ಸೇವೆಯ ಮಾರ್ಗ
ಗಾಂಧಿಯವರು ತಮ್ಮ ರಾಜಕೀಯ ಜೀವನದ ಪ್ರಭಾವೀ ಸುಳಿಯಲ್ಲಿ ಸಿಲುಕಿದ ಸಂದರ್ಭದಲ್ಲಿ ಹೇಳುವ ಅನುಭವದ ಮಾತುಗಳು – ‘ರಾಜಕೀಯ ಲಾಭ, ಅನೈತಿಕತೆ ಮತ್ತು ಅಸತ್ಯದ ಹಿಡಿತದಿಂದ ಸಂಪೂರ್ಣವಾಗಿ ದೂರವಿರಬೇಕಾದರೆ ಅದು ಒಂದು ಕಷ್ಟಕರವಾದ ಹೋರಾಟವಾಗಿತ್ತು. ಅನಂತರದ ದಿನಗಳಲ್ಲಿ ನನ್ನ ಹೆಂಡತಿ-ಮಕ್ಕಳ ಜೊತೆ ಕುಸ್ತಿ ಮಾಡಿದ ಅನುಭವವಾಗಿತ್ತು. ಯಾರ ಜೊತೆ ನನ್ನ ಜೀವನ ಬೆಸೆದಿದೆಯೋ, ಯಾರ ನಡುವೆ ನಾನು ಬದುಕುತ್ತಿದ್ದೇನೋ, ಯಾರ ಕಷ್ಟಸುಖಗಳನ್ನು ಸ್ವತಃ ದಿನನಿತ್ಯ ನೋಡುತ್ತಿದ್ದೇನೋ ಅಂತಹವರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಬೇಕಾದರೆ ನಾನು ನನ್ನ ಎಲ್ಲ ಸಂಪತ್ತನ್ನು ತ್ಯಜಿಸಬೇಕಾಗುತ್ತದೆ ಎಂಬ ನಿಶ್ಚಿತ ತೀರ್ಮಾನಕ್ಕೆ ಬಂದೆ. ನನ್ನ ಮನದಲ್ಲಿ ಈ ವಿಚಾರ ಬಂದ ತಕ್ಷಣ ನನ್ನ ಸಂಪತ್ತನ್ನು ತ್ಯಜಿಸಿದೆ ಎಂದು ಖಡಾಖಡಿ ಹೇಳಲಾರೆ. ಪ್ರಾರಂಭದ ದಿನಗಳಲ್ಲಿ ಈ ನಿರ್ಧಾರ ಅತ್ಯಂತ ಯಾತನಾ ಪೂರ್ಣವಾಗಿತ್ತು ಮತ್ತು ಅದರ ಪ್ರಗತಿ ಮಂದಗತಿಯಲ್ಲಿತ್ತು ಎಂದು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ದಿನಗಳೆದಂತೆ ಒಂದೊಂದಾಗಿ ನನ್ನದಾಗಿದ್ದ ಅನೇಕ ವಸ್ತುಗಳನ್ನು ಹೊರಗೆಸೆಯುವ ಕಾರ್ಯ ಮಾಡಿದೆ. ಅನಂತರದ ದಿನಗಳಲ್ಲಿ ಅವುಗಳು ಗುಣೋತ್ತರ ವೇಗದಲ್ಲಿ ನನ್ನಿಂದ ದೂರವಾಗತೊಡಗಿದವು. ನನ್ನದೆಲ್ಲವನ್ನೂ ನಿಶ್ಚಯಾತ್ಮಕ ರೀತಿಯಲ್ಲಿ ತ್ಯಜಿಸುವ ಕಾರ್ಯದಲ್ಲಿ ಸಂತೋಷವನ್ನು ಕಂಡೆ. ನನ್ನ ಈ ಅನುಭವಗಳನ್ನು ತಿಳಿಸುವಾಗ ನನ್ನ ಮೇಲೆ ಒಂದು ಬಹುದೊಡ್ಡ ಜವಾಬ್ದಾರಿಯಿದೆ ಎಂಬುದರ ಅರಿವು ನನಗಿದೆ. ಈ ಬಿಡುಗಡೆಯ ಮುಕ್ತಭಾವದಿಂದ ಈಗ ನಾನು ನನ್ನ ಕೆಲಸವನ್ನು ಯಾವ ನಿರ್ಬಂಧವೂ ಇಲ್ಲದೆ ಅತ್ಯಂತ ನೆಮ್ಮದಿ ಹಾಗೂ ಆನಂದದಿಂದ ಮಾಡಲು ಸಾಧ್ಯವಾಗಿದೆ. ಆದ ಕಾರಣ ಯಾವುದೇ ವಸ್ತುಗಳ ಒಡೆತನ ಮುಂದೆ ನನಗೆ ಕಷ್ಟದಾಯಕ ಹಾಗೂ ಭಾರವಾಗಿ ಕಾಣತೊಡಗಿತು.
‘ಈ ಸಂಗತಿಯ ಸಂತೋಷದ ಕಾರಣವನ್ನು ಹುಡುಕುತ್ತಾ ಹೋದಾಗ ನನಗೆ ಅನ್ನಿಸಿದ ಭಾವನೆಗಳೆಂದರೆ ನನ್ನದು ಎಂದು ಯಾವುದನ್ನಾದರೂ ನನ್ನ ಬಳಿ ಇಟ್ಟುಕೊಂಡಿದ್ದರೆ ಅದನ್ನು ಜನರ ಎದುರು ಸಮರ್ಥನೆ ಮಾಡಿಕೊಳ್ಳಬೇಕಾಗಿತ್ತು. ಆದರೆ ಈಗ ಅದರ ಅಗತ್ಯವಿಲ್ಲ. ಇದರ ಜೊತೆಗೆ ಇನ್ನೊಂದು ಮಹತ್ತ್ವಪೂರ್ಣ ಸಂಗತಿಯ ಅರಿವಾಯಿತು. ಅಕಸ್ಮಾತ್ ನನ್ನ ಬಳಿ ಸಂಪತ್ತು ಇದ್ದಿದ್ದರೆ ಹಸಿದ ಕ್ಷಾಮಪೀಡಿತ ಜನರು ನನ್ನಿಂದ ಅದನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ನಾನು ಪೊಲೀಸರ ನೆರವನ್ನು ಪಡೆಯಬೇಕಾಗುತ್ತಿತ್ತು. ನನಗಿಂತ ಅವರಿಗೇ ಸಂಪತ್ತಿನ ಆವಶ್ಯಕತೆ ಹೆಚ್ಚಾಗಿದ್ದುದರ ಕಾರಣ ಅವರು ಬೇರೆ ಇನ್ನಾವುದೇ ದುರುದ್ದೇಶ ಇಲ್ಲದೆ ಈ ಪ್ರಯತ್ನ ಮಾಡುತ್ತಿದ್ದರು ಎಂದು ನನಗೆ ನಾನೇ ಹೇಳಿಕೊಂಡೆ’ (Speeches and Writings of Mahatma Gandhi, 1933)
’ನಾನು ನನ್ನ ಎಲ್ಲ ಸಂಪತ್ತನ್ನು ತ್ಯಜಿಸುತ್ತಿದ್ದೇನೆ ಎಂದು ಎಲ್ಲರಿಗೂ ಗೊತ್ತಾಗುವ ಹಾಗೇ ಹೇಳಿಕೊಂಡಿದ್ದರೆ ಇಡೀ ಪ್ರಪಂಚ ನನ್ನನ್ನು ನೋಡಿ ನಗುತ್ತಿತ್ತು. ಆದರೆ ನಿಜವಾಗಿಯೂ ಈ ತ್ಯಜಿಸುವಿಕೆ ನನಗೆ ಸಂತೃಪ್ತಿಯ ಲಾಭವನ್ನು ತಂದಿದೆ. ನನ್ನ ಜೊತೆಗೆ ಬೇರೆಯವರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂಬುದು ನನ್ನ ಆಶಯ. ತ್ಯಜಿಸುವಿಕೆ ನಿಜವಾಗಿಯೂ ನಾನು ಗಳಿಸಿದ ಅತ್ಯಂತ ಶ್ರೀಮಂತ ನಿಧಿ. ನಾನು ಬಡತನವನ್ನು ಬೋಧಿಸಿದರೂ ಸಹ ನಿಜವಾಗಿ ನಾನು ಒಬ್ಬ ಶ್ರೀಮಂತ ಮನುಷ್ಯ (Young India, 30-4-1925, p. 149).
