
ಶಿವರಾಮ ಕಾರಂತರ ಕಾದಂಬರಿಗಳಲ್ಲಿ ವೃದ್ಧೆಯರಿಗೆ ವಿಶೇ಼ಷವಾದ ಒಂದು ಸ್ಥಾನವಿದೆ; ಮಾಗಿದ ಅನುಭವದ ಪ್ರತಿರೂಪಗಳಾಗಿ ಅವರು ಅಲ್ಲಿ ಬರುತ್ತಾರೆ. ದೇವನೂರು ಮಹಾದೇವ ಅವರ ಪ್ರಮುಖ ಕೃತಿ (ಕಾದಂಬರಿ) ’ಕುಸುಮಬಾಲೆ’ಯಲ್ಲಿ ಬರುವ ಜೋಗತಿಯರದ್ದು ಕೂಡ ಮಹತ್ತ್ವದ ಸ್ಥಾನವಾಗಿದೆ. ಇವು ಅಕಸ್ಮಿಕಗಳಲ್ಲ. ನಮ್ಮ ಜೀವನದಲ್ಲಿ, ಅದರ ಏಳು-ಬೀಳುಗಳಲ್ಲಿ ಮತ್ತು ಅದೇ ರೀತಿ ಒಂದು ತಲೆಮಾರಿನ ಜ್ಞಾನವನ್ನು ಸಂಗ್ರಹಿಸಿ, ಮುಂದಿನ ತಲೆಮಾರಿಗೆ ಹಸ್ತಾಂತರಿಸುವುದರಲ್ಲಿ ಮುದುಕಿಯರದ್ದು ಪ್ರಮುಖ ಪಾತ್ರವಾಗಿರುತ್ತದೆ. ಅವಳು ಸೊಸೆಯೊಂದಿಗೆ ಜಗಳಾಡಬಹುದು (ಅತ್ತೆ- ಸೊಸೆ ಜಗಳ ಸಾರ್ವತ್ರಿಕ ಇರಲೂಬಹುದು). ಆದರೆ ಆಕೆ ಮಗನನ್ನು ಬಿಟ್ಟಿರಲಾರಳು. ಮೊಮ್ಮಕ್ಕಳು ಆಗಲೇ ಅವರ ಮಡಿಲನ್ನೇರಿ ಕುಳಿತಿರುತ್ತಾರೆ. ಅವರಿಗೆ ಕಥೆ ಹೇಳಿ ಬೆಳೆಸುವ ಹೊಣೆ ಇವಳದ್ದೇ. ’ಅಜ್ಜಿಕತೆ’ ಎಂಬುದನ್ನು ನಾವು ಕೇಳಿದ್ದೇವೆಯೇ ಹೊರತು ಅಜ್ಜನ ಕತೆ ಎಂಬುದಿಲ್ಲ.
ಇನ್ನೊಂದು ಬಹಳ ಮುಖ್ಯವಾದ ಅಂಶವೆಂದರೆ, ಆಕೆ ನಿರಕ್ಷರಿಯಾದದ್ದು ಜ್ಞಾನವನ್ನು ದಾಟಿಸುವ ಅವಳ ಈ ಕೆಲಸಕ್ಕೆ ಅಡ್ಡಿಯಾದುದಿಲ್ಲ. ಒಳ್ಳೆಯ ಬನಿಯ ಗ್ರಾಮೀಣ ಭಾಷೆ ಮತ್ತು ಆಡುಮಾತನ್ನು ಅವರಿಂದಲೇ ಕೇಳಬೇಕು. ಅದೇನು ಗಾದೆಗಳು, ನುಡಿಗಟ್ಟುಗಳು! ಜಾನಪದ ಸಾಹಿತ್ಯಕ್ಕೆ ಈಗಾಗಲೇ ದೊಡ್ಡ ಮರ್ಯಾದೆ ಸಂದಿದೆ. ಸಾಹಿತ್ಯದಂತೆಯೇ ತಲೆಮಾರುಗಳಿಂದ ಬಂದ ಅಮೂಲ್ಯ ಜ್ಞಾನವನ್ನು ಈ ಹಿರಿಯಜೀವಗಳು ಮುಂದಿನ ಪೀಳಿಗೆಗೆ ಹಸ್ತಾಂತರಿಸುತ್ತಾ ಬಂದಿವೆ. ಅಂತಹ ಅಮೂಲ್ಯ ಜ್ಞಾನದ ಒಂದಷ್ಟು ಭಾಗವನ್ನು ಪ್ರಸ್ತುತ ಪುಸ್ತಕ ’ಪುಟ್ಟೀರಮ್ಮನ ಪುರಾಣ’ದಲ್ಲಿ ಕಾಣುತ್ತೇವೆ. ಚಾಮರಾಜನಗರ ಜಿಲ್ಲೆಯ ಪಣ್ಯದಹುಂಡಿ ಗ್ರಾಮದ ಶ್ರೀಮತಿ ಪುಟ್ಟೀರಮ್ಮ ಇದರ ಕಥಾನಾಯಕಿ. ಅವರ ಜ್ಞಾನಸಂಪತ್ತನ್ನು ಲೇಖಕರಾದ ವಿ. ಗಾಯತ್ರಿ ಮತ್ತು ಎನ್. ಶಿವಲಿಂಗೇಗೌಡ ಅವರು ಇಲ್ಲಿ ದಾಖಲಿಸಿದ್ದಾರೆ. ಪುಸ್ತಕದ ಉಪಶೀರ್ಷಿಕೆ ಹೇಳುವಂತೆ ಮುಖ್ಯವಾಗಿ ಮಿಶ್ರಬೆಳೆ ಮತ್ತು ಬೆರಕೆಸೊಪ್ಪಿನ ವಿಸ್ಮಯಲೋಕ ಇಲ್ಲಿ ಅನಾವರಣಗೊಂಡಿದೆ. ಇನ್ಸ್ಟಿಟ್ಯೂಟ್ ಫಾರ್ ಕಲ್ಚರಲ್ ರಿಸರ್ಚ್ ಆಂಡ್ ಆಕ್ಷನ್ (ಇಕ್ರಾ) ಎಂಬ ಸಂಸ್ಥೆ ಇದನ್ನು ಪ್ರಕಟಿಸಿದೆ. ಪುಟಗಳು ಎಪ್ಪತ್ತೈದೇ ಆದರೂ ಇಲ್ಲಿ ಸಂಗ್ರಹವಾಗಿರುವ ಜ್ಞಾನಸಂಪತ್ತು ಅಮೂಲ್ಯವಾದದ್ದು ಮತ್ತು ಅಪೂರ್ವವಾದದ್ದು.
