ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ದೀಪ್ತಿ

ಕಿಂಚಿತ್ ಸಾಧವೋ ಧೀರಾ ಭಕ್ತಾ ಹ್ಯೇಕಾಂತಿನೋ ಮಮ |

ವಾಂಛಂತ್ಯಪಿ ಮಯಾ ದತ್ತಂ ಕೈವಲ್ಯಮಪುನರ್ಭವಮ್ ||

ಭಾಗವತ

“ಧೀರರೂ (=ಧೀಮಂತರೂ) ಸಾಧುಗಳೂ ಏಕಾಂತಿಗಳೂ ಆದ ನನ್ನ ಭಕ್ತರು ನನ್ನಿಂದ ಏನನ್ನೂ ಅಪೇಕ್ಷಿಸುವುದಿಲ್ಲ. ಅಷ್ಟೇಕೆ, ನನ್ನಿಂದ ನೀಡಲ್ಪಟ್ಟ ಮುಕ್ತಿಯನ್ನಾಗಲಿ ಪುನರ್ಜನ್ಮರಾಹಿತ್ಯವನ್ನಾಗಲಿ ಕೂಡಾ ಅವರು ಆಶಿಸುವುದಿಲ್ಲ.”

ಭಗವತ್ಸಾಕ್ಷಾತ್ಕಾರ, ಶಾಶ್ವತ ಮೋಕ್ಷ ಮೊದಲಾದವನ್ನು ಪರಮಲಕ್ಷ್ಯವಾಗಿರಿಸಿಕೊಂಡು ಅವನ್ನು ಸಾಧಿಸಲು ಶ್ರಮಿಸಬೇಕೆಂಬುದು ಸಾಮಾನ್ಯ ಆದೇಶ. ಅದಕ್ಕೆ ಸಾಧನವೆಂದರೆ ಆತ್ಯಂತಿಕ ಭಕ್ತಿ ಎಂಬುದೂ ವಿದಿತವೇ. ಆದರೆ ಭಕ್ತಿಯ ಪರಾಕಾಷ್ಠಸ್ಥಿತಿಯೆಂದರೆ ಭಗವಂತನಿಂದ ಏನನ್ನಾದರೂ ಬೇಡಬೇಕೆಂಬ ಭಾವನೆಯೇ ಮನಸ್ಸಿನಲ್ಲಿ ಬಾರದಿರುವುದು. ‘ನಾನೇಕೆ ಏನನ್ನಾದರೂ ಕೋರಬೇಕು? ನನಗೆ ಏನನ್ನು ಕರುಣಿಸಬೇಕೆಂಬುದು ಭಗವಂತನಿಗೆ ತಿಳಿದಿದೆ’ ಎಂಬ ಪೂರ್ಣ ಶ್ರದ್ಧೆಯಿಂದ ‘ನಿನ್ನಲ್ಲಿ ನನ್ನ ಭಕ್ತಿ ಸ್ಥಿರವಾಗಿರುವಂತೆ ಅನುಗ್ರಹಿಸು’ ಎಂಬುದು ಪ್ರಾರ್ಥನೆಯ ಅತ್ಯುಚ್ಚ ರೂಪ. ಈ ಆಶಯವನ್ನು ಸ್ಫುಟಪಡಿಸುವ ದಾರ್ಶನಿಕ ಕಥೆಗಳು ಅನೇಕ ಇವೆ.

