ಸಾರಿನ ಜೊತೆಗೆ ಸಣ್ಣಗೆ ಹೆಚ್ಚಿ, ಕಾಯಿತುರಿ ಸ್ವಲ್ಪ ಜಾಸ್ತಿನೇ ಸೇರಿಸಿ ಹದವಾಗಿ ಒಗ್ಗರಣೆ ಕೊಟ್ಟ ಹುರಳೀಕಾಯಿ ಪಲ್ಯವಿದ್ದರೆ ಅದರ ಸೊಗಸೇ ಸೊಗಸು!
ಆಫೀಸಿನಲ್ಲಿ ನನ್ನ ಕ್ಯೂಬಿಕಲ್ಗೆ ಬಂದ ಮಹೇಶ ’ಏನ್ ಸಾರೂ, ಸಪ್ಪಗೆ ಕುತ್ಕಂಡ್ ಬಿಟ್ಟಿದ್ದೀರಾ’ ಎಂದು ಕಿವಿಯ ಬಳಿ ಮೆಲ್ಲನೆ ಹೇಳಿದಾಗ, ಏನೂ ಹೇಳದೆ ಸುಮ್ಮನೆ ತಲೆ ಎತ್ತಿ ಅವನ ಮುಖವನ್ನೇ ನೋಡುತ್ತಾ ಕುಳಿತೆ. ಹೊಸದಾಗಿ ಈ ಆಫೀಸಿಗೆ ಬಂದಿದ್ದರಿಂದ ಕೊಂಚ ಕಲಸುಮೇಲೋಗರವಾದಂತೆ ಕಾಣುತ್ತಿತ್ತು. “ಅಯ್ ಅದ್ಯಾಕ ಅ? ಯೋಚ್ನೆ ಮಾಡ್ತೀರಾ ಸಾರೂ, ಈ ಬಾಸ್ನ ಸರಿಮಾಡಕ್ಕೆ ನಾನೊಂದು ಉಪಾಯ ಹ್ಯೋಳ್ಕೊಡ್ತೀನಿ ಸಾರೂ’ ಎಂದು ನನ್ನ ಕಿವಿಯ ಬಳಿ ಉಸುರಿದ. ಕೇಳಿದ ತಕ್ಷಣ ನನಗೆ ನಗು ತಡೆಯಲಾಗಲಿಲ್ಲ. ಬಾಸ್ ಜೊತೆ ಏಗಲು ಹಳೆಯ ಹುಲಿಗಳಂತಿರುವ, ಮಾತುಮಾತಿಗೂ ಸಾರೂ, ಸಾರೂ…. ಎನ್ನುವ ಈ ’ಸಾರು’ಗಳ ಸಹಾಯ ಹೊಸದಾಗಿ ಬಂದವರಿಗೆಲ್ಲ ಒಂದು ಹಂತದವರೆಗೆ ಅನಿವಾರ್ಯ.
ಆದರೆ ಈಗ ನಾನು ಹೇಳಲುಹೊರಟಿರುವುದು ಆ ’ಸಾರು’ಗಳ ಬಗ್ಗೆ ಖಂಡಿತ ಅಲ್ಲ. ಅದು ಸಾರು…. ತಿಳಿಸಾರಿನ ಬಗ್ಗೆ. ಅಹಹಾ! ತಿಳಿಸಾರು ಅಂದ ತಕ್ಷಣ ನಿಮ್ಮ ನಾಸಿಕ ಕಮಲದ ಹೂವಿನ?ಗಲ ಅರಳಿ ಬ್ರಹ್ಮರಂಧ್ರಕ್ಕೆ ಸೂಚನೆ ರವಾನಿಸಿ, ಪೃ?ವನ್ನು ಮೂರುಬಾರಿ ಕುಲುಕಿ ಅಳ್ಳಾಡಿಸಿ ಚಕ್ಕಳ- ಬಕ್ಕಳ ಹಾಕಿ ಸರಿಯಾಗಿ ಕುಳಿತು, ನಾಲಗೆಯಿಂದ ತುಟಿಗಳೆರಡನ್ನೂ ಸವರಿ ತಿಳಿಸಾರನ್ನು ಸವಿಯಲು ಸಿದ್ಧರಾಗಿಬಿಟ್ಟಿರಿ ಅಲ್ಲವಾ? ಬರುತ್ತೆ, ಬರುತ್ತೆ ಕೊಂಚ ಸಾವಧಾನವಾಗಿ ಕುಳಿತುಕೊಳ್ಳಿ.
