ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಮಾರ್ಚ್ 2018 > ನಮಗೆ ಬೇಕಾಗಿರುವುದು `ಥಿಂಕ್ ಇನ್ ಇಂಡಿಯ’, `ಥಾಟ್ ಇನ್ ಇಂಡಿಯ’ : ಡಾ. ಹರೀಶ್ ಹಂದೆ 

ನಮಗೆ ಬೇಕಾಗಿರುವುದು `ಥಿಂಕ್ ಇನ್ ಇಂಡಿಯ’, `ಥಾಟ್ ಇನ್ ಇಂಡಿಯ’ : ಡಾ. ಹರೀಶ್ ಹಂದೆ 

`ಸ್ಟಾರ್ಟ್‌ಅಪ್’ ಎನ್ನುವ ಪರಿಕಲ್ಪನೆಯೂ ಇಲ್ಲದ ೧೯೯೦ರ ದಶಕದಲ್ಲಿ ಖರಗ್‌ಪುರದ ಐ.ಐ.ಟಿ.ಯಲ್ಲಿ ಇಂಜಿನಿಯರಿಂಗ್ ಮಾಡಿ , ಅಮೆರಿಕದ ಮೆಸ್ಸಾಚ್ಯುಸೆಟ್ಸ್‌ನಲ್ಲಿ ಪಿಎಚ್.ಡಿ. ಮುಗಿಸಿದವರು ಕನ್ನಡಿಗ ಡಾ. ಹರೀಶ್ ಹಂದೆ. ’ವೈಟ್‌ಕಾಲರ್ ಜಾಬ್’ ಅವರಿಗಾಗಿ ಕಾಯುತ್ತಿದ್ದರೂ , ಅವರು ಮಾತ್ರ ಆಯ್ದುಕೊಂಡದ್ದು ಭಾರತದ ಹಳ್ಳಿಮೂಲೆಗಳ ಬಡತನ. ಕೇವಲ ಒಂದು ಸಾವಿರ ರೂಪಾಯಿಗಳನ್ನು ಬಂಡವಾಳವಾಗಿ ಕೈಯಲ್ಲಿ ಇಟ್ಟುಕೊಂಡು, ಕಡುಬಡವನೂ ಟೆಕ್ನಾಲಜಿಯನ್ನು ಸಮರ್ಥವಾಗಿ ಬಳಸಿಕೊಳ್ಳಬಲ್ಲ, , ಆತನಲ್ಲೂ ಬೌದ್ಧಿಕ ಸಾಮರ್ಥ್ಯವಿದೆ ಎಂದು ತೋರಿಸಹೊರಟರು. ಸಾಮಾಜಿಕ ಸೇವಾಸಂಸ್ಥೆ ’ಸೆಲ್ಕೋ’ವನ್ನು ಸ್ಥಾಪಿಸುವುದರ ಮೂಲಕ ಪುನರ್ಬಳಕೆ ಇಂಧನಮೂಲದ ಮಹತ್ತ್ವವನ್ನು ತಿಳಿಸಿದರು. ಮೂಲಸಮಸ್ಯೆಯನ್ನು ತಿಳಿದುಕೊಳ್ಳುವುದರೊಂದಿಗೆ, ಈ ಇಪ್ಪತ್ತು ವರ್ಷಗಳಲ್ಲಿ ಹಲವರ ಜೀವನೋಪಾಯದ ಉದ್ಯೋಗವನ್ನು ಸುಲಭವಾಗಿಸಿದ್ದಾರೆ , ಬೆಳಕಿಲ್ಲದ ಮನೆಗಳಿಗೆ ಬೆಳಕಾಗಿದ್ದಾರೆ , ಕಲೆ-ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ. 

1995ರಲ್ಲಿ ಆರಂಭವಾದ ’ಸೆಲ್ಕೋ’ ಇತ್ತೀಚೆಗೆ ಜಾಗತಿಕವಾಗಿ ಪ್ರತಿಷ್ಠಿತ ’ಜಾಯೆದ್ ಫ್ಯೂಚರ್ ಎನರ್ಜಿ’ (9.56 ಕೋಟಿ ರೂ. ಮೊತ್ತ) ಪ್ರಶಸ್ತಿಯನ್ನು ಪಡೆದುಕೊಂಡಿದೆ. ತನ್ಮೂಲಕ ಈ ಪ್ರಶಸ್ತಿ ಪಡೆದ ಭಾರತದ ಏಕೈಕ ಸೇವಾಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಸಾಂದರ್ಭಿಕವಾಗಿ , ’ಉತ್ಥಾನ’ ಮಾಸಪತ್ರಿಕೆಗಾಗಿ ಇತ್ತೀಚೆಗೆ ಡಾ. ಹರೀಶ್ ಹಂದೆ ಅವರ ಜೊತೆಗೆ ನಡೆಸಿದ ಮಾತುಕತೆಯ ಪೂರ್ಣಪಾಠವು ಇಲ್ಲಿದೆ. 

ನಮಸ್ತೇ, ಮೊದಲಿಗೆ ’ಜಾಯೆದ್ ಫ್ಯೂಚರ್ ಎನರ್ಜಿ’ ಪ್ರಶಸ್ತಿಯನ್ನು ಪಡೆದಿರುವ ತಮ್ಮ ಸೆಲ್ಕೋ ಸಂಸ್ಥೆಗೂ, ನಿಮಗೂ ಅಭಿನಂದನೆಗಳು.

ಉತ್ತರ: ಇಲ್ಲ, ಅದೇನು ಅಂತಹ ದೊಡ್ಡ ಸಾಧನೆಯಲ್ಲ.

ಪ್ರಶ್ನೆ: ಈ ಪ್ರಶಸ್ತಿ ಪಡೆದ ಸಂದರ್ಭದಲ್ಲಿ ಹೊಸ ಯೋಜನೆ, ಭವಿಷ್ಯದ ಕನಸುಗಳ ಬಗ್ಗೆ ಏನಾದರೂ ಯೋಚಿಸಿದ್ದೀರಾ? 

ಉತ್ತರ: ಈ ಇಪ್ಪತ್ತು ವರ್ಷಗಳಿಂದ ನಾವು ಕರ್ನಾಟಕದಲ್ಲಿ ಕೆಲಸ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ ಯಾವ ರೀತಿ ಕೆಲಸ ಮಾಡಬಹುದು ಎನ್ನುವುದರ ಕುರಿತಾಗಿ ಯೋಚಿಸುತ್ತಿದ್ದೇವೆ.

ಮೂರು ವರ್ಷಗಳ ಹಿಂದೆ ಅಲ್ಲಿಯ ಡೆಪ್ಯುಟಿ ಸೆಕ್ರೆಟರಿ ಜೊತೆ ಮೀಟಿಂಗ್‌ಗೆ ಹೋಗಿದ್ದೆ. ಅಲ್ಲಿ ಅವರು ಹೇಳಿದ್ದೇನೆಂದರೆ ’ನಾವು ಭಾರತೀಯರು ಎನ್ನುವ ಭಾವನೆ ಈಶಾನ್ಯಭಾರತದ ಯುವಜನಾಂಗದಲ್ಲಿ ಇಲ್ಲ’ ಎಂದು. ಈಶಾನ್ಯರಾಜ್ಯಗಳಲ್ಲಿ ಒಂದುವಾರ ಕಾಲ ಕಳೆದ ನನಗೆ ತಿಳಿದದ್ದೇನೆಂದರೆ, ಅಲ್ಲಿನ ಜನತೆಗೆ ಭಾರತೀಯರೆಂದರೆ ಸೇನೆ ಮಾತ್ರ. ಅಲ್ಲಿ ನಾನು ಇಡೀ ದಿನ ಆರ್ಮಿಯವರನ್ನು ಬಿಟ್ಟು ಬೇರೇನೂ ನೋಡಿಲ್ಲ. ಅನಿವಾರ್ಯ ಕಾರಣಗಳಿಂದಾಗಿ ಅವರ ನಡತೆಯೂ ಕೆಲವೊಮ್ಮೆ ಕಠಿಣವಾಗಿಯೂ ಇರುತ್ತದೆ. ಆದ್ದರಿಂದ ಅಲ್ಲಿನ ಯುವಕರಿಗೆ ಭಾರತ ಎಂದರೆ ಭಾರತೀಯ ಸೇನೆ ಅಷ್ಟೇ. ಉದ್ಯೋಗದ ಅವಕಾಶಗಳಿಲ್ಲ. ನಾಲ್ಕು ಅಕ್ಷರ ಇಂಗ್ಲಿಷ್ ಕಲಿತಿದ್ದೇವೆ; ಬೆಂಗಳೂರು, ಮುಂಬಯಿ, ದೆಹಲಿಗೆ ಹೋಗಿ ಹೋಟೆಲ್ ಕೆಲಸ ಅಥವಾ ಇಂತಹದ್ದೇ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಇರುತ್ತೇವೆ, ಎನ್ನುವ ಮನಃಸ್ಥಿತಿ ಅವರದ್ದು. ಇದಕ್ಕಿಂತ ಹೆಚ್ಚಿನ ಅವಕಾಶ ಯಾವುದೂ ಅಲ್ಲಿ ಇಲ್ಲ. ಇದೇ ಕಾರಣಕ್ಕೆ ನಮಗೆ ಈಶಾನ್ಯರಾಜ್ಯಗಳಿಗೆ ಹೋಗುವ ಮನಸ್ಸು ಬಂದಿದ್ದು.

ಈಶಾನ್ಯರಾಜ್ಯಗಳ ಅಭಿವೃದ್ಧಿಗೊಳಿಸಿ ತನ್ಮೂಲಕ ಅಲ್ಲಿ ಏಳುತ್ತಿರುವ ಬಂಡಾಯಪ್ರವೃತ್ತಿಯನ್ನು ಶಮನಗೊಳಿಸುವ ಪ್ರಯತ್ನಮಾಡುವುದು ನಮ್ಮ ಉದ್ದೇಶ. ಹೀಗೆ ಈಶಾನ್ಯರಾಜ್ಯಗಳಿಗಾಗಿ ಸುಮಾರು ಹತ್ತು ವರ್ಷದ ಪ್ರಾಜೆಕ್ಟ್ (2027ರ ವರೆಗೆ) ಅನ್ನು ಯೋಚಿಸಿದ್ದೇವೆ.

ಪ್ರಶ್ನೆ: ಖರಗ್‌ಪುರದ ಐ.ಐ.ಟಿ.ಯ ದಿನಗಳು, ಬಳಿಕ ಅಮೆರಿಕದಲ್ಲಿ ಅಧ್ಯಯನ ನಡೆಸಿದ ದಿನಗಳು ನಿಮ್ಮಲ್ಲಿ ಪುನರ್‌ಬಳಕೆಯ ಇಂಧನಮೂಲಗಳ ಬಗೆಗೆ ಯೋಚಿಸಲು ಕಾರಣವಾಯಿತೆ? 

ಉತ್ತರ: ಮೊದಲನೆಯದಾಗಿ, ನಾನು ಐ.ಐ.ಟಿ.ಯಲ್ಲಿ ಇಂಜಿನಿಯರಿಂಗ್‌ಗೆ ಸೀಟ್ ಗಳಿಸುವಲ್ಲಿ ಯಶಸ್ವಿಯಾಗಿದ್ದೆ ಎಂದರೆ ಅದಕ್ಕೆ ಕಾರಣ ಎಕ್ಸಾಮ್ ಬರೆಯದ ಉಳಿದ ಮೂರುಕೋಟಿಯಷ್ಟು ಜನ. ಅವರೆಲ್ಲರೂ ಪರೀಕ್ಷೆ ಬರೆದಿದ್ದರೆ ನಾನು ಅಂದು ಆ ಪರೀಕ್ಷೆ ಪಾಸ್ ಆಗುತ್ತಿರಲಿಲ್ಲ! ಬದಲಾಗಿ ನನ್ನ ಬೌದ್ಧಿಕ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಾಮರ್ಥ್ಯವುಳ್ಳ ಬಡವಿದ್ಯಾರ್ಥಿಯೊಬ್ಬ ಅಲ್ಲಿ ಸ್ಥಾನವನ್ನು ಗಳಿಸಿರುತ್ತಿದ್ದ.

ಇದು ಹೇಗಾಗಿದೆ ಎಂದರೆ, ೫೦ ಮೀಟರ್‌ನ ರನ್ನಿಂಗ್ ರೇಸ್‌ನಲ್ಲಿ ನಾವಿದ್ದೇವೆ. ಬೇರೆಯವರು ಮೈನಸ್ ೫೦ ಮೀಟರ್‌ನಷ್ಟು ಹಿಂದಿದ್ದಾರೆ; ಆಗ ನಾವು ಗೆದ್ದಿದ್ದೇವೆ ಎನ್ನುವ ಭಾವನೆ ನಮ್ಮಲ್ಲಿ ಮೂಡುತ್ತದೆ. ಹಾಗೆಯೇ ನನ್ನ ಐ.ಐ.ಟಿ. ಎಂಟ್ರಿ ಕೂಡ. ಉಡುಪಿ, ಧಾರವಾಡ ಅಥವಾ ಝಾರ್ಖಂಡ್‌ನಲ್ಲಿದ್ದ ಯಾವುದೇ ಪ್ರತಿಭಾವಂತ ಹುಡುಗರ ಮನೆಯವರು ರೂರ್ಕೆಲಾದಲ್ಲಿ ಇರಲಿಲ್ಲ. ಇವರು ಹದಿನೆಂಟು ವರ್ಷ ಪ್ರಾಯಕ್ಕೆ ದುಡಿಯಲು ಆರಂಭಿಸದಿದ್ದರೆ ಮನೆಯಲ್ಲಿರುವವರಿಗೆ ತುತ್ತು ಅನ್ನಕ್ಕೆ ದಾರಿಯಿರಲಿಲ್ಲ. ಆದರೆ ನನ್ನ ತಂದೆ ರೂರ್ಕೆಲಾ ಸ್ಟೀಲ್ ಪ್ಲಾಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು; ಸಾಮಾಜಿಕ, ಆರ್ಥಿಕ ಭದ್ರತೆ ನನಗೆ ಇತ್ತು. ಹದಿನೆಂಟು ವ? ಪ್ರಾಯಕ್ಕೆ ದುಡಿಯದಿದ್ದರೆ ಮನೆಯಲ್ಲಿ ಊಟಕ್ಕೆ ಗತಿಯಿಲ್ಲ ಎನ್ನುವಂತಹ ವಾತಾವರಣದಲ್ಲಿ ಬೆಳೆಯದ ನಾನು ಐ.ಐ.ಟಿ.ಗೆ ಹೋದೆ; ತಮ್ಮಲ್ಲಿ ಬೌದ್ಧಿಕ ಸಾಮರ್ಥ್ಯವಿದ್ದೂ ಮನೆಯಲ್ಲಿ ಆರ್ಥಿಕ ಭದ್ರತೆಯಿಲ್ಲದ ಹುಡುಗರು ಅನಿವಾರ್ಯವಾಗಿ ಹದಿನೆಂಟು ವರ್ಷ ಪ್ರಾಯಕ್ಕೆ ಕೆಲಸವನ್ನು ಆರಿಸಿಕೊಂಡರು. ಇಲ್ಲಿ ನಿಜವಾದ ಬೌದ್ಧಿಕ ಸಾಮರ್ಥ್ಯವಿರುವ ವ್ಯಕ್ತಿಗೆ ಅನ್ಯಾಯವಾಗಿದೆಯೇ ಹೊರತು, ನಾನು ಐ.ಐ.ಟಿ.ಯಲ್ಲಿ ಇಂಜಿನಿಯರಿಂಗ್ ಮಾಡಿದೆ ಎನ್ನುವುದು ವಿಶೇಷವಲ್ಲ.

ನಾನು ಕಲಿತ ದಿನಗಳಲ್ಲಿ ಒಂದು ಸೆಮಿಸ್ಟರ್‌ಗೆ ೨೫ ರೂ. ಫೀ ಇತ್ತು. ೧೯೮೬ರಲ್ಲಿ ವರ್ಷಕ್ಕೆ ಒಬ್ಬ ವಿದ್ಯಾರ್ಥಿಗೆ ಒಂದುಲಕ್ಷ ರೂ.ಗಳ ಸಬ್ಸಿಡಿ ಸರ್ಕಾರ ನೀಡುತ್ತಿತ್ತು. ಒಬ್ಬ ವಿದ್ಯಾರ್ಥಿಗೆ ೩ ಕಂಪ್ಯೂಟರ್ ಇತ್ತು. ಈ ಸಬ್ಸಿಡಿ ಎಲ್ಲಿಂದ ಬಂತು? ಬಡವರು ಸಕ್ಕರೆ, ಉಪ್ಪು ಖರೀದಿಸುವಾಗ ಕಟ್ಟುವ ಸೇಲ್ಸ್ ಟ್ಯಾಕ್ಸ್ ನನ್ನ ಶಿಕ್ಷಣದ ಸಬ್ಸಿಡಿಯಾಗಿತ್ತು. ಆ ಸಬ್ಸಿಡಿ ತೆಗೆದುಕೊಂಡು ನಾನು ಐ.ಐ.ಟಿ.ಯಲ್ಲಿ ಇಂಜಿನಿಯರಿಂಗ್ ಮಾಡಿ, ಅಮೆರಿಕಕ್ಕೆ ಹೋಗಿ ಅಲ್ಲಿ ಪಿಎಚ್.ಡಿ. ಮಾಡಿ, ಅಲ್ಲಿ ಇನ್ನೇನೋ ದೊಡ್ಡ ಹುದ್ದೆ ಹೊಂದುವುದು ಸಂಪೂರ್ಣ ಅನ್ಯಾಯ ಎನ್ನುವ ಭಾವನೆ ನನ್ನಲ್ಲಿ ಆಳವಾಗಿ ಬೇರೂರಿತ್ತು.

ನನ್ನ ಶಿಕ್ಷಣದ ಮಾಲೀಕ ಯಾರು ಎಂದರೆ ಈ ದೇಶದ ಬಡವರು. ನನ್ನ ತಂದೆ ರೂರ್ಕೆಲಾದಲ್ಲಿ ಕೆಲಸ ಮಾಡುತ್ತಿರುವಾಗ ಸ್ಟೀಲ್ ಫ್ಯಾಕ್ಟರಿಯ ಕ್ವಾರ್ಟರ‍್ಸ್‌ನಲ್ಲಿ ವಾಸಿಸುತ್ತಿದ್ದೆವು, ಅಲ್ಲಿ ವಿದ್ಯುಚ್ಛಕ್ತಿ ಉಚಿತವಾಗಿತ್ತು. ಅದೂ ಸಬ್ಸಿಡೈಸ್ಡ್. ಹೀಗೆ ನಾವು ಉಪಯೋಗಿಸುವ ವಿದ್ಯುತ್ತಿನಿಂದ ಶಿಕ್ಷಣದ ತನಕ ಎಲ್ಲವೂ ಸಬ್ಸಿಡಿಯದ್ದಾಗಿತ್ತು. ಅದೇ ಒಬ್ಬ ರೈತನಿಗೆ ಸಬ್ಸಿಡಿ ಎಂದ ಕೂಡಲೇ, ಅಯ್ಯೋ ರೈತರಿಗೆ ಏಕೆ ಸಬ್ಸಿಡಿ ಎನ್ನುವುದು ಎಲ್ಲರ ಪ್ರಶ್ನೆ.

