ಮನೆಗಳ ಮೇಲೆ ಬಂದು ಹಳೇ ಜರತಾರಿ ಸೀರೆ ಇತ್ಯಾದಿ ವಸ್ತುಗಳನ್ನು ಖರೀದಿಸುವ ವ್ಯಾಪಾರಿಗಳ ಬಾಯಿಂದ ‘ಹಳೇ ಬಾಗೀನಾ ಕಂಬೀ’ ಎಂಬ ಕೂಗು ಈಗ್ಗೆ ಕೆಲವು ವರ್ಷಗಳ ಹಿಂದೆ ದಿನಾ ಕಿವಿಗೆ ಬೀಳುತ್ತಿತ್ತು. ಕಾಲ ಸರಿದಂತೆ ಆ ಕೂಗು ನಿಂತುಹೋಗಿ, ‘ಹಳೇ ಪೇಪರ್, ಖಾಲಿ ಶೀಷಾಯ್’ ಎಂಬ ವಾಣಿ ಕಿವಿಗೆ ಬೀಳುತ್ತಿತ್ತು.
ಮುಂದೆ ಆ ಕೂಗು ಕೂಡ ಹಿಂದಕ್ಕೆ ಬಿದ್ದು ಈಗೊಮ್ಮೆ, ಆಗೊಮ್ಮೆ ‘ಹಳೇ ಕಬ್ಬಿಣ’ ಎಂಬ ಸ್ವರ ಕೇಳಿಬರುತ್ತಿತ್ತು. ಈಗ ಹಳೇ ಎಂಬ ಮಾತೇ ಇಲ್ಲ! ಈ ಹಳೇ ಎಂಬ ಶಬ್ದ ನನ್ನನ್ನು ಈ ಪಾಟಿ ಕಾಡತೊಡಗಿದ್ದಾದರೂ ಏಕೆ? ಅದಕ್ಕೆ ಕಾರಣ ನಮ್ಮ ಮನೆಯಲ್ಲಿ ಈ ಹೊತ್ತಿಗೂ ಇರುವ `ಸಟೀಕ ವ್ರತವಲ್ಲಿ’ ಎನ್ನುವ ಹೆಸರಿನ ಒಂದು ಹಳೆಯ ಪುಸ್ತಕ. ಗಣೇಶ, ವರಮಹಾಲಕ್ಷ್ಮೀ, ಋಷಿಪಂಚಮಿ, ಅನಂತಪದ್ಮನಾಭ ಮೊದಲಾದ ವ್ರತಗಳನ್ನು ಆಚರಿಸುವ ಕ್ರಮಕಟ್ಟಳೆಗಳನ್ನು ಮಂತ್ರ ಹಾಗೂ ತಾತ್ಪರ್ಯಸಹಿತ ವಿಶದಪಡಿಸುವ ‘ವ್ರತವಲ್ಲಿ’ ೧೯೩೬ರಲ್ಲಿ ಅಚ್ಚಾಗಿದೆ. ಮೊದಲೇ ಮಾಸಲುಬಣ್ಣದ ಕಾಗದದ ಮೇಲೆ ಅಚ್ಚಾಗಿದ್ದ, ೭೭ ವರ್ಷ ವಯಸ್ಸಿನ ಈ ಪುಸ್ತಕದ ಹಾಳೆಗಳು ಅರಿಶಿನ ಹಳದಿ ಬಣ್ಣಕ್ಕೆ ತಿರುಗಿಬಿಟ್ಟಿವೆ; ಅಷ್ಟೇ ಅಲ್ಲ, ಎಲ್ಲಿ ಮುಟ್ಟಿದರೆ ಅಲ್ಲಿ ಕಾಗದ ಚೂರುಚೂರಾಗಿ ಹರಿದುಕೊಳ್ಳುತ್ತದೆ. ಈ ಕೃತಿಯನ್ನು ಮೊದಲು ನನ್ನ ಅಜ್ಜ ಹಬ್ಬ ಹರಿದಿನಗಳಂದು ಬಳಸುತ್ತಿದ್ದರು. ಆ ಬಳಿಕ ಅದನ್ನು ಉಪಯೋಗಿಸುವ ಹಕ್ಕು ಪಾರಂಪರಿಕವಾಗಿ ನನ್ನ ತಂದೆಗೆ ಬಂತು. ಈಗ ಅದನ್ನು ಉಪಯೋಗಿಸುವ ಹಕ್ಕು ನನಗೆ ಪ್ರಾಪ್ತವಾಗಿದೆ. ನನಗೆ ಯಾವುದೇ ಹಳೆಯ ವಸ್ತುಗಳ ಮೇಲೆ ಅತೀವ ಮೋಹ. ಹಳೆಯ ಪುಸ್ತಕಗಳು ಎಂದುಬಿಟ್ಟರಂತೂ ಪ್ರಾಣವನ್ನಾದರೂ ಕೊಟ್ಟೇನು. ಹಾಗಾಗಿ ಹಳೆಯ ಪುಸ್ತಕಗಳನ್ನು ಎಸೆಯಲು ಅಥವಾ ಯಾರಿಗಾದರೂ ಕೊಡಲು ಮನಸ್ಸು ಒಪ್ಪುವುದಿಲ್ಲ; ಇಟ್ಟುಕೊಂಡು ಸುಖಪಡುವುದೂ ಆಗುವುದಿಲ್ಲ. ಹಳೆಯ ವಸ್ತುಗಳನ್ನು ಜೋಪಾನವಾಗಿ ಕಾಪಾಡಿಟ್ಟುಕೊಳ್ಳುವುದು ಕಷ್ಟವಾಗಿದೆ. ಅದಕ್ಕೇ ಇರಬೇಕು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಹಳೇ ವಸ್ತುಗಳ ಮೇಲೆ ಒಂದು ಪದ್ಯವನ್ನೇ ಬರೆದುಬಿಟ್ಟರು-
‘ಖಾಲಿ ಶೀಷಾಯ್, ಹಳೇ ಪೇಪರ್’
ಕೂಗೋ ಮರಿ ಆತನ
ಈ ಮನೆಯಲಿ ಬಹಳ ಉಂಟು
ಅಂಥ ವಸ್ತು ಪುರಾತನ!
