“ಒಂದು ಅತ್ಯಂತ ಕಠೋರ ವಾಸ್ತವ ಇದು – ಹಿಂದೂ ಧರ್ಮವಿದ್ದರೆ ಕನ್ನಡ, ತಮಿಳು, ಬಂಗಾಳಿ, ಸಂಸ್ಕೃತ ಇತ್ಯಾದಿ ಇರುತ್ತವೆ; ವಿವೇಕಾನಂದ, ಬಸವಣ್ಣ, ಕನಕದಾಸ, ಪುರಂದರದಾಸರು ಇರುತ್ತಾರೆ. ಹಿಂದೂಧರ್ಮ ನಾಶವಾದರೆ ಅವೆಲ್ಲ ಹೇಳಹೆಸರಿಲ್ಲವಾಗುತ್ತವೆ. ಅದನ್ನು ನೆನಪಿಸಿಕೊಳ್ಳಲೂ ಭಯವಾಗುತ್ತದೆ.”
ಇದು ಕನ್ನಡದ ಅಗ್ರಮಾನ್ಯ ಸಂಶೋಧಕ, ಭಾಷೆ-ಸಂಸ್ಕೃತಿಗಳ ಹೋರಾಟಗಾರ ನಾಡೋಜ ಡಾ| ಎಂ. ಚಿದಾನಂದಮೂರ್ತಿ ಅವರ ಮಾತು. ಅವರ ‘ಅಪಾರ್ಥ, ಆಕ್ರಮಣಗಳಿಗೆ ಒಳಗಾಗಿರುವ ಹಿಂದೂಧರ್ಮ’ ಪುಸ್ತಕದಲ್ಲಿ ಈ ಮಾತು ಬರುತ್ತದೆ. ಪುಸ್ತಕದ ಪ್ರಸ್ತುತ ಐದನೇ ಮುದ್ರಣ(2018)ವನ್ನು ಐಬಿಎಚ್ ಪ್ರಕಾಶನದವರು ಪ್ರಕಟಿಸಿದ್ದಾರೆ. ಇದು ಕ್ರಮೇಣ ಬೆಳೆದುಬಂದ ಪುಸ್ತಕ. 2008ರಲ್ಲಿ ಮೂರನೇ ಆವೃತ್ತಿಯನ್ನು ಪ್ರಕಟಿಸುವಾಗ 14 ಹೊಸ ಲೇಖನಗಳು ಸೇರಿದವು. ಅಂದರೆ ಇವರ ಚಿಂತನೆಯಲ್ಲಿ ಈ ಪುಸ್ತಕ ಬೆಳೆಯುತ್ತಲೇ ಇದೆ. ಪುಸ್ತಕದ ಶೀರ್ಷಿಕೆ ಕೇವಲ ‘ಹಿಂದೂ ಧರ್ಮ’ ಅಲ್ಲ; ‘ಅಪಾರ್ಥ, ಆಕ್ರಮಣಗಳಿಗೆ ಒಳಗಾಗಿರುವ ಹಿಂದೂಧರ್ಮ’. ನಿಜವೆಂದರೆ ಇಲ್ಲಿ ಹಿಂದೂಧರ್ಮಕ್ಕಿಂತ ಅದಕ್ಕೆ ತಗಲಿದ ಅಪಾರ್ಥ, ಆಕ್ರಮಣಗಳೇ ಮುಖ್ಯ. ಈ ಅಪಾರ್ಥ, ಆಕ್ರಮಣಗಳು ಈಗಲೂ ಮುಂದುವರಿಯುತ್ತಿವೆ. ಆದ್ದರಿಂದ ಪುಸ್ತಕವೂ ಬೆಳೆಯುತ್ತಿದೆ ಎಂದರೆ ತಪ್ಪಿಲ್ಲವೇನೋ! ಆ ರೀತಿಯಲ್ಲಿ ನೋಡಿದರೆ ಇದು ಬೇಸರದ ವಿಷಯವೂ ಹೌದು.
ಮೇಲೆ ಉಲ್ಲೇಖಿಸಿದ ಮಾತಿನಲ್ಲಿ ಡಾ| ಚಿದಾನಂದಮೂರ್ತಿ ಅವರು ಮುಖ್ಯವಾಗಿ ಹಿಂದೂಧರ್ಮ ನಾಶವಾದರೆ ದೇಶದ ಭಾಷೆಗಳು, ಅವುಗಳ ಸಂಪತ್ತು ಉಳಿಯುವುದಿಲ್ಲ; ಅದೇ ರೀತಿ ನಾವು ಹೆಮ್ಮೆಪಡುವ ನಮ್ಮ ಮಹಾನ್ ಸಾಂಸ್ಕೃತಿಕ ಪುರುಷರು ಇಲ್ಲವಾಗುತ್ತಾರೆ ಎಂಬುದಕ್ಕೆ ಗಮನ ಸೆಳೆಯುತ್ತಾರೆ. ಈ ಮಾತಿನಲ್ಲಿ ಚಿದಾನಂದಮೂರ್ತಿ ಅವರು ಹಿಂದೂಧರ್ಮದ ಪರ ಹೋರಾಟಕ್ಕೆ ಬಂದುದರ ಹಿನ್ನೆಲೆ ಕೂಡ ಇದೆ. ಕನ್ನಡ, ಕರ್ನಾಟಕಗಳ ದೊಡ್ಡ ಸಂಶೋಧಕರಾದ ಅವರು ಮೂಲತಃ ಕನ್ನಡ ಎನ್ನುವ ಭಾಷೆ ಮತ್ತದರ ಸಂಸ್ಕೃತಿಯ ಭಕ್ತರು. ಇಂದು ಹಿಂದೂಧರ್ಮವನ್ನು ಬಾಧಿಸುತ್ತಿರುವ ಆಕ್ರಮಣಗಳು ಅವರ ಗಮನವನ್ನು ಅತ್ತ ಸೆಳೆದು ಹೋರಾಟವನ್ನು ಆ ಕಡೆಗೆ ತಿರುಗಿಸುವಂತೆ ಮಾಡಿದವು. ಎತ್ತಿಕೊಂಡ ಕೆಲಸವನ್ನು ವ್ಯವಸ್ಥಿತವಾಗಿ ಮಾಡುವ ಸ್ವಭಾವದವರಾದ ಅವರು ಹೋರಾಟದ ನಡುವೆ ಪಡೆದ ಅನುಭವಗಳನ್ನು ಪುಸ್ತಕದಲ್ಲಿರುವ ಲೇಖನಗಳಲ್ಲಿ ದಾಖಲಿಸಿದ್ದಾರೆ. ಇದರಲ್ಲಿ ಅನೇಕ ಲೇಖನಗಳು ವಿವಿಧ ಪತ್ರಿಕೆ ಹಾಗೂ ವಿಶೇಷ ಸಂಚಿಕೆಗಳಿಗೆ ಬರೆದಂಥವು.
ಪುಸ್ತಕದ ಶೀರ್ಷಿಕೆಯೇ ಹೇಳುವಂತೆ ಯಾವೆಲ್ಲ ಅಪಾರ್ಥಗಳಿಗೆ ಮತ್ತು ಆಕ್ರಮಣಗಳಿಗೆ ಹಿಂದೂಧರ್ಮ ಗುರಿಯಾಗಿದೆ ಎನ್ನುವ ರೀತಿಯಲ್ಲಿ ಪುಸ್ತಕದ ಎಲ್ಲ ವಿಷಯಗಳನ್ನು ಕ್ರೋಡೀಕರಿಸಬಹುದು. ಇದರಲ್ಲಿ ಅಪಾರ್ಥಗಳಿಗಿಂತ ಆಕ್ರಮಣಗಳ ಪಾಲು ದೊಡ್ಡದು; ಅದು ಹೊಸ ಹೊಸ ರೂಪಗಳಲ್ಲಿ ಈಗಲೂ ನಡೆಯುತ್ತಿದೆ. ಮೊದಲಿಗೆ ಅಪಾರ್ಥಗಳನ್ನು ಗಮನಿಸಬಹುದು.
ವೇದಗಳೇ ಮೂಲ
ಹಿಂದೂಧರ್ಮಕ್ಕೆ ವೇದಗಳೇ ಮೂಲಗ್ರಂಥ. ಸುಪ್ರೀಂಕೋರ್ಟಿನ ಪೂರ್ಣಪೀಠದ ತೀರ್ಪೇ (1995) ಅದನ್ನು ದೃಢಪಡಿಸಿದೆ. “ಧಾರ್ಮಿಕ ಮತ್ತು ತತ್ತ್ವಶಾಸ್ತ್ರೀಯ ವಿಷಯಗಳಲ್ಲಿ ವೇದಗಳೇ ಅಧಿಕೃತ; ಮತ್ತು ಹಿಂದೂ ತತ್ತ್ವಶಾಸ್ತ್ರಕ್ಕೆ ವೇದಗಳೇ ಏಕೈಕ ತಳಹದಿ ಎಂದು ಹಿಂದೂ ಚಿಂತಕರು ಹಾಗೂ ತತ್ತ್ವಶಾಸ್ತ್ರಜ್ಞರು ಗೌರವಪೂರ್ಣವಾಗಿ ಅಂಗೀಕರಿಸಿದ್ದಾರೆ” ಎಂದು ಹೇಳಿದೆ. “ಹಿಂದೂಧರ್ಮ ಒಂದು ಸರಳ ಹೊಳೆ (ನದಿ) ಅಲ್ಲ; ಹಲವು ನದಿ, ಉಪನದಿಗಳು ಸೇರಿ ಹರಿಯುವ ಮಹಾನದಿ ಇದ್ದಂತೆ” ಎಂದು ಪಾಶ್ಚಾತ್ಯ ವಿದ್ವಾಂಸ ಮೋನಿಯರ್ ವಿಲಿಯಮ್ಸ್ ಹೇಳಿದ್ದಾನೆ. ಭಗವಂತನ ಸಾಕ್ಷಾತ್ಕಾರಕ್ಕೆ ಶೈವ, ವೈಷ್ಣವ, ಶಾಕ್ತೇಯ, ಸೌರ, ಗಾಣಪತ್ಯ – ಹೀಗೆ ಹಲವು ಮಾರ್ಗಗಳನ್ನು ಹಿಂದೂಧರ್ಮ ಒಪ್ಪಿಕೊಂಡಿದೆ. ಈ ನಡುವೆ ಬ್ರಿಟಿಷರು ಬ್ರಾಹ್ಮಣರ ಜೀವನ ವಿಧಾನವೇ ಹಿಂದೂಧರ್ಮ ಎಂಬ ಭ್ರಮೆಯನ್ನು ಬಿತ್ತಿದರು. ಅದು ಸರಿಯಲ್ಲ; ದಲಿತರಿಂದ ಬ್ರಾಹ್ಮಣರವರೆಗೆ ಎಲ್ಲರೂ ಹಿಂದುಗಳೇ. ಜನ್ಮದಿಂದ ಸಿದ್ಧವಾಗುವ ವರ್ಣಭೇದ, ಜಾತಿಭೇದ ಮತ್ತು ಲಿಂಗಭೇದಗಳನ್ನು ಪ್ರತಿಪಾದಿಸಿ ವೇದಗಳು ಸ್ತ್ರೀಯರು, ಶೂದ್ರರು ಮುಂತಾದವರನ್ನು ಕಡೆಗಣಿಸಿವೆ ಎಂಬ ಪಾಶ್ಚಾತ್ಯರ ಮಾತು ಅಪಾರ್ಥಗಳನ್ನು ಸೃಷ್ಟಿಸಿ ಸಾಕಷ್ಟು ಅನಾಹುತವನ್ನು ಉಂಟುಮಾಡಿದೆ. ಆದರೆ ಯಜುರ್ವೇದದ ಒಂದು ಮಂತ್ರ ಹೀಗೆ ಹೇಳುತ್ತದೆ: “ನಾನು ಈ ಸರ್ವ ಕಲ್ಯಾಣಕರವಾದ ವೇದವಾಣಿಯನ್ನು ಮಾನವರಿಗಾಗಿ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರಿಗಾಗಿ ಉಪದೇಶಿಸುತ್ತಿದ್ದೇನೆ.” ಋಗ್ವೇದದ ಒಂದು ಮಂತ್ರವು “ಮಾನವರಲ್ಲಿ ಯಾರೂ ಮೇಲಲ್ಲ; ಕೀಳೂ ಅಲ್ಲ. ಎಲ್ಲರೂ ಸಮಾನರು” ಎಂದು ಹೇಳಿದರೆ, ವೇದ ವಿದ್ವಾಂಸ ಸುಧಾಕರ ಚತುರ್ವೇದಿ ಅವರು “ಒಟ್ಟು 223,379 ವೇದಮಂತ್ರಗಳಲ್ಲಿ ಎಲ್ಲಿಯೂ ಕೂಡ ಹುಟ್ಟಿನಿಂದ ಎಣಿಸಲ್ಪಡುವ ಜಾತಿಪದ್ಧತಿಗೆ ಒಂದೇ ಒಂದು ಪ್ರಮಾಣವೂ ಇಲ್ಲ” ಎಂದು ದೃಢಪಡಿಸಿದ್ದಾರೆ.
ವರ್ಣ – ಜಾತಿ ಅಲ್ಲ
ಇನ್ನು ಪುರುಷಸೂಕ್ತದ ಮಂತ್ರವನ್ನು ಉಲ್ಲೇಖಿಸಿ, ಬ್ರಾಹ್ಮಣ (ವೇದಪುರುಷನ) ಮುಖದಿಂದ ಹುಟ್ಟಿದ; ಕ್ಷತ್ರಿಯ ಬಾಹು(ಕೈ)ವಿನಿಂದ ಹುಟ್ಟಿದರೆ ವೈಶ್ಯ ತೊಡೆಯಿಂದ ಹುಟ್ಟಿದ; ಮತ್ತು ಶೂದ್ರ ಕಾಲಿನಿಂದ ಹುಟ್ಟಿದ; ಅದರಿಂದಾಗಿ ಈ ಮಂತ್ರ ಜಾತಿಯ ಮೇಲು ಕೀಳನ್ನು ಹೇಳುತ್ತದೆ; ಶೂದ್ರರು ಉಳಿದವರಿಗಿಂತ ಕೀಳೆಂದು ವೇದಗಳು ಪರಿಗಣಿಸುತ್ತವೆ – ಎಂದು ಅರ್ಥೈಸಲಾಗುತ್ತಿದೆ. ನಿಜವೆಂದರೆ, ಅವರು ಆಯಾ ಅಂಗಗಳಿಂದ ಹುಟ್ಟಿದರು ಎಂದಲ್ಲ, ಬದಲಾಗಿ ಬ್ರಾಹ್ಮಣನು ವೇದಪುರುಷನ ಮುಖ ಇದ್ದಂತೆ, ಕ್ಷತಿಯನು ಕೈ ಇದ್ದಂತೆ ಎಂದಷ್ಟೇ ಅರ್ಥ. ಅಲ್ಲಿ ಮೇಲು-ಕೀಳು ಇಲ್ಲ ಎಂದು ಪುಸ್ತಕ ವಿವರಿಸುತ್ತದೆ. ಮತ್ತು ಇದು ವರ್ಣ; ಅಂದರೆ ಆರಿಸಿಕೊಳ್ಳುವುದು. ಜ್ಞಾನ, ಆಡಳಿತ, ವ್ಯವಸಾಯ ಅಥವಾ ವ್ಯಾಪಾರ ಮತ್ತು ಊಳಿಗ – ಹೀಗೆ ವಿವಿಧ ಕೆಲಸಗಳನ್ನು ಆರಿಸಿಕೊಳ್ಳುವುದು. ಇಂತಹ ಆಯ್ಕೆಯ ಮೂಲಕ ಶೂದ್ರನ ಮಗ ಬ್ರಾಹ್ಮಣ ಆಗಬಹುದಿತ್ತು. ವರ್ಣವು ಹುಟ್ಟಿನಿಂದ ನಿರ್ಮಾಣ ಆಗುವಂಥದಲ್ಲ. ಎಲ್ಲ ನಾಲ್ಕು ಅಂಗಗಳೂ ಮುಖ್ಯವೇ. ಇದು ವೇದಗಳ ವರ್ಣ ಕಲ್ಪನೆ. ವೇದಗಳಲ್ಲಿ ಎಲ್ಲೂ ಅಂತ್ಯಜ ಪದ ಇಲ್ಲ. ವೇದಕಾಲದಲ್ಲಿ ಸ್ತ್ರೀಯರು ಬ್ರಹ್ಮಜ್ಞಾನಕ್ಕೆ ಅರ್ಹರಾಗಿದ್ದರು. ಅವರಿಗೆ ಜನಿವಾರ ಇತ್ತು; ಅವರು ಯಜ್ಞವನ್ನು ಮಾಡಬಹುದಿತ್ತು.
ವೀರಶೈವ-ಲಿಂಗಾಯತ ವಿವಾದ
ಕರ್ನಾಟಕದ ಕಳೆದ ವಿಧಾನಸಭಾ ಚುನಾವಣೆಯ ಹೊತ್ತಿಗೆ ವೀರಶೈವ-ಲಿಂಗಾಯತ ವಿವಾದವು ಭಾರೀ ಅಲೆಗಳನ್ನೆಬ್ಬಿಸಿತು. ಲಿಂಗಾಯತರು ಹಿಂದೂಗಳಲ್ಲ ಎನ್ನುವ ಮೂಲಕ ವೀರಶೈವ ಸಮಾಜವನ್ನು ಒಡೆದು, ಲಿಂಗಾಯತರಿಗೆ ಅಲ್ಪಸಂಖ್ಯಾತರ ಸವಲತ್ತು ಒದಗಿಸಿ ಅವರ ವೋಟು ಗಿಟ್ಟಿಸುವ ಹುನ್ನಾರ ಕಾಂಗ್ರೆಸಿನದಾಗಿತ್ತು. ಆದರೆ ಅದಕ್ಕೆ ಸಮಾಜದಿಂದ ಸಾಕಷ್ಟು ಬೆಂಬಲ ದೊರೆಯದೆ ರಾಜಕೀಯ ತಂತ್ರ ಹುಸಿಯಾಯಿತು.
