ರಾಷ್ಟ್ರೀಯ ಅಂತಾರಾಷ್ಟ್ರೀಯ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲಾಗುವ ಬೆಂಗಳೂರಿನ ಕಂಠೀರವ ಕ್ರೀಡಾಂಗಣವೆಂದರೆ ಅದೊಂದು ಸುವ್ಯವಸ್ಥಿತ ಉತ್ತಮ ಗುಣಮಟ್ಟದ, ಸಕಲ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಕ್ರೀಡಾಂಗಣವೆಂದೇ ಕ್ರೀಡಾಭಿಮಾನಿಗಳ ನಂಬಿಕೆ. ಆದರೆ ವಾಸ್ತವ ಮಾತ್ರ ಬೇರೆಯೇ.
ಗುಂಡಿ ಬಿದ್ದ ಅಥ್ಲೆಟಿಕ್ಸ್ ಟ್ರ್ಯಾಕ್, ಆ ಟ್ರ್ಯಾಕ್ನಲ್ಲಿ ಓಟದ ಅಭ್ಯಾಸ ನಡೆಸಿದರೆ ಬಿದ್ದು ಮುಗ್ಗರಿಸಿ ಗಾಯಾಳುಗಳಾಗುವುದು ಗ್ಯಾರಂಟಿ. ಗಾಯವಾದರೆ ಕ್ರೀಡಾಂಗಣದ್ದೇ ವೈದ್ಯರು ಇಲ್ಲ. ಗಾಯಾಳುಗಳನ್ನು ಸಾಗಿಸಲು ಟ್ರ್ಯಾಲಿಯು ಇಲ್ಲ. ನಾಲ್ಕುಮಂದಿ ಹೊತ್ತುಕೊಂಡೇ ಹತ್ತಿರದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಕೊಡಿಸಬೇಕು. ಸಿಂಥೆಟಿಕ್ ಟ್ರ್ಯಾಕ್ ನಿರ್ವಹಿಸಲು ಸಿಬ್ಬಂದಿಯೇ ಇಲ್ಲ. ಕಿತ್ತುಹೋಗಿರುವ ಸಿಂಥೆಟಿಕ್ ಟ್ರ್ಯಾಕ್ನಲ್ಲಿ ಸ್ಪೈಕ್ ಶೂಗಳನ್ನು ಧರಿಸಿ ಓಡುವುದು ಅಸಾಧ್ಯ. ಹಾಗಾಗಿ ಬರಿಗಾಲಲ್ಲೇ ಓಡಿ ಅಭ್ಯಾಸ ಮಾಡಬೇಕಾದ ದುಃಸ್ಥಿತಿ. ಬರಿಗಾಲಲ್ಲಿ ಓಡಿ ಅಭ್ಯಾಸ ಮಾಡಿದರೆ ಕೂಟಗಳಲ್ಲಿ ಶೂ ಧರಿಸಿ ಓಡಲು ಹೇಗೆ ಸಾಧ್ಯ? ಕ್ರೀಡಾಂಗಣದಲ್ಲಿರುವ ಜಿಮ್ ಹರಿದುಹೋಗಿದೆ. ಆ ಹರಕಲು ಜಿಮ್ನಲ್ಲೇ ಕ್ರೀಡಾಪಟುಗಳು ಫಿಟ್ನೆಸ್ಗೆ ಶ್ರಮಿಸಬೇಕು. ಗುಜರಿಗೆ ಹಾಕಲು ಯೋಗ್ಯವಾದ ಫಿಟ್ನೆಸ್ ಸಾಮಗ್ರಿಗಳು. ಹೆಸರಿಗೆ ಬರೋಬ್ಬರಿ 20 ಶೌಚಾಲಯಗಳಿವೆ; ಆದರೆ ಇದರಲ್ಲಿ ಸ್ವಚ್ಛವಾಗಿರುವ, ಬಳಕೆಗೆ ಯೋಗ್ಯವಾಗಿರುವ ಶೌಚಾಲಯಗಳು 4 ಅಥವಾ 5 ಅಷ್ಟೇ. ಎಲ್ಲೆಂದರಲ್ಲಿ ಕಸಕಡ್ಡಿಗಳ ರಾಶಿ. ಮೊದಲ ಮಹಡಿಯ ಶೌಚಾಲಯವೊಂದರ ನೀರು ಪಕ್ಕದ ಕೋಣೆಗೆ ಹರಿದು ಬರುತ್ತದೆ. ಇನ್ನು ಗೇಟ್ ನಂಬರ್ 7ರ ಬಳಿ ಇರುವ ಫ್ಲಡ್ಲೈಟ್ ಕಂಬ ಬಿರುಕುಬಿಟ್ಟು ಯಾವಾಗ ಬೀಳುತ್ತದೆಯೊ ಗೊತ್ತಿಲ್ಲ.
