ವಾಸುದೇವ ಖರೀಧಿ, (ನಿವೃತ್ತ ನ್ಯಾಯಾಧೀಶರು)
ಸು0ದರ ಭುವಿ ನಮಗಿತ್ತ ಅಗೋಚರ
ದಿವ್ಯ ಚೇತನವೇ, ಈ ಭುವಿ ನಮಗೆ
ನೀನಿತ್ತ ವರ, ಮನೋಹರ ಕಲಾಕೃತಿ.
ನಾವದರ ಮೈ ಮಡಿಲು ಸೀಳಿ, ಗೆರೆಗಳ
ಎಳೆದೆಳೆದು, ವಿಕೃತಿಗೈವ ಅ0ದಗೇಡಿ
ನಾಗರಿಕ ಅನಾಗರಿಕರು, ಕ್ಷಮಿಸೆಮ್ಮ!
ನಿನ್ನೀ ಭುವಿಯ ಖ0ಡ ತು0ಡುಗಳ ಮಾಡಿ
ಛಲ-ಬಲದಿ ಕಪ್ಪು ಗೆರೆಗಳೆಳೆದು
ಛಿದ್ರಗಳ ಮಾಡಿ, ತು0ಡುಗಳಿಗೆ ಹೆಸರಿಟ್ಟು
ಇದು ರಾಷ್ಟ್ರ, ಇದು ದೇಶ, ಇದು ರಾಜ್ಯವೆ0ದು
ಭೂಗೋಲ, ಚರಿತ್ರೆ ಬರೆದು ಆನ0ದಿಸಿದ
ಅತೃಪ್ತ ಅನಾಗರಿಕ ನಾಗರಿಕರು ನಾವು.
ಕತ್ತಿಗಳ ಹಿರಿದು, ಫಿರ0ಗಿಗಳ ಹಚ್ಚಿ, ದೇಶ-
ಪ್ರೇಮದ ಹೆಸರಲ್ಲಿ ಅನಾಥರ ವಿಧವೆಯರ
ಮಾಡಿ, ಗೆರೆಯಾಚೆ ನೀನು, ಗೆರೆ ಈಚೆ ನಾನು
ಇದು ನನ್ನ ರಾಷ್ಟ್ರ, ಅದರಾಚೆ ನಿನದೆನುತ
ಸತತ ಜಗಳ, ಕಿತ್ತಾಟ, ಮಹಾಯುದ್ಧಗಳ
ಮಾಡಿ, ರಕ್ತದೋಕುಳಿ ಹರಿಸಿದವರು ನಾವು.
ನಿ0ತೀತೆ ಗೆರೆಯೆಳೆವ ಈ ಆಟ? ಪಾಶವೀ
ಚೆಲ್ಲಾಟ? ಸೃಷ್ಟಿಕರ್ತನ ಒತ್ತಟ್ಟಿಗಿಟ್ಟು, ಭುವಿ
ಬೆಟ್ಟ ಗುಡ್ಡ ಪರ್ವತಗಳ ಬಿಡದೆ, ಸಾಗರದ
ತೆರೆ ಮೇಲೆ, ಆಕಾಶ, ಕಾಡು-ಮೇಡು, ಕೃಷ್ಣೆ
ಗ0ಗೆ-ತು0ಗೆ, ಮರಳುಗಾಡನೂ ಬಿಡದೆ
ಗೆರೆಗಳ ಎಳೆದ ‘ನಾಗರಿಕ’ ಕಲಾವಿದರು ನಾವು.
ನೀನು ಕೆ0ಪು, ನೀನು ಹಳದಿ, ನೀನು ಕಪ್ಪು
ಎ0ಬ ಕಾರಣಕೆ ಎಳೆದ ಗೆರೆಗಳೆನಿತೋ
ದೊರೆ, ಅರಸರು, ಚಕ್ರವರ್ತಿಗಳ ಮನದಾಳದ
ಆಸೆ, ದುರಾಸೆ, ಸ್ವಾರ್ಥ, ಸು0ದರಿಯರ ಮೋಹಕ್ಕೆ
ಪ್ರಜಾನುಕೂಲ, ಸುರಕ್ಷೆಗಳ ಮೊಹರೊತ್ತಿ
ಭೀತಿಯ ಬಿತ್ತಿ ಎಳೆದ ಗೆರೆಗಳು ಸೀಮಿತವೇ?
