“ಮಾತು ಬೆಳ್ಳಿ, ಮೌನ ಬಂಗಾರ” ಎಂಬ ಮಾತೊಂದಿದೆ. ಆದರೆ ಮಾ|| ಹಿರಣ್ಣಯ್ಯನವರು ಈ ಮಾತನ್ನು ‘ಮೌನ ಬೆಳ್ಳಿ; ಮಾತು ಬಂಗಾರ’ ಎಂದು ಮಾರ್ಪಡಿಸಿ ತಮ್ಮ ಆರು ದಶಕಗಳ ವೃತ್ತಿ ಬದುಕಿನಲ್ಲಿ ಮಾತನ್ನು ಓತ-ಪೆÇ್ರೀತವಾಗಿ ಬಳಸಿ-ಬೆಳೆಸಿ, ವಾಗ್ವಿಲಾಸದಿಂದ ಸಮಾಜದ ಓರೆ-ಕೋರೆಗಳಿಗೆ ಕನ್ನಡಿ ಹಿಡಿದು, ಹತ್ತಿರ ಹತ್ತಿರ ಹತ್ತು ಸಾವಿರಕ್ಕೂ ಮೀರಿದ ಪ್ರದರ್ಶನ ದಾಖಲೆಯ ‘ಲಂಚಾವತಾರ’ ನಾಟಕದ ಮೂಲಕ ದೇಶ ವಿದೇಶಗಳಲ್ಲೂ ಹೆಸರು ಮಾಡಿರುವ ತ್ರಿವಿಕ್ರಮ- ನುಡಿಗಾರುಡಿಗ, ನಟ ರತ್ನಾಕರ ಮಾತು ನಿಲ್ಲಿಸಿ ಚಿರ ಮೌನಕ್ಕೆ ಸರಿದು ತಮ್ಮ ಅಸಂಖ್ಯ ಅಭಿಮಾನಿ ಅನ್ನದಾತರನ್ನೂ ಮೂಕಪ್ರೇಕ್ಷಕರನ್ನಾಗಿಸಿದ್ದಾರೆ; ಬಣ್ಣ ಅಳಿಸಿ, ಚಿರ ನೆನಪು ಉಳಿಸಿ ನೇಪಥ್ಯಕ್ಕೆ ಸರಿದಿದ್ದಾರೆ.
ನರಸಿಂಹಮೂರ್ತಿ ಆಲಿಯಾಸ್ ಮಾ|| ಹಿರಣ್ಣಯ್ಯ ಹುಟ್ಟಿದ್ದು ಫೆಬ್ರುವರಿ 15, 1934ರಂದು ಮೈಸೂರಿನಲ್ಲಿ. ತಂದೆ ಕೆ. ಹಿರಣ್ಣಯ್ಯ ‘ಕಲ್ಚರ್ಡ್ ಕಮಿಡಿಯನ್’ ಎಂದು ಹೆಸರಾದವರು. 1941ರಲ್ಲಿ ‘ಹಿರಣ್ಣಯ್ಯ ಮಿತ್ರ ಮಂಡಳಿ’ (ಇದೇ ಹೆಸರನ್ನು ಮಾ|| ಹಿರಣ್ಣಯ್ಯನವರೂ ಮುಂದುವರಿಸಿಕೊಂಡು ಬಂದರು) ಸ್ಥಾಪಿಸಿ ಕನ್ನಡ ರಂಗಭೂಮಿಗೆ ಸಾಮಾಜಿಕ ನಾಟಕಗಳನ್ನು ತಂದು ಹೊಸ ತಿರುವನ್ನಿತ್ತರು. ‘ದೇವದಾಸಿ’, ‘ಮಕ್ಮಲ್ ಟೋಪಿ’, ‘ಸದಾರಮೆ’, ‘ಪಂಗನಾಮ’ ನಾಟಕಗಳ ಮೂಲಕ ಕರ್ನಾಟಕದಾದ್ಯಂತ ಖ್ಯಾತರಾದವರು.