ಇದು ಘನತೆವೆತ್ತ ರಾಜ್ಯದ ಕಂಠೀರವ ಕ್ರೀಡಾಂಗಣದ ಸದ್ಯದ ವಾಸ್ತವ ಕಿರುಚಿತ್ರಣ. ಕರ್ನಾಟಕದ ಅಥ್ಲೀಟ್ಗಳು ಜಾಗತಿಕ ಮಟ್ಟದಲ್ಲಿ ಪದಕ ಗೆಲ್ಲಲು ಎಲ್ಲಾ ಸೌಲಭ್ಯಗಳನ್ನು ನೀಡುತ್ತೇವೆ, ಅಂತಾರಾಷ್ಟ್ರೀಯ ಗುಣಮಟ್ಟದ ತರಬೇತಿ ಒದಗಿಸುತ್ತೇವೆ ಎಂದು ಆಗಾಗ ವೇದಿಕೆಗಳ ಮೇಲಿಂದ, ಮಾಧ್ಯಮಗಳ ಮೈಕ್ ಮುಂದೆ ರಾಜ್ಯಸರ್ಕಾರ, ಕ್ರೀಡಾ ಇಲಾಖೆಯ ಮುಖ್ಯಸ್ಥರು ಹೇಳುತ್ತಲೇ ಇರುತ್ತಾರೆ. ಆದರೆ ಹೀಗೆ ಹೇಳುವ ಮಹನೀಯರಿಗೆ ಕಂಠೀರವ ಕ್ರೀಡಾಂಗಣದ ಅತ್ಯಂತ ಕಳಪೆ ಸ್ಥಿತಿಯ ಬಗ್ಗೆ
ಕಿಂಚಿತ್ತೂ ಅರಿವಿಲ್ಲವೇ? ಸಿಂಥೆಟಿಕ್ ಅಥ್ಲೆಟಿಕ್ಸ್ ಟ್ರ್ಯಾಕ್ ಹಾಳಾಗಿ ವರ್ಷಗಳೇ ಕಳೆದಿದ್ದರೂ ಅದನ್ನು ದುರಸ್ತಿ ಮಾಡಿಸುವ ಕಳಕಳಿ ಏಕಿಲ್ಲ? ಸರಿಯಾದ ಸೂಕ್ತ ಟ್ರ್ಯಾಕ್ ಇಲ್ಲದಿರುವಾಗ ಅಥ್ಲೀಟ್ಗಳು ಅಭ್ಯಾಸ ನಡೆಸುವುದು ಹೇಗೆ? ಅಥ್ಲೀಟ್ಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದ ಜಿಮ್, ಶೌಚಾಲಯಗಳ ಅಗತ್ಯ ಇಲ್ಲವೇ?
ಈ ಪ್ರಶ್ನೆಗಳಿಗೆ ಉತ್ತರಿಸುವವರು ಮಾತ್ರ ಯಾರೂ ಇಲ್ಲ.
