ಭರ್ತೃಹರಿಗೆ ವೈರಾಗ್ಯ ಬಂದ ಕಥೆ
ಒಮ್ಮೆ ಕೈಲಾಸಶಿಖರದಲ್ಲಿ ಕುಳಿತಿರುವ ಭಗವಂತನಾದ ಶಿವನನ್ನು ಪಾರ್ವತಿಯು ‘‘ಪ್ರಾಣೇಶ್ವರ, ಕಾಲ ಕಳೆಯುವ ಸಲುವಾಗಿ ಅತ್ಯಂತ ಚಮತ್ಕಾರಪೂರ್ಣವಾಗಿರುವÀ ಕಥೆಯೊಂದನ್ನು ಹೇಳು” ಎಂದು ಕೇಳಿದಳು. ಆಗ ಶಿವನು ಅವಳನ್ನು ಕುರಿತು – ‘‘ಪ್ರಿಯೆ, ಎಲ್ಲರ ಮನಸ್ಸನ್ನೂ ಅಪಹರಿಸುವಂಥ ಕಥೆಯೊಂದನ್ನು ಹೇಳುತ್ತೇನೆ, ಕೇಳು” ಎಂದು ಹೇಳಿ ಕಥೆಯನ್ನು ಆರಂಭಿಸಿದನು.
ಭೂಲೋಕದಲ್ಲಿ ಸ್ವರ್ಗಕ್ಕಿಂತಲೂ ಸುಂದರವಾದ ಉಜ್ಜಯಿನಿ ಎಂಬ ನಗರ ಇದೆ. ಅಲ್ಲಿ ಭರ್ತೃಹರಿ ಎಂಬ ಮಹಾರಾಜನು ಇದ್ದನು. ಅನೇಕ ಸಾಮಂತ ರಾಜರು ಅವನನ್ನು ಸೇವಿಸುತ್ತಿದ್ದರು. ಸಕಲಕಲಾಪ್ರವೀಣನಾದ, ಸಮಸ್ತಶಾಸ್ತ್ರಗಳನ್ನು ಬಲ್ಲ ಮತ್ತು ಪರಾಕ್ರಮಿಯಾದ ವಿಕ್ರಮಾದಿತ್ಯನು ಅವನ ತಮ್ಮನಾಗಿದ್ದನು. ಭರ್ತೃಹರಿಯ ಹೆಂಡತಿ ಅನಂಗಸೇನೆ. ಅವಳು ಅತ್ಯಂತ ಸುಂದರಿ.
ನಗರದಲ್ಲಿ ಒಬ್ಬ ಬ್ರಾಹ್ಮಣನಿದ್ದನು. ಅವನು ಸಕಲಶಾಸ್ತ್ರಪಂಡಿತನೂ, ಮಂತ್ರಗಳನ್ನು ತಿಳಿದವನೂ ಆಗಿದ್ದನು. ಆದರೆ ಅತ್ಯಂತ ಬಡವನಾಗಿದ್ದನು. ಒಮ್ಮೆ ಆ ಬ್ರಾಹ್ಮಣನು ಮಂತ್ರಾನುಷ್ಠಾನದಿಂದ ಭುವನೇಶ್ವರೀದೇವಿಯನ್ನು ಸಂತೋಷಗೊಳಿಸಿದನು. ಸಂತುಷ್ಟಳಾದ ದೇವಿಯು ‘‘ಎಲೈ ಬ್ರಾಹ್ಮಣನೆ, ನಿನ್ನ ಮಂತ್ರಾನುಷ್ಠಾನ ಹಾಗೂ ಭಕ್ತಿಯಿಂದ ನಾನು ಸಂತೋಷಗೊಂಡಿದ್ದೇನೆ. ಬೇಕಾದ ವರವನ್ನು ಕೇಳಿಕೋ” ಎಂದಳು. ಆಗ ಬ್ರಾಹ್ಮಣನು “ಹೇ ದೇವಿ, ನೀನು ಪ್ರಸನ್ನಳಾಗಿರುವುದು ನಿಜವಾಗಿದ್ದರೆ ನಿನ್ನ ಭಕ್ತನಾದ ನನಗೆ ಜರಾಮರಣಗಳು ಇಲ್ಲದಂತೆ ಮಾಡು” ಎಂದನು.
ಆಗ ದೇವಿಯು ದಿವ್ಯವಾದ ಒಂದು ಹಣ್ಣನ್ನು ಬ್ರಾಹ್ಮಣನಿಗೆ ಕೊಡುತ್ತಾ – ‘‘ಮಗನೇ, ಈ ಹಣ್ಣನ್ನು ತಿನ್ನು. ಮುಪ್ಪು ಮರಣಗಳಿಲ್ಲದವನಾಗುತ್ತೀಯೆ” ಎಂದಳು.
ಬ್ರಾಹ್ಮಣನು ಆ ಹಣ್ಣನ್ನು ತೆಗೆದುಕೊಂಡು ತನ್ನ ಮನೆಗೆ ಬಂದು ದೇವತಾರ್ಚನೆ ಮೊದಲಾದವುಗಳನ್ನು ಮುಗಿಸಿ ಹಣ್ಣನ್ನು ತಿನ್ನಬೇಕೆಂದು ಅಂದುಕೊಳ್ಳುತ್ತಾ ಮನಸ್ಸಿನಲ್ಲಿ ಹೀಗೆ ಯೋಚಿಸಿದನು – ‘ನಾನು ಒಬ್ಬ ಬಡವ, ಅಮರತ್ವವನ್ನು ಪಡೆದು ನಾನು ಯಾರಿಗೆ ಉಪಕಾರ ಮಾಡಲಿ? ತುಂಬಾ ಕಾಲದವರೆಗೆ ಬದುಕಿದ್ದರೂ ಭಿಕ್ಷೆ ಬೇಡುವುದೇ ನನ್ನ ಕೆಲಸ. ನನ್ನ ಬದಲಾಗಿ ಈ ಹಣ್ಣನ್ನು ಯಾರಾದರೂ ಪರೋಪಕಾರಿ ತಿಂದರೆ ಅವನು ದೀರ್ಘಕಾಲ ಬದುಕಿ ಅನೇಕರಿಗೆ ಉಪಕಾರವನ್ನು ಮಾಡುವವನಾಗುತ್ತಾನೆ. ಆ ಮೂಲಕ ಜನ್ಮಸಫಲತೆಯನ್ನು ಪಡೆಯುತ್ತಾನೆ.’ ಹೀಗೆ ಯೋಚಿಸಿ ಅವನು ಹಣ್ಣನ್ನು ಮಹಾರಾಜನಿಗೆ ಕೊಡಬೇಕೆಂದು ನಿಶ್ಚಯಿಸಿದನು.
ಆನಂತರ ಅವನು ಆ ಹಣ್ಣನ್ನು ತೆಗೆದುಕೊಂಡು ಮಹಾರಾಜನಾದ ಭರ್ತೃಹರಿಯ ಸಮೀಪಕ್ಕೆ ಬಂದನು. ಅವನನ್ನು ಆಶೀರ್ವಾದಗಳಿಂದ ಅಭಿನಂದಿಸಿ ಅವನಿಗೆ ಆ ಹಣ್ಣನ್ನು ಕೊಟ್ಟನು. ‘‘ಹೇ ಮಹಾರಾಜ, ದೇವತಾಪ್ರಸಾದದಿಂದ ಈ ಅಪೂರ್ವವಾದ ಹಣ್ಣು ಲಭಿಸಿದೆ. ಇದನ್ನು ತಿನ್ನು. ಇದರಿಂದ ನೀನು ಜರಾಮರಣಗಳಿಲ್ಲದವನಾಗುತ್ತೀಯೆ” ಎಂದನು.
