ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
61ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಮೇ 2017 > ಸರ್ವೇ ಜನಾಃ ಸುಖಿನೋ ಭವಂತು

ಸರ್ವೇ ಜನಾಃ ಸುಖಿನೋ ಭವಂತು

 

ವೃತ್ತಿಯಲ್ಲಿ ವಕೀಲನಾಗಿರುವ ಗಣಪತಿಭಾವ ಮೊನ್ನೆ ಮನೆಗೆ ಬಂದಿದ್ದ. ತಣ್ಣಗಿನ ಆಸರಿಗೆ ಎಂದು ತಂಗಿ ತಂದುಕೊಟ್ಟ ಮಜ್ಜಿಗೆ-ಬೆಲ್ಲ ಕುಡಿದವನು ಇದ್ದಕ್ಕಿದ್ದಂತೆ ಹೇಳಿದ: “ಈ ಒಂದು ಹೇಳಿಕೆ ಇದೆಯಲ್ಲ ರಮೇಶ, ’ಸರ್ವೇ ಜನಾಃ ಸುಖಿನೋ ಭವಂತು’ ಎಂದು – ಅದು ತಪ್ಪು ಎಂದು ನನಗೆ ಅನ್ನಿಸ್ತಿದೆ.”

ಇವನಿಂದ ಇದೆಂಥ ವಿರೋಧಾತ್ಮಕ ಆಣಿಮುತ್ತು ಎಂದು ನಾನು ದಿಙ್ಮೂಢನಾಗಿ ಅವನತ್ತ ನೋಡಿದೆ. ಅದಕ್ಕೆ ಕಾರಣವೂ ಇತ್ತು. ಈ ವಕೀಲಭಾವ ಪರಂಪರೆ, ಸನಾತನಧರ್ಮ, ಗೀತೆ ಇವುಗಳನ್ನು ಹೇಗೆ ವಿರೋಧಿಸಿ ಪತ್ರಿಕೆಯಲ್ಲಿ ತನ್ನ ಹೆಸರು ಬರುವಂತೆ ಮಾಡಬೇಕು – ಎಂದು ಅರಸುತ್ತಿರುವ ಬುದ್ಧಿಜೀವಿ ಖಂಡಿತ ಅಲ್ಲ. ಅವನ ವಕೀಲಿ ಕೆಲಸಗಳೇ ಹಾಸಿಹೊದೆಯುವ? ಇರುವಾಗ, ಇಂತಹದ್ದಕ್ಕೆಲ್ಲ ಅವನಿಗೆಲ್ಲಿ ಸಮಯ? ಆದರೆ ನಾನು ಅಲ್ಪಸ್ವಲ್ಪ ಬುದ್ಧಿಜೀವಿಗಳ ಸಾಲಿನಲ್ಲಿ ಸೇರುವುದರಿಂದ, ಅಥವಾ ಅವನು ಹಾಗೆಂದು ನನ್ನ ಬಗ್ಗೆ ಭಾವಿಸಿರುವುದರಿಂದ, ಆಗಾಗ್ಗೆ ನನ್ನಲ್ಲಿ ಇಂತಹ ಪ್ರಶ್ನೆಗಳನ್ನು ಕೇಳುವುದಿದೆ; ಹಾಗಾಗಿಯೇ ನನಗೆ ಸಂದಿಗ್ಧಕ್ಕೆ ಬಂದಿರುವುದು. ಇವನ ಮಾತಿಗೆ ನಾನೇನು ಉತ್ತರ ಕೊಡುವುದು ಎಂದು ಯೋಚಿಸುವ?ರಲ್ಲಿ ಆತ ಮುಂದುವರಿಸಿದ: “ಇದು ನನಗೆ ಹೊಳೆದದ್ದಲ್ಲಪ್ಪ, ಟಿವಿಯಲ್ಲಿ ’ಎದೆತುಂಬಿ ಹಾಡುವೆನು’ ಎಂದು ಕಾರ‍್ಯಕ್ರಮ ಬರುತ್ತದಲ್ಲ, ಮೊನ್ನೆ ಸ್ವಲ್ಪ ಹೊತ್ತು ಅದನ್ನು ನೊಡುತ್ತಿದ್ದೆ. ಅದರಲ್ಲಿ ಪಿ.ಬಿ. ಶ್ರೀನಿವಾಸ್ ಈ ಮಾತು ಹೇಳಿದರು. ನನಗೂ ’ಹೌದಲ್ಲ’ ಅನ್ನಿಸಿತು.” ಆ ಕಾರ‍್ಯಕ್ರಮವನ್ನು ಖಾಯಂ ಆಗಿ ನೋಡುವ ಅಭ್ಯಾಸವುಳ್ಳ ನನ್ನ ಹೆಂಡತಿ ತಟ್ಟನೆ ತಿದ್ದುಪಡಿ ತಂದಳು: “ಅದನ್ನು ಹೇಳಿದ್ದು ಪಿ.ಬಿ.ಯಲ್ಲ, ಎಸ್.ಪಿ., ಎಸ್.ಪಿ. ಬಾಲಸುಬ್ರಮಣ್ಯಂ.” “ಹೌದು, ಹೌದು. ಅವರು ಹೇಳ್ತಾರೆ – ’ಜಗತ್ತಿನಲ್ಲಿ ಒಳ್ಳೆಯವರೂ ಇರ‍್ತಾರೆ, ಕೆಟ್ಟವರೂ ಇರ‍್ತಾರೆ, ಒಳ್ಳೆಯವರು ಸುಖವಾಗಿರಲಿ ಎನ್ನುವುದರಲ್ಲಿ ಅರ್ಥ ಇರ‍್ತದೆ. ಅದಕ್ಕೆ ಆ ಹೇಳಿಕೆ ’ಸರ್ವೇ ಸುಜನೋ ಸುಖಿನಾಃ ಭವಂತು’ ಅಂತ ಆಗ್ಬೇಕು ಅಂv

