ತಮ್ಮ ಮನೆಯಲ್ಲದಿದ್ದರೂ, ತಮ್ಮದೇ ಮನೆ ಎಂದುಕೊಂಡು ಬದುಕುವ ವಿಶಾಲ ಮನೋಭಾವದ ಬಾಡಿಗೆದಾರರು ಏನೇನೆಲ್ಲ ಅನುಭವಿಸಬೇಕಾಗುತ್ತದೆ…
ಪತ್ರಿಕೆಯೊಂದು ’ಮನೆ’ಯ ಬಗ್ಗೆ ಪ್ರಬಂಧವೊಂದನ್ನು ತನ್ನ ವಿಶೇಷ ಸಂಚಿಕೆಗಾಗಿ ಆಹ್ವಾನಿಸಿತ್ತು. ಮನೆಯ ಬಗ್ಗೆ ಒಂದು ವಿಶ್ವಕೋಶವನ್ನೇ ಬರೆದುಬಿಡುವಷ್ಟು ಜೀವನಾನುಭವ ಇದ್ದರೂ ಇವರು ಹೇಳುವುದು ಯಾವ ಮನೆಯ ಬಗ್ಗೆ? ಈಗ ನಾವು ಅಂದರೆ ಮನುಷ್ಯರು ವಾಸಿಸುತ್ತಿರುವ ಮನೆಯ ಬಗ್ಗೆಯೇ? ’ಮೇ ಹಿಸ್ ಸೋಲ್ ರೆಸ್ಟ್ ಇನ್ ಪೀಸ್’ ಅನ್ನುವಾಗ ಸೋಲ್ ರೆಸ್ಟ್ ತೆಗೆದುಕೊಳ್ಳುವ ಮನೆಯೇ? ಅಥವಾ ಎಲ್ಲಾ ಜೀವಿಗಳಿಗೂ ಪಾದವೂರಲು ಇರುವ ಒಂದೇ ಒಂದು ಆಶ್ರಯತಾಣವಾದ ಈ ಭೂಮಿ ಎಂಬ ಮನೆಯೇ? ಗೊಂದಲ ಯಾಕೆ, ಸುಮ್ಮನೆ ಸಂಪಾದಕರನ್ನು ಕೇಳಿಯೇ ಬಿಡುವ ಎಂದು ಫೋನು ಹಚ್ಚಿದೆ.
’ಕೌಗಳಿಗೆ ಶೆಡ್, ಹಕ್ಕಿಗಳಿಗೆ ನೆಸ್ಟ್, ಕುದುರೆಗಳಿಗೆ ಅದೇನೋ ಇದೆಯಲ್ಲಾ…’
’ಸ್ಟೇಬಲ್.’
’ಹಾ ಹಾ ಸ್ಟೇಬಲ್. ಹಾಗೆಯೇ ಈ ಹೋಮೋಸೆಪಿಯನ್ಸೋ ಕಪಿಯನ್ಸೋ ಆದ ನಮ್ಗೆ ’ಹೋಂ’ ಅನ್ನುವುದೊಂದು ಇರುತ್ತಲ್ಲಮ್ಮಾ, ಅದರ ಬಗ್ಗೆ ಬರೆಯಿರಿ’ ಎಂಬ ಉತ್ತರ ಆಚೆಕಡೆಯಿಂದ ಬಂತು.
ತಲೆಕೆರೆದುಕೊಂಡೆ. ಈ ’ಹೋಂ’ನಲ್ಲೂ ತರಾವರಿ ವಿಧಗಳಿರುತ್ತವಲ್ಲ, ಬಾಡಿಗೆಮನೆ, ಸ್ವಂತಮನೆ, ತಾರಸಿಮನೆ, ಹೆಂಚಿನಮನೆ, ಗಂಡನಮನೆ, ತವರುಮನೆ, ಡಾಕ್ಟರಮನೆ, ಲಾಯರಮನೆ….. ಗೊಂದಲವೋ ಗೊಂದಲ. ಪುನಃ ಸಂಪಾದಕರಿಗೆ ಫೋನು ಹಚ್ಚಿದೆ.
