ಫ್ರಾನ್ಸ್, ಇಟಲಿ ದೇಶಗಳ ಎಲ್ಲೆ ಪ್ರದೇಶದ ಮೆಡಿಟರೇನಿಯನ್ ಸಮುದ್ರದ ತೀರದ ಮೇಲಿದೆ ಈ ಪುಟ್ಟ ದೇಶ -‘ಮಾನುಕೋ.’ ಅನೇಕ ದೇಶಗಳ ರಾಜ್ಯಗಳೇ ಈ ದೇಶಕ್ಕಿಂತ ಹೆಚ್ಚು ದೊಡ್ಡದಾಗಿವೆ ಎಂದು ಹೆಮ್ಮೆ ಪಡಬಹುದು. ಈ ಮಹಾಸಾಮ್ರಾಜ್ಯದ ಜನಸಂಖ್ಯೆ ಕೇವಲ ಏಳುಸಾವಿರವನ್ನೂ ಮೀರಲಿಕ್ಕಿಲ್ಲ. ಈ ದೇಶದ ಭೂಪ್ರದೇಶವನ್ನು ಸಮನಾಗಿ ಹಂಚಿದರೆ ಒಬ್ಬೊಬ್ಬ ಪ್ರಜೆಗೂ ಒಂದೊಂದು ಎಕರೆಯನ್ನು ಮೀರದಷ್ಟು ಸಿಕ್ಕಬಹುದೇನೋ!
ಈ ಅಟಿಕೆ ರಾಜ್ಯಕ್ಕೊಬ್ಬ ರಾಜ. ಅವನಿಗೊಂದು ಅರಮನೆ, ಸಂಸ್ಥಾನಿಕರು, ಮಂತ್ರಿಗಳು, ಸೈನಿಕರು, ಅವರಿಗೊಬ್ಬ ದಂಡನಾಯಕ. ಸೈನ್ಯ ದೊಡ್ಡದೇನಲ್ಲ; ಕೇವಲ ಅರವತ್ತು ಮಂದಿಯ ಸೈನಿಕ ದಳ. ಎಲ್ಲ ದೇಶಗಳಂತೆ ಅಲ್ಲಿಯೂ ತೆರಿಗೆ ಪದ್ಧತಿ ಇರಬೇಕಲ್ಲ. ತೆರಿಗೆಯ ಮೂಲಆದಾಯ ಹೊಗೆಸೊಪ್ಪು, ಮದ್ಯ, ಸಾರಾಯಿ ಮತ್ತು ತಲೆಗಂದಾಯಗಳಿಂದ ಸಂದಾಯವಾಗುತ್ತಿತ್ತು. ಮದ್ಯಸೇವನೆ ಮಾಡುವವರ ಸಂಖ್ಯೆ ಗಣನೀಯವಾಗಿ ಕಡಮೆ ಇದ್ದುದರಿಂದ ಆ ಕೊರತೆಯನ್ನು ಜೂಜುಅಡ್ಡೆಗಳ ಮೇಲೆ ಹೇರಿ ಭರಿಸಲಾಗುತ್ತಿತ್ತು. ಜೂಜಿನಲ್ಲಿ ಗೆಲವಾಗಲಿ ಸೋಲಾಗಲಿ ಅಡ್ಡೆಯ ಮಾಲಿಕನಿಗೆ ಶೇಕಡವಾರಿನಂತೆ ಇಂತಿಷ್ಟು ಕಡ್ಡಾಯವಾಗಿ ಕೊಡಬೇಕಾಗುತ್ತಿತ್ತು. ಕೆಲವು ಬಾರಿ ಜೂಜುಕೋರರು ತಮ್ಮ ಹಣವನ್ನೆಲ್ಲಾ ಜೂಜಿನಲ್ಲಿ ಕಳೆದುಕೊಂಡು ಹತಾಶರಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಸಂಗಗಳು ಉಂಟು. ಅಡ್ಡೆಯಲ್ಲಿ ಸಂಗ್ರಹವಾದ ಹಣದಲ್ಲಿ ರಾಜ್ಯಕ್ಕೂ ಇಂತಿಷ್ಟು ಪಾಲು ಸಂದಾಯವಾಗುತ್ತಿತ್ತು. ಮಾನುಕೋ ರಾಜನಿಗೆ ಕುಡಿತ ಜೂಜು ಇವೆಲ್ಲ ಸಭ್ಯಸಮಾಜಕ್ಕೆ ಕಳಂಕವೆಂದು ತಿಳಿದಿದ್ದರೂ, ಅದರಿಂದ ಬರುವ ತೆರಿಗೆ ಆದಾಯದ ಆಮಿಷದಿಂದಾಗಿ ತನ್ನ ಅಂಗೀಕಾರವನ್ನಿತ್ತಿದ್ದ. ಇಲ್ಲವಾದರೆ ತಾನು ರಾಜನಾಗಿ ತನ್ನ ಅಧಿಕಾರ ಘನತೆ ಗೌರವಗಳನ್ನು ಸಂಭಾಳಿಸುವುದಾದರೂ ಹೇಗೆಂದು ಅವನ ತರ್ಕ.