ಸಾರು ಕುದಿಯಲು ಪ್ರಾರಂಭವಾಗುತ್ತಿದ್ದಂತೆ ಹಿತವಾಗಿ ನಾಲ್ಕೈದು ಮಿಳ್ಳೆ ತುಪ್ಪ ಸುರಿದು ತೊಳೆದ ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪನ್ನು ಕುದಿಯುತ್ತಿರುವ ಸಾರಿಗೆ ಮೆಲ್ಲನೆ ಹಾಕಿದ ಒಂದೆರಡು ನಿಮಿ?ಕ್ಕೆ ಪಾತ್ರೆಯ ಮಧ್ಯಭಾಗದಿಂದೆದ್ದ ಕೆಂಬಣ್ಣದ ಸಾರಿನ ಕುದಿ ಹೂ ಅರಳಿದಂತೆ ಕುದಿ ಅರಳಿ ಪಾತ್ರೆಯ ಅಂಚು ತಲಪುವುದನ್ನು ನೋಡುವುದೇ ಚೆಂದ. ಇದು ಮೂಗಿನ ಹೊಳ್ಳೆಗಳನ್ನು ಅರಳಿಸುವುದು ಹಾಗಿರಲಿ ನಿಮ್ಮ ಮನೆಯ ಸುತ್ತಲಿನ ನಾಲ್ಕಾರು ಮನೆಯ ಪಾಸಲೆಗೆ ಕುದಿಯುವ ಸಾರಿನ ವಾಸನೆ ಹರಡಿಕೊಂಡಾಗ ಅಕ್ಕಪಕ್ಕದ ಮನೆಯವರು ತಕಪಕ ಕುಣಿಯಲು ತೊಡಗುತ್ತಾರೆ – ಆ ಘಮ್ಮೆನ್ನುವ ಸಾರು ಸಿಕ್ಕರೆ ಹೀರಲು.
ಘಮಘಮ ಘಮಲು!
ಹೀಗೆ ಘಮ್ಮೆನ್ನುವ ವಾಸನೆಯು ಸಾರು ಕುದಿಸಿಬಿಟ್ಟರೆ ಖಂಡಿತ ಬಂದುಬಿಡುವುದಿಲ್ಲ. ಅದಕ್ಕೆ ಬೇಕಾಗುವ ಸಾಂಬಾರಪದಾರ್ಥಗಳಾದ ಮೆಣಸಿನಕಾಯಿ, ಕೊತ್ತಂಬರಿಬೀಜ, ಮೆಣಸು, ಜೀರಿಗೆ, ಮೆಂತ್ಯ ಇವುಗಳನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರಮಾಡಿ, ಸಣ್ಣ ಉರಿಯಲ್ಲಿ ಹದವಾಗಿ ಹುರಿದಿಟ್ಟುಕೊಂಡರೆ ಇದಕ್ಕೆ ನಾಲ್ಕಾರು ಬಾದಾಮಿ, ಗೋಡಂಬಿ ಬೀಜಗಳನ್ನು ಹುರಿದು ಸೇರಿಸಿ ಕುಟ್ಟಿ ಪುಡಿಮಾಡಿಟ್ಟುಕೊಂಡರೆ ಬರುವ ಸೊಗಸೆ ಬೇರೆ ತೆರನಾದದ್ದು. ಈ ಪುಡಿಯನ್ನು ಉಪಯೋಗಿಸಿ ನಿಮ್ಮ ಮನೆಯಲ್ಲಿ ಸಾರು ಕುದಿಸುತ್ತಿದ್ದರೆ ಹೊಟ್ಟೆ ಬಿರಿವ? ಉಂಡಿದ್ದ ಅಕ್ಕಪಕ್ಕದವರೂ ಕೂಡಾ ನೀವು ಕರೆದರೆ ಸಾರಿನ ಊಟಕ್ಕೆ ತಯಾರಾಗದಿದ್ದರೆ ಕೇಳಿ! ಅಂತಹ ಘಮಘಮ ಸಾರಿನ ಘಮಲು!