ಭಾರತ – ಜಗತ್ತಿಗೆ ’ಪರಿಹಾರಗಳ ಕೇಂದ’ವಾಗಬಲ್ಲದು 

ಭಾರತ ಬೆಳೆದರೆ ಅಷ್ಟೇ ನಾವು ಬೆಳೆಯಬಲ್ಲೆವು. ಅಮೆರಿಕ, ಯೂರೋಪ್ ಮುಂತಾದ ದೇಶಗಳ ಕಂಪೆನಿ ಬೆಳೆದರೆ ಭಾರತ ಬೆಳೆಯಲಾರದು, ನಾವೂ ಬೆಳೆಯಲಾರೆವು. ಎಷ್ಟು ಬಡದೇಶಗಳು ಭಾರತದ ಕಡೆಗೆ ಪರಿಹಾರಕ್ಕಾಗಿ ಎದುರುನೋಡುತ್ತಿವೆ. ಭಾರತದಲ್ಲಿ ಎರಡು ರೀತಿಯ ಜನತೆಯಿದೆ: ಬಡವ ಮತ್ತು ಶ್ರೀಮಂತ. ಆದರೆ ಆಫ್ರಿಕಾದಂತಹ ದೇಶದಲ್ಲಿ ಬಡತನದ ಪ್ರಮಾಣವೇ ಹೆಚ್ಚಿದೆ. ಅವರಲ್ಲಿ ಭಾರತ ನಮಗೆ ದಾರಿಯಾಗಬಲ್ಲದು ಎನ್ನುವ ಭರವಸೆಯಿದೆ. ನಾವು ’ಪರಿಹಾರಗಳ ಕೇಂದ್ರ’ ಆಗಬಲ್ಲೆವು.

ಈ ದೃಷ್ಟಿಯನ್ನು ಉಪಯೋಗಿಸಿಕೊಂಡರೆ ಜಗತ್ತಿನಲ್ಲಿ ನಮ್ಮ ಉಳಿವು ಸಾಧ್ಯ. “ಪಾಕಿಸ್ತಾನದ ಉಗ್ರನೂ ಭಾರತವನ್ನು ಮುಟ್ಟುವುದು ಬೇಡ. ನಮ್ಮ ನಿತ್ಯದ ಊಟ ಕೂಡಾ ಅಲ್ಲಿಂದಲೇ ಬರುತ್ತಿದೆ” ಎಂದು ಹೇಳುವ ಸ್ಥಿತಿ ಆಗ ನಿರ್ಮಾಣವಾಗುತ್ತದೆ. ಆಪ್ ಹಿಂದೆ, ಸೂಪರ್ ಕಂಪ್ಯೂಟರ್ ಹಿಂದೆ ಓಡುವ ಬದಲು; ಮೂಲಭೂತ ಅಗತ್ಯಗಳಾದ ನೀರು-ಕೃಷಿ, ಭೂಕಂಪವಾದಾಗ ೪೫ ನಿಮಿ?ಗಳಲ್ಲಿ ಯಾವ ರೀತಿ ಬಿದಿರಿನಿಂದ ಒಂದು ಆಸ್ಪತ್ರೆಯನ್ನು ಕಟ್ಟಬಹುದು, ನೆರೆ ಬಂದಾಗ ತತ್‌ಕ್ಷಣದಲ್ಲಿ ಹೇಗೆ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುವ ಕಾರ್ಯಮಾಡಬಹುದು…. ಇಂತಹದ್ದರ ಕಡೆಗೆ ಆವಿ?ರ ಆಗಬೇಕು. ಭಾರತೀಯರಲ್ಲದೆ ಇನ್ನಾರೂ ಇದನ್ನು ಮಾಡಲು ಸಾಧ್ಯವಿಲ್ಲ. ನಮ್ಮಲ್ಲಿ, ನಮ್ಮ ಜನರಲ್ಲಿ ಆ ಕ್ರಿಯಾತ್ಮಕತೆ ಇದೆ. ಆಗ ನಾವು ಜಗತ್ತಿನ ಲೀಡರ್ ಆಗಬಲ್ಲೆವು. ಆದರೆ ಇದನ್ನು ನಮ್ಮ ಶಿಕ್ಷಣ ಹೇಳುತ್ತಿಲ್ಲ. ನಾನು ಐ.ಐ.ಟಿ. ಒಂದಕ್ಕೆ ಇತ್ತೀಚೆಗೆ ಮಜ್ಜಿಗೆ ಕಡೆಯುವ ಯಂತ್ರವನ್ನು ಹೇಗೆ ಇನ್ನೂ ಹೆಚ್ಚು ಸಮರ್ಥವಾಗಿ ಕೆಲಸ ಮಾಡುವಂತೆ ತಯಾರಿಸಬಹುದು ಎನ್ನುವ ಪ್ರಾಜೆಕ್ಟ್ ಅನ್ನು ಕೊಟ್ಟಿದ್ದೆ. ಕೊಟ್ಟು ೨-೩ ತಿಂಗಳಾದರೂ ಪರಿಹಾರ ಬಂದಿಲ್ಲ. ಯಾಕೆಂದರೆ ಶಿಕ್ಷಣದ ಸಿಲಬಸ್‌ಗೆ ಇದು ಒಳಪಟ್ಟಿಲ್ಲ, ಗ್ರೇಡ್‌ಮಾರ್ಕ್ಸ್‌ಗೆ ಇದು ಅನ್ವಯವಾಗುವುದಿಲ್ಲ. ರೆಸ್ಯೂಮ್‌ನಲ್ಲಿ ಬರೆದರೆ ಕೆಲಸ ಕೊಡುವವರೂ ಇಲ್ಲ. ಆದರೆ ಇಂತಹ ಸಣ್ಣಸಣ್ಣ ಆವಿಷ್ಕಾರಗಳೇ ಇಂದು ಜಗತ್ತಿಗೆ ಬೇಕಾಗಿರುವುದು. ಈ ಪರಿಹಾರ ಕಂಡುಕೊಂಡು ಅದೇ ತಂತ್ರಜ್ಞಾನ ಬಳಸಿಕೊಂಡು ಹೊಲಿಗೆಯಂತ್ರ ಅಥವಾ ಇನ್ನಾವುದೇ ಯಂತ್ರಗಳನ್ನು ಡೆವಲಪ್ ಮಾಡುವ ಮೂಲಕ ಎಷ್ಟು ಬಡದೇಶಗಳಿಗೆ ಜೀವನೋಪಾಯದ ಹಾದಿಯಾಗಬಲ್ಲೆವು. ಇದು, “Thought in India, Created in India and Solution for the World”. ಆಗ ಜಗತ್ತಿನ ಯಾವುದೇ ದೇಶವು ನಮ್ಮ ಮೇಲೆ ಆಕ್ರಮಣ ಮಾಡಲು ಎರಡು ಸಲ ಯೋಚಿಸಬೇಕಾದಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ; ಭಾರತ ಸದೃಢವಾಗುತ್ತದೆ.

ಈ ’ಜನಾಂಗೀಯತೆ’ ಅಥವಾ ಮೇಲು-ಕೀಳು ಎನ್ನುವುದನ್ನು ತೊಡೆದು ಹಾಕಬೇಕು; ಸಮಸ್ಯೆಯನ್ನು ನಿರ್ಮೂಲನೆ ಮಾಡಬೇಕು ಎನ್ನುವ ಉದ್ದೇಶದಿಂದ ಈ ಕ್ಷೇತ್ರವನ್ನು ಆರಿಸಿಕೊಂಡೆ. ಜನಾಂಗೀಯತೆ ಎಂದರೆ ನಾನು ಜಾತಿವಿಷಯ ಮಾತನಾಡುತ್ತಿಲ್ಲ. ನಮ್ಮಲ್ಲಿ ನಿಜವಾಗಿಯೂ ಇರುವುದು ಬೌದ್ಧಿಕ ಜನಾಂಗೀಯತೆ. ಯಾರು ಬಡವನೋ ಅವನ ಬಳಿ ಬುದ್ಧಿಮತ್ತೆ ಇಲ್ಲ, ಅವನಲ್ಲಿ ಅದ್ಭುತವಾದ ಯೋಚನೆಯೊಂದೂ ಇಲ್ಲ ಎಂದು ಅಂದುಕೊಳ್ಳುವುದೇ ನಾವು ಮಾಡುತ್ತಿರುವ ದೊಡ್ಡ ತಪ್ಪು. ಒಬ್ಬ ಬೀದಿಬದಿಯ ವ್ಯಾಪಾರಿಯನ್ನು ನೋಡಿ. ಯಾವತ್ತಾದರೂ ಆತನಿಗೆ ವ್ಯವಹಾರದಲ್ಲಿ ಪೂರ್ತಿ ನಷ್ಟವಾಗಿದೆ; ಆತ ಊರು ಬಿಟ್ಟು ಹೋದ ಎಂಬ ಮಾತನ್ನು ಕೇಳಿದ್ದೇವೆಯೆ? ಇಲ್ಲ. ಅದೇ ಮಲ್ಯ ಅವರು ಅಷ್ಟೆಲ್ಲಾ ಆರ್ಥಿಕ ಭದ್ರತೆ ಇದ್ದೂ, ಎಂ.ಬಿ.ಎ. ಎನ್ನುವ ಡಿಗ್ರಿ ಇದ್ದುಕೊಂಡೂ, ಈವತ್ತು ಅವರ ಸ್ಥಿತಿ ಏನಾಗಿದೆ? ಅದೇ ಈ ಬಡವರು ಎಂದು ನಾವು ಹೇಳುವವರು, ಯಾವುದೇ ಬಿಸಿನೆಸ್ ಪ್ಲಾನಿಂಗ್ ಡಿಗ್ರಿಯನ್ನೂ ಪಡೆಯದವರು ಅಂತಹ ಸ್ಥಿತಿಗೆ ಬಂದಿಲ್ಲ. ನಮ್ಮಲ್ಲಿರುವ ಬೌದ್ಧಿಕ ಜನಾಂಗೀಯತೆ (Intellectual racism) ಜಾತೀಯತೆಗಿಂತಲೂ ಅಪಾಯಕಾರಿಯಾದದ್ದು.

ಉದಾಹರಣೆಗೆ, ನಾವು ಕಬ್ಬುಕೃಷಿಯ ವಿಚಾರದಲ್ಲಿ ಪಿಎಚ್.ಡಿ. ಮಾಡುತ್ತೇವೆ. ನಮ್ಮನ್ನು ಆ ವಿ?ಯದಲ್ಲಿ ಎಕ್ಸ್‌ಪರ್ಟ್ ಎನ್ನುತ್ತಾರೆ. ಅದೇ ಒಬ್ಬ ರೈತ ೪೫ ವ?ದಿಂದ ಕಬ್ಬು ಬೆಳೆಯುತ್ತಿದ್ದಾನೆ, ಅದೇ ವಿಚಾರದಲ್ಲಿ ಆತ ನುರಿತವ. ಆದರೂ ಆತನನ್ನು ಎಕ್ಸ್‌ಪರ್ಟ್ ಎನ್ನುವುದಿಲ್ಲ, ಯಾಕೆ? ಆತನಲ್ಲಿ ಡಿಗ್ರಿ ಇಲ್ಲ. ಇದನ್ನೇ ಬೌದ್ಧಿಕ ಮೇಲು-ಕೀಳು ಎನ್ನುತ್ತಿದ್ದೇನೆ. ಇದು ಎಲ್ಲರ ಮನಸ್ಸಿನಿಂದ ಹೋಗಬೇಕು, ಪ್ರತಿ ಕೃಷಿಕನಿಗೂ ಸಿಗಬೇಕಾದ ಗೌರವ ಸಿಗಬೇಕು ಎನ್ನುವುದು ನನ್ನ ಉದ್ದೇಶ.

ಡಿಗ್ರಿ ಎನ್ನುವುದು ನಮ್ಮಲ್ಲಿ ಅಂತರ ಸೃಷ್ಟಿಸುತ್ತಿದೆಯೇ ಹೊರತು ನಮ್ಮನ್ನು ಒಂದುಮಾಡುತ್ತಿಲ್ಲ. ಶುದ್ಧವಾದ ಕನ್ನಡ, ಒರಿಯಾ, ಂಗಾಲಿ ಭಾ? ಮಾತನಾಡುವವರಿಗೆ ಇಂದು ಉದ್ಯೋಗ ಎಲ್ಲಿ ಸಿಗುತ್ತಿದೆ? ಇಂಗ್ಲಿಷ್ ನಮ್ಮತನವನ್ನೇ ಕೊಲ್ಲುತ್ತಿದೆ. ಇಂಗ್ಲಿಷ್ ಒಂದು ಭಾಷೆಯಾಗಿ, ಅದರ ಮೇಲೆ ನನಗೆ ಖಂಡಿತವಾಗಿಯೂ ಗೌರವವಿದೆ. ಆದರೆ ಇಂಗ್ಲಿಷ್ ಸರ್ವಸ್ವ ಎನ್ನುವ ಸ್ಥಿತಿಯನ್ನು ನಾವು ಸೃಷ್ಟಿಸಿಕೊಂಡಿದ್ದೇವೆ. ಅದೇ ಚೈನಾ, ಫ್ರಾನ್ಸ್ ಮುಂತಾದ ದೇಶಗಳನ್ನು ನೋಡಿ. ಅಲ್ಲಿ ಅವರ ಸ್ಥಳೀಯ ಭಾಷೆಯೇ ನಡೆಯುತ್ತದೆ. ದಕ್ಷಿಣಕನ್ನಡದಲ್ಲಿ ತುಳು, ಕೊಂಕಣಿ ಭಾಷೆಗಳು ಇಂದಿಗೂ ತಮ್ಮ ಜೀವಂತಿಕೆಯನ್ನು ಉಳಿಸಿಕೊಂಡಿವೆ. ಏಕೆ? ಅವು ಅಲ್ಲಿನ ವ್ಯಾವಹಾರಿಕ ಭಾಷೆಗಳು. ಯಾವಾಗ ಭಾಷೆ ವ್ಯಾವಹಾರಿಕ ಭಾಷೆಯಾಗಿ ಬಳಸಲ್ಪಡುತ್ತದೋ ಆಗ ಭಾಷೆ ಉಳಿಸಿ ಎನ್ನುವ ಕೂಗಿನ ಅಗತ್ಯ ಇಲ್ಲ. ಸ್ವಲ್ಪ ಸಮಯದ ಹಿಂದೆ ಬೆಂಗಳೂರಿನ ಕಾಲೇಜೊಂದರಲ್ಲಿ ನಡೆದ ’ಕನ್ನಡ ಭಾಷೆಯನ್ನು ಹೇಗೆ ಉಳಿಸಬಹುದು’ ಎನ್ನುವ ಕಾರ್ಯಕ್ರಮಕ್ಕೆ ಹೋಗಿದ್ದೆ. ಹೆಚ್ಚಿನವರೆಲ್ಲಾ ಐ.ಟಿ. ಕಂಪೆನಿಗಳಲ್ಲಿ ಕೆಲಸ ಮಾಡುವವರಾಗಿದ್ದರು. ಎಲ್ಲರು ತಮ್ಮತಮ್ಮ ಯೋಚನೆ-ಯೋಜನೆಗಳನ್ನು ಹೇಳಿದರು. ನಾನು ಕೇಳಿದ್ದು ಒಂದೇ ಪ್ರಶ್ನೆ: ’ಕನ್ನಡದಲ್ಲಿ ರೆಸ್ಯೂಮ್ ತೆಗೆದುಕೊಳ್ಳುವ ಒಂದೇ ಒಂದು ಕಂಪೆನಿ ಹೆಸರು ಹೇಳಿ’ ಎಂದು. ಯಾವುದೂ ಇಲ್ಲ. ಯಾವಾಗ ಕನ್ನಡದಲ್ಲಿ ರೆಸ್ಯೂಮ್ ತೆಗೆದುಕೊಳ್ಳುವ ದಿನ ಬರುತ್ತದೋ, ಆಗ ಕನ್ನಡ ತಾನೇ ತಾನಾಗಿ ಉಳಿಯುತ್ತದೆ, ಬೆಳೆಯುತ್ತದೆ.

ನಿಜವಾದ ಭಾರತವನ್ನು ನೋಡಿ – ಮೂಲಸಮಸ್ಯೆಯನ್ನು ಅರ್ಥೈಸಿಕೊಳ್ಳಿ

ಭಾರತವನ್ನು ನೋಡುವ ದೃಷ್ಟಿ, ಭಾರತದಲ್ಲಿರುವ ಸಮಸ್ಯೆಗಳನ್ನು ನಾವು ಅರ್ಥೈಸಿಕೊಳ್ಳುವ ರೀತಿ ಬದಲಾಗಬೇಕು. ಸಮಸ್ಯೆಯೊಂದು ಉಳಿದು ಬೆಳೆಯುತ್ತಿದೆ ಎಂದರೆ, ಅದರ ಮೂಲವನ್ನು ಹುಡುಕಬೇಕು. ಸಮಸ್ಯೆಯ ಒಳಹೊಕ್ಕಲ್ಲದೆ, ಮೇಲಿನಿಂದ ಮೇಲೆ ಕಾರಣವಾದವರನ್ನು ಬೈದುಕೊಳ್ಳುತ್ತಾ ಕುಳಿತರೆ ಪ್ರಯೋಜನವಿಲ್ಲ. ಸಮಸ್ಯೆ ಎಲ್ಲಿಂದ ಆರಂಭವಾಯಿತೋ ಅಲ್ಲಿಯೇ ಪರಿಹಾರ ಕಾಣಬೇಕು.

ದೆಹಲಿಯಿಂದ ಕೋಲ್ಕತಾಗೆ ಟಿಕೆಟ್ ಮೊದಲೇ ಕಾಯ್ದಿರಿಸದೆ ರೈಲಿನಲ್ಲಿ ಪ್ರಯಾಣ ಮಾಡಬೇಕು. ಆಗ ನೈಜ ಭಾರತದ, ಭಾರತೀಯರ ಇಷ್ಟ-ಕಷ್ಟಗಳ ಅರಿವಾಗುತ್ತದೆ. ಧನ್ಬಾದ್ ಕಲ್ಲಿದ್ದಲು ಗಣಿಗಾರಿಕೆಗೆ ಹೆಸರಾದ ಊರು. ಪ್ರಪಂಚದಲ್ಲಿಯೇ ಅತ್ಯಂತ ಕೆಟ್ಟಸ್ಥಿತಿಯಲ್ಲಿ ಕೆಲಸ ಮಾಡುತ್ತಿರುವ ಕೂಲಿಗಳಲ್ಲಿ ಎರಡನೆಯ ಸ್ಥಾನ ಧನ್ಬಾದ್ ಗಣಿಗಳಲ್ಲಿ ಕೆಲಸ ಮಾಡುವವರದ್ದಾಗಿದೆ. ನಾನು ಒಮ್ಮೆ ಧನ್ಬಾದ್‌ನಿಂದ ಕೋಲ್ಕತಾಗೆ ರೈಲಿನಲ್ಲಿ ಈ ರೀತಿ ಪ್ರಯಾಣ ಮಾಡಿದ್ದೆ. ಹಬ್ಬದ ಸಮಯದಲ್ಲಿ ರೈಲಿನಲ್ಲಿ ಪ್ರಯಾಣ ಮಾಡುವುದು ಒಂದು ಕಲೆ; ನನಗೆ ನಿಂತುಕೊಳ್ಳಲು ಒಂದು ಜಾಗ ಸಿಕ್ಕಿತ್ತು. ಅದು ರೈಲಿನ ಬಚ್ಚಲು ಕೋಣೆ, ಆರು ಮಂದಿ ಆ ಕೋಣೆಯಲ್ಲಿ ಏಳು ಗಂಟೆಗಳ ಕಾಲ ನಿಂತೇ ಪ್ರಯಾಣಮಾಡಿದೆವು. ಅಂದು ನಡೆದಿದ್ದ ಮಾತುಕತೆ ನನ್ನ ಜೀವನದಲ್ಲೇ ಶ್ರೇ? ಮತ್ತು ಮರೆಯಲಾಗದ ಜೀವನಪಾಠವನ್ನು ಕಲಿಸಿದ ಮಾತುಕತೆ. ಎಲ್ಲರೂ ಬೇರೆಬೇರೆ ಊರು-ರಾಜ್ಯದವರಾಗಿದ್ದೆವು. ಯಾತಕ್ಕಾಗಿ ನಾವು ಗುಳೆಹೋಗುತ್ತೇವೆ, ಹೇಗೆ ಹಣ ಸಂಪಾದಿಸುತ್ತೇವೆ, ಕಳ್ಳತನದ ಹಾದಿ ಏಕೆ ಹಿಡಿದೆವು ಇಂತಹ ವಿಚಾರಗಳೇ ನಮ್ಮ ಮಾತುಕತೆಯಾಗಿತ್ತು.