ವಿವಿಧ ಜಿಜ್ಞಾಸೆ
ಆ ಕ್ಷಣಕ್ಕೆ ಹೌದಲ್ಲ ಎಂದು ನನಗೂ ಅನ್ನಿಸಿತು. ಆಮೇಲೆ ಒಬ್ಬನೇ ಕುಳಿತು ಯೋಚಿಸತೊಡಗಿದೆ. ಈ ಬಗೆಯ ಹೇಳಿಕೆ ಕೊಟ್ಟ ಕವಿಯೋ ಋಷಿಯೋ ಈ ಬಗ್ಗೆ ಯೋಚಿಸಿರಲಿಕ್ಕಿಲ್ಲವೆ? ಹಾಗಿದ್ದರೆ, ಹಾಗೇಕೆ ಬರೆದ? ಅಥವಾ – ಮೊದಲಿಗೆ ’ಸರ್ವೇ ಸುಜನಃ’ ಎಂದಿದ್ದದ್ದು ಪಾಠಾಂತರದಲ್ಲಿ ’ಸು’ ಬಿಟ್ಟು ಹೋಗಿ ’ಸರ್ವೇ ಜನಾಃ’ ಎಂದಾಗಿರಬಹುದೆ? – ಬಗೆಹರಿಯಲಿಲ್ಲ. ಹಾಗೆಂದು ಭಾವನ ಮಾತನ್ನು ಒಪ್ಪಿಕೊಳ್ಳಲೂ ಮನಸ್ಸು ಬರಲಿಲ್ಲ. ನಾಲ್ಕು ಜನರಲ್ಲಿ ಕೇಳಿದರೆ ಹೇಗೆ ಎನ್ನಿಸಿತು.

