ಕರ್ನಾಟಕದ ಪರಿಸರದ ವಲಯಗಳಲ್ಲಿ ಅ.ನ. ಯಲ್ಲಪ್ಪರೆಡ್ಡಿ ಅವರದ್ದು ಆಗಾಗ ಕೇಳಿಬರುವ ಹೆಸರು. ವಿಷಯತಜ್ಞರಾಗಿ ಹಲವು ಸಂದರ್ಭ-ಸನ್ನಿವೇಶಗಳಲ್ಲಿ ಅವರು ದಿಟ್ಟಪಾತ್ರವಹಿಸಿದ್ದಾರೆ. ಹತ್ತು-ಹಲವು ಉನ್ನತಮಟ್ಟದ ಸಮಿತಿ-ಆಯೋಗಗಳಲ್ಲಿದ್ದು ಕಾರ್ಯನಿರ್ವಹಿಸಿದ್ದಾರೆ. ಅವರ ಆತ್ಮಕಥೆಯ ಶೀರ್ಷಿಕೆ – ’ಹಸಿರುಹಾದಿ’. ರಾಜ್ಯ ಅರಣ್ಯ ಇಲಾಖೆಯ ಉನ್ನತ ಹುದ್ದೆಗಳ ಹಸಿರುಹಾದಿಯಲ್ಲಿದ್ದ ಅವರು ನಿವೃತ್ತಿಯ ನಂತರವೂ ’ಹಸಿರು ಹಾದಿ’ಯಲ್ಲೇ ಇದ್ದಾರೆ. ನಾಡಿನ ಭವಿಷ್ಯಕ್ಕೆ ಪರಿಸರ ಸಂರಕ್ಷಣೆ ಎಷ್ಟೊಂದು ಅವಶ್ಯ ಎಂಬುದನ್ನು ಸದಾ ಧ್ಯಾನಿಸುತ್ತಾ, ಸಮಾನ ಮನಸ್ಕರಲ್ಲಿ ಹಂಚಿಕೊಳ್ಳುತ್ತಾ ಇಳಿವಯಸ್ಸಿನಲ್ಲೂ ಅವರ ಉತ್ಸಾಹ ಎಣೆಯಿಲ್ಲದ್ದು. ಸಾಮಾಜಿಕ ಕಾರ್ಯಕರ್ತ ವಾದಿರಾಜ್ ಅವರು ಯಲ್ಲಪ್ಪರೆಡ್ಡಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ :
ಪ್ರಶ್ನೆ: ನಮ್ಮ ಪರಂಪರೆಯ ಈ ಕೆರೆಗಳ ನಿರ್ಮಾಣ ಹೇಗಾಯಿತು? ಅವುಗಳ ಹಿನ್ನೆಲೆಯೇನು? ಬೆಂಗಳೂರಿನ ಕೆರೆಗಳಲ್ಲಿ ನೊರೆ ಬರುವುದನ್ನು ಕಾಣುತ್ತೇವೆ. ಕೆರೆಗಳ ಒತ್ತುವರಿ ಎರಡನೆ ಸಮಸ್ಯೆ. ಇಂದಿನ ತಂತ್ರಜ್ಞಾನ, ಜೆಸಿಬಿ ಯಾವುದೂ ಇಲ್ಲದ ಕಾಲದಲ್ಲಿ ಅ಼ಷ್ಟೊಂದು ಕೆರೆಗಳು ನಿರ್ಮಾಣಗೊಂಡವು; ಅವುಗಳನ್ನು ಉಳಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಈಗ ಹೊಸ ಕೆರೆಗಳ ನಿರ್ಮಾಣ ಮಾಡುವ ಸಾಧ್ಯತೆಯೇ ಇಲ್ಲ. ಈ ಹಿನ್ನೆಲೆಯಲ್ಲಿ ಕೆರೆಗಳ ರಚನೆ, ಅದರ ವೈಜ್ಞಾನಿಕತೆ, ಇಂಟರ್ ಲಿಂಕಿಂಗ್ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಬಹುದು ಎನಿಸುತ್ತದೆ.
ಉತ್ತರ: ಸುಮಾರು ೧೦-೧೧ ಸಾವಿರ ವರ್ಷಗಳ ಹಿಂದೆ ನಮ್ಮಲ್ಲಿ ಹಸಿರುಯುಗವಿತ್ತು. ಅದರಲ್ಲಿ ಮನುಷ್ಯ ಬದುಕುತ್ತಿದ್ದ. ಬೇರೆ ಪ್ರಾಣಿಗಳ ಹಾಗೆಯೇ ಗೆಡ್ಡೆಗೆಣಸು ತಿನ್ನುತ್ತಿದ್ದ. ಮನುಷ್ಯ ಸುಮಾರು ೭೦ ಸಾವಿರ ವಷ್ಯ ಇತರ ಪ್ರಾಣಿಗಳ ಜೊತೆಗೇ ಬದುಕಿದ್ದ. ಆಗ ಆತ ನಿಸರ್ಗಕ್ಕೆ ಯಾವುದೇ ಹಾನಿ ಮಾಡುತ್ತಿರಲಿಲ್ಲ. ಅಲ್ಲಿನ ವ್ಯವಸ್ಥೆಯನ್ನು, ಇರುವ ವಸ್ತುಗಳನ್ನು, ಆಹಾರವನ್ನು ಬಳಸಿಕೊಂಡು ಪ್ರಾಣಿಗಳು ಹೇಗೆ ಬದುಕಿರುತ್ತವೆ – ಮನುಷ್ಯನೂ ಹಾಗೆಯೇ ಇದ್ದ. ಅವನಿಗೆ ಹೆಚ್ಚು ಅಗತ್ಯಗಳೇನೂ ಇರಲಿಲ್ಲ. ನಮ್ಮ ವೇದಪುರಾಣಗಳಲ್ಲಿ ಈ ಬಗ್ಗೆ ಉಲ್ಲೇಖ ಇದೆ. ಆ ೭೦ ಸಾವಿರ ವರ್ಷಗಳ ಅನಂತರ ಏನಾಯಿತು? ಬುದ್ಧಿ ಸ್ವಲ್ಪ ಜಾಸ್ತಿ ಬೆಳೆದಾಗ, ಇಷ್ಟೆಲ್ಲಾ ಕಷ್ಟ ನಾವು ಯಾಕೆ ಪಡಬೇಕು? ನಾವೂ ಪ್ರಾಣಿಗಳ ಹಾಗೆ ಏಕೆ ಇರಬೇಕು? ಸುಖವಾಗಿ ಇರಬೇಕಲ್ಲವೇ ಎಂಬುದು ಬಂತು. ಸುಖವಾಗಿ ಇರಬೇಕಾದರೆ ಏನು ಮಾಡಬೇಕು? ನಾವು ಓಡಾಡಿಕೊಂಡಿರುವುದೇಕೆ? ಏನಾದರೂ ಬೆಳೆಸಿಕೊಂಡು ಇದ್ದಲ್ಲೇ ಏಕೆ ಇರಬಾರದು ಎಂದು ಚಿಂತಿಸಿದ. ಅಂದರೆ ಮನು? ಒಂದು ಸ್ಥಳದಲ್ಲಿ ಇದ್ದುಕೊಂಡು ಹೆಚ್ಚು ಶ್ರಮಪಡದೆ ಜೀವನ ಮಾಡುವ ಒಂದು ಉಪಾಯಗಳನ್ನು ಕಂಡುಹಿಡಿದ. ಆತ ಮನುಷ್ಯನಾಗಲು ಪ್ರಾರಂಭವಾದದ್ದು ಅಲ್ಲಿ. ಹತ್ತುಸಾವಿರ ವ?ಗಳ ಹಿಂದೆ ಅದು ನಡೆಯಿತು. ಆದರೂ ಅಲ್ಲಿ ಅಗತ್ಯಗಳು ಬಹಳ ಇರಲಿಲ್ಲ. ಬಿದರು-ಗಿದಿರು ಕಡಿದುಕೊಂಡು, ಸೊಪ್ಪು-ಎಲೆ ಹಾಕಿಕೊಂಡು, ಮಳೆ-ಬಿಸಿಲು ನೋಡಿಕೊಂಡು ಇರುತ್ತಿದ್ದ. ಇಷ್ಟವಾದ ಸಸ್ಯಗಳ ಬೀಜ ತೆಗೆದುಕೊಂಡು ಅದನ್ನು ಬೆಳೆಸಲು ಶುರುಮಾಡಿದ. ಆಗ ಅಲ್ಲಿ ಕೃಷಿಯುಗ ಪ್ರಾರಂಭವಾಯಿತು. ಒಂದುಕಡೆ ನೆಲೆನಿಂತು ಅಲ್ಲೇ ಬೆಳೆ ಬೆಳೆಸಿ, ನಾಯಿ, ಕುರಿ, ದನದಂತಹ ಸಾಕುಪ್ರಾಣಿಗಳನ್ನು ಸಾಕುತ್ತಿದ್ದ. ಇಂದಿಗೂ ಬುಡಕಟ್ಟು ಸಂಸ್ಕೃತಿ (tribal culture)ಯಲ್ಲಿರುವ ಗಿರಿಜನರು ಅದೇ ರೀತಿ ಇದ್ದಾರೆ. ಅವರಿಗೇನೂ ಹೆಚ್ಚಿನ ಅಗತ್ಯಗಳಿಲ್ಲ. ನಾಳೆಗೋ ನಾಡಿದ್ದಿಗೋ ಸಂಗ್ರಹ ಮಾಡಿ ಇಟ್ಟುಕೊಳ್ಳಬೇಕು ಎಂಬುದಿಲ್ಲ. ಅದೇ ರೀತಿ ಅರಣ್ಯವನ್ನೇ ಅವಲಂಬಿಸಿದ ಕಾಡುಕುರುಬರನ್ನು ಅರಣ್ಯಾಧಿಕಾರಿಯಾಗಿದ್ದಾಗ ನಾನು ನೋಡಿದ್ದೇನೆ. ಆ ಪ್ರದೇಶದಲ್ಲಿ ಸೋಲಿಗರು, ಜೇನುಕುರುಬರು ಮುಂತಾದ ಏಳೆಂಟು ಸಾವಿರ ಗಿರಿಜನರಿದ್ದರು. ಅವರ ಜೊತೆ ನಾನು ಸ್ವಲ್ಪ ಹೆಚ್ಚು ಸಂಪರ್ಕ ಇಟ್ಟುಕೊಂಡಿದ್ದೆ. ಅವರೆಲ್ಲ ಸಂತೋಷವಾಗಿದ್ದರು. “ನಮಗಿದೆಲ್ಲ ಏನೂ ಬೇಕಾಗಿಲ್ಲ. ನಮಗೆ ಶಾಲೆ ಬೇಡ. ನಾವು ನಿಸರ್ಗದಿಂದಲೇ ಕಲಿಯುತ್ತೇವೆ” ಎಂದವರು ಹೇಳುತ್ತಾರೆ. ಆದರೆ ನಾವೇನು ಮಾಡಿದೆವು? ಅಮೆರಿಕದಲ್ಲಿ ಕೊಲಂಬಸ್ (ರೆಡ್ಇಂಡಿಯನ್ನರ ಬಗ್ಗೆ) ಮಾಡಿದ್ದನ್ನು ನಾವಿಲ್ಲಿ ನಾಗರಿಕತೆ ಎಂಬ ಹೆಸರಿನಲ್ಲಿ ಮಾಡಿದೆವು. ಅವರನ್ನು (ಗಿರಿಜನರನ್ನು) ಬದಲಾಯಿಸಿ, ಅವರ ಸಂಸ್ಕೃತಿಯನ್ನು ಸರ್ವನಾಶ ಮಾಡಿದೆವು. ಅವರ ಸಂಪನ್ಮೂಲಗಳನ್ನು ದೋಚಿದೆವು.
೧೨-೧೩ನೇ ಶತಮಾನದ ಹೊತ್ತಿಗೆ ಕರ್ನಾಟಕದ ಭಾಗದಲ್ಲಿ ಆಡಳಿತ ನಡೆಸಿದ ರಾಜರು (ರಾಷ್ಟ್ರಕೂಟರು) ಜನರು ಮತ್ತು ಪ್ರಾಣಿಗಳ ಸುಖ-ಸೌಕರ್ಯಕ್ಕಾಗಿ ಸಂಪನ್ಮೂಲಗಳ ಬಳಕೆಗೆ ಸಂಬಂಧಿಸಿ ಕೆಲವು ಪದ್ಧತಿಗಳನ್ನು ತಂದರು. ಬೇಸಗೆ ಕಾಲದಲ್ಲಿ ಕುಡಿಯುವ ನೀರಿನ ಕ?ವಾಗುವುದೆಂದು ವಿಕೇಂದ್ರೀಕೃತ ವ್ಯವಸ್ಥೆಯನ್ನು ತಂದು ಕೆರೆಗಳನ್ನು ಕಟ್ಟುವ ಸಂಪ್ರದಾಯವನ್ನು ಆರಂಭಿಸಿದರು. ಹಿಮಾಲಯದಲ್ಲಿ ಜೀವನದಿಗಳಿವೆ; ಹಿಮಾಚ್ಛಾದಿತ (ice cap) ಪರ್ವತಗಳು, ನೀರ್ಗಲ್ಲ ಪ್ರದೇಶಗಳು ಇವೆ. ಬೇಸಗೆಯಲ್ಲಿ ಹಿಮಕರಗಿ ನದಿಗಳಿಗೆ ನೀರು ಸಿಗುತ್ತದೆ. ಆದರೆ ದೇಶದ ದಕ್ಷಿಣ ಭಾಗದಲ್ಲಿ ಅದಿಲ್ಲ. ಇಲ್ಲಿ ಅರಣ್ಯಗಳೇ ನಮ್ಮ ತಾಯಿ; ಅವೇ ನದಿಗಳ ಸ್ರೋತ. ಅದೇ ಕಾರಣಕ್ಕಾಗಿ ನಮ್ಮ ಪರಂಪರೆ ಅರಣ್ಯಗಳಿಗೆ ಮಹತ್ತ್ವ ನೀಡಿದೆ. ಇದು ಬಹಳ ಬಲವಾದ ನಂಬಿಕೆ; ಅದು ಗಿರಿಜನರಿಗೆ ಗೊತ್ತಿತ್ತು.
ದಕ್ಷಿಣಭಾರತದಲ್ಲಿ ಜೀವನದಿಗಳಿಲ್ಲ. ಕೆಲವು ಭಾಗಕ್ಕೆ ನದಿಗಳು ಹರಿಯುವುದೇ ಇಲ್ಲ. ಜೀವನದಿ ಇಲ್ಲದಲ್ಲಿ ನೀರಿಗಾಗಿ ಹುಡುಕಾಟ ನಡೆಯಿತು. ಹಿಂಗಾರು, ಮುಂಗಾರು ಮಳೆ ಸೇರಿ ವರ್ಷದಲ್ಲಿ ಮಳೆ ಆಗುತ್ತಿದ್ದದ್ದು ೨೫-೩೦ ದಿನ ಮಾತ್ರ. ಉಳಿದ ೩೦೦ ದಿನ ನೀರು ಸಿಗುವುದೇ ಕಷ್ಟ. ಮಳೆನೀರು ಹರಿದುಕೊಂಡು ಎಲ್ಲೋ ಹೋಗುತ್ತದೆ. ಮೊದಲಿಗೆ ಜನ ಮನುಷ್ಯನಿಗಿಂತ ಗೋವು, ಪ್ರಾಣಿ, ಪಕ್ಷಿಗಳ ಬಗ್ಗೆ ಯೋಚಿಸಿ ಅವುಗಳಿಗಾಗಿ ಕೆರೆ ಕಟ್ಟಿದರು. ಇದ್ದ ಸ್ವಲ್ಪ ಸಂಪನ್ಮೂಲದಲ್ಲಿ ಜಾನುವಾರಿಗಾಗಿ ಗೋಕಟ್ಟೆಗಳನ್ನು ಕಟ್ಟಿದರು. ಮನುಷ್ಯನಿಗೆ ನೀರಿನ ಕಷ್ಟ ಎದುರಾದಾಗ ಕಲ್ಯಾಣಿಗಳನ್ನು ಕಟ್ಟಿಸಿದರು. ಕೋಲಾರದಲ್ಲಿ ಸಾವಿರಾರು ಕಲ್ಯಾಣಿಗಳಿದ್ದವು. ಬೆಂಗಳೂರಿನ ಸುತ್ತಮುತ್ತ ಕೂಡ ಅದ್ಭುತವಾದ ಕಲ್ಯಾಣಿಗಳು ನಿರ್ಮಾಣಗೊಂಡವು. ಗೋಕಟ್ಟೆಗಳಿಂದ ಅಂತರ್ಜಲ ಹರಿದುಬರುತಿತ್ತು. ಅಂತರ್ಜಲವನ್ನು ಪರಸ್ಪರ ಸಂಪರ್ಕಿಸಿದರು. ಭೂಮಿಯ ಮೇಲೆ ಬಿದ್ದ ನೀರು ಕೂಡ ಹರಿದುಕೊಂಡು ಹೋಗುತ್ತಿತ್ತು. ಅಲ್ಲಿ ಒಂದು ಕೆರೆ ಕಟ್ಟಿದರೆ ಮುಖ್ಯವಾಗಿ ಹೆಣ್ಣುಮಕ್ಕಳಿಗೆ ಸ್ನಾನ ಮಾಡಲು, ಬಟ್ಟೆ ತೊಳೆಯಲು ಮುಂತಾಗಿ ಅನುಕೂಲವಾಗುತ್ತದೆಂಬ ಭಾವನೆ ಬಂದಿರಬೇಕು. ಮಹಿಳೆಯರಿಗೆ ನೀರಿನ ಆವಶ್ಯಕತೆ ಚೆನ್ನಾಗಿ ಗೊತ್ತಿರುತ್ತದೆ. ಒಟ್ಟಿನಲ್ಲಿ ನೀರಿನ ಅಗತ್ಯ ನೋಡಿ ಅಲ್ಲೊಂದು ಟೆಕ್ನಾಲಜಿ ಬೆಳೆದಿರಬೇಕು.
ಮಣ್ಣಿನ ಕೆಲಸ ಮಾಡುವ ವೃತ್ತಿಪರರಿಗೆ ಮಣ್ಣು ಗೊತ್ತಿತ್ತು; ಯಾವ ಮಣ್ಣಿನಲ್ಲಿ ಹೇಗೆ ಮಾಡಬೇಕು ಎಂಬುದು. ಸಿಮೆಂಟ್, ಸ್ಟೀಲ್ ಅಥವಾ ಟೆಕ್ನಾಲಜಿ ಇಲ್ಲದ ಆ ಕಾಲದಲ್ಲಿ ಪೂರ್ತಿಯಾಗಿ ತಮ್ಮ ಅನುಭವದ ಆಧಾರದಲ್ಲಿ ಮಣ್ಣನ್ನು ಮುಟ್ಟಿ ನೋಡಿ, ನೀರನ್ನು ನೋಡಿ, ಪಾರಂಪರಿಕ ಜ್ಞಾನದ ಮೂಲಕ ಬಹಳ ಜಾಣ್ಮೆಯಿಂದ ಕೆರೆಗಳನ್ನು ನಿರ್ಮಿಸಿದ್ದಾರೆ. ನೀರು ಬರಬೇಕಾದರೆ ಏನು ಮಾಡಬೇಕು? ಅದು ಎಲ್ಲಿಂದ ಬರುತ್ತದೆ? ಬೆಟ್ಟವೇ ಮೂಲ. ಅದು ಭೂಮಾತೆಯ ಎದೆ (ಸ್ತನ); ನೀರನ್ನು ಹೊರಗೆ ಬಿಡುವ ಸ್ತನ. ಅದೇ ಜೀವಜಲ. ದೇವಸ್ಥಾನಗಳು ಬೆಟ್ಟದ ಮೇಲಿರುತ್ತವೆ; ಕರ್ನಾಟಕದಲ್ಲಿ ಹಲವು ಕಡೆ ಹಾಗಿವೆ. ಬಹಳಷ್ಟು ಹಳೆಯ ದೇವಸ್ಥಾನಗಳನ್ನು ಕಟ್ಟಿದ್ದು ಬೆಟ್ಟದ ಮೇಲೆ. ಪೂಜೆ ಮಾಡಲು ಹೋದಾಗ ಜನ ಭೂಮಿಯನ್ನು ಮೆಟ್ಟುತ್ತಾರೆ. ಅಲ್ಲಿರುವ ಹಳ್ಳವನ್ನು ನೋಡುತ್ತಾರೆ. ಮಳೆಗಾಲದಲ್ಲಿ ನೀರು ಹರಿದುಕೊಂಡು ಬರುವುದು ಕಾಣಿಸುತ್ತದೆ. ತಮ್ಮ ಕಾಲ್ನಡಿಗೆ ಮತ್ತು ಬುದ್ಧಿಶಕ್ತಿಯಿಂದಲೇ ಅವನ್ನೆಲ್ಲ ನೋಡಿಕೊಂಡು ಬರುತ್ತಿದ್ದರು. ಹಬ್ಬ, ಜಾತ್ರೆಗೆಂದು ವರ್ಷಕ್ಕೆ ಒಂದು ಸಲವೋ, ಎರಡು ಸಲವೋ ತುಂಬ ಜನ ಬೆಟ್ಟ ಹತ್ತಿ ಇಳಿದು ಬರುತ್ತಾರೆ. ದೇವರು ಅಲ್ಲಿದ್ದಾನೆ, ಅದಕ್ಕೂ ನಮಗೂ ಸಂಬಂಧ ಇದೆ; ನಾವು ಬೆಟ್ಟದ ರಕ್ಷಣೆ ಮಾಡಬೇಕು ಎನ್ನುವ ಆಧ್ಯಾತ್ಮಿಕ ಸಂಬಂಧ. ಅಲ್ಲಿ ದೇವರಿದ್ದಾನೆ; ಅದನ್ನು ನಾವು ಮುಟ್ಟಬಾರದು ಎಂಬ ಭಯ. ವಾಹನದಲ್ಲಿ ಹೋಗಬಾರದು ಎಂಬ ನಿಯಮ. ನಡೆದುಕೊಂಡು ಹೋಗುವಾಗ ಅಲ್ಲಿ ಜೀವಸಂಕುಲ ಹೇಗೆ ವಿಕಾಸವಾಯಿತು ಎಂಬುದನ್ನು ನೋಡುತ್ತಾರೆ. ಹಿರಿಯರು ಜೊತೆಯಲ್ಲಿದ್ದ ಮಕ್ಕಳಿಗೆ ಇದು ಔಷಧಿ, ಈ ಮರ ಈ ಉಪಯೋಗಕ್ಕೆ ಆಗುತ್ತದೆ, ಇಲ್ಲಿ ಇಂತಹ ಪ್ರಾಣಿಗಳು ಇರುತ್ತವೆ – ಮುಂತಾಗಿ ವಿವರಿಸುತ್ತಾರೆ. ಹೀಗೆ ನಡೆದುಕೊಂಡು ಹೋಗುವಾಗ ಜ್ಞಾನ ಬೆಳೆಯುತ್ತದೆ.
