ಈ ಜಲಾಶಯವನ್ನು ಸೃಷ್ಟಿಸಿದ ಮೇಲೂ ಬ್ರಹ್ಮದೇವನಿಗೆ ಸುಧೆಯನ್ನು ಸೃಷ್ಟಿಸುವ ಆವಶ್ಯಕತೆ ಏನಿತ್ತೋ ತಿಳಿಯದು. ಈ ಸರಸಿಯ ನೀರೇನು ಅಮೃತಕ್ಕಿಂತ ಕಮ್ಮಿಯೇ? ಇದೂ ಅಮೃತದಂತೆಯೆ ಎಲ್ಲ ಇಂದ್ರಿಯಗಳನ್ನು ತಣಿಸುತ್ತದೆ
ಬಾಣಭಟ್ಟನ ಸಂಸ್ಕೃತ ಗದ್ಯಕೃತಿ ’ಕಾದಂಬರಿ’ಯಲ್ಲಿ ಅಚ್ಛೋದ ಎನ್ನುವ ಸರೋವರದ ವರ್ಣನೆ ತುಂಬ ಪ್ರಸಿದ್ಧವಾದದ್ದು. ಗಾಢವಾದ ಪ್ರಕೃತಿಯ ಮಡಿಲಲ್ಲಿದ್ದ ಆ ಸರೋವರ ಕೆರೆಗಳಿಗೆ ಆದರ್ಶಪ್ರಾಯವಾದದ್ದು. ವಿದ್ವಾಂಸರಾದ ಬನ್ನಂಜೆ ಗೋವಿಂದಾಚಾರ್ಯರ ಕನ್ನಡಾನುವಾದದಲ್ಲಿ ಅಚ್ಛೋದ ಸರೋವರ ಹೀಗಿದೆ:
ಆ ತೋಪಿನ ನಡುವೆ ತಿಳಿನೀರಿನ ಒಂದು ಕೊಳ. ಅಚ್ಛೋದ ಎಂದು ಅದರ ಹೆಸರು. ಕಂಡಾಗಲೆ ಬಾಯಾರಿಕೆಯನ್ನು ತಣಿಸುವ ಅತಿಸುಂದರವಾದ ಈ ಜಲಾಶಯ ಚಂದ್ರಾಪೀಡ(ಕೃತಿಯ ಹೀರೋ)ನ ಕಣ್ಣಿಗೆ ಬಿತ್ತು.
ಓಹ್! ಏನು ಅದರ ಚೆಲುವು. ಮೂಜಗದ ಚೆಲುವನ್ನು ಪ್ರತಿಬಿಂಬಿಸುವ ರನ್ನಗನ್ನಡಿ. ಸ್ಫಟಿಕದಿಂದ ಕೆತ್ತಿದ ಭೂಮಿ ತಾಯಿಯ ಪ್ರಾಂಗಣ. ಕಡಲನೀರು ಹರಿಯುವ ಕಾಲುವೆದಾರಿ. ದಿಕ್ಕುಗಳೆ ನೀರಾಗಿ ನಿಂತ ನೆಲೆ. ಮುಗಿಲೇ ಇಳಿದುಬಂದ ಸೆಲೆ. ಕೈಲಾಸವೆ ಕರಗಿ ಕೆರೆಯಾದಂತೆ. ಹಿಮಗಿರಿಯೆ ಹರಿದುಬಂದಂತೆ. ಬೆಳದಿಂಗಳೆ ನೀರಾಗಿ ಬಂದಂತೆ. ಹರನ ಅಟ್ಟಹಾಸವೇ ರಸವಾಗಿ ಹರಿದಂತೆ. ಮೂಜಗದ ಸುಕೃತವೆ ಸರೋವರದ ರೂಪ ತಳೆದಂತೆ. ವೈಡೂರ್ಯದ ಗಿರಿಯೆ ನೀರಾಗಿ ನಿಂತಂತೆ. ಶರತ್ಕಾಲದ ಬೆಳ್ಮುಗಿಲ ಮಾಲೆಯೆಲ್ಲ ದ್ರವವಾಗಿ ಒಂದೆಡೆ ಕಲೆತಂತೆ.