ಮಹಾರಾಜನು ಹಣ್ಣನ್ನು ತೆಗೆದುಕೊಂಡು ಬ್ರಾಹ್ಮಣನಿಗೆ ಕೈತುಂಬ ಉಡುಗೊರೆಗಳನ್ನು ಕೊಟ್ಟು ಕಳಿಸಿದನು. ಆನಂತರ ‘ಈ ಹಣ್ಣನ್ನು ತಿನ್ನುವುದರಿಂದ ನನಗೆ ಅಮರತ್ವ ದೊರೆಯುತ್ತದೆ. ನನಗೆ ರಾಣಿಯಾದ ಅನಂಗಸೇನೆಯಲ್ಲಿ ಅತಿಯಾದ ಪ್ರೀತಿ. ಒಂದು ವೇಳೆ ನಾನು ಅಮರತ್ವವನ್ನು ಪಡೆದರೆ ಅವಳು ನಾನು ಬದುಕಿರುವಾಗಲೇ ಮರಣ ಹೊಂದುತ್ತಾಳೆ. ಆಗ ನನಗೆ ಅವಳ ವಿಯೋಗದುಃಖವನ್ನು ಸಹಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಹಣ್ಣನ್ನು ನನ್ನ ಪ್ರಾಣಪ್ರಿಯೆಯಾದ ಅನಂಗಸೇನೆಗೆ ಕೊಡುವೆ’ ಎಂದು ಚಿಂತಿಸಿದನು. ಆನಂತರ ಅನಂಗಸೇನೆಯನ್ನು ಕರೆದು ಅವಳಿಗೆ ಆ ಹಣ್ಣನ್ನು ಕೊಟ್ಟನು.
ಅನಂಗಸೇನೆಗೋ ಮಾಥುರಿಕ ಎಂಬ ದಾಸನಲ್ಲಿ ಅತಿಯಾದ ಪ್ರೀತಿಯಿತ್ತು. ಅವಳು ಯೋಚನೆ ಮಾಡಿ ಆ ಹಣ್ಣನ್ನು ಅವನಿಗೆ ಕೊಟ್ಟಳು. ಆ ಮಾಥುರಿಕನಿಗೆ ಯಾವುದೋ ಒಬ್ಬಳು ದಾಸಿ ಅತ್ಯಂತ ಪ್ರಿಯಳಾಗಿದ್ದಳು. ಅವನು ಆ ಹಣ್ಣನ್ನು ಅವಳಿಗೆ ಕೊಟ್ಟನು. ಆ ದಾಸಿಗೂ ಒಬ್ಬ ಗೋಪಾಲಕನಲ್ಲಿ ಹೆಚ್ಚು ಪ್ರೀತಿ ಇತ್ತು. ಅವಳು ಅವನಿಗೆ ಆ ಹಣ್ಣನ್ನು ಕೊಟ್ಟಳು. ಆ ದನಕಾಯುವವನಿಗೂ ಒಬ್ಬಳು ಸಗಣಿ ಹೆಕ್ಕುವವಳಲ್ಲಿ ಪ್ರೀತಿ. ಅವನು ಅವಳಿಗೆ ಆ ಹಣ್ಣನ್ನು ಕೊಟ್ಟನು. ಆನಂತರ ಆ ಸಗಣಿ ಹೆಕ್ಕುವವಳು ಊರಿನಿಂದ ಹೊರಗೆ ಸಗಣಿಯನ್ನು ಸಂಗ್ರಹಿಸಿ ಸಗಣಿಯ ಬುಟ್ಟಿಯನ್ನು ತಲೆಯ ಮೇಲಿರಿಸಿ, ಅದರ ಮೇಲೆ ಆ ಹಣ್ಣನ್ನು ಇಟ್ಟುಕೊಂಡು ರಾಜಬೀದಿಯಲ್ಲಿ ಬಂದಳು. ಆಗ ಭರ್ತೃಹರಿಯು ವಿಹಾರಕ್ಕೆಂದು ಹೊರಗೆ ಹೊರಟಿದ್ದನು. ಮಹಾರಾಜನನ್ನು ನೋಡಿ ಅವಳು ಆನಂದದಿಂದ ಆ ಹಣ್ಣನ್ನು ಅವನಿಗೆ ಸಮರ್ಪಿಸಿದಳು. ಮಹಾರಾಜನು ಆ ಹಣ್ಣನ್ನು ತೆಗೆದುಕೊಂಡು ಕೂಡಲೇ ಅರಮನೆಗೆ ಬಂದನು. ಕೂಡಲೆ ಆ ಬ್ರಾಹ್ಮಣನನ್ನು ಕರೆಯಿಸಿ ‘‘ಎಲೈ ಬ್ರಾಹ್ಮಣ, ನೀನು ನನಗೆ ಯಾವ ಹಣ್ಣನ್ನು ಕೊಟ್ಟೆಯೋ ಆ ರೀತಿಯ ಬೇರೆ ಹಣ್ಣು ಖಂಡಿತವಾಗಿ ಸಿಗುವುದಿಲ್ಲವೆ?” ಎಂದು ಪ್ರಶ್ನಿಸಿದನು. ಬ್ರಾಹ್ಮಣನು ‘‘ಮಹಾರಾಜ, ಅದು ದೇವತಾಪ್ರಸಾದದಿಂದ ಪಡೆದ ದಿವ್ಯಫಲ. ಆ ರೀತಿಯದು ಇನ್ನೊಂದು ಇರುವುದು ಸಾಧ್ಯವೇ ಇಲ್ಲ” ಎಂದನು. ಮಹಾರಾಜನು ‘‘ಆ ರೀತಿಯದೇ ಹಣ್ಣನ್ನು ಯಾರೋ ನನಗೆ ಕೊಟ್ಟಿದ್ದಾರೆ. ಇದು ಹೇಗೆ ಸಾಧ್ಯ?” ಎಂದು ಕೇಳಿದನು.
ಬ್ರಾಹ್ಮಣನು, ‘‘ನಾನು ಕೊಟ್ಟ ಹಣ್ಣನ್ನು ನೀನು
ತಿಂದೆಯೋ ಇಲ್ಲವೋ?” ಎಂದು ಪ್ರಶ್ನಿಸಿದನು.
ಮಹಾರಾಜನು, ‘‘ನಾನು ತಿಂದಿಲ್ಲ, ಆದರೆ ನನ್ನ ಪ್ರಾಣಪ್ರಿಯೆಯಾದ ಅನಂಗಸೇನೆಗೆ ಅದನ್ನು ಕೊಟ್ಟೆ” ಎಂದು ಹೇಳಿದನು. ಬ್ರಾಹ್ಮಣನು ‘‘ಆ ಹಣ್ಣನ್ನು ಏನು ಮಾಡಿದೆ ಎಂದು ಅವಳನ್ನು ಕೇಳು” ಎಂದು ಹೇಳಿದನು.
