ಉಪಕ್ರಮ
ದೇವವಾಣಿಯಾದ ಸಂಸ್ಕೃತಭಾಷೆಯಲ್ಲಿ ಗಂಭೀರವಾದ ಭಾವಗಳನ್ನೂ ವಿಷಯಗಳನ್ನೂ ಕುರಿತ ಕೃತಿಗಳು ಅಪಾರಸಂಖ್ಯೆಯಲ್ಲಿ ಲಭ್ಯವಿರುವುದು ಎಲ್ಲರಿಗೂ ತಿಳಿದಿದೆ. ಆದರೆ ಸಂಸ್ಕೃತ ಸರಸ್ವತಿಯು ಲಘುವಾಗಿ ವಿನೋದ ಮಾಡಿ, ಗೇಲಿಗರೆದು, ನಕ್ಕು-ನಗಿಸಬಲ್ಲಳು ಎಂದರೆ ಹುಬ್ಬೇರಿಸುವ ಮಂದಿಯೇ ಹೆಚ್ಚು. ಇದಕ್ಕೆ ಕಾರಣ ಸಂಸ್ಕೃತದಲ್ಲಿರುವ ಕಟಕಿ, ಕುಹಕ, ಹಾಸ್ಯಗಳ ಬಗೆಗಿನ ಅಜ್ಞಾನವೇ. ಆದಿಕಾವ್ಯ ರಾಮಾಯಣದಲ್ಲಿಯೇ ಹಲವಾರು ಹಾಸ್ಯಪ್ರಸಂಗಗಳಿವೆ. ಅನಂತರದ ಸಾಹಿತ್ಯದಲ್ಲಂತೂ ಇಂಥ ಸಂದರ್ಭಗಳು ಸಾವಿರಾರು. ಇದು ಕಾವ್ಯದ ಮಾತಾಯಿತು, ಶಾಸ್ತ್ರದಲ್ಲಿಯೂ ಹಾಸ್ಯದ ಪ್ರಸ್ತಾವವುಂಟೋ? – ಎಂದರೆ, ಅವಶ್ಯವಾಗಿ ಉಂಟು. ಕಲಾಮೀಮಾಂಸೆಯ ಮೊಟ್ಟಮೊದಲ ಲಕ್ಷಣಗ್ರಂಥವಾದ ಭರತಮುನಿಯ ನಾಟ್ಯಶಾಸ್ತ್ರವು ಹಾಸ್ಯರಸವನ್ನು ಅದರ ಕಾರ್ಯ-ಕಾರಣ-ಪ್ರಭೇದಗಳ ಜೊತೆಗೆ ವಿವರವಾಗಿ ವಿಶ್ಲೇಷಿಸಿದೆ. ಹಾಸ್ಯಕ್ಕೆ ಅನುವಾಗಲೆಂದೇ ರೂಪಕಗಳಲ್ಲಿ ‘ವಿದೂಷಕ’ ಎಂಬ ಪಾತ್ರವಿರುವುದು ಹಾಗೂ ಹತ್ತು ರೂಪಕಗಳ ಪೈಕಿ ‘ಪ್ರಹಸನ’ವು ಹಾಸ್ಯಕ್ಕಾಗಿಯೇ ಮೀಸಲಿರುವುದು ಸುವಿದಿತ.
ಇನ್ನು ವಿಡಂಬನೆಯನ್ನು ಗಮನಿಸುವುದಾದರೆ, ‘ಅನ್ಯೋಕ್ತಿ’ ಸಾಹಿತ್ಯದ ಮೂಲಕ ಸಂಸ್ಕೃತವು ಇದನ್ನು ಅನನ್ಯವಾಗಿ ಸಾಧಿಸಿದೆ. ಲೋಕದ ಅಂಕು-ಡೊಂಕುಗಳನ್ನು, ಅಗಟ-ವಿಗಟಗಳನ್ನು ‘ವಕ್ರ’ಮಾರ್ಗದಿಂದ ಅನುಕರಿಸಿ ಅಣಕಿಸುವುದೇ ಇದರ ತಿರುಳು. ವಿಡಂಬನೆಯೆಂಬ ಶಬ್ದದ ಧಾತ್ವರ್ಥವೂ ಇದೇ (ಡಂಬ್-ಅನುಕರಣೇ). ಭಲ್ಲಟ, ನೀಲಕಂಠದೀಕ್ಷಿತ, ಪಂಡಿತರಾಜ ಜಗನ್ನಾಥ ಮುಂತಾದವರು ಬರೆದಿರುವ ಅನ್ಯೋಕ್ತಿಪದ್ಯಗಳಲ್ಲಿ ಈ ಅಂಶವು ಕಾಣಸಿಗುತ್ತದೆ. ಇವಲ್ಲದೆ ವಿಷ್ಣುಶರ್ಮನ ‘ಪಂಚತಂತ್ರ’, ದಾಮೋದರಗುಪ್ತನ ‘ಕುಟ್ಟನೀಮತ’, ಕ್ಷೇಮೇಂದ್ರನ ‘ಕಲಾವಿಲಾಸ’, ‘ಸಮಯಮಾತೃಕಾ’, ‘ನರ್ಮಮಾಲಾ’, ‘ದೇಶೋಪದೇಶ’, ನೀಲಕಂಠದೀಕ್ಷಿತನ ‘ಕಲಿವಿಡಂಬನ’, ‘ಸಭಾರಂಜನಶತಕ’ ಮತ್ತು ಕುಟ್ಟಿಕವಿ ಅಥವಾ ವಾಂಛೇಶ್ವರನ ‘ಮಹಿಷಶತಕ’ ಮುಂತಾದ ಕೃತಿಗಳಲ್ಲಿ ವಿನೋದ-ವಿಡಂಬನೆಗಳ ವಿಶ್ವರೂಪವೇ ತೋರುತ್ತದೆ.
