ಮನಸ್ಸು ತಾವರೆಯ ಕೊಳದಂತೆ, ತಿಳಿಯಾದ ಜಲದಂತೆ, ಕೆಳಗಿರುತ್ತದೆ ಕೆಸರು.
ಕೆಸರಿನಿಂದ ಹುಟ್ಟುವುದು ಸುಗಂಧ ಸೂಸುವ ಕಮಲ.
ಹೀಗಿದ್ದರೂ ನಾವು ನೀರನ್ನು ಬಗ್ಗಡ ಮಾಡಿ ಕೆಸರನ್ನು ಎಬ್ಬಿಸುತ್ತೇವೆ.
ಕಮಲದ ಬೇರುಗಳನ್ನು ಕಿತ್ತುಹಾಕುತ್ತೇವೆ. ಕಾಯುತ್ತೇವೆ ಕದಡಿದ ನೀರು
ತಿಳಿಯಾಗಲಿಕ್ಕೆ. ಈ ನಡುವೆ ಮೊದಲಿದ್ದ ತಾವರೆಕೆರೆಯ ಸೌಂದರ್ಯ
ಇಲ್ಲವಾಗುತ್ತೆ.
ಪ್ರತಿಯೊಂದು ಜಗಳವೂ ಕೊನೆಗೊಳ್ಳುವುದೆ ಇಲ್ಲ. ಕೊನೆಗೊಳಿಸುವುದು
ಸಾಧ್ಯ ನಾವು ಮೈಮರೆತಾಗ
ಆಗ ಕುದ್ದ ಮನಸ್ಸು ತಣ್ಣಗಾಗುತ್ತೆ.
ಮಾತುಗಳ ರಕ್ತಬೀಜಾಸುರರು ಯುದ್ಧಕ್ಕೆ ಇಳಿದಾಗ
ಮೌನನಾಲಗೆ ಚಾಚಿ ರಕ್ತದ ತೊಟ್ಟು ನೆಲಕ್ಕೆ ಬೀಳದ ಹಾಗೆ
ಮುಂಜಾಗ್ರತೆಯು ಬೇಕು.
ಹಾಗಲಕಾಯಿ ಮಜ್ಜಿಗೆಯಲ್ಲಿ ನೆನೆಹಾಕಿ ಕಹಿ ತೆಗೆಯಬೇಕು;
ಕಳಲೆಯನು ಹೆಚ್ಚಿ ನೀರಲ್ಲಿಟ್ಟು ವಿಷ ತೆಗೆಯಬೇಕು.
ಕೆನೆ ಇಷ್ಟ ನಮಗೆ. ನಾವು ಹಾಲಿನ ಹಾಗೆ, ಮತ್ತೂ ಬೆಂಕಿಯ ಹಾಗೆ.
ಕುದಿಯಬೇಕಾಗುತ್ತೆ ಕೆನೆಕಟ್ಟಲಿಕ್ಕೆ.
ಬೆಂಕಿಯೊಡನಾಟ ಬೇಕೇ ಬೇಕು, ಕೆಡದಂತೆ ಹಾಲನ್ನು ಇಡುವುದಕ್ಕೆ.
ಕೆನೆಕಟ್ಟಿದಾಗ ಉಕ್ಕುವುದಕ್ಕೆ ಬಿಡದಂತೆ
ಬೆಂಕಿಯಾದವರು ತಣ್ಣಗಾಗಲೇ ಬೇಕು.
ಹಾಲು ಬೇಕೇ ಬೇಕು. ಬೆಂಕಿಯೂ ಬೇಕು
ಕ್ಷೀರಾಗ್ನಿ ಸಂಬಂಧ ಎಲ್ಲ ದಾಂಪತ್ಯ.
– ಸುಮತೀಂದ್ರ ನಾಡಿಗ
(ಇತ್ತೀಚೆಗೆ ಬಿಡುಗಡೆಯಾದ ನಾಡಿಗರ ‘ಶ್ರೀವತ್ಸ ಸ್ಮೃತಿ’ ಕವನಸಂಕಲನದಿಂದ)