ಕೆಲಕಾಲದ ನಂತರ ತಂದೆಯವರ ಆರೋಗ್ಯ ಕ್ಷೀಣಿಸಿ, ಜೊತೆಗೆ ಕಂಪೆನಿ ವೈಭವವೂ ಕುಂದಿದಾಗ ‘ಅಣ್ಣಾ, (ಮಾ|| ಹಿರಣ್ಣಯ್ಯನವರಿಗೆ) ಇನ್ನು ನನ್ನ ಪಾತ್ರಗಳನ್ನು ನೀನೇ ನಿಭಾಯಿಸಬೇಕು’ ಎಂದು ತಂದೆಯವರು ಆಜ್ಞಾಪಿಸಿದಾಗ ನಮ್ಮ ತಂದೆಯವರ ಪೆÇೀಷಾಕುಗಳಲ್ಲಿ ತೂರಿಕೊಳ್ಳಬೇಕಾದ್ದು ಅನಿವಾರ್ಯವಾಯ್ತು. ಆದರೆ
ಪ್ರೇಕ್ಷಕರು (ಹಿರಣ್ಣಯ್ಯನವರ ಪ್ರಕಾರ ಇವರು ಆತ್ಮೀಯ ಅನ್ನದಾತರು) ಈ ಮಾ|| ಹಿರಣ್ಣಯ್ಯನನ್ನು ಅಷ್ಟು ಸುಲಭವಾಗಿ ಬರಮಾಡಿಕೊಳ್ಳಲಿಲ್ಲ. ಅವರ ಪ್ರೀತಿ, ವಿಶ್ವಾಸ ಗಳಿಸಲು ಸುಮಾರು ಒಂದು ದಶಕವೇ ಹಿಡಿಯಿತು. ‘ತಂದೆಯವರ ಖ್ಯಾತಿ ನನಗೆ ಶಾಪವೇ ಆಗಿತ್ತು. ನಾನು ‘ಮಾ|| ಹಿರಣ್ಣಯ್ಯ’ ಆಗದೇ ಕೇವಲ ನರಸಿಂಹಮೂರ್ತಿ ಆಗಬಾರದಿತ್ತೆ ಎಂದು ಹಲವಾರು ಬಾರಿ ಕೊರಗಿದ್ದೆ’ ಎನ್ನುತ್ತಾರೆ ಮಾ|| ಹಿರಣ್ಣಯ್ಯ.
ಝೀರೋದಿಂದ ಹೀರೋವರೆಗೆ
ತಂದೆಯವರ ನಿಧನಾನಂತರ ಆವರಿಸಿದ ಶೂನ್ಯ, ಬೆಂಬತ್ತಿದ್ದ ಸಾಲದ ಶೂಲ – ಇವುಗಳನ್ನು ಮಾ|| ಹಿರಣ್ಣಯ್ಯ ಎದುರಿಸಿದ ಬಗೆ ಫೀನಿಕ್ಸ್ನಂತೆ ಎದ್ದು ಬಂದಂತೆಯೇ ಎಂದರೆ ಅತಿಶಯೋಕ್ತಿಯೇನಲ್ಲ!
‘ಈಗಿನ ಕಲ್ಪನಾ ಥಿಯೇಟರ್ ಬಳಿ ಒಂದು ಕೊಳವಿತ್ತು. ಇದೊಂದು ಹೇಳಿ ಮಾಡಿಸಿದ ಅಜ್ಞಾತ ಸ್ಥಳದಂತಿತ್ತು. ತುತ್ತು ಅನ್ನಕ್ಕೂ ಗತಿಯಿಲ್ಲದ ಮಾ|| ಹಿರಣ್ಣಯ್ಯ ದಿನ (ಆರು ತಿಂಗಳು) ದೂಡಿದ್ದು ಅಲ್ಲಿಯೇ. ನನ್ನ ತಂದೆಯವರ ಆಪ್ತರಾದ ಪುಟ್ಟನಂಜಪ್ಪನವರು ಆಗಾಗ ಬಂದು ಒಂದೆಂಟಾಣಿ ಕೊಟ್ಟು ಹೋಗೋರು. ಹೀಗೆ ಒಂದು ದಿನ ಈ ಕೊಳದಿಂದ ಹೊರಬಂದು ಮರವೊಂದರ ಬಳಿ ನಿಂತಿದ್ದಾಗ ಭುಜದ ಮೇಲೊಂದು ಕೈ ಬಿತ್ತು. ಪುಟ್ಟನಂಜಪ್ಪನವರು ಇರಬೇಕೆಂದು ತಿರುಗಿದರೆ ಅ.ನ. ಕೃಷ್ಣರಾಯರು!’