ಇದು ವರುಣದೇವನ ಕನ್ನಡಿಮನೆ. ಮುನಿಗಳ ಮನಸ್ಸನ್ನೆ, ಸಜ್ಜನರ ಸಜ್ಜನಿಕೆಯನ್ನೆ, ಮುತ್ತುಗಳ ಮಿಂಚನ್ನೆ ಕರಗಿಸಿ ಕೆರೆಯಾಗಿಸಿದಂಥ ಸೊಬಗು. ಅಷ್ಟೇ ನಿರ್ಮಲ ಅದರ ಸಲಿಲ. ತುಂಬುನೀರಿನ ಕೊಳವಾದರೂ ಅದರ ತಳದ ತನಕವೂ ಎಲ್ಲ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಬತ್ತಿದ ಕೆರೆಯೆ ಎಂದು ಯಾರಾದರೂ ಭ್ರಮಿಸಬೇಕು. ಅಷ್ಟೇ ಪಾರದರ್ಶಕ. ನಸೆಗಾಳಿಗೆ ಚಿಮ್ಮಿದ ನೀರ ತುಂತುರು ಸುತ್ತ ಇಂದ್ರಚಾಪವನ್ನು ನಿರ್ಮಿಸಿತ್ತು. ಅದರ ತಿಳಿನೀರಿನಲ್ಲಿ ಸುತ್ತಲಿನ ಸಮಸ್ತಲೋಕದ ಪಡಿನೆಳಲು ಬಿದ್ದಿತ್ತು. ನಾರಾಯಣನಂತೆ ಈ ಸರಸಿ ಕೂಡ ಬಿರಿದ ತಾವರೆ ಹೊತ್ತ ಒಡಲಿನಲ್ಲಿ ಇಡಿಯ ಜಗವನ್ನು ಧರಿಸಿದೆಯೇನೊ! ಪಕ್ಕದ ಕೈಲಾಸದಿಂದ ಭಗವಾನ್ ಶಂಕರ ಮೀಯುವುದಕ್ಕೆಂದು ಇಲ್ಲಿಗೇ ಬರುತ್ತಿರಬೇಕು. ಅವನ ಸ್ನಾನದ ಕೋಲಾಹಲದಲ್ಲಿ ಚಲಿತವಾದ ತಲೆಮುಡಿಯ ಚಂದ್ರಕಲೆಯಿಂದ ಸುರಿದ ಅಮೃತರಸ ಈ ನೀರಿನೊಡನೆ ಬೆರೆತಿರಬೇಕು. ಹರನ ಎಡಮೈಯಲ್ಲಿ ಬೆರೆತ ಪಾರ್ವತಿಯ ಕೆನ್ನೆಯನ್ನು ತೊಳೆದಾಗ ಹರಿದ ಲಾವಣ್ಯರಸದಂತೆ ಸೊಗಸಲ್ಲವೆ ಆ ಅಮೃತರಸ!
ತಡಿಯಲ್ಲಿ ಬೆಳೆದ ತಮಾಲದ ಪಡಿನೆಳಲು ಬಿದ್ದು ಒಳಗೆಲ್ಲ ಕತ್ತಲು. ಪಾತಾಳಕ್ಕೆ ತೆರಳಲು ತೆರೆದಿಟ್ಟ ಬಾಗಿಲೊ ಎನ್ನುವಂಥ ಗಂಭೀರವಾದ ನೋಟ. ಹಗಲಲ್ಲೆ ಇರುಳಿನ ಭ್ರಮೆಯಿಂದ ಜಕ್ಕವಕ್ಕಿಗಳು ತಾವರೆಬಳ್ಳಿಯನ್ನು ತೊರೆದು ದೂರಸರಿದಿವೆ. ಬ್ರಹ್ಮದೇವನು ತನ್ನ ಕಮಂಡಲುವಿಗೆ ಇದರ ಪವಿತ್ರವಾದ ಜಲವನ್ನೇ ತುಂಬುತ್ತಾನೆ. ವಾಲಖಿಲ್ಯರು ತಮ್ಮ ಸಂಧ್ಯೋಪಾಸನೆಯನ್ನು ಇಲ್ಲೆ ಮಾಡುತ್ತಾರೆ. ಸಾವಿತ್ರಿ ದೇವರ ಪೂಜೆಗೆಂದು ಈ ಕೆರೆಯ ತಾವರೆಗಳನ್ನೇ ಕೊಯ್ದುಕೊಂಡು ಹೋಗುತ್ತಾಳೆ. ಸಾವಿರ ಬಾರಿ ಸಪ್ತರ್ಷಿಗಳ ಸ್ನಾನದಿಂದ ಪವಿತ್ರವಾದ ನೀರು ಇದು. ಕಲ್ಪಲತೆಯ ನಾರುಡೆಯನ್ನು ಸಿದ್ಧಾಂಗನೆಯರು ಇಲ್ಲೇ ಒಗೆಯುತ್ತಾರೆ. ಕುಬೇರನ ಅಂತಃಪುರದ ಹೆಣ್ಮಕ್ಕಳು ಜಲಕ್ರೀಡೆಗೆಂದು ಇಲ್ಲೆ ಬರುತ್ತಾರೆ. ಮನ್ಮಥನ ಬಿಲ್ಲಿನ ಸುಳಿಯಂತಿರುವ ಅವರ ಹೊಕ್ಕುಳ ಕುಳಿ ಇದರ ನೀರನ್ನು ಕುಡಿಯುತ್ತಿರುತ್ತದೆ.
