‘ಸದ್ಯ ದೇವರು ದೊಡ್ಡವನು, ಉಸಿರಾಟ ವೊಂದು ಅದರ ಪಾಡಿಗೆ ಅದು ಆಗುತ್ತಿರುವುದರಿಂದ ನನಗೆ ಉಸಿರಿಗೆ ತೊಂದರೆ ಆಗಲಿಲ್ಲ ಇದುವರೆಗೆ. ಒಂದು ವೇಳೆ ಹಸಿವಾದಾಗ ಊಟ ಮಾಡಬೇಕು, ಬಾಯಾರಿದಾಗ ನೀರು ಕುಡಿಯಬೇಕು ಎಂಬ ಹಾಗೆ ಉಸಿರಾಟದ ವ್ಯವಸ್ಥೆಯೂ ಆಗಿರುತ್ತಿದ್ದರೆ ದಿನಪೂರ್ತಿಯ ಕೆಲಸ ಮುಗಿದ ಮೇಲೆ ಉಸಿರಾಡಬೇಕಿತ್ತು ನಾನು, ಓ ಭಗವಂತಾ’ ಎಂದು ನಮ್ಮಮ್ಮ ನಾವು ಚಿಕ್ಕವರಿದ್ದಾಗ ಆಗಾಗ ಹೇಳುತ್ತಿದ್ದರು. ಮನೆತುಂಬ ಜನ, ನಾವು ಮಾತ್ರ ಅಲ್ಲದೆ ಕಾಲೇಜಿಗೆ ಹೋಗುವುದಕ್ಕೆಂದು ನಮ್ಮ ಮನೆಯಲ್ಲಿಯೇ ಉಳಿದುಕೊಂಡಿದ್ದ ನನ್ನ ದೊಡ್ಡಮ್ಮನ ನಾಲ್ಕು ಮಂದಿ ಮಕ್ಕಳು, ಮನಸ್ಸಿಗಂಟಿದ ದುಃಖದಿಂದ, ದೈಹಿಕ ಕಾಯಿಲೆ ಇಲ್ಲದಿದ್ದರೂ, ಹಾಸಿಗೆ ಹಿಡಿದಿದ್ದ ಅಜ್ಜನ ಕಾಳಜಿ, ಎಲ್ಲದರ ಜತೆಗೆ
ತನ್ನ ಹವ್ಯಾಸವಾದ ಹೊಲಿಗೆ ಕೆಲಸ ಇವನ್ನೆಲ್ಲ ಅಮ್ಮ ನಿಭಾಯಿಸಬೇಕಿತ್ತು. ವಿದ್ಯುತ್ ಇಲ್ಲದ ಮನೆ. ಹಳ್ಳಿಯ ವ್ಯವಸ್ಥೆ. ಅಮ್ಮ ತನಗಾಗಿ ಸಮಯ ಇರಿಸಿಕೊಳ್ಳುವುದೊ ಮಿಗಿಸಿಕೊಳ್ಳುವುದೊ ಸಾಧ್ಯವೇ ಇರಲಿಲ್ಲ. ಸೀಮೆಯೆಣ್ಣೆಯ ಬುಡ್ಡಿದೀಪ ಇಟ್ಟುಕೊಂಡು
ಅಮ್ಮ ಕಾದಂಬರಿ ಓದುತ್ತಿದ್ದುದು, ಇಲ್ಲವೆ ಹೊಲಿಯುತ್ತಿದ್ದುದು ನನಗೆ ನೆನಪಿದೆ. ಅದಕ್ಕೂ ಯಾರಾದರೂ ಕಿರಿಕಿರಿ ಮಾಡಿದರೆ ಅಮ್ಮನ ಉದ್ಗಾರ ಇರುತ್ತಿದ್ದುದು ಮೇಲೆ ಹೇಳಿದ ಹಾಗೆ.