ಪುಸ್ತಕಗಳ ಮಾತು ಬಂತಲ್ಲ. ಅವುಗಳ ಜೊತೆ ನನಗಿರುವ ನಂಟು ಹೇಗೆ ಬೆಳೆಯಿತೆಂಬ ವೃತ್ತಾಂತವನ್ನಿಲ್ಲಿ ಹೇಳಬೇಕಾಗಿದೆ. ನಮ್ಮ ಮನೆಯಲ್ಲಿ ನನಗೆ ಇಬ್ಬರು ಅಜ್ಜಿಯರಿದ್ದರು. ಒಬ್ಬ ಅಜ್ಜಿ ನನ್ನ ತಾಯಿಯ ತಾಯಿ. ಈಕೆ ಮನೆತಪ್ಪಿದ್ದ ಮಡಿ ಹೆಂಗಸು. ಇನ್ನೊಬ್ಬ ಅಜ್ಜಿ ತಂದೆಯ ತಾಯಿ. ಮುತ್ತೈದೆ. ಇಬ್ಬರು ಅಜ್ಜಿಯರಿಗೂ ಪುಸ್ತಕಗಳನ್ನು ಓದಿಸಿ ಕೇಳುವುದರಲ್ಲಿ ಅಪರಿಮಿತ ಆಸಕ್ತಿಯಿತ್ತು. ಅವರ ಈ ಕಥಾಶ್ರವಣದಲ್ಲಿ ಕಾಲಕ್ಷೇಪ ಮಾಡುವ ಆಸಕ್ತಿಯನ್ನು ನಾನು ತಣಿಸಬೇಕಾಗಿತ್ತು. ನನ್ನ ಬಿಡುವಿನ ವೇಳೆಯಲ್ಲಿ ನಾನು ಈ ಇಬ್ಬರು ಅಜ್ಜಿಯರಿಗೆ ಏನನ್ನಾದರೂ ಓದಬೇಕಾಗಿತ್ತು. ಇಬ್ಬರು ಅಜ್ಜಮ್ಮಂದಿರಿಗೂ ಪುರಾಣ ಪುಣ್ಯಕಥೆಗಳಲ್ಲಿ ಹೇಳಿಕೊಳ್ಳುವಂಥ ಒಲವಿರಲಿಲ್ಲ. ಅವರಿಗೆ ಬೇಕಾಗಿದ್ದುದು ಆ ಕಾಲಕ್ಕ್ಕೆ ನವೀನವೆಂದು ಹೆಸರು ಪಡೆದಿದ್ದ ಕತೆ-ಕಾದಂಬರಿಗಳು. ನನಗೆ ನೆನಪಿರುವ ಮಟ್ಟಿಗೆ, ಈ ಇಬ್ಬರಿಗೆ ನಾನು ಓದಿದ ಮೊದಲ ಪುಸ್ತಕ ಗೊರೂರು ರಾಮಸ್ವಾಮಿ ಅಯ್ಯಂಗಾರ್ಯರ ‘ಹಳ್ಳಿಯ ಚಿತ್ರಗಳು’ ಪುಸ್ತಕ. ನಾನು ಹಳ್ಳಿಯ ಚಿತ್ರಗಳನ್ನು ಓದುತ್ತಿದ್ದಂತೆ ವಯಸ್ಸಾಗಿದ್ದ ಇಬ್ಬರು ಅಜ್ಜಿಯರೂ ಸೂರು ಹಾರಿಹೋಗುವ ಹಾಗೆ ನಕ್ಕದ್ದು ನನಗಿನ್ನೂ ನೆನಪಿನಲ್ಲಿದೆ, ಹಳ್ಳಿಯ ಚಿತ್ರಗಳ ತರುವಾಯ ನನ್ನ ಅಜ್ಜಿಯರಿಗೆ ನಾನು ಓದಿದ್ದು ಅನಕೃ ಕಾದಂಬರಿ ‘ಕಣ್ಣೀರು’. ಈ ಕಾದಂಬರಿಯನ್ನು ನಾನವರಿಗೆ ಓದಿದ್ದರ ಫಲವಾಗಿ ನನ್ನ ಅಜ್ಜಿಯರು ಕಣ್ಣೀರ್ಗರೆದಿದ್ದು ಹಾಗಿರಲಿ ನನ್ನ ಅಳುವೇ ಪುಸ್ತಕವನ್ನೆಲ್ಲ ತೋಯ್ಸಿಬಿಟ್ಟಿತ್ತು! ನನ್ನ ಅಜ್ಜಿಯರು ‘ಗೊಳೋ’ ಅಂತ ಅಳುತ್ತಿದ್ದುದನ್ನು ಕೇಳಿ ನಮ್ಮ ಪಕ್ಕದ ಮನೆಯ ಸೋನಾಬಾಯಿ ಏನಾಯಿತೋ ಎಂದು ಗಡಿಬಿಡಿಯಿಂದ ಓಡಿ ಬಂದಿದ್ದರು.
ಇನ್ನೊಂದು ಮಾತು
ಇಲ್ಲಿ ಇನ್ನೊಂದು ಮಾತನ್ನು ಸೇರಿಸಬೇಕು. ಆ ಕಾಲದ (೧೯೪೦ರ ಆಜೂಬಾಜು) ಎಫ್.ಎ. ಓದಿದ್ದ ನನ್ನ ತಂದೆಗೆ ಓದಿನ ಗೀಳು ತುಂಬ ಇತ್ತು. ಆ ದಿನಗಳಲ್ಲೇ ಅವರು ಸುಮಾರು ಇನ್ನೂರರಷ್ಟು ಪುಸ್ತಕಗಳನ್ನು ಸಂಗ್ರಹಿಸಿದ್ದರು. ಅಂದಿನ ದಿನಗಳ ಪ್ರಖ್ಯಾತರ ಲೇಖಕರ ಕನ್ನಡ ಕೃತಿಗಳೂ, ಚಾರ್ಲ್ಸ್ ಡಿಕೆನ್ಸ್ನ ‘ಪಿಕ್ವಿಕ್ ಪೇಪರ್ಸ್’, ಗೋಲ್ಡ್ಸ್ಮಿತ್ನ ‘ವಿಕಾರ್ ಆಫ್ ವೇಕ್ಫೀಲ್ಡ್’ ಹಾಗೂ ಅಲೆಕ್ಸಾಂಡರ್ ಡ್ಲ್ಯೂಮಾನ ನಾಲ್ಕಾರು ಕೃತಿಗಳು ನನ್ನ ತಂದೆಯ ಸಂಗ್ರಹದಲ್ಲಿದ್ದವು. ನಮ್ಮ ತಂದೆ ಕೆಲಕಾಲ ಪತ್ರಿಕೆಯೊಂದರ ಬಾತ್ಮೀದಾರರಾಗಿಯೂ ಕೆಲಸ ಮಾಡಿದ್ದರಾಗಿ ನಮ್ಮ ಮನೆಯಲ್ಲಿ ವಿಖ್ಯಾತ ಪತ್ರಿಕೆಗಳ ವಿಶೇಷ ಸಂಚಿಕೆಗಳೂ ಹೇರಳವಾಗಿದ್ದವು. ನಮ್ಮಪ್ಪ ತಮ್ಮ ಸಂಗ್ರಹದ ಪುಸ್ತಕಗಳನ್ನೆಲ್ಲ ಒಂದು ಜಾಕಾಯಿ ಪೆಟ್ಟಿಗೆಯಲ್ಲಿ ಜೋಡಿಸಿಟ್ಟಿದ್ದರು. ಪೆಟ್ಟಿಗೆ ತೆಗೆದು ಬೇಕಾದ ಪುಸ್ತಕವನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ನನಗೆ ಕೊಟ್ಟಿದ್ದರು.
