರು. ಆಗ ಕೇಶವ ನಿಮ್ಮ ಮಗ ನನ್ನ ಹಾಗಲ್ಲ ನಿಮ್ಮನ್ನು ಮನೇಲೇ ಇಟ್ಟುಕೊಂಡು ನೋಡಿಕೊಳ್ತಿದಾನೆ. ನೀವು ಪುಣ್ಯವಂತರು ಅಂದ. ರಂಗಯ್ಯನವರು ಹುಸಿ ನಗೆ ನಕ್ಕು ತಮ್ಮ ಕಥೆಯನ್ನು ಸಂಕ್ಷಿಪ್ತವಾಗಿ ತಿಳಿಸಿ, ನೋಡು ಕೇಶವ, ಯಾರೇ ಆಗಲಿ ಅವರವರ ಬದುಕನ್ನು ಹೀಗೇ ಆಗಲಿ ಅಂತ ಬಯಸೋದು ತಪ್ಪು. ಹೀಗೇ ಆಗಲಿ ಅಂತ ಪ್ರಯತ್ನ ಪಡೋದ್ರಲ್ಲಿ ತಪ್ಪಿಲ್ಲ. ಆದರೆ ಬದುಕು ಅವರ ಇಷ್ಟದಂತೆ ಆಗದೇ ಹೋದಾಗ ಕೊರಗದೇ ಸಿಕ್ಕ ಬದುಕನ್ನೇ ಪ್ರೀತಿಸಿಕೊಂಡು ಹೋಗುತ್ತಿರಬೇಕು. ಈಗ ನಾನು ಮಾಡುತ್ತಿರುವುದೂ ಅದನ್ನೇ ಅಂದರು.
ವೃದ್ಧಾಶ್ರಮದ ಎಲ್ಲರೊಂದಿಗೂ ಅವರು ಸ್ನೇಹ ಸಂಬಂಧಗಳನ್ನು ಇಟ್ಟುಕೊಂಡಿದ್ದಾರೆ. ಎಲ್ಲರಿಗೂ ಸಮಾಧಾನ ಹೇಳಿಕೊಂಡು ಬಂದಿದ್ದಾರೆ. ಅವರಲ್ಲಿ ಕೆಲವರು ಕೊರಗೋಕೆ ಷುರು ಮಾಡಿದಾಗ ರಂಗಯ್ಯನವರು- ಬೇಡ, ಕೊರಗಬೇಡಿ, ಅದರಿಂದ ಏನೂ ಪ್ರಯೋಜನವಿಲ್ಲ. ಬದಲಿಗೆ ಇರುವ ಬದುಕನ್ನು ಪ್ರೀತಿಸಿ. ಅದರಿಂದ ಸಾಯುವವರೆಗಾದರೂ ಆರೋಗ್ಯವಾಗಿರುತ್ತೀರ. ಈಗ ನಿಮ್ಮದು ಎಂಥಾ ವಯಸ್ಸು ಎಂದರೆ ಯಾರನ್ನೂ ಬದಲಿಸಲಾರದಂಥದು. ಅದಕ್ಕೇ ನೀವೇ ಬದಲಾಗಿಬಿಟ್ಟರೆ ಒಳ್ಳೆಯದು ಅಲ್ವೇ. ನಾವು ಊಟ ಬಯಸಿದಾಗ ತಿಂಡಿ ಸಿಗುತ್ತದೆ. ತಿಂಡಿ ಬಯಸಿದಾಗ ಬರೀ ಬ್ರೆಡ್ಡು ಸಿಗುತ್ತದೆ. ದೊಡ್ಡ ಮನೆ ಬಯಸಿದರೆ ಗುಡಿಸಲು ಸಿಗುತ್ತದೆ. ಪ್ರೀತಿಸುವ ಮಕ್ಕಳನ್ನು ಬಯಸಿದರೆ ದ್ವೇಷಿಸುವ ಮಕ್ಕಳು ಸಿಗುತ್ತಾರೆ. ಇಲ್ಲಿ ನಮ್ಮ ದರ್ಬಾರು ಏನೂ ನಡೆಯುವುದಿಲ್ಲ. ಅದನ್ನು