ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಎಪ್ರಿಲ್ 2020 > ಬೀದಿ ರಂಪಾಟ ಮತ್ತು ಸಾಂವಿಧಾನಿಕತೆ

ಬೀದಿ ರಂಪಾಟ ಮತ್ತು ಸಾಂವಿಧಾನಿಕತೆ

ಕಳೆದೆರಡು ತಿಂಗಳಲ್ಲಿ ಕೊರೋನಾದಷ್ಟೆ ವ್ಯಾಪಕವಾಗಿ ಸುದ್ದಿ ಮಾಡಿರುವ ಘಟನೆಯೆಂದರೆ ರಾಷ್ಟ್ರ ರಾಜಧಾನಿಯಲ್ಲಿನ ಶಹೀನ್‍ಬಾಗ್ ರಸ್ತೆತಡೆ. ಅದು ಅಷ್ಟು ದೀರ್ಘಕಾಲ ನಡೆಯಿತೆಂಬುದೇ ಅದು ಯಾರಿಂದಲೋ ಪೋಷಣೆ ಪಡೆಯುತ್ತಿದ್ದಿರಬೇಕೆಂಬ ಊಹೆಗೆ ಅವಕಾಶ ಮಾಡಿಕೊಟ್ಟೀತು; ಅದು ಹಾಗಿರಲಿ. ಈ ತಥಾಕಥಿತ ‘ಪ್ರತಿಭಟನೆ’ ನಡೆದ ರೀತಿಯು ಗೌರವ ತರುವಂತಹದಲ್ಲ. ರಸ್ತೆತಡೆಗೆ ಅದರ ಪ್ರವರ್ತಕರು ನೀಡಿದ ಕಾರಣ ತಾವು ನಾಗರಿಕತ್ವ ತಿದ್ದುಪಡಿ ಕಾಯ್ದೆಗೆ (ಸಿಎಎ) ಪ್ರತಿರೋಧ ತೋರುತ್ತಿದ್ದೇವೆಂಬುದು. ಆದರೆ ಪ್ರತಿಭಟನಕಾರರಲ್ಲಿ ಕಾಯ್ದೆಯ ಯಾವುದೇ ಊಹಿತ ಅಡ್ಡಪರಿಣಾಮಗಳಿಂದ ಬಾಧಿತರಾಗಿದ್ದೇವೆನ್ನಬಲ್ಲವರು ಕಾಣಲಿಲ್ಲವೆಂಬುದೊಂದು ವೈಚಿತ್ರ್ಯ. ಹೀಗಾಗಿ ಇಡೀ ಘಟನೆಯನ್ನು ಬೇರೆಯದೇ ದೃಷ್ಟಿಯಿಂದ ಪರಿಶೀಲಿಸಬೇಕಾಗಿದೆ.

ಎದ್ದುಕಾಣುವ ಸಂಗತಿಯೆಂದರೆ – ರಷ್ಯ- ಚೀಣಾಗಳಂತಲ್ಲದೆ ಭಾರತದಲ್ಲಿನ ಮುಕ್ತ ಪರಿಸರದಿಂದಾಗಿ ಸ್ವೇಚ್ಛಾವರ್ತನೆಗೂ ಪ್ರಾಮಾಣಿಕ ಅಭಿಪ್ರಾಯಭೇದಮಂಡನೆಗೂ ನಡುವಣ ಸೀಮಾರೇಖೆ ಈಚಿನ ದಿನಗಳಲ್ಲಿ ಮಸಕಾಗಿಬಿಟ್ಟಿದೆ ಎಂಬುದು. ಅಭಿಪ್ರಾಯಭೇದ ಪ್ರತಿಪಾದನೆಯ ‘ಹಕ್ಕು’ ತಮಗಿದೆಯೆಂದು ದೊಂಬಿಗಾರರು ಎಷ್ಟೇ ಉಚ್ಚಸ್ವರದಲ್ಲಿ ಅರಚಿದರೂ ಅದು ಅರ್ಧಸತ್ಯವಷ್ಟೆ. ಪ್ರಜೆಗಳಿಗೆ ಶಾಂತಿಯುತವಾಗಿ ಸಭೆ ನಡೆಸಲು ಅವಕಾಶವಿರುವುದು ಹೌದು – ಅವರು ನಿಃಶಸ್ತ್ರರಾಗಿದ್ದು ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯನ್ನಾಗಲಿ ಅಸೌಕರ್ಯವನ್ನಾಗಲಿ ಉಂಟುಮಾಡದಿದ್ದಲ್ಲಿ. ಅವರಿಂದ ಸಾರ್ವಜನಿಕರಿಗೆ ತೊಂದರೆಯಾದ

