ಉಪಕರ್ತುಂ ಯಥಾ ಸ್ವಲ್ಪಃ ಸಮರ್ಥೋ ನ ತಥಾ ಮಹಾನ್ |
ಪ್ರಾಯಃ ಕೂಪಸ್ತೃಷಾಂ ಹನ್ತಿ ನ ಕದಾಪಿ ತು ವಾರಿಧಿಃ ||
– ಸುಭಾಷಿತರತ್ನ-ಸಮುಚ್ಚಯ
“ಹೆಚ್ಚಿನ ಪ್ರತಿಷ್ಠೆ ಇಲ್ಲದ ತುಂಬಾ ಸಾಮಾನ್ಯನು ಪರೋಪಕಾರ ಮಾಡುವಂತೆ ದೊಡ್ಡವನೆನಿಸಿಕೊಂಡವನು ಉಪಕಾರ ಮಾಡಲು ಎಷ್ಟೋ ವೇಳೆ ಶಕ್ತನಾಗದಿರಬಹುದು. ಬಾಯಾರಿಕೆಯನ್ನು ನೀಗಿಸಬಲ್ಲದ್ದು ಸೇದುವ ಬಾವಿಯೇ ಹೊರತು ಸಮುದ್ರವಲ್ಲ.”
ಇದು ನಲವತ್ತು ವರ್ಷ ಹಿಂದೆ ನಡೆದ ಘಟನೆ. “ಏನು ಮಾಡುವುದಪ್ಪ, ನಿನಗೆ ದೊಡ್ಡ ಕಾಯಿಲೆಯೇ ಬಂದಿದೆ” ಎಂದು ರೋಗಿಗೆ ವೈದ್ಯ ವ್ಯಾಕುಲನಾಗಿ ಹೇಳಿದ – “ಇದು ಕರ್ಕರೋಗ. ನಿನ್ನ ಕಾಲನ್ನು ಕತ್ತರಿಸದಿದ್ದರೆ ವ್ಯಾಧಿ ಮೈಗೆಲ್ಲ ಹರಡಿಬಿಡುತ್ತದೆ.” ರೋಗಿ ಒಂದು ನಿಮಿಷ ಯೋಚಿಸಿ “ಹಾಗಾದರೆ ಕಾಲನ್ನು ತೆಗೆದುಬಿಡಿ” ಎಂದ. ವೈದ್ಯ ವಿಚಲಿತನಾದ. ರೋಗಿ ಮುಂದುವರಿಸಿದ – “ನನ್ನ ಕಥೆಯನ್ನು ಬಿಡಿ. ಬೇರೆಯವರಿಗೂ ಈ ಸ್ಥಿತಿ ಬರದ ಹಾಗೆ ಏನೂ ಮಾಡಲು ಸಾಧ್ಯವಿಲ್ಲವೆ?” ಇದಕ್ಕೆ ವೈದ್ಯ ಉತ್ತರಿಸಿದ – “ಎಷ್ಟು ಸಾಧ್ಯವೋ ಅಷ್ಟು ಶಮನ ಮಾಡುವ ವಿಧಾನ ಕಂಡುಕೊಳ್ಳಲು ಸಂಶೋಧನೆ ಆಗಬೇಕಾಗಿದೆ. ಆ ಪ್ರಯತ್ನವನ್ನು ಆರಂಭಿಸುವುದಕ್ಕೇ ಸಾವಿರಾರು ಡಾಲರ್ ಬೇಕಾದೀತು.” ರೋಗಿ ಹೇಳಿದ _ “ಆಗಲಿ. ನನ್ನಿಂದಾದಷ್ಟು ಹಣ ಸಂಗ್ರಹಿಸಿ ಕೊಡುತ್ತೇನೆ, ನೀವು ಸಂಶೋಧನೆಯನ್ನು ದಯವಿಟ್ಟು ಆರಂಭಿಸಿ.” ಹೀಗೆ ದೃಢಸಂಕಲ್ಪ ತಳೆದ ರೋಗಿ ತನ್ನ ಕಾಲಿಲ್ಲದ ಸ್ಥಿತಿಯಲ್ಲಿಯೇ ಹತ್ತಾರು ಸಜ್ಜನರ ಮೊರೆಹೊಕ್ಕು ಎರಡು ಸಾವಿರ ಡಾಲರನ್ನು (ಆ ದಿನಗಳಲ್ಲಿ ಇದು ಭಾರಿ ಮೊತ್ತ) ಸಂಗ್ರಹ ಮಾಡಿ ವೈದ್ಯರ ಕೈಗಿತ್ತ. ಹಾಗೆ ಆರಂಭವಾದ ಪ್ರಯಾಸದಿಂದ ಅಸಂಖ್ಯ ಕ್ಯಾನ್ಸರ್-ಪೀಡಿತರಿಗೆ ಉಪಶಮನ ದೊರೆಯುವುದು ಸಾಧ್ಯವಾಯಿತು. ಹೀಗೆ ಲೋಕೋಪಕಾರ ಮಾಡಿ ೨೮ರ ವಯಸ್ಸಿನಲ್ಲೇ ಮೃತನಾದ ಆ ರೋಗಿ ಕೆನಡಾ ದೇಶದವನು; ಆತನ ಹೆಸರು ಟರ‍್ರಿಫಾಕ್ಸ್.