ಈ ಜಾಡಿಗೆ ಸೇರಿದ್ದು ಪ್ರಕೃತದಲ್ಲಿ ನಾವು ಆಸ್ವಾದಿಸಲಿರುವ ಕೃತಿ, ‘ಕಂಟಕಾಂಜಲಿ’.
ಕವಿ-ಕಾವ್ಯ
ಕಂಟಕಾಂಜಲಿಯ ಕರ್ತೃ ಕೃಷ್ಣ ಶ್ರೀನಿವಾಸ ಅರ್ಜುನವಾಡ್ಕರ್ (31.10.1926- 30.07.2013). ಬೆಳಗಾವಿಯಲ್ಲಿ ಜನಿಸಿದ ಶ್ರೀಯುತರು ಕೆ.ಎಸ್.ಅರ್ಜುನವಾಡ್ಕರ್ ಎಂದೇ ವಿದ್ವದ್ವಲಯಗಳಲ್ಲಿ ಪ್ರಸಿದ್ಧರು. ತಮ್ಮ ತಂದೆಯಿಂದ ಸಾಂಪ್ರದಾಯಿಕ ಶೈಲಿಯಲ್ಲಿ ಸಂಸ್ಕೃತವನ್ನು ಅಭ್ಯಾಸ ಮಾಡಿ, ಸ್ವಪರಿಶ್ರಮದಿಂದ ಇಂಗ್ಲಿಷ್ ಭಾಷೆಯನ್ನೂ ಆಧುನಿಕ ವಿದ್ಯೆಗಳನ್ನೂ ಕರಗತ ಮಾಡಿಕೊಂಡರು. ಅದ್ವೈತವೇದಾಂತದ ಅಧ್ಯಯನ ಕೈಗೊಂಡು ‘ವೇದ-ಶಾಸ್ತ್ರ-ಉತ್ತೇಜಕಸಭಾ’ ಎಂಬ ಸಂಸ್ಥೆಯಿಂದ ‘ಕೋವಿದ’ ಪದವಿ ಪಡೆದರು. ಸಂಸ್ಕೃತ ಮತ್ತು ಮರಾಠಿ ಭಾಷೆಗಳ ವ್ಯಾಕರಣವು ಅವರ ಪ್ರಮುಖ ಆಸಕ್ತಿಕ್ಷೇತ್ರ, ಲೀಲಾಭೂಮಿ. ಶಬ್ದಶಾಸ್ತ್ರವಲ್ಲದೆ ಸಾಹಿತ್ಯ, ದರ್ಶನಶಾಸ್ತ್ರ (ವಿಶೇಷವಾಗಿ ಯೋಗದರ್ಶನ), ವಿಜ್ಞಾನ ಮತ್ತು ಇತಿಹಾಸಗಳಲ್ಲಿಯೂ ಅವರಿಗೆ ಆಳವಾದ ತಿಳಿವಳಿಕೆಯಿತ್ತು. ಸಂಸ್ಕೃತದ ಪುನರುಜ್ಜೀವನಕ್ಕಾಗಿ ಹಲವು ದಶಕಗಳಷ್ಟು ಕಾಲ ದಣಿವಿಲ್ಲದೆ ದುಡಿದ ಅರ್ಜುನವಾಡ್ಕರ್ ಅವರು ಸಂಭಾಷಣಸಂಸ್ಕೃತದ ಸೊಗಸನ್ನು ಸಾವಿರಾರು ಜನರಿಗೆ ಮನಗಾಣಿಸಿದರು. ಸ್ವಾತಂತ್ರ್ಯದ ಬಳಿಕ ಕೇಂದ್ರಸರ್ಕಾರ ಸ್ಥಾಪಿಸಿದ ‘ಸಂಸ್ಕೃತ ಕಮಿಷನ್’ನಲ್ಲಿ ಆರ್.ಎನ್. ದಾಂಡೇಕರ್ ಅವರ ಪ್ರೇರಣೆಯಿಂದ ದುಡಿದದ್ದಲ್ಲದೆ ಅದರ ನಿಮಿತ್ತ 1956-57ರಲ್ಲಿ ಭಾರತಾದ್ಯಂತ ಪ್ರವಾಸವನ್ನೂ ಮಾಡಿದರು.