ಕ್ಷಣದಲ್ಲಿಯೇ ಅವರ ಅಭಿಪ್ರಾಯಭೇದ ಪ್ರಸಾರದ ‘ಹಕ್ಕು’ ಅನೂರ್ಜಿತವಾಗುತ್ತದೆ. ಆದರೆ ಇಡೀ ಶಹೀನ್‍ಬಾಗ್ ‘ಪ್ರತಿಭಟನೆ’ಯ ವಿನ್ಯಾಸವೇ ಸಾರ್ವಜನಿಕರನ್ನು ಅಸಹಾಯರಾಗಿಸಬೇಕೆಂಬುದು, ತಮ್ಮ ಅದ್ಭುತ ‘ಉದಾಹರಣೆ’ಯನ್ನು ದೇಶದ ಇತರ ಭಾಗಗಳವರೂ ಅನುಕರಿಸಲಿ ಎಂಬುದು ಮತ್ತು ಈ ವಿಧಾನದ ಮೂಲಕ ರಾಷ್ಟ್ರೀಯ ಸಂಸತ್ತಿನಲ್ಲಿ ಕಾನೂನುಬದ್ಧವಾಗಿ ಅಮಲುಗೊಳಿಸಲ್ಪಟ್ಟಿರುವ ಶಾಸನವನ್ನು ರದ್ದುಪಡಿಸಬೇಕೆಂದು ಕೇಂದ್ರಸರ್ಕಾರದ ಮೇಲೆ ಒತ್ತಡ ತರಬೇಕೆಂಬುದು.

ಅಭಿಪ್ರಾಯಭಿನ್ನತೆಯ ಪ್ರತಿಪಾದನೆ ತಮ್ಮ ‘ಮೂಲಭೂತ ಹಕ್ಕು’ ಎಂದು ಅರಚುತ್ತಹೋದವರು ಅಭಿಪ್ರಾಯಭಿನ್ನತೆಗೆ ಸಂಬಂಧಿಸಿದ ಮೂಲಾಂಶಗಳನ್ನೇ ಮರೆತರೆನ್ನಬೇಕಾಗಿದೆ. ಉದಾಹರಣೆಗೆ: ಜನರು ಬಹುಮತದಿಂದ ವರಣ ಮಾಡಿದ ಪ್ರತಿನಿಧಿಗಳ ಮೂಲಕ ಕಾರ್ಯಗತಗೊಳ್ಳುವ ರಾಜ್ಯಾಂಗದಲ್ಲಿ ಅಭಿಪ್ರಾಯಭಿನ್ನತೆಗೆ ಯುಕ್ತ ಸ್ಥಾನ ಯಾವುದು? ಪ್ರಾತಿನಿಧಿತ್ವ ತತ್ತ್ವವೇ ಮುಕ್ಕಾದಲ್ಲಿ ಮೇಲೆ ಪ್ರಸ್ತಾವಿಸಿದಂತಹ ಭಿನ್ನತೆಯ ಮಂಡನೆಯ ‘ಹಕ್ಕು’ ವರ್ಧಿಸೀತೇನೊ. ಆದರೆ ಭಾರತದಲ್ಲಿ ಅಂತಹ ಕಾಲ್ಪನಿಕ ಸ್ಥಿತಿ ಸುತರಾಂ ಇಲ್ಲ; ಅದಕ್ಕೆ ವಿರುದ್ಧ ಸ್ಥಿತಿಯೆ ಇದೆ. ಇಲ್ಲಿ ‘ಅಲ್ಪಸಂಖ್ಯಾತ’ರಿಗೆ  ಹೆಚ್ಚಿನ ಅಧಿಕಾರಿಗಳೇ ಶಾಸನಬದ್ಧವಾಗಿವೆ, ಅವು ಅಮಲಿನಲ್ಲಿಯೂ ಇವೆ.

