ಸೂರ್ಯಾಸ್ತವರಿಯದ ಸಾಮ್ರಾಜ್ಯದ ಪೂರ್ವದಿಗಂತದಲ್ಲಿ ಮೂಡಿದ ಕ್ರಾಂತಿಯ ಸೂರ್ಯೋದಯದ ರಥವನ್ನು ಏರಿದವನು ಸೂರ್ಯಸೇನ್! ಸೂರ್ಯಸೇನನ ರಥಕ್ಕೆ ಕಟ್ಟಿದ ಅಶ್ವಗಳಲ್ಲಿ ಅಂಬಿಕಾ ಚಕ್ರವರ್ತಿ, ನಿರ್ಮಲ್ ಸೇನ್, ಗಣೇಶ ಘೋಷ್, ಅನಂತಸಿಂಗ್ ಮತ್ತು ಲೋಕನಾಥ ಬಾಲ್ ಒಂದೊಂದೂ ಅಪ್ರತಿಮ ಜಾತ್ಯಶ್ವಗಳಿದ್ದಂತೆ. ಇವರೊಂದಿಗೆ ಎಂದಿಗೂ ಹಿಂದೆಬೀಳದೆ ಸರಿಸಾಟಿಯಾಗಿ ಓಡಿದವರು ಕಲ್ಪನಾ ದತ್ತ ಮತ್ತು ಪ್ರೀತಿಲತಾ ವಡ್ಡೇದಾರ್. ಈ ಎಲ್ಲ ಅದಮ್ಯ ಕ್ರಾಂತಿವೀರರ ಸಾಹಸಗೀತೆಯೇ ಚಿತ್ತಗಾಂವ್ ಶಸ್ತ್ರಾಗಾರ ದಾಳಿ ಪ್ರಕರಣ. ಅಪವಾದವೆಂಬಂತೆ ಇವರು ನಿಶ್ಚಯಿಸಿದ ಸೂರ್ಯೋದಯದ ಮುಹೂರ್ತ: 1930ರ ಏಪ್ರಿಲ್ 18ರ ರಾತ್ರಿ 10.00 ಸಮಯ! ಆದರೆ ಆ ಮುಹೂರ್ತದಲ್ಲಿ ಬ್ರಿಟಿಷರಿಗೆ ಕಂಡಿದ್ದು ಚುಮುಚುಮು ನಸುಬೆಳಕಿನಲ್ಲಿ ಬಾನಂಚಿನಲ್ಲಿ ಮೇಲೇರುತ್ತ ಬರುವ ಹೊಂಬಣ್ಣದ ಸೂರ್ಯನ ಬೆಳಕಲ್ಲ – ಬದಲಿಗೆ ಅಗ್ನಿಪರ್ವತದ ಪ್ರಸವಕ್ಕೆ ಮುನ್ನ ಜ್ವಾಲಾಮುಖಿಯಿಂದ ಉಕ್ಕಿ ಹರಿಯುವ ಜೀವಧಾರೆ ಕೆಂಪಗೆ ಕೆಂಡದಂತೆ ಸುಡುವ ಸಿಡಿದೆದ್ದ ಲಾವಾರಸ.
ಕಠಿಣ ತರಬೇತಿ
‘ಸಾದರ್ ಘಾಟ್ ಶಾರೀರಿಕ ವ್ಯಾಯಾಮಶಾಲೆ’ಯಲ್ಲಿ ಯುವಕರಿಗೆ ಶಾರೀರಿಕ ಕಸರತ್ತು, ಲಾಠಿ ಮತ್ತು ಕತ್ತಿ ವರಸೆ, ರೈಫಲ್-ಪಿಸ್ತೂಲುಗಳ ಬಳಕೆ, ವಾಹನ ಚಲಾಯಿಸುವ ತರಬೇತಿ, ಬಾಂಬ್ ಮೊದಲಾದ ವಿಸ್ಫೋಟಕಗಳ ತಯಾರಿಕೆ ಹೀಗೆ ಹತ್ತು ಹಲವು ಸೈನಿಕಶಿಕ್ಷಣದ ತರಬೇತಿ ನೀಡಲಾಗುತ್ತದೆ. ಗೋಪ್ಯತೆಯ ದೃಷ್ಟಿಯಿಂದ ಐವರು ನಾಯಕರು ಸಂಪೂರ್ಣ ಯೋಜನೆಯನ್ನು ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ. ಅವರವರಿಗೆ ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸಲು ಬೇಕಾದಷ್ಟು ಮಾಹಿತಿಯನ್ನು ಮಾತ್ರ ಹಂಚಿಕೊಳ್ಳಲಾಗುತ್ತಿತ್ತು. ಒಬ್ಬ ವ್ಯಕ್ತಿ ಪೆÇಲೀಸರ ಕೈಗೆ ಸಿಕ್ಕಿಬಿದ್ದರೂ ಆತನಿಂದ ಯಾವ ಹೆಚ್ಚಿನ ಸಂಗತಿಯನ್ನೂ ಹೊರತೆಗೆಯಲಾಗದಷ್ಟು ಎಚ್ಚರಿಕೆಯನ್ನು ವಹಿಸಲಾಗುತ್ತದೆ. 1928ರಲ್ಲಿ ಸೆರೆಯಿಂದ ಬಿಡುಗಡೆಯಾದ ಈ ಕ್ರಾಂತಿಕಾರಿ ನಾಯಕರ ಚಲನವಲನಗಳನ್ನು ಸರಕಾರ ಕಟ್ಟೆಚ್ಚರದಿಂದ ನೋಡುತ್ತಿದೆ. ಗುಪ್ತಚರ ಇಲಾಖೆಯ ಮಂದಿ ಅವರನ್ನು ಹಗಲಿರುಳೂ ನೆರಳಿನಂತೆ ಕಾಯುತ್ತಿರುತ್ತಾರೆ.
ಗುಪ್ತಚರರ ನೆರಳಿನಲ್ಲಿ
‘ಬೆಳಗ್ಗೆ 7.30ರ ಸಮಯದಲ್ಲಿ ಸೂರ್ಯಸೇನ್ನನ್ನು ಚಿತ್ತಗಾಂವ್ ರೈಲ್ವೇ ನಿಲ್ಡಾಣದಲ್ಲಿ ಕಂಡಿರುತ್ತೇನೆ. ವೃತ್ತಪತ್ರಿಕೆಯನ್ನು ಕೊಂಡ ಆತ ಅಲ್ಲಿಂದ ದಿವಾನ್ಬಜಾರ್ನಲ್ಲಿರುವ ಕಾಂಗ್ರೆಸ್ ಕಚೇರಿಯನ್ನು ತಲಪುತ್ತಾನೆ. 8.30ರ ವೇಳೆಗೆ ನರೇಶ್ ರಾಯ್, ತಾರಕೇಶ್ವರ ದಸ್ತೀದಾರ್ ಕಾಂಗ್ರೆಸ್ ಕಚೇರಿಯನ್ನು ತಲಪಿದರು. ಅರ್ಧ ಗಂಟೆಯ ಬಳಿಕ ಅವರು ಸಾದರ್ಘಾಟ್ನಲ್ಲಿರುವ ಗಣೇಶ ಘೋಷ್ ಮನೆಗೆ ಬಂದರು. ಅಷ್ಟರಲ್ಲಾಗಲೇ ಗಣೇಶ ಘೋಷ್, ನಂದಲಾಲ್ ಸಿಂಗ್, ತ್ರಿಪುರ ಸೇನ್ ಮತ್ತು ಬಿಧು ಭಟ್ಟಾಚಾರ್ಯ ಸೇರಿರುತ್ತಾರೆ. ಅವರೆಲ್ಲ ಸುಮಾರು ಹತ್ತು ಗಂಟೆಯವರೆಗೂ ಅಲ್ಲಿದ್ದರು.’ ಇದು ಒಬ್ಬ ಪೆÇಲೀಸ್ ಗೂಢಚಾರಿಯ ವರದಿಯ ಒಕ್ಕಣೆಯಾದರೆ,
ಮತ್ತೊಂದು ವರದಿಯ ಒಕ್ಕಣೆ ಹೀಗಿದೆ: ‘ಅನಂತ ಸಿಂಗ್, ಜೀಬನ್ ಘೋಶಾಲ್, ಹರಿಗೋಪಾಲ ಬಾಲ್ ಮತ್ತು ಹಿಮಾಂಶು ಸೇನ್ ಕಾಂಗ್ರೆಸ್ ಕಚೇರಿಯಲ್ಲಿ ಸೂರ್ಯಸೇನ್, ನಿರ್ಮಲ್ ಸೇನ್ ಮತ್ತು ಅಂಬಿಕಾ ಚಕ್ರವರ್ತಿ ಜೊತೆಯಲ್ಲಿ ಚರ್ಚೆಯಲ್ಲಿ ತೊಡಗಿದ್ದಾರೆ. 9.55ರ ಹೊತ್ತಿಗೆ ಕಾಂಗ್ರೆಸ್ ಕಚೇರಿಯಿಂದ ಹೊರಬಿದ್ದ ಅನಂತ, ಜೀಬನ್, ಹರಿಗೋಪಾಲ್ ಮತ್ತು ಹಿಮಾಂಶು ಬೇಬಿಆಸ್ಟಿನ್ ಕಾರ್ನಲ್ಲಿ ಚಂದನಪುರದಲ್ಲಿರುವ ಹಿಮಾಂಶುವಿನ ಮನೆಯನ್ನು ತಲಪುತ್ತಾರೆ. ಅಲ್ಲಿಂದ ಹಿಮಾಂಶು ಕಾರನ್ನು ಬಹಳ ವೇಗವಾಗಿ ಓಡಿಸಿದ್ದುದರಿಂದ ನಾನು ಅವರನ್ನು ಹಿಂಬಾಲಿಸಲು ಸಾಧ್ಯವಾಗಲಿಲ್ಲ. ಅಲ್ಲಿಂದ ನಾನು ಗಣೇಶ್ ಘೋಷ್ನ ಮಳಿಗೆಗೆ ಹೋದೆ’. ಇದು ಚಿತ್ತಗಾಂವ್ ಶಸ್ತ್ರಾಗಾರ ಕಾರ್ಯಾಚರಣೆಯ ಒಂದು ವಾರದ ಮೊದಲಿನ ವರದಿ. ಇಂತಹ ವರದಿಗಳಲ್ಲಿ ವ್ಯಕ್ತಿಗಳ ಹೆಸರು, ಭೇಟಿ ಮಾಡಿದ ಸ್ಥಳ, ಬಂದು ಹೋದ ಸಮಯ ಇತ್ಯಾದಿ ವಿವರಗಳು ತುಂಬಿಹೋಗಿವೆಯಾದರೂ, ಅವುಗಳಲ್ಲಿ ಇವರೆಲ್ಲ ಏನನ್ನು ಚರ್ಚಿಸುತ್ತಿದ್ದರು, ಇವರ ಯೋಜನೆಗಳೇನು, ಯಾರಿಗೆ ಯಾವ ಜವಾಬ್ದಾರಿಯನ್ನು ವಹಿಸಲಾಗಿದೆ ಮುಂತಾದ ಮುಖ್ಯ ಅಂಶಗಳ ಬಗ್ಗೆ ಗೂಢಚರ್ಯೆ ಇಲಾಖೆ ತಲೆಕೆಡಿಸಿಕೊಳ್ಳಲಿಲ್ಲ. ಪೆÇಲೀಸ್ ಗೂಢಚಾರರು ಬೆನ್ನಿಗಂಟಿದ ಜಿಗಣೆಗಳಂತೆ ತಮ್ಮನ್ನು ಹಿಂಬಾಲಿಸುತ್ತಿರುವುದು ಕ್ರಾಂತಿಕಾರಿಗಳಿಗೆ ತಿಳಿಯದ ವಿಷಯವೇನಲ್ಲ ಅಥವಾ ಬಡಪಾಯಿ ಪೆÇಲೀಸ್ ಪೇದೆಗಳು ಅವರ ಗಮನಕ್ಕೆ ಬಾರದಂತೆ ತಮ್ಮ ಕಾರ್ಯವನ್ನು ನಿರ್ವಹಿಸಬೇಕೆಂಬ ಜಾಣ್ಮೆಯನ್ನು ತೋರುವವರಾಗಿರಲಿಲ್ಲ.
ಮೈಗೆಲ್ಲ ಗೂಢಚಾರಿ ಜಿಗಣೆಗಳು ಅಂಟಿದ್ದರೂ, ಕ್ರಾಂತಿಕಾರಿಗಳು ರಿವಾಲ್ವರ್, ಪಿಸ್ತೂಲು, ಬಾಂಬ್, ಮತ್ತು ಮದ್ದುಗುಂಡು – ವಿಸ್ಫೋಟಕಗಳನ್ನು ರಹಸ್ಯವಾಗಿ ಸಂಗ್ರಹಿಸಿ ಅವುಗಳನ್ನು ಸುರಕ್ಷಿತವಾಗಿ ಮುಚ್ಚಿಡುವುದು, ಯುವಕರಿಗೆ ಪಿಸ್ತೂಲು ಚಲಾಯಿಸುವುದನ್ನು ಕಲಿಸುವುದು ಇತ್ಯಾದಿ ಕಾರ್ಯಕ್ರಮಗಳನ್ನು ಅಬಾಧಿತವಾಗಿ ನಡೆಸುತ್ತಾರೆ.
ಕಾರ್ಯಾಚರಣೆ
ಸರಕಾರದ ಗೂಢಚರ್ಯೆಯ ವ್ಯೂಹಕ್ಕೆ ಸರಿಯಾಗಿ ಪ್ರತಿವ್ಯೂಹ ರಚಿಸುವುದರಲ್ಲಿ ಅನಂತಸಿಂಗ್ ಕಡಮೆಯೇನಿರಲಿಲ್ಲ. ಸರಕಾರ ತಮ್ಮ ಗುಂಪಿನಲ್ಲಿ ಮಾಹಿತಿದಾರನನ್ನು ಒಳನುಗ್ಗಿಸಲು ಪ್ರಯತ್ನಿಸಿದಂತೆ ಗೂಢಚರ್ಯೆ ಇಲಾಖೆ ನಂಬುವಂತೆ ಅವರಿಗೆ ತಮ್ಮ ಮಾಹಿತಿಯನ್ನು ತಲಪಿಸಲು ವ್ಯಕ್ತಿಗಳನ್ನು ನೇಮಿಸುತ್ತಾನೆ. ಸರಕಾರದ ಮಾಹಿತಿದಾರನನ್ನು ಹೊರಗಿಡುವ ಬದಲು ಆತನೂ ತಮ್ಮಲ್ಲಿ ವಿಶ್ವಾಸಾರ್ಹನೆಂಬಂತೆ ಬಿಂಬಿಸಿ ಆತನಿಂದ ಇಲಾಖೆ ದಾರಿ ತಪ್ಪುವಂತೆ ಸುಳ್ಳು ಮಾಹಿತಿಯನ್ನು ಒದಗಿಸಲಾಗುತ್ತದೆ.
1930ರ ಮಾರ್ಚ್ 14ರಂದು ತನ್ನ ಮನೆಯಲ್ಲಿ ರಾಮಕೃಷ್ಣ ಬಿಶ್ವಾಸ್ ಬಾಂಬ್ ತಯಾರಿಸುವಾಗ ಉಂಟಾದ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಳ್ಳುತ್ತಾನೆ. ಕಾಂಗ್ರೆಸ್ ಕಚೇರಿಯಲ್ಲಿ ಬಾಂಬ್ ತಯಾರಿಸುತ್ತಿದ್ದ ತಾರಕೇಶ್ವರ ದಸ್ತೀದಾರ್ಗೂ ಇಂತಹ ಅನಾಹುತ ಎದುರಾಗಿತ್ತು; ಆದರೆ ಪೆÇಲೀಸರಿಗೆ ಅದರ ಸುಳಿವೂ ಸಿಕ್ಕಲಿಲ್ಲ. ಈ ಅವಘಡಗಳ ಬಳಿಕ ಪೆÇಲೀಸರ ಮೇಲೆ ನಿಗಾ ಇಡಲು ಹರಿಗೋಪಾಲ್ ಬಾಲ್, ಅಮರೇಂದ್ರ ನಂದಿ, ಮತ್ತು ಫಕೀರ್ ಸೇನ್ ಇವರನ್ನು ನೇಮಿಸಲಾಯಿತು. ಪೆÇಲೀಸರ ಪ್ರತಿಯೊಂದು ಠಾಣೆ ಮತ್ತು ಚಿಕ್ಕ ದೊಡ್ಡ ಅಧಿಕಾರಿಗಳ ಚಲನವಲನದ ಮೇಲೆ ನಿಗಾ ಇಡುತ್ತಿದ್ದ ಇವರಿಂದ ಅವಘಡದಲ್ಲಿ ತೊಂದರೆಗೀಡಾದ ಗಾಯಾಳುಗಳಿಗೆ ಶೂಶ್ರೂಷೆ ಒದಗಿಸಲು ಸಾಧ್ಯವಾಯಿತು.
ತಮ್ಮ ಕಾರ್ಯಾಚರಣೆಯ ಸಲುವಾಗಿ ಟೆಲಿಫೆÇೀನ್ ಮತ್ತು ಟೆಲಿಗ್ರಾಫ್ ಕಚೇರಿಗಳ ಬಗ್ಗೆ ಬೇಕಾದ ಮಾಹಿತಿಯನ್ನು ಕಲೆಹಾಕಲು ತ್ರಿಪುರ ಸೇನ್ನನ್ನು ನೇಮಿಸಲಾಗುತ್ತದೆ. ಪೆÇಲೀಸ್ ವಸತಿಗೃಹದ ಶಸ್ತ್ರಾಗಾರದ ವಿವರಗಳನ್ನು ಕಲೆಹಾಕುವುದು ಸುಬೋಧ ಚೌಧರಿಯ ಹೊಣೆಯಾದರೆ, ನಗರದ ಮತ್ತೊಂದು ದಿಕ್ಕಿನಲ್ಲಿರುವ ಯೂರೋಪಿಯನ್ ಮತ್ತು ಆಂಗ್ಲೋ-ಇಂಡಿಯನ್ ಸೈನಿಕರಿಂದ ಕೂಡಿದ ಸಹಾಯಕ ಸೈನ್ಯಪಡೆಯ (ಂuxiಟiಚಿಡಿಥಿ ಈoಡಿಛಿe) ಶಸ್ತ್ರಾಗಾರದ ಮಾಹಿತಿಯನ್ನು ಸ್ವತಃ ಅನಂತಸಿಂಗ್ ಮತ್ತು ಗಣೇಶ್ ಘೋಷ್ ಕಲೆಹಾಕುತ್ತಾರೆ. ಚಿತ್ತಗಾಂವ್ಗೆ ಅನುಕ್ರಮವಾಗಿ 50-80 ಮೈಲಿ ದೂರದಲ್ಲಿರುವ ಧೂಮ್ ಮತ್ತು ನಂಗಲ್ಕೋಟ್ ನಡುವಿನ ರೈಲ್ವೇ ಹಳಿಗಳನ್ನು ಕಿತ್ತುಹಾಕಿದ ಬಳಿಕ ಹಳಿಯ ಪಕ್ಕದಲ್ಲಿರುವ ಟೆಲಿಗ್ರಾಫ್ ತಂತಿಗಳನ್ನು ಕತ್ತರಿಸಬೇಕು. ಈ ಜವಾಬ್ದಾರಿಯನ್ನು ಶಂಕರ ಸರ್ಕಾರ್ ಮತ್ತು ಸೌರೇನ್ ದತ್ತ(ಹರನ್ ದತ್ತ)ರವರಿಗೆ ವಹಿಸಲಾಗಿದೆ. ನಗರದಲ್ಲಿರುವ ಶಸ್ತ್ರಾಸ್ತ್ರಗಳ ಮಳಿಗೆಯ ಬಗ್ಗೆ ನಿಗಾ ಇಡಲು ರಜತ್ ಸೇನ್ ಹಾಗೂ ಯೂರೋಪಿಯನ್ ಕ್ಲಬ್ ಮೇಲೆ ಕಣ್ಣಿಡಲು ನರೇಶ್ ರಾಯ್ನನ್ನು ತೊಡಗಿಸಲಾಗಿದೆ.
1929-30ರಲ್ಲಿ ಪೆÇಲೀಸರು ಒಬ್ಬ ಕಾಲೇಜು ವಿದ್ಯಾರ್ಥಿಯನ್ನು ಕ್ರಾಂತಿಕಾರಿಗಳ ಗುಂಪಿನಲ್ಲಿ ಶಾಮೀಲಾಗುವಂತೆ ಮಾಡುತ್ತಾರೆ. ಆತನನ್ನು ತಮ್ಮ ವಿಶ್ವಾಸಾರ್ಹನೆಂಬಂತೆ ನಡೆಸಿಕೊಳ್ಳುವ ಕ್ರಾಂತಿಕಾರಿಗಳು 1930ರ ಏಪ್ರಿಲ್ 21ರಂದು ಚಿತ್ತಗಾಂವ್ ಜಿಲ್ಲಾ ಕಾಂಗ್ರೆಸ್ ಸಮಿತಿಯು ಸೂರ್ಯಸೇನ್ ಮತ್ತಿತರರ ನಾಯಕತ್ವದಲ್ಲಿ ಟೌನ್ಹಾಲ್ನಲ್ಲಿ ಸಭೆ ಸೇರಿ ಕ್ರಾಂತಿಕಾರಿಗಳ ಬಹಿಷ್ಕೃತ ಪುಸ್ತಕಗಳಿಂದ ಆಯ್ದ ಭಾಗಗಳನ್ನು ಸಾರ್ವಜನಿಕವಾಗಿ ಓದುವ ಮೂಲಕ ರಾಜದ್ರೋಹ ಕಾಯ್ದೆಯನ್ನು ವಿರೋಧಿಸುವರೆಂಬ ಮಾಹಿತಿಯನ್ನು ಒದಗಿಸುತ್ತಾರೆ. ಪೆÇಲೀಸ್ ಇಲಾಖೆಗೆ ತಲಪಿದ ಮಾಹಿತಿಯಿಂದ ಎಲ್ಲರನ್ನೂ ಬಂಧಿಸುವ ಹವಣಿಕೆಯಲ್ಲಿ ಪೆÇಲೀಸರು ಉತ್ಸುಕರಾಗಿ ಕಾಯುತ್ತಿದ್ದರೆ ಏಪ್ರಿಲ್ 18ರ ರಾತ್ರಿಯೇ ಅಗ್ನಿಪರ್ವತ ಸಿಡಿದೇಳುತ್ತದೆ.
ವಿವಿಧ ಮಜಲಿನಲ್ಲಿ ದಾಳಿ ಯೋಜನೆ
ಚಿತ್ತಗಾಂವ್ ಶಸ್ತ್ರಾಗಾರ ದಾಳಿ ಪ್ರಕರಣದ ಯೋಜನೆಯನ್ನು ವಿವಿಧ ಹಂತಗಳಲ್ಲಿ ಯೋಜಿಸಲಾಗಿದೆ. ಮೊದಲನೆಯದಾಗಿ ನಿಗದಿತ ದಿನಕ್ಕೆ ಒಂದು ದಿನ ಮೊದಲೇ ಹೊರಟ ಎಂಟು ಜನರ ತಂಡ ತಲಾ ನಾಲ್ಕರಂತೆ ಎರಡು ಗುಂಪುಗಳಾಗಿ ಏಪ್ರಿಲ್ 18ರ ರಾತ್ರಿ ಚಿತ್ತಗಾಂವ್ನಿಂದ 55 ಮೈಲಿ ದೂರದಲ್ಲಿರುವ ಧೂಮ್ ಮತ್ತು 80 ಮೈಲಿ ದೂರದಲ್ಲಿರುವ ನಂಗಲ್ಕೋಟ್ ಮಾರ್ಗದ ರೈಲ್ವೇ ಹಳಿಗಳನ್ನು ಕಿತ್ತುಹಾಕಿದ ಬಳಿಕ ಹಳಿಯ ಪಕ್ಕದಲ್ಲಿರುವ ಟೆಲಿಗ್ರಾಫ್ ತಂತಿಗಳನ್ನು ಕತ್ತರಿಸಬೇಕು. ಇದರಿಂದ ಶತ್ರುಗಳಿಗೆ ಹೊರಗಿನಿಂದ ಸುಲಭವಾಗಿ ಸೈನಿಕ ಬೆಂಬಲ ಬರುವುದನ್ನು ತಡೆಯುವುದು ಸಾಧ್ಯವಾಗಿತ್ತು.
ಮತ್ತೊಂದು ಗುಂಪು ಚಿತ್ತಗಾಂವ್ ಶಸ್ತ್ರಾಗಾರದ ಮೇಲೆ ದಾಳಿ ನಡೆಸುವ ಐದು ನಿಮಿಷಗಳ ಮೊದಲು ಏಕಕಾಲದಲ್ಲಿ ಟೆಲಿಫೆÇೀನ್ ಮತ್ತು ಟೆಲಿಗ್ರಾಫ್ ಕಚೇರಿಗಳ ಮೇಲೆ ಹಲ್ಲೆ ನಡೆಸಿ ಸಂಪರ್ಕಸಾಧನಗಳನ್ನು ನಾಶಗೊಳಿಸಬೇಕು. ಟೆಲಿಫೆÇೀನ್ ನಗರದ ಸಂಪರ್ಕವ್ಯವಸ್ಥೆಯನ್ನು ತುಂಡರಿಸಿದರೆ ಟೆಲಿಗ್ರಾಫ್ ಚಿತ್ತಗಾಂವ್ ದೇಶದ ಇತರ ಭಾಗಗಳಿಂದ ಸಂಪೂರ್ಣವಾಗಿ ಬೇರ್ಪಡುತ್ತದೆ. ಸಮಯ ಪರಿಪಾಲನೆಗೆ ಬಹಳ ಮಹತ್ತ್ವ ನೀಡಬೇಕಿದ್ದುದು ಸಹಜವಾಗಿತ್ತು.
ಮುಂದಿನ ನಡೆ ಪೆÇಲೀಸ್ ವಸತಿಗೃಹದ ಶಸ್ತ್ರಾಗಾರದ ಮೇಲೆ ದಾಳಿ ಮಾಡಿ ಅದನ್ನು ‘ಇಂಡಿಯನ್ ರಿಪಬ್ಲಿಕನ್ ಸೇನೆ’ಯ ವಶಕ್ಕೆ ತೆಗೆದುಕೊಳ್ಳುವುದು; ಇದೇ ಸಮಯದಲ್ಲಿ ನಗರದ ಮತ್ತೊಂದು ದಿಕ್ಕಿನಲ್ಲಿರುವ ಯೂರೋಪಿಯನ್ ಮತ್ತು ಆಂಗ್ಲೋ-ಇಂಡಿಯನ್ ಸೈನಿಕರಿಂದ ಕೂಡಿದ ಸಹಾಯಕ ಸೈನ್ಯಪಡೆಯ (Auxiliary Force) ಶಸ್ತ್ರಾಗಾರದ ಮೇಲೂ ದಾಳಿ ನಡೆಸುವುದು; ಕೊನೆಯದಾಗಿ ಯೂರೋಪಿಯನ್ ಕ್ಲಬ್ ಮೇಲೆ ದಾಳಿ ನಡೆಸಿ ಅಲ್ಲಿರುವ ಸರಕಾರಿ ಅಧಿಕಾರಿಗಳು, ಯೂರೋಪಿಯನ್ ಮತ್ತು ಆಂಗ್ಲೋ-ಇಂಡಿಯನ್ ಸಮುದಾಯದವರನ್ನು ಹತ್ಯೆಗೈದು ಜಲಿಯನ್ವಾಲಾಬಾಗ್, ಚೌರಿಚೌರಾ ಹತ್ಯಾಕಾಂಡಗಳ ಸೇಡನ್ನು ತೀರಿಸಿಕೊಳ್ಳುವುದು.
ಏಪ್ರಿಲ್ 17ರಂದು ಶಸ್ತ್ರಾಗಾರ ದಾಳಿ ಕ್ರಿಯಾ ಯೋಜನೆಗೆ ಚಾಲನೆ ದೊರಕುತ್ತದೆ. ಅಂದು ಲಾಲಮೋಹನ್ ಸೇನ್, ಸುಕುಮಾರ್ ಭೌಮಿಕ್, ಸೌರೇನ್ ದತ್ತ, ಮತ್ತು ಸುಬೋಧ್ ಮಿತ್ರ ಇವರು ಗಣೇಶ್ ಘೋಷ್ ಮನೆಯಲ್ಲಿ ಸೇರುತ್ತಾರೆ. ಅವರ ಮುಂದೆ ಅಸ್ಸಾಂ ಬಂಗಾಳ ರೈಲ್ವೇಯ ಸಮಯಸೂಚಿ ಹಾಗೂ ರೈಲ್ವೇ ನಕ್ಷೆಯನ್ನು ಹರಡುವ ಗಣೇಶ್ ಘೋಷ್ ಅವರಿಗೆ ಲಕ್ಷಂ ಜಂಕ್ಷನ್ನಿಂದ ಚಿತ್ತಗಾಂವ್ನ ಮಾರ್ಗದಲ್ಲಿರುವ ಕುಮೀರ ಮತ್ತು ಭಟಿಯಾರಿ ನಿಲ್ದಾಣಗಳ ನಡುವೆ ಸೂಕ್ತ ಸ್ಥಳವನ್ನು ಆರಿಸಿ ಹಳಿಗಳನ್ನು ಸಡಿಲಗೊಳಿಸುವುದರ ಬಗ್ಗೆ ಮಾಹಿತಿ ನೀಡುತ್ತಾನೆ. ಅವರಿಗೆ ಅಗತ್ಯ ಪರಿಕರಗಳು ಮತ್ತು ಖರ್ಚಿಗಾಗಿ 25 ರೂಪಾಯಿಗಳನ್ನು ನೀಡಲಾಯಿತು. ಏಪ್ರಿಲ್ 17ರ ಸಂಜೆ ಅವರು ಚಿತ್ತಗಾಂವ್ನಿಂದ ಹೊರಟು ಮುಂಜಾನೆ 1.30ರ ವೇಳೆಗೆ ಧೂಮ್ ನಿಲ್ದಾಣ ಸೇರುತ್ತಾರೆ. ನಿಲ್ದಾಣದಿಂದ ಒಂದು ಮೈಲಿಯವರೆಗೆ ಹಳಿಗಳ ಮೇಲೆ ನಡೆದು ಅರಣ್ಯದಲ್ಲಿ ತಮ್ಮ ಪರಿಕರಗಳನ್ನು ಮುಚ್ಚಿಟ್ಟು ಧೂಮ್ ನಿಲ್ದಾಣಕ್ಕೆ
ಹಿಂತಿರುಗಿ ಕಾಯತೊಡಗಿದರು. 18ರಂದು ಸಂಜೆ ನಾಲ್ಕು ಗಂಟೆಗೆ ಚಿತ್ತಗಾಂವ್ನಿಂದ ಬರುವ ಗಾಡಿ ಧೂಮ್ ದಾಟಿದ ಬಳಿಕ ತಮಗೆ ಆದೇಶಿಸಲಾದ ರೀತಿಯಲ್ಲಿ ಹಳಿಗಳನ್ನು ಬೇರ್ಪಡಿಸಿದರಲ್ಲದೆ ಪರಿಣಾಮಕ್ಕಾಗಿ ಹತ್ತಿರದ ಪೆÇದೆಗಳಲ್ಲಿ ಅಡಗಿ ಕುಳಿತರು.
ಉಪೇಂದ್ರ ಭಟ್ಟಾಚಾರ್ಯ, ಬಿಜೊಯ್ ಕೃಷ್ಣ ಐಚ್, ಶಂಕರ್ ಸರ್ಕಾರ್ ಮತ್ತು ಸುಶೀಲ್ ಡೇಯವರನ್ನು ನಂಗಲ್ಕೋಟ್ ರೈಲ್ವೇ ಹಳಿಗಳನ್ನು ಕಿತ್ತೊಗೆಯಲು ಆರಿಸಲಾಗಿದೆ. ಅವರೂ 17ರಂದು ಪಹಾರ್ತಲಿ ರೈಲ್ವೇ ನಿಲ್ದಾಣದಿಂದ ಹೊರಟು ಅಂದು ರಾತ್ರಿ ನಂಗಲ್ ಕೋಟ್ ತಲಪಿದಾಗ ಅಲ್ಲಿ ಅವರಿಗಾಗಿ ಸ್ನೇಹಿತನೊಬ್ಬ ಕಾಯುತ್ತಿರುತ್ತಾನೆ. ಆತನ ಮನೆಯಲ್ಲಿ ರಾತ್ರಿ ಕಳೆಯುವ ಅವರು ಮರುದಿನ ರೈಲ್ವೇ ಹಳಿಗಳ ಮೇಲೆ ಅಡ್ಡಾಡಿ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿ ಹಿಂತಿರುಗುತ್ತಾರೆ.
18ರ ಸಂಜೆ 8.00 ಗಂಟೆಯ ಸುಮಾರಿಗೆ ನಿಗದಿತ ಸ್ಥಳವನ್ನು ಸೇರುವ ಅವರಲ್ಲಿ ಇಬ್ಬರು ಅತ್ತಿತ್ತ ಓಡಾಡುವವರ ಮೇಲೆ ನಿಗಾ ಇಡಲು ನಿಂತರೆ, ಮಿಕ್ಕ ಇಬ್ಬರು ರೈಲ್ವೇ ಹಳಿಗಳನ್ನು ಕಿತ್ತೊಗೆಯುವುದರಲ್ಲಿ ಮಗ್ನರಾದರು. ಈ ಕೆಲಸ ಮುಗಿಯುತ್ತಿದ್ದಂತೆ ರೈಲ್ವೇ ಹಳಿಗಳಿಗೆ ಪಕ್ಕದಲ್ಲೇ ಇದ್ದ ಟೆಲಿಗ್ರಾಫ್ ಕಂಬವನ್ನು ಹತ್ತಿ ಅದರ ತಂತಿಗಳನ್ನು ಕತ್ತರಿಸಿ ಮುಗಿಸುತ್ತಾರೆ. ಬಿಜೊಯ್ ಕೃಷ್ಣ ನೆನಪಿಸಿಕೊಳ್ಳುವಂತೆ ಅವರು ಸುಮಾರು 24 ತಂತಿಗಳನ್ನು ಎರಡು ಸ್ಥಳಗಳಲ್ಲಿ ಕತ್ತರಿಸಬೇಕಾಯಿತು. ‘ಅಂದು ರಾತ್ರಿಯೇ ನಾವು ಚಿತ್ತಗಾಂವ್ಗೆ
ಹಿಂತಿರುಗಿ 80 ಮೈಲಿ ದೂರವನ್ನು ನಡೆದು ಕ್ರಮಿಸಲು ನಿರ್ಧರಿಸಿದೆವು. ಶಾರೀರಿಕವಾಗಿ ಬಳಲಿದ್ದ ನಮಗೆ ಕಾರ್ಯವನ್ನು ಅಚ್ಚುಕಟ್ಟಾಗಿ ಮುಗಿಸಿದ ಸಂಭ್ರಮದಲ್ಲಿ ಹಸಿವು ಮತ್ತು ನೀರಡಿಕೆ ಗೌಣವೆನಿಸಿದವು. ಮರುದಿನ ಮಧ್ಯಾಹ್ನ ಚಿತ್ತಗಾಂವ್ ತಲಪಿದ ನಾವು ಹಿಂದಿನ ರಾತ್ರಿ ನಮ್ಮ ಸ್ವದೇಶೀ ಸಂಗಾತಿಗಳು ಶಸ್ತ್ರಾಗಾರದ ಮೇಲೆ ವಿಜಯ ಸಾಧಿಸಿ ಬಿಳಿಯರನ್ನು ತಲ್ಲಣಗೊಳಿಸಿದ ಸುದ್ದಿ ಕೇಳಿ ಆನಂದದಿಂದ ನಲಿದಾಡಿದೆವು’ ಎಂದು ಬಿಜೊಯ್ ಕೃಷ್ಣ ನೆನಪಿಸಿಕೊಳ್ಳುತ್ತಾನೆ. ಏಪ್ರಿಲ್ 18ರ ರಾತ್ರಿ 21.45 ಗಂಟೆಯ ವೇಳೆಗೆ ಸರಿಯಾಗಿ ಚಿತ್ತಗಾಂವ್ನತ್ತ ಹೊರಟಿದ್ದ ಇಂಜಿನ್ ಮತ್ತು ಇಪ್ಪತ್ತು ಬೋಗಿಗಳಲ್ಲಿ ಗುಂಡುಕಲ್ಲುಗಳನ್ನು ಹೊತ್ತ ಸರಕುವಾಹಕ ರೈಲ್ವೇ ಧೂಮ್ ನಿಲ್ದಾಣವನ್ನು ಬಿಟ್ಟ ಹದಿನೈದು ನಿಮಿಷಗಳಲ್ಲಿ ಇಂಜಿನ್ನೊಂದಿಗೆ ಹಿಂದಿನ ಹತ್ತು ಬೋಗಿಗಳು ಹಳಿ ತಪ್ಪಿ ಬಿದ್ದಾಗ ದುರಂತಕ್ಕೀಡಾದ ಬೋಗಿಗಳನ್ನು ಎತ್ತಿ ಹಳಿಗಳನ್ನು ದುರಸ್ತಿ ಪಡಿಸುವವರೆಗೆ ಚಿತ್ತಗಾಂವ್ಗೆ ಹೊರಗಿನಿಂದ ಯಾವ ಸಹಾಯವೂ ತಲಪುವಂತಿರಲಿಲ್ಲ.
ಸಿಡಿದೆದ್ದ ಅಗ್ನಿಪರ್ವತ
ಟೆಲಿಫೆÇೀನ್ ಮತ್ತು ಟೆಲಿಗ್ರಾಫ್ ಕಚೇರಿಗಳ ಮೇಲೆ ದಾಳಿ ಮತ್ತು ಅವುಗಳ ಸಲಕರಣೆಗಳನ್ನು ಧ್ವಂಸಗೊಳಿಸುವುದು ಯೋಜನೆಯ ಎರಡನೆಯ ಉದ್ದೇಶವಾಗಿದೆ. ಅತ್ತ ಸರಕುವಾಹಕ ರೈಲ್ವೇ ಧರಾಶಾಹಿಯಾಗುತ್ತಿದ್ದಂತೆ, ಇತ್ತ ಆಕಾಶಮಾರ್ಗದಲ್ಲಿ ಚಿತ್ತಗಾಂವಕ್ಕೆ ಹೊರಜಗತ್ತಿನೊಂದಿಗೆ ಸಂಪರ್ಕ ಸಾಧಿಸುವ ಟೆಲಿಗ್ರಾಫ್ ವ್ಯವಸ್ಥೆ ತನ್ನ ಕೊನೆಯುಸಿರೆಳೆಯುತ್ತಿತ್ತು. ಸುಮಾರು ಮುನ್ನೂರು ಟೆಲಿಫೆÇೀನ್ಗಳನ್ನು ಹೊಂದಿದ್ದ ವಿನಿಮಯಕೇಂದ್ರ ಹಾಗೂ ಟೆಲಿಗ್ರಾಫ್ ಕಚೇರಿ ಎರಡೂ ಚಿತ್ತಗಾಂವ್ನ ಗುಡ್ಡವೊಂದರ ಮೇಲೆ ಅಕ್ಕಪಕ್ಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಏಪ್ರಿಲ್ 18ರ ರಾತ್ರಿ 9.45ಕ್ಕೆ ಸರಿಯಾಗಿ ಹೊಸ ಶವ್ರೊಲೆಟ್ ಕಾರಿನಲ್ಲಿ ಬಂದ ಆನಂದ ಗುಪ್ತ ಅಂಬಿಕಾ ಚಕ್ರವರ್ತಿಯ ನೇತೃತ್ವದಲ್ಲಿ ಕಾಲಿಪಾದ ಚಕ್ರವರ್ತಿ, ಬಿರೇನ್ ಡೇ, ದ್ವಿಜೇನ್ ದಸ್ತಿದಾರ್, ನಿರಂಜನ ರಾಯ್ ಮತ್ತು ಮಣೀಂದ್ರಲಾಲ್ ಗುಹರನ್ನು ಹತ್ತಿಸಿಕೊಂಡು ಟೆಲಿಫೆÇೀನ್ ಭವನದತ್ತ ಸಾಗುತ್ತಾನೆ. ಟೆಲಿಫೆÇೀನ್ ಭವನದಲ್ಲಿ ಅಹ್ಮದುಲ್ಲ ಎಂಬ ನೌಕರ ಒಬ್ಬನೇ ಕುಳಿತು ಸ್ವಿಚ್ಬೋರ್ಡನ್ನು ನಿರ್ವಹಿಸುತ್ತಿದ್ದಾನೆ. ಹಿಂದಿನಿಂದ ಮೆಲ್ಲಗೆ ಬಾಗಿಲನ್ನು ತಳ್ಳಿದ ಆರು ಮಂದಿ ಸದ್ದಿಲ್ಲದಂತೆ ಒಳನುಗ್ಗುತ್ತಾರೆ. ಅಂಬಿಕಾ ದಾ ಅಹ್ಮದುಲ್ಲನನ್ನು ಬಲವಾಗಿ ತಬ್ಬಿಕೊಂಡು ಆತನ ಮೂಗಿನ ಮೇಲೆ ಬಲವಾದ ವಾಸನೆಯುಕ್ತ ಬಟ್ಟೆಯೊಂದನ್ನು ಒತ್ತಿದಾಗ ಆತ ಜ್ಞಾನ ತಪ್ಪಿ ಬಿದ್ದ. ಬಳಿಕ ಆತನನ್ನು ಹೊರಗಿನ ವೆರಾಂಡಾದತ್ತ ಎಳೆದೊಯ್ದು ಅಲ್ಲಿ ಆನಂದ ಗುಪ್ತ ಮತ್ತು ಅಂಬಿಕಾ ದಾ ರಿವಾಲ್ವರ್ ಹಿಡಿದು ಕಾವಲು
ಕಾಯತೊಡಗಿದರು. ಇತ್ತ ಒಳಗಡೆ ಕಾಲಿಪಾದ ಚಕ್ರವರ್ತಿ, ಬಿರೇನ್ ಡೇ, ದ್ವಿಜೇನ್ ದಸ್ತಿದಾರ್, ನಿರಂಜನ ರಾಯ್ ಮತ್ತು ಮಣೀಂದ್ರಲಾಲ್ ಗುಹ ತಾವು ತಂದಿದ್ದ ಸುತ್ತಿಗೆಯಿಂದ ಟೆಲಿಫೆÇೀನ್ ಸ್ವಿಚ್ಬೋರ್ಡನ್ನು ಕುಟ್ಟಿ ಪುಡಿ ಮಾಡಲು ತೊಡಗಿದರು. ಕೇವಲ ಮೂರು ನಿಮಿಷಗಳಲ್ಲಿ ಅದನ್ನೆಲ್ಲ ಪುಡಿಗೈದು ಅದರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಾರೆ. ಒಟ್ಟು ಹತ್ತು ನಿಮಿಷಗಳಲ್ಲಿ ಒಂದು ಗುಂಡನ್ನೂ ಹಾರಿಸದೆ ಯಾವ ರಕ್ತಪಾತಕ್ಕೂ ಅವಕಾಶ ನೀಡದೆ ಎಲ್ಲರೂ ಹೊರಬಿದ್ದಾಗ ಪಕ್ಕದ ಬಂಗಲೆಯಲ್ಲಿದ್ದ ಟೆಲಿಗ್ರಾಫ್ ಡೆಪ್ಯೂಟಿ ಸೂಪರಿಂಟೆಂಡೆಂಟ್ ಸ್ಕಾಟ್ ಗುಂಡನ್ನು ಹಾರಿಸಿ ಸಹಾಯಕ್ಕಾಗಿ ಕರೆ ನೀಡುವುದರೊಳಗೆ ಎಲ್ಲವೂ ಸುಟ್ಟು ಕರಕಲಾಗಿತ್ತು.
ಇದೆಲ್ಲ ಆಗುವಾಗ ಪಕ್ಕದ ಕೋಣೆಯಲ್ಲಿದ್ದ ಟೆಲಿಗ್ರಾಫ್ ನೌಕರರು ಭಯದಿಂದ ಬಾಗಿಲನ್ನು ಮುಚ್ಚಿ ಒಳಗೆ ಸೇರುತ್ತಾರೆ. ಟೆಲಿಫೆÇೀನ್ ಭವನ ನಾಶವಾಗುತ್ತಿದ್ದಂತೆ ಎಲ್ಲರೂ ಕೊಡಲಿ, ಉಳಿ, ಸುತ್ತಿಗೆಗಳಿಂದ ಬಾಗಿಲನ್ನು ಮುರಿದು ಒಳನುಗ್ಗಿದಾಗ ಭಯಭೀತರಾಗಿದ್ದ ನೌಕರರನ್ನು ಶಾಂತಗೊಳಿಸಿ ಅಲ್ಲಿದ್ದ ಉಪಕರಣಗಳನ್ನು ನಾಶಗೊಳಿಸಲಾಯಿತು. ಬಳಿಕ ಎಲ್ಲರನ್ನೂ ಕೋಣೆಯಿಂದ ಹೊರಹಾಕಿ ಕೋಣೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಯಿತು. ಸರಿಯಾಗಿ 10.10ರ ವೇಳೆಗೆ ಎಲ್ಲವೂ ಮುಗಿದಿತ್ತು.
ತಮ್ಮ ಕೆಲಸ ಪೂರ್ಣಗೊಳಿಸಿದ ಎಲ್ಲರೂ ಕಾರ್ ಹತ್ತಿ ಕುಳಿತಾಗ ಆನಂದ ಗುಪ್ತ ಬಂದ ದಾರಿಯಲ್ಲೇ ಕಾರು ವೇಗವಾಗಿ ಪೆÇಲೀಸ್ ಲೈನ್ಸ್ನತ್ತ ಧಾವಿಸುತ್ತದೆ. ಅಚ್ಚರಿಗೊಂಡ ಎಲ್ಲರೂ ಉಸಿರು ಹಿಡಿದು ಕುಳಿತುಕೊಳ್ಳುತ್ತಾರೆ. ಪೆÇಲೀಸ್ ಲೈನ್ಸ್ ಬಳಿ ಕಾರು ಬಂದಾಗ ದ್ವಾರದ ಬಳಿ ಅಂಬಿಕಾ ದಾ ಆದೇಶದಂತೆ ಆನಂದ ಗುಪ್ತ ಕಾರನ್ನು ನಿಲ್ಲಿಸಿ ಅದರ ದೀಪವನ್ನು ಆರಿಸಿ ಮತ್ತೆ ಉರಿಸುತ್ತಾನೆ. ಕಾರಿನಿಂದಿಳಿದ ಅಂಬಿಕಾ ದಾ ಗಟ್ಟಿಯಾಗಿ ‘ಗಣೇಶ್, ಅನಂತ್, ನಾನು ಅಂಬಿಕಾ ಬಂದಿದ್ದೇನೆ. ಅಂಬಿಕಾ’ ಎಂದು ಅರಚುತ್ತಾನೆ. ತಕ್ಷಣ ಎದುರುಗಡೆಯಿಂದ ವಂದೇ ಮಾತರಂ ಘೋಷ ಕೇಳಿಬರುತ್ತದೆ. ಎಲ್ಲರೂ ಕಾರಿನಿಂದಿಳಿದು ‘ವಂದೇ ಮಾತರಂ’ ಮತ್ತು ‘ಇನ್ಕಿಲಾಬ್ ಜಿಂದಾಬಾದ್’ ಎಂದು ಕೂಗುತ್ತ ಪೆÇಲೀಸ್ ಲೈನ್ಸ್ನತ್ತ ಸಾಗುತ್ತಾರೆ. ಅಲ್ಲಿಯೇ ನಿಂತಿದ್ದ ಮಾಸ್ತರ್ ದಾ ಮುಂದೆ ಬಂದು ‘ಟೆಲಿಫೆÇೀನ್ ಭವನ ಸಂಪೂರ್ಣವಾಗಿ ಧ್ವಂಸಗೊಂಡಿತೇ?’ ಎಂದು ಪ್ರಶ್ನಿಸುತ್ತಾನೆ. ಅದುಕ್ಕುತ್ತರವಾಗಿ ಅಂಬಿಕಾ ದಾ ‘ಅದು ಇಷ್ಟು ಹೊತ್ತಿಗಾಗಲೇ ಉರಿದು ಬೂದಿಯಾಗಿರುತ್ತದೆ’ ಎಂದು ಉತ್ತರಿಸಿದ. ‘ಸಾವು ನೋವುಗಳೇನಾದರೂ ಸಂಭವಿಸಿತೇ?’ – ಮಾಸ್ತರ್ ದಾ ಮುಂದಿನ ಪ್ರಶ್ನೆ. ‘ಇಲ್ಲ’ ಎಂದು ಅಂಬಿಕಾ ದಾ ಉತ್ತರಿಸಿದಾಗ ಮಾಸ್ತರ್ ದಾ “ಈಗ ನಿರಾಳವಾಯಿತು. ನೀವೆಲ್ಲ ಸೇರಿ ಯಾವುದೇ ರಕ್ತಪಾತವಿಲ್ಲದೆ ಸರಕಾರದ ನರಮಂಡಲವನ್ನು ಧ್ವಂಸಗೊಳಿಸಿರುವುದು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಲಾಗುತ್ತದೆ” ಎಂದು ಪ್ರಶಂಸಿಸುತ್ತಾನೆ. ಇದಾದ ಬಳಿಕ ಎಲ್ಲರೂ ಪೆÇಲೀಸ್ ಲೈನ್ಸ್ನಲ್ಲಿದ್ದ ಒಂದೊಂದು ಬಂದೂಕು, ಸೈನಿಕ ರಿವಾಲ್ವರು ಮತ್ತು ಚೀಲದ ತುಂಬ ಕಾಡತೂಸುಗಳನ್ನು ತುಂಬಿಕೊಳ್ಳುತ್ತಾರೆ. ಗಣೇಶ್ ದಾ ಎಲ್ಲರಿಗೂ ಬಂದೂಕು ಮತ್ತು ರಿವಾಲ್ವರುಗಳಲ್ಲಿ ಕಾಡತೂಸುಗಳನ್ನು ತುಂಬಿ ಚಲಾಯಿಸುವುದು ಹೇಗೆಂದು ತರಬೇತಿ
ನೀಡತೊಡಗಿದ. ಎಲ್ಲರೂ ನೆಲದ ಮೇಲೆ ಸನ್ನದ್ಧ ಸ್ಥಿತಿಯಲ್ಲಿ ಮಲಗುತ್ತಾರೆ.
(ಮುಂದುವರಿಯುವುದು)