1950ರಿಂದ ಮೊದಲ್ಗೊಂಡ ಅರ್ಜುನವಾಡ್ಕರ್ ಅವರ ಅಧ್ಯಾಪನಕೃಷಿ 1986ರವರೆಗೆ ಅವಿಚ್ಛಿನ್ನವಾಗಿ ನಡೆಯಿತು. ಅವರು ಅನೇಕ ವಿದ್ಯಾಲಯಗಳಲ್ಲಿ ಸಂಸ್ಕೃತ, ಅರ್ಧಮಾಗಧಿ ಮತ್ತು ಮರಾಠಿ ಭಾಷೆಗಳನ್ನು ಬೋಧಿಸಿದರು. ‘ಜ್ಞಾನಪ್ರಬೋಧಿನೀ’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಸಂಸ್ಕೃತದ ಮತ್ತು ಭಾರತೀಯಸಂಸ್ಕೃತಿಯ ಸತ್ತ್ವವನ್ನು ಸಾರಿದರು. ನಿವೃತ್ತರಾದ ಬಳಿಕ ಹಲಕೆಲವು ತರುಣಮಿತ್ರರ ಜೊತೆಗೂಡಿ ಮುದ್ರಣಕ್ಷೇತ್ರದಲ್ಲಿ ದೇವನಾಗರೀ ಲಿಪಿಯ ಅಕ್ಷರವಿನ್ಯಾಸವನ್ನು ಸುಂದರಗೊಳಿಸುವ ಪ್ರಯತ್ನಮಾಡಿದರು. ಇದಲ್ಲದೆ ಸುಪ್ರಸಿದ್ಧವಾದ ‘ಆನಂದಾಶ್ರಮ’ ಸಂಸ್ಥೆಯ ಸಂಗ್ರಹದಲ್ಲಿದ್ದ ಅಮೂಲ್ಯಗ್ರಂಥಗಳ ಸಂಗಣಕ ಆವೃತ್ತಿಗಳನ್ನು (digital editions) ತಯಾರಿಸುವಲ್ಲಿ ಪ್ರಮುಖಪಾತ್ರ ವಹಿಸಿದರು.
ಇವರು ಸಂಸ್ಕೃತ, ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಹಲವಾರು ಗ್ರಂಥಗಳನ್ನು, ಲೇಖನಗಳನ್ನು ಬರೆದಿದ್ದಾರೆ. ಸ್ವತಂತ್ರಕೃತಿಗಳನ್ನಲ್ಲದೆ ಅಭಿಜಾತವಾಙ್ಮಯದ ಅನುವಾದಗಳನ್ನೂ ವಿವರಣೆಗಳನ್ನೂ ರಚಿಸಿದ್ದಾರೆ. ಅವರ ಗ್ರಂಥಗಳ ಪೈಕಿ ‘ಅರ್ಧಮಾಗಧೀ’ (ಸಹಕರ್ತೃಕ; ಪಾಠ್ಯಪುಸ್ತಕ), ‘ಗೀತಾರ್ಥದರ್ಶನ’, ‘ಮರಾಠಿ ವ್ಯಾಕರಣ: ವಾದ ಆಣಿ ಪ್ರವಾದ’, ‘ಮರಾಠಿ ವ್ಯಾಕರಣಾಚ ಇತಿಹಾಸ’ [ಮರಾಠಿ]; ‘ಪ್ರೀತಗೌರೀಗಿರೀಶಮ್’ (ಸಂಸ್ಕೃತದ ಗೀತನಾಟಕ) ಮತ್ತು ‘Yoga Explained: A New Step-by-step Approach to Understanding and Practising Yoga’ (ಸಹಕರ್ತೃಕ) ಪ್ರಮುಖವಾದವು. ಅವರು ಶೋಧಪೂರ್ವಕವಾಗಿ ವಿಸ್ತೃತವಾದ ಭೂಮಿಕೆ-ಟಿಪ್ಪಣಿಗಳೊಡನೆ ಸಿದ್ಧಪಡಿಸಿದ ಮಮ್ಮಟನ ‘ಕಾವ್ಯಪ್ರಕಾಶ’ದ ಮತ್ತು ಪತಂಜಲಿಮುನಿಗಳ ‘ಯೋಗಸೂತ್ರ’ಗಳ ಆವೃತ್ತಿಗಳು ಅಪಾರವಾದ ವಿದ್ವದಾದರಣೆ ಪಡೆದುಕೊಂಡಿವೆ. ಪ್ರಕೃತಕೃತಿಯನ್ನು ‘ಕಂಟಕಾರ್ಜುನ’ ಎಂಬ ಮರೆಹೆಸರಿನಲ್ಲಿ ಅರ್ಜುನವಾಡ್ಕರ್ ಪ್ರಕಟಿಸಿದ್ದಾರೆ.
ಇನ್ನು ಕಾವ್ಯದ ವಿಷಯ. ‘ಕಂಟಕಾಂಜಲಿ’ ಎಂದರೆ ‘ಮುಳ್ಳುಗಳ ಬೊಗಸೆ’ ಎಂದರ್ಥ. ಹೆಸರಿನಲ್ಲಿಯೇ ತಿವಿತ! ಇದೊಂದು ‘ಸ್ತೋತ್ರಮಂತ್ರ’ವಂತೆ. ಇದನ್ನು
ಕಂಡುಕೊಂಡ ಋಷಿ ಕಂಟಕಾರ್ಜುನ, ಉದ್ದಿಷ್ಟವಾದ ದೇವತೆ ಒಂಟೆ; ವಿಡಂಬನೆಯೇ ಛಂದಸ್ಸು, ವಕ್ರೋಕ್ತಿಯೇ ಶಕ್ತಿ, ಸರ್ವಾನುಭೂತಿಯೇ ಕೀಲಕ; ವಿನಿಯೋಗವಾದರೋ ಎಲ್ಲ ಜನರ ಹಿತಕ್ಕಾಗಿ ಮಾಡಲಿರುವ ವಂಚನೆಯ ಉದ್ಧಾರ!