’ಮನೆಯೋ, ಸುಡುಗಾಡೋ, ಯಾವುದಾದರೊಂದು ನಾಲ್ಕು ಗೋಡೆ ಇರುವ ಕಟ್ಟಡದ ಬಗ್ಗೆ ಬರೀರ್ರೀ’ ಎಂದು ಫೋನು ಕುಕ್ಕಿದರು.
ಯಾವುದಾದರು ನಾಲ್ಕು ಗೋಡೆಯ ಕಟ್ಟಡ ನೆನಪಿಗೆ ಬರುತ್ತದೆಯೇ ಎಂದು ಯೋಚಿಸಿದೆ. ನಾಲ್ಕು ಗೋಡೆಯ ಕಟ್ಟಡ ಅಂದರೆ ಅದರಲ್ಲೂ ಪಾಳುಬಿದ್ದ, ಮನುಷ್ಯರಿಲ್ಲದ (ಮನುಷ್ಯರಿಲ್ಲದಿದ್ದರೆ ದೆವ್ವಗಳಾದರೂ ಇರಬೇಕಲ್ಲ), ಸೂರಿರುವ ಕಟ್ಟಡ ಅಥವಾ ಸೂರಿಲ್ಲದ……… ಒಟ್ಟು ಗೊಂದಲವಾಯ್ತು. ಪುನಃ ಸಂಪಾದಕರಿಗೆ ಫೋನು ಮಾಡಿದರೆ ಉಗಿಸಿಕೊಳ್ಳಬೇಕಾಗಬಹುದು ಎಂದು ಸುಮ್ಮನಾಗಿ ನಾಲ್ಕು ಗೋಡೆಗಳ ಬಗ್ಗೆ….. ನನಗೆ ಗೊತ್ತಿದ್ದ?ನ್ನು ಬರೆದು ಕಳುಹಿಸಿದೆ.
ಸ್ವಂತ ಮನೆಯಿಲ್ಲದೆ ಬೇರೆಯವರ ಮನೆಯಲ್ಲಿ ವಾಸಿಸುವ ನಮ್ಮಂಥ ಪರಾವಲಂಬಿ ಜೀವಿಗಳ ಬದುಕೇ ಒಂದು ವಿಚಿತ್ರ. ಒಮ್ಮೆ ಹೀಗೇ ನನ್ನವರು ನನ್ನನ್ನು ಹೊಸ ಬಾಡಿಗೆಮನೆಯೊಂದಕ್ಕೆ (ಮಂಗಳೂರು ಹೆಂಚಿನ ಹಳೆಯ ಮನೆ) ಕರೆದುಕೊಂಡುಹೋದರು. ತಾವು ಮೊದಲು ಒಳಗೆ ಹೋಗಿ ’ಬಲಗಾಲಿಟ್ಟು ಒಳಗೆ ಬಾ ಎಂದರು’. ನಾನು ಬಲಗಾಲು ಒಳಗಿಟ್ಟು ಬಂದು ನಿಧಾನಕ್ಕೆ ಮನೆಯನ್ನೆಲ್ಲ ಅವಲೋಕಿಸಿದೆ.
ಛೆ! ಬೇಡಬೇಡವೆಂದರೂ ಕೆಲವೊಮ್ಮೆ ಕೆಲವು ವಿ?ಯಗಳು ಕಣ್ಣಿಗೆ ಕಾಣಿಸಿಬಿಡುತ್ತವೆ. ಸೂರಿನ ತೊಲೆಯೊಂದಕ್ಕೆ ಸುರುಳಿ ಸುತ್ತಿ ಹೆಂಚಿನ ಒಳಗೆಲ್ಲಾ ಮೂತಿ ತೂರಿಸಿ ಆಹಾರ ಹುಡುಕುತ್ತಿದ್ದ ಭರ್ಜರಿ ಹಾವೊಂದು ನನ್ನ ಕಣ್ಣಿಗೆ ಬೀಳಬೇಕೆ? ಕ್ಷಮಿಸಿ, ಬೀಳಲಿಲ್ಲ ಕಾಣಿಸಿಕೊಳ್ಳಬೇಕೆ? ಹಲ್ಲಿ, ಜೇಡ, ಜಿರಳೆಗಳ ಹೆಸರು ಕೇಳಿದರೇ ಭಯಬೀಳುವ ನಾನು ಇನ್ನು ಈ ಹರಿದಾಡುವ ಕಶೇರುವನ್ನು ನೋಡಿದ ಮೇಲೆ ಕೇಳುವುದುಂಟೇ? ಎದೆ ಢವಢವಿಸುತ್ತಿದ್ದಂತೆಯೇ ಜೋರಾಗಿ ಕಿರುಚಿಕೊಂಡು ಎಡಗಾಲು ಹೊರಕ್ಕಿಟ್ಟು ಓಡಿಯೇ ಓಡಿದೆ.