ಇಚ್ಛಾಪೂರ್ವಕ ಸ್ವಾರ್ಥತ್ಯಾಗ
ನಮ್ಮ ನಾಗರಿಕತೆ, ಸಂಸ್ಕೃತಿ ಮತ್ತು ಸ್ವರಾಜ್ಯ ನಿಂತಿರುವುದು ನಿಜವಾಗಿ ಆವರ್ಧಕ ಆಸೆಗಳ ಮೇಲಲ್ಲ ಮತ್ತು ತೃಪ್ತಿ ಗಳಿಸುವಿಕೆಯಲ್ಲಿ ಅಲ್ಲ. ಬದಲಾಗಿ ಸ್ವಯಂ ನಿರಾಕರಣೆಯಿಂದ ನಮ್ಮ ಆಸೆಗಳನ್ನು ಕಡಮೆ ಮಾಡಿಕೊಳ್ಳುವುದರ ಮೇಲೆ (Y.I., 23-2-1921, p. 59)
ಅಪರಿಗ್ರಹ ಮತ್ತು ಅಸ್ತೇಯ ಪರಸ್ಪರ ಸಂಬಂಧ ಹೊಂದಿವೆ. ಯಾವುದೇ ಒಂದು ವಸ್ತು ಮೂಲದಲ್ಲಿ ಕಳ್ಳತನವಾಗದಿದ್ದರೂ ಅಂತಹದನ್ನು ನಮಗೆ ಅಗತ್ಯವಿಲ್ಲದಿದ್ದರೂ ನಮ್ಮ ಬಳಿ ಶೇಖರಿಸಿ ಇಟ್ಟುಕೊಂಡಾಗ ಅದನ್ನು ಕಳ್ಳತನ ಮಾಡಿದ ವಸ್ತು ಎಂದು ವರ್ಗೀಕರಣ ಮಾಡಬೇಕಾಗುತ್ತದೆ. ಒಡೆತನ ಎಂದರೆ ಭವಿ?ಕ್ಕಾಗಿ ಮಾಡಿದ ವ್ಯವಸ್ಥೆ. ಒಬ್ಬ ಸತ್ಯಾನ್ವೇಷಕ ಮತ್ತು ಪ್ರೀತಿಯ ಆರಾಧಕ ಯಾವುದನ್ನೂ ಭವಿಷ್ಯಕ್ಕಾಗಿ ಕೂಡಿಡುವುದಿಲ್ಲ. ದೇವರು ನಾಳೆಗಾಗಿ ಏನನ್ನೂ ಕೂಡಿಡುವುದಿಲ್ಲ. ಅವನು ನಿಜವಾಗಿಯೂ ಇಂದಿನ ಆವಶ್ಯಕತೆಗಿಂತ ಹೆಚ್ಚಿನದನ್ನು ಉತ್ಪಾದನೆ ಮಾಡುವುದಿಲ್ಲ. ನಾವು ದೇವರ ಈ ಮುನ್ನೆಚ್ಚರಿಕೆಯ ಕಾರ್ಯದಲ್ಲಿ ನಂಬಿಕೆ ಇಟ್ಟರೆ ನಿಜವಾಗಿಯೂ ನಮಗೆ ಬದುಕಲು ಅಗತ್ಯವಾದ ದಿನನಿತ್ಯದ ಅನ್ನವನ್ನು ಅವನು ಕರುಣಿಸುತ್ತಾನೆ. ದೇವರು ಪ್ರತಿಯೊಬ್ಬರಿಗೂ ಅವನ ದೈನಂದಿನ ಅಗತ್ಯಗಳನ್ನು ಪೂರೈಸುತ್ತಾನೆ ಎನ್ನುವ ದೈವೀನಿಯಮದ ಅನಾದರಣೆ ಮತ್ತು ನಮ್ಮ ದಡ್ಡತನ ಆರ್ಥಿಕ ಅಸಮಾನತೆ ಮತ್ತು ಅದರ ಜೊತೆಗಿನ ಇನ್ನಿತರ ಸಂಕಷ್ಟಗಳ ಉದಯಕ್ಕೆ ಕಾರಣವಾಗಿದೆ. ಶ್ರೀಮಂತರು ಅನಾವಶ್ಯಕ ವಸ್ತುಗಳನ್ನು ತಮಗೆ ಅಗತ್ಯವಿಲ್ಲದಿದ್ದರೂ ಸಂಗ್ರಹಿಸಿಡುವುದರಿಂದ ಒಂದು ಕಡೆ ಅವು ನಿರರ್ಥಕ ಹಾಗೂ ವ್ಯರ್ಥವಾದರೆ ಮತ್ತೊಂದು ಕಡೆ ಲಕ್ಷಾಂತರ ಮಂದಿ ಬಡವರು ಅನ್ನವಿಲ್ಲದೆ ಹಸಿವಿನಿಂದ ಸಾಯುವಂತಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ತಮಗೆ ಅಗತ್ಯವಾದ?ನ್ನು ಮಾತ್ರ ಇಟ್ಟುಕೊಂಡರೆ ಆಗ ಯಾರೊಬ್ಬರೂ ಹಸಿವಿನಿಂದ ನರಳದೆ ಎಲ್ಲರೂ ಸಂತೃಪ್ತ ಜೀವನ ನಡೆಸಬಹುದು. ಈಗ ಬಡವರಂತೆ ಶ್ರೀಮಂತರೂ ಸಹ ಅಸಂತೃಪ್ತರಾಗಿದ್ದಾರೆ. ಈ ನಿಯಮವನ್ನು ಎಲ್ಲರೂ ಪಾಲಿಸಿದಾಗ ಬಡವನೂ ಲಕ್ಷಾಧಿಪತಿ, ಕೋಟ್ಯಧಿಪತಿಯಂತೆ ಸಂತುಷ್ಟನಾಗಿರಬಹುದು.
ಸಂತೃಪ್ತಿಯ ಭಾವವನ್ನು ಪ್ರಪಂಚದಾದ್ಯಂತ ವಿಸ್ತಾರವಾಗಿ ಪಸರಿಸುವಂತೆ ಮಾಡಲು ಶ್ರೀಮಂತರು ತಮ್ಮ ಒಡೆತನದ ತ್ಯಾಗಕ್ಕಾಗಿ ಮೊದಲ ಹೆಜ್ಜೆಯನ್ನು ಇಡಬೇಕು. ಶ್ರೀಮಂತರು ತಮ್ಮ ಸಂಪತ್ತನ್ನು ಇತಿ-ಮಿತಿಯಲ್ಲಿ ಇಟ್ಟುಕೊಂಡಾಗ ಹಸಿದವರಿಗೆ ಅನ್ನ ಕೊಡಲು ಸಾಧ್ಯವಾಗುತ್ತದೆ. ಆಗ ಬಡವರೂ ಸಹ ಶ್ರೀಮಂತರ ಜೊತೆಗೆ ಸಂತೃಪ್ತಿಯ ಭಾವನೆಯನ್ನು ಪಡೆಯಲು ಸಾಧ್ಯವಾಗುವುದು.