‘ಕಂಟಕಾಂಜಲಿ’ಯೇ! ಇದೇನಿದು ವಿಚಿತ್ರವಾದ ಹೆಸರು? – ಎಂದು ಪ್ರಶ್ನಿಸಿದರೆ, ನಮ್ಮ ಕವಿ ಉತ್ತರಿಸುತ್ತಾರೆ: “ಹರಿಣಗಳು, ಕಮಲಗಳು, ಭ್ರಮರಗಳು, ಹಂಸಗಳು, ಮದಗಜಗಳು, ರಾಕ್ಷಸರು, ಅಪ್ಸರೆಯರು, ರಾಜರುಗಳು, ರತಿಕೇಳಿಗಳು, ಶೃಂಗಾರ-ಶಾಂತಗಳು – ಇವೇ ಮೊದಲಾದ ಆಹಾರವನ್ನು ಪ್ರತಿದಿನವೂ ಸೇವಿಸಿ ಸಂಸ್ಕೃತಭಾಷೆಯ ನಾಲಗೆ ಜಡ್ಡುಗಟ್ಟಿಹೋಗಿದೆ. ಅದಕ್ಕೆ ಹಿತವಾಗಲೆಂದು ಮುಳ್ಳುಗಳಿಂದಾದ ಈ ಕಷಾಯವನ್ನು ತಯಾರಿಸಿದ್ದೇನೆ.”
‘ನವ-ನೀತಿಶತಕ’ ಎಂಬ ಉಪನಾಮವಿರುವ ಈ ಕೃತಿಗೆ ಕವಿಯೇ ರಚಿಸಿರುವ ಸಂಸ್ಕೃತ ವ್ಯಾಖ್ಯಾನವೂ ಇಂಗ್ಲಿಷ್ ಮತ್ತು ಮರಾಠಿ ಭಾಷೆಗಳ ಭಾವಾನುವಾದಗಳೂ ಇವೆ. ಅಲ್ಲದೆ, ಎನ್. ಜಿ. ಸುರು ಮತ್ತು ಅರವಿಂದ ಮಂಗರೂಳಕರ್ ಅವರು ಕ್ರಮವಾಗಿ ಇಂಗ್ಲಿಷ್ ಮತ್ತು ಮರಾಠಿ ಭಾಷೆಗಳಲ್ಲಿ ಬರೆದಿರುವ ಭೂಮಿಕೆಗಳಿವೆ.
ಉಪೋದ್ಘಾತ ಮತ್ತು ಪರಿಶಿಷ್ಟಗಳಲ್ಲದೆ ಹನ್ನೆರಡು ಅಧ್ಯಾಯಗಳನ್ನು ಹೊಂದಿರುವ ಕಂಟಕಾಂಜಲಿಯು ರಾಜಕಾರಣ, ವಿದ್ಯಾಕ್ಷೇತ್ರ, ಸಮಾಜದ ವಿವಿಧ ಆಯಾಮಗಳು, ಧಾರ್ಮಿಕ ಆಚರಣೆಗಳೇ ಮೊದಲಾದ ವಿಷಯಗಳನ್ನು ಕಠೋರಕಟುತ್ವದಿಂದ ಬಹಳ ಸ್ವೋಪಜ್ಞವಾಗಿ ವಿಡಂಬಿಸುತ್ತದೆ. ಇಲ್ಲಿ ನೂರಕ್ಕೂ ಹೆಚ್ಚು ಪದ್ಯಗಳಿವೆ; ಎಲ್ಲವೂ ಶಾರ್ದೂಲವಿಕ್ರೀಡಿತ ವೃತ್ತದಲ್ಲಿ ರೂಪುಗೊಂಡಿವೆ. 1965ರಲ್ಲಿ ಪ್ರಕಟವಾದ ಈ ಕೃತಿ ತನ್ನ ಸಮಕಾಲೀನ ಸಮಾಜದ1 ಎಲ್ಲ ಹೀನ ಆಯಾಮಗಳನ್ನು ತೆರೆದಿಟ್ಟು ಚಿಕಿತ್ಸಕವಾಗಿ ಗೇಲಿಗರೆಯುತ್ತದೆ. ಆಗಿನ ಕಾಲದ ಸರ್ಕಾರವು ತಳೆದಿದ್ದ ಅಪ್ರಬುದ್ಧವಾದ ವಿದೇಶಾಂಗ ನೀತಿಯನ್ನು ಹಾಗೂ ಪಾಕಿಸ್ತಾನದ ಅಮಾನುಷ ಆಕ್ರಮಣವನ್ನು ತೀಕ್ಷ್ಣವಾಗಿ ವಿಡಂಬಿಸುವಲ್ಲಿ (‘ಪಂಚಶೀಲಪದ್ಧತಿ’ ಮತ್ತು ‘ವಿಪಾಕಪದ್ಧತಿ’ ಎಂಬ ಶೀರ್ಷಿಕೆಗಳ ಅಡಿಯಲ್ಲಿ) ಅರ್ಜುನವಾಡ್ಕರ್ ಅವರ ಉಜ್ಜ್ವಲವಾದ ರಾಷ್ಟ್ರಪರ ಅಭಿವ್ಯಕ್ತಿ ಮೆರೆದಿದೆ.