ಒಬ್ಬ ಭಕ್ತನಲ್ಲಿಗೆ ದೇವದೂತ ಬಂದು ‘ನಿನ್ನ ಭಕ್ತಿಯನ್ನು ಮೆಚ್ಚಿ ನೀನು ಏನು ಬಯಸಿದರೆ ಆ ವರವನ್ನು ನಿನಗೆ ತಲಪಿಸಲು ಭಗವಂತ ನನ್ನನ್ನು ಕಳಿಸಿದ್ದಾನೆ. ನಿನಗೆ ಏನು ನೀಡಲಿ?’ ಎಂದು ಕೇಳಿದುದಕ್ಕೆ ಭಕ್ತನು ‘ನನಗೆ ಏನೂ ಬೇಡ’ ಎಂದ. ದೇವದೂತನು ‘ಹೋಗಲಿ, ಯಾವ ವ್ಯಾಧಿಯನ್ನಾದರೂ ಗುಣಪಡಿಸುವ ಶಕ್ತಿಯನ್ನಾದರೂ ಕೊಡಲೆ?’ ಎಂದ. ಭಕ್ತನು ‘ಜಗತ್ತಿನಲ್ಲಿ ಎಲ್ಲರೂ ಸ್ವಾಸ್ಥ್ಯಪೂರ್ಣರಾಗಿರುವಂತೆ ಭಗವಂತ ಏರ್ಪಡಿಸಿದಲ್ಲಿ ಒಳ್ಳೆಯದಾದೀತು’ ಎಂದ. ‘ಹೋಗಲಿ, ಅಧರ್ಮದಲ್ಲಿ ತೊಡಗಿರುವವರನ್ನು ಧರ್ಮಿಷ್ಠರಾಗಿಸುವ ಶಕ್ತಿಯನ್ನು ಇಚ್ಛಿಸುತ್ತೀಯಾ?’ ಎಂದುದಕ್ಕೆ ಭಕ್ತನು ‘ಮನುಷ್ಯರ ಪ್ರವೃತ್ತಿಯನ್ನು ಬದಲಿಸುವ ಕೆಲಸ ಭಗವಂತನದೇ ಹೊರತು ನನ್ನದಲ್ಲ’ ಎಂದ. ದೇವದೂತನು ಆಗಲೂ ಸುಮ್ಮನಾಗದೆ ‘ನಿನ್ನನ್ನು ನೋಡಿದವರೆಲ್ಲರೂ ನಿನ್ನನ್ನು ಅನುಸರಿಸಿ ಆದರ್ಶವ್ಯಕ್ತಿಗಳಾಗುವಂತೆ ವರವನ್ನಿತ್ತರೆ ಆಗಬಹುದೆ?’ ಎಂದ. ಇದಕ್ಕೂ ಭಕ್ತನು ಒಪ್ಪದೆ ‘ಆಗ ಎಲ್ಲರ ದೃಷ್ಟಿಯೂ ನನ್ನ ಮೇಲೆ ಕೇಂದ್ರೀಕೃತವಾಗುತ್ತದೆ. ಅದು ಬೇಡ’ ಎಂದ: ‘ನನಗೆ ಭಗವದನುಗ್ರಹದ ವಿನಾ ಬೇರೇನೂ ಬೇಡ.’ ದೇವದೂತ ತಾನು ಸುಮ್ಮನೆ ಹಿಂದಿರುಗುವುದು ಅಸಾಧ್ಯವೆಂದು ನಿವೇದಿಸಿದ. ಭಕ್ತನು ‘ಹಾಗಾದರೆ ನನಗೇ ತಿಳಿಯದಂತೆ ನನ್ನ ಮೂಲಕ ಲೋಕಕ್ಕೆ ಹಿತವಾಗುವಂತೆ ಆಗಲಿ’ ಎಂದ. ಅದಕ್ಕೆ ದೇವದೂತನು ಭಕ್ತನ ಹಿಂದಿನ ನೆರಳೇ ದಾರಿದ್ರ್ಯನಿವಾರಣೆ, ವ್ಯಾಧಿನಿವಾರಣಾದಿ ಸಕಲ ಕಲ್ಯಾಣಗಳನ್ನೂ ಉಂಟುಮಾಡುವಂತೆ ವರ ನೀಡಿ ಹಿಂದಿರುಗಿದ. ಹೀಗೆ ಭಕ್ತನಿಗೆ ಅರಿವಿಲ್ಲದೆ ಅವನ ನೆರಳೇ ಲೋಕದ ಕ್ಲೇಶಗಳನ್ನೆಲ್ಲ ಪರಿಹರಿಸುವಂತಾಯಿತು!

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