ಈ ಜೀವಸಂಕುಲದ ಜೊತೆಯಲ್ಲಿ ನಾವು ಹೊಕ್ಕುಳ ಸಂಬಂಧವನ್ನು ಬೆಳೆಸಿಕೊಳ್ಳಬೇಕು. ಈ ಬೆಟ್ಟಕ್ಕೆ ಯಾವುದೇ ರೀತಿಯಲ್ಲಿ ಹಾನಿ ಮಾಡಿದರೆ ನೀರು ಸಿಗುವುದಿಲ್ಲ. ಪ್ರಾಣವಾಯು ಸಿಗುವುದು ಇಲ್ಲಿಂದ. ನಾವು ನಡೆದುಕೊಂಡು ಹೋಗುವಾಗ ತೀರ್ಥ ಸಿಗುತ್ತದೆ. ಅಲ್ಲಿ ತೀರ್ಥೋದ್ಭವ ಆಗುತ್ತದೆ. ದೇವರು ಅಲ್ಲಿ ಇರುತ್ತಾನೆ; ನಮ್ಮ ರಕ್ಷಣೆ ಮಾಡುತ್ತಾನೆ. ನಡೆದುಕೊಂಡು ಹೋದರೆ ಅಲ್ಲಿ ಒಳ್ಳೆಯ ಪ್ರಾಣವಾಯುವನ್ನು ಸೇವಿಸುತ್ತೇವೆ. ನಮ್ಮ ಶ್ವಾಸಕೋಶಗಳು ಅಭಿವೃದ್ಧಿಯಾಗುತ್ತವೆ. ಶ್ರಮ ಆಗುತ್ತದೆ; ಅದರಿಂದ ವ್ಯಾಯಾಮ – ಹೀಗೆ ಇಲ್ಲಿ ಹಲವು ಪ್ರಯೋಜನಗಳಿವೆ. ಕಾರು-ವಿಮಾನಗಳಲ್ಲಿ ಹೋದರೆ ಅದು ಆಗುವುದಿಲ್ಲ. ನಡೆದುಕೊಂಡು ಹೋಗುವಾಗ ನಾವು ಭೂಮಿತಾಯಿಯನ್ನು ಸ್ಪರ್ಶ ಮಾಡುತ್ತೇವೆ. ಭೂಮಿಯನ್ನು ಆ ರೀತಿಯಲ್ಲಿ ಮುಟ್ಟಿದಾಗ ನಮಗೆ ಆಗುವಂತಹ ಫೀಲಿಂಗ್ (ಭಾವನೆ) ಬೇರೆ ರೀತಿಯದ್ದು; ಮತ್ತು ನಡೆದುಕೊಂಡು ಹೋಗುವಾಗ ಅಲ್ಲಿ ಎಲೆ, ಹೂ, ಹಣ್ಣು ಉದುರಿದ್ದನ್ನು ನೋಡುತ್ತೇವೆ; ಅಲ್ಲಿ ಪ್ರಾಣಿಗಳಿರುತ್ತವೆ. ಬಗೆಬಗೆಯ ಇರುವೆಗಳು, ಹಾವು, ನಾಗರಹಾವು, ಹೆಬ್ಬಾವು ಇರುತ್ತವೆ. ಅದು ವಿಶಿಷ್ಟವಾದ ಒಂದು ಪ್ರಪಂಚ.
ಹೀಗೆ ನಮ್ಮ ಪರಂಪರೆಯಲ್ಲಿ ಕೆರೆಗಳ ನಿರ್ಮಾಣ ಹೇಗಾಯಿತೆಂದರೆ, ಬೆಟ್ಟವನ್ನು ಉಳಿಸಬೇಕು. ಬೆಟ್ಟದ ಮೇಲೆ ದೇವಸ್ಥಾನ ಕಟ್ಟಬೇಕು. ಬೆಟ್ಟವೆಂದರೆ ಭೂಮಿತಾಯಿಯ ಸ್ತನ. ಬೆಟ್ಟದಿಂದ ಹರಿದುಬರುವ ನೀರಿಗೆ ಕೆರೆ ಕಟ್ಟಿಸಿಕೊಂಡರೆ ಬೇಸಗೆ ಕಾಲದಲ್ಲಿ, ಎಲ್ಲ ಕಾಲದಲ್ಲಿ, ಅಕಸ್ಮಾತ್ ಒಂದು ಬರಗಾಲ ಬಂದರೂ ನೀರು ಉಳಿದುಕೊಳ್ಳುತ್ತದೆ ಎಂಬುದು ಬಂತು. ಹಿಂದಿನವರು ನೀರಿನ ಹರಿವು ನೋಡಿಕೊಂಡು ಕೆರೆಗಳನ್ನು ಕಟ್ಟಿಸಿದರು.
ಪ್ರ: ಈಗ ನಾವು ಪಶ್ಚಿಮಘಟ್ಟದಲ್ಲಿ ಹೇಗೆ ಬೆಟ್ಟಗುಡ್ಡಗಳ ನಡುವೆ ಕಾಡನ್ನು ಕಾಣುತ್ತೇವೆಯೋ ಸಾವಿರ ವರ್ಷಗಳ ಹಿಂದೆ ಬಯಲು ಸೀಮೆಯಲ್ಲೂ ಅದೇ ರೀತಿ ಕಾಡುಗಳು ಇದ್ದವೆ?
ಉ: ಇತ್ತು; ಅದ್ಭುತವಾಗಿ ಇತ್ತು. ಮಾಕಳಿ ಬೆಟ್ಟ ಎಂದು ಕರೆಯುತ್ತಿದ್ದರು. (ಮಾಕಳಿ ಅಂದರೆ ಭೂಮಿಯ ಕೆಳಗೆ ಸುಮಾರು ಇಪ್ಪತ್ತು ಅಡಿ ಬೇರು ಬಿಡುವ ಸಸ್ಯ). ಅದಕ್ಕೊಂದು ಹೆಸರು, ಗೌರವ. ಒಂದು ಬೆಟ್ಟ; ಅದರ ಮೇಲೊಂದು ದೇವಸ್ಥಾನ. ಮಾರಮ್ಮನ ಗುಡಿ. ವಜ್ರಮುನೀಶ್ವರ ದೇವಸ್ಥಾನ. ಪ್ರತೀ ಬೆಟ್ಟದಲ್ಲಿ ಒಂದು ದೇವಸ್ಥಾನ ಇರುತ್ತಿತ್ತು. ರಾಮನಗರ ಜಿಲ್ಲೆಯ ಬೆಟ್ಟಗಳಲ್ಲಿ ಸುಮಾರು ೫೬೦ ದೇವಸ್ಥಾನಗಳಿದ್ದವು. ಬೆಟ್ಟಗಳನ್ನು ರಕ್ಷಿಸುವುದು ಬಹಳ ಮುಖ್ಯ. ನೀರು ನೀರಲ್ಲ; ಅದು ತೀರ್ಥವಾಗಿ ನಿಮಗೆ ಬರುತ್ತದೆ. ಅಲ್ಲಿ ಸಸ್ಯಲೋಕವಿದೆ; ಪ್ರಾಣಿಲೋಕವಿದೆ. ಎಲ್ಲವೂ ಪವಿತ್ರ. ಆ ರೀತಿಯಲ್ಲಿ ಅದನ್ನು ಅಳವಡಿಸಿಕೊಂಡರು. ಅದಕ್ಕೆ ತಕ್ಕಂತೆ ಕೆರೆಗಳನ್ನು ಕಟ್ಟಿಸಿದರು. ಪ್ರತ್ಯೇಕ ತಾಂತ್ರಿಕತೆ ಇರಲಿಲ್ಲ. ಮಣ್ಣಿನ ಕೆಲಸದವನೊಬ್ಬ, ಕಲ್ಲಿನ ಕೆಲಸದವನೊಬ್ಬ, ಒಬ್ಬ ಕುಂಬಾರ – ಎಲ್ಲ ಸೇರಿ ವಿಚಾರ ವಿನಿಮಯ ಮಾಡಿ, ಕೆರೆ ನಿರ್ಮಾಣದ ಕ್ರಮ, ಕೋಡಿ ಎಲ್ಲಿ ಬರಬೇಕು, ತೋಡು ಎಲ್ಲಿ, ನೀರನ್ನು ಹೇಗೆ ಬಳಸಬೇಕು ಎಲ್ಲವನ್ನೂ ಚರ್ಚಿಸುತ್ತಿದ್ದರು; ಆ ರೀತಿಯಲ್ಲಿ ಒಂದು ತಂತ್ರಜ್ಞಾನ ತಯಾರಾಯಿತು.
ಅಲ್ಲಿ ಒಂದು ಅದ್ಭುತ ಏನಾಯಿತೆಂದರೆ, ಕೆರೆಯ ನಿರ್ವಹಣೆಯನ್ನು ಯಾರ ಕೈಯಲ್ಲಿ ಮಾಡಿಸಬೇಕು ಎಂಬುದು. ನೀರಿನ ವಿತರಣೆ ಹೇಗೆ? ಅದಕ್ಕೊಬ್ಬ ನೀರಗಂಟಿ ಇದ್ದ. ಅವನು ಯಾರು? ಒಬ್ಬ ಶ್ರೀಮಂತ, ಊರಿನ ಗೌಡ ಅಥವಾ ಪಟೇಲನಲ್ಲ. ಸಾಮಾನ್ಯ; ಸಮಾಜದ ಅತ್ಯಂತ ಕೆಳಗಿನ ಸ್ತರದವ. ಅವನಿಗೆ ನೀರಿನ ಜವಾಬ್ದಾರಿ ಕೊಟ್ಟರು; ಅವನ ವಿರುದ್ಧ ಏನೂ ಮಾತಾಡುವಂತಿಲ್ಲ; ಅಷ್ಟೊಂದು ಅಧಿಕಾರ.
ಪ್ರ: ಅಂದು ಕೆರೆಗಳನ್ನು ಜನರ ಶ್ರಮದ ಮೂಲಕವೇ ಕಟ್ಟಿಸಲಾಯಿತೆ? ಕೆರೆಗಳು ತುಂಬ ವಿಶಾಲವಿದ್ದವಲ್ಲವೆ? ಅವುಗಳ ನಿರ್ಮಾಣದ ಕಲ್ಪನೆ ಮಾಡುವುದೂ ಕಷ್ಟ. ಅದಕ್ಕೆ ವರ್ಷಗಳೇ ಬೇಕಾಗಿರಬಹುದಲ್ಲವೇ?
ಉ: ನೂರಕ್ಕೆ ನೂರು ಜನರ ಶ್ರಮ ಮತ್ತು ಸ್ಥಳೀಯ ಸಂಪನ್ಮೂಲಗಳನ್ನೇ ಬಳಸಿಕೊಂಡು ಕೆರೆಗಳನ್ನು ಕಟ್ಟಿಸಲಾಯಿತು. ಊರಿನ ಜನ ಸೇರಿಕೊಂಡು ವ?ಗಟ್ಟಲೆ ಕೆಲಸ ಮಾಡುತ್ತಿದ್ದರು. ಯಾರೋ ಹಣವಂತರು, ಕೆಲವೊಮ್ಮೆ ಒಬ್ಬಾಕೆ ಅಮ್ಮ ತನ್ನ ಶರೀರವನ್ನು ಮಾರಿ ಕೂಡ ಕೆರೆ ಕಟ್ಟಿಸಲು ಹಣ ನೀಡಿರಬಹುದು. (ಉದಾ-ಸೂಳೆಕೆರೆ). ಕೆಲವರು ತಮ್ಮ ಬಂಗಾರವನ್ನು ಅಡವಿಟ್ಟು ಕೆರೆ ಕಟ್ಟಿಸಿದ್ದಾರೆ. ಜನ ತಮ್ಮ ಸಣ್ಣ ಗಳಿಕೆಯಿಂದಲೂ, ಕೂಲಿಯಿಂದ ಬಂದ ಸಂಬಳದಿಂದಲೂ ಕೆರೆ ಕಟ್ಟಿಸಲು ಹಣ ನೀಡುತ್ತಿದ್ದರು. ಅದು ಯಾವುದೇ ವಿಶ್ವಬ್ಯಾಂಕ್ ಸಾಲದಿಂದ ಕಟ್ಟಿದ ಕೆರೆಗಳಲ್ಲ; ದೊಡ್ಡ ಕನ್ಸಲ್ಟೆಂಟ್ಗಳು ಅಲ್ಲಿರಲಿಲ್ಲ. ಇದು ಸಾಮಾಜಿಕ ಹೊಣೆಗಾರಿಕೆ ಮತ್ತು ಸಮಾಜದ ಹಿತದೃಷ್ಟಿ. ಮನುಷ್ಯರಿಗೆ ಮಾತ್ರವಲ್ಲ; ಪ್ರಾಣಿ ಪಕ್ಷಿಗಳಿಗೂ ಕೆರೆಯೇ ಆಧಾರ. Care and Share (ಸಂರಕ್ಷಣೆ ಮತ್ತು ಹಂಚುವಿಕೆ) ಫಿಲಾಸಫಿ.
ಪ್ರ: ಕೆರೆಗಳ ಪರಸ್ಪರ ಜೋಡಣೆ, ಅವಲಂಬನೆ, ಹೊಂದಾಣಿಕೆಯಲ್ಲಿನ ವೈಜ್ಞಾನಿಕತೆ ಯಾವ ರೀತಿ ಇತ್ತು?
ಉ: ನೀರು ಒಂದಕ್ಕೊಂದು ಸೇರುತ್ತಾ ಹೋಗಿ ಸಂಗ್ರಹವಾಗುತ್ತದೆ. ಮಳೆನೀರು ಬಿದ್ದದ್ದು, ವೇಗವಾಗಿ ಹರಿದು, ಮುಂದೆ ನಿಧಾನವಾಗಿ ಕೆರೆಗಳಲ್ಲಿ ಸಂಗ್ರಹವಾಗುತ್ತದೆ. ಸ್ವಲ್ಪ ಮೋಡ, ಸ್ವಲ್ಪ ಜಿನುಗು – ಶುದ್ಧವಾದ ನೀರು ಹರಿದುಕೊಂಡು ಬರುತ್ತದೆ. ಬರುವಾಗ ಅದಕ್ಕೆ ಜೀವವೈವಿಧ್ಯ ಎದುರಾಗುತ್ತದೆ; ಅಲ್ಲಿ ಬಜೆ, ಒಂದೆಲಗ, ತ್ರಿಫಲ, ಔದುಂಬರ, ಅಶ್ವತ್ಥ, ವಟವೃಕ್ಷ – ಹೀಗೆ ಬೇರೆಬೇರೆ ಸಸ್ಯಗಳಿರುತ್ತವೆ. ಔದುಂಬರ (ಅತ್ತಿ), ವಟವೃಕ್ಷಗಳ ಹಣ್ಣು ನೀರನ್ನು ಶುದ್ಧ ಮಾಡುತ್ತವೆ. ಇದು ಅದ್ಭುತವಾದ ವ್ಯವಸ್ಥೆ. ಆ ಹಣ್ಣುಗಳು ಸೇರಿದ ನೀರು ಮಣ್ಣನ್ನು ಕೂಡ ಶುದ್ಧಗೊಳಿಸುತ್ತದೆ. ಅದು ಅಲ್ಲಿರುವ ಪ್ರಾಣಿ-ಪಕ್ಷಿಗಳಿಗೆ ಔ?ಧ-ಆಹಾರ ಎರಡೂ ಆಗುತ್ತದೆ. ಅಲ್ಲಿರುವ ಮೀನು ಆರೋಗ್ಯವಾಗಿರುತ್ತದೆ. ಈ ರೀತಿ ಒಂದಕ್ಕೊಂದಕ್ಕೆ ಹೊಕ್ಕುಳಬಳ್ಳಿ ಸಂಬಂಧವಿರುತ್ತದೆ. ಈಚೆಗೆ ಔದುಂಬರವನ್ನು ’ಮರಗಳ ರಾಣಿ’ (queen of trees) ಎಂಬುದಾಗಿ ಗುರುತಿಸಿದರು. ಅಶ್ವತ್ಥ ಈಗಾಗಲೇ ಮಹಾವೃಕ್ಷ ಎನಿಸಿದೆ. ಇನ್ನು ನೇರಳೆ; ಈ ಮಾವಿನ ಮರಗಳು ಎಷ್ಟೊಂದು ಹಣ್ಣನ್ನು ಕೊಡುತ್ತಿದ್ದವು; ನೂರಾರು ಟನ್ನು. ಮಳೆಗಾಲಕ್ಕೆ ಸರಿಯಾಗಿ ಬರುವ ಮಾವು, ನೇರಳೆ; ಔದುಂಬರ ಮುಂತಾದ ಹಣ್ಣುಗಳು ನೀರಿಗೆ ಸೇರಿ, ಮಳೆನೀರಿನೊಂದಿಗೆ ತೋಡು, ನದಿಗಳಲ್ಲಿ ಹರಿದುಕೊಂಡು ಹೋಗುವಾಗ ಕೆಳಭಾಗದಲ್ಲಿ ಮೀನು ರೆಡಿಯಾಗಿ ಕಾದುಕೊಂಡು ಇರುತ್ತದೆ; ಆಗ ಅದಕ್ಕೆ ಮೊಟ್ಟೆ (ಸಂತಾನವೃದ್ಧಿ) ಇಡುವ ಕಾಲ. ಆ ಮೊಟ್ಟೆ-ಮರಿಗಳಿಗೆ ಹರಿಯುವ ನೀರಿನೊಂದಿಗೆ ಹೋದ ಹಣ್ಣು, ಅವುಗಳ ಸಾರ ಗ್ಲುಕೋಸ್, ಸುಕ್ರೋಸ್, ಶಕ್ತಿ. ಇದರಲ್ಲಿ ನಿಸರ್ಗವೇ, ಭೂಮಿತಾಯಿಯೇ ಗೈನಕಾಲಜಿಸ್ಟ್, ಮೆಟರ್ನಿಟಿಸ್ಟ್. ವಿವಿಧ ಹಣ್ಣುಗಳು, ಅವುಗಳ ಬೀಜ ಭೂಮಿಯಲ್ಲಿ ಕರಗುವುದು, ಹೊಳೆನೀರಿಗೆ, ಅಲ್ಲಿಂದ ಸಮುದ್ರಕ್ಕೆ ಸೇರುವುದು – ಈ ವೈವಿಧ್ಯ ಸಮಗ್ರ ಆರೋಗ್ಯ ಮತ್ತು ಪರಿಸರ ವ್ಯವಸ್ಥೆ ಭೂಮಿಯ ಪೂರ್ಣ ಆರೋಗ್ಯಗಳಿಗೆ ಪೂರಕ. ಆ ಸ್ಥಳ, ಆ ಮಣ್ಣು, ಆ ಉ?ತೆಗಳು ಆ ಮಳೆಗೆ ಅನುಗುಣವಾಗಿ ಬೇಕಾದ ಎಲ್ಲ ವ್ಯವಸ್ಥೆಯನ್ನೂ ಮಾಡಿಕೊಂಡು ಇರುತ್ತಿದ್ದವು. ಮನುಷ್ಯನ ಕೈವಾಡ (ಹಸ್ತಕ್ಷೇಪ) ಇಲ್ಲದೇನೆ ಆ ಸ್ಥಳಕ್ಕೆ ಬೇಕಾದ ಎಲ್ಲ ಪರಿಸರ ವ್ಯವಸ್ಥೆಯನ್ನು ನಿಸರ್ಗ ಮಾಡಿಕೊಂಡಿರುತ್ತದೆ. ಆ ನೀರನ್ನು ಕುಡಿದಾಗ ಅದರಲ್ಲಿರುವ ಅಂಶಗಳು ನಮ್ಮ ಡಿಎನ್ಎಗೆ ಸೇರುತ್ತವೆ. ನಮ್ಮ ಜಾಣ್ಮೆ, ಬುದ್ಧಿ, ವಿವೇಕ, ಮನಸ್ಸು ಎಲ್ಲ ತಯಾರಾಗುವುದು ಎಲ್ಲಿಂದಲೋ ಅಲ್ಲ. ಬದಲಾಗಿ ಆ ಸ್ಥಳದಲ್ಲಿ ಭೂಮಿಯಲ್ಲಿ ತಯಾರಾಗುವ ಒಂದು ರಾಸಾಯನಿಕ ಸಂರಚನೆಯೇ (chemical composition) ಮನುಷ್ಯನ ಜೆನೆಟಿಕ್ ಸಿಸ್ಟಮನ್ನು ರೂಪಿಸಿರುತ್ತದೆ. ತಾಯಿಯ ಗರ್ಭ, ತಂದೆಯ ಪುರುಷತ್ವ ಎಲ್ಲವೂ ಪ್ರಾರಂಭ ಆಗುವುದು ಅಲ್ಲಿಂದ. ಅಲ್ಲಿ ಸತ್ತ್ವ ಇಲ್ಲವಾದರೆ ಇಲ್ಲಿ (ಜೀವಿಗಳಲ್ಲಿ) ಕೂಡ ಇರುವುದಿಲ್ಲ. ಅದೇ ರೀತಿ ಪ್ರಾಣಿಗಳು. ಪ್ರತಿಯೊಂದು ಪ್ರಾಣಿಯ ಜೆನೆಟಿಕ್ ಸಿಸ್ಟಮಿಗೂ, ಜೆ. ಫಾರ್ಮಿಗೂ ಸ್ಥಳಕ್ಕೆ ಅನುಗುಣವಾದ ಹೊಂದಾಣಿಕೆಗಳೇ ಕಾರಣವಾಗಿರುತ್ತವೆ. ಆ ಸ್ಥಳದಲ್ಲಿ ಏನು ಹೊಂದಾಣಿಕೆ ಇರುತ್ತದೆ-ಅದು ಬೇಕು. ಅದಿಲ್ಲವಾದರೆ ಬದುಕಲು ಆಗುವುದಿಲ್ಲ; ಜರ್ಮಿನೇಶನ್ನೇ (ಸಂತಾನಸೃಷ್ಟಿ) ಆಗುವುದಿಲ್ಲ.