1996-97ರಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಅಥ್ಲೆಟಿಕ್ಸ್ ಕೂಟ ನಡೆಸುವ ಉದ್ದೇಶದಿಂದ ಮೊದಲ ಬಾರಿಗೆ ಸಿಂಥೆಟಿಕ್ ಟ್ರ್ಯಾಕ್ನ್ನು ಅಳವಡಿಸಲಾಗಿತ್ತು. ಅದಾಗಿ ಕೆಲವು ವರ್ಷಗಳ ಬಳಿಕ ಆ ಟ್ರ್ಯಾಕ್ ಹಾಳಾಗಿದ್ದರಿಂದ 10 ವರ್ಷಗಳ ನಂತರ ಅಂದರೆ 2006ರಲ್ಲಿ ದುರಸ್ತಿ ಕಾರ್ಯ ನಡೆಸಲಾಯಿತು. ಸರಿಯಾದ ನಿರ್ವಹಣೆಯ ಕೊರತೆಯಿಂದಾಗಿ ಮತ್ತೆ ಟ್ರ್ಯಾಕ್ ಹಾಳಾಯಿತು. 2013ರಲ್ಲಿ ಮತ್ತೆ ಅದಕ್ಕೆ ತೇಪೆ ಹಾಕುವ ಕಾಮಗಾರಿ ನಡೆಯಿತೇ ಹೊರತು ಸುಸ್ಥಿತಿಗೆ ತರುವ ಕೆಲಸ ಆಗಲೇ ಇಲ್ಲ.
ಈ ಬಗ್ಗೆ ಕ್ರೀಡಾ ಇಲಾಖೆಯು ಮಾಧ್ಯಮಗಳಿಗೆ ನೀಡುವ ಸಮಜಾಯಿಶಿ: ‘ಸಿಂಥೆಟಿಕ್ ಟ್ರ್ಯಾಕ್ ಅಳವಡಿಕೆಗೆ ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲೇ ಸಿಂಥೆಟಿಕ್ ಟ್ರ್ಯಾಕ್ ಅಳವಡಿಕೆ ಕಾರ್ಯ ಆರಂಭವಾಗಲಿದೆ.’ ಈ ಸಮಜಾಯಿಶಿ ನೀಡಿ ಒಂದು ವರ್ಷವೇ ಕಳೆದಿದ್ದರೂ ಟ್ರ್ಯಾಕ್ ಅಳವಡಿಕೆ ಕಾರ್ಯ ಇನ್ನೂ ಆರಂಭವಾಗಿಲ್ಲ. ಮಳೆಗಾಲ ಮುಗಿದ ಬಳಿಕ ನಿರ್ಮಾಣಕಾರ್ಯ ಶುರುವಾಗಲಿದೆ ಎಂದು ಮಳೆಗಾಲದ ಸಂದರ್ಭದಲ್ಲಿ ಅಧಿಕಾರಿಗಳು ಹೇಳಿದರೆ, ಬೇಸಿಗೆ, ಚಳಿಗಾಲದಲ್ಲಿ ಇನ್ನೇನೋ ಸಬೂಬು ನೀಡಿ ಜಾರಿಕೊಳ್ಳುವುದರಲ್ಲಿ ಜಾಣರೆನಿಸಿದ್ದಾರೆ. ಹಾಳಾದ ಟ್ರ್ಯಾಕ್ನಲ್ಲಿ ಅಭ್ಯಾಸ ನಡೆಸುವ ದುರದೃಷ್ಟ ಅಥ್ಲೀಟ್ಗಳ ಪಾಲಿಗೆ ಇನ್ನೂ ತಪ್ಪಿಲ್ಲ.