ನಾನು ಬಿ.ಕಾಂ. ಓದುತ್ತಿದ್ದಾಗ ಕಂಬೈಂಡ್ಸ್ಟಡಿ ಮಾಡಲು ಎಂಸಿ ಎಂಬ ಸ್ನೇಹಿತನೊಬ್ಬ ಮನೆಗೆ ಬರುತ್ತಿದ್ದ. ಮಧ್ಯಾಹ್ನ ಊಟದ ತನಕ ಓದಿಕೊಂಡು ಹೊರಟುಬಿಡುತ್ತಿದ್ದ. ಹೀಗೆ ಒಂದು ದಿನ ಮಹಡಿಯ ಮೇಲೆ ಕುಳಿತು ಓದಿಕೊಳ್ಳುತ್ತಿದ್ದಾಗ ಕೆಳಮನೆಯಲ್ಲಿ ಕುದಿಯುತ್ತಿದ್ದ ಸಾರಿನ ವಾಸನೆ ಅವನನ್ನು ವಿಪರೀತ ಪ್ರೇರೇಪಿಸಿತಂತೆ. ಈ ವಿ?ಯವನ್ನು ಎ? ದಿವಸಗಳ ತರುವಾಯ ನನ್ನ ಬಳಿ ಹೇಳಿದಾಗ “ಅಯ್ಯೋ, ಮೊದಲೇ ಹೇಳಬೇಕಾಗಿತ್ತು, ಊಟ ಮಾಡ್ಕೊಂಡು ಹೋಗಬಹುದಿತ್ತು. ಈಗಲಾದರು ಬಾ” ಎಂದು ಕರೆದರೂ ಆತ ಬರಲೇ ಇಲ್ಲ. ಆದರೆ ಈ ಕೊರೆ ಇಂದಿಗೂ ಉಳಿದುಕೊಂಡುಬಿಟ್ಟಿದೆ.
ಹೋಲಿಕೆ
ಹೀಗೆ ಎಲ್ಲರ ನಾಸಿಕಕ್ಕೂ ಮುತ್ತಿಕ್ಕಿ ತನ್ನತ್ತ ಸೆಳೆದುಕೊಳ್ಳುವ ತಿಳಿಸಾರನ್ನು ಹೆಣ್ಣಿಗೂ, ತರಕಾರಿಗಳಿಂದ ತುಂಬಿದ ಹುಳಿಯನ್ನು ಗಂಡಿಗೂ ಹೋಲಿಸಬಹುದೇನೋ!
ತಿಳಿಯಾದ, ನಿಷ್ಕಲ್ಮಷವಾದ, ಹಿತವಾದ ಬಿಸಿಯಿಂದ, ಒನಪು-ಒಯ್ಯಾರಗಳಿಂದ ನಲಿಯುತ್ತಿರುವ ಸಾರು ತುಂಬಿಟ್ಟ ಬಕೆಟ್ಟೋ, ಮತ್ತೊಂದೋ ಪಾತ್ರೆಯಲ್ಲಿ ಸೌಟನ್ನು ಘಾಸಿಯಾಗದಂತೆ ಸಾವಕಾಶವಾಗಿ ಅದ್ದಿ ತುಂಬಿಕೊಂಡು ಊಟಕ್ಕೆ ಕುಳಿತವರ ಅನ್ನದ ಮೇಲೆ ನಿಧಾನವಾಗಿ ಬಡಿಸಿದಾಗ ಸಲಿಲದಂತೆ ಸೌಟಿನಿಂದ ಅದು ಬೀಳುವಾಗಿನ ಬಾಗುವಿಕೆ, ಬಳುಕುವಿಕೆಯನ್ನು ನೀವು ನೋಡಬೇಕು. ಥೇಟ್ ಭರತನಾಟ್ಯದ ನರ್ತಕಿಯಂತೆ, ತೆಳುಹೊಟ್ಟೆಯ ಸಣ್ಣ ನಡುವಿನ ಹುಲ್ಲೆಯಂತೆ ಬಳುಕುತ್ತಾ ಅನ್ನದ ಮೇಲೆ ಬಿದ್ದ ಸಾರಿಗೆ ಹಿಂದೆಯೆ ಕಾಯಿಸಿದ ಘಮ್ಮೆನ್ನುವ ಎರಡು ಮಿಳ್ಳೆ ತುಪ್ಪ ಬೀಳಬೇಕು. ಅಗ ನೋಡಬೇಕು ಆದರ ಖದರ್. ಓಹ್! ಈ ರುಚಿ ಸಿಕ್ಕವರು ಎರಡು ಹೊಟ್ಟೆ ತಿಳಿಸಾರಲ್ಲೇ ಉಂಡಾರು.