ಹೀಗಿರುವಲ್ಲಿ ಆ ಆಟಿಕೆ ರಾಜ್ಯದಲ್ಲಿ ಒಂದು ಕೊಲೆ ಪ್ರಸಂಗ ನಡೆಯಿತು. ಹಿಂದೆಂದೂ ಹೀಗೆ ಆಗದಿದ್ದುದರಿಂದ ಜನರು ಭಯಭೀತರಾದರು. ತಮ್ಮ ನೈತಿಕತೆಗೆ ಇದೊಂದು ದೊಡ್ಡ ಪೆಟ್ಟೆಂದು ಭಾವಿಸಿದರು. ನ್ಯಾಯಾಲಯದಲ್ಲಿ ವಾದ-ಪ್ರತಿವಾದಗಳಾದವು. ತಪ್ಪಿತಸ್ಥನನ್ನು ಮರಣದಂಡನೆಗೆ ಗುರಿಪಡಿಸಬೇಕೆಂದು ನ್ಯಾಯಾಧೀಶರು ತೀರ್ಪಿತ್ತರು. ರಾಜನು ಇದಕ್ಕೆ ತನ್ನ ಅಂಗೀಕಾರದ ಮುದ್ರೆಯೊತ್ತಿದ. ಆದರೆ ತೀರ್ಪನ್ನು ಕಾರ್ಯಗತಗೊಳಿಸುವಲ್ಲಿ ಒಂದು ದೊಡ್ಡ ಅಡ್ಡಿ ಉಂಟಾಯಿತು. ಆ ರಾಜ್ಯದಲ್ಲಿ ತಲೆ ಕತ್ತರಿಸಲು ಉಪಯೋಗಿಸುವ ‘ಗುಲೆಟಿನ್’ ಎಂಬ ಯಂತ್ರವಾಗಲಿ, ಅದರ ನಿರ್ವಾಹಕನಾಗಲಿ ಇರಲಿಲ್ಲ. ಮಂತ್ರಿಮಂಡಲ ಈ ಬಗ್ಗೆ ಚರ್ಚೆ ನಡೆಸಿ ನಿರ್ಣಯಿಸಿದ ಪ್ರಕಾರ ಗುಲೆಟಿನ್ ಯಂತ್ರವನ್ನೂ ಅದನ್ನು ನಿರ್ವಹಿಸಲು ತಕ್ಕ ವ್ಯಕ್ತಿಯೊಬ್ಬನನ್ನೂ ಕಳುಹಿಸಿಕೊಡಬೇಕೆಂದು ಫ್ರೆಂಚ್ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಫ್ರೆಂಚ್ ಸರ್ಕಾರದಿಂದ ಮಾರುತ್ತರದಲ್ಲಿ ಗುಲೆಟಿನ್ ಯಂತ್ರವನ್ನು ಅದರ ನಿರ್ವಾಹಕನನ್ನು ಕಳುಹಿಸಿಕೊಡಲು ತಮ್ಮ ಅಭ್ಯಂತರವಿಲ್ಲವೆಂದೂ, ಆದರೆ ಅದಕ್ಕೆ 16,000 ಫ್ರಾನ್ಸಸ್ ವೆಚ್ಚ ಕೊಡಬೇಕಾಗುವುದೆಂದೂ ಸೂಚಿಸಲಾಗಿತ್ತು. ರಾಜನಿಗೆ ಇದು ಬಹಳ ದುಬಾರಿ ವ್ಯವಹಾರವೆನ್ನಿಸಿತು. ಒಬ್ಬ ಕೊಲೆಗಡುಕನ ತಲೆ ತೆಗೆಯಲು ಇಷ್ಟೊಂದು ಹಣ ತೆರಬೇಕೇ! ಇದು ರಾಜ್ಯದ ಪ್ರತಿ ಪ್ರಜೆಯ ತಲೆಗೆ ಎರಡು ಪ್ರಾನ್ಸಸ್ನಷ್ಟಾಯಿತು. ರಾಜ ಈ ಬೇಡಿಕೆಯನ್ನು ತಿರಸ್ಕರಿಸಿದ. ಮತ್ತೆ ಮಂತ್ರಿಮಂಡಲದ ಸಭೆ ಸೇರಿ ನಿರ್ಧರಿಸಿ ಈ ಬಾರಿ ಇಟಲಿಯ ರಾಜನಿಗೆ ಗುಲೆಟಿನ್ ಯಂತ್ರಕ್ಕಾಗಿ ಬೇಡಿಕೆ ಸಲ್ಲಿಸಲಾಯಿತು. ಫ್ರೆಂಚ್ ಸರ್ಕಾರ ಗಣತಂತ್ರವಾದಿ ಸರ್ಕಾರ; ಅವರಿಗೆ ರಾಜರು ಆಳ್ವಿಕೆಯಲ್ಲಿ ಗೌರವವಿಲ್ಲ. ಇಟಲಿಯ ಸರ್ಕಾರ ಸರ್ವಾಧಿಕಾರ ಸರ್ಕಾರ. ಆದ್ದರಿಂದ ಅಗ್ಗದ ದರದಲ್ಲಿ ಗುಲೆಟಿನ್ ಯಂತ್ರ ಲಭ್ಯವಾಗಬಹುದು. ಇಟಲಿ ಸರ್ಕಾರ ತನ್ನ ಒಪ್ಪಿಗೆಯನ್ನು ಸೂಚಿಸಿ ಗುಲೆಟಿನ್ ಯಂತ್ರದ ವೆಚ್ಚ 62000 ಪ್ರಾನ್ಸಸ್ ಎಂದು ನಮೂದಿಸಿತು. ಇದು ದುಬಾರಿ ವ್ಯವಹಾರವೇ. ಇದು ಪ್ರತಿ ಮಾನೇಕೋ ಪ್ರಜೆಯ ತಲೆಗಂದಾಯ ತಲಾ 2 ಫ್ರಾನ್ಸಸ್ನಷ್ಟಾಗುತ್ತದೆ. ಇದು ಔಚಿತ್ಯಪೂರ್ಣ ಯೋಜನೆಯಲ್ಲವೆಂದು ರಾಜ ತಿರಸ್ಕರಿಸಿದ. ಖದೀಮ ಕೊಲೆಗಾರನ ತಲೆ ಇಷ್ಟು ಬೆಲೆಯುಳ್ಳದ್ದು ಎಂಬುದು ತೀರ ಅಸಂಬದ್ಧ. ಇನ್ನೊಂದು ಯೋಜನೆಯು ಆಯೋಗದ ಮುಂದೆ ಸುಳಿದು ಹೋಯಿತು. ನಮ್ಮ ಸೈನಿಕರು ಯುದ್ಧರಂಗದಲ್ಲಿ ಅನೇಕ ಶತ್ರು ಸೈನಿಕರ ರುಂಡಗಳನ್ನು ಚೆಂಡಾಡುತ್ತಾರೆ.
