ಇದು ನಡೆದದ್ದು ಸುಮಾರು ಎರಡು ವರ್ಷಗಳ ಹಿಂದೆ. ಕುಂದಾಪುರದ ಕಾಲೇಜಿನಲ್ಲಿ ನನ್ನ ಜೊತೆಯಲ್ಲಿ ಕೆಲಸ ಮಾಡುವ ಸಹದ್ಯೋಗಿಯೊಬ್ಬಳೊಂದಿಗೆ ಜೊತೆ ಮಂಗಳೂರಿಗೆ ಹೋಗಿದ್ದೆ. ಎರಡು ದಿನ ರಜೆ ಇದ್ದುದರಿಂದ ಮಂಗಳೂರಿನಲ್ಲೇ ಒಂದು ರಾತ್ರಿ ಉಳಿದುಕೊಂಡು, ಮನಸ್ಸು ತುಂಬುವಷ್ಟು ಪೇಟೆ ಸುತ್ತಿ, ಸಾಕೆನಿಸುವಷ್ಟು ವಿಂಡೋ-ಶಾಪಿಂಗ್ ಮಾಡಿ, ಸಾಗರದ ನೀರಿನಲ್ಲಿ ಆಡಿ, ಹೊರಳಾಡಿ, ಹೊಸ ಹೊಸ ಹೋಟೆಲಿನ ಹೊಸ ಹೊಸ ತಿನಿಸುಗಳನ್ನು ಸವಿದು ಬರುವ ಯೋಚನೆ ನಮ್ಮದು.
ಅಂದುಕೊಂಡಂತೆ ಸಿಟಿಸೆಂಟರ್ ಮಾಲ್ನ ಹತ್ತಿರದ, ನಮ್ಮ ಪರಿಚಯದವರ ಒಳ್ಳೆಯ ಲಾಡ್ಜ್ನಲ್ಲಿ ಕೋಣೆಯೊಂದನ್ನು ಬಾಡಿಗೆ ಹಿಡಿದು, ನಮ್ಮ ಚೀಲಗಳನ್ನು ಅಲ್ಲಿ ಬಿಸಾಡಿ ಮೊದಲು ಬಂದದ್ದೆ ಮಂಗಳೂರಿನ ಪ್ರಸಿದ್ಧ ತಣ್ಣೀರುಬಾವಿ ಬೀಚಿಗೆ. ಬರುವಷ್ಟರಲ್ಲೇ ಮಧ್ಯಾಹ್ನ ದಾಟಿತ್ತು. ಸಾಗರವೆಂದರೆ ಅದೇಕೋ ಅನನ್ಯ ಪ್ರೀತಿ ನನಗೆ. ನಮ್ಮ ಊರಿನ ತುಂಬಾ ಸಾಗರವೇ ಹರಡಿಕೊಂಡಿದ್ದರೂ, ಅದರ ಮೇಲಿನ ಪ್ರೀತಿ ಮಾತ್ರ ಕಡಮೆಯೇ ಆಗುವುದಿಲ್ಲ. ಪ್ರೀತಿಯೋ, ದುರಾಸೆಯೋ ಏನಾದರೂ ಅಂದುಕೊಳ್ಳಿ. ಸಾಗರವನ್ನು ನೋಡುತ್ತಾ ಕಾಲ ಕಳೆದದ್ದು ತಿಳಿಯಲೇ ಇಲ್ಲ. ನೋಡನೋಡುತ್ತಲೇ ಸಂಜೆಯಾಗುತ್ತಾ ಬಂದಿತ್ತು. ರಭಸವಾದ ಸಾಗರದ ಅಲೆಗಳ ಹಿಂದೆ, ನಾಚಿಕೊಂಡಿರುವಂತೆ ಸೂರ್ಯ ಸಾಗರದ ಅಂಚಿನಲ್ಲಿ ಮೋಡಗಳ ಹಿಂದೆ ಮರೆಯಾಗುವುದು ಮತ್ತೆ ಕಾಣಿಸಿಕೊಳ್ಳುವುದು ಮಾಡುತ್ತಲೇ ಮೆಲ್ಲನೆ ಸಮುದ್ರದೊಳಗೆ ಮುಳುಗಿ ಹೋಗಲು ತವಕಿಸುತ್ತಿದ್ದ. ನನ್ನಂತೆ ಅವನಿಗೂ ಸಾಗರದ ಬಗ್ಗೆ ಬಹಳ ಪ್ರೀತಿ ಇರಬೇಕು. ಸಂಜೆಯಾಗುತ್ತಾ ಆಗುತ್ತಾ ಸುತ್ತಲೂ ಜನರ ಗದ್ದಲ, ಮಕ್ಕಳ ಕೇಕೆ ಹೆಚ್ಚುತ್ತಾ ಹೋಯಿತು.
ಬಂದಾಗಿನಿಂದ ಸೊಟ್ಟಗಿನ ಸೆಲ್ಫಿ ತೆಗೆದೂ ತೆಗೆದೂ ಸಾಕಾಗಿತ್ತು. ನೆಟ್ಟಗಿರುವ ಒಂದು ಫೋಟೋ ತೆಗೆಯಲು ಯಾರನ್ನು ಕೇಳುವುದು ಎಂದು ನಾವಿಬ್ಬರು ಮಾತನಾಡಿ ಮುಗಿಸುವಷ್ಟರಲ್ಲಿ, ಮಧ್ಯಾಹ್ನ ಲಾಡ್ಜ್ನ ರಿಸೆಪ್ಶನ್ ಬಳಿ ಕಂಡು ಮಾಯವಾಗಿದ್ದ ಆ ಮುಖ ಅಲ್ಲೇ ಪಕ್ಕದಲ್ಲೇ ಕಾಣಿಸಿಕೊಳ್ಳಬೇಕೇ! ಸಂಜೆಯ ಮುಗಿಲಿನ ಹಾಗೆ ಬಂಗಾರವರ್ಣದ ಕಣ್ಣುರೆಪ್ಪೆಗಳಿದ್ದ ಆ ಸುಂದರ ಯುವತಿಯ ಚಂದದ ಮುಖದ ಮುಂದೊಂದು ಕಪ್ಪನೆಯ ಕ್ಯಾಮರಾ. ದೃಷ್ಟಿ ತಾಗದಿರಲಿ ಎಂದು ನಮ್ಮಮ್ಮ ಇಡುವ ಕಪ್ಪು ಚುಕ್ಕೆಯಂತೆ. ಕ್ಯಾಮರಾ ಮರೆಮಾಡಲು ಸೋತು ಉಳಿದ ಅವಳ ಮುಖದ ಅಂಚುಗಳ ಮೇಲೆ ಸೂರ್ಯನ ಕಿರಣಗಳು ಬಿದ್ದು ಶ್ವೇತವರ್ಣದ ಮುಖಕ್ಕೆ ಕೇಸರಿಮಿಶ್ರಿತ ಅರಿಶಿಣ ಮೆತ್ತಿದಂತಾಗಿತ್ತು. ಅವಳು ವಿದೇಶದಿಂದ ಬಂದ ಒಬ್ಬ ಪ್ರವಾಸಿ ಎನ್ನುವುದಂತೂ ಸ್ಪಷ್ಟವಾಗಿ ಕಾಣುತ್ತಿತ್ತು ಅವಳ ಹಾವಭಾವಗಳಲ್ಲಿ. ನಾನು ಇಷ್ಟೆಲ್ಲಾ ಯೋಚಿಸುತ್ತಿರುವಷ್ಟರಲ್ಲಿ, ನನ್ನ ಜೊತೆಗಿದ್ದ, ನೀಳಕಾಯದ, ನವಿಲಿನ ಬಣ್ಣದ ಉಡುಗೆಯನ್ನು ತೊಟ್ಟ ನನ್ನ ಗೆಳತಿ ಹೆಚ್ಚು ಯೋಚಿಸುವ ಗೋಜಿಗೆ ಹೋಗದೆ ಚಂಗನೆ ಅವಳ ಮುಂದೆ ಹಾರಿ ನಿಂತು, “ಕ್ಷಮಿಸಿ, ನಮ್ಮದೊಂದು ಫೆÇೀಟೋ ತೆಗೆಯಲು ಸಾಧ್ಯವಾ?” ಎಂದು ಇಂಗ್ಲಿಷ್ನಲ್ಲಿ ಕೇಳಿಯೇ ಬಿಟ್ಟಳು. ಅವಳ ಧ್ವನಿಯಿಂದ ಸ್ವಲ್ಪ ಬೆಚ್ಚಿಬಿದ್ದರೂ, ಅವಳನ್ನೊಮ್ಮೆ ಮತ್ತು ನನ್ನನ್ನೊಮ್ಮೆ ನೋಡಿ, ಮುಗುಳುನಗೆ ಬೀರುತ್ತಾ, “ಶ್ಯೂರ್” ಎಂದಳು.
