ಮಸುಕು ಬೆಟ್ಟದ ದಾರಿ
ಲೇಖಕರು: ಎಂ.ಆರ್. ದತ್ತಾತ್ರಿ
ಪ್ರಕಾಶಕರು: ಮನೋಹರ ಗ್ರಂಥಮಾಲೆ, ಧಾರವಾಡ
ಬೆಲೆ: ರೂ. ೩೦೦
ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ಮೂಡುವ `ಮಸುಕು ಬೆಟ್ಟದ ದಾರಿ’ ಕಾದಂಬರಿ ತನ್ನ ವಸ್ತುವಿನಿಂದಾಗಿ ಅನನ್ಯವಾಗಿದೆ. `ಹೈಪರ್ ಥೈಮೆಸ್ಟಿಕ್ ಸಿಂಡ್ರೋಮ್’ ಎಂಬ ವಿಚಿತ್ರ, ಅತಿ ಅಪರೂಪದ ಮಿದುಳಿನ ಲಕ್ಷಣದ ಹುಡುಗ ನಿರಂಜನ ಇಲ್ಲಿನ ನಾಯಕ. ಮೆದು ಮನಸ್ಸು, ಸರಳ ಸೌಜನ್ಯದ ಪೊಲೀಸ್ ಕಾನ್ಸ್ಟೇಬಲ್ ರಾಜೀವ ಈತನ ತಂದೆ. ತಂದೆಯಾಗಿ ಮಗನನ್ನು ಜೀವನದಲ್ಲಿ ನಿಲ್ಲಿಸಲು ಆತ ಪಡುವ ಪಡಿಪಾಟಲು ಮೊದಲ ಭಾಗದಲ್ಲಿದೆ. ನಿರಂಜನನ ಎಲ್ಲ ನೆನಪುಗಳೂ ಶಾಶ್ವತ, ಭಾವನೆಗಳ ಸಮೇತ. ಇತರರಲ್ಲಿ ಇರುವಂತೆ ಶಾಶ್ವತ ನೆನಪು ಹಾಗೂ ತಾತ್ಕಾಲಿಕ ನೆನಪು ಎಂಬ ಭಾಗಗಳಿಲ್ಲ, ಕ್ರಮೇಣ ಮರೆತು ಹೋಗುವುದೂ ಇಲ್ಲ. ನಿಯಂತ್ರಣ ಕೂಡ ಇಲ್ಲದ ನೆನಪುಗಳ ಪ್ರವಾಹದಲ್ಲಿ ಸಿಕ್ಕಿಕೊಳ್ಳುವ ನಿರಂಜನ ಶಾಲೆಯಲ್ಲಿ ತುಂಬ ಹಿಂದೆ ಬೀಳುತ್ತಾನೆ. ಬೆಂಗಳೂರು ನಿಮ್ಹಾನ್ಸ್ ಡಾಕ್ಟರರು ಅವನ ಕಾಯಿಲೆಯನ್ನು ಸರಿಯಾಗಿ ನಿದಾನ ಮಾಡುತ್ತಾರಾದರೂ, ಪರಿಹಾರ ಅವರಿಗೂ ತಿಳಿಯದು. ನಿರಂಜನನ ತಾಯಿ ಸತ್ತದ್ದು, ರಾಜೀವ ಮರುಮದುವೆ ಆಗದಿರುವುದು, ಅವರ ನೆಂಟರುಗಳ ವಿವರ ಅವನ ಕೌಟುಂಬಿಕ ಹಿನ್ನೆಲೆಯನ್ನು ನೀಡುತ್ತದೆ.
