ಜನಪ್ರಿಯ ಕಲಾವಿದರಾಗಿರುವುದರ ಜೊತೆಗೆ ಮಹಾನ್ ಕಲಾವಿದ ಕೂಡ ಆಗಿರುವವರು ಹಿಂದೂಸ್ತಾನಿ ಸಂಗೀತದ ಬಾನ್ಸುರಿ (ಕೊಳಲು) ವಾದಕ ಪಂಡಿತ್ ಪ್ರವೀಣ್ ಗೋಡ್ಖಿಂಡಿ. ವಿಶೇಷವೆಂದರೆ ಬಹಳ ಬೇಗ ಅವರು ಸಾಧನೆಯ ಶಿಖರವನ್ನೇರಿದ್ದಾರೆ. ತಂದೆ ಪಂಡಿತ್ ವೆಂಕಟೇಶ್ ಗೋಡ್ಖಿಂಡಿಯವರು ಬಾನ್ಸುರಿಯಲ್ಲಿ ಕೈಗೊಂಡ ಪ್ರಯೋಗಗಳನ್ನು ಸಮರ್ಥವಾಗಿ ಮುಂದುವರಿಸಿ ಗಾಯಕಿ ಶೈಲಿಯ ಅಪ್ರತಿಮ ಬಾನ್ಸುರಿ ವಾದಕರೆನಿಸಿದ್ದಾರೆ. ಭಾರತವಷ್ಟೇ ಅಲ್ಲ; ಜಗತ್ತಿನಾದ್ಯಂತ ಬಹುಬೇಡಿಕೆಯ ಸಂಗೀತಗಾರರಾಗಿರುವ ಪ್ರವೀಣ್ ಗೋಡ್ಖಿಂಡಿ ಎಲ್ಲವನ್ನೂ ನಿಭಾಯಿಸುತ್ತಾರೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಆಧಾರದಲ್ಲೇ ಫ್ಯೂಶನ್ ಸಂಗೀತದ ಪ್ರಸ್ತುತಿಯನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನೊಂದು ಅಂಶವೆಂದರೆ ಶಾಸ್ತ್ರೀಯ ಸಂಗೀತದ ಶ್ರೋತೃಗಳಲ್ಲಿ ಹಿಂದೂಸ್ತಾನಿ ಸಂಗೀತಪ್ರಿಯರು ಮತ್ತು ಕರ್ನಾಟಕ ಸಂಗೀತಪ್ರಿಯರೆನ್ನುವುದು ಎರಡು ದೊಡ್ಡ ಪ್ರಭೇದಗಳು. ಸಂಗೀತಗಾರರ ನಡುವೆ ಕೆಲವೇ ಕೆಲವು ಜನ ಈ ಅಡ್ಡಗೋಡೆಯನ್ನು ಒಡೆದುಹಾಕಬಲ್ಲವರಾಗಿದ್ದಾರೆ. ಅಂತಹ ವಿರಳ ಕಲಾವಿದರಲ್ಲಿ ಬಾನ್ಸುರಿ ವಾದಕ ಪ್ರವೀಣ್ ಗೋಡ್ಖಿಂಡಿ ಒಬ್ಬರು. `ಉತ್ಥಾನ’ದ ಓದುಗರಿಗಾಗಿ ಈಚೆಗೆ ಪ್ರವೀಣ್ ಗೋಡ್ಖಿಂಡಿ ಅವರ ಸಂದರ್ಶನವನ್ನು ನಡೆಸಲಾಯಿತು. ಪತ್ರಿಕೆಯ ಎಚ್. ಮಂಜುನಾಥ್ ಭಟ್ ಅವರು ನಡೆಸಿದ ಮಾತುಕತೆ ಇಲ್ಲಿದೆ.
ಪ್ರಶ್ನೆ: ನಿಮ್ಮ ಕುಟುಂಬದ ಹಿನ್ನೆಲೆ ತಿಳಿಸಿ; ’ಗೋಡ್ಖಿಂಡಿ’ ಊರಿನ ಹೆಸರೆ?
ಉತ್ತರ: ಅದು ಧಾರವಾಡದ ಹತ್ತಿರ ರಾಮದುರ್ಗ ಎಂದು; ಅಲ್ಲಿ ಬಹಳ ವರ್ಷಗಳ ಹಿಂದೆ ಗೋಡ್ಖಿಂಡಿ ಎನ್ನುವ ಚಿಕ್ಕ ಗ್ರಾಮ ಕೂಡ ಇತ್ತು. ಈಗ ಅದಿಲ್ಲ; ನಮ್ಮಲ್ಲಿ ಆ ಹೆಸರು ಮಾತ್ರ ಇದೆ. ಏನೆಂದರೆ ಮೂಲತಃ ನಮ್ಮ ತಂದೆ ಕುಲಕರ್ಣಿ. ಅವರು ಏಳನೇ ವಯಸ್ಸಿನಲ್ಲಿದ್ದಾಗ ಈ ಗೋಡ್ಖಿಂಡಿ ಮನೆತನಕ್ಕೆ ದತ್ತು ಹೋದರು. ಹಾಗಾಗಿ ಆ ಹೆಸರು ಬಂತು. ಆದರೆ ಗೋಡ್ಖಿಂಡಿ ಸಂಬಂಧಿಕರು, ಬಂಧುಬಳಗ ಯಾರೂ ಇಲ್ಲ. ನಮ್ಮ ತಂದೆ ಒಬ್ಬರೇ ಆ ಫ್ಯಾಮಿಲಿಯಲ್ಲಿ. ಆ ಗೋಡ್ಖಿಂಡಿ ಅಜ್ಜ-ಅಜ್ಜಿ ತೀರಿಕೊಂಡ ಮೇಲೆ ಇವರು ಮತ್ತೆ ಕುಲಕರ್ಣಿ ಮನೆತನದಲ್ಲೇ ಬೆಳೆದರು. ನಮ್ಮ ಚಿಕ್ಕಪ್ಪ ಎಲ್ಲ ಕುಲಕರ್ಣಿ ಮನೆತನದಲ್ಲೇ ಇದ್ದಾರೆ. ಗೋಡ್ಖಿಂಡಿ ಎನ್ನುವುದು ನಮ್ಮ ತಂದೆ, ನಾವು ಮಕ್ಕಳು, ಮೊಮ್ಮಕ್ಕಳು ಇ? ಮಾತ್ರ.
ಪ್ರ: ಹೆಸರು ಬದಲಾಗಿತ್ತೆ?
ಉತ್ತರ: ಹೌದು, ಪ್ರಭಾಕರ್ ಕುಲಕರ್ಣಿ ಇದ್ದದ್ದು ವೆಂಕಟೇಶ ಗೋಡ್ಖಿಂಡಿ ಆಯಿತು. ಬೆಳೆದದ್ದೆಲ್ಲ ಕುಲಕರ್ಣಿ ಮನೆತನದಲ್ಲೇ; ಧಾರವಾಡದಲ್ಲಿ. ಗೋಡ್ಖಿಂಡಿ ಸಂಬಂಧ ಮುಂದುವರಿಯಲಿಲ್ಲ. ಆಸ್ತಿ ಕೂಡ ಏನೂ ಬರಲಿಲ್ಲ. ಗಾರ್ಡಿಯನ್ ಅಂತ ಇದ್ದವರು ಯಾರೋ ಅದನ್ನು ಬಳಸಿಕೊಂಡರು, ಬರೇ ಹೆಸರು ಮಾತ್ರ ಬಂತು ಎಂದು ನಮ್ಮ ತಂದೆ ಯಾವಾಗಲೂ ಹೇಳುತ್ತಿದ್ದರು. ಇದೂ ಒಂದು ರೀತಿಯಲ್ಲಿ ಅನುಕೂಲವೇ ಆಯಿತು (ಬ್ಲೆಸಿಂಗ್ ಇನ್ ಡಿಸ್ಗೈಸ್); ಏಕೆಂದರೆ ಕುಲಕರ್ಣಿ ಮನೆತನದ ನಮ್ಮ ಅಜ್ಜ (ತಂದೆಯ ತಂದೆ) ರಾಮ್ರಾವ್ ಕುಲಕರ್ಣಿ ಅವರು ಸಂಗೀತಪ್ರಿಯರು. ಸ್ವಲ್ಪಮಟ್ಟಿಗೆ ಹಾರ್ಮೋನಿಯಂ ವಾದನ ತಿಳಿದಿದ್ದವರು. ಪ್ರಾಥಮಿಕ ಶಾಲಾ ಹೆಡ್ಮಾಸ್ಟರ್. ನಮ್ಮ ಅಜ್ಜಿ ಅನಸೂಯಾ ಕುಲಕರ್ಣಿ ಶಿಲ್ಪಿ. ಮನೆಯಲ್ಲಿ ಗೌರಿ ಗಣೇಶ ಎಲ್ಲ ಪ್ರತಿವ? ಅವರೇ ಮಾಡುತ್ತಿದ್ದರು; ಪ್ರಸಿದ್ಧ ವ್ಯಕ್ತಿಗಳ ಮೂರ್ತಿಗಳನ್ನು ಕೂಡ ಮಾಡಿ ಇಟ್ಟಿದ್ದರು; ಮನೆ ಧಾರವಾಡ ಪೇಟೆಯಲ್ಲೇ ಇತ್ತು. ಅಜ್ಜಿ ಅನಸೂಯಾ ಅವರ ತಂದೆ ಕವಿಗಳಾಗಿದ್ದರು; ಅದ್ಭುತವಾದ ಕವಿತ್ವ ಅವರಲ್ಲಿತ್ತು. ’ಪ್ರತಿಭಾಂಕರ’ ಎಂಬುದು ಅವರ ನಾಮಾಂಕಿತ. ಒಟ್ಟಿನಲ್ಲಿ ಆ ಮನೆತನದಲ್ಲಿ ಕಲೆಯ ಬಗ್ಗೆ ಒಲವಿತ್ತು. ತಂದೆಗೆ ಸಂಗೀತದಲ್ಲಿ ಆಸಕ್ತಿ ಬಂದಾಗ ಅದನ್ನು ಪ್ರೋತ್ಸಾಹಿಸಿದರು.
ಪ್ರ: ಅದೆಲ್ಲ ನಿಮ್ಮ ಹೆರೆಡಿಟಿಯಿಂದ ಬಂದದ್ದೇ?
ಉತ್ತರ: ಹೌದು; ತಂದೆಯಿಂದ ಅದು ಪ್ರೊಫೆಶನಲ್ (ವೃತ್ತಿಪರತೆ) ಲೆವೆಲ್ಲಿಗೆ ಹೋಯಿತು.
ಪ್ರ: ಅಜ್ಜ (ತಂದೆಯ ತಂದೆ) ಸಂಗೀತದಲ್ಲಿ ಇದ್ದರಾ?
ಉತ್ತರ: ಸಂಗೀತದಲ್ಲಿ ಇರಲಿಲ್ಲ. ಹೆಡ್ಮಾಸ್ಟರ್ ಆಗಿದ್ದರು. ಆದರೆ ಅವರಿಗೆ ಆಸಕ್ತಿ ಇತ್ತು. ಭಜನೆ, ದಾಸರಪದಗಳು, ಸ್ವರ, ಲಯದ ಬಗ್ಗೆ ಸ್ವಲ್ಪ ಜ್ಞಾನ ಇತ್ತು. ಅಜ್ಜಿಗೂ ಇತ್ತು. ಅವರು ಹಾಡುತ್ತಿದ್ದರು. ಹೀಗೆ, ಇದು ನಮ್ಮ ತಂದೆಯವರ ಹಿನ್ನೆಲೆ. ಆಮೇಲೆ ಧಾರವಾಡದಲ್ಲಿ ಚಿಕ್ಕಂದಿನಿಂದ ಅವರ ಗೆಳೆಯರು ಇದ್ದರು. ಅವರಲ್ಲಿ ಒಬ್ಬರು ಮಾಧವ ಗುಡಿಜೀ. ಗುಡಿಯವರು ತಂದೆಗೆ ತುಂಬಾ ಆಪ್ತ ಗೆಳೆಯರು. ಇನ್ನು ಅವರಿಗೆ ಕೊಳಲಿಗೆ (ಬಾನ್ಸುರಿ) ಯಾರೂ ಗುರು ಇಲ್ಲ. ಸ್ವಯಂಪ್ರೇರಿತರಾಗಿಯೇ ಕಲಿತದ್ದು; ಬರೇ ರೇಡಿಯೋದಲ್ಲಿ ಕೇಳಿ ಕಲಿತದ್ದು.
ಪ್ರ: ಮಾಧವ ಗುಡಿ ಅವರಿಗೆ ಭೀಮಸೇನ ಜೋಶಿ ಗುರುಗಳಲ್ಲವೆ?
ಉತ್ತರ: ಅವರು ಮುಂಚೆ ಬಸವರಾಜ ರಾಜಗುರುಜೀ ಅವರ ಹತ್ತಿರವೂ ಕಲಿತಿದ್ದರು. ಅವರು ಮತ್ತು ಸೋಮನಾಥ ಮರ್ಡೂರ್ಜೀ ರಾಜಗುರು ಅವರ ಶಿ?ರಾಗಿದ್ದರು. ಹಾಗಾಗಿ ರಾಜಗುರು ಅವರ ಜೊತೆಗೂ ತಂದೆಯವರ ಒಡನಾಟ ಪ್ರಾರಂಭವಾಗಿತ್ತು. ಗುಡಿಯವರೇ ಇವರನ್ನು ಅವರ ಬಳಿಗೆ ಕರೆದುಕೊಂಡು ಹೋಗಿದ್ದರು. ಈ ಮಧ್ಯೆ ಅಪ್ಪ ಹಾರ್ಮೋನಿಯಂ ನುಡಿಸುವುದಕ್ಕೆ ಪ್ರಾರಂಭ ಮಾಡಿದರು. ರಾಜಗುರು, ಮಲ್ಲಿಕಾರ್ಜುನ ಮನ್ಸೂರ್, ಭೀಮಸೇನ ಜೋಶಿ, ಜಿತೇಂದ್ರ ಅಭಿ?ಕಿ, ರಾಜನ್- ಸಾಜನ್ ಮಿಶ್ರ ಹೀಗೆ ಎಲ್ಲ ದಿಗ್ಗಜರ ಜೊತೆಗೂ ಹಾರ್ಮೋನಿಯಂ ನುಡಿಸಿದರು. ಸುಮಾರು ೨೦-೨೫ ವರು? ಹಾರ್ಮೋನಿಯಂ ವಾದಕರಾಗಿಯೇ ಇದ್ದರು. ಆದರೆ ಎಲ್ಲೋ ಒಂದು ಕಡೆ ಅವರಿಗೆ ಹಾರ್ಮೋನಿಯಂ ಎಂದರೆ ತಾನು ಬರೇ ಪಕ್ಕವಾದ್ಯದವರ ತರಹ ಆಗಿಬಿಡುತ್ತೇನೆ. ಅದು ಬೇಡ; ಮೈನ್ಸ್ಟ್ರೀಮ್ (ಮುಖ್ಯಧಾರೆ)ಗೆ ಹೋಗೋಣ ಅನ್ನಿಸಿತು. ಯಾವುದೋ ಒಂದು ಜಾತ್ರೆಗೆ, ಬಹುಶಃ ಶಿರ್ಸಿ ಮಾರಿಕಾಂಬಾ ಜಾತ್ರೆಗೆ, ಹೋದಾಗ ಅಲ್ಲೊಂದು ಕೊಳಲು ಖರೀದಿ ಮಾಡಿದರು. ಆಮೇಲೆ ಪನ್ನಾಲಾಲ್ ಘೋಷ್ ಅವರ ರೆಕಾರ್ಡಿಂಗ್ಸ್ ಎಲ್ಲ ಕೇಳುತ್ತಿದ್ದರು; ಅವರು ಹೀಗೆ ನುಡಿಸಿರಬಹುದು ಎಂದು ಅದನ್ನು ನುಡಿಸಿದರು. ಇನ್ನು ಎಲ್ಲ ಸಂಗೀತಗಾರರ ಜೊತೆಗೆ ಹಾರ್ಮೋನಿಯಂ ನುಡಿಸಿದ್ದರಿಂದ ಆ ಗಾಯನ ಅವರಲ್ಲಿ ಅಡಗಿತ್ತು. ಆ ಸಂಪೂರ್ಣ ಗಾಯಕಿ (ಶೈಲಿ) ಅವರ ಕೊಳಲಿನ (ಬಾನ್ಸುರಿ) ಮೂಲಕ ಬಂತು. ಇನ್ನೊಂದು ವಿಶೇ?ವೆಂದರೆ, ಅವರು ಧಾರವಾಡದಲ್ಲಿದ್ದಾಗ ಗ್ವಾಲಿಯರ್ ಘರಾಣಾದ ಪಂಡಿತ್ ನಾರಾಯಣರಾವ್ ಮುಜುಮ್ದಾರ್ ಎಂಬವರ ಹತ್ತಿರ ಸ್ವಲ್ಪ ದಿನ ಗಾಯನವನ್ನು ಕಲಿತರು.
ಪ್ರ: ಬಸವರಾಜ ರಾಜಗುರು ಅವರಲ್ಲಿ ಕಲಿಯಲಿಲ್ಲವೆ?
ಉತ್ತರ: ಇಲ್ಲ; ನಮ್ಮ ತಂದೆಗೆ ಜಾಸ್ತಿ ಪ್ರಭಾವ ಇದ್ದದ್ದು ಭೀಮಸೇನ ಜೋಶಿ ಅವರದ್ದು. ೧೯೮೦ರ ದಶಕದಲ್ಲಿ ದೆಹಲಿಯಲ್ಲಿದ್ದಾಗ ಔಪಚಾರಿಕವಾಗಿ ’ಗಂಡಾಬಂಧ’ ಸೆರಮನಿ(ಆಚರಣೆ)ಯನ್ನು ಮಾಡಿ ಜೋಶಿಜೀ ಅವರ ಶಿಷ್ಯತ್ವವನ್ನು ಕೂಡ ಸ್ವೀಕರಿಸಿದರು. ಅದು ಭೀಮಸೇನ ಜೋಶಿ ವೃತ್ತಿಜೀವನದ ಬಹುತೇಕ ಕೊನೆಯಂತಿತ್ತು. ಆದರೆ ಮಾನಸಿಕವಾಗಿ ಅವರನ್ನು ಗುರುವೆಂದು ಸ್ವೀಕರಿಸಿ ಸಂಪೂರ್ಣವಾಗಿ ಕಿರಾಣಾ ಘರಾಣಾ ಶೈಲಿಯನ್ನು ಕೊಳಲಿನಲ್ಲಿ ನುಡಿಸಲು ಆರಂಭಿಸಿದರು; ಅದು ಅವರ ಸ್ವಂತ ಪ್ರಯತ್ನ.
ಪ್ರ: ಹಾರ್ಮೋನಿಯಂ ಅವರು ಯಾರಲ್ಲಿ ಕಲಿತದ್ದು?