ಕೂಡಲೆ ಕೈ ಚಾಚಿ, “ಹಾಯ್, ನಾನು ಎಲ್ಸಾ” ಎಂದಳು. ನಾವಿಬ್ಬರೂ ಕೈಕುಲುಕಿ ನಮ್ಮ ನಮ್ಮ ಪರಿಚಯ ಮಾಡಿಕೊಂಡೆವು. ಅಂದಹಾಗೆ ನನ್ನ ಹೆಸರೇ ಹೇಳಲೆ ಇಲ್ಲ ನಿಮಗೆ. ನಾನು ಮೈತ್ರಿ. ನನ್ನ ನೀಳಕಾಯದ, ಬಣ್ಣಬಣ್ಣದ ಚಂದದ ಬಟ್ಟೆ ತೊಡುವ ಗೆಳತಿಯ ಹೆಸರು ಜನನಿ.
ಮುಗುಳುನಗೆಯಿಂದ ಪ್ರಾರಂಭವಾದ ನಮ್ಮ ಮಾತುಕತೆ ನಿಧಾನವಾಗಿ ತಣ್ಣೀರುಬಾವಿ ಬೀಚನ್ನು ಉಳಿದಷ್ಟು ಸಮಯ ಜೊತೆಗೆ ಸುತ್ತುವಷ್ಟು ಕೆಲವೇ ನಿಮಿಷಗಳಲ್ಲಿ ಬೆಳೆಯಿತು. ಆಕೆಯೂ ನಮ್ಮನ್ನು ಹೊಟೇಲಿನಲ್ಲಿ ನೋಡಿದ್ದಳಂತೆ. ನಾವು ಹಾಗೆ ಮರಳಿನ ಮೇಲೆ ಕಾಲುಗಳನ್ನು ತೊಯಿಸಿಕೊಳ್ಳುತ್ತಾ, ಮಾತನಾಡುತ್ತ ಸ್ವಲ್ಪ ದೂರ ನಡೆದು ಹೋಗಿದ್ದೆವು; ಆಗಲೇ ನಡೆದದ್ದು ಆ ಘಟನೆ. ಅಲ್ಲಿನ ಯಾತ್ರಿಗಳಿಗೆ ಕ್ರಯಕ್ಕೆ ಕೊಡುವ ಬಳಿಯ ಕುದುರೆಯನ್ನು ಏರಿದ್ದ ಧಡೂತಿ ಗಂಡಸೊಬ್ಬ ರಭಸವಾಗಿ ನುಗ್ಗಿ ಬಂದು ಎಲ್ಸಾಳನ್ನು ಅಸಭ್ಯವಾಗಿ ಮುಟ್ಟುವ ಪ್ರಯತ್ನ ಮಾಡಿದ. ಜೊತೆಗೆ ಅವನ ಮುಖದಲ್ಲಿ ವಿಕೃತನಗೆ ಬೇರೆ. ಒಂದೇ ಕ್ಷಣದಲ್ಲಿ ಜನನಿ ಅವಳನ್ನು ತನ್ನತ್ತ ಬಲವಾಗಿ ಎಳೆದುಕೊಂಡಳು. ಅಷ್ಟಕ್ಕೇ ನಿಲ್ಲದೆ ಕೂಡಲೆ ಬಗ್ಗಿ ಕೈಗೆ ಸಿಕ್ಕ ಅಲ್ಲೇ ಬಿದ್ದಿದ್ದ ಮರದತುಂಡನ್ನು ಅವನತ್ತ ಬೀಸಿದಳು. ಮರದ ತುಂಡೇನೂ ಅವನಿಗೆ ತಾಗಲಿಲ್ಲ. ಆದರೆ ಅದರಿಂದ ಇನ್ನೂ ಉತ್ತೇಜಿತನಾದ ಆ ಕುದುರೆಸವಾರ ಮತ್ತೊಮ್ಮೆ ನಮ್ಮತ್ತ ರಭಸದಿಂದ ಬರತೊಡಗಿದ. ಕೂಡಲೇ ನಾನು ಅಲ್ಲೇ ಚೆಂಡಿನೊಂದಿಗೆ ಆಡುತ್ತಿದ್ದ ಕಾಲೇಜಿನ ವಿದ್ಯಾರ್ಥಿಗಳಂತೆ ಕಾಣುತ್ತಿದ್ದ ಹುಡುಗರನ್ನು ನೋಡುತ್ತಾ ತುಳುವಿನಲ್ಲಿ, “ಹೆಲ್ಪ್ ಮಾಲ್ಪಿ ಪ್ಲೀಸ್” ಎಂದು ಅರಚಿದೆ. ನಾನು ಕಿರುಚಿದ್ದು ನೋಡಿ ಅವರೆಲ್ಲ ಏನು ಮಾಡಬೇಕು ಎಂದು ತಿಳಿಯದೆ ಗಲಿಬಿಲಿಗೊಂಡವರಂತೆ ನನ್ನತ್ತ ಬೆಪ್ಪಾಗಿ ನೋಡಿದರು. ಹೀಗೆ ಇದ್ದರೆ ಅವರು ಏನೂ ಮಾಡುವುದಿಲ್ಲ ಎಂಬ ಭಯದಿಂದ, ಅರೆಕ್ಷಣದಲ್ಲಿ ಮತ್ತೊಮ್ಮೆ ತುಳಿವಿನಲ್ಲೇ, “ಕಣ್ಣಿಗೆ ಕಾಣಿಸಲ್ವ ನಿಮಗೆ ಇಲ್ಲಿ ಏನಾಗ್ತಿದೆ ಅಂತ?” ಎಂದು ಅರಚಿದೆ. ಮುಂದೇನಾಯಿತು ಎಂದು ಹೇಳುವ ಆವಶ್ಯಕತೆ ಇಲ್ಲ ಎಂದುಕೊಳ್ಳುತ್ತೇನೆ. ಆ ಕುದುರೆಸವಾರ ಮತ್ತೆ ನಮ್ಮ ತಂಟೆಗೆ ಬರಲಿಲ್ಲ. ಆದರೆ ಆ ಒಂದು ಕ್ಷಣದಲ್ಲಿ ಬಹಳ ಭಯವಾದದ್ದು ಮಾತ್ರ ನಿಜ.
