‘ಅಗ್ನಿಗರ್ಭದ ಪ್ರಸವ ವೇದನೆ’
ಬ್ರಿಟಿಷ್ ಆಡಳಿತದ ವಿರುದ್ಧ ನಡೆದ ಹೋರಾಟಗಳು ಹಲವು. ಪ್ರತಿಯೊಂದು ಹೋರಾಟವೂ ತನ್ನದೇ ಆದ ಮಹತ್ತ್ವವನ್ನು ಪಡೆದಿದೆ. 1930 ಏಪ್ರಿಲ್ 30ರಂದು ನಡೆದ ಚಿತ್ತಗಾಂವ್ ಶಸ್ತ್ರಾಗಾರ ಪ್ರಕರಣವು ಬ್ರಿಟಿಷರಲ್ಲಿ ತಲ್ಲಣವನ್ನು ಮೂಡಿಸಿತ್ತು. ಶಿಕ್ಷಕರಾಗಿದ್ದ ಸೂರ್ಯಸೇನ್ ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರನ್ನು ಒಗ್ಗೂಡಿಸಿದ್ದು, ಹೋರಾಡಿದ್ದು ಇತಿಹಾಸದ ಪುಟಗಳಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಚಿತ್ತಗಾಂವ್ ಶಸ್ತ್ರಾಗಾರದ ಮುಂದೆ ಸೇರಿದ ಹೋರಾಟಗಾರರು ರಾಷ್ಟ್ರಧ್ವಜವನ್ನು ಹಾರಿಸಿ ಚಿತ್ತಗಾಂವ್ ಸ್ವತಂತ್ರ ಎಂದು ಘೋಷಿಸಿದ್ದು ಸ್ವಾತಂತ್ರ್ಯ ಹೋರಾಟದ ಒಂದು ಮೈಲಿಗಲ್ಲು ಎನ್ನಬಹುದು.
ತರುಣರ ಪಡೆಯು ಬ್ರಿಟಿಷರ ಪ್ರಮುಖ ಆಯುಧ ಶಸ್ತ್ರಾಗಾರವನ್ನೇ ಸಂಪೂರ್ಣ ವಶಕ್ಕೆ ಪಡೆದುಕೊಂಡಿದ್ದು, ರಾಷ್ಟ್ರಧ್ವಜ ಹಾರಿಸಿದ್ದು ಬ್ರಿಟಿಷರಿಗಾದ ಬಹುದೊಡ್ಡ ಮುಖಭಂಗ; ಈ ಸುದ್ದಿಯು ಇಂಗ್ಲೆಂಡಿನವರೆಗೂ ತಲಪಿತ್ತು. ಅಲ್ಲದೆ, ಬಹಳ ಕೌಶಲವನ್ನು ಉಪಯೋಗಿಸಿದ ತರುಣ ಪಡೆಯು ಬ್ರಿಟಿಷರ ಸಂಪರ್ಕವ್ಯವಸ್ಥೆಯನ್ನೂ ಭಗ್ನಗೊಳಿಸಿತ್ತು. ರೈಲ್ವೇ, ಟೆಲಿಗ್ರಾಫ್, ಟೆಲಿಫೆÇೀನ್ ವ್ಯವಸ್ಥೆಗಳ ಮೇಲೂ ದಾಳಿ ನಡೆಸಿ ನಿಷ್ಕ್ರಿಯಗೊಳಿಸುವ ಮೂಲಕ ಹೊರಜಗತ್ತಿನೊಂದಿಗೆ ಸಂಪರ್ಕವನ್ನು ತಪ್ಪಿಸಿತ್ತು. ಕ್ರಾಂತಿಮಾರ್ಗವನ್ನು ಪ್ರಭಾವಿಯಾಗಿ ಕ್ರಮಿಸಿದ ಮತ್ತು ತನ್ನ ಜೊತೆಗಾರರನ್ನು ಸಮರ್ಥ ರೀತಿಯಲ್ಲಿ ಕೊಂಡೊಯ್ದ ಕೀರ್ತಿ ಸೂರ್ಯಸೇನ್ಗೆ ಸಲ್ಲುತ್ತದೆ.
ಈ ಲೇಖನಮಾಲೆಯಲ್ಲಿ ಲೇಖಕ ಬಿ.ಪಿ. ಪ್ರೇಮ್ಕುಮಾರ್ ಅವರು ಈ ಮಹತ್ತರ ಹೋರಾಟದ ಸವಿಸ್ತಾರ ನೋಟವನ್ನು ‘ಉತ್ಥಾನ’ದ ಓದುಗರಿಗೆ ನೀಡುತ್ತಿದ್ದಾರೆ.