“ತುಂಬಾ ಹೆದರಿಕೆಯಾಗ್ತಿದೆರೀ, ಇಲ್ಲಿರಲು ಸಾಧ್ಯವೇ ಇಲ್ಲ.., ಬೇರೆ ಮನೆಗೆ ಹೋಗೋಣ” ಎಂದೆ ನಡುಗುತ್ತಾ. ಕೇಳಲಿಲ್ಲವೇನೊ ಅಂದುಕೊಂಡು ಪುನಃ ಇದನ್ನೇ ಇನ್ನೊಮ್ಮೆ ಜೋರಾಗಿ ಹೇಳಿದೆ. ನಾನು ಇಷ್ಟೊಂದು ಕೂಗಾಡಿ ನಡುಗಾಡುತ್ತಿದ್ದರೂ, ಅತ್ತ ನನ್ನ ಪತಿ ನನ್ನೆಡೆಗೆ ಅಭಿಮಾನದ ದೃಷ್ಟಿಯನ್ನು ಬೀರುತ್ತಾ ಮಗುಳ್ನಗುತ್ತಾ, ಥೇಟ್ ಬಾಲಿವುಡ್ನ ಹೀರೊಗಳಂತೆ ಫೋಸ್ಕೊಟ್ಟು ನಿಂತಿದ್ದಾರೆ! ತಮ್ಮ ಕಾಲೇಜು ದಿನಗಳಲ್ಲಿ ’ಖಯಾಮತ್ ಸೆ ಖಯಾಮತ್ತಕ್’ ಸಿನೆಮಾ ನೋಡಿ ಅಮೀರ್ಖಾನ್ನ ಅಭಿಮಾನಿಯಾಗಿದ್ದ ನನ್ನ ಗಂಡನ ಜೀವನದಲ್ಲೂ ಸೇಮ್ ಟು ಸೇಮ್ ರೀತಿಯ ಸಂದರ್ಭವೊಂದು ಒದಗಿಬರಬಹುದೆಂದು ಯಾರಿಗೆ ಊಹಿಸಲು ಸಾಧ್ಯವಿತ್ತು? (ಇದೆಲ್ಲ ಆಮೇಲೆ ನನಗೆ ತಿಳಿದ ವಿಷಯ.)
ಹೆದರಿ ನಡುಗುತ್ತಿದ್ದ ನನಗೂ, ತಾನೇ ಅಮೀರ್ಖಾನ್ ಎಂಬಂತೆ ಭ್ರಮಿಸಿಕೊಂಡು ಕನಸುಕಾಣುತ್ತಿದ್ದ ನನ್ನ ಗಂಡನ ವರ್ತನೆಗೂ ಏನೇನೂ ಹೊಂದಿಕೆ ಇರಲಿಲ್ಲ. ಆದರೆ ಯಃಕಶ್ಚಿತ್ ಕೇರೆಯೊಂದಕ್ಕೆ, ಅದೂ ತನ್ನ ಪಾಡಿಗೆ ತಾನು ವಿಹರಿಸಿಕೊಂಡಿದ್ದ ನಿರ್ವಿ? ಪ್ರಾಣಿಗೆ ಹೆದರಿ ಎಲ್ಲ ಅನುಕೂಲತೆಗಳೂ ಇದ್ದ ಮನೆಯನ್ನು ಬಿಟ್ಟು ಹೋಗಲು ಸಾಧ್ಯವೇ?