ಎರಡನೆಯ ಭಾಗ ನಿರಂಜನನ ಸ್ನೇಹಿತರಾದ ರಘುರಾಮ, ಕೆಂಪರಾಜು ಅವರ ಚಿತ್ರಣ. ಹೊಸ ಹುಡುಗಿ ಲಾವಣ್ಯಳ ಬಗೆಗಿನ ರಘುರಾಮನ ಪ್ರೇಮದ ವರ್ಣನೆ, ಅವಳ ಮೇಲೆ ಪ್ರಭಾವ ಬೀರಲು ಹಸಿರು ಟಿ-ಶರ್ಟ್ಗಾಗಿ ಪಡುವ ಪಡಿಪಾಟಲು ಕೆಳಮಧ್ಯಮ ವರ್ಗದ ಬಾಲಕರ ತಳಮಳಗಳನ್ನು ಸೊಗಸಾಗಿ ನೀಡಿದೆ. ಸಾಮಾನ್ಯ ಬಾಲಕ, ಮಹತ್ತ್ವಾಕಾಂಕ್ಷಿ ಅಲ್ಲದ ಕೆಂಪರಾಜು ತನ್ನ ಓದನ್ನು ಮುಂದುವರಿಸಲಾಗದೆ ಮಾವನ ವ್ಯಾಪಾರಕ್ಕೆ ಸಹಾಯಕನಾಗಿ ಹೋದಾಗ ಅಷ್ಟೇನೂ ಬೇಸರಿಸದ ನಿರಂಜನ ರಘುರಾಮ ಬೆಂಗಳೂರಿಗೆ ಹೋದಾಗ ಕುಸಿಯುತ್ತಾನೆ. ಪಿಯುಸಿ ಮುಗಿಸಲಾಗದ, ಟೈಪಿಂಗ್ ತಲೆಗೆ ಹತ್ತದ ನಿರಂಜನ ಮೊದಲು ತಂದೆಯ ಮೇಲೆ ಕೋಪ ಮಾಡಿಕೊಳ್ಳುತ್ತಿದ್ದುದನ್ನೂ ಬಿಟ್ಟು, ಮಾತನಾಡುವುದನ್ನೆ ನಿಲ್ಲಿಸುತ್ತಾನೆ. ರಾಜೀವ ತನ್ನ ನೋವಿನ ಕಾಲುಗಳನ್ನು ಎಳೆಯುತ್ತ ರತ್ನಗಿರಿ ಬೋರೆ ಹತ್ತಿ, ಅಲ್ಲಿನ ಬಂಡೆ ಮಗನಿಗೆ ಪ್ರೀತಿಯೆಂದು ಅಲ್ಲಿ ಇರಬಹುದೆಂದು ಅವನು ಬರುವವರೆಗೆ ಶಕ್ತಿ ಇಲ್ಲದ ದನಿಯಲ್ಲಿ ಪುಟ್ಟೂ ಅಂತ ಕೂಗಿ, ಆತ ಇಳಿದ ಮೇಲೆ ಮನೆಗೆ ಕರೆತರುವ ದೃಶ್ಯ ಮನ ಕರಗಿಸುತ್ತದೆ. `ಏನು ತಾನೇ ಮಾಡಬಲ್ಲೆ ನಾನು? ಇದ್ದಬದ್ದ ನೆನಪುಗಳನ್ನೆಲ್ಲಾ ಹೊತ್ತು ಓಡಾಡುವುದನ್ನು ಬಿಟ್ಟು ಏನು ತಾನೇ ಮಾಡಬಲ್ಲೆ? ಸೂರ್ಯನ ಬೆಳಕು ಬಿದ್ದೊಡನೆ ಮಂಕಾಗಿ ಕೂರುವುದು ಬಿಟ್ಟು ನನಗೇನು ತಿಳಿಯುತ್ತದೆ?’ ಎನ್ನುವ ನಿರಂಜನನ ಮಾತು ನಮ್ಮ ಹೃದಯವನ್ನೂ ಹಿಂಡುತ್ತದೆ.