ಆದರೆ ಹುಳಿ ಹಾಗಲ್ಲ. ಅಳಿದುಳಿದ ಎಲ್ಲ ತರಕಾರಿಗಳನ್ನು ಹೆಚ್ಚಿ ಹಾಕಿ ಹುಳಿ ಮಾಡಿ ಕಾಯಿಸಿ, ಕುದಿಸಿ ಸೌಟಿನಿಂದ ತುಂಬಿ ಬಡಿಸಿದಾಗ ಥೇಟ್ ಗಂಡಿನಂತೆ ಅನ್ನ ಗುಡ್ಡೆಯ ಮೇಲೆ ದೊಪ್ಪೆಂದು ಬಿದ್ದೀತು! ಸೌಜನ್ಯ, ಸಂಸ್ಕೃತಿ ಏನೊಂದೂ ತೋರದೆ ಅನ್ನದೊಡನೆ ಬೆರತದ್ದನ್ನು ಉಂಡೆಕಟ್ಟಿ ಬಾಯೊಳಗೆ ಎಸೆದುಕೊಳ್ಳಬೇಕಷ್ಟೇ. ಸಾರು ನಿರಾಭರಣ ಸುಂದರಿಯಂತೆ ಕಂಗೊಳಿಸಿ ತಿಂದಷ್ಟೂ ಹೃದಯವನ್ನು ಮನಸ್ಸನ್ನು ಹಿತಗೊಳಿಸಿದರೆ, ಹುಳಿತಿಂದಷ್ಟೂ ಜಡತೆಯನ್ನು ಹೆಚ್ಚಿಸುತ್ತದೆ.
ಅದಕ್ಕೇ ಇರಬೇಕು, ಸಾಮಾನ್ಯವಾಗಿ ಮದುವೆಯ ಮನೆಯಲ್ಲಿ ಊಟಕ್ಕೆ ಮೊದಲು ಸೂಪ್ ಎಂಬ ನಿರ್ಮಲವಾದ, ರುಚಿಕರವಾದ ತಿಳಿಯಾದ ಪೇಯವು ಪರವಶತೆಯನ್ನು ಹೆಚ್ಚಿಸಿ, ಪಂಚೇಂದ್ರಿಯಗಳನ್ನು ಪ್ರಚೋದಿಸಿ ಊಟಕ್ಕೆ ತಯಾರಿಸಿದ ಎಲ್ಲ ವಿಧದ ಭಕ್ಷ್ಯಗಳನ್ನು ರುಚಿನೋಡೆಂದು ಹೊಟ್ಟೆ ಆಗ್ರಹಿಸಿ ಬಿಡುತ್ತದೆ.
ಮಠದ ಊಟ
ಒಂದು ಸಾರಿ ಮಠದ ಊಟಕ್ಕೆ ಹೋಗಿದ್ದೆ. ಮಠ ಅಂದರೆ ಮಠ. ಅದಕ್ಕ್ಯಾಕೆ ತಲೆಕೆಡಿಸಿಕೊಳ್ತೀರಾ? ನಾವು ಕುಳಿತಿದ್ದ ಸಾಲಿಗೆ ಸಾರು ಬಡಿಸಲು ಹುಡುಗನೊಬ್ಬ ಬಂದ. ನನ್ನ ಎಲೆಗೆ ಬಡಿಸಿದ ನಂತರ ನನ್ನ ಪಕ್ಕದಲ್ಲಿ ಕುಳಿತಿದ್ದ ದಂಪತಿಗಳ ಎಲೆಗೂ ಒಂದೊಂದು ಸೌಟು ಸಾರು ಬಡಿಸಿ, ಅದು ಸಾಲಿನ ಕೊನೆಯಾದ್ದರಿಂದ ಹಿಂದಕ್ಕೆ ಹೊರಡಲು ಅನುವಾದ.
’ಏ ಹುಡ್ಗ, ಏನ್ ಅರ್ಜೆಂಟು? ಇನ್ನು ಸ್ವಲ್ಪ ಸಾರು ಹಾಕು’ ಎಂದರು ಆಕೆ. ಅವರಿಬ್ಬರ ಎಲೆಗೂ ಹುಡುಗ ಮತ್ತೆ ಬಡಿಸಿದ.
’ಸ್ವಲ್ಪ ಕೈಬಿಟ್ಟು ಬಡಿಸು’ ಎಂದರು.
ಪುನಃ ಬಡಿಸಿದ.
ಹೊರಡಲನುವಾಗಿ ಹೆಜ್ಜೆ ಎತ್ತಿದ.