ಅಕ್ಷಯ ಸಿಂಕ್
ಯಾವ ಕೆಲಸಗಳಿಗಾದರೂ ಕೊನೆ ಮೊದಲು ಎಂಬುದಿದ್ದೀತು; ಆದರೆ ಮನೆಗೆಲಸಗಳಿಗಿಲ್ಲ! ಅದರಲ್ಲೂ ಬಟ್ಟೆ ಒಗೆಯುವುದೊ ಅಥವಾ ಪಾತ್ರೆ ತೊಳೆಯುವುದೊ ಮುಂತಾದ ಕೆಲಸಗಳನ್ನು ಊಹಿಸಿಕೊಳ್ಳಿ. ದೊಡ್ಡ ಟಬ್ ತುಂಬಿರುವ ಬಟ್ಟೆ ಒಗೆದು ಒಣಗಲು ಹಾಕಿ ಉಸ್ಸಪ್ಪಾ ಎಂದುಕೊಂಡು ಸ್ನಾನ ಮುಗಿಸಿ ಬರುವ ಹೊತ್ತಿಗೆ ಅದಾಗಲೇ ನಾವು ಉಟ್ಟಿದ್ದ ಉಡುಪು ಮತ್ತೆ ಟಬ್ ಸೇರಿರುತ್ತದೆ. ಇನ್ನು ಪಾತ್ರೆಗಳ ಕಥೆಯನ್ನಂತೂ ಹೇಳಿ ಸುಖವಿಲ್ಲ. ಅಡುಗೆಯ ಕೆಲಸ ಮುಗಿದ ಕೂಡಲೆ ಒಮ್ಮೆ ಸಿಂಕಿನ ಪಾತ್ರೆಗಳನ್ನು ತೊಳೆದು ಬದಿಗಿಟ್ಟರೆ, ಊಟ ಮುಗಿಸುವಷ್ಟರಲ್ಲಿ ಸಿಂಕ್ ತಾನಾಗಿ ತುಂಬಿಕೊಳ್ಳುತ್ತದೆ. ಅವರವರ ತಟ್ಟೆಗಳನ್ನು ಅವರವರೇ ತೊಳೆದಿಡಬೇಕು ಎಂಬ ಅಲಿಖಿತ ನಿಯಮವನ್ನು ಪಾಲಿಸಲಾಗದಷ್ಟು ಸಣ್ಣ ಮಕ್ಕಳು, ವಯಸ್ಸಾದ ಹಿರಿಯರು ಇರುವಾಗ ಆ ನಿಯಮವಿದ್ದೂ ಪ್ರಯೋಜನವಿಲ್ಲ. ಎಲ್ಲ ಪಾತ್ರೆಗಳನ್ನೂ ಊಟವಾದ ತಕ್ಷಣವೇ ತೊಳೆದರೂ ಅನ್ನ ಬೇಯಿಸಿದ ಕುಕ್ಕರ್ ಮಾತ್ರ ಸಿಂಕ್ನಿಂದ ಬೇಗನೆ ಕದಲುವುದಿಲ್ಲ. ‘ಅದೊಂದು ಸ್ವಲ್ಪ ನೀರಲ್ಲಿ ನೆನೆಯದ ಹೊರತು ತೊಳೆಯುವುದಕ್ಕಾಗದು. ಇರಲಿ ಅಲ್ಲಿ’ ಎಂದು ಕೈ ಒರೆಸಿಕೊಂಡು ಬರುವ ಅಮ್ಮನನ್ನು ನಮ್ಮಕ್ಕ ಯಾವಾಗಲೂ ತಮಾಷೆ ಮಾಡುವುದಿತ್ತು. ‘ಅನ್ನದ ಪಾತ್ರೆಯೆಂಬುದು ಅಕ್ಷಯ ಪಾತ್ರೆಯಂತೆ. ಅದನ್ನು ಊಟವಾದ ಕೂಡಲೆ ತೊಳೆಯಬಾರದು!’