ನೈಜ ನಾಗರಿಕತೆ
ಮನುಷ್ಯನು ಪಕ್ಷಿಗಳ ಹಾಗೆ ತನ್ನ ತಲೆಯ ಮೇಲೆ ಸೂರಿಲ್ಲದೆ, ಬಟ್ಟೆಯಿಲ್ಲದೆ, ನಾಳೆಗಾಗಿ ಆಹಾರ ಸಂಗ್ರಹಣೆ ಮಾಡದಿದ್ದಾಗ ಅಪರಿಗ್ರಹದ ಸಂಪೂರ್ಣ ಆದರ್ಶ ಸಾಧ್ಯ. ಪ್ರತಿಯೊಬ್ಬರಿಗೂ ನಿಶ್ಚಿತವಾಗಿ ಅವರ ದೈನಂದಿನ ಆವಶ್ಯಕತೆಗಳನ್ನು ಪೂರೈಸಲು ಅಗತ್ಯ ಪ್ರಮಾಣದ ಆಹಾರ ಬೇಕು. ಅದನ್ನು ನೀಡುವುದು ದೇವರ ಕೆಲಸ. ಮಾನವನದಲ್ಲ. ಕೇವಲ ಕೆಲವರು ಮಾತ್ರ ಈ ಆದರ್ಶ ಸ್ಥಿತಿಯನ್ನು ತಲಪಲು ಸಾಧ್ಯ. ಸಾಮಾನ್ಯಜನ ಈ ಅಸಾಧ್ಯ ಸ್ಥಿತಿಯನ್ನು ತಲಪಲು ನಮ್ಮಿಂದ ಸಾಧ್ಯವಿಲ್ಲ ಎನ್ನುವ ಭಾವನೆಯಿಂದ ತಮ್ಮ ಪ್ರಯತ್ನ ಬಿಡಬಾರದು. ಈ ಆದರ್ಶವನ್ನು ನಿರಂತರವಾಗಿ ನಮ್ಮ ಕಣ್ಣ ಮುಂದೆ ಇಟ್ಟುಕೊಂಡು ವಿಮರ್ಶಾತ್ಮಕವಾಗಿ ನಾವು ಎಷ್ಟ ಸಂಪತ್ತನ್ನು ಇಟ್ಟುಕೊಳ್ಳಬೇಕು ಮತ್ತು ಕ್ರಮೇಣ ಅದರ ಪ್ರಮಾಣವನ್ನು ಕಡಿತ ಮಾಡಿಕೊಳ್ಳಬೇಕು ಎಂದು ತೀರ್ಮಾನ ಮಾಡಬೇಕು – ಎಂದು ಗಾಂಧಿಯವರು ಹೇಳಿದರು.
ನಾಗರಿಕತೆ ಎಂಬ ಪದದ ನಿಜವಾದ ಅರ್ಥವೇನೆಂದರೆ ಮನುಷ್ಯ ತನ್ನ ಆಸೆಗಳನ್ನು ಹೆಚ್ಚು ಮಾಡಿಕೊಳ್ಳುವ ಬದಲು ಇಚ್ಛಾಪೂರ್ವಕವಾಗಿ ಕಡಮೆಮಾಡಿಕೊಳ್ಳುವುದು. ಆಗ ಮಾತ್ರ ಆತನಿಗೆ ನಿಜವಾದ ಸಂತೋಷ ಮತ್ತು ಸಂತೃಪ್ತಿ ಸಿಗುತ್ತದೆ. ತನ್ಮೂಲಕ ಆತನಲ್ಲಿ ಸೇವೆ ಮಾಡುವ ಶಕ್ತಿ ಹೆಚ್ಚುತ್ತದೆ.
ಸತ್ಯದ ನಿಜ ಅರ್ಥದಲ್ಲಿ ನಮ್ಮ ಶರೀರವೂ ಸಹ ಒಂದು ರೀತಿಯಲ್ಲಿ ಒಡೆತನದ್ದಾಗಿದೆ. ಸುಖೋಪಭೋಗಗಳ ಆನಂದ ಪಡೆಯಲು ಆಸೆಗಳು ಆತ್ಮನಿಗೋಸ್ಕರ ಶರೀರವನ್ನು ಸೃಷ್ಟಿಮಾಡುತ್ತದೆ ಎನ್ನುವ ಮಾತಿದೆ. ಈ ಆಸೆಗಳು ಹೊರಟುಹೋದಾಗ ಶರೀರದ ಅಗತ್ಯ ಬೀಳುವುದಿಲ್ಲ ಮತ್ತು ಮನು? ಹುಟ್ಟು-ಸಾವಿನ ವಿ?ವರ್ತುಲದಿಂದ ಮುಕ್ತಿ ಪಡೆಯುತ್ತಾನೆ. ಆತ್ಮ ಸರ್ವವ್ಯಾಪಿ. ಅದಕ್ಕೆ ಮನು?ನ ದೇಹವೆಂಬ ಸೆರೆಮನೆಯ ಅಗತ್ಯವಿಲ್ಲ. ತಪ್ಪುಗಳನ್ನು ಮಾಡುವ ಮತ್ತು ಇತರರನ್ನು ಕೊಲ್ಲುವ ಅಗತ್ಯವೂ ಇಲ್ಲ.
ಪರಿತ್ಯಜಿಸುವಿಕೆಯ ಆದರ್ಶ
ಈ ರೀತಿ ನಾವು ಸಂಪೂರ್ಣ ಪರಿತ್ಯಜಿಸುವಿಕೆಯ ಆದರ್ಶಸ್ಥಿತಿಯನ್ನು ತಲಪುತ್ತೇವೆ. ಬದುಕಿರುವವರೆಗೆ ಈ ಶರೀರ ಇರುವುದು ಸೇವೆ ಮಾಡಲು. ಸೇವೆ ಮುಖ್ಯವೇ ಹೊರತು ಅನ್ನಸಂಪಾದನೆಯಲ್ಲ. ಸೇವೆ ಮಾಡುವ ಸಲುವಾಗಿ ನಾವು ತಿನ್ನುತ್ತೇವೆ, ಕುಡಿಯುತ್ತೇವೆ, ಮಲಗುತ್ತೇವೆ ಮತ್ತು ನಡೆಯುತ್ತೇವೆ. ಈ ಮಾನಸಿಕ ಭಾವನೆ ನಮ್ಮ ಜೀವಿತ ಕಾಲದಲ್ಲಿ ಒಂದು ಸುಂದರ ಕಲ್ಪನೆಯನ್ನು ಮೂಡಿಸಿ ನಿಜವಾದ ಸಂತೋ?ವನ್ನು ಕೊಡುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮನ್ನು ನಾವು ವಿಶ್ಲೇಷಣೆ ಮಾಡಿಕೊಳ್ಳೋಣ.
ಅಪರಿಗ್ರಹ ಕಲ್ಪನೆ ಕೇವಲ ಸರಕುಸೇವೆಗಳಿಗೆ ಮಾತ್ರ ಸೀಮಿತವಾಗದೆ ನಮ್ಮ ಯೋಚನೆಗಳಿಗೂ ಅನ್ವಯಿಸಬೇಕು. ಯಾವ ಮನು? ಅನಗತ್ಯ ಜ್ಞಾನವನ್ನು ತನ್ನ ತಲೆಗೆ ತುಂಬುತ್ತಾನೋ ಅವನು ಈ ಅನಂತತತ್ತ್ವವನ್ನು ಉಲ್ಲಂಘನೆ ಮಾಡಿದಂತಾಗುತ್ತದೆ. ಯಾವ ವಿಚಾರಗಳು ದೇವರಿಂದ ನಮ್ಮನ್ನು ದೂರಮಾಡುತ್ತವೆಯೋ ಅಥವಾ ಅವನೆಡೆ ತಿರುಗುವಂತೆ ಮಾಡುವುದಿಲ್ಲವೋ ಅವು ನಮ್ಮ ದಾರಿಗೆ ಅಡ ಚಣೆಯನ್ನುಂಟುಮಾಡುತ್ತವೆ.
ಈ ಸಂದರ್ಭದಲ್ಲಿ ಭವಗದ್ಗೀತೆಯ ೧೩ನೇ ಅಧ್ಯಾಯದಲ್ಲಿ ಜ್ಞಾನದ ಬಗೆಗೆ ಕೊಟ್ಟಿರುವ ವ್ಯಾಖ್ಯೆಯನ್ನು ತಿಳಿಯುವ ಪ್ರಯತ್ನ ಮಾಡೋಣ. ಭಗವಂತ ಹೇಳಿದ ಹಾಗೆ ನಮ್ರತೆ ಹಾಗೂ ವಿನಯ ಜ್ಞಾನದ ಮುಖ್ಯಭಾಗ. ಉಳಿದದ್ದೆಲ್ಲವೂ ಸಹ ಅಜ್ಞಾನ. ನಾವು ಇಂದು ಅಜ್ಞಾನವನ್ನೇ ಸರಳ ಮತ್ತು ಶುದ್ಧಜ್ಞಾನವೆಂದು ಪರಿಗಣಿಸಿರುವುದರ ಕಾರಣ ಯಾವುದೇ ಲಾಭವಾಗದೆ ನಷ್ಟ ಮತ್ತು ತೊಂದರೆಯನ್ನು ಅನುಭವಿಸುತ್ತಿದ್ದೇವೆ. ಮನಸ್ಸನ್ನು ಅತ್ತಿತ್ತ ಹರಿದಾಡುವಂತೆ ಮಾಡಿ ನಮ್ಮನ್ನು ಶೂನ್ಯದತ್ತ ತಳ್ಳುತ್ತಿದೆ. ಆದಕಾರಣ ಅತೃಪ್ತಿ ತನ್ನೆಲ್ಲ ದುಷ್ಟಪರಿಣಾಮವನ್ನು ಎಲ್ಲೆಡೆ ಹರಡುತ್ತಿದೆ.
ಇದನ್ನು ಸೋಮಾರಿತನಕ್ಕೆ ದಾರಿ ಎಂದು ಹೇಳುವ ಆವಶ್ಯಕತೆ ಇಲ್ಲ. ನಮ್ಮ ಜೀವನದ ಪ್ರತಿಯೊಂದು ನಿಮಿಷವೂ ಶಾರೀರಿಕ ಅಥವಾ ಮಾನಸಿಕ ಚಟುವಟಿಕೆಯಲ್ಲಿ ತೊಡಗಿರುವ ಅಗತ್ಯವಿದೆ. ಆದರೆ ಅದು ಸತ್ಯದ ಮಾರ್ಗದಲ್ಲಿ ನಡೆಯುವ ಚಟುವಟಿಕೆ ಆಗಿರಬೇಕು. ಯಾರು ತಮ್ಮ ಜೀವನವನ್ನು ಸೇವೆಗಾಗಿ ಮುಡುಪಾಗಿಟ್ಟಿದ್ದಾರೆಯೋ ಅವರು ಒಂದು ನಿಮಿಷವೂ ಸೋಮಾರಿತನದಿಂದ ಇರಲು ಸಾಧ್ಯವಿಲ್ಲ. ಆದರೆ ನಾವು ಒಳ್ಳೆಯ ಮತ್ತು ಕೆಟ್ಟ ಚಟುವಟಿಕೆಗಳ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವ ಅಗತ್ಯವಿದೆ. ಈ ವಿವೇಚನೆ ಸಹಜವಾಗಿ ಏಕಭಾವ ಶ್ರದ್ಧೆಯಿಂದ ಮಾಡುವ ಸೇವೆಗಾಗಿ (From Yeravada Mandir, p. 23-26).
ನೈತಿಕ ಉದ್ದೇಶ
ನಾವೆಲ್ಲರೂ ಏಕೆ ಆಸ್ತಿಯನ್ನು ಹೊಂದಬೇಕು? ಸ್ವಲ್ಪ ಸಮಯದ ನಂತರ ನಾವು ನಮ್ಮ ಆಸ್ತಿಯನ್ನು ಏಕೆ ತೊರೆಯಬಾರದು? ಯಾವುದಕ್ಕೂ ಹೇಸದ ವ್ಯಾಪಾರಿಗಳು ಅಸತ್ಯದ ಉದ್ದೇಶಕ್ಕಾಗಿ ಈ ರೀತಿ ಮಾಡುತ್ತಾರೆ. ನಾವು ಏಕೆ ಒಂದು ನೈತಿಕ ಉದ್ದೇಶಕ್ಕಾಗಿ ಈ ಮಹತ್ಕಾರ್ಯ ಮಾಡಬಾರದು? ನಮ್ಮ ತತ್ತ್ವಜ್ಞಾನದ ಪ್ರಕಾರ ಪ್ರತಿಯೊಬ್ಬ ಒಳ್ಳೆಯ ಹಿಂದು ಸಾಂಸಾರಿಕ ಜೀವನ ನಡೆಸುವಂಥವನು ಜೀವನದ ಒಂದು ಹಂತದ ನಂತರ ತನ್ನ ಆಸ್ತಿಯನ್ನು (ಸಂಪತ್ತನ್ನು) ತ್ಯಜಿಸಬೇಕು ಎಂದು ನಿರೀಕ್ಷಿಸಲಾಗುತ್ತದೆ. ಈ ಒಳ್ಳೆಯ ಪರಂಪರೆಯನ್ನು ಮತ್ತೆ ಏಕೆ ನಾವು ಪುನರುತ್ಥಾನಗೊಳಿಸಬಾರದು? ಇದರ ಪರಿಣಾಮ ಎಂದರೆ ನಮ್ಮ ಜೀವನ ನಿರ್ವಹಣೆ ಮಾಡಲು ಯಾರಿಗೆ ನಮ್ಮ ಆಸ್ತಿಯನ್ನು ವರ್ಗಾವಣೆ ಮಾಡುತ್ತೇವೆಯೋ ಅಂಥವರ ಕನಿಕರಕ್ಕೆ ನಾವು ಸಿಕ್ಕಿಕೊಂಡಂತೆ ಆಗುತ್ತದೆ. ಈ ಕಲ್ಪನೆ ನಿಜವಾಗಿಯೂ ಬಹಳ ಆಕ?ಕವಾಗಿ ಕಾಣುತ್ತದೆ. ಇಂತಹ ಅಸಂಖ್ಯಾತ ಗೌರವಾನ್ವಿತ ನಂಬಿಕೆಯ ಪ್ರಕರಣಗಳ ನಡುವೆ ಸಾವಿರಕ್ಕೆ ಒಂದು ಪ್ರಕರಣ ಮಾತ್ರ ನಂಬಿಕೆಗೆ ಅರ್ಹವಲ್ಲದಿರಬಹುದು. ಸುಳ್ಳುಗಾರರಿಗೆ ಅವಕಾಶ ಕೊಡದೆ ಇಂತಹ ಒಂದು ನಡವಳಿಕೆಯನ್ನು ಬಹಳ ದೀರ್ಘಕಾಲದ ಪ್ರಯೋಗವಿಲ್ಲದೆ ಕಾರ್ಯಗತ ಮಾಡುವುದು ಹೇಗೆ? ನಮಗೆ ಕೆಟ್ಟ ಹೆಸರು ಬರಬಹುದೆಂದು ಭಯಪಟ್ಟು ಪ್ರಯೋಗವನ್ನು ಮಾಡದೆ ಇರಬಾರದು. ಗೀತೆಯನ್ನು ಬೋಧಿಸಿದ ಕೃಷ್ಟ ಯಾರಿಗೂ ಭಯಪಡದೆ ತನ್ನ ಸಂದೇಶವನ್ನು ನೀಡಿದ್ದಾನೆ. ಕೊಲೆ ಮಾಡುವುದೂ ಸೇರಿದಂತೆ ಪ್ರತಿಯೊಂದು ದೋಷಯುಕ್ತ ಕಾರ್ಯಗಳನ್ನು ಮಾಡಿದಾಗ ಅದನ್ನು ಸಮರ್ಥನೆ ಮಾಡಿಕೊಳ್ಳಲು ಕಷ್ಟ ಪಡಬೇಕಾಗುತ್ತದೆ ಎಂದು ಅವನಿಗೂ ಸಹ ಗೊತ್ತಿತ್ತು (Y.I., 3-7-1924, p. 221).
