“ಗೌರಿ, ಈ ಕರಿಮಣಿಸರಾನ ತೆಗೆದುಬಿಡೆ, ಒಂದು ಕರಿಮಣಿಗುಂಡು ತಾಗಿದ್ರು ನೋವು ಹೆಚ್ಚಾಗಿ ಕರ್ಳು ಕಿವಿಚಿದ್ಹಂಗೆ ಆಗ್ತು.’’
ಮಲಗಿಕೊಂಡಿದ್ದ ಅಕ್ಕ ನಾನವಳ ಹಾಸಿಗೆ ಪಕ್ಕ ಕುಳಿತುಕೊಳ್ಳುತ್ತಿದ್ದಂತೆಯೇ ಹೇಳಿದಾಗ ದಂಗಾಗಿಬಿಟ್ಟೆ. ನಾನು ಬಾಲ್ಯದಿಂದ ಕಂಡ ಅಕ್ಕ ಇವಳಲ್ಲವೇ ಅಲ್ಲ ಅನ್ನಿಸುವಂತಿತ್ತು ಅಕ್ಕನ ಮಾತು. ಕರಿಮಣಿಸರದ ಒಂದು ಎಳೆ ತುಂಡಾದರೂ ಮನೆಯ ಹೊಸಿಲ ಹೊರಗೇ ಕೂತು, ಮತ್ತೆ ಪೋಣಿಸಿಕೊಂಡು, ಸರ ಹಾಕಿಕೊಂಡೇ ಮನೆಯೊಳಗೇ ಬರುತ್ತಿದ್ದ ಅಕ್ಕ ಇವಳೇನಾ? ಎನ್ನಿಸಿತು. ಅಕ್ಕ ಇಷ್ಟು ನೆಲ ಕಚ್ಚಿದ್ದಾಳೆಂದು ನಾನು ಊಹಿಸಿರಲೂ ಇಲ್ಲ. ‘ಚಿಕ್ಕಿ, ಅಮ್ಮ ನಿನ್ನನ್ನ ಬಹಳ ಕನವರಿಸುತ್ತಿದ್ದಾಳೆ, ಹೇಗಾದರು ಮಾಡಿ ನಾಲ್ಕು ದಿನ ಸವಡಿ ಮಾಡಿಕೊಂಡು ಒಮ್ಮೆ ಬಂದು ಹೋಗು’ ಎಂದು ಅಕ್ಕನ ಮಗ ಕೃಷ್ಣ ಫೋನು ಮಾಡಿದ್ದ. ಮನೆಯವರೊಬ್ಬರನ್ನೆ ಬಿಟ್ಟು ಶಿರಸಿಯ ಈ ಮೂಲೆಯ ಅಕ್ಕನ ಮನೆ ಮುಠ್ಠಳ್ಳಿಗೆ ಬಂದು ವಾರಗಟ್ಟಲೆ ಉಳಿಯುವ ವ್ಯವಧಾನ ನನಗೆ ಸಿಕ್ಕಿರಲಿಲ್ಲ್ಲ. ಮತ್ತೆ ಅಣ್ಣ ಫೋನು ಮಾಡಿದ್ದ. ‘ಅಕ್ಕನಿಗೆ ಕ್ಯಾನ್ಸರ್ ಅಂತೆ ಗೌರಿ, ಹುಬ್ಬಳ್ಳಿಯಲ್ಲಿ ತೋರಿಸಿದರಂತೆ. ಇನ್ನೆಷ್ಟು ದಿನವೋ ಗೊತ್ತಿಲ್ಲ’ ಅಂತ. ನನ್ನ ಮತ್ತೊಬ್ಬ ಅಮ್ಮನೇ ಆಗಿದ್ದ ಅಕ್ಕನಿಗೆ, ಬಾಲ್ಯದಲ್ಲಿ ನಮ್ಮೆಲ್ಲ ತಂಗಿಯಂದಿರಲ್ಲಿ ಸಕಲ ದೇಖರೇಖಿ ನೋಡಿಕೊಳ್ಳುತ್ತಿದ್ದ ಅಕ್ಕನಿಗೆ ಈ ರೋಗ ಯಾಕೆ ಅಟಕಾಯಿಸಿಕೊಂಡಿತೋ ಎನ್ನಿಸಿ ರಾತ್ರಿಯಿಡೀ ಅತ್ತಿದ್ದೆ. ಬದುಕಿನಲ್ಲಿ ಇನ್ನಿಲ್ಲದಷ್ಟು ನೋವು ಉಂಡವಳಿಗೆ ಕಡೆಗಾಲದಲ್ಲೂ ಅರ್ಬುದ ಗಂಟುಬಿದ್ದು ಜೀವಹಿಂಡುವಂತಾಯಿತೆ ಎಂದು. ವಾರಕ್ಕೊಮ್ಮೆ ಕೃಷ್ಣನಿಗೆ ಫೋನ್ ಮಾಡಿ ಅವಳ ಆರೋಗ್ಯ ವಿಚಾರಿಸುತ್ತಿದ್ದೆ. ಒಂದು ಭಾನುವಾರ ಹೋಗಿ ನೋಡಿಕೊಂಡು ಬರೋಣ ಎಂದು ಮನೆಯವರು ಹೇಳಿದರೂ, ಒಂದು ದಿನ ಹೋಗಿ ನೋಡಿಕೊಂಡು ಬರುವುದರಲ್ಲಿ ಅರ್ಥವಿಲ್ಲ, ಹೋದರೆ ಒಂದಿಷ್ಟು ದಿನ ಉಳಿದು ಅಕ್ಕನ ಸೇವೆ ಮಾಡಿ ಬರುವವಳೆ ಎಂದಿದ್ದೆ. ಹಾಗಾಗಿ ಪ್ರೋಗ್ರಾಂ ಮುಂದೆ ಹೋಗುತ್ತಲೆ ಇತ್ತು. ಕೃಷ್ಣ ಮತ್ತೊಮ್ಮೆ ಫೋನ್ ಮಾಡುವ ಹೊತ್ತಿಗೆ ಸರಿಯಾಗಿ ಮನೆಯವರಿಗೆ ಹದಿನೈದು ದಿನ ಹೈದರಾಬಾದಲ್ಲಿ ಟ್ರೈನಿಂಗ್ ಬಂದದ್ದೆ ಅವರನ್ನು ಅತ್ತ ಬಸ್ಸು ಹತ್ತಿಸಿ ನಾನು ಇಲ್ಲಿಗೆ ಬಂದಿಳಿದಿದ್ದೆ.
ಅಕ್ಕನ ಆರೋಗ್ಯ ಬಹಳ ಹದಗೆಟ್ಟಿತ್ತು. ‘ಯಾಕಪ್ಪ, ಟ್ರೀಟ್ಮೆಂಟ್ ಕೊಡಿಸುತ್ತಿಲ್ಲವೆ?’ ಎಂದು ಕೃಷ್ಣನನ್ನು ಕೇಳಿದರೆ, ‘ಆಪರೇಶನ್ ಒಂದೇ ದಾರಿ ಎಂದು ಹೇಳಿದ್ದಾರೆ ಚಿಕ್ಕಿ, ಅಮ್ಮ ಏನು ಹೇಳಿದರೂ ಒಪ್ಪುತ್ತಿಲ್ಲ, ನೀನೇ ಏನಾದರು ಹೇಳಕ್ಕಾಗುತ್ತ ನೋಡು’ ಎಂದುಬಿಟ್ಟ. ಇದಿಷ್ಟು ನಾನು ಹೋದ ದಿನವೇ ಆದ ಘಟನೆ. ಆಗಲೇ ನನ್ನ ಗಮನಕ್ಕೆ ಬಂದದ್ದು, ಭಾವ ಕಾಣಿಸಲಿಲ್ಲ ಎನ್ನುವುದು. ಕೇಳಿದರೆ ಕೃಷ್ಣ ಬಿಡುಬೀಸಾಗಿ ಹೇಳಿಬಿಟ್ಟ. ‘ನಿನಗೆ ನಿನ್ನ ಭಾವನ ಸ್ವಭಾವ ಗೊತ್ತಲ್ಲ ಚಿಕ್ಕಿ, ಈಗವನು ಸಾಗರದಲ್ಲಿ ತಮ್ಮನ ಮನೆಯಲ್ಲಿ ಇದ್ದಾನೆ. ದೇವರ ಪೂಜೆ ಮಾಡೋರೂ ಗತಿ ಇಲ್ಲ ಅಲ್ಲಿ, ಅದಕ್ಕಾದರು ಆದೀತು ಅಂತ ಹೇಳಿ ಹೋದವನು ತಿಂಗಳಾಯಿತು. ಬಂದಬಳಿಕ ಮತ್ತೆಲ್ಲೋ ಹೋಗುತ್ತಾನೆ. ಕಾಶಿ ರಾಮೇಶ್ವರ ಅಂತ ಹೊರಟರು ಹೊರಟನೆ. ಅವನೊಂಥರಾ ಕೆಸವಿನೆಲೆ ಹಾಗೆ. ಏನನ್ನೂ ಅಂಟಿಸಿಕೊಳ್ಳೊಲ್ಲ.”
ಕೃಷ್ಣ ಹೇಳಿದ್ದೂ ಸರಿಯೇ. ಬಾಲ್ಯದಿಂದಲೂ ನಾನು ಕಂಡ ಭಾವ, ಏನೂ ಬದಲಾಗಲಿಲ್ಲ ಎಂದಾಯ್ತು. ನಲವತ್ತೈವತ್ತು ವರ್ಷ ತನ್ನ ಬಾಳಸಂಗಾತಿಯಾಗಿದ್ದವಳು ಈಗ ಹಾಸಿಗೆಯಲ್ಲಿ ನವೆಯುತ್ತ ಬಿದ್ದಾಗಲಾದರೂ ಬದಲಾಗಬಹುದಿತ್ತು. ಹುಂ, ಅಂತಹ ಭಾವನ ಬಗ್ಗೆ ವಿಚಾರ ಮಾಡುವುದೇನು? ಈಗ ಅಕ್ಕನ ಕಾಯಿಲೆ ಗುಣವಾಗದ್ದೇನು ಅಲ್ಲ, ಇನ್ನು ನಾಲ್ಕಾರು ವರ್ಷ ಬದುಕಿರುವಂತೆ ಅಥವಾ ಇರುವಷ್ಟು ದಿನ ನೋವು ತಿನ್ನದಂತೆ ಮಾಡಬಹುದೇನೋ. ಕೃಷ್ಣ ಆಪರೇಶನ್ನಿಗೆ ಅಮ್ಮ ಒಪ್ಪುತ್ತಿಲ್ಲ ಎನ್ನುತ್ತಾನಲ್ಲ, ಅಕ್ಕನಿಗೇ ಒಂದು ಮಾತು ಹೇಳಿ, ಅವಳನ್ನು ಒಪ್ಪಿಸಿಯೇ ಹೊರಡುವುದು ಎಂದು ತೀರ್ಮಾನಿಸಿ ಅಕ್ಕನೊಟ್ಟಿಗೆ ಮಾತಾಡಲೆಂದು ಅವಳ ಹಾಸಿಗೆ ಪಕ್ಕ ಕುಳಿತರೆ ಅವಳು ಹೇಳಿದ್ದು ಕರಿಮಣಿ ಸರದ ವಿಷಯ. ‘ಗೌರಿ, ತೆಗೆದುಬಿಡೆ ಇದನ್ನು.’
ಜೀವಚ್ಛವವಾಗಿ ಮಲಗಿದ್ದ ಅಕ್ಕನ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಪ್ರಯತ್ನ ಮಾಡಿದೆ. “ಏನೆ ಗೌರಿ, ಹಾಂಗೆ ನೋಡ್ತೆ. ನಾನೇ ಹೇಳ್ತಾ ಇದ್ನಲ್ಲೆ, ಸತ್ತ ಮೇಲಾದ್ರು ತೆಗೆಯದೆ ಅಲ್ದ? ಈಗ್ಲೂ ಅದೇ ಅಂತಿಟ್ಕೊ. ಅದೆಂತದೆ ಇರ್ಲಿ, ಅಂತೂ ನೀನಾರು ಬಂದ್ಯಲ್ಲೆ. ಬಂದವ್ರ ಹತ್ರಾನೆಲ್ಲ ಹೇಳ್ದಿ ಕರೀಮಣಿಸರ ತೆಗೀರೋ, ತೆಗೀರ್ರೋ ತ್ರಾಸಾಗ್ತು ಹೇಳಿ. ಒಬ್ರು ಎನ್ನ ಮಾತಿಗೆ ಕಿವಿಗೊಡ್ತ್ವಿಲ್ಲೆ. ನೀನಾದ್ರೂ ಎನ್ನ ಮಾತು ಕೇಳ್ತೆ ಹೇಳಿ. ನಾನಾದ್ರು ತೆಗೆದು ಎಸೆಯನ ನೋಡಿರೆ ಕೈ ಎತ್ತಲಾಗ್ತಿಲ್ಲೆ. ಇದೊಂದು ಗಂಟಿದ್ದಲೆ’’ ಎನ್ನುತ್ತ ತನ್ನ ಕಂಕುಳ ನಡುವೆ ಬೆಳೆದ ಗಂಟನ್ನು ತೋರಿಸುತ್ತ ಪೆಚ್ಚಾಗಿ ನಕ್ಕು, ಪುನಃ, “ನೋಡು ಎನ್ನ ಪುಣ್ಯದ ಗಂಟು ಇದು. ಇದನ್ನು ಹೊತ್ಗಂಡು ಈವತ್ತೊ ನಾಳೆನೊ ಸಾಯ್ತಿ. ಅದರ ಜೊತೆಗೆ ಈ ಕರಿಮಣಿ ಸರ ಎಂತಕ್ಕೆ?’’ ಎಂದು ಪೆಚ್ಚಾಗಿ ನಕ್ಕಳು. ಆ ನಗು ನನ್ನ ಕರುಳಲ್ಲಿಳಿದು ತಿವಿದಂತಾಯಿತು. ದೇವರೆ, ನೋವಿನಲ್ಲೂ ಈ ಬಗೆಯ ನಗುವಿರುತ್ತದೆಯೆ?