ನೇರಳೆಗಿಡ ಭೂಮಿಗೆ ಸೇರಿದಾಗ ಅಲ್ಲಿ ನಾಲ್ಕು ಸಸಿಗಳು ಬರುತ್ತವೆ. ಒಂದು ಸಸಿ ಕಾಯಿಯ ಎಲ್ಲ ಫಾರ್ಮೇಶನ್ ಪಡೆದುಕೊಂಡು ಬರುತ್ತದೆ. ಮರಕ್ಕೆ ತನ್ನ ಸ್ವಂತಿಕೆಯನ್ನು ಉಳಿಸಿಕೊಳ್ಳಬೇಕೆಂದು ಕೂಡ ಇದೆ. ಏಕೆಂದರೆ ಎಲ್ಲ ಬಿಟ್ಟು ಕ್ರಾಸ್ ಆದರೆ ಸ್ವಂತಿಕೆ ಉಳಿಯುವುದಿಲ್ಲ. ಒಂದು ಸ್ಥಳದಲ್ಲಿ ಬೆಳೆದ ಸಸಿ ಅಲ್ಲಿನ ಋತುಧರ್ಮ (seasonal justice)ದಂತೆ ಇರುತ್ತದೆ. ಅದನ್ನು ಉಲ್ಲಂಘಿಸಬಾರದು. ಋತುಧರ್ಮದ ಪ್ರಕಾರ ಮಾವು, ನೇರಳೆ, ಹಲಸು, ವಾಟೆ, ಗುರುಗಲು, ಹುಣಸೆ ಎಲ್ಲವೂ ಇರಬೇಕು. ಇಲ್ಲಿ ಆದದ್ದು ಇನ್ನೊಂದೆಡೆ ಆಗಬೇಕಿಲ್ಲ. ನೀರು ಹರಿದುಕೊಂಡು ಬರುವುದು, ಅಂದರೆ ಕೆರೆಗಳ ಜೋಡಣೆ, ಅವಲಂಬನೆ, ಹೊಂದಾಣಿಕೆ ಕೃತಕವಾಗಿ ಮಾಡಿದ್ದಲ್ಲ. ಎಲ್ಲೆಲ್ಲಿ ಯಾವ್ಯಾವುದಕ್ಕೆ ಏನೇನು ಆಗಬೇಕೋ, ಮಣ್ಣು ಮತ್ತು ಜೀವಿಗಳ ಆರೋಗ್ಯಕ್ಕೆ ಏನೇನು ಬೇಕೋ ಎಲ್ಲವನ್ನೂ ಮಾಡುವ ಜೈವಿಕ ವ್ಯವಸ್ಥೆ ಇದೆ. ಅಶ್ವತ್ಥಮರದ ಪಾತ್ರವೇನು, ಔದುಂಬರದ ಪಾತ್ರವೇನು ನಮಗೆ ಗೊತ್ತಿಲ್ಲ. ಅವು ಹೂ ಬಿಡುತ್ತವೆ. ಒಂದು ಹಣ್ಣಿನಲ್ಲಿ ಸಾವಿರ-ಸಾವಿರ ಜೀವಿಗಳಿರುತ್ತವೆ; ಇನ್ನು ಕೇಸರವಿರುತ್ತದೆ. ಅದಿಲ್ಲದಿದ್ದರೆ ಬೀಜ ಅಥವಾ ಸಂತಾನ ಆಗುವುದಿಲ್ಲ. ಹಣ್ಣಿನ ಒಳಗೆ ಒಂದು ಗಂಡು ಹೂ, ಒಂದು ಹೆಣ್ಣು ಹೂ ಇರುತ್ತದೆ. ಕೇಸರ ತನ್ನದನ್ನು ಇನ್ನೊಂದು ಗಿಡಕ್ಕೆ ಒಯ್ದುಕೊಟ್ಟು ಬಿದ್ದು ಹೋಗಬೇಕು. ಹೀಗೆ ಮರಕ್ಕೂ ಜವಾಬ್ದಾರಿಯಿದೆ. ವ?ದಲ್ಲಿ ನಾಲ್ಕಾದರೂ ಹಣ್ಣು ಮಾಡಲು ಅವಕಾಶ ಮಾಡಿಕೊಡಬೇಕು. ಜೀವಿಸಂರಕ್ಷಣೆ ಮಾಡಬೇಕು. ಕೇಸರದ್ದೊಂದು ವಿಸ್ಮಯ. ಇನ್ನು ವಟವೃಕ್ಷ, ಔದುಂಬರ, ಆಲ, ನೇರಳೆ ಮುಂತಾದ ಮರಗಳು ನದಿ ಅಥವಾ ನೀರಿನ ಆಶ್ರಯವಿರುವಲ್ಲಿ ಇರುವುದನ್ನು ಗಮನಿಸಬಹುದು.
ವೃಕ್ಷಸಂಪತ್ತಿನ ಹಾಗೆಯೇ ಭೂಮಿಯ ಕೆಳಗೂ ಒಂದು ಪ್ರಪಂಚವಿದೆ. ಮಾಕಳಿ ಬೇರು, ಸೊಗದೆ ಬೇರು, ಹುತ್ತ ಇವೆಲ್ಲ ಇವೆ. ಸುಮಾರು ೧೨೦ ಜಾತಿಯ ಗೆದ್ದಲು ಹುಳ(white ant)ಗಳಿವೆ. ನಮ್ಮ ಕಾಲ ಕೆಳಗಿರುವ ಇರುವೆ ಲೋಕ ಒಂದು ಅದ್ಭುತ. ಜಗತ್ತಿನ ಎಲ್ಲ ಮನುಷ್ಯರ ತೂಕ ಎಷ್ಟಿದೆಯೋ ಅದರ ಹತ್ತರಷ್ಟು ತೂಕ ಇರುವೆಗಳದ್ದು. ಅವು ಏನೇನು ಕೆಲಸ ಮಾಡುತ್ತಿವೆ ಎಂಬುದು ನಮಗೆ ಗೊತ್ತಿರಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಕೆರೆಗಳ ಜೋಡಣೆಯಲ್ಲಿ ವೈಜ್ಞಾನಿಕತೆಯನ್ನು ನಾವು ತಂದಿಲ್ಲ. ಪ್ರಕೃತಿ ಮಾಡಿಕೊಂಡಿವೆ. ನಿಸರ್ಗದಲ್ಲಿ ಅವೈಜ್ಞಾನಿಕತೆ ಇಲ್ಲವೇ ಇಲ್ಲ. ಸಂಪೂರ್ಣ ವೈಜ್ಞಾನಿಕತೆ (ಹೋಲಿಸ್ಟಿಕ್ ಸಯನ್ಸ್) ಇದೆ. ಪರಸ್ಪರ ಹೊಂದಿಸುವ ಕೆಲಸವನ್ನು ನಿಸರ್ಗ ಮಾಡುತ್ತದೆ; ಅದನ್ನು ಉಳಿಸಿಕೊಳ್ಳುವ ಜಾಣ್ಮೆಯನ್ನು ನಾವು ತೋರಿಸಬೇಕು.
ಪ್ರ: ಕೆರೆಗಳನ್ನು ಅವಲಂಬಿಸಿದ ಜೀವನಶೈಲಿಯ ವೈಶಿಷ್ಟ್ಯಗಳೇನು? ಅವುಗಳಲ್ಲಾದ ಬದಲಾವಣೆಗಳ ಪರಿಣಾಮಗಳೇನು?
ಉ: ಕೆರೆ ಎಂದರೆ ಶಾಶ್ವತವಾಗಿ ಒಬ್ಬನ ಬಳಕೆಗಾಗಿ ಯಾರೂ ತಯಾರಿಸಿದಂಥದ್ದಲ್ಲ. ಸ್ವಲ್ಪ ನೀರು ಬೇಕಾಗಿರುವ ನಾನು ದೊಡ್ಡ ಕೆರೆಯನ್ನು ಕಟ್ಟಿಸಿಕೊಂಡು ಬಳಸಬೇಕಿಲ್ಲ. ಯಾರೂ ಹಾಗೆ ಮಾಡಲು ಹೋಗಿಲ್ಲ. ಇತರ ಜನರು ಮತ್ತು ಅಲ್ಲಿರುವ ಪ್ರಾಣಿ-ಪಕ್ಷಿಗಳೊಂದಿಗೆ ಹಂಚಿಕೊಳ್ಳುವುದು ಇದ್ದೇ ಇದೆ; ಹಂಚಿಕೊಳ್ಳಬೇಕು ಮತ್ತು ರಕ್ಷಣೆಯನ್ನೂ ಮಾಡಬೇಕು. ಅಲ್ಲಿ ಘರ್ಷಣೆ (clash) ಇರುವುದಿಲ್ಲ. ಹಕ್ಕು ಒಬ್ಬರಿಗೆ ಇರುವುದಿಲ್ಲ. ನಮ್ಮಲ್ಲಿ ಬಹಳ ಅದ್ಭುತವಾದ ಒಂದು ಕಲ್ಪನೆ ಇತ್ತು. ಹಂಚಿತಿನ್ನುವುದು ನಮ್ಮ ಪದ್ಧತಿ. ಊರಿನಲ್ಲೊಂದು ದೇವಸ್ಥಾನ ಇರುತ್ತಿತ್ತು. ನೀರು ಕೂಡ ಎಲ್ಲರಿಗೂ ಬೇಕಾಗುತ್ತದೆ, ಅದನ್ನು ಮಾರಬಾರದು. ದೇವರು ಕೊಟ್ಟ ಸಂಪನ್ಮೂಲವನ್ನು ದೋಚಿಕೊಂಡು ತಿನ್ನಲು ಯಾರು ಅವಕಾಶ ಕೊಟ್ಟರು? ಅದು ಪಾಪ, ಧರ್ಮವಲ್ಲ. ಕೆರೆನೀರಿಗೆ ಕಸ ಹಾಕಬಾರದು, ಶುದ್ಧವಾಗಿ ಇಡಬೇಕು. ಕೆರೆ ಕೋಡಿಯಾದ ತಕ್ಷಣ ಪೂಜೆ ಮಾಡಬೇಕು. ಯಾವುದೇ ಕಾರಣಕ್ಕೂ ಮಲಿನಗೊಳಿಸಬಾರದು; ನೀರನ್ನು ದೋಚಬಾರದು. ಪೂಜೆಯ ಉದ್ದೇಶ ನೀರನ್ನು ಶುದ್ಧವಾಗಿ ಉಳಿಸುವುದು.
ಪ್ರ: ಪ್ರಾಣಿಯಂತೆ ಇದ್ದಾಗ ಮನುಷ್ಯ ಚೆನ್ನಾಗಿದ್ದ ಎನ್ನಬಹುದೆ?
ಉ: ಹೌದು. ಮನುಷ್ಯ ಆದಾಗ ಮನುಷ್ಯತ್ವವನ್ನು ಕಳೆದುಕೊಂಡ. ಆದರೂ ಹಿಂದೆ ಮನುಷ್ಯನಲ್ಲಿ ಬಹಳಷ್ಟು ಮಟ್ಟಿಗೆ ಮನುಷ್ಯತ್ವ ಇತ್ತು. ಅತಿಸ್ವಾರ್ಥ ಇರಲಿಲ್ಲ. ಅದಕ್ಕಾಗಿಯೇ ಆ ರೀತಿಯ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದರು. ಜೀವನಶೈಲಿಗಳನ್ನು ಮಿತಿಯಲ್ಲಿ ಇರಿಸಿಕೊಂಡಿದ್ದರು. ಅತಿಮಾಡಲು ಹೋಗಿರಲಿಲ್ಲ. ಜೀವನಶೈಲಿಯಲ್ಲಿ ಬದಲಾವಣೆ ಆದರೂ ನಕಾರಾತ್ಮಕತೆ ಇರಲಿಲ್ಲ. ಜನರೇ ಮಾಡಿಕೊಂಡ ನಿಯಮಗಳು, ಪದ್ಧತಿಗಳು ಬಹಳ ಚೆನ್ನಾಗಿದ್ದವು. ಅಮೆರಿಕದವರು ನಮ್ಮನ್ನು ನೋಡಿ ಈ ರೀತಿ ಈಕ್ವಿಟಿ (ಸಮಾನತೆ) ಶೇರಿಂಗ್(ಹಂಚಿಕೊಳ್ಳುವಿಕೆ) ಗಳನ್ನು ತಮ್ಮ ಸಂವಿಧಾನದಲ್ಲಿ ಅಳವಡಿಸಿಕೊಂಡಿದ್ದಾರೆ; ಹೀಗೆ ಕರ್ನಾಟಕದ ಗ್ರಾಮೀಣ ಆಡಳಿತ ವ್ಯವಸ್ಥೆ ಅಮೆರಿಕದಲ್ಲಿ ಸೇರಿಕೊಂಡಿದೆ.
ಅನಂತರ ಬೇರೆಯವರು ಕೂಡ ಅಳವಡಿಸಿಕೊಂಡರು. ವಿಜಯನಗರದ ಕೃಷ್ಣದೇವರಾಯ, ಕೆಂಪೇಗೌಡರು, ಮೈಸೂರಿನ ನಾಲ್ವಡಿ ಕೃಷ್ಣದೇವರಾಜ ಒಡೆಯರು ಇವರೆಲ್ಲ ಅಳವಡಿಸಿಕೊಂಡರು. ಹಳೇಬೀಡು, ಬೇಲೂರು, ಹಾಸನ ಮುಂತಾದ ಕಡೆ ದೊಡ್ಡ ಕೆರೆಗಳನ್ನು ಕಟ್ಟಿಸಿದ್ದನ್ನು ಕಾಣಬಹುದು. ಹಾಸನದ ಕೆರೆ ೧೨೦೦ ವರ್ಷಗಳಷ್ಟು ಹಳೆಯದು. ಅದರ ಕಲ್ಲುಗಳು ಇಂದಿಗೂ ಆಚೀಚೆ ಆಗಿಲ್ಲ. ಕೆರೆಗಳನ್ನು ಅವಲಂಬಿಸಿದ ಜೀವನಶೈಲಿ ಬಹಳ ಪರಿಶುದ್ಧವಾದದ್ದು. ಅಂದು ಇದ್ದ ನೀರು ಸರಿಯಾಗಿ ಬಳಕೆಯಾಗುತ್ತಿತ್ತು. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಆಮೇಲೆ ನಾಗರಿಕತೆ ಬೆಳೆದಂತೆಲ್ಲ ಬದಲಾವಣೆಗಳು ಆರಂಭವಾದವು.
ಪ್ರ: ಇಂದು ಒಂದು ಕಡೆ ನಾವು ತಂತ್ರಜ್ಞಾನದಿಂದ ವಿಕಾಸ (ಅಭಿವೃದ್ಧಿ) ಎಂಬ ಮಾತನ್ನಾಡುತ್ತೇವೆ. ಮತ್ತೊಂದು ಕಡೆ ಪರಿಸರದ ಹಾನಿಯನ್ನು ಕಾಣುತ್ತೇವೆ. ಹಾಗಾದರೆ ವಿಕಾಸಕ್ಕೂ ಪರಿಸರಕ್ಕೂ ಪೂರಕ ಸಂಬಂಧವನ್ನು ನೋಡಲು ಸಾಧ್ಯವಿಲ್ಲವೇ?
ಉ: ತಂತ್ರಜ್ಞಾನ ಎಂದರೆ ಮಾನವಕೇಂದ್ರಿತ ಅಭಿವೃದ್ಧಿ. ಮನುಷ್ಯನ ದೃಷ್ಟಿಯಿಂದಲೇ ತಂತ್ರಜ್ಞಾನ ಬಂದದ್ದು. ಕೊಲಂಬಸ್ ಕಾಲದಲ್ಲಿ ಅದು ಆರಂಭವಾಯಿತು. ನಮ್ಮಲ್ಲಿ ಕೂಡ ಬ್ರಿಟಿಷರು ಬಂದ ಮೇಲೆ ಮಾನವಕೇಂದ್ರಿತ ಅಭಿವೃದ್ಧಿ ಬಂತು. ಅದರ ಪ್ರಕಾರ ಮನುಷ್ಯನಿಗಾಗಿ ಏನು ಬೇಕಾದರೂ ಮಾಡಬಹುದು. ಕಾಫಿತೋಟ ಮಾಡಿದರು. ಅದು ಜಲಾನಯನ ಪ್ರದೇಶ (catchment area) ವಾದರೂ ಪರವಾಗಿಲ್ಲ. ಕಾಫಿ, ಚಹಾ, ರಬ್ಬರ್ ನಮಗೆ ಬೇಕು. ಅಲ್ಲಿ ವಾಣಿಜ್ಯ, ವ್ಯಾಪಾರ ಮತ್ತು ಲಾಭದ ವಿಷಯ ಬಂತು. ಬ್ರಿಟಿಷರಿಗೆ ಕಾಫಿ ಬೇಕು, ಬೀರ್ ಬೇಕು, ಹಾಗೆಯೇ ಬೇರೆ ವಸ್ತುಗಳು. ನಮ್ಮಲ್ಲಿ ಹಿಂದೆ ಪರಿಸರ ಕೇಂದ್ರಿತ ದೃಷ್ಟಿಕೋನವಿತ್ತು; ಅದರಂತೆ ತಾಂತ್ರಿಕತೆಯನ್ನು ರೂಪಿಸಿಕೊಂಡಿದ್ದರು. ಪಾಶ್ಚಾತ್ಯರು ಮಾನವಕೇಂದ್ರಿತ ವಿಜ್ಞಾನ-ತಂತ್ರಜ್ಞಾನಕ್ಕೆ ಒತ್ತುಕೊಟ್ಟು ಪರಿಸರಕೇಂದ್ರಿತ ತಂತ್ರಜ್ಞಾನವನ್ನು ಅಲಕ್ಷಿಸಿದರು. ಫ್ರಾನ್ಸಿಸ್ ಬೇಕನ್ ಎಂಬ ಅರ್ಥಶಾಸ್ತ್ರಜ್ಞ ಕೆಜಿಎಫ್ಗೆ ಬಂದು, “ಇಲ್ಲಿ ಚಿನ್ನ ಇದೆ, ಗಣಿಗಾರಿಕೆ ಮಾಡುತ್ತೇವೆ” ಎಂದ. ಅದರಂತೆ ಗಣಿಗಾರಿಕೆ ನಡೆಯಿತು. ೫೦೦-೬೦೦ ಟನ್ ಬಂಗಾರ ಹೊತ್ತುಕೊಂಡು ಹೋದರು. ಬಿಟ್ಟು ಹೋದದ್ದೇನು? ವಿಷ!