ಧರ್ಮದ ಘನ ಉದ್ದೇಶವನ್ನು ಈಡೇರಿಸಲು ನಮ್ಮದೆಲ್ಲವನ್ನೂ ತ್ಯಜಿಸಬೇಕಾಗುತ್ತದೆ. ನಮ್ಮ ಅಸ್ತಿತ್ವದ ನಿಯಮವನ್ನು ಅರಿತ ನಂತರ ತ್ಯಜಿಸುವಿಕೆಯನ್ನು ನಮ್ಮ ಶಕ್ತ್ಯನುಸಾರ ಕಡಮೆ ಮಾಡಿಕೊಳ್ಳುವ ಪ್ರಯತ್ನವೇ ಸುವರ್ಣ ಮಾಧ್ಯಮ ಎಂದು ಗಾಂಧಿಯವರು ಹೇಳಿದರು (Y.I. 5-2-1925, p. 48).
ಸುವರ್ಣ ನಿಯಮ
ಲಕ್ಷಾಂತರ ಮಂದಿಗೆ ಯಾವುದನ್ನು ಪಡೆಯಲು ಸಾಧ್ಯವಾಗಿಲ್ಲವೋ ಅಂತಹ ಆರ್ಜಿತ ಸಂಪತ್ತು ಮತ್ತು ನನ್ನದೆಲ್ಲವನ್ನೂ ದೃಢ ನಿಶ್ಚಯದಿಂದ ನಿರಾಕರಿಸುವುದೇ ಸುವರ್ಣ ನಿಯಮ. ಈ ನಿರಾಕರಿಸುವ ಶಕ್ತಿ ನಮಗೆ ಒಮ್ಮೆಗೇ ಆಕಸ್ಮಿಕವಾಗಿ ಬರುವುದಿಲ್ಲ. ಸಂಪತ್ತಿನಿಂದ ವಂಚಿತರಾದ ಲಕ್ಷಾಂತರ ಮಂದಿಗಾಗಿ ನಾನೂ ಸಹ ಸಂಪತ್ತನ್ನು ನಿರಾಕರಣೆ ಮಾಡುತ್ತೇನೆ ಎನ್ನುವ ಮಾನಸಿಕ ಸಿದ್ಧತೆಯನ್ನು ಪ್ರಾರಂಭದಲ್ಲಿ ಮಾಡಿಕೊಳ್ಳಬೇಕು. ಆನಂತರ ಅದಕ್ಕೆ ಅನುಗುಣವಾಗಿ ನಮ್ಮ ಜೀವನಪದ್ಧತಿಯ ಪುನರ್ವ್ಯವಸ್ಥೆಯನ್ನು ಆದಷ್ಟು ಶೀಘ್ರವಾಗಿ ಮಾಡಿಕೊಳ್ಳಬೇಕು” ಎಂದು ಅವರು ನುಡಿದರು (Y.I., 24.6. 1926, p. 226).
ಪ್ರೀತಿ ಮತ್ತು ಸಂಪತ್ತು ಎರಡೂ ಒಟ್ಟಿಗೆ ಇರಲು ಸಾಧ್ಯವಿಲ್ಲ. ತಾತ್ತ್ವಿಕವಾಗಿ ಎಲ್ಲಿ ನಿಜವಾದ ಪ್ರೀತಿ ಇರುತ್ತದೆಯೋ ಅಲ್ಲಿ ಪರಿಪೂರ್ಣ ಅಪರಿಗ್ರಹವಿರುತ್ತದೆ. ಈ ಶರೀರ ನಮ್ಮ ಅಂತಿಮ ಸ್ವತ್ತು. ಒಬ್ಬ ಮನು? ತನ್ನ ಪರಿಪೂರ್ಣ ಪ್ರೀತಿಯನ್ನು ಪ್ರಕಟಿಸಲು ಯಾವಾಗ ಸಾಧ್ಯವೆಂದರೆ ಮಾನವಸೇವೆಗಾಗಿ ತನ್ನ ಎಲ್ಲ ಸಂಪತ್ತನ್ನು ತೊರೆದು ಆ ಉದ್ದೇಶಕ್ಕಾಗಿ ತಾನು ಸಾಯಲೂ ಸಿದ್ಧನಾದಾಗ ಮಾತ್ರ ಎಂಬ ಸತ್ಯವನ್ನು ಮನಗಾಣಿಸಿದರು.
ತಾತ್ತ್ವಿಕವಾಗಿ ಮಾತ್ರ ಇದು ಸರಿ ಎಂದು ಕಾಣುತ್ತದೆ. ನಮ್ಮ ಶರೀರ ಅಪರಿಪೂರ್ಣವಾಗಿರುವ ಕಾರಣ ನಿಜಜೀವನದಲ್ಲಿ ಪರಿಪೂರ್ಣ ಪ್ರೀತಿಯನ್ನು ತೋರಿಸಲು ಸಾಧ್ಯವಿಲ್ಲ. ಆದ್ದರಿಂದ ಸಂಪೂರ್ಣ ಪ್ರೀತಿ ಮತ್ತು ಸಂಪೂರ್ಣ ಅಪರಿಗ್ರಹ ನಾವು ಬದುಕಿರುವವರೆಗೂ ಕಾರ್ಯಗತವಾಗದ ಆದರ್ಶವಾಗುತ್ತದೆ. ಆದರೆ ಈ ಆದರ್ಶವನ್ನು ತಲಪಲು ನಿರಂತರ ಪ್ರಯತ್ನ ನಾವು ಮಾಡುತ್ತಿರಬೇಕು (The Modern Review, Oct. 1935, p. 412).
ಕ್ರಿಸ್ತ, ಪೈಗಂಬರ, ಬುದ್ಧ, ಗುರುನಾನಕ್, ಕಬೀರ, ಚೈತನ್ಯ, ಶಂಕರ, ದಯಾನಂದ, ರಾಮಕೃಷ್ಣ ಮುಂತಾದ ಮಹನೀಯರು ಲಕ್ಷಾಂತರ ಜನರ ವ್ಯಕ್ತಿತ್ವ ಮತ್ತು ಚಾರಿತ್ರ್ಯವನ್ನು ಬೆಳೆಸಲು ತಮ್ಮ ಪ್ರಭಾವವನ್ನು ಬೀರಿದರು. ಅವರು ಈ ರೀತಿಯ ಜೀವನವನ್ನು ನಡೆಸಿದುದರ ಪರಿಣಾಮವಾಗಿ ಇಂದು ಜಗತ್ತು ಶ್ರೀಮಂತವಾಗಿದೆ. ಆ ಎಲ್ಲ ಮಹಾಪುರುಷರು ಉದ್ದೇಶಪೂರ್ವಕವಾಗಿ ಬಡತನವನ್ನು ಸ್ವೀಕಾರ ಮಾಡಿದ್ದರು. ಆದರೆ ನಾವು ಆಧುನಿಕ ಭೌತಿಕ ಹಾಗೂ ಪ್ರಾಪಂಚಿಕ ಸುಖ-ಭೋಗಗಳ ಕಡೆಗೆ ಹೆಚ್ಚಿನ ಒಲವು ಬೆಳೆಸಿಕೊಳ್ಳುತ್ತಿರುವ ಕಾರಣ ಪ್ರಗತಿಯ ವಿರುದ್ಧ ದಿಕ್ಕಿನೆಡೆ ಪ್ರಪಾತಕ್ಕಿಳಿಯುತ್ತಿದ್ದೇವೆ – ಎಂದು ಗಾಂಧಿ ಎಚ್ಚರಿಸಿದ್ದಾರೆ (Speeches and Writings of Mahatma Gandhi, p. 353).
