ಬಿಗಿದಪ್ಪಿ ವಿದಾಯಕೋರುವಾಗ
ತುಟಿಗೆ ತುಟಿಯೊತ್ತಿ ಮಧು
ಹೀರುವಾಗ
ವಿದೇಶಕ್ಕೆ ಹಾರುವಾಗ
ಮಾತುಕೊಟ್ಟಿದ್ದ
ಪ್ಲೀಸ್ ಅಳಬೇಡ ಕಣೆ
ಬಂದೇ ಬರುತ್ತೇನೆ
ಕೊಡು
ಮೂರು ತಿಂಗಳ ಗಡು
ಕಾಯುತ್ತಿರು ನನ್ನ ಕರೆಗೆ
ಕರೆದೊಯ್ಯುತ್ತೇನೆ
ನಿನ್ನನ್ನು ಅಲ್ಲಿಗೆ
ಧರೆಯ ಮೇಲಿನ ಸ್ವರ್ಗ
ಕೊಲ್ಲಿಗೆ
ಅಂದಿನಿಂದ ಇವಳು ಹೀಗೆ
ಕಾಯುತ್ತಿದ್ದಾಳೆ ಅವನ
ಫೋನ್ ಕಾಲಿಗೆ
ಕೊಲ್ಲಿಯಲ್ಲಿ ತೆರೆದುಕೊಳ್ಳುವ
ಹೊಸ ಬಾಳಿಗೆ
ಬಂದೇ ಬರುತ್ತದೆ ಕರೆ
ಇಂದಲ್ಲದಿದ್ದರೆ ನಾಳೆಗೆ
ಕಾಯುತ್ತಿದ್ದಾಳೆ ಹುಡುಗಿ
ಮುತ್ತುಕೊಟ್ಟವನ
ಮಾತುಕೊಟ್ಟವನ ಕಾಲಿಗೆ
ನಿಲ್ಲುವುದೆ ಕಾಲ?
ದಿನಗಳು ಉರುಳಿ ತಿಂಗಳಾಗಿ
ತೀರಿದೆ ಮೂರು ತಿಂಗಳ ವಾಯಿದೆ
ಬೇರೆ ದಾರಿಯುಂಟೆ ಕಾಯದೆ?
ಬಿದ್ದುಕೊಂಡಿದ್ದಾಳೆ ಮೌನವಾಗಿ
ಶಾಪಗ್ರಸ್ತ ಅಹಲ್ಯೆಯ ಹಾಗೆ
ಕಲ್ಲಾಗಿ
ಕಾಯುತ್ತಿದ್ದಾಳೆ
ಇನ್ನೂ ಬಾರದ ಅವನ
ಆ ಪುರುಷೋತ್ತಮನ
ಕಾಲಿಗೆ !