ನನ್ನ ಕುಮಾರ ಕಂಠೀರವನಲ್ಲಿ ಕೇಳಿದೆ -s ’ಸರ್ವೇ ಜನಾಃ ಸುಖಿನೋ ಭವಂತು’ ಎನ್ನುವ ಬಗ್ಗೆ ನಿನ್ನ ಅಭಿಪ್ರಾಯವೇನು ಎಂದು. “ಅದು ಒಂದು ಚಳವಳಿಯ ಘೋ?ಣೆ ಇರಬೇಕು” – ಆತ ತಟ್ಟನೆ ಪ್ರತಿಕ್ರಿಯಿಸಿದ. ಯುವಕರಿಗೆ ಅವಸರ ಹೆಚ್ಚು, ಅಲ್ಲವೆ? “ನನಗೆ ಅರ್ಥವಾಗಲಿಲ್ಲ” ಎಂದೆ. “ಇಲ್ಲಿ ಅರ್ಥವಾಗದಿರುವುದೇನಿದೆ. ಪ್ರಾಯಶಃ ಸರ್ವೇ ಡಿಪಾರ‍್ಟ್‌ಮೆಂಟಿನವರು ತಮ್ಮ ಸಂಬಳ ಸೌಲಭ್ಯ ಹೆಚ್ಚಿಸುವ ಬಗ್ಗೆ ಕೂಗುವ ಆರಂಭದ ಘೋ?ಣೆ ಇದಾಗಿರಬಹುದು” ಎಂದ. “ಹಾಗಿದ್ದಲ್ಲಿ ಅದು ಬಹಳ ಸಂಕುಚಿತ ಮನೊಭಾವದ ಘೋ?ಣೆ. ಯಾಕೆ ಸರ್ವೇಯ ಜನ ಮಾತ್ರ ಸುಖವಾಗಿರಬೇಕು; ರೆವೆನ್ಯೂ ಇಲಾಖೆಯವರು, ಶಿಕ್ಷಣಇಲಾಖೆಯವರು ಮುಂತಾದವರೆಲ್ಲ ಏನು ಪಾಪ ಮಾಡಿದ್ದಾರೆ?” ನಾನು ನಗುತ್ತಾ ಕೇಳಿದೆ. ಆತ ಮಾತನಾಡಲಿಲ್ಲ. ನಾನೇ ಅವನ ಮಾತನ್ನು ಹೊರಳಿಸಿ, ತಿದ್ದುಪಡಿ ಮಾಡಿದೆ – “ನೀನು ಅರ್ಥ ಮಾಡಿಕೊಂಡಿರುವುದು ಸಂಕುಚಿತವಾಗಿ. ಸರ್ವೇ ಜನ ಅಂದರೆ ಸರ್ವ್ ಮಾಡುವವ. ’ಸರ್ವ್’ ಕನ್ನಡೀಕರಣದಲ್ಲಿ ’ಎ’ ಪ್ರತ್ಯಯ ಸೇರಿ ’ಸರ್ವೇ’ ಆಗಿದೆ. ಅಂದರೆ ಸೇವೆ ಮಾಡುವವರು ಅಂತ. ಸೇವೆ ಮಾಡುವ ಕೆಳ ಮತ್ತು ಮಧ್ಯಮವರ್ಗದ ಮಂದಿಯೆಲ್ಲ ಸುಖವಾಗಿರಲಿ ಅನ್ನುವ ಅರ್ಥ ಯಾಕಾಗಬಾರದು?” ಅವನಿಗೆ ನನ್ನ ವ್ಯಂಗ್ಯ ಅರ್ಥವಾಗಿರಬೇಕು; ಮುಖ ಊದಿಸಿಕೊಂಡು ಮಾತನಾಡದೆ ನಡೆದ.