ನನಗೆ ಪುಸ್ತಕಗಳಲ್ಲಿ ಮೋಹ ಹುಟ್ಟಲು ಪಾಯಶಃ ಮೇಲಿನ ಎರಡು ಸಂಗತಿಗಳು ಪ್ರಧಾನ ಕಾರಣಗಳಾಗಿರಬೇಕು. ಪುಸ್ತಕಗಳ ಗಲಾಟೆಯಲ್ಲಿ ‘ಹಳೆಯ’ ಎಂಬ ಗುಣವಾಚಕ ಶಬ್ದ ಹೇಗೋ ಬಂದು ಸೇರಿಕೊಂಡುಬಿಟ್ಟಿದ್ದು ಆಕಸ್ಮಿಕವಿರಲಾರದು. ಒಂದು ದೃಷ್ಟಿಯಲ್ಲಿ ‘ಹಳೆಯ’ ಎಂಬ ಪದ ಸೇರಿಕೊಂಡಿದ್ದು ಸಕಾರಣವಾಗಿಯೇ ಇದೆ. ಯಾಕೆಂದರೆ ಇವೊತ್ತಿನ ಪುಸ್ತಕ ನಾಳೆಗೆ ಹಳೆಯದು. ನಾಳೆಯ ಪುಸ್ತಕ ನಾಡಿದ್ದಿಗೆ ಹಳೆಯದು. ಇದೇ ತರ್ಕ ಅನ್ವಯಿಸಿ ನೋಡಿದರೆ ಐವತ್ತು ವರ್ಷಗಳ ಹಿಂದಿನ ಪುಸ್ತಕ ಪುರಾತನ ಕಾಲದವೇ ಆಗಿಬಿಡುತ್ತವೆ.
‘ಇರೋ ಇನ್ನೂರೊ ಮುನ್ನೂರೊ ಹಳೆಪುಸ್ತಕಗಳ ಬಗೆಗೆ ತಲೆಕೆಡಿಸಿಕೊಂಡು ಇಷ್ಟೆಲ್ಲ ಮಾತಾಡುತ್ತೀರಲ್ಲ, ಸಾವಿರಗಟ್ಟಲೆ ಪುಸ್ತಕಗಳನ್ನು ಸಂಗ್ರಹಿಸಿದ್ದದ್ದೇ ಅಲ್ಲದೇ ಅವುಗಳನ್ನು ಓದಿ ಜೀರ್ಣಿಸಿಕೊಂಡೂ ಇದ್ದವರ ಕುರಿತು ಏನು ಹೇಳುತ್ತೀರಿ?’ ಎಂಬ ಪ್ರಶ್ನೆ ಬರಬಹುದು.
ಜಾಣರ ಹುಚ್ಚು
ಹೇಳುವುದೇನು? ಎಂಟು, ಹತ್ತು, ಹನ್ನೆರಡು ಸಾವಿರ ಪುಸ್ತಕಗಳನ್ನು ಸಂಗ್ರಹಿಸಿದ್ದ ಉದ್ದಾಮ ಸಾಹಿತಿಗಳನ್ನು ನಾನೇ ನೋಡಿದ್ದೆ. ಪ್ರಸಿದ್ಧ ಕಾದಂಬರಿಕಾರ ಅನಕೃ ಅವರ ಸಂಗ್ರಹದಲ್ಲಿ ಎಂಟು ಸಾವಿರ ಪುಸ್ತಕಗಳಿದ್ದುವಂತೆ, ದಿವಂಗತ ವಿ. ಸೀತಾರಾಮಯ್ಯನವರು ಆರು ಸಾವಿರಕ್ಕೂ ಮೀರಿದ ಸಂಖ್ಯೆಯ ಪುಸ್ತಕಗಳನ್ನು ಜಮಾಯಿಸಿಕೊಂಡಿದ್ದರಂತೆ. ನಾನು ತುಂಬ ಚೆನ್ನಾಗಿ ಬಲ್ಲ ಕನ್ನಡದ ಕಿಂಕರರೊಬ್ಬರ ಬಳಿ ಹದಿನಾರು ಸಾವಿರ ಪುಸ್ತಕಗಳಿವೆ ಎಂದರೆ ನಂಬುವಿರಾ? ಅವರು ಹತ್ತಿರ ಹತ್ತಿರ ಎಪ್ಪತ್ತಾರು ವರ್ಷ ವಯಸ್ಸಿನವರು. ನಾನೇನಾದರೂ ಅವರ ಹೆಸರನ್ನು ಪ್ರಕಟಿಸಿಬಿಟ್ಟರೆ ನೀವು ಹೋಗಿ ಪುಸ್ತಕಗಳಿಗಾಗಿ ಅವರನ್ನು ಪೀಡಿಸುತ್ತೀರಿ. ಆದರ್ದರಿಂದ ನಾನವರ ಹೆಸರನ್ನು ಹೇಳುವುದಿಲ್ಲ. ಹಾಗೆ ನೋಡಿದರೆ ಕೆಲವರ ಪುಸ್ತಕ ಸಂಗ್ರಹದ ಗೀಳನ್ನು ‘ಹುಚ್ಚು’ ಎಂದೇ ಕರೆದಬಿಡಬಹುದು. ಆದರೆ ಪುಸ್ತಕ ಸಂಗ್ರಹಕಾರರ ಈ ಹುಚ್ಚು ಅವರನ್ನು ಹುಚ್ಚರ ಆಸ್ಪತ್ರೆಗೆ ರವಾನಿಸುವುದಿಲ್ಲ. ಬದಲಿಗೆ ಜಾಣರ ಜೊತೆ ಜಾಗ ಗಿಟ್ಟಿಸಿಕೊಡುತ್ತದೆ!