ನೀಳವಾಗಿ ಉಸಿರಳೆÀದು ಹೇಳಿದೆ – “ಅಕ್ಕ, ಸಾಯುವ ಮಾತು ಈಗ ಬ್ಯಾಡ. ಇದು ಗುಣವಾಗ್ದೆ ಇರೋ ಕಾಯಿಲೆ ಅಲ್ಲ. ಆಪರೇಶನ್ ಮಾಡಿದ್ರೆ ಸರಿಹೋಗ್ತಡ. ಕೃಷ್ಣ ಕರ್ಕಂಡೋಗಲೆ ತಯಾರಿದ್ದ, ನೀನು ಹುಂ ಅನ್ನು ಅಷ್ಟೆ. ಈ ನೋವು ಸಹಿಸ್ತಾ ಇರೊದಕ್ಕಿಂತ ಅದು ವಾಸಿ ಅಲ್ದ?’’
“ಅಯ್ಯೋ ಮಾರಾಯ್ತಿ, ಎನಗ್ ಗೊತ್ತಿದ್ದು. ಆಪರೇೀಶನ್ನು ಅದು ಇದು ಅಂತ ಲಕ್ಷಗಟ್ಲೆ ಖರ್ಚುಮಾಡಿ ನಾಕ್ದಿನ ಉಳಿದು ಎನಗೆ ಏನಾಯಕ್ಕು ಹೇಳು. ಏನೋ ಇಲ್ಲಿವರೆಗೆ ಕಷ್ಟವೋ ಸುಖವೋ ಒಂದು ಬದುಕು ಅಂತ ಕಂಡೆ. ನೋವು ಸಹಿಸೋ ವಿಷ್ಯ ಹೇಳ್ದೆ. ನಲವತ್ತೈವತ್ತು ವರ್ಷ ಸಹಿಸಿದ ನೋವಿಗೆ ಹೋಲ್ಸಿದ್ರೆ ಇದೆಂತದು ಅಲ್ಲ. ಇನ್ನು ಸಾಕು. ಸಾಕೇಸಾಕು ಅನ್ನಿಸಿದ್ದು ಎನ್ಗೆ. ನಿನ್ನನ್ನು ನೋಡಿದ್ನಲೆ. ಈ ಕ್ಷಣವೇ ಸತ್ರು ಸರಿಯೇ’’ ಎನ್ನುತ್ತಿದ್ದಂತೆ ನನಗೂ ಗಂಟಲು ಕಟ್ಟಿ ಇಬ್ಬರೂ ಮೌನವಾಂತೆವು. ಅಷ್ಟಕ್ಕೆ ಅವಳ ಎದೆಯ ಗಂಟಿನ ನೋವು ಉಲ್ಬಣವಾಗಿರಬೇಕು. ಮಾತಾಡದೆ ಮತ್ತೆ ಕರಿಮಣಿ ಸರದ ಕಡೆ ಕೈ ತೋರಿಸಿದಳು. ನಡುಗುವ ಕೈಯಿಂದ ಅದನ್ನು ತೆಗೆಯುತ್ತ ‘ಭಾವ ಆರಾಮಿದ್ದರೆ ಸಾಕು’ ಎಂದು ಮನಸ್ಸಿಗೆ ಒಮ್ಮೆಗೆ ಯಾಕೆ ಅನ್ನಿಸಿತೋ ಗೊತ್ತಿಲ್ಲ. ತುಸು ನಿರಾಳವಾದ ಮುಖಭಾವ ತೋರಿಸುತ್ತ ಮಗ್ಗುಲಾಗುವ ಪ್ರಯತ್ನದಲ್ಲಿದ್ದ ಅಕ್ಕನನ್ನು ಅವಳ ಎಣಿಕೆಯಂತೆ ಮಲಗಿಸಿ ಒಸರುವ ಕೀವನ್ನು ಹಾಸಿಗೆ ಪಕ್ಕದಲ್ಲಿದ್ದ ಬಟ್ಟೆಯಿಂದ ಒರೆಸಿ, “ಏನಾದ್ರು ಕುಡಿಯಲೆ ತಂದ್ಕೊಡ್ಲ ಅಕ್ಕ’’ ಎಂದು ಕೇಳಿದೆ. ನೋವನ್ನು ಹಲ್ಲುಕಚ್ಚಿ ಸಹಿಸುತ್ತ ಮುರುಟಿ ಶಿಶುವಂತೆ ಮಲಗಿದ್ದ ಆಕೆ ಅಲ್ಲಿಯೇ ಕಾಲನ್ನು ತುಸು ನಿಡಿದಾಗಿ ಚಾಚುತ್ತ, “ನೋಡಿದ್ಯ, ಆವತ್ತು ನಿಂಗ ಶಾಲೆಗೆ ಚಕ್ಕರ್ಹಾಕಿ ಎನ್ನ ಬಿಟ್ಟು ಹೋಪ್ಲೆ ನಾಲ್ಕು ಮೈಲಿ ನಡೆದು ಇಲ್ಲಿವರೆಗೆ ಬಂದ್ರೆ ಎನ್ನ ಮೇಲೆ ಸಿಟ್ಟುಗೊಂಡಿದ್ದ ನಿನ್ನ ಭಾವ ಎಲ್ಲರನ್ನು ಹೊರಗೇ ನಿಲ್ಸಿ. ನಿಂಗಕೊಂದು ತೊಟ್ಟು ಆಸರಿಗು ಕೊಡದೆ ಕಳಿಸಿದ್ದಿ. ಈವತ್ತು ನೀನು ಕುಡಿಯಲೆ ಏನು ಕೊಡ್ಲಿ ಅಕ್ಕ ಅಂತ ಕೇಳ್ತೆ.’’ ಅಕ್ಕ ಮತ್ತೆ ಅದೇ ಘಟನೆಯನ್ನ ಹೇಳಲಾರಂಭಿಸಿದಳು. ಮಾತಾಡುತ್ತ ನೋವನ್ನು ಮರೆಯಬಹುದಾದ ಸಾಧ್ಯತೆಯ ಬಗ್ಗೆ ನನಗೂ ವಿಶ್ವಾಸ ಇದ್ದುದರಿಂದ ಅವಳಷ್ಟಕ್ಕೆ ಮಾತಾಡಲು ಬಿಟ್ಟೆ. ಆ ಘಟನೆ ಬೇರೊಂದು ಕಾರಣಕ್ಕೆ ನನ್ನ ಮನಸ್ಸಿನಲ್ಲಿ ಉಳಿದುಕೊಂಡಿದ್ದರೆ ಅಕ್ಕನಿಗೆ ಮನೆಬಾಗಿಲಿಗೆ ಬಂದ ತಂಗಿಯರನ್ನು ಹೊರಗಿಂದ ಹೊರಗೇ ಕಳಿಸಿದೆನಲ್ಲ ಎಂದಷ್ಟೆ ಕೊರೆಯುತ್ತಿತ್ತು.
* * *
ಭಾವನ ಮನೆ ಮುಠ್ಠಳ್ಳಿಗು ನನ್ನ ತವರುಮನೆ ತಗ್ಗಿನಮನೆಗು ಅಂತರ ನಾಲ್ಕು ಮೈಲು. ಕೊನೆಕೊಯ್ಲಿನ ಸಂದರ್ಭದಲ್ಲಿ ಮನೆಯ ದೇವಕಾರ್ಯವೊಂದಕ್ಕೆ ಅಕ್ಕನ್ನ ಅಣ್ಣನೇ ಹೋಗಿ ಕರೆತಂದಿದ್ದ. ಅದೇ ದಿನ ಮರಳಿ ಬಂದುಬಿಡಬೇಕು ಎಂದು ಕಟ್ಟಾಜ್ಞ್ಞೆ ಮಾಡಿ ಕಳಿಸಿದ್ದನಂತೆ ಭಾವ. ಆವತ್ತು ಸಂಜೆ ನಮ್ಮ ಶಾಲೆಯ ಕಾರ್ಯಕ್ರಮವೊಂದರಲ್ಲ್ಲಿ ನಮ್ಮ ಡಾನ್ಸ್ ಇತ್ತು. ಅಕ್ಕನನ್ನು ಒತ್ತಾಯ ಮಾಡಿ ಉಳಿಸಿಕೊಂಡೆವು. ತನ್ನ ಪ್ರೀತಿಯ ತಂಗಿಯರ ಒತ್ತಾಯ ಮೀರಲಾಗದೆ ಒಪ್ಪಿಕೊಂಡಳು. ಮರುದಿನ ಮಧ್ಯಾಹ್ನ ಊಟವಾದ ನಂತರ ಭಾವನನ್ನು ಸಮಾಧಾನಿಸಿ ಅಕ್ಕನನ್ನು ಬಿಟ್ಟು ಬರಲೆಂದು ಹೋದಾಗ ನಡೆದ ಘಟನೆ ಇದು. ನಮ್ಮನ್ನು ಭಾವ ಹಾಗೇ ಕಳಿಸಿದ್ದರ ಬಗ್ಗೆ ನಮಗೆ ಬೇಸರವಾಗಿರಲಿಲ್ಲ್ಲ. ನಮಗೆ ಬೇಸರವಾದದ್ದು ಆಮೇಲೆ ಕೇಳಿದ ಸುದ್ದಿ. ಆ ಉರಿ ಉರಿ ಬಿಸಿಲಲ್ಲಿ ಅಕ್ಕನನ್ನು ಹೊರಗೆ ನಿಲ್ಲಿಸಿದ್ದ ಭಾವ ಬಳಿಕ ರಾತ್ರಿ ಸರಿ ಹೊತ್ತಿನವರೆಗೂ ಒಳಗೆ ಬರಲಿಕ್ಕೇ ಬಿಡÀಲಿಲ್ಲವಂತೆ. ಚಳಿಗೆ ಗಡಗಡ ನಡುಗುತ್ತ ನಿಂತಿದ್ದ ಅಕ್ಕನನ್ನು ಕಂಡ ಕೆಲಸದ ಹನುಮಿ ಅಕ್ಕನನ್ನು ಎಳೆದುಕೊಂಡೆ ಒಳನುಗ್ಗಿ ಭಾವನ ಬಾಯಿ ಮುಚ್ಚಿಸಿದಳಂತೆ. ಆದರೆ ಅಕ್ಕ ಅದೊಂದನ್ನು ಯಾವತ್ತು ಹೇಳಿದವಳಲ್ಲ. ‘ಇದೆಂತದೆ ಅಕ್ಕ?’ ಎಂದು ನಾವೇನಾದರೂ ಹೇಳಿದರೆ ‘ಒಬ್ಬೊಬ್ಬರ ಸ್ವಭಾವ ಒಂದೊಂದು ನಮನಿ ಇರ್ತೆ ಗೌರಿ, ಹೊಡೀಲಿ ಬಡೀಲಿ, ಅವರ ಆಸರೆಯೆ ನಮಗೆ ಕಡೇತನಕ ಅಲ್ದ? ನಮ್ಮ ಕರ್ಮ ಏನೇನ್ ಇದ್ದೊ ಅದನ್ನು ಅನುಭವಿಸವು’ ಎಂದೆಲ್ಲ ನಮಗೇ ಉಪದೇಶ ಮಾಡುತ್ತಿದ್ದಳು. ಹೊಸ ತಲೆಮಾರಿನ ನಮಗೆ ಇದನ್ನೆಲ್ಲ ಕಂಡು ಮೈ ಉರಿಯುತ್ತಿತ್ತು.
* * *
ಕೃಷ್ಣ ಬಂದವನೆ, “ಚಿಕ್ಕಿ, ನೀನು ಸ್ನಾನ ಮಾಡಿ ಬಾ, ಊಟ ಮಾಡನ. ಗಂಟೆ ಒಂದಾತು’’ ಎಂದು ಎಚ್ಚರಿಸಿದಾಗ ಮುರುಟಿ ಮಲಗಿದ್ದ ಅಕ್ಕನತ್ತ ನೋಡಿದೆ. ಅವಳಿಗೆ ನಿದ್ದೆ ಬಂದಿತ್ತೊ, ನಿದ್ದೆ ಬಂದಂತೆ ಮಲಗಿದ್ದಳೋ ಅಥವಾ ನೋವಿನ ಸಮುದ್ರದಲ್ಲಿ ಉಸಿರುಗಟ್ಟಿದ ಮಾನಸಿಕ ಅರಿವಳಿಕೆಯಲ್ಲಿದ್ದಳೊ ತಿಳಿಯಲಿಲ್ಲ. “ನೀನು ಊಟ ಮಾಡಿ ಆಮೇಲೆ ಅಕ್ಕನಿಗೆ ಗಂಜಿ ತಿನ್ನಿಸ್ಲಕ್ಕು’’ ಕೃಷ್ಣ ಮೆತ್ತಗೆ ಹೇಳಿದ. ಹಾಸಿಗೆಯ ಬದಿಗಿಟ್ಟಿದ್ದ ಅಕ್ಕನ ಮಂಗಲಸೂತ್ರವನ್ನು ಅವನ ಕೈಗಿಟ್ಟು, “ಸದ್ಯ ಇದ್ನ ದೇವರತ್ರ ಇಡು, ಅವಳಿಗೆ ಬಹಳ ಅಲವರಿಕೆಯಾಗ್ತಡ, ಅದಕ್ಕೆ ತೆಗದಿ’’ ಎಂದೆ. ತಾನೇನೋ ಹೇಳಬೇಕೆಂದುಕೊಂಡ ಕೃಷ್ಣ ತನ್ನಷ್ಟಕ್ಕೆ ಏನೂ ಹೇಳುವುದು ಸರಿಯಲ್ಲ ಎಂದು ಮರುತೀರ್ಮಾನಿಸಿದವನಂತೆ ಮೌನವಾಗಿ ಸರ ತೆಗೆದುಕೊಂಡು ಹೋಗಿ ದೇವರ ಬಳಿ ಇಟ್ಟು ಬಂದ. ನನ್ನ ಭಾರವಾದ ದೇಹವನ್ನೆತ್ತಿ ಹೆಜ್ಜೆ ಹಿಂದೆ ಹಿಂದೆ ಹಾಕುತ್ತ ಸ್ನಾನಕ್ಕೆಂದು ಹೊರಟೆ. ಹಂಡೆಯೊಳಗಿನ ಬಿಸಿನೀರು ಹೊರಚೆಲ್ಲತೊಡಗಿದಂತೆ, ಕಂಡು ಕೇಳಿದ ಅಕ್ಕನ ಬದುಕು ನೆನಪಿನಾವರಣದಿಂದ ಹೊರಬರತೊಡಗಿತು..