ಅಂದು ರಾತ್ರಿ ಊಟದ ನಂತರ ಹೋಟೆಲಿನ ರಿಸೆಪ್ಶನ್ ಬಳಿ ಜೋಡಿಸಿಟ್ಟಿದ್ದ ದಿನಪತ್ರಿಕೆಗಳನ್ನು ನೋಡೋಣ ಎಂದು ನಾನು ಕೆಳಗಿಳಿದು ಬಂದೆ. ಅದಾಗಲೇ ಯಾವುದೋ ದಿನಪತ್ರಿಕೆಯನ್ನು ಓದುತ್ತಾ ಎಲ್ಸಾ ಅಲ್ಲಿ ಕುಳಿತಿದ್ದಳು. ಫ್ಯಾನ್ ಜೋರಾಗಿ ತಿರುಗುತ್ತಿತ್ತು, ಆದರೂ ಅವಳ ಮುಖದ ತುಂಬಾ ಬೆವರು. ನನ್ನನ್ನು ನೋಡುತ್ತಲ್ಲೇ, ಸ್ವಲ್ಪ ಸೆಖೆ ಕಡಮೆಯಾಗಿದೆ ಎಂದು ನಿಟ್ಟುಸಿರುಬಿಟ್ಟಳು. “ಊಟ ಆಯ್ತಾ?” ಎಂದೆ ನಾನು. ಅವಳ ಮುಖದ ಮೇಲೊಂದು ನಗೆ ಅರಳಿತು. ಹೀಗೆ ಶುರುವಾದ ನಮ್ಮ ಮಾತುಗಳು ಕೂಡಲೇ ಅಂದು ಸಂಜೆಯ ಘಟನೆಯತ್ತ ಹೊರಳಿತು. ಘಟನೆಯ ಕುರಿತು, ಎರಡು ಮೂರು ಬಾರಿ “ಬಹಳ ಅಸಹ್ಯ ಅನಿಸುತ್ತಿದೆ ನನಗೆ” ಎಂದಳು, ಕಣ್ಣೆಲ್ಲ ಒದ್ದೆಮಾಡಿಕೊಂಡು. “ನನಗೂ ಭಯವಾಯಿತು. ಗೊತ್ತಾದರೆ ಮತ್ತೆ ಮಂಗಳೂರಿಗೆ ಒಬ್ಬಳೇ ಬರಲು ಅಮ್ಮ ಅಪ್ಪ ಇಬ್ಬರೂ ಖಂಡಿತ ಬಿಡುವುದಿಲ್ಲ” ಎಂದೆ. ಮಾತಿನ ನಡುವೆ ಒಮ್ಮೆಲೇ ನನ್ನನ್ನು ಅದೇನೋ ವಿಚಿತ್ರವಾದ ಕುಕ್ಕುಲತೆಯಿಂದ ನೋಡಿ, ನನ್ನ ಕೈ ಹಿಡಿದುಕೊಂಡು ಒಮ್ಮೆ ವಿಷಾದದಿಂದ ನಕ್ಕಳು. ಅರ್ಥವಾಗದ ಆ ನಗು ಒಂದಷ್ಟು ಕಾಲ ಹಾಗೇ ಉಳಿದದ್ದು ಅವಳ ಮುಖದ ಮೇಲೋ ಅಥವಾ ನನ್ನ ಮನಸ್ಸಿನಲ್ಲೋ ಎಂಬುದರ ಕುರಿತು ನನಗಿನ್ನೂ ಅನುಮಾನವಿದೆ. ಬಿಗುವಿನ ಆ ವಿಚಿತ್ರ ಸನ್ನಿವೇಶವನ್ನು ತಿಳಿಮಾಡೋಣ ಎಂದು, “ಏನು ಓದುತ್ತಿದ್ದೆ ಅದು, ನಿಲ್ಲಿಸಿಬಿಟ್ಟೆಯಲ್ಲಾ” ಎಂದೆ. ಅವಳು ಮೌನವಾದಳು. ಏನು ಮಾಡುವುದು ಎಂದು ತಿಳಿಯದೆ ನಾನು ನನ್ನ ಪಾಡಿಗೆ ಕುಳಿತು ಅಂದಿನ ದಿನಪತ್ರಿಕೆಯೊಂದನ್ನು ಎತ್ತಿಕೊಂಡೆ.
ಒಂದೆರೆಡು ನಿಮಿಷಗಳ ಬಳಿಕ ಎಲ್ಸಾ ತನ್ನ ಕೈಯಲ್ಲಿದ್ದ ಆಂಗ್ಲ ದಿನಪತ್ರಿಕೆಯಲ್ಲಿದ್ದ ವರದಿಯೊಂದನ್ನು ತೋರಿಸುತ್ತಾ, “ನೋಡು, ನೀವು ಭಾರತದ ಹೆಣ್ಣುಮಕ್ಕಳು ತುಂಬಾ ಧೈರ್ಯಶಾಲಿಗಳು. ನಿಮ್ಮಿಂದ ನಾವು ಕಲಿಯುವುದು ತುಂಬಾ ಇದೆ. ನಿಮಗೆ ನನ್ನ ಸಲಾಮು” ಎಂದಳು. ಅವಳು ಏನು ಹೇಳುತ್ತಿದ್ದಾಳೆ ಎಂದು ಅರ್ಥವಾಗುವುದಕ್ಕೂ ಮುನ್ನವೇ, ನನ್ನ ಮುಖದ ಮೇಲೆ ನಗೆಯ ಸಣ್ಣ ಮೊಗ್ಗೊಂದು ಮೈಚಾಚಿ ನಿಂತದ್ದು ಅವಳಿಗೆ ಕಾಣಿಸದೆ ಇರಲಿಕ್ಕಿಲ್ಲ. ಹೊಗಳಿದ್ದು ಕೇಳಿ ಅದೇನೋ ಖುಷಿ. ಅದರಲ್ಲೂ ಯೂರೋಪಿನವರು ಹೊಗಳಿದರಂತೂ ಕೇಳಬೇಕೆ. ಅವಳು ಏನನ್ನು ತೋರಿಸುತ್ತಿದ್ದಾಳೆ ಎಂಬ ಕುತೂಹಲದಿಂದ ಅವಳ ಕೈಯಲ್ಲಿದ್ದ ದಿನಪತ್ರಿಕೆಯನ್ನು ತೆಗೆದುಕೊಂಡು ನೋಡಿದೆ, “”India is World’s Most Dangerous Country for Women, says Survey” ಎಂಬ ಶೀರ್ಷಿಕೆಯಡಿ ಅಂದಿನ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ವರದಿ ಅದು. ಅವಳ ಹೊಗಳಿಕೆಯೂ, ಈ ಶೀರ್ಷಿಕೆಯೂ ಸೇರಿ ನನ್ನ ಮನಸ್ಸಿನಲ್ಲಿ ಒಂದು ಕ್ಷಣದಲ್ಲಿ ಏನೆಲ್ಲಾ ಸುಳಿದು ಮಾಯವಾಯಿತು: ಅಮ್ಮ ಮಾಡಿದ ಕೂಲಿ ಕೆಲಸ, ಅಜ್ಜಿ ತನ್ನ ಆರು ಮಕ್ಕಳನ್ನು ಬೆಳಸಲು ಮಾಡಿದ ಹರಸಾಹಸ, ದೂರದ ಊರಿನಲ್ಲಿ ಇದ್ದು ನನಗಿಂತ ಹೆಚ್ಚು ಓದುತ್ತಿರುವ ನನ್ನ ತಂಗಿಯ ಪರಿಶ್ರಮ… ಎರಡು ಮೂರು ನಿಮಿಷಗಳಲ್ಲಿ, ನಗೆಯ ಆ ಮೊಗ್ಗು ಅರಳಿ ಹೂವಾಗಿತ್ತು. ವರದಿಯನ್ನು ನಿಧಾನವಾಗಿ ಓದತೊಡಗಿದೆ.