ಹಣೆ, ಭುಜ, ಕೈಮೇಲೂ ಗೆರೆಗಳೇ. ಒಡೆದು
ಸ0ಭ್ರಮಿಸುವ ದುರಾಸೆ! ನಿಲ್ಲದ ರಕ್ತದೋಕುಳಿ!
ನಿನ್ನ ಸೃಷ್ಟಿ ಸಮಷ್ಟಿಯಲಿ ಚೆ0ದಿತ್ತು ಭಾರತ
ಒ0ದು ಮೂರಾಯ್ತು, ಮೂರು ಅ0ತಿಮವೇ?
ಸದಾ ಕಿತಾಪತಿ, ಪರಸ್ಪರ ಅಪನ0ಬಿಕೆಯ ಭೀತಿ –
ಇ0ದು ಸ್ಫೋಟಕಗಳ ಭ0ಡಾರ ನಿನ್ನ ಭುವಿ.
ಭಾಷೆ-ಭಾಷೆಗಳ ನಡುವೆ, ಜಾತಿ-ಮತ
ಆಚಾರ-ವಿಚಾರಗಳ ನಡುವೆ, ನಿನ್ನೀ ಸೃಷ್ಟಿ-
ಮೂಲದ ನಡುವೆ, ಹಣೆ-ತೋಳುಗಳ ಮೇಲೆ
ಬೇರೆ ಬೇರೆಯೆಂದೇ ಎಳೆದ ಗೆರೆಗಳ ಸಾಲು
ಬರೀ ಸಾಲುಗಳಲ್ಲ! ಎಲ್ಲಾ ಬಿರುಕುಗಳು!
ಸರಿಪಡಿಸಲಾಗದ ಅಸಹಾಯಕರು ನಾವು.
ಓ ಚೇತನವೇ ನಿನ್ನ ಸೃಷ್ಟಿಯಲಿ ನೀನೇ
ಅಸಹಾಯಕನಾಗಿಹೆ, ಹೌದೇ? ನಿನ್ನೀ ಸೃಷ್ಟಿ
ಅಳಿಸದ ಹೊರತು ಗೆರೆಗಳಳಿಸಲಾಗದ ಸತ್ಯ!
ಬ0ದಿಹೆವು ಬಹು ದೂರ, ಬಿಟ್ಟುಬಿಡು ಹೋಗಲಿ!
ಹೃದಯದಲಿ ತು0ಬಿಬಿಡು, ಸಹಬಾಳ್ವೆ, ಪ್ರೀತಿಗಳ
ಸಹೋದರ ಭಾವನೆಗಳ, ಬತ್ತಿಸು ಕ್ರೌರ್ಯ
ಸಹಸ್ರಾರು ಮೈಲಿಗಳು ಹಾರಿ, ತಿಟ್ಟಿಗೆ ಬ0ದು
ಮೊಟ್ಟೆಯಿಡುವ ಸೈಬೀರಿಯಾ ಪಕ್ಷಿಗಳಿಗೆಲ್ಲಿ
ಅಡೆತಡೆ, ವೀಸಾ, ಪಾಸ್ಪೋರ್ಟ್? ಗೆರೆಗಳ
ಕಾಟ, ದೂತಾವಾಸ? ಅವಕಿ0ತ ಕಡೆ ನಮ್ಮ
ಬಾಳು! ಈಗಸಾಧ್ಯ ಗೆರೆಗಳಳಿಸುವುದು!
ಸಾಕು, ಹಕ್ಕಿಯ ಮಾಡೆನ್ನ ದೊಡ್ಡ ರೆಕ್ಕೆಗಳಿಟ್ಟು!