ಮಹಾರಾಜನು ಅವಳನ್ನು ಕರೆದು ‘‘ಆ ಹಣ್ಣನ್ನು ಏನು ಮಾಡಿದೆ ಎಂದು ಪ್ರತಿಜ್ಞೆ ಮಾಡಿ ಹೇಳು” ಎಂದು ಕೇಳಿದನು. ಅವಳು ಹೆದರುತ್ತಾ ‘‘ಮಾಥುರಿಕನಿಗೆ ಕೊಟ್ಟೆ” ಎಂದಳು. ಆನಂತರ ರಾಜನು ಅವನನ್ನು ಕರೆಸಿ ಕೇಳಿದನು. ಅವನು, “ನಾನು ದಾಸಿಗೆ ಕೊಟ್ಟೆ” ಎನ್ನಲು ಮುಂದೆ ವಿಚಾರಿಸಲಾಗಿ ದಾಸಿಯು ದನ ಕಾಯುವವನಿಗೂ, ಅವನು ಸಗಣಿ ಹೆಕ್ಕುವವಳಿಗೂ ಅದನ್ನು ಕೊಟ್ಟಿರುವುದು ತಿಳಿದುಬಂತು. ಇವೆಲ್ಲವನ್ನು ತಿಳಿದ ಮಹಾರಾಜನು ಹೆಚ್ಚು ದುಃಖಿತನಾಗಿ ಈ ಶ್ಲೋಕವನ್ನು ಹೇಳಿದನು –
ಯಾಂ ಚಿಂತಯಾಮಿ ಸತತಂ ಮಯಿ ಸಾ ವಿರಕ್ತಾ
ಸಾಪ್ಯನ್ಯಮಿಚ್ಛತಿ ಜನಂ ಸ ಜನೋsನ್ಯಸಕ್ತಃ |
ಅಸ್ಮತ್ಕøತೇ ಚ ಪರಿತುಷ್ಯತಿ ಕಾಚಿದನ್ಯಾ
ಧಿಕ್ ತಾಂ ಚ ತಂ ಚ ಮದನಂ ಚ ಇಮಾಂ ಚ
ಮಾಂ ಚ ||
(ನಾನು ಸದಾ ಯಾವಳನ್ನು ಚಿಂತಿಸುತ್ತೇನೆಯೋ ಅವಳಿಗೆ ನನ್ನಲ್ಲಿ ವಿರಕ್ತಿ, ಅವಳು ಇನ್ನೊಬ್ಬನನ್ನು ಪ್ರೀತಿಸುತ್ತಾಳೆ. ಅವನಿಗೋ, ಇನ್ನೊಬ್ಬಳಲ್ಲಿ ಆಸಕ್ತಿ. ಅವಳೂ ಮತ್ತೊಬ್ಬನನ್ನು ಇಷ್ಟಪಡುತ್ತಾಳೆ. ಅವಳಿಗೂ, ಅವನಿಗೂ, ಇದಕ್ಕೆಲ್ಲ ಕಾರಣನಾದ ಮನ್ಮಥನಿಗೂ, ಇವಳಿಗೂ ನನಗೂ ಧಿಕ್ಕಾರವಿರಲಿ.)
ಹೀಗೆಂದು ಮಹಾರಾಜನಾದ ಭರ್ತೃಹರಿಯು ಜೀವನದಲ್ಲಿ ವೈರಾಗ್ಯವನ್ನು ತಾಳಿದನು. ಕೊನೆಗೆ ತನ್ನ ಸಹೋದರನಾದ ವಿಕ್ರಮಾದಿತ್ಯನಿಗೆ ರಾಜ್ಯಾಭಿಷೇಕ ಮಾಡಿ ತಾನು ತಪಸ್ಸು ಮಾಡಲು ಕಾಡಿಗೆ ತೆರಳಿದನು.
ವಿಕ್ರಮಾದಿತ್ಯನಿಗೆ ಸಿಂಹಾಸನ ದೊರಕಿದ ಕಥೆ
ವಿಕ್ರಮಾದಿತ್ಯನು ರಾಜನಾಗಿ ದೀನದುಃಖಿತರ ಮನೋರಥಗಳನ್ನು ಪೂರೈಸುತ್ತಾ ಪ್ರಜೆಗಳನ್ನು ಸಂತೋಷಪಡಿಸುತ್ತಾ ಮಂತ್ರಿ-ಸಾಮಂತರಾದಿಯಾಗಿ ಎಲ್ಲರ ಮನಸ್ಸನ್ನೂ ಸೂರೆಗೊಂಡನು. ಈ ರೀತಿಯಾಗಿ ಅವನು ಎಲ್ಲರನ್ನೂ ರಂಜಿಸುತ್ತಾ ರಾಜ್ಯವನ್ನು ಪಾಲಿಸುತ್ತಿದ್ದನು.
ಮುಂದೆ ಅವನು ಬೇತಾಳನನ್ನೂ ಕೈವಶ ಮಾಡಿಕೊಂಡನು. ಆಮೇಲೆ ಅಣಿಮಾದಿ ಅಷ್ಟಸಿದ್ಧಿಗಳನ್ನೂ ಪಡೆದು ನ್ಯಾಯದಿಂದ ರಾಜ್ಯಪರಿಪಾಲನೆ ಮಾಡುತ್ತಿದ್ದನು. ಭೂಲೋಕದಲ್ಲಿ ವಿಕ್ರಮಾದಿತ್ಯನಿಗೆ ಸರಿಸಮಾನರು ಯಾರೂ ಇರಲಿಲ್ಲ. ಮೂರು ಲೋಕಗಳಲ್ಲಿ ಅವನ ಕೀರ್ತಿ ಹರಡಿತ್ತು.
ಈ ನಡುವೆ ಮಹರ್ಷಿ ವಿಶ್ವಾಮಿತ್ರನು ದೊಡ್ಡ ತಪಸ್ಸನ್ನು ಆರಂಭಿಸಿದ್ದನು. ಇದರಿಂದ ಸಂಶಯಕ್ಕೊಳಗಾದ ದೇವೇಂದ್ರನು ವಿಶ್ವಾಮಿತ್ರನ ತಪಸ್ಸನ್ನು ಭಂಗ ಪಡಿಸಬೇಕೆಂದು ಯೋಚಿಸಿದನು. ಆ ಕಾರ್ಯಕ್ಕಾಗಿ ರಂಭೆ ಮತ್ತು ಊರ್ವಶಿಯರನ್ನು
ಕರೆದು ‘ನಿಮ್ಮಿಬ್ಬರಲ್ಲಿ ನೃತ್ಯ ಮತ್ತು ಹಾಡಿನಲ್ಲಿ ಯಾರು ಹೆಚ್ಚಿನವಳೋ ಅವಳು ವಿಶ್ವಾಮಿತ್ರನ ತಪೋಭಂಗ ಮಾಡಲು ಅವನ ತಪೋವನಕ್ಕೆ ಹೋಗಲಿ. ಈ ಕಾರ್ಯವನ್ನು ಸಾಧಿಸಿದವಳಿಗೆ ನಾನು ಬಹು ದೊಡ್ಡ ಬಹುಮಾನ ಕೊಡುತ್ತೇನೆ’ ಎಂದು ಹೇಳಿದನು.
ಅದನ್ನು ಕೇಳಿ ರಂಭೆಯು, ‘ನೃತ್ಯದಲ್ಲಿ ನಾನೇ ಪ್ರವೀಣೆ’ ಎಂದು ಹೇಳಿದಳು. ಊರ್ವಶಿಯು, ‘ಸ್ವಾಮಿ, ಶಾಸ್ತ್ರಪ್ರಕಾರವಾಗಿ ನೃತ್ಯ ಮಾಡುವುದರಲ್ಲಿ ನನ್ನನ್ನು ಮೀರಿಸುವವರಿಲ್ಲ’ ಎಂದು ಹೇಳಿದಳು.
ಹೀಗೆ ಅವರಿಬ್ಬರಲ್ಲಿ ಜಗಳ ಉಂಟಾಯಿತು. ಆಗ ಆ ವಿಷಯದಲ್ಲಿ ನಿರ್ಣಯವನ್ನು ಮಾಡಲು ದೇವತೆಗಳ ಸಭೆಯನ್ನು ಕರೆಯಲಾಯಿತು. ಅಲ್ಲಿ ಮೊದಲು ರಂಭೆಯ ನೃತ್ಯ ನಡೆಯಿತು. ಆಮೇಲೆ ಊರ್ವಶಿಯದಾಯಿತು. ಎಲ್ಲ ದೇವತೆಗಳೂ ಇಬ್ಬರ ನೃತ್ಯವನ್ನು ನೋಡಿ ಸಂತೋಷಪಟ್ಟರು. ಆದರೆ ಅವರಿಬ್ಬರಲ್ಲಿ ಯಾರು ನೃತ್ಯದಲ್ಲಿ heಛಿಜಿಛಿiಟಿ ಪ್ರವೀಣೆ ಎಂದು ನಿರ್ಣಯಿಸುವುದು ಅವರಲ್ಲಿ ಯಾರಿಂದಲೂ ಸಾಧ್ಯವಾಗಲಿಲ್ಲ.