ಉತ್ತರ: ಯಾರಲ್ಲೂ ಕಲಿಯಲಿಲ್ಲ. ಅವರೇ ಕಲಿತುಕೊಂಡದ್ದು. ಅದ್ಭುತವಾಗಿ ನುಡಿಸುತ್ತಿದ್ದರು. ಕಿಶೋರಿ ಅಮೋನ್ಕರ್ ಅವರ ಜೊತೆಗೆ, ಜಸ್ರಾಜ್ ಅವರ ಜೊತೆಗೆ, ಮಾತ್ರವಲ್ಲ; ಜಾಕೀರ್ ಹುಸೇನ್ ಅವರ ಜೊತೆಗೆ ಲೆಹರಾ ಕೂಡ ನುಡಿಸುತ್ತಿದ್ದರು. ಅ?ರಮಟ್ಟಿಗೆ ಅವರಿಗೆ ಅದರಲ್ಲಿ ಪಾಂಡಿತ್ಯವಿತ್ತು. ಆದರೆ ಅವರಿಗೆ ಹಾರ್ಮೋನಿಯಂ ಎಂದರೆ ಅದರಲ್ಲಿ ತಾನು ಕೊನೆಯವರೆಗೂ ಪಕ್ಕವಾದ್ಯ ಕಲಾವಿದ (ಅಕಂಪನಿಸ್ಟ್)ನಾಗಿಯೇ ಉಳಿದುಬಿಡುತ್ತೇನೆ; ಅದು ಬೇಡ. ತನ್ನಲ್ಲಿರುವ ಸಂಗೀತ ಹೊರಗೆ ಹಾಕಬೇಕೆಂದರೆ ಯಾವುದೋ ಒಂದು ಮಾಧ್ಯಮ ಬೇಕು ಎಂದೆನಿಸಿ ಕೊಳಲನ್ನು ಆರಿಸಿಕೊಂಡರು. ಈ ನಡುವೆ ಅವರಿಗೆ ಆಕಾಶವಾಣಿಯಲ್ಲಿ ಅನೌನ್ಸರ್ ಹುದ್ದೆಯ ಕೆಲಸ ಸಿಕ್ಕಿತು. ಅನೌನ್ಸರ್ ಆಗಿದ್ದಾಗ ಅವರಿಗೆ ಒಂದು ಅನುಕೂಲ ಏನಾಯಿತೆಂದರೆ ಅವರೇ ಮೊದಲಾಗಿ ಕೇಳಬಹುದಿತ್ತು; ಹಾಗೆ ಎಲ್ಲ ದಿಗ್ಗಜ ಸಂಗೀತಗಾರರ ಎಲ್ಪಿಗಳನ್ನು ಕೇಳಿ ಅವರಿಂದ ಕಲಿತರು.
ಪ್ರ: ಎಲ್ಲಿ, ಧಾರವಾಡದಲ್ಲಾ?
ಉತ್ತರ: ಹೌದು, ಅನೌನ್ಸರ್ ಆಗಿ ಸೇರಿದ್ದು ಧಾರವಾಡದಲ್ಲೇ. ಆಮೇಲೆ ಯುಪಿಎಸ್ಸಿ (ಕೇಂದ್ರ ಲೋಕಸೇವಾ ಆಯೋಗ) ಪರೀಕ್ಷೆ ಬರೆದು ಪ್ರೋಗ್ರಾಂ ಎಕ್ಸಿಕ್ಯೂಟಿವ್ ಆದರು. ಆಗ ಅವರಿಗೆ ೧೯೭೫ರಲ್ಲಿ ಹೈದರಾಬಾದ್ಗೆ ವರ್ಗವಾಯಿತು. ಹೈದರಾಬಾದ್ನಲ್ಲಿ ಒಂದು ವ? ಇದ್ದರು. ಅಲ್ಲಿಂದ ವರ್ಗವಾಗಿ ಗೋವಾಕ್ಕೆ ಹೋದರು. ಅಲ್ಲಿ, ಪಣಜಿಯಲ್ಲಿ ಸುಮಾರು ಆರು ವ? ಇದ್ದರು. ನಾನು ಹುಟ್ಟಿದ್ದು ೧೯೭೩ರಲ್ಲಿ ಪಣಜಿಯಲ್ಲಿದ್ದಾಗ. ಅವರ ಕೊಳಲಿನ ಪ್ರಯತ್ನ ನಡೆದೇ ಇತ್ತು. ಆದರೆ ಅವರು ಎಂದೂ ಆಕಾಶವಾಣಿಯ ನಿಲಯಕಲಾವಿದ (ಸ್ಟಾಫ್ ಆರ್ಟಿಸ್ಟ್) ಆಗಿರಲಿಲ್ಲ. ಆಡಳಿತ ವಿಭಾಗದಲ್ಲಿದ್ದರು. ನಿಲಯಕಲಾವಿದರು ಬೇರೆ ಇರುತ್ತಿದ್ದರು. ಆದರೆ ಆ ಇಬ್ಬರನ್ನೂ (ಆಡಳಿತ ವಿಭಾಗ ಮತ್ತು ನಿಲಯಕಲಾವಿದರು) ಬ್ಯಾಲೆನ್ಸ್ ಮಾಡುತ್ತಿದ್ದವರು ಅವರು ಮಾತ್ರ. ಆಡಳಿತ ವಿಭಾಗದಲ್ಲಿ ಕೆಲಸ ಮಾಡುವುದು, ಸ್ಟುಡಿಯೋದಲ್ಲಿ ಯಾವುದಾದರೂ ರೆಕಾರ್ಡಿಂಗ್ ಬಂದರೆ ಮಧ್ಯದಲ್ಲಿ ಹೋಗಿ ಬಾನ್ಸುರಿ ನುಡಿಸಿ ಬರುವುದು. ಯಾರಾದರೂ ದಿಗ್ಗಜ ಕಲಾವಿದರು ಬಂದಿದ್ದರೆ ಹಾರ್ಮೋನಿಯಂ ಸಾಥ್ ನುಡಿಸುವುದು; ಗೋವಾದಲ್ಲಿ ಆ ರೀತಿಯಲ್ಲಿ ಅವರ ಸಂಗೀತ ಪಯಣ ಸಾಗುತ್ತಿತ್ತು. ಜೊತೆಗೆ ಅವರೊಬ್ಬ ಕಂಪೋಸರ್ (ಸಂಗೀತ ಸಂಯೋಜಕ) ಕೂಡ ಆದರು. ಮರಾಠಿ ಮತ್ತು ಅನೇಕ ಕೊಂಕಣಿ ಗೀತೆಗಳಿಗೆ ಸ್ವರಸಂಯೋಜನೆ ಮಾಡಿದರು. ಅವು ಇವತ್ತಿಗೂ ಆಕಾಶವಾಣಿ ಪಣಜಿ ಕೇಂದ್ರದಿಂದ ಪ್ರಸಾರವಾಗುತ್ತಿವೆ. ಗೋವಾದಲ್ಲಿ ೧೯೮೧ರ ವರೆಗೆ ಇದ್ದರು. ಆಗ ಅವರಿಗೆ ಗೋವಾದ ಸಂಬಂಧವಿದ್ದ ಮಂಗೇಶ್ಕರ್ ಫ್ಯಾಮಿಲಿ, ಅಭಿ?ಕಿ ಫ್ಯಾಮಿಲಿ, ಅಮೋನ್ಕರ್ ಫ್ಯಾಮಿಲಿ ಅವರದೆಲ್ಲ ಪರಿಚಯವಾಯಿತು. ಅಲ್ಲಿ ಸಂತವಾಣಿ, ಅಭಂಗವಾಣಿ ಮುಂತಾಗಿ ಮರಾಠಿ ಪ್ರಭಾವ ತಂದೆಯವರನ್ನು ಸಂಪೂರ್ಣವಾಗಿ ಆವರಿಸಿಕೊಂಡಿತ್ತು. ಅವರು ಸ್ವರಸಂಯೋಜನೆ ಮಾಡಿರುವ ಅನೇಕ ಕನ್ನಡ ದಾಸರಪದಗಳ ಮೇಲೂ ಆ ಪ್ರಭಾವವನ್ನು ಕಾಣಬಹುದು. ವಯೋಲಿನ್ ಕ್ಲಾರಿಯೋನೆಟ್ ಮುಂತಾಗಿ ಅಲ್ಲಿದ್ದ ಪಾಶ್ಚಾತ್ಯ ವಾದ್ಯಗಳನ್ನು ಇಟ್ಟುಕೊಂಡು ಅವರು ಅನೇಕ ಕನ್ನಡ, ಮರಾಠಿ ಮತ್ತು ಕೊಂಕಣಿ ಭಾವಗೀತೆ- ಭಕ್ತಿಗೀತೆಗಳಿಗೂ ರಾಗಸಂಯೋಜನೆ ಮಾಡಿದರು. ಅದರಿಂದ ಪಾಶ್ಚಾತ್ಯ ಸಂಗೀತ ಹೇಗೆ, ಅದರಲ್ಲಿರುವ ಹಾರ್ಮನಿ ಹೇಗೆ – ಮುಂತಾಗಿ ಅವರಿಗೆ ಕಲಿಯಲು ಅವಕಾಶವಾಯಿತು.
ಪ್ರ: ಸಂಗೀತಗಾಯನವನ್ನು ಕೂಡ ಮಾಡುತ್ತಿದ್ದರು ಅಲ್ಲವೇ?
ಉತ್ತರ: ಅದ್ಭುತವಾಗಿ ಹಾಡುತ್ತಿದ್ದರು. ತಂದೆಯವರ ವಿಶೇ?ತೆ ಏನೆಂದರೆ, ಆಕಾಶವಾಣಿಯಲ್ಲಿ ಅವರು ಗಾಯನ ಮತ್ತು ಬಾನ್ಸುರಿ ಎರಡರಲ್ಲೂ ’ಎ’ ಗ್ರೇಡ್ ಕಲಾವಿದರು. ಬಹುಶಃ ಇಡೀ ಹಿಂದೂಸ್ಥಾನದಲ್ಲಿ ಅವರೊಬ್ಬರೇ ಎರಡರಲ್ಲೂ ’ಎ’ ಗ್ರೇಡ್ ಪಡೆದವರು. ರಾಷ್ಟ್ರೀಯ ಸಂಗೀತ ಕಾರ್ಯಕ್ರಮ ಸೇರಿದಂತೆ ಸಮರ್ಥವಾಗಿ ಗಾಯನ ಕಚೇರಿ ಕೊಟ್ಟಿದ್ದರು; ಬಾನ್ಸುರಿ ಕಚೇರಿಗಳನ್ನೂ ಕೊಟ್ಟಿದ್ದಾರೆ. ಟಿಪಿಕಲ್ ಕಿರಾಣಾ ಘರಾಣಾ ಶೈಲಿಯಲ್ಲಿ ಅದ್ಭುತವಾಗಿ ಮಾಡಿದ್ದಾರೆ. ನಾನು ನೋಡಿದಂತೆ ಎರಡನ್ನೂ ಸಕ್ಷಮವಾಗಿ ಮಾಡಬಲ್ಲವರಾಗಿದ್ದ ಕಲಾವಿದರು ಅವರೊಬ್ಬರೇ. ಚೆನ್ನಾಗಿ ಹಾಡುತ್ತಿದ್ದರು. ಅವರು ನಮಗೆ ಪಾಠ ಕೂಡ ಮಾಡಿದ್ದು ಹಾಗೆಯೇ. ಏನು ಹಾಡುತ್ತೇವೋ ಅದನ್ನು ನುಡಿಸಬೇಕು; ಅದು ಸಂಪೂರ್ಣ ಗಾಯಕಿ ಶೈಲಿ. ಅವರದ್ದು ಇನ್ನೊಂದು ಬಹಳ ಮುಖ್ಯವಾದ ಥಿಯರಿ ಎಂದರೆ ಕೊಳಲು ಯಾಕೆ ಗಾಯಕಿ ಪದ್ಧತಿಯನ್ನು ಅನುಸರಿಸಬೇಕು ಎಂಬುದು. ಏಕೆಂದರೆ ಪದಗಳು ಮತ್ತು ಸಾಹಿತ್ಯವನ್ನು ಬಿಟ್ಟರೆ ಗಾಯನಕ್ಕೆ ಏನೇನು ಬೇಕೋ ಎಲ್ಲವೂ ಕೊಳಲಿನಲ್ಲಿದೆ. ಹಾಗಾಗಿ ಗಾಯಕಿ ಶೈಲಿಯನ್ನು ಬಿಟ್ಟು ತಂತ್ರಕಾರಿ ಶೈಲಿಯನ್ನು ಅಳವಡಿಸುವ ಆವಶ್ಯಕತೆ ಏನಿದೆ ಎಂಬುದು ಅವರ ಪ್ರಶ್ನೆ. ಈಗ ನಾವು ಸೂಕ್ಷ್ಮವಾಗಿ ಗಮನಿಸಿದರೆ ಪಂಡಿತ್ ಹರಿಪ್ರಸಾದ್ ಚೌರಾಸಿಯಾಜೀ ನುಡಿಸುವಂತಹ ಕೊಳಲು ತಂತ್ರಕಾರಿ ಶೈಲಿಯದ್ದು. ಸಿತಾರ್ನಲ್ಲಿ, ಸಂತೂರ್ನಲ್ಲಿ ಹೇಗೆ ಒಂದು ರಾಗವನ್ನು ಪ್ರಸ್ತುತ ಪಡಿಸುತ್ತಾರೋ ಹಾಗೆ ಅವರು ಕೊಳಲಿನಲ್ಲಿ ಪ್ರಸ್ತುತ ಪಡಿಸುವುದು. ಏಕೆಂದರೆ ಅವರು ಕಲಿತಿರುವುದೇ ಸಿತಾರ್ ವಾದಕರಾದ ಅನ್ನಪೂರ್ಣಾ ದೇವಿಯವರ ಹತ್ತಿರ. ಆದರೆ ನಮ್ಮ ತಂದೆಯವರ ಬೆಳವಣಿಗೆಯೆಲ್ಲ ಗಾಯಕಿ ಪದ್ಧತಿಯಲ್ಲಿ ಆಯಿತು ಮತ್ತು ಅವರು ಅನುಸರಿಸುತ್ತಿದ್ದದ್ದು ಪನ್ನಾಲಾಲ್ ಘೋಷ್ ಅವರನ್ನು. ಘೋಷ್ ಅವರು ಬಹುತೇಕ ಗಾಯಕಿ ಪದ್ಧತಿಯಲ್ಲೇ ಇದ್ದವರು. ಅವರು ತಂದೆಯವರ ಆದರ್ಶವಾಗಿದ್ದರು. ಆ ಪದ್ಧತಿಯನ್ನು ಕರ್ನಾಟಕದಲ್ಲಿ ಮೊತ್ತಮೊದಲ ಬಾರಿಗೆ ಪರಿಚಯಿಸಿದ್ದು ನಮ್ಮ ತಂದೆ ಎಂದರೆ ತಪ್ಪಾಗುವುದಿಲ್ಲ.
ಪ್ರ: ಬಾನ್ಸುರಿಗೆ ಪನ್ನಾಲಾಲ್ ಘೋಷ್ ಅವರೇ ಮೂಲಪುರುಷರಾ?
ಉತ್ತರ: ಹೌದು, ಅವರೇ. ಏಕೆಂದರೆ ಅವರ ಹಿಂದಿನದ್ದು ನಮಗೆ ಯಾವುದೇ ಇತಿಹಾಸ ಗೊತ್ತಿಲ್ಲ. ಇರಬಹುದು. ಆದರೆ ಎಲ್ಲಿ ಕೂಡ (ದಾಖಲೆ) ಸಿಗುವುದಿಲ್ಲ. ಕೊಳಲಿಗೆ ಸಾಕಷ್ಟು ಹೊಸತನವನ್ನು ತಂದವರು ಅವರು. ಅಷ್ಟು ದೊಡ್ಡ ಗಾತ್ರದ ಕೊಳಲನ್ನು ತಂದದ್ದು, ಅದಕ್ಕೊಂದು ಹೆಚ್ಚುವರಿ ರಂಧ್ರ ಮಾಡಿದ್ದು ಅವರು; ಕೆಳಗಿನ ತೀವ್ರ ಮಧ್ಯಮದವರೆಗೂ ನುಡಿಸಲು ಸಾಧ್ಯವಾಗುವ ಹಾಗೆ ಮಾಡಿದರು. ಕೊಳಲಿಗೆ ಬೇಸಿಕ್ಸ್ ಬೇಕಾಗುವ ಟೆಕ್ನಿಕ್ಗಳನ್ನು ಅವರು ಸಿದ್ಧಪಡಿಸಿದರು.
ಪ್ರ: ಗುಡ್ಡಗಾಡು ಜನರ ಸಂಪರ್ಕ ಇಟ್ಟುಕೊಂಡು ಅವರಿಂದ ಕೊಳಲನ್ನು ಪಡೆದುಕೊಂಡರಾ?
ಉತ್ತರ: ಅವರ ತಮ್ಮನ ಮಗ ನಯನ್ ಘೋ? ಅಂತ ಇದ್ದಾರೆ. ಅವರು ಹೇಳಿದ್ದು – ಎಲ್ಲೋ ಯಾವತ್ತೋ ಒಂದು ದಿವಸ ಇವತ್ತಿನ ಬಾಂಗ್ಲಾದೇಶದಲ್ಲಿ ಹರಿಯುತ್ತಾ ಇದ್ದ ನದಿಯಲ್ಲಿ ಆ (ದೊಡ್ಡ) ಅಳತೆಯ ಕೊಳಲು ಪನ್ನಾಲಾಲ್ ಅವರಿಗೆ ಸಿಕ್ಕಿತಂತೆ. ಹಿಂದೆ ಅವರು ಚಿಕ್ಕ ಕೊಳಲನ್ನು ನುಡಿಸುತ್ತಿದ್ದರು; ಹರಿಯುವ ನೀರಿನಲ್ಲಿ ಬಂದ ಆ ದೊಡ್ಡ ಗಾತ್ರದ ಕೊಳಲಿನಲ್ಲಿ ನುಡಿಸಿದರೆ ಚೆನ್ನಾಗಿರುತ್ತದೆ ಎಂದು ಅವರಿಗೆ ಅನ್ನಿಸಿತು. ಅದನ್ನು ಮುಂದುವರಿಸಿ ಆಮೇಲೆ ಅಲ್ಲಾವುದ್ದೀನ್ ಖಾನ್ ಅವರ ಬಳಿ ಸಂಗೀತ ಕಲಿತರು. ಅಲ್ಲಾವುದ್ದೀನ್ ಅವರದ್ದು ಮೈಹರ್ ಘರಾಣಾ. ಅವರ ಬಳಿ ಐದು ರತ್ನಗಳಿದ್ದವು: ರವಿಶಂಕರ್, ಅಲಿಅಕ್ಬರ್ ಖಾನ್, ಅನ್ನಪೂರ್ಣಾ ದೇವಿ, ನಿಖಿಲ್ ಬ್ಯಾನರ್ಜಿ ಹಾಗೂ ಪನ್ನಾಲಾಲ್ ಘೋಷ್. ಉಳಿದವರು ಸಿತಾರ್, ಸರೋದ್, ಸುರ್ಬಹಾರ್ ಎಲ್ಲ ನುಡಿಸುತ್ತಿದ್ದರು. ಘೋ? ಒಬ್ಬರೇ ಬಾನ್ಸುರಿ ವಾದಕರು.
ನಮ್ಮ ತಂದೆ ಕಿರಾಣಾ ಘರಾಣಾಕ್ಕೆ ಬರಲು ಭೀಮಸೇನ ಜೋಶಿ ಅವರೇ ಕಾರಣ. ನಮ್ಮ ತಂದೆ ಕೊಳಲನ್ನು ಮುಂದುವರಿಸಿಕೊಂಡು ಬಂದರು. ಜೊತೆಗೆ ಕೊಳಲಿನಲ್ಲಿ ಅನೇಕ ಪ್ರಯೋಗಗಳನ್ನೂ ಮಾಡಿದರು.
ಪ್ರ: ಆದರೆ ಕರ್ನಾಟಕ ಸಂಗೀತದಲ್ಲಿ ಕೊಳಲು ಬಹಳ ಹಿಂದಿನಿಂದಲೂ ಇತ್ತಲ್ಲಾ?