‘ಏನೋ ನರಸಿಂಹಮೂರ್ತಿ, ಇಲ್ಯಾಕಿದಿಯೋ? ಏನು ಮಾಡ್ತಿದಿಯೋ ಈಗ?’
‘ಏನೂ ಇಲ್ಲಾ ಸಾರ್.’
‘ಏನು ಮಾಡ್ತಿದಿಯೋ ಅಂದ್ರೆ?’
‘ಸುಮ್ಮನಾಗಿಬಿಟ್ಟೆ, ಕೆಲ ನಿಮಿಷಗಳ ನಂತರ ಗೋಳೋ ಅಂತ ಅತ್ತುಬಿಟ್ಟೆ.
‘ಅದೆಷ್ಟೋ ಜನ ಸಾಹಿತಿಗಳು, ಕಲಾವಿದರು, ಕನ್ನಡಾಭಿಮಾನಿಗಳನ್ನು ಬೆಳೆಸಿದ ಕೃಪಾಛತ್ರ ಅ.ನ.ಕೃ. ಮನೆಗೆ ಅತಿಥಿಯಾಗಿ ಪ್ರವೇಶಿಸಿ, ಅವರ ಸುಖಕರ ಆತಿಥ್ಯದಲ್ಲಿ ಕೆಲವು ತಿಂಗಳು ಕಳೆದೆ. ಅಷ್ಟೇ ಅಲ್ಲ, ಅ.ನ.ಕೃ. ಮತ್ತವರ ಸ್ನೇಹಿತರು ಸೇರಿ ನಾಲ್ಕು ಸಾವಿರ ನನ್ನ ಕೈಲಿಟ್ಟು ಕಂಪೆನಿ ಪ್ರಾರಂಭಿಸಲು ಪ್ರೇರೇಪಿಸಿದರು’ – ಎಂದು ನೆನಪಿಸಿಕೊಳ್ಳುವ ಮಾ|| ಹಿರಣ್ಣಯ್ಯ ‘ಝೀರೋದಿಂದ ಹೀರೋ’ ಆಗುವ ದಿಸೆಯಲ್ಲಿಯ ಮೊದಲ ಹೆಜ್ಜೆ ಇದು.
1951ರಿಂದ 1958ರವರೆಗೆ ‘ಕೆ. ಹಿರಣ್ಣಯ್ಯ ಮಿತ್ರ ಮಂಡಳಿ’ಯ ಪುನರುತ್ಥಾನದಲ್ಲಿ ತೊಡಗಿದ ಮಾ|| ಹಿರಣ್ಣಯ್ಯನವರು ಕಂಪೆನಿಯ ಆಡಳಿತ ವ್ಯವಸ್ಥೆಯನ್ನು ಬಳ್ಳಾರಿ ಲಲಿತಮ್ಮ ಮತ್ತವರ ಸೋದರ ವೆಂಕಟಪ್ಪರಿಗೆ ಬಿಟ್ಟು ತಾವು ಕೇವಲ ಅಭಿನಯ ಪರಿಣತಿ, ಸಂಪೂರ್ಣ ಅರ್ಪಣಾಭಾವ, ಶ್ರದ್ಧೆ, ಶಿಸ್ತುಗಳಿಂದ ‘ಸ್ವಯಂಭೂ’ವಿನಂತೆ ಬೆಳೆಯಲು ಯತ್ನಿಸಿದರು; ಬಹುಬೇಗ ಯಶಸ್ವಿಯಾದರು. ತಮ್ಮ ‘ನಾಮಬಲ’ದಿಂದಲೇ ನಾಟಕ ನಿಲ್ಲಿಸಬಹುದೆಂಬ ಹಂತವೂ ಬಹುಬೇಗ ಬಂದುಬಿಟ್ಟಿತು.