ಮನೆಯಿಡೀ ಗುಡಿಸಿ ಒರೆಸುವ ಜವಾಬ್ದಾರಿ ಹೆಗಲೇರಿಸಿಕೊಂಡವರಿಗೆ ಎದುರಾಗುವ ಸವಾಲುಗಳು ನಿಜಕ್ಕೂ ದೊಡ್ಡವು. ಒಂದೊಂದೇ ಕೊಠಡಿ ಸ್ವಚ್ಛವಾಗಿಸಿ ಕೊನೆಯದಾಗಿ ಉಳಿದ ನೀರನ್ನು ಮನೆಯೆದುರಿನ ಗಿಡಗಳ ಬೇರುಗಳತ್ತ ಎರಚಿ, ಒರೆಸಿದ ಬಟ್ಟೆಯನ್ನೂ ತೊಳೆದು ಒಣಗಲು ಹಾಕಿ ನಿಡಿದಾದ ಉಸಿರೊಂದನ್ನು ಬಿಟ್ಟೆವೋ.. ಹಾಲ್ನಲ್ಲಿ ಕುಳಿತುಕೊಂಡು ಟಿವಿ ನೋಡುತ್ತಾ ಚಿಪ್ಸ್ ತಿನ್ನುತ್ತಿದ್ದ ಮಕ್ಕಳು ಕೊನೆಯ ತುಣುಕಿಗಾಗಿ ಕಿತ್ತಾಡಿದ ಭರದಲ್ಲಿ ಅದೆಲ್ಲ ಪುಡಿಪುಡಿಯಾಗಿ ಇಬ್ಬರಿಗೂ ದಕ್ಕದೆ ಸೋಫಾದ ಮೇಲೆ ಉದುರಿರುತ್ತದೆ. ಟೀಪಾಯಿಯ ಮೇಲಿನ ಪೇಪರುಗಳನ್ನೆಲ್ಲ ಕೊಡವಿ ಅದಕ್ಕೆಂದೇ ಮೀಸಲಿರಿಸಿದ ಸ್ಥಳದಲ್ಲಿ ಜೋಡಿಸಹೊರಟರೆ ನಡುನಡುವೆ ಮಕ್ಕಳು ಯಾವಾಗಲೋ ತಿಂದ ಬಾಳೆಹಣ್ಣಿನ ಸಿಪ್ಪೆ ಒಣಗಿ ನಗುತ್ತಿರುತ್ತದೆ. ಅದರ ಅಣಕಕ್ಕೆ ಸಿಟ್ಟು ಬಾರದಿದ್ದೀತೆ?
ತಲೆಗೆ ಎರೆದ ನೀರು
ಒಂದಷ್ಟು ದಿನಗಳಿಂದ ಹಲವು ಕಾರ್ಯಕ್ರಮಗಳ ನಡುವೆ ನಾನು ಮನೆಯ ಕುರಿತು ವಿಶೇಷ ಕಾಳಜಿ ಕೊಟ್ಟಿರಲೇ ಇಲ್ಲ. ಎಲ್ಲೋ ಮೇಜಿನ ಮೇಲೆ ಇರಿಸಿದ್ದ ಅಗತ್ಯ ಪತ್ರವೊಂದು ಕಾಣಿಸುತ್ತಿರಲಿಲ್ಲ. ಅದನ್ನು ಹುಡುಕುತ್ತಾ ಹುಡುಕುತ್ತಾ ಮಕ್ಕಳ ಸರ್ವಸಾಮ್ರಾಜ್ಯವೆನಿಸಿದ ಕಪಾಟನ್ನು ತೆರೆದೆ. ಸದ್ಯ ಮೂರ್ಛೆಹೋಗದೆ ಉಳಿದದ್ದೇ ದೊಡ್ಡದು. ಟಿವಿ ಬಿಟ್ಟು ಎದ್ದರೆ ರಿಮೋಟು ಅಕ್ಕನ ಕೈಸೇರುತ್ತದೆ ಎಂಬುದನ್ನು ಅಕ್ಷರಶಃ ತಿಳಿದಿದ್ದ ತಮ್ಮ ಬಿಸ್ಕಟ್ ತಿಂದ ಕವರನ್ನೋ, ಚಾಕಲೇಟಿನ ಕವರುಗಳನ್ನೋ, ಪೆನ್ಸಿಲ್ ಚೂಪುಮಾಡಿದ ಕಸವನ್ನೋ ಎಲ್ಲವನ್ನೂ ಅಲ್ಲಿ ಪೇರಿಸಿದ್ದ. ‘ಹೇಗೂ ತೆಗೆದಿದ್ದೀಯಲ್ಲಮ್ಮ, ಅದನ್ನೊಂಚೂರು ಹಾಗೇ ನೀಟಾಗಿ ಜೋಡಿಸಿಬಿಡು’ ಎಂದ ಮಗನ ಮಾತಿಗೆ ಬೆರಗಾಗುವುದೊ ಅಥವಾ ಸಿಟ್ಟುಮಾಡಿಕೊಂಡು ಎರಡೇಟು ಹೊಡೆಯುವುದೊ ಒಂದೂ ಗೊತ್ತಾಗಲಿಲ್ಲ. ನಮ್ಮ ಬಾಲ್ಯದಲ್ಲಿ ನಾವೂ ಕೂಡಾ ಈಸಿಚೆಯರ್ ಎಂಬ ಸುಖಾಸೀನದಲ್ಲಿ ಕುಳಿತುಕೊಳ್ಳುವ ಸಂಭ್ರಮದಲ್ಲಿ ಅಮ್ಮ ಕರಿದುಕೊಟ್ಟ ಹಲಸಿನಕಾಯಿ ಸೋಂಟೆ ತಿಂದ ತಟ್ಟೆ, ಸುಟ್ಟ ಹುಣಸೆಬೀಜದ ಸಿಪ್ಪೆ, ಅದರ ಜತೆಗೆ ನೀರು ಕುಡಿದ ಲೋಟ ಎಲ್ಲವನ್ನೂ ಈಸಿಚೆಯರಿನ ಕೆಳಗೆ ತಳ್ಳಿಬಿಡುತ್ತಿದ್ದುದು ನೆನಪಾಗದೆ ಇದ್ದೀತೆ? ತಲೆಗೆ ಎರೆದ ನೀರು ಕಾಲಿಗೆ ಬಂದೇ ಬರುತ್ತದಂತೆ!