ಒಬ್ಬ ಹೇಳುತ್ತಾನೆ, “ನಮಗೆ ಶೇ. ೩೦ರಷ್ಟು ಹಣದ ರೂಪದಲ್ಲಿ ವೇತನ ಸಿಗುತ್ತದೆ, ಉಳಿದ ಶೇ. ೭೦ ಮದ್ಯದ ರೂಪದಲ್ಲಿ ಸಿಗುತ್ತದೆ. ಇನ್ನು ನಾವು ಮದ್ಯವ್ಯಸನಿಗಳಾಗಬಾರದು ಎಂದರೆ ಹೇಗೆ ಸಾಧ್ಯ?” ಎಂದು. ವೇತನವನ್ನು ಆಲ್ಕೋಹಾಲ್ ರೂಪದಲ್ಲಿ ಕೊಟ್ಟು ವ್ಯಸನಿಗಳಾಗಬೇಡಿ, ಜೀವನ ಹಾಳಾಗುತ್ತದೆ ಎನ್ನುತ್ತೀರಿ. ತಪ್ಪು ನಮ್ಮದೋ ಅಥವಾ ವೇತನ ನೀಡುತ್ತಿರುವವರದ್ದೋ? ಸಮಸ್ಯೆಯ ಮೂಲ ಯಾರು?

ಇನ್ನೊಬ್ಬಾತನ ಜೀವನ ಕಷ್ಟಗಳ ಸರಮಾಲೆಯನ್ನೇ ಹೆಣೆದಂತಿತ್ತು. ಮಗುವನ್ನು ಹೆತ್ತು ತಾಯಿ ಕೊನೆಯುಸಿರೆಳೆದಿದ್ದಾಳೆ. ಮಗುವಿನ ಆರೋಗ್ಯ ಸ್ಥಿತಿಯೂ ಚೆನ್ನಾಗಿಲ್ಲ. ಆದರೆ ಸರ್ಕಾರಿ ಆಸ್ಪತ್ರೆಯ ವೈದ್ಯ ಚಿಕಿತ್ಸೆಗೆ ಹಣ ಕೇಳುತ್ತಿದ್ದಾನೆ. ಇಂತಹ ಸ್ಥಿತಿಯಲ್ಲಿ ನನಗೆ ವೈದ್ಯನನ್ನೇ ಕೊಲ್ಲುವಂತಹ ರೋಷ ಬಂದಿತ್ತು. ಅನಿವಾರ್ಯವಾಗಿ ಎಲ್ಲೋ ಕಳ್ಳತನ ಮಾಡಿ, ಅದೇ ಹಣದಲ್ಲಿ ಮಕ್ಕಳಿಗೆ ಚಿಕಿತ್ಸೆ ಕೊಡಿಸಿದೆ. ಹೀಗೆ ಹೇಳಿದ ಆತ ನನ್ನಲ್ಲಿ ಕೇಳುತ್ತಾನೆ, “ನೀವು ನನ್ನ ಸ್ಥಾನದಲ್ಲಿ ಇರುತ್ತಿದ್ದರೆ ಏನು ಮಾಡುತ್ತಿದ್ದಿರಿ? ಜೊತೆಗಿರಬೇಕಿದ್ದ ಸಂಗಾತಿ ಕೊನೆಯುಸಿರು ಎಳೆದಿದ್ದಾಳೆ, ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನೊಬ್ಬನ ಹೆಗಲ ಮೇಲೆ ಬಿದ್ದಿದೆ, ಮಗುವಿನ ಆರೋಗ್ಯವೂ ಹದಗೆಟ್ಟಿದೆ, ಡಾಕ್ಟರ್ ಹಣ ಕೇಳುತ್ತಿದ್ದಾನೆ. ಕಡುಬಡವನಾಗಿದ್ದ ನನಗೆ ಕದಿಯುವುದಲ್ಲದೆ ಅನ್ಯಮಾರ್ಗವೇ ಕಾಣಿಸಲಿಲ್ಲ” ಎಂದು.

ಇನ್ನಿಬ್ಬರು ಹೆಂಗಸರು ಹೇಳಿದ ಘಟನೆಯೂ ಮನಕಲಕುವಂತದ್ದಾಗಿತ್ತು. ಅವರಿದ್ದ ಊರಿನಲ್ಲಿ ನೀರಿಗೆ ಬರ. ಕುಡಿಯಲೂ ನೀರಿಲ್ಲದ ಸ್ಥಿತಿಯಲ್ಲಿ, ಬಟ್ಟೆ ತೊಳೆಯುವುದನ್ನು ಯೋಚಿಸಲೂ ಸಾಧ್ಯವಿಲ್ಲದಂತಹ ಪರಿಸ್ಥಿತಿ ಅವರದ್ದು. ಇಂತಹ ಸ್ಥಿತಿಯಲ್ಲಿ ಸೀರೆ ಕೆಟ್ಟವಾಸನೆ ಬರುತ್ತಿದೆ, ದೇಹ ದುರ್ಗಂಧ ಬೀರುತ್ತಿದೆ ಎಂದು ತಮ್ಮ ಗಂಡಂದಿರು ಪರವೂರಿನ ಹೆಂಗಸಿನ ಸಹವಾಸ ಬೆಳೆಸಿಕೊಂಡಿದ್ದಾರೆ. ನನ್ನ ಮದುವೆಯ ಸಂಬಂಧವನ್ನು ಉಳಿಸಲು ಸಾಧ್ಯವೇ, ಎಂದು ಅವರು ಕೇಳುತ್ತಾರೆ. ಇದೇ ಘಟನೆ ದಕ್ಷಿಣಕನ್ನಡದಲ್ಲೂ ನಾನು ಎದುರಿಸಿದ್ದೇನೆ. ಹಳ್ಳಿಯಾಕೆ ಒಬ್ಬಳು ಹೇಳುತ್ತಾಳೆ, ಉಡಲು ಇರುವುದು ಲೆಕ್ಕದ ಎರಡು ಸೀರೆ. ಮಳೆಗಾಲದಲ್ಲಿ ತೊಳೆದು ಹಾಕಿದ ಬಟ್ಟೆ ಸರಿಯಾಗಿ ಒಣಗುವುದಿಲ್ಲ, ಫಂಗಸ್‌ನಿಂದಾಗಿ ದುರ್ವಾಸನೆ ಬೀರುತ್ತವೆ. ಅವರದ್ದು ಡ್ರೈಯರ್ ವ್ಯವಸ್ಥೆ ಮಾಡಿಕೊಳ್ಳುವ? ಸದೃಢ ಕುಟುಂಬವಲ್ಲ. ಪರಿಣಾಮವಾಗಿ ಗಂಡ ಮತ್ತೊಬ್ಬ ಹೆಂಗಸಿನ ಬಳಿ ತೆರಳುತ್ತಾನೆ. ಈಕೆಯ ಪ್ರಶ್ನೆಯೂ ಅದುವೇ, ತನ್ನದಲ್ಲದ ತಪ್ಪಿಗೆ ತನ್ನ ಮದುವೆಯ ಸಂಬಂಧ ಕುಸಿದುಬೀಳುತ್ತಿದೆ. ಉಳಿಸಲು ದಾರಿಯಿದೆಯೇ ಎಂದು.

ನನ್ನ ಬಳಿ ಇವರ ಯಾವ ಸಮಸ್ಯೆಗಳಿಗೆ, ಪ್ರಶ್ನೆಗಳಿಗೂ ಆಗ ಉತ್ತರವಿರಲಿಲ್ಲ. ನನ್ನ ಪಿ.ಎಚ್‌ಡಿ., ಒಂದು ಕ್ಲಿಕ್‌ಗೆ ಉತ್ತರ ಕೊಡುವ ಗೂಗಲ್ ರಿಸರ್ಚ್ ಎಲ್ಲವೂ ಇದ್ದು ಇಂತಹ ಮೂಲಸಮಸ್ಯೆಗಳಿಗೆ ಪರಿಹಾರ ಕೊಡಲು ಸಾಧ್ಯವಾಗಿಲ್ಲ. ಇವೆಲ್ಲ ಇದ್ದೂ ಪ್ರಯೋಜನವಾದರು ಏನಾಯಿತು? ಸಮಸ್ಯೆಯ ಮೂಲದಲ್ಲಿ ಪರಿಹಾರ ಒದಗಿಸದೆ ಗೂಗಲ್, ಸೂಪರ್‌ಕಂಪ್ಯೂಟರ್, ಎಂತಹದ್ದೇ ಸಾಧನೆ ಮಾಡಿದರೂ ಅದು ವ್ಯರ್ಥ. ಭಾರತದಲ್ಲಿ, ಬಡವರಿಗೆ ಸಿಗಬೇಕಾಗಿದ್ದ ಹಣದಲ್ಲಿ ಸಬ್ಸಿಡಿ ಪಡೆದುಕೊಂಡು ವಿದ್ಯಾಭ್ಯಾಸ ಮಾಡಿ ಮುಂದೆ ವಿದೇಶದಲ್ಲಿ ಕುಳಿತು ಭಾರತ ಸರಿಯಿಲ್ಲ ಎನ್ನುವುದು ಸುಲಭ. ಸಾಧ್ಯವಾದರೆ ಇಲ್ಲಿನ ಮೂಲಕ್ಕೆ ಇಳಿದು ಸಮಸ್ಯೆಗಳನ್ನು ಅರ್ಥೈಸಿಕೊಳ್ಳಿ, ನಿರ್ಮೂಲನೆ ಮಾಡಿ. ಜನ ನಿಮ್ಮನ್ನು ಒಪ್ಪಿಕೊಳ್ಳುತ್ತಾರೆ, ಅಪ್ಪಿಕೊಳ್ಳುತ್ತಾರೆ, ಬೆಳೆಸುತ್ತಾರೆ.

ಮೊನ್ನೆ ಒಬ್ಬರು ಮಾತನಾಡುತ್ತಾ ಹೇಳಿದರು – “ನಮ್ಮ ಕಂಪೆನಿ ಮಕ್ಕಳು ಹಳ್ಳಿಯ ಮಕ್ಕಳಿಗೆ ಪಾಠ ಹೇಳಿಕೊಡಲು ಪ್ರತಿವಾರ ಹೋಗುತ್ತಾರೆ” ಎಂದು. ಈ ಮನಃಸ್ಥಿತಿಯೇ ಸರಿ ಇಲ್ಲ. ಹಳ್ಳಿಯ ಮಕ್ಕಳು ಜೀವನಪಾಠವನ್ನೇ ನಮಗೆ ಹೇಳಿಕೊಡುವ? ಬಲ್ಲವರಾಗಿರಬಹುದು. ನಾವು ಯಾವ ಲೆಕ್ಕಾಚಾರದಲ್ಲಿ ಸಿಟಿಯಲ್ಲಿ ಕಲಿಯುತ್ತಿರುವ ಮಕ್ಕಳು ಮಾತ್ರ ಬುದ್ಧಿವಂತರು, ತಮ್ಮ ಮಕ್ಕಳು ಮಾತ್ರ ಅವರಿಗೆ ಹೇಳಿಕೊಡಬಲ್ಲರು ಎನ್ನುವ ನಿರ್ಧಾರಕ್ಕೆ ಬರುತ್ತೇವೆ? ಹಳ್ಳಿಯವರಲ್ಲಿ ಶಕ್ತಿ-ಯುಕ್ತಿ ಇಲ್ಲ ಎಂದು ತಿಳಿದುಕೊಳ್ಳುವ ನಾವೇ ನಿಜವಾದ ಮೂರ್ಖರು.

ನಾವು ಈ ಭೂಮಿಯನ್ನು ಹಿಂದಿನವರಿಂದ ತೆಗೆದುಕೊಂಡಿರುವುದಲ್ಲ, ನಮ್ಮ ಮುಂದಿನ ಪೀಳಿಗೆಯಿಂದ ಬಾಡಿಗೆಗೆ ಪಡೆದಿದ್ದೇವೆ. ಮುಂದಿನ ಪೀಳಿಗೆಗೆ ಸರಿಯಾದ ರೀತಿಯಲ್ಲಿ ಇದನ್ನು ದಾಟಿಸುವುದು ನಮ್ಮ ಕರ್ತವ್ಯ. ಮಕ್ಕಳ ನಡವಳಿಕೆ ಸರಿಯಿಲ್ಲದಿದ್ದಾಗ ನಾವು ಹೆತ್ತವರನ್ನು ದೂಷಿಸುವಂತೆ, ಪೀಳಿಗೆಯೊಂದು ಸರಿ ಇಲ್ಲದಿದ್ದಾಗ ಹಿಂದಿನ ಪೀಳಿಗೆಯನ್ನು ದೂಷಿಸಬೇಕಾಗುತ್ತದೆ. ಆದ್ದರಿಂದ ಭೂಮಿಯನ್ನು ನಮಗೆ ಸಿಕ್ಕ ಪರಿಶುದ್ಧ ರೀತಿಯಲ್ಲಿ ಮುಂದಿನ ಪೀಳಿಗೆಗೆ ದಾಟಿಸುವುದು ನಮ್ಮ ಜವಾಬ್ದಾರಿಯಾಗಿದೆ.

ಈ ಎಲ್ಲ ವಿಚಾರಗಳನ್ನು ಮನದಲ್ಲಿಟ್ಟುಕೊಂಡು ನಾನು ಸಮಸ್ಯೆಯ ಮೂಲವನ್ನು ಅರಸುತ್ತಾ, ಅದನ್ನು ನಿರ್ಮೂಲನೆ ಮಾಡುವ ದೃಷ್ಟಿಯಿಂದ ಈ ಕ್ಷೇತ್ರಕ್ಕೆ ಬಂದಿದ್ದೇನೆ.

ಪ್ರಶ್ನೆ: ಸೆಲ್ಕೋ ಸಂಸ್ಥೆಯನ್ನು ಆರಂಭಿಸಲು ಪ್ರೇರಣೆ ಯಾರು? ಹೇಗೆ? 

ಉತ್ತರ: ಬಹಳಷ್ಟು ಜನ ಇದ್ದಾರೆ. ನಾನು ೧೯೯೨ರಲ್ಲಿ ಲ್ಯಾಟಿನ್ ಅಮೆರಿಕಕ್ಕೆ ಹೋಗಿದ್ದೆ. ೭೫ ವರ್ಷ ಪ್ರಾಯದ ಓದಲು ಬರೆಯಲು ಬಾರದ ಸ್ಪ್ಯಾನಿಷ್  ಜೆಂಟಲ್‌ಮ್ಯಾನ್ ಆತ. ಮನೆ ಒಳಗೆ ಹೋದವನೇ ೨-೩ ಸಲ ಸ್ವಿಚ್ ಆನ್-ಆಫ್ ಮಾಡಿದ; ಲೈಟ್‌ಬಲ್ಬ್ ಉರಿಯಿತು. ಅದು ಸೋಲಾರ್ ಪವರ್‌ನಿಂದ ಉರಿಯುವ ಬಲ್ಬ್ ಆಗಿತ್ತು. ೭೫ ವರ್ಷ ಪ್ರಾಯದ ಆತನಿಗೆ ಟೆಕ್ನಾಲಜಿಯನ್ನು ಸಕಾರಾತ್ಮಕವಾಗಿ ಬಳಸುವುದು ತೊಂದರೆ ಎಂದು ಯಾವತ್ತೂ ಅನ್ನಿಸಲೇ ಇಲ್ಲ.

ಇಂತಹ ವ್ಯಕ್ತಿಗಳೇ ನನಗೆ ಪ್ರೇರಣೆ.

ಪ್ರಶ್ನೆ: `ಸ್ಟಾರ್ಟ್‌ಅಪ್’ ಇಂದು ಅತ್ಯಂತ  ಚರ್ಚಿತವಾಗುತ್ತಿರುವ ವಿಷಯ. ನೀವು ೨೦ ವರ್ಷಗಳ ಹಿಂದೆಯೇ ಪುನರ್ಬಳಕೆಯ ಇಂಧನಮೂಲ ಕ್ಷೇತ್ರದಲ್ಲಿ ಇಂತಹ ಒಂದು ಕ್ರಾಂತಿಯನ್ನು ಮಾಡಿದವರು, ಇದರ ಕುರಿತಾಗಿ ಏನು ಹೇಳಬಯಸುತ್ತೀರಿ? 

ಉತ್ತರ: ಈ ’ಸ್ಟಾರ್ಟ್‌ಅಪ್ ಇಂಡಿಯಾ’, ’ಮೇಡ್ ಇನ್ ಇಂಡಿಯಾ’ ಎನ್ನುವುದು ‘Thought in India’ ಆಗಬೇಕು. ಇಂದು, ಸ್ಕಿಲ್ ಟ್ರೈನಿಂಗ್ ಪ್ರೋಗ್ರಾಂ ಕೊಟ್ಟು ಕೊನೆಗೆ ಅವರು ಇನ್ಯಾವುದೋ ವಿದೇಶೀ ಇಂಡಸ್ಟ್ರಿಯಲ್ಲಿ ಕೂಲಿಗಳಾಗಿ ಕೆಲಸಮಾಡುವ ಸ್ಥಿತಿ ನಿರ್ಮಾಣವಾಗಿದೆ. ವಿದೇಶೀ ಕಂಪೆನಿಗಳು ನಮ್ಮಲ್ಲಿ ಬಂದು, ಅವರ ಪ್ರಾಡಕ್ಟ್‌ಗಳನ್ನು ನಮ್ಮಲ್ಲಿ ತಯಾರಿಸುತ್ತಾರೆ. ಅವುಗಳಲ್ಲಿ ನಮ್ಮ ಜನ ಕೂಲಿಗಳಾಗುತ್ತಾರೆ. ಆ ಪ್ರಾಡಕ್ಟ್‌ಗೆ ಮೇಡ್ ಇನ್ ಇಂಡಿಯಾ ಸೀಲ್ ಬೀಳುತ್ತದೆ. ಇದರಲ್ಲಿ ನಮ್ಮ ಕ್ರಿಯಾತ್ಮಕತೆ ಏನಿದೆ? ನಮ್ಮಲ್ಲಿನ ಕ್ರಿಯಾತ್ಮಕತೆಯನ್ನು ನಾವೇ ಕೊಲ್ಲುತ್ತಿದ್ದೇವೆ. ಪ್ರಧಾನಿಯವರ ಬಗ್ಗೆ ಎರಡು ಮಾತಿಲ್ಲ. ಉದ್ಯೋಗ ಸೃಷ್ಟಿಗೆ ಅವರಿಂದ ಸಾಧ್ಯವಾದ ಮಟ್ಟಿಗೆ ಸಂಪೂರ್ಣ ಪ್ರಯತ್ನವನ್ನು ಮಾಡುತ್ತಿದ್ದಾರೆ. ಆದರೆ ಇದರ ಭವಿಷ್ಯ ಗಟ್ಟಿಯಿಲ್ಲ. ಇಂದು ನಮ್ಮಲ್ಲಿ ಎಂ.ಎಸ್.- ವರ್ಡ್, ಎಕ್ಸೆಲ್, ಕಾಪಿ-ಪೇಸ್ಟ್ ಕೆಲಸಕ್ಕೆ ಇಂಗ್ಲಿಷ್ ಗೊತ್ತಿರುವ ಜನ ಕಡಮೆ ಕೂಲಿಗೆ ಸಿಗುತ್ತಿರುವಂತೆ; ನಾಳೆ ವಿಯೆಟ್ನಾಂನಲ್ಲಿನ ಜನ ಇಂಗ್ಲಿಷ್ ಕಲಿತು ಈ ಕೆಲಸ ಮಾಡುವ ಸಾಮರ್ಥ್ಯ ಹೊಂದಿದರೆ ಕಾಲ್‌ಸೆಂಟರ್ ಕಂಪೆನಿಗಳು ಅಲ್ಲಿಗೆ ಓಡುತ್ತವೆ. ಆಗ ಬೇಕಾಗುವುದು ’ಥಿಂಕ್ ಇನ್ ಇಂಡಿಯ’, ’ಥಾಟ್ ಇನ್ ಇಂಡಿಯ’ವೇ ಹೊರತು ಕೇವಲ ’ಮೇಡ್ ಇನ್ ಇಂಡಿಯ’ ಎನ್ನುವ ಸ್ಟ್ಯಾಂಪ್ ಅಲ್ಲ.

ನಾನು ಹೇಳುತ್ತಿರುವುದು ಇದು – `Thought in India – Made in India: Export that thinking process to Africa’ ಆಗಬೇಕು ಎಂದು. ಆಫ್ರಿಕಾದ ಜನತೆ ಇದು ಭಾರತೀಯರ ಕೊಡುಗೆ ಎಂದು ಹೇಳುವಂತಾಗಬೇಕು. ವಿದೇಶೀ ಕಂಪೆನಿಗಳಿಗೆ ಬಂಡವಾಳ ಹೂಡಬೇಡಿ ಎನ್ನುತ್ತಿಲ್ಲ, ಆದರೆ ಅದೇ ಸಮಯಕ್ಕೆ ನಮ್ಮ ಹಳ್ಳಿಗಳಿಗೆ ಅಷ್ಟೇ ಮೊತ್ತದ ಬಂಡವಾಳ ಹೂಡಿ. ’ವಾಲ್‌ಮಾರ್ಟ್’ ಭಾರತಕ್ಕೆ ಬರುವುದಾದರೆ ಶೇ. 6ಕ್ಕೆ ಸಾಲ ಕೊಡಲು ತಯಾರಿರುವ ಹಾಗೆಯೇ, ಬೀದಿಬದಿಯಲ್ಲಿ ವ್ಯಾಪಾರ ಮಾಡುವವನಿಗೂ ಅದೇ ಸವಲತ್ತು ನೀಡಿ. ಖಂಡಿತವಾಗಿಯೂ ಆತನಲ್ಲಿ ಅದನ್ನು ಬಳಸಿಕೊಂಡು ಬೆಳೆಯುವ ತಾಕತ್ತಿದೆ. ನಮ್ಮ ಗುರಿ ಅಮೆರಿಕ, ಯೂರೋಪ್ ಅಲ್ಲ. ಅವೆಲ್ಲವೂ ಈಗಾಗಲೇ ಅಭಿವೃದ್ಧಿ ಹೊಂದಿದ ದೇಶಗಳು. ನಮ್ಮ ಗುರಿ ಆಫ್ರಿಕಾ, ವಿಯೆಟ್ನಾಂನಂತಹ ದೇಶಗಳ ಮೇಲಿರಬೇಕು. ಅವರ ಜೀವನೋಪಾಯದ ಸಣ್ಣಸಣ್ಣ ಆವಶ್ಯಕತೆಗಳನ್ನು ಪೂರೈಸಿದರೆ ನಮ್ಮ ದೇಶವೂ ಸದೃಢವಾಗಬಲ್ಲದು. ನಾಳೆ ಆ ದೇಶಗಳು ಎಂತಹ ಪರಿಸ್ಥಿತಿ ಬಂದರೂ ನಮ್ಮ ವಿರುದ್ಧ ನಿಲ್ಲುವ ಧೈರ್ಯ ಮಾಡಲಾರವು.

’ಸ್ಟಾರ್ಟ್‌ಅಪ್’ ಅನ್ನು ಇಷ್ಟಪಡುವುದಿಲ್ಲ ಎಂದ ಮಾತ್ರಕ್ಕೆ ನಾನು ದೇಶದ್ರೋಹಿ ಅಲ್ಲ, ಆದರೆ ಪಶ್ಚಿಮದ ದೇಶಗಳನ್ನು ಅನುಸರಿಸಬೇಡಿ, ನಮ್ಮಲ್ಲಿರುವ ಟ್ಯಾಲೆಂಟ್‌ಗಳಿಗೆ ಅವಕಾಶದ ದಾರಿ ಮಾಡಿಕೊಡಿ ಎನ್ನುತ್ತಿದ್ದೇನೆ. ಎಷ್ಟು ಕಾಲ್‌ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದವರಿಗೆ ಇಂದು ಕೆಲಸವಿಲ್ಲ, ಕಾರಣ ಫಿಲಿಫೈನ್ಸ್‌ನಂತಹ ದೇಶಗಳಲ್ಲಿ ಕಡಮೆ ಕೂಲಿಗೆ ಸಿಗುತ್ತಿದ್ದಾರೆ. ಇದೇ ರೀತಿಯ ಬೆಳವಣಿಗೆಯಾದರೆ, ಮುಂದಿನ ೧೦-೨೦ ವರ್ಷಗಳಲ್ಲಿ ಕೆಲಸ ಇಲ್ಲದಂತಹ ಸ್ಥಿತಿ ಸೃಷ್ಟಿಯಾಗಬಹುದು. ಅದೇ ನಮ್ಮಲ್ಲಿ ಕೆಲಸ ಸೃಷ್ಟಿಸಿದರೆ ನೂರಾರು ವರ್ಷಗಳಿಗೂ ಅಂತಹ ಚಿಂತೆ ಕಾಡದು. ಯಾರ ಮೇಲೆಯೂ ಅವಲಂಬಿತರಾಗಬಾರದು.

ಪ್ರಶ್ನೆ: ಮೊದಲ ಬಾರಿಗೆ ಸೋಲಾರ್ ಲೈಟ್ ಅಳವಡಿಸಿದ ನೆನಪನ್ನು ಹಂಚಿಕೊಳ್ಳುತ್ತೀರಾ? 

ಉತ್ತರ: ಮೊದಲು ದಕ್ಷಿಣಕನ್ನಡದ ಪುತ್ತೂರಿಗೆ ಬಂದೆ. ಸೆಪ್ಟೆಂಬರ್ ೧೯೯೩ರಲ್ಲಿ ಕಾಸರಗೋಡಿನ ಮುಳ್ಳೇರಿಯಾದ ಅರವಿಂದ ರೈ ಅವರ ಮನೆಯಲ್ಲಿ ಮೊದಲ ಬಾರಿಗೆ ಸೋಲಾರ್ ಲೈಟ್ ಅಳವಡಿಸಿದೆವು. ಆಗ ಸೂರ್ಯನ ಬೆಳಕಿನಿಂದ ವಿದ್ಯುತ್ ಪಡೆಯುವುದು ಸಾಧ್ಯವಿಲ್ಲ, ಅದು ಒಂದು ಮ್ಯಾಜಿಕ್ ಶೋ ಎನ್ನುವಂತಹ ಸ್ಥಿತಿಯಿತ್ತು. ಅವರನ್ನು ಒಪ್ಪಿಸುವುದು ಅಸಾಧ್ಯ ಎನ್ನುವಂತಾಯಿತು. ಆದರೆ ಅವರ ತಾಯಿ (ಸುಮಾರು ೬೦-೭೦ ವರ್ಷ ಪ್ರಾಯದ ತಾಯಿ) “ಇವತ್ತು ಸಂಜೆ ಮಗ ಇರುವುದಿಲ್ಲ. ನೀನು ಬಂದು ಹಾಕಿ ಹೋಗು” ಎಂದು ಹೇಳಿದರು. ನಾವು ಹೋಗಿ ಅಲ್ಲಿ ಸೋಲಾರ್ ಲೈಟಿಂಗ್ ವ್ಯವಸ್ಥೆ ಮಾಡಿದ ಒಂದು ವಾರದ ಬಳಿಕ ಪುನಃ ಹೋದೆವು. ಆಗ ಮಗ ಬಹಳ ಖುಷಿಯಿಂದ ನಮಗೆ ಕೊಡಬೇಕಾದ ಹಣವನ್ನು ಇಟ್ಟುಕೊಂಡು ಕಾಯುತ್ತಿದ್ದರು. ಅವರ ಸಂತಸ ಏನೆಂದರೆ, ಮಂಗಳೂರಿನಲ್ಲಿ ವಿದ್ಯುಚ್ಛಕ್ತಿ ಇಲ್ಲದಿದ್ದಾಗಾಲೂ ನಮ್ಮಲ್ಲಿ ಬೆಳಕಿರುತ್ತದೆ ಎಂದು. ಅಂದು ಆಕೆ ತೆಗೆದುಕೊಂಡ ನಿರ್ಧಾರ ನಮ್ಮನ್ನು ಇಂದು ಈ ಸ್ಥಿತಿಗೆ ತಲಪಿಸಿದೆ ಎಂದರೆ ತಪ್ಪಿಲ್ಲ.

ಸುಮಾರು ೪-೫ ವರ್ಷಗಳ ಹಿಂದಿನ ಘಟನೆಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕು. ನಾವು ಹಿಂದೆ ಸೋಲಾರ್ ಲೈಟಿಂಗ್ ವ್ಯವಸ್ಥೆ ಮಾಡಿದ್ದ ಪುತ್ತೂರಿನ ಮನೆಯ ಹುಡುಗಿಯೊಬ್ಬಳು ಫೋನ್ ಮಾಡಿ “ಹರೀಶಣ್ಣ, ಅಪ್ಪ ನನಗೆ ಹುಡುಗನೊಬ್ಬನನ್ನು ನೋಡಿದ್ದಾರೆ. ಅಲ್ಲಿ ಎಲೆಕ್ಟ್ರಿಸಿಟಿ ಇಲ್ಲ. ನಾನು ಎಂಟು ವರ್ಷ ಪ್ರಾಯಕ್ಕೆ ಬರುವ ತನಕ ಹೇಗೆ ಜೀವನ ಕಳೆದೆ, ಹಾಗೆಯೇ ಮುಂದೆ ನನ್ನ ಮಕ್ಕಳು ಬೆಳೆಯುವುದನ್ನು ನೋಡಲು ನನಗೆ ಇಷ್ಟ ಇಲ್ಲ. ನನಗೆ ಈ ಮದುವೆ ಬೇಡ” ಎಂದು ಹೇಳಿ ಫೋನ್ ಕಟ್ ಮಾಡಿದ್ದಳು. ಬಳಿಕ ಆಕೆಯ ತಂದೆಯೇ ದುಡ್ಡು ಕೊಟ್ಟು ಅಲ್ಲಿ ಸೋಲಾರ್ ವ್ಯವಸ್ಥೆ ಮಾಡಿಸಿದರು. ಆಕೆಯ ಮದುವೆಯೂ ಆಯಿತು. ಇಂದು ಖುಷಿಯಿಂದಿದ್ದಾಳೆ. ಹೀಗೆ ಸಣ್ಣಸಣ್ಣ ಖುಷಿಯಲ್ಲಿ ನಮ್ಮ ಖುಷಿಯೂ ಅಡಗಿದೆ.

ಪ್ರಶ್ನೆ: ನಿಮ್ಮ ಕಲ್ಪನೆಯನ್ನು ಕಾರ್ಯಗತಗೊಳಿಸುವ ಸಂದರ್ಭದಲ್ಲಿ ನಿಮಗೆ ಎದುರಾದ ಸವಾಲುಗಳು ಯಾವ ಬಗೆಯವು? 

ನನ್ನ ಬಳಿ ಆರಂಭದಲ್ಲಿ ಇದ್ದದ್ದು ಕೇವಲ ಒಂದುಸಾವಿರ ರೂಪಾಯಿ. ಇಬ್ಬರು ಟಿ.ವಿ. ಟೆಕ್ನಿಷಿಯನ್ಸ್, ಅವರ ಕೆಲಸವನ್ನು ಬಿಟ್ಟು ನನ್ನ ಜೊತೆ ಬಂದರು. ಯಾವ ಧೈರ್ಯದಲ್ಲಿ ಅವರು ನನ್ನ ಜೊತೆ ಬಂದರು ಎನ್ನುವುದು ನನಗೆ ಇಂದಿಗೂ ಅರ್ಥವಾಗದ ಸಂಗತಿ.

ನಾನು ಹೇಳಿದ್ದು ಇಷ್ಟೆ: “ಸಾವಿರ ರೂಪಾಯಿ ಇದೆ. ತಲಾ ೩೦೦ ರೂಪಾಯಿಯಂತೆ ಹಂಚಿಕೊಳ್ಳೋಣ” ಎಂದು. ಮಡಿಕೇರಿಯಲ್ಲಿ ಶ್ರೀಮಂತ ರೈತರೊಬ್ಬರ ಮನೆಗೆ ಸೋಲಾರ್ ಲೈಟಿಂಗ್ ಅಳವಡಿಸಿದೆವು. ಅಲ್ಲಿ ಪ್ರಯೋಗಾತ್ಮಕವಾಗಿ ಮಾಡಿ, ಅದನ್ನು ತೋರಿಸುವುದರ ಮೂಲಕ ಬ್ಯಾಂಕ್‌ಗಳನ್ನು ತಲಪಿ ಅವರನ್ನು ಬಂಡವಾಳ ಹೂಡಲು ಒಪ್ಪಿಸುವ ಕೆಲಸವನ್ನು ಮಾಡುವುದು – ಇದು ನಮ್ಮ ಮನಸ್ಸಿನಲ್ಲಿದ್ದ ಯೋಜನೆ. ಆದರೆ ಅವರು ’ಈಗ ನಮ್ಮಲ್ಲಿ ದುಡ್ಡಿಲ್ಲ, ಮುಂದಿನ ವಾರ ಕೊಡುತ್ತೇವೆ’ ಎಂದರು. ಆ ಹದಿನಾಲ್ಕು ಸಾವಿರ ನಮಗೆ ಅತಿ ಅಗತ್ಯವಾಗಿತ್ತು. ಮಂಗಳೂರಿಗೆ ತೆರಳಲೂ ದುಡ್ಡಿಲ್ಲದ ಸ್ಥಿತಿಯಲ್ಲಿ ಮಡಿಕೇರಿಯ ಬಸ್‌ಸ್ಟಾಂಡ್‌ನಲ್ಲಿ ಬಂದು ಕುಳಿತೆವು. ಕೈಯಲ್ಲಿ ಕೇವಲ ಇಪ್ಪತ್ತು ರೂಪಾಯಿ ಇತ್ತು. ಹೊಟ್ಟೆ ಹಸಿವು ಜೊತೆಗೆ ಸೇರಿತ್ತು. ನನ್ನ ಜೊತೆಗೆ ಇದ್ದ ಇಬ್ಬರು ನಾಲ್ಕನೇ ತರಗತಿ ಫೇಲ್ ಆದವರು, ನಾನು ಪಿಎಚ್.ಡಿ. ಹೋಲ್ಡರ್! ಅವರು ೨ ಗಂಟೆ ಕೂಲಿ ಕೆಲಸ ಮಾಡಿ, ಬಸ್ ಟಿಕೆಟ್‌ಗೆ ಮತ್ತು ನಮ್ಮ ಹಸಿವು ತಣಿಸಲು ಸಾಕಾಗುವ? ದುಡ್ಡು ದುಡಿದು ತಂದರು. ಅಲ್ಲದೆ ಬಸ್‌ನಲ್ಲಿ ಪಯಣಿಸುವಾಗ ಯಾವ ರೀತಿ ಸೆಲ್ಕೋ ಸಮರ್ಥವಾಗಿ ಕಾರ್ಯನಿರ್ವಹಿಸಲು ಸಾಧ್ಯ, ಹೇಗೆ ನಮ್ಮ ಮುಂದಿನ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕು ಎಂದು ನನಗೆ ವಿವರಿಸಿದರು. ಈಗ ಹೇಳಿ, ಅತಿ ನಿರುಪಯುಕ್ತ ವ್ಯಕ್ತಿ ಯಾರು ಈ ಮೂವರೊಳಗೆ? ಖಂಡಿತವಾಗಿಯೂ ಐ.ಐ.ಟಿ.ಯಲ್ಲಿ ಇಂಜಿನಿಯರಿಂಗ್ ಮಾಡಿ, ಅಮೆರಿಕದಲ್ಲಿ ಪಿಎಚ್.ಡಿ. ಪಡೆದುಕೊಂಡ ಹರೀಶ್ ಹಂದೆಯೇ ಹೊರತು; ನಾಲ್ಕನೇ ತರಗತಿ ಫೇಲ್ ಆದ ವ್ಯಕ್ತಿಗಳಲ್ಲ.

ನಿಜವಾಗಿಯೂ ನೋಡಿದರೆ, ತ್ಯಾಗ ಮಾಡಿದ್ದು ನಾನಲ್ಲ. ಒಂದು ವೇಳೆ ಅಂದು ಸೆಲ್ಕೋ ಸಾಧ್ಯವಾಗಲಿಲ್ಲ, ಸೋತಿತು ಎಂದರೆ ನನ್ನ ಬಳಿ ಬೇರೆ ಆಯ್ಕೆಯಿತ್ತು. ಇದ್ದ ಸಣ್ಣ ಕೆಲಸ ಬಿಟ್ಟು ಬಂದ ಟಿ.ವಿ. ಟೆಕ್ನಿಷಿಯನ್ ಇಬ್ಬರ ಬಳಿ ಯಾವ ಆಯ್ಕೆಯೂ ಇರಲಿಲ್ಲ. ಅವರು ಅಂದು ಮಾಡಿದ ತ್ಯಾಗದಿಂದ ಇಂದು ಸೆಲ್ಕೋ ಇದೆ. ಡಿಗ್ರಿ ಇದೆ ಎನ್ನುವ ಏಕೈಕ ಕಾರಣಕ್ಕೆ ಸೆಲ್ಕೋ ಕ್ರೆಡಿಟ್ ಎಲ್ಲವೂ ಹರೀಶ್ ಹಂದೆಗೆ ಬರುತ್ತಿದೆ. ಆದರೆ ಇಂತಹವರಿಂದಲೇ ಸೆಲ್ಕೋ ಈ ಮಟ್ಟಕ್ಕೆ ತಲಪಿದೆ.