ಮಾಸ್ಟರ್ ಮೈಂಡ್ ಗೆದ್ದ ಮಡದಿ
ಡಿಸೆಂಬರ್ 12, 1956, ಶಾಂತಮ್ಮ ಹಿರಣ್ಣಯ್ಯನವರ ಬಾಳಸಂಗಾತಿಯಾಗಿ ‘ಮಾಸ್ಟರ್ಗೊಬ್ಬ ಮಿಸ್ಟ್ರೆಸ್’ ಬಂದ ಶುಭದಿನವರು. ಹೊಸ ಸಂಸಾರಕ್ಕೆ ನಾಂದಿಯಾಗುವ ಜೊತೆಗೇ ಸ್ವತಂತ್ರವಾಗಿ ಕಂಪೆನಿಯ ಉಸ್ತುವಾರಿ ವಹಿಸಿಕೊಳ್ಳಬೇಕಾದ ಜವಾಬ್ದಾರಿಯೂ ಒದಗಿಬಂದ ಕಾಲವದು. ಹಿಂದಿನ ಸಾಲ ಶೂಲಗಳೆಲ್ಲ ಎಂದೋ ತೀರಿದ್ದರೂ ಬರಬೇಕಾಗಿದ್ದ ದುಡ್ಡು ಬಾರದಿದ್ದಾಗ ‘ಮಿನಿರಂಗಪ್ಪ’ನೊಂದಿಗೆ ಚಿತ್ರದುರ್ಗದಲ್ಲಿ ಹೊಸ ಆಡಳಿತ ವ್ಯವಸ್ಥೆಯೊಂದಿಗೆ ‘ಮಿತ್ರಮಂಡಳಿ’ ಕಾರ್ಯಾರಂಭ ಮಾಡಿಯೇ ಬಿಟ್ಟಿತು. ಭರ್ಜರಿ ಕಲೆಕ್ಷನ್! ‘ದಿನದಿಂದ ದಿನಕ್ಕೆ; ಉಟ್ಟ ಬಟ್ಟೆ, ತೊಟ್ಟ ಶರ್ಟ್ನಲ್ಲಿ ಹೊಸದಾಗಿ ಕಂಪೆನಿ ಆರಂಭಿಸಿದಾಗ ಜನ ತಾವೇ ಕುರ್ಚಿ, ಬೆಂಚು ತರೋವ್ರು, ಅವರೇ ಗೇಟಲ್ಲಿ ನಿಲ್ಲೋರು, ಅವರೇ ಹೆಮ್ಮೆಯಿಂದ ಪ್ರಚಾರ ಮಾಡೋರು. ಹೀಗೆ ಜನತಾ ಜನಾರ್ದನನ ರಂಗಭೂಮಿಯಾಯ್ತು ಮಾ|| ಹಿರಣ್ಣಯ್ಯ ಮಿತ್ರಮಂಡಳಿ. ಕೆಲವೇ ದಿನಗಳಲ್ಲಿ ಕಂಪೆನಿ ತನ್ನ ಕಾಲ್ಮೇಲೆ ನಿಲ್ಲುವುದರ ಜೊತೆಗೆ ಸಾಕಷ್ಟು ಲಾಭಾನೂ ಮಾಡಿ ಸುಖದ ದಿನಗಳನ್ನು ತಂದಿತ್ತು.’