ಈ ಹೆಂಚಿನಮನೆಗಳು ಮನು?ರಿಗೆ ಮಾತ್ರ ಮೀಸಲಲ್ಲ, ಅದು ಇಲಿ, ಇರುವೆ, ಜಿರಳೆ, ಹಲ್ಲಿ, ಕಪ್ಪೆ, ಗೆದ್ದಲು, ಕುಟ್ಟೆ ಹುಳು, ಹಕ್ಕಿ, ಮತ್ತೆ ಆಗಾಗ್ಗೆ ವಿಸಿಟಿಂಗ್ ಪ್ರೊಫೆಸರರಂತೆ ಬಂದು ಹೋಗುವ ಹಾವು, ಕಬ್ಬೆಕ್ಕುಗಳಿಗೂ ಇದು ಪ್ರಿಯವಾದ ತಾಣ. ಇದನ್ನು ಒಮ್ಮೆ ನನ್ನ ಯಜಮಾನರು ತಮ್ಮ ಗೆಳೆಯನಲ್ಲಿ ಹೇಳಿದಾಗ, ’ಅಯ್ಯೋ, ನಿಮ್ಮ ಮನೆಯಲ್ಲಿ ಇ? ಪ್ರಾಣಿಗಳಿರುವುದೇ? ನೀವು ನಮ್ಮ ತೋಟಕ್ಕೆ ಒಮ್ಮೆ ಬನ್ನಿ, ಇನ್ನೂ ಎಷ್ಟೊಂದು ಪ್ರಾಣಿಗಳು ಕಾಣಸಿಗುತ್ತವೆ ನೋಡಿ’ ಎಂದಾಗ ನಾನೂ ನನ್ನ ಗಂಡನೂ ಮುಖ ಮುಖ ನೋಡಿಕೊಂಡಿದ್ದೆವು.
ಇದೆಲ್ಲ ಆಗಿ ಸ್ವಲ್ಪ ಸಮಯದ ನಂತರ ಯಾವುದಾದರೂ ತಾರಸಿ ಮನೆ ಸಿಗಬಹುದೋ ಏನೋ ಎಂದು ಹುಡುಕಲು ಹೊರಟೆವು. ಒಂದು ವಠಾರದಲ್ಲಿ ಹಲವು ರೀತಿಯ ತಾರಸಿ ಮನೆಗಳು ಬಾಡಿಗೆಗೆ ಇದ್ದವು. ಎಲ್ಲಾ ಮನೆಗಳೂ ಖಾಲಿ ಇದ್ದದ್ದರಿಂದ ಬೇಕಾದವರು ತಮಗಿಷ್ಟವಾದದ್ದನ್ನು ಆಯ್ದುಕೊಳ್ಳಬಹುದಿತ್ತು. ನನಗಿ?ವಾದದ್ದು ಗಂಡನಿಗೆ ಇಷ್ಟವಾಗದೆ, ಅವರಿಗಿಷ್ಟವಾದದ್ದು ನನಗೆ ಹಿಡಿಸದೆ ಬರಿಯ ಬಾಯಿ ಜಗಳವೇ ಜಾಸ್ತಿಯಾಗಿ ಯಾವುದನ್ನೂ ಆಯ್ಕೆಮಾಡಿಕೊಳ್ಳಲಾಗದೆ ವಾಪಾಸ್ಸಾದೆವು. ಒಂದು ತಿಂಗಳು ಕಳೆದು ಬೇರೆಲ್ಲೂ ಸರಿಯಾದ ಮನೆ ಸಿಗದೆ ಪುನಃ ಅದೇ ವಠಾರಕ್ಕೆ ಹೋಗಿ, ಎಲ್ಲವೂ ಭರ್ತಿಯಾಗಿ, ಖಾಲಿ ಉಳಿದಿದ್ದ ಒಂದೇ ಒಂದು ಮನೆಯನ್ನು ಮರುಮಾತನಾಡದೆ ಆಯ್ಕೆಮಾಡಿ ಅಡ್ವಾನ್ಸ್ ಕೊಟ್ಟು ಬಂದೆವು. ’ಭಿಕ್ಷುಕರಿಗೆ ಆಯ್ಕೆಗಳಿರುವುದಿಲ್ಲ’ ನೆನಪಾಯಿತು.