ಇಂತಹವರಲ್ಲಿ ಯಾರಾದರೊಬ್ಬ ಸೈನಿಕ ಒಬ್ಬ ಅಪರಾಧಿಯ ತಲೆಯನ್ನು ಉರುಳಿಸಲಾರನೇ? ಸೈನಿಕರ ಮುಂದೆ ಈ ಯೋಜನೆಯನ್ನು ಪ್ರಸ್ತಾಪಿಸಲಾಯಿತು. ಆದರೆ ಈ ಕೆಲಸಕ್ಕೆ ಯಾವೊಬ್ಬ ಸೈನಿಕನು ಮುಂದೆ ಬರಲಿಲ್ಲ. ಒಬ್ಬ ವ್ಯಕ್ತಿಯ ತಲೆಯನ್ನು ಈ ರೀತಿ ಕತ್ತರಿಸುವ ಬಗ್ಗೆ ತಮಗೆ ಸೈನ್ಯದಲ್ಲಿ ತರಬೇತಿ ನೀಡಿಲ್ಲವೆಂದೂ, ಇದು ತÀಮ್ಮಿಂದಾಗದ ಕೆಲಸವೆಂದೂ ಸಾರಾಸಗಟಾಗಿ ತಿರಸ್ಕರಿಸಿದರು.
ಮತ್ತೊಮ್ಮೆ ಮಂತ್ರಿಮಂಡಲದ ಸಭೆ ಸೇರಿತು. ಸರ್ವಾನುಮತದಿಂದ ಒಂದು ಆಯೋಗವನ್ನು ರಚಿಸಲಾಯಿತು. ಅನೇಕ ದಿನಗಳವರೆಗೆ ಚರ್ಚೆ ನಡೆಸಿ ರಾಜನಿಗೆ ವರದಿ ಸಲ್ಲಿಸಲಾಯಿತು. ಅದರಲ್ಲಿ ಮರಣದಂಡನೆಗೆ ಪರ್ಯಾಯವಾಗಿ ಆಜೀವ ಕಾರಾಗಾರ ಶಿಕ್ಷೆಯನ್ನು ವಿಧಿಸಬಹುದೆಂದು ಸೂಚಿಸಲಾಗಿತ್ತು. ಇದು ಅಪರಾಧಿಗೆ ಮರಣದಂಡನೆ ತಪ್ಪಿಸಿದಂತೆಯೂ ತೀರ ಕಡಮೆ ಖರ್ಚಿನಲ್ಲಿ ಶಿಕ್ಷೆಯನ್ನು ಕಾರ್ಯಗತಗೊಳಿಸಿದಂತೆ ಆಯಿತು. ರಾಜನು ಈ ತೀರ್ಮಾನವನ್ನು ಅಂಗೀಕರಿಸಿದ. ಹೀಗೆ ಅಪರಾಧಿ ಒಂದು ವರ್ಷ ಕಾಲ ಕಾರಾಗೃಹವಾಸ ಮುಗಿಸಿದ. ಮತ್ತೆ ಹೊಸ ಸಮಸ್ಯೆಯೆಂದು ಎದುರಾಯಿತು. ಒಬ್ಬ ಆಮರಣಾಂತ ಕಾರಾಗೃಹ ವಾಸಿ ಕೈದಿಯನ್ನು ಸಾಕುವುದು ಅಷ್ಟು ಸುಲಭವಲ್ಲವೆಂದು ಜೈಲಿನ ಅಧಿಕಾರಿಗಳಿಗೆ ಅರಿವಾಯಿತು. ಕೈದಿಯ ಖರ್ಚು-ವೆಚ್ಚದ ಜೊತೆಗೆ ಅವನಿಗೊಬ್ಬ ಕಾವಲುಗಾರರನ್ನು ನೇಮಿಸಿ ಅವನ ಸಂಬಳ-ಸಾರಿಗೆಯನ್ನು ಸರ್ಕಾರವೇ ಭರಿಸಬೇಕಾಗಿತ್ತು. ಕಾವಲುಗಾರನಿಗಾಗಿ ಮಾಡುವ ವಾರ್ಷಿಕ ವೆಚ್ಚ 600 ಫ್ರಾನ್ಸಸ್ಗಳನ್ನೂ ಮೀರುತ್ತಿತ್ತು. ಇದಕ್ಕಿಂತಲೂ ಆತಂಕಕಾರಿ ವಿಷಯವೆಂದರೆ ಕೈದಿ ಇನ್ನೂ ಯುವಕ, ದಷ್ಟಪುಷ್ಟನಾಗಿದ್ದ. ಇನ್ನು 30-40 ವರ್ಷದವರೆಗೆ ಸಾಯುವ ಆಸಾಮಿಯಲ್ಲ. ಅಷ್ಟು ವರ್ಷ ಅವನನ್ನೂ ಜೊತೆಗೆ ಕಾವಲುಗಾರನನ್ನೂ ಸಾಕುವುದೆಂದರೆ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟವಾಗುತ್ತಿತ್ತು. ಮತ್ತೆ ಮಂತ್ರಿಮಂಡಲ ಸಭೆ ಸೇರಿ ತಲೆ ತುರಿಸಿಕೊಳ್ಳಲಾರಂಭಿಸಿತು. ಈ ಖದೀಮ ಕೈದಿಯನ್ನು ಕಡಮೆ ಖರ್ಚಿನಲ್ಲಿ ನಿಭಾಯಿಸುವುದೊಂದು ಬೃಹತ್ ಪ್ರಶ್ನೆಯಾಗಿತ್ತು. ಇದಕ್ಕೊಂದು ಪರಿಹಾರವನ್ನು ಹುಡುಕಲಾಯಿತು. ಅದೇನೆಂದರೆ ಕೈದಿಯ ಕಾವಲುಗಾರನನ್ನು ಕೆಲಸದಿಂದ ವಜಾ ಮಾಡುವುದು. ಆಗ ಕೈದಿ ಜೈಲಿನಿಂದ ತಪ್ಪಿಸಿಕೊಂಡು ಹೋಗಿ ಎಲ್ಲಿಯಾದರೂ ಸಾಯಲಿ, ಇದರಿಂದ ರಾಜ್ಯದ ಬೊಕ್ಕಸಕ್ಕೆ ಎರಡು ರೀತಿ ಉಳಿತಾಯ. ಇದೇ ಸರಿಯಾದ ಮಾರ್ಗವೆಂದು ರಾಜ ಕೂಡಲೇ ತನ್ನ ತೀರ್ಪನ್ನು ಅಮಲುಗೊಳಿಸಿದ. ಕಾವಲುಗಾರನನ್ನು ವಜಾ ಮಾಡಲಾಯಿತು. ಕೈದಿ ಊಟದ ಸಮಯಕ್ಕೆ ಸರಿಯಾಗಿ ತನ್ನ ಕೊಠಡಿಯಿಂದ ಹೊರಬಂದ. ಕಾವಲುಗಾರರು ನಾಪತ್ತೆ. ಕೈದಿ ತಾನೇ ಅಡುಗೆಮನೆಗೆ ಹೋಗಿ ಅಡುಗೆಯವರು ನೀಡಿದ ಆಹಾರವನ್ನು ತಿಂದು ತೇಗಿ ತನ್ನ ಕೊಠಡಿಗೆ ಹಿಂದಿರುಗಿ ಆರಾಮವಾಗಿ ಕಾಲುಚಾಚಿ ಮಲಗಿದ. ಇದೆ ಕೈದಿಯ ದಿನಚರಿಯಾಯಿತು. ರಾಜ ಎಣಿಸಿದಂತೆ ಅವನು ತಪ್ಪಿಸಿಕೊಂಡು ಹೋಗಲೇ ಇಲ್ಲ. ಪ್ರಕರಣ ಮತ್ತಷ್ಟು ಗೋಜಲಾಯಿತು.