“ಚಿತ್ತಗಾಂವ್ನಲ್ಲಿ ತೀವ್ರ ಸಶಸ್ತ್ರ ದಂಗೆ (.) ಶಸ್ತ್ರಾಗಾರಗಳ ಮೇಲೆ ದಾಳಿ (.) ಟೆಲಿಗ್ರಾಫ್ ತುಂಡರಿಸಲ್ಪಟ್ಟಿದೆ (.) ಮೆಶೀನ್ಗನ್ಗಳೊಂದಿಗೆ ಕನಿಷ್ಠ ಎರಡು ಕಂಪೆನಿ ಪಡೆಗಳನ್ನು ರವಾನಿಸಿ (.) ಗಂಭೀರ ಪರಿಸ್ಥಿತಿ (.) ಡಿಸ್ಟ್ರೇಟ್ ಚಿತ್ತಗಾಂವ್ ಲಂಗರು ಚಿತ್ತಗಾಂವ್ (.) ಅಂತ್ಯ”
1930ರ ಏಪ್ರಿಲ್ ಹದಿನೆಂಟರ ರಾತ್ರಿ. ಚಿತ್ತಗಾಂವ್ ಬಂದರಿನಲ್ಲಿ ಲಂಗರು ಹಾಕಿ ನಿಂತಿರುವ ‘ಹ್ಯಾಲಿಜೋನ್ಸ್’ (Halizones) ಎಂಬ ಹಡಗಿನಿಂದ ಅಲ್ಲಿನ ಜಿಲ್ಲಾ ದಂಡಾಧಿಕಾರಿ (ಟಿಪ್ಪಣಿ: ಡಿಸ್ಟ್ರೇಟ್ = ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್) ವಿಲ್ಕಿನ್ಸನ್ ಕೊಲ್ಕತಾಗೆ ಕಳುಹಿಸಿದ ಮೇಲ್ಕಂಡ ನಿಸ್ತಂತು ಸಂದೇಶ ಬಂಗಾಳದ ಬ್ರಿಟಿಷ್ ಸರಕಾರಕ್ಕೆ ವೈಶಾಖದ ಆಗಸದಲ್ಲಿ ಬರಸಿಡಿಲಿನಂತೆ ಎರಗಿದರೆ, ಬೇಸಿಗೆಯ ತಂಪಿನ ರಾಜಧಾನಿ ಶಿಮ್ಲಾದಲ್ಲಿದ್ದ ಕೇಂದ್ರಸರಕಾರವನ್ನು ಪತರಗುಟ್ಟುವಂತೆ ಮಾಡುತ್ತದೆ. ದೂರದ ಲಂಡನ್ನಿನಲ್ಲೂ ಇದರ ಪ್ರತಿಧ್ವನಿ ಕೇಳಿಬರುತ್ತದೆ.
ಅಂದು ಗುಡ್ ಫ್ರೈಡೇ! ‘ಶುಭ ಶುಕ್ರವಾರ’ ಕ್ರಿಸ್ತನನ್ನು ಶಿಲುಬೆಗೇರಿಸಿದ ದಿನ. ಸಾಮಾನ್ಯ ದಿನಗಳಂತೆ ಬ್ರಿಟಿಷರು ಕ್ಲಬ್ಗಳಲ್ಲಿ ಕುಡಿದು, ಮೋಜು-ಮಸ್ತಿಯಲ್ಲಿ ತೊಡಗುವ ಬದಲು ಶ್ರದ್ಧೆಯಿಂದ ಚರ್ಚುಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಭಗವಂತನನ್ನು ಸ್ತುತಿಸುವ ದಿನವದು. ಆದರೆ ಚಿತ್ತಗಾಂವ್ನ ಕ್ರೈಸ್ತರಿಗೆ ಅದು ‘ಗುಡ್’ ಆಗುವ ಬದಲು ಸಿಂಹಸ್ವಪ್ನದ ರಾತ್ರಿಯಾಗಿ ಪರಿಣಮಿಸುತ್ತದೆ. ಕಾರಣ? 14-16ರ ಅಪ್ರಾಪ್ತವಯಸ್ಸಿನ ಬಾಲಕರೂ ಸೇರಿದಂತೆ ಕೇವಲ 70 ಮಂದಿ ‘ಭಾರತೀಯ ಗಣತಂತ್ರ ಸೇನೆ’ ಎಂಬ ಹೆಸರಿನ (Indian Republican Army) ಹರಕು-ಮುರುಕು ಸಶಸ್ತ್ರ ಗುಂಪೆÇಂದು ‘ಮಾಸ್ತರ್ ದಾ’ ಎಂಬ ಸಾಮಾನ್ಯ ಉಪಾಧ್ಯಾಯನ ನೇತೃತ್ವದಲ್ಲಿ ಚಿತ್ತಗಾಂವ್ನ ಬ್ರಿಟಿಷ್ ಶಸ್ತ್ರಾಗಾರದೊಳಕ್ಕೆ ನುಗ್ಗಿ ಅದನ್ನು ದೋಚಿದ ದಿನ: ‘ಸೂರ್ಯಾಸ್ತವರಿಯದ’ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೆಡ್ಡುಹೊಡೆದು ನಿಂತ ದಿನ!
ಆ ರಾತ್ರಿಯ ನೀರವ ಮೌನವನ್ನು ಭೇದಿಸಿ ತುಪಾಕಿಗಳಿಂದ ಹಾರುತ್ತಿರುವ ಗುಂಡುಗಳ ಸದ್ದು ಕಿವಿಯನ್ನು ಅಪ್ಪಳಿಸುತ್ತಿದೆ. ಬಂಗಾಳ ಕೊಲ್ಲಿಯ ಸಮುದ್ರದ ನೀರು ಚಿತ್ತಗಾಂವ್ನ ತೀರದ ಬಂಡೆಗಳಿಗೆ ಬಡಿಯುತ್ತಿದೆ. ಸದ್ದು…. ಸದ್ದು…. 1916ರ ಡಬ್ಲಿನ್ ವಿದ್ರೋಹದ ಸದ್ದು? 1930ರಲ್ಲಿ ಚಿತ್ತಗಾಂವ್ನ ಬಂಡೆಗಳು ಪ್ರತಿಧ್ವನಿಸುತ್ತಿವೆ? ಗುಡ್ ಫ್ರೈಡೇ…. ಈಸ್ಟರ್ ಮಂಡೇ…. ಡಬ್ಲಿನ್? ಚಿತ್ತಗಾಂವ್? ಉತ್ತರ ಅಟ್ಲಾಂಟಿಕ್ ಸಾಗರದ ಅಲೆಗಳು ಥಳಿಸಿದ ಹದಿನಾಲ್ಕು ವರ್ಷಗಳ ಬಳಿಕ ಮತ್ತೆ ಅವೇ ಅಲೆಗಳು ದಕ್ಷಿಣ ಅಟ್ಲಾಂಟಿಕ್ ಸಾಗರವನ್ನು ದಾಟಿ, ಹಿಂದುಮಹಾಸಾಗರವನ್ನು ಕ್ರಮಿಸಿ ಹಿಂದೂಮಹಾಸಾಗರದ ಮೂಲೆಯ ಬಂಗಾಳಕೊಲ್ಲಿಯನ್ನು ತಲಪಿವೆ. – ಐದು ಸಾವಿರ ಮೈಲಿ ದೂರದ ಚಿತ್ತಗಾಂವ್ನ ಬಂಡೆಗಳನ್ನು ಬಡಿಯುತ್ತಲಿವೆ, . . ಸಾಮ್ರಾಜ್ಯವಾದಕ್ಕೆ ಸವಾಲನ್ನೆಸೆದಿವೆ! . .