ದೆಹಲಿಯಲ್ಲಿ ನಡೆದ ಆ ಅಮಾನುಷ ಅತ್ಯಾಚಾರದ ವಿಚಾರದೊಂದಿಗೆ ಆರಂಭವಾಗುವ ಆ ವರದಿಯನ್ನು ಓದುತ್ತಾ ನನ್ನ ಮುಖದಲ್ಲಿದ್ದ ಬದಲಾದ ಭಾವನೆಗಳನ್ನು ಕಂಡು ಉತ್ತೇಜಿತಳಾಗಿ, ಎಲ್ಸಾ ಮಾತನಾಡತೊಡಗಿದಳು. ಎಲ್ಸಾ ಭಾರತದ ಬುಡಕಟ್ಟು ಸಂಸ್ಕೃತಿಯ ಬಗ್ಗೆ ಪಿಎಚ್.ಡಿ. ಮಾಡುತ್ತಿರುವ ಜರ್ಮನಿಯ ಪೂರ್ವದ ಅಂಚಿನ ಒಂದು ಸಣ್ಣ ಊರಿನಿಂದ ಬಂದ ವಿದ್ಯಾರ್ಥಿನಿಯಂತೆ. ಸುಮಾರು ನನ್ನದೇ ವಯಸ್ಸು. ಎರಡು ತಿಂಗಳುಗಳ ಕಾಲ ದೆಹಲಿಯ ನೆಹರೂ ಗ್ರಂಥಾಲಯದಲ್ಲಿ ಸಂಶೋಧನೆ ಮಾಡುತ್ತಾ ಇದ್ದು, ಇನ್ನು ಸ್ವದೇಶಕ್ಕೆ ಹೊರಡುವ ಮುನ್ನ ದಕ್ಷಿಣ ಭಾರತದ ಒಂದು ಸಣ್ಣ ಪ್ರವಾಸಕ್ಕೆಂದು ಕರ್ನಾಟಕದ ಕರಾವಳಿಗೆ ಬಂದಿದ್ದಾಳೆ. ಮುಂದೆ ಕೇರಳಕ್ಕೆ ಹೋಗುವ ಯೋಚನೆ ಇದೆ ಎಂದು ಹೇಳಿದಳು.
ಈ ಪ್ರವಾಸಕ್ಕೆ ಬರಲು ಸಾಕಷ್ಟು ಒಳ್ಳೆಯ ಫೆಲೋಶಿಪ್ ಇರಬೇಕು, ಈ ಯೂರೋಪಿನ ಜನರೆಲ್ಲ ತುಂಬಾ ಶ್ರೀಮಂತರೇ ತಾನೇ ಎಂದುಕೊಂಡು ಒಂದಷ್ಟು ಹೊಟ್ಟೆ ಉರಿಸಿಕೊಳ್ಳೋಣ ಎನ್ನುವಷ್ಟರಲ್ಲಿ ಅವಳೇ ಹೇಳಿಬಿಟ್ಟಳು. ಅವರು ಯಾವ ದೇಶದ ಕುರಿತು ಪಿಎಚ್.ಡಿ. ಮಾಡುತ್ತಾರೋ ಆ ದೇಶಕ್ಕೆ ಭೇಟಿ ನೀಡುವುದು ಅವರಿಗೆ ಕಡ್ಡಾಯ. ಆದರೆ ಅದಕ್ಕೆ
ಬೇಕಾದ ಹಣಜೋಡಿಸುವುದು ಮಾತ್ರ ತುಂಬಾ ಕಷ್ಟದ ಕೆಲಸವಂತೆ. ಅದಕ್ಕೆ ಬೇಸಿಗೆಕಾಲದಲ್ಲಿ ಅವರು ಇಂಗ್ಲೆಂಡಿನ ಆಗ್ನೇಯ ಭಾಗದ ಕೆಲವು ಹಳ್ಳಿಗಳಿಗೆ ಹೋಗಿ ಅಲ್ಲಿ ಸೇಬನ್ನು ಹೆಕ್ಕುವ ಕೂಲಿಕೆಲಸ ಮಾಡಿ, ಬಂದ ಹಣದಿಂದ ಇಂಥ ದೂರದ ಪ್ರಯಾಣ ಕೈಗೊಳ್ಳುತ್ತಾರಂತೆ. ಅವಳ ನಾಲ್ಕು ವರ್ಷದ ಪಿಎಚ್.ಡಿ. ಜೀವನದಲ್ಲಿ ಒಮ್ಮೆ ತಮ್ಮ ವಿಶ್ವವಿದ್ಯಾಲಯದಿಂದ ಇಂತಹ ಪ್ರಯಾಣಕ್ಕೆ ಅರ್ಧದಷ್ಟು ಹಣ ಸಿಕ್ಕಿತ್ತು ಎಂದು ಹೇಳಿ ಖುಷಿಪಟ್ಟಳು. ಕೂಲಿ ಮಾಡಿ ಪಿಎಚ್.ಡಿ. ಮಾಡುವವರ ಬಗ್ಗೆ ನಾನು ಇದುವರೆಗೂ ಕೇಳಿರಲೇ ಇಲ್ಲ. ವಿಚಿತ್ರ ಎನಿಸಿತು.