ಇದೆಲ್ಲ ಈ ಪರಿಯ ಸೊಬಗಾದರೆ, ಅಲಂಕಾರದ ಕೊಠಡಿಯದೊಂದು ಕಥೆ. ಎಲ್ಲಿಗಾದರೂ ಹೋಗುವುದಿದ್ದರೆ ಮಕ್ಕಳನ್ನು ಮೊದಲೇ ರೆಡಿಮಾಡಿಸಿಬಿಟ್ಟರೆ ತಾವೊಂದಿಷ್ಟು ಸಿಂಗರಿಸಿಕೊಂಡು ಹೊರಡಬಹುದು ಎಂಬುದು ನನ್ನಂತಹ ತಾಯಂದಿರ ಪ್ರಾಮಾಣಿಕ ಕಳಕಳಿ. ನಮಗಿಂತಲೂ ಮೊದಲೇ ಮಕ್ಕಳಿಗೆ ಸ್ನಾನ ಮಾಡಿಸಿ, ಹೊಸಬಟ್ಟೆ ತೊಡಿಸಿ ಮುಖಕ್ಕೆ ಕ್ರೀಮ್ ಪೌಡರ್ ಹಚ್ಚಿ ದೃಷ್ಟಿಬೊಟ್ಟಿಟ್ಟು ‘ಹತ್ತು ನಿಮಿಷ ಕುಳಿತಿರು, ನಾನೀಗ ಬಂದೆ’ ಎಂದು ದಡಬಡಿಸಿ ಸ್ನಾನ ಮುಗಿಸಿ ಬರುವಷ್ಟರಲ್ಲಿ ಹೊಸ ಆಘಾತವೊಂದು ಕಾದಿರುತ್ತದೆ. ಮುದ್ದು ಪುಟಾಣಿ ಅಮ್ಮ ಹಾಕಿದ ಕಾಡಿಗೆ ಸಾಲದೆಂದು ಮುಖದ ತುಂಬಾ ಕಪ್ಪುಬಣ್ಣದ ಚುಟ್ಟಿ ಬರೆದಿರುತ್ತಾನೆ. ಮುದ್ದುಕೃಷ್ಣನೆಂದು ನಾವು ಅಲಂಕರಿಸಿದ ಮುದ್ದುಮೂರ್ತಿ ಈಗ ರಕ್ಕಸಬಲ ಪಾತ್ರಕ್ಕೇ ಸಜ್ಜಾದಂತೆ ಇರುತ್ತದೆ. ಬೆಳ್ಳಬೆಳ್ಳಗಿನ ಮಗನ ಕಪ್ಪಗಾದ ಮುಖಕ್ಕೆ ತೆಂಗಿನ ಎಣ್ಣೆ ಹಚ್ಚಿ ಆ ಕಾಡಿಗೆಯನ್ನೆಲ್ಲ ತೆಗೆದು ಮತ್ತೆ ಅಲಂಕರಿಸಿ, ಸದ್ಯ ಮ್ಯಾಚಿಂಗ್ ಓಲೆ ಸರ, ಸ್ಟಿಕರ್ ಎಂದೆಲ್ಲ ತೆಗೆದಿಟ್ಟಿದ್ದರೂ ಯಾವುದನ್ನೂ ಹಾಕಲು ಮನಸ್ಸಾಗದೆ ಮಾರ್ಕೆಟ್ಟಿಗೆ ಹೊರಟ ಹಾಗೆ ಹೊರಟು ರೂಮಿನಿಂದ ಹೊರಗೆ ಬಂದರೆ ‘ಈ ಅಮ್ಮ ಯಾವಾಗಲೂ ಲೇಟು’ ಎಂಬ ಮಗಳು! ‘ಹೌದು ಮಗಾ, ನೋಡು, ನಾವೆಲ್ಲ ಆಗಲೇ ಹೊರಟು ರೆಡಿ ಇದ್ದರೂ ಅಮ್ಮನಿಂದಲೇ ತಡವಾಯ್ತು’ ಎಂದು ಕಣ್ಣುಮಿಟುಕಿಸುವ ಗಂಡ! ಇವರಿಬ್ಬರ ಮೇಲೂ ಬರುವ ಸಿಟ್ಟಿನ ಭರ ಪ್ರಕಟವಾಗುವುದು ಕಾರಿನ ಡೋರಿನ ಮೇಲೆ. ಪಾಪ, ಅದೇನು ಮಾಡೀತು?