ಉತ್ತರ: ಇತ್ತು. ಆದರೆ ಕೊಳಲು ಸಿಗಬೇಕಲ್ಲ! ಎಲ್ಲ ಕಡೆ ಸಿಗುತ್ತಿರಲಿಲ್ಲ. ಕರ್ನಾಟಕ ಸಂಗೀತದ ಕೊಳಲು ಎಂದರೆ, ಕೇರಳದಲ್ಲಿ ಒಬ್ಬರು ಶಂಕರಲಿಂಗಂ ಪಿಳ್ಳೈ ಅಂತ ಇದ್ದರು. ಅನಂತರ ಅವರು ತಮಿಳುನಾಡಿನಲ್ಲಿ ನೆಲಸಿದರು. ಅವರು ಹಿಂದೂಸ್ತಾನಿ ಕೊಳಲು ಕೂಡ ಮಾಡುತ್ತಿದ್ದರು. ಆದರೆ ಸ್ವರಸ್ಥಾನ, ನಮಗೆ ಬೇಕಾದ ನಾದ ಬರುತ್ತಿರಲಿಲ್ಲ. ಪದ್ಧತಿಗಳು ಬೇರೆ ಇರುವುದರಿಂದ ಬೇರೆಬೇರೆ ಥರ ಇರುತ್ತದೆ. ತಂದೆಯವರೂ ಸ್ವತಃ ಕೊಳಲು ಮಾಡುತ್ತಿದ್ದರು. ಆಮೇಲೆ ಅವರಿಗೆ ಸಿರ್ಸಿ ಹತ್ತಿರ ಕೊಳಲು ಸಿಗುತ್ತದೆಂದು ಗೊತ್ತಾಯಿತು. ೧೯೭೦ರ ದಶಕದಲ್ಲಿ ಆ ಬೆಲ್ಟಲ್ಲಿ ಅನೇಕ ಜನ ಕೊಳಲು (ಬಾನ್ಸುರಿ) ಮಾಡಲು ಪ್ರಾರಂಭಿಸಿದ್ದರು. ಅದರಲ್ಲಿ ಎಂ.ವಿ. ಹೆಗಡೆ ಇದ್ದರು. ಅನಂತರ ಸಾಗರ ಸಮೀಪದ ಮೋಹನ್ ಚಿತ್ತರಗಿ ಎಂಬವರು; ಅವರು ಕೂಡ ಬ್ರಿಲಿಯಂಟಾಗಿ ಕೊಳಲು ಮಾಡುತ್ತಿದ್ದರು. ಅವರ ಜೊತೆಗೆ ಸೇರಿಕೊಂಡು ಬಿದಿರು ತರಿಸಿ, ಎಲ್ಲ ಸೇರಿ ಚರ್ಚಿಸಿ ಕೊಳಲು ತಯಾರು ಮಾಡುತ್ತಿದ್ದರು.
ಈ ಮಧ್ಯೆ ಕೊಳಲಿನಲ್ಲಿ ಒಂದು ಕೊರತೆ ಕಾಣಿಸಿತು. ಒಂದು ನಿರ್ದಿ? ಮೀಂಡ್ ಕೊಳಲಿನಲ್ಲಿ ಬರುತ್ತಿರಲಿಲ್ಲ. ಮಿಯಾ ಕೀ ಮಲ್ಹಾರ್ ಅಥವಾ ಶುದ್ಧಕಲ್ಯಾಣ್ ನುಡಿಸುವಾಗ ಒಂದು ಪರ್ಟಿಕ್ಯುಲರ್ ಜಾಗ ನುಡಿಸುವುದಕ್ಕೆ ಆಗುತ್ತಿರಲಿಲ್ಲ. ಅದಕ್ಕೆ ತಂದೆಯವರು ತುಂಬ ತಲೆಕೆಡಿಸಿಕೊಂಡು ತಮ್ಮದೇ ಪರಿಹಾರ ಕಂಡುಹಿಡಿದರು. ನೋಡಿ (ತೋರಿಸುತ್ತಾ) ಹಿಂದೂಸ್ತಾನಿ ಬಾನ್ಸುರಿಯಲ್ಲಿ ಸಾಲಾಗಿ ಆರು ರಂಧ್ರಗಳು ಮತ್ತು ಒಂದು ಊದುವ (ಬ್ಲೋಯಿಂಗ್) ರಂಧ್ರ ಇತ್ತು. ಪನ್ನಾಲಾಲ್ ಘೋ? ಅವರು ಮತ್ತೊಂದು ರಂಧ್ರವನ್ನು ಸೇರಿಸಿದರು. ಅದರಿಂದಾಗಿ ಹೆಚ್ಚುವರಿಯಾಗಿ ಕೆಳಗಡೆ ಮಧ್ಯಮದ್ದು ಒಂದು ಸ್ವರ ಸಿಗುವಂತಾಯಿತು. ಅದರ ಮೂಲಕ ಯಮನ್ ಅಂತಹ ತೀವ್ರಮಧ್ಯಮ ಬರುವಂತಹ ಎ? ರಾಗಗಳನ್ನು ನುಡಿಸಲು ಪ್ರಾರಂಭಿಸಿದರು. ಇದು ಪನ್ನಾಲಾಲ್ ಘೋ? ಅವರು ಮಾಡಿದ ಬದಲಾವಣೆ. ಅದಾದ ಮೇಲೆ ನಮ್ಮ ತಂದೆ ಪಂಚಮದ ಮೀಂಡ್ ಬರುವುದಿಲ್ಲ; ಕಟ್ ಆಗುತ್ತದೆ; ಕಂಟಿನ್ಯೂಯಿಟಿ ಇರುವುದಿಲ್ಲ;
ವೆಂಕಟೇಶ್ ಗೋಡ್ಖಿಂಡಿ ಅದಕ್ಕಾಗಿ ಇನ್ನೊಂದು ರಂಧ್ರ ಹಾಕಿದರೆ ಪಂಚಮ ಬರುತ್ತದೆ; ಆದರೆ ನುಡಿಸಲು ಆಗುವುದಿಲ್ಲ ಎಂದು ಅದಕ್ಕಾಗಿ ಹೆಬ್ಬೆರಳಿಗೆ ಸಿಗುವಂತೆ ರಂಧ್ರ ಮಾಡಿದರು. ಅದರಿಂದ ಒಂದು ಸಂಪೂರ್ಣ ಸಪ್ತಕ ನಮಗೆ ಕಂಟಿನ್ಯುಯಸ್ ಆಗಿ (ಕಟ್ ಆಗದೆ) ಸಿಗುತ್ತದೆ. ಆದ್ದರಿಂದ ಇದು ನನ್ನ ಪ್ರಕಾರ, ಬಾನ್ಸುರಿಯಲ್ಲಿ ಬಹಳ ಮಹತ್ತ್ವದ ಸಂಶೋಧನೆ. ಇದರಿಂದ ಪಂಚಮ ಮತ್ತು ಮಧ್ಯ ಸಪ್ತಕದ ಪಂಚಮದವರೆಗೂ ಮೀಂಡ್ ಸಿಗುತ್ತದೆ. ಶುದ್ಧಕಲ್ಯಾಣ್ ನುಡಿಸುವಾಗ ಅದರಲ್ಲಿ ’ಪಾಗಾ’ ಎಂಬ ಮೀಂಡೇ ಮುಖ್ಯ. ತಂದೆಯವರು ಕಂಡುಹಿಡಿದ ರಂಧ್ರ ಇಲ್ಲದಿದ್ದರೆ ಅದು ಕಟ್ ಆಗುತ್ತದೆ.
ಹೊಸ ರಂಧ್ರದ ಕಾರಣದಿಂದ ಬಾನ್ಸುರಿಯನ್ನು ಹಿಡಿದುಕೊಳ್ಳುವ ವಿಧಾನವನ್ನು ಕೂಡ ಬದಲಿಸಬೇಕಾಯಿತು. ಮುಂಚೆ ಅವರು ಕೊಳಲನ್ನು ಒಂದು ರೀತಿಯಲ್ಲಿ ಹಿಡಿದುಕೊಳ್ಳುತ್ತಿದ್ದರು. ಕೈ ಕುತ್ತಿಗೆ ಎಲ್ಲ ನೋವು ಬಂದು ಕುತ್ತಿಗೆ ಬಳಿ ಬಾತುಕೊಳ್ಳುತ್ತಿತ್ತು. ಆಮೇಲೆ ಯಾವುದೋ ಒಂದು ಸರ್ತಿ ಪನ್ನಾಲಾಲ್ ಅವರ ಫೊಟೋವನ್ನು ಸರಿಯಾಗಿ ನೋಡಿದಾಗ, ಅವರು ಕೊಳಲನ್ನು ಹಾಗೆ ಹಿಡಿದಿಲ್ಲ; ಬೇರೆ ರೀತಿ ಹಿಡಿದಿದ್ದಾರೆ ಎಂಬ ಅರಿವಾಯಿತು. ಅದರಲ್ಲಿ ತಿದ್ದುಪಡಿ ಮಾಡಿಕೊಂಡರು. ಅದಕ್ಕೊಂದು ಆರುತಿಂಗಳು ಹಿಡಿಯಿತು. ಹೀಗೆ ಸುಮಾರು ೩೫-೪೦ ವರ್ಷ ಅವರ ಸಂಶೋಧನೆ ನಡೆಯುತ್ತಲೇ ಇತ್ತು. ನನಗೆ ಅನುಕೂಲ ಏನಾಯಿತೆಂದರೆ, ಟ್ರಯಲ್ ಎಂಡ್ ಎರರ್ ವಿಧಾನದಲ್ಲಿ ಅವರು ಸಂಶೋಧನೆ ಮಾಡಿ ಏನನ್ನು ಕಂಡುಕೊಂಡರೊ ಅದರಲ್ಲಿ ಶ್ರೇಷ್ಠ ಎಂದು ಗೊತ್ತಾದದ್ದನ್ನು ನನಗೆ ಹೇಳಿಕೊಟ್ಟರು. ಹೀಗೆ ಅವರ ಮೂವತ್ತು ವರು?ಗಳ ಸಂಶೋಧನೆ ಹತ್ತೇ ವರ್ಷದಲ್ಲಿ ನನಗೆ ಸಿಕ್ಕಿಹೋಯಿತು. ಅದಲ್ಲದೆ ಅವರಿಗೆ ಈ ಮಾಧ್ಯಮದಲ್ಲಿ ಸಾಧನೆ ಮಾಡಲು ತುಂಬ ಕಷ್ಟವಾಗಿತ್ತು. ಏಕೆಂದರೆ ಅವರಿಗೆ ಆಗಲೇ ೩೫ ವರ್ಷ ದಾಟಿತ್ತು. ೩೫ ವರ್ಷವಾದ ಮೇಲೆ ಬೆರಳುಗಳು ಹೇಳಿದ ಮಾತು ಕೇಳುವುದಿಲ್ಲ; ಸಣ್ಣದಿರುವಾಗಲೇ ಅಭ್ಯಾಸ ಮಾಡಬೇಕು; ತುಂಬ ಕಷ್ಟಪಟ್ಟು, ಹಠಕ್ಕೆ ಬಿದ್ದು ಸಾಧಿಸಿದರು. ಈಗ ಹರಿಪ್ರಸಾದ್ ಚೌರಾಸಿಯಾ ಅವರ ಕೊಳಲಿನಲ್ಲಿ ಹೆಚ್ಚುವರಿ ಎರಡು ರಂಧ್ರಗಳಿಲ್ಲ. ಅಷ್ಟರಲ್ಲೇ ಅವರು ನುಡಿಸುವುದು. ಯಾವುದು ಬರುವುದಿಲ್ಲ ಅದನ್ನು ಅವರು ಬಿಟ್ಟಿದ್ದಾರೆ. ಆದರೆ ಬೇರೆ ಟೆಕ್ನಿಕ್ (ತಂತ್ರ)ಗಳನ್ನು ಅವರು ಅದ್ಭುತವಾಗಿ ಮಾಡಿಕೊಂಡಿದ್ದಾರೆ. ನಾಲಗೆಯನ್ನು ಬಳಸುವಂತಹ ಟೆಕ್ನಿಕ್ ಇರಬಹುದು; ಸಿತಾರ್ನಲ್ಲಿ ಝಾಲಾ ಎಂದು ಹೇಳುತ್ತಾರೆ ಅದು ಇರಬಹುದು; ಒಂದೇ ಸ್ವರವಾದರೂ ನಾಲಗೆಯಿಂದ ಸ್ವರವ್ಯತ್ಯಾಸ ತರುವುದು. ಅದನ್ನೆಲ್ಲ ಹರಿಜೀ ತುಂಬಾ ಮಾಡುತ್ತಾರೆ. ಅವೆಲ್ಲ ಅವರದೇ ಆವಿಷ್ಕಾರ ಎಂದರೂ ತಪ್ಪಾಗಲಾರದು. ಟೆಕ್ನಿಕ್ ಬಗ್ಗೆ, ಸೌಂಡ್ ಪ್ರೊಡಕ್ಷನ್ ಬಗ್ಗೆ ಪನ್ನಾಲಾಲ್ ಘೋಷ್ ಅವರು ಅಷ್ಟೊಂದು ಮಾಡಿರಲಿಲ್ಲ. ಇನ್ನು ಸ್ವರಶುದ್ಧತೆ ಅವೆಲ್ಲ ಹರಿಜೀ ಅವರದ್ದು ಅದ್ಭುತವಾದದ್ದು. ಅಪ್ಪ ಬಾನ್ಸುರಿಯ ರೆಕಾರ್ಡ್ಗಳನ್ನು ತುಂಬ ಕೇಳುತ್ತಿದ್ದರು ಮತ್ತು ಗಾಯಕರಾಗಿದ್ದ ಕಾರಣ ಸ್ವರದ ಮೇಲೆ ಅವರಿಗೆ ಸಹಜವಾಗಿ ಗಮನವಿತ್ತು. ಅದರಿಂದ ಅವರು ಬಹಳ ಶ್ರುತಿಶುದ್ಧವಾಗಿ ನುಡಿಸುತ್ತಿದ್ದರು. ಇನ್ನು ಗಾಯಕಿ ಪದ್ಧತಿಯಲ್ಲಿ ಎತ್ತಿದ ಕೈ. ಯಾರೂ ನುಡಿಸದಿದ್ದ ರಾಗಗಳನ್ನು ನುಡಿಸುತ್ತಿದ್ದರು. ಬಾನ್ಸುರಿಯಲ್ಲಿ ಅಸಾಧ್ಯವೆಂದು ಎಲ್ಲರೂ ಬಿಟ್ಟಿದ್ದ ಶುದ್ಧಕಲ್ಯಾಣ್ ನುಡಿಸಿದವರಲ್ಲಿ ನಮ್ಮ ತಂದೆ ಮೊತ್ತಮೊದಲಿಗರು. ಅದೇ ರೀತಿ ತೋಡಿ ರಾಗ. ಅನೇಕ ಘನರಾಗಗಳನ್ನು ಕೈಗೆ ತೆಗೆದುಕೊಂಡು ಸಾಧನೆಮಾಡಿ ನುಡಿಸಿದರು. ಮಿಯಾ ಕೀ ಮಲ್ಹಾರ್, ಗೌಡ್ಮಲ್ಹಾರ್ ಮುಂತಾಗಿ ಮಲ್ಹಾರದ ಅನೇಕ ಪ್ರಕಾರಗಳನ್ನು ನುಡಿಸುತ್ತಿದ್ದರು. ಅಂತಹ ಒಬ್ಬ ಗುರು ನನ್ನ ತಂದೆಯಾಗಿ ನನಗೆ ಸಿಕ್ಕಿದ್ದು ನನ್ನ ಅದೃ?; ಅವರ ಸಾಧನೆ ನನಗೆ ಅನಾಯಾಸವಾಗಿ ಸಿಕ್ಕಿತು.
ಪ್ರ: ನಿಮಗೆ ಸಂಗೀತಪಾಠ ಬೇಗ ಶುರುವಾಯಿತೆ?
ಉತ್ತರ: ಮೂರನೇ ವ?ದಲ್ಲಿ ನನ್ನ ಸಂಗೀತ ಕಲಿಕೆ ಪ್ರಾರಂಭವಾಯಿತು. ಆರನೇ ವಯಸ್ಸಿಗೆ ನಾನು ನನ್ನ ಮೊದಲ ಕಚೇರಿಯನ್ನು ಕೊಟ್ಟೆ. ಚಿಕ್ಕವನಿದ್ದಾಗಲೇ ಉದ್ದ ಕೊಳಲಿನಲ್ಲಿ ನುಡಿಸುತ್ತಿದ್ದೆ. ಹಂಸಧ್ವನಿ ಮತ್ತು ಮಾಲಕಂಸ್ ಈ ಎರಡು ರಾಗಗಳನ್ನು ೧೦-೧೫ ನಿಮಿ? ನುಡಿಸುವ? ಕಲಿತಿದ್ದೆ. ಅಲ್ಲಿಂದ ನನ್ನ ಪ್ರಯಾಣ ಪ್ರಾರಂಭವಾಯಿತು.
`ಫ್ಯೂಶನ್ ಕನ್ಫ್ಯೂಶನ್ ಅಲ್ಲ’
ಪಂಡಿತ್ ಪ್ರವೀಣ್ ಗೋಡ್ಖಿಂಡಿ ಅವರು ಫ್ಯೂಶನ್ ಸಂಗೀತದಲ್ಲೂ ತಮ್ಮನ್ನು ಬಹಳವಾಗಿ ತೊಡಗಿಸಿಕೊಂಡಿದ್ದಾರೆ; ಅದರಲ್ಲಿ ಬಹಳ? ಸಾಧಿಸಿದ್ದಾರೆ ಮತ್ತು ಅದರ ಓರ್ವ ಸಮರ್ಥಕರೂ ಆಗಿದ್ದಾರೆ. ಆ ಕುರಿತ ಅವರ ಕೆಲವು ಮಾತುಗಳು ಇಲ್ಲಿವೆ:
ಪ್ರಶ್ನೆ: ನಿಮ್ಮ ಸಂಗೀತದಲ್ಲಿ ಜುಗಲ್ಬಂದಿಯ ಜನಪ್ರಿಯತೆ ಏರುತ್ತಿದೆಯೇ?
ಉತ್ತರ: ಆಫ್ಕೋರ್ಸ್. ಜುಗಲ್ಬಂದಿಗೆ ಈಗ ಬಹಳ ಬೇಡಿಕೆ ಇದೆ. ಈಗ ನಾವು ಫ್ಯೂಶನ್ ಅಂತ ಏನು ಮಾಡಿದ್ದೇವೆ ಅದಕ್ಕೆ ಕೂಡ ತುಂಬಾ ಬೇಡಿಕೆ ಇದೆ.ಪ್ರ: ಫ್ಯೂಶನ್ಗಳ (ಪೂರ್ಣ ಪ್ರಮಾಣದ) ಕಾರ್ಯಕ್ರಮ ಆಗುತ್ತದಾ?
ಉ: ಹಾ! ಏನು ಸರ್, ನೀವು ಹೀಗೆ ಕೇಳುತ್ತೀರಾ? ಅದರ ಸಿಕ್ಕಾಪಟ್ಟೆ ಕಾರ್ಯಕ್ರಮಗಳು ಆಗುತ್ತಿವೆ; ಬೆಂಗಳೂರಿನಲ್ಲೂ ಬೇಕಾದಷ್ಟು ಆಗುತ್ತಿವೆ.ಪ್ರ: ಫ್ಯೂಶನ್ ಬಗ್ಗೆ ನೀವು ಏನು ಹೇಳುತ್ತೀರಿ? ಶಾಸ್ತ್ರೀಯ ಸಂಗೀತದವರು ಕೆಲವರು ಫ್ಯೂಶನ್ ಅಂದರೆ ಕನ್ಫ್ಯೂಶನ್ ಎಂದು ಹೇಳುತ್ತಾರಲ್ಲ?