ಮಂತ್ರಿ ತಾನೇ ಸ್ವಯಂ ಕೈದಿಯನ್ನು ತನ್ನ ಬಳಿಗೆ ಕರೆಸಿಕೊಂಡು ಹೇಳಿದ, “ಈಗ ನೀನು ಸ್ವತಂತ್ರ. ನಿನ್ನನ್ನು ತಡೆಯುವವರು ಯಾರು ಇಲ್ಲ. ನಿನ್ನಿಚ್ಛೆ ಬಂದ ಕಡೆಗೆ ಹೋಗಬಹುದು.” ಕೈದಿ ಉತ್ತರಿಸಿದ, “ಅದು ನನಗೆ ತಿಳಿದಿದೆ. ಆದರೆ ಎಲ್ಲಿಗೆ ಹೋಗಲಿ, ಏನು ಮಾಡಲಿ? ನನಗೆ ಮನೆ ಮಠ ಸಂಸಾರ ಒಂದೂ ಇಲ್ಲ. ಜೈಲಿನಿಂದ ಬಂದವನನ್ನು ಯಾರು ತಾನೇ ಆಧರಿಸಿ ಕೆಲಸ ಕೊಟ್ಟಾರು? ನೀವು ನನ್ನ ಬಾಳನ್ನೇ ಹಾಳು ಮಾಡಿದಿರಿ. ಬದುಕಿಯೂ ಸತ್ತಂತಾದೆ. ಮೊದಲಿಗೆ ನನಗೆ ಮರಣದಂಡನೆ ವಿಧಿಸಿದ್ದರೆ ಯಾವ ಅಡಚಣೆಯೂ ಇರುತ್ತಿರಲಿಲ್ಲ. ಎರಡನೆಯದಾಗಿ ನನ್ನನ್ನು ಕಾರಾಗೃಹಕ್ಕೆ ತಳ್ಳಿ ನನಗೊಬ್ಬ ಕಾವಲುಗಾರನನ್ನು ನೇಮಿಸಿದಿರಿ. ನಂತರ ನನ್ನ ವಿರುದ್ಧ ಷಡ್ಯಂತ್ರ ಮಾಡುವ ಸಲುವಾಗಿ ಅವನನ್ನು ಕೆಲಸದಿಂದ ತೆಗೆದುಹಾಕಿದಿರಿ. ನನ್ನ ಆಹಾರವನ್ನು ನಾನೇ ಕಾರಾಗೃಹದ ಅಡುಗೆಮನೆಯಿಂದ ತಂದು ತಿನ್ನುತ್ತಿದ್ದೇನೆ. ನಾನು ಯಾವುದನ್ನು ಪ್ರತಿಭಟಿಸಲಿಲ್ಲ. ಆದರೆ ಈಗ ನಾನು ಹೋಗುವುದಾದರೂ ಎಲ್ಲಿಗೆ? ನಾನು ಎಲ್ಲಿಗೂ ಹೋಗುವುದಿಲ್ಲ.
ಮಂತ್ರಿಮಂಡಲದವರ ಮಸಲತ್ತು ಅವರಿಗೆ ತಿರುಗುಬಾಣವಾಯಿತು. ಅವನನ್ನು ಇಲ್ಲಿಂದ ತೊಲಗಿಸಲು ಒಂದೇ ಮಾರ್ಗ, ಪ್ರತಿ ತಿಂಗಳು ನಾನೇ ಅವನಿಗೆ 600 ಫ್ರಾನ್ಸಸ್ ಜೀವನಾಂಶವನ್ನು ನಿಗದಿ ಮಾಡಿದರೆ ಇಲ್ಲಿಂದ ತೊಲಗಿಯಾನು. ಸಮಸ್ಯೆ ಕೊನೆಗೂ ಪರಿಹಾರವಾಯಿತು. ಜೀವನಾಂಶದ ಮೂರನೇ ಒಂದು ಭಾಗವನ್ನು ಮುಂಗಡವಾಗಿ ಪಡೆದು ಕಾರಾಗೃಹವನ್ನು ತೊರೆದು ನಡೆದ. ಅನತಿ ದೂರದಲ್ಲೇ ಸ್ವಲ್ಪ ಜಮೀನನ್ನು ಖರೀದಿಸಿ ತರಕಾರಿ ಹಣ್ಣುಗಳನ್ನು ಬೆಳೆಸಿ ಪ್ರಾಮಾಣಿಕನಾಗಿ ಜೀವನ ನಡೆಸಲಾರಂಭಿಸಿದ. ಮತ್ತೆ ತಲೆಹೋಗುವಂತಹ ಯಾವ ಅಪರಾಧವನ್ನು ಮಾಡಲಿಲ್ಲ. ಆದರೆ ಪ್ರತಿ ತಿಂಗಳು ಕಾರಾಗೃಹಕ್ಕೆ ಹೋಗಿ ಅಲ್ಲಿನ ಅಧಿಕಾರಿಗಳಿಂದ ತನ್ನ ಮಾಶಾಸನ 600 ಫ್ರಾನ್ಸಸ್ಗಳನ್ನು ವಸೂಲು ಮಾಡುವುದನ್ನು ಮಾತ್ರ ಮರೆಯಲಿಲ್ಲ.
(ಮೂಲ: ಟಾಲ್ಸ್ಟಾಯ್ ಅವರ ಸಣ್ಣಕಥೆ-‘Too Dear’)