ಕೆಲವೆಡೆ ವರುಣನ ಹಂಸಗಳು ಇದರ ತಾವರೆಯ ಜೇನನ್ನು ಹೀರುತ್ತಿವೆ. ಕೆಲವೆಡೆ ದಿಗ್ಗಜಗಳ ಮಜ್ಜನದಿಂದ ತಾವರೆಯ ನಾಳವೆಲ್ಲ ಜರ್ಜರಿತವಾಗಿದೆ. ಕೆಲವೆಡೆ ಶಂಕರವೃಷಭದ ಕೋಡಿನ ತೀಟೆಗೆ ತಡಿಯ ಶಿಲಾಖಂಡಗಳು ತುಂಡಾಗಿ ಬಿದ್ದಿವೆ. ಕೆಲವೆಡೆ ಯಮನ ಕೋಣ ಕೋಡಿನಿಂದ ತಿವಿದು ಚೆಲ್ಲಿದ ಬುರುಗು ಹರವಿ ನಿಂತಿದೆ. ಕೆಲವೆಡೆ ಐರಾವತದ ದಾಡೆಯ ಪೀಡೆಗೆ ನೈದಿಲೆಯ ಬಳ್ಳಿಯೆ ಮುರಿದು ಬಿದ್ದಿದೆ.
ನಿರಂತರವಾಗಿ ಏಳುವ ಕಿರುದೆರೆಗಳು. ವಿರಹಿಣಿಯಂತೆ ತಾವರೆಯ ನಾಳದ ಬಳೆಗಳ ಅಲಂಕಾರ. ಮೀನು, ಮೊಸಳೆ, ಆಮೆಗಳಿಂದ ಆವೃತವಾದ ಗಂಭೀರತೆ. ತಡಿಯಲ್ಲಿ ಕೂಗುತ್ತಿರುವ ಕೊಕ್ಕರೆಯ ಕಿರಿಕಿರಿ. ಎಲ್ಲೆಡೆಯೂ ಪಕ್ಕಗಳನ್ನು ಬಡಿದುಕೊಂಡು ಈಜಾಡುವ ಅರಸಂಚೆಗಳ ಗಲಿಬಿಲಿ.
ಪಕ್ಕದಲ್ಲಿ ನಿಂತ ನವಿಲುಗಳು ಕತ್ತು ಬಗ್ಗಿಸಿ ನೀರು ಕುಡಿಯುತ್ತಿವೆ. ತಡಿಯ ಈಚಲ ಮರವನ್ನೇರಿ ನಿಂತ ಮಂಗಗಳು ನೀರಿಗೆ ನೆಗೆದು ಆಟ ಆಡುತ್ತಿವೆ. ನೀರಿನಲ್ಲೆಲ್ಲ ಮೊಸಳೆಗಳು, ಮೀನುಗಳು ಓಡಾಡುತ್ತಿವೆ.
ಮೇಲೆಲ್ಲ ಅರಳಿನಿಂತ ತಾವರೆಹೂಗಳು; ತುಂಬಿವಿಂಡು ಝೇಂಕರಿಸುತ್ತ ಸುತ್ತುವರಿದಿರುವ ನೈದಿಲೆಯ ಬಳ್ಳಿಗಳು.
ಕಾಡಾನೆಗಳೆಲ್ಲ ನೀರು ಕುಡಿಯುವುದು ಇಲ್ಲೆ. ಮಲಯಾದ್ರಿಯಂತೆ ಚಂದನಶೀತಲವಾದ ತಂಗಾಳಿಯನ್ನು ಬೀಸುವ ಕಾಡು ಇದನ್ನು ಸುತ್ತುವರಿದಿದೆ. ಇದರ ಹರವು ಕೂಡ ಅಂಥದೆ. ಇದರ ತುದಿಯೆಲ್ಲಿ ಮೊದಲೆಲ್ಲಿ ಎಂದು ಯಾರೂ ಕಂಡಿದ್ದವರಿಲ್ಲ.