ಈ ಸಂದರ್ಭದಲ್ಲಿ ದೇವರ್ಷಿ ನಾರದರು – ‘‘ದೇವರಾಜ, ಭೂಲೋಕದಲ್ಲಿ ವಿಕ್ರಮಾದಿತ್ಯ ಎಂಬ ರಾಜನಿದ್ದಾನೆ. ಅವನು ಎಲ್ಲ ಕಲೆಗಳನ್ನೂ ತಿಳಿದವನು. ವಿಶೇಷವಾಗಿ ಸಂಗೀತ ನೃತ್ಯ ವಿದ್ಯೆಗಳಲ್ಲಿ ಅತ್ಯಂತ ಪ್ರವೀಣನು. ಇವರಿಬ್ಬರಲ್ಲಿ ಯಾರು ಹೆಚ್ಚಿನವಳೆಂದು ಅವನು ನಿರ್ಣಯ ಮಾಡಬಲ್ಲ” ಎಂದು ಹೇಳಿದನು. ಆಗ ದೇವೇಂದ್ರನು ವಿಕ್ರಮಾದಿತ್ಯನನ್ನು ಕರೆತರಲು ತನ್ನ ಸಾರಥಿಯಾದ ಮಾತಲಿಯನ್ನು ಉಜ್ಜಯಿನಿಗೆ ಕಳಿಸಿದನು. ವಿಕ್ರಮಾದಿತ್ಯನು ಇಂದ್ರನ ಆಹ್ವಾನವನ್ನು ಒಪ್ಪಿಕೊಂಡು ದೇವಲೋಕಕ್ಕೆ ಬಂದನು. ದೇವೇಂದ್ರನು ಅವನನ್ನು ಗೌರವಾದರಗಳೊಂದಿಗೆ ಸ್ವಾಗತಿಸಿ ಕುಳ್ಳಿರಿಸಿದನು. ಮತ್ತೆ ನೃತ್ಯಕಾರ್ಯಕ್ರಮವು ಆಯೋಜಿಸಲ್ಪಟ್ಟಿತು. ಮೊದಲು ರಂಭೆಯು ನೃತ್ಯವನ್ನು ಪ್ರದರ್ಶಿಸಿದಳು. ಆಮೇಲೆ ಊರ್ವಶಿಯು ಸಭೆಗೆ ಬಂದು ವಿಧಿಪ್ರಕಾರವಾಗಿ ನೃತ್ಯ ಪ್ರದರ್ಶನ ನೀಡಿದಳು. ಬಳಿಕ ವಿಕ್ರಮಾದಿತ್ಯನು ಊರ್ವಶಿಯನ್ನು ಹೊಗಳಿದನು. ‘ಅವಳೇ ನೃತ್ಯದಲ್ಲಿ ಪ್ರವೀಣೆ’ ಎಂದು ನಿರ್ಣಯವನ್ನು ಸಾರಿದನು. ದೇವೇಂದ್ರನು ‘‘ಅದು ಹೇಗೆ ಊರ್ವಶಿಯೇ ಪ್ರವೀಣೆ ಎಂಬುದನ್ನು ನಿರ್ಣಯಿಸಿದೆ?” ಎಂದು ಪ್ರಶ್ನಿಸಿದನು.
ವಿಕ್ರಮಾದಿತ್ಯನು – ‘‘ದೇವ, ನೃತ್ಯದಲ್ಲಿ ಮೊದಲು ಶರೀರಸೌಂದರ್ಯವು ಪ್ರಧಾನವಾದುದು. ಅದು ಇಬ್ಬರಲ್ಲೂ ಇದೆ. ಅದಲ್ಲದೆ ನರ್ತಕಿಯು ರಂಗೋಚಿತವಾದ ಅವಸ್ಥಾನವಿಶೇಷವನ್ನು ಪ್ರದರ್ಶಿಸಬೇಕೆಂದು ನಾಟ್ಯಶಾಸ್ತ್ರದಲ್ಲಿ ಹೇಳಿದೆ. ಆ ಕಾರ್ಯವನ್ನು ಊರ್ವಶಿಯು ಚೆನ್ನಾಗಿ ಮಾಡಿದ್ದಾಳೆ. ಆದ್ದರಿಂದ ನಾನು ಅವಳೇ ಪ್ರವೀಣೆ ಎಂದು ನಿರ್ಣಯಿಸಿದೆ” ಎಂದನು. ಇದರಿಂದ ದೇವೇಂದ್ರನು ಸಂತುಷ್ಟನಾದನು. ಆ ಬಳಿಕ ವಿಕ್ರಮಾದಿತ್ಯನನ್ನು ಅಮೂಲ್ಯ ವಸ್ತ್ರ ಮೊದಲಾದವುಗಳಿಂದ ಸಮ್ಮಾನಿಸಿ ಅತ್ಯಮೂಲ್ಯವಾದ ಬೆಳೆಬಾಳುವ ರತ್ನಖಚಿತವಾದ ಸಿಂಹಾಸನವೊಂದನ್ನು ಅವನಿಗೆ ಕೊಟ್ಟನು. ಆ ಸಿಂಹಾಸನದಲ್ಲಿ ಮೂವತ್ತೆರಡು ಗೊಂಬೆಗಳಿದ್ದವು. ಅವುಗಳ ತಲೆಯ ಮೇಲೆ ಹೆಜ್ಜೆಯಿಡುತ್ತಾ ಹೋಗಿ ಸಿಂಹಾಸನದಲ್ಲಿ ಕುಳಿತುಕೊಳ್ಳಬೇಕಿತ್ತು. ದೇವೇಂದ್ರನಿಂದ ಅತಿಮನೋಹರವಾದ ಆ ಸಿಂಹಾಸನವನ್ನು ಪಡೆದು ವಿಕ್ರಮಾದಿತ್ಯನು ಸಂತೋಷದಿಂದ ತನ್ನ ನಗರವಾದ ಉಜ್ಜಯಿನಿಗೆ ಬಂದನು. ಅನಂತರ ಶುಭಮುಹೂರ್ತದ ಶುಭಲಗ್ನದಲ್ಲಿ ಅದರ ಮೇಲೆ ಕುಳಿತು ರಾಜ್ಯಭಾರ ಮಾಡುತ್ತಿದ್ದನು.
ವಿಕ್ರಮಾದಿತ್ಯನ ಮಹಾಪ್ರಯಾಣ
ಕೆಲವು ವರ್ಷಗಳು ಕಳೆಯಲು ಪ್ರತಿಷ್ಠಾನನಗರದಲ್ಲಿ ಶೇಷನಾಗೇಂದ್ರನ ಅನುಗ್ರಹದಿಂದ ಎರಡೂವರೆ ವರ್ಷದ ಕನ್ಯೆಯೊಬ್ಬಳಲ್ಲಿ ಶಾಲಿವಾಹನ ಎಂಬ ಕುಮಾರನು ಹುಟ್ಟಿದನು. ಬಳಿಕ ಒಮ್ಮೆ ಉಜ್ಜಯಿನಿಯಲ್ಲಿ ಭೂಕಂಪ, ಧೂಮಕೇತು ಕಾಣಿಸಿಕೊಳ್ಳುವುದು ಇತ್ಯಾದಿ ಅಪಶಕುನಗಳು ಉಂಟಾದವು. ರಾಜನಾದ ವಿಕ್ರಮಾದಿತ್ಯನು ದೈವಜ್ಞರನ್ನು ಕರೆದು, ‘‘ಎಲೈ ಪಂಡಿತರೆ, ಇದೇನು, ಈ ರೀತಿಯ ಉತ್ಪಾತಗಳು ಕಂಡುಬರುತ್ತಿವೆ, ಇವುಗಳ ಫಲ ಏನು, ಇವು ಏನನ್ನು ಸೂಚಿಸುತ್ತವೆ?” ಎಂದು ಕೇಳಿದನು.
