ಎಳೆಬಿಸಿಲು ಮೈತಾಗಿ ಹೊಳೆವ ಕನ್ನಡಿಯಾಗೆ
ನನ್ನೊಳಗೆ ಮುಖ ನೋಡಿ ನಗುವ ದಿವಾಕರನು
ಮತ್ತೆ ಕೆಂಪಾಗಿ ರಂಗೇರಿ ಮರೆಯಾಗುತ್ತಿದ್ದುದು
ನನ್ನಾ ತೀರದಂಚಲ್ಲಿ.
ಕಂಕುಳಲಿ ಕೂತು ಬಂದ ಮಗುವೂ,
ತಲೆಯಲಿ ಹೊತ್ತು ತಂದ ವಸ್ತ್ರವೂ
ಹೊಳೆಯುತ್ತಿದ್ದುದು ನನ್ನೊಳಗೆ ಮುಳುಗಿ ಎದ್ದಾಗಲೇ.
ಮೈ ಕೈ ತುಂಬಿದ ಹೆಣ್ಣಾಗಿಸಿದ
ವರುಣನ ಮಿಲನದ ಸಂಭ್ರಮವ ನೋಡಿ
ನನ್ನೆಡೆಗೆ ನಗು ಚೆಲ್ಲುತ್ತಿದ್ದವನು ಆ ನೇಗಿಲಯೋಗಿಯೇ.
ಗಟ್ಟಿಗಿತ್ತಿಯಂತೆ ಮೈ ಚಾಚಿ ನಿಂತಾಗ
ನನ್ನ ಸೆರಗಲ್ಲಿ ಆಡಿ ನಲಿದ ಪುಟ್ಟ ಮಕ್ಕಳೆಲ್ಲ ಖುಷಿಪಟ್ಟದ್ದು ನಾ ಶಾಂತೆಯಾಗಿ, ಮೌನವಾದಾಗಲೇ.
ಅಗೋ, ಕೇಳಿಸುತ್ತಿದೆಯಾ, ನನ್ನ ತಂಗಿಯ ಕೂಗು!
ಆಕೆಯ ವಿಕಾರಗೊಳಿಸುತ್ತಿದ್ದಾರೆ,
ತನ್ನೆಲ್ಲವನೂ ಕಳಕೊಳ್ಳುತ್ತಿದ್ದಾಳೆ.
ಆಕೆಯ ಕಾಪಾಡಿ.
ನನ್ನೊಳಗೆ ನಗು ಕಂಡ ಮಕ್ಕಳೆಲ್ಲಿ ಹೋದಿರಿ!!
ಹೀಗೆ, ಕೇಳಿಸುತ್ತಿತ್ತು, ನನ್ನ ಅಕ್ಕನ ಕೂಗು ಒಂದು ಕಾಲದಿ.
ಆಕೆಯ ಸದ್ದೀಗಿಲ್ಲ.
ಆಕೆಯ ಎದೆಯ ಮೇಲೆ ನಿಂತ ಆ ಭವ್ಯ ಕಟ್ಟಡವೊಂದು ಆಕೆಯ ಮಾತ ಕಸಿದಿದೆ.
ಉಸಿರಾಡುತ್ತಿಲ್ಲೀಗ ಆಕೆ..
ಅನತಿ ದೂರದಿ ನನ್ನ ಸ್ನೇಹಿತೆ ಒಮ್ಮೊಮ್ಮೆ ಧಗಧಗನೆ ಉರಿಯುತಾಳೆ
ಇನ್ನೊಮ್ಮೆ ತನ್ನ ಮೇಲೆ ಸರಿದಾಡುವ ತ್ಯಾಜ್ಯಗಳ ಸರಿಸಲಾಗದೆ ಕಣ್ಣೀರು ಸುರಿಸುತಾಳೆ.
ಭಗವಂತನೊಂದಿಗೆ ಒಂದಾದರೂ ಮುಕ್ತಿ ದೊರೆಯುತಿಲ್ಲ ಆಕೆಗೆ.
ನಾನಾದರೋ, ಅಂದೊಮ್ಮೆ, ಇಂದೊಮ್ಮೆ ಬತ್ತಿದ ಒಡಲಾಗಿ, ವರುಣನನ್ನೇ ದಿಟ್ಟಿಸುತಿದ್ದೇನೆ.
ಅರೇ! ಅದ್ಯಾರೋ ಕರಿಕನ್ನಡಕದವನು ನನ್ನನ್ನೇ ದಿಟ್ಟಿಸುತ್ತಿದ್ದಾನೆ.
ಒಂದು ಹನಿ ನೀರ ಸುರಿಯಿರಿ. ಮೈ ಮುಚ್ಚಿಕೊಳ್ಳುತ್ತೇನೆ.