ಉತ್ತರ: ಜುಗಲ್ಬಂದಿಯೂ ಒಂದು ಥರದ ಫ್ಯೂಶನ್. ಎರಡು ಬೇರೆಬೇರೆ ಪದಾರ್ಥಗಳನ್ನು ಒಟ್ಟಿಗೆ ಸೇರಿಸುವುದು ಫ್ಯೂಶನ್. ಕರ್ನಾಟಕಿ-ಹಿಂದೂಸ್ತಾನಿ, ಕರ್ನಾಟಕಿ ಒಂದು ವಾದ್ಯ, ಹಿಂದೂಸ್ತಾನಿಯ ಒಂದು ವಾದ್ಯ, ಪಕ್ಕವಾದ್ಯ, ಎರಡೂ ಒಟ್ಟಿಗೆ ಸೇರಿಸಿದರೆ ಫ್ಯೂಶನ್ ಆಗುತ್ತದಾ ಜುಗಲ್ಬಂದಿ ಆಗುತ್ತದಾ?ಪ್ರ: ಒಟ್ಟಿಗೆ ನುಡಿಸಿದರೆ ಫ್ಯೂಶನ್ ಆಗುತ್ತದಲ್ಲವೆ?
ಉತ್ತರ: ಅವರು ಒಟ್ಟಿಗೆ ತಾನೆ ನುಡಿಸುತ್ತಾರೆ? ಫ್ಯೂಶನ್ ತಾನೇ ಅದು? ನಿಮಗೆ ಇ? ಆಗುತ್ತದೋ ಇಲ್ಲವೋ? ನೀವು ಈವಾಗ ಯಾವುದೋ ಒಂದು ಪರಂಪರೆಯನ್ನು ಕೇಳಿಕೊಂಡು ಬಂದಿರುತ್ತೀರಿ; ಅದೇ ಇ?ವಾಗುತ್ತದೆ. ಫ್ಯೂಶನ್ ಪರಂಪರೆಯನ್ನೇ ಕೇಳಿಕೊಂಡು ಬಂದಂತಹ ತಲೆಮಾರಿಗೆ ನೀವು ಏನು ಹೇಳುತ್ತೀರಿ? ಅವರಿಗೆ ಅದೇ ಮುಖ್ಯ; ಅದೇ ಪರಂಪರೆ. ಪಾಶ್ಚಾತ್ಯವಾದ್ಯಗಳಾದ ಮ್ಯಾಂಡೋಲಿನ್, ವಯೋಲಿನ್, ಸಾಕ್ಸೋಫೋನ್, ಹಾರ್ಮೋನಿಯಂ – ಇವೆಲ್ಲದರ ಬಳಕೆ ಶಾಸ್ತ್ರೀಯ ಸಂಗೀತದಲ್ಲಿ ಪ್ರಾರಂಭವಾದದ್ದು ಗಮನಾರ್ಹ. ಮ್ಯಾಂಡೋಲಿನ್ ಶ್ರೀನಿವಾಸ್ ಅವರ ಮ್ಯಾಂಡೋಲಿನ್ ಆಗಲಿ, ಎಲ್. ಶಂಕರ್ ಅವರ ವಯೋಲಿನ್ ಆಗಲಿ ಕೇಳಿಕೊಂಡು ಬಂದವರಿಗೆ ಅವರು ನುಡಿಸಿರುವುದೇ ಶಾಸ್ತ್ರೀಯ ಸಂಗೀತ. ಹಾಗೇ ಫ್ಯೂಶನ್ನಿಗೆ ಯಾವುದೇ ಒಂದು ಡೆಫಿನಿ?ನ್ (ವ್ಯಾಖ್ಯೆ) ಅಂತ ಇಲ್ಲ. ನನ್ನ ಅನ್ನಿಸಿಕೆ ಏನೆಂದರೆ, ನೀವು ಯಾವುದೇ ಎರಡು ಪದಾರ್ಥಗಳನ್ನು ಸೇರಿಸಬೇಕೆಂದರೆ ಯಾವುದು ಎ? ಪ್ರಮಾಣದಲ್ಲಿರಬೇಕು ಎನ್ನುವುದು ಬೆರೆಸುವವನಿಗೆ ಗೊತ್ತಿರಬೇಕು. ಅದು ಮುಖ್ಯ. ಸಂಗೀತವೂ ಹಾಗೇ. ಈಗ ನಾನು ಮಾಡುವ ಫ್ಯೂಶನ್(ನೀವು ಕೇಳಿಲ್ಲವೆಂದು ಭಾವಿಸುತ್ತೇನೆ)ನಲ್ಲಿ ಹಿಂದೂಸ್ತಾನಿ ಸಂಗೀತವು ಶೇ. ೭೦ ಭಾಗ ಇರುತ್ತದೆ. ಇನ್ನು ಮಿಕ್ಕಿದ ಶೇ. ೩೦ರ? ಕರ್ನಾಟಕ ಸಂಗೀತ, ಜನಪದ, ಪಾಶ್ಚಾತ್ಯ ಜಾಝ್ ಸಂಗೀತ – ಎಲ್ಲ ಇರುತ್ತವೆ. ಆದರೆ ಎಲ್ಲವೂ ಅಥೆಂಟಿಕ್ ಇರುತ್ತವೆ. ಚಿತ್ರಗೀತೆ, ಭಾವಗೀತೆ, ಭಕ್ತಿಗೀತೆಗಳೂ ಇರುತ್ತವೆ – ಆ ರಾಗಕ್ಕೆ ಸಂಬಂಧಪಟ್ಟ ರಾಗವನ್ನು ಇಟ್ಟುಕೊಂಡು ಆ ರಾಗದಲ್ಲಿ ಏನು ಬೇಕು ಅದನ್ನು ಮಾಡುತ್ತೇನೆ. ಅದು ನನ್ನ ಪ್ರಕಾರ ಫ್ಯೂಶನ್ – ಜಸ್ಟಿಫೈಯೇಬಲ್. ಫ್ಯೂಶನ್ ಮಾಡುವವನಿಗೆ ಯಾವುದೋ ಒಂದು ಪ್ರಕಾರದ ಸಂಗೀತದ ೧೫-೨೦ ವ?ಗಳ ಕಲಿಕೆ ಇರಬೇಕು. ಒಂದು ಪದ್ಧತಿಯ ಶಾಸ್ತ್ರ ಸಂಪೂರ್ಣವಾಗಿ ಅಂದರೆ, ಕನಿ? ಒಂದು ಹಂತದವರೆಗಾದರೂ ಆತನಿಗೆ ಗೊತ್ತಿದ್ದರೆ ಬೇರೆ ಪ್ರಕಾರಗಳನ್ನು ಸೇರಿಸುವ ಅಧಿಕಾರ ಬರುತ್ತದೆ. ನಾನು ಮಾಡುವ ಫ್ಯೂಶನ್ನಲ್ಲಿ ರಾಗಕ್ಕೆ ಆದ್ಯತೆ, ಮೆಲಡಿ(ಮಾಧುರ್ಯ)ಗೆ ಪ್ರಾಶಸ್ತ್ಯ. ರಿದಂ (ಲಯ) ಅನಂತರ ಬರಬೇಕು.ಪ್ರ: ತುಂಬ ಜನ ರಿದಮ್ಮಿಗೆ ಜಾಸ್ತಿ ಪ್ರಾಮುಖ್ಯ ಕೊಡುತ್ತಾರಲ್ಲವೇ?
ಉತ್ತರ: ಹಾಗೇನಿಲ್ಲ; ಡಿಪೆಂಡ್ಸ್. ನೀವು ಯಾರದ್ದು ಕೇಳಿದ್ದೀರೋ ನನಗೆ ಗೊತ್ತಿಲ್ಲ. ಕರ್ನಾಟಕ ಸಂಗೀತದಿಂದ ಬಂದವರು ಕರ್ನಾಟಕಿಯನ್ನು ಮುಖ್ಯವಾಗಿ ಇಟ್ಟುಕೊಳ್ಳುತ್ತಾರೆ; ಹಿಂದೂಸ್ತಾನಿ ಕಮ್ಮಿ ತೆಗೆದುಕೊಳ್ಳುತ್ತಾರೆ. ಲಯವಾದ್ಯಗಾರರು ಫ್ಯೂಶನ್ ಮಾಡುವುದಾದರೆ ಆ ವಾದ್ಯಗಳಿಗೆ ಜಾಸ್ತಿ ಪ್ರಾಮುಖ್ಯ ಕೊಡುತ್ತಾರೆ. ಅದು ಆ ವ್ಯಕ್ತಿ ಅಥವಾ ಕಲಾವಿದನ ಆಸಕ್ತಿಯನ್ನು ಅವಲಂಬಿಸಿರುತ್ತದೆ. ಯಾರು ಮಾಡುತ್ತಾರೆ, ಅವರ ಯೋಚನೆಗಳೇನು ಎಂಬುದೆಲ್ಲ ಮುಖ್ಯವಾಗುತ್ತವೆ.ಪ್ರ: ಹಾಗಾದರೆ ಫ್ಯೂಶನ್ ಅಂದರೆ ಕನ್ಫ್ಯೂಶನ್ ಎಂದು ಸಾಮಾನ್ಯೀಕರಣ ಮಾಡುತ್ತಾರಲ್ಲ, ಅದು ತಪ್ಪು ಅಲ್ಲವೇ?
ಉತ್ತರ: ತಪ್ಪು, ಮಾಡಬಾರದು. ಅದು ಕನ್ಫ್ಯೂಶನ್ ಅಲ್ಲ. ಸರಿಯಾದ ರೀತಿಯಲ್ಲಿ ಮಾಡಿದರೆ ಅದೊಂದು ಸೌಂದರ್ಯವೇ ಹೌದು. ಈಗ ವಯಸ್ಸಾದವರು ಎಷ್ಟು ಜನ, “ನೌಷದ್, ಮದನ್ ಮೋಹನ್ಜೀ, ಸಿ. ರಾಮಚಂದ್ರ ಅಥವಾ ನಮ್ಮ ಕನ್ನಡದ ಜಿ.ಕೆ. ವೆಂಕಟೇಶ್ ಅವರ ಸಂಗೀತ ಎಷ್ಟು ಚೆನ್ನಾಗಿತ್ತು; ಹಳೆಯ ಚಿತ್ರಗೀತೆಗಳೆಲ್ಲ ಎಷ್ಟು ಚೆನ್ನಾಗಿದ್ದವು” ಎಂದು ಹೇಳುತ್ತಾರೆ. ಆದರೆ ಅವರೆಲ್ಲ ಮಾಡಿದ್ದೇನು? ಫ್ಯೂಶನ್ ಅಲ್ಲದೆ ಬೇರೇನೂ ಅಲ್ಲ. ಅವರು ಪಾಶ್ಚಾತ್ಯ ಸಂಗೀತವನ್ನು ಬಳಸಲಿಲ್ಲವಾ? ಗಿಟಾರ್ ಬಳಸಲಿಲ್ಲವಾ? ಡ್ರಮ್ಸ್ ಬಳಸಲಿಲ್ಲವಾ? – ಎಲ್ಲವನ್ನೂ ಬಳಸಿದ್ದಾರೆ. ಹಾಡು, ಹಾಡುವ ಪದ್ಧತಿ ಮತ್ತು ಭಾಷೆ ಮಾತ್ರ ಇಲ್ಲಿನದ್ದು ಇಟ್ಟುಕೊಂಡು, ಅದರ ಲೇಪನ ಆವಾಗಲೇನೇ ಸಂಪೂರ್ಣ ಸಮಕಾಲೀನ ಪಾಶ್ಚಾತ್ಯ ಇಟ್ಟಿದ್ದಾರೆ. ಅದನ್ನು ನೀವು ಮಾನದಂಡವಾಗಿ ಇಟ್ಟುಕೊಳ್ಳಬಹುದು. ಕೋಟ್ಯಂತರ ಜನ ಅದನ್ನು ಸ್ವೀಕಾರ ಮಾಡಿದ್ದಾರಲ್ಲವೆ?ಪ್ರ: ಅದನ್ನು ಯಾರೂ ಫ್ಯೂಶನ್ ಎನ್ನುವ ಹೆಸರಿನಲ್ಲಿ ಕರೆಯಲಿಲ್ಲ ಅಲ್ಲವೆ?
ಉತ್ತರ: ಯಾಕೆ ಕರೆಯಲಿಲ್ಲ? ಕರೆಯಬೇಕು. ಆವಾಗಲೇ ವಯಲಾನ್ಚೆಲ್ಲೋ ಬಳಕೆ ಮಾಡಿದ್ದಾರೆ. ಅಂತಹ ಅಪರೂಪದ ವಾದ್ಯಗಳನ್ನು ಬಳಸಿಕೊಂಡಿದ್ದಾರೆ. ಪಿಯಾನೋ, ಗಿಟಾರ್, ಟ್ರಂಪೆಟ್ಸ್ – ಈ ಎಲ್ಲ ಪಾಶ್ಚಾತ್ಯ ವಾದ್ಯಗಳನ್ನು ಬಳಸಿದ್ದಾರೆ. ಬಹುತೇಕ ಎಲ್ಲ ಹಾಡುಗಳಿಗೆ ಸ್ಯಾಕ್ಸೋಫೋನ್, ಕ್ಲಾರಿಯೋನೆಟ್ಗಳನ್ನು ಬಹಳ ಮುಖ್ಯವಾಗಿ ಬಳಸಿಕೊಂಡಿದ್ದಾರೆ. ಅಂದರೆ ಆವಾಗಲೇ ಫ್ಯೂಶನ್ ಆಯಿತಲ್ಲಾ! ಈಗ ಮಾಡುತ್ತಾ ಇರುವುದು ಮಾತ್ರ ತಪ್ಪು ಎನ್ನುವುದೇ? ಇದು ಸರಿಯಲ್ಲ. ಫ್ಯೂಶನ್ ಎಂದರೆ ಪ್ರಮಾಣ. ಆವಾಗ ಆ ಸಂಗೀತ ಯಾಕೆ ಯಶಸ್ವಿ ಆಯಿತು? ಈಗಲೂ ಯಾಕೆ ಅದು ಮೆಲೋಡಿಯಸ್ (ಮಧುರ) ಆಗಿ ಕೇಳುತ್ತದೆ? ಅವರು ಮಾಧುರ್ಯಕ್ಕೆ ಪ್ರಾಮುಖ್ಯ ಕೊಟ್ಟು, ಧ್ವನಿಗೆ, ಆ ಟ್ಯೂನಿಗೆ, ಆ ಸಾಹಿತ್ಯಕ್ಕೆ ಮಹತ್ತ್ವ ಕೊಟ್ಟು, ಉಳಿದ ಎಲ್ಲವನ್ನೂ ಕಮ್ಮಿ ಇಟ್ಟು ಮಾಡಿದ್ದಾರೆ. ಆದ್ದರಿಂದಲೆ ಅದರಲ್ಲಿ ನಮ್ಮತನ ಅಡಗಿದೆ. ಅದು ಫ್ಯೂಶನ್ನಿನ ಗುಣ; ಅದನ್ನು ಹೊರಗೆ ತರಬೇಕು. ನಿಮ್ಮ ಮಾಧ್ಯಮದ ಮೂಲಕ ಅದನ್ನು ನೀವು ಮುಂದೆ ತರಬೇಕು. ಫ್ಯೂಶನ್ ಅಂದರೆ ಹೀಗಿರಬೇಕು, ಈ ಥರ ಮಾಡಿ ಎಂದು ಯುವಕರಿಗೆ ಹೇಳಬೇಕು. ಅದನ್ನು ಹೇಳುವ ಬದಲು, ’ಇಲ್ಲಾ, ಫ್ಯೂಶನ್ ಮಾಡಲೇಬಾರದು’ ಎನ್ನಬಾರದು. ಶಾಸ್ತ್ರೀಯ ಸಂಗೀತವನ್ನು ಸಂಪೂರ್ಣವಾಗಿ ಕಲಿಯಬೇಕು. ಅದಕ್ಕೆ ಬೇರೆ ಮಾರ್ಗ ಇಲ್ಲ. ಕರ್ನಾಟಕಿ ಕಲಿಯಿರಿ ಅಥವಾ ಹಿಂದೂಸ್ತಾನಿ ಕಲಿಯಿರಿ. (ಕನಿಷ್ಠ) ೧೫ ವರ್ಷ ಒಬ್ಬ ಗುರುಗಳ ಹತ್ತಿರ ಕಲಿಯಿರಿ; ಆಮೇಲೆ ಫ್ಯೂಶನ್ ಮಾಡಿ.
ಇನ್ನೊಂದು ವಿಷಯ ಏನಾಗಿದೆ ಎಂದರೆ, ಅದರಲ್ಲಿ ಬರುವಷ್ಟು ದುಡ್ಡು ಶಾಸ್ತ್ರೀಯ ಸಂಗೀತ ಅಥವಾ ಜುಗಲ್ಬಂದಿಯಲ್ಲಿಲ್ಲ. ಅದಕ್ಕೆ ಬೇಕಾದಷ್ಟು ಪ್ರಾಯೋಜಕರು ಸಿಗುತ್ತಾರೆ. ಎಲ್ಲ ಕಾರ್ಪೋರೇಟ್ನವರಿಗೆ ಫ್ಯೂಶನ್ ಸಂಗೀತ ಅರ್ಥವಾಗುತ್ತದೆ. ಶಾಸ್ತ್ರೀಯ ಸಂಗೀತ ಅ?ರಮಟ್ಟಿಗೆ ಅರ್ಥ ಆಗುವುದಿಲ್ಲ; ಅಂದರೆ ಅವರು ಅರ್ಥಮಾಡಿಕೊಳ್ಳಲು ತಯಾರಾಗಿಲ್ಲ. ಇದಕ್ಕೆ ಅವರು ಲಕ್ಷಾಂತರ ರೂ. ದುಡ್ಡು ಕೊಡಲು ರೆಡಿ ಇರುತ್ತಾರೆ. ಅದಕ್ಕೆ ಅದು ಜನಪ್ರಿಯವಾಗಿದೆ. ಜನರಿಗೆ ಅದೇನೋ ಫ್ಯೂಶನ್ ಅಂದರೆ ನಮಗೆ ಆಗುವಂಥದ್ದು, ನಮ್ಮದು ಎನ್ನುವ ಭಾವನೆ ಇದೆ.ಪ್ರ: ಅದರ ಎರಡು-ಮೂರು ಗಂಟೆಯ ಪೂರ್ಣ ಕಾರ್ಯಕ್ರಮವನ್ನೇ ಮಾಡುತ್ತಾರಾ?
ಉತ್ತರ: ಹೌದು. ಅದಕ್ಕೆಂದು ನಾವು ರಚನೆಗಳನ್ನು ಮಾಡಿಕೊಳ್ಳುತ್ತೇವೆ. ಫ್ಯೂಶನ್ನಿಗೆ ಬೇಕಾದ ಕಾಂಪೋಸಿಶನ್ಸ್ ಮಾಡುತ್ತೇವೆ; ಅದರಲ್ಲಿ ಎಲ್ಲ ಅಂಶಗಳೂ ಇರುತ್ತವೆ.ಪ್ರ: ಸಾಹಿತ್ಯ ಏನು?
ಉತ್ತರ: ಹಾಡುವವರು ಇದ್ದರೆ ಸಾಹಿತ್ಯ; ಇಲ್ಲವಾದರೆ ಬರೇ ವಾದ್ಯಗಳು.
ಪ್ರ: ತಂದೆ ಒಬ್ಬರೇ ಗುರುಗಳಲ್ಲವೆ?
ಉತ್ತರ: ಕೊಳಲಿಗೆ ಬೇರೆ ಯಾರೂ ಇಲ್ಲ. ಪೂರ್ಣವಾಗಿ ಗಾಯಕಿ ಪದ್ಧತಿಯನ್ನು ಅವರಿಂದಲೇ ಕಲಿತೆ. ಆದರೆ ತಂತ್ರಕಾರಿ ಶೈಲಿಯನ್ನು ಹರಿಜೀ (ಹರಿಪ್ರಸಾದ್ ಚೌರಾಸಿಯಾ) ಅವರ ಕೊಳಲನ್ನು ಕೇಳಿಕೇಳಿ ಮತ್ತು ಸ್ವಪ್ರಯತ್ನದಿಂದ ನಾನೇ ಕೆಲವು ಟೆಕ್ನಿಕ್ಗಳನ್ನು ಕಲಿತೆ. ಸದ್ಯಃ ನಾನು ಗಾಯಕಿ ಮತ್ತು ತಂತ್ರಕಾರಿ ಪದ್ಧತಿ ಎರಡನ್ನೂ ಬ್ಯಾಲೆನ್ಸ್ ಮಾಡುವ ಒಂದು ಪ್ರಯತ್ನ ಮಾಡುತ್ತಾ ಇದ್ದೇನೆ.