ಪ್ರಪಂಚದಲ್ಲಿ ಸಂಪತ್ತು ಅಧಿಕಾರ ಮತ್ತು ಕೀರ್ತಿಯನ್ನು ಗಳಿಸುವ ಸಲುವಾಗಿ ಮನು? ಬಲಾತ್ಕಾರವಾಗಿ ಎಂಥೆಂತಹ ಪಾಪ ಮತ್ತು ಅನ್ಯಾಯಗಳನ್ನು ಮಾಡಿದ್ದಾನೆ. ಅದರ ಪರಿಣಾಮವಾಗಿ ಅತ್ಯಧಿಕ ಬೆಲೆಯನ್ನು ತೆತ್ತಿದ್ದಾನೆ ಎಂದು ಜ್ಞಾಪಕ ಮಾಡಿದರು (Autobiography of M.G., p. 168)
ಜೀವನರಹಸ್ಯ
ಎಲ್ಲವನ್ನೂ ತ್ಯಜಿಸಿ ಮತ್ತು ದೇವರಿಗಾಗಿ ಸಮರ್ಪಿತಜೀವನ ನಡೆಸು. ಜೀವಿಸುವ ಹಕ್ಕು ತ್ಯಾಗದಿಂದ ಮಾತ್ರ ಬರುತ್ತದೆ. ಎಲ್ಲರೂ ತಮ್ಮ ಪಾಲಿನ ಕೆಲಸವನ್ನು ಮಾಡುವಂತೆ ನಾನೂ ಸಹ ನನ್ನ ಕರ್ತವ್ಯವನ್ನು ಮಾಡುತ್ತೇನೆ ಎನ್ನುವುದರ ಬದಲು ಬೇರೆಯವರು ಏನು ಮಾಡುತ್ತಿದ್ದಾರೆ ಎಂಬುದರ ಕಡೆಗೆ ಗಮನವೀಯದೆ ನಾನು ಮೊದಲು ನನ್ನ ಕರ್ತವ್ಯ ಮಾಡುತ್ತೇನೆ ಎಂಬ ಭಾವನೆ ಬೆಳೆಸಿಕೊಳ್ಳಬೇಕು – ಎಂಬುದು ಗಾಂಧಿಯವರ ಬೋಧೆಯಾಗಿತ್ತು (Harijan, 6.3. 1937, p. 27).
ಜೀವನದ ರಹಸ್ಯವೆಂದರೆ ಒಂದುವೇಳೆ ಭೌತಿಕ ವಸ್ತುಗಳನ್ನು ಹೊಂದುವ ಮತ್ತು ಅವುಗಳನ್ನು ಬಳಸುವ ಸಂದರ್ಭ ಬಂದರೆ ಅದನ್ನು ಯಾರೂ ಸಹ ಬಿಡಬಾರದು ಎಂಬ ವ್ಯಾವಹಾರಿಕ ಮಾತನ್ನೂ ಆಡಿದರು (Harijan, 10.12. 1938. p. 371).
ಸುಖೀ ಜೀವನದ ರಹಸ್ಯವೆಂದರೆ ತ್ಯಾಗ. ತ್ಯಾಗವೇ ಜೀವನ. ತೃಪ್ತಿಪಡಿಸುವಿಕೆ ಮರಣದಲ್ಲಿ ಪರ್ಯಾವಸಾನಗೊಳ್ಳುತ್ತದೆ. ಆದ್ದರಿಂದ ಪ್ರತಿಯೊಬ್ಬ ಮನುಷ್ಯನಿಗೂ ಯಾವ ಪ್ರತಿಫಲವೂ ಇಲ್ಲದೆ ಸೇವೆ ಮಾಡಿ ೧೨೫ ವರ್ಷ ಬದುಕುವ ಆಸೆ ಇರಬೇಕು ಮತ್ತು ಅದು ಅವನ ಹಕ್ಕೂ ಹೌದು. ಅಂತಹ ಜೀವನವನ್ನು ಸಂಪೂರ್ಣವಾಗಿ ಸೇವೆಗಾಗಿ ಮುಡುಪಾಗಿಡಬೇಕು. ಅಂತಹ ಸೇವೆಯನ್ನು ಮಾಡಲು ಮಾಡಿದ ತ್ಯಾಗ ಅನಿರ್ವಚನೀಯ ಆನಂದವನ್ನು ನೀಡುತ್ತದೆ ಮತ್ತು ಅದರಿಂದ ಯಾರೂ ವಿಮುಕ್ತರಾಗಬಾರದು. ಏಕೆಂದರೆ ಆ ಅಮೃತ ಮನದಾಳದಿಂದ ಹೊರಹೊಮ್ಮಿ ಜೀವನವನ್ನು ಸಂರಕ್ಷಿಸುತ್ತದೆ. ಇದರಲ್ಲಿ ಯಾವುದೇ ರೀತಿಯ ಚಿಂತೆಗೆ ಅಥವಾ ಅಸಹನೆಗೆ ಅವಕಾಶವಿಲ್ಲ. ಯಾವುದೇ ರೀತಿಯ ಸಂತೋಷವಿಲ್ಲದೆ ಬಹಳಕಾಲ ಜೀವನ ಸಾಧ್ಯವಿಲ್ಲ. ಅಕಸ್ಮಾತ್ ಸಾಧ್ಯವಿದ್ದರೂ ಅಂತಹ ಜೀವನ ಸಾರ್ಥಕವಾದದ್ದಲ್ಲ Harijan, 24.2. 1946, p. 19 ಎಂದು ಗಾಂಧಿಯವರು ಸ್ಪಷ್ಟಪಡಿಸಿದ್ದಾರೆ.
ಇದರ ಅರ್ಥ ಒಬ್ಬನ ಬಳಿ ಸಂಪತ್ತಿದ್ದರೆ ಅದನ್ನು ಅವನು ಎಸೆದುಬಿಡಬೇಕೆಂದು ಅಲ್ಲ ಮತ್ತು ಹೆಂಡತಿ ಮಕ್ಕಳನ್ನು ಮನೆಯಿಂದ ಹೊರಗೆ ಕಳಿಸಿಬಿಡಬೇಕೆಂದು ಅಲ್ಲ. ಇದರ ನಿಜವಾದ ಅರ್ಥವೆಂದರೆ ಮನು? ಭೌತಿಕವಸ್ತುಗಳ ವ್ಯಾಮೋಹವನ್ನು ಬಿಡಬೇಕು. ಎಲ್ಲ ರೀತಿಯ ಬಂಧನದಿಂದ ಮುಕ್ತನಾಗಿ ಪರಮಾತ್ಮನಿಗೆ ತನ್ನನ್ನು ತಾನು ಸಮರ್ಪಣೆ ಮಾಡಿಕೊಳ್ಳಬೇಕು ಮತ್ತು ತನ್ನದೆಂದು ಕರೆಯುವ ಎಲ್ಲವನ್ನೂ ಆತನ ಸೇವೆಗಾಗಿ ಮಾತ್ರ ಮೀಸಲಿಡಬೇಕು ಎಂಬ ಕಿವಿಮಾತನ್ನು ಅವರು ಹೇಳಿದರು (Harijan,
28.4.1946, p. 11).