ಬಳ್ಳಾರಿಯಲ್ಲಿ ಅಭಿವೃದ್ಧಿ ಆಗಬೇಕು ಎಂದು ಇಡೀ ಬೆಟ್ಟವನ್ನು ಕತ್ತರಿಸಿದರು. ತುಂಗಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿತು. ನೀರಿನ ಸಂಗ್ರಹ ಸಾಮರ್ಥ್ಯ ಕಡಮೆ ಆಯಿತು. ಹೀಗೆ ತಾಂತ್ರಿಕತೆಯ ಭಾಗವಾಗಿ ಯಂತ್ರಗಳು ಬಂದಾಗ ಮನು?ನ ಸ್ವಾರ್ಥ, ದುರಾಶೆಗಳು ಬೆಳೆದವು. ಅತಿಆಸೆ ಮತ್ತು ತಿಳಿವಳಿಕೆಯ ಕೊರತೆ. ಇಂದು ವಿಕಾಸಕ್ಕೂ ಪರಿಸರಕ್ಕೂ ಪೂರಕ ಸಂಬಂಧವು ಕಾಣುತ್ತಿಲ್ಲ. ಇಂದೇ ಆಗಬೇಕು; ೨೪ ತಾಸಿನಲ್ಲಿ ದ್ವಿಗುಣವಾಗಬೇಕು. ನಾವು ಕಾಣುವಂತೆ ಕಳೆದ ಒಂದು ದಶಕದಲ್ಲಿ ನಮ್ಮ ರಾಜ್ಯ ಮತ್ತು ದೇಶದಲ್ಲಿ ಎಷ್ಟು ಜನ ಕೋಟ್ಯಧೀಶರಾಗಿರಬಹುದು? ಇಷ್ಟು ಹಣ ಎಲ್ಲಿಂದ ಬಂತು? ೧೦ ಸಾವಿರ ಕೋಟಿ, ೨೦ ಸಾವಿರ ಕೋಟಿ, ೩೦ ಸಾವಿರ ಕೋಟಿ, ಅತಿ ಶ್ರೀಮಂತ ವ್ಯಕ್ತಿ ಎಂದು ನಾವು ಹೊಗಳುತ್ತೇವೆ, ಅವರಿಗೆ ಪ್ರಚಾರ ಕೊಡುತ್ತೇವೆ. ಭೂಮಿಯನ್ನು ಕತ್ತರಿಸಿ, ತುಂಡುಮಾಡಿ ಸಾಗಿಸಿದರು. ಅದು ಮೋಸದಿಂದ ಗಳಿಸಿದ ದುಡ್ಡೇ ವಿನಾ ಅವರಿಗೆ ಪರಿಸರದ ಬಗ್ಗೆ ಕಾಳಜಿ ಇಲ್ಲ. ಈಕ್ವಿಟಿ ಇಲ್ಲ. ವಿಷ ಹಾಕುತ್ತಿದ್ದೇವೆ ಎಂಬ ಬಗ್ಗೆ ಬೇಸರವಿಲ್ಲ. ರೋಗಗಳು ಬರುತ್ತವೆಂಬ ಕಾಳಜಿ ಇಲ್ಲ.
ತಂತ್ರಜ್ಞಾನದಿಂದ ಆಂಟಿ ಬಯೋಟಿಕ್ ನಿರೋಧಕತೆ (ರೆಸಿಸ್ಟೆನ್ಸ್) ಬರುತ್ತಿದೆ. ಕೋಳಿ ಸಾಕಣೆ ಮಾಡುತ್ತಾರೆ; ವಿಷ ಹಾಕುತ್ತಾರೆ. ಅದನ್ನೇ ತಿನ್ನುತ್ತಿದ್ದಾರೆ. ಕಳೆನಾಶಕದಿಂದ ಕ್ಯಾನ್ಸರ್ ಬರುತ್ತದೆ; ಹೆಣ್ಣುಮಕ್ಕಳಿಗೆ ಬಂಜೆತನ ಬರುತ್ತಿದೆ. ಹೀಗೆ ತಂತ್ರಜ್ಞಾನದಿಂದ ಪರಿಸರವ? ಅಲ್ಲ, ಜೀವಿಗಳಿಗೆ ದೊಡ್ಡ ಆಪತ್ತು ಬರುತ್ತಿದೆ.
ಅಂತರ್ಜಲಕ್ಕೆ ಮತ್ತು ಸಮುದ್ರಕ್ಕೆ ನಾವು ವಿಷ ಸೇರಿಸುತ್ತಿದ್ದೇವೆ. ಸಮುದ್ರದಲ್ಲಿ ಇಂದು ೧೨ ಲಕ್ಷ ಸಿಗರೇಟ್ ಬಡ್ಸ್ ಇದೆಯಂತೆ. ಸಿಗರೇಟಿನ ತುಂಡು ಕೆರೆ, ಬಾವಿ ನದಿ ಮಾರ್ಗವಾಗಿ ಸಮುದ್ರ ಸೇರುತ್ತಿದೆ. ಸಮುದ್ರದ ಮೂರನೇ ಒಂದು ಭಾಗದಲ್ಲಿ ಪ್ಲಾಸ್ಟಿಕ್ ಸೇರುತ್ತಿದ್ದು ಮೀನು ಅದನ್ನು ತಿನ್ನುತ್ತಿದೆ. ಪ್ಲಾಸ್ಟಿಕ್ನಿಂದಾಗಿ ಮೀನುಗಳ ವಂಶವಾಹಿ ವ್ಯವಸ್ಥೆಯಲ್ಲಿ ಬದಲಾವಣೆ ಆಗುತ್ತಿದೆ. ಅಂದರೆ ನಾವು ಸರ್ವನಾಶದತ್ತ ದಾಪುಗಾಲಿನಲ್ಲಿ ಹೋಗುತ್ತಿದ್ದೇವೆ. ಭೂಗೋಳದ ಶೇ. ೭೦ ಭಾಗವಾಗಿರುವ ಸಮುದ್ರದಲ್ಲಿ ನಾವು ಇಷ್ಟೊಂದು ಮಾಲಿನ್ಯ ಸೇರಿಸುತ್ತಿದ್ದೇವೆ ಎಂಬುದರಿಂದ ನಮ್ಮ ಮೂರ್ಖತನ ಎಷ್ಟೊಂದು ತಿಳಿಯುತ್ತದೆ. ಇದನ್ನು ನಾವು ಅಭಿವೃದ್ಧಿ ಎನ್ನುತ್ತೇವೆ. ಇದು ಅಭಿವೃದ್ಧಿಯೇ? ಇದು ಕೇವಲ ಪರಿಸರ ಹಾನಿಯಲ್ಲ, ಸರ್ವನಾಶ. ನಾವು ರಾಸಾಯನಿಕ ಬಾಂಬ್, ಜೈವಿಕ ಬಾಂಬ್ ತಯಾರಿಸಿ ನಮ್ಮ ಮೇಲೆಯೇ ಹಾಕಿಕೊಳ್ಳುತ್ತಿದ್ದೇವೆ; ಮುಂದಿನ ಪೀಳಿಗೆಗೂ ಅದನ್ನು ಕೊಡುತ್ತಿದ್ದೇವೆ. ನರಳಿನರಳಿ ಸಾಯುವಂತೆ ಮಾಡುತ್ತಿದ್ದೇವೆ. ಬೆಂಗಳೂರಿನಲ್ಲಿ ಒಂದೂವರೆ ಲಕ್ಷ ಬುದ್ಧಿಮಾಂದ್ಯ ಮಕ್ಕಳಿದ್ದಾರೆ. ಬೆಂಗಳೂರಿನ ನಿಮ್ಹಾನ್ಸ್ನವರು ಎಂಟು ರಾಜ್ಯಗಳಲ್ಲಿ ಆ ಬಗ್ಗೆ ಅಧ್ಯಯನ ಮಾಡಿದ್ದಾರೆ. ಅಲ್ಲಿ ಬುದ್ಧಿಮಾಂದ್ಯ ಮಕ್ಕಳ ಸಂಖ್ಯೆ ಶೇ. ೭ರಿಂದ ೧೨ರಷ್ಟಿದ್ದು ಅದು ಶೇ. ೧೨ರಿಂದ ೨೦ಕ್ಕೇರಬಹುದು ಎಂದು ಭಯಪಡಲಾಗಿದೆ. ಅಂದರೆ ಅಷ್ಟೊಂದು ಮಾನಸಿಕ ಅನಾರೋಗ್ಯದ ಸಮಸ್ಯೆ ಇದೆ. ಇದಕ್ಕೆ ಯಾರು ಕಾರಣ? ತಾಯಂದಿರು ವಿಷ ತಿನ್ನುವುದರಿಂದ, ಪ್ಲಾಸ್ಟಿಕ್ ತಿನ್ನುವುದರಿಂದ ಪಾದರಸ, ಸೀಸ ಇವೆಲ್ಲ ಹುಟ್ಟುವ ಮಕ್ಕಳ ಮೇಲೆ ಪರಿಣಾಮ ಬೀರುತ್ತಿವೆ. ನೀರಿಗೆ ಏನೇನು ಸೇರುತ್ತಿದೆಯೆಂದು ನಾವು ಬೆಂಗಳೂರಿನಲ್ಲಿ ಅಧ್ಯಯನ ಮಾಡುತ್ತಿದ್ದೇವೆ; ಪಾದರಸ, ಸೀಸ, ಕಬ್ಬಿಣ ಇತ್ಯಾದಿ. ಪಾದರಸ ಅತ್ಯಂತ ಭೀಕರ ಲೋಹವಾಗಿದೆ. ಬಿಡದಿಯಲ್ಲಿ ಪೆಪ್ಸಿ-ಕೋಲಾದಿಂದ ಏನೇನು ಆಗುತ್ತಿದೆ? ಕ್ಯಾಡ್ಮಿಯಂ, ಸೀಸ ಎಲ್ಲ ಸೇರುತ್ತಿದೆ. ನಾವು ಅತಿದೊಡ್ಡ ಸಹನಶೀಲರು (ಮಿಟಿಗೇಟರ್); ಎಲ್ಲ ಕಡೆ ವಿಷ ತುಂಬಿದ್ದೇವೆ. ಅಲ್ಲಿ ತಾವರೆ, ಬಜೆ, ಒಂದೆಲಗ ಮುಂತಾದವು ಬೆಳೆಯುವುದಿಲ್ಲ.
ತಂತ್ರಜ್ಞಾನದಿಂದ ನೀವು ಯಾರ ಅಭಿವೃದ್ಧಿ ಮಾಡುತ್ತಿದ್ದೀರಿ? ಬಹುರಾಷ್ಟ್ರೀಯ ಕಂಪೆನಿ(ಎಂಎನ್ಸಿ) ಗಳ ವಿಕಾಸ ಮಾಡುತ್ತಿದ್ದೀರಾ? ಕೋಟಿಕೋಟಿ ಗಳಿಸುವ ಕಂಪೆನಿಯವರ ವಿಕಾಸ ಮಾಡುತ್ತಿದ್ದೀರಿ. ಇದು ವಿಕಾಸವಾ? ದೇಶದ ಸಂಪನ್ಮೂಲದಲ್ಲಿ ಶೇ. ೪೦ರಷ್ಟು ಭಾಗ ಯಾರೋ ಒಬ್ಬರ ಬಳಿ ಇರುವುದನ್ನು ಕಾಣುತ್ತಿದ್ದೇವೆ. ಅಂದರೆ ಅಭಿವೃದ್ಧಿ ಅನ್ನುವುದು ಯಾರ ಕೆಲಸವನ್ನು ಮಾಡುತ್ತಿದೆ? ಈಗ ಬಳ್ಳಾರಿಯಲ್ಲಿ ಆಗಿರುವುದನ್ನು ಸರಿಪಡಿಸಲು ಸಾಧ್ಯವಿದೆಯೇ? ಕೆಜಿಎಫ್ನಲ್ಲಿ ಆಗಿರುವುದನ್ನು ಹೇಗೆ ಸರಿಪಡಿಸಬಹುದು? ಭೋಪಾಲ್ ದುರಂತವನ್ನು ಸರಿಪಡಿಸಲು ನಮಗೆ ಸಾಧ್ಯವಾಯಿತಾ? ಯಾವುದೋ ಒಂದು ಕಂಪೆನಿಯವರು ಬಂದು ನಮ್ಮ ದೇಶದಲ್ಲಿ ವಿಷವನ್ನು ತಯಾರಿಸಿ ಅದನ್ನು ನಮಗೆ ಉಣಿಸಿ, ಒಂದು ಲಕ್ಷದ? ನಮ್ಮ ಜನರನ್ನು ಕೊಂದು, ೨೦ರಿಂದ ೫೦ ಲಕ್ಷದಷ್ಟು ಜನರಿಗೆ ರೋಗ ತರಿಸಿ ಹೋದರೆ ಅಮೆರಿಕದಲ್ಲಿ ’ಇವನು ಅಪರಾಧಿ ಅಲ್ಲ’ ಎಂದು ತೀರ್ಪು ಕೊಟ್ಟರು. ನಾವು ಏನು ನೋಡುತ್ತಿದ್ದೇವೆ?
ಕರ್ನಾಟಕದಲ್ಲಿ ಎಂಡೋಸಲ್ಫಾನ್ನಿಂದ ಎಷ್ಟು ಮಕ್ಕಳು ರೋಗಪೀಡಿತರಾಗಿರುವಾಗಲೂ ಭಾರತ ಸರ್ಕಾರದವರು ಅವರದ್ದೇನೂ ತಪ್ಪಿಲ್ಲ ಎಂದು ಹೇಳುತ್ತಾರೆ. ಏಕೆಂದರೆ ಕಂಪೆನಿ ಅದನ್ನು ೪೦ ಸಾವಿರ ಟನ್ ತಯಾರಿಸಿಬಿಟ್ಟಿದೆ. ಸಾವು ಮತ್ತು ರೋಗಕ್ಕೆ ಕಾರಣವಾಗುವುದನ್ನು ನಾವು ಹೊರಗೆ ಬಿಟ್ಟಿದ್ದೇವೆ. ಜನರಿಗೆ ಅದನ್ನು ಕೊಡುತ್ತೇವೆ; ಅದನ್ನು ತಡೆಯಲು ಆಗುವುದಿಲ್ಲ ಎಂದು ಒಂದೆಡೆ ಹೇಳಿದರೆ ಇನ್ನೊಂದೆಡೆ ಸುಪ್ರಿಂಕೋರ್ಟ್, “ಒಂದು ಮಗುವಿಗೆ ಹಾನಿಯಾದರೂ ಆ ಕಂಪೆನಿಯನ್ನು ಮುಚ್ಚಬೇಕು” ಎಂದು ಸ್ಪಷ್ಟವಾಗಿ ಹೇಳಿದೆ. ಇದೇನು? ಸುಪ್ರಿಂಕೋರ್ಟ್ ಆದೇಶವನ್ನು ಜಾರಿ ಮಾಡುವುದಕ್ಕೂ ಸರ್ಕಾರಕ್ಕೆ ಮನಸ್ಸಿಲ್ಲ. ಮುಚ್ಚಲು ಆಗುವುದಿಲ್ಲ ಎನ್ನುತ್ತದೆ. ಆ ಕಂಪೆನಿ ಕೂಡ ಹಾಗೆಯೇ ಹೇಳುತ್ತದೆ. ಇದರಲ್ಲಿ ನೀವು ಯಾರ ವಿಕಾಸ ಮಾಡುತ್ತೀದ್ದೀರಿ?
ಪ್ರ: ತಂತ್ರಜ್ಞಾನದಿಂದ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ ಎನ್ನುವ ಮಾತನ್ನು ಗಂಭೀರವಾಗಿ ತೆಗೆದುಕೊಂಡು, ನಾವಿಂದು ನಮ್ಮ ಜಲಸಂಪನ್ಮೂಲದ ನಿರ್ವಹಣೆ ಮಾಡುವ ರೀತಿಯನ್ನು ಗಮನಿಸಿದರೆ ಆಧುನಿಕ ತಂತ್ರಜ್ಞಾನದಿಂದ ಒಳಿತಿಗಿಂತ ಕೆಡುಕೇ ಜಾಸ್ತಿಯಾದಂತೆ ಕಾಣುವುದಿಲ್ಲವೇ?
ಉ: ಯಾವ ತಂತ್ರಜ್ಞಾನ ಕೂಡ ಯಾವುದೇ ಪರಿಹಾರವನ್ನು ಕೊಟ್ಟಿಲ್ಲ. ಒಂದಕ್ಕೆ ಪರಿಹಾರ ಕೊಟ್ಟು ಹತ್ತು ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದೇವೆಯೇ ವಿನಾ ಯಾವುದಕ್ಕೂ ಪರಿಹಾರ ನೀಡಿಲ್ಲ. ನಿಸರ್ಗವನ್ನು ಉಳಿಸಿದರೆ ಮಾತ್ರ ಪರಿಹಾರ ಸಿಗುವುದು. ಒಂದು ಗಿಡ ೩,೦೦೦ ವರ್ಷ ತನ್ನ ಬೀಜವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುತ್ತದೆ. ಇದು ತಂತ್ರಜ್ಞಾನ ನೀಡಿದ ಪರಿಹಾರವಲ್ಲ. ಜನ ಮೂರ್ಖತನದಿಂದ ಇದನ್ನು ಹಾಳುಮಾಡುತ್ತಿದ್ದಾರೆ. ನೀರು, ಕಮಲ, ಲಕ್ಷ್ಮಿ – ಇದನ್ನು ಪ್ರಪಂಚದಲ್ಲಿ ಯಾವ ವಿಜ್ಞಾನಿಯೂ ಕೊಟ್ಟಿಲ್ಲ. ಅವು ಇರುವುದು ಜಿಡಿಪಿಯಲ್ಲಿ ಅಲ್ಲ. ಆಧುನಿಕ ಜಗತ್ತಿನಲ್ಲಿ ಜಲಸಂಪನ್ಮೂಲ ನಿರ್ವಹಣೆಗೆ ಮಾಡುತ್ತಿರುವ ಕೆಲಸಗಳಲ್ಲಿ ಒಳಿತಿಗಿಂತ ಕೆಡುಕೇ ಜಾಸ್ತಿ. ಚರ್ಮ ಹದಮಾಡುವ ಉದ್ಯಮ, ಜವಳಿ ಉದ್ಯಮಗಳು ಗಂಗೆಯನ್ನು ಸಾಯಿಸಿಬಿಟ್ಟಿವೆ. ಅದನ್ನು ಸರಿಪಡಿಸಲು ಆಗುತ್ತಿಲ್ಲ. ಸರಿಪಡಿಸುತ್ತೇವೆಂದು ಘೋ?ಣೆ ಮಾಡಿದರೂ ಏನೂ ಆಗುತ್ತಿಲ್ಲ. ಗಂಗೆಯಷ್ಟು ಶ್ರೇಷ್ಠ ನದಿಯನ್ನು ಸರಿಪಡಿಸಲು ಕೂಡ ಯಾವುದೇ ತಾಂತ್ರಿಕತೆಯಿಂದ ಸಾಧ್ಯವಾಗುತ್ತಿಲ್ಲ. ಹಾಗೆಯೇ ನಮ್ಮ ಬೆಳ್ಳಂದೂರು ಕೆರೆ. ನಮ್ಮ ಸ್ಟ್ಯಾಂಡರ್ಡ್ ಕಡಮೆ. ಟೊಯೊಟೋದವರು ಕಾರು ತಯಾರಿಸಿ ಆ ಮಾಲಿನ್ಯವನ್ನು ವೃಷಭಾವತಿ ಕಣಿವೆಗೆ ಬಿಡುತ್ತಾರೆ. ಬೈರಸಂದ್ರಕ್ಕೆ ಬಿಟ್ಟು ಅಲ್ಲಿಂದ ಕಾವೇರಿ ನದಿಗೆ ಹೋಗುತ್ತದೆ. ಬಿಡಬ್ಲ್ಯುಎಸ್ಎಸ್ಬಿಯವರು ಪ್ರತ್ಯೇಕ ಲೈನ್ ಹಾಕಿ ಅವರಿಗೆ ನೀರು ಕೊಡುತ್ತಾರೆ (ಬಿಡದಿ ಸಮೀಪ). ಅಲ್ಲಿನ ಹಳ್ಳಿಯವರಿಗೆ ಕುಡಿಯುವುದಕ್ಕೂ ನೀರು ಕೊಡುವುದಿಲ್ಲ. ಕಂಪೆನಿಗೆ ಕಾವೇರಿಯಿಂದ ಪ್ರತ್ಯೇಕ ಲೈನ್ ಹಾಕಿ ನೀರು ಕೊಡುವುದೇಕೆ? ಕಾರು ತಯಾರಿಸಲಿಕ್ಕೆ. ಇಲ್ಲಿ ವಿಷ ಹಾಕಬಹುದು. ಕಂಪೆನಿ ಅಷ್ಟೊಂದು ಜನರಿಗೆ ಉದ್ಯೋಗ ನೀಡಿದೆ ಎನ್ನುತ್ತಾರೆ. ಅವರಿಗೆ ೧,೫೦೦ ಎಕ್ರೆ ಜಾಗ ನೀಡಿದ್ದಾರೆ.