ಇನ್ನೊಂದು ವಿಷಯ ಏನೆಂದರೆ ಬೆಂಗಳೂರಿಗೆ ಬಂದ ಮೇಲೆ ಕರ್ನಾಟಕ ಸಂಗೀತದ ಬಗ್ಗೆ ನನಗೆ ಸ್ವಲ್ಪ ಆಕರ್ಷಣೆ ಬಂತು. ಅದರ ಬಗ್ಗೆ ತಿಳಿದುಕೊಳ್ಳುವುದು ಆವಶ್ಯಕ ಅನ್ನಿಸಿತು. ಯಾಕೆಂದರೆ ನಾನು ಅನೇಕ ಜುಗಲ್ಬಂದಿ ಕಾರ್ಯಕ್ರಮಗಳನ್ನು ನೀಡುವ ಪ್ರಸಂಗ ಬಂದಾಗ ಕರ್ನಾಟಕ ಸಂಗೀತದಲ್ಲಿ ಅವರು ಏನು ಮಾಡುತ್ತಾರೆ, (ತಾಳದಲ್ಲಿ) ಏನು ಲೆಕ್ಕ ನುಡಿಸುತ್ತಾರೆ ಎಂಬುದನ್ನು ತಿಳಿಯುವುದು ಬಹಳ ಮುಖ್ಯ ಎನ್ನಿಸಿತು. ಅದರಲ್ಲಿ ಎಷ್ಟಕ್ಕೋ ನಮ್ಮ ಹತ್ತಿರ ಉತ್ತರವೇ ಇರುತ್ತಿರಲಿಲ್ಲ. ಏಕೆಂದರೆ ನಮಗೆ ಆ ತರಬೇತಿ ಇರುತ್ತಿರಲಿಲ್ಲ. ಹಾಗಾಗಿ ನಾನು ವಿದ್ವಾನ್ ಆನೂರು ಅನಂತಕೃ? ಅವರ ಹತ್ತಿರ ಲಯಕಾರಿ ಅಭ್ಯಾಸ ಮಾಡಲು ಹೋದೆ. ಮೃದಂಗ ಅಲ್ಲ, ಕೊಳಲೂ ಅಲ್ಲ; ಲಯದ ಬಗ್ಗೆ. ನೀವು ಅದನ್ನು ವೈಜ್ಞಾನಿಕವಾಗಿ ಹೇಗೆ ಮಾಡುತ್ತೀರಿ ಎಂಬುದು ನನ್ನ ಪ್ರಶ್ನೆಯಾಗಿತ್ತು. ಮುಖ್ಯ ಕಲಾವಿದ ಯಾವುದೋ ಒಂದು ಫ್ರೇಸನ್ನು ನುಡಿಸಿದರೆ ಮೃದಂಗದವರು ಅದಕ್ಕೆ ಸರಿಸಮಾನವಾಗಿ ಹತ್ತಾರು ಫ್ರೇಸ್ಗಳನ್ನು ನುಡಿಸುತ್ತಾರೆ; ಅವರಿಗೆ ಅಂತಹ ತರಬೇತಿ ಇರುತ್ತದೆ. ಇದು ಆಗಲೇ ಆಗುತ್ತದೆ; ಐive! ಅದು ಬರೆದು ಜ್ಞಾಪಕ ಇಟ್ಟುಕೊಳ್ಳುವಂಥದ್ದಲ್ಲ. ಆ ಸಯನ್ಸೇ ಬೇರೆ. ಅದರ ಬಗ್ಗೆ ನನಗೆ ಆಕ?ಣೆ ಬಂತು. ಹೇಗೆ ಸಾಧ್ಯ ಅದು? ಏಕೆಂದರೆ ಯಾವುದೇ ರಿಹರ್ಸಲ್ ಇರುವುದಿಲ್ಲ. ಏನೂ ನೋಟ್ಸ್ ಇಲ್ಲ. ಮುಖ್ಯ ಕಲಾವಿದ ವೇದಿಕೆಯ ಮೇಲೆ ಕುಳಿತುಕೊಂಡು, ಅವನ ತಲೆಯಲ್ಲಿ ೧೫ ದಿವಸ ಕಂಪೋಸ್ ಮಾಡಿಕೊಂಡಿರುವ ಒಂದು ರಚನೆಯನ್ನು ಹಾಡುತ್ತಾನೆ. ಮೃದಂಗದವರು ತತ್ಕ್ಷಣ ಅವರ ಜೊತೆಗೆ ನುಡಿಸುತ್ತಾರೆ. ಅ? ಅಲ್ಲದೆ ಅವರು ಹಾಡಿ ಆದಮೇಲೆ ತನಿಯಲ್ಲಿ ಅದಕ್ಕೆ ಬೇರೆಬೇರೆ ವೆರೈಟಿಗಳನ್ನು ಕೊಡುತ್ತಾರೆ. ಅದು ಹೇಗೆ ಸಾಧ್ಯ? ನಮಗೆ ಅದು ಆಶ್ಚರ್ಯ.
ಪ್ರ: ತನಿ ಆವರ್ತನವೇ?
ಉತ್ತರ: ಹೌದು, ತನಿ ಆವರ್ತನ ಅದರ ಒಂದು ಭಾಗ. ಹಾಗಾಗಿ ಅದನ್ನು ಕಲಿಯಬೇಕೆಂದು ಆಸೆಯಾಯಿತು. ಸಮಯವಿದ್ದಾಗ ಅವರ ಹತ್ತಿರ ಪಾಠವನ್ನು ಈಗಲೂ ಮುಂದುವರಿಸಿದ್ದೇನೆ. ಆ ಲಯಕಾರಿ ಅಂಶವನ್ನು ನಾನು ನನ್ನ ಹಿಂದೂಸ್ತಾನಿ ಸಂಗೀತದಲ್ಲಿ ಸೇರಿಸುತ್ತೇನೆ. ಅದು ನನ್ನ ಕಡೆಯಿಂದ ಒಂದು ಕೊಡುಗೆ. ನನ್ನದಕ್ಕೆ ಎಲ್ಲೋ ಒಂದು ಕಡೆ ’ಭಾರತೀಯ ಸಂಗೀತ’ ಎನ್ನುವ ಹೆಸರು ಬರಲಿ ಎನ್ನುವುದು ನನ್ನ ಪ್ರಯತ್ನ. ಬರೀ ಹಿಂದೂಸ್ತಾನಿ ಅಲ್ಲ, ಬರೀ ಕರ್ನಾಟಕಿ ಅಲ್ಲ; ಎರಡರ ಮಿಶ್ರಣ. ಆದರೆ ಶಾಸ್ತ್ರೀಯ ಸಂಗೀತ. ಕರ್ನಾಟಕ ಸಂಗೀತದ ಎ? ರಾಗಗಳನ್ನು ನಾವು ಹಿಂದೂಸ್ತಾನಿ ಸಂಗೀತದಲ್ಲಿ ಅಳವಡಿಸುತ್ತೇವೆ. ಬರೇ ಅವರ ರಾಗ ತೆಗೆದುಕೊಂಡು ಅವರ ಶಾಸ್ತ್ರ ಬೇಡ ಎನ್ನುವುದು ತಪ್ಪು. ಆದ್ದರಿಂದ ನಾನು ಅವರ ಸಂಗೀತದ ಯಾವಾವ ಶಾಸ್ತ್ರಗಳನ್ನು ತೆಗೆದುಕೊಳ್ಳಲು ಸಾಧ್ಯ, ಯಾವಾವುದು ನಮಗೆ ಅನುಕೂಲ ಅನ್ನಿಸುತ್ತದೆ – ಅ?ನ್ನೂ ತೆಗೆದುಕೊಂಡು ನಮ್ಮದನ್ನು ಮಾಡಿಕೊಳ್ಳೋಣ ಎನ್ನುವ ಪ್ರಯತ್ನದಲ್ಲಿದ್ದೇನೆ. ಸೀಮಿತ ಯಾಕೆ ಮಾಡಬೇಕು? ಅವರಲ್ಲಿ ಅದ್ಭುತವಾದ ಲಯಕಾರಿ ಅಂಶಗಳಿವೆ. ಅದನ್ನೆಲ್ಲ ಅಳವಡಿಸಿಕೊಂಡು ಮಾಡಬೇಕು.
ಪ್ರ: ನೀವು ಕಾಲೇಜು ಮಂಗಳೂರಿನಲ್ಲಿ ಓದಿದಿರಾ?
ಉ: ಇಲ್ಲ, ನಾನು ಮಂಗಳೂರಿನಲ್ಲಿ ಓದಲಿಲ್ಲ. ೧೯೯೧-೯೫ರ ನಡುವೆ ಧಾರವಾಡದಲ್ಲಿ ಇಂಜಿನಿಯರಿಂಗ್ ಮಾಡಿದೆ; ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ. ೧೯೯೫ರಲ್ಲಿ ಇಂಜಿನಿಯರಿಂಗ್ ಡಿಗ್ರಿ ಮುಗಿಸಿ ಡಿಸ್ಟಿಂಕ್ಷನ್ನಲ್ಲಿ ಪಾಸಾದೆ. ಫಲಿತಾಂಶ ಬರುವ ಮುಂಚೆ ಜಾಬ್ ಹುಡುಕಿಕೊಂಡು ಬೆಂಗಳೂರಿಗೆ ಬಂದೆ. ಆವಾಗ ಇಲ್ಲಿ ಐಟಿ ಬೂಮ್ ಇತ್ತು. ಮೋಟರೋಲಾ, ವಿಪ್ರೋ ಕಂಪೆನಿಗಳಿಂದ ಆಫರ್ ಕೂಡ ಬಂದಿತ್ತು. ಆದರೆ ಇಲ್ಲಿಗೆ ಬಂದು ಒಂದು ತಿಂಗಳಲ್ಲೇ ನಾನು ರೆಕಾರ್ಡಿಂಗ್ಗಳಿಗೆ ಕೊಳಲು ನುಡಿಸಲು ಪ್ರಾರಂಭಿಸಿದ್ದೆ. ಹಂಸಲೇಖ, ಸಿ. ಅಶ್ವತ್ಥ್, ಸಾಧುಕೋಕಿಲ – ಹೀಗೆ ಎಲ್ಲರ ರೆಕಾರ್ಡಿಂಗಿಗೂ. ಆವಾಗ ಇಲ್ಲಿ ಕೊಳಲುವಾದಕರು ಕಡಮೆ ಇದ್ದರು. ಅದರಲ್ಲೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗೊತ್ತಿದ್ದ ಕೊಳಲುವಾದಕರು ಬಹಳ ವಿರಳ. ಹಾಗಾಗಿ ಕೊಳಲಿನವರಿಗೆ ತುಂಬ ಬೇಡಿಕೆ ಇತ್ತು; ಮತ್ತು ರೆಕಾರ್ಡಿಂಗ್ಸ್ ತುಂಬ ಜೋರಾಗಿ ನಡೆಯುತ್ತಿತ್ತು. ೮-೧೦ ಸ್ಟುಡಿಯೋಗಳಿದ್ದವು. ಎಲ್ಲ ಸ್ಟುಡಿಯೋಗಳಲ್ಲಿ ಬೆಳಗ್ಗೆ ೯ರಿಂದ ರಾತ್ರಿ ೯ ಗಂಟೆಯವರೆಗೂ ಬ್ಯುಸಿ ಇರುತ್ತಿತ್ತು. ಜನಪದಗೀತೆ, ಭಾವಗೀತೆ, ಭಕ್ತಿಗೀತೆ – ಹೀಗೆ ಎಲ್ಲ ಕ್ಯಾಸೆಟ್ಗಳು. ಆಗ ಕ್ಯಾಸೆಟ್ಗಳದ್ದೇ ಒಂದು ಇಂಡಸ್ಟ್ರೀ ಇತ್ತು. ಜೊತೆಗೆ ಚಲನಚಿತ್ರ ಉದ್ಯಮವಿತ್ತು. ಅವರೆಲ್ಲ ನನ್ನನ್ನು ಕರೆಯುತ್ತಿದ್ದರು.
ನನ್ನ ಮಿತ್ರರು ಅನೇಕ ಜನ ಸಂಗೀತಗಾರರು “ಯಾತಕ್ಕೆ ಇಂಜಿನಿಯರಿಂಗ್ ಅಂತ ಹೋಗಿ ಬೆಳಗ್ಗೆಯಿಂದ ಸಂಜೆವರೆಗೆ ಸಿಕ್ಕಿಹಾಕಿಕೊಳ್ಳುತ್ತಿ? ಸಂಗೀತ ಮಾಡಲಿಕ್ಕೆ ಆಗುವುದಿಲ್ಲ. ಇ? ಟ್ಯಾಲೆಂಟ್ ಇಟ್ಟುಕೊಂಡು ನೀನು ಅಲ್ಲಿಗೆ ಹೋಗುವುದು ಸರಿಯಲ್ಲ. ನೀನು ಸಂಗೀತವನ್ನೇ ಮುಂದುವರಿಸು” ಎಂದು ಸಲಹೆ ಕೊಟ್ಟರು. ಒಂದು-ಒಂದೂವರೆ ತಿಂಗಳಾದ ಮೇಲೆ ಧಾರವಾಡಕ್ಕೆ ಹೋಗಿ ತಂದೆಯವರ ಹತ್ತಿರ ಚರ್ಚೆ ಮಾಡಿದೆ. ಅವರು, “ಹೌದು, ನನ್ನ ಪ್ರಕಾರ ಎರಡು ವ? ನೀನು ಸಂಗೀತಕ್ಕೆ ಅಂತಲೇ ಮೀಸಲಾಗಿ ಇಟ್ಟುಕೋ. ಪ್ರೊಫೆಶನಲ್ ಸಂಗೀತಗಾರ ಅಂತಲೇ ಮಾಡಿಕೋ. ನಿನಗೆ ಅದು ಸಂತೋ?ಕೊಟ್ಟು ಅದರಿಂದ ದುಡ್ಡು ಬರುತ್ತಾ ಇದೆ ಎಂದು ಅನ್ನಿಸಿದರೆ ಮತ್ತು ಇದು ಸರಿ ಅನ್ನಿಸಿದರೆ ಅದನ್ನೇ ಮುಂದುವರಿಸು. ಇಲ್ಲ ಅಂದರೆ ಇಂಜಿನಿಯರಿಂಗ್ ಡಿಗ್ರಿ ಇದೆಯಲ್ಲಾ; ಅದನ್ನೇ ಮಾಡು” ಎಂದು ಹೇಳಿದರು. ಅವರದ್ದು ಏನಿತ್ತೆಂದರೆ, ವೃತ್ತಿಪರ ಸಂಗೀತಗಾರ ಆಗಬೇಕೆಂದರೆ ೨೪ ತಾಸೂ ಅದನ್ನೇ ಮಾಡಬೇಕು ಎಂಬುದು ಅವರಿಗೆ ಆ ಹೊತ್ತಿಗೆ ಮನದಟ್ಟಾಗಿತ್ತು. ಬೆಳಗ್ಗೆಯಿಂದ ಸಂಜೆಯವರೆಗಿನ ಉದ್ಯೋಗವಾದರೆ ಅದು ಆಗುವುದಿಲ್ಲ. ನಮ್ಮ ತಂದೆಗೆ ಇದ್ದ ತೊಂದರೆ ಅದೇ. ಆಕಾಶವಾಣಿಯಲ್ಲಿ ಅವರು ಆಡಳಿತಗಾರನ ಕೆಲಸ ಮಾಡುತ್ತಿದ್ದಾಗ ಅದರ ಟೆನ್ಶನ್ಗಳಿದ್ದವು. ಆಮೇಲೆ ಹುದ್ದೆಯಲ್ಲಿ ಮೇಲೆಮೇಲೆ ಹೋದ ಹಾಗೆ ಬೇರೆಬೇರೆ ಥರದ ತೊಂದರೆಗಳು. He was very honest (ಅವರು ತುಂಬ ಪ್ರಾಮಾಣಿಕರು).
ಪ್ರ: ಯಾವಾಗ ನಿಲಯ ನಿರ್ದೇಶಕರಾದರು?
ಉತ್ತರ: ದೆಹಲಿಗೆ ವರ್ಗವಾದಾಗಲೇ (೧೯೮೯) ನಿಲಯ ನಿರ್ದೇಶಕರಾಗಿದ್ದರು. ಆದರೆ ಅದು ಪ್ರಧಾನ ಕಛೇರಿ ಆಗಿರುವುದರಿಂದ ಅವರು ಮಹಾನಿರ್ದೇಶಕರ (ಡೈರೆಕ್ಟರ್ ಜನರಲ್) ಕೆಳಗೆ ಕೆಲಸ ಮಾಡಬೇಕಾಗಿತ್ತು; ಸಹಾಯಕ ಡಿಜಿ (ಎಡಿಜಿ – ಗ್ರೇಡ್-೨). ಮಂಗಳೂರಿಗೆ ಬರುವಾಗ ನಿಲಯ ನಿರ್ದೇಶಕರಾಗಿಯೇ ಬಂದರು. ಅಲ್ಲಿಂದ ಧಾರವಾಡಕ್ಕೆ ಹೋದರು. ಆಕಾಶವಾಣಿಯಲ್ಲಿ ಆ ಥರ ಜಾಬ್ ಮಾಡಿಕೊಂಡು ಜೊತೆಗೆ ಸಂಗೀತ ಮಾಡಿದರೆ ಸಂಗೀತಕ್ಕೆ ನ್ಯಾಯ ಸಲ್ಲಿಸಲು ಆಗುವುದಿಲ್ಲ ಎಂದು ಎಲ್ಲೋ ಒಂದು ಕಡೆ ಅವರಿಗೆ ಅನ್ನಿಸಿತ್ತು. ಆದರೆ ಜೊತೆಗೆ ಬರೇ ಸಂಗೀತದಿಂದ ಜೀವನ ಮಾಡುವುದು ಹೇಗೆ ಎನ್ನುವ ಅಭದ್ರತೆಯೂ ಇತ್ತು. ಆವೊಂದು ಕಾರಣಕ್ಕೆ ಅವರು ನನ್ನನ್ನು ದೆಹಲಿಯಿಂದ ಕರೆದುಕೊಂಡು ಬಂದು ಇಂಜಿನಿಯರಿಂಗ್ ಮಾಡಿಸಿದ್ದು; ಒಂದು ಡಿಗ್ರಿ ಅಂತ ನೀನು ಮಾಡಲೇಬೇಕು ಅಂದಿದ್ದು.