ನಾವು ಮಾತನಾಡುತ್ತಿರುವಷ್ಟರಲ್ಲೇ ನನ್ನ ಗೆಳತಿ ಜನನಿ ಕೂಡ ಬಂದು ಸೇರಿಕೊಂಡಳು. ಅವಳಿಗೆ ಮೊದಲಿನಿಂದಲೂ ಪಾಶ್ಚಾತ್ಯರನ್ನು ಕಂಡರೆ ಅದೇನೋ ಒಂದು ರೀತಿಯ ವಿಚಿತ್ರ ಕೋಪ: ನಮ್ಮೆಲ್ಲ ತೊಂದರೆಗಳಿಗೆ ಅವರೇ ಕಾರಣ ಎನ್ನುವ ಒಂದು ನಂಬಿಕೆ. ಜೊತೆಗೆ ಒಂದು ಅದೆಷ್ಟು ಪ್ರಯತ್ನಿಸಿದರೂ ಮುಚ್ಚಿಡಲಾಗದ ಒಂದು ವಿಚಿತ್ರ ಆಕರ್ಷಣೆ ಕೂಡ. ಅದೇ ಹೊತ್ತಿಗೆ ಸರಿಯಾಗಿ ನಮ್ಮ ಮಾತು ಮತ್ತೆ ಅದೇ ವರದಿಯತ್ತ ತಿರುಗಿತು. ಭಾರತ ದೇಶ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ಸ್ಥಳವೆಂದು ಆ ವರದಿ ಮೂರು ವಿಚಾರಗಳನ್ನು ಆಧರಿಸಿ ಹೇಳುತ್ತದೆ: Sexual violence and harassment, cultural and traditional practices, and human trafficking, including forced labour, sex slavery and domestic servitude. ಆ ಸಾಲುಗಳ ಕೆಳಗೆಲ್ಲ ಎಲ್ಸಾ ತನ್ನ ಲೇಖನಿಯಿಂದ ಗೆರೆ ಕೊರೆದು ಇಟ್ಟಿದ್ದಳು. ನಾವು ಮಾತನಾಡುವಾಗಲೇ ಎದ್ದುಹೋಗಿ ರಿಸೆಪ್ಶನ್ನಲ್ಲಿ ತಾನು ಆ ಪತ್ರಿಕೆಯನ್ನು ತೆಗೆದುಕೊಂಡು ಹೋಗಲು ಅನುಮತಿ ಕೇಳಿ ಬಂದಿದ್ದಳು. “ದೇವರೇ, ಈವತ್ತು ಸಂಜೆ ನೀವಿರದಿದ್ದರೆ ನನ್ನ ಗತಿ ಮುಗಿದೇ ಹೋಗಿತ್ತು” ಎಂದಳು. ಹಾಗೆ ಹೇಳುವಾಗ ಆಕೆ ಒಮ್ಮೆ ನಡುಗಿದ್ದು, ಅವಳ ಮುಖವೆಲ್ಲಾ ಕೆಂಪಾಗಿದ್ದು ಯಾರಿಗಾದರೂ ಸ್ಪಷ್ಟವಾಗಿ ಕಾಣಿಸುವಂತಿತ್ತು. “ಅದಿರಲಿ, ನೀವು ನಿತ್ಯವೂ ಇಂಥ ಅವಮಾನ, ತೊಂದರೆಗಳನ್ನು ಎದುರಿಸಿ ಅದು ಹೇಗೆ ಬದುಕಿರುತ್ತೀರಿ! ನಿಜವಾಗಿಯೂ ನಿಮ್ಮ ಬಗ್ಗೆ ನನಗೆ ತುಂಬಾ ಗೌರವವಿದೆ” ಎಂದಳು. ಮಾತಿನ ನಡುವೆ ನನ್ನ ಅಮ್ಮನ, ಅಜ್ಜಿಯ, ತಂಗಿಯ ಕುರಿತು ಬಹಳ ಮುಜುಗರದಿಂದ ಒಂದಷ್ಟು ಮಾಹಿತಿ ಕೇಳಿ ತಿಳಿದುಕೊಂಡಳು. “ನಾನು ಇಂತಹ ಖಾಸಗೀ ವಿಚಾರಗಳಲ್ಲಿ ಮೂಗು ತೂರಿಸುತ್ತಿದ್ದೇನೆ ಎಂದು ತಪ್ಪು ತಿಳಿಯ ಬೇಡ” ಎಂದು ಗೋಗರೆದಳು. ಇದ್ದಕ್ಕಿದ್ದಂತೆ, “ಇಂತಹ ಅವಮಾನಗಳ ನಡುವೆಯೂ ನೀವು ಮಾಡುವ ವಿದ್ಯಾಭ್ಯಾಸ, ನಿಮ್ಮ ಚಂದ್ರಯಾನ… ವಾವ್” ಎನ್ನುತ್ತಾ ಕೈಎತ್ತಿ ಸೆಲ್ಯೂಟ್ ಮಾಡಿದಳು. “ಈ ಗಂಡಸರೇ ಇರದಿದ್ದರೆ ಪ್ರಪಂಚ ಚೆನ್ನಾಗಿರುತ್ತಿತ್ತು ಅಲ್ವಾ” ಎಂದು ನಕ್ಕಳು.
ಆಗಲೇ ನನ್ನ ತಲೆಗೆ ಹೋಗಿದ್ದು, ಅವಳು ಏನು ಹೇಳುತ್ತಿದ್ದಾಳೆ ಎಂದು. ನನ್ನ ತಾಯಿ, ಅಜ್ಜಿ, ತಂಗಿ, ನಾನು… ನಾವೆಲ್ಲಾ ನಿತ್ಯವೂ Sexual violence, harassment, human trafficking, forced labour, sex slavery ಮತ್ತು domestic servitudeಗಳನ್ನು ಅನುಭವಿಸುತ್ತಾ ಬದುಕಿದ್ದೇವೆ ಎಂದುಕೊಂಡಿದ್ದಾಳೆ ಇವಳು ಎಂದು ಅರ್ಥವಾಗುತ್ತಲೇ ನನಗೆ ಬಹಳ ಮುಜುಗರವಾಯಿತು. ನನ್ನ ಅಜ್ಜಿ ಕಷ್ಟ ಪಟ್ಟಿದ್ದು ನಿಜ. ಆದರೆ ನನ್ನ ಅಜ್ಜ ಕಡಮೆ ಕಷ್ಟಪಟ್ಟವರೇನಲ್ಲ. ಅವರೇನು ಸಂತರಲ್ಲ ನಿಜ. ಹಾಗಂತ ನನ್ನ ಅಜ್ಜಿಯೇನೂ ಮುಗ್ಧೆಯೂ ಅಲ್ಲ. ಜಂಬದಿಂದ ಜಗಳವಾಡಿ ಆಕೆ ಅಜ್ಜನನ್ನು ಮನೆಯಿಂದ ಮೂರು ದಿನ ಹೊರಗೆ ಹಾಕಿದ್ದು ನನಗಿನ್ನೂ ನೆನಪಿದೆ. ಅದಿರಲಿ, ನಾನು ಹೇಳಿದ ಒಂದೇ ಮಾತಿಗೆ ಗುಂಪಿಗೆ ಗುಂಪೇ ಎದ್ದು ಬಂದು ನಮಗೆ ಸಹಾಯ ಮಾಡಿದ ಪರಿಚಯವೇ ಇಲ್ಲದ ಆ ಹುಡುಗರು? ಅವರೆಲ್ಲಾ…?
ಏನೂ ತಿಳಿಯದೆ ಗೊಂದಲದಿಂದ ನಾನು ಕೇಳಿದೆ, “ಅಲ್ಲ ಎಲ್ಸಾ, ನಿಮ್ಮ ದೇಶದಲ್ಲಿ ಹೀಗೆಲ್ಲಾ ಆಗುವುದಿಲ್ಲವೇ? ರೈಲಿನಲ್ಲಿ ಹೋಗುವಾಗ, ರಸ್ತೆಬದಿ, ಹೋಟೆಲಿನಲ್ಲಿ ಕೀಟಲೆ ಮಾಡುವ ಗಂಡಸರು ಒಬ್ಬರೂ ಇರುವುದಿಲ್ಲವೇ?” ಅವಳು ಬಾಯಿ ತೆರೆಯುವುದಕ್ಕೂ ಮುನ್ನ ಜನನಿ ಸಿಟ್ಟಿನಿಂದ ನನ್ನತ್ತ ನೋಡುತ್ತಾ, “ಹೋಗಿ ಒಂದಷ್ಟು ಇಂಟರ್ನೆಟ್ನಲ್ಲಿ ಹುಡುಕಿ ನೋಡು. ಬಲಾತ್ಕಾರ, ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯವೆಲ್ಲ ನಮಗಿಂತ ಅವರಲ್ಲಿ ನಲವತ್ತು, ಐವತ್ತು ಪಟ್ಟು ಹೆಚ್ಚು” ಎಂದು ರೇಗಿದಳು.