ಅಪ್ಪನಿಗೆ ನಾವು ಎಂಟು ಜನ ಮಕ್ಕಳು. ನಾಲ್ಕು ಹೆಣ್ಣುಮಕ್ಕಳು, ನಾಲ್ಕು ಗಂಡು. ನಾನು ಮೂರನೆಯ ಹೆಣ್ಣುಮಗಳು. ನನಗೂ ಈ ಹಿರಿಯಕ್ಕನಿಗೂ ಹನ್ನೆರಡು ವರ್ಷಗಳ ಅಂತರ. ನಾನು ನಾಲ್ಕನೆಯ ವರ್ಷದವಳಿದ್ದಾಗಲೆ ಅಕ್ಕನ ಮದುವೆಯಾದದ್ದು. ಅಮ್ಮ ಕಿರಿಯ ತಂಗಿ-ತಮ್ಮರ ಆರೈಕೆಯಲ್ಲಿರುತ್ತಿದ್ದರಿಂದ ಅಲ್ಲಿಯವರೆಗೆ ನನ್ನ ದೇಖರೇಖೆಯನ್ನೆಲ್ಲ ನೋಡಿಕೊಂಡಿದ್ದು ಇದೇ ಅಕ್ಕ. ನನ್ನ ತಲೆ ಬಾಚುವುದಿರಲಿ, ಸ್ನಾನ ಮಾಡಿಸುವುದಿರಲಿ, ಊಟ ಮಾಡಿಸುವುದಿರಲಿ ಎಲ್ಲ ಅಕ್ಕನೇ. ಅಕ್ಕ ಮದುವೆಯಾಗಿ ಹೊರಟು ನಿಂತಾಗ ಅತ್ತು ಕರೆದು ರಂಪ ಮಾಡಿದೆನಂತೆ. ನನ್ನ ರಗಳೆ ನೋಡಲಾಗದೆ ಅಕ್ಕನ ಮಾವ ಅಕ್ಕನೊಟ್ಟಿಗೆ ನನ್ನನ್ನೂ ಮುಠ್ಠಳ್ಳಿಗೇ ಕರೆದುಕೊಂಡು ಹೋಗಿದ್ದನಂತೆ. ಮತ್ತೆ ಅಪ್ಪನ ಮನೆಗೆ ಅಕ್ಕ ಬರುವಾಗಷ್ಟೆ ನಾನು ಬರುತ್ತಿದ್ದೆನಂತೆ. ನಡುವೆ ಅಣ್ಣ ಅಪ್ಪಯ್ಯ ಯಾರಾದರು ಅಕ್ಕನ ಮನೆಗೆ ಬಂದರೆ ನನ್ನನ್ನು ತಗ್ಗಿನಮನೆಗೆ ಕರೆದುಕೊಂಡು ಹೋಗಿಬಿಡುತ್ತಾರೆ ಅಂತ ನಾನು ಅಡಗಿಕೊಂಡು ಬಿಡುತ್ತಿದ್ದೆನಂತೆ. ‘ನಿನ್ನ ಕರೆದುಕೊಂಡು ಹೋಗೋದಿಲ್ಲ ಮಾರಾಯ್ತಿ ಬಾ’ ಎಂದು ಕರೆದಾಗಷ್ಟೆ ಬರುತ್ತಿದ್ದೆನಂತೆ. ಮದುವೆಯಾಗಿ ಒಂದು ವರ್ಷಕ್ಕೆ ಹುಟ್ಟಿದ ಅಕ್ಕನ ಮಗಳು ಸಾವಿತ್ರಿ ನನಗೆ ಒಡಹುಟ್ಟಿದವರಿಗಿಂತ ಹೆಚ್ಚಿನ ತಂಗಿಯಾದಳು. ನನಗೆ ಆರು ವರ್ಷವಾಗುತ್ತಿದ್ದಂತೆ ಶಾಲೆಯ ಕಾರಣದಿಂದ ನಾನು ತಗ್ಗಿನಮನೆಗೆ ಸ್ಥಳಾಂತರಗೊಳ್ಳಲೇ ಬೇಕಾಯಿತು. ನಾನು ಏಳನೆಯ ಕ್ಲಾಸು ಸೇರುವ ಹೊತ್ತಿಗೆ ಸಾವಿತ್ರಿಯು ತಗ್ಗಿನಮನೆಗೇ ಬಂದು ನನಗೆ ಸಾಥಿಯಾದಳು.
ಮೊದಮೊದಲೆಲ್ಲ ಭಾವ ನಮ್ಮನ್ನೆಲ್ಲ ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದ. ಉಳಿದವರಿಗಿಂತ ನಾನೆಂದರೆ ಹೆಚ್ಚು ಅಕ್ಕರೆ ಅವನಿಗೆ. ಅಂಥವ ಅದೇನೋ ಇದ್ದಕ್ಕಿದ್ದಂತೆ ಒರಟನಾಗುತ್ತ ನಡೆದ. ಅದು ಹುಟ್ಟಿದ್ದು ಹೇಗೆ ಬೆಳೆದದ್ದು ಹೇಗೆ ಎನ್ನುವುದು ನನ್ನ ತಿಳಿವಿನಲ್ಲಿ ಇಲ್ಲ. ಎಲ್ಲ ಕುಟುಂಬಗಳಲ್ಲಾಗುವಂತೆ ಅಲ್ಲಿಯು ಹಿಸ್ಸೆಪಂಚಾಯತಿ ಆಗಬೇಕೆಂದು ಯಜಮಾನಿಕೆ ವಹಿಸಿಕೊಂಡಿದ್ದ ಭಾವನ ಅಣ್ಣ ವರಾತ ಹಚ್ಚಿದನಂತೆ. ತನಗೆ ವ್ಯವಹಾರ ಜ್ಞಾನವಿಲ್ಲ, ತಾನು ತನ್ನ ಕೆಲಸ ಮಾಡಿಕೊಂಡಿರುತ್ತೇನೆ ಎಂದು ಭಾವ ಹೇಳಿದರೂ ಕೇಳಲಿಲ್ಲವಂತೆ. ಆಗ ಸಿಟ್ಟುಗೊಂಡ ಭಾವ ನನಗೇನೂ ಬೇಡ ಎಂದು ಉಟ್ಟಬಟ್ಟೆಯಲ್ಲಿ ಹೊರಟು, ಗದ್ದೆಯ ಕೋವಿನಲ್ಲಿ ಒಂದು ತಟ್ಟಿಬಿಡಾರ ಹಾಕಿಕೊಂಡು ಕುಳಿತನಂತೆ. ಅಕ್ಕ ಗತಿ ಕಾಣದೆ ಅತ್ತು ಕರೆದಾಗ, “ನೀನು ಬರುವುದಾದರೆ ಬಾ, ಇಲ್ಲವಾದರೆ ಇಲ್ಲೇ ಇರು, ಅಥವಾ ನಿನ್ನ ಅಪ್ಪನ ಮನೆಗೆ ಹೋಗು” ಎಂದು ಹೊರಟುಹೋದನಂತೆ. ಅನಿವಾರ್ಯವಾಗಿ ಅಕ್ಕನೂ ಅಲ್ಲಿಗೆ ಹೋಗಿ ತಂಡದವರ ಮನೆಯಿಂದ ಗಡಿಗೆ ತಂದು ಗಂಜಿ ಬೇಯಿಸಿಹಾಕುತ್ತಿದ್ದಳಂತೆ. ಒಂದೆರಡು ದಿನವಲ್ಲ, ಬರೋಬ್ಬರಿ ಮೂರು ತಿಂಗಳು. ಬೇರಾರ ಮೂಲಕವೊ ವಿಷಯ ತಿಳಿದ ಅಪ್ಪ ಕೇಳಲಿಕ್ಕೆ ಬಂದರೆ ಭಾವ ಅಪ್ಪನ ಕೈಗೇ ಸಿಗದೆ ಘಟ್ಟದ ಕೆಳಗೆ ಹೋಗಿಬಿಟ್ಟಿದ್ದನಂತೆ. ಮತ್ತೆ ಅಪ್ಪ ಮರಳಿದ ನಾಲ್ಕು ದಿನದ ನಂತರವೇ ಬಂದದ್ದು. ಅಂತೂ ಊರವರೆಲ್ಲರಿಂದ ಪಂಚಾಯತಿಯಾಗಿ ಭಾವ ಮೂಲಮನೆಗೆ ಮರಳಿ ಬಂದನಂತೆ. ಹಿಸ್ಸೆ ಪಂಚಾಯತಿಯಲ್ಲೂ “ನೀವೇನು ಕೊಡುತ್ತೀರೋ ಅಷ್ಟು ಸಾಕು ನನಗೆ” ಎಂದು ಊರವರೆದುರು ಹೇಳಿ ಎದ್ದು ಹೋಗಿಬಿಟ್ಟನಂತೆ. ಊರವರ ಕಣ್ಣಿನಲ್ಲಿ ಒಳ್ಳೆಯವನೆನ್ನಿಸಿಕೊಂಡ ಭಾವನ ಅಣ್ಣ ‘ಸಾಲ ಅಷ್ಟಿದೆ, ಇಷ್ಟಿದೆ’ ಎಂದು ಏನೇನೋ ಹೇಳಿ ಅಲ್ಪ ಸ್ವಲ್ಪ ಕೊಟ್ಟಂತೆ ಮಾಡಿ ಕೈತೊಳೆದುಕೊಂಡು ಬಿಟ್ಟ ಎಂದು ಅಕ್ಕ ಅಮ್ಮನೆದುರು ಕಣ್ಣೀರಾಗಿ ಹೇಳಿಕೊಂಡಾಗ ಗಂಡಸಾಗಿ ಭಾವ ಯಾಕೆ ಹೀಗೆ ಎಂದು ನನಗನ್ನಿಸುತ್ತಿತ್ತು. “ಹಿಸ್ಸೆ ಮರುದಿನ ದನಾ ಕರೆಯಲೆ ಹೋಪನ ಅಂದ್ರೆ ಕರೆಯತಂಬಿಗೇನು ಇರ್ಲೆ, ಅಂಥಾ ಸ್ಥಿತೀಲಿ, ಹಿತ್ಲ ಬಾಗಿಲಿಂದ ಬಂದ ಅತ್ತೆ, ತಗ, ಇದ್ರಲ್ಲಿ ಹಾಲು ಕರಿ ಅಂತ ಒಂದು ಕವಳಿಗೆ ಕೊಟ್ಟಿದ್ದ. ಕಡೀಗೆಲ್ಲ ಸಂತೇಲಿ ತಂದ ಮಣ್ಣಿನ ಗಡಿಗೇಲೆ, ಅನ್ನ, ಸಾರು ಎಲ್ಲ’’ ಎಂದು ಅಕ್ಕ ಕಣ್ಣೀರಿಟ್ಟಾಗ, “ಅಯ್ಯ, ನಿನ್ನ ಮದುವೆ ಬಳುವಳಿ ಪಾತ್ರೇನು ಕೊಟ್ಟಿದ್ವಿಲ್ಯನೆ’’ ಎಂದು ಅಮ್ಮ ಬೇಜಾರು ಮಾಡಿಕೊಂಡಿದ್ದಳು.