’ಅಯ್ ಏನ್ ಅರ್ಜೆಂಟ್ ಮಾಡ್ಕೋತೀಯೋ ಮಾರಾಯಾ? ಇಲ್ಲಿ ಸ್ವಲ್ಪ ಸಾರು ಹುಯ್ಯಿ’ ಎಂದು ಇಬ್ಬರೂ ಎರಡು ಲೋಟ ತುಂಬ ಸಾರು ಹಾಕಿಸಿಕೊಂಡರು.
ಬಡಿಸಿದ ಹುಡುಗ ಅವರಿಬ್ಬರ ಮುಖ ಮುಖ ನೋಡುತ್ತ ಓಟಕಿತ್ತ.
ಪಕ್ಕದಲ್ಲಿದ್ದವರ ನಡವಳಿಕೆಯನ್ನು ನಾನು ಗಮನಿಸುತ್ತಲೇ ಇದ್ದೆ.
ಬಂದಿದ್ದೆಲ್ಲವನ್ನೂ ಪಾಂಗಿತವಾಗಿ ಬಡಿಸಿಕೊಂಡು ತಿಂದು “ಅಯ್ಯೋ ಏನ್ ಊಟಾನೋ…. ಏನೋ…. ಸಾರು ಬಿಟ್ಟರೆ ಒಂದೂ ಸರಿಯಾಗಿಲ್ಲ. ಮೊನ್ನೆ ಅಲ್ಲಿ…. ಎ? ಚೆನ್ನಾಗಿ ಬಡಿಸಿದ್ರು….” ಎಂದು ಬೈದುಕೊಂಡೇ ಹೊಟ್ಟೆ ತುಂಬ ಉಂಡು ಮೇಲೆದ್ದರು.
ಮಠದಲ್ಲಿ ನಡೆಯುವ ಆರಾಧನಾ ಮಹೋತ್ಸವಗಳಲ್ಲಿ ನೋಡಬೇಕು. ಅಲ್ಲ, ಅಲ್ಲ, ಆಘ್ರಾಣಿಸಬೇಕು. ಕುದಿಯುತ್ತಿರುವ ಸಾರಿನ ’ಘಂ’ ಎಂಬ ವಾಸನೆ ಸುತ್ತಮುತ್ತಲ ಮನೆಮಂದಿಯ ನಾಸಿಕಕ್ಕೆಲ್ಲ ಧಾಳಿಯಿಟ್ಟಾಗ ವಿಧಿಯಿಲ್ಲದೆ ದೇವರಿಗೆ ಮಂಗಳಾರತಿ ಮುಗಿಯುತ್ತಿದ್ದಂತೆ ಊಟಕ್ಕೆ ಹಾಜರಾಗಿಬಿಡುತ್ತಾರೆ.
ಮಹಿಮಾತಿಶಯ
ಈ ತಿಳಿಸಾರಿನ ತೆಳ್ಳನೆಯ ಮೈಮಾಟಕ್ಕೆ, ಅದರ ಜೀರ್ಣಕಾರಿ ಜರೂರತ್ತಿಗೆ ಮರುಳಾಗಿಯೇ ವೈದ್ಯರು ತಮ್ಮ ಬಳಿ ಜ್ವರದ ತಾಪದಿಂದ ಬರುವ ರೋಗಿಗಳಿಗೆ ಸಾರನ್ನ ತಿನ್ನಿ ಎನ್ನುತ್ತಾರೆಯೇ ವಿನಃ ಹುಳಿಯನ್ನ ತಿನ್ನಿ ಎನ್ನುವುದಿಲ್ಲ. ಹಗುರವಾಗಿದ್ದು, ಪ್ರಚ್ಛನ್ನವಾಗಿ ಮನಸ್ಸನ್ನು ವಿಕಸಿಸಿ, ಶರೀರದ ಕ್ರಿಯೆಗಳನ್ನು ಮೊದಲಿನಂತೆ ಉಜ್ಜುಗಿಸಿ, ಚೈತನ್ಯಶೀಲರನ್ನಾಗಿಸಿ ದೇಹಾರೋಗ್ಯವನ್ನು ಕಾಪಾಡುವುದರಿಂದಲೇ ವೈದ್ಯರು ಸಾರನ್ನ ತಿನ್ನಿ ಎಂದು ಸಲಹೆ ಕೊಡುವುದು.