ಇನ್ನೆಲ್ಲಿ ಕೇಳುವುದು ಎಂದುಕೊಂಡಾಗ, ’ಅಭಿನವ ಬೇಂದ್ರೆ’ ಎಂದು ತನ್ನನ್ನೇ ತಾನು ಕರೆದುಕೊಳ್ಳುವ ಅಧ್ಯಾತ್ಮ ಕವಿಮಿತ್ರ ನೆನಪಾದ. ಹೋಗಿ ಕೇಳಿದೆ. ಗಿಡ್ಡಗಡ್ಡವನ್ನು ದೀರ್ಘವಾಗಿ ಎಳೆದುಕೊಂಡು ಅಭಿನಯಸಮೇತನಾಗಿ ನನ್ನನ್ನು ಕಿರಿದಾಗಿ ನಿರುಕಿಸಿ, ಹೇಳಿದ – “ನಿನ್ನ ಪ್ರಶ್ನೆ ತುಂಬಾ ವಿಚಾರಪೂರ್ಣವಾಗಿದೆ. ಇದು ವಿಶ್ವಮಾನವಪ್ರಜ್ಞೆಗೆ ಹತ್ತಿರವಾದದ್ದು. ಮಾನವೀಯ ನೆಲೆಯಲ್ಲಿ ವಿವೇಚಿಸಬೇಕಾದದ್ದು. ಹೀಗೆ ಯೋಚನೆ ಮಾಡು: ಒಬ್ಬ ಕಳ್ಳ ಇರುತ್ತಾನೆ. ಅವನಿಗೂ ಹೆಂಡತಿ ಮಕ್ಕಳಿರುತ್ತಾರೆ. ಅವರೂ ಎಲ್ಲ ಸುಖವಾಗಿರಬೇಕು. ಅವನೂ ಸಮಾಜಜೀವಿ ತಾನೆ? ಅವನ ವೃತ್ತಿ ಕಳ್ಳತನವಾಗಿರಬಹುದು. ಅವನಿಗೆ ಬೇರೆ ವೃತ್ತಿ ಕೊಡಿ, ಅವನೂ ಸುಖವಾಗಿರಲಿ. ಹೀಗೆ ಅದಕ್ಕೆ ಮಾನವೀಯಮೌಲ್ಯ ಮತ್ತು ದಾರ್ಶನಿಕತೆಯನ್ನೂ ಕೊಡಬಹುದು..” ಅವನ ಮಾತಿನಿಂದ ನನಗೆ ಮತ್ತ? ಗೊಂದಲವಾಯಿತು.

ಅಷ್ಟರಲ್ಲಿ ಆಕಸ್ಮಿಕವಾಗಿ ಭೇಟಿಯಾದ ತಾಲ್ಲೂಕಿನ ಪ್ರಸಿದ್ಧ ಪರಿಸರಪ್ರಿಯ ಕೃಷ್ಣಮೂರ್ತಿಯವರಲ್ಲಿ ಈ ಪ್ರಶ್ನೆಯನ್ನಿಟ್ಟೆ. ಅವರು ಒಂದೇ ಬಾರಿಗೆ ರಾಂಗ್ ಆಗಿಬಿಟ್ಟರು. “ಇಲ್ಲಿ ’ಜನ’ ಎಂದು ಬಳಸಿದ ಶಬ್ದವೇ ತಪ್ಪು. ಜಗತ್ತಿನಲ್ಲಿ ಮನು?ನಿಗೆ ಮಾತ್ರ ಬದುಕಲು ಅರ್ಹತೆಯಿದೆಯೆ? ಪ್ರಾಣಿ, ಪಕ್ಷಿ, ಕಲ್ಲು, ಮರ, ನದಿ ಎಲ್ಲವಕ್ಕು ಬದುಕುವ ಹಕ್ಕಿದೆ, ಎಲ್ಲವೂ ಜೀವಿಗಳೇ. ಬೇಡದ ಹೇಳಿಕೆಯನ್ನು ಆಧಾರವಾಗಿ ಉದ್ಧರಿಸುತ್ತ ನಮ್ಮವರು ಪರಿಸರನಾಶಕ್ಕೆ ಕಾರಣವಾಗಿರುವುದು. ತಾನು ಸುಖವಾಗಿರುವುದಕ್ಕೆ ಮರ ಕಡಿಯುವುದು, ಕಲ್ಲು ಗಣಿ ಮಾಡುವುದು..” ನಾನು ತಟ್ಟನೆ ಕೇಳಿದೆ: “ಕಲ್ಲು ಮಣ್ಣುಗಳೂ ಜೀವಿಗಳೇ ಅಂತೀರಾ?” “ಯಾಕಲ್ಲ ಹೇಳಿ, ಅವೂ ಜೀವಿಗಳೇ. ಅವುಗಳಿಗೂ ಆಯುಸ್ಸು ಇದೆ” – ಎಂದು ರಪ್ಪನೆ ಉತ್ತರಿಸಿದ್ದಕ್ಕೆ ಬೆದರಿ ಹಿಂದೆ ಸರಿದೆ.