ಡಬ್ಲಿನ್ ವಿದ್ರೋಹ
ಬ್ರಿಟಿಷ್ ಸಾಮ್ರಾಜ್ಯದ ಮಗ್ಗಲಿನಲ್ಲೇ ಇರುವುದು ಐರ್ಲೆಂಡ್ – ಅದೂ ಸಾಮ್ರಾಜ್ಯಶಾಹಿಯ ಮಗ್ಗಲ ಮುಳ್ಳಾಗಿ! ತನ್ನ ಸಾಮ್ರಾಜ್ಯದ ವಿಸ್ತಾರದಾಹದ ಹವಣಿಕೆಯಲ್ಲಿ ದೂರದೂರದ ಖಂಡ-ಉಪಖಂಡ, ದೇಶಗಳನ್ನೇ ಕಬಳಿಸಲು ಹೊರಟಿದ್ದ ಬ್ರಿಟನ್ ಪಕ್ಕದಲ್ಲೇ ಇರುವ ಐರ್ಲೆಂಡನ್ನು ಕ್ಷಾಮಡಾಮರಗಳ ದೇಶವನ್ನಾಗಿ ಉಳಿಸುವಲ್ಲಿ ಯಾವ ಕೊಸರನ್ನೂ ಬಿಡಲಿಲ್ಲ.
ಇಪ್ಪತ್ತನೆ ಶತಮಾನದ ಭಾರತ ಮತ್ತು ಐರ್ಲೆಂಡ್ನ ಸ್ವಾತಂತ್ರ್ಯ ಹೋರಾಟಗಳ ನಡುವೆ ಅನೇಕ ಸಾಮ್ಯಗಳನ್ನು ಕಾಣಬಹುದಾಗಿದೆ. ಮೊದಲ ಮಹಾಯುದ್ಧದ ಸಮಯದಲ್ಲಿ ಯುದ್ಧಾನಂತರ ಹೋಂ ರೂಲ್ ನೀಡಲಾಗುವುದೆಂಬ ಆಶಾವಾದದಿಂದ ಮಂದಗಾಮಿ ನಾಯಕರು ಇಂಗ್ಲೆಂಡಿನ ಯುದ್ಧಕ್ಕಾಗಿ ಸೇನೆಯಲ್ಲಿ ಭರ್ತಿಯಾಗುವಂತೆ ಐರಿಷ್ ಯುವಕರನ್ನು ಪ್ರೇರೇಪಿಸಿದರೆ ಪುರೋಗಾಮಿ ನಾಯಕರು ತಮ್ಮದೇ ಸ್ವಯಂಸೇವಕ ಸೇನೆಯನ್ನು ಕಟ್ಟಿ ಸ್ವಾತಂತ್ರ್ಯ ಗಳಿಸುವ ಯೋಜನೆ ನಡೆಸುತ್ತಾರೆ. ಈ ಚಿಂತನೆಯ ಫಲವೇ 1916ರ ಏಪ್ರಿಲ್ 24ರಂದು ನಡೆದ ‘ಈಸ್ಟರ್ ಸೋಮವಾರದ ವಿದ್ರೋಹ’!
ಐರ್ಲೆಂಡಿನ ಕ್ರಾಂತಿನಾಯಕರು 1916ರ ಏಪ್ರಿಲ್ 24ರಂದು ಸೋಮವಾರ ಈಸ್ಟರ್ ಕ್ರಾಂತಿಗೆ ನಾಂದಿ ಹಾಡಿದರು. ಅಂದು ಮಧ್ಯಾಹ್ನ ಪ್ಯಾಡ್ರಿಕ್ ಪಿಯರ್ಸ್ ‘ಐರಿಷ್ ಗಣತಂತ್ರದ ಹಂಗಾಮಿ ಕ್ರಾಂತಿಕಾರಿ ಸರಕಾರ’ದ ಘೋಷಣೆಯನ್ನು ಓದುತ್ತಿರುವಾಗ ಕ್ರಾಂತಿಕಾರಿಗಳು ನಗರದ ಮುಖ್ಯ ಸ್ಥಳಗಳಾದ ಮಹಾ ಅಂಚೆಕಚೇರಿ ಹಾಗೂ ತಂತಿಜಾಲ, ರೈಲ್ವೆ ನಿಲ್ದಾಣಗಳು, ಜಾಕಬ್ ಬಿಸ್ಕತ್ ಫ್ಯಾಕ್ಟರಿ, ಸರ್ಜನ್ ಕಾಲೇಜು, ನಾಲ್ಕು ನ್ಯಾಯಾಲಯಗಳು, ಲಿಬರ್ಟಿ ಹಾಲ್ ಮತ್ತು ಬೋಲಾಂಡ್ ಗಿರಣಿ ಇತ್ಯಾದಿಗಳನ್ನು ಕೈವಶ ಮಾಡಿಕೊಳ್ಳುತ್ತಾರೆ. ಕೆಲ್ಲಿ ಅಸ್ತ್ರಗಳ ಮಳಿಗೆ ಮತ್ತು ಹಾಪ್ಕಿನ್ಸ್ ಆಭರಣಗಳ ಅಂಗಡಿಗಳಲ್ಲಿ ಭಾರಿ ಪಡೆಗಳನ್ನು ಯೋಜಿಸಲಾಗಿದೆ. ವಿದ್ರೋಹಿಗಳ ಪ್ರತಿಯೊಂದು ಕಾರ್ಯದಲ್ಲಿಯೂ ಸೈನಿಕ ಶಿಸ್ತು ಎದ್ದು ಕಾಣುವಂತಿತ್ತು.