ಅವರು ‘‘ಮಹಾರಾಜ, ಭೂಕಂಪ ಸಂಧ್ಯಾಕಾಲದಲ್ಲಿ ಆಗಿದೆ. ಆದ್ದರಿಂದ ಇದು ಮಹಾರಾಜನ ವಿನಾಶವನ್ನು ಸೂಚಿಸುತ್ತದೆ ಎಂದು ನಾರದಪುರಾಣದಲ್ಲಿ ಹೇಳಿದೆ” ಎಂದರು.
ದೈವಜ್ಞರ ಮಾತನ್ನು ಕೇಳಿ ಮಹಾರಾಜನು, ‘‘ಸ್ವಾಮಿ, ಹಿಂದೊಮ್ಮೆ ನಾನು ಈಶ್ವರನನ್ನು ತಪಸ್ಸಿನಿಂದ ಸಂತೋಷಪಡಿಸಿದ್ದೆ. ಆಗ ಈಶ್ವರನು ಪ್ರತ್ಯಕ್ಷನಾಗಿ ‘ಮಗನೇ, ನಾನು ಪ್ರಸನ್ನನಾಗಿದ್ದೇನೆ, ವರವನ್ನು ಬೇಡಿಕೋ’ ಎಂದು ಹೇಳಿದನು. ಆಗ ನಾನು – ‘ದೇವ, ನನಗೆ ಮರಣವಿರುವುದಾದರೆ ಎರಡೂವರೆ ವರ್ಷದ ಕನ್ಯೆಯಲ್ಲಿ ಹುಟ್ಟಿದ ಮಗನಿಂದಲ್ಲದೆ ಬೇರೆ ಯಾರಿಂದಲೂ ಬರಬಾರದು’ ಎಂದು ವರವನ್ನು ಬೇಡಿಕೊಂಡೆನು. ಈಶ್ವರನು ‘ಹಾಗೆಯೇ ಆಗಲಿ’ ಎಂದನು. ಜಗತ್ತಿನಲ್ಲಿ ಹೀಗೆ ನಡೆಯುವುದು ಎಂದಿಗಾದರೂ ಸಾಧ್ಯವೆ, ಎರಡೂವರೆ ವರ್ಷದ ಕನ್ಯೆಗೆ ಮಗು ಹುಟ್ಟುವುದು ಎಲ್ಲಾದರೂ ಉಂಟೆ, ಹೀಗಿರುವಾಗ ನನ್ನ ವಿನಾಶ ಹೇಗೆ ಸಾಧ್ಯ?” ಎಂದು ಅವರನ್ನೇ ಕೇಳಿದನು.
ಅದನ್ನು ಕೇಳಿದ ದೈವಜ್ಞರು, ‘‘ಮಹಾರಾಜ, ದೈವಸೃಷ್ಟಿ ಚಿಂತನೆಗೆ ಮೀರಿದ್ದು. ಆದ್ದರಿಂದ ಆ ರೀತಿಯಲ್ಲಿ ಯಾರೋ ಒಬ್ಬ ಎಲ್ಲೋ ಹುಟ್ಟಿರಬೇಕು” ಎಂದರು. ಬಳಿಕ ವಿಕ್ರಮಾದಿತ್ಯನು ಆತಂಕದಿಂದ ಬೇತಾಳನನ್ನು ಕರೆದು ಅವನಿಗೆ ಎಲ್ಲವನ್ನೂ ತಿಳಿಸಿ ‘‘ನೀನು ಭೂಲೋಕದಲ್ಲಿ ಎಲ್ಲ ಕಡೆ ಸಂಚರಿಸುತ್ತ ಈ ರೀತಿಯ ಹುಡುಗನು ಯಾವ ದೇಶದಲ್ಲಿ ಯಾವ ನಗರದಲ್ಲಿ ಹುಟ್ಟಿದ್ದಾನೆ ಎಂದು ತಿಳಿದುಕೊಂಡು ಬೇಗ ಬಾ” ಎಂದು ಆಜ್ಞಾಪಿಸಿದನು. ಬೇತಾಳನು ಅವನ ಆಜ್ಞೆಯನ್ನು ಶಿರಸಾವಹಿಸಿ ಅಲ್ಲಿಂದ ಹೊರಟನು.
ಅವನು ಕುಶದ್ವೀಪಗಳಲ್ಲಿ ಸಂಚರಿಸಿ ಎಲ್ಲ ಕಡೆ ನೋಡಿ, ಆನಂತರ ಜಂಬೂದ್ವೀಪಕ್ಕೆ ಬಂದು ಪ್ರತಿಷ್ಠಾನನಗರಕ್ಕೆ ತಲಪಿದನು. ಅಲ್ಲಿ ಕುಂಬಾರನ ಮನೆಯಲ್ಲಿ ಒಬ್ಬಳು ಕನ್ಯೆ ಮತ್ತು ಒಬ್ಬ ಹುಡುಗ ಇಬ್ಬರೂ ಆಟವಾಡುತ್ತ ಇದ್ದರು. ಅವರನ್ನು ನೋಡಿ ಬೇತಾಳನು, ‘‘ನಿಮ್ಮಿಬ್ಬರಿಗೆ ಪರಸ್ಪರ ಏನು ಸಂಬಂಧ?” ಎಂದು ಕೇಳಿದನು. ಆಗ ಆ ಕನ್ಯೆಯು ‘‘ಇವನು ನನ್ನ ಮಗ, ನಾನು ಇವನ ತಾಯಿ” ಎಂದು ಹೇಳಿದಳು.
ಬೇತಾಳನು ಹುಡುಗನಿಗೆ ‘‘ನಿನ್ನ ತಂದೆ ಯಾರು?” ಎಂದು ಕೇಳಿದನು. ಆಗ ಅವನು ಒಬ್ಬ ಬ್ರಾಹ್ಮಣನನ್ನು ತೋರಿಸಿದನು. ಆಗ ಬೇತಾಳನು ಆ ಬ್ರಾಹ್ಮಣನನ್ನು ‘‘ಇವಳು ಯಾರು?” ಎಂದು ಕೇಳಿದನು.
ಬ್ರಾಹ್ಮಣನು ‘‘ಇವಳು ನನ್ನ ಮಗಳು. ಇವನು ಇವಳ ಮಗ” ಎಂದು ಹೇಳಿದನು. ಆಶ್ಚರ್ಯಗೊಂಡ ಬೇತಾಳನು ಮತ್ತೆ ಅವನನ್ನು ‘‘ಎಲೈ ಬ್ರಾಹ್ಮಣ, ಹೇಗೆ ಇದು ಸಾಧ್ಯ?” ಎಂದು ಕೇಳಿದನು.