ಪುಟ್ಟೀರಮ್ಮ ಉವಾಚ
`ಪುಟ್ಟೀರಮ್ಮನ ಪುರಾಣ’ದಲ್ಲಿ ಅನುಭವ(ಅದನ್ನು ಆಕೆ ಅನುಭೋಗ ಎನ್ನುತ್ತಾರೆ)ದ ನುಡಿಮುತ್ತುಗಳಿಗೆ ಅಗ್ರಸ್ಥಾನ. ಆಕೆಯ ಕೆಲವು ಅನುಭವದ ಮಾತುಗಳು ಹೀಗಿವೆ:
- ಮನೆಗೆ ಬೇಕಾಗೋ ಪ್ರತಿಯೊಂದೂ ಪದಾರ್ಥಾನೂ ನಮಗೆ ಹೊಲದಲ್ಲೇ ಸಿಕ್ಕಬೇಕು; ಆ ಥರ ಬಿಕ್ಕತೀವಿ.
- ಎಷ್ಟು ಥರದ ಬೆಳೆ ಬೆಳೀತೀವೋ ಅಷ್ಟು ನಮಗೆ ಒಳ್ಳೆದಲ್ಲವಾ? ತೊಗರಿಕಾಳು ಒಂದೇ ಬೇಳೆಸಾರು ಮಾಡ್ಕಂಡು ವ?ಪೂರ್ತಿ ಊಟ ಮಾಡೀಯ? ಆರೋಗ್ಯ ಹಾಳಾಗಿಹೋಗುತ್ತೆ. ಅವರೆಕಾಳು, ಅಲಸಂದಿ, ಹುರುಳಿ, ತಡಗುಣಿ ಎಲ್ಲ ಒಂದೊಂದು ದಿನ ಇರಬೇಕು. ಇವೆಲ್ಲ ಹೆಚ್ಚು ಕಡಮೆ ಮೇಲಿಗೆ ದಕ್ತವೆ. ಹೊಲಕ್ಕೆ ಎಲೆ ಉದುರ್ಸ್ತವೆ.
- ಈಗಲೂ ಯಾರಾರ (ಬೀಜ) ಕೇಳೀರೆ ’ಪುಟ್ಟಕ್ಕನ ಕೇಳಿ ಕೊಡ್ತಾಳ’ ಅಂತಾರೆ. ಭೂಮ್ತಾಯಿಗೆ ಇಲ್ಲ ಅನ್ನಕ್ಕಾದ್ದಾ (ಅನ್ನಕ್ಕಾಗ್ತದಾ)? ’ಒಂದು ಎರಡು ಸಾಲಿಗೆ ಆಗತ್ತ, ತಕಳಿ’ ಅಂತ ಕೊಡದು. ದುಡ್ಡಿಗೆ ಅಂತ ಕೊಟ್ಟುಬಿಟ್ಟರೆ ನಮ್ಮ ಸಾರಿಗೆ ಇಲ್ಲದಂಗೆ ಆಯ್ತದೆ. ಬಿತ್ತನೆಗೆ ಇಲ್ಲ ಅನ್ನಬಾರದು; ಭೂಮ್ತಾಯಿಗೆ ಹಾಕದು ಅಂದುಬಿಟ್ಟು ಎರಡು ಪಾವಾದರೂ ಕೊಡದು.
- ನಮ್ಮ ಜಮೀನು ಎಷ್ಟು ಫಲವತ್ತಾದರೆ ಅಷ್ಟು ಆದಾಯ ಬತ್ತದೆ ಕಣಪ್ಪ. ಜಮೀನು ಫಲವತ್ತ ಮಾಡ್ಕಬೇಕು. ಜಮೀನಿಗೆ ಕಾಳುಕಡಿ ಬಿತ್ತದೆ ಬರೀ ಜೋಳ ಇಟ್ಟುಬಿಟ್ಟರೆ ಜಮೀನು ಫಲವತ್ತಾದ್ದಾ?
- ನಾವೆ? ಬೀಜ ಜ್ವಾಪಾನ ಮಾಡ್ತೇವೋ ಅ? ಆದಾಯ ಹೆಚ್ಚು ಮಾಡ್ಬಹುದು.
- ಈ ಬೆರಕೆಸೊಪ್ಪು ಮಾರುಕಟ್ಟೇಲಿ ಸಿಕ್ಕುವುದಿಲ್ಲ. ಒಂದು ಹದ ಮಳೆ ಹೂದಂಗೆನೇ (ಹೊಯ್ದ ಹಾಗೇ) ನಮ್ಮ ಬೇಲೀಲಿ ಹತ್ತಾರು ಸೊಪ್ಪು ಹುಟ್ಕಂತವೆ. ನೂರಾರು ಜಾತಿ ಸೊಪ್ಪಿದ್ದದ್ದು ಕಣವ್ವ. ಮಾರುವವರಿಗೆ ಇದೆಲ್ಲ ಎಲ್ಲಿ ಗೊತ್ತು? ಇಂಥ ಸೊಪ್ಪು ಇಂಥ ಜಾತಿ ಅನ್ನದು ಗೊತ್ತೇ ಇಲ್ಲ ಅವರಿಗೆ!
- ಒಂದು ಸಲ ಹೊಲಕ್ಕೆ ಹೋದರೆ ನಾನು ೧೦-೧೫ ಜಾತಿ ಸೊಪ್ಪು ತರ್ತೀನಿ. ಈಗ ಇಲ್ಲೆ ಮನೆ ಹತ್ರ ಎದ್ದು ಹೋದ್ರೆ ೮-೯ ಜಾತಿ ಸೊಪ್ಪು ತರ್ತೀನಿ. ವಾರಕ್ಕೆ ಮೂರು ದಿನವಾದ್ರೂ ಬೆರಕೆಸೊಪ್ಪು ಮಾಡ್ತೀವಿ. ಮಾಂಸದ ಊಟದಲ್ಲಿ ಎ? ಪ್ರಮಾಣದ ಶಕ್ತಿ ದೊರಕುತ್ತೋ ಅ? ಶಕ್ತಿ ಬೆರಕೆಸೊಪ್ಪಿನಲ್ಲಿ ಸಿಗ್ತದೆ. ಗರ್ಭಿಣಿಯರಿಗೆ ಟಾನಿಕ್ ಮತ್ತು ಮಾತ್ರೆಯ ಬದಲು ವಾರಕ್ಕೆ ೨-೩ ಸಲ ಬೆರಕೆಸೊಪ್ಪು ಉಪಯೋಗಿಸಿದರೆ ಮಗು ಮತ್ತು ತಾಯಿ ಚೆನ್ನಾಗಿ ಆರೋಗ್ಯವಂತರಾಗಿರುತ್ತಾರೆ. ಡಾಕ್ಟರ್ಗಳೂ ಯೋಳ್ತಾರೆ ಸೊಪ್ಪಿನ ಸಾರು ಊಟ ಮಾಡಿ ಅಂತ. ಸೊಪ್ಪು ಕುಯ್ಯಕ್ಕೆ ಬಂದದಾ ಅವರಿಗೆ? ಸೊಪ್ಪು ತಿನ್ನಿ ಅಂತ ಯೋಳ್ತಾರೆ ಅಷ್ಟೆ.