ಡಬ್ಲಿನ್ನಲ್ಲಿ ಇಷ್ಟೆಲ್ಲ ಜರಗುವಾಗ ಸರಕಾರದ ಮುಖ್ಯ ಕಾರ್ಯದರ್ಶಿ ಬಿರೇಲ್ (ಃiಡಿಡಿeಟ) ಲಂಡನ್ನಿನಲ್ಲಿದ್ದರೆ ಅಲ್ಲಿಯ ಸೇನಾ ದಂಡನಾಯಕ ಸಹ ಉಪಸ್ಥಿತನಿರಲಿಲ್ಲ. ಅನೇಕ ಸೈನಿಕ ಅಧಿಕಾರಿಗಳು ‘ಫೇರ್ ಹೌಸ್ ರೇಸ್’ನಲ್ಲಿ ಭಾಗಿಗಳಾಗಲು ರಜೆಯ ಮೇಲೆ ಹೋಗಿರುತ್ತಾರೆ. ಸೋಮವಾರ ಸಂಜೆ ಹಿಂತಿರುಗಿದ ಅವರನ್ನೆಲ್ಲ ‘ಸಿನ್ ಫೇನ್’ ಸದಸ್ಯರು ಯುದ್ಧಕೈದಿಗಳನ್ನಾಗಿ ಬಂಧಿಸಿದ್ದರು. ಏಪ್ರಿಲ್ 28ರ ಶುಕ್ರವಾರ ಬೆಳಗ್ಗೆ ಡಬ್ಲಿನ್ ತಲಪಿದ ಜನರಲ್ ಸರ್ ಜಾನ್ ಮ್ಯಾಕ್ಸ್ವೆಲ್ ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳುತ್ತಾನೆ. ಶರಣಾಗತರಾದ ಒಂದು ಸಾವಿರಕ್ಕೂ ಮೀರಿದ ‘ವಿದ್ರೋಹಿ’ಗಳನ್ನು ಇಂಗ್ಲೆಂಡಿಗೆ ಕಳುಹಿಸಿದರೆ ಐರಿಷ್ ಗಣತಂತ್ರದ ಘೋಷಣೆಗೆ ಸಹಿ ಹಾಕಿದ ನಾಯಕರನ್ನು ಡಬ್ಲಿನ್ ಕ್ಯಾಸಲ್ನಲ್ಲಿಯೇ ಉಳಿಸಿಕೊಳ್ಳಲಾಯಿತು. ಯಾರನ್ನೂ ಜೀವಂತ ಉಳಿಸುವ ಪ್ರಶ್ನೆಯೇ ಇರಲಿಲ್ಲ. ವಿದ್ರೋಹದ ಸಮಯದಲ್ಲಿ ಹಿಡಿತದೊಂದಿಗೆ ವರ್ತಿಸುತ್ತಿದ್ದ ಸೇನೆ ಈಗ ಸ್ತ್ರೀ ಪುರುಷರೆನ್ನದೆ ಎಲ್ಲರನ್ನೂ ಗುಂಡಿಟ್ಟು ಕೊಲ್ಲುವುದು, ವಾರಂಟ್ ಇಲ್ಲದೆ ಮನೆಗಳನ್ನು ಜಾಲಾಡುವುದು, ವಿದ್ರೋಹಿಗಳೊಂದಿಗೆ ಲವಲೇಶವೂ ಸಂಬಂಧವಿಲ್ಲದವರನ್ನು ಸೆರೆಮನೆಗೆ ಅಟ್ಟುವ ಪ್ರತೀಕಾರಕ್ಕೆ ತೊಡಗುತ್ತದೆ.
ಕೋರ್ಟ್ಮಾರ್ಷಲ್ನಲ್ಲಿ ಹದಿನಾರು ಮಂದಿ ತಮ್ಮ ಜೀವ ತೆತ್ತರೆ, ಆರು ಮಂದಿಯನ್ನು ಆಜೀವ ಕಾರಾಗೃಹವಾಸಕ್ಕೆ ತಳ್ಳಲಾಯಿತು. ಒಬ್ಬನಿಗೆ ಇಪ್ಪತ್ತು ವರ್ಷ, ಇಪ್ಪತ್ತೊಂದು ಮಂದಿಗೆ ತಲಾ ಹತ್ತು ವರ್ಷಗಳು, ಇಬ್ಬರಿಗೆ ಎಂಟು ವರ್ಷಗಳು, ಹದಿನಾಲ್ಕು ಮಂದಿಗೆ ಐದು ವರ್ಷಗಳು ಮತ್ತು ಐವತ್ತಮೂರು ಮಂದಿಗೆ ಮೂರು ವರ್ಷಗಳ ಶಿಕ್ಷೆ ವಿಧಿಸಲಾಗುತ್ತದೆ. ಇನ್ನೂ ಇಪ್ಪತ್ತು ಮಂದಿಗೆ ಆರು ತಿಂಗಳುಗಳಿಂದ ಎರಡು ವರ್ಷಗಳವರೆಗಿನ ಶಿಕ್ಷೆಗೆ ಗುರಿಪಡಿಸಲಾಯಿತು. ಕೋರ್ಟ್ಮಾರ್ಷಲ್ ಮುಂದುವರಿದಂತೆ ಶಿಕ್ಷೆಗೆ ಒಳಗಾದವರ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಅಂತಿಮವಾಗಿ ವಿದ್ರೋಹವನ್ನು ಹತ್ತಿಕ್ಕಿದ ಮೂರು ತಿಂಗಳುಗಳ ಬಳಿಕ ಸರ್ ರೋಜರ್ ಕೇಸ್ಮೆಂಟ್ನನ್ನು ಲಂಡನ್ನಿನಲ್ಲಿ ಗಲ್ಲಿಗೇರಿಸಿದಾಗ ಎಲ್ಲ ವಿದ್ರೋಹಿ ನಾಯಕರ ಅಂತ್ಯ ಕಂಡಂತಾಗುತ್ತದೆ.