ಈ ಕಾವ್ಯವನ್ನು ಯಾವ ಉದ್ದೇಶದಿಂದ ಓದಬೇಕೆಂದು ಕವಿಯೇ ಹೀಗೆ ವಿವರಿಸಿದ್ದಾರೆ:
ಚಕ್ಷುರ್ಭರ್ತೃಹರೇಃ ಸತತ್ತ್ವನಿಹಿತಂ ಪ್ರಾಚಾಂ ಗಿರಃ ಪ್ರೌಢತಾಂ
ಹಾಸಂ ಶೌದ್ರಕಮುತ್ಕಟಂ ಪ್ರತಿಪದಂ ಯಚ್ಛದ್ಮನಾ ಭಾಷಣಮ್ |
ಸದ್ಯೋಜೀವನಕಂಪನಾನಿ ಚ ಸಖೇ ದ್ರಷ್ಟುಂ ಸ್ಪೃಹಾತೇsಸ್ತಿ ಚೇ-
ದೇಕಸ್ಥಾನ್ಯಥಕಂಟಕಾಂಜಲಿರಯಂ ಸರ್ವಾತ್ಮನಾ ಸೇವ್ಯತಾಮ್ ||
(ಲೋಕದ ಬಗೆಗೆ ಭರ್ತೃಹರಿಗಿದ್ದ ತಾತ್ತ್ವಿಕದೃಷ್ಟಿ, ಚಿರಂತನರ ಭಾಷಾಸೌಷ್ಠವ, ಶೂದ್ರಕನಿಗಷ್ಟೇ ಸಾಧ್ಯವಾದ ಉತ್ಕಟಹಾಸ್ಯ, ಪ್ರತಿಪದದಲ್ಲಿಯೂ ವಂಚನೆ ತುಂಬಿರುವ ಮಾತುಗಳು, ಸುತ್ತಲಿನ ಸಮಾಜದ ಏರಿಳಿತಗಳು – ಈ ಎಲ್ಲವನ್ನೂ ಒಂದೆಡೆ ನೋಡುವ ಬಯಕೆಯಿದ್ದಲ್ಲಿ, ಗೆಳೆಯಾ, ಕಂಟಕಾಂಜಲಿಯ ಪಾರಾಯಣ ಮಾಡು!)
1 ಸದ್ಯಸ್ಕವಾದ ವಿಷಯಗಳನ್ನು ಆಶ್ರಯಿಸದೆ ಹಾಸ್ಯವನ್ನು ಹೊರಡಿಸುವುದು ಕಷ್ಟ. ಏಕೆಂದರೆ, ಹಾಸ್ಯವು ತುಂಬ ಲೋಕನಿಷ್ಠವಾದ ರಸ. ಹಾಸ್ಯದ ಹುಟ್ಟು ಅನೌಚಿತ್ಯದಲ್ಲಿದೆಯೆಂದು ಭಾರತೀಯ ಆಲಂಕಾರಿಕರ ಅಭಿಮತ. ಔಚಿತ್ಯದ ಇಲ್ಲದಿರುವಿಕೆಯೇ ಅನೌಚಿತ್ಯ. ಔಚಿತ್ಯವಾದರೋ ದೇಶ-ಕಾಲ-ವಸ್ತುಗಳ ಜೊತೆ ಘನಿಷ್ಠವಾದ ಸಂಬಂಧ ಹೊಂದಿರುವ ತತ್ತ್ವ. ಹೀಗಿರಲು ಅನೌಚಿತ್ಯ ಮತ್ತು ಅದರ ಮೂಲಕ ಹೊಮ್ಮುವ ಹಾಸ್ಯಜಗತ್ತಿಗೆ ಮಿಗಿಲಾಗಿ ನಿಕಟವೆಂಬುದು ಸ್ಪಷ್ಟ. ಹಾಸ್ಯದ ಈ ಬಗೆಯ ಲಕ್ಷಣವೇ ಅದರ ಮಿತಿಯೂ ಹೌದು. ಏಕೆಂದರೆ, ಒಂದು ಕಾಲದ ಸಮಾಜದ, ಒಂದು ಪ್ರದೇಶದಲ್ಲಿಯ, ಒಂದು ಬಗೆಯ ಜನರ ಓರೆ-ಕೋರೆಗಳು ಆ ದೇಶ-ಕಾಲಗಳ ವ್ಯಾಪ್ತಿಯಲ್ಲಷ್ಟೇ (ಹೆಚ್ಚಾಗಿ) ಆಸ್ವಾದ್ಯವಾಗುತ್ತವೆ. ಇಷ್ಟು ಪ್ರಬಲವಾದ ಮಿತಿಯನ್ನು ಹೊಂದಿದ್ದರೂ ಹಾಸ್ಯವು ತನ್ನ ಪರಿಣಾಮತೀವ್ರತೆಯಿಂದ ರಸತ್ವವನ್ನು ಸಾಧಿಸಿಕೊಂಡಿದೆ, ಕಾಪಾಡಿಕೊಂಡಿದೆ.