ಪುಸ್ತಕ ಸಂಗ್ರಹ ಲಾಭ ತರುವ ಉದ್ಯಮ ಖಂಡಿತ ಅಲ್ಲ. ಗಮನಿಸಿ ನೋಡಿದರೆ, ಇದು ನಷ್ಟ ಉಂಟುಮಾಡುವ ವ್ಯಾಪಾರವೇ ಹೌದು. ಒಂದು ಪುಸ್ತಕವನ್ನು ಕೊಂಡದ್ದರ ಉದ್ದೇಶ ಈಡೇರಿದ ಮೇಲೆ, ಅದರಿಂದ ಪಡೆಯಬೇಕಿದ್ದ ಪ್ರಯೋಜನವನ್ನು ಪಡೆದಿದ್ದಾದ ಮೇಲೆ ಆ ಪುಸ್ತಕವನ್ನು ಏನು ಮಾಡಬೇಕು? ಸಾವಿರಗಟ್ಟಲೆ ಪುಸ್ತಕಗಳನ್ನು ಸಂಗ್ರಹಿಸಿದ್ದಾದ ಬಳಿಕ ಅವುಗಳ ಲಾಲನೆ-ಪಾಲನೆ ಸುಲಭದ ಮಾತೆ? ಪುಸ್ತಕಗಳಿಗೆ `ಸಿಲ್ವರ್ ಫಿಷ್’ ಎಂಬ ಹುಳುಗಳು ಮುತ್ತಿಕೊಳ್ಳದ ಹಾಗೆ, ಗ್ರಂಥಗಳನ್ನು ನುಸಿ ಹೊಡೆಯದ ಹಾಗೆ ನೋಡಿಕೊಳ್ಳುವುದು ಮಕ್ಕಳಿಗೆ ಕಾಯಿಲೆ ಬರದಂತೆ ತಡೆಗಟ್ಟುವುದರಷ್ಟೇ ಕಷ್ಟದ ಕೆಲಸ. ಮನೆಯಲ್ಲಿ ಹಳೆಯ ಪುಸ್ತಕಗಳನ್ನು ಸಂಗ್ರಹಿಸಿಕೊಂಡಿರುವವರ ಬಗೆಗೆ ಬೇಕಾದರೆ ಒಂದು ಫಾರ್ಮುಲಾನ್ನು ಕೂಡ ರೂಪಿಸಿಬಿಡಬಹುದು, ಆ ಫಾರ್ಮುಲಾ ಹೀಗಿರುತ್ತದೆ: `ಎಸೆಯಲು ಇಷ್ಟವಿಲ್ಲ; ಬೇರೆಯವರಿಗೆ ಕೊಡಲು ಮನಸ್ಸಿಲ್ಲ; ನಮ್ಮ ಬಳಿಯೇ ಉಳಿಸಿಕೊಂಡು ಏಗುವುದು ಆಗದ ಕೆಲಸ.’ ಅದರಲ್ಲಿಯೂ ಕೆಲವರು ಮನಸ್ಸನ್ನು ಗಟ್ಟಿ ಮಾಡಿಕೊಂಡು ತಾವು ಸಂಗ್ರಹಿಸಿದ ಪುಸ್ತಕಗಳನ್ನು ಯಾವುದಾದರೂ ಶಾಲೆಗೋ ಕಾಲೇಜಿಗೋ ದಾನವಾಗಿ ಕೊಟ್ಟುಬಿಡುತ್ತಾರೆ. ಮತ್ತೆ ಕೆಲವರು ತಮ್ಮಲ್ಲಿನ ಪುಸ್ತಕಗಳನ್ನು ದೊಡ್ಡದೊಡ್ಡ ಲೈಬ್ರರಿಗಳಿಗೆ ಧರ್ಮಾರ್ಥವಾಗಿ ನೀಡುತ್ತಾರೆ. ಹೀಗೆ ಶಾಲೆ ಕಾಲೇಜು ಹಾಗೂ ಲೈಬ್ರರಿಗಳಿಗೆ ಪುಸ್ತಕದಾನ ಮಾಡುವ ಕಾಯಕದ ಹಿಂದಿನ ಸದುದ್ದೇಶ ಪ್ರಶಂಸಾರ್ಹವೇ ಆದರೂ ಪುಸ್ತಕಗಳ ಪಾಡು ಮಾತ್ರ ಅದೇ ಧೂಳು ಮೈಗೆ ಹತ್ತಿಸಿಕೊಂಡು ಕುಳಿತಿರುವುದು; ಕುಳಿತಲ್ಲಿಂದಲೇ ಮುಗ್ಗಲು ವಾಸನೆ ಬೀರುತ್ತಿರುವುದು; ಬೇಕಾದ ಪುಸ್ತಕ ಬೇಕಾದವರ ಕೈಗೆ ಸಿಗದ ಹಾಗೆ ಅಡಗಿ ಕುಳಿತಿರುವುದು.
ಇಷ್ಟರ ಮೇಲೆ ಲೈಬ್ರರಿಗಳಿಗೆ ದೊಡ್ಡದೊಡ್ಡ ಸಾಹಿತ್ಯಕ-ಸಂಶೋಧಕ ಸಂಸೆಗಳಿಗೆ ಪುಸ್ತಕಗಳನ್ನು ದಾನವಾಗಿ ಕೊಡುವುದು ಸರಳ ಕ್ರಿಯೆಯಾಗಿ ಉಳಿದಿಲ್ಲ. ಈಗಿತ್ತಲಾಗಿ ಅಂಥ ಸಂಸ್ಥೆಗಳು ಪುಸ್ತಕಗಳನ್ನು ದಾನವಾಗಿ ಸ್ವೀಕರಿಸಲು ಹಿಂದುಮುಂದು ನೋಡುತ್ತಾರೆ. ನೀವು ಕೊಡುವ ಪುಸ್ತಕಗಳನ್ನು ಇಡಲಿಕ್ಕೆ ಸೂಕ್ತ ರೀತಿಯ ಅಲಮಾರುಗಳನ್ನು ಕೊಡಿ. ನಮ್ಮ ಸಂಸ್ಥೆಗೆ ನಾಲ್ಕು ಕುರ್ಚಿಗಳನ್ನೊ, ಮೇಜುಗಳನ್ನೊ ಕೊಡಿಸಿ ಅಂತ ಡಿಮ್ಯಾಂಡು ಮುಂದಿಡುತ್ತಾರೆ, ನಯವಾಗಿ.