* * *
ಊಟವಾದ ಬಳಿಕ ಕೃಷ್ಣನ ಹೆಂಡತಿ ಶಾರದೆ, “ಅತ್ತೆ, ನೀವು ಸ್ವಲ್ಪ ಹೊತ್ತು ಅಡ್ಡಾಗಿ, ನಾನು ಅತ್ತೇರಿಗೆ
ಗಂಜಿ ಕುಡಿಸ್ತಿ’’ ಎಂದರು ಸಮವೆನ್ನಿಸದೆ, ನಾನೇ ಗಂಜಿಬಟ್ಟಲು ಹಿಡಿದು ಅಕ್ಕನ ಬಳಿಗೆ ಬಂದೆ. ಅಕ್ಕ ಅಂಗಾತ ಮಲಗಿ ಮೇಲಿನ ಜಂತಿ ನೋಡುತ್ತಿದ್ದವಳು, “ಬಂದ್ಯ, ನಾನೆ ಕರೆಯವು ಅಂತಿದ್ದಿ. ಈ ಹಾಸ್ಗೆ ಸ್ವಲ್ಪ ಅತ್ತತ್ತ ಎಳಿ. ತೊಲೆ ಕೆಳಗೆ ಇದ್ದಿದ್ದಕ್ಕೆ ರಾತ್ರಿ ಹೊತ್ಗ ಬಂದು ಉಸಿರು ಕಟ್ಟಿದಂಗೆ ಆಗ್ತು’’ ಅಂದಳು. ‘ಹೊತ್ಗ’ ಎಂಬ ದೆವ್ವದ ಭ್ರಮೆಗೆ ಪರಿತಾಪವೆನ್ನಿಸಿದರೂ, ಉಸಿರಾಡಲು ಕಷ್ಟವೆನಿಸುತ್ತಿರುವ ಅಕ್ಕನಿಗೆ, ಮನಸ್ಸಿಗಾದರೂ ಸಮಾಧಾನವಾಗಲಿ ಎಂದು ಹಾಸಿಗೆಯನ್ನು ಸರಿಸಿ, “ಏಳಕ್ಕ, ಒಂದಿಷ್ಟು ಗಂಜಿ ಕುಡಿದು ಮಲಗು’’ ಎಂದೆ. ಮರು ಮಾತಾಡದೆ ನನ್ನ ಕೈಯಾಸರೆಯಿಂದ ಎದ್ದುಕುಳಿತಳು. ಪೂರ್ಣ ಜೀರ್ಣವಾದ ಈ ದೇಹದ ತೂಕ ಹತ್ತಾರು ಕೇಜಿಯಾದರು ಇದ್ದೀತೆ? ಎನ್ನಿಸಿತು. ಆದರೆ ಅವಳದೇನು ಶಕ್ತಿ ಇಲ್ಲದೆ ಪೂರ್ಣ ನನ್ನ ಪ್ರಯತ್ನವೇ ಆದ್ದರಿಂದ ಸ್ವಲ್ಪ ತ್ರಾಸುಪಟ್ಟಿದ್ದನ್ನು ಕಂಡವಳೆ, “ಈಗ್ಲೆ ಹೆಣಭಾರ ಆಪ್ಲೆ ಶುರುವಾಯ್ದು ಅಲ್ದ ಗೌರಿ. ಎನ್ ಭಾರಕ್ಕಿಂತ ಈ ಕೂಸಿನ ಭಾರವೆ ದೊಡ್ದೆ” ಎಂದು ಎದೆಯ ಗಡ್ಡೆ ತೋರಿಸುತ್ತ ಬೊಚ್ಚ ಬಾಯಲ್ಲಿ ನಕ್ಕಳು. ಈ ಅರ್ಬುದಗಡ್ಡೆಯು ತನ್ನದೇ ಸಂತಾನ ಎನ್ನುವ ಬಗೆಯಲ್ಲಿ ಮನಸ್ಸು ಬದಲಾಗುವ ಪರಿಗೆ ಬೆರಗು ಹುಟ್ಟಿತಾದರು ಅಕ್ಕನ ಅಸಹಾಯತೆಗೆ ಮರುಕಹುಟ್ಟಿ, “ಅದ್ನೆಲ್ಲ ಕತ್ತರಿಸಿ ಒಗೆದುಬಿಡನ, ನೀನು ಹುಂ ಅನ್ನು. ಈವತ್ತೆ ಹುಬ್ಳಿಗೆ ಹೋಪನ” ಎಂದೆ. ಅಕ್ಕ ಬಿಲ್ಕುಲ್ ಬೇಡ ಅನ್ನುವಂತೆ ತಲೆಯಾಡಿಸುತ್ತ “ಅದೊಂದ್ ಬಿಟ್ಟು ಬೇರೆ ಹೇಳು” ಎಂದಳು. ಮಾತಾಡಲು ತೋಚದೆ ಅವಳಿಗೆ ಗಂಜಿ ಉಣ್ಣಿಸಲು ತೊಡಗಿದೆ. ಇದ್ದಕ್ಕಿದ್ದಂತೆ ಅವಳ ಕಣ್ಣಲ್ಲಿ ನೀರಾಡಲು ತೊಡಗಿತು. ಬಟ್ಟೆಯಿಂದ ಅವಳ ಕಣ್ಣೊರೆಸುತ್ತ ಬಹಳ ನೋಯ್ತಾ ಅಕ್ಕ ಅಂದೆ. “ಹಾಸಿಗೆ ಹಿಡಿದ್ಮೇಲೆ ಮಗಳೆ ತಾಯಿ ಆಗ್ತ್ಲಡ. ಅಂತಾ ಮಗಳನ್ನು ಇಟ್ಕಂಬ ಅದೃಷ್ಟ ಇಲ್ದೆ ಹೋತು. ಇರತನ್ಕವು ಆಯೀ, ಆಯೀ ಹೇಳ್ಕ್ಯತ್ತ ಎನ್ನ ಕಾಲು ಸುತ್ಗ್ಯೋತ ಎನ್ನ ಎಲ್ಲ ಸಂಕಟನೂ ಮರೆಸ್ತಿದ್ದವ ಈಗ ಇದ್ದಿದ್ರೆ? ಹೋಗ್ಲಿ, ನೀನೇ ಮಗಳಾಗಿ ಬಂದ್ಯಲೆ” ಎಂದಳು. ಅವಳು ಸಾವಿತ್ರಿಯನ್ನು ನೆನಪು ಮಾಡಿಕೊಳ್ಳುತ್ತಿದ್ದಾಳೆಂಬುದು ತಿಳಿಯುತ್ಲೆ ನನ್ನ ಕೈ ಮನಸ್ಸು ಎರಡೂ ಸ್ತಬ್ಧವಾಯಿತು. ಈ ಎಲ್ಲ ನೋವುಗಳನ್ನು ನುಂಗಿ ನುಂಗಿಯೇ ಅದೇ ನೋವಿನಗಡ್ಡೆಯಾಗಿ ಅಕ್ಕನ ಎದೆಯಿಂದ ಚಿಗಿತಿತೆ? ಎಂದನ್ನಿಸಿತು. “ಅವಳ ನೆನಪು ತೆಗೆಯಡ್ದೆ ಅಕ್ಕ, ಉಳಿದ ಮಕ್ಳ ನೋಡಿ ಸಮಾಧಾನ ಮಾಡ್ಕ್ಯಳೆ” ಎಂದೆ. “ಹೌದು ಎರಡು ಗಂಡುಮಕ್ಕಳು ಇದ್ದ. ಆದ್ರೆ, ಗೌರಿ, ಹತ್ ಮಕ್ಕಳು ಇದ್ರು ಸತ್ತ್ ಮಕ್ಳ ದುಃಖ ಮರೀತಿಲ್ಲ್ಯೆ” ಎನ್ನುತ್ತ ಅಳುವುದಕ್ಕೆ ಶುರುಮಾಡಿಬಿಟ್ಟಳು.
ಓದಿನಲ್ಲಿ ತುಂಬಾ ಜಾಣೆಯಾಗಿದ್ದ ಸಾವಿತ್ರಿ ಅದಾಗಲೆ ಆರಂಭವಾಗಿದ್ದ ಅವರ ಮನೆಯಿಂದ ಎರಡು ಮೈಲಿ ದೂರದಲ್ಲಿದ್ದ ಬೇಡ್ಕಣಿ ಹೈಸ್ಕೂಲಲ್ಲಿ ಕಲಿತು ಫಸ್ಟ್ಕ್ಲಾಸಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿ ಅಪ್ಪ ಕಾಲೇಜಿಗೆ ಕಳಿಸದಾಗ ಮನೆಯಲ್ಲಿಯೆ ಉಳಿದಿದ್ದಳು. ಭಾವ ಸಂಪ್ರದಾಯ ಶಿಸ್ತು ಅಂತ ತನ್ನ ಮಗಳಿಗೆ ನಮ್ಮಂತೆ ವಿಧವಿಧದ ಬಟ್ಟೆಯಿರಲಿ, ಚೂಡಿದಾರ ಹಾಕಲು ಅನುಮತಿ ಕೊಡುತ್ತಿರಲಿಲ್ಲ, ಇನ್ನು ಕಾಲೇಜಿಗೇನು ಕಳಿಸುತ್ತಾನೆ? ಸಾವಿತ್ರಿ ತಗ್ಗಿನಮನೆಗೆ ಬಂದರೆ ಕೋಣೆಯೊಳಗೆ ನಮ್ಮ ದಿರಿಸು ಹಾಕಿ ಕನ್ನಡಿ ಮುಂದೆ ನಿಂತು ಸಂತೋಷಪಟ್ಟು ಅಲ್ಲೆ ಬಿಚ್ಚಿ ಹಾಕಿಯೇ ಅಪ್ಪನೆದುರು ಹೋಗಬೇಕಾಗಿತ್ತು. ಸಾವಿತ್ರಿ ಹೈಸ್ಕೂಲು ಮುಗಿಸುವ ಹೊತ್ತಿಗೆ ನನ್ನ ಮದುವೆಯಾಗಿ ನೌಕರಿಯಲ್ಲಿದ್ದ ಗಂಡನೊಟ್ಟಿಗೆ ನಾನು ಬಳ್ಳಾರಿಗೆ ಹೊರಟಬಳಿಕ ನಮ್ಮ ಸಂಪರ್ಕ ಬರೆವ ಪತ್ರಕ್ಕಷ್ಟೆ ಸೀಮಿತವಾಯಿತು. ಅದರಲ್ಲೂ ಅವಳು ಅಪ್ಪನಿಗೆ ತೋರಿಸಿಯೇ ಪತ್ರ ಪೆÇೀಸ್ಟ್ ಮಾಡಬೇಕಾಗಿತ್ತಂತೆ. ಹಾಗೆಂದು ತಮ್ಮ ಹೇಳುತ್ತಿದ್ದ. ಹಾಗಾಗಿ ಕ್ಷೇಮಸಮಾಚಾರ ಬಿಟ್ಟರೆ ಬೆಟ್ಟದಲ್ಲಿ ಬಿಳೆಮುಳ್ಳೆ ಹಣ್ಣು, ಕವಳಿಹಣ್ಣು ಮಸ್ತು ಬಿಡುತ್ತಿರುವ ಸುದ್ದಿ ಇಂತಹದ್ದೆ ಪತ್ರದಲ್ಲಿ ತುಂಬಿರುತ್ತಿತ್ತು. ಮುಠ್ಠಳ್ಳಿಗೆ ಹೋದಾಗ ನಾನು ಅವಳು ಇಬ್ಬರೂ ಸೇರಿ ಗುಡ್ಡಬೆಟ್ಟ ತಿರುಗುತ್ತ ನುರುಕಲು ಬೀಜ, ಮುಳ್ಳೆಹಣ್ಣು, ಕವಳಿಹಣ್ಣು ಕೊಯ್ಯುತ್ತ ಬಟ್ಟೆ ಹರಿದುಕೊಂಡದ್ದು, ತೋಡಿನಲ್ಲಿ ಜಾರಿಬಿದ್ದು ರಾಡಿ ಮಾಡಿಕೊಂಡದ್ದು ಎಲ್ಲ ನನ್ನ ನೆನಪಿನ ಗೋಡೆಯಲ್ಲಿನ ಚಿತ್ರವಾಗುತ್ತಿತ್ತು. ಅದೇ ಹುಡುಗಾಟಿಕೆಯ ಹುಡುಗಿ ಸಾವಿ ಪಕ್ಕದಮನೆಯ ಶಾಸ್ತ್ರಿ ಮಗ ಉಮೇಶನೊಟ್ಟಿಗೆ ಮುಳ್ಳಣ್ಣು ಕೊಯ್ಯಲು ಹೋಗಿದ್ದೆ ದೊಡ್ಡ ಸುದ್ದಿಯಾಗಿ ಒಂದು ರಾತ್ರಿ ಭಾವ ಹಿಗ್ಗಾಮುಗ್ಗಾ ಬೈದನಂತೆ. ಮರುದಿನ ಬೆಳಗ್ಗೆ ತೋಟದ ಹತ್ತಿರದ ತೆರೆದ ಬಾವಿಯೊಳಗೆ ಸಾವಿ ಹೆಣ ತೇಲುತ್ತಿತ್ತಂತೆ.
ಪದೇ ಪದೇ ಧುಮ್ಮಿಕ್ಕುವ ಸಾವಿತ್ರಿಯ ದುರಂತ ಸಾವಿನ ನೆನಪು ನನಗೇ ಇಷ್ಟು ಬಾಧೆ ಕೊಡುವಾಗ ಅಕ್ಕನಿಗಿನ್ನೆಷ್ಟು ಬಾಧಿಸಿರಬೇಕು?
“ಅಕ್ಕ, ದೇಹದ ನೋವಿನೊಟ್ಟಿಗೆ ಮನಸ್ಸಿನ ಕಹಿನೆನಪನ್ನು ಕೆದಕುತ್ತ ಹೋದರೆ ಮತ್ತಷ್ಟು ಹಿಂಸೆಯಾಗ್ತು. ಈಗ ನೀನು ನಿನ್ನ ಬದುಕಿನ ರಸಘಳಿಗೇನಷ್ಟೇ ನೆನಪು ಮಾಡ್ಕ್ಯತ್ತ ಕಾಲ ಕಳಿ’’ ಎಂದೆ. ಅಕ್ಕ ಕಹಿಯಾಗಿ ನಕ್ಕು, “ರಸಘಳಿಗೆ. ಹುಂ. ರಸಘಳಿಗೆ! ಗೌರಿ, ಪೂರಾ ಬೆತ್ಲೆ ಬಾನು ಬದ್ಕು ಕತ್ಲೆ ಕಾನು. ರಸ ಎಲ್ಲೀದೆ? ಬೆತ್ಲೆ ಬಾನಲ್ಲಿ ಮಳೆ ಬತ್ತ? ಹಂಗೆ ಕತ್ಲೆ ಬದುಕಲ್ಲಿ ರಸ ಎಲ್ಲಿ ಹುಟ್ತು? ತೀಟೆ ತೀರ್ತು ಅಷ್ಟೆ. ಈಗ ರಸ ಅಂದ್ರೆ, ಇದೆ, ಹಾಲು ಬರ ಜಾಗ್ದಲ್ಲಿ ಕೀವು ಅಷ್ಟೆ.’’