ಪೆಪ್ಸಿ-ಕೋಲಾ ಕಂಪೆನಿಗಳಿಗೆ ಕೂಡಲೆ ಪರ್ಮಿಶನ್ ಸಿಗುತ್ತದೆ; ಎಂಎನ್ಸಿಗಳಲ್ಲವೇ? ಕೋಕಾಕೋಲಾಕ್ಕೆ ಹಾಕುವ ಒಂದು ಕೆಂಪುಬಣ್ಣದ ಪದಾರ್ಥ ವಿ?ವಸ್ತುವಾಗಿದೆ. ಸ್ಥಾವರವನ್ನು ಅನಧಿಕೃತವಾಗಿ ಹಾಕಿಕೊಂಡದ್ದು. ನ್ಯಾಯಾಲಯದಿಂದ ಆದೇಶ ತಂದು ಕಟ್ಟಡವನ್ನು ಒಡೆಯೋಣ ಎನ್ನುವ ಸಲಹೆ ನೀಡಿದರೆ ಅದು ’ಅಭಿವೃದ್ಧಿ ವಿರೋಧಿ’ ಎನ್ನುತ್ತಾರೆ. ಇದನ್ನು ಹೇಗೆ ಎದುರಿಸುವುದು? ನಾವು ವಿಫಲರಾದಂತೆ ಕಾಣುತ್ತದಲ್ಲವೆ? ನಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಏನೂ ಆಗಬಹುದು. ಮಕ್ಕಳು ಸುಲಭವಾಗಿ ಈ ದಾಳಿಯ ಗುರಿ ಆಗುತ್ತಿದ್ದಾರೆ. ನಾವು ಜಿಡಿಪಿ ಎನ್ನುತ್ತೇವೆ; ಅದಾದರೆ ಸಾಕು ನಮಗೆ. ನಮಗೆ ಜಿಡಿಪಿ ಯಾಕೆ ಬೇಕು? ಅದು ಅದಾನಿಗೆ ಬೇಕು.
ಪ್ರ: ಬೆಳ್ಳಂದೂರು ಕೆರೆಯಲ್ಲಿ ಹತ್ತು ವರ್ಷಗಳ ಹಿಂದೆ ಇಲ್ಲದ ನೊರೆ ಸಮಸ್ಯೆ ಈಗ ಬಂತಲ್ಲವೇ? ನೊರೆ ರಸ್ತೆಗೂ ಬರುತ್ತದಲ್ಲಾ!
ಉ: ನೀವು ಎಷ್ಟು ಮಾರ್ಜಕ (ಡಿಟರ್ಜಂಟ್) ಗಳನ್ನು ಬಳಸುತ್ತೀರಿ? ಕೆಮಿಕಲ್ಸ್ ಎಷ್ಟು ಬಳಸುತ್ತೀರಿ? ಅದು ಎಷ್ಟೊಂದು ಚರಂಡಿಗೆ ಹೋಗುತ್ತದೆ? ಎಲ್ಲಿಗೆ ಹೋಗುತ್ತದೆ ಅದು? ನಿಸರ್ಗದಲ್ಲಿ ಒಂದು ವ್ಯವಸ್ಥೆ ಇತ್ತು. ಎರಡು ಜಾತಿಯ ಬ್ಯಾಕ್ಟೀರಿಯಾಗಳು ನೀರಿನ ವ್ಯವಸ್ಥೆಯನ್ನು ರಕ್ಷಿಸಿಕೊಂಡು ಬಂದವು. ನಕೋರ್ಡಿಯಾ ಎನ್ನುವ ಬ್ಯಾಕ್ಟೀರಿಯಾ ನೊರೆಯನ್ನು ಉಂಟುಮಾಡಿದರೆ ವ್ಯಾಸಿನಸ್ ಎನ್ನುವ ಇನ್ನೊಂದು ಬ್ಯಾಕ್ಟೀರಿಯಾ ಆ ನೊರೆಯನ್ನು ತಿಂದುಹಾಕುತ್ತದೆ. ಅದರಿಂದ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿತ್ತು. ಕೆರೆಗೆ ಡಿಟರ್ಜಂಟ್ ಬಿಟ್ಟದ್ದರಿಂದ ನಕೋರ್ಡಿಯಾ ಚೆನ್ನಾಗಿ ಬೆಳೆಯುತ್ತದೆ. ಆದರೆ ವ್ಯಾಸಿನಸ್ ಕಡಮೆ ಆಯಿತು. ಅದರಿಂದಾಗಿ ನಿಯಂತ್ರಣ ವ್ಯವಸ್ಥೆಯು ಇಲ್ಲವಾಯಿತು. ನಾನು ಬೆಳ್ಳಂದೂರು ಕೆರೆ ಕಮಿಟಿಯಲ್ಲಿದ್ದೇನೆ. ಈ ಸಮಸ್ಯೆ ಪರಿಹಾರಕ್ಕೆ ಏನು ಮಾಡುವುದೆಂದು ಅಧ್ಯಯನ ಮಾಡಿಸಿದ್ದೇವೆ. ಹೊಂದಾಣಿಕೆ ತಪ್ಪಿಹೋದ ಬಗ್ಗೆ ಪ್ರಯೋಗಶಾಲೆಯಲ್ಲಿ ವಿಶ್ಲೇ?ಣೆ ಮಾಡಿಸಿ, ಅದರಲ್ಲಿ ಬ್ಯಾಲೆನ್ಸ್ ತರಬೇಕೆಂದು ಸರ್ಕಾರಕ್ಕೆ ವರದಿ ನೀಡಿದ್ದೇವೆ. ವ್ಯಾಸಿನಸ್ ಬ್ಯಾಕ್ಟೀರಿಯಾವನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಬೇಕು. ಅದನ್ನು ತಂದು ನೀರಿಗೆ ಬಿಟ್ಟರೆ ಅದು ನೊರೆಯನ್ನು ನಿಯಂತ್ರಿಸುತ್ತದೆ.
ಯಾವುದೇ ಒಂದು ಕೆಮಿಕಲ್ಲಿನ ಬಗ್ಗೆ ನಿಸರ್ಗದಲ್ಲೊಂದು ಕಂಟ್ರೋಲ್ ಮೆಕ್ಯಾನಿಸಂ ಇರುತ್ತದೆ. ನೀವು ಕಾಫಿ, ಟೀ ಕುಡಿದರೆ ಅದನ್ನು ನಿಯಂತ್ರಿಸಲು ಲಿವರ್ (ಪಿತ್ತಕೋಶ) ಇದೆ. ಲಿವರ್ನಲ್ಲಿ ೧,೫೦೦ ಬಗೆಯ ರಾಸಾಯನಿಕಗಳು ಉತ್ಪನ್ನವಾಗುತ್ತವೆ. ಅವು ಕಾಫಿಯನ್ನು ಹೇಗೆ ಜೀರ್ಣ ಮಾಡಬೇಕು, ಕಿಡ್ನಿಗೆ ಹೇಗೆ ಹೋಗಬೇಕು, ಮೂತ್ರದಲ್ಲಿ ಹೇಗೆ ಬರಬೇಕು, ಹೇಗೆ ಎನರ್ಜಿ ಬರಬೇಕು ಎಲ್ಲವನ್ನೂ ತೀರ್ಮಾನಿಸುತ್ತವೆ. ಈಗ ಲಿವರ್ ಹೋದರೆ ಏನಾಗುತ್ತದೆ? ಅದೇ ರೀತಿ ಜಲಾಶಯಗಳಿಗೆ ಕೂಡ ಲಿವರ್, ಶ್ವಾಸಕೋಶ ಇವೆ. ಗಂಗಾನದಿಯಿಂದ ಆರಂಭಿಸಿ ಎಲ್ಲ ಕಡೆ ಅವ್ಯವಸ್ಥೆ ಬಂದಿದೆ. ಅದರಿಂದಾಗಿ ಯಾವುದೇ ತಂತ್ರಜ್ಞಾನದಿಂದ ಸರಿಪಡಿಸಲು ಆಗುತ್ತಿಲ್ಲ.
ಪ್ರ: ಈಗ ಉಪಯೋಗಿಸಿದ ನೀರು ಒಳಚರಂಡಿಯ ಮೂಲಕ ಕೆರೆಗೆ ಹೋಗುವುದು ಸಮಸ್ಯೆಯ ಮೂಲವೆ?
ಉ: ಆ ಕಾಲದಲ್ಲಿ ಕೂಡ ಹೋಗುತ್ತಿತ್ತು. ಕಕ್ಕಸು ನೀರು, ಕಸಾಯಿಖಾನೆ ನೀರು ಕೂಡ ಹೋಗುತ್ತಿತ್ತು. ಆದರೆ ಆಗ ಶುದ್ಧೀಕರಣದ ಒಳವ್ಯವಸ್ಥೆ ಗಟ್ಟಿ ಇತ್ತು. ಕೆರೆ ಸಮೀಪ ಹೂ, ತರಕಾರಿ ಬೆಳೆಸುತ್ತಿದ್ದರು. ಸುತ್ತ ಖಾಲಿಯಾದ ಆರ್ದ್ರಭೂಮಿ (wet land) ಇದ್ದ ಕಾರಣ ಮಾಲಿನ್ಯವು ಜೈವಿಕದ್ರವ್ಯ(ಬಯೋಮಾಸ್) ವಾಗಿ ಪರಿವರ್ತನೆ ಆಗುತ್ತಿದ್ದವು. ಕಕ್ಕಸು ನೀರು, ಸೆಗಣಿ, ಗಂಜಳ ಎಲ್ಲವೂ ಗೊಬ್ಬರ ಆಗುತ್ತಿದ್ದವು. ಸಮೀಪದಲ್ಲಿ ಕಾಡು ಇತ್ತು; ಹುಲ್ಲು ಬೆಳೆಯುತ್ತಿತ್ತು. ನೀರಿನಲ್ಲಿ ಜಲಸಸ್ಯಗಳಿದ್ದು ಅವು ಕೂಡ ಮಾಲಿನ್ಯವನ್ನು (ತಿಂದು) ಕಡಮೆ ಮಾಡುತ್ತಿದ್ದವು; ಬ್ಯಾಕ್ಟೀರಿಯಾಗಳಿದ್ದವು. ಮೀನು, ಏಡಿ, ಕಪ್ಪೆಗಳಿದ್ದವು.
ಪ್ರ: ಬೆಂಗಳೂರು ಇಷ್ಟೊಂದು ಬೃಹತ್ತಾಗಿ ಬೆಳೆದಿದೆ. ಜನಸಂಖ್ಯೆ ಬಹಳ ಹೆಚ್ಚಾಗಿದೆ. ಕೆರೆಗಳ ಸಂಖ್ಯೆ ಕಡಮೆಯಾಗಿದೆ. ಇಂಥ ಸನ್ನಿವೇಶದಲ್ಲಿ ಚರಂಡಿಯ ನೀರು ಏನಾಗುತ್ತದೆ?
ಉ: ಒಂದು ಚರಂಡಿಯಲ್ಲಿ ಹೋಗುವ ನೀರು ಹರಿದುಕೊಂಡು ಹೋಗಿ ಎಲ್ಲೋ ಒಂದುಕಡೆಗೆ ಕೆರೆಗೆ ಸೇರುತ್ತದೆ. ಒಳಚರಂಡಿ ವ್ಯವಸ್ಥೆ ಇದ್ದಾಗ ನೀರು ಒಟ್ಟಾಗಿ ಒಂದು ಕಡೆಗೆ ಹೋಗುತ್ತದೆ; ಮುಂದೆ ಅದು ದೊಡ್ಡ ಪ್ರಮಾಣದಲ್ಲಿ ಒಟ್ಟಾಗುತ್ತದೆ. ನಗರಪಾಲಿಕೆಯವರು ಕೆಲವು ಪ್ರದೇಶದಲ್ಲಿ ಒಳಚರಂಡಿ ಮಾಡಿ, ಅನಂತರ ಯಾವುದೋ ಕೆರೆಗೆ ಬಿಟ್ಟು ಬಿಡುತ್ತಾರೆ. ಅದಕ್ಕೆ ಹೊರತಾಗಿ ಬೇರೆ ಮೆಕ್ಯಾನಿಸಂ ಇಲ್ಲ. ಒಂದು ಅಪಾರ್ಟಮೆಂಟಿಗೆ ನೀರುಪೂರೈಕೆ ಮಾಡುತ್ತಾರೆ. ಬಳಸಿದ ನೀರು ಎಲ್ಲಿಗೆ ಹೋಗಬೇಕೆನ್ನುವ ವ್ಯವಸ್ಥೆ ಇಲ್ಲ. ಹತ್ತಿರದ ಕೆರೆಗೆ ಬಿಟ್ಟು ಬಿಡುತ್ತಾರೆ. ಅಲ್ಲಿಂದ ಅದು ಮುಂದಿನ ಕೆರೆಗೆ ಹೋಗುತ್ತದೆ. ಜೊತೆಗೆ ಸೇರಿದ ನೀರನ್ನು ಕೂಡ ಹಾಳು ಮಾಡುತ್ತದೆ. ಕಸ ಸೇರಿಕೊಳ್ಳುತ್ತದೆ, ಹೀಗೆ ವಿ? ಸೇರುತ್ತಾ ಹೋಗುತ್ತದೆ. ಬೈರಮಂಗಲ ಕೆರೆ ೧,೨೦೦ ಎಕ್ರೆ ವಿಸ್ತೀರ್ಣ ಇದೆ. ಅದರ ನೀರನ್ನು ಜನ ಉಪಯೋಗಿಸುತ್ತಾರೆ; ಅದರ ನೀರಿನಿಂದ ಬೇಬಿಕಾರ್ನ್ ಬೆಳೆಸುತ್ತಾರೆ. ಅದು ನಮಗೆ ಪೂರೈಕೆಯಾಗುತ್ತದೆ. ಹುಲ್ಲು ಬೆಳೆಸುತ್ತಾರೆ; ಅದನ್ನು ದನ ತಿನ್ನುತ್ತದೆ. ಆ ದನದ ಹಾಲು ಡೈರಿಗೆ ಬರುತ್ತದೆ.
ಅದರ ಜೊತೆಗೆ ಟಿವಿ, ಲ್ಯಾಪ್ಟಾಪ್, ಕಂಪ್ಯೂಟರ್ ತ್ಯಾಜ್ಯಗಳು. ನಾಯಂಡಹಳ್ಳಿ (ಬೆಂಗಳೂರು) ಪ್ರದೇಶದಲ್ಲಿ ಗುಜರಿ ಸಂಗ್ರಾಹಕ ಕಂಪ್ಯೂಟರಿನ ಬೆಲೆಬಾಳುವ ವಸ್ತು ತೆಗೆದುಕೊಳ್ಳುವುದಕ್ಕಾಗಿ ಅದನ್ನು ಸುಡುತ್ತಾನೆ; ಮಿಕ್ಕಿದ್ದೆಲ್ಲ ಬಿಸಾಡುತ್ತಾನೆ. ಅದು ಸಮೀಪದ ವೃ?ಭಾವತಿ ನದಿಗೆ ಹೋಗುತ್ತದೆ; ಮುಂದೆ ಅದು ಕಾವೇರಿಗೂ ಸೇರುತ್ತದೆ. ಆಮೇಲೆ ನಮಗೇ ವಾಪಸು ಬರಬಹುದು. ಹೀಗೆ ನಮ್ಮಲ್ಲಿ ತಂತ್ರಜ್ಞಾನವನ್ನು ಪ್ರೊಮೋಟ್ ಮಾಡಿದರೇ ವಿನಾ ಅದರ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ಅದೇ ರೀತಿ ತುಂಗಭದ್ರಾ ನದಿಯ ನೀರನ್ನು ಗಮನಿಸಿ. ನೂರಾರು ಹಳ್ಳಿಯ ಜನರಿಗೆ, ಪ್ರಾಣಿ-ಪಕ್ಷಿಗಳಿಗೆ ಅದು ಕುಡಿಯುವ ನೀರು. ಅಲ್ಲಿ ಹರಿಹರ ಪಾಲಿಫೈಬರ್ಸ್ನವರು ಮಾಲಿನ್ಯ ಮಾಡಿ ನೀರನ್ನು ಬಿಡುತ್ತಿದ್ದಾರೆ. ಅದರಿಂದ ರೋಗಗಳು ಬರುತ್ತವೆ. ಭೀಮಾ ನದಿಯ ಬಳಿ ಅಣುವಿದ್ಯುತ್ ಸ್ಥಾವರ ಮಾಡಲು ಯುರೇನಿಯಂ ಗಣಿಗಾರಿಕೆ ನಡೆಸುತ್ತಿದ್ದಾರೆ. ಅದರ ತ್ಯಾಜ್ಯ ಕೂಡ ಭೀಮಾನದಿಗೆ ಸೇರುತ್ತಿದೆ. ಜನ ಆ ನೀರನ್ನು ಕುಡಿಯುತ್ತಾರೆ. ಯುರೇನಿಯಂ ಗಣಿಗಾರಿಕೆಯಿಂದ ಗೋಗಿ ಗ್ರಾಮದಲ್ಲಿ ತುಂಬ ಸಮಸ್ಯೆಯಾಗಿದೆ. ವಿದ್ಯುತ್ ಎಲ್ಲರಿಗೂ ಬೇಕು ನಿಜ. ಕೆಲವರಿಗೆ ಅದರಿಂದ ಅನುಕೂಲ ಆಗಬಹುದು. ಆದರೆ ರೋಗಗಳು ಬರುತ್ತಿವೆ. ಇನ್ನು ಪ್ರಾಣಿ-ಪಕ್ಷಿಗಳ ಗತಿ ಏನಾದೀತು? ನೀವು ಕೇವಲ ಮನು?ನ ಬಗ್ಗೆ ಯೋಚಿಸುವುದಲ್ಲ.
ಪ್ರ: ಇಲ್ಲಿ ಸಂಪ್ರದಾಯ, ದೇವರ ಭಕ್ತಿಗಳ ಪಾತ್ರವೇನಾದರೂ ಇದೆಯೆ? ಅದರಿಂದ ಸಮಸ್ಯೆ ಪರಿಹಾರ ಆಗಬಹುದೆ?