ನನಗೆ ಚೆನ್ನಾಗಿಯೆ ಪರಿಚಯವಿದ್ದ ಸ್ನೇಹಿತರೊಬ್ಬರು ಅಂದಾಜು ಐನೂರು ಆರುನೂರು ಪುಸ್ತಕಗಳನ್ನು ಜಮಾಯಿಸಿದ್ದರು. ಅವರು ತೀವ್ರತರಹದ ಕಾಯಿಲೆಯೊಂದಕ್ಕೆ ತುತ್ತಾಗಿ ಕೊನೆಗೆ ಹೇಗೋ ಬದುಕಿಬಂದರು. ಅವರು ಚೇತರಿಸಿಕೊಂಡ ಕೂಡಲೇ ಅವರಿಗೆ ತಮ್ಮಲ್ಲಿದ್ದ ಪುಸ್ತಕಗಳ ಬಗೆಗೆ ಚಿಂತೆ ಹತ್ತಿತ್ತು. ಅವರ ಮನೆಯಲ್ಲಿ ಅವರನ್ನು ಬಿಟ್ಟರೆ ಬೇರೆ ಯಾರೂ ಪುಸ್ತಕಭಕ್ತರಿರಲಿಲ್ಲ. ತಮ್ಮ ಜೀವಿತಾವಧಿಯಲ್ಲಿಯೇ ತಮ್ಮ ಸಂಗ್ರಹದ ಪುಸ್ತಕಗಳನ್ನು ಒಂದು ಸಂಶೋಧನ ಸಂಸ್ಥೆಗೆ ಸಮರ್ಪಣೆ ಮಾಡಲು ನಿರ್ಧರಿಸಿ, ಪುಸ್ತಕಗಳನ್ನೆಲ್ಲಾ ರಟ್ಟಿನ ಪೆಟ್ಟಿಗೆಯಲ್ಲಿಟ್ಟು ಪ್ಯಾಕ್ ಮಾಡಿ ಸದರಿ ಸಂಶೋಧನ ಮಂದಿರಕ್ಕೆ ಒಯ್ದರು. ಸಂಸ್ಥೆಯ ಮುಖ್ಯಸ್ಥರು ನನ್ನ ಸ್ನೇಹಿತರ ಮುಖ ನೋಡಿ, ಒಂದು ಬಗೆಯ ಕುಹಕದ ಧ್ವನಿಯಲ್ಲಿ, ‘ಏನು ಸಾರ್, ಮನೆ ಬದಲಾಯಿಸ್ತಿದೀರೇನು?’ ಎಂದು ಪ್ರಶ್ನಿಸಿದರಂತೆ. ಅವರ ಪ್ರಕಾರ ಪುಸ್ತಕಗಳು ಮನೆ ಕ್ಲೀನ್ ಮಾಡುವಾಗ ಬಿಸಾಡುವಂಥ ನಿರುಪಯೋಗಿವಸ್ತುಗಳು!
ಈಗ್ಗೆ ಏಳೆಂಟು ವರ್ಷಗಳ ಹಿಂದೆ ಕನ್ನಡದ ಪ್ರಸಿದ್ಧ ವಿಮರ್ಶಕರೊಬ್ಬರು ತೀರಿಕೊಂಡರು. ಅವರ ಸ್ವಂತದ ಪುಸ್ತಕಸಂಗ್ರಹದಲ್ಲಿ ಕನ್ನಡದ್ದೇ ಅಲ್ಲದೆ ಇಂಗ್ಲಿಷ್ ಭಾಷೆಯ ಸಾವಿರಕ್ಕೂ ಹೆಚ್ಚು ಅತ್ಯುತ್ಕೃಷ್ಟ ಪುಸ್ತಕಗಳಿದ್ದವು. ಆ ಪುಸ್ತಕಗಳನ್ನು ಆ ವಿಮರ್ಶಕರ ಮನೆಯವರು ಪ್ರಸಿದ್ಧ ಸಾರ್ವಜನಿಕ ಸಂಸ್ಥೆಯೊಂದಕ್ಕೆ ಕೊಡಲು ಹೋದಾಗ ಅಲ್ಲಿನ ಜನ, ‘ನೀವು ಕೊಡಲು ತಂದಿರುವ ಪುಸ್ತಕಗಳು ಈಗಾಗಲೇ ನಮ್ಮ ಬಳಿ ಇವೆ. ಸುಮ್ಮನೆ ಡೂಪ್ಲಿಕೇಟ್ ಆಗುತ್ತೆ’ ಎಂದು ಕೈಜಾಡಿಸಿಬಿಟ್ಟರು. ಪುಸ್ತಕಗಳನ್ನು ವಿಲೇವಾರಿ ಮಾಡಲು ವಿಮರ್ಶಕರ ಮನೆಯವರು ತುಂಬ ಕಷ್ಟಪಟ್ಟರೆಂದು ತಿಳಿಯಿತು (ಪುಸ್ತಕಗಳನ್ನು ಮನೆಯ ವರಾಂಡದಲ್ಲಿಟ್ಟು ‘ಯಾರು ಯಾವ ಪುಸ್ತಕವನ್ನಾದರೂ ಒಯ್ಯಿರಿ’ ಎಂದು ಬೋರ್ಡು ಹಾಕಿದ್ದರೆಂದು ಪ್ರತೀತಿ).