ಈ ವಿವಾದದ ಮೂಲ ಹತ್ತು ವರ್ಷಗಳಿಗೂ ಹಿಂದೆಯೇ ಇದೆ; ಮತ್ತು ಇದು ಹಿಂದೂಸಮಾಜಕ್ಕೆ ಏಟು ಕೊಡುವ ಪ್ರಸಂಗವಾದುದರಿಂದ ಡಾ| ಚಿದಾನಂದಮೂರ್ತಿ ಅವರ ಪ್ರಸ್ತುತ ಪುಸ್ತಕದಲ್ಲಿ ಸ್ಥಾನ ಪಡೆದಿದೆ; ‘ವೀರಶೈವ (ಲಿಂಗಾಯತ) ಸಮಾಜದ ದುರ್ಬಲೀಕರಣ’ ಎನ್ನುವ ಲೇಖನದಲ್ಲಿ ಅದನ್ನು ವಿವರಿಸಲಾಗಿದೆ. ಸುಮಾರು ಎರಡು ದಶಕಗಳಿಂದ ಈಚೆಗೆ ಸಂಶೋಧಕ ಪ್ರೊ. ಎಂ.ಎಂ. ಕಲಬುರ್ಗಿ ಅವರ ಪಟ್ಟುಹಿಡಿದ ಪ್ರತಿಪಾದನೆಯಿಂದಾಗಿ ವೀರಶೈವ ಬೇರೆ, ಲಿಂಗಾಯತ ಬೇರೆ. ಪಂಚಪೀಠಗಳ ಅನುಯಾಯಿಗಳು ವೀರಶೈವರಾದರೆ ಬಸವಣ್ಣನ ಅನುಯಾಯಿಗಳು ಲಿಂಗಾಯಿತರು ಎನ್ನುವ ಭಾವನೆ ಹುಟ್ಟಿ ಉತ್ತರ ಕರ್ನಾಟಕದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತು.
ಇದನ್ನು ತರಾಟೆಗೆ ತೆಗೆದುಕೊಳ್ಳುವ ಲೇಖಕರು “ವೀರಶೈವರೆಲ್ಲರೂ ದೇಹದ ಮೇಲೆ ಲಿಂಗ ಧರಿಸುವವರೇ. ಲಿಂಗಾಯತರೇ. ಬಸವಣ್ಣ ವೀರಶೈವರೂ ಹೌದು, ಲಿಂಗಾಯತರೂ ಹೌದು. ಈಚಿನವರೆಗೆ ಅವು ಸಮಾನಾರ್ಥಕವಾಗಿಯೇ ಬಳಕೆ ಆಗುತ್ತಿದ್ದವು. ಸತ್ಯ ಹೀಗಿರುವಾಗ ಉತ್ತರ ಕರ್ನಾಟಕದ ಕೆಲವು ಧಾರ್ಮಿಕ ಮುಖಂಡರು (ಮಾತೆ ಮಹಾದೇವಿ ಇತ್ಯಾದಿ) ಅವೆರಡೂ ಬೇರೆ ಎಂಬ ಭ್ರಮೆ ಬಿತ್ತಿದರು. ದಕ್ಷಿಣ ಕರ್ನಾಟಕದಲ್ಲಿ ಈ ಭೇದ ಸ್ವಲ್ಪವೂ ಇಲ್ಲ” ಎಂದಿದ್ದರು.
ಮುಂದುವರಿದು, “ಈ ಕಲ್ಪಿತ ಭೇದವು ಇಂದು ಪಂಚಮಸಾಲಿ ಜನಾಂಗವನ್ನು ಒಡೆದಿದೆ. ಇದು ಆರಂಭ ಮಾತ್ರ. ಈ ಬಿರುಕು ಕ್ರಮೇಣ ಹಬ್ಬುತ್ತದೆ; ಇದು ಕೇವಲ ಲಿಂಗಾಯತ ಜನಾಂಗವನ್ನು ಮಾತ್ರ ಅಲ್ಲ; ಹಿಂದೂ ಜನಾಂಗವನ್ನೇ ದುರ್ಬಲಗೊಳಿಸುತ್ತದೆ” ಎಂದು ಆ ಲೇಖನದಲ್ಲಿ ಎಚ್ಚರಿಸಿದ್ದರು (ವಿಜಯ ಕರ್ನಾಟಕ 13-3-2008). ಇದರ ಮುಂದುವರಿದ ಭಾಗ ಜನಗಣತಿಯಲ್ಲಿ ಹಿಂದೂ ಎನ್ನುವ ಬದಲು ಲಿಂಗಾಯತ ಎಂದು ದಾಖಲಿಸಲು ಯತ್ನಿಸಿದ್ದು. ಡಾ| ಚಿಮೂ ಅವರು ಅದನ್ನು ಪ್ರತಿಭಟಿಸಿ, ವೀರಶೈವ ಅಥವಾ ಲಿಂಗಾಯತವು ಹಿಂದೂಧರ್ಮದ ಒಂದು ಉಪಧರ್ಮ ಅಥವಾ ಶಾಖಾ ಧರ್ಮ ಮಾತ್ರ ಎಂದು ಪ್ರತಿಪಾದಿಸಿದರು.
ಕಳೆದ 1,000 ವರ್ಷಗಳ ಇತಿಹಾಸವನ್ನು ಗಮನಿಸಿದರೆ ವೀರಶೈವರು ಉದ್ದಕ್ಕೂ ವೇದ-ಆಗಮಗಳ ಬಗ್ಗೆ ತುಂಬಾ ಗೌರವ ಇಟ್ಟುಕೊಂಡದ್ದು ಕಾಣಿಸುತ್ತದೆ. ಲಿಂಗಾಯತ ಮಠಗಳು ವೇದಾಗಮ ಶಾಲೆಗಳನ್ನು ನಡೆಸಿವೆ. ಹಿಂದೂಗಳ ಹಬ್ಬಗಳಾದ ದಸರಾ, ಯುಗಾದಿ, ಸಂಕ್ರಾಂತಿ, ಗಣಪತಿ ಹಬ್ಬ(ಚೌತಿ)ಗಳನ್ನು ಲಿಂಗಾಯತರೂ ಆಚರಿಸುತ್ತಿರುವಾಗ ನಾವು ಹಿಂದೂಗಳಲ್ಲವೆಂದರೆ ಹೇಗೆ ಎಂದು ಲಿಂಗಾಯಿತ ಮುಂದಾಳುಗಳು ಪ್ರಶ್ನಿಸಿದರು. ಈಚೆಗೆ ವಿವಾದವನ್ನು ಎತ್ತಿಕೊಂಡದ್ದರಲ್ಲಿ ಸಚಿವ ಎಂ.ಬಿ. ಪಾಟೀಲ್ ಎದ್ದು ಕಾಣಿಸುತ್ತಾರೆ. ಆದರೆ ವೀರಶೈವ ಸಮಾಜವನ್ನು ಒಡೆಯಲು ಯತ್ನಿಸಿದರೆಂಬ ಕಾರಣಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸಿಗೆ ನಷ್ಟವೇ ಆಯಿತು ಎನಿಸುತ್ತದೆ. ಒಡೆಯುವ ಕಾರ್ಯದಲ್ಲಿ ತಾನು ಭಾಗಿ ಆಗಲಾರೆನೆಂದು ಕೇಂದ್ರದ ಎನ್ಡಿಎ ಸರ್ಕಾರ ಹಿಂದೆ ಸರಿದ ಕಾರಣ ಸದ್ಯಕ್ಕೆ ಪಾಟೀಲ್ ಮತ್ತಿತರರು ಸೋಲೊಪ್ಪಿಕೊಂಡಂತಾಗಿದೆ; ಈ ನಡುವೆ ಮಾತೆ ಮಹಾದೇವಿ ಲಿಂಗೈಕ್ಯರಾದದ್ದೂ ಆಗಿದೆ.
ಪಾಶ್ಚಾತ್ಯರು ಬಿತ್ತಿದ ಇನ್ನೊಂದು ಅಪಾಯದ ಬೀಜ – ಆರ್ಯ-ದಸ್ಯು ಪರಿಕಲ್ಪನೆ. ಆರ್ಯರು ಹೊರಗಿನಿಂದ ಬಂದು ದಸ್ಯುಗಳನ್ನು ದಕ್ಷಿಣ ಭಾರತಕ್ಕೆ ಓಡಿಸಿದರು. ಅವರನ್ನು ಕೀಳಾಗಿ ಕಂಡರು. ಅವರೇ ದ್ರಾವಿಡರು. ಆದರೆ ವೇದದಲ್ಲಿ ಆರ್ಯ ಪದಕ್ಕೆ ವಿವೇಕಿ ಎಂದರ್ಥ; ದಸ್ಯು ಎಂದರೆ ದುಷ್ಟ. ಬದಲಾಗಿ ಇವು ಜನಾಂಗವಾಚಕ ಪದಗಳಲ್ಲ. ಒಟ್ಟಿನಲ್ಲಿ ವೇದಪ್ರಣೀತ ಹಿಂದೂಧರ್ಮವು ನಿಷ್ಕಳಂಕ ಮತ್ತು ಉದಾತ್ತವಾದದ್ದು. ಗಂಡು-ಹೆಣ್ಣು, ವರ್ಣಭೇದ, ಜಾತಿಭೇದ, ಸ್ಪೃಶ್ಯ-ಅಸ್ಪೃಶ್ಯ ಭೇದಗಳೆಲ್ಲ ಸೇರಿದ್ದು ವೇದೋತ್ತರ ಯುಗದಲ್ಲಿ. ವರ್ಣವು ವೃತ್ತಿಗೆ ಬದಲಾಗಿ ಹುಟ್ಟಿನಿಂದ ನಿರ್ಣಯವಾದದ್ದು ಆನಂತರದ ಸ್ಮೃತಿಗಳ ಕಾಲದಲ್ಲಿ. ಸ್ತ್ರೀ-ಶೂದ್ರರು ವೇದಾಧ್ಯಯನಕ್ಕೆ ಅರ್ಹರಲ್ಲ ಎಂಬುದು ಗೌತಮಸ್ಮೃತಿ ಮುಂತಾದವುಗಳಲ್ಲಿ ಬಂತು. ಆದರೆ ಶ್ರುತಿ (ವೇದ) ಮತ್ತು ಸ್ಮೃತಿಗಳ ನಡುವೆ ವಿರೋಧ ಬಂದರೆ ಶ್ರುತಿಯೇ ಸ್ವೀಕಾರಾರ್ಹ ಎನ್ನುವ ನಿರ್ಣಯವಿದೆ. ಒಟ್ಟಿನಲ್ಲಿ ಹಿಂದೂಧರ್ಮ ನಾವೆಲ್ಲ ಹೆಮ್ಮೆಪಡಬೇಕಾದ ಧರ್ಮ ಎಂದು ಡಾ| ಚಿದಾನಂದಮೂರ್ತಿ ಹೇಳುತ್ತ್ತಾರೆ.
ಸ್ವಾಮಿ ವಿವೇಕಾನಂದರು ತಮ್ಮ ಚಿಕಾಗೋ ಭಾಷಣದಲ್ಲಿ “ನಾನು ಯಾವ ಧರ್ಮಕ್ಕೆ ಸೇರಿದ್ದೇನೋ ಅದು ಜಗತ್ತಿಗೆ ಸಹನೆ, ಸಾರ್ವತ್ರಿಕ ಸ್ವೀಕಾರಾರ್ಹತೆಗಳನ್ನು ಕಲಿಸಿದೆ. ಸಹನೆಯನ್ನು ಕಲಿಸಿದ್ದಷ್ಟೇ ಅಲ್ಲ. ನಾವು ಎಲ್ಲ ಧರ್ಮಗಳನ್ನು ಸತ್ಯ ಎಂದು ತಿಳಿಯುತ್ತೇವೆ. ಈ ಧರ್ಮಕ್ಕೆ ಸೇರಿದ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ. ನಾನೊಬ್ಬ ಹಿಂದೂ” ಎಂದು ಘೋಷಿಸಿದರು. ಶ್ರೀ ಅರವಿಂದರು ಒಮ್ಮೆ ಹೀಗೆ ಹೇಳಿದರು: “ಇತರ ಧರ್ಮಗಳು ಶ್ರದ್ಧೆ, ಸ್ವೀಕಾರಗಳ ಧರ್ಮಗಳಾಗಿದ್ದರೆ ಸನಾತನಧರ್ಮವು ಜೀವನವೇ ಆಗಿದೆ. ನಂಬುವುದಕ್ಕಿಂತ ಇದ್ದು ತೋರಿಸುವ ವಿಷಯ ಅದಾಗಿದೆ… ಭಾರತ ಎಂದಿಗೂ ತನಗಾಗಿ ಬದುಕಿರದೆ ಮಾನವಕುಲಕ್ಕಾಗಿ ಬದುಕಿದೆ.”
ಸಹನೆ ಪ್ರಮುಖ ಗುಣ
ಸತ್ಯವು ಬಹುಮುಖಿ ಎಂಬ ಅರಿವು ಹಿಂದೂಧರ್ಮದ ಸಿದ್ಧಾಂತದಲ್ಲೇ ಇರುವುದರಿಂದ ಸಹನೆ ಇದರ ಪ್ರಮುಖ ಗುಣವಾಗಿದೆ. ಎಲ್ಲ ತತ್ತ್ವಜ್ಞ, ಸಾಧಕರಿಗೆ ವೇದಗಳೇ ಮೂಲಸ್ಫೂರ್ತಿ. ಇದು ಹಲವು ಪಂಥಗಳನ್ನು ಒಳಗೊಂಡ ಸಂಕೀರ್ಣ ಧರ್ಮ. ಈ ಸಂಕೀರ್ಣತೆ ಎಂದೂ ಧರ್ಮದ ಹೆಸರಿನಲ್ಲಿ ಸಾಮೂಹಿಕ ಹತ್ಯೆಗೆ ಅವಕಾಶ ಮಾಡಿಕೊಡಲಿಲ್ಲ.
“ವೇದಗಳಲ್ಲಿ ಕೇವಲ ಪ್ರಾಕೃತಿಕ (ಇಂದ್ರ, ಅಗ್ನಿ, ಸೂರ್ಯ, ವರುಣ ಇತ್ಯಾದಿ) ದೇವತೆಗಳ ಸ್ತೋತ್ರಗಳಿದ್ದು ಮನುಷ್ಯ ತನ್ನ ಭೌತಿಕ ಅನುಕೂಲಕ್ಕಾಗಿ ಅವುಗಳನ್ನು ಕುರಿತು ಮಾಡಿರುವ ಸ್ತೋತ್ರಗಳಿವೆಯೇ ಹೊರತು ವಿಶ್ವದ ಹಿಂದಿನ ಚೈತನ್ಯದ ಗ್ರಹಿಕೆಯು ಆಮೇಲೆ ಉಪನಿಷತ್ತಿನಲ್ಲಿ ಕಾಣಿಸಿಕೊಂಡಿತೆಂಬ ಪಾಶ್ಚಾತ್ಯರ ವ್ಯಾಖ್ಯಾನಗಳು ವೇದಗಳನ್ನು ಹಗುರವಾಗಿ ಕಾಣುವ ಪ್ರವೃತ್ತಿಯನ್ನು ದೃಢಪಡಿಸಿವೆ. ಆ ಎಲ್ಲ ದೇವತೆಗಳ ಹೆಸರು ಒಬ್ಬ ಪರಮಾತ್ಮನ ಬೇರೆ ಬೇರೆ ಹೆಸರುಗಳೆಂದು ಋಗ್ವೇದದಲ್ಲಿ ಹೇಳಿದೆ (ಏಕಂ ಸತ್ ವಿಪ್ರಾಃ ಬಹುಧಾ ವದಂತಿ).
ಅಪಾರ್ಥ ಮಾಡುವವರಿಗೆ ಮನುಸ್ಮೃತಿ ಒಂದು ಪ್ರಮುಖ ಅಸ್ತ್ರವಾಗಿದೆ. ಮನುವನ್ನು ಬಹುವಾಗಿ ಅಪಾರ್ಥ ಮಾಡಿಕೊಂಡು ಮನುಸ್ಮೃತಿಯೇ ಹಿಂದೂಧರ್ಮದ ಆಧಾರಗ್ರಂಥವೆಂಬಂತೆ ಬಿಂಬಿಸಲಾಗಿದೆ. ಅಪಾರ್ಥಕ್ಕೆ ಒಂದು ಉದಾಹರಣೆಯೆಂದರೆ, ‘ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂಬ ಮಾತು. ಹೆಣ್ಣನ್ನು ಬಾಲ್ಯದಲ್ಲಿ ತಂದೆ ರಕ್ಷಿಸಬೇಕು, ಯೌವನ ಕಾಲದಲ್ಲಿ ಪತಿ ರಕ್ಷಿಸಬೇಕು, ವೃದ್ಧಾಪ್ಯದಲ್ಲಿ ಮಗ ರಕ್ಷಿಸಬೇಕು; ಅವಳನ್ನು ಅವಳಷ್ಟಕ್ಕೆ ಬಿಡುವುದು ಸರಿಯಲ್ಲ – ಎಂಬುದು ಆ ಶ್ಲೋಕದ ತಾತ್ಪರ್ಯ. ಇದೊಂದು ರೀತಿಯಲ್ಲಿ ವಾಸ್ತವವನ್ನು ಹೇಳುತ್ತದೆ ಎಂಬುದನ್ನು ಒಪ್ಪಿಕೊಳ್ಳಲಾರದವರು ಸ್ತ್ರೀಗೆ ಸ್ವಾತಂತ್ರ್ಯ ನೀಡಬಾರದೆಂದು ಮನು ಹೇಳಿದ್ದಾನೆಂದು ಸಂದರ್ಭ ತಪ್ಪಿಸಿ ಉಲ್ಲೇಖಿಸಿ ಹಣಿಯುತ್ತಾರೆ.