ಬ್ರಾಹ್ಮಣನು, ‘‘ದೇವರ ಚರಿತ್ರೆ ಅಗೋಚರವಾದದ್ದು. ಶೇಷನಾಗೇಂದ್ರನು ಇವಳ ಸಂಗಮ ಮಾಡಿದ್ದಾನೆ. ಆ ಕಾರಣದಿಂದ ಅವಳಲ್ಲಿ ಮಗನು ಹುಟ್ಟಿದ್ದಾನೆ. ಇವನು ಶಾಲಿವಾಹನ” ಎಂದು ಹೇಳಿದನು. ಅದನ್ನು ಕೇಳಿದ ಬೇತಾಳನು ಆ ಕ್ಷಣವೇ ಉಜ್ಜಯಿನಿಗೆ ಬಂದು ವಿಕ್ರಮಾದಿತ್ಯನಿಗೆ ಎಲ್ಲ ವೃತ್ತಾಂತವನ್ನು ತಿಳಿಸಿದನು. ಮಹಾರಾಜನು ಅವನಿಗೆ ಬಹುಮಾನವನ್ನು ಕೊಟ್ಟು ಖಡ್ಗವನ್ನು ಹಿಡಿದುಕೊಂಡು ಪ್ರತಿಷ್ಠಾನನಗರಕ್ಕೆ ಹೊರಟನು. ಅಲ್ಲಿ ತಲಪಿ ಶಾಲಿವಾಹನನನ್ನು ಕಂಡು ಅವನನ್ನು ಕೊಲ್ಲಲು ಮುಂದಾಗುವಷ್ಟರಲ್ಲಿ ಶಾಲಿವಾಹನನೇ ತನ್ನ ಕೈಯಲ್ಲಿದ್ದ ಕೋಲಿನಿಂದ ಅವನನ್ನು ಹೊಡೆದನು. ಆ ಹೊಡೆತಕ್ಕೆ ವಿಕ್ರಮಾದಿತ್ಯನು ತರಗೆಲೆಯಂತಾಗಿ ಪ್ರತಿಷ್ಠಾನನಗರದಿಂದ ಉಜ್ಜಯಿನಿಗೆ ಬಂದು ಬಿದ್ದನು. ನೋವನ್ನು ತಡೆಯಲಾರದೆ ಸ್ವಲ್ಪ ಹೊತ್ತಿನಲ್ಲೇ ಶರೀರವನ್ನು ತ್ಯಜಿಸಿದನು.
ಸಿಂಹಾಸನ ನಿಕ್ಷೇಪಣೆ
ಬಳಿಕ ವಿಕ್ರಮಾದಿತ್ಯನ ಎಲ್ಲ ರಾಣಿಯರು ಅಗ್ನಿಪ್ರವೇಶ ಮಾಡಲು ಮುಂದಾದರು. ಆಗ ಮಂತ್ರಿಗಳೆಲ್ಲ ಸೇರಿ ‘ಈ ಮಹಾರಾಜನಿಗೆ ಸಂತತಿ ಇಲ್ಲ, ಆದ್ದರಿಂದ ಮುಂದೆ ಏನು ಮಾಡಬೇಕು?’ ಎಂದು ವಿಚಾರ ಮಾಡತೊಡಗಿದರು. ಆಗ ಭಟ್ಟಿ ಎಂಬ ಪ್ರಧಾನಮಂತ್ರಿಯು ‘‘ಈ ರಾಣಿಯರಲ್ಲಿ ಯಾರಾದರೂ ಗರ್ಭಿಣಿಯಾಗಿದ್ದಾಳೆಯೋ ಎಂದು ಮೊದಲು ವಿಚಾರಿಸಿರಿ” ಎಂದನು. ಹೀಗೆ ವಿಚಾರಿಸಿದಾಗ ಒಬ್ಬಳು ಏಳು ತಿಂಗಳ ಗರ್ಭಿಣಿ ಎಂದು ತಿಳಿದುಬಂತು. ಆಗ ಎಲ್ಲ ಮಂತ್ರಿಗಳು ಅವಳ ಗರ್ಭಕ್ಕೇ ಅಭಿಷೇಕ ಮಾಡಿಸಿದರು. ಬಳಿಕ ತಾವೇ ಪ್ರತಿನಿಧಿಗಳಾಗಿ ರಾಜ್ಯವನ್ನು ಆಳಲು ತೊಡಗಿದರು. ದೇವೇಂದ್ರನಿಂದ ಪಡೆದ ಸಿಂಹಾಸನ ಮಾತ್ರ ಶೂನ್ಯವೇ ಆಗಿತ್ತು.
ಹೀಗಿರುವಾಗ ಒಮ್ಮೆ ರಾಜಸಭೆಯಲ್ಲಿ ಅಶರೀರವಾಣಿಯಾಯಿತು – ‘‘ಎಲೈ ಮಂತ್ರಿಗಳೆ, ರಾಜ್ಯವನ್ನು ಆಳಲು ಮತ್ತು ಈ ಸಿಂಹಾಸನದಲ್ಲಿ ಕುಳಿತುಕೊಳ್ಳಲು ಯೋಗ್ಯನಾದ ಮಹಾರಾಜನು ಈಗ ಇಲ್ಲ. ಆದ್ದರಿಂದ ಯಾವುದಾದರೊಂದು ಪುಣ್ಯಸ್ಥಳದಲ್ಲಿ ಈ ಸಿಂಹಾಸನವನ್ನು ಹುಗಿದು ಸುರಕ್ಷಿತವಾಗಿ ಇಟ್ಟು ಬಿಡಿ” ಎಂದು. ಅದನ್ನು ಕೇಳಿ ಮಂತ್ರಿಗಳು ಅತ್ಯಂತ ಪವಿತ್ರವಾದ ಸ್ಥಳದಲ್ಲಿ ಆಳವಾಗಿ ಅಗೆದು ಸಿಂಹಾಸನವನ್ನು ಅಲ್ಲಿ ಹುಗಿದುಬಿಟ್ಟರು. ಹೀಗೆ ಅನೇಕ ವರ್ಷಗಳು ಕಳೆದುಹೋದವು.
ಭೋಜರಾಜನಿಗೆ ಸಿಂಹಾಸನವು ದೊರಕಿದ ಕಥೆ
ಕೆಲವು ವರ್ಷಗಳು ಕಳೆದ ಮೇಲೆ ಭೋಜರಾಜನು ಭೂಮಂಡಲಕ್ಕೆ ಅಧಿಪತಿಯಾದನು. ಅವನು ರಾಜ್ಯವನ್ನು ಪಾಲಿಸುತ್ತಿದ್ದ ಕಾಲದಲ್ಲಿ ಹಿಂದೆ ಸಿಂಹಾಸನವನ್ನು ಹುಗಿದಿದ್ದ ಸ್ಥಳ ಈಗ ಒಬ್ಬ ಬಡ ಬ್ರಾಹ್ಮಣನದಾಗಿತ್ತು. ಆದರೆ ಬಾಹ್ಮಣನಿಗೆ ಅದರ ಅರಿವೇ ಇರಲಿಲ್ಲ. ಅವನು ಅಡಿಯಲ್ಲಿ ಸಿಂಹಾಸನವಿದ್ದ ಆ ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಅಲ್ಲಿ ಜೋಳವನ್ನು ಬಿತ್ತಿದನು. ಕೆಲವೇ ದಿನಗಳಲ್ಲಿ ಪೈರು ಚೆನ್ನಾಗಿ ಬಂತು. ಜೋಳದ ಗಿಡಗಳೆಲ್ಲ ತೆನೆಗಳಿಂದ ಬಾಗಿದವು. ಅದನ್ನು ತಿನ್ನಲು ಹಕ್ಕಿಗಳ ದಂಡೇ ಬರುತ್ತಿತ್ತು. ಹಕ್ಕಿಗಳಿಂದ ಜೋಳವನ್ನು ರಕ್ಷಿಸುವುದು ದೊಡ್ಡ ಕೆಲಸವೇ ಆಗಿತ್ತು. ಹೊಲದಲ್ಲಿ ಸಿಂಹಾಸನವನ್ನು ಹುಗಿದಿದ್ದ ಜಾಗ ಸ್ವಲ್ಪ ಎತ್ತರವಾಗಿದ್ದು ದಿಬ್ಬದಂತಿತ್ತು. ಬ್ರಾಹ್ಮಣನು ಆ ದಿಬ್ಬದ ಮೇಲೆ ಕುಳಿತುಕೊಂಡು ಧಾನ್ಯಗಳನ್ನು ತಿನ್ನಲು ಬರುತ್ತಿರುವ ಹಕ್ಕಿಗಳನ್ನು ಓಡಿಸುತ್ತಿದ್ದ.