- ಬೆರಕೆಸೊಪ್ಪಿನ ಸಾರಿನಷ್ಟೆ ಉತ್ತಮ ನಿಮ್ಮ ಮಾಂಸದ ಸಾರೂ ಇಲ್ಲ.
ಸೊಪ್ಪಿನ ಸಾರು ಊಟ ಮಾಡಿದಾಗ ಶರೀರ ಹಗುರವಾಗಿರುತ್ತೆ, ಚೆನ್ನಾಗಿ ಹಸಿವಾಗುತ್ತೆ, ಚೆನ್ನಾಗಿ ಹೊಟ್ಟೆಯೂ ಕಳೆಯುತ್ತೆ, ಲವಲವಿಕೆಯಾಗಿ ಇರ್ತೀವಿ. ಕಾಳುಕಡಿ, ಬೇಳೆ, ಮಾಂಸ ಎಲ್ಲ ತಿಂದಾಗ ಹೊಟ್ಟೆನೋವು ಬರುತ್ತೆ; ಒಂಥರಾ ಮಂಕು. ಇದು (ಬೆರಕೆ ಸೊಪ್ಪು) ತಿಂದರೆ ಲವಲವಿಕೆ. ಶರೀರ ಲವಲವಿಕೆಯಾದಾಗ ಬುದ್ಧಿ ತಾನಾಗೇ ಚುರುಕಾಗುತ್ತೆ. - ಎಲ್ಲದಕ್ಕೂ ಮಳೆ ಬೇಕೇ ಬೇಕು. ಮಳೆ ಬಿದ್ದ ಮೇಲೆ ಎಲ್ಲ ಹುಟ್ಟಾದು.
- ಬಯಲಲ್ಲಿ ಅಷ್ಟು ಥರದ ಸೊಪ್ಪು ಭೂಮ್ತಾಯೇ ಹಾಕ್ತಾಳೆ ಕಣಪ್ಪ. ಮಳೆನೀರಿನಲ್ಲೇ ಸೊಪ್ಪಿನ ಬಿತ್ತ ಹರಡದು. ನೀರು ಮುಂದ್ಕೆ ಹೋತದೆ; ಬೀಜ ಭೂಮೀಲಿ ಕುಂತ್ಕತದೆ. ಭೂಮಿತಾಯಿ ಚಿಗುರ್ಸ್ತಾಳೆ. ದನಿಗೆ (ದನಕ್ಕೆ) ಸೊಪ್ಪು ಮೇಯಿಸ್ತೀವಲ್ಲ. ತೊಪ್ಪೆ(ಸೆಗಣಿ)ಯಿಂದ್ಲೂ ಬೀಜ ಹೋಗಿ ಹೊಲದಲ್ಲಿ ಹುಟ್ತದೆ. ಪಾಂಡವರ ಕಾಲದಿಂದ್ಲೂ ಭೂಮ್ತಾಯಿ ಈ ಬೀಜ ಎಲ್ಲ ಕಾಪಾಡ್ತಾವ್ಳೆ.
- ಸೊಪ್ಪು ಕುಯ್ಯಕ್ಕೆ ಒಂದು ಕ್ರಮ ಇದೆ. ಪ್ರತಿಯೊಂದು ಸೊಪ್ಪನ್ನೂ ಕುಡೀನೇ ಮುರ್ಕಳದು. ಬೇರು ಸಮೇತ ಯಾವುದನ್ನೂ ಕೀಳಲ್ಲ. ಕಳೆಬಿಟ್ಟು ಉಳಿದ ಯಾವುದನ್ನೂ ನಾವು ಬೇರು ಸಮೇತ ಕೀಳಲ್ಲ. ಅದು ಮತ್ತೆ ಚಿಗುರಿ ಬರಬೇಕಲ್ಲ! ನಮ್ಮಂಗೆ ಇನ್ಯಾರೋ ಅದನ್ನ ಕುಯ್ಯಬೇಕಲ್ಲ!
- ಈಗ ನಾನು ಕಷ್ಟಪಟ್ಟು ೩೦-೪೦ ಥರದ ಸೊಪ್ಪು ತಂದು ಯಾರೋ ಕಾಸು ಕೊಡ್ತಾರೆ ಅಂದ್ಬುಟ್ಟು ಕೊಟ್ಟು ಬಿಡಲ್ಲ. ಇದೆಲ್ಲ ನಮ್ಮ ಮಕ್ಕಳಿಗೆ ಶಕ್ತಿ ಬರದು. ಕಾಡೆಲ್ಲ ತಿರುಗಿ ಕುಯ್ಕಂಬರ್ತೀವಿ. ಅವರಿಗೆ ಕಾಸಿಗೆ ಕೊಟ್ಟೇವಾ ನಾವು? ಕೊಡಲ್ಲ. ಇದು ದುಡ್ಡುಕೊಟ್ಟು ಬರುವಂಥದಲ್ಲ. ನಾನು ಕುಯ್ಕಬಂದು ನಾನು ಮಾಡದು. ಬೇಕು ಅಂದ್ರೆ ನಿಮಗೆ ಒಂದು ಹಿಡಿ ಕೊಡಬಹುದು.
- ಬೆರಕೆಸೊಪ್ಪು ಮಾಡುವುದರಲ್ಲಿ ಬಡತನ-ಸಿರಿತನ ಇಲ್ಲ. ಕುಯ್ಯೋ ಶಕ್ತಿ ಇರಬೇಕು; ಗುರುತಿಸಕ್ಕೆ ಗೊತ್ತಿರಬೇಕು.
- ನಮಗೆ ಗೊತ್ತಿಲ್ಲದೆ ಇರೋ ಸೊಪ್ಪು ನಿಮಗೆ (ಬೇರೆ ಊರಿನವರಿಗೆ) ಗೊತ್ತಿರಬಹುದು. ಅದನ್ನ ತಂದು ನಮ್ಮ ಕಡೆ ಹಾಕ್ಕೋಬಹುದು. ಈಗ ಈ ಅಭ್ಯಾಸ ಯಾರಿಗೂ ಇಲ್ಲ. ಯಾರೂ ಮಾಡ್ತಿಲ್ಲ. ಇದನ್ನೇ ಕುಯ್ಯಲ್ಲ. ಇನ್ನು ಬೇರೆ ಕಡೆಯಿಂದ ತಂದು ಹಾಕ್ತಾರಾ? ಒಂಥರಾ ಅಹಂಕಾರ ಈಗಿನವರಿಗೆ. ’ಏ ಓಗು’ ಅಂತಾರೆ.