ನಮ್ಮ ದೇಶದ ದೊಡ್ಡ ದೊಡ್ಡ ಸೆಲೆಬ್ರಿಟಿಗಳಲ್ಲಿ ಕೆಲವರು ಇಲ್ಲಿ ಬರೀ ಸುಮ್ಮನೆ ಇರುತ್ತಾರಷ್ಟೆ. ಅವರ ನಿಜವಾದ ಮನೆ ವಿದೇಶದಲ್ಲಿರುತ್ತದೆ. ಇಲ್ಲಿ ಉಷ್ಣತೆ ಹೆಚ್ಚಾದಾಗ ವಿದೇಶಕ್ಕೆ ಹೋಗಿ ಇದ್ದು ಇಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳುತ್ತಿರುತ್ತಾರೆ. ಆದರೆ ನಮ್ಮಂಥ ಸಾಮಾನ್ಯರಿಗೆ ಇಲ್ಲಿಯ ಉಷ್ಣತೆ ಎಷ್ಟು ಹೆಚ್ಚಾದರೂ, ಪವರ್ ಎಷ್ಟು ಕಟ್ಟಾದರೂ, ಫ್ಯಾನ್ ಗರಗರ ಸದ್ದು ಮಾಡುತ್ತಾ ಬಿಸಿಗಾಳಿ ಬೀಸುತ್ತಿದ್ದರೂ, ಮನೆ ಓನರದ್ದಾಗಿದ್ದರೂ ’ಇಲ್ಲಿದೆ ನಮ್ಮನೆ, ಅಲ್ಲಿ ಬರಿ ಸುಮ್ಮನೆ’ ಎಂದುಕೊಂಡು ನೆಮ್ಮದಿಯಾಗಿ ಇದ್ದುಬಿಡುತ್ತೇವೆ.
ಅಚ್ಛ ಮನಸ್ಸಿನ ಓನರಿರೆ
ಸ್ವಚ್ಛವಾಗಿಹ ವಠಾರವಿರೆ
ವೆಚ್ಚ ಮಾಡಿದಷ್ಟು ನೀರು ಬರುತಿರೆ
ಕಿಚ್ಚು ಹಚ್ಚಿಬಿಡು ನಿನ್ನ ವಿದೇಶೀ ಮನೆಗೆಂದ ಸಾಮಾನ್ಯ.
ನಮ್ಮ ವಠಾರದ ಬ್ರಹ್ಮಚಾರಿಯೊಬ್ಬರು ನಲ್ಲಿಯಲ್ಲಿ ನೀರು ಬಂದಾಗಲೆಲ್ಲ ಇದನ್ನು ಹಾಡುತ್ತಿರುತ್ತಾರೆ.
ಕೆಲವು ವ?ಗಳ ನಂತರ ಓನರರ ಮನೆಗೆ ಅಂಟಿಕೊಂಡಂತಿರುವ ಒಂದು ಮನೆಯಲ್ಲಿ ವಾಸಿಸುವ ಯೋಗ ನಮ್ಮ ಪಾಲಿಗೆ ಒದಗಿಬಂತು. ಓನರು ಹತ್ತಿರವಿರುವ ಬಾಡಿಗೆಮನೆ ಎ? ಚನ್ನಾಗಿದ್ದರೂ ಅದು ವಾಸಿಸಲು ಯೋಗ್ಯವಲ್ಲದ ಮನೆ ಎಂಬುದು ನನ್ನ ಅಭಿಪ್ರಾಯ. ನೀವು ಪಾಯಸಕ್ಕೆ ಹಾಕಲೆಂದು ಸ್ವಲ್ಪ ಜೋರಾಗಿ ಏಲಕ್ಕಿ ಕುಟ್ಟಿದರೂ ಸಾಕು, ಓನರ್ ಓಡಿ ಬರುತ್ತಾನೆ.
’ಮೊಳೆಗಿಳೆ ಬಡಿದು ಗೋಡೆ ಹಾಳುಮಾಡಬೇಡೀಪ್ಪಾ’ ಎಂದು ಹಲ್ಲುಕಿಸಿಯುತ್ತಾನೆ.