ನಿಜವೆಂದರೆ ನಾನು ದೆಹಲಿಯಲ್ಲಿ ಪಿಯುಸಿ ಮುಗಿಸಿದಾಗ ತಂದೆಯವರಲ್ಲಿ “ನೀವು ಹೋಗಿ, ನಾನು ಇಲ್ಲೇ ಸೆಟ್ಲ್ ಆಗುತ್ತೇನೆ” ಎಂದು ಹೇಳಿದ್ದೆ. ನಾನು ಆವಾಗಲೇ ರಾಷ್ಟ್ರೀಯ ಪ್ರಶಸ್ತಿ ಗೆದ್ದಿದ್ದೆ; ೧೬ನೇ ವಯಸ್ಸಿಗೇ ’ಸುರ್ಮಣಿ’ ಪ್ರಶಸ್ತಿ ಬಂದಿತ್ತು. ಹಾಗಾಗಿ ನನಗೆ ಎಲ್ಲೋ ಒಂದು ಕಡೆ ಕಾನ್ಫಿಡೆನ್ಸ್ ಇತ್ತು. ದೆಹಲಿಯಂತಹ ಊರಿನಲ್ಲಿ ಏನಾದರೂ ಮಾಡಬಹುದು ಎಂದಿತ್ತು. ಎಲ್ಲ ದಿಗ್ಗಜರೂ ಪ್ರತಿತಿಂಗಳು ಒಂದು ಕಾರ್ಯಕ್ರಮಕ್ಕೆ ಬರುತ್ತಿದ್ದರು. ಅಲ್ಲಿ ಅನೇಕ ಕಚೇರಿಗಳನ್ನು ನಾನು ಕೇಳುತ್ತಿದ್ದೆ. ಆ ಸಂಗೀತದ ವಾತಾವರಣ ಮತ್ತು ಅಲ್ಲಿರುವಂತಹ ಪ್ರೋತ್ಸಾಹ ಆಗಿನ ಸಮಯದಲ್ಲಿ ತುಂಬಾ ಇತ್ತು. ಅಲ್ಲೇ ಇದ್ದಿದ್ದರೆ ಏನು ಆಗುತ್ತಿತ್ತೋ ಗೊತ್ತಿಲ್ಲ. ಆಗ ತಂದೆಯವರು, “ಇಲ್ಲ, ಇಲ್ಲ. ನಿನ್ನನ್ನು ಇಲ್ಲೇ ಬಿಟ್ಟರೆ ಏನು ಆಗುತ್ತಿ ಎಂದು ಹೇಳಲಿಕ್ಕೆ ಆಗುವುದಿಲ್ಲ. ನೀನು ಡಿಗ್ರಿ ಅಂತ ಒಂದು ಮುಗಿಸಿಕೋ; ಆಮೇಲೆ ಏನು ಬೇಕಾದರೂ ಮಾಡು” ಎಂದರು. ಅದಕ್ಕಾಗಿ ಅವರು ನನ್ನನ್ನು ವಾಪಸು ಕರೆದುಕೊಂಡು ಬಂದರು. ಬಿ.ಎಸ್ಸಿ. ಮಾಡಬೇಕೆಂದು ಬಂದಿದ್ದೆ. ಇಂಜಿನಿಯರಿಂಗ್ ಸೀಟು ಸಿಗುತ್ತದೆ ಎಂದು ಎಣಿಸಿರಲಿಲ್ಲ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಒಂದು ಕಾರ್ಯಕ್ರಮದಲ್ಲಿ ಭೇಟಿಯಾದಾಗ “ಹೊರನಾಡ ಕನ್ನಡಿಗರಿಗೆ ಅಂತ ಒಂದು ಕೋಟಾ ಇರುತ್ತದೆ. ಅರ್ಜಿ ಹಾಕಿ; ಸಾಧ್ಯವಾದರೆ ಕೊಡಿಸೋಣ” ಎಂದು ಹೇಳಿದ್ದರು. ಅದರಂತೆ ಕೊಡಿಸಿದರು. ಧಾರವಾಡದಲ್ಲಿ ನಾನು ಹಾಸ್ಟೆಲಿನಲ್ಲಿದ್ದು ಇಂಜಿನಿಯರಿಂಗ್ ಮಾಡಿದೆ. ಮತ್ತೆ ಇಲ್ಲಿ ಬೆಂಗಳೂರಿಗೆ ಬಂದ ಮೇಲೆ ಸ್ಟುಡಿಯೋಗಳ ಸಹವಾಸ ಶುರುವಾಯಿತು. ಹಲವಾರು ರೆಕಾರ್ಡಿಂಗ್ಗಳು. ಒಂದು ಸಮಯದಲ್ಲಿ ಆಲ್ಮೋಸ್ಟ್ ಬೆಳಗ್ಗೆ ಆರುಗಂಟೆಗೆ ಮನೆ ಬಿಟ್ಟರೆ ರಾತ್ರಿ ೧೨, ೧ಗಂಟೆಗೆ ಮನೆಗೆ ಬರುತ್ತಿದ್ದೆ. ನಾಲ್ಕು ನಾಲ್ಕು ಸ್ಟುಡಿಯೋಗಳಲ್ಲಿ ಕೆಲಸ ನಡೆಯುತ್ತಿತ್ತು.
ಪ್ರ: ಆಗ ಬೇರೆ ಎಲ್ಲಿ ಕೆಲಸ ಮಾಡಿದ್ದೀರಿ? ಶಾಸ್ತ್ರೀಯ ಸಂಗೀತವೆಂದು ಇಟ್ಟುಕೊಳ್ಳಲಿಲ್ಲವೇ?
ಉತ್ತರ: ಎಲ್ಲ ಕೆಲಸ ಮಾಡಿದ್ದೇನೆ. ಲಘುಸಂಗೀತ ಕಾರ್ಯಕ್ರಮಗಳಿಗೆ ಕೊಳಲು ನುಡಿಸುವುದೂ ಇತ್ತು. ರತ್ನಮಾಲಾ ಪ್ರಕಾಶ್, ಸಿ. ಅಶ್ವತ್ಥ್, ಪುತ್ತೂರು ನರಸಿಂಹ ನಾಯಕ್ ಮುಂತಾಗಿ ಎಲ್ಲರ ಒಟ್ಟಿಗೆ ಹಿನ್ನೆಲೆ ಕೊಳಲುವಾದಕನಾಗಿ ಕೆಲಸ ಮಾಡಿದೆ. ’ಸೌಂಡ್ ಆಫ್ ಮ್ಯೂಸಿಕ್’ ಆರ್ಕೆಸ್ಟ್ರಾ ಜೊತೆ ಅಮೆರಿಕ ಪ್ರವಾಸಕ್ಕೂ ಹೋಗಿದ್ದೆ. ಚಿತ್ರಗೀತೆಗಳ ಆರ್ಕೆಸ್ಟ್ರಾಗಳಲ್ಲೂ ಭಾಗವಹಿಸುತ್ತಿದ್ದೆ. It added to my music (ಅದರಿಂದ ಶಾಸ್ತ್ರೀಯ ಸಂಗೀತಕ್ಕೂ ಪ್ರಯೋಜನವಾಯಿತು). ಆದರೆ ಎಲ್ಲೂ ನಾನು ನನ್ನ ಶಾಸ್ತ್ರೀಯ ಸಂಗೀತದ ರಿಯಾಜ್ ಆಗಲಿ, ನನ್ನ ರೆಗ್ಯುಲರ್ ಪ್ರಾಕ್ಟಿಸ್ ಆಗಲಿ ಅಥವಾ ಅದರ ಬಗೆಗೆ ಒಲವಾಗಲಿ ಬಿಟ್ಟುಕೊಡಲಿಲ್ಲ. ಅದು ಹಾಗೆಯೇ ಇತ್ತು.
ಪ್ರ: ರಿಯಾಜಿಗೆಲ್ಲ ನಿಮಗೆ ಸಮಯ ಸಿಗುತ್ತಿತ್ತೆ?
ಉತ್ತರ: ಸಮಯ ಮಾಡಿಕೊಳ್ಳುತ್ತಿದ್ದೆ. ಆಮೇಲೆ ಸ್ಟುಡಿಯೋದಲ್ಲಿ ೧೨ ಗಂಟೆ, ೧೪ ಗಂಟೆ ಕೊಳಲು ನನ್ನ ಜೊತೆಗೆ ಇರುತ್ತಿತ್ತಲ್ಲ! ಅದಕ್ಕಿಂತ ದೊಡ್ಡ ರಿಯಾಜ್ ಯಾವುದೂ ಇಲ್ಲ. ಎಲ್ಲಾ ಥರದ ಪ್ರಯೋಗಗಳು, ಕೊಳಲಿನ ಮೇಲೆ ಏನೇನು ನಡೆಯಬಹುದೋ ಅವೆಲ್ಲ ಸ್ಟುಡಿಯೋಗಳಲ್ಲಿ ನಡೆಯುತ್ತಿತ್ತು. ಸ್ಟುಡಿಯೋನೇ ನಮಗೆ ಒಂದು ಥರ ವಕ್ಶಾಪ್ ಆಗಿತ್ತು. ಪ್ರತಿದಿನ, ಬಹುತೇಕ ತಿಂಗಳಿನ ೩೦ ದಿನ – ಶನಿವಾರ ಭಾನುವಾರ ಎಂದಿಲ್ಲ, ಆಫ್ ಇಲ್ಲ; ಪೂರ್ತಿ ಕೆಲಸ. ಆ ರೀತಿ ಸುಮಾರು ಐದು ವರ್ಷ ಕೆಲಸ ಮಾಡಿದ್ದೇನೆ.
ಪ್ರ: ಅಂತಹ ಪರಿಸ್ಥಿತಿಯಲ್ಲಿ ನಿಮಗೆ ಕಚೇರಿ ಒಪ್ಪಿಕೊಳ್ಳಲು ಆಗುತ್ತಿತ್ತೆ? ಕಚೇರಿ ಕೊಡುತ್ತಿದ್ದಿರಾ?
ಉತ್ತರ: ಆಗುತ್ತಿತ್ತು. ಟೆಕ್ನಾಲಜಿ ಆಗ ಬೆಳೆಯುತ್ತಾ ಬಂತು; ಮಿಕ್ಸ್ ಮಾಡಬಹುದಾಗಿತ್ತು. ಸಂಜೆ ೫ ಗಂಟೆಯವರೆಗೆ ಕೆಲಸ ಮಾಡಿ ಅನಂತರ ಕಚೇರಿಗೆ ಹೋಗುತ್ತಿದ್ದೆ. ಮರುದಿನ ಬಂದು ಮಿಕ್ಕಿರುವ ಹಾಡನ್ನು ನಾನೊಬ್ಬನೇ ಕುಳಿತು ಮಿಕ್ಸ್ ಮಾಡುತ್ತಿದ್ದೆ. ನನ್ನ ಕಚೇರಿ ಇರುತ್ತಿತ್ತು; ಆದರೆ ವಿರಳ. ಆಗ ಹಿಂದೂಸ್ತಾನಿ ಕಚೇರಿಗಳೂ ಕಮ್ಮಿ ಇತ್ತೆನಿಸುತ್ತದೆ. ನನ್ನ ಪರಿಚಯವೂ ಜಾಸ್ತಿ ಜನಕ್ಕೆ ಇರಲಿಲ್ಲ; ಆದರೆ ಶಾಸ್ತ್ರೀಯ ಸಂಗೀತದ ವಲಯಗಳಲ್ಲಿ ಎಲ್ಲರಿಗೂ ಗೊತ್ತಿತ್ತು. ತೊರವಿ, ಶ್ಯಾಮಲಾಭಾವೆ, ಪರಮೇಶ್ವರ ಹೆಗಡೆ, ಯಾವಗಲ್ ಅವರಿಗೆಲ್ಲ ’ವೆಂಕಟೇಶ್ ಗೋಡ್ಖಿಂಡಿಯವರ ಮಗ ಬಂದಾನಿಲ್ಲಿ’ ಅಂತ ಗೊತ್ತಿತ್ತು; ಹಾಗೇ ಆ ರೀತಿಯ ಅವಕಾಶಗಳಿದ್ದಾಗ ನಾನು ಹೋಗುತ್ತಿದ್ದೆ. ಜೊತೆಗೆ ಈ ಜುಗಲ್ಬಂದಿಯ ಒಂದು ಯುಗ ಪ್ರಾರಂಭವಾಯಿತು.
ಪ್ರ: ಆಗಲೇ, ೧೯೯೦ರ ದಶಕದಲ್ಲೇ ಅದು ಪ್ರಾರಂಭವಾಯಿತಾ?
ಉತ್ತರ: ೧೯೯೮ರಲ್ಲಿ ನಾನು ಮೊದಲಿಗೆ ಕದ್ರಿ ಗೋಪಾಲ್ನಾಥ್ ಅವರ ಜೊತೆ ’ರಾಗ್ರಂಗ್’ ಎನ್ನುವ ಜುಗಲ್ಬಂದಿ ಆಲ್ಬಂ ಮಾಡಿದೆ. ಅದು ಸೂಪರ್ಹಿಟ್ ಆಯಿತು. ಅಲ್ಲಿಂದ ನನ್ನ ಸಂಗೀತ ಜೀವನ(ಮ್ಯೂಸಿಕ್ ಕೆರಿಯರ್)ದಲ್ಲಿ ಒಂದು ಹೊಸ ತಿರುವು ಬಂತು. ಹಿಂದೆ ಬರೇ ಕ್ಯಾಸೆಟ್ ಮತ್ತು ಸಿಡಿ ಮಾಧ್ಯಮದಲ್ಲಿ ಗೋಡ್ಖಿಂಡಿ ಎನ್ನುವ ಹೆಸರು ಓಡಾಡುತ್ತಿತ್ತು. ಆಮೇಲೆ ನಾನು ’ಸುರ್ಸಾಗರ್ ರಾಗಿಣಿ’ ಅಂತ ರಾಗ-ಆಧಾರಿತ ಚಿತ್ರಗೀತೆಗಳ ಕೆಲವು ಆಲ್ಬಂಗಳನ್ನು ಮಾಡಿದೆ. ಅದು ತುಂಬ ಪಾಪ್ಯುಲರ್ ಆಯಿತು. ಅನಂತರ ೨೦೦೧ರಲ್ಲಿ ’ಎದೆ ತುಂಬಿ ಹಾಡುವೆನು’ ಪ್ರಾರಂಭವಾಯಿತು. ಅದು ಇನ್ನೊಂದು ಮೆಟ್ಟಿಲು. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ನನ್ನನ್ನು ವಿಶೇ?ವಾಗಿ ’ಪಂಡಿತ್ಜೀ’ ಎಂದು ಉದ್ದೇಶಿಸಿ, ಈ ರಾಗ ಯಾವುದು ಆ ರಾಗ ಯಾವುದು – ಮುಂತಾಗಿ ರಾಗಗಳ ಬಗ್ಗೆ ಕೇಳುತ್ತಿದ್ದರು. ಐದಾರು ವ? ನಾನು ಅವರ ಜೊತೆಗಿದ್ದೆ; ಸಂಗೀತ ವಿಭಾಗದ ಮುಖ್ಯಸ್ಥನಾಗಿದ್ದೆ. ಪ್ರಾರಂಭಿಸುವಾಗ ಎಸ್.ಪಿ.ಯವರು ನನ್ನನ್ನು ಕರೆದು, “ನೀವು ಆರ್ಕೆಸ್ಟ್ರಾ ಮಾಡಬೇಕು. ನಿಮಗೆ ಗೊತ್ತಿರುವ ಒಳ್ಳೊಳ್ಳೆ ಸಂಗೀತಗಾರರನ್ನು ಇಟ್ಟುಕೊಂಡು ನೀವೇ ಅದರ ಮುತುವರ್ಜಿ ವಹಿಸಬೇಕು” ಎಂದು ತಿಳಿಸಿದರು. ಅದು ತುಂಬಾ ಜನಕ್ಕೆ ಗೊತ್ತೂ ಇಲ್ಲ; ನಾನು ಬರೇ ಕೊಳಲು ನುಡಿಸುತ್ತೇನೆ ಎಂದು ತಿಳಿದುಕೊಂಡಿದ್ದರು. ಅದಕ್ಕೆ ಶಾಸ್ತ್ರೀಯ ಸಂಗೀತದ ಸಂಬಂಧವೇನೂ ಇಲ್ಲ. ಆದರೆ ಎಸ್.ಪಿ. ಪೂರ್ತಿ ನನಗೇ ವಹಿಸಿಬಿಟ್ಟಿದ್ದರು. ಒರಿಜಿನಲ್ ಸಾಂಗ್ಸ್ ಇಟ್ಟುಕೊಂಡು ಕೇಳಿ, ಅದರ ಸ್ವರಗಳನ್ನು ಬರೆದುಕೊಂಡು ಯಾವುದನ್ನು ಕೀಬೋರ್ಡಿನಲ್ಲಿ ನುಡಿಸಬೇಕು, ಯಾವುದು ಗಿಟಾರ್ನಲ್ಲಿ; ಯಾವುದು ಸಿತಾರ್ನಲ್ಲಿ, ಏನು ನುಡಿಸಬೇಕು – ಎಂದೆಲ್ಲ ಅದರ ರೀವರ್ಕ್ ಮಾಡುವುದು. ಎಸ್.ಪಿ. ಅವರು ಸುಮಾರು ೪೦ ಸಾವಿರ ಹಾಡುಗಳನ್ನು ಹಾಡಿದ್ದು; ಅದರಲ್ಲಿ ಸೂಪರ್ ಹಿಟ್ ಆಗಿರುವ ೮೦೦-೯೦೦ ಹಾಡುಗಳನ್ನು ಪುನಃ ರೆಕಾರ್ಡ್ ಮಾಡಿ ಪುನಃ ಶೂಟ್ ಮಾಡಿದೆವು. ಹೀಗೆ ಅದು ಕೂಡ ಒಂದು ಕಲಿಕೆಯ ಅನುಭವವಾಗಿತ್ತು. ಆಮೇಲೆ ’ರಾಗರಂಜನಿ’ ಅಂತ ನನ್ನದೇ ಒಂದು ಕಾರ್ಯಕ್ರಮ ಪ್ರಾರಂಭ ಮಾಡಿದೆ. ಅದು ರಾಗ- ಆಧಾರಿತ ಕಾರ್ಯಕ್ರಮ; ಈ-ಟಿವಿಯಲ್ಲಿ ಪ್ರಸಾರವಾಯಿತು. ಅದರಂತಹ ಅದ್ಭುತವಾದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಕನ್ನಡದ ಟಿವಿಯಲ್ಲಿ ಇದುವರೆಗೂ ಬಂದಿಲ್ಲ. ಶಾಸ್ತ್ರೀಯ ಸಂಗೀತವನ್ನು ಒಂದು ಹೊಸ ರೀತಿಯಲ್ಲಿ ಪ್ರೊಜೆಕ್ಟ್ ಮಾಡಿದ ಮೊಟ್ಟಮೊದಲ ಕಾರ್ಯಕ್ರಮ ಅದು. ಅದರ ಕ್ವಾಲಿಟಿಯೇ ಬೇರೆ ಇದೆ. ಶಾಸ್ತ್ರೀಯ ಸಂಗೀತವನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವ ಒಂದು ಪ್ರಯತ್ನ ಅದು. ಎರಡು ವರ್ಷ ಅದನ್ನು ಮಾಡಿದೆ. ಆಮೇಲೆ ಟಿವಿ ಮಾಧ್ಯಮ ಸಾಕಾಯಿತು. ಅದನ್ನು ಬಿಟ್ಟು ಈವಾಗ ಶಾಸ್ತ್ರೀಯ ಸಂಗೀತಗಾರನಾಗಿ ಎಲ್ಲ ಕಡೆ ಸುತ್ತುತ್ತಾ ಇದ್ದೇನೆ. ಜೊತೆಗೆ ನನ್ನ ಸ್ವಂತ ಮ್ಯೂಸಿಕ್ ಸ್ಟುಡಿಯೋ ಇದೆ. ಸಂಗೀತ ನಿರ್ದೇಶನ ಮಾಡುತ್ತೇನೆ. ನನ್ನದೇ ಆದ ಫಿಲ್ಮ್ಗಳಿಗೆ ಮ್ಯೂಸಿಕ್ ಡೈರೆಕ್ಷನ್ ಮಾಡುತ್ತೇನೆ. ಹಿನ್ನೆಲೆ ಸಂಗೀತ ಮಾಡುತ್ತೇನೆ. ನಾನೊಬ್ಬ ಮ್ಯೂಸಿಕ್ ಕಂಪೋಸರ್ (ರಾಗಸಂಯೋಜಕ) ಕೂಡ ಆಗಿದ್ದೇನೆ. ಎ? ಟಿವಿ ಧಾರಾವಾಹಿಗಳ ಟೈಟಲ್ ಸಾಂಗ್ಗಳಿಗೆ ಸಂಗೀತ ಸಂಯೋಜನೆ ಮಾಡಿದ್ದೇನೆ. ’ಮಳೆಬಿಲ್ಲು’ವಿನಂತಹ ಒಂದೆರಡಕ್ಕೆ ’ಆರ್ಯಭಟ’ ಇತ್ಯಾದಿ ಪ್ರಶಸ್ತಿ ಬಂದಿದೆ. ರಾಗರಂಜನಿಗೆ ’ಶ್ರೇ? ಸಂಗೀತ ಧಾರಾವಾಹಿ’ ಎನ್ನುವ ಪ್ರಶಸ್ತಿ ಬಂತು. ಹೀಗೆ ನನ್ನ ಸುಗಮಸಂಗೀತದ ಕೆಲಸವನ್ನು ನನ್ನಮಟ್ಟಿಗೆ ನಾನು ಮಾಡಿಕೊಂಡು ಹೋಗುತ್ತಿದ್ದೇನೆ; ಬೇರೆಯವರ ಕೈಕೆಳಗೆ ಕೆಲಸ ಮಾಡುವುದನ್ನು ನಿಲ್ಲಿಸಿದ್ದೇನೆ.