- ಈ ಬೆರಕೆಸೊಪ್ಪು ಮುಂದೆಯೂ ಇರತದೆ ಕಣವ್ವ. ಇವಾಗ ನಾನು ತೋರ್ಕೊಡೋ ಹೊತ್ತಿಗೆ ತಾನೆ ನನ್ನ ಮಕ್ಕಳು ಮೊಮ್ಮಕ್ಕಳಿಗೆ ಗೊತ್ತಾದದ್ದು. ಆದರೆ ಕಾಂಗ್ರೆಸ್ ಗಿಡ (ಪಾರ್ಥೇನಿಯಂ) ಬಂದು ಸೊಪ್ಪುಗಳು ಹುಟ್ಟದು ಕಡಮೆ ಆಗಿಬಿಟ್ಟಿದೆ. ಈ ಪಾರ್ಥೇನಂ ಗಿಡ ಇದ್ದಲ್ಲಿ ದನ ಮೇಯೋ ಹುಲ್ಲು ಸಹಿತ ಹುಟ್ಟಲ್ಲ.
ಇನ್ನೊಂದು ಅಂಶವನ್ನು ಇದೇ ಸಂದರ್ಭದಲ್ಲಿ ಹೇಳಬೇಕು. ನಮ್ಮಲ್ಲಿ ಜಾನಪದ ಸಾಹಿತ್ಯವು ಪೂರ್ಣವಲ್ಲದಿದ್ದರೂ ಸಾಕ? ಪ್ರಮಾಣದಲ್ಲಿ ದಾಖಲೆಗೆ ಸೇರಿದೆ. ಆದರೆ ಪುಟ್ಟೀರಮ್ಮ ಇಲ್ಲಿ ಹೇಳುವಂತಹ ಮಾತುಗಳು ಹೊರಸೂಸುವ ಜ್ಞಾನಸಂಪತ್ತು ಸರಿಯಾಗಿ ದಾಖಲಾದದ್ದಿಲ್ಲ. ಈ ಹಿರಿಯ ಚೇತನಗಳು ಕಾಲಗರ್ಭಕ್ಕೆ ಸೇರಿದಂತೆ ಅವರಲ್ಲಿದ್ದ ಅಮೂಲ್ಯಜ್ಞಾನ ಅವರೊಂದಿಗೇ ಕಣ್ಮರೆ ಆಗುತ್ತಿದೆ. ಇದು ನಮ್ಮ ಜನಾಂಗದ ಜ್ಞಾನಭಂಡಾರಕ್ಕಷ್ಟೇ ಆಗುವ ನಷ್ಟವಲ್ಲ; ಸಾಂಸ್ಕೃತಿಕವಾಗಿ ಕೂಡ ಇದು ಬಹುದೊಡ್ಡ ನಷ್ಟ. ಆ ನಿಟ್ಟಿನಲ್ಲಿ ಮಿಶ್ರಬೆಳೆ ಮತ್ತು ಬೆರಕೆಸೊಪ್ಪಿನ ಬಗೆಗಿನ ಕಲೆ, ವಿಜ್ಞಾನ, ತಂತ್ರಜ್ಞಾನ, ಅರ್ಥಶಾಸ್ತ್ರ, ಶ್ರಮಶಾಸ್ತ್ರ, ಸಂಸ್ಕೃತಿಗಳೆಲ್ಲ ಇಲ್ಲಿ ತುಂಬ ಆತ್ಮೀಯವಾದ ಭಾಷೆಯಲ್ಲಿ ದಾಖಲಾಗಿವೆ. ರಮೇಶ್ ಎನ್. ಗಂಗಾವತಿ ಅವರು ಹೇಳುವಂತೆ, “ಪುಟ್ಟೀರಮ್ಮನವರ ಅನುಭವದ ಮಾತುಗಳು ನಮ್ಮ ಹಳೆ ಕೃಷಿ ಪದ್ಧತಿ ಎ? ಸಂಪದ್ಭರಿತವಾಗಿದೆ; ರೈತರನ್ನು ಹೇಗೆ ಸ್ವಾವಲಂಬಿಗಳಾಗಿಸುವ ವಿಧಾನವಾಗಿದೆಯೆಂದು ಪ್ರತ್ಯಕ್ಷ ತೋರಿಸುತ್ತದೆ. ಈ ನೆಲದ ಅಮೂಲ್ಯ ಕೃಷಿಜ್ಞಾನವನ್ನು ಶತಮಾನಗಳಿಂದ ಸಂರಕ್ಷಿಸಿ ಜಾನಪದ ಹಾಡುಗಳಲ್ಲಿ, ಗಾದೆ ಮಾತುಗಳಲ್ಲಿ, ಸಾಂಸ್ಕೃತಿಕ ಪದ್ಧತಿಗಳಲ್ಲಿ ಅಳವಡಿಸಿ, ಯಾವ ಅಕ್ಷರಜ್ಞಾನದ ಹಂಗೂ ಇಲ್ಲದೆ ಮಹಾನ್ ಜ್ಞಾನ ಪರಂಪರೆಯನ್ನು ಮುಂದಿನ ಜನಾಂಗಗಳಿಗೆ ದಾಟಿಸುತ್ತಾ ಬಂದಿರುವುದು ಅದ್ಭುತ.”