ಇಂದು ನಮಗೆ ನಂಬುವುದಕ್ಕೆ ಕಷ್ಟವಾದರೂ ಮ್ಯಾಕ್ಸ್ಮುಲ್ಲರ್, ಕಿಟ್ಟೆಲ್ರಂತಹ ನಮ್ಮ ಮನ್ನಣೆಗೆ ಪಾತ್ರರಾದ ವಿದ್ವಾಂಸರು ಕೂಡ ಈ ನಿಟ್ಟಿನಲ್ಲಿ ಕಳಂಕಮುಕ್ತರಾಗಿರಲಿಲ್ಲ. ಮತಪ್ರಸಾರದ ಹಿನ್ನೆಲೆ ಅವರಿಗೂ ಇತ್ತು. ವೇದ ಮುಂತಾದ ನಮ್ಮ ಗ್ರಂಥಗಳನ್ನು ಇಂಗ್ಲಿಷಿಗೆ ಅನುವಾದಿಸಿದ ಮ್ಯಾಕ್ಸ್ಮುಲ್ಲರ್ ಹೇಳಿದ್ದು: “ಭಾರತದ ಧಾರ್ಮಿಕ ಸಾಹಿತ್ಯವನ್ನು ನಾನು ಇಂಗ್ಲಿಷಿಗೆ ಅನುವಾದಿಸಿ ಅದರ ಟೊಳ್ಳುತನವನ್ನು ಹೊರಗೆಳೆದು ನನ್ನ ಕೆಲಸವನ್ನು ಮುಗಿಸಿದ್ದೇನೆ” ಎಂಬುದಾಗಿ. ಅದೇ ರೀತಿ ಕನ್ನಡ ನಿಘಂಟುಕಾರ ರೆ| ಕಿಟ್ಟೆಲ್ “ವೈದಿಕ ಬಹುದೇವತಾರಾಧನೆಯು ತಾನು ಅತ್ಯುನ್ನತ ವಿವೇಕ ಎಂದು ನಟಿಸುತ್ತದೆ. ಆದರೆ ನಿಜವಾಗಿ ಅದು ಅತ್ಯಂತ ನಿಷ್ಪ್ರಯೋಜಕ ಕಸ” ಎಂದು ಹೇಳಿದ್ದು ದಾಖಲಾಗಿದೆ.
ಆಕ್ರಮಣ
ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳಿಂದ ಭಾರತ ಮತ್ತು ಹಿಂದೂಧರ್ಮದ ಮೇಲೆ ನಡೆದ ಆಕ್ರಮಣವು ಡಾ| ಚಿದಾನಂದಮೂರ್ತಿ ಅವರ ಪುಸ್ತಕದಲ್ಲಿ ಸವಿವರವಾಗಿ ಚಿತ್ರಣಗೊಂಡಿದೆ. ಸಾವಿರ ವರ್ಷಗಳಾಚೆಯಿಂದ ನಡೆದು ಬಂದ ಇದು ಈಗಲೂ ಇದೆ; ಮುಂದೆ ಕೂಡ ಮುಂದುವರಿಯುವ ಎಲ್ಲ ಸಾಧ್ಯತೆಗಳು ನಮ್ಮ ಮುಂದಿವೆ. ಆಕ್ರಮಣ ನಡೆಯುವ ವಿಧಾನದಲ್ಲಿ ಬದಲಾವಣೆ ಆಗಿರಬಹುದಷ್ಟೆ. ಎಲ್ಲ ಕಾಲದಲ್ಲೂ ಸಂಖ್ಯೆ ಮುಖ್ಯ; ವರ್ತಮಾನ ಪ್ರಪಂಚದಲ್ಲಿ ಇನ್ನಷ್ಟು ಮುಖ್ಯ. ಸಂಖ್ಯೆಯನ್ನು ಬೆಳೆಸಿಕೊಳ್ಳುವಲ್ಲಿ ಮುಸ್ಲಿಂ ಮತ್ತು ಕ್ರೈಸ್ತರಿಗೆ ಪ್ರಮುಖ ವ್ಯತ್ಯಾಸವಿದೆ. ಮುಸ್ಲಿಮರು ಹಿಂದೆ ಕ್ರೌರ್ಯದ ಮಾರ್ಗ ತುಳಿದರೆ ಈಗ ನಾಲ್ಕು ಮದುವೆಯಂತಹ ಕ್ರಮದಿಂದ ಸಂಖ್ಯೆಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಕ್ರೈಸ್ತರು (ಪೆÇೀರ್ಚುಗೀಸರು) ಸ್ವಲ್ಪ ಕಾಲ ಗೋವಾದಲ್ಲಿ ಮತಾಂತರಕ್ಕೆ ಕ್ರೌರ್ಯದ ಮಾರ್ಗವನ್ನು ಅನುಸರಿಸಿದ್ದಿದೆ. ಆದರೆ ಇಡೀ ಭಾರತದಲ್ಲಿ ಭದ್ರವಾಗಿ ಬೇರೂರಿದ ನಯವಂಚಕ ಬ್ರಿಟಿಷರು ಮತಾಂತರದಲ್ಲೂ ಮೋಸ-ವಂಚನೆಗಳ ಹಾದಿಯನ್ನೇ ಹಿಡಿದರು. ಬ್ರಿಟಿಷ್ ಸರ್ಕಾರ ಇದ್ದಾಗ ರಾಜಾರೋಷವಾಗಿ ಹಿಂದೂದೇವತೆಗಳನ್ನು ಬಹಿರಂಗವಾಗಿ ನಿಂದಿಸಿ ಮತಾಂತರ ಮಾಡಿದರೆ ದೇಶ ಸ್ವತಂತ್ರವಾದ ಮೇಲೆ ಬಗೆಬಗೆಯ ಆಸೆ-ಆಮಿಷ, ವಂಚನೆಗಳ ಮಾರ್ಗವನ್ನು ಅನುಸರಿಸಿದರು. ಕ್ರೈಸ್ತರ ಸಂಖ್ಯೆ ಬೆಳೆಯಲು ಮುಖ್ಯವಾಗಿ ಮತಾಂತರವೇ ಮೂಲ.
ಇಸ್ಲಾಂನ ದಾಳಿ
ಖ್ಯಾತ ಇತಿಹಾಸಕಾರ ವಿಲ್ ಡುರಾಂಟ್ ಹೇಳಿದ ಒಂದು ಮಾತನ್ನು ಡಾ| ಚಿದಾನಂದಮೂರ್ತಿ ಅವರು ಪುಸ್ತಕದಲ್ಲಿ ಮೇಲಿಂದ ಮೇಲೆ ಉಲ್ಲೇಖಿಸುತ್ತಾರೆ; ಅದೆಂದರೆ “ಭಾರತದ ಮೇಲೆ ನಡೆದ ಇಸ್ಲಾಮಿನ ಆಕ್ರಮಣ ಇತಿಹಾಸದ ಅತ್ಯಂತ ರಕ್ತಸಿಕ್ತ ಕಥೆ” ಎಂಬುದಾಗಿ. ಆಗ ಇತರರ ಕೈಯಲ್ಲಿ ಬಿಲ್ಲು ಬಾಣ ಖಡ್ಗಗಳಿದ್ದರೆ ಮುಸ್ಲಿಮರ ಕೈಯಲ್ಲಿ ಯುದ್ಧೋನ್ಮತ್ತ ಧರ್ಮವಿತ್ತು. ದಾಳಿಕೋರ ಮಹಮ್ಮದ ಘೋರಿಯಿಂದ ಟಿಪ್ಪುಸುಲ್ತಾನ್ (1790) ವರೆಗೆ ಮುಸ್ಲಿಮರಿಂದ ನಡೆದದ್ದು ಐಶ್ವರ್ಯದ ಲೂಟಿ, ದೇವಾಲಯಗಳ ಧ್ವಂಸ ಮತ್ತು ಇಸ್ಲಾಂ ಒಪ್ಪಿ ಮತಾಂತರಗೊಳ್ಳದವರ ನಿರ್ದಯ ಕೊಲೆ. ವಿಜಯನಗರದ ಪತನವಾದಾಗ (1565) ಗೆದ್ದ ಮುಸ್ಲಿಮರ ಸೈನ್ಯ ನಾಲ್ಕೈದು ತಿಂಗಳ ಕಾಲ ಹಳ್ಳಿಗಳಿಗೆ ನುಗ್ಗಿ ದೇವಾಲಯಗಳ ನಾಶ ಮತ್ತು ಜನರ ಕಗ್ಗೊಲೆ ನಡೆಸಿತಂತೆ.
2001ರ ಜನಗಣತಿಯ ಪ್ರಕಾರ ದೇಶದ ಮುಸ್ಲಿಮರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಒಂದು ವಿಶೇಷವೆಂದರೆ, ಮುಸಲ್ಮಾನರ ಜನಸಂಖ್ಯೆ ಯಾವುದೇ ಕಾಲದಲ್ಲೂ ಯಾವುದೇ ಪ್ರದೇಶದಲ್ಲೂ ಇಳಿದದ್ದಿಲ್ಲ. ಹಿಂದೂಗಳ ಸಂಖ್ಯೆ ಅದಕ್ಕೆ ಹೋಲಿಸಿದರೆ ಇಳಿಯುತ್ತಲೇ ಇದೆ. 1941-51ರಲ್ಲಿ ಮಾತ್ರ ಏರಿತು. ಕಾರಣ ಆಗ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳಿಂದ ಹಿಂದೂಗಳು ದೊಡ್ಡ ಸಂಖ್ಯೆಯಲ್ಲಿ ಭಾರತಕ್ಕೆ ಬಂದರು. 1947ರ ಬಳಿಕ ಪಾಕಿಸ್ತಾನದಲ್ಲಿ ಉಳಿದುಕೊಂಡ ಹಿಂದೂಗಳು ಶೇ. 1.5 ಮಾತ್ರ. ಪೂರ್ವ ಪಾಕಿಸ್ತಾನದಲ್ಲಿ 1951ರಲ್ಲಿ ಶೇ. 22ರಷ್ಟಿದ್ದ ಹಿಂದೂಗಳ ಸಂಖ್ಯೆ 1991ರಲ್ಲಿ (ಬಂಗ್ಲಾದೇಶ) ಶೇ. 11ಕ್ಕೆ ಇಳಿದಿತ್ತು. (ಈಗ ಮತ್ತಷ್ಟು ಇಳಿದಿದೆ.)
ಕೆಲವು ವರ್ಷಗಳ ಹಿಂದೆ ಭಾರತಕ್ಕೆ ಬಂದ ಕ್ರೈಸ್ತರ ಧರ್ಮಗುರು ಪೆÇೀಪ್ 21ನೇ ಶತಮಾನದಲ್ಲಿ ತಾವು ಭಾರತದಲ್ಲಿ ಧರ್ಮಪ್ರಸಾರಕ್ಕೆ ತೀವ್ರ ಗಮನ ಕೊಡುವುದಾಗಿ ಹೇಳಿದರು. ವಿಶ್ವದಲ್ಲಿ ಅವರ ಶೇಕಡಾವಾರು ಸಂಖ್ಯೆ ಇಳಿಯುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿನ ಮತಾಂತರದ ಮೂಲಕ ವಿಶ್ವದ ಸಂಖ್ಯೆಯನ್ನು ಸರಿದೂಗಿಸಿಕೊಳ್ಳುತ್ತೇವೆ ಎಂಬುದು ಅವರ ಮಾತಿನ ಅರ್ಥವೆಂದು ವ್ಯಾಖ್ಯಾನಿಸಲಾಗಿತ್ತು.
ಕ್ರೈಸ್ತರ ಜನಸಂಖ್ಯೆಯಲ್ಲಿ ಈಚೆಗೆ ಇನ್ನೊಂದು ಕರಾಮತ್ತು ಕೂಡ ನಡೆಯುತ್ತಿದೆ. “1951-2001ರ ಅವಧಿಯಲ್ಲಿ ಭಾರತದಲ್ಲಿ ಅವರ ಸಂಖ್ಯೆಯಲ್ಲಿ ಹೆಚ್ಚು ಏರಿಕೆ ಇಲ್ಲ ಎಂದು ನಮಗೆ ತೋರುತ್ತದೆ. ನಿಜಸಂಗತಿ ಬೇರೆಯೇ ಇದೆ. ಹಿಂದೂಗಳು ಕ್ರೈಸ್ತರಾಗಿ ಮತಾಂತರಗೊಂಡರೂ ಹಿಂದಿನ ಹೆಸರುಗಳನ್ನೇ ಉಳಿಸಿಕೊಂಡು ‘ಹಿಂದೂ’ ಎಂದೇ ಬರೆಯಲು ಸೂಚನೆ ಪಡೆದಿರುತ್ತಾರೆ. ಇದು ನನಗೆ ತಿಳಿದು ಬಂದಿರುವ ಖಚಿತ ಸಂಗತಿ” ಎಂದು ಡಾ| ಚಿದಾನಂದಮೂರ್ತಿ ಸತ್ಯಾಂಶವನ್ನು ಹೊರಗೆಡಹಿದ್ದಾರೆ. ಇನ್ನು ಮತಾಂತರಗೊಂಡವರು ಪರಿಶಿಷ್ಟ ಜಾತಿ-ಪಂಗಡದವರಾಗಿದ್ದರೆ ಅವರ ಸವಲತ್ತುಗಳು ಮುಂದುವರಿಯುವ ದೃಷ್ಟಿಯಿಂದ ಕೂಡ ದಾಖಲೆಯಲ್ಲಿ ‘ಹಿಂದೂ’ ಎಂದೇ ಮುಂದುವರಿಸುವುದು ಲಾಭಕರವಾಗಿರುತ್ತದೆ.
ಭಾರತದಲ್ಲಿ ಹಿಂದೂಗಳು ಸೇರಿದಂತೆ ಇತರ ಧರ್ಮಗಳವರ ಒಟ್ಟು ಸಂಖ್ಯೆ ಶೇ. 6-6.4ರಷ್ಟು ಇಳಿದರೆ ಅದೇ ಅವಧಿಯಲ್ಲಿ ಮುಸ್ಲಿಮರ ಸಂಖ್ಯೆ ಶೇ. 3.03ರಷ್ಟು ಏರಿದೆ. ಈ ಏರಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚಲಿದೆ; ಇಳಿಕೆಯೂ ಹೆಚ್ಚಲಿದೆ. ಪರಿಣಾಮವಾಗಿ ದೇಶದಲ್ಲಿ ಹಿಂದೂ ಅಲ್ಪಸಂಖ್ಯಾತನಾಗುತ್ತಾನೆ ಎಂಬ ಆತಂಕ ಲೇಖಕರದ್ದು.
ಜನಗಣಮನ
ಕೇಂದ್ರದಲ್ಲಿ ಯುಪಿಎ ಸರ್ಕಾರದ ಹೊತ್ತಿಗೆ ತುಷ್ಟೀಕರಣದ ಘಟನೆಗಳು ಬಹಳಷ್ಟು ನಡೆದವು; ಕ್ರೈಸ್ತರು ನಡೆಸುತ್ತಿದ್ದ ಮತಾಂತರಗಳು ವೇಗವನ್ನು ಪಡೆದುಕೊಂಡವು. ಪ್ರಕೃತ ಪುಸ್ತಕದ ವಿಸ್ತೃತ ಆವೃತ್ತಿ ಆಗ ಪ್ರಕಟವಾಗಿದ್ದು (2008) ಅಂತಹ ಅನೇಕ ಘಟನೆಗಳು ಇದರಲ್ಲಿ ಸೇರಿವೆ. ಶಾಲೆಗಳಲ್ಲಿ ‘ವಂದೇ ಮಾತರಂ’ ಹಾಡುವುದು ಕಡ್ಡಾಯವಲ್ಲವೆಂದು ಕೇಂದ್ರಸರ್ಕಾರ ಹಿಂದೆಯೇ ಹೇಳಿತ್ತು. 2008ರ ಹೊತ್ತಿಗೆ ಕೇಂದ್ರ ಮಾನವಸಂಪನ್ಮೂಲ ಇಲಾಖೆಯ ರಾಜ್ಯಸಚಿವ ಎಂ.ಎ.ಎ. ಫಾತ್ಮಿ ಅವರು ಲೋಕಸಭೆಯಲ್ಲಿ “ಶಾಲೆಗಳಲ್ಲಿ ರಾಷ್ಟ್ರಗೀತೆ ಜನಗಣಮನವನ್ನು ಹಾಡುವುದು ಕೂಡ ಕಡ್ಡಾಯವಲ್ಲ” ಎಂದರು. ಅದರಲ್ಲಿ ಜನಗಣಮನ ಅಧಿನಾಯಕ ಎಂದರೆ ವಿಧಾತ; ದೈವತ್ವದ ಕಲ್ಪನೆ ಬರುವುದರಿಂದ ‘ಇಸ್ಲಾಮಿ’ಗೆ ವಿರುದ್ಧವಾಗುತ್ತದೆ ಎನ್ನುವ ಅಭಿಪ್ರಾಯ. ಅದಕ್ಕೆ ಲೇಖಕರ ಪ್ರಶ್ನೆ – ಮಕ್ಕಳು ರಾಷ್ಟ್ರಗೀತೆಯನ್ನು ಹಾಡುವ ವಿಷಯದಲ್ಲಿ ಐಚ್ಛಿಕತೆಯನ್ನು ತೋರಿದರೆ ಅವರಲ್ಲಿ ಭಾರತ ನಮ್ಮ ರಾಷ್ಟ್ರ ಎನ್ನುವ ದೇಶಾಭಿಮಾನ ಮೂಡುವುದು ಹೇಗೆ? ಐಚ್ಛಿಕ ಎನ್ನುವುದು ಹಲವು ರೂಪಗಳಲ್ಲಿ ಬಹಿಷ್ಕಾರದ ರೂಪವನ್ನೇ ಪಡೆಯುತ್ತದಲ್ಲವೆ?”
ಲೂಟಿ, ಮತಪ್ರಸಾರ
10-11ನೇ ಶತಮಾನಗಳ ಮುಸ್ಲಿಂ ದಾಳಿಗೆ ಸಂಪತ್ತಿನ ಲೂಟಿಯೊಂದೇ ಕಾರಣವಾಗಿರಲಿಲ್ಲ; ಮತಪ್ರಸಾರವೂ ಅದರ ಜೊತೆಗಿತ್ತು; ಕ್ರಿ.ಶ. 1300ರ ಹೊತ್ತಿಗೆ ಜೀವಿಸಿದ್ದ ಪ್ರಸಿದ್ಧ ಕವಿ ಅಮೀರ್ ಖುಸ್ರೋ ಹೀಗೆ ಹೇಳಿದ್ದಾನೆ: “ಮುಸ್ಲಿಂ ಪವಿತ್ರ ಯೋಧರ ಖಡ್ಗದಿಂದಾಗಿ ಇಡೀ ಭಾರತ ಬೆಂಕಿಯಿಂದ ಸುಟ್ಟ ಮುಳ್ಳುಗಳ ಕಾಡಿನಂತಾಗಿದೆ. ಹಿಂದೂ ಬಲಿಷ್ಠರನ್ನು ಕಾಲಿನಲ್ಲಿ ತುಳಿಯಲಾಗಿ ಅವರು ಕಪ್ಪ ಕೊಡಲು ಸಿದ್ಧರಾಗಿದ್ದಾರೆ. ವಿಗ್ರಹಾರಾಧನೆ ನಾಶವಾಗಿದೆ. ಇಸ್ಲಾಂ ವಿಜಯಿಯಾಗಿದೆ. ಇಸ್ಲಾಮಿನ ಕಾನೂನು ಮರಣದಂಡನೆಯಿಂದ ಮುಕ್ತವಾಗಲು ಕಪ್ಪಕೊಡುವ ಅವಕಾಶವನ್ನು ಕಲ್ಪಿಸದಿದ್ದರೆ ಬೇರು ಕೊಂಬೆ ಸಮೇತ ಇಡೀ ಹಿಂದೂಧರ್ಮ ನಾಶವಾಗುತ್ತಿತ್ತು.” ದಕ್ಷಿಣ ಭಾರತವು ಇಸ್ಲಾಮಿನ ದಾಳಿಯಿಂದ ತತ್ತರಿಸಿದಾಗ 1336ರಲ್ಲಿ ವಿಜಯನಗರದ ಉದಯವಾಯಿತು. ಇಲ್ಲವಾದರೆ ಇಡೀ ದಕ್ಷಿಣಭಾರತದಿಂದ ಹಿಂದೂಧರ್ಮ ನಾಶವಾಗುತ್ತಿತ್ತು.
ಅಂದು ಮೆರೆದ ವಿಜಯನಗರ ಇಂದು ಹಂಪಿಯಾಗಿ ನಮ್ಮ ಮುಂದಿದೆ. “ಹಲವು ವರ್ಷಗಳಿಂದ ಹಂಪಿಯು ಮುಸ್ಲಿಮರ ಇನ್ನೊಂದು ಬಗೆಯ ಆಕ್ರಮಣಕ್ಕೆ ಗುರಿಯಾಗಿದೆ. ಅವರೇ ಹಾಳುಮಾಡಿದ ಹಿಂದೂ ಸ್ಮಾರಕಗಳನ್ನು ರಾಜಾರೋಷವಾಗಿ ದರ್ಗಾ ಮಾಡಿಕೊಳ್ಳುತ್ತಿದ್ದಾರೆ. ಪುರಂದರ ಮಂಟಪದ ಪಕ್ಕದ ಈರಣ್ಣನ ಗುಡಿ ಈಗ ಹೊನ್ನಾರು ಸಾಬ್ ದರ್ಗಾ ಆಗಿದೆ. ಹನುಮಪಾದ ಗುಡ್ಡದ ಕಣಿವೆಯಲ್ಲಂತೂ ಹತ್ತಾರು ಕಡೆ ಅಂತಹ ದರ್ಗಾಗಳಾಗಿವೆ. ತುಂಗಭದ್ರೆಯ ಎರಡೂ ಕಡೆ ಮಾರ್ಗಗಳ ಉದ್ದಕ್ಕೂ 15-20 ದರ್ಗಾ, ಮಸೀದಿಗಳು ತಲೆಯೆತ್ತಿವೆ. ಸೋಮೇಶ್ವರ ಬೆಟ್ಟದ ಮೇಲಿದ್ದ ದೇವಾಲಯದ ಲಿಂಗ ಹಿಂದೆಯೇ ಭಿನ್ನವಾಗಿತ್ತು. ಈಗ ಅದರ ಬುಡದಲ್ಲಿ ದರ್ಗಾ ತಲೆಯೆತ್ತಿ ಆ ಬೆಟ್ಟದ ಬಂಡೆಯ ಮೇಲೆ ದೊಡ್ಡ ಅಕ್ಷರಗಳಲ್ಲಿ ‘ಈದ್ ಮುಬಾರಕ್’ ಎಂದು ಬರೆದಿದೆ. ಕೊಂಡನಾಯಕನಹಳ್ಳಿ ಸಮೀಪದ ಸಾಯಿರಾಮ್ ದೇವಾಲಯದ ಮುಂದೆ ಮಸೀದಿ ನಿರ್ಮಿಸಲಾಗುತ್ತಿದೆ. ಮುಸ್ಲಿಮರಿಗೆ ಹಿಂದೂ ದೇವಾಲಯಗಳ ಪಾವಿತ್ರ್ಯಕ್ಕೆ ಭಂಗ ತರುವ ಜಾಗಗಳಲ್ಲಿ ಮಸೀದಿ ಆದರೆ ಹೆಚ್ಚು ಪ್ರಾಶಸ್ತ್ಯ!” ಎಂದು ಡಾ| ಚಿದಾನಂದಮೂರ್ತಿ ಖೇದ ವ್ಯಕ್ತಪಡಿಸುತ್ತಾರೆ. ಹಂಪಿಯ ದಿನದಿನದ ವಿದ್ಯಮಾನವನ್ನು ತಿಳಿಯುವಂತಹ ಸಂಪರ್ಕವನ್ನು ಅವರು ಅಲ್ಲಿಯ ಸ್ಥಳೀಯರೊಂದಿಗೆ ಇರಿಸಿಕೊಂಡಿದ್ದಾರೆ.
ಐತಿಹಾಸಿಕ ಸ್ಮಾರಕಗಳನ್ನು ದರ್ಗಾ ಆಗಿ ಪರಿವರ್ತಿಸಿಕೊಳ್ಳುವುದು ಒಂದು ದೊಡ್ಡ ಷಡ್ಯಂತ್ರದ ಭಾಗವೇನೋ ಅನ್ನಿಸುತ್ತದೆ. ಬಾಗೇಪಲ್ಲಿ ತಾಲೂಕಿನ ಗುಮ್ಮನಾಯಕನಪಾಳ್ಯ ಮತ್ತು ಮುದೇನೂರಿನ ಐತಿಹಾಸಿಕ ಸ್ಮಾರಕಗಳು ದರ್ಗಾ ಆಗಿವೆ. ಹಂಪಿಯಲ್ಲಿ ಸೇರಿಕೊಂಡ ಕಾಶ್ಮೀರಿ ಮುಸ್ಲಿಮರು ಉಗ್ರರಿಗೆ ಪೆÇ್ರೀತ್ಸಾಹ ನೀಡುತ್ತಾರೆ; ಅವರು ಗುಪ್ತ ಚಟುವಟಿಕೆ ನಡೆಸುತ್ತಾರೆ. ಇಮ್ರಾನ್ ಎಂಬ ಉಗ್ರನನ್ನು ಅಲ್ಲಿ ಬಂಧಿಸಲಾಗಿದೆ. ಹಜಾರರಾಮ ದೇವಾಲಯದ ಗೈಡನ್ನು ಓಡಿಸಿ, ಇಮ್ರಾನ್ ಹಾಗೂ ಇತರ ಮುಸ್ಲಿಮರು ಅಲ್ಲಿ ನಮಾಜು ಮಾಡಿದರು.
ಬೆಂಗಳೂರಲ್ಲಿ ಧರಣಿ
ಹಿಂದೂ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಲು, ಹಿಂದೂ ಜನಸಂಖ್ಯೆ ಕುಸಿತ ಮುಂತಾದವುಗಳಿಂದ ಭವಿಷ್ಯದಲ್ಲಿ ಆಗಬಹುದಾದ ಅಪಾಯದ ಬಗ್ಗೆ ಎಚ್ಚರ ಮೂಡಿಸಲು ಡಾ| ಚಿದಾನಂದಮೂರ್ತಿ ಅವರು ಏಪ್ರಿಲ್ 6, 2007ರಂದು ಬೆಂಗಳೂರು ಪುರಭವನದ ಮುಂದೆ ಧರಣಿ ನಡೆಸಿದರು; ಸಮಾಜದ ಹಿರಿಯರು ಸೇರಿದಂತೆ ಹಲವರು ಅದರಲ್ಲಿ ಭಾಗವಹಿಸಿದರು. ಉತ್ತರ ಭಾರತದಲ್ಲಿ ಹಿಂದೂಗಳ ಒಗ್ಗಟ್ಟಿಗೆ ಅಯೋಧ್ಯೆ ನೆಪವಾದಂತೆ ದಕ್ಷಿಣಭಾರತದಲ್ಲಿ ಹಂಪಿಯಲ್ಲಿ ನಡೆಯುತ್ತಿರುವ ಇಸ್ಲಾಂ ಚಟುವಟಿಕೆಗಳ ನೆಪದಲ್ಲಿ ಒಗ್ಗಟ್ಟು ಮೂಡಬೇಕೆನ್ನುವ ಒಂದು ಮಾತು ಆ ವೇಳೆಗೆ ಬಂತು.
ದೇಶಪ್ರೇಮಿ ಬಾಲಕ
ಶಿವಮೊಗ್ಗ ಜಿಲ್ಲೆ ಚನ್ನಗಿರಿ ತಾಲೂಕು ಮೂಲದವರಾದ ಡಾ| ಚಿದಾನಂದಮೂರ್ತಿ ಪುಸ್ತಕದ ಒಂದು ಲೇಖನದಲ್ಲಿ ತನ್ನಲ್ಲಿ ದೇಶಪ್ರೇಮ ಅಂಕುರಿಸಿದ್ದನ್ನು ನೆನಪಿಸಿಕೊಳ್ಳುತ್ತಾರೆ. “ಮಾಧ್ಯಮಿಕ ಶಾಲೆ ವಿದ್ಯಾರ್ಥಿಯಾಗಿದ್ದಾಗ ಸ್ವಾತಂತ್ರ್ಯ ಹೋರಾಟ ನಡೆದಿತ್ತಾದರೂ ನಮಗೆ ಅದರ ಅರಿವೇ ಇರಲಿಲ್ಲ. ಆದರೆ ಬೇಡರ ಕರಿಯಪ್ಪ ಎಂಬ ಅನಕ್ಷರಸ್ಥ ಹಳ್ಳಿಯಲ್ಲಿ ‘ಭಾರತ ಮಾತಾ ಕೀ ಜೈ’ ಎಂದು ಆಗಾಗ ಘೋಷಣೆ ಕೂಗಿ ಹಳ್ಳಿಯ ಕೆಲವು ಮುಖಂಡರ ಅಪ್ರೀತಿಗೆ ಪಾತ್ರನಾಗಿದ್ದ. ಆತ ದೇವಸ್ಥಾನದ ಗೋಡೆ ಮೇಲೆ ಅಂಟಿಸಿದ ಕಾಗದವನ್ನು ಜನ ತಕ್ಷಣ ಕಿತ್ತುಹಾಕುತ್ತಿದ್ದರು” ಎನ್ನುವ ಲೇಖಕರು, ದಾವಣಗೆರೆಯಲ್ಲಿ ಪ್ರೌಢಶಾಲೆ ವಿದ್ಯಾರ್ಥಿಯಾಗಿದ್ದಾಗ ಹೋರಾಟವನ್ನು ನೇರವಾಗಿ ಕಾಣುವಂತಾಯಿತು. “ನಾವು ಇದ್ದ ಉಚಿತ ವಿದ್ಯಾರ್ಥಿನಿಲಯದ ಆಡಳಿತವರ್ಗದವರು ಸ್ವಾತಂತ್ರ್ಯ ಚಳುವಳಿಯ ವಿರೋಧವಾಗಿದ್ದು, ನಾವು ಯಾರೂ ಗಾಂಧಿ ಟೋಪಿ ಧರಿಸುವಂತಿರಲಿಲ್ಲ; ಮೆರವಣಿಗೆಗಳಲ್ಲಿ ಭಾಗವಹಿಸುವಂತಿರಲಿಲ್ಲ. ಆದರೂ ನಾನು ಗಾಂಧಿ ಟೋಪಿ ಕೊಂಡು ಪೆಟ್ಟಿಗೆಯಲ್ಲಿ ಇಟ್ಟಿದ್ದೆ. ಒಂದು ದಿನ ರಸ್ತೆಯಲ್ಲಿ ಹೋಗುತ್ತಿರುವಾಗ ಸ್ವಾತಂತ್ರ್ಯ ಚಳುವಳಿಗಾರರ ಮೆರವಣಿಗೆ ಸಾಗಿತ್ತು. ಅವರನ್ನು ಅಡ್ಡಗಟ್ಟಿದ ಪೆÇಲೀಸರು ಲಾಠಿಗಳಿಂದ ಸಿಕ್ಕಾಪಟ್ಟೆ ಹೊಡೆದರು. ಕೆಲವರು ನೆಲಕ್ಕೆ ಬಿದ್ದರೂ ‘ವಂದೇ ಮಾತರಂ’ ಎಂದು ಕೂಗುತ್ತಿದ್ದರು. ಪೆÇಲೀಸರು ಅವರನ್ನೂ ಹೊಡೆದರು. ಆ ದೃಶ್ಯ ನನ್ನ ಮನಸ್ಸನ್ನು ತೀವ್ರವಾಗಿ ಕಲಕಿತು. ಆವೇಶ ಬಂದವನಂತೆ ವಿದ್ಯಾರ್ಥಿನಿಲಯದ ನನ್ನ ಕೊಠಡಿಗೆÉ ಓಡಿಹೋಗಿ ಬಾಗಿಲು ಮುಚ್ಚಿ ಏದುಸಿರು ಬಿಡುತ್ತಾ ಪೆಟ್ಟಿಗೆಯಲ್ಲಿದ್ದ ಗಾಂಧಿ ಟೋಪಿ ಹೊರಗೆ ತೆಗೆದು ಅದನ್ನು ಮಡಿಸಿ ಪೆಟ್ಟಿಗೆ ಮೇಲಿಟ್ಟು ಕಣ್ಣೀರು ಸುರಿಸುತ್ತಾ ತೀವ್ರ ಆವೇಶದಿಂದ ಅದಕ್ಕೆ ಬಾಗಿ ಬಾಗಿ ನಮಸ್ಕರಿಸುತ್ತ ‘ಭಾರತ್ ಮಾತಾ ಕೀ ಜೈ’ ‘ವಂದೇ ಮಾತರಂ’ ಎಂದು ಮೆತ್ತಗೆ ಕೂಗುತ್ತಾ ಕಣ್ಣ ತುಂಬ ನೀರು ಹರಿಸಿದೆ. ನನ್ನ ಬದುಕಿನಲ್ಲಿ ದೇಶಪ್ರೇಮದ ಆವೇಶ ಕಿಚ್ಚಾಗಿ ಕಾಣಿಸಿದ್ದು ಅದೇ ಮೊದಲು” ಎಂದು ಈ ಅಪ್ಪಟ ರಾಷ್ಟ್ರಪ್ರೇಮಿ ನೆನಪಿಸಿಕೊಂಡಿದ್ದಾರೆ.
ಪ್ರಸ್ತುತ ಧರಣಿಗೆ ಮುನ್ನ ಹಂಪಿಯಲ್ಲಿ ಶಿವರಾತ್ರಿಯಂದು (ಮಾರ್ಚ್ 5) ‘ಶ್ರೀ ವಿರೂಪಾಕ್ಷ ಹಂಪಿ ರಕ್ಷಾ ದೀಕ್ಷಾ’ ಎಂಬ ಕಾರ್ಯಕ್ರಮವನ್ನೂ ಕೂಡ ಲೇಖಕರು ನಡೆಸಿದರು. ಸಂತಾನ ನಾಗದೇವಾಲಯ ಕೂಡ ಹೊಸ ದರ್ಗಾಗಳ ಸಾಲಿಗೆ ಸೇರಿತು. ಪುರಂದರ ಮಂಟಪವು ಸಮೀಪದ ದರ್ಗಾದ ಉರುಸ್ಗೆ ಮಾಂಸ ಬೇಯಿಸುವ ಅಡುಗೆಮನೆ ಆಯಿತು; ಮಹಾನವಮಿ ದಿಬ್ಬದ ಮೇಲೆ ನಮಾಜ್ ಮಾಡಲಾಯಿತು. ಪೂರ್ವಭಾವಿಯಾಗಿ ಹಂಪಿ ಉಳಿಸಿ ಆಂದೋಲನ ಸಮಿತಿ ರಚಿಸಿ (ಡಾ| ಚಿಮೂ ಅದರ ಸಂಚಾಲಕರು) ಅದರ ಮೂಲಕ ನಡೆಸಿದ ರಕ್ಷಾ ದೀಕ್ಷಾದಲ್ಲಿ 2000ಕ್ಕೂ ಅಧಿಕ ಮಂದಿ ‘ಹಂಪಿಯ ರಕ್ಷಣೆಗೆ ಕಂಕಣಬದ್ಧನಾಗುತ್ತೇನೆ’ ಎನ್ನುವ ದೀಕ್ಷೆ ಕೈಗೊಂಡರು. ಹಂಪಿಯನ್ನು ಹಿಂದೂ ಧಾರ್ಮಿಕಕ್ಷೇತ್ರವಾಗಿ ಉಳಿಸಿಕೊಳ್ಳುವ ಬಗ್ಗೆ ಮಥುರಾದಲ್ಲಿ ನಡೆದ ಆರೆಸ್ಸೆಸ್ ರಾಷ್ಟ್ರಮಟ್ಟದ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಅದಕ್ಕೆ ಸಂಘದ ಹಿರಿಯ ಪ್ರಚಾರಕ್ ಮೈ.ಚ. ಜಯದೇವ್ ಅವರು ಸಹಕರಿಸಿದ್ದರು.
ದೇವಾಲಯಗಳ ನಾಶ
ಭಾರತದಲ್ಲಿ ಕಳೆದ ಸುಮಾರು 1,000 ವರ್ಷಗಳಿಂದ ನಡೆದಿರುವ ಹಿಂದೂ ದೇವಾಲಯಗಳ ವ್ಯವಸ್ಥಿತ ನಾಶದ ಸಮಗ್ರ ಸಮೀಕ್ಷೆ ಆಗಬೇಕಾಗಿದೆ ಎನ್ನುವ ಚಿಮೂ ಅವರು ಈ ಕೊರತೆ ಇತಿಹಾಸ ಸಂಶೋಧಕರನ್ನು ಅಷ್ಟಾಗಿ ಕಾಡಿದಂತೆ ಕಾಣುವುದಿಲ್ಲ ಎಂದು ಬೇಸರಿಸುತ್ತಾರೆ. ಆ ಕೊರತೆಯನ್ನು ಸಂಶೋಧಕ ಸೀತಾರಾಂ ಗೋಯಲ್ ಅವರ ಎರಡು ಪುಸ್ತಕಗಳು ಸ್ವಲ್ಪಮಟ್ಟಿಗೆ ತುಂಬಿವೆ. ಈ ಕುರಿತು ಲೇಖಕ ರಿಜ್ವಾನ್ ಸಲೀಂ ಹೇಳುವ ಮಾತುಗಳು ಮನಕಲಕುತ್ತವೆ: “ತೀರಾ ಕೆಳಮಟ್ಟದ ನಾಗರಿಕತೆ ಮತ್ತು ಹೇಳಬಹುದಾದ ಸಂಸ್ಕೃತಿ ಇಲ್ಲದ ಅರೇಬಿಯ ಮತ್ತು ಪಶ್ಚಿಮ ಏಷ್ಯಾದ ದಾಳಿಕೋರರು ಎಂಟನೇ ಶತಮಾನದ ಆರಂಭದಿಂದ ಭಾರತಕ್ಕೆ ನುಗ್ಗಲು ಪ್ರಾರಂಭಿಸಿದರು. ಲೆಕ್ಕವಿಲ್ಲದಷ್ಟು ಹಿಂದೂ ದೇವಾಲಯಗಳನ್ನು ನಾಶಪಡಿಸಿದರು. ಅಸಂಖ್ಯ ಶಿಲ್ಪ ಮತ್ತು ವಿಗ್ರಹಗಳನ್ನು ಒಡೆದುಹಾಕಿದರು. ಹಿಂದೂ ರಾಜರ ಅರಮನೆ, ಕೋಟೆಗಳನ್ನು ನಾಶಪಡಿಸಿದರು. ಗಂಡಸರನ್ನು ಕೊಂದರು. ಹೆಂಗಸರನ್ನು ಸಾಗಿಸಿದರು. ಇದು ಇತಿಹಾಸ ಗ್ರಂಥಗಳಲ್ಲಿ ಬಂದರೂ ಕೂಡ ಮಾನಸಿಕವಾಗಿ ಜಗತ್ತಿನ ಅತ್ಯಂತ ಮುಂದುವರಿದ ನಾಗರಿಕತೆ, ಅತ್ಯಂತ ಶ್ರೀಮಂತ ಸಂಸ್ಕೃತಿ ಹಾಗೂ ಸೃಜನಶೀಲ ಸಮಾಜದ ಐತಿಹಾಸಿಕ ವಿಕಾಸವನ್ನು ವಿದೇಶೀ ಮುಸ್ಲಿಂ ದಾಳಿಕೋರರು ನಾಶಮಾಡಿದ್ದನ್ನು ಹಲವು ಭಾರತೀಯರೇ ಅಂಗೀಕರಿಸುವುದಿಲ್ಲ” ಎಂದವರು ಗಮನ ಸೆಳೆದಿದ್ದಾರೆ. ಇದೊಂದು ಘೋರಕೃತ್ಯ ಎಂಬಲ್ಲಿ ಯಾವ ಸಂಶಯವೂ ಇಲ್ಲ.
ಕಾಶಿ, ಮಥುರಾ, ಉಜ್ಜಯಿನಿ, ಜ್ವಾಲಾಮುಖಿ, ಸೋಮನಾಥ, ಮಾಹೇಶ್ವರ, ದ್ವಾರಕಾಗಳ ದೇವಾಲಯಗಳನ್ನೂ ಕೂಡ ಮುಸ್ಲಿಂ ದಾಳಿಕೋರರು ನಾಶಪಡಿಸಿದರು. ಆದರೆ ಕ್ರುದ್ಧ ಹಿಂದುಗಳು ಡಿಸೆಂಬರ್ 6, 1992ರಂದು ಬಾಬ್ರಿ ಮಸೀದಿಯನ್ನು ಭಗ್ನ ಮಾಡಿದ್ದು ಸಾವಿರ ವರ್ಷಗಳ ಏಕೈಕ ಘಟನೆ ಎಂದು ಕೂಡ ರಿಜ್ವಾನ್ ಸಲೀಂ ಹೇಳುತ್ತಾರೆ. ಆದರೆ
ನಮ್ಮ ಸೆಕ್ಯುಲರಿಸ್ಟರು ಸೇರಿದಂತೆ ಟೀಕಾಕಾರರಿಗೆ
ಬಾಬ್ರಿ ಮಸೀದಿ ಪತನವೊಂದು ಅಕ್ಷಮ್ಯ ಘಟನೆಯಾಗಿ ಉಳಿದುಹೋಯಿತು. ಈ ದ್ವಿಮುಖ ಧೋರಣೆ ಏಕೆ? ಇನ್ನೊಂದು ಪ್ರಶ್ನೆಯನ್ನು ಕೂಡ ಇಲ್ಲಿ ಕೇಳಬಹುದು. ಮುಸ್ಲಿಮರು ಭಾರತದ ವಾಸ್ತುಶಿಲ್ಪಕ್ಕೆ ಭಾರೀ ಕೊಡುಗೆ ನೀಡಿದರೆಂದು ವಿಜೃಂಭಿಸಲಾಗುತ್ತದೆ. ಆ ನಿರ್ಮಾಣಗಳಲ್ಲಿ ಬಹಳಷ್ಟು ನಮ್ಮ ಅರಮನೆ, ಮಂದಿರಗಳ ಅವಶೇಷಗಳಿಂದಲೇ ನಿರ್ಮಾಣಗೊಂಡಿರಬಹುದು. ಇರಲಿ. ಈ ದೇವಾಲಯ, ಅರಮನೆಗಳ ನಾಶದಿಂದ ಭಾರತದ ಶಿಲ್ಪ, ವಾಸ್ತುಶಿಲ್ಪಗಳಿಗಾದ ನಷ್ಟ ಎಷ್ಟು? ಅದನ್ನು ಯಾರು ಲೆಕ್ಕ ಹಾಕಬೇಕು?
ದೇವಾಲಯಗಳನ್ನು ಈ ರೀತಿಯಲ್ಲಿ ಅತ್ಯಂತ ವಿಕೃತವಾಗಿ ನಾಶಮಾಡಲಾಗಿದೆ:
- ಕಲ್ಲಿನ ಶಿಲ್ಪಗಳನ್ನು ಕೆತ್ತಿ ಅಥವಾ ಒಡೆದು ವಿರೂಪಗೊಳಿಸಿದರು.
- ಅಮೂಲ್ಯವಾದ ಲೋಹ ಶಿಲ್ಪವಾದರೆ ಕರಗಿಸುತ್ತಿದ್ದರು.
- ಒಡೆದ ವಿಗ್ರಹ, ದೇವಾಲಯಗಳಿಂದ ಮಸೀದಿ, ಅರಮನೆಗಳನ್ನು ಕಟ್ಟಿಸಿದರು.
- ಪೂಜೆಯ ಮೂರ್ತಿಯನ್ನು ಕಕ್ಕಸಿನ ಪೀಠ, ಮಸೀದಿಯ ಮೆಟ್ಟಿಲು, ಮಾಂಸದ ಅಂಗಡಿಯ ತೂಕದ ಬಟ್ಟು ಮುಂತಾಗಿ ಅವಮಾನಿಸಿದರು.
- ಪವಿತ್ರ ಜಲಪಾತ್ರೆ ಹಾಗೂ ಗ್ರಂಥಗಳನ್ನೂ ನಾಶಪಡಿಸಿದರು.
ದತ್ತಪೀಠ ವಿವಾದ
ಸಂಪೂರ್ಣ ಹಿಂದೂಕ್ಷೇತ್ರವಾಗಿದ್ದ ಚಿಕ್ಕಮಗಳೂರು ಸಮೀಪದ ಚಂದ್ರದ್ರೋಣ ಪರ್ವತದ ದತ್ತಪೀಠವನ್ನು ಬಾಬಾಬುಡನ್ ದರ್ಗಾ ಎಂದು ಇಸ್ಲಾಮೀಕರಣಗೊಳಿಸಿದ್ದು ಮುಸ್ಲಿಂ ಆಕ್ರಮಣದ ಇನ್ನೊಂದು ಮಾದರಿ. 1975ರಷ್ಟು ಈಚಿನವರೆಗೂ ಅಲ್ಲಿ ಅಂತಹ ಸಮಸ್ಯೆ ಇರಲಿಲ್ಲ. 1976ರಲ್ಲಿ ರಾಜ್ಯದ ಅಂದಿನ ಕಾಂಗ್ರೆಸ್ ಸರ್ಕಾರ ದತ್ತಪೀಠವನ್ನು ವಕ್ಫ್ ಮಂಡಳಿಗೆ ವಹಿಸಿದಾಗ ವಿವಾದ ಆರಂಭವಾಯಿತು. ಅದು ದತ್ತಪೀಠವನ್ನು ದರ್ಗಾ ಆಗಿ ಪರಿವರ್ತಿಸುವ ತಂತ್ರವಾಗಿತ್ತು. ವಕ್ಫ್ ಮಂಡಳಿಗೆ ವಹಿಸುತ್ತಲೇ ಅಲ್ಲಿನ ಗೋರಿಗೆ ಹಸಿರುಶಾಲು ಹೊದಿಸಿದರು; 1980ರಲ್ಲಿ ನ್ಯಾಯಾಲಯವು ಆಡಳಿತವನ್ನು ಮುಜರಾಯಿ ಇಲಾಖೆಗೆ ವಹಿಸಿದಾಗ ಹಸಿರುಶಾಲನ್ನು ತೆಗೆದರು.
ಬೆಟ್ಟದ ರಸ್ತೆಯುದ್ದಕ್ಕೂ ‘ದತ್ತಪೀಠಕ್ಕೆ’ ಎಂಬ ಮೈಲಿಗಲ್ಲುಗಳಿವೆ. ಅದೊಂದು ಸಹಜ ಗುಹೆ ಆಗಿದ್ದು, ಬಾಗಿಲಿನ ಚೌಕಟ್ಟಿನ ಶಿಲೆ, ಕಂಬಗಳ ಕೆತ್ತನೆಗಳು ದೇವಾಲಯಗಳ ಚೌಕಟ್ಟಿನ ರೀತಿಯಲ್ಲಿವೆ. ಬಾಗಿಲಿನ ಮೇಲೆ ಕಮಲದ ಶಿಲ್ಪ ಇದೆ. ಗುಹೆಯ ಒಳಗೆ ವೇದಿಕೆಯ ಮೇಲಿರುವ ಬೆಳ್ಳಿ ಪಾದುಕೆಗೆ ಮುಜಾವರನೇ (ಮುಸ್ಲಿಂ ಅರ್ಚಕ) ಪೂಜೆ ಮಾಡುತ್ತಾನೆ; ಆದರೆ ಅಲ್ಲಿ ತೆಂಗಿನಕಾಯಿ ಒಡೆಸುವುದು ಕೂಡ ಇದೆ. ಹಿಂದೆ ದತ್ತಪೀಠದಲ್ಲೊಂದು ನೀರಿನ ಒರತೆ ಇದ್ದು ಅದನ್ನು ಮುಸ್ಲಿಮರು ಮುಚ್ಚಿದ್ದಾರೆ. ರೆವಿನ್ಯೂ ದಾಖಲೆ ಪ್ರಕಾರ ದತ್ತಪೀಠದ ಜಮೀನಿನ ಹಿಡುವಳಿ ‘ಇನಾಂ ದತ್ತಾತ್ರೇಯ ದೇವರು’ ಎಂಬ ಹೆಸರಿನಲ್ಲಿದೆ. ಸಮೀಪದಲ್ಲೇ ಅತ್ತಿಮರ ಇದೆ, ದತ್ತಪೀಠವಾದ್ದರಿಂದ ಜನ ಅದನ್ನು ಬೆಳೆಸಿದ್ದಾರೆ. ಬಹಳ ಮುಖ್ಯವಾಗಿ ನಿಜವಾದ ಬಾಬಾಬುಡನ್ ದರ್ಗಾ ಇರುವುದು ಅವನ ಊರಾದ ನಾಗೇನ ಹಳ್ಳಿಯಲ್ಲಿ; ಅಲ್ಲಿ ಈಗಲೂ ಅವನ ಉರುಸ್ ನಡೆಯುತ್ತದೆ; ಮತ್ತು ಒಳಗಿರುವುದು ನಾಲ್ವರು ಮುಸ್ಲಿಂ ಶಿಷ್ಯರ ಸಮಾಧಿಗಳಾಗಿದ್ದರೂ ಕೂಡ ಪೀಠದ ಹಿಂದುತ್ವಕ್ಕೆ ಭಂಗ ಬರುವುದಿಲ್ಲ ಎಂದು ಅಭಿಪ್ರಾಯಪಡಲಾಗಿದೆ.
ಹಿಂದು-ಮುಸ್ಲಿಂ ಇಬ್ಬರಿಗೂ ಹಕ್ಕಿದೆ ಎಂಬ ನೆಲೆಯಲ್ಲಿ ಪೀಠವನ್ನು ಮುಜರಾಯಿ ಇಲಾಖೆಗೆ ಒಪ್ಪಿಸಲಾಗಿದೆ. ಹಿಂದುಗಳ ದರ್ಶನ ಪೂಜೆಗಳಿಗೆ ಅವಕಾಶ ಕೂಡದೆಂಬ ಮುಸ್ಲಿಮರ ಅರ್ಜಿಗಳೆಲ್ಲ ವಜಾ ಆಗಿವೆ. ಚಿಕ್ಕಮಗಳೂರು ಸಹಾಯಕ ಕಮಿಷನರ್ ಅವರು 1975ರ ಹಿಂದಿನ ಪೂಜಾಕ್ರಮವನ್ನು ತಿಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆದರೆ ಧಾರ್ಮಿಕ-ದತ್ತಿ ಕಮಿಷನರ್ ಅವರು ದತ್ತಪೀಠದ ನಿರ್ವಹಣೆಯನ್ನು ಮುಜಾವರರಿಂದ ಕದಲಿಸುತ್ತಿಲ್ಲ. ಪ್ರತಿವರ್ಷ ಜಾತ್ರೆ ಸಂದರ್ಭದಲ್ಲಿ ಆತಂಕದ ಸ್ಥಿತಿ ಮುಂದುವರಿಯುತ್ತಿದೆ.
ಕೆಲವು ಪ್ರಶ್ನೆಗಳು
ಭಾರತದ ಸೆಕ್ಯುಲರಿಸ್ಟರು ದೇಶವನ್ನು ಕಾಡುತ್ತಿರುವ, ಅದರ ಸಂಸ್ಕೃತಿಯ ಬೇರಿಗೇ ಕೊಡಲಿಪೆಟ್ಟು ಹಾಕುವ ವಾಸ್ತವಗಳ ಬಗ್ಗೆ ಮೌನವಹಿಸುತ್ತಾರೆ; ಮಾತ್ರವಲ್ಲ, ಹಾಗೆ ಪೆಟ್ಟು ಹಾಕುವ ಶಕ್ತಿಗಳಿಗೆ ಪರೋಕ್ಷವಾಗಿ ಧೈರ್ಯ ನೀಡುತ್ತಾರೆ. ಹಿಂದುಗಳಿಗೆ ಅನ್ಯಾಯವಾದಾಗ ಮೌನ ವಹಿಸುತ್ತಾರೆ. ಅನ್ಯಧರ್ಮೀಯರು ಎಸಗುವ ಅನ್ಯಾಯಗಳ ಬಗ್ಗೆ ಸುಮ್ಮನಿದ್ದು, ಹಿಂದೂಗಳ ತಪ್ಪಿಲ್ಲದಿದ್ದರೂ ಅವರನ್ನು ಖಂಡಿಸಲು ಮುಂದಾಗುತ್ತಾರೆ. ಅವರ ಪ್ರಕಾರ ತಪ್ಪು ಸದಾ ಹಿಂದೂಗಳದ್ದೇ. ಅಂಥವರಿಗಾಗಿ ಮುಂಬಯಿಯ ‘ಹಿಂದೂ ವಾಯ್ಸ್’ ಪತ್ರಿಕೆಯ ದೈವಮುತ್ತು ಅವರು ಕೇಳಿದ ಕೆಲವು ಪ್ರಶ್ನೆಗಳನ್ನು ಡಾಕ್ಟರ್ ಚಿದಾನಂದಮೂರ್ತಿ ಓದುಗರ ಗಮನಕ್ಕೆ ತಂದಿದ್ದಾರೆ:
1) ಜಗತ್ತಿನಲ್ಲಿ ಸುಮಾರು 52 ಮುಸ್ಲಿಂ ರಾಷ್ಟ್ರಗಳಿವೆ. ಅವುಗಳಲ್ಲಿ ಹಜ್ ಯಾತ್ರೆಗೆ ಹಣ ನೀಡುವ ಒಂದಾದರೂ ರಾಷ್ಟ್ರವಿದೆಯೆ? ಇದ್ದರೆ ತೋರಿಸಿ.
2) ಭಾರತದಲ್ಲಿ ಮುಸ್ಲಿಮರಿಗೆ ನೀಡಿದಂತೆ ಹಿಂದುಗಳಿಗೆ ವಿಶೇಷ ಹಕ್ಕು ನೀಡುವ ಮುಸ್ಲಿಂ ರಾಷ್ಟ್ರ ಇಲ್ಲ.
3) ಯಾವುದೇ ಮುಸ್ಲಿಂ ರಾಷ್ಟ್ರದಲ್ಲಿ ಅಧ್ಯಕ್ಷ ಅಥವಾ ಪ್ರಧಾನಿಯಾದ ಹಿಂದೂ ಇಲ್ಲ.
4) ಯಾವುದೇ ಮೌಲ್ವಿ ಅಥವಾ ಮುಲ್ಲಾ ಭಯೋತ್ಪಾದಕರ ವಿರುದ್ಧ ಫತ್ವಾ ಹೊರಡಿಸಿಲ್ಲ.
5) ಮುಸ್ಲಿಮರು ಮತ್ತು ಕ್ರೈಸ್ತರಿಗಾಗಿ ಹಿಂದೂಗಳ ದೇವಾಲಯಗಳ ಹಣವನ್ನು ನೀಡಲಾಗುತ್ತಿದೆ. 2002ರಲ್ಲಿ ರಾಜ್ಯಸರ್ಕಾರ ದೇವಾಲಯಗಳಿಂದ ಬಂದ 70 ಕೋಟಿ ರೂ.ಗಳಲ್ಲಿ 50 ಕೋಟಿಯನ್ನು ಮದರಸಾಗಳಿಗೆ, 10 ಕೋಟಿಯನ್ನು ಕ್ರೈಸ್ತರಿಗೆ ಮತ್ತು ಕೇವಲ ಹತ್ತು ಕೋಟಿಯನ್ನು ದೇವಾಲಯಗಳಿಗೆ ನೀಡಿತು; ಇದು ಸರಿಯೇ?
6) ಸಂವಿಧಾನದ ಪ್ರಕಾರ ದೇಶದ ಎಲ್ಲ ಪ್ರಜೆಗಳು ಸಮಾನರಿರುವಾಗ ಸಮಾನ ನಾಗರಿಕ ಸಂಹಿತೆ ಏಕಿಲ್ಲ?
7) ಪಾಕಿಸ್ತಾನದ ವ್ಯಕ್ತಿ ಕಾಶ್ಮೀರದ ಹುಡುಗಿಯನ್ನು ಮದುವೆಯಾದರೆ ಆತ ಕಾಶ್ಮೀರದ ನಾಗರಿಕನಾಗುತ್ತಾನೆ; ಅಂದರೆ ಆತ ನಮ್ಮ ದೇಶದ ರಾಷ್ಟ್ರಪತಿ ಆಗಬಹುದೇ?
ಒಟ್ಟಿನಲ್ಲಿ ಗಮನಿಸುವಾಗ ಇಸ್ಲಾಮಿನ ಆಕ್ರಮಣಶೀಲತೆಗೆ ಕಾರಣವೇನು ಎನ್ನುವ ಪ್ರಶ್ನೆ ಏಳುವುದು ಸಹಜ. ಅದಕ್ಕೆ ಒಂದು ಕಾರಣವೆಂದರೆ, ಇಸ್ಲಾಂ ಜಗತ್ತನ್ನು ಎರಡಾಗಿ ನೋಡುತ್ತದೆ; ದಾರ್-ಉಲ್-ಇಸ್ಲಾಂ ಎಂದರೆ ಶಾಂತಿಧಾಮ ಮತ್ತು ದಾರ್-ಉಲ್-ಹರ್ಬ್ ಎಂದರೆ ಯುದ್ಧಧಾಮ. ಮುಸ್ಲಿಮೇತರರು ಇರುವ ನಾಡು ಎರಡನೆಯದು. ಅದು ಶಾಂತಿಧಾಮ ಆಗಬೇಕಾದರೆ ಕಾಫಿರರನ್ನು ಕೊಲ್ಲಬೇಕು ಅಥವಾ ಮತಾಂತರ ಮಾಡಬೇಕು; ಇದು ಕರ್ತವ್ಯ. ಅದರ ಸಾಧನೆ ಆಗುವವರೆಗೂ ಸುಮ್ಮನಿರುವಂತಿಲ್ಲ.
ಕ್ರೈಸ್ತರ ಆಕ್ರಮಣ
ಭಾರತದಲ್ಲಿ ಕ್ರೈಸ್ತರ ಮತಾಂತರದ ಇತಿಹಾಸ ಕೂಡ ಸಾಕಷ್ಟು ಹಿಂದೆ ಹೋಗುತ್ತದೆ. ಮೊದಲಿಗೆ ಅವರ ಉಗ್ರರೂಪವನ್ನು ಕಂಡದ್ದು ಗೋವಾದಲ್ಲಿ. ಪೆÇೀರ್ಚುಗೀಸರು ಅಲ್ಲಿ ಹಿಂದುಗಳ ಮತಾಂತರಕ್ಕೆ ಅತ್ಯಂತ ಕ್ರೂರ ವಿಧಾನಗಳನ್ನು ಬಳಸಿದರು. ಹಿಂಸೆ, ಕೊಲೆ, ದೇವಾಲಯ ಧ್ವಂಸಗಳನ್ನು ಯಥೇಚ್ಛವಾಗಿ ನಡೆಸಿದರು. ಅಲ್ಲಿನ ಅನೇಕ ಚರ್ಚುಗಳು ದೇವಾಲಯಗಳ ಭಗ್ನಶಿಲೆಗಳಿಂದ ನಿರ್ಮಾಣಗೊಂಡಿವೆ. ಗೋವಾದಲ್ಲಿ ಈಗ ಇರುವ ಪ್ರೇಕ್ಷಣೀಯ ಕಟ್ಟಡಗಳೆಲ್ಲ ಚರ್ಚುಗಳೇ ಆಗಿದ್ದು, ಪ್ರಾಚೀನ ಭಗ್ನ ಹಿಂದೂ ದೇವಾಲಯಗಳ ಶಿಲ್ಪಗಳು ಮ್ಯೂಸಿಯಂನಲ್ಲಿವೆ. ಅವರು ವೇದಗ್ರಂಥಗಳನ್ನು ನಾಶ ಮಾಡಿದ್ದಲ್ಲದೆ ಮತಾಂತರಕ್ಕೆ ಒಪ್ಪದ ಅಸಂಖ್ಯ ಹಿಂದೂಗಳನ್ನು ಕಂಬಕ್ಕೆ ಕಟ್ಟಿಹಾಕಿ ಸುಟ್ಟರು. ಅದನ್ನು ತಪ್ಪಿಸಿಕೊಳ್ಳಲು ನೂರಾರು ಕುಟುಂಬಗಳು ತಮ್ಮ ದೇವರೊಂದಿಗೆ ಕಾಡುಮೇಡುಗಳಲ್ಲಿ ಅಲೆದರು; ಮತ್ತು ಮನೆ ಮಠಗಳನ್ನು ಬಿಟ್ಟು ದಕ್ಷಿಣದ ಕರ್ನಾಟಕ ಸೇರಿದಂತೆ ಬೇರೆ ಬೇರೆ ಕಡೆಗಳಿಗೆ ವಲಸೆ ಹೋದರು. ಇಂಗ್ಲಿಷರಿಗೂ ಅದೇ ಕ್ರೈಸ್ತಮತ ಪ್ರಸಾರ ಧ್ಯೇಯವಿದ್ದರೂ ಅವರು ಹಿಂಸೆಯ ಮಾರ್ಗವನ್ನು ಕೈಬಿಟ್ಟು ಉಪಾಯದ ಮಾರ್ಗವನ್ನು ಹಿಡಿದರು.
“ಹಿಂದೂಧರ್ಮವು ಮೋನಿಯರ್ ವಿಲಿಯಮ್ಸ್ ಹೇಳಿದಂತೆ ಒಂದು ಸರಳ ಹೊಳೆ ಅಥವಾ ನದಿ ಅಲ್ಲ; ಹಲವು ನದಿಗಳನ್ನು ಕೂಡಿಸಿಕೊಂಡು ಹರಿಯುವ ಗಂಗೆಯಂತೆ ಮಹಾನದಿ. ಸತ್ಯವು ಬಹುಮುಖಿ ಎಂಬ ಅರಿವು ಆ ಸಿದ್ಧಾಂತದಲ್ಲೇ ಇರುವುದರಿಂದ ಸಹನೆ ಅದರ ಪ್ರಮುಖ ಗುಣ. ಶೈವ, ವೈಷ್ಣವ, ಶಾಕ್ತ ಪಂಥಗಳಾಗಲಿ ಶಂಕರ, ರಾಮಾನುಜ, ಮಧ್ವ ವಲ್ಲಭಾಚಾರ್ಯರಂಥ ತತ್ತ್ವಜ್ಞರಿಗಾಗಲಿ ಬಸವ, ಜ್ಞಾನೇಶ್ವರ್, ಕನಕದಾಸ, ಪುರಂದರದಾಸ, ಮೀರಾರಂಥ ಭಕ್ತರಿಗಾಗಲಿ, ದಯಾನಂದ ಸರಸ್ವತಿ, ರಾಮಕೃಷ್ಣ ಪರಮಹಂಸ, ಅರಬಿಂದೋರಂಥ ಸಾಧಕರಿಗಾಗಲಿ ವೇದಗಳೇ ಮೂಲಸ್ಫೂರ್ತಿ. ಆ ಮಹನೀಯರಲ್ಲಿ ಒಂದಿಬ್ಬರ ಮಾತುಗಳಲ್ಲಿ ಅಕಸ್ಮಾತ್ ವೇದಗಳ ಖಂಡನೆ ಬಂದಿದ್ದರೆ ಅದು ಸಾರಾಸಗಟಾದ ಖಂಡನೆ ಅಲ್ಲ; ವೇದಗಳನ್ನು ಬಾಯಲ್ಲಿ ಪಠಿಸುತ್ತ ಅನಾಚಾರದ ಬದುಕನ್ನು ಬದುಕುತ್ತಿದ್ದವರ ಖಂಡನೆ ಮಾತ್ರ. ಇದು ಮುಖ್ಯ ನಮಗೆ. ವೇದಗಳು ಹಿಂದೂ ಧರ್ಮದ ಸಿದ್ಧಾಂತ ಮತ್ತು ಮತಾಚಾರಗಳಿಗೆ ಅಡಿಗಲ್ಲು ಎಂಬುದನ್ನು ಸರ್ವೋಚ್ಚ ನ್ಯಾಯಾಲಯದ ಪೂರ್ಣಪೀಠವೇ ಒಪ್ಪಿದೆ.”
– ‘ಹಿಂದೂಧರ್ಮ’ ಗ್ರಂಥದಲ್ಲಿ ಡಾ. ಎಂ. ಚಿದಾನಂದಮೂರ್ತಿ
ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಕ್ರೈಸ್ತರಿಂದ ಮತಾಂತರ ನಡೆದಿದೆ. ಭಾರತ ಸರ್ಕಾರದ ಜನಗಣತಿಯ ಅಂಕಿಅಂಶಗಳ ಪ್ರಕಾರ 1951-2001ರ ನಡುವಣ ಐವತ್ತು ವರ್ಷಗಳಲ್ಲಿ ಈಶಾನ್ಯದ ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್ಗಳಲ್ಲಿ ಹಿಂದೂಗಳ ಸಂಖ್ಯೆ ಶೇ. 42.89ರಷ್ಟು ಕಡಮೆಯಾಗಿದ್ದರೆ ಅದೇ ಅವಧಿಯಲ್ಲಿ ಕ್ರೈಸ್ತರ ಸಂಖ್ಯೆ ಶೇ. 41.42ರಷ್ಟು ಏರಿಕೆಯಾಗಿತ್ತು.
ಅಲ್ಲಿ ಭಾರತದಿಂದ ಪ್ರತ್ಯೇಕಗೊಳ್ಳುವ ಚಳವಳಿ ನಡೆದಿದೆ. ಬ್ರಿಟಿಷ್ ಸರ್ಕಾರ ಇದ್ದಾಗಲಂತೂ ಹಿಂದೂ ದೇವರುಗಳ ನಿಂದೆ, ಕ್ರೈಸ್ತಧರ್ಮದ ವೈಭವೀಕರಣ ಮತ್ತು ಜನರ ಮತಾಂತರ ಬಹಿರಂಗವಾಗಿಯೇ ನಡೆಯಿತು. ಪಾದ್ರಿಗಳಿಗೆ ಸರ್ಕಾರ ಅದಕ್ಕೆ ಮುಕ್ತ ಅವಕಾಶವನ್ನೇ ನೀಡಿತ್ತು. ಅದರಿಂದ ಗಾಬರಿಗೊಂಡ ಗಾಂಧಿಯವರು ‘ನನಗೆ ಅಧಿಕಾರವಿದ್ದರೆ ಶಾಸನವನ್ನೇ ತಂದು ಈ ಮತಾಂತರವನ್ನು ನಿಲ್ಲಿಸುತ್ತಿದ್ದೆ’ ಎಂದು ಉದ್ಗರಿಸಿದ್ದರು. ‘ಈ ದಿನ ಕ್ರಿಸ್ತ ಭೂಮಿಗೆ ಇಳಿದು ಬಂದರೆ ಕ್ರೈಸ್ತಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಮೋಸ, ಅನ್ಯಾಯಗಳ ಬಗ್ಗೆ ಬೆಚ್ಚಿಬೀಳುತ್ತಿದ್ದ’ ಎಂದು ಕೂಡ ಗಾಂಧಿ ಹೇಳಿದ್ದರು. ಮತಾಂತರದಿಂದ ದೇಶದ ಶಾಂತಿಗೆ ಭಂಗ ಬರುತ್ತದೆ; ಆ ಕಾರಣಕ್ಕಾಗಿ ಕೂಡ ಮತಾಂತರ ನಿಷೇಧ ಕಾನೂನು ಬರಬೇಕಾಗಿದೆ ಎಂದ ಗಾಂಧಿ, “ಹಿಂದೂಗಳು ಈಗ ಆಯಾಸಕ್ಕೆ
ಗುರಿಯಾಗಿದ್ದಾರೆ. ಇದರಿಂದ ಅವರು ಮುಕ್ತರಾದೊಡನೆ ಹಿಂದೂಧರ್ಮವು ಹಿಂದೆಂದೂ ಕಾಣದ ಉಜ್ಜ್ವಲತೆಯೊಂದಿಗೆ ಪ್ರಪಂಚದಾದ್ಯಂತ ಬೆಳಗಲಿದೆ” ಎನ್ನುವ ವಿಶ್ವಾಸವನ್ನು ಪ್ರಕಟಿಸಿದ್ದರು.
ತಿರುಪತಿಯಲ್ಲಿ
ಬಹುದೊಡ್ಡ ಯಾತ್ರಾಕ್ಷೇತ್ರವಾದ ತಿರುಪತಿಯನ್ನೇ ಕ್ರೈಸ್ತರು ತಮ್ಮ ಮತಾಂತರ ಚಟುವಟಿಕೆಗಳಿಗೆ ಬಳಸಿಕೊಂಡದ್ದು ಬೆಚ್ಚಿಬೀಳಿಸಿದ ಸಂದರ್ಭವಾಗಿತ್ತು. ಕೇಂದ್ರದ ಕಾಂಗ್ರೆಸ್ ಸರ್ಕಾರದ ಆಶೀರ್ವಾದದೊಂದಿಗೆ ಸ್ವತಃ ಕ್ರೈಸ್ತರಾದ ಅಂದಿನ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಕುಮ್ಮಕ್ಕಿನಿಂದ ಅದು ನಡೆದಿರಬೇಕು ಎನಿಸುತ್ತದೆ. ಏಕೆಂದರೆ ಅದು ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಡೆದಿತ್ತು. ತಿರುಮಲ-ತಿರುಪತಿ ಪ್ರದೇಶದ ಕ್ರೈಸ್ತ ಮಿಷನರಿಗಳು, ಮಹಿಳೆಯರು, ಕ್ರೈಸ್ತ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತಾಂತರ ಮಾಡುತ್ತಿದ್ದಾರೆಂದು ಬಜರಂಗದಳ, ಹಿಂದೂ ಮಹಾಸಭಾ ಮತ್ತು ಆರೆಸ್ಸೆಸ್ನವರು ಪ್ರತಿಭಟಿಸಿದರು. ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅಲ್ಲಿಗೆ ಧಾವಿಸಿ, ಮುತುವರ್ಜಿ ವಹಿಸಿ ತನಿಖೆಯ ಬಗ್ಗೆ ಆಂಧ್ರ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ನ್ಯಾ| ಭಿಕ್ಷಾಪತಿ ಅವರ ಅಧ್ಯಕ್ಷತೆಯ ತನಿಖಾ ಸಮಿತಿಯನ್ನು ರಚಿಸಿದರು.
ಮೇ 2006ರಲ್ಲಿ ತಿರುಪತಿಯಲ್ಲಿ ಪರೀಕ್ಷೆ ಬರೆದು ಮರಳುವ ವಿದ್ಯಾರ್ಥಿಗಳಿಗೆ ಮಾತ್ರವಲ್ಲ; ಪರೀಕ್ಷಾ ಕೇಂದ್ರದಲ್ಲಿ ಬೈಬಲ್ ಮತ್ತು ಕರಪತ್ರಗಳನ್ನು ಹಂಚಲಾಗಿತ್ತು. ತಿರುಮಲ-ತಿರುಪತಿ ದೇವಸ್ಥಾನ (ಟಿಟಿಡಿ) ನಿಯಮದ ಪ್ರಕಾರ ಅದರ ಎಲ್ಲ ಉದ್ಯೋಗಿಗಳು ಹಿಂದೂಗಳಾಗಿರಬೇಕು. ಆದರೆ ಕ್ರೈಸ್ತರು ಮತ್ತು ಮುಸ್ಲಿಮರೂ ಇದ್ದರು. ಅವರು ಗುಪ್ತವಾಗಿ ಮತಾಂತರಕ್ಕೆ ಯತ್ನಿಸಿದ್ದಾರೆ. ಬೈಬಲ್, ಕುರಾನ್ಗಳನ್ನು ತಮ್ಮ ಜೊತೆಗೆ ಒಯ್ಯುತ್ತಾರೆ.
ದೇವರ ದರ್ಶನಕ್ಕೆ ನಿಂತಿದ್ದ ಜನರ ಸಾಲಿನಲ್ಲೇ ಮತಪ್ರಚಾರದ ಕರಪತ್ರವನ್ನು ಹಂಚಿದ್ದರು. ಟಿಟಿಡಿ ಆದಾಯದ ಮೇಲೆ ನಡೆಯುವ ಶಿಕ್ಷಣಸಂಸ್ಥೆಗಳು ಮತ್ತು ವಿದ್ಯಾರ್ಥಿನಿಲಯಗಳಲ್ಲಿ ಮತಾಂತರ ನಡೆದಿತ್ತು. ಸ್ವತಃ ಪ್ರಿನ್ಸಿಪಾಲರೇ ವಿದ್ಯಾರ್ಥಿಗಳನ್ನು ಚರ್ಚಿಗೆ ಹೋಗುವಂತೆ ಪ್ರೇರಿಸುತ್ತಿದ್ದರು. ಶಿಕ್ಷಣಸಂಸ್ಥೆ, ಹಾಸ್ಟೆಲ್ಗಳಲ್ಲಿದ್ದ ವೆಂಕಟೇಶ್ವರ, ಪದ್ಮಾವತಿ ಚಿತ್ರಗಳನ್ನು ತೆಗೆಸಿಹಾಕಿದ್ದರು. ಟಿಟಿಡಿ ಮುಖ್ಯಸ್ಥ ಡಿ. ರೋಸಯ್ಯ ಅವರೇ ಕ್ರೈಸ್ತರು. ದೇವಳದ ಅಧಿಕಾರಿಗಳು ಸಿಬ್ಬಂದಿ ಮೂಲಕ ಮತಾಂತರವನ್ನು ಮಾಡಿಸುತ್ತಿದ್ದರು. ಬಹಳಷ್ಟು ಧಾರ್ಮಿಕ ಕಾರ್ಯಕ್ರಮ ಮತ್ತು ಉಪನ್ಯಾಸಗಳಿಗೆ ದೇವಾಲಯದ ಹಣ ನೀಡುವುದನ್ನು ನಿಲ್ಲಿಸಲಾಗಿತ್ತು. ದೇವಾಲಯದ ಪ್ರಸಾದ ತಯಾರಿಸುವ ಜವಾಬ್ದಾರಿಯನ್ನು ಒಂದು ಕ್ರೈಸ್ತ ಸಂಸ್ಥೆಗೆ ವಹಿಸಲಾಗಿತ್ತು. ಬೆಟ್ಟದ ಮೇಲೆ ಮಾಂಸಾಹಾರ ಸೇವನೆ, ಕೆಳಗೆ ತಿರುಪತಿಯಲ್ಲಿ ಗೋಹತ್ಯೆಯಂತಹ ಚಟುವಟಿಕೆಗಳೂ ನಡೆಯುತ್ತಿದ್ದವು. ನ್ಯಾ| ಭಿಕ್ಷಾಪತಿ ಸಮಿತಿ ಸಲ್ಲಿಸಿದ ವರದಿಯಲ್ಲಿ ಈ ವಿದ್ಯಮಾನಗಳು ಬಹಿರಂಗಗೊಂಡವು.
ಆ ಹೊತ್ತಿಗೆ ಮತಾಂತರದ ಚಟುವಟಿಕೆಗಳು ಆಂಧ್ರಪ್ರದೇಶಕ್ಕೆ ವಿಸ್ತರಿಸಿದಂತೆ ಕಾಣುತ್ತಿತ್ತು. ವಿಶಾಖಪಟ್ಟಣದ ಸಮೀಪದ ಸಿಂಹಾಚಲ ನರಸಿಂಹಸ್ವಾಮಿ ದೇವಾಲಯದ 300 ಎಕರೆ ಜಮೀನು ಕ್ರೈಸ್ತರ ಪಾಲಾಗಿತ್ತು. ಪ್ರಸಿದ್ಧ ಭದ್ರಾಚಲ ರಾಮದೇವಾಲಯದ 1289 ಎಕರೆ, ಕರ್ನೂಲು ಜಿಲ್ಲೆ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯದ ಸುತ್ತಲಿನ 1,600 ಎಕರೆ ಭೂಮಿಯನ್ನು ಕೂಡ ಕ್ರೈಸ್ತಸಂಸ್ಥೆಗಳಿಗೆ ನೀಡಲಾಗಿತ್ತು. ವಿಜಯವಾಡ ಸಮೀಪದ ಮಂಗಳಗಿರಿ ಬೆಟ್ಟದ ಸುತ್ತಲಿನ ಶೇ. 35 ರಷ್ಟು ಜನ ಕ್ರೈಸ್ತರಾಗಿ ಮತಾಂತರಗೊಂಡಿದ್ದರು. ಕರ್ನೂಲು ಜಿಲ್ಲೆ ಅಹೋಬಲ ಸಮೀಪ ಕಾಡಿನಲ್ಲಿರುವ ಹಲವು ದೇವಾಲಯಗಳನ್ನು ಕ್ರೈಸ್ತ ಮಿಷನರಿಗಳು ನಾಶಮಾಡಿ ಭೂಮಿಯನ್ನು ವಶಕ್ಕೆ ತೆಗೆದುಕೊಂಡಿದ್ದರು; ತಮಿಳುನಾಡು, ಕೇರಳಗಳಲ್ಲೂ ಇಂತಹ ಘಟನೆಗಳು ನಡೆದಿವೆ ಎಂದು ‘ಆರ್ಗನೈಸರ್’ ಪತ್ರಿಕೆ ವರದಿ ಮಾಡಿದ್ದನ್ನು ಪುಸ್ತಕ ತೆಗೆದುಕೊಂಡಿದೆ.
ಪಕ್ಕದ ಒರಿಸ್ಸಾದ ಮಿಷನರಿಗಳಿಗೆ ಮತಾಂತರದ ಬಗ್ಗೆ ನಿರ್ದಿಷ್ಟ ಯೋಜನೆಯೇ ಇದೆ. ಹಳ್ಳಿಗಳ ಕೆಲವು ಮುಖ್ಯಸ್ಥರನ್ನು ಆಯ್ಕೆ ಮಾಡಿ ಅವರಿಗೆ ಮೋಟರ್ಬೈಕ್ ಕೊಡಿಸಿ ಮತಾಂತರ ಮಾಡಿದ್ದಾರೆ. ಅವರು 3-4 ಹಳ್ಳಿಗಳ ಜವಾಬ್ದಾರಿಯನ್ನು ವಹಿಸಿಕೊಂಡು ಜನರ ಸಭೆ ಸೇರಿಸುತ್ತಾರೆ. ಇನ್ನು ಕೆಲವರಿಗೆ ಸೈಕಲ್ ಮತ್ತು ತಿಂಗಳಿಗೆ 700-1,000 ರೂ. ಸಂಬಳ ನೀಡುತ್ತಾರೆ. ಪಾದ್ರಿಗಳು ಹಳ್ಳಿಯ ಸರಪಂಚರ ಸ್ನೇಹ ಬೆಳೆಸಿ ಮತಾಂತರ ಮಾಡುತ್ತಾರೆ. ಗಿರಿಜನರ ಭಾಷೆಯಲ್ಲಿ ತಮ್ಮ ಕಥೆಗಳನ್ನು ಹೇಳುತ್ತಾರೆ. ಪ್ರಾರ್ಥನಾಸಭೆ ನಡೆಸುತ್ತಾರೆ. ಪೂರಿ-ಚಪಾತಿ ಹಂಚುತ್ತಾರೆ. ಶ್ರೀಕಾಕುಳಂ, ವಿಜಯನಗರಂ ಪ್ರದೇಶದ ಪ್ರಾರ್ಥನಾಸಭೆಗಳಿಗೆ 5,000ದಿಂದ ಒಂದು ಲಕ್ಷದವರೆಗೂ ಜನ ಸೇರುತ್ತಾರೆ ಎಂಬ ವಿವರಗಳು ಬೆಳಕಿಗೆ ಬಂದಿದೆ.
ಆಂಧ್ರದಲ್ಲಿ ದೇವಾಲಯಗಳ ಆಸ್ತಿಯನ್ನು ಪರಭಾರೆ ಮಾಡಿದಂತೆಯೇ ದೇವಾಲಯಗಳ ಆದಾಯ ಸರ್ಕಾರದ ವಶವಾಗುತ್ತದೆ. ಸಿಬ್ಬಂದಿ ಸಂಬಳ, ಕಟ್ಟಡಗಳ ಉಸ್ತುವಾರಿ ಇತ್ಯಾದಿಗೆ ಕೇವಲ ಶೇ. 18 ಭಾಗವನ್ನು ಇರಿಸಿಕೊಂಡು ಉಳಿದುದನ್ನು ತನ್ನ ಇಷ್ಟದಂತೆ ಖರ್ಚು ಮಾಡುತ್ತದೆ. ಎಲ್ಲರಿಗೂ ತಿಳಿದಿರುವಂತೆ ಮಸೀದಿ, ಚರ್ಚುಗಳ ಮೇಲೆ ಸರ್ಕಾರಕ್ಕೆ ಯಾವುದೇ ಹಿಡಿತ ಇಲ್ಲ.
ಮಧ್ಯಪ್ರದೇಶ
ಕ್ರೈಸ್ತರಿಂದ ಮತಾಂತರವು ವ್ಯಾಪಕವಾಗಿ ನಡೆದ ಇನ್ನೊಂದು ರಾಜ್ಯ ಮಧ್ಯಪ್ರದೇಶ; ಅದು ಗಿರಿಜನರು, ಹಿಂದುಳಿದವರು ದೊಡ್ಡ ಸಂಖ್ಯೆಯಲ್ಲಿದ್ದ ರಾಜ್ಯ. 1954ರಷ್ಟು ಹಿಂದೆಯೇ ಮಧ್ಯಪ್ರದೇಶ ಸರ್ಕಾರ ರಾಜ್ಯದಲ್ಲಿನ ಮತಾಂತರ ಚಟುವಟಿಕೆಗಳ ಬಗ್ಗೆ ವರದಿ ನೀಡಲು ಡಾ|| ಭವಾನಿ ಶಂಕರ್ ನಿಯೋಗಿ ಅವರ ಅಧ್ಯಕ್ಷತೆಯಲ್ಲಿ ಒಂದು ಆಯೋಗವನ್ನು ರಚಿಸಿತ್ತು. ಅದರ ಮುಂದೆ ಓರ್ವ ಕ್ರೈಸ್ತ ವೈದ್ಯ “ಮಿಷನ್ ಆಸ್ಪತ್ರೆಗಳಲ್ಲಿ ರೋಗಿಗೆ ಕ್ರಿಸ್ತನ ಪರಿಚಯ ಮಾಡಿಕೊಡುವುದು ವೈದ್ಯನ ಕರ್ತವ್ಯ” ಎಂದು ಸಾಕ್ಷಿ ಹೇಳಿದ್ದರು. ಕ್ಯಾಥೋಲಿಕ್ ಪತ್ರಿಕೆಯೊಂದು ಆಗ “ಸ್ವರಾಜ್ಯ ಬರುವುದರೊಂದಿಗೆ ಬೈಬಲ್ ಬೋಧನೆಯ ಬಾಗಿಲುಗಳು ತೆರೆಯಲ್ಪಟ್ಟಿವೆ” ಎಂದು ಬರೆದಿತ್ತು. ಸಾಲ ನೀಡಿಕೆಯೂ ಮತಾಂತರದ ಒಂದು ಮಾರ್ಗ. ಜುಟ್ಟು ಕತ್ತರಿಸಿಕೊಂಡವರಿಗೆ (ತೆಗೆದುಹಾಕಿದವರಿಗೆ) ಸಾಲಕ್ಕೆ ಬಡ್ಡಿಯಿಲ್ಲ. ವಿದೇಶಗಳಿಂದ ಬಂದ ಹಣದಿಂದ ಉಪ್ಪು, ನೇಗಿಲು, ಹಾಲಿನಪುಡಿಗಳನ್ನು ಉಚಿತವಾಗಿ ನೀಡುತ್ತಿದ್ದರು. ಹಿಂದೂದೇವತೆಗಳ ನಿಂದನೆ ಧಾರಾಳ ಮಾಡುತ್ತಿದ್ದರು. ಉದಾಹರಣೆಗೆ, ರಾಮಕೃಷ್ಣರು ಶತ್ರುಗಳನ್ನು ಕೊಂದರು; ಆದರೆ ಯೇಸು ಶತ್ರುಗಳನ್ನು ಉಳಿಸಲು ತನ್ನ ಪ್ರಾಣವನ್ನೇ ತ್ಯಾಗ ಮಾಡಿದ – ಇತ್ಯಾದಿ.
“ಮನುಷ್ಯ ಎಂದು ತನ್ನನ್ನು ತಾನು ದ್ವೇಷಿಸಲು ಆರಂಭಿಸುತ್ತಾನೋ ಅಲ್ಲಿಗೆ ಅದೇ ಅವನ ಕೊನೆಯ ಮಾರಣಾಂತಿಕ ಆಘಾತ. ತನ್ನ ಪುರಾತನರ ಬಗ್ಗೆ ಮನುಷ್ಯನಿಗೆ ಎಂದು ಅಸಹ್ಯ ಭಾವನೆ ಬರುತ್ತದೋ ಅದೇ ಅವನ ಕೊನೆ. ಇದೋ ನಾನು ಇಲ್ಲಿ ಇದ್ದೇನೆ !ನಿಮ್ಮಲ್ಲಿ ಆನು ತೀರ ಕನಿಷ್ಠನಾದವನು !
ಆದರೂ ನನ್ನ ಜನಾಂಗದ ಬಗ್ಗೆ ನನ್ನ ಪುರಾತನರ ಬಗ್ಗೆ ನನಗೆ ಅಪಾರ ಹೆಮ್ಮೆ. ನನ್ನನ್ನು ನಾನು ಒಬ್ಬ ಹಿಂದೂ ಎಂದು ಕರೆದುಕೊಳ್ಳುವುದರಲ್ಲಿ ಹೆಮ್ಮೆ ನನ್ನದು; ನಿಮ್ಮ ರಾಷ್ಟ್ರದವನೆಂಬ ಹೆಮ್ಮೆಯೂ ನನ್ನದು… ನೀವು ವಿಶ್ವ ಕಂಡ ಅತ್ಯಂತ ಶ್ರೇಷ್ಠ ಋಷಿವರ್ಯರ ಸಂತತಿಯವರು. ಆ ಕಾರಣ, ನಿಮ್ಮ ಪ್ರಾಚೀನರ ಬಗ್ಗೆ ಅಸಹ್ಯ ಪಡುವುದಕ್ಕಿಂತ ಹೆಮ್ಮೆ ಇರಲಿ… ಈ ಪರಂಪರೆಯ ಮೂಲಕವೇ ಭವಿಷ್ಯ ರೂಪುಗೊಳ್ಳಬೇಕಾದ್ದು. ಹಿಂದೂಗಳು ತಮ್ಮ ಹಿಂದಿನ ಇತಿಹಾಸವನ್ನು ಅಧ್ಯಯನ ಮಾಡಿದಷ್ಟು ಅವರ ಭವಿಷ್ಯವೂ ಉಜ್ಜ್ವಲವಾಗುತ್ತದೆ….”
– ಸ್ವಾಮಿ ವಿವೇಕಾನಂದ
ಅಲ್ಲಿನ ಮಿಷನರಿಗಳ ಒಂದು ಪುಸ್ತಕದಲ್ಲಿ “ಕ್ರಿಸ್ತ ಭಗವಂತ ಎಲ್ಲ ಪ್ರಾಣಿ-ಸಸ್ಯಗಳ ಮೇಲೆ ಅಧಿಕಾರ ನೀಡಿರುವಾಗ ಗೋಹತ್ಯೆಯಲ್ಲಿ ತಪ್ಪಿಲ್ಲ” ಎಂದುದನ್ನು ಆಯೋಗ ಗಮನಿಸಿದೆ. ಆದಿವಾಸಿಗಳಲ್ಲಿ ಸಮೂಹ ಮತಾಂತರ ಸುಲಭ. ಮತಾಂತರಗೊಂಡ ಅವರಲ್ಲಿ ಯಾರಿಗೂ ಕ್ರೈಸ್ತಧರ್ಮ ಎಂದರೆ ಏನೆಂಬುದೇ ತಿಳಿದಿರಲಿಲ್ಲ. ಆದಿವಾಸಿಗಳು ಜುಟ್ಟು ಕತ್ತರಿಸಿದರೆ ಕ್ರೈಸ್ತರಾಗುತ್ತಿದ್ದರು. ಅವರಲ್ಲಿ ತಮ್ಮದು ಭಾರತ ಎಂಬ ಭಾವನೆ ಕಡಮೆ. ಈ ಮತಾಂತರದಲ್ಲಿ ಹಣದ ಪಾತ್ರ ಇದ್ದೇ ಇದೆ. ಲೇಖಕ ರೋಲೆಂಡ್ ಆಲೆನ್ ತಮ್ಮ ಪುಸ್ತಕದಲ್ಲಿ “ಎಲ್ಲವೂ ಹಣ; ಎಲ್ಲವೂ ಅದನ್ನೇ ಆಧರಿಸಿರುತ್ತದೆ” ಎಂದಿದ್ದಾರೆ. ಭಾರತದ ಕ್ರೈಸ್ತರು ಮಿಷನರಿಗಳಿಂದ ಬಯಸುವುದು ಹಣವನ್ನೇ.
ಸಮಿತಿಯ ವರದಿಯ ಸಾರಾಂಶ ಹೀಗಿದೆ: “ಭಾರತದ ಸಂವಿಧಾನ ಜಾರಿ ಆದ ಮೇಲೆ ಮಿಷನರಿಗಳ ಚಟುವಟಿಕೆ ಹೆಚ್ಚಾಗಿದೆ. ಮತ್ತು ಅಮೆರಿಕದ ಮಿಷನರಿಗಳು ಸಂವಿಧಾನದ ಧಾರ್ಮಿಕ ಸ್ವಾತಂತ್ರ್ಯವನ್ನು ಪೂರ್ಣ ಬಳಸಿಕೊಳ್ಳುತ್ತಿದ್ದಾರೆ. ವಿದೇಶದಿಂದ ಅಪಾರ ಹಣ ಹರಿದು ಬರುತ್ತಿದೆ. ಆಮಿಷಗಳ ಮೂಲಕ ಮತಾಂತರ ಆಗುತ್ತಿದೆ, ಮನಸಾರೆ ಒಪ್ಪಿಸಿ ಅಲ್ಲ. ಮತಾಂತರ ಹೊಂದಿದವರ ರಾಷ್ಟ್ರನಿಷ್ಠೆ ಬದಲಾಗುವ ಸಾಧ್ಯತೆ ಇದೆ. ಮತಾಂತರದ ಹಿಂದೆ ಭಾರತದ ಮೇಲೆ ಪಶ್ಚಿಮದ ಹಿಡಿತವನ್ನು ಬಲಗೊಳಿಸುವ ಉದ್ದೇಶವೂ ಇದೆ. ಶಾಲೆ, ಆಸ್ಪತ್ರೆ, ಅನಾಥಾಲಯಗಳು ಮತಾಂತರದ ಪ್ರಮುಖ ಸಾಧನಗಳು. ಗಿರಿಜನ-ಹರಿಜನರೇ ಹೆಚ್ಚಾಗಿ ಮತಾಂತರದ ಬಲಿಪಶುಗಳು. ಮಧ್ಯಪ್ರದೇಶ ಸರ್ಕಾರ ಉದ್ದಕ್ಕೂ ಮತಾಂತರದ ಬಗ್ಗೆ ತಟಸ್ಥ ಮನೋಭಾವವನ್ನು ತಾಳಿದೆ.”
ಶಿಫಾರಸುಗಳು
ಇದಲ್ಲದೆ ನಿಯೋಗಿ ಆಯೋಗ ಹಲವು ಶಿಫಾರಸುಗಳನ್ನು ಮಾಡಿತ್ತು. “ಮತಾಂತರವನ್ನು ನಿಲ್ಲಿಸಲು ಆದೇಶ ಹೊರಡಿಸಬೇಕು. ವಿದೇಶೀ ಮಿಷನರಿಗಳ ಪ್ರವೇಶದ ಮೇಲೆ ಕಡಿವಾಣ ಹಾಕಬೇಕು. ಮತಾಂತರಕ್ಕೆ ವೈದ್ಯಕೀಯ ಅಥವಾ ಇತರ ಸೇವೆಗಳ ಬಳಕೆಯನ್ನು ನಿಷೇಧಿಸಬೇಕು; ಅನಾಥಾಲಯಗಳನ್ನು ಸರ್ಕಾರವೇ ನಡೆಸಬೇಕು; ಮತಾಂತರಕ್ಕೆ ಮೋಸ, ಬಲಾತ್ಕಾರದಂತಹ ವಿಧಾನಗಳನ್ನು ಅನುಸರಿಸಬಾರದೆಂದು ಸ್ಪಷ್ಟಪಡಿಸಬೇಕು” ಇತ್ಯಾದಿ.
ಶಿಫಾರಸಿನಲ್ಲಿ “ಅಗತ್ಯ ಬಿದ್ದರೆ ಮತಾಂತರ ತಡೆಗೆ ಕಾನೂನು ತಂದು ಜಾರಿಗೊಳಿಸಬೇಕು” ಎಂಬ ಅಂಶವು ಇತ್ತು. ಅದರಂತೆ ‘ಮಧ್ಯಪ್ರದೇಶ ಸ್ವಾತಂತ್ರ್ಯ ಅಧಿನಿಯಮ-1968’ನ್ನು ತರಲಾಯಿತು. ಅದರಲ್ಲಿ,
1) ಯಾರು ಕೂಡ ಹಣ ಅಥವಾ ವಸ್ತುರೂಪದ ಆಮಿಷ ತೋರಿಸಿ ಮತಾಂತರ ಮಾಡುವಂತಿಲ್ಲ.
2) ಬಲಾತ್ಕಾರ ಎಂದರೆ ಹಿಂಸಾರೂಪದ ಬೆದರಿಕೆ, ದೇವರಿಗೆ ಕೋಪ ಬರುತ್ತದೆಂದು ಭಯ ಹುಟ್ಟಿಸುವುದು, ಸಾಮಾಜಿಕ ಬಹಿಷ್ಕಾರದ ಬೆದರಿಕೆ ಇತ್ಯಾದಿ.
ಮತಾಂತರದ ಆರೋಪ ಸಾಬೀತಾದರೆ ಒಂದು ವರ್ಷ ಜೈಲು, 5,000 ರೂ. ದಂಡ ವಿಧಿಸಲಾಗುತ್ತದೆ. ಮಹಿಳೆ, ಅಪ್ರಾಪ್ತ ವಯಸ್ಸಿನವರು ಹಾಗೂ ಪರಿಶಿಷ್ಟ ಜಾತಿ-ಪಂಗಡದವರ ಮತಾಂತರವಾದರೆ ಈ ಶಿಕ್ಷೆ ಇಮ್ಮಡಿ ಆಗಿರುತ್ತದೆ. ಆಸಕ್ತರು ಇದರ ವಿರುದ್ಧ ಹೈಕೋರ್ಟಿಗೆ ಹೋದಾಗ ಕೋರ್ಟು ಕಾನೂನನ್ನು ವಜಾಗೊಳಿಸಿತು. ಒರಿಸ್ಸಾದಲ್ಲೂ ಅಂಥದೇ ಕಾನೂನು ತಂದಿದ್ದು ಅದು ಕೂಡ ವಜಾ ಆಗಿತ್ತು. ಎರಡೂ ರಾಜ್ಯದವರು ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದಾಗ 1977ರಲ್ಲಿ ಕೋರ್ಟಿನ ಪೂರ್ಣಪೀಠ ತೀರ್ಪು ನೀಡಿತು; “ಸಂವಿಧಾನದಂತೆ ಧರ್ಮಪ್ರಚಾರದ ಹಕ್ಕು ಇದೆ. ಆದರೆ ಮತಾಂತರದ ಹಕ್ಕು ಯಾರಿಗೂ ಇಲ್ಲ. ಮತಬೋಧನೆಯ ಹಕ್ಕು ಮಾತ್ರ ಇದೆ. ಸ್ವತಃ ಇನ್ನೊಂದು ಧರ್ಮಕ್ಕೆ ಹೋಗಬಹುದೇ ಹೊರತು ಆಸೆ-ಆಮಿಷ ಸಲ್ಲದು. ಮತಾಂತರದಿಂದ ಸಾಮಾಜಿಕ ಬದುಕಿನಲ್ಲಿ ಅಲ್ಲೋಲಕಲ್ಲೋಲ ಆಗುತ್ತದೆ. ಒಬ್ಬ ವ್ಯಕ್ತಿ ಮತಾಂತರಕ್ಕೆ ಒಳಗಾದರೆ ಅದು ಸಾಮಾಜಿಕ ಸುವ್ಯವಸ್ಥೆಯನ್ನು ಕದಲಿಸುತ್ತದೆ; ಬಲಾತ್ಕಾರದ ಮತಾಂತರ ಅಪಾಯಕಾರಿ” ಎಂದು ಸುಪ್ರೀಂಕೋರ್ಟ್ ಹೇಳಿತು. ಅಂದರೆ ಮತಾಂತರಕ್ಕೆ ಆಸೆÀ-ಆಮಿಷ ಸಲ್ಲದು ಎಂಬುದರೊಂದಿಗೆ ಸಾಮಾಜಿಕ ಶಾಂತಿಪಾಲನೆಯ ದೃಷ್ಟಿಯಿಂದಲೂ ಮತಾಂತರಕ್ಕೆ ತಡೆ ಅವಶ್ಯ ಎಂದು ಹೇಳಿದಂತಾಯಿತು. ಒರಿಸ್ಸಾ, ಗುಜರಾತ್ಗಳು ಕೂಡ ಮತಾಂತರ ತಡೆ ಶಾಸನವನ್ನು ತಂದಿವೆ.
ಆದರೂ ನಮ್ಮ ಸೆಕ್ಯುಲರ್ವಾದಿಗಳು, ಬುದ್ಧಿಜೀವಿಗಳು ಈ ಕುರಿತು ಗೊಂದಲ ಹುಟ್ಟಿಸುವ ಹೇಳಿಕೆ ನೀಡುವುದನ್ನು ನಿಲ್ಲಿಸಲಿಲ್ಲ. ಡಾ| ಯು.ಆರ್. ಅನಂತಮೂರ್ತಿಯವರು ಒಮ್ಮೆ “ಮತಾಂತರ ಕಾನೂನುಬದ್ಧ. ಅದನ್ನು ಸಂಶಯದಿಂದ ನೋಡಬಾರದು. ಬಲವಂತವಾಗಿ ಮತಾಂತರ ಮಾಡುವುದು ಮಾತ್ರ ಅಪರಾಧ. ಮತಾಂತರ ಆಗುವುದು ಅಪರಾಧವಲ್ಲ” ಎಂದಿದ್ದರು. ಅದರ ಬಗ್ಗೆ ಡಾ| ಚಿದಾನಂದಮೂರ್ತಿ “ಅನಂತಮೂರ್ತಿ ಅವರಂತಹ ಸಾಹಿತಿಗಳು ಮತಾಂತರ ನಿಷೇಧ ಕಾನೂನನ್ನು ಸಮರ್ಥಿಸುವ ಬದಲು ಇಂತಹ ಹೇಳಿಕೆ ನೀಡಿದರೆ ಅದು ಮಿಶನರಿಗಳಿಗೆ ಎಲ್ಲಿಲ್ಲದ ಉತ್ಸಾಹ, ‘ಅನೈತಿಕ ಶಕ್ತಿ’ಗಳನ್ನು ತಂದುಕೊಟ್ಟಂತಾಗುತ್ತದೆ” ಎಂದು ಟೀಕಿಸಿದ್ದಾರೆ.
ಕರ್ನಾಟಕದಲ್ಲಿ ಮತಾಂತರದ ಚಟುವಟಿಕೆಗಳಲ್ಲಿ ಕರ್ನಾಟಕವು ಹಿಂದೆ ಬಿದ್ದಿಲ್ಲ. ಈಚಿನ ವರ್ಷಗಳಲ್ಲಿ ಅದು ಇನ್ನೊಮ್ಮೆ ಗರಿಗೆದರಿಕೊಂಡದ್ದು, ಮುಖ್ಯವಾಗಿ ಕೆಲವು ಕಡೆ ವೀರಶೈವ (ಲಿಂಗಾಯತ) ಸಮುದಾಯವನ್ನು ಗುರಿ ಮಾಡಿಕೊಂಡದ್ದು ಕಾಣಿಸುತ್ತದೆ. “1945-50ರ ನಡುವೆ ನಾನು ದಾವಣಗೆರೆಯಲ್ಲಿ ವಿದ್ಯಾರ್ಥಿ ಆಗಿದ್ದಾಗ ಒಂದೂ ಚರ್ಚನ್ನು ನೋಡಿರಲಿಲ್ಲ. ಈಗ ಅಲ್ಲಿ ಮತ್ತು ಸುತ್ತಮುತ್ತ 184 ಚರ್ಚುಗಳಿವೆ; ಅದರಲ್ಲಿ ಕೆಲವು ಅನಧಿಕೃತ ಜಾಗಗಳಲ್ಲಿವೆ” ಎಂದು ಲೇಖಕರು ಹೇಳುತ್ತಾರೆ.
ವೀರಶೈವ ಸಮುದಾಯದ ರಾಜುಗೌಡ ಎಂಬವರನ್ನು ಮತಾಂತರ ಮಾಡಿ ಪ್ರಿನ್ಸಿಪಾಲ್ ಹುದ್ದೆಗೆ ಏರಿಸಿದರು. ಆತನ ಮೂಲಕ ಹಲವರು ಮತಾಂತರಗೊಂಡರು. ದಾವಣಗೆರೆ ಸುತ್ತಮುತ್ತ ಸುಮಾರು 16 ಸಾವಿರ ಜನರನ್ನು ಮತಾಂತರಿಸಲಾಗಿದೆ. ಮತಾಂತರಕ್ಕಾಗಿ ಒಂದೊಂದು ಜಾತಿಗೆ ಒಬ್ಬೊಬ್ಬ ಪಾಸ್ಟರನ್ನು ನೇಮಿಸಲಾಗಿದೆ. 150 ಮಂದಿ ಮಾತೃಧರ್ಮಕ್ಕೆ ಮರಳಿದರು. ಮಗನ ಮತಾಂತರದಿಂದ ಓರ್ವ ತಾಯಿ ಆತ್ಮಹತ್ಯೆಗೆ ಯತ್ನಿಸಿದರು. ಮತಾಂತರ ಹಲವು ಮನೆಗಳಲ್ಲಿ ಹೊಡೆದಾಟಕ್ಕೆ ಕಾರಣವಾಯಿತು. ‘ಅಖಿಲ ಭಾರತ ವೀರಶೈವ ಕ್ರಿಶ್ಚಿಯನ್ ಸಭಾ’ ಎನ್ನುವ ಸಂಸ್ಥೆಯನ್ನು ಆರಂಭಿಸಲಾಗಿದೆ. ಹುಬ್ಬಳ್ಳಿ ಪರಿಸರದ 3,000 ಲಿಂಗಾಯತರು ಕೂಡ ಮತಾಂತರಗೊಂಡಿದ್ದಾರೆ. ಬಾಡ ಗ್ರಾಮದ ಸುತ್ತಲಿನ ಕೆಲವು ಹಳ್ಳಿಗಳ ಜನ ಭಾನುವಾರ ಪ್ರಾರ್ಥನೆಗೆ ಹೋಗುತ್ತಾರೆ. ಮತಾಂತರ ಗೊತ್ತಾದಾಗ ಜನರಿಂದ ಚರ್ಚಿನ ಧ್ವಂಸವಾಗಿದೆ. ಕೆಲವರು ತಾವು ಮತಾಂತರವಾಗಿಲ್ಲವೆಂದು ಸುಳ್ಳು ಹೇಳುವುದೂ ನಡೆಯುತ್ತಿದೆ. ಈಚಿನ ಒಂದು ಬೆಳವಣಿಗೆ ಎಂದರೆ ಮೋದಿ ಸರ್ಕಾರ ಎನ್ಜಿಓಗಳ ವಿದೇಶೀ ಹಣಕ್ಕೆ ಬ್ರೇಕ್ ಹಾಕಿದ್ದರಿಂದ ಮತಾಂತರ ಕಷ್ಟವಾಗಿರಬೇಕು.
ಬೆಂಗಳೂರಿನ ಶ್ರೀರಾಂಪುರದ ಒಂದು ಕ್ರೈಸ್ತ ಶಾಲೆಯ ಬಡಮಕ್ಕಳಿಗೆ ಕ್ರೈಸ್ತ ಹೆಸರುಗಳನ್ನು ಕೊಟ್ಟು ಬಗೆಬಗೆಯ ಆಮಿಷ ಒಡ್ಡುತ್ತಾರೆ. ಆ ಮಕ್ಕಳು ಅಧಿಕೃತವಾಗಿ ಹಿಂದೂ ಹೆಸರುಗಳನ್ನು ಹೊಂದಿದ್ದರೂ ಅವರ ಮನಸ್ಸಿನ ಒಂದು ಮೂಲೆಯಲ್ಲಿ ಕ್ರೈಸ್ತ ಹೆಸರು ಹುದುಗಿರುತ್ತದೆಂಬುದು ಲೇಖಕರ ಆತಂಕ. ಕೆಜಿಎಫ್ ಪ್ರದೇಶದ ಒಂದು ಗುಡ್ಡದ ಮೇಲೆ ಶಿಲುಬೆ ನಿಲ್ಲಿಸಿ ಸುತ್ತಮುತ್ತಲಿನ ಹಳ್ಳಿಗಳ ಬಡಮಕ್ಕಳನ್ನು ಆಟ ಆಡಲೆಂದು ಟ್ರ್ಯಾಕ್ಟರ್ನಲ್ಲಿ ಕರೆದೊಯ್ದು ವಾಪಸ್ ತಂದು ಬಿಡುತ್ತಾರೆ; ಮತ್ತು ಆ ಮಕ್ಕಳಿಗೆ ಮರೆಯದೆ ತಿಂಡಿ ಕೊಡುತ್ತಾರೆ – ಇಂತಹ ಸನ್ನಿವೇಶಗಳು ಪುಸ್ತಕದಲ್ಲಿ ಸಾಕಷ್ಟು ಇವೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ನ್ಯೂ ಲೈಫ್ ಸಂಸ್ಥೆ ಮತಾಂತರ ನಡೆಸಿ, ವಿವಾದ ಸೃಷ್ಟಿಸಿತು.
ಇಂತಹ ಘಟನೆ-ವಿದ್ಯಮಾನಗಳ ವಿರುದ್ಧ ಡಾ| ಚಿದಾನಂದಮೂರ್ತಿ ಅವರು ಸ್ವತಃ ಹೋರಾಟ ನಡೆಸಿದವರಾದ ಕಾರಣ ಅವರು ನೀಡುವ ವಿವರಗಳಲ್ಲಿ ಖಚಿತತೆ, ಅಧಿಕೃತತೆಗಳಿವೆ. ಅವರಿಗೆ ಇದರಲ್ಲಿ ಯಾವ ಸ್ವಾರ್ಥವೂ ಇಲ್ಲ ಎಂಬುದನ್ನು ಪ್ರತ್ಯೇಕ ಹೇಳಬೇಕಿಲ್ಲ. ಸ್ವಂತ ಹಣ ಖರ್ಚು ಮಾಡಿಕೊಂಡು ಅವರು ಈ ಹೋರಾಟಗಳನ್ನು ನಡೆಸಿದ್ದಾರೆ. ಯಾರ ಬೆಂಬಲವನ್ನೂ ನಿರೀಕ್ಷಿಸದೆ ಹೋರಾಟಗಳನ್ನು ಹಮ್ಮಿಕೊಳ್ಳುವುದು ಅವರ ಒಂದು ವಿಶೇಷ. “ಎಷ್ಟೋ ಸಾರಿ ನನ್ನನ್ನು ಏಕಾಂಗಿತನ ಕಾಡಲಾರಂಭವಾದಾಗ, ಆ ಏಕಾಂಗಿತನವೇ ನನಗೆ ಎಲ್ಲಿಲ್ಲದ ಧೈರ್ಯ, ಹುಮ್ಮಸ್ಸುಗಳನ್ನು ತುಂಬಿಕೊಡುತ್ತದೆ. ಸತ್ಯ, ಆದರ್ಶಗಳ ಬೆಂಬಲಕ್ಕಿಂತ ಬೇರೊಂದು ದೊಡ್ಡ ಬೆಂಬಲ ಇರಲು ಸಾಧ್ಯವೇ ಇಲ್ಲ. ಮುಸ್ಲಿಂ ಉಗ್ರರ, ಕ್ರೈಸ್ತ ಮಿಷನರಿಗಳ ಭಯ ನನಗಿಲ್ಲ. ಹಿಂದೂ ಪರವಾಗಿರುವವರನ್ನು ಕೋಮುವಾದಿಗಳೆಂದು ಟೀಕಿಸಿ ಮೌನವಾಗಿರಿಸಲು ಯತ್ನಿಸುವ ಸೆಕ್ಯುಲರಿಸ್ಟರ ಭಯವೂ ಇಲ್ಲ” ಎಂದವರು ಗಟ್ಟಿ ಧ್ವನಿಯಲ್ಲಿ ಹೇಳುತ್ತಾರೆ. ‘ಅಭೀಃ’ ಇದು ಅವರ ತಾರಕಮಂತ್ರ. “ಹನ್ನೆರಡನೆಯ ಶತಮಾನದ ವಚನಕಾರ್ತಿ ಸೂಳೆ ಸಂಕವ್ವೆಗೆ ‘ನಿರ್ಲಜ್ಜೇಶ್ವರ’ ಅಂಕಿತವಾದರೆ ನನ್ನ ಅಂಕಿತ ನಿರ್ಭಯೇಶ್ವರ. ನಾನೊಬ್ಬ ನಿರ್ಭೀತ ಹಿಂದೂ” ಎಂದು ಹೆಮ್ಮೆಯಿಂದ ಘೋಷಿಸಿಕೊಳ್ಳುತ್ತಾರೆ.