ಕಂಟಕಾಂಜಲಿಯನ್ನು ಓದುವುದರಿಂದ ಈ ಎಲ್ಲ ಪ್ರಯೋಜನಗಳೂ ದಕ್ಕುವುದು ದಿಟ! ಎಷ್ಟಾದರೂ ಕಂಟಕಾರ್ಜುನ ಋಷಿ; ಋಷಿಗಳೆಂದಾದರೂ ಸುಳ್ಳಾಡುವರೇ?
ಈ ಕೃತಿಗೆ ಅರ್ಜುನವಾಡ್ಕರ್ ಅವರು ಬರೆದಿರುವ ಪ್ರಸ್ತಾವನೆಯು ತನ್ನಂತೆಯೇ ಒಂದು ಕಾವ್ಯ. ಅಲ್ಲಿ ಬಳಕೆಯಾಗಿರುವ ಸಂಸ್ಕೃತಭಾಷೆಯಂತೂ ಪರಮಸುಂದರ. ಹೆಜ್ಜೆಹೆಜ್ಜೆಗೆ ನುಡಿಗಟ್ಟುಗಳೂ ಸೂಕ್ತಿಗಳೂ ಸಿಗುವ ಈ ಭಾಗದಲ್ಲಿ ಕಂಟಕಾಂಜಲಿಯ ಉದಯಕ್ಕೆ ಕಾರಣವಾದ ಕಲ್ಪಿತಕಥೆಯೊಂದರ ಪ್ರಸ್ತಾವವಿದೆ. ಕಥಾವೃಕ್ಷದ ಮೂಲವು ಶ್ರೀಮದ್ರಾಮಾಯಣ, ಶಾಖೆಗಳು ಭಗವಾನ್ ಭರ್ತೃಹರಿಯ ಸೊಲ್ಲುಗಳು. ಹೇಗೆಂದಿರಾ? ಕೇಳಿ. ವ್ಯಾಧನಿಂದ ಹತವಾದ ಕ್ರೌಂಚಪಕ್ಷಿಯನ್ನು ಕಂಡು ಕನಲಿದ ವಾಲ್ಮೀಕಿಮುನಿಗಳು ಶಾಪವಿತ್ತಾಗ, ಅವರ ‘ತಂತ್ರೀಲಯಸಮನ್ವಿತ’ವಾದ ಮಾತಿನ ರಹಸ್ಯವನ್ನು ವಿವರಿಸಲು ಸಾಕ್ಷಾತ್ ಬ್ರಹ್ಮನೇ ಬಂದದ್ದು ಎಲ್ಲರಿಗೂ ತಿಳಿದಿದೆಯಷ್ಟೆ. ಅದೇರೀತಿ, ಮದ್ಯನಿಷೇಧವನ್ನು ವಿಮರ್ಶಿಸಲು ಭರ್ತೃಹರಿಯ ಪದ್ಯವೊಂದನ್ನು ತಾನು ಬಳಸಿಕೊಂಡು, ಸಂಸ್ಕೃತಜ್ಞರು ಅದನ್ನು ಹೇಗೆ ಸ್ವೀಕರಿಸಿಯಾರು ಎಂದು ಚಿಂತಿಸುತ್ತಿದ್ದಾಗ, ಬ್ರಹ್ಮನೇ ಬಂದು, ಅದರ ಸಾಧುತ್ವವನ್ನು ವಿವರಿಸಿ, ಲೋಕವೃತ್ತವನ್ನೆಲ್ಲ ವರ್ಣಿಸಲು ಆದೇಶಿಸಿದಂತೆ ಕಂಟಕಾರ್ಜುನನಿಗೆ ಕನಸಾಗುತ್ತದೆ! ಆತ (ಕನಸಿನಲ್ಲಿ) ಬರೆದ ಪದ್ಯವಿದು:
ಸಾ ಹೃದ್ಯಾ ಮದಿರಾ ಸ ಶೌಂಡಿಕವೃಷಾ ಸಾರ್ಥಃ ಸ ಮದ್ಯಾರ್ಥಿನಾಂ
ಪಾಶ್ರ್ವೇ ಸಾ ವಿಟಚೇಟಷಂಢಪರಿಷತ್ತಾಂಬೂಲ ತುಂಡ್ಯಶ್ಚತಾಃ |
ತೇ ಕಂಠಪ್ರಣಯಾಶ್ಚ ತೇ ಕಲಕಲಾಸ್ತಾ ಗಾಲಯಸ್ತೇ ಭ್ರಮಾಃ
ಸರ್ವಂ ಯಸ್ಯ ವಶಾದ್ಧರಾಂತರಮಗಾದ್ರಾಜ್ಯಾಯ ತಸ್ಮೈ ನಮಃ ||
(ಆ ಸ್ವಾದುವಾದ ಸುರೆ, ಆ ಹೆಂಡದಂಗಡಿಯ ಒಡೆಯರ ಗಂಡ, ಆ ಕುಡುಕರ ಗುಂಪು, ಅವರನ್ನು ಸುತ್ತುವರಿದ ಜಾರರು, ದಾಸರು, ಷಂಢರು, ಆ ಎಲೆಯಡಿಕೆಯ ಬಟ್ಟಲುಗಳು, ಆ ಲಲ್ಲೆವಾತುಗಳು, ಆ ಪಿಸುಮಾತುಗಳು, ಆ ಬೈಗುಳಗಳು, ಆ ಅಮಲುಗಳು – ಯಾರಿಂದ ಈ ಎಲ್ಲವೂ ಭೂಗತವಾಯಿತೋ ಅಂಥ ಸರ್ಕಾರಕ್ಕೆ ನನ್ನ ನಮನ!)