ಮಾಸ್ಟರ್‌ಮೈಂಡ್ ಮಿಸ್ಸೆಸ್
ಎಲ್ಲೋ ಏನೋ ಮಿಸ್ ಹೊಡೀತಾ ಇದೆ. ಎಲ್ಲರ ಸಮಜಾಯಿಷಿಯಲ್ಲಿ ಒಂದೊಂದು ಅಂಶ ಸತ್ಯವಿದೆ. ಆದರೆ ಪೂರ್ಣಸತ್ಯ ಎಲ್ಲಿದೆ ಎಂದು ತಲೆಕೆಡಿಸಿಕೊಂಡು ಸದಾಕಾಲ ಅದನ್ನೇ ಯೋಚಿಸುತ್ತ ಕುಳಿತುಕೊಂಡ ನನ್ನನ್ನು ನೋಡಿದ ಮಡದಿ, “ಸೋಮಾರಿಯಾಗಿ ಕುಳಿತುಕೊಳ್ಳುವ ನಿಮಗೆ ಅಣ್ಣ ಇಂತಹ ವಿಚಾರದ ಹುಳ ಬಿಟ್ಟ. ಅವನಿಗೆ ಬೈಯ್ಯಬೇಕು. ನನ್ನ ಹಣೇಬರಹ..” ಅವಳ ಸಹಸ್ರನಾಮ ಆರಂಭಕ್ಕೂ ಮುನ್ನ ವಿನೀತನಾಗಿ ಕೇಳಿದೆ: “ನೀನೂ ಇಂಥ ವಿಚಾರದಲ್ಲಿ ಜಾಣೆಯೇ – ಉಭಯಭಾರತಿ ತರಹ. ಹೇಳು, ನಿನಗೇನನ್ನಿಸುತ್ತದೆ ಈ ಹೇಳಿಕೆ ಬಗ್ಗೆ?” ಹೊಗಳಿಕೆಯಿಂದ ತಣ್ಣಗೆ ಉಬ್ಬಿದ ಅಥವಾ ಉಬ್ಬಿ ತಣ್ಣಗಾದ ಆಕೆ ಹೇಳಿದಳು – “ಆ ಶ್ಲೋಕ ಅ? ಆಗಿರಲಿಕ್ಕಿಲ್ಲ. ಶ್ಲೋಕವೊಂದಕ್ಕೆ ಎರಡು ಅಥವಾ ನಾಲ್ಕು ಸಾಲುಗಳು ಇರುತ್ತವೆ. ಹಾಗಾಗಿ ಈ ಹೇಳಿಕೆ ಯಾವ ಶ್ಲೋಕದಲ್ಲಿ ಬಂದಿದೆ, ಅದರ ಹಿಂದು-ಮುಂದೇನು, ಪೂರ್ಣಪಾಠವೇನು ಮೊದಲು ತಿಳಿದುಕೊಳ್ಳಿ.”