ಕೃಷಿಯಲ್ಲಿ ವಾಣಿಜ್ಯಾತ್ಮಕತೆಯ ಪ್ರವೇಶ ಆಗುವುದರೊಂದಿಗೆ ಏಕಕಾಲದಲ್ಲಿ ಹಲವು ಬೆಳೆಗಳನ್ನು ಬೆಳೆಸುವ ಮಿಶ್ರಬೆಳೆಗೆ ಬದಲಾಗಿ ಏಕಬೆಳೆ ಪದ್ಧತಿಯ ಬಲವಾದ ಆಕ್ರಮಣ ಪ್ರಾರಂಭವಾಯಿತು. ಸಾಮಾನ್ಯವಾಗಿ ಪುರುಷರ ಗಮನವೆಲ್ಲ ಏಕಬೆಳೆಯ ಮೇಲೆ ಕೇಂದ್ರೀಕೃತವಾಯಿತೆನ್ನಬಹುದು. ಆದರೂ ಮಳೆನೀರನ್ನು ಆಧರಿಸಿದ ಒಣಬೇಸಾಯದ ಪ್ರದೇಶಗಳಲ್ಲಿ ಮಿಶ್ರಬೆಳೆ ಪದ್ಧತಿ ಬಹುತೇಕ ಜೀವಂತವಾಗಿದೆ ಎನ್ನಬಹುದು. ಕರ್ನಾಟಕದ ಎಲ್ಲ ಭಾಗಕ್ಕೆ ಇದು ಅನ್ವಯವಾಗುತ್ತದೆ ಎಂದು ಹೇಳುವಂತಿಲ್ಲವಾದರೂ ಪುಟ್ಟೀರಮ್ಮನ ಚಾಮರಾಜನಗರ ಜಿಲ್ಲೆಯಲ್ಲಿ, ಆಕೆಯ ಸುತ್ತಮುತ್ತ ಇದು ಜೀವಂತವಾಗಿದೆ ಎಂಬುದು ಆಕೆಯ ಮಾತುಗಳಲ್ಲಿ ಢಾಳಾಗಿ ಎದ್ದುಕಾಣಿಸುತ್ತದೆ; ಇದರ ಭವಿ?ದ ಬಗೆಗೂ ಆಕೆಗೆ ಚಿಂತೆಯಿಲ. ಮಗ-ಸೊಸೆ ಅದನ್ನು ಮುಂದುವರಿಸುವುದನ್ನು ಆಕೆ ಕಾಣುತ್ತಿದ್ದಾರೆ. ಏನಿದ್ದರೂ ಇಲ್ಲಿ ಕಾಣುವಂತೆ ಮಿಶ್ರಬೆಳೆಯನ್ನು ಗಟ್ಟಿಯಾಗಿ ನಂಬಿ ಅದರಲ್ಲಿ ಅಡಗಿರುವ ಅಗಾಧವೂ ಸೂಕ್ಷ್ಮವೂ ಆದ ಜ್ಞಾನವನ್ನು ಮುಂದಿನ ತಲೆಮಾರುಗಳಿಗೆ ರವಾನಿಸುವವರು ಮಹಿಳಾ ರೈತರು.
ಮಳೆ ಆಧಾರಿತ ಬೆಳೆ
ಮಿಶ್ರ ಅಥವಾ ಸಾಲು ಬೆಳೆ ಪದ್ಧತಿಯನ್ನು ಅನುಸರಿಸುವವರು ಸಣ್ಣ ಮತ್ತು ಅತಿ ಸಣ್ಣ ರೈತರು ಎನ್ನುವ ಒಂದು ಸಾಮಾನ್ಯ ಅಭಿಪ್ರಾಯ ಇದೆಯಾದರೂ ಪುಟ್ಟೀರಮ್ಮನ ಜ್ಞಾನ-ಅನುಭವಗಳು ಅದನ್ನು ಅಲ್ಲಗಳೆಯುತ್ತವೆ; ಇದು ಮಳೆಯನ್ನು ಆಶ್ರಯಿಸಿರುವ ಬೇಸಾಯದ ಎಲ್ಲ ರೈತರ ಬೇಸಾಯಕ್ರಮ ಎಂದು ಸಾಧಿಸುತ್ತವೆ. ಇಲ್ಲಿ ಕಾಣುವ ಮಿಶ್ರ ಬೆಳೆಪದ್ಧತಿ ಜನಸಮುದಾಯಗಳು ನೂರಾರು ವ?ಗಳ ಅನುಭವದಲ್ಲಿ ಅಭಿವೃದ್ಧಿಪಡಿಸಿದ ಪದ್ಧತಿಯಾಗಿದ್ದು, ಪುಟ್ಟೀರಮ್ಮನ ಮಾತುಗಳಲ್ಲಿ ಅದು ಸವಿವರವಾಗಿ ಹೊರಬಂದಿದೆ. ಆಕೆ ಹೇಳುತ್ತಾರೆ: “ಎಲ್ಲ ನಮ್ಮ ಅನುಭವದಿಂದಲೇ ಬುಡದು (ಬೀಜ ಬಿಡುವುದು). ಸಾಲು ಬಿಟ್ಟು ಬಿಟ್ಟು ನಮಗ ಅನುಭೋಗ ಗೊತ್ತಲ್ಲ. ನಾವು ಸಾಲು ಲೆಕ್ಕ ಹಾಕ್ಕಂದು ಹಾಕ್ಕಂದು ಬಿಟ್ಬಿಡ್ತೀವಿ. ಹತ್ತು ಸಾಲು ಜೋಳ, ಈಗ ತೊಗರಿ ಬರಬೇಕು, ಈ ತಾವು ಅವರೆ ಬರಬೇಕು, ಇಲ್ಲಿ ಹರಳು ಬರಬೇಕು ಅಂತ ಅದಷ್ಟಕ್ಕೆ ಅದೇ ನಮ್ಮ ಕೈ ಈ ಚೋರಿ ಗಂಟಿಗೆ ಆ ಚೋರಿ ಗಂಟಿಗೆ ಹೋಗುತ್ತಾ ಇರುತ್ತೆ. ಇನ್ನೂ ಲೆಕ್ಕಬೇಕು ಅಂದರೆ ಹತ್ತು ಸಾಲು ಆದಾಗ ಅಲ್ಲಿ ಒಂದು ಪುಟ್ಟಿ ಮಡಗ್ತೀವಿ. ಮತ್ತೆ ಹತ್ತು ಸಾಲು ಆದ ಮೇಲೆ ಈ ಪುಟ್ಟೀನ ಎತ್ಕಂಡು ಅಲ್ಲಿಗೆ ಮಡಗದು. ಇದೆಲ್ಲ ನಮ್ಮಪ್ಪ ಅವ್ವ ಮಾಡ್ತಿದ್ದ ನೋಡಿಕೊಂಡು ನಾನು ಮಾಡೋದು.”
