ಜೀವನದಲ್ಲಿ ನಾವು ಬಯಸದಿದ್ದದ್ದು, ನಮಗೇ ಹಿಡಿಸದಿದ್ದದ್ದು ಸಂಭವಿಸಿಬಿಡುತ್ತದೆ. ನನ್ನ ಬಾಳಿನಲ್ಲೂ ಹೀಗೆಯೇ ಆಯಿತು.
ರುಮಾ?…. ಹೌದು. ಅದು ನನ್ನ ಹೆಸರು. ನೀವೆಲ್ಲ ಒಂದಲ್ಲ ಒಂದು ಸಂದರ್ಭದಲ್ಲಿ ಕೇಳಿಯೇ ಇರುತ್ತೀರಿ. ಆದರೆ ರಾಮಾಯಣದ ಮಹಾಕಥನದಲ್ಲಿ ನಾನು ಎಲ್ಲಿಯೋ ಕಳೆದುಹೋದವಳು. ನಿಮ್ಮ ಕಣ್ಣಿಗೆ ಬಿದ್ದಿರಲಾರೆ. ಹಾಗೆ ನೋಡಿದರೆ ಉಳಿದವರ ಕಣ್ಣಿಗೆ ಬೀಳಬೇಕಾದಷ್ಟು ದೊಡ್ಡ ಸಾಧನೆ ಮಾಡಿದವಳಲ್ಲ ನಾನು. ಗುರುತಿಸಿಕೊಳ್ಳಬೇಕು ಎಂಬ ಹಂಬಲವಿದ್ದವಳೂ ಅಲ್ಲ. ನನ್ನ ಕಥೆಯೂ ತುಂಬ ಚಿಕ್ಕದು. ಕಿಷ್ಕಿಂಧೆಯೆಂಬ ವಾನರ ರಾಜ್ಯವಿತ್ತು. ಅಲ್ಲಿಯ ದೊರೆ ವಾಲಿ. ಅವನ ತಮ್ಮ ಸುಗ್ರೀವನ ಹೆಂಡತಿ ನಾನು. ಅಷ್ಟೇ ನನ್ನ ಕಥೆ. ಕವಿ ಹೇಳಿದ್ದೂ ಅಷ್ಟೆ.
ಮೇಲ್ನೋಟಕ್ಕೆ ಅಷ್ಟೆ. ಆದರೆ ನೀವೇನಾದರೂ ನನ್ನ ಅಂತರಂಗದ ಕೂಗಿಗೆ ಕಿವಿಗೊಡುವ ಉದಾರಿಗಳಾದರೆ ಅಲ್ಲಿ ಇನ್ನೊಂದೇ ಕಥೆ ತೆರೆದುಕೊಂಡೀತು. ಅದು ಸುಖದ ಕಥೆಯಲ್ಲ; ಸಂಭ್ರಮದ ಕಥೆಯಲ್ಲ; ಅದು ನೋವಿನ ಕಥೆ. ನನ್ನ ಜತೆಗೇ ಮುಗಿಯುವ ಕಥೆ. ಹಾಗಾಗಿ ನಿಮಗೆ ನಾನು ಹೇಳುವುದು ಅಪೂರ್ಣವಾಗಿ ಉಳಿಯುವ ಕಥೆ. ಅದರ ಮುಕ್ತಾಯ ನನ್ನ ಕೈಯಲ್ಲಿಲ್ಲ. ನಿಮ್ಮ ಒಳಗಿದೆ. ಬೇಕಾದ ಹಾಗೆ ಮುಗಿಸಬಹುದು ನೀವು; ಮುಗಿಸದೆಯೂ ಇರಬಹುದು. ಸಣ್ಣದಾದರೂ ನನ್ನ ಕಥೆ ಆರಂಭವಾಗುವಾಗ ಸಂಭ್ರಮವೇ ಇತ್ತು. ನಾನು ಒಬ್ಬ ವಾನರನ ಮಗಳು. ತಾರನೆಂದು ನನ್ನಪ್ಪನ ಹೆಸರು. ನನ್ನ ಜಾತಿಯವರಲ್ಲಿ ನೀವು ಸೌಂದರ್ಯವನ್ನು ಕಾಣಬಲ್ಲಿರಾದರೆ ನಾನೂ ಸುಂದರಿಯಾಗಿಯೇ ಇದ್ದೆ.ವಯಸ್ಸಿಗೆ ಬರುತ್ತಿದ್ದಂತೆ ನನ್ನಪ್ಪ ಮದುವೆಯ ಯೋಚನೆ ಮಾಡಿದ. ಆಗ ಕಿಷ್ಕಿಂಧೆ ವಾನರ ಸಮೂಹಕ್ಕೆಲ್ಲ ಕೇಂದ್ರವಾಗಿತ್ತು. ಅಲ್ಲಿದ್ದು ಆಳ್ವಿಕೆ ನಡೆಸುತ್ತ ದೇವಾಂಶಸಂಭೂತರೆಂದು ಪ್ರಸಿದ್ಧಿ ಪಡೆದಿದ್ದ ವಾಲಿ, ಸುಗ್ರೀವರೆಂಬ ಸೋದರರ ಬಗ್ಗೆ ಕೇಳಿದ ಅಪ್ಪ ಸುಗ್ರೀವನಿಗೆ ನನ್ನನ್ನು ಕೊಟ್ಟು ಮದುವೆ ಮಾಡಿದ. ಕೆಲವು ದಿನ ನಾಚಿಕೆ, ಸಂಕೋಚ, ಅಂಜಿಕೆ. ಮತ್ತೆ ಕೆಲವು ದಿನ ಹೊಸತನದ ಆತಂಕ. ಹೀಗೆ ದಿನಗಳುರುಳುತ್ತ ಸುಖದ ಸವಿ ತಿಳಿಯುತ್ತ ಜೀವನ ಅಂದರೇನೆಂದು ಅರ್ಥವಾಗುವ ಹೊತ್ತಿಗೆ….?? ಅಯ್ಯೋ!