ಶಹೀನ್‍ಬಾಗ್ ದೊಂಬಿಗಾರರ ಆಶಯವಾದರೂ ಏನು? ಅಭಿಪ್ರಾಯಭೇದ ಪ್ರತಿಪಾದಕರಿಗೇ ಸಂಸತ್‍ಪ್ರವರ್ತಿತ ಅಧಿಕೃತ ಶಾಸನವೊಂದಕ್ಕೆ ಅನಂಗೀಕಾರ ತೋರುವ ‘ವೀಟೋ’ ಹಕ್ಕು ಇರಬೇಕೆಂದೆ? ಇದು ಇಡೀ ದೇಶದಲ್ಲಿಯೇ ಅರಾಜಕತೆಗೆ ದಾರಿ ಮಾಡುವುದಿಲ್ಲವೆ? ಅರಾಜಕ ಸ್ಥಿತಿ ನಿರ್ಮಾಣಗೊಂಡಲ್ಲಿ ಈ ದೊಂಬಿಗಾರರು ಕೂಡಾ ಉಳಿದಿರುವುದಿಲ್ಲ! ರಸ್ತೆತಡೆ, ಪೆÇಲೀಸರ ಮೇಲೂ ಕಲ್ಲೆಸೆತ – ಇವೆಲ್ಲ ಅರಾಜಕ

ಸ್ಥಿತಿಗೆ ಹೊಂದಿಯಾವೇ ಹೊರತು ಸಂಸದೀಯ ಪ್ರಜಾಪ್ರಭುತ್ವಪದ್ಧತಿಗೆ ಅಲ್ಲ. ದೊಂಬಿಗಾರರದು ಸಭ್ಯ ಪ್ರಜಾಪ್ರಭುತ್ವಾನುಗುಣ ವರ್ತನೆಯಲ್ಲ. ಚಿತಾವಣೆ-ಅರಚಾಟಗಳ ಮೂಲಕ ಆರೂಢ ಸರ್ಕಾರವನ್ನು ಮಣಿಸುವೆವೆಂಬ ಆಶಯವೇ ನ್ಯಾಯದೂರವಾದ್ದು. ಯಾವುದೇ ಮಂಡನೆಯ ಋಜುತೆಯೋ ಅಸಿಂಧುತ್ವವೋ ನಿರ್ಣಯಗೊಳ್ಳುವುದು