ಪ್ರ: ಜುಗಲ್ಬಂದಿಗಳು ಸುಮಾರು ಮಾಡಿರಬೇಕಲ್ಲ ನೀವು? ಯಾರ ಜೊತೆಗೆಲ್ಲ ಮಾಡಿದ್ದೀರಿ?
ಉತ್ತರ: ಅನೇಕ ಮಾಡಿದ್ದೇನೆ. ಗಣೇಶ್, ಕುಮರೇಶ್, ಮೈಸೂರು ಮಂಜುನಾಥ್-ನಾಗರಾಜ್, ಕದ್ರಿ ಗೋಪಾಲ್ನಾಥ್, ರವಿಕಿರಣ್ ಅವರಲ್ಲದೆ ಬಾಲಮುರಳಿಕೃ? ಅವರ ಜೊತೆಗೂ ಜುಗಲ್ಬಂದಿ ಮಾಡಿದ್ದೇನೆ. ಇಲ್ಲಿ ನಮ್ಮ ಶಿವು ಸರ್ (ಆನೂರು ಅನಂತಕೃ? ಶರ್ಮ) ಅವರದ್ದೊಂದು ತಂಡ ಇದೆ – ’ಲಯಲಹರಿ’ ಅಂತ. ಅದರಲ್ಲಿ ಎಂ.ಕೆ. ಪ್ರಾಣೇಶ್ ಅಂತ ಕೊಳಲು ನುಡಿಸುತ್ತಾರೆ (ಕರ್ನಾಟಕಿ). ಅವರೂ ನಾನೂ ಅನೇಕ ಜುಗಲ್ಬಂದಿ ಮಾಡಿದ್ದೇವೆ; ಹಿಂದೂಸ್ತಾನಿ ಸಂಗೀತದವರ ಜೊತೆಗೂ ಜುಗಲ್ಬಂದಿ ಮಾಡಿದ್ದೇನೆ; ವಿಶ್ವಮೋಹನ್ ಭಟ್, ತರುಣ್ ಭಟ್ಟಾಚಾರ್ಯ ಮುಂತಾಗಿ.
ಪ್ರ: ನಿಮಗೆ ಸೋಲೋ ಕಚೇರಿ ಇಷ್ಟವೆ, ಜುಗಲ್ ಬಂದಿ ಇಷ್ಟವೆ?
ಉತ್ತರ: ಇಷ್ಟ ಯಾವತ್ತೂ ಸೋಲೋನೇ. ಅದರಲ್ಲಿ ಕೊಳಲಿನ ಆಯ್ಕೆಯಿಂದ ಆರಂಭಿಸಿ ಯಾವುದೇ ರೀತಿಯ ಕಾಂಪ್ರಮೈಸ್ (ರಾಜಿ) ಇರುವುದಿಲ್ಲ. ಜುಗಲ್ಬಂದಿ ಅಂದರೆ ಎದುರಿನ ಕಲಾವಿದರಿಗೆ ಯಾವ ಶ್ರುತಿ ಅನುಕೂಲವೋ ಅದೇ ಶ್ರುತಿಯಲ್ಲಿ ನಾವು ನುಡಿಸಬೇಕು. ಜುಗಲ್ಬಂದಿ ಆರಂಭವಾಗುವುದೇ ಕಾಂಪ್ರಮೈಸ್ನಿಂದ. ಕಾಂಪ್ರಮೈಸ್ ಮಾಡುವ ಬುದ್ಧಿ ಇಬ್ಬರು ಕಲಾವಿದರಿಗೆ ಇಲ್ಲ ಎಂದಾದರೆ ಜುಗಲ್ಬಂದಿ ಯಶಸ್ವಿ ಆಗುವುದಿಲ್ಲ. ಸೋಲೋ ಅಂದರೆ ಸ್ವಾತಂತ್ರ್ಯ. ನಮಗೆ ಯಾವುದು ಬೇಕು, ಯಾವ ರೀತಿ ಬೇಕು, ಯಾವ ರಾಗ ಬೇಕು, ಯಾವ ತಾಳ ಬೇಕು ಅದರಲ್ಲಿ ಯಾವುದೇ ರೀತಿಯ ತಡೆ ಇರುವುದಿಲ್ಲ.
ಪ್ರ: ಜುಗಲ್ಬಂದಿಯಲ್ಲಿ ಕಾಂಪ್ರಮೈಸ್ನಿಂದಾಗಿ ಕ್ವಾಲಿಟಿ ಬರುವುದಿಲ್ಲ ಅನ್ನುತ್ತೀರಾ?
ಉತ್ತರ: ಅಲ್ಲಿ ಕ್ವಾಲಿಟಿ ಬರಬೇಕು ಅಂದರೆ ಕಾಂಪ್ರಮೈಸ್ ಮಾಡಿಕೊಳ್ಳಬೇಕು. ಕಾಂಪ್ರಮೈಸ್ ಇದ್ದರೆ ಮಾತ್ರ ಕ್ವಾಲಿಟಿ ಬರುತ್ತದೆ.
ಪ್ರ: ಸರಿ, ಇಷ್ಟದ ಪ್ರಕಾರ ಹೋಗಲು ಆಗುವುದಿಲ್ಲ; ಹೊಂದಿಕೊಂಡು ಹೋಗುವಾಗ ಟಾಪಿಗೆ ಹೋಗುವುದಿಲ್ಲ; ಎಲ್ಲೋ ಮಧ್ಯದಲ್ಲಿ ನಿಂತುಬಿಡುತ್ತದೆ ಎನ್ನುತ್ತೀರಾ?
ಉತ್ತರ: ಹಾಗಲ್ಲ. ಈ ಸೋಲೋ ಅಂದರೆ, ನೀವು ಒಬ್ಬರೇ ಮಾತನಾಡುವುದಾದರೆ ನಿಮ್ಮ ಯೋಚನೆಗಳ ಪ್ರಕಾರ ಎ? ಹೊತ್ತು ಬೇಕಾದರೂ ಮಾತನಾಡಬಹುದು. ಇಬ್ಬರೂ ಸೇರಿ ಒಂದೇ ಸಬ್ಜೆಕ್ಟ್ ಮಾತನಾಡಿರಿ ಎಂದರೆ ನಿಮ್ಮ ಕೆಲವು ಪಾಯಿಂಟ್ ಅವರು ಹೇಳಿದಾಗ ನಿಮ್ಮದು ಕಮ್ಮಿ ಆಗುತ್ತದೆ ಅಲ್ಲವಾ? ನಾನು ಬಹುಶಃ ಅದೇ ಯೋಚನೆಗಳನ್ನು ಬೇರೆ ರೀತಿ ಹೇಳುತ್ತಿದ್ದೆ ಎಂದು ಅನ್ನಿಸುತ್ತದೆಯೋ ಇಲ್ಲವೋ ಹಾಗೆ. ಜನರಿಗೆ ಸಿಗುವ ಆನಂದ ಸಿಕ್ಕಿಯೇ ಸಿಗುತ್ತದೆ. ಕಲಾವಿದರಿಗೆ ಸಿಗುತ್ತದೋ ಇಲ್ಲವೋ ಅನ್ನುವುದು ಪ್ರಶ್ನೆ.
ಪ್ರ: ಶ್ರೋತೃಗಳಿಗೆ ಸಿಗುವುದು ಸಿಕ್ಕಿಯೇ ಸಿಗುತ್ತದೆ ಎನ್ನುತ್ತೀರಾ?
ಉತ್ತರ: ಕೆಲವರು ಹಾಗನ್ನುತ್ತಾರೆ; ಕೆಲವರು ಹೀಗೆನ್ನುತ್ತಾರೆ. ಬರೇ ಹಿಂದೂಸ್ತಾನಿ ಸಂಗೀತ ಕೇಳಿಕೊಂಡು ಬಂದಿರುವವರಿಗೆ ಜುಗಲ್ಬಂದಿ ಇ?ವಾಗುವುದಿಲ್ಲ. ತಕ್ಕಮಟ್ಟಿಗೆ ಹಿಂದೂಸ್ತಾನಿ, ತಕ್ಕಮಟ್ಟಿಗೆ ಕರ್ನಾಟಕಿ ಎರಡೂ ಕೇಳಿಕೊಂಡು ಬಂದವರಿಗೆ ಜುಗಲ್ಬಂದಿ ಅಂದರೆ ಅದ್ಭುತ ಕಾರ್ಯಕ್ರಮ ಅನ್ನಿಸುತ್ತದೆ. ಎಲ್ಲವೂ ನೋಡುವ ದೃಷ್ಟಿ(ಠಿeಡಿಛಿeಠಿಣioಟಿ)ಯಲ್ಲಿ ಇದೆ. ಯಾವುದನ್ನೂ ಇದು ಸರಿ ಇದು ತಪ್ಪು ಅಂತ ಹೇಳುವುದಕ್ಕೆ ಆಗುವುದಿಲ್ಲ. ಏಕೆಂದರೆ ಅದು ಕಲೆ; ಆರ್ಟ್.
ಪ್ರ: ಈಗ ನಿಮಗೆ ಯಾವುದು ಜಾಸ್ತಿ ಇವೆ, ಹಿಂದೂಸ್ತಾನಿ ಕಚೇರಿಗಳೆ ಅಥವಾ ಜುಗಲ್ಬಂದಿಗಳೆ?
ಉತ್ತರ: ಎಲ್ಲ ಇವೆ. ಹಿಂದೂಸ್ತಾನಿ ಇದೆ, ಜುಗಲ್ಬಂದಿ ಇದೆ; ಫ್ಯೂಶನ್ನೂ ಇದೆ. ನಾನು ನನ್ನ ಮಗ (?ಡ್ಜ) ಅಪ್ಪ- ಮಗನ ಜುಗಲ್ಬಂದಿ ಕೂಡ ಮಾಡುತ್ತೇವೆ; ಎಲ್ಲ ಥರದ ಕಚೇರಿಗಳಿವೆ.
ಪ್ರ: ನಿಮ್ಮ ಕಚೇರಿಗಳನ್ನು ಸಾಂಪ್ರದಾಯಿಕ ಶೈಲಿಯಲ್ಲೇ ಮಾಡುತ್ತೀರಾ ಅಥವಾ ಅದರಲ್ಲಿ ಏನಾದರೂ ಬದಲಾವಣೆ, ಪ್ರಯೋಗಗಳು ಇವೆಯೇ?
ಉತ್ತರ: ಡಿಪೆಂಡ್ಸ್ (ಸಂದರ್ಭಕ್ಕೆ ತಕ್ಕಂತೆ). ಅದು ನನ್ನ ಹಿಂದೂಸ್ತಾನಿ ಸೋಲೋ ಕಚೇರಿಯಾದರೆ ಸಾಂಪ್ರದಾಯಿಕ (ಟ್ರೆಡಿಶನಲ್) ಶೈಲಿಯಲ್ಲೇ ಇರುತ್ತದೆ.
ಪ್ರ: ಪೂರ್ತಿ ತಂತ್ರಕಾರಿ ಶೈಲಿಯನ್ನು ಅನುಸರಿಸುವವರಿಗೆ ಸಾಹಿತ್ಯ ಬೇಡವೇ?
ಉತ್ತರ: ಹಿಂದೂಸ್ತಾನಿ ಸಂಗೀತದ ವಾದ್ಯಗಾರರಿಗೆ ಸಾಹಿತ್ಯದ ಸಂಬಂಧ ಬರುವುದಿಲ್ಲ; ನಾವು ಯಾವುದೇ ಸಾಹಿತ್ಯವನ್ನು ನುಡಿಸುವುದಿಲ್ಲ.
ಪ್ರ: ಬಂದೀಶ್ ಬೇಡವೇ ಬೇಡವೆ?
ಉತ್ತರ: ಬೇಕಾಗಿಲ್ಲ; ನಮ್ಮದೇ ಬಂದೀಶ್ ನಾವು ಮಾಡಿಕೊಳ್ಳಬಹುದು.
ಪ್ರ: ಗಾಯಕಿ ಶೈಲಿ ಅಂದರೆ ಅಲ್ಲಿ ಬಂದೀಶ್ ಬರುತ್ತದಲ್ಲವೆ?
ಉತ್ತರ: ನಾವು ನುಡಿಸುತ್ತೇವೆ, ಅ?. ಸುಮಾರು ಜನ ಗಾಯಕಿ ಪದ್ಧತಿಯವರು ಆಲಾಪ್, ಮತ್ತೆ ಅದೇ ಥರ ಒಂದು ಧಾಟಿಯನ್ನು ನುಡಿಸುತ್ತಾರೆ. ಬಂದೀಶನ್ನು ಅದು ಇರುವಂತೆಯೇ ನುಡಿಸುವುದಿಲ್ಲ. ನಮಗೆ ಸಾಹಿತ್ಯವಲ್ಲ, ಆ ಭಾವನೆ ಮುಖ್ಯ. ರಾಗದಲ್ಲಿರುವ ಭಾವ ಮುಖ್ಯ. ಯಾವ ಭಾವವನ್ನು ಅದು ಅಭಿವ್ಯಕ್ತಪಡಿಸಬೇಕು; ಅದು ನಿಮ್ಮ ಕೊಳಲಿನಲ್ಲಿ ಆಗುತ್ತಾ ಇದೆಯೋ ಇಲ್ಲವೋ ಎಂಬುದು ಮುಖ್ಯ. ಬಂದೀಶ್ ಯಾವುದಾದರೂ ಆಗಬಹುದು; ಗಾಯಕಿ ಪದ್ಧತಿಗೂ ಅ?; ಸಾಹಿತ್ಯ ಇರಲಿ, ಬಿಡಲಿ. ಎ? ಮಂದಿ ಹಿಂದೂಸ್ತಾನಿ ಗಾಯಕರದ್ದು ಕೂಡ ಯಾವ ಸಾಹಿತ್ಯ, ಏನು ಹಾಡುತ್ತಾರೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಗಮನವೂ ಇರುವುದಿಲ್ಲ. ಪಾರ್ಸೀ ಶಬ್ದಗಳಿದ್ದರೆ ಅದರ ಅರ್ಥ ಏನೆಂದು ನೀವು ಎಲ್ಲಿ ಹುಡುಕುತ್ತೀರಿ? ಅದು ಶೃಂಗಾರ ರಸವೋ, ಭಕ್ತಿ ರಸವೋ ಏನೂ ಗೊತ್ತಾಗುವ ಹಾಗಿಲ್ಲ. ಈಗ ಭೀಮಸೇನ ಜೋಶಿ ಅವರು ’ಚಂಗೇ ನೈನೂ ವಾಲಿಯಾ ಗುಡಿಯಾ?’ ಎಂದು ಹಾಡುತ್ತಾರೆ. ಅದು ಶೃಂಗಾರರಸದ ಸಾಹಿತ್ಯ. ಆದರೆ ರಾಗ ದುಃಖದ್ದು, ತೋಡಿ! ರಾಗಭಾವ ಮುಖ್ಯ, ಸಾಹಿತ್ಯಗೌಣ.
ಪ್ರ: ಯಾವ ರಾಗಕ್ಕೆ ಯಾವ ರಸ ಎಂದು ಏನೂ ಮಾಡಲಿಕ್ಕೆ ಆಗುವುದಿಲ್ಲ ಅಲ್ಲವೇ?
ಉತ್ತರ: ಸಾಹಿತ್ಯ ಕೂಡ. ನೀವು ಹಾಗೆಯೇ ಓದಿದರೂ ಏನೆಂದು ನಿಮಗೆ ಅರ್ಥ ಆಗುವುದಿಲ್ಲ. ಏಕೆಂದರೆ ಕೆಲವು ಹಳೆಯ ಸಾಹಿತ್ಯ ಸಾಕ? ಅಪಭ್ರಂಶ ಆಗಿರುತ್ತದೆ. ಒಟ್ಟಿನಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಸಾಹಿತ್ಯಕ್ಕೆ ಬಹಳ ಕಮ್ಮಿ ಮೌಲ್ಯ (ವಾಲ್ಯೂ); ವಿಶೇ?ವಾಗಿ ಕಿರಾಣಾ ಘರಾಣಾದಲ್ಲಿ. ಭೀಮಸೇನ ಜೋಶಿ ಅವರ ಶಿ?ರಲ್ಲಿ ಕೆಲವರು ಎ? ಸರ್ತಿ ಒಂದು ಬಂದೀಶನ್ನು ನಿಗದಿತ ರಾಗವನ್ನು ಬಿಟ್ಟು ಬೇರೆ ರಾಗದಲ್ಲಿ ಹಾಡಿರುತ್ತಾರೆ. ಆ ಥರವೂ ಆಗಿರುತ್ತದೆ. ಏಕೆಂದರೆ ನಾವು ಸಂಗೀತದಲ್ಲಿ ಮುಳುಗಿಹೋಗಿರುತ್ತೇವೆ. ಯಾವ ಶಬ್ದ, ಏನು ಎನ್ನುವುದರ ಕಡೆ ಗಮನವೇ ಇರುವುದಿಲ್ಲ. ಅ?ರಮಟ್ಟಿಗೆ ಸಾಹಿತ್ಯ ಗೌಣವಾಗಿರುತ್ತದೆ. ಇನ್ನು ನಾವಂತೂ ವಾದ್ಯಗಾರರು. ನಮಗೆ ಸಾಹಿತ್ಯದೊಂದಿಗೆ ಸಾಮಾನ್ಯವಾಗಿ ಸಂಬಂಧ ಇರುವುದೇ ಇಲ್ಲ. ಅ? ನಮಗೆ ಸ್ವಾತಂತ್ರ್ಯ ಇರುತ್ತದೆ; ಸಾಹಿತ್ಯವನ್ನೇ ನುಡಿಸಬೇಕು ಎಂದಿಲ್ಲ.
ಪ್ರ: ಗಾಯಕಿ ಶೈಲಿಗೆ ಕೂಡ ಸಾಹಿತ್ಯ ಮುಖ್ಯವಲ್ಲ; ಅಲ್ಲವೇ?