ಗೊತ್ತು ನನಗೆ. ನಾನು ಹೀಗೆ ನಡುವೆ ಬಂದು ಮಾತಾಡುವುದು ನಿಮಗೆ ಹಿಡಿಸುವುದಿಲ್ಲವೆಂದು. ಆದರೇನು ಮಾಡಲಿ? ಜೀವನದಲ್ಲಿ ನಾವು ಬಯಸದಿದ್ದದ್ದು, ನಮಗೇ ಹಿಡಿಸದಿದ್ದದ್ದು ಸಂಭವಿಸಿಬಿಡುತ್ತದೆ. ನನ್ನ ಬಾಳಿನಲ್ಲೂ ಹೀಗೆಯೇ ಆಯಿತು.
ಆ ದಿನ….??
ಯಾರೋ ಮಾಯಾವಿ ಎಂಬವನಂತೆ. ಯಾರೋ ಗಂಧರ್ವ ಕನ್ಯೆಯೊಬ್ಬಳನ್ನು ಅಪಹರಿಸಿಕೊಂಡು ಹೋಗುತ್ತಿದ್ದ. ಅವಳ ಆರ್ತನಾದ ಈ ಸೋದರರ ಕಿವಿಗೆ ಬಿತ್ತು. ತತ್ಕ್ಷಣವೇ ಇಬ್ಬರೂ ಅವನನ್ನು ಬೆನ್ನಟ್ಟಿದರು. ಮಾಯಾವಿ ಹೆದರಿರಬೇಕು; ಅವಳನ್ನಲ್ಲೇ ಬಿಟ್ಟು ಓಡತೊಡಗಿದ. ವಾಲಿ, ಸುಗ್ರೀವರ ಉತ್ಸಾಹ ಹೆಚ್ಚಿತು. ಮಾಯಾವಿ ಓಡುತ್ತಾ ಹೋದವನು ಕಿಷ್ಕಿಂಧೆಯ ಹೊರಬಾಹೆಯಲ್ಲಿದ್ದ ಒಂದು ಗವಿಯೊಳಕ್ಕೆ ಪ್ರವೇಶಿಸಿದನಂತೆ. ಒಳಗೆಲ್ಲ ಕತ್ತಲು ತುಂಬಿದ್ದ ಆ ಗವಿಯೊಳಕ್ಕೆ ಪ್ರವೇಶಿಸುವುದಕ್ಕೆ ಸುಗ್ರೀವ ಸಿದ್ಧನಾದಾಗ ವಾಲಿ ಅವನನ್ನು ತಡೆದು ನಿಲ್ಲಿಸಿದನಂತೆ. ತಮ್ಮನ ಮೇಲಿನ ವಾತ್ಸಲ್ಯ ಅಷ್ಟಿತ್ತು ವಾಲಿಯಲ್ಲಿ (ಅಥವಾ ನಾವೆಲ್ಲ ಹಾಗೆಂದು ತಿಳಿದೆವು). ಗವಿಯ ಒಳಗೆಹೋದ ವಾಲಿ ಬಹುಕಾಲವಾದರೂ ಹೊರಗೆ ಬರಲಿಲ್ಲ. ಕೊನೆಗೆ ಕೇಳಿಬಂದ ಆರ್ತನಾದ, ರಕ್ತಪ್ರವಾಹದಿಂದ ಭೀತನಾದ ಸುಗ್ರೀವ ಕಿಷ್ಕಿಂಧೆಗೆ ಓಡಿಬಂದ.
ವಾಲಿ ಸತ್ತನೆಂದು ತೀರ್ಮಾನವಾಯಿತು. ವಾನರರ ಕಟ್ಟಳೆಯಂತೆ ಸುಗ್ರೀವನೇ ಕಿಷ್ಕಿಂಧೆಗೆ ರಾಜನಾದ. ಆದರೆ ಅಂದು ಹುಟ್ಟಿದ ಪ್ರಶ್ನೆಗೆ ನನಗೆ ಇಂದಿನವರೆಗೂ ಉತ್ತರ ದೊರಕಿಲ್ಲ. ಬಹುಶಃ ದೊರಕುವುದೂ ಇಲ್ಲ. ರಾಜ್ಯಕ್ಕೆ ಸುಗ್ರೀವ ಉತ್ತರಾಧಿಕಾರಿಯಾದ ಸರಿ; ಆದರೆ ತಾರೆಯನ್ನು ಪತ್ನಿಯಾಗಿಸಿಕೊಳ್ಳಬೇಕಾದ ಅಗತ್ಯವೋ ಅನಿವಾರ್ಯವೋ ಇತ್ತೇ? ಯಾರೂ ಈ ವಿಚಾರಕ್ಕೆ ಅವನನ್ನು ಒತ್ತಾಯಿಸಿದ್ದಿಲ್ಲ. ಅಥವಾ, ಅನಿವಾರ್ಯವೆಂದು ಭಾವಿಸಿದರೂ ಅವಸರಿಸಬೇಕಾಗಿರಲಿಲ್ಲ. ತಾನು ಅದಕ್ಕಾಗಿ ಕಾದುಕೂತಿದ್ದವನಂತೆ ಸುಗ್ರೀವ ವರ್ತಿಸಿದ. ಯಾರೋ ಅಣ್ಣ ಸತ್ತರೆ ಅವನ ಹೆಂಡತಿಯನ್ನು ತಮ್ಮ ಕೈಹಿಡಿಯಬಹುದು ಎಂಬ ಸೂಚನೆ ಕೊಟ್ಟದ್ದೇ ತಡ, ತಾರೆಯ ಕೈಹಿಡಿದ. ಅದೇನೂ ಕಡ್ಡಾಯವಾಗಿ ಪಾಲಿಸಲೇಬೇಕಾದ ವಿಧಿಯಾಗಿರಲಿಲ್ಲ. ಎಲ್ಲೋ ಆರ್ಯಾವರ್ತದ ಕಡೆ ಹಾಗೊಂದು ಶಾಸ್ತ್ರ ಉಂಟಂತೆ. ನನ್ನ ಮನಸ್ಸು ಮೊತ್ತಮೊದಲ ಆಘಾತಕ್ಕೊಳಗಾದದ್ದು ಆಗ. ಗಂಡು ಹೆಣ್ಣಿನ ಸಂಬಂಧ ಹೇಗೂ ನಡೆದೀತು. ಆದರೆ ಗಂಡ ಹೆಂಡತಿಯರ ಸಂಬಂಧ ತುಂಬ ಸೂಕ್ಷ್ಮವಾದ್ದು. ಸಣ್ಣ ಪುಟ್ಟ ಬಿರುಕೂ ಪರಸ್ಪರ ನಂಬಿಕೆ, ಪ್ರೇಮಗಳನ್ನು ಸುಟ್ಟುಬಿಡುತ್ತದೆ. ತನ್ನ ಹಾಸಿಗೆಯಲ್ಲಿ ತನ್ನ ಗಂಡನ ಜತೆ ಇನ್ನೊಬ್ಬಳು ಹೆಣ್ಣು ಮಲಗುವುದನ್ನು ಹೆಂಡತಿಯಾದವಳು ಹೇಗೆ ಸಹಿಸಿಯಾಳು? ನಾನು ಒಳಗೊಳಗೆ ನೊಂದೆ. ಮಾಯಾವಿ ಪ್ರಕರಣಕ್ಕೆ ಮೊದಲಿದ್ದಂತೆ ಸುಗ್ರೀವನ ಕುರಿತು `ಇವನು ನನ್ನವ’ ಎಂಬ ಭಾವದ ಎಳೆ ತುಂಡಾಗಿ ಬಿಟ್ಟಿತು.