ಸಾರಿಗೆ ೪೦ ಬಗೆಯ ಸೊಪ್ಪು
ಚಾಮರಾಜನಗರ ಜಿಲ್ಲೆಯವರಾದ ಪುಟ್ಟೀರಮ್ಮ ಸುಮಾರು ೪೦ ಬಗೆಯ ಬೆರಕೆಸೊಪ್ಪುಗಳನ್ನು ಗುರುತಿಸಿ ಬಳಸಬಲ್ಲವರಾಗಿದ್ದು ಅವು ಹೀಗಿವೆ:
ಗಣಿಕೆಸೊಪ್ಪು, ಪಸರೆಸೊಪ್ಪು, ಗುಳ್ಸುಂಡೆ ಸೊಪ್ಪು, ಮಳ್ಳಿ ಸೊಪ್ಪು, ಹಾಲೆ ಸೊಪ್ಪು, ಜವಣ ಸೊಪ್ಪು, ಅಣ್ಣೆ ಸೊಪ್ಪು, ಗುರುಜೆ ಸೊಪ್ಪು, ಕಲ್ಲು ಗುರುಜೆ ಸೊಪ್ಪು, ಹಿಟ್ಟಿನಕುಡಿ ಸೊಪ್ಪು, ಕರಿಕಡ್ಡಿ ಸೊಪ್ಪು, ಅಡಕ ಪುಟ್ಟ, ಕೊಟ್ಟನ ಗುರುಜೆ, ಸಾರಿನ ಸೀಗೆಕುಡಿ, ತಡಗುಣಿ ಚಿಗುರು, ನಲ್ಲಿಕುಡಿ ಚಿಗುರು, ಹೊನಗಾಲ ಸೊಪ್ಪು, ಹೊನಗೊನೆ ಸೊಪ್ಪು, ಕಾರೇಸೊಪ್ಪು, ಕನ್ನೆ ಸೊಪ್ಪು, ಕಿರುನಗಲ ಸೊಪ್ಪು, ನುಗ್ಗೆ ಸೊಪ್ಪು, ಅಗಸೆ ಸೊಪ್ಪು, ಕಿರಕೀಲೆ ಸೊಪ್ಪು, ದಂಟು ಸೊಪ್ಪು, ಬೋದಗೀರ ಸೊಪ್ಪು, ಸಪ್ಪಸೀಗೆ ಸೊಪ್ಪು, ಮುಳ್ಳುಗೀರ ಸೊಪ್ಪು, ಕೀರೆ ಸೊಪ್ಪು, ಮೆಂತೆ ಸೊಪ್ಪು, ಕುಂಬಳ ಸೊಪ್ಪು, ಪಾಲಕ ಸೊಪ್ಪು, ಬಿಳಿ ಬಗ್ಗರವಾಟ, ಕೆಂಪನ ಬಗ್ಗರವಾಟ, ಒಂದೆಲಗ ಸೊಪ್ಪು, ಕಾಡುನುಗ್ಗೆ ಸೊಪ್ಪು, ಕಾಡಂದಗ, ದ್ಯವನದ ಸೊಪ್ಪು, ಪುಂಡಿ ಸೊಪ್ಪು, ಬಸಲೆ ಸೊಪ್ಪು, ಕಳ್ಳೆ ಸೊಪ್ಪು.
ಇನ್ನೊಂದು ಕಡೆ ಆಕೆ “ಇದೆಲ್ಲ ನಮ್ಮಪ್ಪ ಅವ್ವ ಮಾಡ್ತಾ ಇದ್ದರಲ್ಲ, ಅದೇ ಅನುಭವದಲ್ಲಿ ನಾವು ಬೆಳೆದು ನೋಡೀವಲ್ಲ ಹಾಗೇ ಮಾಡೋದು. ಜೋಳದ ಜೊತೆ ತಡಗುಣಿ ಮಿಕ್ಸ್ ಮಾಡಬಹುದೇ ಹೊರತು ತೊಗರಿ ಮಿಕ್ಸ್ ಮಾಡಬಾರದು. ಅಕಸ್ಮಾತ್ ಒಂದೆರಡು ತೊಗರಿ ಜೋಳದೊಂದಿಗೆ ಬೆರ್ಸ್ಕಂಬಿಟ್ಟಿದ್ರೆ ಅದನ್ನು ಕಿತ್ತು ಹಾಕ್ತೀವಿ. ಕಾರಣ ತೊಗರಿ ಜೋಳದ ಜೊತೆ ಸ್ಪರ್ಧೆ ಮಾಡುತ್ತೆ; ಆಮುಕಿ ಹಾಕಿಬಿಡುತ್ತೆ. ಮೇಲಕ್ಕೆ ಹೋಗೋ ಬೆಳೆ ಜೊತೆ ಭೂಮೀಲಿ ಹಬ್ಬೋ ಬೆಳೆಯನ್ನ ಮಿಕ್ಸ್ ಮಾಡಿಕೊಂಡು ಹಾಕಬೇಕು.” ಬಿತ್ತುವುದರಲ್ಲಿ ಹೆಂಗಸರೇ ಹುಷಾರು ಎಂಬುದು ಪುಟ್ಟೀರಮ್ಮನ ಅನುಭವದ ಮಾತು; “ಗಂಡಸರು ಬಿತ್ತನೆ ಮಾಡಿದ್ರೆ ಈ ಥರ ಆಗುತ್ತೆ. ಆಗ ಬೆಳೇನೂ ಸರಿ ಬರಲ್ಲ; ಇಳುವರೀನೂ ಬರಲ್ಲ. ಅಂತರ ಇಲ್ಲದಿದ್ದರೆ ಬೆಳೆ ಹೇಗೆ ಬರುತ್ತೆ?” ಎಂದಾಕೆ ಕೇಳುತ್ತಾರೆ. “ಪುಟ್ಟಕ್ಕ ಬಿತ್ತನೆ ಮಾಡಿದರೆ ಒಂದು ಕಾಳು ಹೆಚ್ಚು ಇಲ್ಲ; ಒಂದು ಕಾಳು ಕಮ್ಯೂ ಇಲ್ಲ. ಕರೆಕ್ಟಾಗಿ ಬುಡ್ತಾಳವ್ವ” ಎಂಬುದು ಊರಿನ ಜನರ ಮೆಚ್ಚುಗೆಯ ಮಾತು. ಇಂತಹ ಅನೇಕ ಹೊಗಳಿಕೆಗಳಿಗೆ ಪುಟ್ಟೀರಮ್ಮ ಪಾತ್ರವಾದವರು.