ಕಿಲಾಡಿ ಕೂಟ
ನೀವು ಕೊಂಡ ಪುಸ್ತಕಗಳನ್ನು ಮನೆಯಲ್ಲಿಟ್ಟುಕೊಳ್ಳಲು ಆಗುತ್ತಿಲ್ಲ. ಲೈಬ್ರರಿಗಳಿಗೆ ಕೊಡುವ ಮನಸ್ಸಿಲ್ಲ. ಹಾಗಾದರೆ ಆ ಪುಸ್ತಕಗಳನ್ನು ಏನು ಮಾಡಬೇಕು? ಒಂದು ಉಪಾಯವೆಂದರೆ ಅವುಗಳನ್ನು ಹಳೇ ಪುಸ್ತಕಗಳನ್ನು ಕೊಂಡು ಮಾರುವ ವರ್ತಕರಿಗೆ ಮಾರಿಬಿಡುವುದು. ಹಳೇ ಪುಸ್ತಕಗಳನ್ನು ಕೊಂಡು ಮಾರುವ ಅಂಗಡಿಗಳು ಪ್ರತಿನಗರದಲ್ಲೂ ನಿರ್ದಿಷ್ಟ ಸ್ಥಳಗಳಲ್ಲಿರುತ್ತವೆ. ಬೆಂಗಳೂರಿನ ಬಳೇಪೇಟೆ, ಅವೆನ್ಯೂ ರಸ್ತೆ, ಮಹಾತ್ಮಗಾಂಧಿ ರೋಡ್ ಹಳೆ ಪುಸ್ತಕಗಳನ್ನು ಕೊಂಡು ಮಾರುವ ಅಂಗಡಿಗಳಿಗೆ ಹೆಸರುವಾಸಿ. ಈ ಅಂಗಡಿಗಳವರದೇ ಕಿಲಾಡಿ ಜನಗಳ ಒಂದು ಕೂಟ. ಇವರಲ್ಲಿ ಸಾದಾ ಸೀದಾ ವ್ಯವಹಾರವೇ ಗೈರುಹಾಜರಾಗಿರುತ್ತದೆ. ಕಿಲಾಡಿ ಜನಗಳ ಈ ಅಂಗಡಿಗಳಲ್ಲಿ ಬಹುತೇಕ ಕಡೆ ನಡೆಯುವುದು ದಗಲ್ಬಾಜಿ ವ್ಯಾಪಾರ; ಧೂರ್ತತನದ ವ್ಯವಹಾರ. ನೀವು ಹಳೆಯ ಪುಸ್ತಕದ ಅಂಗಡಿಯ ವರ್ತಕನಿಗೆ ಮಾರಲು ಹತ್ತು ರೂಪಾಯಿ ಮೌಲ್ಯದ ಪುಸ್ತಕವನ್ನು ಒಯ್ದಿದ್ದೀರಿ ಎಂದಿಟ್ಟುಕೊಳ್ಳುವಾ. ಅವನು ಅದಕ್ಕೆ ಕಟ್ಟುವ ಬೆಲೆ ಹೆಚ್ಚೆಂದರೆ ಎರಡು ರೂಪಾಯಿ. “ಇಂಥ ಪುಸ್ತಕಗಳನ್ನೆಲ್ಲಾ ಈಗ ಯಾರು ಓದುತ್ತಾರೆ ಸಾರ್? ಎಂಬ ವಿಮರ್ಶೆ ಬೇರೆ ಅವನಿಂದ ಬರುತ್ತದೆ! ಆಯಿತಲ್ಲ. ನಿಮ್ಮಿಂದ ಎರಡು ರೂಪಾಯಿಗೆ ಕೊಂಡ ಪುಸ್ತಕವನ್ನು ಅವನು ಮಾರುವುದೆಷ್ಟಕ್ಕೆ ಗೊತ್ತೆ? ಇಪ್ಪತ್ತರಿಂದ ಮೂವತ್ತು ರೂಪಾಯಿಗಳಿಗೆ. ‘ಈಗ ಈ ಪುಸ್ತಕ ಮಾರ್ಕೆಟ್ನಲ್ಲೇ ಇಲ್ಲ’ ಎಂಬ ಪ್ರಶಸ್ತಿ ಅವನಿಂದ ಆ ಪುಸ್ತಕಕ್ಕೆ ಸಿಕ್ಕಿರುತ್ತದೆ! ಒಟ್ಟಿನಲ್ಲಿ ಹಳೇ ಪುಸ್ತಕಗಳು ಅಗ್ಗ ಅಲ್ಲ. ಹೀಗಿದ್ದೂ ಹಳೆ ಪುಸ್ತಕಗಳ ಷಾಪುಗಳಲ್ಲಿ ಬುಕ್ಕುಗಳು ಅಗ್ಗದ ದರದಲ್ಲಿ ಸಿಗುತ್ತದೆಂಬ ಭ್ರಮೆಯಿಂದ ಜನ ಆ ಅಂಗಡಿಗಳ ಎಡತಾಕುತ್ತಾರೆ.
ಪುಸ್ತಕಗಳನ್ನು ಬರೆಯುವುದು ಮುದ್ರಿಸುವುದು ಆದ ಮೇಲೆ ಅವು ಖರ್ಚಾಗದೆ ಅಟ್ಟದ ಮೇಲೆ ಕೂತಾಗ ಅವುಗಳನ್ನು ಸಗಟುದರದಲ್ಲಿ ರದ್ದಿಪೇಪರುಗಳ ಜೊತೆ ವ್ಯವಹರಿಸುವ ಅಂಗಡಿಗಳವರಿಗೆ ತೂಕದ ಲೆಕ್ಕದಲ್ಲಿ ಮಾರುವುದು – ಎಂದರೆ ತೂಕಕ್ಕೆ ಹಾಕುವುದು – ಪುಸ್ತಕಗಳ ವಿಲೇವಾರಿಗೆ ಇರುವ ಇನ್ನೊಂದು ವಿಧಾನ. ವಿಲೇವಾರಿ ವಿಧಾನವನ್ನು ಖರ್ಚಾಗದ ಹೊಸ ಪುಸ್ತಕಗಳಿಗಷ್ಟೇ ಅಲ್ಲದೆ ನಿಮ್ಮ ಸಂಗ್ರಹದಲ್ಲಿ ತುಂಬಿ ತುಳುಕುತ್ತಿರುವ ಹಳೆ ಪುಸ್ತಕಗಳಿಗೂ ಅನ್ವಯಿಸಲು ಬರುತ್ತದೆ. ಇದನ್ನೇ ದಿವಂಗತ ರಾಜರತ್ನಂ ‘ತೂಕದ ಸಾಹಿತ್ಯ’ ಎಂದು ಕರೆದದ್ದು.