ತಿಳ್ಕೊಂಡು ಬಿಟ್ರೆ ಆಯಿತು. ಈಗ ಎಲ್ಲರಿಗೂ ಮನೇಲಿ ಮಕ್ಕಳು ಮೊಮ್ಮಕ್ಕಳು ಸೊಸೆಯಂದಿರು ಇವರೊಂದಿಗೆ ಸಂತೋಷವಾಗಿ ಇರಬೇಕು ಅನಿಸುತ್ತದೆ. ಆದರೆ ಎಷ್ಟು ಜನರಿಗೆ ಆ ಭಾಗ್ಯ ದೊರೆಯುತ್ತದೆ ಹೇಳಿ. ಹಾಗಂತ ನಾವು ಕೊರಗಬಾರದು. ನಮ್ಮ ಬದುಕನ್ನು ಅದು ಹೇಗಿದ್ದರೂ ಸರಿ ಪ್ರೀತಿಸಿಕೊಂಡು ಬಾಳೋದು ಕಲಿಯೋಣ. ಅದರಿಂದ ನಮಗೇ ಸುಖ, ನೆಮ್ಮದಿ ಅಂದರೆ, ನಾರಾಯಣಮೂರ್ತಿಯವರು ನೀನು ತುಂಬಾ ಅನುಭವಸ್ಥನಪ್ಪಾ ಅಂದರು. ಒಂದೊಂದು ದಿನ ಕಮಲಮ್ಮ ಮನೇಲಿ ಏನಾದರೂ ಸಿಹಿ ಮಾಡಿಕೊಂಡು ಅವರಿಗೆಲ್ಲ ಕೊಡುತ್ತಾರೆ. ಅಲ್ಲಿರುವವರಿಗೆ ಯಾವ ತಿಂಡಿ ಇಷ್ಟ ಯಾವ ಅಡುಗೆ ಇಷ್ಟ ಅಂತ ಕೇಳಿ ಒಂದೊಂದು ದಿನ ಅವುಗಳನ್ನು ಮಾಡಿಕೊಂಡು ಹೋಗಿ ಕೊಡುತ್ತಾರೆ.
ಇಂಥ ಹಲವಾರು ಅನುಭವಗಳು ಮತ್ತು ವೃದ್ಧಾಶ್ರಮದ ಸೇವೆ ಅವರ ಬದುಕಿನಲ್ಲಿ ಒಂದು ತಿರುವು ತಂದಿದ್ದರಿಂದ ಈಗ ಅವರಿಗೆ ಮಗ ದೂರಾದ, ಮಗಳು ದೂರಾದಳು ಅಂತ ಬೇಜಾರಿಲ್ಲ, ದುಃಖವೂ ಇಲ್ಲ. ಜೊತೆಗೆ ಬದುಕೇ ಹೀಗೆ, ನಮ್ಮ ಬದುಕಿನ ದಿನಗಳು ನಮಗೆ ಒದಗಿ ಬಂದಂಥ ಅತ್ಯುತ್ತಮ ದಿನಗಳು ಅಂತ ಸಮಾಧಾನ ಮಾಡಿಕೊಂಡಿದ್ದಾರೆ.ಆದರೂ ಅವರಿಗೆ ಆಸೆ ಮಾಸಿಲ್ಲ. ಎಂದಾದರೊಂದು ದಿನ, ಅಂದರೆ ತಮ್ಮಿಬ್ಬರಿಗೂ ಸಾವು ಬರೋ ಮೊದಲೇ ಮಕ್ಕಳಿಗೆ ತಮ್ಮ ತಪ್ಪಿನ ಅರಿವಾಗಿ ಅವರು ಬಂದು ಕ್ಷಮೆ ಕೇಳಬಹುದು ಅಂತ. ಹೀಗಾಗಿ ಅವರಿಬ್ಬರೂ ತಮ್ಮ ಕೈಲಾದಷ್ಟು ಸೇವೆ ಮಾಡುತ್ತಾ ತಮ್ಮ ತಮ್ಮ ಬಸ್ಸು ಬರುವುದನ್ನೇ ಕಾಯುತ್ತಿದ್ದಾರೆ.?