ಕ್ರಾಂತಿಯ ಡಿಂಡಿಮ
1916ರ ಡಬ್ಲಿನ್ ವಿದ್ರೋಹದ ಗುಂಗು 1930ರ ಚಿತ್ತಗಾಂವ್ನ ಕ್ರಾಂತಿಕಾರಿಗಳಿಗೆ ತಲೆ ತುಂಬಿದ್ದುದು ಆಶ್ಚರ್ಯಕರ ಸಂಗತಿ ಎನ್ನಬೇಕು. ಇಪ್ಪತ್ತನೆಯ ಶತಮಾನದ ಪ್ರಾರಂಭಿಕ ದಶಕದ ಭಾರತೀಯ ಕ್ರಾಂತಿಕಾರಿಗಳಿಗೆ ಫ್ರೆಂಚ್ ಕ್ರಾಂತಿ, ಇಟಲಿಯ ಮ್ಯಾಜಿನಿ, ಗರಿಬಾಲ್ಡಿ ಮೊದಲಾದವರ ಸಾಹಸಗಾಥೆಗಳು ಸ್ಫೂರ್ತಿದಾಯಕವಾಗಿದ್ದರೆ, ಮೊದಲ ಮಹಾಯುದ್ಧದ ಅಂತ್ಯದ ವೇಳೆಗೆ ಗದರ್ ಕ್ರಾಂತಿಕಾರಿಗಳನ್ನು ರಷಿಯದ ಲೆನಿನ್ ಆಕರ್ಷಿಸತೊಡಗುತ್ತಾನೆ. 1930ರ ವೇಳೆಗಾಗಲೇ ಕಾಂಗ್ರೆಸಿನ ಹಲವಾರು ಯುವನಾಯಕರಲ್ಲದೆ ಸಶಸ್ತ್ರಕ್ರಾಂತಿಯಲ್ಲಿ ತೊಡಗಿಕೊಂಡಿದ್ದ ಕ್ರಾಂತಿಕಾರಿಗಳು ‘ಕ್ರಾಂತಿ’ ಎಂದರೆ ‘ಕಮ್ಯೂನಿಸಂ’ ಎನ್ನುವಷ್ಟು ಮಟ್ಟಿಗೆ ಪ್ರಭಾವಿತರಾಗಿದ್ದರು. ಆದರೆ ಇವರಿಗೆಲ್ಲ ಅಪವಾದವಾಗಿ ನಿಲ್ಲುತ್ತದೆ ಡಬ್ಲಿನ್ ವಿದ್ರೋಹ ಪ್ರೇರಿತ ಮಾಸ್ತರ್ ದಾ ನಾಯಕತ್ವದ ‘ಚಿತ್ತಗಾಂವ್ ಕ್ರಾಂತಿಕಾರಿ ಸೇನೆ.’
1857ರ ಬಳಿಕ ಕ್ರಾಂತಿಪಥದಲ್ಲೆಂದೂ ವಿಶ್ರಾಂತಿಯ ಹೆಸರಿರಲಿಲ್ಲ. ವಾಸುದೇವ ಬಲವಂತ ಫಡಕೆ, ಚಾಫೇಕರ್ ಸಹೋದರರು, ವಿನಾಯಕ ದಾಮೋದರ ಸಾವರಕರರ ಮಿತ್ರಮೇಳ – ಅಭಿನವ ಭಾರತ, ಬಂಗಾಳದಲ್ಲಿ ಅನುಶೀಲನ ಸಮಿತಿ, ಅರವಿಂದ ಘೋಷರ ಸಹೋದರ ಬಾರೀಂದ್ರಕುಮಾರ ಘೋಷ್, ಉಲ್ಲಾಸಕರ ದತ್ತ, ಢಾಕಾದ ಪುಲಿನ್ಬಿಹಾರಿ, ಸ್ವಾಮಿ ವಿವೇಕಾನಂದರ ಸಹೋದರ ಭೂಪೇಂದ್ರನಾಥ ದತ್ತ ಮೊದಲಾದವರು ಕ್ರಾಂತಿಯ ರಣಡಿಂಡಿಮವನ್ನು ಬಾರಿಸತೊಡಗುತ್ತಾರೆ. ‘ಯುಗಾಂತರ’, ‘ಭವಾನಿ ಮಂದಿರ’, ‘ಬರ್ತಮಾನ ರಣನೀತಿ’ ಮೊದಲಾದ ಪ್ರಕಟಣೆಗಳು ಬಹಿರಂಗವಾಗಿ ಬ್ರಿಟಿಷರ ವಿರುದ್ಧ ಯುದ್ಧ ಸಾರುತ್ತವೆ. ಖುದಿರಾಂ ಬೋಸ್, ಪ್ರಫುಲ್ಲ ಚಾಕಿ, ಮದನಲಾಲ್ ಧಿಂಗ್ರಾ ಹುತಾತ್ಮತೆಯ ಪಟ್ಟಕ್ಕೇರಿದರೆ ‘ಆಲಿಪುರ ಬಾಂಬ್ ಪಿತೂರಿ ಮೊಕದ್ದಮೆ’ಯಲ್ಲಿ ಬಾರೀಂದ್ರಕುಮಾರ ಘೋಷ್ 15 ಮಂದಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಅಂಡಮಾನ್ಗೆ ಗಡಿಪಾರಾದರೆ, ಮಿಕ್ಕ 10 ಮಂದಿ ವಿವಿಧ ಅವಧಿಯ ಸೆರೆಮನೆವಾಸಕ್ಕೆ ಗುರಿಯಾಗುತ್ತಾರೆ. ಇವರ ‘ಬಾಂಬ್ ತಯಾರಿಕಾ ಘಟಕ’ಗಳ ಪ್ರಯತ್ನ ಕ್ರಾಂತಿಕಾರಿ ವಲಯದಲ್ಲಿ ಮಿಂಚಿನ ಸಂಚಾರಕ್ಕೆ ಕಾರಣವಾಯಿತು.