ನನ್ನೊಳಗಿನ ಈ ಭಾವವ್ಯತ್ಯಾಸ ಸುಗ್ರೀವನ ಗಮನಕ್ಕೇ ಬಂದಿರಲಾರದು (ಅಥವಾ ಬಂದರೂ ಅಧಿಕಾರ, ಹೊಸ ಹೆಂಡತಿ ಸಿಕ್ಕಿದ ಸಂಭ್ರಮದಲ್ಲಿ ಉಪೇಕ್ಷಿಸಿದ್ದರೂ ಇರಬಹುದು). ಸುಗ್ರೀವ ಸಂವೇದನೆ ಕಳೆದುಕೊಂಡಿದ್ದ ನಿಜ. ಆದರೆ ಅವಳು; ತಾರೆ! ತನ್ನ ಜತೆ ಸುದೀರ್ಘ ದಾಂಪತ್ಯ ನಡೆಸಿದ ವಾಲಿ ಸತ್ತಾಗಲೂ ಅವಳಿಗೆ ಉಂಟಾದ ದುಃಖದಲ್ಲಿ ತೀವ್ರತೆ ಇದ್ದಂತೆ ಕಾಣಲಿಲ್ಲ, ನನಗೆ. ಅಥವಾ, ನನ್ನ ಅಸಹನೆಯಿಂದ ಹಾಗೆ ತೋರಿತೋ ಏನೋ, ಇರಲಿ. ಆದರೆ ಸುಗ್ರೀವನೊಂದಿಗೆ ದಾಂಪತ್ಯಕ್ಕೆ ತೊಡಗಿದಾಗ ಅವಳಲ್ಲಿ ಕಾಣಿಸಿದ ಸಂಭ್ರಮ? ಅದಕ್ಕೇನರ್ಥ? ನಾನು ಹೀಗೆ ಯೋಚಿಸಬಾರದಿತ್ತೆಂದು ನಿಮಗನಿಸಿದರೆ ಕ್ಷಮಿಸಿ; ಇಬ್ಬರ ಮಧ್ಯೆ ಮೊದಲೇ ಆಕರ್ಷಣೆ ಇದ್ದಿರಬಹುದೆ ಎಂಬ ಸಂದೇಹ ನನ್ನಲ್ಲಿ ಹುಟ್ಟಿದ್ದು ನಿಜ.
*****
ಕೆಲಕಾಲ ಕಳೆಯಿತು. ಆಗ ನಮಗೆಲ್ಲ ಇನ್ನೊಂದು ಆಶ್ಚರ್ಯ ಕಾದಿತ್ತು. ಒಂದು ದಿನ ವಾಲಿ ಕಿಷ್ಕಿಂಧೆಗೆ ಬಂದ. ಹೌದು ವಾಲಿಯೇ. ಅವನು ಗವಿಯೊಳಗೆ ಸತ್ತಿರಲಿಲ್ಲ. ಮಾಯಾವಿಯನ್ನು ಕೊಂದು ಕಗ್ಗತ್ತಲೆಯ ಗವಿಯಿಂದ ಹೇಗೋ ಮಾಡಿ ಹೊರಬಂದವ ನೇರ ಕಿಷ್ಕಿಂಧೆಗೆ ಬಂದ. ನಾವೆಲ್ಲ ಈ ಕೌತುಕಕ್ಕೆ ಬೆರಗಾಗಿ ನಿಶ್ಚೇತನರಾಗಿ ನಿಂತುಬಿಟ್ಟಿದ್ದೆವು. ಒಮ್ಮೆ ಎಲ್ಲರನ್ನೂ ಆಲೋಕನ ಮಾಡಿದ ವಾಲಿಯ ದೃಷ್ಟಿ ನೆಟ್ಟದ್ದು ಸುಗ್ರೀವ ಹಾಗೂ ಅವನ ಪಕ್ಕದಲ್ಲಿ ಕುಳಿತಿದ್ದ ತಾರೆಯ ಮೇಲೆ. ಅಲ್ಲಿಯವರೆಗೆ ಶಾಂತನಾಗಿದ್ದವನು ಉರಿಗೆಂಡವಾಗಿಹೋದ. ನಾಲ್ಕೇ ನಾಲ್ಕು ಹೆಜ್ಜೆಗಳಲ್ಲಿ ಆಸನದಲ್ಲಿ ಕುಳಿತಿದ್ದ ಸುಗ್ರೀವನೆಡೆಗೆ ಧಾವಿಸಿ ಅವನ ತಲೆಗೂದಲು ಹಿಡಿದು ಎಳೆದು ಕೆಳಗೆ ತಳ್ಳಿದ; ತುಳಿದ. ಗಡಗಡ ನಡುಗುತ್ತಿದ್ದ ಸುಗ್ರೀವ ಏನೋ ಹೇಳುವುದಕ್ಕೆ ಯತ್ನಿಸಿದ; ಆದರೆ ಬಾಯಿಬಿಡುವ ಮೊದಲೇ ಅವನ ಮುಸುಡಿಗೆ ಬಡಿದ. ತನ್ನ ಸುತ್ತಲೂ ದಿಗ್ಭ್ರಾಂತ ಸ್ಥಿತಿಯಲ್ಲಿ ನಿಂತಿದ್ದ ವಾನರ ಪ್ರಮುಖರನ್ನು ಕುರಿತು,”ಈ ಪಾಪಿ ಸುಗ್ರೀವ ಮಾಡಿದ ಹೀನಕೃತ್ಯವನ್ನು ಕಂಡಿರಾ? ನನ್ನ ತಮ್ಮನೆಂದು ನಾನು ವಾತ್ಸಲ್ಯದಿಂದ ಇವನನ್ನು ನಡೆಸಿಕೊಂಡ ಬಗೆಯನ್ನು ನೀವೆಲ್ಲ ತಿಳಿದೇ ಇದ್ದೀರಿ. ನಮ್ಮ ಪ್ರಾಚೀನ ಪದ್ಧತಿಯಂತೆ ಅಣ್ಣನೂ ಇಲ್ಲ; ತಮ್ಮನೂ ಇಲ್ಲ. ನಾನು ಇವನನ್ನು ಗುಂಪಿನಲ್ಲಿ ಗುರುತಿಸಿದ್ದರೆ ಸಾಕಿತ್ತು. ಆದರೆ ಎಲ್ಲ ಕಪಿಗಳೂ ಸಂಸ್ಕಾರವಂತರಾಗಬೇಕೆಂದು ನನ್ನ ಪ್ರಯತ್ನವಿದ್ದುದಲ್ಲವೇ? ಅದಕ್ಕಾಗಿಯೇ ಸಂಧ್ಯಾವಂದನೆ, ವಿವಾಹ ಸಂಸ್ಕಾರ ಇತ್ಯಾದಿ ಕ್ರಮಗಳನ್ನು ಅಳವಡಿಸಿಕೊಳ್ಳುತ್ತ ಬಂದವರು ನಾವು. ಆದರೆ ಇಂದು ಈ ದ್ರೋಹಿ ಮಾಡಿದ್ದೇನು? ನಾನು ಸತ್ತಿದ್ದೇನೆಂದು ಸುಳ್ಳನ್ನು ಹೇಳಿ ನಿಮ್ಮನ್ನು ನಂಬಿಸಿದ್ದಲ್ಲದೆ ಕಿಷ್ಕಿಂಧೆಯನ್ನೂ ತನ್ನದಾಗಿಸಿಕೊಂಡಿದ್ದಾನೆ. ಹಾಳಾಗಲಿ, ಆದರೆ? ಆದರೆ ನನ್ನ ಪತ್ನಿ ತಾರೆಯನ್ನೂ ವಶಪಡಿಸಿಕೊಂಡಿದ್ದಾನೆ. ಇವನನ್ನು ಸುಮ್ಮನೇ ಬಿಟ್ಟೇನೆಯೆ? ಪಾಪಿ…..” ಹೀಗೆ ಹೇಳುತ್ತ ಹೇಳುತ್ತ ಸುಗ್ರೀವನನ್ನು ಅವ್ಯಾಹತವಾಗಿ ಹೊಡೆಯುತ್ತಲೂ ಇದ್ದ. ಸುಗ್ರೀವನಿಗೆ ಒಂದಕ್ಷರ ಮಾತಾಡುವುದಕ್ಕೂ ಬಿಡಲಿಲ್ಲ. ತಿನ್ನುವಷ್ಟು ಪೆಟ್ಟು ತಿಂದ ಸುಗ್ರೀವ, ಕೊನೆಗೆ ಸಹಿಸಲಾರದೆ ತಿರುಗಿ ಬಿದ್ದ. ವಾಲಿಯ ಬಲ, ಮಿಗಿಲಾದ ಆಕ್ರೋಶದ ಎದುರು ಅವನ ಯಾವ ಆಟವೂ ನಡೆಯಲಿಲ್ಲ. ಹಿರಿಯ ಕಪಿವೀರರಾಗಲಿ, ಮಂತ್ರಿಗಳಾಗಲಿ ವಾಲಿಯನ್ನು ತಡೆಯುವುದಕ್ಕೆ ಮುಂದಾಗಲಿಲ್ಲ. ವಾಲಿಯ ಬಲಕ್ಕೆ ಹೆದರಿದರೋ, ಅಥವಾ ಒಳಗೊಳಗೆ ಸುಗ್ರೀವನದು ತಪ್ಪು ಎಂಬ ಭಾವನೆ ಅವರಲ್ಲಿತ್ತೋ ಏನೋ. ನಿಜಕ್ಕಾದರೆ ಮೊದಮೊದಲು ಸುಗ್ರೀವನಿಗೆ ಏಟು ಬಿದ್ದಾಗ ನನಗೇ ಒಳಗೊಳಗೆ ಸಂತೋಷವಾಗಿತ್ತು. ಆದರೆ ಅದು ಅಷ್ಟಕ್ಕೆ ನಿಲ್ಲಲಿಲ್ಲ. ಸುಗ್ರೀವನನ್ನು ಕಿಷ್ಕಿಂಧೆಯಿಂದ ಹೊರಗಟ್ಟಿದ ವಾಲಿ, ಅವನ ಮೇಲಿನ ಸೇಡನ್ನು ತೀರಿಸಿಕೊಳ್ಳುವುದಕ್ಕೆ ನನ್ನನ್ನು ಬಳಸಿಕೊಂಡ.