ಮೂರನೆಯ ಭಾಗ ರಘುರಾಮ ಕೆಲಸ ಗಿಟ್ಟಿಸಿದ್ದಷ್ಟೇ ಅಲ್ಲದೆ ತಂದೆಯನ್ನು ಎದುರುಹಾಕಿಕೊಂಡು ಪಲ್ಲವಿ ಟೀಚರ್ಅನ್ನು ಮದುವೆ ಆಗುವುದನ್ನೂ, ನಿರುದ್ಯೋಗದ ಕಾಸಿಲ್ಲದ ದಿನಗಳನ್ನು ಮರೆತುಬಿಡಬೇಕೆಂದು ಸಂಕಲ್ಪ ಮಾಡಿದಂತೆ ದುಂದುವೆಚ್ಚ ಮಾಡಲು ತೊಡಗುವುದನ್ನೂ ವಿವರಿಸುತ್ತದೆ. ಕಂಪೆನಿಗೆ ಮೋಸ ಮಾಡುವ ಸ್ಕೀಮಿನ ನಾಯಕ ಎಸ್.ಎಸ್. ಪಾಟೀಲರು ಹಣದ ರುಚಿ ತೋರಿಸಿ, ಅವನನ್ನು ಫ್ರಾಡ್ನಲ್ಲಿ ಸಿಕ್ಕಿಸುತ್ತಾರೆ. ಗುಟ್ಟು ಹೊರಬಿದ್ದಾಗ ಹೆದರಿದ ರಘುರಾಮ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇತ್ತ ನಿರಂಜನನಿಗೆ ರಾಜೀವ ಅಂಗಡಿ ಕೊಡಿಸಿ, ಜೀವನ ಕಟ್ಟಿಕೊಳ್ಳಲು ಸಹಾಯ ಮಾಡುತ್ತಿದ್ದು, ಪಾರ್ಶ್ವವಾಯುವಿಗೆ ತುತ್ತಾಗಿ ಸಾಯುತ್ತಾನೆ. ನಿರಂಜನ ಹೇಗೋ ಅಂಗಡಿ ನಿಭಾಯಿಸತೊಡಗುತ್ತಾನೆ. ಕಾದಂಬರಿ ಮುಗಿಸುವ ಅನಿವಾರ್ಯತೆ ಇರುವುದರಿಂದ, ತನ್ನ ಅಂಗಡಿಯನ್ನೂ, ಅಪ್ರಯತ್ನವಾಗಿ ತೊಡಗುವ ನೆನಪುಗಳ ಸರಮಾಲೆಯನ್ನೂ ನಿಭಾಯಿಸುವುದನ್ನು ದುರ್ಬಲನಾದ ನಿರಂಜನ ಹೇಗೆ ಕಲಿತನೆನ್ನುವುದರ ವಿವರಣೆ ಅಲಭ್ಯ.
ನಾಲ್ಕನೆಯ ಹಾಗೂ ಕೊನೆಯ ಭಾಗ ತ್ರಿಕೋನ ಪ್ರೇಮದ ಕತೆ. ಪಲ್ಲವಿಯನ್ನು ಚಿತ್ರಕಲೆ ಕಲಿಸಲು ಬಂದ ಮನೋಹರ ಮೋಹಿಸುತ್ತಾನೆ. ಪಲ್ಲವಿಗೂ ಆ ಬಗ್ಗೆ ಮನಸ್ಸು ಇರುವಂತೆ ತೋರುತ್ತದೆ. ಆದರೆ `ಹೆಣ್ಣಾಗಿ ನನಗೆ ಸಿಗು’ ಎಂಬ ಅವನ ಕೋರಿಕೆ ಭಯ ಹುಟ್ಟಿಸಿ, ಅವಳು ತನ್ನ ಮನೆಗೆ ಓಡಿದಾಗ, ಮನೋಹರ ತನ್ನ ಚಿತ್ರಗಳನ್ನು ಸುಟ್ಟು, ಬೆಂಗಳೂರಿಗೆ, ಅಲ್ಲಿಂದ ಮುಂಬಯಿಗೆ ಹೋಗುತ್ತಾನೆ. ಲಗ್ನವಾಗಿದ್ದ ಸಂಧ್ಯಾ ಅವನನ್ನು ತೊರೆದು ಹೋಗುವುದು, ಇವನು