ಆರಂಭದಲ್ಲಿ ಬ್ಯಾಂಕ್‌ಗಳಿಗೆ ಇದರ ಮಹತ್ತ್ವದ ಬಗ್ಗೆ ಅರಿವು ಮೂಡಿಸಲು ೪-೫ ವರ್ಷಗಳೇ ಹಿಡಿಯಿತು. ಯಾವಾಗ ಸೋಲಾರ್ ಆಧಾರಿತ ತಂತ್ರಜ್ಞಾನಕ್ಕೆ ಭವಿ?ವಿದೆ ಎನ್ನುವುದು ಅವರಿಗೆ ಅರಿವಾಯಿತೋ ಅಂದಿನಿಂದ ಬ್ಯಾಂಕ್‌ಗಳು ಸಾಲದ ವ್ಯವಸ್ಥೆ ನೀಡಲು ಹಿಂಜರಿಯಲಿಲ್ಲ. ಮೊದಲಿಗೆ ’ಮಲಪ್ರಭಾ ಗ್ರಾಮೀಣ ಬ್ಯಾಂಕ್’ನ ಚೇರ್ಮೆನ್ ಅವರು ೧೦೦ ಸೋಲಾರ್ ಲೈಟ್ ಅಳವಡಿಸಲು ಫೈನಾನ್ಸ್ ಮಾಡಿದರು. ಕುಮಟಾದ ’ವರದಾ ಗ್ರಾಮೀಣ ಬ್ಯಾಂಕ್’, ಮಂಗಳೂರಿನ ’ನೇತ್ರಾವತಿ ಗ್ರಾಮೀಣ ಬ್ಯಾಂಕ್’(ಈಗಿನ ’ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್’)ಗಳಿಂದ ಮುಂದಿನ ದಿನಗಳಲ್ಲಿ ಉತ್ತಮ ಬೆಂಬಲ ಸಿಕ್ಕಿತು. ಈಗ ಎಲ್ಲ ಬ್ಯಾಂಕ್‌ಗಳು ಸಾಲದ ವ್ಯವಸ್ಥೆಗಳನ್ನು ಮಾಡುತ್ತಿವೆ.

ಪ್ರಶ್ನೆ: ಸೋಲಾರ್ ಲೈಟಿಂಗ್ ಪ್ರಾಡಕ್ಟ್‌ಗಳು ಅಲ್ಲದೆ ಸೆಲ್ಕೋ ನೀಡುತ್ತಿರುವ ಇತರ ಉಪಕರಣಗಳ ಬಗ್ಗೆ ಮಾಹಿತಿ ನೀಡಬಹುದೆ? 

ಉತ್ತರ: ನಾವು ಸಮಾಜವನ್ನು ಮೂರು ಭಾಗವಾಗಿ ವಿಂಗಡಿಸಿದ್ದೇವೆ. ಸಾಮಾನ್ಯ, ಬಡವ, ಕಡುಬಡವ. ಕಡುಬಡವರಿಗೆ ಜೀವನೋಪಾಯದ ಹಾದಿಗಳು ಪ್ರಥಮ ಆದ್ಯತೆಯಾಗಿರುತ್ತವೆ. ಅವರಿಗಾಗಿಯೇ, ಸೋಲಾರ್ ಶಕ್ತಿ ಆಧಾರಿತ ರೊಟ್ಟಿ ತಟ್ಟುವ ಮೆಷೀನ್. ಉತ್ತರಕರ್ನಾಟಕದ ಮಹಿಳೆಯರು ಡಾಬಾ, ಹೋಟೆಲ್‌ಗಳಿಗೆ ದೊಡ್ಡಮಟ್ಟದಲ್ಲಿ ರೊಟ್ಟಿ ಮಾಡಿ ಕಳುಹಿಸುತ್ತಾರೆ. ಆದರೆ ಎಲೆಕ್ಟ್ರಿಸಿಟಿ ತೊಂದರೆ ಇವರಿಗೆ ಸದಾ ಕಾಡುತ್ತಿತ್ತು. ಅವರಿಗಾಗಿ ಸೋಲಾರ್ ಶಕ್ತಿ ಆಧಾರಿತ ಮೆಷೀನ್ ತಯಾರಿಸಿದೆವು. ಇದು ಬಹಳ ಪರಿಣಾಮಕಾರಿಯಾದ ಪ್ರಭಾವವನ್ನು ಬೀರಿದೆ. ಅಂತೆಯೇ ಸಿಲ್ಕ್ ವೀವಿಂಗ್ ಮೆಷೀನ್, ಹೊಲಿಗೆಯಂತ್ರ, ಎಗ್ ಇನ್ಕ್ಯುಬೇಟರ್, ಕಮ್ಮಾರನಿಗೆ ಗಾಳಿ ಊದಲು ಬೇಕಾಗುವಂತಹ ತಿದಿ (Bellows),, ಆಕಳು ಹಾಲುಕರೆಯುವ ಯಂತ್ರ, ಮಣ್ಣಿನ ಕುಡಿಕೆ ಮಾಡುವ ಯಂತ್ರ. ಬಡವರಿಗೆ ಕಡಮೆ ಖರ್ಚಿನಲ್ಲಿ ಯಾವ ರೀತಿ ಹೆಚ್ಚು ಆದಾಯ ಗಳಿಕೆ ಮಾಡಬಹುದು; ಅಂತಹ ಅನ್ವೇ?ಣೆಗಳನ್ನು ಮಾಡುತ್ತಿದ್ದೇವೆ. ಇದರ ಜೊತೆಜೊತೆಗೆ ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ.

ಒರಿಸ್ಸಾದ ಹಳ್ಳಿಗಳಲ್ಲಿ ಜನ ಆಧಾರ್‌ಕಾರ್ಡ್ ಜೆರಾಕ್ಸ್‌ಮಾಡಿಸಲು ಒಂದು ಪ್ರತಿಗೆ ೨೦೦ ರೂಪಾಯಿ ವ್ಯಯಿಸುತ್ತಿದ್ದರು. ಅವರು ಇದ್ದ ಹಳ್ಳಿಯಿಂದ ಜೆರಾಕ್ಸ್ ಮಾಡಿಸುವ ಸ್ಥಳಕ್ಕೆ ಹೋಗಬೇಕೆಂದರೆ ಒಂದು ದಿನ ಬೇಕು, ಪ್ರಯಾಣದ ಬಸ್‌ಚಾರ್ಚ್ ೧೦೦ ರೂಪಾಯಿ. ಅಲ್ಲಿಗೆ ಅವರ ಆ ದಿನದ ಆದಾಯವೂ ಇಲ್ಲ; ಖರ್ಚು ಜಾಸ್ತಿ. ಅದಕ್ಕಾಗಿಯೇ ಅವರ ಊರುಗಳಲ್ಲಿಯೇ ’ಲೋಕಸೇವಾ ಕೇಂದ’ ಎಂದು ತೆರೆದು ಅಲ್ಲಿ  ಸೋಲಾರ್‌ಶಕ್ತಿ ಆಧಾರಿತ ಕಂಪ್ಯೂಟರ್, ಜೆರಾಕ್ಸ್ ಮೆಷಿನ್, ಪ್ರಿಂಟರ್ ಎಲ್ಲವನ್ನೂ ವ್ಯವಸ್ಥೆ ಮಾಡಿದೆವು. ಇದರಿಂದ ಒಬ್ಬನಿಗೆ ಉದ್ಯೋಗವಾಯಿತು, ಉಳಿದವರ ಖರ್ಚು ಕಡಮೆಯಾಯಿತು, ಉಳಿತಾಯ ಹೆಚ್ಚಿತು.

’ಬೋಟ್ ಕ್ಲಿನಿಕ್’: ಅಸ್ಸಾಂನ ಬ್ರಹ್ಮಪುತ್ರಾ ನದಿಯಿಂದ ಉಂಟಾಗಿರುವ ಮಜುಲಿ ದ್ವೀಪ, ಪ್ರಪಂಚದ ಅತಿದೊಡ್ಡ ದ್ವೀಪವಾಗಿದೆ. ಅಲ್ಲಿ ಡೀಸೆಲ್‌ನಿಂದ ನಡೆಯುವ ೨೬ ಬೋಟ್ ಕ್ಲಿನಿಕ್‌ಗಳು ಇವೆ. ದ್ವೀಪಕ್ಕೆ ವೈದ್ಯಕೀಯ ಚಿಕಿತ್ಸೆ ನೀಡಲೆಂದು ಹೋದವರು ಡೀಸೆಲ್ ಮುಗಿದುಬಿಡುತ್ತದೆ ಎಂದು ಐದುಗಂಟೆಯಲ್ಲಿ ಪುನಃ ಬರುತ್ತಿದ್ದರು. ಅದಕ್ಕಾಗಿಯೇ ನಾವು ಇನ್ಕ್ಯುಬೇಟರ್, ಡೆಂಟಲ್ ಚೇರ್, ಆಪರೇಷನ್ ಥಿಯೇಟರ್, ಸ್ಕಾನಿಂಗ್ ಎಲ್ಲವನ್ನೂ ಸೋಲಾರ್ ಆಧಾರಿತವಾಗಿ ನಡೆಯುವಂತೆ ಮಾಡಿದೆವು. ಈಗ ಅವರು ದ್ವೀಪವನ್ನು ತಲಪಿದ ಬಳಿಕ ಡೀಸೆಲ್ ಇಂಜಿನ್ ಆಫ್ ಮಾಡುತ್ತಾರೆ. ವೈದ್ಯಕೀಯ ಕಾರ್ಯಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳು ಸೋಲಾರ್ ಆಧಾರಿತವಾಗಿ ನಡೆಯುತ್ತವೆ. ಹೆಚ್ಚು ಜನರಿಗೆ, ಕಡಮೆ ಸಮಯದಲ್ಲಿ, ಕಡಮೆ ಖರ್ಚಿನಲ್ಲಿ ವೈದ್ಯಕೀಯ ಸೌಲಭ್ಯ ದೊರೆಯುತ್ತಿದೆ. ಹತ್ತು ಬೋಟ್ ಕ್ಲಿನಿಕ್‌ಗಳಿಗೆ ಈ ವ್ಯವಸ್ಥೆ ಮಾಡಿದ್ದೇವೆ. ೨೬ ಬೋಟ್‌ಗಳಿಗೂ ಈ ತಂತ್ರಜ್ಞಾನವನ್ನು ಮುಂದಿನ ದಿನಗಳಲ್ಲಿ ಅಳವಡಿಸುತ್ತೇವೆ.

ಪ್ರಶ್ನೆ: ಐ.ಐ.ಟಿ.ಯಿಂದ ಹೊರಬರುತ್ತಿರುವ ವಿದ್ಯಾರ್ಥಿಗಳ ಬಗ್ಗೆ ತಮ್ಮ ಅಭಿಪ್ರಾಯ? 

ಉತ್ತರ: ಭಾರತದ ಬಡವರ ಸಬ್ಸಿಡಿ ಹಣದಲ್ಲಿ ಕಲಿತು ವಿದೇಶದಲ್ಲಿ ಉದ್ಯೋಗ, ಜೀವನ ಮಾಡುವ ಸ್ಥಿತಿ ಇಂದಿಗೂ ಇದೆ. ಆದರೆ ಈ ಸ್ಥಿತಿಗೆ ಕಾರಣ ವಿದ್ಯಾರ್ಥಿಗಳಲ್ಲ; ಶಿಕ್ಷಣಪದ್ಧತಿ ಕಾರಣ. ಇದು ಬದಲಾಗಬೇಕಾದರೆ ಮೊದಲು ಪ್ರೊಫೆಸರ್‌ಗಳು, ಶಿಕ್ಷಣಪದ್ಧತಿ ಬದಲಾಗಬೇಕು. ಖರಗ್‌ಪುರದ ಐ.ಐ.ಟಿ. ಉದಾಹರಣೆಯನ್ನೇ ತೆಗೆದುಕೊಳ್ಳುತ್ತೇನೆ. ಅಲ್ಲಿನ ಕ್ಯಾಂಪಸ್ಸಿನಿಂದ ೫ ಕಿ.ಮೀ. ಮುಂದೆ ಹೋದರೆ ಇಂದಿಗೂ ವಿದ್ಯುತ್ ಇಲ್ಲದ ಊರುಗಳಿವೆ. ತನ್ನ ಆಸುಪಾಸಿನ ಬಡವರ, ಜನಸಮುದಾಯದ ಅಗತ್ಯಗಳಿಗೆ ಪರಿಹಾರವನ್ನು ಕಂಡುಹಿಡಿಯಲಾಗದ ಇಂತಹ ದೊಡ್ಡ ವಿದ್ಯಾಸಂಸ್ಥೆ ಇದ್ದಾದರೂ ಏನು ಪ್ರಯೋಜನ, ಹೇಳಿ?

ಶಿಕ್ಷಣಪದ್ಧತಿ ಯಾವ ರೀತಿ ಬದಲಾಗಬೇಕೆಂದರೆ, ವಿದ್ಯಾರ್ಥಿಗಳಿಗೆ ಕಡ್ಡಾಯ ಕೋರ್ಸ್‌ವರ್ಕ್ ನೀಡಬೇಕು. ಪ್ರೊಫೆಸರ್‌ಗಳು ಯಾವುದೋ ದೇಶದ ತೊಂದರೆಗಳನ್ನು, ಅಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ಮಾಡುವ ಪ್ರಾಕ್ಟಿಕಲ್ ಪೇಪರ್ ನೀಡುವ ಬದಲು, ನಮ್ಮ ಹಳ್ಳಿಗಳ ತೊಂದರೆಗಳಿಗೆ ಪರಿಹಾರ ಹುಡುಕುವುದನ್ನು ಕಡ್ಡಾಯ ಪೇಪರ್ ಆಗಿ ಮಾಡಬೇಕು. ಆಗ ಪ್ರತಿ ಸೆಮಿಸ್ಟರ್ ಕೊನೆಯಲ್ಲಿ ಒಂದು ಹೊಸ ತಂತ್ರಜ್ಞಾನ ಹುಟ್ಟಲು ಸಾಧ್ಯವಾಗುತ್ತದೆ. ಅದು, ಚರಂಡಿನೀರನ್ನು ಶುದ್ಧೀಕರಿಸುವುದು, ಕೃಷಿಯಲ್ಲಿ ಹೊಸ ತಂತ್ರಜ್ಞಾನದ ಬಳಕೆಯೇ ಆಗಿರಬಹುದು. ಇಂತಹ ಹೊಸಹೊಸ ಆಲೋಚನೆಗಳು ಹುಟ್ಟಿ ಸಮಸ್ಯೆಗಳ ಪರಿಹಾರಕ್ಕೆ ನಾಂದಿಯಾಗುತ್ತವೆ.

ಈಗ ಐ.ಐ.ಟಿ. ಶಿಕ್ಷಣಪದ್ಧತಿಯಲ್ಲಿ ಇರುವುದು ಶೇ. ೮೦ ಥಿಯರಿ, ಶೇ. ೨೦ ಪ್ರಾಕ್ಟಿಕಲ್. ಇದು ಬದಲಾಗಿ, ಶೇ. ೫೦ ಥಿಯರಿ, ಶೇ. ೫೦ ಪ್ರಾಕ್ಟಿಕಲ್ ಆಗಬೇಕು. ಪ್ರಾಕ್ಟಿಕಲ್ ನಮ್ಮ ದೇಶದ ಹಳ್ಳಿಗಳ ಸಮಸ್ಯೆಗಳ ನಿರ್ಮೂಲನೆಯ ಕುರಿತಾಗಿರಬೇಕು.

ಪ್ರಶ್ನೆ: ’ಇನ್‌ಡೋರ್ ಏರ್ ಪೊಲ್ಯೂಷನ್’ ಬಗ್ಗೆ ಏನು ಹೇಳುತ್ತೀರಿ? 

ಉತ್ತರ: ಇನ್‌ಡೋರ್ ಏರ್ ಪೊಲ್ಯೂಷನ್‌ನಿಂದಾಗಿ ಪ್ರಪಂಚದಲ್ಲಿ ಪ್ರತಿವರ್ಷ ೧೦ ಲಕ್ಷ ಮಹಿಳೆಯರು ಮತ್ತು ಮಕ್ಕಳು ಸಾಯುತ್ತಿದ್ದಾರೆ. ಅದರಲ್ಲಿ ಶೇ. ೭೫ರಷ್ಟು ಜನ ಭಾರತೀಯರು. ಐ.ಟಿ. ಕಂಪೆನಿಯಲ್ಲಿ ಕೆಲಸ ಮಾಡುವ ಉದ್ಯೋಗಿಯೊಬ್ಬನಿಗೆ ದಾರಿಯಲ್ಲಿ ಕಾರ್ ಡಿಕ್ಕಿಯಾದರೆ ಅದು ದೊಡ್ಡ ಸುದ್ದಿಯಾಗುತ್ತದೆ, ದಿನಪತ್ರಿಕೆಗಳಲ್ಲಿ ಬರುತ್ತದೆ. ಅದೇ ದೇಶದ ೭.೫ ಲಕ್ಷ ಮಹಿಳೆಯರು ಮತ್ತು ಮಕ್ಕಳು ಇನ್‌ಡೋರ್ ಏರ್ ಪೊಲ್ಯೂಷನ್‌ನಿಂದಾಗಿ ಪ್ರತಿವರ್ಷ ಸಾಯುತ್ತಿದ್ದಾರೆ. ಇದರ ಬಗ್ಗೆ ಚಿಂತಿಸುವುದು ಬಿಡಿ, ಯೋಚಿಸಲೂ ನಮ್ಮಲ್ಲಿ ಸಮಯವಿಲ್ಲ. ಇದು ಒಂದು ತರಹದ ಸೈಲೆಂಟ್ ಕಿಲ್ಲರ್. ಹಳ್ಳಿಜನ ಇದನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ದೂಷಿಸುತ್ತೇವೆ. ಆದರೆ ವಿದ್ಯಾವಂತರೆಂದು ಹೇಳಿಕೊಳ್ಳುವ ನಾವು ಮಾಡುವುದೂ ಅಷ್ಟೇ. ದ್ವಿಚಕ್ರ ಓಡಿಸುವಾಗ ಹೆಲ್ಮೆಟ್ ಧರಿಸುತ್ತೇವೆ, ಏಕೆ ಎಂದರೆ ಪೊಲೀಸಿನವರು ಹಿಡಿಯುತ್ತಾರೆ ಎಂದು. ಅದರ ಹಿಂದೆ ಇರುವ ಸುರಕ್ಷತೆಯ ಬಗ್ಗೆ ನಾವು ಯೋಚಿಸುವುದಿಲ್ಲ. ಹೀಗಿರುವಾಗ ಹಳ್ಳಿಯವರನ್ನು ದೂಷಿಸಲು ನಮಗೆ ಎಷ್ಟು ಯೋಗ್ಯತೆ ಇದೆ?

`ಡೆಡಿಕೇಟೆಡ್ ಟು ದಿ ಸರ್ವೀಸ್ ಆಫ್ ದಿ ನೇಷನ್’  : ಯಾವ ದೇಶದ ಸೇವೆಗೆ?

ಖರಗ್‌ಪುರದ ಐ.ಐ.ಟಿ. ಮುಂದೆ ಒಂದು ಬೋರ್ಡ್ ಇದೆ. “ಡೆಡಿಕೇಟೆಡ್ ಟು ದಿ ಸರ್ವೀಸ್ ಆಫ್ ದಿ ನೇಷನ್” ಎಂದು. ನಾನು ಯಾವತ್ತೂ ಕೇಳುವ ಪ್ರಶ್ನೆ, ಯಾವ ದೇಶದ ಸೇವೆಗೆ? ಇಷ್ಟು ವರ್ಷದಲ್ಲಿ ಐ.ಐ.ಟಿ.ಯಲ್ಲಿ ಕಲಿತ ಶೇ. ೯೦ರಷ್ಟು ವಿದ್ಯಾರ್ಥಿಗಳು ವಿದೇಶಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆಯೇ ಹೊರತು ಭಾರತಕ್ಕಲ್ಲ.