ಉ: ಗಾಳಿ, ನೀರು, ಆಹಾರಗಳನ್ನು ನಾವು ಮುಂದಿನ ಪೀಳಿಗೆಗಾಗಿ ಸಂರಕ್ಷಿಸಿ ಇಡಬೇಕು. ಜೆನೆಟಿಕ್ (ವಂಶವಾಹಿ) ಸುಭದ್ರತೆ ಇಲ್ಲದೆ ಬೇರೆ ಏನು ಮಾಡಿದರೆ ಏನು ಉಪಯೋಗ? ನೀವು ದುಡ್ಡು ತಿನ್ನುತ್ತೀರಾ? ಕಿಡ್ನಿ ಹೋಗಿದೆ, ಡಯಾಬಿಟೀಸ್ ಬಂದಿದೆ. ದುಡ್ಡಿದೆ; ೫೦ ಲಕ್ಷ ಅಥವಾ ಒಂದು ಕೋಟಿ ರೂ. ಕಾರಿದೆ. ಅದರಲ್ಲಿ ಓಡಾಡುತ್ತೀರಿ. ಬೆಳಗ್ಗೆ ಎದ್ದು ಪೇಪರ್ ನೋಡಿ. ಕಾರಿನ ಜಾಹೀರಾತು ಎಷ್ಟಿದೆ? ಬಿಲ್ಡಿಂಗ್ ಜಾಹೀರಾತು ಎಷ್ಟಿದೆ? ಬಂಗಾರದ ಅಂಗಡಿ ಜಾಹೀರಾತು ಎಷ್ಟಿದೆ? ಆಯಿತಪ್ಪಾ, ಮೈತುಂಬ ಬಂಗಾರ ಹಾಕಿದರೆ ನಿಮ್ಮ ಕಾಯಿಲೆ ಸರಿಹೋಗುತ್ತದೆಯೆ? ಜನಾರ್ದನ ರೆಡ್ಡಿಯವರು ತಿರುಪತಿ ವೆಂಕಟೇಶ್ವರ ಸ್ವಾಮಿಗೆ ೪೦ ಕೋಟಿಯದ್ದೋ ೫೦ ಕೋಟಿಯದ್ದೋ ಕಿರೀಟ ಹಾಕಿದರು. ಅದರಿಂದ ನಾಶವಾದ ಬಳ್ಳಾರಿಯ ಪರಿಸರ ಸರಿ ಆಗುತ್ತದೆಯೇ? ನಾನೇನಾದರೂ ತಿರುಪತಿ ದೇವಸ್ಥಾನದ ಟ್ರಸ್ಟಿ ಆಗಿದ್ದರೆ ಅದನ್ನು ತಿರಸ್ಕರಿಸುತ್ತಿದ್ದೆ; ಅದನ್ನು ಕೊಡಲು ಆತನಿಗೆ ಅವಕಾಶ ನೀಡುತ್ತಿರಲಿಲ್ಲ. ಆದರೆ ತಿರುಪತಿಯವರು ಅದನ್ನು ಸ್ವೀಕರಿಸಿದರು. ಅದಕ್ಕೆ ಪ್ರಚಾರ ನೀಡಲಾಯಿತು. ಅವರು ತಿರಸ್ಕರಿಸಬೇಕಿತ್ತು. ಸ್ವೀಕರಿಸುವುದೆಂದರೆ ಅಂತಹ ದಗಾಕೋರರನ್ನು ಪ್ರೋತ್ಸಾಹಿಸಿದಂತೆ. ಅವರು ಭೂಮಿತಾಯಿಯ ಕೊಲೆಗಡುಕರು. ವೆಂಕಟೇಶ್ವರ ಸ್ವಾಮಿಯ ಒಂದು ಕಡೆ ಶ್ರೀದೇವಿ ಇದ್ದರೆ ಇನ್ನೊಂದು ಕಡೆ ಭೂದೇವಿ ಇದ್ದಾಳೆ. ಭೂಮಿಯನ್ನು ಕೊಲೆಮಾಡಿ ಕತ್ತರಿಸಿ ತುಂಡುಮಾಡಿದ್ದನ್ನು ದೇವರು ಹೇಗೆ ಸ್ವೀಕಾರ ಮಾಡಿದ? ಆತ ತನ್ನ ಪತ್ನಿಯನ್ನು ಏನು ಮಾಡಿದಂತಾಯಿತು? ಭೂದೇವಿ ಎಲ್ಲಿದ್ದರೂ ಭೂದೇವಿ ತಾನೇ? ಇದು ನಮ್ಮ ಅಜ್ಞಾನ, ಮೂಢನಂಬಿಕೆ. ಒಂದೆಡೆ ಭೂಮಿ ಅಮ್ಮ, ರಕ್ಷಣೆ ಮಾಡು ಎಂದು ಪ್ರಾರ್ಥಿಸಿ ಇನ್ನೊಂದು ಕಡೆ ಹೀಗೆ ಮಾಡುವುದಾ? ನಾಗರಿಕ ಸಮಾಜದ ಅಜ್ಞಾನವನ್ನು ತಿಳಿಸುವುದು ನನ್ನ ಉದ್ದೇಶ. ಅವರೇಕೆ ಅದನ್ನು ಸ್ವೀಕರಿಸಬೇಕಿತ್ತು?
ಪ್ರ: ಪರಿಸರ, ನೀರು, ಮಣ್ಣು – ಈ ವಿಷಯಗಳಲ್ಲಿ ಸಂಶೋಧನೆ ಮಾಡುವವರು ಈಗ ಇದ್ದಾರಲ್ಲವೇ? ಅದೇ ರೀತಿ ಒಳ್ಳೆಯ ಮನಸ್ಸಿನಿಂದ ಟೆಕ್ನಾಲಜಿ ರೂಪಿಸಬಹುದಾದವರು ಕೂಡ ಇರಬಹುದಲ್ಲವೇ?
ಉ: ಇದ್ದಾರೆ. ಕೆರೆಯನ್ನು ಸರಿ ಮಾಡುವುದಕ್ಕೆ, ಸುಧಾರಿಸುವುದಕ್ಕೆ ಟೆಕ್ನಾಲಜಿಯ ಬಳಕೆ ಆಗುತ್ತಿಲ್ಲ. ಆದರೆ ಅವರ ಮಾತನ್ನು ಸಂಬಂಧಪಟ್ಟವರು ಕೇಳುತ್ತಿಲ್ಲ. “(ಈಗಾಗಲೆ ಹೇಳಿದ) ಎರಡು ಜಾತಿಯ ಬ್ಯಾಕ್ಟೀರಿಯಾಗಳನ್ನು ದೊಡ್ಡ ಪ್ರಮಾಣದಲ್ಲಿ ತಯಾರುಮಾಡಿ (mass production) ಬೆಳ್ಳಂದೂರು ಕೆರೆಗೆ ಬಿಟ್ಟು ಅಲ್ಲಿಯ ನೊರೆಯನ್ನು ನಿಯಂತ್ರಿಸಬಹುದು; ಅದಕ್ಕೆ ೨೫ ಲಕ್ಷ ರೂ. ಬೇಕು. ದುಡ್ಡು ಕೊಡಿ” ಎಂದು ಕೇಳುತ್ತಿದ್ದೇವೆ. ಆದರೆ ಕೊಡುತ್ತಿಲ್ಲ. ೯೦೦ ಕೋಟಿ ರೂ. ಖರ್ಚು ಮಾಡಿ ಯಾವುದೋ ಟೆಕ್ನಾಲಜಿಯನ್ನು ಅನುಸರಿಸುತ್ತೇವೆ; ಯಾವುದೋ ಕಂಪೆನಿಗೆ ಅದನ್ನು ವಹಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಈ ಸರಳ ಟೆಕ್ನಾಲಜಿ ಬೇಡ ಎನ್ನುತ್ತಾರೆ. ಇದಕ್ಕೆ ಹಣ ಇಲ್ಲ; ಪ್ರೋತ್ಸಾಹ ಇಲ್ಲ. ಔದುಂಬರ ಮರವನ್ನು ಬೆಳೆಸಿ; ಅದರ ಹಣ್ಣು ನೀರನ್ನು ಶುದ್ಧ ಮಾಡುತ್ತದೆ ಎಂದರೆ ಅದರಲ್ಲಿ ಯಾರಿಗೂ ಆಸಕ್ತಿ ಇಲ್ಲ. ಅದು ಅವರಿಗೆ ಹಣ ಕೊಡುತ್ತದಾ? ಅಂದರೆ ಏನು? ಎಂಎನ್ಸಿಗಳು ಬರಬೇಕು. ಈಗ ಮೋಡ ಬಿತ್ತನೆ ಮಾಡುತ್ತೇವೆ ಎನ್ನುತ್ತಾರೆ. ಅದಕ್ಕೆ ೩೦-೪೦ ಕೋಟಿ ರೂ. ಖರ್ಚು ಮಾಡುತ್ತಾರೆ. ಅದರಲ್ಲಿ ಶೇ. ೨೦ರ? ಮಾತ್ರ ಕೊಡುತ್ತಾರೆ. ಔದುಂಬರ ಇ? ಹಣ ಕೊಡುತ್ತದಾ? ಪದ್ಮಕಮಲ ಅಥವಾ ಶ್ವೇತ ಕಮಲ ಬೆಳೆಸಿದರೆ ಸಿಗುತ್ತದಾ? ಇಲ್ಲ. ಬದಲಾಗಿ ಸ್ಟೀಲ್ ಬ್ರಿಜ್ ಮಾಡಿದರೆ ಆ ಕಂಪೆನಿಯವರು ಕೊಡುತ್ತಾರೆ. ಗುತ್ತಿಗೆದಾರ ಕೊಡುತ್ತಾನೆ. ಮರ ಬೆಳೆಸಿದರೆ ಯಾರು ಕೊಡುತ್ತಾರೆ?
ಪ್ರ: ಕಳೆದ ೫೦ ವರ್ಷಗಳಲ್ಲಿ ಬಹಳಷ್ಟು ಕೊಳವೆ ಬಾವಿಗಳು ಬಂದವು. ಆರಂಭದಲ್ಲಿ ಅದರ ಬಗ್ಗೆ ಬಹಳ ಧನಾತ್ಮಕವಾದ ವಾತಾವರಣವಿತ್ತು. ಈಗ ಅದು ಮಾರಕ ಎಂಬುದು ನಮಗೆ ಅರ್ಥವಾಗುತ್ತಾ ಇದೆ. ದೊಡ್ಡಮಟ್ಟದಲ್ಲಿ ಕೊಳವೆ ಬಾವಿಗಳು ಬೇಕಾಗಿರಲಿಲ್ಲ ಎಂಬ ಅಭಿಪ್ರಾಯ ಈಗ ಕಾಣಿಸುತ್ತಿದೆ; ಅಲ್ಲವೆ?
ಉ: ಕೊಳವೆ ಬಾವಿ ರೀಚಾರ್ಜ್ ಮಾಡುವುದಕ್ಕೆ ಈಗ ಟೆಕ್ನಾಲಜಿ ಬಂದಿದೆ. ರೀಚಾರ್ಜ್ ಮಾಡುತ್ತಿದ್ದೇವೆ. ಪೋಲಾಗುವ ನೀರನ್ನು ಅಲ್ಲಿ ತಡೆದು ಸ್ವಲ್ಪಮಟ್ಟಿಗೆ ಸುಧಾರಣೆ ಮಾಡಲು ಸಾಧ್ಯವಾಗುತ್ತದೆ. ಫ್ಲರೈಡ್ ಬಂತು, ಆರ್ಸೆನಿಕ್ ಬಂತು, ರೋಗ ಬಂತು. ಸುಮಾರು ೧೫೦೦ ವರ್ಷಗಳಿಂದ ನೀರನ್ನು ಕೊಳ್ಳೆ ಹೊಡೆದೆವು. ಆದರೂ ನಿಸರ್ಗ ಇನ್ನೂ ನಿರ್ದಯಿಯಾಗಿಲ್ಲ. ಸಣ್ಣ ಪ್ರಯತ್ನದಿಂದ ಕೂಡ ಸಾಕಷ್ಟು ಸುಧಾರಣೆ ತರಬಹುದು; ಆದರೆ ಅದು ಆಗುತ್ತಾ ಇಲ್ಲ. ಏಕೆಂದರೆ ಅದರಿಂದ ಯಾರಿಗೂ ಲಾಭ ಇಲ್ಲ. ಈಗ ನಾವು ನೋಡುತ್ತಿರುವುದು ಯಾರಿಗೆ? ಲಾಭ ಬರುತ್ತದೆ ಎಂಬುದು. ಯಾರಿಗೆ ಉಪಯೋಗ ಆಗುತ್ತದೆ ಎಂಬುದಲ್ಲ. ಆ ಕಾಲದಲ್ಲಿ ಇನ್ನೊಬ್ಬರ ಉಪಯೋಗಕ್ಕಾಗಿ ಕೆರೆ ಕಟ್ಟಿದರು. ಈಗ ಕೆರೆ ಒತ್ತುವರಿ ಮಾಡಿ ಅಪಾರ್ಟ್ಮೆಂಟ್, ಮಾಲ್ ಕಟ್ಟಿಕೊಂಡು ಲಾಭಗಳಿಸುವುದೇ ಉದ್ದೇಶವಾಗಿದೆ. ಈಗ ಇದು ಡೆವಲಪ್ಮೆಂಟ್!
ಪ್ರ: ಈಗಿನ ಬೆಂಗಳೂರಿನ ನೂರಾರು ಕಿ.ಮೀ. ಸುತ್ತಳತೆಯಲ್ಲಿ ಹಿಂದೆ ನೂರಾರು ಕೆರೆಗಳಿದ್ದವು. ಆಗ ಈ ಪ್ರದೇಶದಲ್ಲಿ ಒಂದೆರಡು ಲಕ್ಷ ಜನರಿದ್ದರು. ಈಗ ಒಂದು ಒಂದೂ ಕಾಲುಕೋಟಿ ಆಗಿದೆ. ಕೆರೆಗಳನ್ನು ಮುಚ್ಚಿ ಮಾಲ್, ಬಸ್ ನಿಲ್ದಾಣ, ಸ್ಟೇಡಿಯಂ ಎಲ್ಲ ಮಾಡಿಕೊಂಡಿದ್ದೇವೆ. ಈಗ ನಮಗೆ ನೀರಿನ ಮೂಲ ಏನು?
ಉ: ಈಗ ಇಲ್ಲಿ ಒಂದಷ್ಟು ಜನ ಈ ದುಸ್ಥಿತಿಯ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಗಾಳಿಯಲ್ಲಿರುವ ನೀರಿನಂಶವನ್ನೂ ಸೇರಿಸಿಕೊಂಡು ನೀರನ್ನು ಉತ್ಪಾದಿಸುತ್ತೇವೆ. ನೇತ್ರಾವತಿಯಿಂದ ನೀರು ತರುತ್ತೇವೆ. ನದಿಗಳ ಇಂಟರ್ ಲಿಂಕ್ ಮಾಡಿ, ಮಹಾನದಿಯಿಂದ ಬ್ರಹ್ಮಪುತ್ರದಿಂದ ಬೆಂಗಳೂರಿಗೆ ಕೋಲಾರಕ್ಕೆ ನೀರು ಕೊಡುತ್ತೇವೆ ಎನ್ನುತ್ತೇವೆ. ಎತ್ತಿನಹೊಳೆ ಯೋಜನೆ ಏಕೆ ಬೇಕು? ಆ ಸಮಿತಿಯಲ್ಲಿ ಕೂಡ ನಾನಿದ್ದೇನೆ. ಇಡೀ ಕಮಿಟಿಯನ್ನು ನಾನು ಕರೆದುಕೊಂಡು ಹೋದೆ. ಇಲ್ಲಿ ಏನು ಮಾಡುತ್ತೀರಿ? ಈ ಯೋಜನೆ ಹೇಗೆ ಸಾಧ್ಯ ಎಂದು ಕೇಳಿದೆ. ತಾಂತ್ರಿಕತೆಯ ಮೂಲಕ ಬೆಟ್ಟವನ್ನು ಕೊರೆದು ಲೇನ್ ಎಳೆದು ನೀರನ್ನು ತರಬೇಕೆಂದು ಯೋಜನಾ ವರದಿಯಲ್ಲಿ ಪರಮಶಿವಯ್ಯ ಹೇಳಿದ್ದಾರೆ. “ಏ ಬೆಟ್ಟ, ಇಲ್ಲಿ ನೀರು ಬಿಡು. ಏ ನೀರು, ನೀನು ಹೀಗೆ ಹೋಗು” ಎಂಬಂತೆ ಹೇಳಿದ್ದಾರೆ. ಇದೊಂದು ದೊಡ್ಡ ವೈಜ್ಞಾನಿಕ ಸಾಹಸವೇ ಸರಿ, ಅಲ್ಲಿಗೆ ಯಾವ ಯಂತ್ರಗಳನ್ನು ಸಾಗಿಸಲು ಸಾಧ್ಯ? ನೀವು ಕೆನಾಲ್ (ಕಾಲುವೆ) ಮಾಡುತ್ತೀರಿ. ಅಲ್ಲಿ ಇಲಿ, ಹೆಗ್ಗಣ, ಮರ ಎಲ್ಲ ಇವೆ. ಅಲ್ಲಿ ಪೂರ್ತಿ ಸಿಮೆಂಟ್ ಹಾಕುತ್ತೀರಿ. ಆ ಮರವೇನೂ ಸುಮ್ಮನೆ ಇರುವುದಿಲ್ಲ; ಅದಕ್ಕೆ ಅ?ಂದು ಶಕ್ತಿ ಇದೆ. ಬೆಂಗಳೂರಿನ ಫ್ಲೈಓವರ್ಗಳ ಮೇಲೆಯೇ ಅಶ್ವತ್ಥ, ಅತ್ತಿಮರಗಳು ಬೆಳೆಯತ್ತಿವೆ. ಸಾವಿರ ಕಿ.ಮೀ. ದೂರದಲ್ಲಿ ಕೆನಾಲ್ ಮಾಡಿದರೆ ಇದರ ನಿರ್ವಹಣೆ ಹೇಗೆ? ಅಲ್ಲಿ ಮರ ಸುಮ್ಮನೆ ಇರುತ್ತದೆಯೆ? ಇಲಿ, ಹೆಗ್ಗಣ, ಗೆದ್ದಲು ಹುಳುಗಳು ಸುಮ್ಮನೆ ಇರುತ್ತವೆಯೆ? ಕೊಚ್ಚಿಕೊಂಡು ಹೋಗುವುದಿಲ್ಲವೆ? ನಿರ್ವಹಣಾ ವೆಚ್ಚ ಎಷ್ಟಾಗುತ್ತದೆ? ನೀರು ಕೋಲಾರಕ್ಕೆ ತಲಪಬೇಕಿದ್ದರೆ ಒಂದು ಲೀಟರಿಗೆ ೫೫೦ ರೂ. ಆಗುತ್ತದೆ. ೫೫೦ ಕೊಟ್ಟು ಖರೀದಿಸಿದ ನೀರಿನಲ್ಲಿ ನೀವು ಯಾವ ಬೆಳೆ ಬೆಳೆಸುತ್ತೀರಿ? ಅಲ್ಲಿ ಮಳೆ ಆದರೆ ಮಾತ್ರ ಕೆನಾಲ್ನಲ್ಲಿ ನೀರು ಬರುವುದು. ಮಳೆ ಆಗುತ್ತದೆ ಎನ್ನುವ ಗ್ಯಾರಂಟಿ ಎಲ್ಲಿದೆ? ಬೆಂಗಳೂರಿಗೆ ನೀರು ತರುವ ನೆಪದಲ್ಲಿ ಹತ್ತಾರು ಸಾವಿರ ಕೋಟಿ ರೂ.ಗಳ ಯೋಜನೆಗಳಿಗೆ ಆದ್ಯತೆ ಸಿಗುತ್ತಿದೆ. ಆಂಧ್ರದ ಗುತ್ತಿಗೆದಾರರು ಇಲ್ಲಿನ ರಾಜಕಾರಣಿಗಳು ಕೈಜೋಡಿಸಿದ್ದಾರೆ. ಇದರಲ್ಲಿ ವೀರಪ್ಪ ಮೊಯ್ಲಿಯವರಂತಹ ರಾಜಕಾರಣಿಗಳೂ ಸೇರಿದ್ದಾರೆ.
ಪ್ರ: ಬೆಂಗಳೂರಿನಲ್ಲಿ ಮಳೆ ಆಗುತ್ತದೆ. ಆದರೆ ಪೂರ್ತಿ ಕಾಂಕ್ರೀಟ್ ಆಗಿರುವುದರಿಂದ ನೀರು ಇಂಗುತ್ತಿಲ್ಲ. ಹರಿದು ಹೋಗುತ್ತದೆಯಲ್ಲವೆ?
ಉ: ಅದು ನಿಜ. ಬೆಂಗಳೂರು ಮಾತ್ರವಲ್ಲ; ಚಿಕ್ಕಬಳ್ಳಾಪುರದಲ್ಲೂ ಅದೇ ಪರಿಸ್ಥಿತಿ. ರಾಜಶೇಖರ ರೆಡ್ಡಿ ಅವರ ಮಗನಿಗೆ ಅಲ್ಲೊಂದು ಬೆಟ್ಟವನ್ನು ಕೊಟ್ಟು ಬಿಟ್ಟಿದ್ದಾರೆ. ರಾಮನಗರದಂತೆಯೇ ಇಲ್ಲೂ ಆಗುತ್ತಿದೆ. ಬೆಟ್ಟವನ್ನು ಕೊಟ್ಟದ್ದರಲ್ಲೂ ಮೊಯ್ಲಿ ಅವರ ಪಾತ್ರ ಇದ್ದಿರಬೇಕು. ಇಡೀ ಬೆಟ್ಟವನ್ನು ತುಂಡು ಮಾಡುತ್ತಿದ್ದಾರೆ; ಗ್ರಾನೈಟ್ ಸ್ಫೋಟಿಸುತ್ತಿದ್ದಾರೆ. ಊರವರನ್ನು ಎಬ್ಬಿಸಿದ್ದಾರೆ. ಅಲ್ಲಿ ಮುಖ್ಯವಾಗಿ ಎರಡು ಮಾಫಿಯಾಗಳಿವೆ. ಒಂದು ಗ್ರಾನೈಟ್, ಅದರ ರಫ್ತು ಇತ್ಯಾದಿ. ಡಿ.ಕೆ. ಶಿವಕುಮಾರ್ ಕಡೆಯವರು ಕೂಡ ಅದರಲ್ಲಿದ್ದಾರೆ. ಇನ್ನೊಂದು ಕಡೆ ರೆಡ್ಡಿಗಳ ಗ್ಯಾಂಗ್. ಮರಳನ್ನು ಕೂಡ ತೆಗೆಯಲಾಗುತ್ತಿದೆ. ಎಲ್ಲವನ್ನೂ ಮುಗಿಸುತ್ತಿದ್ದಾರೆ. ಮರಳಿದ್ದರೆ ನೀರು ಇಂಗುತ್ತದೆ. ಅದನ್ನು ತೆಗೆದು ಬಿಟ್ಟರೆ ಏನೂ ಉಳಿಯುವುದಿಲ್ಲ.