ಜಮೀನಿನ ಫಲವತ್ತತೆ
ಜಮೀನಿನ ಫಲವತ್ತತೆಗೆ ಪ್ರಾಮುಖ್ಯ ನೀಡುವುದು ಈ ಪಾರಂಪರಿಕ ಮಿಶ್ರಬೆಳೆಯ ಒಂದು ಪ್ರಮುಖ ಲಕ್ಷಣವಾಗಿದೆ. “ಒಂದೇ ಬೆಳೆಯಿಂದ ಜಮೀನಿಗೆ ಫಲವತ್ತು ಇಲ್ಲ. ತರಗು (ತರಗೆಲೆ) ಏನೂ ಉದುರುವುದಿಲ್ಲ. ಜೋಳ ಆಯ್ತು ಅಂದ್ರೆ ಕೆಳಕ್ಕೆ ಒಂದು ಎಲೆನೂ ಉದುರಲ್ಲ. “ಬರೀ ಹೊಲ. ಗಿಡ ಕಡ್ಕಂಡು ಎತ್ಕ ಬತ್ತೀವಿ. ಈ ಮಧ್ಯ ಬಿತ್ತವು (ಮಿಶ್ರ ಬೆಳೆ) ಎಲೆ ಎಲ್ಲ ಉದುರುತ್ತೆ ಭೂಮಿಗೆ. ಕುಂಟೆ ಹೇರಿದಾಗ ಹಣ್ಣೆಲೆಯೆಲ್ಲ ಸೇರಿ ಅದೊಂದು ತಿಪ್ಪೆ ಗೊಬ್ರ ಹೊಡೆದಂಗೆ ಆಯ್ತದೆ. ಅದೇ ಮಣ್ಣಿಗೆ ಶಕ್ತಿ. ಬರೀ ಜೋಳ ಬಿತ್ತಿದ್ದು, ಜಮೀನಿಗೆ ಬೇರೆ ಏನಾದ್ರೂ ಬಿತ್ತೀರೆ ಫಸಲೇ ಬರಲ್ಲ” ಎಂದಾಕೆ ಹೇಳುತ್ತಾರೆ. ಪಾರಂಪರಿಕ ಕೃಷಿಪದ್ಧತಿ ಅಂತಹ ಸೂಕ್ಷ್ಮದೃಷ್ಟಿಯನ್ನು ಹೊಂದಿತ್ತು. ಆಧುನಿಕ ಕೃಷಿಯ ಏಕಬೆಳೆಯಿಂದ ಭೂಮಿ ಬರಡಾದದ್ದು ಒಂದಾದರೆ ಬಂದ ಬೆಳೆ ವಿಫಲವಾದಾಗ ರೈತ ತೀವ್ರವಾದ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುವುದು ಇನ್ನೊಂದು; ಅದೇ ಆತ್ಮಹತ್ಯೆಗೆ ದಾರಿಯೂ ಆಗುತ್ತದೆ. ಮಿಶ್ರ ಬೆಳೆಯಾದರೆ ಹಾಗಲ್ಲ.
ಬೆರಕೆಸೊಪ್ಪು ಪುಟ್ಟೀರಮ್ಮನ ಅತ್ಯಂತ ಪ್ರಿಯವಾದ ವಿಷಯ ಎನ್ನುವುದು ಪುಸ್ತಕವನ್ನು ಓದಿದಾಗ ಗಮನಕ್ಕೆ ಬರುತ್ತದೆ. ಸುಮಾರು ೪೦ ಸೊಪ್ಪುಗಳನ್ನು ಆಕೆ ಗುರುತಿಸಿ ಇಲ್ಲಿ ಹೆಸರಿಸಿದ್ದಾರೆ. ಅದನ್ನೆಲ್ಲ ಆಕೆ ಪದಾರ್ಥ ತಯಾರಿಸಲು ಬಳಸುವವರೇ. ಎಂಕಟಮ್ಮ ಎಂಬಾಕೆಗೆ ಸುಮಾರು ನೂರು ಸೊಪ್ಪುಗಳ ಪರಿಚಯವಿದೆ. ಆಕೆ ತಮ್ಮ ಮನೆ ಸಮೀಪ ಬಂದರೆ ಸೊಪ್ಪು ಕುಯ್ಯಲು ತನ್ನನ್ನುಕರೆಯುತ್ತಾರೆ; ತಾನು ಇನ್ನಷ್ಟು ಸೊಪ್ಪುಗಳ ಪರಿಚಯ ಮಾಡಿಕೊಳ್ಳುತ್ತೇನೆ ಎನ್ನುತ್ತಾರೆ. ತಂದು ಮನೆಯಲ್ಲಿ ಮಸೊಪ್ಪು, ಉಪ್ಸಾರು, ಬಸ್ಸಾರು, ಪಲ್ಯ ಮಾಡುತ್ತಾರೆ. ಈ ಸೊಪ್ಪುಗಳು ಮಾರುಕಟ್ಟೆಯಲ್ಲಿ ಸಿಗುವಂಥವಲ್ಲ. ಮನೆ ಸಮೀಪ ಬೇಲಿ ಮೇಲೆ, ಹಿತ್ತಲಿನಲ್ಲಿ ಅಥವಾ (ಸ್ವಲ್ಪ ದೂರದ) ಹೊಲದಲ್ಲಿ ಸಿಗುವಂಥವು. ಅವುಗಳನ್ನು ಆರಿಸಿ ತಂದು ಪದಾರ್ಥ ಮಾಡಿ ಮನೆಮಂದಿಗೆ ಬಡಿಸಿದಾಗ ಈಕೆಗೆ ಸಾರ್ಥಕ್ಯದ ಭಾವ. ಪುಸ್ತಕದ ಶೀರ್ಷಿಕೆಯಲ್ಲಿಯ ’ಪುರಾಣ’ ಎಂಬ ಪದ ಬೆರಕೆಸೊಪ್ಪಿನ ಬಗೆಗಿನ ಇಲ್ಲಿನ ವಿವರಣೆಗಳಿಗೆ ಚೆನ್ನಾಗಿ ಒಪ್ಪುತ್ತದೆ.