ಪಲ್ಲವಿಯನ್ನು ಒಲಿಸಿಕೊಳ್ಳುವ ಪ್ರಯತ್ನ ಮುಂದುವರಿಸದೆ, ಅಲ್ಲಿಂದ ಜಾಗ ಖಾಲಿಮಾಡುತ್ತಾನೆ. ಅನಂತರ ಈ ಬಗ್ಗೆ ತನ್ನ ಸ್ನೇಹಿತನಿಗೆ ಹೇಳಿದರೆ `ಒಬ್ಬಳನ್ನು ಮುಟ್ಟದೇ ಕೆಟ್ಟೆ, ಒಬ್ಬಳನ್ನು ಮುಟ್ಟಿ ಕೆಟ್ಟೆ’ ಎಂದು ನಗಬಹುದು ಎಂದುಕೊಳ್ಳುವುದು ಮಾಮೂಲಿ ಕಥೆಯಂತಿದೆ. ಆದರೆ, ಕಲೆಯ ಬಗೆಗಿನ ವಿಚಾರಗಳು, ಚರ್ಚೆಗಳು ಹೊಸತನದಿಂದ ಕೂಡಿವೆ. ನಿರಂಜನ ಮಗು ಸುರಭಿಯ ಜತೆ ಹೊಂದಿಕೊಳ್ಳುವುದು, ಅವಳ ಕೂಡುನಾಲಿಗೆಯ ಚಿಕಿತ್ಸೆಗಾಗಿ ಬೆಂಗಳೂರಿಗೆ ಪಲ್ಲವಿಯ ಜತೆ ಹೋಗುವುದು ಅವರನ್ನು ಜತೆಗೂಡಿಸಲು ಬಂದ ಪ್ರಸಂಗದಂತೆ ತೋರುತ್ತದೆ. ಅವರು ರಘುರಾಮನ ನೆನಪಿನಲ್ಲಿ ಒಂದಾಗುವ ಸೂಚನೆಗಳಿವೆ.
ಕಾದಂಬರಿಯ ವೈಶಿಷ್ಟ್ಯ ಇರುವುದು ವಸ್ತುವಿನ ಆಯ್ಕೆಯಲ್ಲಿ. `ತಾರೇ ಜಮೀನ್ ಪರ್’ ಸಿನೆಮಾದಂತೆ ಇಲ್ಲಿನ ನಾಯಕ ನಿರಂಜನ ವಿಚಿತ್ರವಾದ ದೌರ್ಬಲ್ಯ ಹೊಂದಿದವನು. ಇಂತಹ ವಸ್ತುವನ್ನು ಕನ್ನಡದಲ್ಲಿ ಯಾರೂ ಸಾಹಿತ್ಯನಿರ್ಮಿತಿಗೆ ಬಳಸಿಲ್ಲ ಅನ್ನಿಸುತ್ತದೆ. ಪಲ್ಲವಿಗೆ ಮದುವೆ ಮಾಡಿಕೊಳ್ಳುತ್ತೀಯಾ ಎಂದು ಕೇಳುವಾಗ ನಿರಂಜನ ಹೇಳುವ ಮಾತುಗಳನ್ನು ಗಮನಿಸಿ: ‘ಯಾವ ನೆನಪುಗಳೂ ನನ್ನಲ್ಲಿ ಮಾಸುವುದಿಲ್ಲವಾಗಿ ರಘುರಾಮ ನನ್ನಲ್ಲಿ ಎಂದೂ ಮಾಸುವುದಿಲ್ಲ. ನನಗೆ ನನ್ನದೇ ಅಸ್ತಿತ್ವವಿಲ್ಲದಾಗಿ ನೆನಪುಗಳೇ ನನ್ನ ಸ್ವರೂಪವಾಗಿವೆ. ಯಾವ ನೆನಪುಗಳು ಕಾಡುತ್ತವೋ ಆ ಕ್ಷಣಕ್ಕೆ ಆ ಸ್ವರೂಪ ನಾನು. ನೀನು ನನ್ನನ್ನು ಮದುವೆಯಾದಲ್ಲಿ ನಿನಗೆ ನಿರಂಜನ ಗಂಡನಾಗಿ ಸಿಗುವುದಕ್ಕಿಂತ ಹೆಚ್ಚಾಗಿ ರಘುರಾಮನೇ ಸಿಗುತ್ತಾನೆ;’ ನಿರಂಜನನಿಗೆ ಅವನದೇ ಆದ ವ್ಯಕ್ತಿತ್ವವೂ ಇಲ್ಲವೇನೋ ಅನ್ನಿಸುತ್ತದೆ.