ಇದು ದೊಡ್ಡ ಕಥೆ. ಸಂಜೆ ೫ ಗಂಟೆ ಹೊತ್ತಿಗೆ ಗ್ರಾನೈಟ್ ಸ್ಫೋಟಿಸುತ್ತಾರೆ (ಬ್ಲಾಸ್ಟ್ ಮಾಡುವುದು). ಆಗ ಬಂಡೆಯ ತುಂಡುಗಳು ದೂರಕ್ಕೆ ಹಾರುತ್ತವೆ. ಒಮ್ಮೆ ಸಮೀಪದಲ್ಲಿ ಮೇಯುತ್ತಿದ್ದ ಗರ್ಭಿಣಿ ಹಸುವಿನ ಹೊಟ್ಟೆಗೆ ಕಲ್ಲು ಬಡಿದು, ದೊಡ್ಡ ಗಾಯವಾಗಿ ಕರು ಹೊರಗೆ ಬಂದಿತ್ತು. ಇದು ಇಂದಿನ ಸ್ಥಿತಿ; ಇದು ಅಭಿವೃದ್ಧಿ. ನಮಗೆ ಕಲ್ಲು ಬೇಕು. ಅಲ್ಲಿ ಎಂ.ಸ್ಯಾಂಡ್ ಕೂಡ ಮಾಡುತ್ತಿದ್ದಾರೆ. ಎಂ.ಸ್ಯಾಂಡ್ ಎಂದರೆ ಕಲ್ಲು ಕತ್ತರಿಸಿ ತುಂಡು ಮಾಡಿ ಪುಡಿ ಮಾಡುವುದು. ಯಾರು ಕೇಳುತ್ತಾರೆ ಇದನ್ನೆಲ್ಲ? ಬೆಳಗಾದರೆ ರೇಡಿಯೋದಲ್ಲಿ ಎಂ.ಸ್ಯಾಂಡ್, ಎಂ.ಸ್ಯಾಂಡ್ ಅದರಲ್ಲಿ ರೋಡಾಲ್ಸ್ ಎ? ಬರುತ್ತದೆ? ರೇಡಿಯೇಶನ್ (ವಿಕಿರಣ) ಎ?ಗುತ್ತದೆ? ಬೆಟ್ಟ ಕತ್ತರಿಸಿದರೆ ಏನಾಗುತ್ತದೆ? ನೀರು (ಅಂತರ್ಜಲ) ಏನಾಗುತ್ತದೆ? ಅನಂತರ (ಬೆಟ್ಟ ನಾಶವಾದ ಮೇಲೆ) ನೀರು ಎಲ್ಲಿಂದ ಬರಬೇಕು? ಗೊತ್ತಿಲ್ಲ. ಇದು ತಾಂತ್ರಿಕತೆಯೋ? ಅಬ್ಬಾ! ಏನಿದು? ಬೆಂಗಳೂರಿಗೆ ಪ್ರತಿದಿನ ಸುಮಾರು ೮,೦೦೦ ಮರಳು (ಎಂ.ಸ್ಟ್ಯಾಂಡ್) ತುಂಬಿದ ಲಾರಿಗಳು ಬರುತ್ತವೆ.
ಪ್ರ: ಸುಮಾರು ಮೂರು ಎಕ್ರೆ ಜಾಗದಲ್ಲಿ ಅಪಾರ್ಟ್ಮೆಂಟ್ ಕಟ್ಟಿ ಯಾವುದೋ ಜಲಸಂಪನ್ಮೂಲವನ್ನು ನಂಬಿಕೊಂಡು ೩೦೦೦ ಜನರಿಗೆ ನೀರು ಕೊಡುತ್ತೇವೆ ಎನ್ನುತ್ತಾರೆ. ಪಾಲಿಸಿ ಮಟ್ಟದಲ್ಲೇ ಅದನ್ನು ಸರಿಪಡಿಸುವ ಪ್ರಯತ್ನವೇನಾದರೂ ನಡೆದಿದೆಯೇ?
ಉ: ಇಲ್ಲ; ಮಾಡುತ್ತಾ ಇಲ್ಲ. ಏಕೆಂದರೆ ಡೆವಲಪ್ಮೆಂಟೆಂದರೆ ಅಪಾರ್ಟ್ಮೆಂಟ್ ಕಟ್ಟಬೇಕು. “ಮನೆಗಳು ಇಲ್ಲರೀ ಜನಗಳಿಗೆ” ಎನ್ನುತ್ತಾರೆ. ಕೆಲವು ಮನೆಗಳಲ್ಲಿ ಈಜುಕೊಳ ನಿರ್ಮಿಸಿಕೊಳ್ಳುತ್ತಾರೆ. ಇರುವುದು ಗಂಡ-ಹೆಂಡತಿ ಇಬ್ಬರೇ. ಆ ಈಜುಕೊಳಕ್ಕೆ ಎ? ನೀರು ಬೇಕು? ಅದು ಎಲ್ಲಿಂದ ಬರಬೇಕು? ಅದಕ್ಕೆ ಯಾರು, ಏಕೆ ಪರ್ಮಿಶನ್ ಕೊಡುತ್ತಾರೆ? ಕೆರೆಗಳೊಂದಿಗೆ ನಮ್ಮ ಜೀವನಪದ್ಧತಿ ನಾಶವಾಗುತ್ತಿರುವುದು ನಿಜ. ಬಹಳ? ಜೀವಿಗಳು ಈಗ ಅಂತ್ಯಕಾಣುತ್ತಿವೆ. ಅಪಾರ್ಟ್ಮೆಂಟ್ಗಳಲ್ಲಿ ಫಿಲ್ಟರ್- ಗಿಲ್ಟರ್ ಇಟ್ಟುಕೊಂಡು ಏನು ಕುಡಿಯುತ್ತಾರೋ ಗೊತ್ತಿಲ್ಲ. ಆದರೆ ಪರಿಸ್ಥಿತಿಯನ್ನು ವಿರುದ್ಧ ದಿಕ್ಕಿಗೆ ತಿರುಗಿಸುವುದು ಅಸಾಧ್ಯ. ಬೆಂಗಳೂರಿನಲ್ಲಿ ಜನ ಉಳಿಯುತ್ತಾರೋ ಇಲ್ಲವೋ ಗೊತ್ತಿಲ್ಲ. ಬಹಳ ವೇಗವಾಗಿ ಗಾಳಿ ಮತ್ತು ನೀರು ಎರಡನ್ನೂ ನಾವು ಕಳೆದುಕೊಳ್ಳುತ್ತಿದ್ದೇವೆ. ಸರ್ವನಾಶದತ್ತ ಬಹಳ ದೊಡ್ಡ ಹೆಜ್ಜೆ ಹಾಕಿಕೊಂಡು ಹೋಗುತ್ತಿದ್ದೇವೆ. ಯಾವ ವಿ?ಯಕ್ಕೂ ಕಾಳಜಿ ತೋರಿಸುತ್ತಿಲ್ಲ. ಇದೇ ಸರಿ, ಇದೇ ಅಭಿವೃದ್ಧಿ ಎಂದುಕೊಳ್ಳುತ್ತಿದ್ದೇವೆ.
ಪ್ರ: ಈವತ್ತು ಪಾಲಿಸಿ ಮಾಡುವುದರಲ್ಲೇ ನಾವು ಮೂಲ ವಿಷಯಗಳಿಂದ ದೂರ ಆಗುತ್ತಿದ್ದೇವಲ್ಲವೆ? ಅದನ್ನು ಸರಿಪಡಿಸಲಾಗದೆ?
ಉ: ನಾವಿಂದು ಪಾಲಿಸಿ ಮಾಡುತ್ತಿಲ್ಲ. ಮಾಡಬೇಕಾದವರು ಯಾರು? (ಜನಪ್ರತಿನಿಧಿಗಳು) ಎಲ್ಲರೂ ರಿಯಲ್ ಎಸ್ಟೇಟಿನವರೇ. ಎಲ್ಲರೂ ಕೊಲೆಗಾರರೇ. ಹತ್ತು ಕೊಲೆ ಮಾಡಿದವನು ಮಂತ್ರಿ. ಐದು ಕೊಲೆ ಮಾಡಿದವನು ಎಂ.ಪಿ. ನಾಲ್ಕು ಕೊಲೆ ಮಾಡಿದವನು ಎಂಎಲ್ಎ. ರಿಯಲ್ ಎಸ್ಟೇಟಿನವನೂ ಅವನೇ. ಬಿಸಿನೆಸ್ನವನೂ ಅವನೇ. ರಾಜ್ಯಸಭಾ ಸದಸ್ಯನಾಗಲು ಅರ್ಹತೆ ಏನು? ಅದು ಯಾರಿಗೆ ಸಿಗುತ್ತಿದೆ? ದುಡ್ಡು ಕೊಟ್ಟು ಅದನ್ನು ಖರೀದಿಸುತ್ತಿದ್ದಾರೆ. ನಿಮಗೆ ಗೊತ್ತಿದೆಯಲ್ಲಾ? ಪಾಲಿಸಿ ಯಾರು ಮಾಡುತ್ತಾರೆ? ಅವರವರ ಅನುಕೂಲಕ್ಕೆ ತಕ್ಕಂತೆ ಮಾಡುತ್ತಾರೆ. ಈಗ ನೋಡಿ ಎ.ಟಿ. ರಾಮಸ್ವಾಮಿ ಸಮಿತಿಯನ್ನು ಮಾಡಿದರು. ಅವರೇ ಮಾಡಿದ್ದು. ಆ ಕಮಿಟಿಯಲ್ಲಿ ನಾನು ಕೂಡ ಭಾಗಿಯಾಗಿದ್ದೆ. ಯಾವ ಸರ್ಕಾರಿ ಜಾಗವನ್ನು ಹಾಳು ಮಾಡಿದ್ದಾರೆ? ನೆಡುತೋಪು, ಕೆರೆಗಳನ್ನು ಹಾಳು ಮಾಡಿದ್ದಾರೆ? ಯಾವ ಸರ್ವೆ ನಂಬ್ರದಲ್ಲಿ ಎ? ಜಾಗವನ್ನು ಒತ್ತುವರಿ ಮಾಡಿದ್ದಾರೆ? ಯಾರವರು – ಎಲ್ಲವನ್ನೂ ರಾಮಸ್ವಾಮಿ ಮತ್ತು ಬಾಲಸುಬ್ರಹ್ಮಣ್ಯಮ್ ಅವರು ಸ್ಪ?ವಾಗಿ ಬರೆದಿದ್ದಾರೆ. ಅದರ ಬಗ್ಗೆ ಕ್ರಮ ಕೈಗೊಳ್ಳುವುದಕ್ಕೆ ಅಡ್ಡಿ ಏನು?
ಪ್ರ: ಬಾಲಸುಬ್ರಹ್ಮಣ್ಯಮ್ ಸಮಿತಿಯ ವರದಿಗಾಗಿ ಅವರನ್ನು ವಿಧಾನಸಭೆಗೆ ಕರೆದು ಛೀಮಾರಿ ಹಾಕಬೇಕು (ಇಂಪೀಚ್ಮೆಂಟ್) ಎನ್ನುವವರೆಗೂ ಆಯಿತಲ್ಲವೆ?
ಉ: ನೋಡಿ, ರಾಮಸ್ವಾಮಿ ಕಮಿಟಿಯನ್ನೂ ಅವರು ಬಿಟ್ಟಿಲ್ಲ. ಆಮೇಲೆ ಹೈಕೋರ್ಟ್ ಕಮಿಟಿ ಮಾಡಿದರು. ಅದರಲ್ಲಿ ನಾನಿದ್ದೆ. ನ್ಯಾ| ಎನ್.ಕೆ. ಪಾಟೀಲ್ ಕಮಿಟಿ ಅಂತ ಅದರ ಹೆಸರು. ನಾವು ಒಂದು ವರದಿ ನೀಡಿದೆವು. ಅದರ ಡ್ರಾಫ್ಟನ್ನು ಬಹುತೇಕ ಪೂರ್ತಿ ನಾನೇ ಮಾಡಿದ್ದು. ಪೂರ್ತಿ ಬಿಗಿಯಾಗಿ ಮಾಡಿದರೆ ಇವರು ಜಾರಿ ಮಾಡುವುದಿಲ್ಲವೆಂದು ಸ್ವಲ್ಪಮಟ್ಟಿಗೆ ಸುಧಾರಣೆ ಮಾಡಿಕೊಂಡೇ ವರದಿಯನ್ನು ಬರೆದಿದ್ದೆ; ಎಚ್ಚರದಿಂದ (ಕೇರ್ಫುಲ್ಲಾಗಿ) ಮಾಡಿದ್ದೇನೆ. ಆದರೂ ಜಾರಿ ಮಾಡುತ್ತಿಲ್ಲ. ಒಟ್ಟಿನಲ್ಲಿ ಅವರೇ ಅಧಿಕಾರದಲ್ಲಿರುವುದು, ಅವರೇ ಪಾಲಿಸಿ ಮಾಡಿಕೊಳ್ಳುವುದು. ಬೇರೆಯವರ ಬಗ್ಗೆ ಚಿಂತೆ ಇಲ್ಲ. ಎನ್.ಕೆ. ಪಾಟೀಲ್ ಸಮಿತಿ ವರದಿಯಲ್ಲಿ ನಾವು ಹಲವಾರು ವಿ?ಯಗಳಲ್ಲಿ ನಿರ್ದೇಶನ ನೀಡಿದ್ದೇವೆ. ಆದರೆ ಅದನ್ನು ಜಾರಿ ಮಾಡುವುದಿಲ್ಲ. ಮಂತ್ರಿಗಳಿಗೆ ಅದು ಬೇಡ. “ಅವರ್ಯಾರ್ರೀ ಹೇಳುವುದಕ್ಕೆ ಕೋರ್ಟಿನವರು? ಬಿಡ್ರಿ, ನಾನು ಹೇಳೋದು ಮಾಡ್ರೀ” ಎಂದವರು ಅಧಿಕಾರಿಗಳಿಗೆ ಹೇಳುತ್ತಾರೆ. ಅವರು ನನ್ನ ಮಾತು ಕೇಳುತ್ತಾರಾ ಅಥವಾ ಮಂತ್ರಿಯ ಮಾತು ಕೇಳುತ್ತಾರಾ? ನಾನು ಕಂಟ್ರೋಲರ್ ಅಡಿಟ್ ಜನರಲ್ (ಸಿಎಜಿ) ಆಫೀಸಿನಲ್ಲೂ ಸಲಹೆಗಾರನಾಗಿದ್ದೆ. ಬರ ಮತ್ತು ನೆರೆ ಪರಿಹಾರಕ್ಕೆ ಕೆಲಸ ಮಾಡಬೇಕೆಂದು ಸಿಎಜಿ ಈಗಾಗಲೇ ಸ್ಪ?ವಾಗಿ ಹೇಳಿದೆ. ಅಂದರೆ ಹಣ ಇದೆ. ಏಕೆ ಖರ್ಚು ಮಾಡುತ್ತಿಲ್ಲ? ಅದರ ಬಗ್ಗೆ ಟೆಸ್ಟ್ ಅಡಿಟ್ ಮಾಡಿದೆವು. ಯೋಜನೆ ತಯಾರಿಸಿದವರಲ್ಲಿ ಕೇಳಿ ವಿಶ್ಲೇ?ಣೆ ನಡೆಸಿದಾಗ, ಅದು ತಪ್ಪಾಗಿದೆ; ತಾಂತ್ರಿಕತೆ ಸರಿಯಿಲ್ಲ – ಎಂಬುದು ತಿಳಿದು ಬಂತು. ಮುಂದೆ ಅದು ಕ್ರಮಕೈಗೊಳ್ಳುವ ಬಗ್ಗೆ ಸಿಎಜಿಯಿಂದ ಶಾಸಕರ ಸಮಿತಿಯ ಮುಂದೆ ಹೋಯಿತು. ಆಧಿಕಾರಿಗಳು ಚಾರ್ಜ್ಶೀಟ್ ಹಾಕಿ ಕ್ರಮ ಕೈಗೊಳ್ಳಬೇಕಿತ್ತು.
ನಾವು ಸ್ಪಷ್ಟವಾಗಿ ಆದೇಶ ನೀಡಿದ್ದೆವು; ಆದರೂ ಕ್ರಮ ಕೈಗೊಳ್ಳಲಿಲ್ಲ. ಕೋರ್ಟ್ ಆದೇಶವಿದ್ದರೂ ಜಾರಿ ಆಗುವುದಿಲ್ಲ. ಯಾರು ಡಿಕ್ಟೇಟ್ ಮಾಡುತ್ತಾರೆ ಗೊತ್ತಿಲ್ಲ. ಸರ್ಕಾರ ತುಂಬ ಅಸ್ಪಷ್ಟತೆ(abstract)ಯಲ್ಲಿದೆ.
ಪ್ರ: ನಿಮ್ಮ ಪ್ರಕಾರ ಕೆರೆಗಳನ್ನು ಉಳಿಸಲು ನಮ್ಮ ಮುಂದಿರುವ ವಿವಿಧ ಸವಾಲುಗಳೇನು?
ಉ: ಬಹಳ ಸುಲಭ. ಹೇಳುವುದಕ್ಕೇನೂ ಕಷ್ಟ ಇಲ್ಲ. ಸರ್ಕಾರ ಮನಸ್ಸು ಮಾಡಿದರೆ ಇನ್ನು ಐದು ವರ್ಷಕ್ಕೆ ಬಹಳ? ಕೆರೆಗಳ ಸಮಸ್ಯೆಗಳನ್ನು ಪರಿಹರಿಸಬಹುದು. ನಿಸರ್ಗ ಸತ್ತಿಲ್ಲ; ಅದು ತುಂಬ ಶಕ್ತಿಶಾಲಿಯಾದದ್ದು. ಐದು ವರ್ಷಗಳಲ್ಲಿ ಸ್ವಲ್ಪ ಸುಧಾರಣೆ ತರಬಹುದು; ಹತ್ತು ವ?ಗಳಲ್ಲಿ ನಿಜವಾಗಿಯೂ ಕಣ್ಣಿಗೆ ಕಾಣುವ ಪರಿಹಾರ ಸಿಗುತ್ತದೆ. ಏಕೆಂದರೆ ನಿಸರ್ಗ ದಿನದ ೨೪ ಗಂಟೆಯೂ ಕೆಲಸ ಮಾಡುತ್ತದೆ. ಅದು ಲಂಚ ತೆಗೆದುಕೊಳ್ಳುವುದಿಲ್ಲ. ದುಡ್ಡುಕೊಟ್ಟು ಅದನ್ನು ಖರೀದಿಸಲು ಆಗುವುದಿಲ್ಲ. ಅದಕ್ಕೆ ಸಹಕಾರ ಕೊಟ್ಟರೆ ಸಾಕು; ಮರ ನೆಡುವುದೊಂದೇ ನಮ್ಮ ಕೆಲಸ. ಅದು ಬೆಳೆದುಕೊಂಡು ಹೋಗುತ್ತದೆ. ಸೂರ್ಯನ ಜೊತೆ ೨೪ ಗಂಟೆ ಇಂಟರ್ಯಾಕ್ಟ್ ಮಾಡುತ್ತದೆ. ದ್ಯುತಿಸಂಶ್ಲೇಷಣೆ ನಡೆಸುತ್ತದೆ. ಆಮ್ಲಜನಕವನ್ನು ಉತ್ಪಾದಿಸುತ್ತದೆ. ಹಣ್ಣು ಬಿಡುತ್ತದೆ. ಯಾವತ್ತೂ ಕಳ್ಳತನ ಮಾಡಲು ಹೋಗುವುದಿಲ್ಲ ಬೃಹಸ್ಪತಿಯ ಮಗ ಕಚದೇವ ಒಂದು ಎಲೆಗೆ ಹೀಗೆ ಹೇಳುತ್ತಾನೆ. “ಎಲೈ ಎಲೆಯೆ, ನೀನು ದಿನವಿಡೀ ಸೂರ್ಯದೇವನಿಗೆ ನಮಸ್ಕಾರ ಮಾಡುತ್ತೀಯ. ಪ್ರಾಣವಾಯುವನ್ನು ಕೊಡುತ್ತೀಯ. ಮನುಷ್ಯರಿಗೆ ಬೇಕಾದ ಎಲ್ಲವನ್ನೂ ಕೊಡುತ್ತಿ. ನಿನಗೂ ನನಗೂ ಹೋಲಿಸಿದರೆ ನೀನು ನನಗಿಂತ ಸಾವಿರ ಪಟ್ಟು ದೊಡ್ಡ ಸೇವೆಯನ್ನು ಮಾಡಿದ್ದೀಯ.” ನಾವು ದೇವರಾಗುವುದು ಬೇಡ; ಮನುಷ್ಯರಾಗಬೇಕಾಗಿದೆ. ಕೆರೆಗಳನ್ನು ಉಳಿಸಲು ಸಾಧ್ಯವೆಂದು ಘಂಟಾಘೋಷವಾಗಿ ಎಲ್ಲಿ ಬೇಕಾದರೂ ಹೇಳುತ್ತೇನೆ. ಬದಲಾವಣೆ ತರಲು ಐದರಿಂದ ಹತ್ತು ವರ್ಷ ಸಾಕು, ದೊಡ್ಡ ಸವಾಲೇನೂ ಇಲ್ಲ. ಮನಸ್ಸು ಮಾಡಬೇಕು ಅಷ್ಟು. ಸರ್ಕಾರಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು. ದೇವರಾಜ ಅರಸರಲ್ಲಿ ಅಂತಹ ಇಚ್ಛಾಶಕ್ತಿ ಇತ್ತು. ಅವರು ಮುಖ್ಯಮಂತ್ರಿ ಆಗಿದ್ದಾಗ ನಾನು ಅವರೊಂದಿಗೆ ಕೆಲಸ ಮಾಡಿದ್ದೇನೆ.