ಗಾಂಧಿಯವರ ಈ ತತ್ತ್ವವನ್ನು ನಮ್ಮ ಇಂದಿನ ಆರ್ಥಿಕ ನೀತಿಯಲ್ಲಿ ಸಂಪೂರ್ಣವಾಗಿ ಅಳವಡಿಸಿ ಕಾರ್ಯಗತ ಮಾಡಲು ಸಾಧ್ಯವಿಲ್ಲದಿದ್ದರೂ ಅದು ನಮ್ಮ ಆರ್ಥಿಕ ಚಿಂತನೆಗೆ ಒಂದು ಹೊಸ ದಿಕ್ಕನ್ನು ಕೊಡಲು ಸಾಧ್ಯವಾಗಿದೆ. ಈ ದಿಕ್ಕಿನಲ್ಲಿ ನಡೆದ ಒಂದು ಸಣ್ಣ ಪ್ರಯತ್ನವೂ ನಮ್ಮ ಕಣ್ಣನ್ನು ತೆರೆಸಬಹುದಾಗಿದೆ. ಗಾಂಧಿಯವರಿಂದ ಪ್ರೇರಿತರಾದ ಆಚಾರ್ಯ ವಿನೋಬಾ ಭಾವೆಯವರು ಅಪರಿಗ್ರಹತತ್ತ್ವವನ್ನು ಅನು?ನಗೊಳಿಸಲು ’ಭೂದಾನ’, ’ಸಂಪತ್ತಿನ ದಾನ’ ಮತ್ತು ’ಶ್ರಮದಾನ’ ಕಾರ್ಯಕ್ರಮಗಳನ್ನು ಕೈಗೊಂಡು ಅದರಲ್ಲಿ ಸ್ವಲ್ಪಮಟ್ಟಿಗೆ ಯಶಸ್ಸನ್ನು ಗಳಿಸಿರುವುದು ನಮ್ಮೆಲ್ಲರಿಗೂ ತಿಳಿದ ವಿಷಯ. ಅದರ ಪ್ರಗತಿ ಭಾರೀ ಪ್ರಮಾಣದಲ್ಲಿ ದೇಶಾದ್ಯಂತ ಆಗದಿದ್ದರೂ ಅವರು ಈ ದಿಕ್ಕಿನಲ್ಲಿ ಮಾಡಿದ ಪ್ರಯತ್ನ ಮತ್ತು ಅದರ ಸಫಲತೆಯನ್ನು ನಾವು ಮರೆಯುವಂತಿಲ್ಲ. ಅಪರಿಗ್ರಹತತ್ತ್ವದ ಯಶಸ್ಸಿಗೆ ಗಾಂಧಿಯವರ ಕಲ್ಪನೆಯ ಅರ್ಥಶಾಸ್ತ್ರವನ್ನು ಅರ್ಥಮಾಡಿಕೊಂಡಂತಹ ಮತ್ತು ಅದನ್ನು ಕಾರ್ಯಗತಗೊಳಿಸಲು ಸಿದ್ಧವಾಗಿರುವಂತಹ ಜನಸಮೂಹದ ನಿರ್ಮಾಣದ ಅಗತ್ಯವಿದೆ. ಜೊತೆಗೆ ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಈ ತತ್ತ್ವದ ವಿವರಣೆ, ಅದರ ಪರಿಮಾಣಾತ್ಮಕ ಅಳತೆ, ಅಧಿಕ ಸಂಪತ್ತಿನ ಮಾಹಿತಿಯನ್ನು ಕಲೆಹಾಕಲು ಅಗತ್ಯವಾದ ಸಾಂಸ್ಥಿಕ ಸಂಘಟನೆಯ ವ್ಯವಸ್ಥೆ ಅನಿವಾರ್ಯವಾಗುತ್ತದೆ.
ಅಸ್ತೇಯ – ಕದಿಯದಿರುವಿಕೆ
ಅಪರಿಗ್ರಹ ಅಸ್ತೇಯದ ಒಂದು ಭಾಗ. ಆದ್ದರಿಂದ ಅಸ್ತೇಯ ಪದದ ಅರ್ಥವನ್ನು ತಿಳಿಯುವ ಪ್ರಯತ್ನ ಇಲ್ಲಿ ಉಚಿತ. ಸಂಸ್ಕೃತಭಾಷೆಯಲ್ಲಿ ಅಸ್ತೇಯ ಎಂದರೆ ಕದಿಯದಿರುವಿಕೆ. ಈ ತತ್ತ್ವ ಸತ್ಯ ಮತ್ತು ಪ್ರೀತಿಯ ಜೊತೆಗೆ ಹೆಣೆಯಲ್ಪಟ್ಟಿದೆ. ಈ ಸಿದ್ಧಾಂತವನ್ನು ಗಾಂಧಿಯವರು ಎರಡು ರೀತಿಯಲ್ಲಿ ವಿವರಿಸಿದ್ದಾರೆ. ಮೊದಲನೆಯದು ಬಾಹ್ಯ ಅಥವಾ ದೈಹಿಕ (ವಸ್ತುಗಳ ರೂಪದಲ್ಲಿ) ಕದಿಯುವಿಕೆ ಹಾಗೂ ಎರಡನೆಯದು ಆಂತರಿಕ ಅಥವಾ ಮಾನಸಿಕ ಕದಿಯುವಿಕೆ. ಸಾಮಾನ್ಯವಾಗಿ ಪ್ರತಿಯೊಬ್ಬರೂ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಕಳ್ಳತನದ ಬಗ್ಗೆ ಅಪರಾಧಿ ಮನೋಭಾವನೆಯನ್ನು ಹೊಂದಿರುತ್ತಾರೆ. ಇದು ಸಹಜವೂ ಹೌದು. ಗಾಂಧಿಯವರು ಪ್ರಾರಂಭದಲ್ಲಿ ವಸ್ತುಗಳ ಕದಿಯುವಿಕೆಯ ಬಗ್ಗೆ ವಿವರಣೆ ನೀಡಿದ್ದಾರೆ. ಮನುಷ್ಯ ಇತರರಿಗೆ ಸೇರಿದ ವಸ್ತುಗಳನ್ನು ಕದಿಯುವುದು ಸಾಮಾನ್ಯ. ಆದರೆ ತನ್ನ ವಸ್ತುಗಳನ್ನು ತಾನೇ ಕದಿಯುವುದು ಇನ್ನೊಂದು ಬಗೆ. ಇದನ್ನು ಸ್ಪಷ್ಟೀಕರಿಸಲು ಅವರು ಒಂದು ಸರಳ ಉದಾಹರಣೆಯನ್ನು ಕೊಡುತ್ತಾರೆ. ಒಬ್ಬ ತಂದೆ ತನ್ನ ಮಕ್ಕಳಿಗೆ ತಿಳಿಯದ ಹಾಗೆ ಗುಟ್ಟಾಗಿ ಏನನ್ನಾದರೂ ತಿಂದರೆ ಅದು ಕಳ್ಳತನ ಮಾಡಿದಂತೆ ಎಂದರು.
ಅನೇಕ ಉದಾಹರಣೆಗಳನ್ನು ಕೊಡುವುದರ ಮೂಲಕ ಈ ತತ್ತ್ವದ ಸ್ಪಷ್ಟ ಚಿತ್ರಣವನ್ನು ಎಲ್ಲರಿಗೂ ಕೊಡುವ ಪ್ರಯತ್ನ ಅವರು ಮಾಡಿದ್ದಾರೆ. ಒಬ್ಬ ಮನು? ಇನ್ನೊಬ್ಬರ ಅನುಮತಿ ಇಲ್ಲದೆ ಏನನ್ನಾದರೂ ತೆಗೆದುಕೊಂಡರೆ ಕಳ್ಳತನ ಮಾಡಿದಂತೆ. ಅದೇ ರೀತಿ ಒಂದು ವಸ್ತುವನ್ನು ನಿರ್ದಿ? ಉಪಯೋಗಕ್ಕೆ ಬಳಸುವುದನ್ನು ಬಿಟ್ಟು ಇನ್ನೊಂದು ಉದ್ದೇಶಕ್ಕೆ ಉಪಯೋಗಿಸಿದರೆ ಅಥವಾ ಒಂದು ನಿರ್ದಿ? ಅವಧಿಗಿಂತ ಹೆಚ್ಚು ಸಮಯ ಉಪಯೋಗಿಸಿದರೆ ಅದೂ ಕಳ್ಳತನವೇ. ಆಶ್ರಮದ ಅಡುಗೆಮನೆ ಎಲ್ಲರಿಗೂ ಸೇರಿದ ಸ್ವತ್ತು. ಸಕ್ಕರೆಯ ಡಬ್ಬದಲ್ಲಿರುವ ಒಂದು ಹರಳನ್ನು ಯಾರಿಗೂ ಗೊತ್ತಾಗದಂತೆ ತೆಗೆದುಕೊಂಡರೆ ಅದು ಕಳ್ಳತನ ಮಾಡಿದಂತೆ. ಒಂದು ಮಗು ಇನ್ನೊಬ್ಬರ ಪೆನ್ನನ್ನು ತೆಗೆದುಕೊಂಡರೆ ಅದೂ ಸಹ ಕದ್ದಂತೆ. ಯಾರ ಸ್ವತ್ತೂ ಅಲ್ಲದ ವಸ್ತುವನ್ನು ತೆಗೆದುಕೊಂಡರೂ ಕಳ್ಳತನವೇ. ರಸ್ತೆಯಲ್ಲಿ ಯಾವುದಾದರೂ ವಸ್ತು ಸಿಕ್ಕಿದರೆ ಅದು ನಮ್ಮದಾಗುವುದಿಲ್ಲ. ಅದು ಆ ಕ್ಷೇತ್ರದ ಆಡಳಿತಾಧಿಕಾರಿಗೆ ಸೇರತಕ್ಕದ್ದು. ಆಶ್ರಮದ ಬಳಿ ಯಾವುದಾದರೂ ವಸ್ತು ಸಿಕ್ಕಿದರೆ ಅದನ್ನು ಕಾರ್ಯದರ್ಶಿಯವರ ಮೂಲಕ ಪೊಲೀಸರಿಗೆ ತಲಪಿಸಬೇಕು. ಇದರ ಜೊತೆಗೆ ನಮಗೆ ಆವಶ್ಯಕತೆ ಮತ್ತು ಅಗತ್ಯ ಇಲ್ಲದ ಯಾವುದೇ ವಸ್ತುವನ್ನು ಇನ್ನೊಬ್ಬರ ಅನುಮತಿ ಪಡೆದು ತೆಗೆದುಕೊಂಡರೂ ಸಹ ಅದು ಕಳ್ಳತನವಾಗುತ್ತದೆ. ನಮಗೆ ಅಗತ್ಯವಿಲ್ಲದ್ದನ್ನು ಬೇರಾರಿಂದಲೂ ನಾವು ಸ್ವೀಕರಿಸಬಾರದು. ಅನೇಕಬಾರಿ ನಮಗೆ ನಮ್ಮ ಅಗತ್ಯಗಳ ಅರಿವಿಲ್ಲದೆ ನಮ್ಮ ಆಸೆಗಳನ್ನು ವೃದ್ಧಿಮಾಡಿಕೊಂಡು ನಮ್ಮ ಅರಿವಿಲ್ಲದೆ ನಾವು ಕಳ್ಳತನ ಮಾಡುತ್ತೇವೆ. ಸ್ವಲ್ಪ ಯೋಚನೆ ಮಾಡಿದರೆ ಅಪರಿಗ್ರಹ ತತ್ತ್ವದ ಮೂಲಕ ನಮ್ಮ ಅಗತ್ಯಗಳನ್ನು ಇಚ್ಛಾಪೂರ್ವಕವಾಗಿ ಕಡಮೆಮಾಡಿಕೊಳ್ಳಬಹುದು ಎಂದು ಗಾಂಧಿಯವರು ಸ್ಪಷ್ಟವಾಗಿ ತಿಳಿಸಿದ್ದಾರೆ.