ಇದು ಭರ್ತೃಹರಿಯ ಪ್ರಸಿದ್ಧವಾದ “ಸಾ ರಮ್ಯಾ ನಗರೀ…” ಎಂಬ ಪದ್ಯದ ಅಣಕು. ಸ್ವಾರಸ್ಯವೆಂದರೆ, ಭರ್ತೃಹರಿಯು ತನ್ನ ಪದ್ಯದಲ್ಲಿ “ಕಾಲದ ಕಾರಣ ಎಲ್ಲವೂ ಈಗ ಕೇವಲ ನೆನಪಾಗಿ ಉಳಿದಿದೆ” ಎಂದರೆ, ನಮ್ಮ ಕವಿ “ಸರ್ಕಾರದ ಕಾರಣ ಎಲ್ಲವೂ ಭೂ-ಗತವಾಯಿತು” ಎಂದಿದ್ದಾರೆ! ಈ ಪದ್ಯದಲ್ಲಿ ಪ್ರಸ್ತಾವಗೊಂಡ ಎಲ್ಲ ಸಂಗತಿಗಳೂ ಭೂಗತವಾದರೂ (underworld) ಬದುಕಿದ್ದವು!
ಸರ್ಕಾರದ ವಿಡಂಬನೆ
ಕಂಟಕಾಂಜಲಿಯ ಕುಹಕವು ಹಲವು ವಿಷಯಗಳನ್ನು ಲಕ್ಷಿಸಿದೆ. ಅವುಗಳಲ್ಲಿ ಪ್ರಮುಖವಾದುದು ಸರ್ಕಾರ. ಈ ಭಾಗದಲ್ಲಿ ರಾಜ್ಯವ್ಯವಸ್ಥೆಯ ಸಕಲಾಯಾಮಗಳೂ ತೀಕ್ಷ್ಣವಿಮರ್ಶೆಗೆ ವಸ್ತುವಾಗಿವೆ. ಆಗಿನ ಕಾಲದಲ್ಲಿ ಉಲ್ಬಣಿಸಿದ್ದ ಲಂಚಕೋರತನ, ಮಂತ್ರಿಗಳ ಠಕ್ಕು, ಸಚಿವರು ಸಾಕಿಕೊಂಡಿದ್ದ ಗೂಂಡಾಗಳ ಅಟಾಟೋಪ, ನಮ್ಮ ದೇಶದ ಸರಕುಗಳನ್ನು ಪರದೇಶಕ್ಕೆ ಸಾಗಿಸುವಲ್ಲಿಯ ತಿಳಿಗೇಡಿತನವೇ ಮುಂತಾದ ರಾಜ್ಯೋದ್ಯಮದ ಎಲ್ಲ ಕರಾಳಕಥೆಗಳೂ ಹೊರಬಂದಿವೆ. ಮೊದಲನೆಯ ಪದ್ಯವೇ ಸೊಗಸಾಗಿದೆ:
ಆಹೃತ್ಯ ದ್ರವಿಣಂ ಯಥಾವಿಧಿ ಕರೈಸ್ತದ್ಯೋಜನಾಗ್ನೌ ಕ್ಷಿಪನ್
ಅನ್ನಾನಿ ಕ್ರಶಯನ್ ಖಲಾಂಶ್ಚ ಬಲಯನ್ ಗೋಲೀತತೀಶ್ಚಾಲಯನ್ |
ಇತ್ಥಂ ಪಂಚಮುಖಃ ಸಮಕ್ಷಮನಿಶಂ ಲೋಕಾನಿಮಾನ್ ಸಂಹರನ್
ಸರ್ವಸ್ಮಾತ್ಪರತೋ ಗಲಂ ಧರತು ಮೇ ಶ್ರೀಸರ್ವಕಾರೋ ಹರಃ ||
(ಪ್ರಜೆಗಳ ಸಂಪತ್ತನ್ನೆಲ್ಲ ಹಲವು ತೆರದ ತೆರಿಗೆಗಳಿಂದ ದೋಚಿ, ಅದನ್ನು ದುರ್ಯೋಜನೆಗಳ ಬೆಂಕಿಯಲ್ಲಿ ಸುಟ್ಟು, ಆಹಾರಕ್ಕೆ ತತ್ವಾರ ತಂದು, ದುಷ್ಟರನ್ನು ಬೆಂಬಲಿಸಿ, ಕಂಡಕಂಡವರನ್ನು ಕೊಲ್ಲುತ್ತ ನಮ್ಮ ಕಣ್ಣೆದುರಿಗೇ ಲೋಕವನ್ನು ನಾಶಗೊಳಿಸುತ್ತಿರುವ ಹರರೂಪಿಯಾದ ಸರ್ಕಾರವು ನನ್ನ ಕುತ್ತಿಗೆಯನ್ನು [ಎಲ್ಲರನ್ನೂ ಸದೆಬಡಿದ ಬಳಿಕ] ಕಟ್ಟಕಡೆಗೆ ಹಿಡಿಯಲಿ.)