ಅಮ್ಮನೆಂಬ ಕೊಂಡಿ
ಬೇರೆ ಊರಿಗೆ ಹೋಗುವುದಾದರಂತೂ ಕೆಲಸ ಮುಗಿಯುವಂತೆಯೇ ಇಲ್ಲ. ಎಲ್ಲ ಮುಗಿಸಿದರೂ ಯಾವುದೋ ಒಂದು ಉಳಿದುಹೋಗಿರುತ್ತದೆ. ಸದ್ಯ, ಬೀಗ ಹಾಕಿದಾಗಲಾದರೂ ನೆನಪಾದರೆ ಪರವಾಗಿಲ್ಲ. ಅರ್ಧದಾರಿ ತಲಪುವಷ್ಟರಲ್ಲಿ ನೆನಪಾದರೆ ಮತ್ತೆ ಊರಿಗೆ ಹೋದ ಉದ್ದೇಶ ಪೂರೈಸಿ ಹಿಂದಿರುಗುವವರೆಗೂ ಎದೆಯಲ್ಲಿ ಪುಕಪುಕ ತಪ್ಪಿದ್ದಲ್ಲ. ಬಂದ್ ಮಾಡಲು ಮರೆತ ಗ್ಯಾಸ್, ಫ್ರಿಜ್ನಲ್ಲಿಡಲು ಮರೆತುಹೋದ ಮೊಸರು, ಹೆಪ್ಪು ಹಾಕಬೇಕೆಂದು ಬದಿಯಲ್ಲಿರಿಸಿ ತಣಿಯುವಷ್ಟರಲ್ಲಿ ಮರೆತುಹೋದ ಹಾಲು ಉಂಟುಮಾಡುವ ಕಿರಿಕಿರಿ ಅಷ್ಟಿಷ್ಟಲ್ಲ.
ಮನೆಯೊಳಗಿನ ಸಣ್ಣಪುಟ್ಟ ವಿಷಯಗಳೇ ಮನಸ್ಸಿಗೆ ಆನಂದ ತುಂಬುವಂತಹವು; ಹಾಗೇ ಸಾಕೋ ಸಾಕಪ್ಪಾ ಅನಿಸುವಂತಹವು. ಉಸಿರಾಟವೆಷ್ಟು ನಿರಂತರವೋ ಮನೆಯೊಳಗಿನ ಕೆಲಸವೂ ಅಷ್ಟೇ ನಿರಂತರ. ಹರಿವ ನೀರು, ಬೀಸುವ ಗಾಳಿಯ ಹಾಗೆ ಮನೆಯೊಳಗಿನ ಪ್ರತಿಯೊಂದೂ ಚಲನಶೀಲವಾಗಿರಬೇಕು. ಚಲನೆ ನಿಂತರೆ ಎಲ್ಲವೂ ಮುಗಿದುಹೋದ ಹಾಗೆ. ಹಳೆಬೇರಿಗೂ ಹೊಸಚಿಗುರಿಗೂ ಬಂಧವಾಗಿ ಗಿಡವಿರುತ್ತದೆ, ಹೌದಲ್ಲ! ಕೆಲಸ ಮುಗಿಯಗೊಡದ ಅಜ್ಜಿ-ಮೊಮ್ಮಗಳ ನಡುವೆ ಅಮ್ಮ ಮನೆಯೆಂಬ ಆತ್ಮೀಯತೆಗೆ, ನೆಮ್ಮದಿಗೆ ರೂಪಕವಾಗಿ ನಿಲ್ಲುತ್ತಾಳೆ. ಅವಳಿಗೂ ಒಂದಿಷ್ಟು ನೆಮ್ಮದಿಯಾಗಿ ಉಸಿರಾಡಗೊಡೋಣವೆ?