ಒಂದು ಕಾಲದಲ್ಲಿ ರಾಜ್ಯದ ಅಥ್ಲೀಟ್ಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಗಳಿಸಿದ್ದರು. ಈಗ ಅವರನ್ನೆಲ್ಲ ಕೇಳುವವರೇ ಇಲ್ಲ. ಅಭ್ಯಾಸ ನಡೆಸಲು ಗುಣಮಟ್ಟದ ಟ್ರ್ಯಾಕ್ನ ಕೊರತೆ, ಅನುಭವಿ ಅಥ್ಲೀಟ್ಗಳ ಮಾರ್ಗದರ್ಶನದ ಅಭಾವಗಳಿಂದಾಗಿ ಅಥ್ಲೆಟಿಕ್ಸ್ ಅನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಗಮನಾರ್ಹವಾಗಿ ಇಳಿಕೆಯಾಗಿದೆ. ಹೊರರಾಜ್ಯಗಳ ಅಥ್ಲೀಟ್ಗಳೇ ನಮ್ಮ ರಾಜ್ಯವನ್ನು ಪ್ರತಿನಿಧಿಸಬೇಕಾದ ದುರ್ದಶೆ. ಕ್ರೀಡಾ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದಾಗಿ ಸಾಕಷ್ಟು ಜಾವೆಲಿನ್ ಥ್ರೋ ಪಟುಗಳು ಕ್ರೀಡೆಯನ್ನು ತೊರೆದಿದ್ದಾರೆ. ಇನ್ನು ರಾಜ್ಯವನ್ನು ಪ್ರತಿನಿಧಿಸುವ ಅಥ್ಲೀಟ್ಗಳು ಪ್ರತಿದಿನ ಅಭ್ಯಾಸ ನಡೆಸಲು ಪಡುವ ಪಾಡು ಭಗವಂತನ ಗಮನಕ್ಕೂ ಬರುತ್ತಿಲ್ಲವೇನೋ!
ಊಟಕ್ಕಿಲ್ಲದ ಉಪ್ಪಿನಕಾಯಿ
ಹಾಕಿ ಕ್ರೀಡಾಂಗಣ, ಫುಟ್ಬಾಲ್ ಕ್ರೀಡಾಂಗಣ, ಕೋರಮಂಗಲದ ಒಳಾಂಗಣ ಕ್ರೀಡಾಂಗಣ ಹಾಗೂ ಕಂಠೀರವ ಕ್ರೀಡಾಂಗಣ – ಇವು ನಾಲ್ಕು ಕ್ರೀಡಾಂಗಣಗಳ ನಿರ್ವಹಣೆ ಸರ್ಕಾರದ್ದೇ. ಇವು ನಾಲ್ಕು ಕೂಡ ಪ್ರಮುಖ ಕ್ರೀಡಾಂಗಣಗಳೇ. ಆದರೆ ಈ ನಾಲ್ಕು ಕ್ರೀಡಾಂಗಣಗಳಲ್ಲಿ ಕ್ರೀಡಾ ಚಟುವಟಿಕೆಗಳಿಗಿಂತ ಅನ್ಯ ಚಟುವಟಿಕೆಗಳೇ ಹೆಚ್ಚಾಗಿ ನಡೆಯುತ್ತಿವೆ. ಅದರಲ್ಲೂ ಕಂಠೀರವ ಕ್ರೀಡಾಂಗಣದಲ್ಲಿ ಸಭೆ-ಸಮಾರಂಭಗಳು, ಸೆಲೆಬ್ರಿಟಿಗಳ ಪಾರ್ಥಿವಶರೀರದ ಸಾರ್ವಜನಿಕ ದರ್ಶನ, ಸಿನೆಮಾ ಶೂಟಿಂಗ್, ಖಾಸಗಿ ಶಾಲಾ-ಕಾಲೇಜುಗಳ ಮ್ಯಾರಥಾನ್, ಫುಟ್ಬಾಲ್ ಪಂದ್ಯಾವಳಿ, ಇನ್ನಿತರ ದೊಡ್ಡ ಸಮಾರಂಭಗಳು