“ಬಾರೀಂದ್ರನ ಬಂಧನ ಬಂಗಾಳದ ಮೊದಲ ಹಂತದ ಕ್ರಾಂತಿಕಾರಿ ಆಂದೋಲನಕ್ಕೆ ಕೊನೆ ತಂದಿತಾದರೂ ‘ಬಾಂಬ್ ಆರಾಧನೆ’ಗೆ ಅಂತ್ಯ ತರಲಿಲ್ಲ” ಎನ್ನುತ್ತಾರೆ ರಮೇಶ್ಚಂದ್ರ ಮಜುಂದಾರ್. 1914ರಲ್ಲಿ ಕೊಲ್ಕತಾದ ಶಸ್ತ್ರಾಸ್ತ್ರಗಳ ಮಳಿಗೆ ರೊಡ್ಡ ಆ್ಯಂಡ್ ಕಂಪೆನಿಗೆ ಸೇರಿದ ಪಿಸ್ತೂಲುಗಳು ಮತ್ತು ಮದ್ದುಗುಂಡುಗಳ ಕಳವು 9 ಕ್ರಾಂತಿಕಾರಿ ಸಂಘಟನೆಗಳ ಕೈ ಸೇರಿ ಮುಂದಿನ ಅನೇಕ ಕಾರ್ಯಾಚರಣೆಗಳಲ್ಲಿ ಬಳಸಲಾಗುತ್ತದೆ. 1908ರಿಂದ 1917ರವರೆಗೆ 39 ಪೆÇಲೀಸ್ ಅಧಿಕಾರಿಗಳ ಕೊಲೆ ನಡೆದಿದೆ. 1918-1925ರ ಅವಧಿಯಲ್ಲಿ ಮಾಂಟೆಗು ಚೆಮ್ಸ್ಫರ್ಡ್ ಸುಧಾರಣೆ ಹಾಗೂ ಗಾಂಧಿಯವರ ಅಹಿಂಸಾತ್ಮಕ ಅಸಹಕಾರ ಚಳವಳಿಯ ಪ್ರಯೋಗವನ್ನು ಒರೆಹಚ್ಚಲು ಚಿತ್ತರಂಜನದಾಸ್ರವರ ಮನವೊಲಿಕೆಯಿಂದ ಕ್ರಾಂತಿಕಾರಿ ಕಾರ್ಯಾಚರಣೆಗಳು ಸ್ಥಗಿತಗೊಂಡವು. ಆದರೆ ಸಾಂವಿಧಾನಿಕ ಸುಧಾರಣೆಗಳು ತಂದ ನಿರಾಸೆ ಮತ್ತು ಗಾಂಧಿಯವರ ಚಳವಳಿಯ ವೈಫಲ್ಯ ಬಂಗಾಳದಲ್ಲಿ ಅನೇಕ ಬಾಂಬ್ ತಯಾರಿಕಾ ಘಟಕಗಳಿಗೆ ಜನ್ಮ ನೀಡುತ್ತವೆ.
ಕ್ರಾಂತಿಯ ಬೀಜಾಂಕುರ
1928ರಲ್ಲಿ ಸುದೀರ್ಘ ಬಂಧನದಿಂದ ಹೊರಬಂದ ಚಿತ್ತಗಾಂವ್ನ ‘ಆರು ಮಂದಿ ಮಾಜಿ ಸೆರೆಯಾಳುಗಳು’ ಚಿತ್ತಗಾಂವ್ನ ಪೆÇಲೀಸ್ ಶಸ್ತ್ರಾಗಾರಕ್ಕೆ ಲಗ್ಗೆಹಾಕುವ ಯೋಜನೆಗೆ ಚಾಲನೆ ನೀಡಲು ಪ್ರೇರಣಾದಾಯಿಯಾದ 1928ರ ಕೊಲ್ಕತಾ ಕಾಂಗ್ರೆಸ್ ಅಧಿವೇಶನ ಭಾರತದ ಸ್ವಾತಂತ್ರ್ಯಸಂಗ್ರಾಮದ ಇತಿಹಾಸದಲ್ಲಿ ಒಂದು ನಿರ್ಣಾಯಕ ಹಂತವನ್ನು ಗುರುತಿಸುತ್ತದೆ. ನೇತಾಜಿ ಸುಭಾಷ್ಚಂದ್ರ ಬೋಸ್ರವರ ‘ಭಾರತೀಯ ರಾಷ್ಟ್ರೀಯ ಸೇನೆ’ಯ ಕನಸಿನ ಬೀಜಾಂಕುರವಾದದ್ದು ಆ ಅಧಿವೇಶನದಲ್ಲಿ! ತಮ್ಮನ್ನು ‘ಜನರಲ್ ಆಫೀಸರ್ ಕಮಾಂಡಿಂಗ್’ ಎಂದು ಕರೆದುಕೊಂಡು ಒಬ್ಬ ಸೈನಿಕ ದಂಡನಾಯಕನ ಸಮವಸ್ತ್ರ ಧರಿಸಿದ್ದ ಸುಭಾಷ್ರವರ ನೇತೃತ್ವದಲ್ಲಿ ಖಾಕಿ ಸಮವಸ್ತ್ರದಲ್ಲಿ ಶಿಸ್ತುಬದ್ಧ ಸೈನಿಕರಂತೆ ಬೂಟು ಕಾಲುಗಳನ್ನು ಖಣಖಣಿಸುತ್ತ ಓಡಾಡುತ್ತಿದ್ದ ಎರಡು ಸಾವಿರ ಸ್ವಯಂಸೇವಕರು ಅಧಿವೇಶನಕ್ಕೆ ಬಂದಿದ್ದ ಯುವಜನರ ಮನಸ್ಸನ್ನು ಅಪಹರಿಸುವಲ್ಲಿ ಯಶಸ್ವಿಯಾದರು.