“ಅಲ್ದೆ ಅಕ್ಕ, ಮದ್ವೆ ಆದ ಹೊಸತ್ರಲ್ಲಿ ಭಾವ ನಿನ್ ಜೊತೆ ಸರಸ ಆಡಿರ್ಲ್ಯ? ಅದ್ನ ನೆನ್ಪು ಮಾಡ್ಕ್ಯ….’’ “ಹೇಳಿದ್ನಲ್ಲೆ. ಕತ್ಲೆ ಕಾನು ಅಂದರೆ ನೆನಪಾಗ್ತು. ತಗ್ಗಿನಮನೆಯಿಂದ ಸಂಜೆ ಹೊತ್ತು ಕಾನಲ್ಲಿ ಬರಕಿದ್ರು ಅವ್ರು ಎನಗಿಂತ ನಾಕು ಮಾರು ಮುಂದೇನೆ. ಹೆಂಡ್ತೀನ ಕಿರುಬ ಹೊತ್ಕಂಡ್ ಹೋತ ಹೇಳು ತಿರುಗಿ ನೋಡ್ತಿದ್ವಿಲ್ಲೆ. ಏನೋ ತೀಟೆಗೆ ತಪತಪ ಮೂರ್ಮಕ್ಳು ಉದುರ್ಜ, ಅಷ್ಟೆ’’ ಎನ್ನುತ್ತಿದ್ದಂತೆ ಕ್ಷಣದಲ್ಲಿಯೆ ತನ್ನೊಳಗೇ ತಾನು ಎಲ್ಲೋ ಕಳೆದುಹೋದಂತೆ ಮೌನವಾಗಿಬಿಟ್ಟಳು. ಆ ಕ್ಷಣಕ್ಕೆ ಅಣ್ಣ ಹೇಳಿದ ಸಂಗತಿಯೊಂದು ನೆನಪಾಯಿತು. ಒಮ್ಮೆ ಯುಗಾದಿಹಬ್ಬಕ್ಕೆ ಬರುವಾಗ ಅಮ್ಮನಿಗೆ ಇಷ್ಟ ಎಂದು ಮನೆಯಲಿದ್ದ ಒಂದಿಷ್ಟು ಬೇರುಹಲಸಿನ ಕಾಯಿಯನ್ನು ಅಕ್ಕ ಚೀಲಕ್ಕೆ ತುಂಬಿಕೊಂಡಿದ್ದಳಂತೆ. ಒಂದು ಕೈಯಲ್ಲಿ ಮುಳ್ಳುಕಂಟಿಗಳಿಗೆ ಸಿಕ್ಕದ ಹಾಗೆ ಸೀರೆ ಎತ್ತಿಹಿಡಿದುಕೊಂಡು ಒಂದು ಕೈಯಲ್ಲಿ ಚೀಲ
ಹಿಡಿದುಕೊಂಡು ಹೊರಟ ಅಕ್ಕನ ಬಳಿ ಭಾವ, “ಈವತ್ತು ಯುಗಾದಿ, ಮಳೆ ಬಂದ್ರು ಬಂತೆ. ಒಂದು ಕೊಡೆ ತಗ” ಅಂದನಂತೆ. ಹಿಡಿದುಕೊಳ್ಳಲು ಯಾವ ಕೈಯು ಸವಡಿಲ್ಲ ಎಂದು “ಈವತ್ತು ಮಳೆ ಬತ್ತಿಲ್ಲೆ ಬಿಡಿ” ಎಂದು ಅಕ್ಕ ಹಾಗೇ ಹೊರಟರೆ ಭಾವ ಕೊಡೆ ಹಿಡಿದು ಬಂದಿದ್ದ. ಅಕ್ಕನ ದುರಾದೃಷ್ಟಕ್ಕೆ ತಗ್ಗಿನಮನೆಯಿಂದ ಅವರು ಮರಳಿಹೊರಟ ತುಸು ಹೊತ್ತಿಗೇ ಧಾರಾಕಾರ ಮಳೆ. “ಹೇಳಿದರು ಕೊಡೆ ತಂದಿಲ್ಲ ಇವಳು” ಎನ್ನುವ ಸಿಟ್ಟಿಗೆ, “ಮಳೆಯಲ್ಲಿಯೆ ಬಾ” ಎಂದು ಭಾವ ಬಿರಬಿರನೆ ನಡೆದನಂತೆ. ಪೂರಾ ಮಳೆಯಲ್ಲಿಯೆ ನೆನೆಯುತ್ತಲೆ ಹೋದಳಂತೆ ಅಕ್ಕ.
ಛೆ! ಅಕ್ಕನ ಬಗ್ಗೆ ನೆನಪಾಗುವಾಗೆಲ್ಲ ನನಗೇ ಇಂತಹ ವಿಷಮ ಘಳಿಗೆಗಳೆ ನೆನಪಾಗುತ್ತವೆ ಎಂದಾಗ ಹೇಳದ ಕೇಳದ ಇನ್ನೆಷ್ಟು ಕಹಿಸಂಗತಿಗಳಿದ್ದಾವು ಅಕ್ಕನ ನೆನಪಲ್ಲಿ? ಇಂಥವಳಲ್ಲಿ ನಾನು ‘ರಸಘಳಿಗೆ ನೆನಪು ಮಾಡಿಕೋ’ ಎನ್ನುತ್ತೀನಲ್ಲ ಎಂದು ನನ್ನ ಬಗ್ಗೆ ನನಗೇ ಬೇಸರವಾಯಿತು. “ಹೋಗಲಿ ಬಿಡು ಅಕ್ಕ, ಮಕ್ಕಳಾದ್ರು ಅಪ್ಪನ ಸ್ವಭಾವ ಹೊತ್ತು ಬರಲ್ಯನ, ಅದ್ಕೆ ಸಂತೋಷಪಡು’’ ಎಂದೆ. “ಎಂಥಾ ಹೇಳ್ತೆ ಗೌರಿ? ನಿನ್ನ ಭಾವನ ಕೆಲ್ಸ, ಹಠ, ಬುದ್ಧಿವಂತಿಕೆ ಈ ಹುಡುಗ್ರಿಗೆ ಇಲ್ಯೆ. ಅವು ಏನೋ ಪ್ರೀತಿ ಮಾಡಿದ್ವಿಲ್ಲೆ ಹೇಳದ್ ಬಿಟ್ರೆ, ದೇವರಂಥ ಗಂಡ’’ ಎಂದು ಅರ್ಧದಲ್ಲಿಯೆ ನಿಲ್ಲಿಸಿದಳು. ‘ಎಲಾ ಪತಿಪ್ರೇಮವೆ!’ ಎನ್ನಿಸಿತು. ಗಂಡ ಹೇಗೇ ಇರಲಿ, ಅವನೇ ದೇವರು ಎನ್ನುವ ಈ ನಮ್ಮ ಪರಂಪರೆಯ ಬೋಳೆತನಕ್ಕೆ ಅಳಬೇಕೊ ಅಸಹ್ಯಪಡಬೇಕೊ ತಿಳಿಯಲಿಲ್ಲ. ನಾನೇ ಕಂಡಿದ್ದೆ, ಕೇಳಿದ್ದೆ ಮುಠ್ಠಳ್ಳಿಯ ಕುಟುಂಬದವರ ಜೀವನದ ರೀತಿಯನ್ನು. ಮನೆಯ ಹೆಂಗಸರೆಲ್ಲ ಬೆಳಗ್ಗೆ ಮುಂಚೆ ಎದ್ದು ಸ್ನಾನ ಮಾಡಿ, ತೊಳೆದ ಬಟ್ಟೆ ಧರಿಸಿ ಹೂವಿನ ದಂಡೆ ಮಾಡಿ ಮುಡಿದು ಬಾಗಿಲಿಗೆ ರಂಗೋಲಿ ಇಟ್ಟು, ದೇವರದೀಪ ಹಚ್ಚಿ, ಬಳಿಕ ಕಾಫಿ ಮಾಡಿ ಗಂಡಂದಿರನ್ನು ಎಬ್ಬಿಸಬೇಕಿತ್ತಂತೆ. ಅನೂಚಾನವಾಗಿ ಬಂದ ಪರಂಪರೆಯದು. ಮನೆಗೆ ಅತ್ತಿಗೆ ಬಂದಾಗ ಅಮ್ಮ ಪದೇಪದೇ ಅದನ್ನೆ ಹೇಳುತ್ತಿದ್ದಳು. ಆದರೆ ಅಷ್ಟನ್ನು ನಿರೀಕ್ಷಿಸುತ್ತಿದ್ದ ಗಂಡಂದಿರು ತಮ್ಮ ಹೆಂಡತಿ ತಮ್ಮಿಂದ ಒಂದು ಪ್ರೀತಿಯ ಮಾತನ್ನು ನಿರೀಕ್ಷಿಸುತ್ತಾರೆ ಎಂದೂ ತಿಳಿದುಕೊಳ್ಳುತ್ತಿರಲಿಲ್ಲವೆ? ತಮ್ಮನ್ನು ನಂಬಿಕೊಂಡು ಬಂದವರ ನೋವು-ನಲಿವುಗಳು ಅವರಿಗೇನು ಆಗಿರಲಿಲ್ಲವೆ? ಮನಸ್ಸಿನಲ್ಲಿ ಸಂನ್ಯಾಸಿಯಾದ ಬಳಿಕ ಭಾವ ಪ್ರತಿ ಏಕಾದಶಿಗೆ ತುಳಸಿನೀರು ಬಿಟ್ಟು ಬೇರೇನು ಸೇವಿಸುತ್ತಿರಲಿಲ್ಲ. ಭಾವ ಹಾಗೆ ಮಾಡುತ್ತಿರುವಾಗ ಅಕ್ಕ ಹೇಗೆ ಆಹಾರ ಸೇವಿಸಿಯಾಳು? ಆ್ಯಸಿಡಿಟಿ ಸಮಸ್ಯೆ ಇದ್ದ ಅಕ್ಕನಿಗೆ ಅದು ಬಹಳ ತೊಂದರೆಯುಂಟುಮಾಡುತ್ತಿದ್ದು, ಎಷ್ಟೋ ಸಾರಿ ತಲೆಚಕ್ಕರ್ ಬಂದು ಬಿದ್ದಿದ್ದಳಂತೆ.
ಅಕ್ಕನ ಹುಣ್ಣಿಗೆ ಮುಲಾಮು ಹಚ್ಚಿ, ನೋವಿನ, ನಿದ್ದೆಯ ಗುಳಿಗೆ ತಿನ್ನಿಸಿ ಏಳುವಷ್ಟರಲ್ಲಿ ಗುಳಿಗೆ ಪ್ರಭಾವದಿಂದ ಅಕ್ಕ ನಿದ್ದೆಗೆ ಜಾರಿದ್ದಳು.
* * *
ಬಂದು ನಾಲ್ಕು ದಿನವಾಗಿತ್ತು. ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಅಕ್ಕನ ನೋವಿನ ಮುಲುಗಾಟ ನೋಡಲಾಗದೆ ನಿತ್ಯ ದೇವರಲ್ಲಿ ಬೇಡಿಕೊಳ್ಳುತ್ತಿದ್ದೆ, ‘ದೇವರೆ ಅಕ್ಕನಿಗೊಂದು ಮುಕ್ತಿ ಕೊಡು’ ಎಂದು. ಮರುಕ್ಷಣವೆ ಅನ್ನಿಸುತ್ತಿತ್ತು, ‘ಇಲ್ಲೂ ನಾನು ಸ್ವಾರ್ಥಿಯಾಗುತ್ತಿದ್ದೇನಾ?’ ನಾನು ಬೇಗ ಮರಳಿ ಹೋಗಬೇಕೆಂದು ಅಕ್ಕನ ಸಾವನ್ನು ಬಯಸುತ್ತಿದ್ದೇನಾ ಎಂದು. ಇಲ್ಲವಾದರೆ ‘ಅಕ್ಕನಿಗೆ ಗುಣವಾಗಲಿ’ ಎಂದಲ್ಲವೆ ನಾನು ಬಯಸಬೇಕಾದದ್ದು?