ನಡೆಯುವುದೇ ಹೆಚ್ಚು. ಒಂದುದಿನಕ್ಕೆ ಇಂತಿಷ್ಟು ಬಾಡಿಗೆ ಎಂದು ನಿಗದಿಪಡಿಸಲಾಗಿದ್ದು, ಬಾಡಿಗೆ ಹಣದಿಂದಲೇ ಕ್ರೀಡಾಂಗಣದ ನಿರ್ವಹಣೆ. ವರ್ಷದುದ್ದಕ್ಕೂ ಸಭೆ-ಸಮಾರಂಭಗಳು, ಸಿನೆಮಾ ಶೂಟಿಂಗ್ ಇತ್ಯಾದಿಗಳಿಗೇ ಕ್ರೀಡಾಂಗಣವನ್ನು ಬಳಸಿದರೆ ಅಥ್ಲೀಟ್ಗಳು ಅಭ್ಯಾಸ ಮಾಡುವುದಾದರೂ ಎಲ್ಲಿ? ಬೆಂಗಳೂರಿನ ಹೃದಯಭಾಗದಲ್ಲಿ ಈ ಕ್ರೀಡಾಂಗಣವಿದ್ದರೂ ಅಥ್ಲೀಟ್ಗಳ ಪಾಲಿಗೆ ಮಾತ್ರ ಇದು ಊಟಕ್ಕಿಲ್ಲದ ಉಪ್ಪಿನ ಕಾಯಿಯಂತಾಗಿದೆ.
ಟ್ರಾಕ್ ನಿರ್ವಹಣೆಗೆ ಇಲ್ಲ ತಜ್ಞರ ಸಮಿತಿ
1987ರಲ್ಲಿ ವಿದೇಶದಿಂದ ತರಿಸಿದ್ದ ಸಿಂಥೆಟಿಕ್ ಟ್ರ್ಯಾಕ್ ಅನ್ನು ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ಅಳವಡಿಸಲಾಗಿತ್ತು. ಅದರ ಅತ್ಯುತ್ತಮ ನಿರ್ವಹಣೆಯಿಂದಾಗಿ ಆ ಟ್ರ್ಯಾಕ್ ಬರೊಬ್ಬರಿ 26 ವರ್ಷಗಳ ಕಾಲ ಬಾಳಿಕೆ ಬಂದಿತ್ತು. ಸಾಯ್ ಕೇಂದ್ರದಲ್ಲಿ ಅಭ್ಯಾಸ ನಡೆಸಿದ ಅಥ್ಲೀಟ್ಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪದಕಗಳನ್ನು ಜಯಿಸಿರುವುದು ಇದೇ ಕಾರಣಕ್ಕಾಗಿ.
ಟ್ರ್ಯಾಕ್ ನಿರ್ವಹಣೆ ನಿರಂತರವಾಗಿರಬೇಕು. ಭೂಮಿಯೊಳಗಿನ ಉಷ್ಣಾಂಶ ಏರುಪೇರಾದಾಗ ಸಿಂಥೆಟಿಕ್ ಟ್ರ್ಯಾಕ್ನಲ್ಲಿ ಉಬ್ಬು-ತಗ್ಗುಗಳು ಕಂಡುಬರುವುದು ಸ್ವಾಭಾವಿಕ. ಅಂತಹ ಸಂದರ್ಭದಲ್ಲಿ ಹೆಚ್ಚು ಉಷ್ಣಾಂಶವಿರದಂತೆ ನೋಡಿಕೊಳ್ಳಲು ಟ್ರ್ಯಾಕ್ ತಜ್ಞರ ಅಗತ್ಯವಿದೆ. ಹಾಗಾಗಿ ತಜ್ಞರ ಸಮಿತಿಯೊಂದನ್ನು ನೇಮಿಸಬೇಕು ಎಂದು ಹಿರಿಯ ಅಥ್ಲೀಟ್ಗಳು, ಕೋಚ್ಗಳು ಹೇಳುತ್ತಲೇ ಇದ್ದಾರೆ. ಆದರೆ ಅದನ್ನು ಕೇಳಿಸಿಕೊಳ್ಳುವ ಕ್ರೀಡಾಇಲಾಖೆಯ ಕರುಣಾಳು ಕಿವಿಗಳು ಮಾತ್ರ ಇಲ್ಲ.