ಈ ಅಧಿವೇಶನದಲ್ಲಿ ಕ್ರಾಂತಿಕಾರಿಗಳೂ ಉಪಸ್ಥಿತರಿದ್ದು ಅವರಲ್ಲಿ ಅನೇಕರು ಸ್ವಯಂಸೇವಕ ದಳದಲ್ಲಿ ಭಾಗಿಗಳಾಗಿರುತ್ತಾರೆ. ಚಿತ್ತಗಾಂವ್ನ ಪಡೆಯನ್ನು ಮೇಜರ್ ಗಣೇಶ್ ಘೋಷ್ ಪ್ರತಿನಿಧಿಸುತ್ತಾನೆ. ಹೀಗೆ ಕಾಂಗ್ರೆಸ್ನಲ್ಲಿ ಕ್ರಾಂತಿ ಮತ್ತು ಅಹಿಂಸೆಯ ಆರಾಧಕರು ಒಟ್ಟಾಗಿ ಸೇರಿ ನಡೆಸಿದ ಸೈನಿಕ ಕವಾಯತು ಚಿತ್ತಗಾಂವ್ನಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಅಧಿವೇಶನದಲ್ಲಿ ಮರುಕಳಿಸಿದುದರಲ್ಲಿ ಆಶ್ಚರ್ಯವಿರಲಿಲ್ಲ. ಇದು ‘ಐರಿಷ್ ವಾಲಂಟಿಯರ್ಸ್’ ಪಡೆಯಿಂದ ಸ್ಫೂರ್ತಿಗೊಂಡಿತ್ತು.
ಮೊದಲ ಮಹಾಯುದ್ಧದ ಅಂತ್ಯದ ವೇಳೆಗೆ ಚಿತ್ತಗಾಂವ್ನಲ್ಲಿ ಕ್ರಾಂತಿಯ ಬೀಜಾರೋಪಣ ಮಾಡಿದವರಲ್ಲಿ ಅನುರೂಪ ಸೇನ್, ಸೂರ್ಯ ಸೇನ್, ನಾಗೇನ್ (ಜುಲು) ಸೇನ್, ಅಂಬಿಕಾ ಚಕ್ರವರ್ತಿ ಹಾಗೂ ಚಾರುಬಿಕಾಸ್ ದತ್ತ ಅಗ್ರಮಾನ್ಯರಾಗಿದ್ದಾರೆ. ಯುಗಾಂತರ ಮತ್ತು ಅನುಶೀಲನ ಸಮಿತಿಯೊಂದಿಗೆ ಸೇರ್ಪಡೆಯಾಗದೆ ತಮ್ಮದೇ ಸ್ವತಂತ್ರ ಸಂಘಟನೆಯನ್ನು ನಡೆಸಲು ನಿಶ್ಚಯಿಸುವ ಚಿತ್ತಗಾಂವ್ ಗುಂಪಿಗೆ ಅನಂತ ಸಿಂಗ್, ಪ್ರಮೋದ್ ಚೌಧರಿ ಮುಂತಾದವರು ಸೇರಿಕೊಳ್ಳುತ್ತಾರೆ. ದೇಶಬಂಧು ಜತೀಂದ್ರಮೋಹನ ಸೇನ್ ಗುಪ್ತರವರ ನೇತೃತ್ವದಲ್ಲಿ ಪ್ರಾರಂಭಗೊಂಡ ಕಾಂಗ್ರೆಸ್ಸಿನ ‘ಅಸಹಕಾರ ಚಳುವಳಿ’ಯಲ್ಲಿ ಸೂರ್ಯಸೇನ್, ನಿರ್ಮಲ್ ಚಂದ್ರ ಸೇನ್, ಲೋಕನಾಥ ಬಾಲ್, ಅಂಬಿಕಾ ಚಕ್ರವರ್ತಿ, ಅನಂತಸಿಂಗ್ ಮತ್ತು ಗಣೇಶ್ ಘೋಷ್ ಮೊದಲಾದ ಕ್ರಾಂತಿಕಾರಿಗಳು ತುಂಬು ಹೃದಯದಿಂದ ಭಾಗವಹಿಸಿದ ಪರಿಣಾಮವಾಗಿ ಗಾಂಧಿಯವರೂ ತಮ್ಮ ‘ಯಂಗ್ ಇಂಡಿಯ’ ಪತ್ರಿಕೆಯಲ್ಲಿ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಾರೆ. ಆದರೆ 1922ರ ಚೌರಿಚೌರಾ ಘಟನೆಯ ಬಳಿಕ ಅಸಹಕಾರ ಚಳುವಳಿಯನ್ನು ಅನಾಮತ್ತಾಗಿ ಹಿಂತೆಗೆದುಕೊಂಡ ಗಾಂಧಿಯವರ ನಡೆಯಿಂದ ಚಿತ್ತಗಾಂವ್ನ ಕ್ರಾಂತಿಕಾರಿಗಳು ತಮ್ಮ ಕ್ರಾಂತಿಪಥಕ್ಕೆ ಮರಳುತ್ತಾರೆ.