ಪುಸ್ತಕಗಳನ್ನು ಕೊಳ್ಳುವ, ಕೊಂಡ ಮೇಲೆ ಅವುಗಳನ್ನು ಸಾಕಿ ಸಲಹುವ ದಂಧೆಯಲ್ಲಿರುವ ಕಷ್ಟವನ್ನು ಊಹಿಸಿಯೇ ಇರಬೇಕು, ಕೆಲವು ಬುದ್ಧಿವಂತರು ಸರ್ಕ್ಯುಲೇಟಿಂಗ್ ಲೈಬ್ರರಿಗಳನ್ನು ತೆರೆದು ಕಾಸು ಮಾಡಿಕೊಂಡರು. ಇಲ್ಲಿನ ವ್ಯಾಪಾರ ‘ಕಾಸುಕೊಟ್ಟ, ಭಂಗಿಸುಟ್ಟ’ ಎಂಬ ರೀತಿಯದು. ನೀವು ಸರ್ಕ್ಯುಲೇಟಿಂಗ್ ಲೈಬ್ರರಿಗೆ ಹೋಗುತ್ತೀರಿ. ನಿಮಗೆ ಬೇಕಾದ ಒಂದೋ ಎರಡೋ ಪುಸ್ತಕಗಳನ್ನು ಆರಿಸಿಕೊಳ್ಳುತ್ತೀರಿ. ಅವುಗಳನ್ನು ಮೂರೋ ನಾಲ್ಕೋ ದಿನಗಳಲ್ಲಿ ಓದಿ ಪುನಃ ಲೈಬ್ರರಿಗೆ ಮರಳಿಸುತ್ತೀರಿ. ಒಂದು ಪುಸ್ತಕಕ್ಕೆ ಒಂದು ದಿನಕ್ಕೆ ಇಂತಿಷ್ಟು ಎಂದು ಫೀಸು ಕೊಟ್ಟುಬಿಟ್ಟರೆ ನಿಮ್ಮ ಕೆಲಸ ಮುಗಿಯಿತು. ಇದೇನೋ ಸಲೀಸಾದ ಉದ್ಯಮವೇ. ಆದರೂ ಅಷ್ಟೊಂದು ಪುಸ್ತಕಗಳನ್ನು ವ್ಯಾಪಾರಕ್ಕೆ ಹೂಡಿರುವ ಸರ್ಕ್ಯುಲೇಟಿಂಗ್ ಲೈಬ್ರರಿ ಮನುಷ್ಯ ಕೊನೆಯಲ್ಲಿ ‘ಈ ಪುಸ್ತಕಗಳಿಂದ ದುಡ್ಡು ಸಂಪಾದಿಸಿದ್ದೇನೋ ಆಯಿತು. ಈಗ ಇವುಗಳನ್ನೇನು ಮಾಡುವುದು?’ ಎಂಬ ಪೇಚಿಗೆ ಬಿದ್ದೇ ಬೀಳುತ್ತಾನೆ ಎಂದು ತೋರುತ್ತದೆ.
ನನ್ನ ಇನ್ನೊಬ್ಬ ಪುಸ್ತಕಪ್ರಿಯ ಮಿತ್ರರು ತಮ್ಮಲ್ಲಿದ್ದ ಸುಮಾರು ಮುನ್ನೂರು ಹಳೆಯ ಪುಸ್ತಕಗಳನ್ನು ರಟ್ಟಿನ ಡಬ್ಬಿಗಳಲ್ಲಿ ನೀಟಾಗಿ ಪ್ಯಾಕ್ ಮಾಡಿ, ಲೇಬಲ್ಲುಗಳನ್ನು ಅಂಟಿಸಿ ಒಂದು ಪ್ರಸಿದ್ಧ ಸಂಸ್ಥೆಯ ಪುಸ್ತಕ ಭಂಡಾರಕ್ಕೆ ಬಹು ಜರ್ಬಿನಿಂದ ದಾನ ಮಾಡಿದರು. ಪುಸ್ತಕಗಳನ್ನು ಸ್ವೀಕರಿಸಿದ ಸಂಸ್ಥೆಯವರು ನನ್ನ ಮಿತ್ರರಿಗೆ ಹೊಳಪು ಕಾಗದದಲ್ಲಿ ಟೈಪು ಮಾಡಿದ ಒಂದು ಸರ್ಟಿಫಿಕೇಟನ್ನು ಕೊಟ್ಟರು. ಇದೆಲ್ಲಾ ಆದ ಎರಡೋ ಮೂರೋ ತಿಂಗಳ ಮೇಲೆ ನನ್ನ ಮಿತ್ರರಿಗೆ ತಾವು ಲೈಬ್ರರಿಗೆ ಕೊಟ್ಟ ಪುಸ್ತಕಗಳು ಹೇಗೆ ಬಳಕೆಯಾಗತ್ತಿದೆಯೋ ನೋಡಬೇಕು ಎಂಬ ಕುತೂಹಲ ಹುಟ್ಟಿತು. ಅವರು ಲೈಬ್ರರಿಗೆ ಹೋಗಿ ನೋಡಿದಾಗ ಅವರಿಗೆ ದಿಗ್ಭ್ರಮೆ ಕಾದಿತ್ತು! ಲೈಬ್ರರಿಗೆ ಕೊಟ್ಟ ದಿನ ಪುಸ್ತಕಗಳ ಕಟ್ಟುಗಳು ಹೇಗಿದ್ದುವೋ ಇವರು ನೋಡ ಹೋದ ದಿನವೂ ಹಾಗೇ ಇದ್ದವು! ಲೈಬ್ರರಿಯ ಜನ ಪುಸ್ತಕದ ಕಟ್ಟುಗಳನ್ನು ಬಿಚ್ಚಿರಲೇ ಇಲ್ಲ.
ಅವಾಂತರಗಳ ನಡುವೆ
ಈ ಎಲ್ಲ ಅವಾಂತರಗಳ ನಡುವೆ ನಮ್ಮ ನಾಡಿನ ಕೆಲವು ಬರಹಗಾರರು ಆಗಾಗ ‘ಮನೆಗೊಂದು ಪುಸ್ತಕಭಂಡಾರ ಇರಬೇಕು’, ‘ಪುಸ್ತಕಗಳನ್ನು ಕೊಂಡು ಓದಿ; ಬರಹಗಾರರನ್ನು ಬದುಕಿಸಿ’ ಎಂಬಂಥ ಘೋಷಣೆಗಳನ್ನು ಉದುರಿಸುತ್ತಿರುತ್ತಾರೆ. ಸಾಹಿತ್ಯಸಂಬಂಧಿತ ಕಾರ್ಯಕ್ರಮಗಳಲ್ಲಿ ಗಣ್ಯರಿಗೆ ಹೂವಿನಹಾರಗಳಿಗೆ ಬದಲು ಪುಸ್ತಕಗಳನ್ನು ಕೊಡಬೇಕೆಂಬ ಇರಾದೆಯನ್ನು ಕೆಲಮಂದಿ ಸಾಹಿತಿಗಳು ಆಗಾಗ ಪ್ರಕಟಿಸುತ್ತಿರುತ್ತಾರೆ. ಪುಸ್ತಕ ಬರೆದು ಬದುಕಿದ ಸಾಹಿತಿಯ ವೃತ್ತಾಂತವನ್ನು ನಾವು ಈತನಕ ಕೇಳಿಲ್ಲ. ಅಲ್ಲದೆ ನಮ್ಮಲ್ಲಿ ಕೆಲವರು ಈ ಸಾಹಿತಿಯನ್ನು ‘ಸಾಯುತಿ’, ‘ಸಾಯಿತಿ’ ಎಂದು ಕೂಡ ಕರೆಯುವುದಿದೆ. ‘ಕನ್ನಡ ಪುಸ್ತಕಗಳನ್ನು ಕೊಂಡು ಓದಿ ಅಂತ ನಾವು ನಮ್ಮ ಜನಕ್ಕೆ ಕರೆಕೊಡುವುದು ಸಮಂಜಸವಾಗಿಯೇ ಇದೆ. ಏಕೆಂದರೆ ನಮ್ಮ ಮಕ್ಕಳನ್ನು ನಾವಲ್ಲದೆ ಇನ್ಯಾರು ಪ್ರೀತಿಸಬೇಕು?’ ಎಂದು ಪ್ರಸಿದ್ಧ ಕವಿ ಪು.ತಿ. ನರಸಿಂಹಾಚಾರ್ಯರು ಒಮ್ಮೆ ಅಂದಿದ್ದ ಮಾತು. ಆಗಾಗ ನೆನಪಿಗೆ ಬರುತ್ತಿರುತ್ತದೆ, ನನ್ನಂಥವರಿಗೆ.