ಉತ್ತರ: ಅದು ಶೈಲಿ; ಗಾಯಕನು ಹಾಡುವ ಶೈಲಿ ಏನಿದೆ ಅದು ಮುಖ್ಯ; ಶಬ್ದವಲ್ಲ. ಅವನು ಯಾವ ಸ್ವರದಿಂದ ಯಾವ ಸ್ವರಕ್ಕೆ ಹೋಗುತ್ತಾನೆ, ಹೇಗೆ ಹೋಗುತ್ತಾನೆ, ಗಮಕ ಎಲ್ಲಿ ಬಳಸುತ್ತಾನೆ – ಆ ತಾಂತ್ರಿಕತೆಗಳೇ ಗಾಯಕಿ ಶೈಲಿ. ಗಾಯಕಿ ಅಂದರೆ ಸಾಹಿತ್ಯವಲ್ಲ; ಅದಕ್ಕೆ ಸಾಹಿತ್ಯದ ಸಂಬಂಧವಿಲ್ಲ. ಅವನು ಪಾರ್ಸಿ ನುಡಿಸಿದರೂ ಅ?, ಹಿಂದಿ ನುಡಿಸಿದರೂ ಅ?. ಆ ರಾಗಭಾವ ಅವನ ಸಂಗೀತದಲ್ಲಿ ಹೇಗೆ ಹೊರಹೊಮ್ಮುತ್ತದೆ ಅದು ಮುಖ್ಯ; ಅದನ್ನು ನಾವು ಫಾಲೋ ಮಾಡುತ್ತೇವೆ.
ಪ್ರ: ಎಲ್ಲ ಘರಾಣೆಗಳಿಗೂ ಒಂದೇ ರೀತಿಯಾ?
ಉತ್ತರ: ಕೆಲವು ಘರಾಣೆಗಳಲ್ಲಿ ನಿಮಗೆ ಸಾಹಿತ್ಯ ಕೇಳಿಸುತ್ತದೆ. ಆದರೆ ನಿಮಗೆ ಅರ್ಥ ಆಗುವುದಿಲ್ಲ. ನೀವು ಗಮನ ಕೊಡುವುದು, ನಿಮ್ಮ ಮನಸ್ಸಿಗೆ ತಟ್ಟುವುದು ಸಂಗೀತಗಾರರು ಹಚ್ಚುವ ಸ್ವರದಿಂದ. ಅವರು ಸೃಷ್ಟಿಸುತ್ತಿರುವ ಭಾವದಿಂದ. ಗಾಯಕರು ಭಾವವನ್ನು ಸೃಷ್ಟಿಸುವುದಕ್ಕೆ ಏನು ಕ? ಪಡುತ್ತಾರೆ; ಆ ಭಾವವನ್ನು ನಾವು ಕೊಳಲಿನಲ್ಲಿ ತೆಗೆಯುತ್ತೇವೆ. ಅದು ಗಾಯಕಿ ಪದ್ಧತಿ; ಸಾಹಿತ್ಯಕ್ಕೆ ಇಲ್ಲಿ ಜಾಸ್ತಿ ಯಾವುದೇ ಪಾತ್ರವಿಲ್ಲ. ರಾಗವೇ ಮುಖ್ಯ. ಅ?ರಮಟ್ಟಿಗೆ ಅದು ಶಕ್ತಿಶಾಲಿ ಇರುತ್ತದೆ.
ಪ್ರ: ಹಾಗಾದರೆ ಆ ವಿಷಯದಲ್ಲಿ ಕರ್ನಾಟಕ ಸಂಗೀತಕ್ಕೂ ಹಿಂದೂಸ್ತಾನಿ ಸಂಗೀತಕ್ಕೂ ತುಂಬ ವ್ಯತ್ಯಾಸವಿದೆ.
ಉತ್ತರ: ಹೌದು. ಹಿಂದೂಸ್ತಾನಿ ಸಂಗೀತದಲ್ಲಿ ಅದೇ ಕಾರಣಕ್ಕೆ ತರಾನಾಗಳು ಕೂಡ ಹುಟ್ಟಿಕೊಂಡವು. ಶಬ್ದಗಳು ಎಲ್ಲೂ ಸಿಕ್ಕಿಲ್ಲ ಎಂದ ತಕ್ಷಣ ತನನನ ಎಂದು ಹಾಡುತ್ತಾರೆ; ಅವರವರ ತರಾನಾವನ್ನು ಅವರವರು ಹಾಡಬಹುದು; ಸಾಹಿತ್ಯ ಬೇಕೆಂದಿಲ್ಲ.
ಪ್ರ: ಇಂದಿನ ತಲೆಮಾರಿನ ಸಂಗೀತಸಾಧನೆಯ ಬಗ್ಗೆ ಏನು ಹೇಳುತ್ತೀರಿ?
ಉತ್ತರ: ಪ್ರತಿಯೊಂದು ತಲೆಮಾರಿನಲ್ಲೂ ಕೆಲವು ಪ್ಲಸ್ ಪಾಯಿಂಟ್ಗಳು ಇರುತ್ತವೆ. ಇಂದಿನ ತಲೆಮಾರಿನ ಕಲಾವಿದರಲ್ಲೂ ಅಷ್ಟೆ; ಪ್ರಬುದ್ಧತೆಯಿಂದ ಹಾಡುತ್ತಾರೆ, ನುಡಿಸುತ್ತಾರೆ. ಕ್ಲಿ?ಕರವಾದ ರಾಗ ಮತ್ತು ತಾಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸಂಪ್ರದಾಯವನ್ನು ಯಾರೂ ಬಿಡುತ್ತಿಲ್ಲ; ಕರಾರುವಾಕ್ಕಾಗಿ ಅನುಸರಿಸುತ್ತಿದ್ದಾರೆ. ಕಷ್ಟಕರವಾದ ಸವಾಲೊಡ್ಡುವ ವಿಷಯಗಳನ್ನು ಕೈಗೆತ್ತಿಕೊಳ್ಳುತ್ತಾರೆ. ಆದ್ದರಿಂದ ಶಾಸ್ತ್ರೀಯ ಸಂಗೀತಕ್ಕೆ ಯಾವುದೇ ರೀತಿಯ ಬರ ಬಂದಿಲ್ಲ. ಇಂದಿನ ಕಲಾವಿದರು ೨೦ ವರ್ಷ ವಯಸ್ಸಿನಲ್ಲಿದ್ದಾಗಲೇ ಬಹಳ ಪಕ್ವತೆ(ಮೆಚ್ಯುರಿಟಿ) ಯನ್ನು ತೋರಿಸುತ್ತಾರೆ. ಚಿಕ್ಕಮಕ್ಕಳು ಕೂಡ ಬಹಳಷ್ಟು ಅದ್ಭುತವಾಗಿ ಮತ್ತು ಹಳೆಹಳೆಯ ರಚನೆಗಳನ್ನು ಹುಡುಕಿ ತೆಗೆದು ಪ್ರಾಕ್ಟೀಸ್ ಮಾಡಿ ಹಾಡುತ್ತಾರೆ. ಆದ್ದರಿಂದ ಲಯದ ಕಡೆಗೆ ಧಾವಿಸುತ್ತಾರೆ ಎಂದು ಹೇಳುವುದು ತಪ್ಪಾಗುತ್ತದೆ. ಹೌದು; ಲಯಕ್ಕೆ ವಿಶೇಷವಾದ ಪ್ರಾಮುಖ್ಯವನ್ನು ಎಲ್ಲರೂ ಕೊಡುತ್ತಿರುವುದು ನಿಜ. ಏಕೆಂದರೆ ಅದರಲ್ಲೊಂದು ಮಜಾ ಇದೆ; ಅದರದ್ದೊಂದು ಸುಖ ಇದೆ. ಬರೇ ಸ್ವರ ಸುಖವೆಂದು ಅದರ ಹಿಂದೆ ಬಿದ್ದರೆ ಲಯದ ಸುಖವನ್ನು ಅನುಭವಿಸುವುದು ಯಾವಾಗ? ನಮ್ಮಿಂದ ಸಾಧ್ಯವಾಗುತ್ತದೆ ಎಂದರೆ ಯಾಕೆ ಬಿಡಬೇಕು? ಇನ್ನು ಈಗಿನ ತಲೆಮಾರಿನ ಒಂದು ವಿಶೇಷ ಗುಣವೆಂದರೆ, ಕೇವಲ ಒಂದಕ್ಕೆ ಸೀಮಿತವಾಗದೆ ಅನೇಕ ಪ್ರಕಾರಗಳಲ್ಲಿ ಕೆಲಸ ಮಾಡುತ್ತಾರೆ; ಅಥವಾ ಸಂಗೀತದಲ್ಲಿ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಬೇರೆ ಏನು ವಿಭಿನ್ನತೆ ತರಬಹುದು, ಏನೇನು ಮಾಡಬಹುದು ಅ?ನ್ನೂ ಮಾಡುತ್ತಿದ್ದಾರೆ. ಅದು ಕೆಲವರಿಗೆ ಇವರು ಸಂಪ್ರದಾಯವನ್ನು ಬಿಟ್ಟುಹೋಗುತ್ತಿದ್ದಾರೆ ಎಂದು ಅನ್ನಿಸಿರಬಹುದು. ಆದರೆ ಅದು ತಪ್ಪು. ಎಲ್ಲವನ್ನೂ ನೀವು ಸೇರಿಸಿಕೊಳ್ಳುತ್ತಾ ಹೋಗುತ್ತಿರುವಾಗ ನಿಮ್ಮ ಸಂಗೀತವನ್ನು ನೀವು ಬೆಳೆಸುತ್ತಾ ಇದ್ದೀರಿ ಎಂದರ್ಥ. ಹಿಂದೆ ಘರಾಣಾ ವ್ಯವಸ್ಥೆ ಇತ್ತು. ಕಲಿತ ಘರಾಣೆಯದ್ದು ಮಾತ್ರ ಹಾಡುತ್ತಿದ್ದರು. ಬೇರೆ ಘರಾಣೆಯದ್ದು ಹಾಡುತ್ತಿರಲಿಲ್ಲ. ಈಗ ಹಾಗಿಲ್ಲ.
ಪ್ರ: ಈಗ ಘರಾಣೆಯನ್ನು ಯಾರೂ ಅನುಸರಿಸುವುದಿಲ್ಲವೇ?
ಉತ್ತರ: ಅಪರೂಪ (rare); ಬಹಳ ಕಮ್ಮಿ. ನಮಗಿಂತ ಹಿಂದಿನ ತಲೆಮಾರಿನಲ್ಲೇ ಅದು ವಿಲೀನ (merge) ಆಗುವುದಕ್ಕೆ ಶುರು ಆಯಿತು. ಒಬ್ಬ ಕಲಾವಿದ ಇಬ್ಬರು, ಮೂವರು ಗುರುಗಳ ಹತ್ತಿರ ಕಲಿಯುವುದಕ್ಕೆ ಶುರು ಮಾಡಿದ. ಇವರದ್ದೂ ತೆಗೆದುಕೊಂಡ, ಅವರದ್ದೂ ತೆಗೆದುಕೊಂಡ. ಭೀಮಸೇನ ಜೋಶಿ ಅವರಾಗಲಿ, ರಾಜಗುರು ಅವರಾಗಲಿ ಕೇವಲ ತಮ್ಮ ಕಿರಾಣಾ ಅಥವಾ ಗ್ವಾಲಿಯರ್ ಘರಾಣಾದಲ್ಲೇ ನಿಲ್ಲಲಿಲ್ಲ. ಗ್ವಾಲಿಯರ್ ಕಲಿತರು, ಪಟಿಯಾಲಾ ಕಲಿತರು. ಆರಾರು ತಿಂಗಳು ಒಬ್ಬೊಬ್ಬ ಗುರುವಿನ ಹತ್ತಿರ ಕಲಿತು, ’ಈ ಬಂದೀಶ್ ಕೊಡ್ರಿ ನಮಗ’ ಅಂತ ಅವರಿಂದ ಇಸ್ಕೊಂಡು ಬಂದು ಹಾಡಿದ್ದುಂಟು. ರಾಜಗುರು ಅವರು ಹಾಡಿದ್ದಾಗಲಿ, ಭೀಮಸೇನ ಜೋಶಿ ಅವರು ಹಾಡಿದ್ದಾಗಲಿ ಆಗಲೇ ಅಲ್ಲಿ ಮಿಶ್ರಣವಾಗಿದೆ; ಬೇರೆ ಬೇರೆ ರಾಗಗಳಲ್ಲಿ ಅದು ನಡೆದಿದೆ. ಇನ್ನು ವಾದ್ಯಸಂಗೀತಕ್ಕೆ ಯಾವುದೇ ಘರಾಣೆ ಇಲ್ಲ. ಅದು ನಮಗೆ ಬಿಟ್ಟದ್ದು; ನಾವು ಕಿರಾಣಾ ಘರಾಣಾದ ಗಾಯಕಿ ಪದ್ಧತಿಯನ್ನು ನುಡಿಸುತ್ತೇವೆ; ಅದು ನಮ್ಮ ಆಯ್ಕೆ. ಹಾಗೆ ಬೇರೆ ಘರಾಣಾವನ್ನು ಮೂಲವಾಗಿಟ್ಟುಕೊಂಡು ಬೇರೆ ಸಂಗೀತಗಾರರೂ ವಾದ್ಯಗಾರರೂ ಮಾಡಬಹುದು.
ಪ್ರ: ಹಿಂದೂಸ್ತಾನಿ ಸಂಗೀತದಲ್ಲಿ ನಿಮಗೆ ಇಷ್ಟವಾದ ಕಲಾವಿದರು ಯಾರು?
ಉತ್ತರ: ನನಗೆ ಪ್ರೇರಣೆ ಎಂದರೆ ಮೊದಲಿಗೆ ಭೀಮಸೇನ ಜೋಶಿಜೀ ಅವರು. ಬಳಿಕ ಅಮೀರ್ಖಾನ್ ಸಾಹೇಬರು ಮತ್ತು ಕಿಶೋರಿ ಅಮೋನ್ಕರ್ಜೀ ಅವರು ಇ?. ಈಚಿನ ತಲೆಮಾರಿನಲ್ಲಿ ರಶೀದ್ ಖಾನ್ಜೀ ಮತ್ತು ಅಜಯ್ ಚಕ್ರವರ್ತಿಜೀ ಇಷ್ಟ. ಅವರಿಂದೆಲ್ಲ ಒಂದೊಂದು ಪ್ರಭಾವ, ಪ್ರೇರಣೆ ಪಡೆದಿರುವುದು ಉಂಟು. ಅಮೀರ್ಖಾನ್ ಸಾಹೇಬರ ನೊಟೇಶನ್ ಶೈಲಿ ಮತ್ತು ಹಾಡುವ ಶೈಲಿ – ’ಸರ್ಗಮ್’ ಅಂತ ಶೈಲಿ ಇದೆ; ಅದನ್ನು ಅಳವಡಿಸಿಕೊಂಡಿದ್ದೇನೆ. ಕಿಶೋರಿಜೀ ಅವರು ಮಾಡುತ್ತಿದ್ದ ಆಲಾಪದ ಕೆಲವು ಅಂಶಗಳನ್ನು ತೆಗೆದುಕೊಂಡಿದ್ದೇನೆ. ಇನ್ನು ಭೀಮಸೇನ್ ಜೋಶಿಜೀ ಅವರ ತಾನ್ಗಳಿಂದ ಪ್ರಭಾವಿತ.
ಪ್ರ: ವಿದೇಶದಲ್ಲಿ ಯಾವ ಕಾರ್ಯಕ್ರಮ ಇರುತ್ತದೆ?
ಉತ್ತರ: ಸಂಗೀತ ಕಚೇರಿಗಳು, ಜುಗಲ್ಬಂದಿ, ಫ್ಯೂಶನ್ ಎಲ್ಲವೂ ಇರುತ್ತದೆ.
ಪ್ರ: ಮನೆಯವರ ಬಗ್ಗೆ ತಿಳಿಸಿ.
ಉತ್ತರ: ಅಮ್ಮ ಪದ್ಮಜಾ ನಮ್ಮ ಜೊತೆಗೇ ಇದ್ದಾರೆ; ಅವರು ಮೂಲತಃ ಗದಗ್ನವರು. ಸಂಗೀತ ಬಲ್ಲವರಲ್ಲ. ನನ್ನ ಪತ್ನಿ ಸಾರಿಕಾ ಧಾರವಾಡ ಮೂಲದವಳು. ಅವಳು ಫ್ಯಾಶನ್ ಡಿಸೈನಿಂಗ್ ಮಾಡುತ್ತಾಳೆ. ಮುಂಚೆ ನಟಿಯಾಗಿ ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದಳು. ಸುಮಾರು ೫೦೦ ಶೋಗಳಲ್ಲಿ ನಟಿಸಿದ್ದಾಳೆ. ಯಶವಂತ ಸರ್ದೇಶಪಾಂಡೆ ಅವರ ’ಆಲ್ ದ ಬೆಸ್ಟ್’ ನಾಟಕದಲ್ಲಿ ಮಾಡಿದ್ದಳು. ರಂಗಶಂಕರದಲ್ಲಿ ಅರುಂಧತಿ ನಾಗ್ ಅವರ ಜೊತೆ ಕೆಲಸಮಾಡಿದ್ದಾಳೆ. ಈ-ಟಿವಿಗೆ ಮಕ್ಕಳ ಸ್ಪರ್ಧೆ, ಹೆಣ್ಮಕ್ಕಳ ಸ್ಪರ್ಧೆಗಳಿಗೆ ನಿರ್ದೇಶಕಿಯಾಗಿದ್ದಳು. ರಾಮ-ಶ್ಯಾಮ-ಭಾಮ ಸಿನೆಮಾದಲ್ಲಿ ನಟಿಸಿದ್ದಳು. ನಮ್ಮ ತಂದೆಯವರ ಹತ್ತಿರ ಅವಳೂ ಸ್ವಲ್ಪ ಕೊಳಲು ಕಲಿತಿದ್ದಳು; ಕೆಲವೊಮ್ಮೆ ನುಡಿಸುತ್ತಾಳೆ. ಅದನ್ನು ಪ್ರೊಫೆಶನಲ್ಲಾಗಿ ತೆಗೆದುಕೊಳ್ಳಲಿಲ್ಲ.
ಪ್ರ: ಮಗನಿಗೆ ಬಾನ್ಸುರಿಗೆ ನೀವೇ ಗುರುವಲ್ಲವೇ?
ಉತ್ತರ: ತಂದೆ ಮತ್ತು ನಾನು ಇಬ್ಬರೂ ಕಲಿಸಿದ್ದೇವೆ. ಈಗಲೂ ನನ್ನಲ್ಲಿ ಕಲಿಯುತ್ತಿದ್ದಾನೆ. ಅದಕ್ಕೆ ಕೊನೆಯಿಲ್ಲ. ಸಂಗೀತವನ್ನೇ ಮುಖ್ಯವಾಗಿ ಇಟ್ಟುಕೊಳ್ಳಬೇಕೆನ್ನುವ ಆಸೆ ಅವನದ್ದು. ನೋಡೋಣ ಎಲ್ಲಿಯವರೆಗೆ ಹೋಗುತ್ತದೆ ಏನು ಎಂದು.
ಪ್ರ: ನಿಮಗೆ ಪಕ್ಕವಾದ್ಯಕ್ಕೆ ಇಂಥವರೇ ಎಂದು ಇದ್ದಾರಾ? ಅಥವಾ ಯಾರಾದರೂ ಆಗುತ್ತದಾ?
ಉತ್ತರ: ಶಾಸ್ತ್ರೀಯ ಸಂಗೀತಕ್ಕೆ ನನಗೆ ಬೇಕಾಗುವುದು ತಬಲಾ ಮಾತ್ರ. ನನ್ನ ಅಣ್ಣ ಕಿರಣ್ ಗೋಡ್ಖಿಂಡಿ ತಬಲಾ ನುಡಿಸುತ್ತಾನೆ. ಬೇರೆ ಯಾವಗಲ್, ರಾಜೇಂದ್ರ ನಾಕೋಡ್ ಅವರು ಇರುತ್ತಾರೆ; ಹೊರಗಿನವರೂ ಇರುತ್ತಾರೆ.
Atyuttama sandarshan. Praveenji bagge sakastu mahiti sikkitu.
E prayatnakke tamage Dhanyawadagalu.