ಒಮ್ಮೆ ಭೋಜರಾಜನು ವಿಹಾರಕ್ಕೆಂದು ರಾಜಕುಮಾರರೊಂದಿಗೆ ಆ ಹೊಲದ ಬಳಿಗೆ ಬಂದನು. ಆಗ ದಿಬ್ಬದ ಮೇಲೆ ಕುಳಿತಿದ್ದ ಬ್ರಾಹ್ಮಣನು ಅವನನ್ನು ನೋಡಿ – “ಎಲೈ ಮಹಾರಾಜ, ಈ ಕ್ಷೇತ್ರದಲ್ಲಿ ಧಾನ್ಯವು ಚೆನ್ನಾಗಿ ಬೆಳೆದಿದೆ. ಸೈನ್ಯದೊಂದಿಗೆ ನೀನು ಹತ್ತಿರ ಬಂದು ಧಾನ್ಯವನ್ನು ಸೇವಿಸು. ನಿನ್ನ ಕುದುರೆಗಳಿಗೆ ಕಡಲೆಧಾನ್ಯವÀನ್ನು ತಿನ್ನಿಸು. ಇಂದಿಗೆ ನನ್ನ ಜನ್ಮ ಸಾರ್ಥಕವಾಯ್ತು. ನೀನು ನನ್ನ ಅತಿಥಿಯಾಗಿರುವೆ. ಈ ರೀತಿಯ ಅವಕಾಶ ಎಲ್ಲಿ ದೊರೆಯುತ್ತದೆ?” ಎಂದು ಹೇಳಿದನು.
ಅದನ್ನು ಕೇಳಿದ ಭೋಜರಾಜನು ಸೈನ್ಯಸಮೇತನಾಗಿ ಹೊಲಕ್ಕೆ ಪ್ರವೇಶಿಸಿದನು. ಬಳಿಕ ಬ್ರಾಹ್ಮಣನು ದಿಬ್ಬದಿಂದ ಇಳಿದು ಹೊಲದ ಮಧ್ಯಕ್ಕೆ ಬಂದು ರಾಜನನ್ನು ನೋಡಿ ‘‘ಎಲೈ ಮಹಾರಾಜ, ಯಾಕೆ ಹೀಗೆ ಅಧರ್ಮವನ್ನು ಆಚರಿಸುತ್ತೀ? ಈ ಬಡ ಬ್ರಾಹ್ಮಣನ ಹೊಲವನ್ನು ಹಾಳುಮಾಡುತ್ತೀಯಾ? ಜನರು ಅಧರ್ಮವನ್ನು ಆಚರಿಸಿದರೆ ಆಗ ಅದರ ಪ್ರತೀಕಾರಕ್ಕಾಗಿ ರಾಜನಲ್ಲಿ ಮೊರೆ ಇಡಲಾಗುತ್ತದೆ. ಆದರೆ ಇಲ್ಲಿ ನೀನೇ ಅಧರ್ಮಪ್ರವರ್ತಕನಾದೆಯಲ್ಲ. ನೀನು ಧರ್ಮಶಾಸ್ತ್ರವನ್ನು ತಿಳಿದಿಲ್ಲವೆ? ಯಾಕೆ ಹೀಗೆ ಬ್ರಾಹ್ಮಣನ ಸಂಪತ್ತನ್ನು ನಾಶಪಡಿಸುತ್ತೀಯೆ?” ಎಂದು ಕೇಳಿದನು.
ಆ ಮಾತನ್ನು ಕೇಳಿ ಮಹಾರಾಜನು ತನ್ನ ಪರಿವಾರದೊಂದಿಗೆ ಹೊಲದಿಂದ ಹೊರಕ್ಕೆ ನಡೆದನು. ಆನಂತರ ಹಕ್ಕಿಗಳನ್ನೆಲ್ಲ ಓಡಿಸಿ ಬ್ರಾಹ್ಮಣನು ಮತ್ತೆ ಅದೇ ದಿಬ್ಬವನ್ನೇರಿ ಕುಳಿತನು. ಆಗ ಅವನು ಮತ್ತೆ ಇವರನ್ನು ಉದ್ದೇಶಿಸಿ ‘‘ಎಲೈ ಮಹಾರಾಜ, ಯಾಕೆ ಹಾಗೆ ಹೋಗುತ್ತಿರುವಿರಿ? ಹೊಲದಲ್ಲಿ ಚೆನ್ನಾಗಿ ಬೆಳೆ ಬೆಳೆದಿದೆ. ಜೋಳದ ಕಾಂಡಗಳನ್ನು ಕುದುರೆಗಳು ತಿನ್ನಲಿ. ಸೌತೆಕಾಯಿಗಳು ಇವೆ. ಅವುಗಳನ್ನು ನೀವು ತಿನ್ನಿರಿ” ಎಂದು ಹೇಳಿದನು.
ಮಹಾರಾಜನು ಆಶ್ಚರ್ಯಗೊಂಡನು. ಆದರೂ ಬ್ರಾಹ್ಮಣನ ಮಾತನ್ನು ಕೇಳಿ ಮತ್ತೆ ಪರಿವಾರದೊಂದಿಗೆ ಹೊಲಕ್ಕೆ ಪ್ರವೇಶಿಸಿದನು. ಆಗ ಹಕ್ಕಿಗಳನ್ನು ಓಡಿಸಲು ಬ್ರಾಹ್ಮಣನು ದಿಬ್ಬದಿಂದ ಕೆಳಗಿಳಿದು ಬಂದನು. ಮತ್ತೆ ಮಹಾರಾಜನನ್ನು ‘‘ನೀನು ಯಾಕೆ ನನ್ನ ಹೊಲವನ್ನು ನಾಶಮಾಡುತ್ತಿದ್ದೀ?” ಎಂದು ಮೊದಲಿನಂತೆ ಕೇಳಿದನು.
ಆಗ ಮಹಾರಾಜನು ತನ್ನ ಮನಸ್ಸಿನಲ್ಲಿ ‘ಆಶ್ಚರ್ಯವಾಗಿದೆ! ಬ್ರಾಹ್ಮಣನು ದಿಬ್ಬದ ಮೇಲೆ ಇದ್ದಾಗ ಅವನ ಮನಸ್ಸಿನಲ್ಲಿ ‘ನಾನು ದಾನ ಮಾಡಬೇಕು’ ಎಂಬ ಬುದ್ಧಿ ಉಂಟಾಗುತ್ತದೆ. ದಿಬ್ಬದಿಂದ ಕೆಳಗಿಳಿದಾಗ ಅವನಲ್ಲಿ ದಾನ ಮಾಡುವ ಬುದ್ಧಿ ಇಲ್ಲವಾಗುತ್ತದೆ. ಇದಕ್ಕೆ ಕಾರಣವೇನಿರಬಹುದು? ನಾನೇ ದಿಬ್ಬವನ್ನು ಏರಿ ನೋಡುತ್ತೇನೆ’ ಎಂದುಕೊಂಡು ಆ ದಿಬ್ಬವನ್ನು ಏರಿದನು.