ಪ್ರತಿದಿನ ಗುಡಿಸಿ ಸ್ವಚ್ಛ ಮಾಡುತ್ತೇವೆಯೋ ಎಂದು ನೋಡಲು ಓನರಾಂಟಿ ದಿನಕ್ಕೊಮ್ಮೆ ತಪ್ಪದೆ ಬರುತ್ತಾಳೆ. ಕೆಲವೊಮ್ಮೆ ಈ ಓನರು-ಓನ್ರೆಸ್ ಜಗಳ ಕಾಯುತ್ತಿದ್ದರೆ ಅದನ್ನು ಸಮರ್ಥಿಸಿಕೊಳ್ಳಲು ನಮ್ಮನ್ನು ಬಳಸಿಕೊಳ್ಳುತ್ತಾರೆ. ತಮ್ಮ ತಮ್ಮ ಕೃತ್ಯಗಳನ್ನು ಒಪ್ಪಿಸಿ ತಾನು ಮಾಡಿದ್ದೇ ಸರಿ ಎಂದು ಹೇಳಿ, ಬಾಡಿಗೆದಾರರಾದ ನಮ್ಮ ಬಾಯಲ್ಲೂ ಅದನ್ನೇ ಹೇಳಿಸಿ ಕೃತಾರ್ಥರಾಗಿ ಮನೆಗೆ ಮರಳುತ್ತಾರೆ. ಇವರ ಕೃತಾರ್ಥತೆಗೆ ಬಾಡಿಗೆದಾರರು ತಮ್ಮ ಸಮಯವನ್ನು ಮೀಸಲಿಡಲೇಬೇಕಾಗುತ್ತದೆ. ಇನ್ನು ನೀರು, ಕರೆಂಟಿನ ಮೀಟರ್, ಟಾಯ್ಲೆಟ್ಗಳು ಓನರಿಗೂ ಬಾಡಿಗೆಯವರಿಗೂ ಕಾಮನ್ ಆಗಿರುವ ಔಟ್ಹೌಸ್ಗಳಾದರಂತೂ ಮುಗಿದೇಹೋಯಿತು.
’ನಿಮ್ಮೆಜಮಾನ್ರು ದಿನಾ ಇಸ್ತ್ರಿ ಹಾಕಿದ ಬಟ್ಟೇನೇ ಹಾಕೊಳ್ತಾರೇನೋ…..ನೀವು ಸಾಂಬಾರಿಗೆ ದಿನಾ ಮಿಕ್ಸೀನಲ್ಲೇ ರುಬ್ತೀರೇನೋ….’ ಎಂದು ರಾಗವೆಳೆಯುತ್ತಾ ಮುಂದಿನ ಯುದ್ಧಕಾಂಡಕ್ಕೆ ನಾಂದಿಪದ್ಯ ಹಾಡಿಯೇಬಿಡುತ್ತಾರೆ. ಇದಿ? ಅಲ್ಲ, ಓನರ್ ಆಯ್ಕೆ ಮಾಡಿದ ಬಾಡಿಗೆದಾರರಾದರೆ ಓನ್ರೆಸ್ನ ಅಸಮಾಧಾನವನ್ನೂ, ಓನರಾಂಟಿಯ ಜನವಾದರೆ ಓನರಂಕಲ್ನ ಅಸಮಾಧಾನವನ್ನೂ, ತಮ್ಮ ಮನೆಯಲ್ಲದಿದ್ದರೂ, ತಮ್ಮದೇ ಮನೆ ಎಂದುಕೊಂಡು ಬದುಕುವ ವಿಶಾಲ ಮನೋಭಾವದ ಬಾಡಿಗೆದಾರರು ಅನುಭವಿಸಲೇಬೇಕಾಗುತ್ತದೆ.
ಪ್ರತೀವ? ಜನವರಿಯಲ್ಲಿ ಬಾಡಿಗೆ ಹೆಚ್ಚಿಸುವ ಓನರ್ ಡಿಸೆಂಬರ್ನಲ್ಲೇ ನೆಗೆದುಬೀಳಲಿ ಎಂಬುದು ವಠಾರದ ಬಾಡಿಗೆದಾರರೆಲ್ಲರ ಹಾರೈಕೆಯಾಗಿರುತ್ತದೆ. ಕಲಿಗಾಲದಲ್ಲಿ ಶಪಿಸಿದ? ಆಯು? ಹೆಚ್ಚು ಎಂಬುದು ಪಾಪ ಇವರಿಗೆ ಗೊತ್ತಿಲ್ಲ. ಎಲ್ಲಾ ಓನರ್ರೂ ಒಂದೇ, ಒಬ್ಬ ಅಣ್ಣ, ಇನ್ನೊಬ್ಬ ತಮ್ಮ ಎಂದು ಬಾಡಿಗೆ ಮನೆಯಲ್ಲಿ ಹಲವು ವ? ಕಳೆದ ವೇದಾಂತಿಗಳ ಮಾತು.