ಚಿತ್ತಗಾಂವ್ನ ಕ್ರಾಂತಿಕಾರಿಗಳ ಶಸ್ತ್ರಾಸ್ತ್ರಗಳ ಖರೀದಿ ಮೊದಲಾದವುಗಳಿಗಾಗಿ ‘ಅಸ್ಸಾಂ ಬಂಗಾಳ ರೈಲ್ವೇ’ಗೆ ಸೇರಿದ 17000 ರೂಪಾಯಿಗಳನ್ನು ಅನಂತ ಸಿಂಗ್ ತನ್ನ ನಾಲ್ವರು ಸಂಗಾತಿಗಳೊಂದಿಗೆ ಯಶಸ್ವಿಯಾಗಿ ಲೂಟಿ ಹೊಡೆಯುತ್ತಾನೆ. ಬೆಂಬತ್ತಿದ ಪೆÇಲೀಸರಿಂದ ತಪ್ಪಿಸಿಕೊಳ್ಳಲು ನಗರಕಾನ ಗುಡ್ಡದ ಮೇಲೆ ಪರಾರಿಯಾದ ಗುಂಪನ್ನು ಸುತ್ತುವರಿದಾಗ ಅನಂತ ಸಿಂಗ್ ತಪ್ಪಿಸಿಕೊಂಡರೂ, ಅಂಬಿಕಾ ಚಕ್ರವರ್ತಿ ಹಾಗೂ ಸೂರ್ಯ ಸೇನ್ ತಪ್ಪಿಸಿಕೊಳ್ಳಲು ಅಸಮರ್ಥರಾದರು. ಅವರು ಸೇವಿಸಿದ ಸಯನೈಡ್ ಕೃತಕವಾದುದರಿಂದ ವೈದ್ಯಕೀಯ ನೆರವಿನಿಂದ ಬದುಕುಳಿದು ಸೆರೆಮನೆ ಸೇರುತ್ತಾರೆ. ಒಂದು ತಿಂಗಳ ನಂತರ ಅನಂತ ಸಿಂಗ್ನನ್ನು ಬಂಧಿಸುವ ಪ್ರಫುಲ್ಲ ರಾಯ್ ಎಂಬ ಸಹಾಯಕ ಅಧೀಕ್ಷಕನನ್ನು ಪ್ರೇಮಾನಂದ ದತ್ ಎಂಬ ಕ್ರಾಂತಿಕಾರಿ ಚಿತ್ತಗಾಂವ್ನ ಬೀದಿಯಲ್ಲಿ ಕೊಲ್ಲುತ್ತಾನೆ. ನ್ಯಾಯಾಲಯದ ವಿಚಾರಣೆಯಲ್ಲಿ ಜ್ಯೂರಿಗಳು ಇವರನ್ನೆಲ್ಲ ನಿರಪರಾಧಿಗಳೆಂದು ದೋಷಮುಕ್ತಗೊಳಿಸಿದರಾದರೂ, ಸರಕಾರ 1924ರ ‘ಬಂಗಾಳ ಅಪರಾಧಿ ಶಾಸನ ತಿದ್ದುಪಡಿ ಸುಗ್ರೀವಾಜ್ಞೆ’ಯಡಿಯಲ್ಲಿ ಎಲ್ಲರನ್ನೂ ಪುನಃ ಬಂಧಿಸುತ್ತದೆ. 1928ರಲ್ಲಿ ಸೂರ್ಯ ಸೇನ್, ಅಂಬಿಕಾ ಚಕ್ರವರ್ತಿ, ಮತ್ತು ಗಣೇಶ್ ಘೋಷ್ರನ್ನು ಬಿಡುಗಡೆ ಮಾಡಲಾಯಿತು.
ಕೊಲ್ಕತಾ ಕಾಂಗ್ರೆಸ್ ಅಧಿವೇಶನದಿಂದ ಹಿಂತಿರುಗಿದ ಸೂರ್ಯ ಸೇನ್, ಅಂಬಿಕಾ ಚಕ್ರವರ್ತಿ, ನಿರ್ಮಲ್ ಸೇನ್, ಅನಂತಸಿಂಗ್ ಮತ್ತು ಗಣೇಶ್ ಘೋಷ್ ಜೊತೆ ಸೇರಿ ಚಿತ್ತಗಾಂವ್ನಲ್ಲಿ ಸ್ವಯಂಸೇವಕ ಪಡೆಗಾಗಿ ಆಯ್ಕೆ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಾರೆ. ಅನಂತಸಿಂಗ್ ಮತ್ತು ಗಣೇಶ್ ಘೋಷ್ ಸೇರಿ ಪ್ರಾರಂಭಿಸಿದ ‘ಸಾದರ್ ಘಾಟ್ ಶಾರೀರಿಕ ವ್ಯಾಯಾಮಶಾಲೆ’ ಹೊರನೋಟಕ್ಕೆ ಗರಡಿಮನೆಯಂತಿದ್ದರೂ, ವಾಸ್ತವದಲ್ಲಿ ಕ್ರಾಂತಿಸೇನೆಗೆ ಸೈನಿಕರನ್ನು ಸಿದ್ಧಗೊಳಿಸುವ ಕಾರ್ಯಾಗಾರವಾಗಿರುತ್ತದೆ. ಹೀಗೆ ಪ್ರಾರಂಭಗೊಂಡಿತು ಅಗ್ನಿಗರ್ಭದ ಪ್ರಸವ ವೇದನೆ.
(ಮುಂದುವರಿಯುವುದು)