ಅಂದು ರಾತ್ರಿ ಹಳ್ಳಿಯಿಂದ ಹಿಂದಿರುಗಿದಾಗ ನೇರ ಬಸ್ಸು ಸಿಗದೆ ಎರಡು ಮೂರು ಬಸ್ಸು ಬದಲಾಯಿಸಿ ಹೈರಾಣವಾಗಿ ಮನೆಗೆ ತಲಪಿ ’ಏನು ಸಾರಿಗೆವ್ಯವಸ್ಥೆಯೋ?’ ಎಂದೆ. ಇದನ್ನು ಕೇಳಿಸಿಕೊಂಡ ನನ್ನಾಕೆ ಫ್ರಿಜ್ಜಿಂದ ನಾಲ್ಕು ಟೊಮೆಟೋ ತಂದುಬಿಡಿ, ಬೇಗ ಸಾರು ಮಾಡಿಬಿಡುತ್ತೇನೆ ಎಂದಳು. ನಾನು ಬಸ್ಸಿನ ವ್ಯವಸ್ಥೆಯ ಬಗ್ಗೆ ಹೇಳಿದರೆ ಅವಳು ಬೇರೆಯೇ ರೀತಿ ಅರ್ಥ ಮಾಡಿಕೊಂಡಿದ್ದಳು! ಹೇಗಿದೆ ಸಾರಿನ ಮಹಿಮೆ?
ಒಮ್ಮೆ ನನ್ನ ಪರಿಚಯದವರೊಬ್ಬರು ದಂಪತಿಗಳು ಊಟಕ್ಕೆ ಬನ್ನಿ ಎಂದು ಕರೆದರು. ನನಗಿಂತ ನನ್ನಾಕೆಗೆ ಎಲ್ಲ ಅಚ್ಚುಕಟ್ಟಾಗಿರಬೇಕು, ರುಚಿರುಚಿಯಾಗಿರಬೇಕು. ಮನೆಯಲ್ಲಿಯೂ ಹಾಗೆಯೇ ತಯಾರಿಸುತ್ತಾಳೆ. ಊಟಕ್ಕೆ ಕುಳಿತೆವು. ಏನು ಬಡಿಸಿದರೂ ದೇವರಿಗೇ ಪ್ರೀತಿ. ಒಂದು ಐಟಂ ಕೂಡಾ ರುಚಿಯಿಲ್ಲ. ಊಟ ಮುಗಿಸಿ ಹೊರಟಾಗ ದಾರಿಯಲ್ಲಿ ಅವಳನ್ನು ರೇಗಿಸಲು ’ಸಾರು ಚೆನ್ನಾಗಿತ್ತಲ್ವಾ, ನೀನು ಮಾಡಿದ ಹಾಗೆಯೆ ಇತ್ತು’ ಎಂದೆ. “ಏನ್ ಸಾರೋ…. ಒಂದು ಪದಾರ್ಥಕ್ಕೂ ಅಪ್ಪಿಲ್ಲ…. ಅಮ್ಮಿಲ್ಲ” ಎಂದುಕೊಂಡು ರಾತ್ರಿ ಅಡುಗೆ ರುಚಿರುಚಿಯಾಗಿ ಮಾಡಿ ಬಡಿಸಿದಳು.
ನಾವು ಮದುವೆಯಾದ ಹೊಸತು. ಒಂದು ಬಾರಿ ರಾತ್ರಿ ತಡವಾಯಿತೆಂದು ನಮ್ಮ ಅತ್ತೆ ಮನೆಯಲ್ಲಿ ಊಟ ಮಾಡಿಕೊಂಡು ಹೋಗಿ ಎಂದು ಬಲವಂತ ಮಾಡಿದರು. ನನಗೆ ಮದುವೆಯಾದ ಹೊಸತರಲ್ಲಿ ಸಂಕೋಚವೆಂದರೆ ಸಂಕೋಚ, (ಈಗಲೂ ಅ?!) ಅತ್ತೆಯವರ ಜೊತೆಗೆ ನಾನು ಮಾತನಾಡುತ್ತಲೇ ಇರಲಿಲ್ಲ. ಅವರೂ ಅ?, ಪಾಪ ಹಳೆಯಕಾಲದವರು. ನಾಚಿಕೆ, ವಿಪರೀತ ಸಂಕೋಚ. ನನ್ನ ಈ ರೀತಿಯ ಸಂಕೋಚದ ಸ್ವಭಾವದಿಂದಲೋ ಏನೋ, ಸಾಮಾನ್ಯವಾಗಿ ನಾನು ಯಾರ ಮನೆಯಲ್ಲೂ ಊಟ ಮಾಡುತ್ತಿರಲಿಲ್ಲ. ಅಂದು ನನ್ನವಳ ಬಲವಂತದಿಂದ ಊಟಕ್ಕೆ ’ಹ್ಞೂಂ’ ಎಂದೆ. ನಾವು ಊಟಕ್ಕೆ ಉಳಿದದ್ದೇ ನಮ್ಮತ್ತೆಗೆ ಹಿಡಿಸಲಾರದ? ಸಂತೋ?