’ಮೂರ್ಖ ಮನೆ ಕಟ್ಟಿಸುತ್ತಾನೆ; ಬುದ್ಧಿವಂತ ಅದರಲ್ಲಿ ವಾಸಿಸುತ್ತಾನೆ’ ಎಂಬ ಗಾದೆಯನ್ನು ಹೌಸಿಂಗ್ ಲೋನ್ ತೆಗೆದು ತೀರಿಸಲಾಗದೆ ಮನೆ ಮಾರಿದವನೊಬ್ಬ ನಿಜ ಮಾಡಿ ತೋರಿಸಿರುತ್ತಾನೆ. ತಮ್ಮ ಹೊಸ ಮನೆಯ ಬಗ್ಗೆ ವಿಪರೀತ ಕಾಳಜಿ ವಹಿಸುತ್ತಿದ್ದ ಪ್ರೊಫೆಸರರೊಬ್ಬರಿಗೆ ರಾತ್ರಿ ಗಾಳಿ ಕೊಂಚ ಜೋರಾಗಿ ಬೀಸಿದರೂ ಕಣ್ಣಿಗೆ ನಿದ್ದೆ ಹತ್ತುತ್ತಿರಲಿಲ್ಲವಂತೆ. ಹೊಸ ಮನೆ ಕಟ್ಟಿಸಿದ ನಂತರ ಒಂದು ದಿನವೂ ನನ್ನ ಗಂಡ ಸುಖವಾಗಿ ನಿದ್ರಿಸಿಲ್ಲ ಎಂದು ಅವರ ಹೆಂಡತಿ ಜೋಯಿಸರಿಂದ ಮಂತ್ರಿಸಿದ ತಾಯಿತ ತಂದೂ ತಂದೂ ಗಂಡನ ಕೈಗೆ ಕಟ್ಟುತ್ತಿದ್ದಳಂತೆ. ಕೊನೆಗೆ ಬೇರೆ ದಾರಿ ಕಾಣದೆ ಕಟ್ಟಿದ ಹೊಸ ಮನೆಯನ್ನು ಮಾರಿ ಬಾಡಿಗೆ ಮನೆಗೆ ಹೋದರಂತೆ. ಅಲ್ಲಿ ಹೋದ ನಂತರ ಪ್ರೊಫೆಸರರು ಸುಖವಾಗಿ ಮೊದಲಿನಂತೆ ನಿದ್ರಿಸಲು ತೊಡಗಿದರಂತೆ.
ನಮ್ಮ ಮನೆಯ ಎದುರಿನಲ್ಲೇ ದೊಡ್ಡ ಅಪಾರ್ಟ್ಮೆಂಟೊಂದು ತಲೆಯೆತ್ತುತ್ತಿದೆ. ಅದು ಅನಿಕೇತನ್ ವಿಹಾರಿ ಎಂಬ ದೊಡ್ಡ ಉದ್ಯಮಿಗೆ ಸೇರಿದ್ದು ಎಂದು ಜನ ಹೇಳುತ್ತಾರೆ. ?ಕ್ಸ್ಪಿಯರ್ ಹೇಳುವ ’ಹೆಸರಲ್ಲೇನಿದೆ?’ ಎಂಬ ಮಾತು ಯಾಕೋ ಮತ್ತೆ iತ್ತೆ ನೆನಪಿಗೆ ಬರುತ್ತಿದೆ.