ನನ್ನ ಬದುಕಿನ ಇನ್ನೊಂದು ದುರಂತ ಅಲ್ಲಿಂದ ಪ್ರಾರಂಭವಾಯಿತು. ವಾಲಿಯ ಶಯ್ಯೆಗೆ ಮೈಯೊಪ್ಪಿಸುವ ಅನಿವಾರ್ಯ ನನಗೊದಗಿತು. ಸುಗ್ರೀವ ಮಾನಸಿಕ ನೋವು ಕೊಟ್ಟ. ಆದರೀಗ? ವಾಲಿಯಿಂದ ದೈಹಿಕ ಹಿಂಸೆ. ಯಾವ ಹೆಣ್ಣೂ ಬಯಸದ ಸ್ಥಿತಿ ನನ್ನದಾಯಿತು. ಸುಗ್ರೀವ ಎಲ್ಲೆಲ್ಲೋ ಹೋಗಿ ಯಾರ್ಯಾರಲ್ಲೋ ಸಹಾಯ ಬೇಡಿ ನಿರಾಶನಾದ. ಕೊನೆಗೆ ಋಷ್ಯಮೂಕದಲ್ಲಿ ಆಶ್ರಯ ಪಡೆದ. ಆದರೂ ಹಠ ಬಿಡದೆ ವಾಲಿಗೆ ಸವಾಲೊಡ್ಡುತ್ತಲೇ ಇದ್ದ. ಅವನ ಯಾವ ಪ್ರಯತ್ನವೂ ಪ್ರಯೋಜನಕ್ಕೆ ಬರಲಿಲ್ಲ. ಎಷ್ಟೋ ಕಾಲ ಕಳೆಯಿತು. ನಾನು ಭಾವನೆಗಳೇ ಇಲ್ಲದ ಕಟ್ಟಿಗೆಯಂತೆ ದಿನ ಕಳೆಯುತ್ತಿದ್ದೆ.
*****
ಅಂತೂ ಬಿಡುಗಡೆಯ ದಿನ ಬಂತು, ಅಥವಾ ನಾನು ಹಾಗೆ ಭಾವಿಸಿದೆ. ಅಯೋಧ್ಯೆಯಿಂದ ಬಂದ ರಾಮ ವಾಲಿಯನ್ನು ಕೊಂದು ಕಿಷ್ಕಿಂಧೆಯನ್ನು ಸುಗ್ರೀವನಿಗೆ ವಹಿಸಿದ. ರಾಮನ ವ್ಯಕ್ತಿತ್ವದ ಬಗೆಗೆ ಬಹುವಾಗಿ ಕೇಳಿದ್ದ ನಾನು ನನ್ನ ಯಾತನೆಯ ಕಥೆಯನ್ನು ಅವನಲ್ಲಿ ನಿವೇದಿಸಿಕೊಳ್ಳಬಯಸಿದ್ದೆ. ಅಹಲ್ಯೆ, ಶಬರಿಯಂತಹವರಿಗೆ ಅನುಗ್ರಹ ಮಾಡಿದ ಕರುಣಾಮೂರ್ತಿ ನನ್ನ ಸ್ಥಿತಿಯನ್ನು ತಿಳಿದುಕೊಂಡಾನು ಎಂಬ ಒಂದು ನಿರೀಕ್ಷೆ ನನ್ನಲ್ಲಿತ್ತು. ಅವನನ್ನು ಕಂಡು ಎರಡು ಮಾತುಗಳನ್ನು ಆಡುವ ಅವಕಾಶಕ್ಕಾಗಿ ಕಾದಿದ್ದೆ. ಆದರೇನು? ನಾನು ಕಾದದ್ದೇ ಬಂತು. ತಾರೆಯಾದರೂ ಶ್ರೀರಾಮನ ಅನುಗ್ರಹಕ್ಕೆ, ಅನುಕಂಪಕ್ಕೆ ಪಾತ್ರಳಾದಳು. ವಾಲಿ ರಾಮಬಾಣದಿಂದ ಘಾಸಿಗೊಂಡು ಬಿದ್ದಲ್ಲಿಗೆ ಹೋಗಿ ಕಣ್ಣೀರಿಳಿಸಿದಳಂತೆ. ಎಲ್ಲರೂ ಅವಳಿಗಾಗಿ ಮರುಗಿದರು. ಆದರೆ ಕಲ್ಲಾಗಿ ಬಿದ್ದಿದ್ದ ಅಹಲ್ಯೆಯನ್ನು ಉದ್ಧರಿಸಿದ ರಾಮನ ಕಣ್ಣಿಗೆ ಇನ್ನೊಂದು ಕಲ್ಲಿನಂತೆ ಜೀವಚ್ಛವವಾಗಿದ್ದ ನಾನು ಕಾಣಲೇ ಇಲ್ಲ. ರುಮೆಯ ಬಗೆಗೆ ಹೇಳಬೇಕೆಂದು ಉಳಿದವರಿಗೆ ತೋರಲೂ ಇಲ್ಲ. ಯಾಕಾದರೂ ತೋರೀತು? ದುಷ್ಟನಾಗಿದ್ದ ವಾಲಿಯ ಸಂಹಾರವಾಯಿತು; ಸುಗ್ರೀವನಿಗೆ ಕಿಷ್ಕಿಂಧೆ ಸಿಕ್ಕಿತು. ಇನ್ನು ಬೇರೇನಾಗಬೇಕು? ಈ ರುಮೆಯ ಅಳಲು ಯಾರಿಗೆ ಬೇಕು? ಜೀವನದಲ್ಲಿ ನನಗಿದ್ದ ಕೊನೆಯ ಆಸೆಯೂ ಕಮರಿಹೋಯಿತು.