ಬೆರಕೆಸೊಪ್ಪು-ಜಾತಿವ್ಯವಸ್ಥೆ
ಕುತೂಹಲಕರವಾದ ಅಂಶಗಳು ಕೂಡ ಈ ಭಾಗದಲ್ಲಿವೆ. ಬೆರಕೆಸೊಪ್ಪಿನ ವಿ?ಯದಲ್ಲಿ ಬೇರೆಬೇರೆ ಜಾತಿಯವರು ಹೇಗೆ ಎನ್ನುವ ಪ್ರಶ್ನೆಗೆ ಪುಟ್ಟಕ್ಕ ಹೀಗೆ ಉತ್ತರಿಸುತ್ತಾರೆ: “ಎಲ್ಲ ಜಾತಿ ಜನಾಂಗದಲ್ಲೂ ಮಾಡಬಹುದು. ಕುಯ್ಕ ಬರಾ ಶಕ್ತಿ ಇಲ್ಲದವರಿಗೆ ಇದು ಸಿಕ್ಕಲ್ಲ. ಕೆಲವರು ಜಮೀನನ್ನೇ ಕಾಣರು; ಇನ್ನು ಬೆರಕೆ ಸೊಪ್ಪು ಏನು ಗೊತ್ತು ಅವರಿಗೆ! ಒಕ್ಕಲು ಮಾಡುವವರಿಗೆ, ಜಮೀನಿನಲ್ಲಿ ಕೆಲಸ ಮಾಡುವವರಿಗೆ ಇದು ಗೊತ್ತು. ವ್ಯಾಪಾರ ಮಾಡುವವರಿಗೆ ಗೊತ್ತಿಲ್ಲ. ಮನೆಯಿಂದ ಹೊರಗಡೆ ಹೋಗದೆ ಇರುವವರಿಗೆ ಗೊತ್ತಿಲ್ಲ. ಮುಸಲ್ಮಾನರು, ಬ್ರಾಹ್ಮಣರು, ಸೇಠರು ಇವರಿಗೆಲ್ಲ ಇದು ಗೊತ್ತಿಲ್ಲ. ಅವರು ಇದನ್ನೆಲ್ಲ ಕೊಯ್ಯಲಾರರು. ಹೊಲಕ್ಕೆ ಹೋದರೆ ಅವರಿಗೂ ಗೊತ್ತಿರುತ್ತಿತ್ತು. ಸೇಠುಗಳು ಅಂಗಡಿಯಲ್ಲೇ ವ್ಯವಹಾರ ಮಾಡುವುದರಿಂದ ಅವರಿಗೂ ಜಮೀನಿಗೂ ಸಂಬಂಧ ಇಲ್ಲ. ಮುಸಲ್ಮಾನರಿಗೂ ಸಂಬಂಧ ಇಲ್ಲ; ಅವರು ಹೆಚ್ಚು ಬಿಸಿನೆಸ್ ಮಾಡುವುದು. ಬ್ರಾಹ್ಮಣರು ಹೊಲಕ್ಕೆ, ಗದ್ದೆ ಕೆಲಸಕ್ಕೆ ಹೋಗಲ್ಲವಲ್ಲ. ಅದಕ್ಕೆ ಅವರಿಗೆ ಗೊತ್ತಿಲ್ಲ ಅನ್ನುವುದು ನನ್ನ ಅನುಭೋಗ. ನಮಗೆ ಈ ಬೆರಕೆಸೊಪ್ಪು ಕೊಯ್ಯದೆಲ್ಲ ಚಿಕ್ಕಂದಿನಿಂದ ಅಭ್ಯಾಸ.” ಹೀಗೆ ಇಲ್ಲಿ ಭೂಮಿಯ ಜೊತೆಗಿನ ಸಂಬಂಧಕ್ಕೆ ಬೆರಕೆಸೊಪ್ಪು ಸಂಕೇತವಾಗಿ ಬಿಡುತ್ತದೆ.
ಪ್ರಸ್ತುತ ವಿ?ಯದಲ್ಲಿ ಪುಟ್ಟೀರಮ್ಮ ಆಶಾವಾದಿ ಆಗಿರಲು ಅಡ್ಡಿ ಇಲ್ಲ. ಆಕೆಯ ಮನೆಯಲ್ಲಂತೂ ಬೆರಕೆಸೊಪ್ಪಿನ ಪರಂಪರೆ ಮುಂದುವರಿಯಲಡ್ಡಿಯಿಲ್ಲ. ಸೊಸೆ ಪು? ಅವರ ಮಾತನ್ನು ಅದಕ್ಕೆ ಪುರಾವೆಯಾಗಿ ನೀಡಬಹುದು: “ನನಗೆ ಸೊಪ್ಪು ಅಂದರೆ ತುಂಬಾ ಆಸೆ. ಆದರೆ ಎಲ್ಲ ಥರದ ಸೊಪ್ಪು ಕುಯ್ಯಕ್ಕೆ ಗೊತ್ತಿಲ್ಲ. ಈಗ ನಾಲ್ಕೈದು ಥರದ ಸೊಪ್ಪು ಕುಯ್ತೀನಿ. ನಾನು, ನನ್ನ ಗಂಡ ಕೂಡ ಹೋಗ್ತೀವಿ ಸೊಪ್ಪು ಕುಯ್ಯಕ್ಕೆ. ಸೊಪ್ಪಿನ ಮೇಲೆ ಆಸಕ್ತಿ ಯಾರಿಗೂ ಕಡಮೆಯಾಗಿಲ್ಲ. ಸೊಪ್ಪು ಅಂದರೆ ಎಲ್ಲರಿಗೂ ಇಷ್ಟ. ಕುಯ್ದೇ ಕುಯ್ಯುತ್ತಾರೆ. ಸೊಪ್ಪು ಕುಯ್ಯಕ್ಕೆ ಯಾವ ಅವಮಾನವೂ ಇಲ್ಲ. ನನ್ನ ಜೊತೆಯವರು ಯಾರೂ ಸೊಪ್ಪು ಕುಯ್ಯುವುದು ಅವಮಾನ ಅಂತ ತಿಳಿದುಕೊಂಡಿಲ್ಲ” ಎನ್ನುವ ಆಕೆ ಅತ್ತೆಯ ಹಾದಿಯಲ್ಲೇ ಸಾಗುವಂತಿದೆ; ಆ ಮಟ್ಟಕ್ಕೆ ಬೆಳೆಯುವುದು ಕಷ್ಟ ಎನ್ನುವುದಾದರೂ.
ಒಟ್ಟಿನಲ್ಲಿ ನವೀನ್ ಬಿ. ಬೆಂಗಳೂರು ಅವರು ಹೇಳುವಂತೆ “ಪುಟ್ಟೀರಮ್ಮನ ಬೆರಕೆಸೊಪ್ಪಿನ ಪುರಾಣ ನಮ್ಮನ್ನು ನೇರವಾಗಿ ಬೇರಿಗೇ ಕರೆದುಕೊಂಡು ಹೋಗುತ್ತದೆ. ಬೆರಕೆಸೊಪ್ಪಿಗೆ ವಾಣಿಜ್ಯಮೌಲ್ಯ ಇಲ್ಲದಿದ್ದರೂ ಸಾಂಸ್ಕೃತಿಕ ಮೌಲ್ಯ ಅಪಾರವಾಗಿದೆ. ಇದರ ದಾಖಲಾಗಿ ನಮಗೆ ಬೆರಕೆಸೊಪ್ಪಿನ ಪ್ರಯೋಜನ ಪಡೆದುಕೊಳ್ಳುವ ಅವಕಾಶ ಒದಗಿಸಿದೆ.” ಈ ನಿಟ್ಟಿನಲ್ಲಿ ಇದೊಂದು ಅಪೂರ್ವ ಪುಸ್ತಕ ಎನಿಸುತ್ತದೆ. ಹಳ್ಳಿಹಳ್ಳಿಯಲ್ಲೂ ಇಂತಹ ಅಮೂಲ್ಯ ಜ್ಞಾನಸಂಪತ್ತಿದ್ದು, ಅದನ್ನು ಬೆಳಕಿಗೆ ತರುವವರಿಗೆ ವಿಪುಲ ಅವಕಾಶವಿದೆ.