ಇಂತಹ ಮಕ್ಕಳನ್ನು ಬೆಳಸಲು ಹೆತ್ತವರು ಪಡುವ ಪಾಡು ದೇವರಿಗೇ ಪ್ರೀತಿ. ಕಾಡುವ ಮಳೆಯಂತೆ, ಎದ್ದುನಿಂತು ಸದಾ ತನ್ನ ಅಸ್ತಿತ್ವವನ್ನು ತೋರುತ್ತಾ ತಾನೂ ಜೀವನದ ಒಂದು ಪಾತ್ರವಾಗಿಬಿಡುವ ಮುಳ್ಳಯ್ಯನ ಗಿರಿಯಂತೆ ಈ ಮಕ್ಕಳ ಬಗೆಗಿನ ಯೋಚನೆ ಹೆತ್ತವರನ್ನು ಸದಾ ಕಾಡುತ್ತದೆ. ರಾಜೀವ ಸದಾಕಾಲ ನೋಡಿಕೊಳ್ಳಲೇಬೇಕಾದ ನಿರಂತರ ಮಗುವಾಗಿ ತನ್ನನ್ನು ಆಶ್ರಯಿಸಿದ ಮಗನನ್ನು ಕಾಪಾಡುವ ರೀತಿ ಅನನ್ಯ. ಸಮಾಜವೂ ವಿರೂಪಾಕ್ಷಯ್ಯನ ರೀತಿಯಲ್ಲಿ ಈ ರೀತಿಯ ಪಾತ್ರಗಳನ್ನು ಕರುಣೆಯಿಂದ ನೋಡಿ ಸಹಾಯ ಮಾಡುತ್ತದೆ. ಕಾದಂಬರಿ ನೆನಪಲ್ಲಿ ಉಳಿದುಕೊಳ್ಳುವಂತಹದ್ದಾಗಿರುವುದು ಈ ಎರಡು ಪಾತ್ರಗಳಿಂದ.
ದತ್ತಾತ್ರಿಯವರ ಭಾಷೆಯ ಬಳಕೆ, ವಿಚಾರಗಳನ್ನು ಮಂಡಿಸುವ ರೀತಿ ಸಮರ್ಥವಾಗಿದೆ. ಮಳೆಯ, ಮುಳ್ಳಯ್ಯನ ಗಿರಿಯ ವರ್ಣನೆಗಳು ಕಾವ್ಯಾತ್ಮಕವಾಗಿದ್ದರೆ, ಕಲೆಯ ಬಗೆಗಿನ ಚರ್ಚೆ, ನಿರಂಜನನ ಕಾಯಿಲೆಯ ಬಗ್ಗೆ ಡಾಕ್ಟರರು ಸ್ಪಂದಿಸುವ ರೀತಿ, ನಿವೃತ್ತರಾದರೂ ಡಾ|| ಶ್ರೀಧರ್ ಅವನನ್ನು ಜ್ಞಾಪಿಸಿಕೊಳ್ಳುವುದು, ನುಗ್ಗಿ ಬರುವ ನೆನಪುಗಳನ್ನು ನಿಯಂತ್ರಿಸಿ, ಅರ್ಥಮಾಡಿಕೊಂಡು ವ್ಯಕ್ತಗೊಳಿಸಲು ಮಗು ನಿರಂಜನ ದಿನಾಂಕಗಳನ್ನು ಉಪಯೋಗಿಸುವುದನ್ನು ಕಲಿಯುವುದು ಈ ವಿವರಗಳು ನಂಬಿಕೆ ಹುಟ್ಟಿಸುವಂತಿವೆ. ಒಂದು ಉದಾಹರಣೆಯನ್ನು ಗಮನಿಸಬಹುದು; ಪಲ್ಲವಿಯ ಸ್ಪರ್ಶದ ವರ್ಣನೆ ಈ ರೀತಿ ಇದೆ:
`ಜೀವ ಸೃಷ್ಟಿಯಲ್ಲಿ ಪ್ರಕೃತಿಯು ಅತ್ಯುನ್ನತ ಮಟ್ಟವನ್ನು ಮುಟ್ಟಿರುವುದು, ಬಹುಶಃ ಸ್ಪರ್ಶವೆಂಬ ಸಂವೇದನೆಯಲ್ಲಿ. ಒಂದು ಸ್ಪರ್ಶವು ಮೂಡಿಸುವಷ್ಟು ಸ್ಪಂದನೆಗಳನ್ನು ನಮ್ಮ ಇತರ ಯಾವ ಇಂದ್ರಿಯಗಳೂ ಮೂಡಿಸಲಾರವು. ಮುಟ್ಟುವ ಕ್ರಿಯೆಗಿರುವ ನೇರ ಪ್ರವೇಶ ಮಾತಿಗೆಂದೂ ದಕ್ಕುವುದಿಲ್ಲ. ಮಾತೋ, ಸದಾ ಶಬ್ದದ ಜೀತದಾಳು; ಭಾಷೆಯ ಸಾಲಗಾರ. ಶಬ್ದ ತಲಪದ ಕಡೆ ಮಾತೂ ತಲಪಲಾರದು. ಭಾಷೆ ಸೋತಲ್ಲಿ ಮಾತೂ ಸೋಲುತ್ತದೆ. ಆದರೆ ಸ್ಪರ್ಶ ಯಾವ ಹಂಗಿಲ್ಲದ ಸರ್ವಸ್ವತಂತ್ರ. ತಾನೇ ವಿದ್ಯುತ್, ತಾನೇ ವಾಹಕ. ದೇಹದ ಬಿಸಿ ಮತ್ತು ಮನಸ್ಸಿನ ತುಮುಲಗಳೆರಡನ್ನೂ ಹರಿವಾಗಿಸಿ ಜೀವದಿಂದ ಜೀವಕ್ಕೆ ಮುಟ್ಟಿಸುವ ಶಕ್ತಿ ಸ್ಪರ್ಶಕ್ಕಿದೆ. ಮಾತಿನ ಕೋಟಿಪಟ್ಟನ್ನು ಬೆರಳತುದಿಯ ನರಗಳು ಸಂವಹಿಸುವಾಗ ಶಬ್ದಕ್ಕೆ ಎಲ್ಲಿಯ ಬೆಲೆ? ದೇಹದ ಒಂದೊಂದು ಕೋಶವೂ ಒಬ್ಬೊಬ್ಬ ನುರಿತವಾದಕನಾಗಿ ಒಟ್ಟಾಗಿ ಸ್ಪರ್ಶವೆನ್ನುವ ಸಿಂಫ಼ನಿ ನುಡಿಸುವಾಗ ಶಬ್ದ ಸಂಗೀತ ಯಾರಿಗೆ ಬೇಕು?’ ಆ ಸ್ಪರ್ಶದಿಂದ ನಿರಂಜನನ ನೆನಪಿನ ಪ್ರವಾಹ ಅವಳನ್ನೂ ಪ್ರವೇಶಿಸುತ್ತದೆ; ನಿರಂಜನನಲ್ಲಿ ಹೊಸ ಭಾವ ಮೂಡಿಸಿ, ಅವನಲ್ಲಿ ಪಲ್ಲವಿಯನ್ನು ಮದುವೆ ಮಾಡಿಕೊಳ್ತೀಯಾ ಎಂದು ಕೇಳುವ ಧೈರ್ಯವನ್ನು ಕೂಡಿಸಿಕೊಡುತ್ತದೆ. ನಿರಂಜನನೂ ಇತರ ಮನುಷ್ಯರಂತೆ ಜೀವನ ನಡೆಸಬಲ್ಲವನಾಗುವುದು ಕಾದಂಬರಿ ಹುಟ್ಟಿಸುವ ಭರವಸೆ. ಇಂತಹ ಪ್ರಯತ್ನಗಳಿಗೆ ಓದುಗರ ಸ್ವಾಗತ ಇರಲಿ.?