ಸುಗ್ರೀವನೂ ಈಗ ಮೊದಲಿಗಿಂತ ಪ್ರಬಲನಾಗಿದ್ದ. ಮೇಲಾಗಿ ಕಳೆದುಹೋದ ಸೀತಾಮಾತೆಯನ್ನು ಹುಡುಕಿತರುವಲ್ಲಿ ರಾಮನಿಗೆ ಸಹಾಯದ ಭರವಸೆ ನೀಡಿದ್ದ. ಕಿಷ್ಕಿಂಧೆಯ ಅಧಿಕಾರ, ಶ್ರೀರಾಮ ಸಖ್ಯ ಎರಡೂ ಸೇರಿ ಅವನ ಮಹತ್ತ್ವ ಹೆಚ್ಚಿತ್ತು. ಹೀಗಾಗಿ ನಾನೇನಾದರೂ ಹಠಹಿಡಿದು ರಾಮನನ್ನು ಸಂಧಿಸಿದರೂ ಅವನು ನನ್ನ ಮಾತನ್ನು ಕೇಳಿಯಾನೆಂದು ಹೇಗೆ ನಂಬಲಿ? ಸುಗ್ರೀವನಿಗಿರುವ ಮಹತ್ತ್ವ, ಅವನ ಮಾತಿಗಿರುವ ಬೆಲೆ? ರಾಮಸನ್ನಿಧಿಯಲ್ಲಾದರೂ – ರುಮೆಗೆ ದಕ್ಕೀತೆ? ನಾನು ಮೂಕಳಾಗಿ ಉಳಿದೆ.ನನ್ನ ಬದುಕಿನಲ್ಲಿ ವಾಲಿ ಖಳನಾಯಕನಾದ ನಿಜ. ಸುಗ್ರೀವನ ಮೇಲೆ ಪ್ರತೀಕಾರದ ರೊಚ್ಚಿಗೆ ವಾಲಿಗೆ ಬಲಿಪಶುವಾದುದು ನಾನು. ಸುಗ್ರೀವನಿಗೆ ನೋವು ಕೊಡುವುದಕ್ಕಾಗಿಯೇ ಅವನು ನನ್ನನ್ನು ಪೀಡಿಸಿದ. ಅವನ ಮಂಚಕ್ಕೂ ಎಳೆದ. ನನ್ನ ಪ್ರತಿಭಟನೆಗೆ ಯಾವ ಬೆಲೆ? ನಾನು ವಾಲಿಯಿಂದಾಗಿ ನೊಂದೆನೆ ಎಂದರೆ ಹೌದು. ಆದರೆ…. ನಾನು ಹೆಣ್ಣಾಗಿ ಹೀಗೆ ಹೇಳುತ್ತಿರುವುದು ನಿಮಗೆ ಮುಜುಗರ ಉಂಟುಮಾಡೀತು. ಹಾಗೆಂದು ಸತ್ಯ ಮುಚ್ಚಿಡಲಾರೆ. ನಿಜಕ್ಕಾದರೆ ವಾಲಿಯಿಂದ ಅಷ್ಟಾಗಿ ನೋಯಲಿಲ್ಲ ನಾನು. ಅವನಿಗೆ ರುಮೆಯ ದೇಹ ಬೇಕಾಗಿದ್ದದ್ದು ಸುಗ್ರೀವನ ಮೇಲಿನ ಕ್ರೋಧವನ್ನು ತೀರಿಸಿಕೊಳ್ಳುವುದಕ್ಕಾಗಿ ಮಾತ್ರ. ಅವನಿಗೆ ನನ್ನ ದೇಹದ ಲಾಲಸೆ ಇತ್ತೆಂದು ನನಗನಿಸಲಿಲ್ಲ. ನಾನೊಂದು ಮಾಧ್ಯಮವಾಗಿದ್ದೆ, ಅಷ್ಟೆ. ಮಾಯಾವಿ ಪ್ರಕರಣಕ್ಕೆ ಮೊದಲೇನಾದರೂ ವಾಲಿ ಹೀಗೆ ಮಾಡುತ್ತಿದ್ದರೆ ಬಹುಶಃ ನಾನು ಬದುಕಿ ಉಳಿಯುತ್ತಿರಲಿಲ್ಲ. ಅಂದರೆ ಆಗ ನಾನು ಸುಗ್ರೀವನನ್ನು ಅಷ್ಟು ಪ್ರೀತಿಸುತ್ತಿದ್ದೆ. ವಾಲಿಯ ಮಂಚವನ್ನೇರಬೇಕಾಗಿ ಬಂದುದು ಸಹಿಲಸಾಧ್ಯವಾದ ಅಪರಾಧಿಭಾವವನ್ನು ನನ್ನಲ್ಲಿ ಮೂಡಿಸುತ್ತಿತ್ತು. ಈಗ ಅದೆಲ್ಲ ಕಳೆದುಹೋದ ಕಥೆ. ಯಾವಾಗ ಸುಗ್ರೀವನಿಗೆ ತಾರೆಯ ಬಗೆಗೆ ಆಸಕ್ತಿಯುಂಟೆಂದು ತಿಳಿಯಿತೋ, ವಾಲಿ ಸತ್ತನೆಂದು ತಿಳಿದೊಡನೆ ಅವರಿಬ್ಬರೂ ನನ್ನ ಅಸ್ತಿತ್ವವನ್ನೇ ಮರೆತು ಪ್ರಣಯದಲ್ಲಿ ಮುಳುಗಿದರೋ ಆ ಕ್ಷಣದಿಂದ ನಾನು ಬದಲಾಗತೊಡಗಿದ್ದೆ. ಸುಗ್ರೀವ ಕೊಟ್ಟ ಈ ನೋವಿಗಿಂತ ಹೆಚ್ಚಿನ ನೋವನ್ನೇನು ವಾಲಿ ಕೊಡಲಿಲ್ಲ.