ನನ್ನ ಮೊರೆ ದೇವರಿಗೆ ಕೇಳಿಸಿತೇನೊ ಎನ್ನುವಂತೆ ಮತ್ತೆರಡೇ ದಿನಕ್ಕೆ ಅಕ್ಕ ಇಲ್ಲವಾದಳು. ಸಾಗರದಲ್ಲಿದ್ದ ಎರಡನೇ ಮಗ ವಿಶ್ವೇಶ್ವರ ಬರುತ್ತಲೇ ನಾಲ್ಕಡಿ ಉದ್ದದ ಚಿರುಟಿದ ದೇಹದ ಅಕ್ಕ ಬೆಂಕಿಯೊಳಗೆ ಲೀನವಾದಳು. ಶೃಂಗೇರಿಯಲ್ಲಿದ್ದ ಭಾವನನ್ನು ಪತ್ತೆ ಮಾಡಿ ಕೃಷ್ಣ ಹೇಳಿಕಳಿಸಿದರೂ ಭಾವ ಬಂದದ್ದು ಮಾತ್ರ ವೈಕುಂಠ ಸಮಾರಾಧನೆಗೆ. “ಭಾವ, ನೀನು ಅಕ್ಕ ಬದುಕಿದ್ದಾಗ ಮಾತ್ರವಲ್ಲ, ಸತ್ತ ಮೇಲೂ ಅವಳಿಗೆ ದ್ರೋಹ ಮಾಡಿದೆ” ಎಂದೆ ಒರಟಾಗಿ. “ಯಾಕಷ್ಟು ಒರಟಾಗಿ ಮಾತಾಡುತ್ತಿದ್ದೀಯಾ?” ಎನ್ನುವಂತೆ ಆಕ್ಷೇಪಾರ್ಹವಾಗಿ ನನ್ನವರು ಕಣ್ಣುಬಿಟ್ಟು ಹೆದರಿಸಿದರೂ, ನಾನು ಕೇರ್ ಮಾಡಲಿಲ್ಲ. ಮುಂದುವರಿಸಿದೆ. “ನಿನಗಾಗಿ ತನ್ನ ಇಡೀ ಬದುಕನ್ನು ಗಂಧದ ಕೊರಡಿನಂತೆ ತೇಯ್ದವಳು” ಎನ್ನುವಲ್ಲಿಂದ ಆರಂಭಿಸಿ, ಸುಮಾರು ಹತ್ತುನಿಮಿಷ ಏನು ಹೇಳಿದೆನೊ ಬಿಟ್ಟೆನೊ, ನನ್ನಲ್ಲಿದ್ದ ನೋವನ್ನೆಲ್ಲ ತೋಡಿಕೊಂಡೆ. “ಥೂ, ನಿನ್ನ ಜನ್ಮವೆ!” ಎಂದು ಛೀಮಾರಿ ಹಾಕುವ ತನಕವು ಸುಮ್ಮನೆ ಕುಳಿತಿದ್ದು, “ಅವರವರ ಪ್ರಾರಬ್ಧಕರ್ಮಾನ ಅವರವರೆ ಅನುಭವಿಸಬೇಕೆ ಗೌರಿ” ಎಂದಷ್ಟೆ ಹೇಳಿದ ಭಾವನ ಬಗ್ಗೆ ಆಕ್ಷಣಕ್ಕೆ ನನಗೆ ಅಸಹ್ಯವೆನ್ನಿಸಿತು. “ಇನ್ನಾದರು ಮನೆಯಲ್ಲಿ ಬಿದ್ದಿರು” ಎಂದು ನನಗಿಂತ ಮೂವತ್ತು ವರ್ಷ ಹಿರಿಯನಾದ ಭಾವನಿಗೆ ಹೇಳಿ ದುರ್ದಾನ ತೆಗೆದುಕೊಂಡವಳಂತೆ ಹೊರಟುಬಿಟ್ಟೆ.
-2-
ಮಕ್ಕಳ ರಜೆಯಲ್ಲಿ ತವರಿಗೆ ಬಂದಾಗ ಮುಠ್ಠಳ್ಳಿಗೆ ಹೋಗುವ ಮನಸ್ಸಾಗದಿದ್ದರೂ ಅಲ್ಲಿಯ ವಿಷಯ ತಿಳಿಯುತ್ತಿತ್ತು. ನಾನು ಹೊರಟ ಎರಡೇ ದಿನಕ್ಕೆ ಭಾವ ಮತ್ತೆ ಊರು ಬಿಟ್ಟವನು ಆರುತಿಂಗಳ ನಂತರವಷ್ಟೆ ಮರಳಿ ಬಂದನಂತೆ. ಅದಾಗಿ ಒಂದುವರ್ಷದ ಬಳಿಕ ಭಾವ ತೀರಿಕೊಂಡನಂತೆ ಎಂದು ಕೃಷ್ಣ ಫೋನಿನಲ್ಲಿ ತಿಳಿಸಿದಾಗ ಮನಸ್ಸು ತಡೆಯದೆ ಮುಠ್ಠಳ್ಳಿಗೆ ಓಡಿ ಬಂದೆ.
ನನಗೊಂದು ವಿಶ್ವಾಸವಿತ್ತು, ಭಾವ ಒಂದು ಮಾತು ಹೇಳಿದ್ದರೆ ಅಕ್ಕ ಆಪರೇಶನ್ನಿಗೆ ಒಪ್ಪಿಕೊಳ್ಳುತ್ತಿದ್ದಳು ಮತ್ತು ನಾಲ್ಕು ಕಾಲ ಹೆಚ್ಚು ಬದುಕಿರುತ್ತಿದ್ದಳು ಎಂದು. ಅದಿಲ್ಲವಾದರೂ ತಿಂಗಳುಗಟ್ಟಲೆ ಆ ನೋವು, ಕೀವಿನ ಬದುಕಿನಿಂದ ಬಿಡುಗಡೆಯಾಗಿ ಆಪರೇಶನ್ ಟೈಮಲ್ಲೆ ಹೋಗಿಬಿಟ್ಟಿದ್ದರು ಅಕ್ಕ ಅಷ್ಟು ನೋವು ತಿನ್ನಬೇಕಾಗುತ್ತಿರಲಿಲ್ಲ. ಅಕ್ಕನ ವರ್ಷಾಂತಿಕಕ್ಕೆ ಹೋದಾಗ ಎದುರಾದ ಭಾವ ನನ್ನ ಮೇಲೆ ಏನೂ ಬೇಸರವಿಲ್ಲದವನಂತೆ ಸರಳವಾಗಿ ಮಾತಾಡಿದಾಗ ಅದನ್ನೆ ಹೇಳಿದ್ದೆ. ಯಥಾಪ್ರಕಾರ ಆತ ತನ್ನ ಪಾಪ ಪುಣ್ಯದ ಪುರಾಣವನ್ನು ಹರಿಯಬಿಟ್ಟಿದ್ದ. “ಎಲ್ಲಾ ಅವರವರ ಪ್ರಾರಬ್ಧಕರ್ಮ ಗೌರಿ. ಕಳೆದ ಜನ್ಮದ ಪಾಪದ ಲೇಶ ತೊಳೆದುಹೋದರೆ ಮುಂದಿನ ಜನ್ಮದಲ್ಲಿ ಸುಖ ಸಿಗ್ತು. ಸುಲಭದಲ್ಲಿ ವೈತರಣಿ ನದಿ ದಾಟುಲೆ ಆಗ್ತು. ನೋಡು, ಸಾವಿತ್ರಿ ಸತ್ತಾಗ ಎಲ್ಲ ಎನ್ನ ಮೇಲೇ ಗೂಬೆ ಕೂರಿಸ್ದ. ಆವತ್ತು ನಾನು ಮಾತಾಡ್ದೆ ಇದ್ದರೂ ಸಾವಿ ಆಯುಷ್ಯ ಮುಗದ್ರಿಂದ ಅವಳು ಬೇರೆ ರೀತಿನಾದ್ರು ಸಾಯ್ತಿದ್ಳು. ಅವ್ಳಿಗೆ ಬ್ರಹ್ಮ ಬರೆದು ಕಳಿಸಿದ್ದೆ ಅಷ್ಟು ಆಯುಷ್ಯ. ಅವನ ಆಣತಿ ಮುಂದೆ ನಮ್ದೇನು ನಡೀತಿಲ್ಲೆ. ಕೇಳಲ್ಯ, ‘ತೇನವಿನಾ ತೃಣಮಪಿ ನ ಚಲತಿ’ ಹೇಳಿ? ಮಗಳು ಹೋದ ಎಂದು ನಿನ್ನ ಅಕ್ಕ ಅಳ್ತಾ ಕೂತರೆ ನಾ ಬೈತಿದ್ದೆ. ಗೌರಿ, ನಾವು ಹುಟ್ಟಿದ್ದು ನಿಶ್ಚಿತ, ಆದ್ರೆ ಸಾಯೋದು ಯಾವಾಗಲೂ ಆಕಸ್ಮಿಕಾನೇ. ಅದಕ್ಕೆ ನಮ್ಮ ಮನಸ್ಸನ್ನ ಅಂಟು ಮಡಿಕೊಳ್ಳಲಾಗ. ಅಂಟು ಕಂಡಿದ್ದಕ್ಕೆಲ್ಲ ಅಂಟಿಕೊಳ್ತು. ನುಣುಪಾಗಿ ಇಟ್ಟುಕೊಳ್ಳಕು. ಅಧ್ಯಾತ್ಮ ಅಂದ್ರೆ ಅದೇ. ಏನನ್ನು ಅಂಟಿಸಿಕೊಳ್ಳದೆ ಇರದು. ಈಗ ಒಂದು ಪ್ರಶ್ನೆ ಕೇಳ್ತಿ, ಹೇಳು. ನಿನಗೆ ಸಾವಿಯ, ಅಕ್ಕನ ನೆನಪು ಇದ್ದ?’’ “ಹುಂ” “ಅದೇ ಅದೇ ನೋಡು, ಅಲ್ಲಿಗವರು ಸತ್ತಿದ್ವಿಲ್ಲೆ. ಯಾವಾಗ ಅವರ ನೆನಪು ನಮ್ಮಿಂದ ಮರೆಯಾಗ್ತೋ ಆವಾಗ ಅವರು ಸತ್ತ ಹಾಂಗೆ. ನಿನ್ನಕ್ಕ ಅಂದ್ರೆ ಬರೇ ಹೊಟ್ಟೆ, ಕೈ, ಕಾಲು, ಮುಖ ಇಷ್ಟೇ ಅಂದ್ಕಳ್ಳದೆ ತಪ್ಪು. ಇದನ್ನೆಲ್ಲ ವಿಚಾರ ಮಾಡ್ತಾ ಹೋಗು. ನಿನ್ನ ಮನಸ್ಸು ಶಾಂತ ಆಗ್ತು.’’
“ನಾ ಒಪ್ತ್ನಿಲ್ಲೆ ಭಾವ, ಸಂಬಂಧದ ಚೌಕಟ್ಟಲ್ಲ್ಲಿ ಮೂರ್ತರೂಪ ಪಡೆವುದು ಅವರ ಬಾಹ್ಯರೂಪ ಕಣ್ಣೆದುರು ಬಂದಾಗ ಮಾತ್ರ. ಅದೇ ಸಂಬಂಧದ ಎಳೆ ಹಾಕಿದ ರಂಗೋಲಿ ಚಿತ್ರ. ಅದೇ ಅಳಿಸಿಹೋದ್ರೆ ಉಳಿಯೋದೆಂತದು?’’
“ಒಂದೇ ದೃಷ್ಟೀಲಿ ನೋಡ್ತಾ ಇದ್ರೆ ಹಂಗನ್ನಿಸ್ತು. ಅದಕ್ಕೆ ಬೇರೆ ಆಯಾಮ ಹಚ್ಚಿ ಯೋಚ್ನೆ ಮಾಡು. ಈವತ್ತು ಅಕ್ಕ, ನಾಳೆ ನಾನು, ನಾಡಿದ್ದು ನೀನು ಎಲ್ಲರ ದೇಹ ಬೆಂಕಿಗೆ ಬೀಳದೆ. ಕಡೆಗೇನು? ಅವೇನು ಶಾಶ್ವತವಾಗಿ ಇರ್ತ್ವ? ಆದ್ರೆ ಆತ್ಮ ಅನ್ನೋದಿರ್ತಲ ಅದನ್ನು ಸುಡಲಾಗ್ತ? ಗೀತೇಲೆ ಹೇಳಿದ್ವಿಲ್ಯ, ‘ನ ಛಿಂದಂತಿ ಶಸ್ತ್ರಾಣಿ..’ ಅಂತೆಲ್ಲ.’’
ಭಾವನ ಜೊತೆ ವಾದ ಮಾಡುವುದರಲ್ಲಿ ಹುರುಳಿಲ್ಲ ಎನ್ನಿಸಿ ನಾನೇ ಸುಮ್ಮನಾಗಿದ್ದೆ. ಆದರೆ ಒಂದು ಸಮಾಧಾನವಿತ್ತು, ಭಾವ ಮನೆಯಲ್ಲಿಯೆ ಉಳಿದಿದ್ದಾನೆ ಎನ್ನುವುದು. ಒಂದು ಹಿರೀ ಜೀವ ಮನೆಯಲ್ಲಿದ್ದರೆ ಕೃಷ್ಣನಿಗೂ ಸಮಾಧಾನ. ಮತ್ತೆ ಆವಾಗಿನ ಘಟನೆ ಮರುಕಳಿಸದಿದ್ದರೆ ಸಾಕು.