‘ಲಂಚಾವತಾರ’ದ ಉದಯ
ಈ ದಿನಗಳಲ್ಲೇ ದುರ್ಗಕ್ಕೆ ‘ಥ್ರೀ ರಿಂಗ್ ಸರ್ಕಸ್’ ಬಂದು ನಮ್ಮ ಅನ್ನದಾತರನ್ನೆಲ್ಲ ಸೆಳೆದುಬಿಟ್ಟಿತು. ಮೂರಂಕಿ ಕಲೆಕ್ಷನ್ ಎರಡಂಕಿಗೆ ಇಳಿಯೋ ಮೊದ್ಲು ಎಚ್ಚೆತ್ತುಕೊಳ್ಳಬೇಕೆಂಬ ಅರಿವಿನಿಂದ ಹಿರಣ್ಣಯ್ಯ ಮಿತ್ರಮಂಡಳಿಯ ಕಥಾ ಬಳಗ (ಮಾ|| ಹಿರಣ್ಣಯ್ಯ, ಯೋಗಾನರಸಿಂಹ ಹಾಗೂ ಕಣಗಾಲ್ ಪ್ರಭಾಕರಶಾಸ್ತ್ರಿ) ‘ಲಂಚಾವತಾರ’ ಸೃಷ್ಟಿಸಿತು. ಡಿಸೆಂಬರ್ 30, 1959ರಂದು ಶಿವಮೊಗ್ಗದಲ್ಲಿ ಮೊಗ್ಗೊಡೆಯಿತು ‘ಲಂಚಾವತಾರ’. ಮಾಸ್ಟರ್ರ ಹಿರಿಯ ಮಗಳು ಅಂಬಾ ಹುಟ್ಟಿದ್ದೂ ಆಗಲೇ. ಒಂದೆಡೆ ತಂದೆಯಾದ ಖುಷಿ; ಇನ್ನೊಂದೆಡೆ ‘ಲಂಚಾವತಾರ’ಕ್ಕೆ ಅಭೂತಪೂರ್ವ ಜನಸ್ಪಂದನ ದೊರೆತ ಹಿಗ್ಗು. ಒಂದರ್ಥದಲ್ಲಿ ‘ಲಂಚಾವತಾರ’ ಕೂಡ ಹಿರಣ್ಣಯ್ಯನವರ ಮುದ್ದು ಮಗುವೇ; ‘ದತ್ತು ಮಗುವಷ್ಟೇ! ವ್ಯವಸ್ಥೆಯ ಐಬುಗಳ ಬಗೆಗೆ ಜನಸಾಮಾನ್ಯರ ರೋಷ ಆಕ್ರೋಶಗಳಿಗೆ ‘ದತ್ತು’ವಾಗಿ ಮಾ|| ಹಿರಣ್ಣಯ್ಯ ‘ದನಿ’ ಆದಾಗ ಪ್ರೇಕ್ಷಾಂಗಣದಲ್ಲೆಲ್ಲ ಹುಚ್ಚೆದ್ದ ಹರ್ಷೋದ್ಗಾರ. ಈ 43 ವರ್ಷಗಳಲ್ಲಿ ‘ಲಂಚಾವತಾರ’ ಗಿನ್ನಿಸ್ ದಾಖಲೆಗೆ ಎಂದೋ ಸೇರಬಹುದಾದ ಸಾಧನೆ (ಕಾರಣಾಂತರಗಳಿಂದ ಗಿನ್ನಿಸ್ಗಿನ್ನೂ ಇದು ಸೇರಿಕೊಂಡಿರದೇ ಇರುವುದು ವಿಪರ್ಯಾಸ) ಮಾಡಿದೆ. ಕರ್ನಾಟಕದ ಎಲ್ಲ ಜಿಲ್ಲೆಗಳಾದ್ಯಂತ (ಬೀದರ್ ಹೊರತುಪಡಿಸಿ), ಮುಂಬೈ, ಚೆನ್ನೈ, ದೆಹಲಿ, ಅಹ್ಮದಾಬಾದ್ ಮುಂತಾದ ಹೊರ ರಾಜ್ಯಗಳ ನಗರಗಳಲ್ಲೂ ಅಲ್ಲದೆ ಅಮೆರಿಕ, ನ್ಯೂಜೀಲ್ಯಾಂಡ್, ಯು.ಕೆ., ಬಹರೈನ್, ಸಿಂಗಾಪುರ್ಗಳಂತಹ ಹೊರದೇಶಗಳ ರಂಗಸಂಚಾರವನ್ನು ಪೂರೈಸಿ ವಿಶ್ವಮಾನ್ಯತೆಯನ್ನು ಪಡೆದ ‘ಲಂಚಾವತಾರ’ ಮಾಸ್ಟರ್ರ ‘ಮಾಸ್ಟರ್ ಪೀಸ್’.
