ಕೆರೆಗಳ ಏರಿಯ ಮ್ಯಾಲೆ
ಮಾನವನ ಮರ್ಕಟ ಲೀಲೆ
ಕೆರೆಗಳ ಒಡಲನ್ನು ಮಣ್ಣಿಂದ ಮುಚ್ಚಿ
ಮೇಲೊಂದು ಸೌಧ ಕಟ್ಟಿ ಕುಳಿತಿದ್ದ ಕಣ್ಮುಚ್ಚಿ
ನಿಂಬೆಯ ಹಣ್ಣಂಗೆ ತುಂಬಿದ್ದ ಕೆರೆಗಳಿಂದು
ತೀರದ ಮಾನವನ ದಾಹಕ್ಕೆ ಸೋತು
ಕುಡಿದು ಎಸೆದ ಎಳೆನೀರಿನ ಚಿಪ್ಪುಗಳಾಗಿವೆ
ರೋಗಕಾರಕ ಮಲಿನ ಗುಂಡಿಗಳಾಗಿವೆ
ಕೋಟಿ ಜೀವಗಳ ಒಡಲು ತಣಿಸಿದ್ದ ಕೆರೆಯಿಂದು
ತನ್ನ ಒಡಲಲ್ಲಿ ಕಸ-ಕಡ್ಡಿ ತಾಜ್ಯ ತುಂಬ್ಕೊಂಡು
ಜೀವಚ್ಛವವಾಗಿ ಮಲಗಿದೆ
ಹೂಳೆಂಬ ಮುಸುಕನ್ನು ಹೊದ್ಕೊಂಡು
ಕೆರೆಯ ಏರಿಯ ಮೇಲೆ ಕುರಿಮರಿ
ಮೇಯುವುದ ಕಂಡು ಬಣ್ಣಿಸಿದ ಕವಿಯಿಂದು
ಕೆರೆಗೂ ಏರಿಗೂ ವ್ಯತ್ಯಾಸ ಕಾಣದೇ
ಹುಡುಗರ ಚಂಡಾಟ ಕಂಡು ಕಳವಳಗೊಂಡ
ನಮ್ಮೇಲೆ ಮಳೆರಾಯ ಮುನಿಸಿಕೊಳ್ಳುವ ಮುನ್ನ,
ಕೆರೆ-ಕಟ್ಟೆಗಳು ಪೂರ್ತಿ ಪಾಳುಬೀಳುವ ಮುನ್ನ,
ಮಾನವ ದಾನವನಾಗುವ ಮುನ್ನ,
ಕೆರೆಗಳುಳಿಯಬೇಕು, ಗತಕಾಲಕ್ಕೆ ಮರಳಬೇಕು.
ಕೆರೆಯ ಒಡಲಲ್ಲಿ ಅಜೀರ್ಣವಾಗಿರುವ
ಜೀವ ಮಾರಕ ತಾಜ್ಯವನ್ನು ತೆಗೆಯಬೇಕು
ಹೂಳೆಂಬ ಹೊದಿಕೆಯನ್ನು ಕಿತ್ತು ಬಿಸಾಡಬೇಕು
ಜಲಮಾತೆ ಮೈದುಂಬಿ ಫಳಫಳಿಸಬೇಕು
ಸ್ವಾರ್ಥಕ್ಕೆ, ದುರಾಸೆಗೆ ಕೆರೆ-ಕಟ್ಟೆಗಳ ಬಲಿಕೊಟ್ಟು,
ಮಳೆಯಾಗದೇ, ಬೆಳೆಬಾರದೇ ಕಣ್ಬಾಯಿ ಬಿಟ್ಟು,
ಹಲುಬುವ ಮಾನವ ಕುಲ ಬದಲಾಗಬೇಕಿದೆ
ಕೆರೆಯ ಶವಪೆಟ್ಟಿಗೆಗೆ ಕೊನೆಮೊಳೆ ಹೊಡೆಯುವ ಮುಂಚೆ