ಎರಡನೆಯದು ಮಾನಸಿಕ ಕಳ್ಳತನ. ಇದು ನೋಡಲು ಸೌಮ್ಯ. ಆದರೆ ಅತ್ಯಂತ ಹೀನಾಯ ಮಟ್ಟದ್ದು. ಇನ್ನೊಬ್ಬರ ಸಂಪತ್ತನ್ನು ಬಯಸುವುದು, ಅದರ ಬಗ್ಗೆ ನಮ್ಮ ದುರಾಸೆಯ ಕಣ್ಣುಗಳನ್ನು ಹಾಕುವುದು, ಆಕರ್ಷಕವಾಗಿ ಕಾಣುವ ಇತರರ ವಸ್ತುಗಳನ್ನು ನನಗೆ ಬೇಕು ಎನ್ನುವ ಕಲ್ಪನೆ ಮಾಡುವುದು ಸಹ ಮಾನಸಿಕ ಕಳ್ಳತನ. ಉಪವಾಸವ್ರತ ಮಾಡುತ್ತಿರುವ ವ್ಯಕ್ತಿ ಇನ್ನೊಬ್ಬರು ಆಹಾರ ತೆಗೆದುಕೊಳ್ಳುವುದನ್ನು ಆಸೆಯ ಕಣ್ಣುಗಳಿಂದ ನೋಡುವುದು, ತನ್ನ ಉಪವಾಸವ್ರತ ಮುಗಿದ ನಂತರ ತಾನು ಏನೇನು ವಸ್ತುಗಳನ್ನು ತಿನ್ನಬೇಕೆಂದು ಮನಸ್ಸಿನಲ್ಲಿ ಕಲ್ಪನೆ ಮಾಡಿಕೊಳ್ಳುವುದು ಸಹ ಮಾನಸಿಕ ಕಳ್ಳತನದ ಭಾಗ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
ಅಸ್ತೇಯ ತತ್ತ್ವವನ್ನು ಅನುಸರಿಸುವವನು ಮುಂದೆ ತನ್ನ ಜೀವನದಲ್ಲಿ ಏನೇನನ್ನು ಸಂಪಾದಿಸುತ್ತೇನೆ ಎಂಬುದನ್ನೂ ಯೋಚಿಸಬಾರದು. ನಿಜ ಅರ್ಥದಲ್ಲಿ ಮುಂದಿನ ದಿನಗಳಿಗೆ ಶೇಖರಿಸಿ ಇಡಬೇಕೆಂಬ ಬುದ್ಧಿ ಮನುಷ್ಯನನ್ನು ಕಳ್ಳತನ ಮಾಡಲು ಪ್ರೇರೇಪಿಸುವುದು. ಒಂದು ವಸ್ತುವನ್ನು ಪಡೆಯಬೇಕೆಂಬ ಹಂಬಲ ಮನಸ್ಸಿಗೆ ಬಂದರೆ ಅದನ್ನು ಯಾವುದಾದರೂ ಮಾರ್ಗದಲ್ಲಿ ಪಡೆಯಬೇಕೆಂಬ ವಿಕೃತ ಚಿಂತನೆ ಮುಂದಿನ ಹಂತದಲ್ಲಿ ಪ್ರಾರಂಭವಾಗುವುದು ಎಂದು ನುಡಿದರು.
ಇನ್ನೊಬ್ಬರ ಮೂಲಕಲ್ಪನೆಯನ್ನು ಕದ್ದು ಅದು ನನ್ನ ಮೂಲಚಿಂತನೆ ಎನ್ನುವುದು ಮಾನಸಿಕ ಕಳ್ಳತನದ ಇನ್ನೊಂದು ರೂಪ. ಅನೇಕ ವಿದ್ವಾಂಸರು ಇನ್ನೊಬ್ಬರ ವಿಚಾರಗಳನ್ನು ಕದ್ದು ತಮ್ಮ ಬರಹಗಳಲ್ಲಿ ಅವನ್ನು ಬಳಸಿ ಕೃತಿಚೌರ್ಯ ಮಾಡುವುದು ಇಂದು ಬಹಳ ಸಹಜವಾಗಿದೆ. ಒಬ್ಬ ಬುದ್ಧಿವಂತ ಒಂದು ಊರಿನಲ್ಲಿ ತನ್ನ ಸ್ವಂತ ಪರಿಶ್ರಮದಿಂದ ಒಂದು ಹೊಸ ಯಂತ್ರವನ್ನು ಆವಿ?ರ ಮಾಡಿದರೆ ಅದನ್ನು ನೋಡಿ ಇನ್ನೊಬ್ಬ ತದ್ರೂಪಿ ಯಂತ್ರವನ್ನು ಇನ್ನೊಂದು ಊರಿನಲ್ಲಿ ತಯಾರಿಸಿ ಅದು ತನ್ನ ಸ್ವಂತ ಆವಿ?ರ ಎಂದರೆ ಸತ್ಯಕ್ಕೆ ಅಪಚಾರ ಮಾಡಿದಂತೆ. ಆದಕಾರಣ ಅಸ್ತೇಯ ಸಿದ್ಧಾಂತವನ್ನು ಆಚರಣೆ ಮಾಡುವವರು ವಿನಯಶೀಲರೂ, ಯೋಚಿಸುವವರೂ, ಜಾಗರೂಕರೂ ಮತ್ತು ಸರಳ ಅಭ್ಯಾಸಿಗಳೂ ಆಗಿರಬೇಕು ಎಂದು ಗಾಂಧಿಯವರು ಹೇಳುತ್ತಾರೆ ((FYM, 19.8.1930; ನಾರಾಯಣ ದಾಸರವರಿಗೆ ಬರೆದ ಪತ್ರದಲ್ಲಿ).