ವಿಹಿತಮಾರ್ಗದ ಸಾವಧಾನಪೂರ್ವಕ ಪರಾಮರ್ಶನೆಯಿಂದಲೇ ಹೊರತು ಎಷ್ಟು ಡೆಸಿಬಲ್‍ಗಳಲ್ಲಿ ಬೀದಿ ಅರಚಾಟ ನಡೆದಿದೆಯೆಂಬುದರ  ಮಾಪನದಿಂದಲ್ಲ. ಅರಾಜಕತೆಗೆ ದಾರಿಮಾಡುವ ನಿಲವುಗಳಾಗಲಿ ವಿಧಾನಗಳಾಗಲಿ ಸಂಸದೀಯ ಪ್ರಜಾಪ್ರಭುತ್ವದ ವಿಡಂಬನೆಯೇ  ಆಗುತ್ತವೆ ಮತ್ತು ದಂಡನಾರ್ಹವೂ ಆಗುತ್ತವೆ. ಇಂತಿಷ್ಟು ಗಂಟೆಗಳಲ್ಲಿಯೊ ದಿನಗಳಲ್ಲಿಯೊ ತಾವು ಕೋರಿರುವ ನಿರ್ಣಯವೇ ಸರ್ಕಾರದಿಂದ ಹೊಮ್ಮಲಿ ಎಂಬ ಜಾಡಿನ ಕಿರುಚಾಟಗಳು ಸ್ವೀಕೃತ ರಾಜ್ಯಾಂಗವ್ಯವಸ್ಥೆಯಲ್ಲಿ ಹಾಸ್ಯಾಸ್ಪದವೇ ಆಗುತ್ತವೆ. ಸರ್ಕಾರವು ಸಂವಾದಕ್ಕೆ ಸಿದ್ಧವಿದೆಯೆಂದು ಕೇಂದ್ರ ಗೃಹಸಚಿವರು ಹೇಳಿದಮೇಲೂ ದೊಂಬಿಗಾರರು ತಮ್ಮ ಚುನಾಯಿತ ಪ್ರತಿನಿಧಿಗಳೊಡನೆ ಸಮಾಲೋಚನೆ ನಡೆಸುವುದಕ್ಕೆ ಬದಲಾಗಿ ಬೀದಿ ರಂಪಾಟಗಳನ್ನು ಮುಂದುವರಿಸಿದರು. ಈ ಸ್ಥಿತಿಯನ್ನು ‘ಲಾ ಅಂಡ್ ಆರ್ಡರ್’ ಸಂಗತಿಯೆಂದು ಪರಿಗಣಿಸಿ ನಿಯಂತ್ರಣಕ್ಕಾಗಿ ತೀವ್ರ ಕ್ರಮಗಳನ್ನು ಕೈಗೊಳ್ಳುವುದು ಸರ್ವಥಾ ಸಮರ್ಥನೀಯವೆಂಬ ಬಗೆಗೆ ಸಂದೇಹಕ್ಕೆ ಅವಕಾಶವಿರದು. ಹಾಗೆ ಕ್ರಮಗಳನ್ನು ಕೈಗೊಳ್ಳಲು ಹಿಂದೆಗೆದಲ್ಲಿ ಅದು ಗಂಭೀರ ಕರ್ತವ್ಯಚ್ಯುತಿಯೇ ಆಗುತ್ತದೆ.

ಭಾರತ ದೇಶದ್ದು ಮಧ್ಯಮಮಾರ್ಗದ ಸೌಮ್ಯ ಪರಂಪರೆ. ಇದರ ದುರುಪಯೋಗ ಪಡೆದುಕೊಳ್ಳಲು ಹವಣಿಸುತ್ತಿರುವವರದು ನ್ಯಾಯವಿರೋಧಿಯೂ ದಂಡನಾರ್ಹವೂ ಆದ ವರ್ತನೆ. ಈ ಸಂದರ್ಭದಲ್ಲಿ ‘ಉಭಯ’ ಪಕ್ಷಗಳೂ ಸಮಾಧಾನಕರ ಪರಿಹಾರವನ್ನು ಸಂವಾದದ ಮೂಲಕ ಕಂಡುಕೊಳ್ಳಲಿ ಎಂದು ಸರ್ವೋಚ್ಚ ನ್ಯಾಯಾಲಯ ‘ರಾಜಿ’ಮಾರ್ಗವನ್ನು ಸೂಚಿಸಿದುದು ವ್ಯವಹಾರ್ಯವೂ ಅಲ್ಲ, ಸಾಂವಿಧಾನಿಕವೂ ಅಲ್ಲ. ಯಾವುದೇ ದೃಷ್ಟಿಯಿಂದಲೂ ಅಭಿಪ್ರಾಯಭಿನ್ನತೆಯ ಪ್ರಕಟೀಕರಣವೆಂದು ಪರಿಗಣಿಸಲಾಗದ ಬೀದಿ ದೊಂಬಿಗಾರಿಕೆ ತೀಕ್ಷ್ಣ ನಿಯಂತ್ರಣಕ್ರಮಗಳಿಗೆ ಅರ್ಹವಾಗುತ್ತದೆ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