ಎಂಟ್ಹತ್ತು ವರ್ಷಗಳ ಹಿಂದೆ ಇದೇ ಕೃಷ್ಣನೊಟ್ಟಿಗೆ ಏನೋ ಕಸಿವಿಸಿ ಮಾಡಿಕೊಂಡ ಭಾವ ಮತ್ತೆ ಅದೇ ಗದ್ದೆಬದಿಯ ಬ್ಯಾಣದ ತಡಿಕೆಮನೆಗೆ ಹೊರಟುಹೋಗಿ ಸಂಸಾರ ಹೂಡಿದ್ದ. ಬರುವವರಿಲ್ಲ, ಹೋಗುವವರಿಲ್ಲ. ಸಂಸಾರದಲ್ಲಿದ್ದೂ ಸಂನ್ಯಾಸಿಯ ಬದುಕು. ‘ಮುಠ್ಠಳ್ಳಿ ಋಷಿ ಇಂವ’ ಎಂದು ಊರವರು ಹೇಳುವುದು ವ್ಯಂಗದ ದನಿ ಎನ್ನುವುದನ್ನೂ ಅರ್ಥ ಮಾಡಿಕೊಳ್ಳಲಿಲ್ಲ. ಅದವನಿಗೆ ಬೇಕಾಗಿಯು ಇರಲಿಲ್ಲ. ಆತ್ಮೀಯ ಸಂಬಂಧಗಳೇ ಇಲ್ಲದ ನೀರಸ ಬದುಕಿನಲ್ಲಿ ಆತ ಕಂಡುಕೊಂಡದ್ದಾದರು ಏನು? ಎಂದು ನಾನೇ ಹಲವು ಬಾರಿ ಯೋಚಿಸಿದ್ದಿದೆ. ಅವನ ಬದುಕಂತು ಹಾಗಾಯಿತು, ಅವನನ್ನು ಕಟ್ಟಿಕೊಂಡ ತಪ್ಪಿಗೆ ಅಕ್ಕನಿಗೂ ಈ ಶಿಕ್ಷೆಯೆ? ಅದನ್ನು ವಿರೋಧಿಸುವ ಮನಃಸ್ಥಿತಿಯೇ ಇಲ್ಲದ ಅಕ್ಕ-ಪತಿಯೇ ದೇವರು ಎಂದು ನಂಬಿಕೊಂಡ ಅಕ್ಕ – ಅವನ ಹಿಂದೆ ಹೋಗುವುದು ಅನಿವಾರ್ಯವಾಗಿತ್ತು. ಬರೋಬ್ಬರಿ ಒಂದು ವರ್ಷಗಳ ಕಾಲ ಆ ಜೀವನ! ಮಳೆಗಾಲ ಮುಗಿಯುತ್ಲೆ ಕೊನೆ ಕೊಯ್ಲಿನ ಅವಧಿಯಲ್ಲಿ ನಡೆದ ಘಟನೆ ಅದು. ಅದೇ ಮಳೆಗಾಲದಲ್ಲಿ ಸೊಳ್ಳೆಗಳಿಂದ ಕಚ್ಚಿಸಿಕೊಳ್ಳುತ್ತ ಥಂಡಿ ನೆಲದಲ್ಲಿ ಓಡಾಡುತ್ತ ಸಂಧಿವಾತಕ್ಕೆ ಅಕ್ಕ ಪಕ್ಕಾಗಿದ್ದೆ ಅವಳು ಹಾಸಿಗೆ ಹಿಡಿಯಲು ಆರಂಭಿಸಿದ್ದಳು. ನಿತ್ಯ ಯೋಗ ಮಾಡು, ದೇವರ ಭಜನೆ ಮಾಡು ಎಂದೆಲ್ಲ ಉಪದೇಶ ಮಾಡುತ್ತ ತಾನು ಬೀಡಿ ಎಳೆಯುತ್ತ ಕುಳಿತಿರುತ್ತಿದ್ದನಂತೆ ಭಾವ. ಅಕ್ಕನ ಸ್ಥಿತಿ ತೀರಾ ಉಲ್ಬಣಿಸಿದಾಗ ಅಣ್ಣ ಕೃಷ್ಣನಲ್ಲಿಗೆ ಹೋಗಿ ‘ಹೇಗಾದರು ನಿನ್ನ ಅಮ್ಮನನ್ನ ಉಳಿಸಿಕೊ’ ಎಂದು ಒತ್ತಾಯಿಸಿದ ಬಳಿಕ ಕೃಷ್ಣ ಹೋಗಿ ಅಪ್ಪನ ಕಾಲಿಗೆ ಬಿದ್ದು ‘ಇನ್ನು ನೀನು ಹೇಳಿದಂತೆ ಕೇಳ್ತೇನೆ” ಎಂದು ಗೋಗರೆದು ಭಾವನನ್ನು ಕರೆದುಕೊಂಡು ಬಂದನಂತೆ.
ಅಕ್ಕನಿಗೆ ಇಷ್ಟೆಲ್ಲ ನೋವುಕೊಟ್ಟರೂ ಭಾವನ ಬಗ್ಗೆ ಒಂದು ಮೆಚ್ಚುಗೆಯಿತ್ತು. ಅದು ಅವನ ಶ್ರಮ, ನಿಷ್ಠುರತೆ, ದೃಢತೆ.
ಭಾವ ಒಂದು ರೀತಿಯಲ್ಲಿ ಕರ್ಮಯೋಗಿಯಾಗಿದ್ದ. ಈವತ್ತಿಗೂ ಮುಠ್ಠಳ್ಳಿಗೆ ಹೋದಾಗ ನಾವು ನೋಡುವುದು ಗುಡ್ಡದ ಒಂದು ಮಗ್ಗುಲಲ್ಲಿ ಹಾದುಹೋದ ‘ಭಾವನ ಹರಿಣಿ ಅಗಳ’. ಸುಮಾರು ಎರಡಾಳು ತಗ್ಗಿನ ತೋಡು. ಬೆಟ್ಟದ ಒಂದು ಮಗ್ಗುಲಲ್ಲಿದ್ದ ಮುಠ್ಠಳ್ಳಿಗೆ ಯಾವಾಗಲು ಬೇಸಿಗೆಯಲ್ಲಿ ನೀರಿನ ಕೊರತೆಯಿರುತ್ತಿತ್ತಂತೆ. ಅದಕ್ಕೆ
ಮುಠ್ಠಳ್ಳಿಗೆ ಹೊಂದಿಕೊಂಡಂತಿದ್ದ ಬೆಟ್ಟದ ಆಚೆ ಬದಿಯಲ್ಲಿ ಸದಾ ತುಂಬಿರುತ್ತಿದ್ದ ಕೆರೆಯ ನೀರನ್ನು ಇತ್ತಕಡೆಗೆ ತಂದು ಅಬ್ಬಿ ನೀರು ಮಾಡುತ್ತೇನೆ ಎಂದು ಬೆಟ್ಟದಲ್ಲಿ ಅಗಳ ತೆಗೆಯುವ ಯೋಜನೆ ಹಾಕಿದನಂತೆ ಭಾವ. ‘ಅದೆಲ್ಲ ಹುಚ್ಚಾಟ ಬೇಡ’ ಎಂದು ಭಾವನ ಅಣ್ಣ, ಅಪ್ಪ, ಚಿಕ್ಕಪ್ಪ ಯಾರು ಹೇಳಿದರು ಕೇಳದೆ, ‘ಆಳುಗಳನ್ನ ಕೊಡದೆ ಇದ್ದರೆ ಇಲ್ಲ, ತಾನೊಬ್ಬನೇ ಈ ಕೆಲಸ ಮಾಡುತ್ತೇನೆ’ ಅಂತ ಹಠ ತೊಟ್ಟು ಬೆಟ್ಟ ಅಗೆಯಲು ಶುರುಮಾಡಿದನಂತೆ. ಒಬ್ಬನೇ ಬೆಳಗ್ಗೆ ಐದುಗಂಟೆಗೇ ಎದ್ದು ಹೊರಡುತ್ತಿದ್ದವನು ಸಂಜೆಯ ತನಕ ಅಲ್ಲಿಯೆ. ಗಂಡ ಹಸಿದಿರುವಾಗ ತಾನೂ ಉಣ್ಣಲಾಗದೆ ಅಕ್ಕ ಅಲ್ಲಿಗೇ ಊಟ ತಿಂಡಿ ಸರಬರಾಜು ಮಾಡುತ್ತಿದ್ದಳಂತೆ. ಒಬ್ಬನೇ ಹಾರೇಕೋಲಲ್ಲಿ ಅಗೆಯುವುದು, ಗುದ್ದಲಿಯಿಂದ ಮಣ್ಣು ಎತ್ತಿಹಾಕುವುದು. ರಾತ್ರಿ ದಣಿದು ಮನೆಗೆ ಬರುತ್ತಿದ್ದವನಿಗೆ ಸೀಗೆಪುಡಿ ಎಣ್ಣೆ ಹಚ್ಚಿ ಸ್ನಾನ ಮಾಡಿಸಿ ಮಣ್ಣಿನ ಪಂಚೆಯೇ ಆಗಿರುತ್ತಿದ್ದ ಅವನ ಕುರುಗೋಡು ಪಂಚೆಯನ್ನು ಅಂಟವಾಳಪುಡಿಯಿಂದ ತಿಕ್ಕಿ ತಿಕ್ಕಿ ತೊಳೆದು ಬೆಳ್ಳಗೇ ಮಾಡಿ ಇಡಬೇಕಿತ್ತಂತೆ. ಅಕ್ಕ ಹೇಳುತ್ತಿದ್ದ ಮಾತು ಕೇಳುತ್ತಿದ್ದರೆ ಮೈ ‘ಝುಂ’ ಅನ್ನುತ್ತಿತ್ತು. ಅಷ್ಟರಲ್ಲಿಯೆ ಜಾಣನಾಗಿದ್ದ ಭಾವನ ಅಣ್ಣ ತೋಟದ ಬಳಿಯಲ್ಲಿಯೆ ಒಂದು ದೊಡ್ಡ ತೆರೆದ ಬಾವಿ ತೋಡಿಸಿ ನೀರು ಮಾಡಿದ ಬಳಿಕ ಭಾವನ ಕೆಲಸ ಅರ್ಧಕ್ಕೆ ನಿಂತಿತಂತೆ. ಈವತ್ತಿಗೂ ಭಾವ ತೋಡಿದ ಆ ಅರ್ಧಂಬರ್ಧ ಅಗಳ ಭಾವನ ಸಾಹಸಕ್ಕೆ ಸಾಕ್ಷಿಯಾಗಿ ನಿಂತಿದೆ.
ಉಳಿದ ಕೆಲಸದಲ್ಲೂ ಹಾಗೆ. ಐದಾಳೆತ್ತರದ ತೆಂಗಿನಮರ ಹತ್ತಿ ಕಾಯಿ ಕೊಯ್ಯುವುದಿರಲಿ, ಅಡಕೆಮರಕ್ಕೆ ಔಷಧಿ ಹೊಡೆಯುವುದಿರಲಿ, ಆಳುಗಳು ಬರಲಿಲ್ಲ ಅಂದರೆ ಅದಕ್ಕು ಭಾವನೇ ಸೈ. ಅದೇ ಸುಮ್ಮನೇ ಕುಳಿತ ಅಂದರೆ ದಿನಗಟ್ಟಲೆ. ಮನೆಗೆ ಬೆಂಕಿ ಬಿದ್ದರೂ ಏಳಿಸಲಾಗುತ್ತಿರಲಿಲ್ಲವಂತೆ. ಅಣ್ಣಂದಿರೆ ಭಾವನ ಈ ವಿಚಿತ್ರ ವರ್ತನೆಗೆ ಕೆಲವೊಮ್ಮೆ ಮೆಚ್ಚುಗೆಯನ್ನು ಕೆಲವೊಮ್ಮೆ ಬೇಸರವನ್ನು ವ್ಯಕ್ತಪಡಿಸುತ್ತಿದ್ದರು. ವಯಸ್ಸಾಗುತ್ತಿದ್ದಂತೆ ಈ ಪರಿವರ್ತನೆ ಏನೇನೋ ಆಯಾಮ ತೆಗೆದುಕೊಳ್ಳುತ್ತ ಹೋಯಿತು. ತಿರುಗಲು ಶುರುಮಾಡಿದ. ಸದಾ ಬಿಳಿಯ ಕುರುಗೋಡು ಪಂಚೆ ಉಟ್ಟು ಎರಡು ಬಕ್ಕಣದ ಬಿಳಿಯಂಗಿ ತೊಟ್ಟುಕೊಂಡಿರುತ್ತಿದ್ದವ ಕಾವಿ ಪಂಚೆ ಉಟ್ಟು ಕಾವಿ ಶಾಲು ಹೊದೆಯಲು ಶುರುಮಾಡಿದ. ಹಗಲಿಡೀ ತೋಟ-ಗದ್ದೆಗಳಲ್ಲಿ ಕೋಣದಂತೆ ದುಡಿಯುತ್ತ ಬಾಯಲ್ಲಿ ಕವಳವೋ ಬೀಡಿಯೋ ಒಂದನ್ನು ಕಚ್ಚಿಕೊಂಡು ರಾತ್ರಿ ಎಲ್ಲೆಲ್ಲಿ ಇಸ್ಪೀಟು ಮಂಡ ಇದೆ ಎಂದು ಹುಡುಕಿಕೊಂಡು ಹೋಗುತ್ತ ಯಾವ ವಿಷಯ ಮಾತಾಡತೊಡಗಿದರೂ ಕರ್ಮ ಧರ್ಮ ಎನ್ನುತ್ತಿದ್ದ ಭಾವನಲ್ಲಿ ನಾನೇ ಒಮ್ಮೆ ರೇಗಿ ಹೇಳಿದ್ದೆ, ‘ಸಾಕು ಸುಮ್ನಿರು ಭಾವ, ಬೀಡಿ ಕವಳ ಇಸ್ಪೀಟು ಇದ್ರಲ್ಲಿ ಮುಳುಗಿದವ ನೀನು ದೊಡ್ಡ ಆಧ್ಯಾತ್ಮ ಉಪದೇಶ ಮಾಡ್ತೆ?’ ಅದಾವ ಘಳಿಗೆಯಾಗಿತ್ತೊ ಏನೋ, ಭಾವ ಅದನ್ನು ತೀರಾ ಮನಸ್ಸಿಗೆ ಹಚ್ಚಿಕೊಂಡವನಂತೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದ. ನಾನು ವ್ಯಂಗದ ನಗೆ ನಕ್ಕಿದ್ದೆ. ‘ಬಿಟ್ಟೆ, ಬಿಟ್ಬಿಟ್ಟೆ. ಬಿಟ್ಟೇ ಬಿಟ್ಟೆ’ ಎಂದಿದ್ದ. ನಾನು ನಕ್ಕು ಹೊರಟು ಹೋಗಿದ್ದೆ. ಆದರೆ ಅಚ್ಚರಿ ಅಂದರೆ ಆ ನಂತರ ಅವನು ಈ ಚಟಗಳನ್ನೆಲ್ಲ ಬಿಟ್ಟುಬಿಟ್ಟನಂತೆ. ಅವನ ಮನಸ್ಸಿನಲ್ಲಿಯೂ ಈ ಅಪರಾಧಪ್ರಜ್ಞೆ ಇದ್ದು ನನ್ನ ಮಾತು ಆ ನಿರ್ಣಯಕ್ಕೆ ಒಂದು ನೆವವಾಯಿತೋ ಎಂದು ಈವತ್ತಿಗೂ ಎನ್ನಿಸುತ್ತದೆ. ನನ್ನ ಮಾತಿಗೆ ಅಷ್ಟು ಬೆಲೆಯಿರುವುದಾಗಿದ್ದರೆ ನಮ್ಮನೆಯವರು ಯಾವತ್ತೋ ಸಿಗರೇಟು ಬಿಟ್ಟುಬಿಡುತ್ತಿದ್ದರು. ಆದರೆ ಹಚ್ಚಿಕೊಂಡ ಚಟಗಳನ್ನೆಲ್ಲ ಒಮ್ಮೆಗೆ ಬಿಟ್ಟುಹಾಕುವಷ್ಟು ದೃಢ ಮನಸ್ಸು ಭಾವನಿಗಿತ್ತಲ್ಲ.