ಬಡವರ ಹಣದಲ್ಲಿ, ಅದರಿಂದ ಬರುವ ಸಬ್ಸಿಡಿಯ ದುಡ್ಡಿನಿಂದ ಐ.ಐ.ಟಿ.ಯಲ್ಲಿ ಇಂಜಿನಿಯರಿಂಗ್ ಮಾಡುವುದು; ಮತ್ತೆ ಅಮೆರಿಕಕ್ಕೊ, ಮತ್ಯಾವುದೋ ದೇಶಕ್ಕೋ ಸೇವೆ ಮಾಡುವುದು. ಮಾಡಿ, ಬೇಡ ಎನ್ನುವುದಿಲ್ಲ. ಆದರೆ ಅಲ್ಲಿ ದುಡಿದು, ವಿದೇಶವನ್ನು ಬೆಳೆಸುತ್ತೇವೆ ಎಂದಿದ್ದರೆ ಭಾರತೀಯರ ಸಬ್ಸಿಡಿ ಹಣದಲ್ಲಿ ವಿದ್ಯಾಭ್ಯಾಸ ಮಾಡಬೇಡಿ. ಭಾರತ ಸರ್ಕಾರದ ಸಬ್ಸಿಡಿ ತೆಗೆದುಕೊಳ್ಳುತ್ತಿದ್ದೀರಿ ಎಂದರೆ ಅದು ಇರುವುದು, ನಿಜವಾಗಿಯೂ ಸಿಗಬೇಕಾಗಿರುವುದು ಈ ದೇಶದ ಬಡವರಿಗೆ. ಅಮೆರಿಕ ಡೆವಲಪ್ ಆಗಲು ಇಂಥವರಿಗೆ ಸಬ್ಸಿಡಿ ಕೊಡುತ್ತಿದ್ದೇವೆ.

ಅಗತ್ಯ ಇರುವವರಿಗೆ ಮತ್ತು ಭಾರತ ದೇಶಕ್ಕೆ ಯಾರು ನಿಜವಾಗಿಯೂ ಕೊಡುಗೆಯನ್ನು ನೀಡುತ್ತಾರೋ ಅಂತಹವರಿಗೆ ಸಬ್ಸಿಡಿ ಸಿಗಬೇಕು.

ಈ ಸಮಸ್ಯೆಗೆ ಪರಿಹಾರವಾಗಿ ಪುನರ್ಬಳಕೆಯ ಇಂಧನಮೂಲವನ್ನು ಉಪಯೋಗಿಸಬಹುದು. ಸೋಲಾರ್ ಬಳಕೆ ಮಾಡಬಹುದು. ಆದರೆ ಎಲ್ಲ ಊರುಗಳಿಗೆ ಸೋಲಾರ್ ವ್ಯವಸ್ಥೆ ಸರಿಹೊಂದುವುದಿಲ್ಲ. ಮಲೆನಾಡಿನ ಊರುಗಳಲ್ಲಿ, ವ?ದ ೨-೩ ತಿಂಗಳು ಸೋಲಾರ್ ಒಲೆಗಳು ಸಮರ್ಥವಾಗಿ ಕೆಲಸಮಾಡುವುದು ಕ?. ಅಲ್ಲಿ ಬಯೋಗ್ಯಾಸ್ ಇದಕ್ಕೆ ಉತ್ತಮ ಪರಿಹಾರವಾಗಬಲ್ಲದು. ಬಯೋಗ್ಯಾಸ್ ಕಾರ್ಯಕ್ಷಮತೆ ಕಡಮೆ ಎಂದು ಜನರ ಮನಸ್ಸಿಗೆ ಬಂದಿದೆ. ದಕ್ಷಿಣಕನ್ನಡದಲ್ಲಿ ಬಯೋಗ್ಯಾಸ್ ನಿಧಾನವಾಗಿ ಮನೆಗಳಿಂದ ಮರೆಯಾಗಿದೆ. ಏಕೆಂದರೆ, ಹಳ್ಳಿಗಳಲ್ಲಿ ಬಯೋಗ್ಯಾಸ್ ಮಾತ್ರ ಇದೆ ಎಂದರೆ ಹುಡುಗಿ ಕೊಡುವುದಿಲ್ಲ ಎನ್ನುವ ವಾತಾವರಣ ನಿರ್ಮಾಣವಾಯಿತು. ನಾವು ಉತ್ತಮ ತಂತ್ರಜ್ಞಾನವನ್ನು ಯಾವತ್ತೂ ಪಾಸಿಟಿವ್ ಆಗಿ ಬಿಂಬಿಸಲೇ ಇಲ್ಲ; ಎಂದಿಗೂ ಅದರಲ್ಲಿ ತಪ್ಪು ಹುಡುಕುತ್ತಾ, ನೆಗೆಟಿವ್ ಅಂಶಗಳನ್ನೇ ಜನರಿಗೆ ತಲಪಿಸಿದೆವು. ಜೊತೆಗೆ ಯಾವುದೇ ಐ.ಐ.ಟಿ. ಕೂಡ ಈ ಟೆಕ್ನಾಲಜಿಯ ಕ್ಷಮತೆಯನ್ನು ಹೆಚ್ಚಿಸುವಂತಹ ಪ್ರಯತ್ನವನ್ನೇ ಮಾಡಿಲ್ಲ. ಇದಕ್ಕಾಗಿಯೇ ನಾನು ಮತ್ತೆ ಮತ್ತೆ ಹೇಳುತ್ತಿರುವುದು – ಶಿಕ್ಷಣಪದ್ಧತಿಯನ್ನು ಬದಲಾಯಿಸಿ, ವಿದ್ಯಾರ್ಥಿಗಳು ಹಳ್ಳಿಗಳನ್ನು ತಲಪುವಂತೆ ಮಾಡಬೇಕು ಮತ್ತು ಅಲ್ಲಿನ ಸಮಸ್ಯೆಗಳಿಗೆ ಅವರಿಂದ ಪೂರಕವಾದ ಸ್ಪಂದಿಸುವ ಕೆಲಸಗಳಾಗಬೇಕು.

ನಾವು ಇತ್ತೀಚೆಗೆ ಅಮೆರಿಕದ ಮಿಲಿಟರಿ ಇಲಾಖೆಯನ್ನು ಸಂಪರ್ಕಿಸಿದ್ದೇವೆ. ಅವರು ಆಫಘನಿಸ್ತಾನದಲ್ಲಿ ಯುದ್ಧದ ಸಮಯದಲ್ಲಿ ಅತ್ಯಂತ ಉತ್ತಮ ಕ್ಷಮತೆಯುಳ್ಳ ಅಡುಗೆ ಒಲೆಯ ವ್ಯವಸ್ಥೆಯನ್ನು ಬಳಸಿದ್ದರು. ಆ ತಂತ್ರಜ್ಞಾನವನ್ನು ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರಲು ಯೋಚನೆ ಮಾಡುತ್ತಿದ್ದೇವೆ.

ಪ್ರಶ್ನೆ: ಪ್ರತಿ ಸೆಕೆಂಡು ವಿದ್ಯುಚ್ಛಕ್ತಿ ಅನಿವಾರ್ಯ ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಜೊತೆಗೆ ವಿದ್ಯುತ್ ವ್ಯತ್ಯಯ ಎನ್ನುವ ಕೂಗು ಹೆಚ್ಚಾಗುತ್ತಿದೆ. ಇಂತಹ ಕಾಲಘಟ್ಟದಲ್ಲಿ ಸೂರ್ಯಶಕ್ತಿ ಅಥವಾ ಬೇರೆ ಪುನರ್ಬಳಕೆಯ ಇಂಧನಮೂಲವನ್ನು ಎಲ್ಲಾ ಕ್ಷೇತ್ರಗಳಲ್ಲಿಯೂ ಬಳಸಿಕೊಳ್ಳಲು ಸಾಧ್ಯವಿದೆಯೆ? 

ಖಂಡಿತಾ ಸಾಧ್ಯವಿದೆ. ಆದರೆ ಬೇಕಾಗಿರುವುದು ಉಪಕರಣಗಳ ಅಭಿವೃದ್ಧಿ. ಸೋಲಾರ್‌ಗೆ ಇನ್ವೆಸ್ಟ್ ಮಾಡುವುದು ವೇಸ್ಟ್ ಎನ್ನುವುದು ಸಾಮಾನ್ಯ ಮನಃಸ್ಥಿತಿ. ಅದೇ ಸೋಲಾರ್ ಆಧಾರಿತ ಹೊಲಿಗೆ ಯಂತ್ರವನ್ನು ಅಭಿವೃದ್ಧಿಪಡಿಸಿದರೆ ಅದು ವೇಸ್ಟ್, ಉಪಯೋಗವಿಲ್ಲ ಎಂದು ಯಾರೂ ಹೇಳುವುದಿಲ್ಲ. ಹಾಗಾಗಿ ನಾವು ಅಭಿವೃದ್ಧಿಪಡಿಸಬೇಕಾಗುವುದು ಉಪಕರಣದ ಕಾರ್ಯಕ್ಷಮತೆಯನ್ನು. ನೋಡಿ, ಮೊದಲು ಕ್ಯಾಂಡಿಸೆಂಟ್ ಬಲ್ಬ್ ಇತ್ತು, ಈಗ ಎಲ್.ಇ.ಡಿ. ಬಲ್ಬ್‌ಗಳು ಬಂದು ವಿದ್ಯುತ್ ಬಳಕೆಯ ಪ್ರಮಾಣ ತಗ್ಗಿದೆ. ಇದೇ ರೀತಿ ಎಲ್ಲ ಉಪಕರಣಗಳ ಮೇಲೆ ಕೆಲಸ ಮಾಡಬೇಕು. ಕಟ್ಟಡಗಳ ವಿನ್ಯಾಸ ಬದಲಾಯಿಸಬೇಕು. ಹಗಲು ಹೊತ್ತಿನಲ್ಲಿ ನೈಸರ್ಗಿಕ ಗಾಳಿ, ಬೆಳಕು ಸಾಕ? ಮಟ್ಟಿಗೆ ಸಿಗುವಂತಹ ರೀತಿಯಲ್ಲಿ ಡಿಸೈನ್ ಮಾಡಬೇಕು. ಆಗ ತಾನೇತಾನಾಗಿ ವಿದ್ಯುಚ್ಛಕ್ತಿ ಮೇಲಿನ ಅವಲಂಬನೆ ಕಡಮೆಯಾಗುತ್ತದೆ. ೨೪ ಗಂಟೆಯಲ್ಲಿ ಸುಮಾರು ೪-೫ ಗಂಟೆ ಅಷ್ಟು ನಮಗೆ ಎಲೆಕ್ಟ್ರಿಸಿಟಿ ಬೇಕಾಗುವುದು. ಉಳಿದ ಸಮಯದಲ್ಲಿ ಸೂರ್ಯನ ಬೆಳಕು ಸಾಕು. ನಮ್ಮ ಮನೆಯನ್ನು ಡಿಸೈನ್ ಮಾಡುವಾಗ ಹಗಲು ಹೊತ್ತಿನಲ್ಲಿ ನೈಸರ್ಗಿಕ ಗಾಳಿ, ಬೆಳಕು ಸಾಕ? ಮನೆಯ ಒಳಗೆ ಬರುವಂತಹ ವ್ಯವಸ್ಥೆ ಮಾಡಿದ್ದೇವೆ.

ನಾನು ಕೇವಲ ಸೋಲಾರ್ ಇಂಧನಮೂಲದ ಬಗ್ಗೆ ಮಾತ್ರ ಹೇಳುತ್ತಿಲ್ಲ. ಮಲೆನಾಡಿನಲ್ಲಿ ಸಣ್ಣಸಣ್ಣ ನೀರಿನ ಝರಿಗಳನ್ನು ಉಪಯೋಗಿಸಿ, ಆ ಮನೆಯವರ ಉಪಯೋಗಕ್ಕೆ ಬೇಕಾದಷ್ಟು ವಿದ್ಯುಚ್ಛಕ್ತಿಯನ್ನು ಜನರೇಟ್ ಮಾಡಿಕೊಳ್ಳುವುದು ಸಾಧ್ಯವಿದೆ. ಗುಜರಾತ್‌ನಲ್ಲಿ ಸೋಲಾರ್ ಮತ್ತು ಬಯೋಗ್ಯಾಸ್, ಈಶಾನ್ಯ ರಾಜ್ಯಗಳಲ್ಲಿ ಸೋಲಾರ್ ಮತ್ತು ವಿಂಡ್‌ಪವರ್ ಸಂಯೋಜನೆಗಳ ಮೂಲಕ; ಹೀಗೆ ಯಾವ ಊರಿನಲ್ಲಿ ಯಾವ ನೈಸರ್ಗಿಕ ಶಕ್ತಿಯನ್ನು ಬಳಸಿಕೊಳ್ಳಬೇಕು ಎಂದು ಅಭ್ಯಸಿಸಿ ಪ್ರಯೋಗಿಸುವುದರಿಂದ ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆಯನ್ನು ತರಬಹುದು. ನಿಧಾನವಾದರೂ ಮುಂದಿನ ಹತ್ತುವರ್ಷಗಳಲ್ಲಿ ಬಿಲ್ಡಿಂಗ್ ಡಿಸೈನ್, ಉಪಕರಣಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು, ಇಂಥವುಗಳ ಮೂಲಕ ಪುನರ್ಬಳಕೆಯ ಇಂಧನಮೂಲವನ್ನು ಎಲ್ಲ ಕ್ಷೇತ್ರಗಳಿಗೂ ಅನ್ವಯವಾಗುವಂತೆ ಮಾಡಬಹುದು.

ಪ್ರಶ್ನೆ: ಕೇಂದ್ರಸರ್ಕಾರ ಹಾಗೂ ರಾಜ್ಯಸರ್ಕಾರದಿಂದ ಪುನರ್‌ಬಳಕೆ ಮಾಡಬಹುದಾದ ಇಂಧನಮೂಲಗಳಿಗೆ ಪೂರಕವಾದಂತಹ ಹೊಸ ಯೋಜನೆಗಳೇನಾದರೂ ಬಂದಿವೆಯೆ? 

ಉತ್ತರ: ಇದೆ. ಆದರೆ ನನ್ನ ಪ್ರಕಾರ ಪುನರ್ಬಳಕೆ ಇಂಧನಮೂಲ ಇಲಾಖೆಯನ್ನು ತೆಗೆಯಬೇಕು. ಇದರ ಬದಲು, ಆರೋಗ್ಯ ಇಲಾಖೆಯಲ್ಲಿ ಇನ್ನೊಂದು ಇಲಾಖೆಯನ್ನು ಸೇರಿಸಬೇಕು. ಆ ಇಲಾಖೆಯ ಕಾರ್ಯರೂಪ ಏನೆಂದರೆ, ಎಕ್ಸ್-ರೇ ಯಂತ್ರಕ್ಕೆ ಯಾವ ರೀತಿ ಸೋಲಾರ್‌ಪವರ್ ಬಳಸಬಹುದು, ಹೆರಿಗೆ ಸಮಯದಲ್ಲಿ ತೊಂದರೆಯಾದಾಗ ಬೇಕಾಗುವ ಇನ್ಕ್ಯುಬೇಟರ್‌ಗಳಲ್ಲಿ ಸೋಲಾರ್‌ಪವರ್ ಬಳಸುವುದರ ಕುರಿತಾಗಿ ಅಭಿವೃದ್ಧಿಗಳು ನಡೆಯಬೇಕು. ಹೀಗೆ ಎಲ್ಲ ಇಲಾಖೆಗಳೂ ತಮ್ಮ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ಷೇತ್ರಗಳಲ್ಲಿ ಪುನರ್ಬಳಕೆ ಇಂಧನಮೂಲವನ್ನು ಬಳಸಿಕೊಳ್ಳುವಂತಹ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕು. ಅಲ್ಲದಿದ್ದರೆ, ಪುನರ್ಬಳಕೆ ಇಂಧನಮೂಲ ಇಲಾಖೆ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತದೆ. ಯಾವುದರ ಅಗತ್ಯ ಎಲ್ಲಿ ಎ?ರಮಟ್ಟಿಗೆ ಇದೆ ಎನ್ನುವುದು ತಿಳಿಯದೆ ಯಾವುದೂ ಸರಿಯಾದ ಕಾರ್ಯರೂಪಕ್ಕೆ ಬರುವುದಿಲ್ಲ.

ಈ ರೀತಿಯ ಬದಲಾವಣೆ ಸರ್ಕಾರದಿಂದ ಆದರೆ ಪುನರ್ಬಳಕೆ ಇಂಧನಮೂಲದ ಪೂರಕ ಬಳಕೆಯಾಗುವುದು.

ಪ್ರಶ್ನೆ: ಹಳ್ಳಿಯನ್ನು ತೊರೆದು ಪಟ್ಟಣದತ್ತ ಮುಖಮಾಡುತ್ತಿರುವ ಯುವಜನಾಂಗಕ್ಕೆ ಪುನರ್ಬಳಕೆ ಇಂಧನಶಕ್ತಿ ಎನ್ನುವುದು ಯಾವ ರೀತಿಯಲ್ಲಾದರೂ ಅಲ್ಲಿಯೇ ಇದ್ದು ಸಾಧಿಸುವ ಮನಸ್ಸು ಮಾಡಲು ದಾರಿಯಾಗುತ್ತಿದೆಯೆ? ಅಥವಾ ಆಗಬಲ್ಲುದೆ? 

ಉತ್ತರ: ಇದೆ. ಮೊದಲಿಗೆ ’ರೈತ’ ಎನ್ನುವ ಶಬ್ದವನ್ನು ನೆಗೆಟಿವ್‌ನಿಂದ ಪಾಸಿಟಿವ್ ಮನಃಸ್ಥಿತಿಗೆ ತರಬೇಕು. ನನ್ನ ಮಾವ ರೈತ ಎಂದು ಹೇಳಿಕೊಳ್ಳುವುದು ನನಗೆ ಬೇಕಾಗಿಲ್ಲ. ಏಕೆ? ರೈತ ಎಂದ ಕೂಡಲೇ ನೆನಪಿಗೆ ಬರುವುದು ಆತ್ಮಹತ್ಯೆ, ಸಾಲ, ಮುಂತಾದ ಕಷ್ಟಕಾರ್ಪಣ್ಯ ಮಾತ್ರ. ಕಾರ್ಪೋರೇಟರ್‌ಗಳಿಗೆ ಶೇ. ೬ರಷ್ಟು ಸಬ್ಸಿಡಿ ಸಿಗುತ್ತದೆ, ಅದೇ ರೈತನಿಗೆ ಶೇ. ೨ ಮಾತ್ರ.

’ಸ್ಮಾರ್ಟ್ ಸಿಟಿ’ ಎನ್ನುವ ಪರಿಕಲ್ಪನೆ ಬದಲಾಗಿ, ಅದು ’ಸ್ಮಾರ್ಟ್ ವಿಲೇಜ್’ ಆಗಬೇಕು. ಸ್ಮಾರ್ಟ್ ಸಿಟಿ ಎನ್ನುವುದು ಬ್ಯಾಂಡ್ ಏಡ್ ತರಹ. ಹಾಳು ಮಾಡಿದ್ದೇವೆ, ಅದನ್ನು ಸರಿಗೊಳಿಸುವ ಅಗತ್ಯ ಬಂದೊದಗಿದೆ. ಆದರೆ ಹಳ್ಳಿಗಳು ಸ್ಮಾರ್ಟ್ ಆದರೆ, ನಗರಗಳು ಅವುಗಳ ಪಾಡಿಗೆ ಅವೇ ಸ್ಮಾರ್ಟ್ ಆಗಬಲ್ಲವು. ಹಳ್ಳಿಗಳಿಗೆ ಸುಲಭದಲ್ಲಿ ಕೆಲಸ ಆಗಬಲ್ಲಂತಹ ಟೆಕ್ನಾಲಜಿಯನ್ನು ಕೊಡಬೇಕು. ಈ ವಿಚಾರದಲ್ಲಿ ನನಗೆ ನಂಬಿಕೆ ಇರುವುದು, ಐ.ಐ.ಟಿ.ಗಳ ಮೇಲೆ ಅಲ್ಲ; ನಮ್ಮ ಊರಿನ ಐ.ಟಿ.ಐ., ರುಡ್‌ಸೆಟ್‌ನಂತಹ ಸಂಸ್ಥೆಗಳ ಮೇಲೆ. ಅವರಿಗೆ ಇಲ್ಲಿನ ತೊಂದರೆಗಳು ತಿಳಿದಿವೆ, ಆವಿ?ರಗಳು ಆಗುವುದು ಸಮಸ್ಯೆಯ ಅರಿವಿದ್ದಾಗ ಮಾತ್ರ. ಅವರಿಗೆ ಸ್ವಲ್ಪ ಪ್ರೋತ್ಸಾಹ ದೊರೆತರೆ ಖಂಡಿತಾ ಸ್ಮಾರ್ಟ್ ವಿಲೇಜ್ ಸಾಧ್ಯ. ಅದರಿಂದ ಯುವಜನತೆ ಹಳ್ಳಿಯಲ್ಲೇ ಉಳಿದುಕೊಳ್ಳುವುದು; ಮತ್ತೆ ಅಲ್ಲಿ ತಮ್ಮ ಜೀವನವನ್ನು ಕಂಡುಕೊಳ್ಳುವುದು ಸುಲಭಸಾಧ್ಯ.

