ನಮೋಸ್ತು ಕೋಪದೇವಾಯ ಸ್ವಾಶ್ರಯಜ್ವಾಲಿನೇ ಭೃಶಮ್ |
ಕೋಪ್ಯಸ್ತು ಮಮ ವೈರಾಗ್ಯದಾಯಿನೇ ಲೋಕಬೋಧಿನೇ ||
“ತನಗೆ ಆಶ್ರಯ ನೀಡಿದವನನ್ನೇ ಸುಟ್ಟುಹಾಕುವ ಕೋಪವೆಂಬ ದೇವತೆಗೆ ನಮಸ್ಕಾರ. ಏಕೆಂದರೆ ಕೋಪವು ನನಗೆ ವೈರಾಗ್ಯವನ್ನೂ ವಿವೇಕವನ್ನೂ ಕಲಿಸುತ್ತದೆ.”
ಕೇಡು ಮಾಡಿದವರಿಗೆ ಪ್ರತೀಕಾರ ಮಾಡಬೇಕೆನಿಸುವುದು ಪ್ರಕೃತಿಸಹಜ. ಆದರೆ ಇಂತಹ ದ್ವೇಷ-ಸೇಡುಗಳ ಮನೋವೃತ್ತಿಯನ್ನು ಮೀರುವುದು ಆತ್ಮಸಂಸ್ಕಾರಕಾರಿ.
ಪ್ರಸಿದ್ಧ ಕ್ರಾಂತಿಕಾರಿ ರಾಮಪ್ರಸಾದ್ ಬಿಸ್ಮಿಲ್‌ನನ್ನು ಕೆಲವು ದುಷ್ಟರು ಕೊಲ್ಲಲು ಯತ್ನಿಸಿದರು. ಅದೃಷ್ಟವಶಾತ್ ಅದು ಫಲಿಸಲಿಲ್ಲ. ಆದರೆ ಅದನ್ನು ರಾಮಪ್ರಸಾದ್ ಮರೆಯಲಿಲ್ಲ; ಹೇಗಾದರೂ ಅದಕ್ಕೆ ಸೇಡನ್ನು ತೀರಿಸಬೇಕೆಂದು ದೃಢಚಿತ್ತನಾದ, ಅದನ್ನು ಕುರಿತೇ ಚಿಂತಿಸತೊಡಗಿದ. ಇದರಿಂದ ಅವನು ಸ್ವಾಸ್ಥ್ಯ ಕೆಟ್ಟು ಜ್ವರಗ್ರಸ್ತನಾದ. ಚಿಕಿತ್ಸೆಗಳಾವುವೂ ಫಲಕಾರಿಯಾಗಲಿಲ್ಲ. ಕೆಲ ದಿನ ಗಮನಿಸಿದ ಮೇಲೆ ಅವನ ತಾಯಿಗೆ ಮಗನ ಅಸ್ವಸ್ಥತೆಯ ಮೂಲ ಅರಿವಿಗೆ ಬಂದಿತು. ಆಕೆ ಮಗನಿಗೆ ಹೇಳಿದಳು: “ಮನಸ್ಸಿನಲ್ಲಿ ಸದಾ ದ್ವೇಷದ ಭಾವನೆಯನ್ನು ತುಂಬಿಕೊಂಡಿರುವುದು ಒಳ್ಳೆಯದಲ್ಲ. ಅದನ್ನು ಬಿಟ್ಟುಬಿಡು. ಹಾಗೆಂದು ನನಗೆ ಮಾತು ಕೊಡು. ಇದನ್ನು ನಿನ್ನ ಮಾತೃಋಣದ ಸಲ್ಲಿಕೆಯೆಂದು ಭಾವಿಸಿಕೋ.” ತಾಯಿಯ ಮಾತೆಂದರೆ ಅದನ್ನು ಮೀರಲಾದೀತೆ? ರಾಮಪ್ರಸಾದ್ ತಾಯಿಯ ಅನುಜ್ಞೆಯನ್ನು ಪಾಲಿಸಿದ – ಮೊದಮೊದಲು ಕಷ್ಟವೆನಿಸಿದರೂ. ಪವಾಡವೆಂಬAತೆ ಅಲ್ಪಕಾಲದಲ್ಲಿ ಅವನ ಕಾಯಿಲೆ ಮರೆಯಾಗಿ ಅವನು ಗುಣಮುಖನಾದ!