* * * *
ಕೆರೆಯನ್ನು ಕಂಡಾಗಲೆ ಚಂಡ್ರಾಪೀಡನ ಬಳಲಿಕೆಯೆಲ್ಲ ಪರಿಹಾರವಾಯಿತು. ಅವನ ಮನಸ್ಸು ಯೋಚನೆಯಲ್ಲಿ ಲೀನವಾಯಿತು.
“ಕಿಂಕರರ ಮಿಥುನದ ಬೆನ್ನಟ್ಟಿದ್ದು ನಿಷ್ಪಲವಾಯಿತು ಎಂದುಕೊಂಡಿದ್ದೆ. ಆದರೆ ಈ ಸರಸಿಯನ್ನು ಕಂಡಾಗ ನನ್ನ ಶ್ರಮವೆಲ್ಲ ಸಾರ್ಥಕವೆನ್ನಿಸಿದೆ. ನನ್ನ ಕಣ್ಣು ಇಂದು ಸಫಲವಾಯಿತು. ಕಾಣಬೇಕಾದ್ದನ್ನು ಕಂಡಂತಾಯಿತು. ನೋಡಬೇಕಾದ ವಸ್ತುಗಳಲ್ಲೆಲ್ಲ ರಮಣೀಯವಾದ ವಸ್ತುಗಳಲ್ಲೆಲ್ಲ ಸರ್ವೋತ್ಕೃರ್ಷವಾದ ವಸ್ತುವನ್ನೇ ಕಂಡಂತಾಯಿತು. ಇದಕ್ಕಿಂತ ಹೆಚ್ಚು ಆಹ್ಲಾದಕರವಾದ, ಪ್ರಿಯವಾದ ನೋಟ ಇನ್ನೊಂದು ಇರಲಾರದು.
“ಈ ಜಲಾಶಯವನ್ನು ಸೃಷ್ಟಿಸಿದ ಮೇಲೂ ಬ್ರಹ್ಮದೇವನಿಗೆ ಸುಧೆಯನ್ನು ಸೃಷ್ಟಿಸುವ ಆವಶ್ಯಕತೆ ಏನಿತ್ತೋ ತಿಳಿಯದು. ಈ ಸರಸಿಯ ನೀರೇನು ಅಮೃತಕ್ಕಿಂತ ಕಮ್ಮಿಯೇ? ಇದೂ ಅಮೃತದಂತೆಯೆ ಎಲ್ಲ ಇಂದ್ರಿಯಗಳನ್ನು ತಣಿಸುತ್ತದೆ; ತಿಳಿಯಾಗಿ ಕಣ್ಣಿಗೂ ಸುಖಕರ; ತಂಪಾಗಿ ಸ್ಪರ್ಶಕ್ಕೂ ಸುಖಕರ. ಕಮಲದ ಕಂಪು ಮೂಗನ್ನು ಮುತ್ತುತ್ತದೆ. ಹಂಸಗಳ ಸಂಗೀತದಿಂದ ಕಿವಿಗೂ ಇಂಪು. ಸವಿಯಂತೂ ನಾಲಿಗೆ ಚಪ್ಪರಿಸುವಂಥದು.
“ನನಗೆ ನಿಶ್ಚಯವಿದೆ: ಈ ಜಲಾಶಯದ ಮೋಹದಿಂದಲೆ ಭಗವಾನ್ ಶಂಕರ ಕೈಲಾಸದಲ್ಲಿ ತಳವೂರಿದ್ದಾನೆ. ನಾರಾಯಣನಿಗೆ ನೀರಿನಲ್ಲೇ ಮಲಗುವುದೊಂದು ಹುಚ್ಚು. ಆದರೆ ಅಮೃತದಂಥ ಈ ನೀರನ್ನು ಬಿಟ್ಟು ಅವನು ಉಪ್ಪುನೀರ ಕಡಲಲ್ಲಿ ಪವಡಿಸಿದ್ದಾನೆ. ಇದಕ್ಕೆ ಏನೆನ್ನಬೇಕು!
“ಪ್ರಾಯಃ ಈ ಸರಸಿ ಸೃಷ್ಟಿಯ ಆದಿಯಲ್ಲಿ ಇದ್ದಿಲ್ಲ. ಅದರಿಂದಲೇ ಆದಿವರಾಹನ ಕೋರೆದಾಡೆಗೆ ಹೆದರಿದ ಭೂಮಿ ಕಡಲನೀರಲ್ಲಿ ಅಡಗಿ ನಿಂತಳು. ಅಗಸ್ತ್ಯಮುನಿ ಕುಡಿದು ಬರಡಾದ ಕಡಲಲ್ಲಿ ಭೂಮಿಯನ್ನು ಹುಡುಕಿ ಮೇಲೆತ್ತುವುದು ವರಾಹನಿಗೆ ಸುಲಭವಾಯಿತು. ಪಾತಾಳಕ್ಕಿಂತಲೂ ಆಳವಾದ ಈ ಸರಸಿಯ ನೀರಲ್ಲಿ ಭೂಮಿ ಅಡಗಿರಬೇಕಿತ್ತು! ಆಗ ಒಬ್ಬ ಅಲ್ಲ; ಸಾವಿರ ಮಂದಿ ವರಾಹರು ಬಂದರೂ ಭೂಮಿಯನ್ನು ಹುಡುಕುವುದು ಕನಸಿನ ಮಾತಾಗುತ್ತಿತ್ತು!