‘ಲಂಚಾವತಾರ’ ಹುಟ್ಟಿ ಎರಡು ವರ್ಷಗಳ ನಂತರ ಹುಟ್ಟಿದ ನಾಟಕವೇ ‘ನಡುಬೀದಿ ನಾರಾಯಣ’. 1961ರಲ್ಲಿ ತುಮಕೂರಿನಲ್ಲಿ ಮೊದಲ ಪ್ರದರ್ಶನ ಕಂಡ ಈ ನಾಟಕ ಮಾ|| ಹಿರಣ್ಣಯ್ಯನವರ ಎರಡನೆಯ ಮಗು ‘ಬಾಬು’ ಅವರ ಬರ್ಥಡೇ ಗಿಫ್ಟ್. ಈ ನಾಟಕಕ್ಕೆ ಮತ್ತು ಇನ್ನು ಮುಂದೆ ಅವರು ಸಿದ್ಧಪಡಿಸಿದ ‘ಕಪಿಮುಷ್ಟಿ’, ‘ಅನಾಚಾರ’, ‘ಕಲ್ಕ್ಯಾವತಾರ’ ಮೊದಲಾದ ನಾಟಕಗಳಿಗೆ ನಾಮಕರಣ ಮಾಡುವಾಗ ಕವಿವರ ಬೇಂದ್ರೆ ಅವರು ಹೇಳಿಕೊಟ್ಟ ಸಂಖ್ಯಾಶಾಸ್ತ್ರ ಸಾಕಷ್ಟು ಅಳವಡಿಕೆಗೊಳಪಟ್ಟಿದೆ ಎಂದು ಮಾ|| ಹಿರಣ್ಣಯ್ಯ ಕೃತಜ್ಞತೆಯಿಂದ ನೆನೆಯುತ್ತಾರೆ. ಐದೇ ಪಾತ್ರಗಳಿರುವ ಈ ನಾಟಕ ಆರಂಭದ ದಿನದಿಂದ ಸತತ 488 ಪ್ರದರ್ಶನಗಳನ್ನು ಕಂಡು ಅಭೂತಪೂರ್ವ ಯಶಸ್ಸುಗಳಿಸಿದೆ. ಮಾ|| ಹಿರಣ್ಣಯ್ಯನವರಿಗೆ ತುಂಬ ಪ್ರಿಯವಾದ ಕೃತಿ ಇದು. ಇಲ್ಲಿನ ಆಳವಾದ ವಿಡಂಬನೆಯಂತೂ ಅವರಿಗೆ ಸದಾ ಅಚ್ಚುಮೆಚ್ಚು. ಈ ನಾಟಕ ಒಂದು ಬಗೆಯಲ್ಲಿ ಮಾಸ್ಟರ್ ಅವರ ಆತ್ಮಚರಿತೆಯಂತೆಯೇ. ಈ ನಾಟಕವೂ ದೇಶ ವಿದೇಶಗಳಲ್ಲಿ ಹೆಸರು ಮಾಡಿದೆ.