ಆದರೂ ಸುಗ್ರೀವನ ಕೈಹಿಡಿದ ಹೆಂಡತಿಯಾಗಿ ಅವನಿಗಾಗಿ ನನ್ನ ಹೃದಯದಲ್ಲಿ ಒಂದು ಮಾರ್ದವ ಭಾವ ಇದ್ದೇ ಇತ್ತು. ವಾಲಿ ಅವನನ್ನು ಹೊರಗಟ್ಟಿದಾಗ ನಾನು ಮರುಗಿದ್ದೆ. ರುಮೆಗಾಗಿ ಸುಗ್ರೀವ ಕಾತರಿಸುತ್ತಿದ್ದಾನೆ ಎಂದು ವಾನರ ಹೆಣ್ಣುಗಳು ಸುದ್ದಿ ತಂದಾಗ ವಾಲಿಯಿಂದ ಶಿಕ್ಷೆಯಾದ ಮೇಲೆ ಸುಗ್ರೀವ ಬದಲಾಗಿರಬಹುದೆಂದು ತಿಳಿದೆ. ಹೀಗಾಗಿ ನಿತ್ಯ ಅವನ ಅಭ್ಯುದಯಕ್ಕಾಗಿ ದೇವರನ್ನು ಬೇಡುತ್ತಿದ್ದೆ. ಅವನು ವಾಲಿಯೊಂದಿಗೆ ಯುದ್ಧಕ್ಕೆ ಬಂದ ಪ್ರತಿ ಸಲವೂ ಅದು ನನಗಾಗಿ ಎಂದು ಅಭಿಮಾನ ಪಟ್ಟೆ. ಎಷ್ಟೋ ಕಾಲದ ಮೇಲೆ ರಾಮನ ರೂಪದಲ್ಲಿ ದೈವ ಸಹಾಯಕ್ಕೆ ಒದಗಿತೆಂದು ತಿಳಿದೆ. ಆದರೆ?……
******
ವಾಲಿಯ ವಧೆ ಕಳೆದು ಸಂಸ್ಕಾರಗಳೆಲ್ಲ ಮುಗಿದ ಮೇಲೆ ಮತ್ತೊಮ್ಮೆ ಹಳೆಯ ಸುಗ್ರೀವನ ನಿರೀಕ್ಷೆಯಲ್ಲಿ ನಾನಿದ್ದೆ. ಸುಗ್ರೀವ ಬಂದ; ನನ್ನಲ್ಲಿಗಲ್ಲ. ತಾರೆಯ ಶಯ್ಯೆಗೆ. ಅರಸನಾಗಿ ರಾಮನೇ ನಿಯೋಜಿಸಿದ ಮೇಲೆ ಅವನನ್ನು ಕೇಳುವವರು ಯಾರು? ಆಡಿದ್ದೇ ಆಟ. ನನ್ನನ್ನು ತೀರಾ ಮರೆತು ಬಿಡಲಿಲ್ಲ. ತಿಂಗಳಿಗೊಮ್ಮೆಯಾದರೂ ಬರುತ್ತಿದ್ದ. ತನ್ನ ಅಪೇಕ್ಷೆಯನ್ನು ಈಡೇರಿಸಿಕೊಳ್ಳುತ್ತಿದ್ದ, ಹೋಗುತ್ತಿದ್ದ. ಒಂದು ನಗು; ಒಂದು ಮಾತು; ಆತ್ಮೀಯತೆಯ ಒಂದು ಅಪ್ಪುಗೆ? ಉಹೂಂ….. ಏನೂ ಇಲ್ಲದ ಕೇವಲ ದೇಹವೆರಡರ ಬೆಸುಗೆ ಮಾತ್ರ. ಹಿಂದಿನ ಸವಿದಿನಗಳ ನೆನಪಿನಲ್ಲಿ ನಾನೇ ಸಲುಗೆ ತೋರಿದರೂ ಅವನಲ್ಲಿ ಯಾವ ಸ್ಪಂದನವೂ ಇಲ್ಲ. ಅಯ್ಯೋ, ಇದೇನಾಗಿಹೋಯಿತು ದೇವರೇ!
ನನ್ನಲ್ಲಿ ಹೀಗೆ ನಡೆದುಕೊಳ್ಳುವ ಸುಗ್ರೀವ ತಾರೆಯ ಅಂತಃಪುರದಲ್ಲಿ ಹೀಗೇ ಇದ್ದಿದ್ದರೆ ಅಷ್ಟು ನೋಯುತ್ತಿರಲಿಲ್ಲ ನಾನು. ಆದರೆ ತಾರೆಯೊಂದಿಗೆ ಬಹಳ ಆಪ್ತವಾಗಿ, ಸ್ನೇಹಪೂರ್ವಕ ವರ್ತಿಸುವ ಸುಗ್ರೀವ ತನಗೆ ರುಮೆ ಬೇಕಾಗಿಲ್ಲ ಅನ್ನುವುದನ್ನು ತೋರಿಕೊಟ್ಟ ಬಗೆಯಿದು. ಅಷ್ಟೇನೂ ಬುದ್ಧಿವಂತಳಲ್ಲದ ನನಗೆ ಇದು ಅರ್ಥವಾಗುವುದಕ್ಕೆ ದೀರ್ಘಕಾಲವೇ ಬೇಕಾಯಿತು. ಕೊನೆಗೂ ಅರ್ಥವಾಯಿತು. ಸುಗ್ರೀವನಿಗೆ ರುಮೆ ಒಂದು ಕಸ. ಬದುಕು ಪಾಠ ಕಲಿಸುತ್ತದೆ; ನಿಜ. ಈ ಪಾಠವನ್ನು ಮಾತ್ರ ಎಷ್ಟು ಕ್ರೂರವಾಗಿ ಕಲಿಸಿತು ನನಗೆ! ಮಾಯಾವಿ ಪ್ರಕರಣದ ಬಳಿಕ ಮಾಯಾವಿ ವಾಲಿಯಲ್ಲಿ ಆವೇಶಗೊಂಡನೆಂದು ಭಾವಿಸಿದ್ದೆ. ಇಷ್ಟೆಲ್ಲ ನಡೆದುಹೋದಮೇಲೆ ಅನಿಸುತ್ತಿದೆ ಮಾಯಾವಿ ಹಾಗೂ ವಾಲಿ ಇಬ್ಬರೂ ಸುಗ್ರೀವನಲ್ಲಿ ಆವೇಶಗೊಂಡಿರಬೇಕು. ಇನ್ನು ಏನು ಮಾಡಬೇಕು ನಾನು? ಒಂದೋ ಪಾಲಿಗೆ ಬಂದುದನ್ನೇ ಪಂಚಾಮೃತವೆಂದು ಸ್ವೀಕರಿಸಿ ಮೌನವಾಗುಳಿಯುವುದು. ಅಥವಾ ಪ್ರತಿಭಟಿಸಿ ಇದ್ದುದನ್ನು ಕಳೆದುಕೊಳ್ಳುವುದು. ಪ್ರತಿಭಟಿಸುವ ಧೈರ್ಯವಿಲ್ಲದ ನಾನು ಮೌನವನ್ನೇ ಆಶ್ರಯಿಸಿದೆ.