ಆಗ ಅವನ ಮನಸ್ಸಿನ ಭಾವನೆ ಹೀಗಿತ್ತು – ‘ನಾನು ವಿಶ್ವದ ಪೀಡೆಯನ್ನು ಪರಿಹರಿಸಬೇಕು. ಎಲ್ಲ ಜನರ ದಾರಿದ್ರ್ಯವನ್ನು ದೂರಮಾಡಬೇಕು. ದುಷ್ಟರನ್ನು ದಂಡಿಸಬೇಕು, ಸಜ್ಜನರನ್ನು ಪಾಲಿಸಬೇಕು, ಪ್ರಜೆಗಳನ್ನು ಧರ್ಮದಿಂದ ರಕ್ಷಿಸಬೇಕು, ಹೆಚ್ಚೇನು, ಈ ಸಮಯದಲ್ಲಿ ಯಾರಾದರೂ ಬಂದು ನನ್ನ ಶರೀರವನ್ನೇ ಕೇಳಿದರೂ ನಾನು ಕೊಡಬೇಕು’ ಎಂಬ ಭಾವನೆ ಮೂಡಿತ್ತು.
ಅವನು ಮತ್ತೆ ಚಿಂತಿಸಿ – ‘ಅರೇ, ಈ ದಿಬ್ಬವು ಈ ರೀತಿಯ ಬುದ್ಧಿಯನ್ನು ಹುಟ್ಟಿಸುತ್ತದೆ ಅಂದರೆ ಇದು ಈ ದಿಬ್ಬದ್ದೇ ವಿಶೇಷತೆ ಇರಬಹುದು’ ಎಂದು ನಿಶ್ಚಯಿಸಿಕೊಂಡು ಆ ಬ್ರಾಹ್ಮಣನನ್ನು ಕರೆದು – ‘‘ಎಲೈ ಬ್ರಾಹ್ಮಣನೇ, ಈ ಹೊಲದಿಂದ ನಿನಗೆ ಎಷ್ಟು ಲಾಭವು ದೊರೆಯುತ್ತದೆಯೋ ಅದಕ್ಕಿಂತ ಹೆಚ್ಚು ಹಣವನ್ನು ನಾನು ನಿನಗೆ ಕೊಡುತ್ತೇನೆ. ಈ ಹೊಲವನ್ನು ನನಗೆ ಕೊಡು” ಎಂದನು.
ಬ್ರಾಹ್ಮಣನು ಸಂತೋಷದಿಂದ ಒಪ್ಪಿಕೊಂಡನು. ಬಳಿಕ ರಾಜನು ಬ್ರಾಹ್ಮಣನನ್ನು ಧನಧಾನ್ಯಗಳಿಂದ ಗೌರವಿಸಿ ಆ ಹೊಲವನ್ನು ಕೊಂಡುಕೊಂಡನು. ಆನಂತರ ಆ ದಿಬ್ಬವನ್ನು ಅಗೆಸಲು ಪ್ರಾರಂಭ ಮಾಡಿದನು. ಸಾಕಷ್ಟು ಅಗೆದ ಮೇಲೆ ಅಲ್ಲಿ ಮನೋಹರವಾದ ಶಿಲೆಯೊಂದು ಕಂಡುಬಂದಿತು. ಆ ಶಿಲೆಯನ್ನು ಸರಿಸಿದಾಗ ಅದರ ಕೆಳಗೆ ಚಂದ್ರಕಾಂತಶಿಲೆಯಿಂದ ಮಾಡಿದ ನಾನಾರತ್ನಖಚಿತವಾದ ಸಿಂಹಾಸನವು ಕಾಣಿಸಿತು. ಅದನ್ನು ನೋಡಿ ಭೋಜರಾಜನು ಪರಮಾನಂದಭರಿತನಾಗಿ ಸಿಂಹಾಸನವನ್ನು ನಗರಕ್ಕೆ
ತೆಗೆದುಕೊಂಡು ಹೋಗಲು ನಿಶ್ಚಯಿಸಿದನು. ಆದರೆ ಆ ಸಿಂಹಾಸನವನ್ನು ಅಲುಗಾಡಿಸುವುದಕ್ಕೂ ಸಾಧ್ಯವಾಗಲಿಲ್ಲ. ಆಗ ಅವನ ಮಂತ್ರಿಯು, ‘‘ಮಹಾರಾಜ, ಇದು ದಿವ್ಯವಾದ ಮತ್ತು ಅಪೂರ್ವವಾದ ಸಿಂಹಾಸನ. ಬಲಿ ಹೋಮ ಪೂಜಾದಿಗಳಿಲ್ಲದೆ ಇದನ್ನು ಅಲ್ಲಾಡಿಸುವುದು ಸಾಧ್ಯವಾಗುವುದಿಲ್ಲ” ಎಂದು ಹೇಳಿದನು.
ಮಹಾರಾಜನು ಮಂತ್ರಿಯ ಮಾತನ್ನು ಕೇಳಿ ಆ ಕೂಡಲೆ ಪುರೋಹಿತರನ್ನು ಕರೆಸಿ ಅವರಿಂದ ಎಲ್ಲ ರೀತಿಯ ಪೂಜಾವಿಧಾನಗಳನ್ನು ಮಾಡಿಸಿದನು. ಆ ಮೇಲೆ ಸಿಂಹಾಸನವನ್ನು ಅಲ್ಲಾಡಿಸಲು ಸಾಧ್ಯವಾಯಿತು. ಆಮೇಲೆ ಮಹಾರಾಜನು ಆ ಸಿಂಹಾಸನವನ್ನು
ನಗರಕ್ಕೆ ಸಾಗಿಸಿದನು. ಅಲ್ಲಿ ಸಾವಿರ ಕಂಬಗಳಿರುವ ಮಂಟಪವೊಂದನ್ನು ಮಾಡಿಸಿ ಅಲ್ಲಿ ಆ ಸಿಂಹಾಸನವನ್ನು ಇರಿಸಿದನು. ಶುಭಮುಹೂರ್ತದಲ್ಲಿ ಮಂತ್ರಿಗಳೊಂದಿಗೆ ಬ್ರಾಹ್ಮಣರ ಆಶೀರ್ವಾದವನ್ನು ಪಡೆದು, ಸ್ತುತಿಪಾಠಕರು ಪ್ರಶಂಸೆ ಮಾಡುತ್ತಿರಲಾಗಿ ಛತ್ರಚಾಮರಗಳೊಂದಿಗೆ ಸಿಂಹಾಸನದ ಹತ್ತಿರಕ್ಕೆ ಬಂದನು. ಬಳಿಕ ಅದಕ್ಕೆ ನಮಸ್ಕರಿಸಿ ಅದನ್ನು ಏರಲು ಮೊದಲ ಮೆಟ್ಟಿಲಿನಲ್ಲಿ ಹೆಜ್ಜೆ ಇಟ್ಟನು. ಆಗ ಅಲ್ಲಿದ್ದ ಗೊಂಬೆಯು ಮನುಷ್ಯ ವಾಣಿಯಲ್ಲಿ ಮಹಾರಾಜನಿಗೆ ‘‘ಎಲೈ ರಾಜನೇ, ಇದು ಮಹಾಮಹಿಮನಾಗಿದ್ದ ವಿಕ್ರಮಾದಿತ್ಯನ ಸಿಂಹಾಸನ. ಅವನಲ್ಲಿದ್ದ ಶೌರ್ಯ-ಔದಾರ್ಯ-ಸತ್ತ್ವ ಮೊದಲಾದ ಗುಣಗಳು ನಿನ್ನಲ್ಲಿ ಇರುವುದಾದರೆ ನೀನು ಈ ಸಿಂಹಾಸನದಲ್ಲಿ ಕುಳಿತುಕೋ” ಎಂದಿತು.
(ಸಶೇಷ)