– ಬಿ.ಪಿ. ಪ್ರೇಮ್ಕುಮಾರ್
ಹೊರಜಗತ್ತಿನೊಂದಿಗೆ ಚಿತ್ತಗಾಂವ್ನ ಸಂಪರ್ಕಕೊಂಡಿಗಳನ್ನು ಧ್ವಂಸಗೊಳಿಸುವ ಮೊದಲಸುತ್ತಿನ ಕ್ರಿಯಾಯೋಜನೆಯ ಯಶಸ್ವಿ ಪೂರೈಕೆಯ ನಂತರ ‘ಮಾಡು ಮತ್ತು ಮಡಿ’ ಎಂಬ ಧ್ಯೇಯವಾಕ್ಯದೊಂದಿಗೆ ಚಿತ್ತಗಾಂವ್ನ ಕ್ರಾಂತಿಕಾರಿಗಳ ಅಚಲ ಹೋರಾಟ ಗರಿಗೆದರಿದುದು ಈಗಲೇ!
ಬೆನ್ನು ಹತ್ತಿರುವ ಪೆÇಲೀಸ್ನಾಯಿಗಳಿಗೆ ವಾಸನೆಯೂ ಸಿಗದಂತೆ ಪೂರ್ವಸಿದ್ಧತೆಯನ್ನು ನಡೆಸುತ್ತಿದ್ದ ಆರು ಮಂದಿ ಮಾಜಿ ರಾಜಕೀಯ ಬಂಧಿಗಳು ತಮ್ಮ ಯೋಜನೆಗೆ ಜೀವ ತುಂಬುವುದರಲ್ಲಿ ಏಳೆಂಟು ತಿಂಗಳುಗಳನ್ನು ಕಳೆದಿರುತ್ತಾರೆ. ಮಾಸ್ತರ್ ದಾ, ಅಂಬಿಕಾ ಚಕ್ರವರ್ತಿ, ನಿರ್ಮಲ್ ಸೇನ್, ಗಣೇಶ್ ಘೋಷ್ ಮತ್ತು ಅನಂತ ಸಿಂಗ್ ಸೇರಿ 1929ರ ಅಕ್ಟೋಬರ್ 15ರಂದು ನಡೆಸಿದ ಸಭೆಯಲ್ಲಿ ತಮ್ಮ ಸೇನೆಗೆ ‘ಭಾರತೀಯ ಗಣತಂತ್ರ ಸೇನೆ’ ಎಂಬ ಹೆಸರಿನೊಂದಿಗೆ ಮಾಸ್ತರ್ ದಾನನ್ನು ಅದರ ಮುಖ್ಯಸ್ಥನನ್ನಾಗಿ ನೇಮಿಸುವ ನಿರ್ಧಾರ ಕೈಗೊಳ್ಳಲಾಯಿತು. ಶಸ್ತ್ರಾಸ್ತ್ರಗಳನ್ನು ಕಲೆಹಾಕುವುದು ಅನಂತ ಸಿಂಗ್ನ ಹೊಣೆಯಾಗಿದೆ. ಕೊಲ್ಕತಾ ಮೊದಲಾದ ಸ್ಥಳಗಳಲ್ಲಿ ಎಡೆಬಿಡದೆ ಅಲೆದಾಡಿ ಕೊನೆಗೂ ಹದಿನಾಲ್ಕು ಪಿಸ್ತೂಲು – ರಿವಾಲ್ವರುಗಳನ್ನು ಹೊಂಚುಹಾಕಿ ಖರೀದಿಸುತ್ತಾನೆ. ಅವರ ಬಳಿ ಬಾಂಬುಗಳನ್ನು ತಯಾರಿಸಲು ಬೇಕಾಗುವ ಹದಿನೇಳು ಕಬ್ಬಿಣದ ಕವಚಗಳಿವೆ. ಕೆಲವೇ ದಿನಗಳ ಹಿಂದೆ ಬಾಂಬುಗಳನ್ನು ತಯಾರಿಸುವಾಗ ಉಂಟಾದ ಎರಡು ಅವಘಡಗಳಲ್ಲಿ ರಾಮಕೃಷ್ಣ ಬಿಶ್ವಾಸ್, ತಾರಕೇಶ್ವರ ದಸ್ತಿದಾರ್ ಮತ್ತು ಅರ್ಧೇಂದು ದಸ್ತಿದಾರ್ ಗಾಯಗೊಂಡಿದ್ದುದರಿಂದ ಈ ಹದಿನೇಳು ಕವಚಗಳಲ್ಲಿ ಸಿಡಿಮದ್ದನ್ನು ತುಂಬುವ ಜವಾಬ್ದಾರಿಯನ್ನು ಗಣೇಶ್ ಘೋಷ್ ಮತ್ತು ಅನಂತ ಸಿಂಗ್ ಹೊರುತ್ತಾರೆ. ಶಸ್ತ್ರಾಗಾರದ ದಾಳಿ ಕಾರ್ಯಾಚರಣೆಯ ವೇಳೆ ಇಷ್ಟು ಮಾತ್ರ ಶಸ್ತ್ರಾಸ್ತ್ರಗಳು ಅವರಲ್ಲಿದ್ದವು. ಯೋಜನೆಯನ್ನು ಯಾವುದೇ ಕೊಸರಿಲ್ಲದಂತೆ ಬಹಳ ಕೂಲಂಕಷವಾಗಿ ಹೆಣೆಯಲಾಗಿತ್ತು. ದಾಳಿ ಮಾಡಬೇಕಾದ ಪ್ರತಿಯೊಂದು ಗುರಿಗಳ ಮೇಲೆ ಪ್ರತಿನಿತ್ಯ ಕಣ್ಣಿಟ್ಟು ಕಾಯುತ್ತಿದ್ದ ತಮ್ಮ ‘ಗೂಢಚಾರರು’ ಒದಗಿಸಿದ ಮಾಹಿತಿಯನ್ನಾಧರಿಸಿ ನಕ್ಷೆಯನ್ನು ಸಿದ್ಧಪಡಿಸಿದ್ದರಲ್ಲದೆ ಅದರಲ್ಲಿರುವ ಶತ್ರುಗಳ ವಿವರಗಳನ್ನು ಗುರುತಿಸಲಾಗಿದೆ.
ಅಗ್ನಿಕುಂಡಕ್ಕೆ ಕೈ
ಚಿತ್ತಗಾಂವ್ ನಗರದಲ್ಲಿ ಅಂದು ರಾತ್ರಿ ತಮ್ಮ ಗುರಿಗಳಾದ ಪೆÇಲೀಸ್ ಲೈನ್ಸ್ ಮತ್ತು ಸಹಾಯಕ ಶಸ್ತ್ರ ಪಡೆಯ ಶಸ್ತ್ರಾಗಾರ, ಟೆಲಿಫೆÇೀನ್ ಮತ್ತು ಟೆಲಿಗ್ರಾಫ್ ಕಚೇರಿ, ಹಾಗೂ ಯೂರೋಪಿಯನ್ ಕ್ಲಬ್ಗಳ ಮೇಲೆ ದಾಳಿ ಮಾಡಲು ಸರಾಸರಿ ತಲಾ ಆರು ಮಂದಿಯ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಅದಲ್ಲದೆ ಮೂವತ್ತು ಆಯ್ದ ಕ್ರಾಂತಿಕಾರಿಗಳ ಆರು ತಂಡಗಳು ಸಿದ್ಧವಾಗಿವೆ. ಈ ಎರಡನೆಯ ಗುಂಪಿನ ಆರು ತಂಡಗಳು ಪರಸ್ಪರರಿಂದ ದೂರವನ್ನು ಕಾಯ್ದುಕೊಂಡು ಅಂದು
ರಾತ್ರಿ 9.45 ಗಂಟೆಗೆ ಪೊಲೀಸ್ ಶಸ್ತ್ರಾಗಾರದಿಂದ ಇನ್ನೂರು ಗಜ ದೂರದಲ್ಲಿರುವ ಮರಗಳ ಹಿಂದೆ ಅವಿತಿಟ್ಟುಕೊಳ್ಳಬೇಕು. ಶಸ್ತ್ರಾಗಾರದಿಂದ ಮೊದಲೇ ನಿಗದಿತವಾದ ಘೋಷಣೆ ಮತ್ತು ದೀಪದ ಸಂಕೇತಗಳು ಕಂಡು ಬಂದ ತಕ್ಷಣ ಅವರೆಲ್ಲ ಶಸ್ತ್ರಾಗಾರದತ್ತ ಧಾವಿಸಿ ದಾಳಿ ನಡೆಸಿರುವ ತಮ್ಮ ಸಂಗಾತಿಗಳನ್ನು ಸೇರಿಕೊಳ್ಳಬೇಕು. ಒಂದೊಮ್ಮೆ ಘೋಷಣೆಗಳು ಕೇಳಿಬರದೆ, ದೀಪದ ಸಂಕೇತ ಕಾಣದಿದ್ದಲ್ಲಿ 10.30ರ ನಂತರ ಅಲ್ಲಿಂದ ಶಾಂತವಾಗಿ ನಿರ್ಗಮಿಸಬೇಕು.
ಪೊಲೀಸ್ ಶಸ್ತ್ರಾಗಾರ ಚಿತ್ತಗಾಂವ್ ನಗರದ ವಾಯವ್ಯ ದಿಕ್ಕಿನಲ್ಲಿರುವ ಒಂದು ಗುಡ್ಡದ ಮೇಲಿದೆ. ಅಕ್ಕಪಕ್ಕದ ಎರಡು ಬ್ಯಾರಕ್ಗಳಲ್ಲಿ ಸುಮಾರು ಐನೂರು ಸಶಸ್ತ್ರ ಪೆÇಲೀಸ್ ಪೇದೆಗಳು ಜೀವಿಸುವ ಈ ಶಸ್ತ್ರಾಗಾರ ಜಿಲ್ಲೆಯಲ್ಲಿ ಉಂಟಾಗುವ ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸದಾ ಸನ್ನದ್ಧ ಸ್ಥಿತಿಯಲ್ಲಿರುತ್ತದೆ. ಆದರೆ ಒಂದೆರಡು ಪಿಸ್ತೂಲು-ಬಾಂಬುಗಳನ್ನು ಹಿಡಿದು ಕಳ್ಳತನದಲ್ಲಿ ಅಡಗಿ, ಕೊಲೆ ದರೋಡೆಗಳನ್ನು ನಡೆಸುತ್ತ ತಮ್ಮನ್ನು ಕ್ರಾಂತಿಕಾರಿಗಳೆಂದು ಕರೆದುಕೊಳ್ಳುವ ತಲೆಕೆಟ್ಟ ಯುವಕರು ಎಂದು ಭಾವಿಸುತ್ತಿದ್ದ ಬ್ರಿಟಿಷರು 1930ರ ಏಪ್ರಿಲ್ 18ರ ರಾತ್ರಿ ಒಬ್ಬ ‘ಯಃಕಶ್ಚಿತ್ ಶಾಲಾ ಮಾಸ್ತರ’ ಹಾಗೂ ಆತನ ಹಲಕೆಲವು ಪೆÇೀರರು ‘ಭಾರತೀಯ ಗಣತಂತ್ರದ ಸೇನೆ’ಯ ಹೆಸರಿನಲ್ಲಿ ತಮ್ಮ ‘ಶಕ್ತಿಧಾಮ’ದ ಮೇಲೆ ಆಕ್ರಮಣ ಘೋಷಿಸಿ ‘ಸ್ವತಂತ್ರ ಪ್ರಾಂತೀಯ ಕ್ರಾಂತಿಕಾರಿ ಸರಕಾರ’ದ ಘೋಷಣೆ ಮಾಡುವರೆಂಬುದನ್ನು ಕನಸಿನಲ್ಲಿಯೂ ಊಹಿಸಿರಲಿಲ್ಲ.
ಅಂದು ರಾತ್ರಿ 9.45ಕ್ಕೆ ಸರಿಯಾಗಿ ಸದರಘಾಟ್ನಲ್ಲಿರುವ ಗಣೇಶ್ ಘೋಷ್ನ ಮನೆಯಲ್ಲಿ ದೇಬಪ್ರಸಾದ್ ಗುಪ್ತ, ಹಿಮಾಂಶು ಸೇನ್, ಹರಿಪಾದ ಮಹಾಜನ್, ಸರೋಜ್ ಗುಹ, ಮತ್ತು ಅನಂತ ಸಿಂಗ್ರ ಆರು ಮಂದಿಯ ತಂಡ ಸಿದ್ಧವಾಗಿ ಕುಳಿತಿದೆ. ಪ್ರತಿಯೊಬ್ಬರೂ ಬ್ರಿಟಿಷ್ ಸೈನಿಕರಂತೆ ಖಾಕಿ ಸಮವಸ್ತ್ರ ಧರಿಸಿ ಕೈಯಲ್ಲಿ ಪಿಸ್ತೂಲು-ರಿವಾಲ್ವರ್ಗಳನ್ನು ಹಿಡಿದಿದ್ದಾರೆ. ಗಣೇಶ್ ಘೋಷ್ ಮತ್ತು ಅನಂತ ಸಿಂಗ್ ಸೈನಿಕ ಅಧಿಕಾರಿಗಳ ಸಮವಸ್ತ್ರದಲ್ಲಿ ಮಿಂಚುತ್ತಿದ್ದಾರೆ. ಅನಂತಸಿಂಗ್ ಕಾರನ್ನು ಚಾಲನೆ ಮಾಡುತ್ತಾನೆ.
ಕಾರು ಶಸ್ತ್ರಾಗಾರಕ್ಕೆ ಸಮೀಪದಲ್ಲಿರುವ ನೀರಿನ ತೊಟ್ಟಿಯ ಬಳಿ ಬಂದಾಗ ರಸ್ತೆಯ ತಿರುವಿನಲ್ಲಿ ನಿಗದಿತ ಸ್ಥಳದಲ್ಲಿ ಶುಭ್ರ ಶ್ವೇತ ಪಂಚೆ ಮತ್ತು ಉದ್ದನೆಯ ಖಾದಿ ಕೋಟು, ತಲೆಯ ಮೇಲೆ ಗರಿಗರಿಯಾದ ಗಾಂಧಿ ಟೋಪಿ ಧರಿಸಿದ ಮಾಸ್ತರ್ ದಾ ಹಾಗೂ ಪಕ್ಕದಲ್ಲಿ ಅಂಗರಕ್ಷಕನಾಗಿ ಬಿನೋದ್ ದತ್ತ ನಿಂತಿದ್ದಾರೆ.
ಕಾರಿನಿಂದ ಎಲ್ಲರೂ ಇಳಿದು ಅಧ್ಯಕ್ಷನಿಗೆ ಸೈನಿಕ ಪ್ರಣಾಮ ಸಲ್ಲಿಸಿ ಮತ್ತೆ ಕಾರಿನಲ್ಲಿ ಕುಳಿತುಕೊಳ್ಳುತ್ತಾರೆ. ಅಲ್ಲಿಂದ ಶಸ್ತ್ರಾಗಾರದ ಕಾವಲುದ್ವಾರ ಕೇವಲ ಒಂದು ನಿಮಿಷದ ದೂರದಲ್ಲಿದೆ. ಕಾರನ್ನು 9.59ಕ್ಕೆ ಸರಿಯಾಗಿ ಚಾಲನೆ ಮಾಡಿದ ಬಳಿಕ ಎಲ್ಲರೂ ತಮ್ಮ ತಮ್ಮ ಶಸ್ತ್ರಗಳ ‘ರಕ್ಷಣಾ ಹಿಡಿಕೆ’ಯನ್ನು ತೆರವುಗೊಳಿಸಿ ಸಿದ್ಧರಾಗಿ ಕುಳಿತರು.
ಕ್ರಾಂತಿಯ ಘೋಷಣೆ
ರಸ್ತೆಯಿಂದ ಕಾವಲುದ್ವಾರ 10-12 ಅಡಿ ಎತ್ತರದಲ್ಲಿದ್ದು ಮೆಟ್ಟಲುಗಳನ್ನೇರಿ ಅದನ್ನು ತಲಪಬೇಕಿದೆ. ಕಾರು ಹತ್ತಿರವಾಗುತ್ತಿದ್ದಂತೆ ರೈಫಲ್ ಹಿಡಿದು ನಿಂತಿದ್ದ
ಕಾವಲುಗಾರ ಕಾರನ್ನೇ ದಿಟ್ಟಿಸಿ ನೋಡುತ್ತಿದ್ದಾನೆ. ಕಾರಿನಿಂದಿಳಿದ ಗಣೇಶ್ ಘೋಷ್ ಮತ್ತು ಅನಂತ ಸಿಂಗ್ ಆಯುಧಗಳನ್ನು ಹಿಡಿದಿದ್ದ ಕೈಗಳನ್ನು ಹಿಂದೆ ಕಟ್ಟಿ ಸರಸರನೆ ಮೆಟ್ಟಿಲುಗಳನ್ನು ಏರತೊಡಗಿದರೆ ಮಿಕ್ಕವರು ಅವರನ್ನು ಹಿಂಬಾಲಿಸಿದರು. ಕೇವಲ ಆರು ಸೆಕೆಂಡುಗಳಲ್ಲಿ ಮೆಟ್ಟಿಲುಗಳನ್ನು ಹತ್ತಿ ಕಾವಲುಗಾರನಿಂದ ನಾಲ್ಕೈದು ಅಡಿ ದೂರದಲ್ಲಿರುವಾಗಲೇ ಗಣೇಶ್ ಘೋಷ್ ಮತ್ತು ಅನಂತ ಸಿಂಗ್ ತಮ್ಮ ರಿವಾಲ್ವರುಗಳಿಂದ ಗುಂಡುಗಳನ್ನು ಹಾರಿಸುತ್ತಾರೆ. ಆ ಕ್ಷಣದಲ್ಲಿ ಆತ ಕುಸಿದು ಬೀಳುತ್ತಾನೆ. ಗುಂಪು ಗುಂಡುಗಳನ್ನು ಹಾರಿಸುತ್ತ ‘ಓಡಿ, ಓಡಿ, ಪ್ರಾಣ ಉಳಿಸಿಕೊಳ್ಳಿ. ಗಾಂಧಿ ಆಳ್ವಿಕೆ ಪ್ರಾರಂಭಗೊಂಡಿದೆ’ ಎಂದು ಕೂಗಲಾರಂಭಿಸಿದಾಗ ಒಳಗಿದ್ದ ಕಾವಲುಗಾರರ ತಂಡ ಗಾಬರಿಯಿಂದ ದಿಕ್ಕಾಪಾಲಾಗಿ ಓಡಲಾರಂಭಿಸಿದರು. ಏಳು ಸೆಕೆಂಡುಗಳಲ್ಲಿ ಕಾವಲುಗಾರರ ತಂಡ ಅಲ್ಲಿಂದ ಅದೃಶ್ಯವಾಗಿತ್ತು. ಶಸ್ತ್ರಾಗಾರ ಕಾರ್ಯಾಚರಣೆಯ ಯಶಸ್ಸಿನ ಬಳಿಕ ಒಳಗಿದ್ದ ಕ್ರಾಂತಿಕಾರಿಗಳಿಗೆ ನೀಡಲಾಗಿದ್ದ ಮುನ್ಸೂಚನೆಯಂತೆ ‘ಇನ್ಕಿಲಾಬ್ ಜಿಂದಾಬಾದ್’, ‘ಸಾಮ್ರಾಜ್ಯಶಾಹಿ ನಾಶವಾಗಲಿ’ ಎಂದು ಕೂಗುತ್ತಿದ್ದಂತೆ ಹೊರಗೆ ಕಾಯುತ್ತಿದ್ದ ಮೂವತ್ತು ಮಂದಿಯ ತಂಡವೂ ಮಾಸ್ತರ್ ದಾನೊಂದಿಗೆ ಅವರನ್ನು ಸೇರಿಕೊಳ್ಳುತ್ತದೆ.
ಗುಂಡುಗಳ ಹಾರಾಟ, ಮೂವತ್ತಾರು ಕ್ರಾಂತಿಕಾರಿಗಳ ಆಕ್ರೋಶಭರಿತ ಘೋಷಣೆಗಳು ಬ್ಯಾರಕ್ಗಳಲ್ಲಿದ್ದ 500 ಸಶಸ್ತ್ರ ಪೆÇಲೀಸ್ ಪೇದೆಗಳನ್ನು ಕಂಗೆಡಿಸಿ ಎದ್ದುಬಿದ್ದು ಓಡುವಂತೆ ಮಾಡಿತು. ಕಾವಲುಗಾರರ ರೈಫಲ್ಗಳನ್ನು ಕೆಲವು ಕ್ರಾಂತಿಕಾರಿಗಳಿಗೆ ಹಂಚಿ ಅವರನ್ನು ಕಾವಲುದ್ವಾರದಲ್ಲಿ ಪಹರೆ ನೀಡಲು ನಿಲ್ಲಿಸಲಾಯಿತು. ಮಿಕ್ಕವರೆಲ್ಲ ತಾವು ತಂದಿದ್ದ ಭಾರಿ ಸುತ್ತಿಗೆಯ ಸಹಾಯದಿಂದ ಶಸ್ತ್ರಾಸ್ತ್ರ ಸಂಗ್ರಹಾಲಯದ (ಒಚಿgಚಿziಟಿe) ಬಾಗಿಲನ್ನು ಒಡೆದು ತೆಗೆಯುತ್ತಾರೆ. ಒಳಗಡೆ ಸಾಲುಸಾಲು ಬಂದೂಕು, ಪಿಸ್ತೂಲು ಮತ್ತು ರಿವಾಲ್ವರುಗಳನ್ನು ಜೋಡಿಸಿಡಲಾಗಿದೆ. ಗಣೇಶ್ ಘೋಷ್ ಎಲ್ಲರಿಗೂ ಶಸ್ತ್ರಾಗಾರದ ಮುಂದೆ ಎರಡು ಸಾಲುಗಳಲ್ಲಿ ನಿಲ್ಲುವಂತೆ ಆದೇಶಿಸುತ್ತಾನೆ. ಆರು ಮಂದಿಯನ್ನು ಒಳಗಡೆಯಿಂದ ತಲಾ ಒಂದೊಂದು ಬಂದೂಕು ಮತ್ತು ಎರಡು ರಿವಾಲ್ವರುಗಳನ್ನು ತಂದು ಪ್ರತಿಯೊಬ್ಬರಿಗೂ ಹಂಚುವಂತೆ ಹೇಳಲಾಯಿತು. ಇನ್ನೂ ನಾಲ್ವರು ಕಾಡತೂಸುಗಳನ್ನು ಹಂಚತೊಡಗಿದರು. ತದನಂತರ ಬಂದೂಕುಗಳಲ್ಲಿ ಕಾಡತೂಸನ್ನು ತುಂಬಿ ಹೇಗೆ ಹಾರಿಸಬೇಕೆಂಬುದನ್ನು ಗಣೇಶ್ ತೋರಿಸಿಕೊಡುತ್ತಾನೆ. ಆತನ ಆದೇಶದಂತೆ ಸುಮಾರು ಐವತ್ತು ಬಂದೂಕುಗಳು ಏಕಕಾಲಕ್ಕೆ ಘರ್ಜಿಸಿದಾಗ ನಭೋಮಂಡಲದಲ್ಲಿ ಸಿಡಿಲು ಬಡಿದಂತಾಯಿತು.
ಮಾಸ್ತರ್ದಾನ ಆದೇಶದಂತೆ ಧ್ವಜಸ್ಥಂಭದ ಮೇಲೆ ಹಾರಾಡುತ್ತಿದ್ದ ಯೂನಿಯನ್ ಜ್ಯಾಕನ್ನು ಕೆಳಗಿಳಿಸಿ ಬೆಂಕಿ ಹಚ್ಚಲಾಯಿತು. ಬ್ಯೂಗಲ್ನ ನಾದಕ್ಕೆ ಸರಿಯಾಗಿ ಭಾರತೀಯರ ತ್ರಿವರ್ಣ ರಾಷ್ಟ್ರಧ್ವಜ ಮೇಲೇರುತ್ತದೆ. ರಾಷ್ಟ್ರಧ್ವಜಕ್ಕೆ ಗೌರವಾರ್ಥವಾಗಿ ಎಲ್ಲರೂ ಮೂರು ಸುತ್ತು ಗುಂಡುಗಳನ್ನು ಹಾರಿಸಿ ‘ವಂದೇ ಮಾತರಂ’ ಮತ್ತು ‘ಇನ್ಕಿಲಾಬ್ ಜಿಂದಾಬಾದ್’ ಎಂದು ಜಯಘೋಷ ಕೂಗುತ್ತಾರೆ. ಈಗ ಪೆÇಲೀಸ್ ಲೈನ್ಸ್ ಶಸ್ತ್ರಾಗಾರ ‘ಭಾರತೀಯ ಗಣತಂತ್ರ ಸೇನೆ’ಯ ಮುಖ್ಯ ಕಚೇರಿಯಾಗುತ್ತದೆ.
ಅಷ್ಟರಲ್ಲಿ ಅಂಬಿಕಾ ಚಕ್ರವರ್ತಿ ಹಾಗೂ ಆತನ ತಂಡದವರು ಬಂದು ಸೇರುತ್ತಾರೆ. ಅಂಬಿಕಾ ದಾ ಟೆಲಿಫೆÇೀನ್ ಮತ್ತು ಟೆಲಿಗ್ರಾಫ್ ಕಚೇರಿಗಳನ್ನು ಧ್ವಂಸಗೊಳಿಸಿದ ಸಂಗತಿಯನ್ನು ಮಾಸ್ತರ್ ದಾಗೆ ಒಪ್ಪಿಸುತ್ತಾನೆ. ಈಗ ಬಾಕಿ ಇರುವುದು ಯೂರೋಪಿಯನ್ ಕ್ಲಬ್ ಮೇಲಿನ ದಾಳಿಯ ಪರಿಣಾಮ. ಪೆÇಲೀಸ್ ಲೈನ್ಸ್ಗೆ ಸಮೀಪದಲ್ಲಿರುವ ಯೂರೋಪಿಯನ್ ಕ್ಲಬ್ ಮೇಲೆ ದಾಳಿ ಮಾಡಲು ನರೇಶ್ ರಾಯ್, ಬಿಧು ಭಟ್ಟಾಚಾರ್ಜಿ, ತ್ರಿಪುರ ಸೇನ್, ಹರಿಗೋಪಾಲ ಬಾಲ್, ಅಮರೇಂದ್ರ ನಂದಿ, ಮತ್ತು ಮನೋರಂಜನ ಸೇನ್ ಬೇಬಿ ಆಸ್ಟಿನ್ ಕಾರಿನಲ್ಲಿ ಹೋಗಿರುತ್ತಾರೆ. ಅವರು ಬಾಂಬ್ ಮತ್ತು ಚೂರಿಗಳನ್ನು ಕೊಂಡೊಯ್ದಿದ್ದರು. ಇಷ್ಟು ವೇಳೆಗಾಗಲೇ ಅವರು ಹಿಂತಿರುಗಬೇಕಿತ್ತು ಎಂದು ಎಲ್ಲರೂ ಚಿಂತಾಕ್ರಾಂತರಾಗಿ ಅದೇ ದಿಕ್ಕಿನತ್ತ ನೋಡುತ್ತಿರುವಂತೆ ಬೇಬಿ ಆಸ್ಟಿನ್ ಕಾರು ನಿಧಾನವಾಗಿ ವಾಟರ್ ಟ್ಯಾಂಕ್ ಬಳಿ ಬಂದು ನಿಂತಿತು. ಅದರಿಂದ ಕೆಳಗಿಳಿದ ನರೇಶ್ ರಾಯ್ ಮತ್ತು ಸಂಗಡಿಗರು ಸೋತ ಮುಖ ಹೊತ್ತು ಮಾಸ್ತರ್ ದಾ ಬಳಿ ಬರುತ್ತಾರೆ. ಅಲ್ಲಿ ಅವರು ತಲಪಿದಾಗ ಕ್ಲಬ್ ಸಂಪೂರ್ಣವಾಗಿ ಖಾಲಿಯಾಗಿತ್ತು. ಅಲ್ಲಿದ್ದ ಅಡುಗೆಯವರು ಮತ್ತು ಸೇವಕರು ಇವರನ್ನು ಕಂಡು ಗಾಬರಿಯಿಂದ ಕೂಗತೊಡಗಿದರು. ಅಂದು ಗುಡ್ ಫ್ರೈಡೆ! ಬಂದಿದ್ದ ಸಾಹೇಬರೆಲ್ಲ 8-9 ಗಂಟೆಗೆ ಹೊರಟು ಮನೆ ಸೇರಿದ್ದರು. ಇದನ್ನೆಲ್ಲ ಮಾಸ್ತರ್ ದಾಗೆ ಹೇಳುವಾಗ ನರೇಶನ ಮುಖದಲ್ಲಿ ಹತಾಶೆ ತುಳುಕುತ್ತಿದೆ. ಆದರೆ ಮಾಸ್ತರ್ ದಾ ಆತನಿಗೆ ಸಾಂತ್ವನ ಹೇಳುತ್ತಾನೆ.
ಅದೇ ದಿನ, ಅದೇ ಸಮಯ! ರಾತ್ರಿ 10.00 ಗಂಟೆ! ಚಿತ್ತಗಾಂವ್ನಿಂದ ಪಹಾಡ್ತಲಿಗೆ ಹೋಗುವ ಹೆದ್ದಾರಿಯ ಪಶ್ಚಿಮ ದಿಕ್ಕಿನ ಹೊರವಲಯದಲ್ಲಿ ಸಹಾಯಕ ಸೈನ್ಯಪಡೆಯ ಶಸ್ತ್ರಾಗಾರದ ಮೇಲಿನ ದಾಳಿಗಾಗಿ ಮತ್ತೊಂದು ತಂಡ ಹೊರಡುತ್ತದೆ. ಶಸ್ತ್ರಾಗಾರದ ಸುತ್ತಲಿನ ಗುಡ್ಡಗಳ ಮೇಲೆ ಉನ್ನತ ದರ್ಜೆಯ ಬ್ರಿಟಿಷ್ ಸರಕಾರಿ ಹಾಗೂ ರೈಲ್ವೇ ಅಧಿಕಾರಿಗಳು, ಆಂಗ್ಲೊ ಇಂಡಿಯನ್ ಸಮುದಾಯದ ಶ್ರೀಮಂತರು, ಯೂರೋಪಿಯನ್ ಗಣ್ಯವ್ಯಕ್ತಿಗಳ ಆವಾಸ ಸ್ಥಾನಗಳಿವೆ. ಮಾಖನ್ ಘೋಷಾಲ್ ಓಡಿಸುತ್ತಿರುವ ಡಾಡ್ಜ್ ಕಾರಿನಲ್ಲಿ ತಂಡದ ನಾಯಕರಾದ ಲೋಕನಾಥ್ ಬಾಲ್ ಮತ್ತು ನಿರ್ಮಲ ಸೇನ್ ಕುಳಿತಿದ್ದಾರೆ. ಅವರೊಂದಿಗೆ ರಜತ್ ಸೇನ್, ಸುಬೋಧ್ ಚೌಧರಿ, ಫಣಿ ನಂದಿ ಕುಳಿತಿದ್ದಾರೆ. ಶಾಂತಿ ನಾಗ್, ನೇತಾಯ್ ಘೋಷ್, ಕ್ಷಿರೋಧ್ ಬ್ಯಾನರ್ಜಿ ಮತ್ತು ಪ್ರಭಾಸ್ ಬಾಲ್ ಕಾಲ್ನಡಿಗೆಯಲ್ಲಿ ಅವರನ್ನು ಹಿಂಬಾಲಿಸುತ್ತಿದ್ದಾರೆ. ಸೈನಿಕ ಸಮವಸ್ತ್ರಗಳನ್ನು ಧರಿಸಿ ಆಯುಧಗಳನ್ನು ಹಿಡಿದಿದ್ದ ಅವರು ಶಸ್ತ್ರಾಗಾರರ ಸುತ್ತಲೂ ಅಡಗಿ ಕುಳಿತುಕೊಳ್ಳುತ್ತಾರೆ.
ಮಣಿದ ಶಸ್ತ್ರಾಗಾರ
ಶಸ್ತ್ರಾಗಾರದ ಕಟ್ಟಡದ ಬಳಿ ಬರುತ್ತಿದ್ದಂತೆ ಮಾಖನ್ ಘೋಷಾಲ್ ಕಾರನ್ನು ನಿಲ್ಲಿಸುತ್ತಾನೆ. ಹಿಂದಿನಿಂದ ಕೆಳಗಿಳಿದ ಕ್ರಾಂತಿಕಾರಿ ಒಬ್ಬ ಸೈನಿಕನಂತೆ ಖಡಕ್ ಸೆಲ್ಯೂಟ್ನೊಂದಿಗೆ ಕಾರಿನ ಬಾಗಿಲನ್ನು ತೆರೆದಾಗ ಉನ್ನತ ದರ್ಜೆಯ ಸೈನಿಕ ಅಧಿಕಾರಿಗಳ ಸಮವಸ್ತ್ರವನ್ನು ಧರಿಸಿದ್ದ ಲೋಕನಾಥ್ ಬಾಲ್ ಮತ್ತು ನಿರ್ಮಲ್ ಸೇನ್ ಕೆಳಗಿಳಿದು ಮೆಟ್ಟಿಲುಗಳನ್ನು ಏರತೊಡಗಿದರು. ಅವರ ಹಿಂದೆ ಇನ್ನಿಬ್ಬರು ಕ್ರಾಂತಿಕಾರಿಗಳು ಅಂಗರಕ್ಷಕರಂತೆ ಹಿಂಬಾಲಿಸುತ್ತಾರೆ. ಯಾರೋ ಉನ್ನತ ಅಧಿಕಾರಿಗಳು ಬಂದಿದ್ದಾರೆಂದು ಭಾವಿಸಿದ ಕಾವಲುಗಾರ ಕೈಲಿದ್ದ ರೈಫಲ್ಲನ್ನು ಗೌರವಸೂಚಕವಾಗಿ ಹಿಡಿದು ಬೂಟ್ ಕಾಲುಗಳನ್ನು ಖಡಕ್ಕಾಗಿ ಜೋಡಿಸುವಷ್ಟರಲ್ಲಿ ಲೋಕನಾಥ್ ಬಾಲ್ ಮತ್ತು ನಿರ್ಮಲ್ ಸೇನ್ರವರ ಕೈಲಿದ್ದ ರಿವಾಲ್ವರುಗಳು ಘರ್ಜಿಸುತ್ತವೆ. ಆತ ಕುಸಿದು ಬೀಳುತ್ತಿದ್ದಂತೆ ಸುಬೋಧ್ ಮತ್ತು ರಜತ್ ಆತನ ಕೈಲಿದ್ದ ರೈಫಲ್ ಕಿತ್ತುಕೊಳ್ಳುತ್ತಾರೆ. ಅಲ್ಲಿಯೇ ವೆರಾಂಡಾದಲ್ಲಿದ್ದ ಮತ್ತೆರಡು ರೈಫಲ್ಗಳು ಅವರ ಕೈ ಸೇರುತ್ತವೆ. ನಿರ್ಮಲ್ ದಾ, ರಜತ್ ಮತ್ತಿತರರು ಕಾವಲುಗಾರರ ಕೋಣೆಯತ್ತ ಧಾವಿಸಿ ಗುಂಡುಗಳನ್ನು ಹಾರಿಸತೊಡಗಿದರು. ಮಲಗಿದ್ದ ಕಾವಲುಗಾರನೊಬ್ಬ ಪಕ್ಕದಲ್ಲಿದ್ದ ರೈಫಲ್ಗೆ ಕೈ ಹಾಕುತ್ತಿದ್ದಂತೆ ಕ್ರಾಂತಿಕಾರಿಗಳ ಗುಂಡು ಆತನನ್ನು ಗಾಯಗೊಳಿಸುತ್ತದೆ. ಮಿಕ್ಕವರೆಲ್ಲ ಓಡಿ ಹೋಗುತ್ತಾರೆ. ಅಷ್ಟರಲ್ಲಿ ಹೊರಗೆ ಕಾಯುತ್ತಿದ್ದ ಮಿಕ್ಕ ನಾಲ್ವರು ಕ್ರಾಂತಿಕಾರಿಗಳು ಬಂದು ಇತರರನ್ನು ಸೇರಿಕೊಳ್ಳುತ್ತಾರೆ. ಕೇವಲ ಹತ್ತು ಕ್ರಾಂತಿಕಾರಿಗಳು, ಆರು ರಿವಾಲ್ವರ್-ಪಿಸ್ತೂಲು ಮತ್ತು ಎರಡು ಬಂದೂಕುಗಳ ಜೊತೆಗೆ ಕಾವಲುಗಾರರಿಂದ ಕಸಿದುಕೊಂಡ ನಾಲ್ಕಾರು ರೈಫಲ್ಗಳ ಸಾಹಸಕ್ಕೆ ಸಹಾಯಕ ಸೈನ್ಯ ಪಡೆಯ ಶಸ್ತ್ರಾಗಾರ ಮಣಿದಿತ್ತು.
ಹೊರಗಿನ ಗದ್ದಲವನ್ನು ಕೇಳಿ ತನ್ನ ಬಂಗಲೆಯಲ್ಲಿದ್ದ ಶಸ್ತ್ರಾಗಾರದ ನಿರ್ವಾಹಕ ಸಾರ್ಜಂಟ್ ಮೇಜರ್ ಫರೇಲ್ ‘ಯಾರದು? ನಿಮಗೆಲ್ಲ ಏನು ಬೇಕು?’ ಎಂದು ಪ್ರಶ್ನಿಸುತ್ತ ಶಸ್ತ್ರಾಗಾರದತ್ತ ಧಾವಿಸುತ್ತಾನೆ. ಅಷ್ಟರಲ್ಲಿ ಕಾವಲು ಕಾಯುತ್ತಿದ್ದ ಶಾಂತಿನಾಗ್ ಬಂದೂಕಿನಿಂದ ಆತನನ್ನು ತೀವ್ರವಾಗಿ ಗಾಯಗೊಳಿಸಿದಾಗ ಫರೇಲ್ ತನ್ನ ಪತ್ನಿಗೆ ಪೆÇಲೀಸರಿಗೆ ಫೆÇೀನ್ ಮಾಡುವಂತೆ ಕೂಗಿಕೊಂಡ. ಹತ್ತಿರದಲ್ಲೇ ಇದ್ದ ಲೋಕನಾಥ್ ಬಾಲ್ ಫರೇಲ್ನನ್ನು ಬಯೋನೆಟ್ನಿಂದ ಇರಿಯುವಂತೆ ಆದೇಶಿಸಿದ. ಕ್ರಾಂತಿಕಾರಿಯೊಬ್ಬ ಫರೇಲ್ನನ್ನು ಇರಿದು ಕೊಂದಾಗ ವೆರಾಂಡಾದಲ್ಲಿ ನಿಂತಿದ್ದ ಆತನ ಪತ್ನಿ ಆರ್ತಳಾಗಿ ಕೂಗುತ್ತಾಳೆ. ಲೋಕನಾಥ್ ಬಾಲ್ ಆಕೆ ಮತ್ತು ಆಕೆಯ ಮಗುವಿಗೆ ಯಾವ ಹಾನಿಯೂ ಆಗುವುದಿಲ್ಲ ಎಂದು ಭರವಸೆ ನೀಡಿ ಒಳಹೋಗುವಂತೆ ಆದೇಶಿಸುತ್ತಾನೆ. ಇಡೀ ಶಸ್ತ್ರಾಗಾರ ಈಗ ಕ್ರಾಂತಿಕಾರಿಗಳ ಕೈವಶವಾಗಿತ್ತು.
ಶಸ್ತ್ರಾಗಾರದ ಭಂಡಾರದ ಬಾಗಿಲನ್ನು ಒಡೆಯುವುದು ಕ್ರಾಂತಿಕಾರಿಗಳ ಮುಂದಿನ ಕೆಲಸವಾಗಿದೆ. ಕಬ್ಬಿಣದ ಬಾಗಿಲಿಗೆ ತಾವು ತಂದಿರುವ ಹಗ್ಗವನ್ನು ಕಟ್ಟಿ ಅದನ್ನು ಕಾರಿನ ಹಿಂಬದಿಗೆ ಕಟ್ಟಲಾಗುತ್ತದೆ. ಕಾರನ್ನು ವೇಗವಾಗಿ ಮುಂದಕ್ಕೆ ಓಡಿಸಿದ ರಭಸಕ್ಕೆ ಬಾಗಿಲುವಾಡದೊಂದಿಗೆ ಬಾಗಿಲೂ ಕುಸಿದು ಬೀಳುತ್ತದೆ. ಒಳಗೆ ಸಾಲುಸಾಲು ರೈಫಲ್ಗಳು, ರಿವಾಲ್ವರ್ಗಳು ಹಾಗೂ ಏಳು ಲೇವೈಸ್ ಗನ್ಗಳನ್ನು ಜೋಡಿಸಲಾಗಿದೆ. ಆದರೆ? ಆದರೆ? ಅವಕ್ಕೆ ಬೇಕಾದ ಕಾಡತೂಸುಗಳೆಲ್ಲಿ? ಕ್ರಾಂತಿಕಾರಿಗಳು ತವಕದಿಂದ ಅತ್ತಿತ್ತ ಹುಡುಕಾಡತೊಡಗಿದರು. ಇದ್ದಬದ್ದ ಪೆಟ್ಟಿಗೆ, ಟ್ರಂಕ್ಗಳನ್ನು ಬುಡಮೇಲು ಮಾಡುತ್ತಾರೆ. ಅವುಗಳಲ್ಲಿರುವುದು ಸೈನಿಕರ ಕಾಲಿನ ಬೂಟುಗಳು, ಬೆಲ್ಟ್ಗಳು ಮಾತ್ರ! ಎಲ್ಲಿಯೂ ಕಾಡತೂಸುಗಳ ಸುಳಿವೂ ಇಲ್ಲ.
ಅಷ್ಟರಲ್ಲಿ ಸಾರ್ಜೆಂಟ್ ಕಲಿನ್ ಕಾರಿನಲ್ಲಿ ಶಸ್ತ್ರಾಗಾರವನ್ನು ಪ್ರವೇಶಿಸುತ್ತಾನೆ. ಆತ ಇಳಿಯುತ್ತಿದ್ದಂತೆ ಆತನ ಮೇಲೆ ಗುಂಡಿನ ಮಳೆ ಸುರಿಯಲಾರಂಭಿಸಿದಾಗ ಗಾಯಗೊಂಡ ಆತ ಪಕ್ಕದಲ್ಲಿದ್ದ ಪೆÇದೆಯೊಳಗೆ ಅಡಗಿಕೊಳ್ಳುತ್ತಾನೆ. ಕೆಲವೇ ನಿಮಿಷಗಳಲ್ಲಿ ತನ್ನ ಕೆಲವು ಸಂಗಾತಿಗಳೊಂದಿಗೆ ಬಂದ ಶಸ್ತ್ರಾಗಾರದ ಕಮಾಂಡಂಟ್ ಕ್ಯಾಪ್ಟನ್ ಟೇಟ್ ಶಸ್ತ್ರಾಗಾರವನ್ನು ಪ್ರವೇಶಿಸಲು ಮುಂದಾಗುತ್ತಿದ್ದಂತೆ ಲೋಕನಾಥ್ ಬಾಲ್ ಉಚ್ಚ ಕಂಠದಲ್ಲಿ ‘ನಿಲ್ಲಿ, ಒಂದಡಿ ಮುಂದಿಟ್ಟರೂ ನಿಮ್ಮನ್ನೆಲ್ಲ ಗುಂಡಿಟ್ಟು ಕೊಲ್ಲಲಾಗುವುದು’ ಎಂದು ಎಚ್ಚರಿಸಿದ. ಅಧಿಕಾರಿಯಾದ ತನ್ನನ್ನೇ ಆದೇಶಿಸುವವರನ್ನು ಕಂಡ ಕ್ಯಾಪ್ಟನ್ ಟೇಟ್ ‘ನಿಲ್ಲಿ? ಏ ಬಂಗಾಳಿ ನಾಯಿ! ನಾವು ನಿಲ್ಲಬೇಕೆ?’ ಎಂದು ತಿರಸ್ಕಾರದಿಂದ ಕೂಗುತ್ತಾನೆ. ತಕ್ಷಣ ಲೋಕನಾಥ್ ಬಾಲ್ ‘ಬಾಂಬ್ಗಳನ್ನು ಕೈಗೆತ್ತಿಕೊಳ್ಳಿ. ಬತ್ತಿ ಎಳೆದು ಬಿಸಾಡಿ’ ಎಂದು ಆದೇಶಿಸಿದ. ಕಂಗಾಲಾದ ಕ್ಯಾಪ್ಟನ್ ಟೇಟ್ ಮತ್ತು ಸಂಗಡಿಗರು ಕ್ಷಣಾರ್ಧದಲ್ಲಿ ಅಲ್ಲಿಂದ ಪರಾರಿಯಾದರು.
ವಿಫಲ ಪ್ರಯತ್ನ
ಜ್ವರದಿಂದ ಮೈ ಸುಡುತ್ತಿದ್ದ ಗಣೇಶ್ ಘೋಷ್ನನ್ನು ಪೆÇಲೀಸ್ ಲೈನ್ಸ್ನಲ್ಲಿಯೇ ಬಿಟ್ಟು ಇಲ್ಲಿಯವರ ಸಹಾಯಕ್ಕಾಗಿ ಅನಂತ ಸಿಂಗ್, ಹರಿಗೋಪಾಲ ಬಾಲ್, ಹಿಮಾಂಶು ಸೇನ್ ಮತ್ತು ಮನೋರಂಜನ್ ಸೇನ್ ಶವ್ರೋಲೆಟ್ ಕಾರಿನಲ್ಲಿ ಧಾವಿಸಿದರು. ಸಹಾಯಕ ಸೇನೆಯ ಶಸ್ತ್ರಾಗಾರದ ಬಳಿ ಬಂದ ಅವರನ್ನು ‘ವಂದೇ ಮಾತರಂ’ ಮತ್ತು ‘ಕ್ರಾಂತಿ ಚಿರಾಯುವಾಗಲಿ’ ಜಯಘೋಷ ಆಹ್ವಾನಿಸುತ್ತದೆ. ಒಳಬಂದು ಅವರು ಲೋಕನಾಥ್ ಬಾಲ್ನನ್ನು ಅಭಿನಂದಿಸಿದಾಗ ಲೋಕನಾಥ್ ಅಲ್ಲಿ ರೈಫಲ್ಗಳಿಗೆ ಉಪಯುಕ್ತ ಗುಂಡುಗಳು ಸಿಕ್ಕಿಲ್ಲ ಎಂದು ತಿಳಿಸುತ್ತಾನೆ. ಇದರಿಂದ ಎಲ್ಲರೂ ದಿಗ್ಮೂಢರಾಗಿ ನಿಲ್ಲುತ್ತಾರೆ. ಕ್ರಾಂತಿಕಾರಿಗಳ ಈ ಒಟ್ಟಾರೆ ವಿಫಲ ಪ್ರಯತ್ನಕ್ಕೆ ನಾನ್ನೂರು ರೈಫಲ್ಗಳು, ಏಳು ಲೇವೈಸ್ ಗನ್ಗಳು ಅವರತ್ತ ನೋಡುತ್ತ ಮುಸಿಮುಸಿ ನಕ್ಕಂತಾಯಿತು. ಅವುಗಳಿಗೆ ಬೇಕಾದ ಗುಂಡುಗಳು ಕ್ರಾಂತಿಕಾರಿಗಳ ಕೈಹತ್ತಿದ್ದರೆ ಚಿತ್ತಗಾಂವ್ನ ಇತಿಹಾಸವೇ ಬದಲಾಗುತ್ತಿತ್ತು.
ತಕ್ಷಣದಲ್ಲಿ ಎಲ್ಲ ರಿವಾಲ್ವರುಗಳು, ಕೆಲವು ರೈಫಲ್ ಮತ್ತು ಲೇವೈಸ್ ಗನ್ಗಳನ್ನು ಎರಡು ಕಾರುಗಳಲ್ಲಿ ತುಂಬಿಕೊಂಡು ಮಿಕ್ಕವನ್ನು ಶತ್ರುಗಳಿಗೆ ದಕ್ಕದಂತೆ ಅಗ್ನಿಗಾಹುತಿ ಮಾಡಬೇಕೆಂದು ನಿರ್ಧರಿಸಲಾಯಿತು. ಎಲ್ಲರೂ ಸೇರಿ ರೈಫಲ್ಗಳನ್ನು ಹೊತ್ತು ತಂದು ಗುಡ್ಡೆ ಹಾಕುತ್ತಾರೆ. 5-6 ಡಬ್ಬಗಳಲ್ಲಿ ತಾವು ತಂದಿರುವ ಪೆಟ್ರೋಲನ್ನು ಸುರಿದಾದ ಬಳಿಕ ಸುಬೋಧ್ ಚೌಧರಿ ಮತ್ತು ರಜತ್ ಸೇನ್ ಅವುಗಳಿಗೆ ಬೆಂಕಿ ಹಚ್ಚುತ್ತಾರೆ. ‘ವಂದೇ ಮಾತರಂ’ ಮತ್ತು ‘ಇನ್ಕಿಲಾಬ್ ಜಿಂದಾಬಾದ್’ ಘೋಷದೊಂದಿಗೆ ಎಲ್ಲರೂ ಹೊರ ಹೊರಟಾಗ ಶಸ್ತ್ರಾಗಾರದಿಂದ 50-60 ಗಜ ದೂರದಲ್ಲಿ ನಿಂತಿರುವ ಕಾರೊಂದನ್ನು ಗಮನಿಸಿ ಎರಡೂ ಕೈಗಳಲ್ಲಿ ರಿವಾಲ್ವರನ್ನು ಹಿಡಿದ ಅನಂತ ಸಿಂಗ್ ಅದರತ್ತ ನಡೆದಾಗ ಅದರ ಹಿಂದಿನ ಸೀಟ್ನಲ್ಲಿ ತನ್ನ ಕೈಯಲ್ಲಿ ಬಂದೂಕನ್ನು ಹಿಡಿದಿದ್ದ ಜಿಲ್ಲಾ ದಂಡಾಧಿಕಾರಿಯ ಅಂಗರಕ್ಷಕ ಸತ್ತು ಬಿದ್ದಿದ್ದಾನೆ. ದಂಡಾಧಿಕಾರಿ ಆತನ ಹೆಣವನ್ನು ಬಿಟ್ಟು ಪರಾರಿಯಾಗಿದ್ದ.
ಸಹಾಯಕ ಸೈನ್ಯದ ಶಸ್ತ್ರಾಗಾರವನ್ನು ಅಗ್ನಿಗಾಹುತಿ ನೀಡಿದ ಕ್ರಾಂತಿಕಾರಿ ಪಡೆ ಪೆÇಲೀಸ್ ಲೈನ್ಸ್ನತ್ತ
ಹಿಂತಿರುಗಿದಾಗ ಮಧ್ಯರಾತ್ರಿ 12.00 ಗಂಟೆಯಾಗಿತ್ತು. ಅಲ್ಲಿಯ ವಿದ್ಯಮಾನಗಳನ್ನು ಮಾಸ್ತರ್ ದಾಗೆ ತಿಳಿಸಿದಾಗ ಆತ ಖಿನ್ನನಾಗಿ ನಿಲ್ಲುತ್ತಾನೆ. ತಮ್ಮ ಯೋಜನೆಯಂತೆ ಎರಡೂ ಶಸ್ತ್ರಾಗಾರಗಳನ್ನು ವಶಪಡಿಸಿಕೊಂಡಾಗಿದೆ. ಟೆಲಿಫೆÇೀನ್ ಮತ್ತು ಟೆಲಿಗ್ರಾಫ್ ಸಂಪರ್ಕ ಸಾಧನಗಳನ್ನು ಧ್ವಂಸಗೊಳಿಸಿ, ರೈಲ್ವೇ ಹಳಿಗಳನ್ನು ಕಿತ್ತು ಶತ್ರುಗಳಿಗೆ ಹೊರಗಿನ ಸಹಾಯ ಬಾರದಂತೆ ಮಾಡಲಾಗಿತ್ತು. ಇಷ್ಟು ಹೊತ್ತಿಗಾಗಲೇ ನಗರದಾದ್ಯಂತ ಕ್ರಾಂತಿಕಾರಿ ಕಾರ್ಯಕರ್ತರು ‘ಹಂಗಾಮಿ ಸರಕಾರ’ದ ಘೋಷಣೆಯನ್ನು ಹಂಚಿರುತ್ತಾರೆ. ನೂರಾರು ಸ್ವಯಂಸೇವಕರಿಗೆ ಕ್ರಾಂತಿಕಾರಿ ಸೇನೆ ಸೇರುವಂತೆ ಆಹ್ವಾನಿಸುವ ಕರಪತ್ರಗಳನ್ನು ಅಂಟಿಸಲಾಗಿದೆ. ಆದರೆ ಅವರಿಗೆಲ್ಲ ಆಯುಧಗಳು ಎಲ್ಲಿ? ಅತ್ಯಾಧುನಿಕ ಆಯುಧಗಳಿಂದ ಸುಸಜ್ಜಿತರಾದ ಶತ್ರುಗಳನ್ನು ಅವರು ಹೇಗೆ ಎದುರಿಸುವರು?
ಒಂದೆಡೆ ಗೆಲವಿನ ಸಂಭ್ರಮ, ಮತ್ತೊಂದೆಡೆ ಅತ್ಯಾಧುನಿಕ ಆಯುಧಗಳು ಕೈ ಸಿಗದ ಖಿನ್ನತೆಯಲ್ಲಿ ಕ್ರಾಂತಿಕಾರಿಗಳೆಲ್ಲ ಮುಳುಗಿರುವಾಗ ಇದ್ದಕ್ಕಿದ್ದಂತೆ ಶಸ್ತ್ರಾಗಾರದ ಆಗ್ನೇಯದಲ್ಲಿರುವ ನೀರಿನ ಟ್ಯಾಂಕ್ ಮೇಲಿಂದ ಲೇವೈಸ್ ಗನ್ನ ಆರ್ಭಟ ಕೇಳಿ ಬರುತ್ತದೆ. ಎಲ್ಲರೂ ಬಂದೂಕುಗಳನ್ನು ಹಿಡಿದು ಸನ್ನದ್ಧರಾಗಿ ನೆಲದ ಮೇಲೆ ಮಲಗುತ್ತಾರೆ. ‘ವಂದೇ ಮಾತರಂ’ ಘೋಷದೊಂದಿಗೆ ಅರವತ್ತು ಬಂದೂಕುಗಳು ಒಮ್ಮೆಲೇ ವಾಟರ್ ಟ್ಯಾಂಕ್ನತ್ತ ಮೊಳಗಲು ಪ್ರಾರಂಭಿಸಿದವು. ಐದಾರು ನಿಮಿಷಗಳ ಕಾದಾಟ. ಎಡೆಬಿಡದೆ ವಂದೇ ಮಾತರಂ ಘೋಷಣೆ, ಗುಂಡುಗಳ ಸುರಿಮಳೆ! ಲೇವೈಸ್ ಗನ್ ತೆಪ್ಪಗಾಯಿತು. ಅದನ್ನು ಹೊತ್ತು ತಂದವರು ಬಾಲ ಮುದುರಿ ಪರಾರಿಯಾದರು.
ಯಶಸ್ಸಿನ ಮೇಲೆ ಯಶಸ್ಸು! ಶತ್ರುವಿನ ಭಯ ನಿವಾರಣೆಯಾದ ಕೂಡಲೆ ಎಲ್ಲರೂ ಮಾಸ್ತರ್ ದಾ ಮುಂದೆ ಸಾಲಾಗಿ ನಿಂತು ವಂದನೆ ಸಲ್ಲಿಸುತ್ತಾರೆ. ಸೂರ್ಯ ಸೇನ್ ತನ್ನ ಜೇಬಿನಿಂದ ಒಂದು ಪತ್ರವನ್ನು ತೆಗೆದು ಸ್ಫುಟವಾಗಿ ಓದತೊಡಗುತ್ತಾನೆ. ಅದುವೇ ‘ಚಿತ್ತಗಾಂವ್ ಕ್ರಾಂತಿಕಾರಿ ಹಂಗಾಮಿ ಸರಕಾರ’ದ ರಚನೆಯ ಘೋಷಣಾ ಪತ್ರ. ಅದರಲ್ಲಿ ಚಿತ್ತಗಾಂವ್ ಮತ್ತು ಭಾರತದ ಎಲ್ಲ ನಾಗರಿಕರಿಗೆ ಕ್ರಾಂತಿಕಾರಿಗಳ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೈ ಜೋಡಿಸಲು ಮನವಿ ಮಾಡಿಕೊಳ್ಳಲಾಗಿದೆ. ಮಾಸ್ತರ್ ದಾ ಓದಿ ಮುಗಿಸಿದ ತಕ್ಷಣ ‘ನಮ್ಮ ಪ್ರಾದೇಶಿಕ ಕ್ರಾಂತಿಕಾರಿ ಸರಕಾರದ ಗೌರವಾರ್ಥ ಮೂರು ಸುತ್ತು ಗುಂಡುಗಳನ್ನು ಹಾರಿಸಿ’ ಎಂದು ಆದೇಶಿಸಲಾಯಿತು. ಕ್ರಾಂತಿಕಾರಿ ಸೇನೆಯ ‘ಚಿತ್ತಗಾಂಗ್ ಬ್ರಿಗೇಡ್’ ವಂದೇ ಮಾತರಂ ಘೋಷಣೆಯೊಂದಿಗೆ ಉತ್ಸಾಹ, ಸಂತೋಷ ಮತ್ತು ಉನ್ಮಾದದಿಂದ ಶಿಳ್ಳೆ ಹಾಕುತ್ತ ಬಂದೂಕುಗಳಿಂದ ಮೂರು ಸುತ್ತು ಗುಂಡು ಹಾರಿಸಿದರು.
ಕ್ರಾಂತಿಗೆ ಹತ್ತಿದ ಕಿಡಿ ಕೊನೆಯದಾಗಿ ಒಂದು ಕಾರ್ಯ ಉಳಿದಿದೆ. ಶಸ್ತ್ರಾಗಾರದಲ್ಲಿ ಮಿಕ್ಕಿರುವ ಬಂದೂಕುಗಳು ಶತ್ರುಗಳ ಪಾಲಿಗೆ ದಕ್ಕದಂತೆ ಬೆಂಕಿ ಹಚ್ಚುವ ಕೆಲಸ! ಪ್ರತಿಯೊಬ್ಬರಿಗೂ ಕೈಲಾದಷ್ಟು ಬಂದೂಕು, ರಿವಾಲ್ವರು ಮತ್ತು ಕಾಡತೂಸುಗಳನ್ನು ಎತ್ತಿಕೊಳ್ಳಲು ಹೇಳಿ ಮಿಕ್ಕದ್ದನ್ನೆಲ್ಲ ನಾಶ ಮಾಡಲು ನಿರ್ಧರಿಸಲಾಯಿತು. ಪೆಟ್ರೋಲ್ ಸುರಿದು ಶಸ್ತ್ರಾಗಾರದ ಕಟ್ಟಡಕ್ಕೆ ಬೆಂಕಿ ಇಡುವ ಕೆಲಸ ಹಿಮಾಂಶು ಸೇನ್ಗೆ ವಹಿಸಲಾಗಿದೆ. ಕಟ್ಟಡದ ಸುತ್ತ ಪೆಟ್ರೋಲ್ ಸುರಿಯುವಾಗ ಸ್ವಲ್ಪ ಅಜಾಗರೂಕನಾಗಿದ್ದ ಹಿಮಾಂಶುವಿನ ಬಟ್ಟೆಯ ಮೇಲೂ ಪೆಟ್ರೋಲ್ ಸಿಡಿಯುತ್ತದೆ. ಬೆಂಕಿ ಕಡ್ಡಿ ಗೀರಿ ಎಸೆಯುವಾಗ ಆತನ ಬಟ್ಟೆಗೂ ಬೆಂಕಿ ಹತ್ತಿದ ಪರಿಣಾಮವಾಗಿ ಧಗಧಗಿಸುವ ಬೆಂಕಿಯ ಉಂಡೆಯಂತೆ ಅತ್ತಿತ್ತ ಉರುಳಾಡುವಂತಾಯಿತು. ತೀವ್ರವಾಗಿ ಸುಟ್ಟ ಹಿಮಾಂಶುವನ್ನು ತಕ್ಷಣ ಕಾರಿನಲ್ಲಿ ಕುಳ್ಳಿರಿಸಿದ ಅನಂತ ಸಿಂಗ್ ವೈದ್ಯಕಿಯ ನೆರವು ಪಡೆಯಲು ಗಣೇಶ್ ಘೋಷ್, ಮಾಖನ್ ಘೋಷಾಲ್ ಮತ್ತು ಆನಂದ ಗುಪ್ತರೊಂದಿಗೆ ಅವಸರವಸರವಾಗಿ ನಗರದತ್ತ ಚಲಿಸುತ್ತಾನೆ. ಈ ಘಟನೆಯ ಬಗ್ಗೆ ಅರಿತಿರದ ಮಾಸ್ತರ್ ದಾಗೆ ತಿಳಿಸುವ ವ್ಯವಧಾನವೂ ಇರಲಿಲ್ಲ. ಎಲ್ಲವೂ ಕಣ್ಣು ರೆಪ್ಪೆ ಮಿಟುಕಿಸುವುದರಲ್ಲಿ ನಡೆದು ಹೋಯಿತು.
ಗೊಂದಲ! ಎಲ್ಲರಲ್ಲೂ ಗೊಂದಲ ತಾಂಡವವಾಡುತ್ತಿದೆ. ನಗರದತ್ತ ಹೋದವರಿಗಾಗಿ ಕಾಯಬೇಕೆ? ಕಾಯುವುದಾದರೆ ಎಷ್ಟು ಹೊತ್ತಿನವರೆಗೆ ಕಾಯಬೇಕು? ಒಮ್ಮೆ ದಾಳಿ ನಡೆಸಿ ಹಿಮ್ಮೆಟ್ಟಿರುವ ಶತ್ರು ಹೆಚ್ಚಿನ ಪಡೆಗಳೊಂದಿಗೆ ಮರಳಿ ಬಂದರೆ ಆತನನ್ನು ಪರಿಣಾಮಕಾರಿ ಆಯುಧಗಳಿಲ್ಲದೆ ಪೆÇಲೀಸ್ ಬಂದೂಕಿನಿಂದ ಎದುರಿಸುವುದು ಸಾಧ್ಯವೇ? ಅಥವಾ ಮೊದಲೇ ನಿಶ್ಚಯಿಸಲಾದಂತೆ ನಗರದೊಳಕ್ಕೆ ನುಗ್ಗಿ ಪೆÇಲೀಸ್ಠಾಣೆ, ಇಂಪೀರಿಯಲ್ ಬ್ಯಾಂಕ್, ಜೈಲು, ನ್ಯಾಯಾಲಯ, ಜಿಲ್ಲಾ ಆಡಳಿತಕಚೇರಿ ಮೊದಲಾದವುಗಳನ್ನು ವಶಕ್ಕೆ ತೆಗೆದುಕೊಳ್ಳುವುದೇ? ಕೈಗೆ ಸಿಗದ ರೈಫಲ್ಗಳು, ಯೂರೋಪಿಯನ್ ಕ್ಲಬ್ ಮೇಲೆ ವಿಫಲ ದಾಳಿ, ಶತ್ರುವಿನ ಅನಿರೀಕ್ಷಿತ ಆಗಮನ, ಕೊನೆಯಲ್ಲಿ ಕ್ರಾಂತಿಕಾರಿಯೊಬ್ಬನ ಅಗ್ನಿ ಅವಘಡ, ಆತನನ್ನು ರಕ್ಷಿಸಲು ಇಬ್ಬರು ಅತ್ಯಂತ ಪ್ರಮುಖ ಕ್ರಾಂತಿಕಾರಿಗಳು ನಗರದತ್ತ ಧಾವಿಸಿರುವುದು – ಇವೆಲ್ಲದರಿಂದ ಎಲ್ಲರ ಬುದ್ಧಿಯೂ
ಜಡ್ಡುಗಟ್ಟಿದಂತಾಗಿತ್ತು. ವಿಧಿಯ ಆಟವೇ ಬೇರೆಯಾಗಿತ್ತು. ಮುಕ್ಕಾಲು ಗಂಟೆಯಾದರೂ ಅನಂತ ಸಿಂಗ್ ಮತ್ತು ಗಣೇಶ್ ಘೋಷ್ ಬಾರದಿದ್ದಾಗ ಕ್ರಾಂತಿಕಾರಿಗಳಲ್ಲಿ ಹಿರಿಯನಾದ ಅಂಬಿಕಾ ಚಕ್ರವರ್ತಿ ಮುಂದಿನ ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳುತ್ತಾನೆ. ಉಳಿದಿದ್ದ ಕ್ರಾಂತಿಕಾರಿಗಳಿಗೆ ಶಸ್ತ್ರಾಗಾರದ ಉತ್ತರದಿಕ್ಕಿನಲ್ಲಿದ್ದ ಕಾಡಿನತ್ತ ನಡೆಯುವಂತೆ ಆದೇಶಿಸುತ್ತಾನೆ. ಕಾಡಿನ ಬದಿಯಲ್ಲೇ ಚಿಕ್ಕ ಗುಡ್ಡಗಳಿವೆ. ಹೀಗೆ ಹೋಗುತ್ತಿರುವಾಗ ದಾರಿಯಲ್ಲಿ ಕಾರೊಂದು ಬರುತ್ತಿರುವುದನ್ನು ಕಂಡು ಅದು ಬ್ರಿಟಿಷರಿರಬಹುದೆಂದು ಎಲ್ಲರೂ ಪೆÇದೆಗಳಲ್ಲಿ ಅಡಗಿಕೊಳ್ಳುತ್ತಾರೆ. ಕಾರು ಶಸ್ತ್ರಾಗಾರದ ಬಳಿ ಬಂದು ಹುಡುಕಾಡಿದ ನಂತರ ಹೊರಟು ಹೋಯಿತು. ಕಾರಿನಲ್ಲಿ ಬಂದವರು ಅನಂತ ಸಿಂಗ್, ಗಣೇಶ್ ಘೋಷ್ ಮತ್ತು ಮಾಖನ್ ಘೋಸಾಲ್! ಹಿಮಾಂಶುವನ್ನು ಆನಂದ ಗುಪ್ತನ ಮನೆಯಲ್ಲಿ ಬಿಟ್ಟು ಅವರು ಅವಸರವಸರವಾಗಿ ತಮ್ಮ ಸಂಗಾತಿಗಳನ್ನು ಹುಡುಕಿಕೊಂಡು ಬಂದಿದ್ದರು. ಹೀಗೆ ವಿಧಿಯ ವಂಚನೆಗೆ ಒಳಗಾದ ಸೈನಿಕ ರಣತಂತ್ರದ ಮೇಧಾವಿ ಅನಂತ ಸಿಂಗ್ ಮತ್ತು ಗಣೇಶ್ ಘೋಷ್ ಇಬ್ಬರೂ ಒಂದೆಡೆಯಾಗಿ ಸಮುದ್ರ ತೀರದತ್ತ ಚಲಿಸಿದರೆ ಕೇವಲ ಕ್ರಾಂತಿಕಾರಿ ಚಿಂತನೆಯ ಆಗರವಾಗಿದ್ದ ಸೂರ್ಯಸೇನ್ ಮತ್ತು ಅನನುಭವಿ ಐವತ್ತೆಂಟು ಬಾಲಕರು ಪೆÇಲೀಸ್ ಬಂದೂಕುಗಳನ್ನು ಹಿಡಿದು ಗುಡ್ಡಗಳತ್ತ ಸಾಗುತ್ತಾರೆ. ಎರಡೂ ಗುಂಪುಗಳು ಹಸಿವು, ಬಾಯಾರಿಕೆಯಿಂದ ಬಳಲಿವೆ. ಚಿತ್ತಗಾಂವ್ನಲ್ಲಿ ಅರವತ್ತು ನಾಲ್ಕು ಜನರಿಗೆ ವಿಶೇಷವಾದ ಮಾಂಸದೂಟ ಸಿದ್ಧಗೊಳಿಸಿದ ಹೊಟೇಲ್ ಮಾಲಿಕ ಮಾಕಲೇಶ್ವರ ರಹಮಾನ್ ಅವರಿಗಾಗಿ ಕಾಯುತ್ತಿದ್ದಾನೆ. ಹಸಿದ ಹೊಟ್ಟೆಗಳ ಇಂಗದ ಹಸಿವು – ಉಣ್ಣುವವರಿಲ್ಲದೆ ಪಾತ್ರೆಯಲ್ಲೇ ತಂಗಳಾದ ವಿಶೇಷ ಭೋಜನ! ವಿಧಿ ಮುಂಬರುವ ರಣಬೇಟೆಗೆ ಬಡಿಯುತ್ತಲಿದೆ ಮರಣಮೃದಂಗ!