ರಾಮಾಯಣದ ಕಥೆ ಕೇಳಿದವರಿಗೆ ನನ್ನ ಮೌನ ಅರ್ಥವಾಗಲಾರದು. ಯಾಕೆಂದರೆ ಕಥೆಯೇ ನನ್ನ ಕುರಿತು ಮೌನ ತಳೆದಿದೆ. ಅದೂ ಸರಿಯೇ. ರಾಮಾಯಣ ನನ್ನ ಕಥೆಯಲ್ಲ; ರಾಮನ ಕಥೆ; ಸೀತೆಯ ಕಥೆ. ನನ್ನಂಥವಳು ಆ ಕಥಾಸಾಗರದ ಪುಟ್ಟ ಬಿಂದು ಮಾತ್ರ. ಕಥೆ ಹೇಗಿದ್ದರೂ ನನ್ನ ಬದುಕನ್ನು ನಾನು ತಾನೇ ಬಾಳಬೇಕು? ಅದಕ್ಕಾಗಿ ಕಥೆಯ ಗರ್ಭದ ಮೌನದೊಳಗೆ ಅರ್ಥ ಹುಡುಕುವ ಯತ್ನಕ್ಕೆ ತೊಡಗಿದೆ. ಸುಗ್ರೀವ ಕೈಬಿಟ್ಟ. ತಾರೆ ಮೊದಲಿಂದಲೂ ನನಗೆ ಆಪ್ತಳಲ್ಲ. ಅದಕ್ಕಾಗಿ ಬೇರೆಯವರಲ್ಲಿ ಆತ್ಮೀಯತೆಯ ಎಳೆಯನ್ನು ಹುಡುಕತೊಡಗಿದೆ. ಯಾರಿದ್ದರು ನನಗೆ ಕಿಷ್ಕಿಂಧೆಯಲ್ಲಿ? ವಾನರ ಪ್ರಮುಖರೆಲ್ಲ ಸುಗ್ರೀವನನ್ನು ಓಲೈಸುವವರು. ವಾನರ ಸ್ತ್ರೀಯರು ನನ್ನ ಸ್ಥಿತಿಗೆ ಕನಿಕರಿಸುವುದು ಬಿಟ್ಟು ಬೇರೇನೂ ಮಾಡಲಾಗದ ಅಸಹಾಯಕರು. ಇನ್ನು ಯಾರಲ್ಲಿ ನನ್ನ ಅಂತರಂಗದ ಅಳಲನ್ನು ಹಂಚಿಕೊಳ್ಳಲಿ? ಒಬ್ಬನಿದ್ದ. ನನ್ನಂತೆ ನೊಂದವ; ತಾಯಿಯಿದ್ದೂ ತಬ್ಬಲಿಯಾದವ; ಅಂಗದ. ವಾಲಿ ತಾರೆಯರ ಮಗ. ಚಿಕ್ಕಮ್ಮನ ಬಗೆಗೆ ಕನಿಕರದ ದೃಷ್ಟಿ ಬೀರಬಲ್ಲವ. ಆದರೆ ನನ್ನ ಪಾಲಿಗೆ ಅವನೂ ಇಲ್ಲ. ಕಿಷ್ಕಿಂಧೆಗೆ ಅವನನ್ನು ಯುವರಾಜನೆಂದು ಘೋಷಣೆ ಮಾಡಿದ ಬಳಿಕ ಅವನೂ ದೂರವಾದ.
ಒಮ್ಮೊಮ್ಮೆ ನೀರವ ಏಕಾಂತದಲ್ಲಿ ಯೋಚಿಸುವುದುಂಟು ನಾನು. ಹೆಣ್ಣಿಗೆ ಯಾರು ಆತ್ಮೀಯರು? ತಂದೆ-ತಾಯಿಯೆ, ಸೋದರ ಸೋದರಿಯರೆ, ಗಂಡನೆ? ಎಲ್ಲ ಅವರವರ ಜೀವನದಲ್ಲಿ ವ್ಯಸ್ತರು. ಉಳಿದ ಹೆಂಗಸರಿಗೆ ಅವರ ಮಕ್ಕಳಾದರೂ ಹತ್ತಿರವಿದ್ದಾರು. ತಾಯಿಯ ಬದುಕಿಗೆ ಒಂದಿಷ್ಟು ಸಂತಸ ತುಂಬಿಯಾರು. ನನ್ನ ಪಾಲಿಗೆ ಅದೂ ಇಲ್ಲ. ಬಂಜೆಯಾಗಿಯೇ ಉಳಿದವಳು ನಾನು. ನನ್ನ ಕರುಳ ಕುಡಿಯೊಂದಿರುತ್ತಿದ್ದರೆ….?
ಹೀಗೆ ನನ್ನ ಕಥೆ. ಮುಗಿಯದ ಕಥೆ. ನನ್ನೊಂದಿಗೆ ಮುಗಿಯುವ ಕಥೆ.?