“ಪ್ರಳಯಕಾಲದ ಮೋಡಗಳು ಈ ಕೆರೆಯ ನೀರನ್ನೆ ಹೊತ್ತು ಸಾಗುತ್ತಿರಬೇಕು. ಅದರಿಂದಲೆ ಅವು ಮುಗಿಲನ್ನೆಲ್ಲ ಮುತ್ತಿ ಜಗತ್ತನ್ನೆಲ್ಲ ಮುಳುಗಿಸುವುದು ಸಾಧ್ಯವಾಗುತ್ತದೆ. ಸೃಷ್ಟಿಯ ಮುನ್ನ ಬ್ರಹ್ಮಾಂಡವೆಲ್ಲ ನೀರೇ ನೀರಾಗಿತ್ತು ಎಂದು ಶಾಸ್ತ್ರಗಳಲ್ಲಿ ಓದಿದ್ದೇನೆ. ನನಗನಿಸುತ್ತಿದೆ: ಆ ಆದಿಕಾಲದ ಸಲಿಲವೆ ಒಟ್ಟಾಗಿ ಈ ಸರಸಿಯ ರೂಪ ತಾಳಿದೆ.”
ಹೀಗೆ ಯೋಚಿಸುತ್ತ ಅವನು ಸರಸಿಯ ದಕ್ಷಿಣ ತೀರವನ್ನು ಸಮೀಪಿಸಿದ. ತೀರದಲ್ಲೆಲ್ಲ ಗಡಸುಕಲ್ಲುಗಳಿಂದ ಬೆರೆತ ಉಸುಕು. ಅಲ್ಲಲ್ಲಿ ವಿದ್ಯಾಧರರು ಪೂಜೆಗಾಗಿ ಮಾಡಿಟ್ಟ ಮಳಲು ಶಿವಲಿಂಗಗಳು; ಅವುಗಳಲ್ಲೆಲ್ಲ ತಾವರೆಯ ಹೂವುಗಳು. ಕೆಲವೆಡೆ ಅರುಂಧತಿಯಿತ್ತ ಅರ್ಘ್ಯಜಲದಿಂದ ಚಿಮ್ಮಿದ ಕೆಂದಾವರೆಗಳು. ತಡಿಯ ಬಂಡೆಯಲ್ಲಿ ಕುಳಿತ ಜಲಮಾನವರು ಬಿಸಿಲ ಬೆಳಕನ್ನು ಸವಿಯುತ್ತಿದ್ದಾರೆ. ಪಕ್ಕದ ಕೈಲಾಸದಿಂದ ಮೀಯಲೆಂದು ಬಂದ ಮಾತೃಕಾ ದೇವಿಯರ ಹೆಜ್ಜೆಗುರುತು ಮಳಲಲ್ಲಿ ಮೂಡಿದೆ. ಮಿಂದು ಮೇಲೆದ್ದ ಶಿವಗಣಗಳು ಮೈಗೆ ಬಳಿದುಕೊಂಡ ಭಸ್ಮ ನೆಲದ ಮೇಲೆಲ್ಲ ಚದರಿದೆ. ಮೀಯಲೆಂದು ಇಳಿದ ಗಣಪತಿಯ ಗಂಡದಿಂದ ಸುರಿದ ಮದಜಲದಿಂದ ತಡಿಯ ಮಳಲು ಮಿಂದಿದೆ. ಕಾತ್ಯಾಯನಿಯ ಸಿಂಹ ಕೂಡ ಬಾಯಾರಿದಾಗ ಈ ಕೆರೆಯ ಕಡೆಗೆ ಬರುತ್ತದೆ ಎನ್ನುವುದಕ್ಕೆ ತಡಿಯ ಮಳಲಲ್ಲಿ ಮೂಡಿದ ಭಾರೀ ಗಾತ್ರದ ಹೆಜ್ಜೆಗುರುತುಗಳೇ ಸಾಕ್ಷಿ.