ವಾಗಿತ್ತು. ನಾವಿಬ್ಬರೂ ಊಟಕ್ಕೆ ಕುಳಿತಿದ್ದೇವೆ. ಬಡಿಸಲು ಬಂದ ಅತ್ತೆಯವರಿಗೆ ಗಾಬರಿ, ಸಂಕೋಚ, ಸಂತೋ?, ಸಂಭ್ರಮ…. ಎಲ್ಲವೂ ಒಟ್ಟಿಗೆ ಸೇರಿಕೊಂಡು ಬಡಿಸಲು ಸಾರಿನ ಬಿಸಿಪಾತ್ರೆಯನ್ನು ಎಲೆಯ ಮುಂದೆ ಇಡಲು ಹೋಗಿ ಕೈಜಾರಿ ಬಿದ್ದು ಸಾರೆಲ್ಲ ಚೆಲ್ಲಿ ನನ್ನ ಪ್ಯಾಂಟಿಗೆಲ್ಲ ಅಭಿ?ಕ ಮಾಡಿಬಿಟ್ಟಿದ್ದರು.
ಆದರೆ ಈಗಿನ ಕಾಲದ ಹುಡುಗರು ಮದುವೆಯ ನಂತರ ತಮ್ಮ ಅತ್ತೆಯವರೊಡನೆ ಸಲೀಸಾಗಿ ನಡೆದುಕೊಳ್ಳುವುದನ್ನು ನೋಡಿದರೆ ನನಗೆ ಆಶ್ಚರ್ಯವಾಗುತ್ತದೆ.
ಭೂಮದೃಷ್ಟಾಂತ
ಒಂದು ಮದುವೆಯ ಸಂದರ್ಭ. ಭೂಮದ ಊಟಕ್ಕೆ ಕುಳಿತಾಗ ಸಾರು ಬಡಿಸಲು ಬಂದ ಅತ್ತೆಯ ಮುಂಗೈಯನ್ನು ಮದುಮಗ ಹಿಡಿದುಕೊಂಡಾಗ ಆಕೆ ತನ್ನ ಗಂಡನ ಹೆಸರು ಹೇಳಬೇಕು. ಹಿಂದೆ ಸಂಕೋಚ, ನಾಚಿಕೆ ಇದ್ದ ಕಾಲದಲ್ಲಿ ಆಕೆ ತನ್ನ ಗಂಡನ ಹೆಸರು ಹೇಳಲು ಪಡಿಪಾಟಲು ಪಡುತ್ತಿದ್ದುದನ್ನು ನೋಡಿ ಇತರರು ನಗುತ್ತಿದ್ದರು. ಇದೊಂದು ಸಂಪ್ರದಾಯ ಆಚರಣೆ, ಎಲ್ಲ ಖುಷಿಗಾಗಿ.
ಹೀಗೊಮ್ಮೆ ಮದುಮಗನಿಗೆ ಬಡಿಸಲು ಬಂದಾಗ ’ಅತ್ತೆಯ ಕೈಹಿಡ್ಕೊ, ಹಿಡ್ಕೊ….ಬಿಡಬೇಡ’ ಎಂದು ಮದುಮಗನ ಅಕ್ಕತಂಗಿಯರು ಹುರಿದುಂಬಿಸಿದರು. ಆದರೆ ಮದುಮಗ ಶೇಕ್ಹ್ಯಾಂಡ್ ರೀತಿ ಅತ್ತೆಯ ಕೈಹಿಡಿದಾಗ ನೋಡಿದವರೆಲ್ಲರೂ ಬಿದ್ದುಬಿದ್ದೂ ನಕ್ಕಿದ್ದರು. ಈಗಿನ ಕಾಲದಲ್ಲಿ ಈ ಆಚರಣೆಗೆ ಅರ್ಥವೇ ಇಲ್ಲದಿದ್ದರೂ ಸಂಪ್ರದಾಯದ ಭಾಗವಾಗಿ ಕೆಲವು ಮದುವೆಗಳಲ್ಲಿನ ಭೂಮದೂಟದಲ್ಲಿ ಈ ಕಾರ್ಯಕ್ರಮವನ್ನು ಮಾಡಿ-ನೋಡಿ ಆನಂದಿಸುತ್ತಾರೆ.