‘ಪುಸ್ತಕಗಳನ್ನು ಕೇಳೋರೇ ಇಲ್ಲ ಎನ್ನುವುದು ನಿಮ್ಮ ಮಾತಿನ ಧ್ವನಿ ಇರುವ ಹಾಗಿದೆ. ಬೆಂಗಳೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಏಳು ಕೋಟಿ ರೂಪಾಯಿಗಳ ಬೆಲೆಯ ಪುಸ್ತಕಗಳು ಖರ್ಚಾದವಲ್ಲ. ಅದಕ್ಕೇನು ಹೇಳುತ್ತೀರಿ?’ ಎನ್ನಬಹುದು ನಿಮ್ಮಲ್ಲಿ ಕೆಲವರು. ಅಯ್ಯೋ ಭಗವಂತ! ಮತ್ತೆ ವಿಷಯ ಅಲ್ಲಿಗೇ ಬಂತಲ್ಲ. ನೀವು ಹೇಳುತ್ತಿರುವುದು ಹೊಸ ಪುಸ್ತಕಗಳ ವಿಷಯ; ನಾನಾಡುತ್ತಿರುವುದು ಹಳೆಯ ಪುಸ್ತಕಗಳ ಮಾತು.
ಅಲಂಕಾರ ವಸ್ತು
ಜಪಾನೀಯರು ಅಲಂಕಾರಪ್ರಿಯರಂತೆ. ಆ ದೇಶದ ಜನ ಪುಸ್ತಕಗಳನ್ನು ಅಲಂಕಾರದ ವಸ್ತುಗಳ ಸಾಲಿಗೆ ಸೇರಿಸುತ್ತಾರಂತೆ. ಪ್ರತಿ ಮನೆಯಲ್ಲೂ ಎಲ್ಲರಿಗೂ ಕಾಣುವಂತೆ ಷೋಕೇಸ್ನಲ್ಲಿ ಪುಸ್ತಕಗಳನ್ನು ಅಂದವಾಗಿ ಜೋಡಿಸಿಟ್ಟಿರುತ್ತಾರಂತೆ. ಇಷ್ಟರ ಮೇಲೆ ಪುಸ್ತಕಗಳ ಒಡೆಯ ಅವನ್ನು ಓದದಿದ್ದರೂ ಸೋಜಿಗವಿಲ್ಲವಂತೆ, ಪುಸ್ತಕಗಳ ಬಗ್ಗೆ ಏನೂ ತಿಳಿಯದ ಜಪಾನೀಯನ ಬಳಿ ಏನಿಲ್ಲವೆಂದರೂ ನೂರು ನೂರೈವತ್ತು ಪುಸ್ತಕಗಳಿರುತ್ತವಂತೆ. ಆದರೆ ಅವು ಅಲಂಕಾರಕ್ಕೆ ಮಾತ್ರ! ನಮ್ಮ ರಾಜರತ್ನಂ ಒಂದು ಕಡೆ ‘ಪುಸ್ತಕವಲ್ಲ ಪೂಜೆ’ ಎಂದು ಬರೆದರು. ನಿಜ. ದಸರಾ ಹಬ್ಬದಲ್ಲಿ ಬರುವ ಸರಸ್ವತೀ ಪೂಜೆಯ ದಿನ ಶಾಸ್ತ್ರಕ್ಕೆ ಪುಸ್ತಕ ಪೂಜೆ ನಡೆಯುತ್ತದೆ.
ಅಲಹಾಬಾದ್ನಲ್ಲಿರುವ ನೆಹರೂ ಕುಟುಂಬದ ಮನೆ ಆನಂದ ಭವನ, ದೆಹಲಿಯಲ್ಲಿರುವ ಇಂದಿರಾಗಾಂಧಿ ಮ್ಯೂಸಿಯಂ, ನಮ್ಮದೇ ಆದ ಗೋಖಲೆ ಸಾರ್ವಜನಿಕ ಸಂಸ್ಥೆ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಯಾವುದೇ ಸರಕಾರಿ ಸಾರ್ವಜನಿಕ ಗ್ರಂಥಾಲಯ – ಈ ಸ್ಥಳಗಳಲ್ಲಿ ಒಂದು ಮನೋಹರ ನೋಟ ಕಣ್ಣಿಗೆ ಬೀಳುತ್ತದೆ. ದೊಡ್ಡದೊಡ್ಡ ಗಾಜಿನ ಅಲಮಾರುಗಳಲ್ಲಿ ತಪಸ್ವಿಗಳಂತೆ ಮೌನವಾಗಿ ಕುಳಿತ ಸಹಸ್ರಗಟ್ಟಲೆ ಪುಸ್ತಕಗಳೇ ಆ ದೃಶ್ಯ. ಒಂದರ ಪಕ್ಕದಲ್ಲಿ ಒಂದು ಶಾಲಾ ಮಕ್ಕಳಂತೆ ಸಾಲಾಗಿ ಮಾತಿಲ್ಲದೆ ಕುಳಿತ ಆ ಪುಸ್ತಕಗಳನ್ನು ನೊಡಿದಾಗ ರಾಜರತ್ನಂ ಅವರ ಮಕ್ಕಳ ಪದ್ಯದ ಚರಣವೊಂದು ಜ್ಞಾಪಕಕ್ಕೆ ಬರುತ್ತದೆ:
‘ಅಡುಗೆಯ ಮನೆಯಲಿ ಗೋಡೆಯಲಿ
ತೂಗಿದ ಬಿದುರಿನ ಗೂಡೆಯಲಿ
ಸರಸರವಾಗಿದೆ ಕೋಡುಬಳೆ
ನೋಡುತ ಕುಳಿತಿದೆ ಗೋಡೆಮೊಳೆ….’
ಮೇಲಿನದು ಹಳೆಯ ಪುಸ್ತಕಗಳ ಹಾಡೂ ಆಗಬಹುದು.?