ಹರಿತ ಸಂಭಾಷಣೆ, ಮೊನಚು ಮಾತುಗಾರಿಕೆ, ನೇರ ನಿರೂಪಣೆಗಳಿಂದ ರಾಜಕಾರಣಿಗಳನ್ನು, ಸಮಾಜದ ವ್ಯಕ್ತಿಶಕ್ತಿಗಳನ್ನು ಅವರ ಎದುರಲ್ಲೇ ಅವರ ಓರೆಕೋರೆಗಳನ್ನು ಎತ್ತಿ ಆಡುವ ಎದೆಗಾರಿಕೆ ಮಾ|| ಹಿರಣ್ಣಯ್ಯರದ್ದು. ಅಂದಿನ (1962) ಮುಖ್ಯಮಂತ್ರಿ ನಿಜಲಿಂಗಪ್ಪನವರು ‘ಲಂಚಾವತಾರ’ ನಿಲ್ಲಿಸುವ ಉದ್ದೇಶದಿಂದ ಕೋರ್ಟ್ಗೆ ಹೋದಾಗ ಹೈಕೋರ್ಟ್ ಹಿರಣ್ಣಯ್ಯನವರ ಪರ ತೀರ್ಪಿತ್ತು ಅಭಿವ್ಯಕ್ತಿಸ್ವಾತಂತ್ರ್ಯವನ್ನು ಊರ್ಜಿತಗೊಳಿಸಿತು. ಅಂತೆಯೇ ‘ಕಪಿಮುಷ್ಟಿ’ ನಾಟಕ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ ಕೆಂಗಣ್ಣ ನೋಟಕ್ಕೆ ಗುರಿಯಾಗಿ, ಕ್ಯಾಬಿನೆಟ್ ಆರ್ಡರ್ ಮೂಲಕ ನಿಲ್ಲಿಸುವ ಪ್ರಯತ್ನ ನಡೆಸಿದಾಗ ಆತ್ಮೀಯ ಅನ್ನದಾತರ ಆಶೀರ್ವಾದ, ಕರ್ನಾಟಕದ ಮಾಧ್ಯಮ, ನ್ಯಾಯಾಂಗ, ಪೆÇಲೀಸ್ ಇಲಾಖೆಯ ಅಭಿಮಾನಪೂರ್ವಕ ಶ್ರೀರಕ್ಷೆಗಳು ಅವರನ್ನು ಕಾಪಾಡಿತು.
ಅಂದಿನ ವೃತ್ತಿಕಂಪೆನಿಗಳು ಬಲವಾಗಿ ಆಶ್ರಯಿಸಿದ್ದ ಸಂಗೀತ, ಝಗಮಗಿಸುವ ವೇಷಭೂಷಣ, ರಂಗಸಜ್ಜಿಕೆ ಮೆರೆಯುತ್ತಿದ್ದ ಕಾಲದಲ್ಲಿ ಇವುಗಳನ್ನೆಲ್ಲ ಧಿಕ್ಕರಿಸಿ, ಸಾಮಾಜಿಕ ನಾಟಕಗಳನ್ನು ಸಂಭಾಷಣೆಯ ಸತ್ತ್ವದಿಂದಲೇ, ಮಾತಿನ ಮೋಡಿಯಿಂದಲೇ ಮೆರೆಸುವ ಸಾಹಸವನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದ ಹಿರಣ್ಣಯ್ಯ ಮಿತ್ರಮಂಡಳಿ ಒಂದರ್ಥದಲ್ಲಿ ಆಧುನಿಕ ರಂಗಚಳವಳಿಗೂ ಹತ್ತಿರವಾದುದೇ.
ಅಂತೆಯೇ ಮಾ|| ಹಿರಣ್ಣಯ್ಯ ವೃತ್ತಿ ವಿಲಾಸಿ, ಹವ್ಯಾಸಿಗಳ ಕೊಂಡಿಯಂತಿರುವ ಧೀಮಂತ ವ್ಯಕ್ತಿ. ‘ನಟರತ್ನಾಕರ’ ಬಿರುದು, ಕರ್ನಾಟಕ ಅಕಾಡೆಮಿಯ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಮಾ|| ಹಿರಣ್ಣಯ್ಯನವರಿಗೆ ಪ್ರದಾನವಾಗುವಾಗ ತಮ್ಮ ಘನತೆ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿವೆ. ‘ನಿಮ್ಮ ನಾಟಕಾನ ಒನ್ ಮ್ಯಾನ್ ಶೋ ಅನ್ನಬಾರದೇಕೆ?’ ಎನ್ನುವವರಿಗೆ – “ಸದ್ಯಃ, ನನ್ನನ್ನು ಒಬ್ಬ ಮನುಷ್ಯ ಅಂದಿರಲ್ಲ, ಅಷ್ಟು ಸಾಕು!” ಎಂಬ ನಿರಾಳ, ನಿರುಮ್ಮಳ ಪ್ರತಿಕ್ರಿಯೆ ಮಾಸ್ಟರ್ ಅವರದ್ದು.
“ನೀವುಯಾವುದೇ ‘ಇಸಂ’ಗೆ ಬದ್ಧರಲ್ಲವೇ?” ಎಂಬ ಪ್ರಶ್ನೆಗೆ ಮಾಸ್ಟರ್ ಉತ್ತರ: “ಸಮಾಜದ ಸಮಕಾಲೀನ ಸಮಸ್ಯೆಗಳನ್ನು ಎತ್ತಿ ತೋರಿಸುವ ನಮಗೆ ಇರುವುದು ಒಂದೇ ‘ಇಸಂ’; ಅದೇ ‘ಹ್ಯುಮಾನಿಸಂ’.”
ಶಾಲೆ-ಕಾಲೇಜು, ಆಸ್ಪತ್ರೆ, ದೇವಸ್ಥಾನ, ರಂಗಮಂದಿರ, ಯುದ್ಧ, ಭೂಕಂಪ ಪರಿಹಾರ ಹೀಗೆ ಹಲವಾರು ಸಮಾಜಸೇವಾ ಕಾರ್ಯಗಳಿಗೆ ಸಹಾಯಾರ್ಥ ಪ್ರದರ್ಶನ ನೀಡಿರುವ ಹಿರಣ್ಣಯ್ಯ ಮಂಡಳಿ ‘ಪೆÇಲೀಸ್ ಬೆನವಲೆಂಟ್ ಫಂಡ್’ಗೇ ಸುಮಾರು ಇಪ್ಪತ್ತು ಲಕ್ಷ ಸಂಗ್ರಹಿಸಿದ್ದಲ್ಲದೆ, ಭಾರತ-ಚೀನಾ ಯುದ್ಧದ ಕಾಲದಲ್ಲಿ ಮಾ|| ಹಿರಣ್ಣಯ್ಯನವರ ತೂಕದಷ್ಟು ಬೆಳ್ಳಿಯನ್ನು ಸರಕಾರಕ್ಕೆ ನೀಡಿ ಸಮಾಜದ ಋಣ ತೀರಿಸಿದ್ದುಂಟು.
ಚಲನಚಿತ್ರ, ಕಿರುತೆರೆಗಳಲ್ಲೂ ತೊಡಗಿಕೊಂಡು ತಮ್ಮ ‘ಛಾಪು’ ಮೂಡಿಸಿ ಮನೆಮಾತಾಗಿರುವ ಹಿರಣ್ಣಯ್ಯನವರಿಗೆ ನೇರ ಪ್ರತಿಸ್ಪಂದನ ಮೂಲಕ ಜೀವಸಂಚಾರ ಪಡೆಯುವ ರಂಗಕಸುಬೇ ಧನ್ಯತೆಯ ತಾಣ. ಅದಕ್ಕೇ ಅವರ ಮನೆಯ ಹೆಸರು ‘ರಂಗಭೂಮಿ’. ರಂಗದಿಂದ ಈಗ ಹಿರಿಯ ಚೇತನ ನಿರ್ಗಮಿಸಿದೆ. ಮಿತ್ರಮಂಡಳಿ ಚಿರಂತನವಾಗಿದೆ. ಶೋ ಮಸ್ಟ್ ಗೋ ಆನ್!