ಕಣ್ತೆರೆದ ಇಲಾಖೆ, ಆದರೆ…?
ಕಂಠೀರವ ಕ್ರೀಡಾಂಗಣದಲ್ಲಿರುವ ಸಾಲುಸಾಲು ಸಮಸ್ಯೆಗಳ ಬಗ್ಗೆ ಕನ್ನಡದ ಜನಪ್ರಿಯ ದೈನಿಕ ‘ಕನ್ನಡಪ್ರಭ’ ಸರಣಿ ವರದಿ ಪ್ರಕಟಿಸಿದ ಬಳಿಕ ರಾಜ್ಯ ಕ್ರೀಡಾ ಇಲಾಖೆ ಕಣ್ತೆರೆದಿದೆ. ಗುಂಡಿಬಿದ್ದ ಸಿಂಥೆಟಿಕ್ ಟ್ರ್ಯಾಕ್ ತೆಗೆದು ಹೊಸ ಟ್ರ್ಯಾಕ್ ಅಳವಡಿಕೆಗೆ ಇಲಾಖೆ ಟೆಂಡರ್ ಕರೆದಿದೆ. ಹರಕಲು ಜಿಮ್ನಿಂದ ಹಾಳಾದ ಸಾಮಗ್ರಿಗಳನ್ನು ತೆರವುಗೊಳಿಸಿದೆ. ಪಬ್ಲಿಕ್ ಟಾಯ್ಲೆಟ್ನಂತಿದ್ದ ದುರ್ನಾತ ಬೀರುವ ಶೌಚಾಲಯಗಳ ಸ್ವಚ್ಛತಾ ಕಾರ್ಯ ಆರಂಭವಾಗಿದೆ. ಶೀಘ್ರವೇ ಕಂಠೀರವ ಕ್ರೀಡಾಂಗಣವನ್ನು ಸುಸ್ಥಿತಿಗೆ ತರುವುದಾಗಿ ಇಲಾಖೆಯ ಅಧಿಕಾರಿಗಳು ಭರ್ಜರಿ ಭರವಸೆ ನೀಡಿದ್ದಾರೆ! ಈ ನಡುವೆ ಅವ್ಯವಸ್ಥೆಗಳ ಆಗರವಾಗಿರುವ ಕಂಠೀರವ ಕ್ರೀಡಾಂಗಣಕ್ಕೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ (ಪಿಎಸಿ) ಅಧ್ಯಕ್ಷ ಆರ್. ಅಶೋಕ್ ಮತ್ತು ಸದಸ್ಯರು ದಿಢೀರ್ ದಾಳಿ ನಡೆಸಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದೂ ಆಗಿದೆ. ರಾಜ್ಯಮಟ್ಟದ ಕ್ರೀಡಾಂಗಣವಾಗಿರುವ ಕಂಠೀರವದಲ್ಲಿ ಕ್ರೀಡೇತರ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಪಿಎಸಿ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿಯೂ ಪಿಎಸಿ ಅಧ್ಯಕ್ಷ ಆರ್. ಅಶೋಕ್ ಎಚ್ಚರಿಸಿರುವುದು ಕ್ರೀಡಾಪಟುಗಳ ಪಾಲಿಗೆ ಸಮಾಧಾನ ತಂದಿರುವ ಸಂಗತಿ.
ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಕ್ರೀಡಾಂಗಣಕ್ಕೆ ದಾಳಿ ನಡೆಸಿ, ಪರಿಶೀಲನೆ ಮಾಡಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ ಬೆನ್ನಿಗೆ ಕ್ರೀಡಾ ಇಲಾಖೆಯ ಉನ್ನತ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದಾರೆ. ಈ ಅಧಿಕಾರಿಗಳು ಇರುವುದೇ ಕ್ರೀಡೆಗೆ ಅಗತ್ಯವಾಗಿರುವ ಕ್ರೀಡಾಂಗಣಗಳು, ಕ್ರೀಡಾಪಟುಗಳ ಯೋಗಕ್ಷೇಮ ನಿರ್ವಹಣೆಗಾಗಿ. ಇವರನ್ನು ಎಚ್ಚರಿಸಲು ಇನ್ನಾರೋ ಏಕೆ ಬರಬೇಕು? ಪಿಎಸಿ ಸೂಚನೆ ನೀಡಿದ ಬಳಿಕವೇ ಕ್ರೀಡಾ ಇಲಾಖೆ ಎಚ್ಚೆತ್ತುಕೊಳ್ಳುವುದಾದರೆ ಆ ಇಲಾಖೆ ಇದ್ದೂ ಏನು ಪ್ರಯೋಜನ?
ಕೋಮಾ ಸ್ಥಿತಿಗೆ ತಲಪಿರುವ ರಾಜ್ಯದ ಮೈತ್ರಿ ಸರ್ಕಾರಕ್ಕೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದರಲ್ಲೇ ಚಿಂತೆ. ಅದಕ್ಕಿಂತ ಮಹತ್ತ್ವದ ಸಂಗತಿ ಸದ್ಯಕ್ಕೆ ಅದರ ಕಣ್ಣು ಮುಂದೆ ಯಾವುದೂ ಇಲ್ಲವೆನಿಸಿದೆ. ಹೀಗಿರುವಾಗ ಕಂಠೀರವ ಕ್ರೀಡಾಂಗಣಕ್ಕೆ ಕಾಯಕಲ್ಪ ಆಗಬಹುದೆಂದು ನಿರೀಕ್ಷಿಸುವುದಾದರೂ ಹೇಗೆ? ಅಥ್ಲೀಟ್ಗಳು ರಸ್ತೆಯಲ್ಲಿ, ಮಣ್ಣಿನ ನೆಲದಲ್ಲಿ ಅಭ್ಯಾಸಮಾಡಿ ಪದಕ ಗಳಿಸಲು ಸಾಧ್ಯವೇ?
ದಿಲ್ಲಿ, ಹರ್ಯಾಣ, ಪಂಜಾಬ್, ಆಂಧ್ರ, ತೆಲಂಗಾಣ ಮೊದಲಾದ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ಕ್ರೀಡೆಗೆ ಕೊಡುವ ಆದ್ಯತೆಗಳು ಕರ್ನಾಟಕ ಸರ್ಕಾರಕ್ಕೆ ಮೇಲ್ಪಂಕ್ತಿಯಾಗಬೇಕು. ಕ್ರೀಡಾ ಇಲಾಖೆ, ಕ್ರೀಡಾ ಸಚಿವರಿದ್ದುಬಿಟ್ಟರಷ್ಟೆ ಕ್ರೀಡಾಪಟುಗಳು ಪದಕ ಗೆಲ್ಲಲು ಸಾಧ್ಯವಿಲ್ಲ. ಸುಸಜ್ಜಿತ ಕ್ರೀಡಾಂಗಣ, ಮೂಲಸೌಕರ್ಯ, ಸಕಲ ರೀತಿಯಲ್ಲಿ ಸೂಕ್ತ ಪೆÇ್ರೀತ್ಸಾಹ ಇದ್ದಾಗಲೇ ಕ್ರೀಡಾಪಟುಗಳು ರಾಜ್ಯದ ಕೀರ್ತಿಯನ್ನು ಬಾನೆತ್ತರಕ್ಕೆ ಹರಡುವುದು ಸಾಧ್ಯ.
ರಾಜ್ಯದ ಕ್ರೀಡಾ ಇಲಾಖೆ ಊಟಕ್ಕಿಲ್ಲದ ಉಪ್ಪಿನಕಾಯಿ ಆಗಬಾರದು ಅಷ್ಟೇ.