ಪ್ರಶ್ನೆ: ಸರ್ಕಾರದ ಮೇಲೆ ಅವಲಂಬನೆ ಇಲ್ಲದೆ ಈ ಉಪಯುಕ್ತ ಮತ್ತು ಅತ್ಯವಶ್ಯ ತಾಂತ್ರಿಕತೆ ದೇಶವ್ಯಾಪಿ ಆಗಬಹುದೆ? 

ಉತ್ತರ: ಮಾಡಬಹುದು. ಈಗ ೨೦ ವರ್ಷಗಳಲ್ಲಿ ನಾವು ಸರ್ಕಾರವನ್ನು ಅವಲಂಬಿಸಿಲ್ಲ. ನಮಗೆ ಸಹಕರಿಸಿದ ಬ್ಯಾಂಕ್‌ಗಳು ಕೂಡ ಸರ್ಕಾರವನ್ನು ಅವಲಂಬಿಸಿಲ್ಲ. ಮನಸ್ಸಿದ್ದರೆ ಮಾರ್ಗ.

ಪ್ರಶ್ನೆ: ಇಂದು ಸ್ವಂತ ಉದ್ಯೋಗ, ಸ್ಟಾರ್ಟ್‌ಅಪ್ ಆರಂಭಿಸಲು ಹೊರಟವರಿಗೆ ಏನು ಹೇಳಲು ಬಯಸುತ್ತೀರಿ? 

ಉತ್ತರ: ಮೊದಲಿಗೆ ವಿಷಯದ ಬಗ್ಗೆ ತಿಳಿದುಕೊಳ್ಳಿ. ಯಾರ ಜೊತೆ ಹೇಗೆ ಮಾತನಾಡಬೇಕು ಎನ್ನುವುದನ್ನು ಕಲಿತುಕೊಳ್ಳಿ. ಆತ ಬೀದಿಬದಿ ವ್ಯಾಪಾರ ಮಾಡುವವನೇ ಇರಬಹುದು; ಆತನ ಜೊತೆ ಅವನ ಸ್ಥಾನಕ್ಕೆ ಇಳಿದು, ಆತನ ತೊಂದರೆಯನ್ನು ಅರ್ಥಮಾಡಿಕೊಳ್ಳುವುದನ್ನು ಅರಿತುಕೊಳ್ಳಿ. ವ್ಯಾಪಾರದ ಸಣ್ಣಸಣ್ಣ ಕೆಲಸಗಳನ್ನು ಮಾಡಿ. ನಾನು ಇಂದು ಸೆಲ್ಕೋ ಸಂಸ್ಥೆಯ ಎಂ.ಡಿ. ಆಗಿರಬಹುದು; ಆದರೆ ನನ್ನ ಆಫೀಸಿನಲ್ಲಿ ಅಕಸ್ಮಾತ್ ಜನ ಇಲ್ಲ ಎಂದಾಗ ಬ್ಯಾಟರಿ ತೆಗೆದು ವಾಹನಕ್ಕೆ ಹಾಕಲು ನಾನು ತಯಾರಿದ್ದೇನೆ. ಯಾವುದೇ ಕೆಲಸವೂ ಕೀಳಲ್ಲ ಎನ್ನುವುದನ್ನು ಮನದಟ್ಟುಮಾಡಿಕೊಳ್ಳಿ.

ನಿಮ್ಮ ಪ್ರಾಡಕ್ಟ್ ಏನೇ ಇರಬಹುದು; ಅದನ್ನು ಮಾರಾಟದ ದೃಷ್ಟಿಯಿಂದ ನೋಡಬೇಡಿ. ಸೋಲಾರ್ ಲೈಟ್ ಅಭಿವೃದ್ಧಿಗೊಳಿಸಿದ ಬಳಿಕ ಅದನ್ನು ಬಳಸುವವನಿಗೆ ಅದು ನಿಜವಾಗಿಯೂ ಉಪಯೋಗವಾಗುತ್ತಿದೆಯೇ ಎನ್ನುವುದನ್ನು ತಿಳಿಯಿರಿ. ಅದು ಉಪಯೋಗವಿಲ್ಲ ಎಂದಾದರೆ ಟ್ರಿಕ್ ಬಳಸಿ ಮಾರಾಟಮಾಡಬೇಡಿ. ಹಾಗೆ ಮಾಡಿದರೆ ನೀವು ಸೇಲ್ಸ್‌ಮ್ಯಾನ್ ಆಗುತ್ತೀರೇ ಹೊರತು ವಾಣಿಜ್ಯೋದ್ಯಮಿಯಾಗಲು ಸಾಧ್ಯವಿಲ್ಲ.

ಸರ್ಕಾರವನ್ನು ದೂಷಿಸುವುದನ್ನು ಮೊದಲು ನಿಲ್ಲಿಸಿ. ಈ ಇಪ್ಪತ್ತು ವರ್ಷಗಳಲ್ಲಿ ಹಲವು ಸರ್ಕಾರಗಳನ್ನು ನೋಡಿದ್ದೇನೆ. ಯಾವ ಸರ್ಕಾರವೂ ನಮ್ಮನ್ನು ನಿಲ್ಲಿಸಿಲ್ಲ. ಭಾರತದಲ್ಲಿ ನಿಮಗೆ ನಿಜವಾಗಿಯೂ ಕೆಲಸ ಮಾಡುವ ಮನಸ್ಸಿದ್ದರೆ ಸಾಧನೆಯ ಗುರಿ ತಲಪಬಹುದು. ಹೆತ್ತವರು ಬಿಡುತ್ತಿಲ್ಲ, ಸರ್ಕಾರ ಸರಿಯಾಗಿಲ್ಲ ಇವೆಲ್ಲವೂ ನೆಪವ?. ಸಣ್ಣಪುಟ್ಟ ತೊಂದರೆಗಳು, ಸೋಲು ಬರುವುದು ಸಹಜ. ಮಾಡುವ ಮನಸ್ಸಿಲ್ಲದಿದ್ದರೆ ನೆಪಗಳು ಸಾವಿರ.

’ಸೋಲನ್ನು ಸಂಭ್ರಮಿಸಿ’ – ಸೋಲಿನಿಂದ ನಾನು ಕಲಿತದ್ದು, ಕಲಿತುಕೊಳ್ಳುವುದು ಬಹಳ ಇದೆ. ನಮ್ಮ ದೇಶದಲ್ಲಿ, ಒಂದು ಪ್ರಯತ್ನ ಮಾಡಿ ಆತ ಆ ಪ್ರಯತ್ನದಲ್ಲಿ ಸೋತನೆಂದರೆ, ನಾವು ಅವನನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ. ಆತನಿಂದ ಸಾಧಿಸುವುದು ಸಾಧ್ಯವಿಲ್ಲ, ಏನೋ ಸುಮ್ಮನೆ ಕೈಲಾಗದ ಹುಚ್ಚುಸಾಹಸ ಮಾಡುತ್ತಿದ್ದಾನೆ ಎನ್ನುವ ನಿರ್ಧಾರಕ್ಕೆ ಬರುತ್ತೇವೆ. ಅದೇ ಕ್ಯಾಲಿಫೋರ್ನಿಯಾದಲ್ಲಿ

ನಿಮ್ಮ ರೆಸ್ಯೂಮ್‌ನಲ್ಲಿ ಎರಡು ಸಲ ಕಂಪೆನಿ ಆರಂಭಿಸಲು ಪ್ರಯತ್ನಿಸಿ ನೀವು ಸೋತಿದ್ದೀರಿ ಎಂದು ಇದ್ದರೆ; ತತ್‌ಕ್ಷಣ ಅವರು ನಿಮಗೆ ಆರ್ಥಿಕ ಸಹಾಯ ಮಾಡುತ್ತಾರೆ. ’ಈಗ ನೀನು ಸಹಾಯಕ್ಕೆ ಅರ್ಹ. ನೀನು ಗೆಲ್ಲಬಲ್ಲೆ, ಸೋಲು ಎಂದರೆ ಏನು, ಹೇಗೆ ಮತ್ತು ಇದರಿಂದ ಹೊರಬರುವ ಅರಿವು ನಿನಗೆ ಇದೆ’ ಎನ್ನುವುದು ಅವರ ನಿಲವು. ಮೊದಲ ಪ್ರಯತ್ನಕ್ಕೆ ಸೋತರೆ, ನೀವು ಕೈಲಾಗದವರಲ್ಲ. ಈ ವಿ?ಯವನ್ನು ಅರಿತುಕೊಳ್ಳಬೇಕು.

ಪ್ರಶ್ನೆ: ನಿಮ್ಮ ಯಶಸ್ವೀ ಪ್ರಯೋಗದಿಂದ ಪ್ರೇರಣೆ ಪಡೆದು ಅನ್ಯ ವ್ಯಕ್ತಿಗಳೂ ಸಂಸ್ಥೆಗಳೂ ಈ ಕ್ಷೇತ್ರದಲ್ಲಿ ಉತ್ಸಾಹ ತಳೆಯುತ್ತಿದ್ದಾರೆಯೆ? 

ಉತ್ತರ: ಈಶಾನ್ಯ ರಾಜ್ಯಗಳು, ಉತ್ತರಭಾರತ ಮತ್ತು ಆಫ್ರಿಕಾ, ಫಿಲಿಫೈನ್ಸ್, ತಾನ್ಜೇನಿಯಾದಿಂದ ಹುಡುಗರು ಬರುತ್ತಿದ್ದಾರೆ. ಟ್ರೈನಿಂಗ್ ಪ್ರೋಗ್ರಾಮ್ ಮಾಡುತ್ತಿದ್ದೇವೆ. ನಮ್ಮ ಗೆಲವನ್ನು ಎಲ್ಲಿಯೂ ಹೇಳುವುದಿಲ್ಲ. ಸೋಲನ್ನು ತಿಳಿಸುತ್ತೇವೆ. ಗೆಲವು ಎನ್ನುವುದು ಎಲ್ಲರಿಗೂ ಒಂದೇ ರೀತಿಯಾಗಿ ಬರುವುದಿಲ್ಲ. ಆದರೆ ತೊಂದರೆಗಳು ಸಹಜ. ಶೇ. ೯೦ರಷ್ಟು ಸಲ ನಾವು ಸೋತಿದ್ದೇವೆ. ಇದೇ ತಪ್ಪು ನಮ್ಮ ಯುವಜನಾಂಗದಿಂದ ಆಗುವುದು ನಮಗೆ ಬೇಕಾಗಿಲ್ಲ. ಅದಕ್ಕಾಗಿಯೇ ನಮ್ಮ ಟ್ರೈನಿಂಗ್ ತರಗತಿಗಳೆಲ್ಲವೂ ಸೋಲುಗಳ ಮೇಲೆಯೇ ಇರುತ್ತವೆ. ಇವರು ಮುಂದೆ ಗೆಲವನ್ನು ಸಾಧಿಸಬಲ್ಲರು ಎನ್ನುವ ಭರವಸೆಯಿದೆ.

ಪ್ರಶ್ನೆ: ಸೆಲ್ಕೋ ಸಾಧನೆಗಳ ಕುರಿತಾಗಿ ತಿಳಿಸುವಿರಾ? 

ಉತ್ತರ: ಪ್ರಥಮ ಆಫೀಸ್ ದಕ್ಷಿಣಕನ್ನಡದ ಪುತ್ತೂರಿನಲ್ಲಿ ಆರಂಭಿಸಿದ್ದೆವು. ಬಳಿಕ ಧಾರವಾಡದಲ್ಲಿ ಆರಂಭವಾಯಿತು. ಈ ಇಪ್ಪತ್ತು ವ?ಗಳಲ್ಲಿ ಏಳುಲಕ್ಷ ಮನೆಗಳಲ್ಲಿ, ಇಪ್ಪತ್ತುಸಾವಿರ ಸಂಸ್ಥೆಗಳಲ್ಲಿ, ಐವತ್ತುಸಾವಿರ ಸಣ್ಣವ್ಯಾಪಾರಿಗಳ ಅಂಗಡಿಗಳಲ್ಲಿ ಸೋಲಾರ್ ಲೈಟಿಂಗ್ ಅಳವಡಿಸಿದ್ದೇವೆ.

ಪ್ರಸ್ತುತ ೪೮೦ ಜನ ಸೆಲ್ಕೋ ಕುಟುಂಬದಲ್ಲಿ ಇದ್ದಾರೆ. ಕರ್ನಾಟಕ, ಮಹಾರಾ?, ತಮಿಳುನಾಡು ಸೇರಿದಂತೆ ಒಟ್ಟು ೫೨ ಶಾಖೆಗಳಿವೆ. ಸೆಲ್ಕೋ ಸಂಸ್ಥೆ ಎನ್ನುವುದಕ್ಕಿಂತ ಇದೊಂದು ಕುಟುಂಬ. ಯಾವುದೇ ಗ್ರಾಹಕ ನಮಗೆ ಕೇವಲ ಗ್ರಾಹಕನ? ಅಲ್ಲ. ಇಪ್ಪತ್ತು ವ?ಗಳಿಂದ ಅವರೂ ನಾವೂ ಸೆಲ್ಕೋ ಬೆಳವಣಿಗೆಯ ಜೊತೆಗಾರರು. ಇತ್ತೀಚೆಗೆ ಮದುವೆಯಾದ ಸೆಲ್ಕೋದ ಟೆಕ್ನಿಷಿಯನ್ ಒಬ್ಬನ ಮದುವೆಗೆ ೨೦೦ ಜನ ಗ್ರಾಹಕರು ಬಂದಿದ್ದರು. ಇದು ನಮ್ಮ ನಡುವಿನ ಸಂಬಂಧ. ಸೆಲ್ಕೋದ ಜಾಹೀರಾತು, ಫ್ಲೆಕ್ಸ್‌ಗಳನ್ನು ನೀವು ಎಲ್ಲಿಯೂ ನೋಡುವುದಿಲ್ಲ. ನಾವು ಸಾಗುತ್ತಿರುವುದು ನಂಬಿಕೆ- ಸಂಬಂಧಗಳ ತಳಹದಿಯ ಮೇಲೆ.

ನಾವು ಯಾರೂ ಲಾಭವನ್ನು ಮನೆಗೆ ತೆಗೆದುಕೊಂಡು ಹೋಗುವುದಿಲ್ಲ. ವ?ದ ಲಾಭ ಸಂಸ್ಥೆಗೆ ಹೋಗುತ್ತದೆ. ಶೇ. ೧೦ ಲಾಭ ಉದ್ಯೋಗಿಗಳಿಗೆ ಹೋಗುತ್ತದೆ. ಇಲ್ಲಿಯೂ ನಾವು ಲಾಭವನ್ನು ಕೆಳಗಿನ ಸ್ತರದ ಉದ್ಯೋಗಿಗಳಿಂದ ಹಂಚಲು ಆರಂಭಿಸುತ್ತೇವೆ. ಈ ಒಂಬತ್ತು ವ?ಗಳಲ್ಲಿ ಸೀನಿಯರ್ ಮ್ಯಾನೇಜ್‌ಮೆಂಟ್ ಸ್ತರದ ಉದ್ಯೋಗಿಗಳಿಗೆ ಪ್ರಾಫಿಟ್ ಶೇರ್ ಸಿಕ್ಕಿಲ್ಲ. ನಮ್ಮ ಮೂಲತತ್ತ್ವವೇ ಇದು, ಲಾಭಾಂಶ ಹಂಚುವುದೇ ಆಗಿರಬಹುದು ಅಥವಾ ಸಮಸ್ಯೆಯ ಬಗ್ಗೆ ಅರಿತುಕೊಳ್ಳುವುದೇ ಇರಬಹುದು; ಏನಿದ್ದರೂ ಅದು ತಳಮಟ್ಟ(ಬೇಸಿಕ್ ಲೆವೆಲ್)ದಿಂದ ಆರಂಭವಾಗಬೇಕು.

ನಾವು ಉದ್ಯೋಗಿಗಳನ್ನು ತೆಗೆದುಕೊಳ್ಳುವುದು ಇದೇ ಆಧಾರದ ಮೇಲೆ. ಆತ ಯಾವ ಡಿಗ್ರಿ ಮಾಡಿದ್ದಾನೆ, ಆತನ ರೆಸ್ಯೂಮ್‌ನಲ್ಲಿ ಎ? ಸಾಧನೆಗಳ ಪಟ್ಟಿಯಿದೆ ಎನ್ನುವುದು ನಮಗೆ ಮುಖ್ಯವಲ್ಲ. ನಮ್ಮಲ್ಲಿ ಎಂ.ಐ.ಟಿ.ಯಲ್ಲಿ ಡಿಗ್ರಿ ಪಡೆದುಕೊಂಡವರಿಂದ ಹಿಡಿದು ನಾಲ್ಕನೇ ತರಗತಿ ಅನುತ್ತೀರ್ಣರಾದವರೂ ಇದ್ದಾರೆ. ನಿಮ್ಮನ್ನು ನೀವು ಎಷ್ಟರ ಮಟ್ಟಿಗೆ ಸಮಾಜಕ್ಕಾಗಿ ಸಮರ್ಪಿಸಿಕೊಳ್ಳಬಲ್ಲಿರಿ, ಕೆಲಸದ ಬಗೆಗೆ ನಿಮಗಿರುವ ಪ್ರೀತಿಯೇನು ಎನ್ನುವುದನ್ನ? ನಾವು ನೋಡುತ್ತೇವೆ. ಶನಿವಾರ ನಮಗೆ ರಜೆ ಬೇಕು ಎಂದು ಕೇಳುವವರು ಇರುತ್ತಾರೆ. ನಾನು ಹೇಳುವುದು ಒಂದೇ ಮಾತು, “ಯಾವತ್ತು ನಮ್ಮ ದೇಶದ ಕೃಷಿಕನಿಗೆ, ಬಡವರಿಗೆ ಆದಿತ್ಯವಾರದಂದು ರಜೆ ಸಿಗುತ್ತದೋ; ಆವತ್ತು ನಾವು ಶನಿವಾರ ರಜೆ ತೆಗೆದುಕೊಳ್ಳೋಣ” ಎಂದು. ಕುಮಟಾದ ಮೋಹನ್ ಹೆಗಡೆ ಎನ್ನುವವರು, ಕುಮಟಾದ ನಮ್ಮ ಆಫೀಸಿನಲ್ಲಿ ಆಫೀಸ್ ಅಸಿಸ್ಟೆಂಟ್ ಆಗಿ ಸೇರಿದ್ದರು. ಈಗ ಅವರು ಸೆಲ್ಕೋದ ಚೀಫ್ ಆಪರೇಟಿಂಗ್ ಆಫೀಸರ್ ಸ್ಥಾನದಲ್ಲಿದ್ದಾರೆ. ಸಮರ್ಪಣಾಭಾವವ? ನಮಗೆ ಮುಖ್ಯ.