ನನ್ನ ಮಗನ ಮದುವೆಯ ಭೂಮದಲ್ಲಾದ ದೃಷ್ಟಾಂತವನ್ನು ಹೇಳಲೇಬೇಕು. ಬಡಿಸಲು ಬಂದ ಅತ್ತೆಯ ಕೈ ಹಿಡಿ, ಹಿಡಿ ಎಂದು ಮಗನ ಸ್ನೇಹಿತರು ಹುರಿದುಂಬಿಸಿದಾಗ ಮಗ ಅತ್ತೆಯ ಮುಂಗೈ ಹಿಡಿದಾಗ ಆಕೆ ನುಡಿದದ್ದು ಈ ಕವನ –
ಕೊಲ್ಲಾಪುರದ ಮಹಾಲಕ್ಷ್ಮೀ ದೇವಸ್ಥಾನದ
ಬಾಗಿಲಿಗೆ ಹಾಕಿರುವುದು ಬಂಗಾರದ ತೋರಣ
ಒಳಗೆ ಕುಳಿತ ಹೆಸರಿನವನೇ ನನ್ನ ರಮಣ!
ಭೂಮಕ್ಕೆ ಕುಳಿತಿರುವ ನನ್ನ ಅಳಿಯನೆ
ಇದ ಆರ್ಥ ಮಾಡಿಕೊಂಡು ಕೈಬಿಡಲಾರೆಯಾ
ಲಕ್ಷ್ಮಿಯಂತಹ ಸತಿಯೊಡನೆ ಹೊಡಿ ಫೇಣಿ-ಚಿರೋಟಿಯ!
ಆಹಾ! ಎಂತಹ ಪ್ರಾಸದಪದ್ಯ. ಕೇಳಿದವರೆಲ್ಲರೂ ಹೋ…. ಎಂದು ಕೂಗಿ ಸಂತೋ?ಪಟ್ಟರು. ಹೀಗೆ ಒಗಟಿನ ರೂಪದಲ್ಲಿ ತಮ್ಮ ಪತಿಯ ಹೆಸರು ಶ್ರೀನಿವಾಸರಾವ್ ಎಂಬುದನ್ನು ಬಹು ಜಾಣ್ಮೆಯಿಂದ ತಿಳಿಸಿದ್ದರು.
ಸಾರಿನಿಂದ ಪ್ರಾರಂಭವಾದ ಈ ಪ್ರಬಂಧ ಸಾರು ಬಡಿಸುವವರೆಗೂ ಹರಡಿಕೊಂಡಿದ್ದು ಹಲವಾರು ವಿಷಯಗಳನ್ನು ತಿಳಿಸಬೇಕಾಯಿತು. ’ಸಾರನ್ನು ತಿಂದು ಸಾವಿರ ವ? ಬಾಳು’ ಎಂಬ ಗಾದೆಯ ಮಾತನ್ನು ನೀವು ಕೇಳಿರಬಹುದು. ಅದಕ್ಕೆ ನೋಡಿ ನನಗೆ ತಿಳಿಸಾರೆಂದರೆ ಬಹಳ ಇ?. ಸಾರಿನ ಜೊತೆಗೆ ಸಣ್ಣಗೆ ಹೆಚ್ಚಿ, ಕಾಯಿತುರಿ ಸ್ವಲ್ಪ ಜಾಸ್ತಿನೇ ಸೇರಿಸಿ ಹದವಾಗಿ ಒಗ್ಗರಣೆ ಕೊಟ್ಟ ಹುರಳೀಕಾಯಿ ಪಲ್ಯವಿದ್ದರೆ ಅದರ ಸೊಗಸೇ ಸೊಗಸು!
ಹ್ಞಾಂ! ಈಗ ರಾತ್ರಿ ಎಂಟರ ಸಮಯ. ಅಡುಗೆಮನೆಯಿಂದ ಕುದಿಯುತ್ತಿರುವ ಸಾರಿನ ’ಘಂ’ ಎಂಬ ಘಮಲು ನಿಮ್ಮ ನಾಸಿಕವನ್ನು ತಲಪಿ ಬಾಯಿಯಲ್ಲಿ ನೀರೂರಿಸಬಹುದು. “ಮತ್ತಿನ್ನೇನು ಯೋಚನೆ, ಬನ್ನಿ ತಿಳಿಸಾರಿನ ಊಟಕ್ಕೆ!”