ಎಲ್ಸಾ ಬಹಳ ಸಾವಧಾನದಿಂದ, “ಹೌದು, ಅದು ನಿಜ. ಆದರೆ ನೀವು ಏನನ್ನು ತಿಳಿದುಕೊಳ್ಳಬೇಕು ಎಂದರೆ…” ಎಂದು ಶುರುಮಾಡಿದಳು. ನನ್ನದೇ ವಯಸ್ಸಿನ ಆ ಹುಡುಗಿ ವಯಸ್ಸಾದ ಒಬ್ಬ ಪ್ರೊಫೆಸರ್ ತರಹ ಮಾತನಾಡುವ ಆ ಗತ್ತು ನನ್ನ ಬಾಯಿಗೆ ಬೀಗ ಜಡಿಯಿತು. ಬೇಡವೆನಿಸಿದರೂ ಮೂಕಳಾಗಿ ಅವಳನ್ನೇ ನೋಡಿದೆ. “…ನೋಡಿ, ಇಲ್ಲಿ ಭಾರತದಲ್ಲಿ ಹೆಣ್ಣುಮಕ್ಕಳಿಗೆ ಸರಿಯಾಗಿ ಶಿಕ್ಷಣವಿಲ್ಲ. ಆದ್ದರಿಂದ
ಅವರ ಮೇಲೆ ಆಗುವ ದೌರ್ಜನ್ಯಗಳ ಕುರಿತು ಪೊಲೀಸರಿಗೆ ಅವರು ದೂರನ್ನು ಕೊಡುವುದಿಲ್ಲ. ಆದ್ದರಿಂದ ನಿಮ್ಮಲ್ಲಿ ಅಂಕೆಸಂಖ್ಯೆಗಳು ಇಷ್ಟು ಕಡಮೆ” ಎಂದಳು. “ಬೇಕಾದರೆ ನಿಮ್ಮದೇ ಪೊಲೀಸ್ ದಾಖಲೆಗಳನ್ನು ತೆಗೆದು ನೋಡಿ” ಎಂದಳು. ಅವಳು ಹೇಳುತ್ತಿರುವುದು ನಿಜ ಇರಬೇಕು ಅನಿಸಿತು ನನಗೆ. ಅದೇ ಉಸಿರಿನಲ್ಲಿ, ಜನನಿಯತ್ತ ನೋಡುತ್ತಾ, “ನೋಡಿ ನಮ್ಮಲ್ಲೂ ಸಮಸ್ಯೆ ಇದೆ. ಆದರೆ… ನಾನು ಹೀಗೆ ಹೇಳ್ತೀನಿ ಅಂತ ಸಿಟ್ಟು ಮಾಡ್ಕೋಬೇಡಿ, ನಿಮ್ಮಲ್ಲಿನ ಈ cultural and traditional practices ಹೇಗೆ ಹೆಣ್ಣುಮಕ್ಕಳ ದೌರ್ಜನ್ಯಕ್ಕೆ ಕಾರಣ ಆಗುತ್ತೆ ಅಂತಾ…” ಎನ್ನುವಷ್ಟರಲ್ಲಿ ಜನನಿ “ಯಾಕೆ, ನಿಮ್ಮಲ್ಲಿ ಇಲ್ವಾ ಈ practices?” ಎಂದು ರೇಗಿದಳು. “ಓಹೋ, ಹೇಗೆ ಬಿಡಿಸಿ ಹೇಳೋದು ಅಂತ ನನಗೆ ತಿಳಿತಾ ಇಲ್ಲ” ಎನ್ನುತ್ತಾ ಮುಂದುವರಿಸಿದ ಆಕೆ, “ನೋಡಿ, ಈ ವರದಿ ನಮ್ಮ ದೇಶದವರು ಕೊಟ್ಟ ಮಾಹಿತಿಗಳ ಮೇಲೆ ಆಧರಿಸಿ ಬರೆದದ್ದಲ್ಲ. ನಿಮ್ಮದೇ ದೇಶದವರು ಹೇಳಿದ್ದು. ಅವರೆಲ್ಲಾ ಸುಳ್ಳು ಹೇಳುತ್ತಿಲ್ಲ ತಾನೇ?” ಎಂದಳು. ಅಷ್ಟರಲ್ಲಿ ಇನ್ನೂ ರೇಗಿ ಹೋಗಿದ್ದ ಜನನಿ, “ಹೌದು ಹೌದು, ನೀವೆಲ್ಲಾ ತುಂಬಾ ಒಳ್ಳೆಯವರು. ಪಾಕಿಸ್ತಾನ, ಸಿರಿಯಾ, ಆಫ್ಘಾನಿಸ್ತಾನ ಅಂತೆಲ್ಲಾ ದೇಶಗಳಿವೆ ಈ ಜಗತ್ತಿನಲ್ಲಿ ಅಂತ ಗೊತ್ತಾ ನಿನಗೆ…” ಎಂದು ಅಣುಕಿಸುತ್ತಾ, ತಾನು ವಸಾಹತುಶಾಹಿಯ ಕುರಿತು ಓದಿದ್ದೆಲ್ಲವನ್ನೂ ಪ್ರದರ್ಶನ ಮಾಡಿ, ನಾವೆಲ್ಲಾ ಮುಂಚೆ ಚೆನ್ನಾಗಿದ್ದೆವು, ಈಗ ಎಲ್ಲಾ ಹಾಳಾಗಿ ಹೋಗಿದೆ ಎಂದು ಸಿಡುಕಿದಳು. ಎಲ್ಸಾ ಬಹಳ ಸಹನೆಯ ನಗುವನ್ನು ಬೀರುತ್ತಾ, “ಹಾಗಲ್ಲಾ…” ಎಂದು ಮತ್ತೆ ಶುರು ಮಾಡಿದಳು. ನಾನೆಷ್ಟು ದಡ್ಡಿ ಎನಿಸಿ ಗಾಬರಿಯಾಯಿತು ನನಗೆ. ಆನಂತರ ಅವಳು ಹೇಳಿದ್ದು ಯಾವುದೂ ನನಗೆ ಕೇಳಿಸಲೇ ಇಲ್ಲ. ಕಿವಿಯ ತುಂಬಾ ಗೊಂಯ್ ಸದ್ದು ತುಂಬಿಕೊಂಡಿತು, ನಾನು ಹಾಗೇ ಕಣ್ಣು ಮುಚ್ಚಿ ಹಿಂದಕ್ಕೆ ಒರಗಿದೆ.