ಪ್ರಶ್ನೆ: ಸೆಲ್ಕೋ ಭವಿಷ್ಯದ ದಿನಗಳಲ್ಲಿ ಸಮರ್ಥವಾಗಿ ಸಾಗುವ ಸಲುವಾಗಿ ನಿಮ್ಮ ಯೋಚನೆಗಳೇನು? 

ಉತ್ತರ: ಯುವಜನರಿಗೆ ’ಇನ್ಕ್ಯುಬೇ?ನ್ ಪ್ರೋಸೆಸ್’ ಮಾಡುತ್ತಿದ್ದೇವೆ. ಅದು ಹೇಗೆಂದರೆ: ಕರ್ನಾಟಕದಲ್ಲಿ ಸೆಲ್ಕೋ ಆರಂಭವಾದಂತೆ ಬೇರೆ ರಾಜ್ಯದಲ್ಲಿನ ಆಸಕ್ತ ಯುವಕರನ್ನು ಸೇರಿಸಿಕೊಂಡು ಕೆಲಸ ಆರಂಭಿಸಿದ್ದೇವೆ. ಮಣಿಪುರ, ನಾಗಾಲ್ಯಾಂಡ್, ಉತ್ತರಪ್ರದೇಶ, ರಾಜಸ್ಥಾನ, ಫಿಲಿಫೈನ್ಸ್, ತಾನ್ಜೇನಿಯಾ ಇಲ್ಲಿನ ಸುಮಾರು ೨೦ ಜನರ ಗುಂಪು ಅದು. ಇದಕ್ಕೆ ಸೆಲ್ಕೋ ಹೆಸರಿಲ್ಲ. ಅವರಿಗೆ ಪೂರ್ತಿ ಎರಡು ತಿಂಗಳಿನ ಕಾರ್ಯಾಗಾರವನ್ನು ನೀಡುತ್ತೇವೆ. ಟೆಕ್ನಿಕಲ್ ಮಾಹಿತಿಗಳಿಗಿಂತ ಹೆಚ್ಚಾಗಿ ಯಾರ ಜೊತೆ ಯಾವ ರೀತಿ ವ್ಯವಹರಿಸಬೇಕು ಎನ್ನುವ ಬಗ್ಗೆ ಟ್ರೈನಿಂಗ್ ಕೊಡುತ್ತೇವೆ. ಟೆಕ್ನಿಕಲ್ ವಿ?ಯವನ್ನು ಎಲ್ಲರೂ ಸುಲಭದಲ್ಲಿ ಕಲಿಯುತ್ತಾರೆ. ಆದರೆ ಜನರ ಜೊತೆ ವ್ಯವಹರಿಸುವುದೇ ನಮಗೆ ಬೇಕಾಗಿರುವ ಮುಖ್ಯ ವಿಷಯ. ಚರ್ಚ್‌ನ ಪಾದ್ರಿ, ದೇವಸ್ಥಾನದ ಪುರೋಹಿತ, ಬೀದಿಬದಿಯ ವ್ಯಾಪಾರಿ, ಕಡ್ಲೆಕಾಯಿ ಬೆಳೆಯುವ ರೈತ – ಹೀಗೆ ಎಲ್ಲರ ದೃಷ್ಟಿಕೋನ, ಅವರ ಆರ್ಥಿಕಸ್ಥಿತಿ ಬೇರೆಬೇರೆಯಾಗಿರುತ್ತದೆ. ಅವರ ಸ್ಥಾನದಲ್ಲಿ ನಿಂತು, ಅವರವರ ಅಗತ್ಯತೆಯನ್ನು ತಿಳಿದುಕೊಂಡು, ಮಾತನಾಡುವುದನ್ನು ಕಲಿಯಬೇಕು. ಅದಕ್ಕಾಗಿ ಕಾರ್ಯಾಗಾರ ನಡೆಸುತ್ತೇವೆ.

ನಾವು ಎಲ್ಲಿ ಸೋಲಾರ್ ಆಧಾರಿತ ಲೈಟಿಂಗ್ ವ್ಯವಸ್ಥೆ ಅಲ್ಲದೆ ಇತರ ಯಂತ್ರಗಳ ಮೇಲೆ ಪ್ರಯೋಗ ಮಾಡುತ್ತೇವೆಯೋ; ಆಗ ಅಲ್ಲಿನ ಸಂಸ್ಕೃತಿ, ಜನಪದ ಕಲೆಗಳು, ಆಹಾರಪದ್ಧತಿ ಉಳಿದು ಬೆಳೆಯಲು ಪೂರಕವಾಗುವಂತಹ ವ್ಯವಸ್ಥೆಯನ್ನು ಮಾಡಲು ಯತ್ನಿಸುತ್ತೇವೆ.

“ದೂಷಿಸಬೇಡಿ – ಪರಿಹಾರ ಹುಡುಕಿ”

ಉತ್ತರ: “ದೂಷಿಸಬೇಡಿ – ಪರಿಹಾರ ಹುಡುಕಿ”. ಪ್ರತಿಯೊಬ್ಬ ಮನುಷ್ಯ ವರ್ಷಕ್ಕೆ ಒಂದು ಪರಿಹಾರವನ್ನು ಕಂಡುಹಿಡಿಯಲು ಸಾಧ್ಯವಾದರೆ, ಎಷ್ಟೊಂದು ಸಮಸ್ಯೆಗಳನ್ನು ಕೆಲವೇ ಕೆಲವು ವರ್ಷಗಳಲ್ಲಿ ನಿರ್ಮೂಲ ಮಾಡಬಹುದು. ಯುವಜನಾಂಗಕ್ಕೆ ಅವಕಾಶ ಕೊಡಿ. ಹಣಮಾಡುವುದೇ ಜೀವನದ ಉದ್ದೇಶ ಎನ್ನುವ ಭಾವನೆಯನ್ನು ಬೆಳೆಸಬೇಡಿ. ನಮ್ಮ ದೇಶ ಬಹಳ ಕ್ರಿಯಾತ್ಮಕ ಪೀಳಿಗೆಯನ್ನು ಹೊಂದಿದೆ, ಅದು ಹೊರದೇಶದ ಪಾಲಾಗದಂತೆ ಬಳಸಿಕೊಳ್ಳೋಣ. ವಿದೇಶಗಳಿಗೆ ಅಗ್ಗದ ಕೂಲಿಗಳಾಗದೆ ನಮ್ಮ ದೇಶದ ಸಮಸ್ಯೆಗಳಿಗೆ ಪರಿಹಾರದ ದಾರಿಯಾಗುವ ಪ್ರಯತ್ನ ಮಾಡೋಣ.

ದಕ್ಷಿಣಕನ್ನಡದಲ್ಲಿ ’ತೊಗಲುಬೊಂಬೆಯಾಟ’ ಆಡಿಸುವಂತಹ ಕಲಾವಿದನೊಬ್ಬನನ್ನು ಸಂಪರ್ಕಿಸಿದಾಗ ಆತನಿಂದ ಬಂದ ಉತ್ತರ, ’ಸೋಲಾರ್ ಆಧಾರಿತ ವ್ಯವಸ್ಥೆ ಆದರೆ ಆತ ರಾತ್ರಿಯ ಹೊತ್ತಲ್ಲಿ ಹೆಚ್ಚು ಆಟಗಳನ್ನು ನಡೆಸಬಹುದು’ ಎಂದಾಗಿತ್ತು. ತನ್ಮೂಲಕ ಹೆಚ್ಚು ಆದಾಯ ಗಳಿಸಬಹುದು ಎಂದು. ಈ ವ್ಯವಸ್ಥೆಗೆ ಐವತ್ತುಸಾವಿರ ರೂಪಾಯಿಗಳಷ್ಟು ಖರ್ಚಿತ್ತು. ಆತ ಇಪ್ಪತ್ತೈದುಸಾವಿರ ರೂಪಾಯಿ ಕೊಡಲು ತಯಾರಿದ್ದ. ಆದರೆ ನಾವು ಮಾಡಿದ ಒಪ್ಪಂದ ಬೇರೆಯದೇ ಆಗಿತ್ತು: “ಐವತ್ತುಸಾವಿರ ರೂಪಾಯಿ ಬಂಡವಾಳವನ್ನು ನಾವು ಹೂಡುತ್ತೇವೆ. ಆದರೆ ಒಂದು ವರ್ಷಕ್ಕೆ ಕನಿಷ್ಠ 20 ಬೊಂಬೆಯಾಟವನ್ನು ನಡೆಸಿಕೊಡಬೇಕು”. ಇದು ನಮ್ಮ ಕರಾರಾಗಿತ್ತು. ನಮ್ಮ ಉದ್ದೇಶ ಜನಪದ ಕಲೆಯಾದ ’ತೊಗಲುಬೊಂಬೆಯಾಟ’ ಉಳಿಯಬೇಕು. ಆತನ ಬಳಿ ದುಡ್ಡು ತೆಗೆದುಕೊಂಡು ನಮ್ಮ ವ್ಯವಹಾರ ಮುಗಿಸಬಹುದಿತ್ತು. ಆಗ ಮುಂದಿನ ಕೆಲವು ವ?ಗಳಲ್ಲಿ ನಮ್ಮ ಆಲ್ಬಂನಲ್ಲಿ ಫೋಟೋವಾಗಿ ಅ? ಬೊಂಬೆಯಾಟವನ್ನು ನೋಡುವಂತಾಗಬಹುದು. ಸೆಲ್ಕೋ ಎಂದರೆ ಸೋಲಾರ್ ವ್ಯವಹಾರವಲ್ಲ, ಇದು ಸಂಸ್ಕೃತಿಯನ್ನು ಉಳಿಸುವ ಹೋರಾಟ ಎನ್ನಬಹುದು.

ಸಾಮಾನ್ಯವಾಗಿ ಮನೆಯಲ್ಲಿ ಅಪ್ಪ ಹೇಳುವ ಮಾತು, ಅಮ್ಮನ ಹಾಗೆ ಯಾರೂ ನೀರುದೋಸೆ ಅಥವಾ ಯಾವುದೇ ಪಾರಂಪರಿಕ ತಿಂಡಿ ಮಾಡುವುದಿಲ್ಲ ಎಂದು. ಅಂದಿನ ಕಾಲದಲ್ಲಿ ಅಮ್ಮ ಅಜ್ಜಿಯಿಂದ, ಅಜ್ಜಿ ಅವರ ಅಮ್ಮನಿಂದ ನೋಡಿ ಕಲಿತು ತಿಳಿದು ಅಡುಗೆ ಮಾಡಿದರು. ಇಂದು, ಕಲಿಯುವ ಮಾಧ್ಯಮ ಬದಲಾಗಿದೆ. ಅದು ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್ ಮುಂತಾಗಿ ಇಂಟರ್‌ನೆಟ್ ಆಧಾರಿತವಾಗಿದೆ. ಮಾಡುವುದು ಸರಿಯಾಗಿಲ್ಲ ಎಂದು ದೂರಬೇಡಿ, ನಮ್ಮ ಪಾರಂಪರಿಕ ತಿಂಡಿಗಳನ್ನು ಡಾಕ್ಯುಮೆಂಟ್ ಮಾಡಿದ್ದೇವಾ? ಇಲ್ಲ. ಇದಕ್ಕಾಗಿ ಆರಂಭಿಸಿರುವ ಹೊಸ ಯೋಜನೆಯೇ: ’ಆರ್ಟ್- ಕಲ್ಚರ್-ಫುಡ್’. ರಾಜ್ಯದ ಹಲವು ಕಡೆಗಳಲ್ಲಿ ಅಲ್ಲಿಯ ವಿಶೇ? ತಿಂಡಿಯನ್ನು ಪಾರಂಪರಿಕವಾಗಿಯೇ ಮಾಡುವವರಿರುತ್ತಾರೆ. ಅವರಿಗೆ ಉತ್ತಮ ಬೆಳಕಿನ ವ್ಯವಸ್ಥೆ ಇರುವಂತಹ ಕಟ್ಟಡ, ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡುತ್ತೇವೆ. ಪುನಃ ನಮ್ಮ ಒಪ್ಪಂದ ಏನೆಂದರೆ, ಆತ ಮಾಡುವ ಅಡುಗೆಯನ್ನು ಡಾಕ್ಯುಮೆಂಟ್ ಮಾಡಲು ಬಿಡಬೇಕು. ಸುಮಾರು ಮೂರು ವ?ದಲ್ಲಿ ಕಡಮೆ ಎಂದರೂ ಕರ್ನಾಟಕದ ೫೦೦ ಪಾರಂಪರಿಕ ಆಹಾರ ಪದ್ಧತಿಯ, ಅಡುಗೆ ಕಲೆಯ ಡಾಕ್ಯುಮೆಂಟ್ ಮಾಡುವ ಗುರಿ ನಮ್ಮದು. ಬಳಿಕ ನಾವು ಅಡುಗೆ ತರಬೇತಿ ನೀಡುವಂತಹ ಸಂಸ್ಥೆಗಳಿಗೆ ಹೋಗುತ್ತೇವೆ. ಅಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆ ಸುಲಭವಾಗುತ್ತದೆ, ನಮ್ಮ ಆಹಾರಸಂಸ್ಕೃತಿ ಮುಂದಿನ ಪೀಳಿಗೆಗೆ ಸಾಗುತ್ತದೆ.

ಕಲೆಗೆ ಸಂಬಂಧಿಸಿದಂತೆ, ನಮ್ಮ ದೇಶದ ಯಾವುದೇ ಸ್ಮಾರಕಗಳಾಗಿರಬಹುದು, ಕೋಟೆ, ಅರಮನೆಗಳಾಗಿರಬಹುದು; ಅಲ್ಲಿ ಸೋಲಾರ್ ಲೈಟಿಂಗ್ ಪ್ರಶಸ್ತವಾಗಿ ಬಳಸುವ ಪ್ರಯತ್ನ ಮಾಡುತ್ತೇವೆ. ಮೂಡಬಿದ್ರೆಯ ಸಾವಿರ ಕಂಬದ ಬಸದಿಯಲ್ಲಿ ಸಂಪೂರ್ಣವಾಗಿ ಸೋಲಾರ್ ಲೈಟಿಂಗ್ ಬಳಸುವ ಕಾರ್ಯಮಾಡುತ್ತಿದ್ದೇವೆ. ಈ ಸೋಲಾರ್ ವಿನ್ಯಾಸದಿಂದ ಬಸದಿಯ ರೂಪರೇ?ಗೆ ಸ್ವಲ್ಪವೂ ಧಕ್ಕೆಯಾಗಬಾರದು. ಒಂದು ಸೋಲಾರ್ ಪ್ಯಾನೆಲ್ ಹಾಕುವುದರಿಂದ ಬಸದಿಯ ಎರಡು ಕಂಬಗಳ ರೂಪಾಂತರವಾಗುವುದಾದರೆ, ಸೋಲಾರ್ ಅಳವಡಿಸಿದ ಉದ್ದೇಶವೇ ನಿರರ್ಥಕ. ಸೋಲಾರ್ ಅಳವಡಿಸಿದ್ದು ಅಲ್ಲಿನ ಪರಿಸರಕ್ಕೆ ಪೂರಕವಾಗಿರಬೇಕು, ಅಲ್ಲಿ ಎಲ್ಲೂ ಸೆಲ್ಕೋ ಎನ್ನುವ ಹೆಸರು ರಾರಾಜಿಸಬೇಕಾಗಿಲ್ಲ. ಸಾವಿರ ಕಂಬದ ಬಸದಿ ನೋಡಲು ಹೋದಾಗ ಬಸದಿಯ ಅಂದ-ವಿನ್ಯಾಸ ಕಾಣಿಸಬೇಕೇ ಹೊರತು ಸೋಲಾರ್ ಪ್ಯಾನೆಲ್‌ಗಳಲ್ಲ, ಸೆಲ್ಕೋದ ಹೆಸರಲ್ಲ. ಇಂತಹ ವ್ಯವಸ್ಥೆ ಮಾಡಿ ಡಾಕ್ಯುಮೆಂಟ್ ಮಾಡುತ್ತೇವೆ.

ಹೀಗೆ ಎಲ್ಲವೂ ಮುಂದಿನ ಪೀಳಿಗೆಗೆ ತಲಪಬೇಕು, ಬದಲಾವಣೆಯಾಗಬೇಕು. ಅಂತಿಮವಾಗಿ ಸೆಲ್ಕೋ ತನ್ನ ಕೊನೆಯನ್ನು ಕಾಣಬೇಕು. ಸೆಲ್ಕೋ ಆರಂಭವಾಗಿದ್ದು ನಮ್ಮ ಸಮಾಜದಲ್ಲಿದ್ದ ಸಮಸ್ಯೆ, ಬಡತನ ಇವುಗಳನ್ನು ನಿವಾರಿಸಲು. ದಿನದಿಂದ ದಿನಕ್ಕೆ, ವ?ದಿಂದ ವ?ಕ್ಕೆ ಸೆಲ್ಕೋದ ಆವಶ್ಯಕತೆ ಹೆಚ್ಚಾಗುತ್ತಿದೆಯೆಂದರೆ ಸಮಸ್ಯೆಯ ರೂಪ ಉಲ್ಬಣವಾಗುತ್ತಿದೆಯೆಂದೇ ಅರ್ಥ. ಅಲ್ಲಿಗೆ ನಾವು ಸಂಸ್ಥೆಯನ್ನು ಆರಂಭಿಸಿದ ಉದ್ದೇಶ ಹೇಗೆ ಈಡೇರಲು ಸಾಧ್ಯ? ಸೆಲ್ಕೋ ಆರಂಭವಾಗಿದ್ದೆ ಸಮಸ್ಯೆಯನ್ನು ಕೊನೆಗಾಣಿಸಲು, ಹಾಗಿದ್ದಾಗ ಸೆಲ್ಕೋ ಕೂಡ ಕೊನೆಯಾಗಲೇಬೇಕು. ಬ್ರೈಲ್‌ಲಿಪಿ ಇರುವ ಐ-ಪ್ಯಾಡ್ ಡೆವಲಪ್ ಮಾಡಿದವರು ಇತ್ತೀಚೆಗೆ ಹೇಳುತ್ತಿದ್ದರು: “ದಿನಕ್ಕೆ ೩೦೦ ಐ-ಪ್ಯಾಡ್ ಮಾರಾಟವಾಗುತ್ತಿದೆ” ಎಂದು. ನನಗೆ ನಿಜವಾಗಿಯೂ ಭಯವಾಯಿತು. ಇದರ ಅರ್ಥ ಸಮಸ್ಯೆ ಹೆಚ್ಚಾಗುತ್ತಿದೆ ಎಂದೇ ಹೊರತು ಸಮಸ್ಯೆ ನಿರ್ಮೂಲವಾಗುತ್ತಿದೆ ಎಂದಲ್ಲ. ಸಮಸ್ಯೆಯನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ನಿರ್ಮೂಲನೆ ಮಾಡಬೇಕೇ ಹೊರತು ನಮ್ಮ ಪ್ರಾಡಕ್ಟ್ ಮಾರಾಟವಾಗುತ್ತಿದೆ ಎಂದು ಖುಷಿಪಡುವುದಲ್ಲ. ಅಂತಿಮವಾಗಿ ಸೆಲ್ಕೋ ಸಾಯಬೇಕು. ಅದೇ ನಮ್ಮ ಭವಿಷ್ಯ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