ಇಷ್ಟು ಸಣ್ಣ ವಿಷಯ ನನ್ನ ತಲೆಗೆ ಹೊಳೆಯಲೇ ಇಲ್ಲವಲ್ಲ ಎಂದು ವಿ?ದವಾಯಿತು. ಆಗಾಗ ಸೋಲುವುದರಲ್ಲೂ ಸುಖವಿದೆ ಎಂದುಕೊಂಡು, “ಕರೆಕ್ಟಾಗಿ ಹೇಳಿದೆ ನೋಡು” ಎಂದು ಮಡದಿಯನ್ನು ಹೊಗಳಿದೆ. ಬಳಿಕ ಸೀದಾ ಹೋದದ್ದೆ ಬಾಲ್ಯ ಸ್ನೇಹಿತ, ಈಗ ’ವಿದ್ವಾನ್’ ಎನ್ನಿಸಿಕೊಂಡಿರುವ ಕಿರಣಭಟ್ಟನಲ್ಲಿಗೆ. ಹೋದ ದಿನ ಕೆಲಸ ಆಗಲಿಲ್ಲ. ’ಹುಡುಕಿಡುತ್ತೇನೆ, ನಾಳೆ ಬಾ’ ಎಂದ. ನಾಳೆಯ ಪಾಳಿ ಬರಲು ಒಂದು ವಾರವಾಯಿತು. ಆದರೂ ಬಾಲ್ಯಸ್ನೇಹಿತ ಕೇಳಿದ್ದ ಎಂದು ಒಂದಿಷ್ಟು ಶ್ರಮವಹಿಸಿದ್ದ.  ಸಾಕಷ್ಟು ದೀರ್ಘವಾಗಿಯೇ ಕೊರೆದ. ಸಂಸ್ಕೃತ, ಲ್ಯಾಟಿನ್ ಎರಡೂ ನನಗೆ ಒಂದೇ ಬಗೆಯ ಭಾಷೆಯಾಗಿದ್ದರಿಂದ, ಅವನು ಹೇಳಿದ್ದರಲ್ಲಿ ನನಗೆ ಅರ್ಥವಾಗಿದ್ದು ಇಷ್ಟು:

ವಿದ್ವಾನ್ ಸ್ನೇಹಿತನ ಸುದೀರ್ಘ ವಿವರಣೆ
“ಇದು ಶ್ಲೋಕವಲ್ಲ. ಇದೊಂದು ಆರ್ಷೋಕ್ತಿ. ಇಲ್ಲಿ ’ಜನ’ ಎನ್ನುವ ಶಬ್ದಕ್ಕೆ ಮನುಷ್ಯ ಎಂಬ ಅರ್ಥವಲ್ಲ. ’ಜನಿ ಪ್ರಾದುರ್ಭಾವೊ’ ಎಂಬ ಧಾತುವಿನಿಂದ ಜನ ಶಬ್ದವು ಹುಟ್ಟಿದೆ. ಹಾಗಾಗಿ ಇಲ್ಲಿ ಜನ ಶಬ್ದವನ್ನು ಯೋಗಾರ್ಥದಲ್ಲಿ ಸ್ವೀಕರಿಸಬೇಕು. ’ಜನ್ಯತೇ ಇತಿ ಜನಃ’ ಇದು ಯೋಗಾರ್ಥ. ಇದರರ್ಥ ಹುಟ್ಟಿರುವ ಜೀವಿಗಳೆಲ್ಲ ಜನ. ಸರ್ವೇ ಎನ್ನುವುದು ಅವ್ಯಯ. ಭವಂತು ಎನ್ನುವುದು ಲೋಟ್‌ಲಕಾರ, ಒಂದು ರೀತಿಯಲ್ಲಿ ಆಜ್ಞಾಪ್ತಿ. ಉಳಿದ ಅರ್ಥವನ್ನು ನೀನು ಸಮರ್ಪಕವಾಗಿ ಹೊಂದಿಸಿಕೊಳ್ಳಬೇಕು. ಇನ್ನು ನಿನ್ನ ಪ್ರಶ್ನೆ – ’ಸುಜನಃ’ ಅಂತಾಗಬೇಕಿತ್ತಲ್ಲ ಎನ್ನುವುದು. ಯಾವ ಜೀವಿಯೂ ಹುಟ್ಟಿನಿಂದಲೇ ಕೆಟ್ಟದ್ದೂ ಅಲ್ಲ, ಒಳ್ಳೆಯದೂ ಅಲ್ಲ. ಸಂಸ್ಕಾರದಿಂದ ಗುಣ ತುಂಬಲ್ಪಡುತ್ತದೆ. ಎಲ್ಲ ಜೀವಿಗಳಿಗೂ ಒಳ್ಳೆಯ ಸಂಸ್ಕಾರ, ಗುಣ ತುಂಬಲ್ಪಡುತ್ತದೆ ಎನ್ನುವ ಸದಾಶಯ ಇಟ್ಟುಕೊಂಡೆ ಹುಟ್ಟಿರುವ ಆರ್ಷೋಕ್ತಿ ಇದು. ಇಲ್ಲಿ ಸುಖ ಎನ್ನುವುದೂ ಕೂಡ ವಿಶಾಲ ಅರ್ಥದಲ್ಲಿ ಹೇಳಲ್ಪಟ್ಟ ಆತ್ಯಂತಿಕವಾದ, ಶಾಶ್ವತವಾದ ಸುಖ. ಇನ್ನು ಪೂರ್ಣಪಾಠದ ಬಗ್ಗೆ ಕೇಳಿದೆ. ಇದು ಬರಿದೆ ಆ?ಕ್ತಿಯಾದರೂ, ಇದನ್ನೆ ಮೂಲವಾಗಿ ಇರಿಸಿಕೊಂಡ ಒಂದು ಶ್ಲೋಕ ಇದೆ. ಅದು ಇದರ ಅರ್ಥವನ್ನು ವಿಸ್ತಾರವಾಗಿಸಿದ್ದಷ್ಟು. ಅದು ಹೀಗಿದೆ:

’ಸರ್ವೇ ಜನಾಃ ಸುಖಿನೋ ಭವಂತು, ಸರ್ವೇ ಸಂತು ನಿರಾಮಯಾಃ
ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿದ್ದುಃಖಭಾಗ್‌ಭವೇತ್’

’ಎಲ್ಲ ಜೀವಿಗಳೂ ಸುಖವಾಗಿರಲಿ, ಎಲ್ಲವೂ ನಿರೋಗಿಗಳಾಗಿರಲಿ, ಎಲ್ಲವೂ ಮಂಗಳವನ್ನು ನೋಡುವಂತಾಗಲಿ, ಪ್ರತಿಯೊಂದೂ ದುಃಖರಹಿತವಾಗಿರಲಿ’ ಎನ್ನುವುದು ತಾತ್ಪರ‍್ಯ. ಆದರೆ ಈ ಕಾಲದಲ್ಲಿ ಹೇಳುವುದು ನಾನೊಬ್ಬನು ಸುಖವಾಗಿರಬೇಕು……!

ಮುಂದಿನ ಅವನ ಮಾತುಗಳನ್ನು ಉದ್ಧರಿಸಹೊರಟರೆ ವಿಷಯಾಂತರವಾದೀತು.

ಅದೆಲ್ಲ ಸರಿ, ನನಗೆ ಇನ್ನೂ ಸರಿಯಾದ ಉತ್ತರ ಸಿಕ್ಕಿದೆ ಅಂತ ಅನ್ನಿಸುತ್ತಿಲ್ಲ. ಹಾಗಾಗಿ ನಿಮ್ಮೆದುರು ಈ ವಿಷಯವನ್ನು ಮಂಡಿಸಿದ್ದೇನೆ.

ನೀವೇನಂತೀರಿ?

Comments are closed.

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : utthana1965@gmail.com

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat