ಈಚಿನ ದಶಕಗಳಲ್ಲಿ ಜೆನ್ ಪ್ರಸ್ಥಾನವು ವಿಶಾಲ ವಾಚಕವರ್ಗವನ್ನು ಆಕರ್ಷಿಸಿದೆ. ತಮಗಿರುವ ಜೆನ್ ಪರಿಚಯವನ್ನು ಮೆರೆಸುವುದು ಒಂದು ಮಟ್ಟದ ಫ್ಯಾಶನ್ ಆಗಿದೆಯೆಂದೂ ಹೇಳಬಹುದು. ಇದನ್ನು ತಪ್ಪೆನ್ನಬೇಕಾಗಿಲ್ಲ. ಒಂದು ಮುಖ್ಯ ಜ್ಞಾನಾಂಗದ ಹೊರಮೈಯ ಪರಿಚಯವಾದರೂ ಗಣನೀಯ ಪ್ರಮಾಣದ ಒಂದು ವರ್ಗಕ್ಕೆ ಲಭಿಸುವಂತಾಗಿರುವುದು ಅಪೇಕ್ಷಣೀಯವೇ.
ಆದರೆ ಈ ಪ್ರವೃತ್ತಿಯಲ್ಲಿ ಒಂದು ಪರಿಮಿತಿಯೂ ಉಂಟು. ಜೆನ್ ಪರಂಪರೆಯಲ್ಲಿ ಪ್ರಚಲಿತವಾದ ಆಖ್ಯಾಯಿಕೆಗಳು ತಮ್ಮ ಘಟನಾ ಸ್ವಾರಸ್ಯಗಳಿಂದಾಗಿ ಹೆಚ್ಚು ಜನರನ್ನು ಆಕರ್ಷಿಸಿವೆ. ಸಾಮಾನ್ಯ ಓದುಗರ ಗಮನವು ಕುತೂಹಲಾಂಶಗಳಲ್ಲಿ ನೆಟ್ಟಿರುತ್ತದೆ. ಆ ಘಟನೆಗಳೂ ನಿಜಜೀವನ ಪ್ರಸಂಗಗಳೂ ಯಾವ ಘನತತ್ತ್ವಗಳನ್ನು ಒಳಗೊಂಡಿರುತ್ತವೋ ಆ ಅಂಶಗಳನ್ನು ಹೃದ್ಗತ ಮಾಡಿಕೊಳ್ಳಲೆಳಸುವವರು ವಿರಳ. ಅಲ್ಲಿಯ ಧ್ಯಾನಸಾಧನಕ್ರಮಗಳಲ್ಲಿ ತೊಡಗಿಕೊಳ್ಳಲು ಯತ್ನಿಸುವವರು ಇನ್ನೂ ವಿರಳ. ಇದು ಚಿಂತನೀಯ. ಏಕೆಂದರೆ ಇಡೀ ಜೆನ್ ಪ್ರಸ್ಥಾನವು ಸಾಹಿತ್ಯಕ್ಕಿಂತ ಮಿಗಿಲಾಗಿ ಸಾಧನನಿಷ್ಠವಾದದ್ದು. ಆಂತರಂಗಿಕ ಸಾಧನೆ ಮಾಡಬಯಸುವವರು ಜೆನ್ ಪರಂಪರೆಯ ವಾಙ್ಮಯದ ಗ್ರಹಿಕೆಗೆ ಹೆಚ್ಚಿನ ಅಧಿಕಾರಿಗಳಾಗುತ್ತಾರೆ.
ಜೆನ್ ಪ್ರಸ್ಥಾನ ಸಂಬಂಧಿತ ಸಾಹಿತ್ಯವನ್ನು ಓದಲು ಕೈಗೆತ್ತಿಕೊಳ್ಳುವವರು ಮೊದಲಿಗೆ ಮನಸ್ಸಿನಲ್ಲಿ ಧರಿಸಿರಬೇಕಾದದ್ದು ಮೇಲಣ ವಾಸ್ತವವನ್ನು.
ಜೆನ್ ಪ್ರಸ್ಥಾನವು ಬೌದ್ಧಧರ್ಮದ ಒಂದು ಕವಲು ಎಂಬುದು ಪ್ರಸಿದ್ಧವಾಗಿದೆ. ಬೌದ್ಧಧರ್ಮವಾದರೋ ಭಾರತದಲ್ಲಿ ಉದಿಸಿದುದು. ಆದರೆ ಜೆನ್ ಪ್ರಸ್ಥಾನವು ಆವಿಷ್ಕಾರಗೊಂಡು ವಿಶೇಷವಾಗಿ ಪ್ರಚಲನೆ ಪಡೆದದ್ದು ಚೀನಾ ಮತ್ತು ಜಪಾನ್ ದೇಶಗಳಲ್ಲಿ. ಚೀನಾದಲ್ಲಿ ‘ಚಾನ್’ ಎಂಬ ಮತ್ತು ಜಪಾನಿನಲ್ಲಿ ‘ಜೆನ್ ’ ಎಂಬ ಅಭಿಧಾನಗಳನ್ನು ಅದು ಪಡೆದುಕೊಂಡಿತು. ಚೀನಾದಲ್ಲಿ ದೀರ್ಘಕಾಲ ರೂಢವಾಗಿದ್ದ ಕನ್ಫ್ಯೂಶಿಯನ್ ತಾತ್ತ್ವಿಕತೆಯನ್ನು ಜೆನ್ ಪ್ರಸ್ಥಾನವು ಹೆಚ್ಚು ಸೂಕ್ಷ್ಮಗೊಳಿಸಿತೆಂದು ಇರಿಸಿಕೊಳ್ಳಬಹುದು. ಚೀನಾದ ‘ತಾವೋ’ ಧಾರೆಯಲ್ಲಿ ಅಂತಿಮಲಕ್ಷ್ಯದ ಬಗೆಗೆ ಚಿಂತಿತರಾಗದೆ ಸಾಕ್ಷಾತ್ಕಾರದ ದಿಶೆಯಲ್ಲಿ ನಿರಂತರ ಸಾಧನರತರಾಗಿರಬೇಕೆಂಬ ಜಾಡಿನ ಬೋಧೆಗೆ ಪ್ರಾಧಾನ್ಯ ಇದ್ದಿತು. ಬೌದ್ಧಧಾರೆಯ ಬೋಧನೆಯಲ್ಲಾದರೋ ಸಾಧಕನ ಅಂತರ್ವೀಕ್ಷಣೆ ದೃಢಿಷ್ಠವಾದಲ್ಲಿ ಸತ್ಯದರ್ಶನ ಯಾವುದೇ ಕ್ಷಣದಲ್ಲಿ ಶಕ್ಯವೆಂದು ಹೇಳಲಾಯಿತು.
ನೂತನವೆನಿಸುವ ಯಾವುದೇ ಮಾರ್ಗವು ತನ್ನದೇ ಆದ ಪ್ರತ್ಯೇಕತೆಯನ್ನು ಸ್ಥಾಪಿಸಿಲೆಳಸುವುದು ಸ್ವಾಭಾವಿಕ. ಅದರಂತೆ ತಾವೋಯಿಸಂ ಹಾಗೂ ಜೆನ್ ಧಾರೆಗಳಲ್ಲಿಯೂ ವಿಶೇಷ ವಿಶ್ಲೇಷಣೆಗಳನ್ನು ಒಳಗೊಂಡ ಮತ್ತು ಬೇರೆಬೇರೆ ಸ್ತರದ ತಾರ್ಕಿಕತೆಯ ಅನುಸಂಧಾನಗಳನ್ನು ಒಳಗೊಂಡ ಪರಂಪರೆಗಳು ಬೆಳೆದವು. ಈ ಮಾರ್ಗಗಳಲ್ಲಿ ‘ಅಮನಸ್ಕತೆ’ ಎಂದು ಕರೆಯಲಾದ ಸ್ಥಿತಿಗೂ ವೇದಾಂತಮಾರ್ಗದಲ್ಲಿ ‘ಅಹಂಕಾರವಿಲಯನ’ ಎಂದು ಕರೆದುದಕ್ಕೂ ನಡುವೆ ಭಿನ್ನತೆ ಇದೆಯೆಂದು ಹೇಳುವುದು ದುಷ್ಕರ; ಎರಡರ ನಡುವೆ ಸಮನ್ವಯ ಅಶಕ್ಯವಲ್ಲ. ಮೊದಲ ಮಾರ್ಗದಲ್ಲಿ ಲಕ್ಷ್ಯವು ಸತ್ಯದರ್ಶನವೆಂದು ಪ್ರತಿಪಾದಿತವಾಗಿದ್ದರೆ ಎರಡನೇ ಮತ್ತು ಪ್ರಾಚೀನತಮ ಮಾರ್ಗದಲ್ಲಿ ಆತ್ಮಸಾಕ್ಷಾತ್ಕಾರ ಎಂದು ಮಂಡಿತವಾಗಿದೆ. ಪಾರಿಭಾಷಿಕತೆಯನ್ನು ಹೊರತುಪಡಿಸಿದರೆ ಎಲ್ಲ ಮಾರ್ಗಗಳ ಅಂತದ್ರ್ರವ್ಯವೂ ‘ತಿಳಿದುಕೊಳ್ಳುವುದು’ ಅಥವಾ ಅಭಿಜ್ಞಾನವೇ. ನಾಗಾರ್ಜುನಾದಿ ಬೌದ್ಧ ಮನೀಷಿಗಳು ಆವಿಷ್ಕರಿಸಿದ ತರ್ಕಪರಿಷ್ಕರಣಗಳು ವೇದಾಂತ ಮತ್ತು ನ್ಯಾಯದರ್ಶನಗಳಲ್ಲಿ ಹಾಸುಹೊಕ್ಕಾದವು ಎಂದು ಬಹುಮಂದಿ ಶಾಸ್ತ್ರಜ್ಞರ ಅಭಿಮತವಿದೆ.
ತಾತ್ತ್ವಿಕ ವಿಕಾಸದ ಮಜಲುಗಳು ಹೇಗೇ ಇರಲಿ. ಸಾಧಕರ ಆಂತರಂಗಿಕ ಮಥನಕ್ರಮಕ್ಕೆ ಜೆನ್ ಪರಂಪರೆಯಿಂದ ವಿಶೇಷ ಕೊಡುಗೆ ಲಭಿಸಿದೆ ಎಂದು ಒಪ್ಪಬೇಕು. ನಿದರ್ಶನಕ್ಕೆ: ಶಬ್ದನಿಷ್ಠ ಅನುಸಂಧಾನದÀ ಮಿತಿಗಳನ್ನೂ ಅವುಗಳಿಂದ ಅತೀತರಾಗಬೇಕಾದುದರ ಅನಿವಾರ್ಯತೆಯನ್ನೂ ತಿಳಿಸಿಕೊಡುವ ಜೆನ್ ಬೋಧೆಗಳು ಅತ್ಯಂತ ಪ್ರಭಾವಿಯಾದವು.
ಆರಂಭಿಕ ಹಂತಗಳಲ್ಲಿ ‘ಜೆನ್ ಪ್ರಸ್ಥಾನದ ಬೋಧನೆ ಏನು?’ ಎಂಬೀ ರೀತಿಯ ಕುತೂಹಲಜನ್ಯ ಪ್ರಶ್ನೆಗಳು ಉದಿಸುವುದು ಸಹಜ. ಆದರೆ ವಾಸ್ತವವೆಂದರೆ ಕೇವಲ ಬುದ್ಧ್ಯಾಧಾರಿತ ಪ್ರಶ್ನೆಗಳಿಂದ ಅತೀತರಾಗಬೇಕೆಂಬುದೇ ಜೆನ್ ಪ್ರಸ್ಥಾನದ ಹೃದ್ಭಾಗ. ಈ ಆಧಾರತತ್ತ್ವವನ್ನು ಜೆನ್ ಪರಂಪರೆಯಲ್ಲಿ ಪ್ರಸಿದ್ಧವಿರುವ ಅನೇಕ ಪ್ರಸಂಗಗಳು ಧ್ವನಿಸಿವೆ. ನಿದರ್ಶನಕ್ಕೆ:
* ಸಾಧಕನೊಬ್ಬ ಗುರುಗಳ ಬಳಿಸಾರಿದಾಗ ನಡೆಯುವ ಸಂವಾದ ಇದು:
“ನೀನು ಇಲ್ಲಿಗೆ ಏನನ್ನು ಹುಡುಕಿಕೊಂಡು ಬಂದಿದ್ದೀ?”
“ನಾನು ಬುದ್ಧನ ಸತ್ಯವನ್ನು ಅರಿತುಕೊಳ್ಳಲು ಬಂದಿದ್ದೇನೆ.”
“ನನ್ನಿಂದ ನೀನು ಏನನ್ನು ಕಲಿಯಲು ಇಚ್ಛಿಸುತ್ತೀ? ನೀನು ಇರುವೆಡೆಯೇ ಇರುವ ನಿಧಿಯನ್ನು ಅಲಕ್ಷಿಸಿ ಇಷ್ಟು ದೂರ ಬಂದದ್ದು ಏಕೆ?”
“ನಾನು ಅಲಕ್ಷಿಸಿರುವ ಆ ನಿಧಿ ಯಾವುದು?”
“ಈ ಘಳಿಗೆಯಲ್ಲಿ ನನ್ನನ್ನು ಪ್ರಶ್ನೆ ಮಾಡುತ್ತಿರುವವನೇ ಆ ನಿಧಿಯಾಗಿದ್ದಾನೆ. ಈ ನಿಧಿಯಾದರೋ ಮಿತಿಯಿಲ್ಲದ್ದು. ಈ ನಿಧಿಯನ್ನು ಯಾರು ಬೇಕಾದರೂ ಮುಕ್ತವಾಗಿ ಬಳಸಿಕೊಳ್ಳಬಹುದು. ಹೀಗಿರುವಾಗ ಅದನ್ನು ಹೊರಗಡೆ ಅನ್ವೇಷಿಸುವ ಪ್ರಯಾಸ ಏಕೆ?”
ಈ ಸ್ಫುಟೀಕರಣವು ಸಾಧಕನ ತರ್ಕಾತೀತ ಆಂತರಿಕ ಸಾನ್ನಿಧ್ಯ ಗ್ರಹಿಕೆಗೆ ದಾರಿಮಾಡುತ್ತದೆ.
* ಇನ್ನೊಂದು ಮಾರ್ಮಿಕ ಪ್ರಸಂಗ:
ಆ ವೇಳೆಗೇ ತಕ್ಕಮಟ್ಟಿಗೆ ಸಾಧನೆ ಮಾಡಿದ್ದ ಉಪಾಸಕನೊಬ್ಬ ಖಾಸೋ ಎಂಬ ಗುರುಗಳಲ್ಲಿಗೆ ಬರುತ್ತಾನೆ. ಗುರುಗಳು ಹೇಳುತ್ತಾರೆ:
“ನೀನು ಈಗ ಅರಿಹಂತ ಸ್ಥಿತಿ (ಎಂದರೆ ಅಹಂಕಾರವನ್ನು ಪರಿತ್ಯಾಗ ಮಾಡಿರುವ ಸ್ಥಿತಿ) ತಲಪಿರುವೆ. ಆದರೆ ನೀನು ಇನ್ನೂ ಗುರುಸ್ಥಾನವನ್ನು ಪಡೆದಿಲ್ಲ.”
“ಹಾಗಿದ್ದರೆ ನಾನು ಅರಿಹಂತ ಸ್ಥಿತಿಯಲ್ಲಿಯೆ ಮುಂದುವರಿಯಬಯಸುತ್ತೇನೆ. ನನಗೆ ಗುರುವಾಗುವ ಇಚ್ಛೆಯೇ ಇಲ್ಲ.”
ಗುರುಗಳು ಮುಗುಳ್ನಕ್ಕು ಹೇಳುತ್ತಾರೆ: “ಹಾಗಿದ್ದಲ್ಲಿ ನೀನು ಈಗ ಗುರುವಾಗಿಬಿಟ್ಟಿರುವೆ!”
ಈ ಪ್ರಸಂಗಗಳಿಗೆ ವ್ಯಾಖ್ಯಾನದ ಆವಶ್ಯಕತೆ ಇಲ್ಲ.
***
ಜೆನ್ ಪರಂಪರೆಯ ಆವಿಷ್ಕರ್ತನೆನಿಸಿರುವ ಬೋಧಿಧರ್ಮನು ಕ್ರಿ.ಶ. 5-6ನೇ ಶತಮಾನದಲ್ಲಿ ದಕ್ಷಿಣಭಾರತದಿಂದ ದೂರದ ಚೀನಾಕ್ಕೆ ಪಯಣಿಸಿ ಅಲ್ಲಿನ ಹಲವೆಡೆಗಳಲ್ಲಿ ಧರ್ಮಪ್ರಸಾರ ಮಾಡಿ ಸುಂಗ್ ಎಂಬ ಪರ್ವತದ ಮೇಲೆ ಮಠವನ್ನು ಸ್ಥಾಪಿಸಿ ಜೆನ್ ಸಾಧನಮಾರ್ಗವನ್ನು ಪ್ರಸಾರ ಮಾಡಿದುದರ ಇತಿಹಾಸವು ರೋಚಕವಾಗಿದೆ. ಚೀನಾ ದೇಶದಲ್ಲಿ ಬೌದ್ಧಧರ್ಮವನ್ನು ನೆಲೆಗೊಳಿಸಿದವನೆಂದೂ ಮನೋನಿಯಂತ್ರಣ, ಸಮಾಹಿತಸ್ಥಿತಿಯ ಅಭ್ಯಾಸ, ನಿರ್ಮಮತೆಯ ಸಿದ್ಧಿ, ಅಂತರ್ಬಾಹ್ಯಗಳ ವಿಲೀನತೆ ಮೊದಲಾದ ಸಾಧನೆಯ ಮಜಲುಗಳನ್ನು ಸ್ಫುಟೀಕರಿಸಿದವನೆಂದೂ ಬೋಧಿಧರ್ಮನು ಕೀರ್ತಿತನಾಗಿದ್ದಾನೆ.
ಬೋಧಿಧರ್ಮನಿಂದ ಪಥದರ್ಶನ ಪಡೆದ ಹ್ವಯ್-ಕೆಓ ಮೊದಲಾದ ಹಲವರಿಂದ ಕ್ರಿ.ಶ. 5ರಿಂದ 7ನೇ ಶತಮಾನದವರೆಗೆ ಜೆನ್ ಪ್ರಸ್ಥಾನದ ಪ್ರಸಾರವೂ ಪರಿಷ್ಕರಣವೂ ನಡೆಯಿತು. ಇವಕ್ಕೆಲ್ಲ ಬೀಜರೂಪದಲ್ಲಿದ್ದದ್ದು ಬೋಧಿಧರ್ಮನ ಲಂಕಾವತಾರಸೂತ್ರ. ಕಾಲಾಂತರದಲ್ಲಿ ಚೀನಾದಲ್ಲಿ ಲಂಕಾವತಾರಸೂತ್ರವು ಬೇರೆಬೇರೆ ತರ್ಜುಮೆಗಳನ್ನೂ ರೂಪಾಂತರಗಳನ್ನೂ ಪಡೆದುಕೊಂಡಿತು. ಹಲವೊಮ್ಮೆ ಈ ವಿವಿಧ ಮಾರ್ಗಗಳವರ ನಡುವೆ ಸಂಘರ್ಷವೂ ನಡೆದದ್ದುಂಟು: ಎಷ್ಟುಮಟ್ಟಿಗೆ ಎಂದರೆ ಈ ಪರಂಪರೆಯ ಐದನೇ ಗುರುವೆನಿಸಿದ ಹಂಗ್-ಜೆನ್ ಕಾಲದಿಂದೀಚೆಗೆ ಆತನಿಂದ ಪ್ರವರ್ತಿತವಾದ ವಜ್ರಚ್ಛೇದಿಕಾಸೂತ್ರ ಪರಂಪರೆಯೇ ಪ್ರಬಲಿಸಿ ಮೂಲಪ್ರಸ್ಥಾನವನ್ನು ಸ್ವಲ್ಪಮಟ್ಟಿಗೆ ಹಿಂದಿಕ್ಕಿತು.
ಕ್ರಿ.ಶ. 7-8ನೇ ಶತಮಾನಗಳಲ್ಲಿ ಜೆನ್ ಸಿದ್ಧಾಂತ ಹಾಗೂ ಧ್ಯಾನಕ್ರಮಗಳ ಬಗೆಗೆ ಚೀನಾದಲ್ಲಿ ತೀಕ್ಷ್ಣ ಮಂಥನ ನಡೆಯಿತು. 9ನೇ ಶತಮಾನದ ಪೂರ್ವಾರ್ಧದಲ್ಲಿ ಜೆನ್ ಪ್ರಸ್ಥಾನವನ್ನು ಸಂಸ್ಥೀಕರಿಸುವ ಪ್ರಯಾಸಗಳು ಆದವು. ಕಾಲಕ್ರಮದಲ್ಲಿ ಆದ ಒಂದು ಸ್ಥಿತ್ಯಂತರವೆಂದರೆ ಸಾಕ್ಷಾತ್ಕಾರಕ್ಕೆ ಧ್ಯಾನವು ಅನಿವಾರ್ಯ ಎಂಬ ನಿಲವು ಕಿಂಚಿದ್ ವ್ಯತ್ಯಾಸಗೊಂಡು ಧ್ಯಾನವೂ ಮನಸ್ಸಿನ ಒಂದು ಆಯಾಮವಷ್ಟೆ ಎಂಬ ದೃಷ್ಟಿಯು ಮುನ್ನೆಲೆಗೆ ಬಂದಿತು. ಹೀಗಿದ್ದರೂ ಜೆನ್ ಪರಂಪರೆಯುದ್ದಕ್ಕೂ ಗುರು-ಶಿಷ್ಯ ಪಾರಸ್ಪರಿಕತೆಯು ಪ್ರಾಧಾನ್ಯವನ್ನು ಉಳಿಸಿಕೊಂಡಿತು. ಇದನ್ನು ದೃಷ್ಟಾಂತಪಡಿಸುವ ಅಸಂಖ್ಯ ಜೆನ್ ಆಖ್ಯಾನಗಳೂ ಅನುಭವಗಳೂ ದಾಖಲೆಗೊಂಡು ಈಗಲೂ ಅವು ಜೆನ್ ಪ್ರಸ್ಥಾನದ ಪರಿಚಾಯಕಗಳಾಗಿವೆ; ಮತ್ತು ಜ್ಞಾನಸಿದ್ಧಿಯು ಚರ್ಚೆಗೆ ಒಳಪಡಿಸಬಹುದಾದ ಸಂಗತಿಯಲ್ಲ ಎಂಬ ಅಂಶವು ಸ್ವರಭಾರ ಪಡೆದಿದೆ. ಆದರೂ ಜಿಜ್ಞಾಸಾಪ್ರವೃತ್ತಿ ಮುಂದುವರಿದುದರ ಪರಿಣಾಮವಾಗಿ ಕ್ರಮೇಣ ಸಾಧನೆಯ ಭಾಗವೇ ಶೈಥಿಲ್ಯಕ್ಕೊಳಗಾಗಿ ಕ್ರಿ.ಶ. 9ನೇ ಶತಮಾನದ ಉತ್ತರಾರ್ಧದಿಂದಾಚೆಗೆ ಜೆನ್ ಪ್ರಸ್ಥಾನದ ಹೃದ್ಭಾಗವನ್ನು ಪುನರುಜ್ಜೀವಿಸುವ ಆವಶ್ಯಕತೆ ತಲೆದೋರಿತು. ಈ ಪ್ರಕ್ರಿಯೆಯಲ್ಲಿ ಕ್ವೈಯ್Šಷನ್, ಫಾ-ಯೆನ್ ಮೊದಲಾದವರ ಹಾಗೂ ಕೋಆನ್-ಪ್ರವರ್ತಿತ ಬೋಧನಾಕ್ರಮದ ಪಾತ್ರವು ಮಹತ್ತ್ವದ್ದಿತ್ತು.
ಕ್ರಿ.ಶ. 12ನೇ ಶತಮಾನದಿಂದಾಚೆಗೆ ಜಪಾನ್ ದೇಶದಲ್ಲಿ ಜೆನ್ ಪ್ರಸ್ಥಾನದ ಪುನರುತ್ಥಾನವೂ ಪ್ರವರ್ತನೆಯೂ ಬಿರುಸಾಗಿ ನಡೆದವು. ಹಲವರು ಜೆನ್ ಗುರುಗಳು ಚೀನಾದಿಂದ ಜಪಾನಿಗೆ ವಲಸೆ ಹೋದದ್ದೂ ಉಂಟು. ವಿಶೇಷವಾಗಿ ಗಮನಿಸಬಹುದಾದ ಸಂಗತಿಯೆಂದರೆ: ಜಪಾನಿನಲ್ಲಿ ಜೆನ್ ಧ್ಯಾನಕ್ರಮವು ಕಾವ್ಯ, ಚಿತ್ರಕಲೆ ಮೊದಲಾದ ಮಾಧ್ಯಮಗಳಲ್ಲಿಯೂ ಅಭಿವ್ಯಕ್ತಿ ಪಡೆಯಿತು; ಗಣನೀಯ ಪ್ರಮಾಣದಲ್ಲಿ ಪ್ರಭುತ್ವದ ಪೋಷಣೆಗೂ ಪಾತ್ರವಾಯಿತು.
ಮೇಲೆ ಪ್ರಸ್ತಾವಿಸಿದ ವಿವರಗಳು ಜೆನ್ ಪ್ರಸ್ಥಾನವು ಬೆಳೆದುಬಂದ ಬಗೆಯನ್ನು ದಿಕ್ಸೂಚಕ ಮಾತ್ರವಾಗಿ ಪರಿಚಯಿಸುವವಷ್ಟೆ. ಒತ್ತಿ ಹೇಳಬೇಕಾದ ಸಂಗತಿಯೆಂದರೆ ಜೆನ್ ಪ್ರಸ್ಥಾನವು ಪ್ರಧಾನವಾಗಿ ಅನುಭವಾಧಿಷ್ಠಿತವೇ ಹೊರತು ವೈಚಾರಿಕ ಕುತೂಹಲಾಧಾರಿತವಲ್ಲ ಎಂಬುದು. ಸಾಧನೆಯ ಉನ್ನತ ಹಂತಗಳಲ್ಲಿ ಸಾಂಪ್ರದಾಯಿಕ-ಭೌಗೋಳಿಕಾದಿ ಗಡಿಗಳು ಇರುವುದಿಲ್ಲ. ಬೌದ್ಧಿಕ ಎಂದರೆ ಗಡಸು ಶಾಸ್ತ್ರೀಯ ರೀತಿಯ ಪರಾಮರ್ಶನೆಗಳನ್ನು ಜೆನ್ ಪ್ರಸ್ಥಾನವು ಗೌಣವೆಂದಿದೆ ಎಂದೇ ಹೇಳಬಹುದು.
ಜೆನ್ ಪ್ರಸ್ಥಾನವು ಸಾಧಕರಿಗೆ ಬೋಧಿಸುವ ಪ್ರಮುಖಾಂಶಗಳೆಂದರೆ ಸುತ್ತಲಿನ ಜಗತ್ತನ್ನು ಅದು ಇರುವಂತೆ ನೇರವಾಗಿ ಗ್ರಹಿಸಬೇಕೇ ಹೊರತು ವಿಭಜಿತ ಶ್ರೇಣೀಕೃತ ಆಕಾರಗಳಿಂದಲ್ಲ ಎಂಬುದು; ಶುಷ್ಕ ವಿಶ್ಲೇಷಣೆಗಳು ಅರ್ಥಹೀನ ಎಂಬುದು; ಈ ಮಾರ್ಗದ ಮೂಲಕ ಆಂತರಿಕ ಸಂವಾದವನ್ನು ಧೃಢಿಷ್ಠಗೊಳಿಸಿಕೊಳ್ಳುತ್ತ ಸಾಗಬೇಕೆಂಬುದು. ಈ ಪ್ರವೃತ್ತಿಯು ವಿಕಾಸಗೊಂಡಂತೆ ಹಿಂದಿನದೇ ಜಗತ್ತು ನಮ್ಮ ಪಾಲಿಗೆ ಹೆಚ್ಚು ಸುಂದರಗೊಳ್ಳುತ್ತ ಹೋಗುತ್ತದೆ; ಗೊಂದಲಗಳು ಮರೆಯಾಗುತ್ತವೆ; ವಿಶ್ವಕ್ಕೂ ನಮಗೂ ನಡುವಣ ತಡೆಗೋಡೆಗಳು ಇಲ್ಲವಾಗುತ್ತವೆ. ಇದಕ್ಕಿಂತ ಯಾವ ಪರಮಫಲವನ್ನು ತಾನೆ ಸಾಧಕನು ಇಷ್ಟಪಡಲಾದೀತು?
ಜೆನ್ ಪ್ರಸ್ಥಾನ ಕುರಿತು ವಿಪುಲ ಸಾಹಿತ್ಯ ಲಭ್ಯವಿದೆ. ಆರಂಭದಲ್ಲಿ ಹೇಳಿದ ಹಾಗೆ ಬಹುಮಟ್ಟಿಗೆ ಕುತೂಹಲಜನಕ ಪ್ರಸಂಗಗಳ ಮಟ್ಟದಲ್ಲಿ ಜೆನ್ ಪ್ರಸ್ಥಾನವು ಸಾಮಾನ್ಯರಿಗೆ ಪರಿಚಿತವಾಗಿದೆ. ಆದರೆ ಜೆನ್ ಪರಂಪರೆಯ ಆನುಕ್ರಮಿಕ ಇತಿಹಾಸ, ಅಲ್ಲಿಯ ಸಂವಹನರೀತಿಯ ಸೂಕ್ಷ್ಮ ಆಯಾಮಗಳು, ಯಾವುದೇ ಹಿನ್ನೆಲೆಯ ಸಾಧಕರು ಜೆನ್ ಮಾರ್ಗದಿಂದ ಪಡೆಯಬಹುದಾದ ದರ್ಶನ, ಎರಡು ಸಹಸ್ರಾಬ್ದಗಳಿಗೂ ಮೀರಿದ ಪರಂಪರೆಯುಳ್ಳ ಜೆನ್ ಮಾರ್ಗದ ಇತಿಹಾಸದ ಮುಖ್ಯ ಮಜಲುಗಳು ಹಾಗೂ ಪೂರ್ವಾಚಾರ್ಯರ ವಿಶಿಷ್ಟ ಕೊಡುಗೆಗಳು, ಬೌದ್ಧಧರ್ಮ-ಜೆನ್ ಧಾರೆಗಳ ಪಾರಸ್ಪರಿಕತೆ, ಜೆನ್ ಧಾರೆಯೊಡನೆ ಘನಿಷ್ಠ ಸಂಬಂಧವಿರುವ ವಾಙ್ಮಯ, ಜೆನ್ ಧಾರೆ ಕಂಡ ಏಳುಬೀಳುಗಳು; – ಈ ಎಲ್ಲ ಉಪಯುಕ್ತ ಆಯಾಮಗಳನ್ನು ಆಸಕ್ತರಿಗೆ ಅಡಕವಾಗಿ ಪರಿಚಯಿಸುವ ಗ್ರಂಥದ ಆವಶ್ಯಕತೆ ಇದ್ದಿತು. ಈ ಉದ್ದೇಶವನ್ನು ಶ್ಲಾಘ್ಯ ರೀತಿಯಲ್ಲಿ ಈಡೇರಿಸಿದ ಗ್ರಂಥ ಈಗ್ಗೆ ನಾಲ್ಕು ದಶಕಗಳ ಹಿಂದೆ (1980) ಥಾಮಸ್ ಹೂವರ್ (Thomas Hoover) ಅವರಿಂದ ರಚಿತಗೊಂಡು ಪ್ರಕಾಶನಗೊಂಡಿದ್ದ ‘THE ZEN EXPERIANCE’ ಶೀರ್ಷಿಕೆಯ ಶ್ರೇಷ್ಠ ಗ್ರಂಥ. ಅದು ವಿದ್ವದ್ ವಲಯದಲ್ಲಿ ಪ್ರತಿಷ್ಠೆ ಗಳಿಸಿಕೊಂಡಿದೆ. ಆ ಉಪಯುಕ್ತ ಗ್ರಂಥವನ್ನು ಇದೀಗ ಮೈಸೂರು ನಿವಾಸಿ ವಿಜಯ ನಾಗ್ ಜಿ. ಅವರು ಕನ್ನಡಕ್ಕೆ ಅನುವಾದಿಸಿ ಕನ್ನಡ ವಾಚಕರನ್ನು ಋಣಿಗಳನ್ನಾಗಿಸಿದ್ದಾರೆ.
ಉದ್ದಕ್ಕೂ ಅರ್ಥಸೂಕ್ಷ್ಮಗಳನ್ನೊಳಗೊಂಡ ಈ ಗ್ರಂಥದ ಅನುವಾದ ಸುಲಭವಲ್ಲ. ಈ ಅತ್ಯಂತ ಕ್ಲೇಶದ ಅನುವಾದಕಾರ್ಯವನ್ನು ವೃತ್ತಿಯಲ್ಲಿ ಗ್ರಂಥಾಲಯ ಸಹಾಯಕರಾಗಿರುವ ವಿಜಯ ನಾಗ್ ಜಿ. ಅವರು ಅತ್ಯಂತ ಸಮರ್ಪಕವಾಗಿ ನಿರ್ವಹಿಸಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ ಅಲ್ಲದೆ ಜಪಾನೀ ಭಾಷೆಯಲ್ಲಿಯೂ ಪರಿಣತಿ ಪಡೆದಿರುವವರು ವಿಜಯ ನಾಗ್. ಈ ಹಿಂದೆ ವಿಜಯ ನಾಗ್ ಹೊರತಂದಿದ್ದ ‘ಆಲ್ಬರ್ಟ್ ಐನಸ್ಟೈನ್ – ಆಯ್ದ ಬರಹಗಳು’ ಅನುವಾದವೂ ಪ್ರಶಂಸೆಗೆ ಪಾತ್ರವಾಗಿತ್ತು. ಗ್ರಂಥಾಲಯವಿಜ್ಞಾನಸಂಬಂಧಿತ ವಿದ್ವದ್ಗೋಷ್ಠಿಗಳಲ್ಲಿ ಪಾಲ್ಗೊಂಡು ಪ್ರಬಂಧಗಳನ್ನು ಮಂಡಿಸಿರುವ ವಿಜಯ ನಾಗ್ ಜಿಲ್ಲಾಮಟ್ಟದ ಇಲಾಖಾ ಅತ್ಯುತ್ತಮ ಸೇವಾಪ್ರಶಸ್ತಿ ಮೊದಲಾದ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಥಾಮಸ್ ಹೂವರ್ ಅವರ ಗ್ರಂಥವನ್ನು ‘ಜೆನ್ ಅನುಭವ’ ಎಂಬ ಶೀರ್ಷಿಕೆಯಲ್ಲಿ ವಿಜಯ ನಾಗ್ ಅತ್ಯಂತ ಸಮರ್ಥವಾಗಿ ಅನುವಾದಿಸಿ ಉಪಕರಿಸಿದ್ದಾರೆ. ಗ್ರಂಥದ ಉಪಶೀರ್ಷಿಕೆ ‘ಮಹೋತ್ತಮ ಜೆನ್ ಗುರುಗಳ ಜೀವನ ಹಾಗೂ ಬೋಧನೆಗಳ ಮೂಲಕ ಅದರ ಐತಿಹಾಸಿಕ ವಿಕಾಸದ ಚಿತ್ರಣ’ ಎಂದಿದೆ.
ಜೆನ್ ಪ್ರಸ್ಥಾನದಲ್ಲಿ ಆಸಕ್ತಿಯುಳ್ಳವರಿಗೂ ಸಾಧಕರಿಗೂ ಈ ಅನುವಾದಿತ ಕೃತಿ ಅತ್ಯಂತ ಪ್ರಯೋಜನಕರವಾಗಿದೆ. ಇದು ಶ್ರೇಷ್ಠ ಗ್ರಂಥವೊಂದರ ಶ್ರೇಷ್ಠ ಅನುವಾದವಾಗಿದೆ. ಇದಕ್ಕಾಗಿ ವಿಜಯ ನಾಗ್ ಜಿ. ಅವರಿಗೆ ಕನ್ನಡ ಓದುಗರ ಅಭಿನಂದನೆ ಸಲ್ಲುತ್ತದೆ. ಈ ವಿರಳ ಗ್ರಂಥವನ್ನು ಪ್ರಕಟಿಸಿರುವ ಬೆಂಗಳೂರಿನ ‘ಸೃಷ್ಟಿ ಪಬ್ಲಿಕೇಷನ್ಸ್’ ಪ್ರಕಾಶನಸಂಸ್ಥೆಗೆ ಮೆಚ್ಚುಗೆ ಸಲ್ಲುತ್ತದೆ.