ಎಲ್ಸಾ ನನ್ನ ಹೆಗಲ ಮೇಲೆ ಕೈ ಇಟ್ಟಾಗಲೇ ಮತ್ತೆ ನನಗೆ ಎಚ್ಚರವಾಗಿದ್ದು. ನಾನು ಕಣ್ಣುಮುಚ್ಚಿ ಎಷ್ಟು ಹೊತ್ತಾಗಿತ್ತೋ ಗೊತ್ತಾಗಲಿಲ್ಲ. ಜನನಿ ಅಲ್ಲಿರಲಿಲ್ಲ. ಅವಳು ಎಲ್ಲಿ ಎಂದು ಕೇಳಿದೆ. ಎಲ್ಸಾ ನಗುತ್ತಾ, ಅವಳು ಆಗಲೇ ತನ್ನ ಮೇಲೆ ಸಿಟ್ಟು ಮಾಡಿಕೊಂಡು ಎದ್ದು ಹೋದಳು ಎಂದಳು. “ಅವಳು ಸ್ವಲ್ಪ ಹಾಗೆ ಅಂತ ಅನಿಸುತ್ತೆ, ಅಲ್ವಾ” ಅಂದಳು. ನಾನು ಉತ್ತರಕ್ಕಾಗಿ ತಡಬಡಿಸಿದೆ. “ಇದು ನೋವು ತರಿಸೋ ವಿಚಾರನೇ. ನಿಮ್ಮದೇನೂ ತಪ್ಪಿಲ್ಲ” ಎಂದಳು, ಬೇಸರದ ಧ್ವನಿಯಲ್ಲಿ. ಭಾರತದ ಬಗ್ಗೆ ಎಲ್ಸಾ ಹೇಳಿದ ವಿಚಾರ ನನಗೆ ಕಾಡುತ್ತಲೇ ಇತ್ತು. ಅವಳ ಆ ಕಥೆಯಲ್ಲಿ ನನ್ನ ತಾಯಿ, ಅಜ್ಜಿ, ಅಷ್ಟೇ ಏಕೆ ಸಂಜೆ ನಮಗೆ ಸಹಾಯ ಮಾಡಿದ ಆ ಹುಡುಗರೆಲ್ಲರೂ ತಪ್ಪಿತಸ್ತರಂತೆ ಕೈಕಟ್ಟಿಕೊಂಡು ನಿಂತಂತೆ ಎನಿಸುತ್ತಿತ್ತು ನನಗೆ. ಎಲ್ಸಾ ಹೇಳಿದ್ದು ಅದೇಕೋ ಸರಿ ಅಲ್ಲ ಎನಿಸಿದರೂ ಅದು ಹೇಗೆ ಸರಿ ಅಲ್ಲ ಎಂದು ಬೇರೆಯವರಿಗೆ ಹೇಳುವುದಿರಲಿ ನನಗೂ ತಿಳಿಯಲಿಲ್ಲ. ನಾನು ಎಲ್ಸಾಳನ್ನು ಮತ್ತೆ ಕೇಳಿದೆ. “ನೋಡು ಎಲ್ಸಾ, ನಿಮ್ಮಲ್ಲಿ ಇರುವಂತೆಯೇ ನಮ್ಮಲ್ಲೂ ಒಳ್ಳೆಯ ಜನರು ಮತ್ತು ಕೆಟ್ಟವರು ಇಬ್ಬರೂ ಇದ್ದಾರೆ ಎಂದು ನಿನಗೆ ಯಾಕೆ ಅನಿಸುವುದಿಲ್ಲ”. “ಅದೇ ಹೇಳಿದ್ದು ನಾನು. ನೋಡು ಮೈತ್ರಿ, ನೀನು ಹೇಳುತ್ತಿರುವುದು ನಿಜ. ಆದರೆ ಒಂದು ವ್ಯತ್ಯಾಸವಿದೆ, ಅದನ್ನು ನೀನು ಮರೆಯಬಾರದು…” ಎನ್ನುತ್ತಾ ಅವಳು ಅಷ್ಟೇ ಸಮಾಧಾನದಿಂದ ಅದೇನೋ ಹೇಳತೊಡಗಿದಳು. ಅವಳು ಆಡಿದ ಪ್ರತಿ ಪದದ ಅರ್ಥ ತಿಳಿದರೂ, ಅವಳ ಮಾತುಗಳು ಮಾತ್ರ ನನ್ನ ಕೈಗೆಟುಕಲೇ ಇಲ್ಲ. ಅವಳಿಗೆ ಭಾರತದ ಕುರಿತು ಮಾತನಾಡುವಾಗ ಅಷ್ಟೊಂದು ಸಮಾಧಾನ, ತಾಳ್ಮೆ ಹೇಗೆ ಬರುತ್ತದೆ ಎಂದು ನನಗೆ ಇನ್ನೂ ತಿಳಿದಿಲ್ಲ.
ಅಂದಹಾಗೆ ಆ ದಿನದ ಬಳಿಕ ನನ್ನ ಮತ್ತು ಎಲ್ಸಾಳ ಪರಿಚಯ ಪತ್ರಗಳ ಮೂಲಕ ಹಾಗೇ ಮುಂದುವರಿಯಿತು. ಮೊನ್ನೆ ಮೊನ್ನೆ ಅವಳು ನನಗೆಂದು ತಮ್ಮ ಊರಿನ ಒಂದು ಸುಂದರವಾದ ಗಾಜಿನ ನವಿಲನ್ನು ಕಳುಹಿಸಿದ್ದಳು. ಒಮ್ಮೆ ಬಂದು ನಮ್ಮ ಮನೆಯಲ್ಲಿ ಇರಬೇಕು ಅಂತ ಅವಳಿಗೆ ತುಂಬಾ ಆಸೆಯಂತೆ. ನಾನು ಕುಂದಾಪುರದ ನನ್ನ ಕೆಲಸ ಬಿಟ್ಟು ಪಿಎಚ್.ಡಿ. ಮಾಡಲಿಕ್ಕೆ ದೂರದ ಊರಿಗೆ ಬಂದಿದ್ದೇನೆ. ಇಡಿಯ ಜಗತ್ತಿನಲ್ಲಿ, ಹೆಣ್ಣುಮಕ್ಕಳ ಪಾಲಿಗೆ ಭಾರತ ಅತ್ಯಂತ ಅಸುರಕ್ಷಿತ ಸ್ಥಳ ಎಂದು ಇವರಿಗೆ ಯಾಕೆ ಅನಿಸುತ್ತದೆ? ಹೊರದೇಶದವರು ಇರಲಿ, ನಮ್ಮದೇ ದೇಶದವರಿಗೆ ಯಾಕೆ ಹೀಗೆ ಅನಿಸುತ್ತದೆ? ಎಂದು ಇನ್ನೂ ಯೋಚಿಸುತ್ತಿದ್ದೇನೆ. ಹೀಗೆ ಅರ್ಥವೇ ಆಗದ ಈ ವಿಚಾರಗಳ ಚರ್ಚೆಯಲ್ಲಿ ನಾವು ಭಾರತೀಯರು ಪಡುವ ಪಡಬಾರದ ಕಷ್ಟದ ಇನ್ನು ಹಲವು ಉದಾಹರಣೆಗಳು ನನಗೆ ಇತ್ತೀಚೆಗೆ ಕಾಣಿಸಿವೆ.