* * *
ಸಾಯುವಂತಹದ್ದು ಭಾವನಿಗೇನಾಗಿತ್ತು ಎಂದು ಕೃಷ್ಣನಲ್ಲಿ ಕೇಳಿದೆ. ‘ಅಯ್ಯೋ ಅದೊಂದು ದೊಡ್ಡ ಕತೆ ಚಿಕ್ಕಿ. ಕಡೆಕಡೆಗೆ ಅಂವ ತಲೆಯೆ ಸರಿಯಿಲ್ಲದಂತೆ ವರ್ತಿಸ್ತಿದ್ದ. ಇದ್ದಕ್ಕಿದ್ದಾಂಗೆ ಮಕ್ಕಳಿಗೆ ಹೊಡೆಯದು, ಅವು ಅತ್ರೆ ಮೂರು ಮೈಲಿ ದೂರ ಹೋಗಾದ್ರು ಚಾಕಲೇಟು ತಂದು ಸಮಾಧಾನಪಡಿಸದು, ಹೆಂಗಸ್ರ ಮೇಲೆ ರೇಗದು, ನಾ ಮಾಡಿದ ಕೆಲಸದಲ್ಲಿ ಪ್ರತಿಯೊಂದಕ್ಕು ಕಿರಿಕ್ಕು.. ಥೂಥು! ಒಂದೆರಡಲ್ಲ. ಏನಾರು ಹೇಳಿರೆ ಮತ್ತೆ ಈ ಇಳಿವಯಸ್ಸಲ್ಲಿ ಮನೆಬಿಟ್ಟು ಹೋಗ್ತ ಹೇಳಿ ನಾ ಕಮಕ್ ಕಿಮಕ್ ಅಂತಿರ್ಲ್ಲೆ. ಒಂದು ತಿಂಗಳೀಚೆಗೆ ಅವನ ಹುಚ್ಚಾಟ ಮಿತಿಮೀರಿತ್ತು. ರಾತ್ರಿ ಹೊತ್ತೇ ಎದ್ದುಹೋಗಿ ಗದ್ದೆಬ್ಯಾಣದ ತಡಿಕೆಮನೆಯಲ್ಲಿ ಕೂತುಬಿಡ್ತಿದ್ದ. ಅಪರಾತ್ರೀಲಿ ಆಳುಗಳ ಬಿಡಾರದ ಬಾಗ್ಲು ತಟ್ಟಿ ಕೆಲ್ಸಕ್ಕೆ ಬನ್ನಿ ಹೇಳಿ ಕರಿತಿದ್ನಡ. ಅವು ಬಾಗ್ಲು ತೆರಿದಿದ್ದಾಗ ಬಾಯಿಗೆ ಬಂದ ಹಾಗೆ ಅವರನ್ನು ಬೈದು ತನ್ನ ಬಿಡಾರಕ್ಕೆ ಹೋಗಿ ಪದ್ಮಾಸನ ಹಾಕಿ ಕೂತುಬಿಡ್ತಿದ್ದ. ಊಟ ತಿಂಡಿಗೂ ಒತ್ತಾಯದಿಂದ ಕರ್ಕಂಬರಕಾಗಿತ್ತು. ಒಂದಿನ ಹಿತ್ಲ ಆರಾಳೆತ್ತರದ ತೆಂಗಿನಮರ ಹತ್ತಿ ಕೂತು ಬಿಟ್ಟಿದ್ದ. ಇಳಿಸುವಷ್ಟರಲ್ಲಿ ಸಾಕೋ ಸಾಕಾತು. ಡಾಕ್ಟರ
ಹತ್ತಿರ ಹೋಪನ ಅಂದ್ರೆ ನನ್ನ ಹೆಣ ತಗಂಡ್ ಹೋಗು ಅಂತಿದ್ದ. ಇತ್ತೀಚೆಗೆ ಒಂದು ದಿನ ರಾತ್ರಿ ಮೂರುಗಂಟೆ ಹೊತ್ತಿಗೆ ಮನೆಯ ಫೋನು ಹೊಡ್ಕಂಬ್ಲೆ ಶುರುವಾತು. ಆ ಅಪರಹೊತ್ನಲ್ಲಿ ಫೋನು ಅಂದ್ರೆ ಯಾರೋ ಗೊಟಕ್ ಅಂದ ಅಂತಾನೆ ಲೆಕ್ಕ ಅಂದ್ಕಂಡು ಹೆದ್ರಿಕ್ಯತ್ತ ಫೋನ್ ಎತ್ತಿದ್ರೆ ಕೊಡಸಳ್ಳಿ ರಾಘುದು. ನಿಂಗೊತ್ತಿದ್ದನ – ಕೊಡಸಳ್ಳಿ ಅಂದ್ರೆ ಇಲ್ಲಿಂದ ಐದಾರು ಮೈಲು ದೂರ ಇದ್ದು. ಮಾಣಿಹೊಳೆ ದಾಟಿ ಹೋಗವು.
ಎಂತದ ಕೇಳ್ದೆ. “ಮಾರಾಯ, ನಿನ್ನ ಅಪ್ಪಯ್ಯ, ನಮ್ಮನೆ ಎಮ್ಮೆ ತಪ್ಸಿಗ್ಯಂದು, ಈ ಬದಿಗೆ ಬೈಂದನ ಅಂತ ಕೇಳ್ತ ಬೈಂದ – ಅ ಮುದ್ಕನ್ನ ಎಂತಕೆ ಕಳ್ಸಿದ್ಯ ಮಾರಾಯ’’ ಅಂದ. ಅಪ್ಪನನ್ನ ಅಲ್ಲೇ ಉಳಿಸ್ಕ್ಯ ಹೇಳಿ, ಬೆಳಗ್ಗೇನೆ ಮೋಟರ್ ಸೈಕಲ್ ತಗಂಡ್ ಹೋಗಿ ಕರ್ಕಂಬಂದೆ. ಮೊಣಕಾಲು ನೋವಿದ್ದಂವ ಹಂಗೆಲ್ಲ ಮಾಡ್ತಾ ಇದ್ರೆ ಒಂದಿನ ಬೀದಿ ಹೆಣ ಆಗ್ತ ಹೇಳದು ಪಕ್ಕಾ ಆಗಿ…. ಕಷ್ಟ ಅಂತ ಕೋಣೆಲಿ ಕೂಡಿಹಾಕಿ ಇಡಕಾತು. ಅವನೆ ಅನ್ನಾಹಾರ ಬಿಟ್ಟು ಉಸಿರು ನಿಲ್ಲಿಸಿ..’
ಕೃಷ್ಣ ಮತ್ತೇನೇನು ಹೇಳಿದನೊ ನನಗೆ ಕಣ್ಣು ಕತ್ತಲಿಟ್ಟಂತಾಯಿತು. ಯಾವ ದ್ವಂದ್ವ, ಯಾವ ಸಂಘರ್ಷ, ಯಾವ ಅಪರಾಧೀ ಪ್ರಜ್ಞೆ ಭಾವನನ್ನು ಈ ಬಗೆಯ ಅಂತ್ಯಕ್ಕೆ ನೂಕಿರಬಹುದು ಎನ್ನುವುದು ನನಗೆ ಈವತ್ತಿಗೂ ಬಗೆಹರಿಯದ ಸಂಕಟದ ಸಂಗತಿ. ‘ಮುಕ್ತಿ ಅಂದರೆ ಬಿಡುಗಡೆ ಅಷ್ಟೆ ಗೌರಿ. ಕರ್ಮದಿಂದ ಬಿಡುಗಡೆ, ಪ್ರಾರಬ್ಧದಿಂದ ಬಿಡುಗಡೆ, ಸಂಬಂಧದ ಎಳೆಗಳಿಂದ ಬಿಡುಗಡೆ. ನೀನೇ ಹೇಳ್ದಂಗೆ ಸಂಸಾರ ಮಾಡ್ತ ಇರೋವರೆಗೂ ರಂಗೋಲಿ ಎಳೆಗಳ ಹಂಗೆ ಒಂದು ಚೌಕಟ್ಟಿನೊಳಗೇ ಉಳಿತಾ ಇರದು. ಎಲ್ಲಿ ಆರಂಭನೊ ಅಲ್ಲಿಗೇ ಬಂದು ಮುಟ್ಟದು. ಅದನ್ನು, ಆ ಚೌಕಟ್ಟನ್ನೂ ದಾಟಿ ಹೊರಗೆ ಹೋಗವು. ಆಗ ಸಂಬಂಧಾನೂ ಇಲ್ಲೆ, ಎಳೇನೂ ಇಲ್ಲೆ, ರಂಗೋಲಿನೂ ಇಲ್ಲೆ. ಅದೆ ಮುಕ್ತಿ..’ ಭಾವ ಯಾವತ್ತೋ ಹೇಳಿದ್ದ ಮಾತು ತಲೆಯಲ್ಲಿ ಅರ್ಥಕ್ಕಾಗಿ ತಡಕಾಡತೊಡಗಿದವು. ತಾನು ಉಸಿರು ನಿಲ್ಲಿಸಿ ಸಾಯುತ್ತಿರುವಾಗ ತನ್ನ ಸಾವಿನ ಬಗ್ಗೆ ಏನು ಯೋಚಿಸಿರಬಹುದು? ಇಲ್ಲ, ಸಾವು ಹೇಗಿರುತ್ತದೆ ಎನ್ನುವುದು ಸಾಯುವ ತನಕವು ತಿಳಿಯುವುದಿಲ್ಲ, ಸತ್ತ ಮೇಲೆ ತಿಳಿದುಕೊಳ್ಳಲು ನಾವೇ ಇರುವುದಿಲ್ಲ. ಎಲ್ಲೋ ಓದಿದ ನೆನಪಾಯಿತು. “ಅಪ್ಪಯ್ಯನ್ನ ಕೋಣೇಲಿ ಕೂಡಿ ಹಾಕಿ ನಾನು ತಪ್ಪು ಮಾಡಿದ್ನ ಚಿಕ್ಕಿ?’’ ಕೃಷ್ಣ ಹನಿಗಣ್ಣಾಗಿ ಕೇಳಿದ. ಅವನಿಗೇನು ಉತ್ತರ ಕೊಡಲಿ ಎನ್ನುವುದೂ ನನಗೆ ತಿಳಿಯಲಿಲ್ಲ.
ಸಹಜಜೀವನ
ಯಾರಿದ್ದರೀ ಇಳೆಯ ಆದಿಯಲಿ?
ಯಾರುಳಿವರೀ ಇಳೆಯ ಅಂತ್ಯದಲಿ?
ಎಲ್ಲಿದ್ದೆವಿಲ್ಲಿ ಜೀವ ತಳೆದ ಮುನ್ನ?
ಹೋಗುವುವೆಲ್ಲಿಗೆ ಜೀವ ಕಳೆದ ಮೇಲೆ?
ಈ ಚಿಂತೆಗಳು ನಮಗೇಕೆ?
ಅದಕಾಗೇ ಸೇರುತ್ತವೆ ನೂರಾರು ಸಂತೆ!
ಮಾರುವವರು ಕೊಳುವವರು ನೂರಿಹರು
ಸಂತೆಗೆ ಹೋಗದೆ ಕಂತೆ ಕಟ್ಟದೆ
ಕರುಬದೆ ಕಿರುಬದೆಸೊರಗದೆ
ಇರುವುದರಲಿ ಸೊಗಸು ಕಾಣುತ್ತ
ಮಗ್ಗ ನೇಯುವುದರಲಿ ಬದುಕುವುದು
ವಿಹಿತ ಜೀವರಿಗೆ ಸಹಜ!
– ಎಸ್.ಜಿ. ಶಿವಶಂಕರ್