ಮಕ್ಕಳು ದೊಡ್ಡವರಾಗುತ್ತಿದ್ದಂತೆಯೇ ಮನೆ ಸಣ್ಣದಾಯಿತು ಎಂದು ಗೊಣಗುವವರು ಬಹಳ. ಮಂಗಳಗ್ರಹದಲ್ಲಿ ನೀರು ನೆರಳು ಇದೆಯೇ ಎಂದು ಹುಡುಕಿಕೊಂಡು ಹೋದದ್ದೂ ಇದೇ ಕಾರಣದಿಂದ. ಅಲ್ಲೇನಾದರೂ ಇವರು ಹುಡುಕಾಡಿದ್ದು ಸಿಕ್ಕಿಬಿಟ್ಟಿದ್ದರೆ ನಮ್ಮ ನಡುವಿನ ಕೆಲವರು ಈಗ ಮಂಗಳ ಡೀನೋಟಿಫಿಕೇಶನ್ ಹಗರಣದಲ್ಲಿ ಸಿಲುಕಿರುತ್ತಿದ್ದರು. ಹಾಗೆ ನೋಡಿದರೆ ನಮ್ಮ ಸೂರ್ಯನಂತೆ ಇನ್ನೆ? ಸೂರ್ಯರು ಈ ವಿಶ್ವದಲ್ಲಿ ಇರುವರೋ… ಅವರ ಸುತ್ತ ಅದೆ? ಭೂಮಿಗಳೋ……ಆ ಭೂಮಿಗಳಲ್ಲೆಲ್ಲ ಅದೆ? ರೀತಿಯ ಜೀವಿಗಳಿರುವುದೋ…….ಆ ಜೀವಿಗಳಿಗೆಲ್ಲ ಅದೆ? ರೀತಿಯ ಮನೆ……?
ಬಾಲ್ಯವನ್ನು ನೆನೆಸಿಕೊಂಡಾಗ ನಮ್ಮ ಮಲೆನಾಡಿನ ಮನೆ ನೆನಪಿನಂಗಳದಲ್ಲಿ ಬಂದು ನಿಲ್ಲುತ್ತದೆ. ಅದರ ಸುತ್ತ ಕುಳಿತು ಹರಟುತ್ತಾ, ಹಪ್ಪಳ, ಹಲಸಿನ ಬೀಜಗಳನ್ನು ಸುಟ್ಟು ತಿನ್ನುತ್ತಾ, ಬಿಡದೆ ಸುರಿಯುವ ಮಳೆಯನ್ನೂ, ಚಳಿಯನ್ನೂ ಅನುಭವಿಸುತ್ತಿದ್ದೆವು. ದಟ್ಟವಾದ ಮಂಜಿನ ಹೊಗೆಯಿಂದಾಗಿ ಇಡೀ ಪ್ರಪಂಚದಲ್ಲಿ ನಾವು ಮಾತ್ರ ಇದ್ದೆವೇನೋ ಅನ್ನಿಸಿಬಿಡುತ್ತಿತ್ತು. ಹಾಗೆಯೇ ಕೆಲವು ಕ್ಷಣ ನಮ್ಮ ಮನೆಯೂ ಮುಚ್ಚಿ ಹೋಗಿ ಜೀವನದ ನಶ್ವರತೆಯನ್ನು ಅರಿವಿಗೆ ತಂದುಕೊಡುತ್ತಿತ್ತು. ಈ ದೆವ್ವಗಳ ಕಥೆಗಳಲ್ಲೆಲ್ಲ ಪಾಳುಬಿದ್ದ ಮನೆಯೊಂದು ಇರಲೇಬೇಕಲ್ಲವೆ? ಹಾಗಿದ್ದರೆ ಸತ್ತು ಪ್ರೇತವಾದ ಮೇಲೂ ಮನು?ನಿಗೆ ಮನೆ ಅಂತ ಒಂದು ಇರಲೇಬೇಕು ಅಂತಾಯ್ತು.
ಸಂಪಾದಕರು ಹೇಳಿದ ನಾಲ್ಕು ಗೋಡೆಯ ಕಟ್ಟಡದ ಬಗೆಗೆ ನನಗೆ ತೋಚಿದಂತೆ ಒಂದು ಪ್ರಬಂಧವನ್ನೇನೋ ಗೀಚಿ ಕಳುಹಿಸಿದೆ. ಆದರೆ ಅವರು ಹೇಳುವ ’ಮನೆ’ ಯಾವುದು ಎಂಬ ಗೊಂದಲ ಇನ್ನೂ ಹಾಗೆಯೇ ಉಳಿದಿದೆ.