ಅಂದು ಎಲ್ಸಾ ಹೇಳಿದ್ದೂ ವಿಚಿತ್ರವಾಗಿತ್ತು. ಭಾರತದಲ್ಲಿ ನಾವು ಎರಡು ರೀತಿಯ ದೌರ್ಜನ್ಯಗಳನ್ನು ಎದುರಿಸುತ್ತಿದ್ದೇವಂತೆ: ಒಂದು ಗಂಡಸರು ಮಾಡುವ ದೌರ್ಜನ್ಯ, ಮತ್ತೊಂದು ನಾವು ಹೆಣ್ಣುಮಕ್ಕಳು ನಮ್ಮ ಮೇಲೆಯೇ ಮಾಡಿಕೊಳ್ಳುವ ದೌರ್ಜನ್ಯ. ಭಾರತದ ಈ cultural and traditional practicesಗಳನ್ನು ಆಚರಿಸಿದಾಗಲೆಲ್ಲ ನಾವು ಈ ಎರಡನೇ ದೌರ್ಜನ್ಯವನ್ನು ನಮ್ಮ ಮೇಲೆ ನಾವೇ ಮಾಡಿಕೊಳ್ಳುತ್ತೇವಂತೆ. ಹಾಗೆಂದರೆ ಏನು? ಎಂದು ಕೇಳಿದ್ದೆ. ಅದಕ್ಕೆ ಅವಳು ಹೇಳಿದ್ದರಲ್ಲಿ ನನಗೆ ತಿಳಿದದ್ದು ಇಷ್ಟು: ನಮ್ಮ ಇಲ್ಲಿನ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಯಾವುದೇ ಸಮಾನತೆ ಇಲ್ಲವಂತೆ. ಮಹಾಭಾರತ, ರಾಮಾಯಣದಿಂದ ಹಿಡಿದು ಮೊನ್ನೆಮೊನ್ನೆಯ ಸಿನೆಮಾಗಳ ತನಕ ಹತ್ತು ಹಲವು ಕಥೆಗಳನ್ನು ಉಲ್ಲೇಖಿಸಿ, “ನೋಡು ಇಲ್ಲೆಲ್ಲೂ ಮಹಿಳೆಯರಿಗೆ ಸಮಾನತೆಯೇ ಇಲ್ಲ” ಎಂದಿದ್ದಳು. ಅದಕ್ಕೆ ಹೇಗೆ ಪ್ರತಿಕ್ರಿಯಿಸುವುದು ಎಂದು ಇನ್ನೂ ಅರ್ಥವಾಗಬೇಕಾಗಿದೆ ನನಗೆ.
ಎಲ್ಸಾಳ ಜೊತೆಯಲ್ಲಿ ಮಾಡುವ ಈ ಚರ್ಚೆಯ ಸ್ವರೂಪ ಎಂತಹದ್ದು ಎಂಬುದು ಮೊದಲು ನನ್ನ ಗಮನಕ್ಕೆ ಬಂದಾಗ ನನ್ನ ಕಾಲಡಿಯ ಭೂಮಿಯೇ ಕುಸಿದಂತಾಗಿತ್ತು ನನಗೆ. ಈ ಚರ್ಚೆಯಲ್ಲಿ ನಾನು ಏನು ಹೇಳಿದರೂ ಸೋಲು ನನ್ನದೇ. ಅಂದು ರಾತ್ರಿ ಅವಳು ನನ್ನ ತಾಯಿ ಮಾಡುವ ತುಳಸಿಪೂಜೆಯಿಂದ ಆರಂಭಿಸಿ, ಅದಕ್ಕೂ ನಮ್ಮ ಪುರಾಣದ ಕಥೆಗಳಿಗೂ ನಂಟು ಹುಡುಕಿ, ಆ ಕಥೆಗಳಲ್ಲಿ ಹೆಣ್ಣು ಅಸಹಾಯಕಳು ಎಂದು ತೋರಿಸಿ, ಆ ಕಾರಣದಿಂದ ತುಳಸಿ ಪೂಜೆ ಮಾಡುವ ನನ್ನ ತಾಯಿ, ನನ್ನ ತಾಯಿಯಂತಹ ಹೆಣ್ಣುಮಕ್ಕಳೇ ನಮ್ಮ ಮೇಲಿನ ದೌರ್ಜನ್ಯಕ್ಕೆ ಪರೋಕ್ಷವಾಗಿಯಾದರೂ ಕಾರಣ ಎಂದು ಹೇಳಿ ನಿಲ್ಲಿಸಿದ್ದಳು. ಅವಳು ಹೇಳುತ್ತಿರುವುದು ತಪ್ಪು ಎಂದು ಅಂದೇ ನನಗೆ ಎನಿಸಿದ್ದರೂ, ಅದು ಹೇಗೆ ತಪ್ಪು ಎಂದು ತೋರಿಸುವುದು ಎಂಬುದು ನನಗಿನ್ನೂ ಸರಿಯಾಗಿ ತಿಳಿದಿಲ್ಲ. ಎಲ್ಸಾಳ ಮೇಲೆ ರೇಗಿ ಅವಳನ್ನು ಅವಮಾನ ಮಾಡುವುದು ನನ್ನ ದೌರ್ಬಲ್ಯದ ಪ್ರತೀಕ ಎಂಬುದು ಈಗ ನನಗೆ ಸ್ವಲ್ಪ ಅರ್ಥವಾಗಿದೆ. ಹಾಗಾದರೆ ಅವಳಿಗೆ ಪ್ರತಿಕ್ರಿಯಿಸುವುದು ಹೇಗೆ? ಈ ಪ್ರಶ್ನೆ ಮಾತ್ರ ಇನ್ನೂ ಹಾಗೆಯೆ ಉಳಿದಿದೆ. ಬಹುಶಃ ಸರಿಯಾದ ಉತ್ತರಕ್ಕೆ ನಾವಿಬ್ಬರೂ ಕೂಡಿಯೇ ಕೆಲಸ ಮಾಡಬೇಕೇನೋ! ಮುಂದಿನ ವರ್ಷ ನಾವಿಬ್ಬರೂ ಜೊತೆಯಾಗಿಯೇ ದೆಹಲಿಯ ನೆಹರು ಗ್ರಂಥಾಲಯಕ್ಕೆ ಹೋಗುವ ಯೋಜನೆ ಇದೆ. ಅಲ್ಲಿಂದ ಬಂದಮೇಲೆ ಏನಾದರೂ ಇದ್ದರೆ ಮತ್ತೆ ಬರೆಯುತ್ತೇನೆ. ಅಲ್ಲಿಯ ತನಕ ಕುಂದಾಪುರಕ್ಕೆ ಹೋದಾಗಲೆಲ್ಲ ಜನನಿಯೊಂದಿಗೆ ಮಂಗಳೂರಿನ ಬೀಚಿಗೆ ಹೋಗುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ತೊಂದರೆಯಾದಾಗ ಸಹಾಯ ಕೇಳುವುದನ್ನೂ ಮರೆಯುವುದಿಲ್ಲ.
-0-
[ಇದು ಕುಕ್ಕೆಸುಬ್ರಹ್ಮಣ್ಯದ ಕೆ.ಎಸ್.ಎಸ್. ಕಾಲೇಜಿನಲ್ಲಿ ಎಸ್.ಡಿ.ಎಮ್.ನ CIRHS ಸಂಶೋಧನಾ ತಂಡ ನಡೆಸಿಕೊಟ್ಟ “India-Europa: How Do we Perceive Each Other?” (ಅಕ್ಟೋಬರ್ 1-2, 2019) ಕಾರ್ಯಾಗಾರದಲ್ಲಿ ಬರೆದ ಕಥೆ. ಕಥೆಯನ್ನು ಬೆಳೆಸಲು ಸಹಾಯ ಮಾಡಿದವರು ಡಾ. ಸೂಫಿಯ ಪಠಾಣ್.]