“ಮರ ಕಡಿದವರು ಒಬ್ಬರೂ ಮತ್ತೆ ಒಂದು ಮರವನ್ನೂ ಬೆಳೆಸುವುದಿಲ್ಲ. ಹಾಗಾದರೆ ಕಾಡು ಆಗುವುದು ಹೇಗೆ?” ಎಂದು ಅವರ ಗಮನಕ್ಕೆ ತಂದಾಗ ವೃಕ್ಷ ಸಂರಕ್ಷಣೆ ಕಾಯ್ದೆಯನ್ನು ತಂದರು. “ನನ್ನ ಮುಖ್ಯಮಂತ್ರಿ ಹುದ್ದೆ ಹೋದರೂ ಪರವಾಗಿಲ್ಲ; ಒಬ್ಬ ಮನು? ಸತ್ತರೆ ಸುಡುವುದಕ್ಕೆ ಮರ ಇಲ್ಲದಂತೆ ಮಾಡುತ್ತಿದ್ದೇವೆ; ಹಾಗೆ ಆಗಲು ಬಿಡುವುದಿಲ್ಲ” ಎಂದು ಅವರೊಮ್ಮೆ ಹೇಳಿದ್ದರು; ಮತ್ತು ಸರ್ಕಾರ ಹೇಳಿದ್ದನ್ನು ಮಾಡಬೇಕು.
ಈಗ ನೋಡಿ, ಕಟ್ಟೆ ಕಟ್ಟಲು (ಎತ್ತಿನ ಹೊಳೆ) ಹೋಗುತ್ತಿದ್ದಾರೆ. ಎಷ್ಟೊಂದು ವಿದ್ಯುತ್ ಬೇಕು ಅದಕ್ಕೆ? ನೀರೇನು ಇದ್ದಕ್ಕಿದ್ದಂತೆ ಮೇಲೆ ಹತ್ತಿಬಿಡುತ್ತದೆಯೇ? ವಿದ್ಯುತ್ ಬೇಕು, ಕೆನಾಲ್ ಬೇಕು. ಇದು ಬಹಳ ದುರದೃಷ್ಟಕರ. ನಿಸರ್ಗ ಯಾವಾಗಲೂ ಸಮೃದ್ಧ ಮತ್ತು ಶ್ರೀಮಂತ; ನಿರ್ದಯಿ ಅಲ್ಲ. ಒಂದು ಕಾಗೆ ಬಂದು ಸ್ತನವನ್ನು ಚುಚ್ಚಿದರೂ ಸೀತೆ ಅದನ್ನು ಸಾಯಿಸಲು ಬಿಡುವುದಿಲ್ಲ; ತಾಳು ಎನ್ನುತ್ತಾಳೆ. ಇದು ಪೃಥ್ವಿಯ ಒಂದು ನಿಯಮ. ತನಗೆ ನೋವಾದರೂ ಆಕೆ ತನ್ನ ಮಕ್ಕಳನ್ನು ಹಾಳುಮಾಡಲು ಹೋಗುವುದಿಲ್ಲ. ಹಿಂದೂ ತತ್ತ್ವಶಾಸ್ತ್ರದಲ್ಲಿ ಇದನ್ನು ನೂರಾರು ಉದಾಹರಣೆಗಳ ಮೂಲಕ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ನನಗೆ ಅದರಲ್ಲಿ ನಂಬಿಕೆ ಇದೆ. ಪ್ರೊ| ಎಸ್.ಕೆ. ರಾಮಚಂದ್ರರಾಯರ ಶಿಷ್ಯ ನಾನು. ಸುಮಾರು ವಿಷಯಗಳಲ್ಲಿ ಅವರು ನನಗೆ ತಿಳಿವಳಿಕೆಯನ್ನು ಕೊಟ್ಟಿದಾರೆ. ಏನಾದರೂ ಹೇಳಲು ನನಗೆ ಶಕ್ತಿ ಬಂದಿರುವುದು ಅದರಿಂದ; ಪ್ರೊ| ರಾಯರ ಆಶೀರ್ವಾದದಿಂದ. ಅವರನ್ನು ನಾನು ನೆನೆಯದ ದಿನವೇ ಇಲ್ಲ. ಇಲ್ಲವಾದರೆ ಈ ಕಂಪೆನಿಗಳವರು ನನ್ನನ್ನು ಯಾವತ್ತೋ ಓಡಿಸಿಬಿಡುತ್ತಿದ್ದರು. ಈಗ ಓಡಿಸುತ್ತಲೂ ಇಲ್ಲ; ನಾನವರ ಮಾತನ್ನು ಕೇಳುತ್ತಲೂ ಇಲ್ಲ. ಅದು ಆಶ್ಚರ್ಯದ ಸಂಗತಿ. ಈಚೆಗೆ ಲಾಲ್ಬಾಗಿನಲ್ಲಿ ಒಂದು ಪಂಪ್ ಹಾಕಿ ನಯಾಗರ ಜಲಪಾತವನ್ನು ಮಾಡಿಸಿದ್ದೇನೆ. ಅದು ನನ್ನ ಒಂದು ಮಹತ್ತ್ವದ ಪ್ರಯತ್ನ. ಕೊಳಚೆ ನೀರನ್ನು ಮೇಲಕ್ಕೆತ್ತಿ ಶುದ್ಧ ಮಾಡಿ ಕೆಳಗೆ ಬಿಟ್ಟು ಪದ್ಮಕಮಲ, ಶ್ವೇತಕಮಲ – ಅದೆಲ್ಲ ಹಾಕಿಸಿದ್ದೇನೆ. ಅದರಿಂದ ಸುತ್ತಲಿನ ೨೦೦- ೩೦೦ ಬೋರ್ವೆಲ್ಗಳಿಗೆ ಶುದ್ಧವಾದ ನೀರು ಸಿಗುತ್ತದೆ.
ಪ್ರ: ಈಗ ನಾವು ಕೆರೆಗಳ ರಕ್ಷಣೆಗೆ ಏನು ಮಾಡಬೇಕು?
ಉ: ಕಷ್ಟ ಏನಿಲ್ಲ. ಕೆರೆ ಮತ್ತು ರಾಜಕಾಲುವೆಗಳಿಗೆ ಸೇರಿದ ೪೦ ಸಾವಿರ ಎಕ್ರೆ ಜಾಗವನ್ನು ಒತ್ತುವರಿ ಮಾಡಿದ್ದಾರೆ. ಸರ್ಕಾರ ಅದನ್ನು ನಿರ್ದಯವಾಗಿ ತೆಗೆಸಬೇಕು. ರಾಜಕಾಲುವೆಗಳನ್ನು ಸರಿಪಡಿಸಬೇಕು. ಕೆರೆ ಒತ್ತುವರಿಗಳನ್ನು ತೆಗೆಸಬೇಕೆಂದು ಸುಪ್ರೀಂಕೋರ್ಟ್ ಸ್ಪ?ವಾಗಿ ಆದೇಶ ಮಾಡಿದೆ. ಅದನ್ನು ಜಾರಿಗೊಳಿಸಬೇಕು. ಸರ್ಕಾರದ ತಪ್ಪೇನಾದರೂ ಇದ್ದರೆ ಅವರಿಗೆ ಬೇರೆ ಕಡೆ ಜಾಗ ಕೊಡಬೇಕು. ಒತ್ತುವರಿ ಮಾಡಿ ಕುಳಿತವರಲ್ಲಿ ರಾಜಕಾರಣಿಗಳಿದ್ದಾರೆ. ಕಟ್ಟಡಗಳಲ್ಲದೆ ಮಾಲ್ ಮತ್ತು
ಅಪಾರ್ಟ್ಮೆಂಟ್ಗಳನ್ನೂ ಕಟ್ಟಿಸಿದ್ದಾರೆ. ಒತ್ತುವರಿ ವಿರುದ್ಧ ನಿರ್ದಯವಾಗಿ ಕ್ರಮಕೈಗೊಳ್ಳಬೇಕೆಂದು ಕೋಳಿವಾಡ, ಎನ್.ಕೆ. ಪಾಟೀಲ್ ಮತ್ತು ಎ.ಟಿ. ರಾಮಸ್ವಾಮಿ ಕಮಿಟಿಗಳೆಲ್ಲ ಹೇಳಿವೆ. ಅದಕ್ಕೆ ಪ್ರತ್ಯೇಕ ಸಾಕ್ಷ್ಯ (ಎವಿಡೆನ್ಸ್) ಸಾಧ್ಯವಿಲ್ಲ. ಆ ಬಗ್ಗೆ ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸಲು ಹೇಳಿದ್ದು ಸ್ಥಾಪಿಸಲಾಗಿದೆ. ಕೋರ್ಟಿಗೆ ಬೇಕಾದ ಅಧಿಕಾರ ನೀಡಿ ಉತ್ತಮ ನ್ಯಾಯಾಧೀಶರನ್ನು ನೇಮಿಸಿದರೆ ಎರಡು ವ?ದಲ್ಲಿ ಅಕ್ರಮ ನಿರ್ಮಾಣಗಳನ್ನೆಲ್ಲ ಕೆಡವಿ ಸರಿಪಡಿಸಬಹುದು.
ಪ್ರ: ಸರ್ಕಾರದಲ್ಲಿ ಎಲ್ಲೋ ಒಂದು ಕಡೆ ‘ತಪ್ಪು ಮಾಡು, ದಂಡ ಕಟ್ಟು’ ಎಂಬ ಧೋರಣೆ ಇದೆಯಲ್ಲವೆ? ಒತ್ತುವರಿ ಮಾಡಿಕೊಂಡು ಮತ್ತೆ ಫೈನ್ ಕಟ್ಟುತ್ತೇನೆ ಎನ್ನುತ್ತಾರಲ್ಲವೆ?
ಉ: ಕೋಳಿವಾಡ ಸಮಿತಿ ವರದಿಯಲ್ಲಿ ಅಂತಹ ಅಂಶ ಇದೆ. ಆದರೆ ದುಡ್ಡು ಕೆರೆಗೆ ಬದಲಿ ಆಗುವುದಿಲ್ಲ. ಕೆರೆ ಕೆರೆಯಾಗಿಯೇ ಇರಬೇಕು. ಎಲ್ಲ ಕಡೆ ಕೆರೆ ಕಟ್ಟಲು ಆಗುವುದಿಲ್ಲ. ನೀರನ್ನು ಸಂಗ್ರಹಿಸಲು ಸಾಧ್ಯವಾಗುವಲ್ಲೇ ಅದನ್ನು ಮಾಡಬೇಕಾಗುತ್ತದೆ. ಏನಿದ್ದರೂ ನೀರು ಮತ್ತು ಕೆರೆಯ ವಿಷಯದಲ್ಲಿ ರಾಜಿ ಬೇಕಾಗಿಲ್ಲ. ದೇವಸ್ಥಾನ, ಶಾಲೆ, ಆಸ್ಪತ್ರೆ, ಏನೇ ಇರಲಿ; ನಿರ್ದಾಕ್ಷಿಣ್ಯವಾಗಿ ಡೆಮಾಲಿ? ಮಾಡಬಹುದೆಂದು ಸುಪ್ರೀಂಕೋರ್ಟ್ ಆದೇಶವಿದೆ. ಅದನ್ನು ಜಾರಿ ಮಾಡಿದರೆ ಸಾಕು.
ಪ್ರ: ತಂತ್ರಜ್ಞಾನ, ಕೆರೆ, ನೀರು ಮತ್ತು ನಮ್ಮ ಜೀವನಪದ್ಧತಿಗಳನ್ನು ಒಟ್ಟಿಗೆ ಕೊಂಡೊಯ್ಯಲು ನಿಮ್ಮ ಮಾರ್ಗಸೂಚಿಗಳೇನು
ಉ: ಎಲ್ಲವನ್ನೂ ಮಾಡಲು ಸಾಧ್ಯ. ತಂತ್ರಜ್ಞಾನಕ್ಕೇನೂ ಕೊರತೆಯಿಲ್ಲ. ಅದಕ್ಕೆ ವಿದೇಶಿ ಹಣ, ವಿದೇಶಿ ತಂತ್ರಜ್ಞಾನ ಕೂಡ ಬೇಡ. ನಮ್ಮಲ್ಲಿರುವ ಪ್ರಜ್ಞೆ ಇದೆಯಲ್ಲ. ಜನರಿಗೆ ತುಂಬ ಕಾಳಜಿ ಇದೆ, ತುಂಬ ಒಳ್ಳೆಯ ಜನ ಇದ್ದಾರೆ. ಶೇಕಡಾವಾರು ಕಡಮೆ ಇರಬಹುದು. ಅವರ ಸಂಖ್ಯೆ ಬೆಳೆಯಬೇಕು. ಮಕ್ಕಳ ತಲೆಗೆ ಇದನ್ನು ಹಾಕಬೇಕು. ಅದನ್ನು ನಾವು ಸ್ವಲ್ಪ ಮಾಡುತ್ತಿದ್ದೇವೆ. ಡಿಸೆಂಬರ್ ಆರಂಭದಲ್ಲಿ ಲಾಲ್ಬಾಗಿನಲ್ಲಿ ನಡೆಸಿದ ’ಮೈ ಟ್ರೀ ಮೈ ಲೈಫ್’ ಎನ್ನುವ ಕಾರ್ಯಕ್ರಮಕ್ಕೆ ೧೪ ಸಾವಿರ ಮಕ್ಕಳು ಬಂದಿದ್ದರು. ತುಂಬ ಇ?ಪಟ್ಟರು. ರೋಟರಿ ಅವರಿಗೆಲ್ಲ ಹೇಳಿ ಮಾಡಿಸಿದ್ದು. ಏಳೆಂಟು ಸಾವಿರ ಮಕ್ಕಳು ಬರುವ ನಿರೀಕ್ಷೆ ಇತ್ತು; ೧೪ ಸಾವಿರ ಜನ ಬಂದರು. ಎಲ್ಲಿಂದ ಬಂದರೋ ಗೊತ್ತಿಲ್ಲ. ಅದರಿಂದ ಭವಿಷ್ಯದ ಬಗೆಗೆ ಆಶಾವಾದ ಮೂಡಿತು.
ಪ್ರ: ಇಷ್ಟು ವರ್ಷಗಳಾದರೂ ಬೆಂಗಳೂರಿನಲ್ಲಿ ಎರಡನೇ ಲಾಲ್ಬಾಗ್ ಬರಲಿಲ್ಲ. ಒಂದೇ ಒಂದು ಹೊಸ ಕೆರೆ ನಿರ್ಮಾಣವಾಗಿಲ್ಲ. ಕೆರೆಗಳನ್ನು ಮುಚ್ಚುವುದು ಮಾತ್ರ ನಡೆಯುತ್ತಿದೆ; ಅಲ್ಲವೆ?
ಉ: ಒಂದೇ ಒಂದು ಗುಂಡು ತೋಪು ಕೂಡ ಆಗಿಲ್ಲ; ಹೊಸದಾಗಿ ಒಂದು ಕುಂಟೆಯನ್ನೂ ಕಟ್ಟಿಲ್ಲ. ಹಿಂದೆ ೨೦ ಸಾವಿರ ಕುಂಟೆಗಳಿದ್ದವು. ಬೆಂಗಳೂರಿನಲ್ಲಿ ೨೦ ಸಾವಿರ ಅಶ್ವತ್ಥಕಟ್ಟೆಗಳಿದ್ದವು. ಪ್ರತಿಯೊಂದು ಗ್ರಾಮದಲ್ಲಿ ಎರಡು ಗುಂಡು ತೋಪುಗಳಿದ್ದವು. ಎರಡು ಗ್ರಾಮದೇವತೆ ಇದ್ದಾರೆ. ನೈಸರ್ಗಿಕವಾದ ಪರಿಸರ ವ್ಯವಸ್ಥೆಯೇ ಗುಂಡು ತೋಪು. ಅಲ್ಲಿ ಕಾಡನ್ನು ಸಂರಕ್ಷಿಸಿರುತ್ತಾರೆ. ಜನ, ಜಾನುವಾರು, ಪ್ರಾಣಿ-ಪಕ್ಷಿಗಳಿಗೆ ಅಲ್ಲಿ ಔ?ಧಿ ಗಿಡಗಳನ್ನು ಬೆಳೆಸಿರುತ್ತಾರೆ. ವ?ಕ್ಕೊಮ್ಮೆ ಹೋಗಿ ಅಲ್ಲಿನ ಗ್ರಾಮದೇವತೆಯನ್ನು ಪೂಜಿಸುತ್ತಿದ್ದರು. ಇಂದು ಎಲ್ಲಿಯೂ ಒಂದು ಗುಂಡು ತೋಪು ಕೂಡ ಇಲ್ಲ. ಒಂದೇ ಒಂದು ಕುಂಟೆ ಇಲ್ಲ. ಹಿಂದೆ ಬೆಂಗಳೂರು ಡೈರಿಯ ಹಿಂದೆ ನಮ್ಮ ಮನೆ, ಜಾಗ ಇತ್ತು; ಆ ಭಾಗಕ್ಕೆ ಆಡುಗೋಡಿ ಎಂದು ಹೆಸರು. ನಮ್ಮ ಹೊಲದಲ್ಲಿ ಮೂರು ಕುಂಟೆಗಳಿದ್ದವು. ಈಗ ಅಲ್ಲಿ ಒಂದೇ ಒಂದು ಕುಂಟೆ ಇಲ್ಲ. ಒಂದು ಇಂಚು ನೀರು ಕೂಡ ಒಳಗಡೆ ಹೋಗಲು ಅವಕಾಶವಿಲ್ಲ. ಎಂತೆಂಥ ಮರಗಳಿದ್ದವು ಅಲ್ಲಿ! ನೀವು ಡೈರಿ ಸರ್ಕಲ್ನಲ್ಲಿ ಕುಳಿತುಕೊಂಡರೆ ಸರ್ ಎಂ. ವಿಶ್ವೇಶ್ವರಯ್ಯನವರು ಬನ್ನೇರುಘಟ್ಟ ರಸ್ತೆಯಲ್ಲಿ ಬರುವರು. ಅಲ್ಲಿ ಉದ್ದಕ್ಕೂ ದೊಡ್ಡ ದೊಡ್ಡ ನೇರಳೆ ಮರಗಳಿದ್ದವು. ಸಾಯಂಕಾಲ ವಿಶ್ವೇಶ್ವರಯ್ಯನವರು ಕಾರನ್ನು ಅಲ್ಲಿ ನಿಲ್ಲಿಸಿ, ಕೋಲು ಹಿಡಿದುಕೊಂಡು ರಸ್ತೆಯಲ್ಲಿ ವಾಕಿಂಗ್ ಹೋಗುವರು. ಅಲ್ಲಿ ಸ್ವಲ್ಪ ಹಿಂದುಗಡೆ ನಮ್ಮ ಹೊಲ. ನಾವು ವಿಶ್ವೇಶ್ವರಯ್ಯನವರನ್ನು ನೋಡಲು ಅಲ್ಲಿಗೆ ಹೋಗುತ್ತಿದ್ದೆವು. ಶಾಲೆಗೆ ರಜೆ ಇದ್ದಾಗ ಅಲ್ಲಿ ಬಂದು ಕುಳಿತುಕೊಂಡು ಅವರನ್ನು ನೋಡುತ್ತಿದ್ದೆವು. ಮಾತನಾಡಿಸುವ ಧೈರ್ಯ ಇಲ್ಲ; ದೂರದಿಂದ ನೋಡುವುದು. ಅವರು ಗಂಭೀರವಾಗಿ ನಡೆದುಕೊಂಡು ಹೋಗುತ್ತಿದ್ದರು. ಈಗ ಅಲ್ಲಿ ಎಷ್ಟು ಮರ ಇದೆ? ನಿನ್ನೆ ಅಲ್ಲ ಮೊನ್ನೆ, ಬನ್ನೇರುಘಟ್ಟ ರಸ್ತೆಯಲ್ಲಿ ೪೦೦ ಮರಗಳನ್ನು ಕಡಿಯಲಿಕ್ಕೆ ಹೊರಟರು; ಮೆಟ್ರೋ ಮಾಡುತ್ತಾರಂತೆ!
(ನಿರೂಪಣೆ: ಎಚ್. ಮಂಜುನಾಥ ಭಟ್)