ಇದಲ್ಲವೇ ಪ್ರಾರ್ಥನೆಯೆಂದರೆ! ಸರ್ಕಾರದ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ; ಆದುದರಿಂದ ನಮ್ಮ ಕವಿ ಮಾಡಬಹುದಾದ ಒಂದೇ ಕೆಲಸ, ತನ್ನ ಸರದಿ ಕಟ್ಟಕಡೆಗೆ ಬರಲೆಂದು ಕೇಳಿಕೊಳ್ಳುವುದು! ಆಗಿನ ಸರ್ಕಾರದ ಐದು ಪ್ರಮುಖ ದುಷ್ಕೃತ್ಯಗಳನ್ನು ಪ್ರಸ್ತಾವಿಸಿ ಆ ಮೂಲಕ ಅದನ್ನು ಪಂಚಮುಖನಾದ ಶಿವನೊಡನೆ ಹೋಲಿಸಿರುವುದು ಚೆಲುವಾಗಿದೆ. ಶಿವನು ಲಯಕರ್ತನಷ್ಟೆ!
ಸರ್ಕಾರವು ಹೀಗಿದ್ದರೆ ಲಂಚದ ಹಾವಳಿ ಹೇಳತೀರದಾಗುತ್ತದೆ. ಮುಂದಿನ ಪದ್ಯವು ಅದನ್ನು ಅನುಪಮವಾಗಿ ವರ್ಣಿಸಿದೆ:
ಊಧ್ರ್ವಂ ಮೂಲಮಧಶ್ಚ ಯಸ್ಯ ವಿತತಾಃ ಶಾಖಾಃ ಸುವರ್ಣಚ್ಛದಃ
ಕಸ್ಯೋತ್ಕೋಚತರುರ್ಜಗತ್ಯವಿದಿತೋ ಯದ್ಯಪ್ಯರೂಪೋsಗುಣಃ |
ಛೇತ್ತಾ ಕಶ್ಚಿದುದೇತಿ ಸಂಸೃತಿತರೋಶ್ಛೇತ್ತಾsಸ್ಯ ವೃಕ್ಷಸ್ಯ ತು
ನಾಭೂನ್ನಾಸ್ತಿ ನ ವಾ ಭವಿಷ್ಯತಿ ಪುಮಾನಶ್ವತ್ಥ ಏಷೋsಕ್ಷಯಃ ||
(ಲಂಚವೆಂಬುದು ಅಕ್ಷಯವಾದ ಅಶ್ವತ್ಥವೃಕ್ಷವೇ ಸರಿ. ಅದರಲ್ಲಿ ರೂಪವೂ ಗುಣವೂ ಇಲ್ಲದಿರಬಹುದು, ಆದರೆ ಅದನ್ನು ಅರಿಯದ ಜನರೇ ಜಗತ್ತಿನಲ್ಲಿಲ್ಲ. ಸಂಸಾರವೃಕ್ಷವನ್ನು ಕಡಿದುಹಾಕುವವರಾದರೂ ಹುಟ್ಟಿಯಾರು, ಆದರೆ “ತಲೆಯ ಮೇಗಡೆ ಬೇರು, ಕೆಳಗೆ ಕೊಂಬೆಲೆ ಚಿಗುರು” ಎಂಬಂತಿರುವ ಲಂಚಮರವನ್ನು ಉರುಳಿಸಬಲ್ಲವರು ಇನ್ನೂ ಹುಟ್ಟಿಲ್ಲ, ಮುಂದೆ ಹುಟ್ಟುವುದೂ ಇಲ್ಲ.)
ಹೀಗೆ ಲಂಚಹೊಡೆಯುವವರ ಪೈಕಿ ಮಂತ್ರಿಗಳೇ ಮೊದಲಿಗರು. ಅವರು ದೋಚುವ ಬಗೆಯನ್ನು ಬಗೆಗಣ್ಣಿಗೆ ತೆರೆದಿಡುತ್ತದೆ, ಮುಂದಿನ ಪದ್ಯ:
ಮಂತ್ರೀ ತಸ್ಕರಮಾಹ ಕೋsಪಿ ‘ಶಠರೇ ಲೋಕೈಃ ಶ್ರಮೇಣಾರ್ಜಿತಂ
ವಿತ್ತಂ ಭಿತ್ತಿವಿಭೇದನೇನ ಹರಸೇ ಧಿಕ್ತ್ವಾಂಜನದ್ರೋಹಿಣಮ್’ |
ಪೂರ್ವಂ ಪ್ರಾಹ ಪರಃ ‘ಕಥಂ ಜನಧನಂ ತ್ವಂ ಭಿತ್ತಿಭೇದಾದ್ವಿನಾ
ಗೃಹ್ಣೀಷೇ ಚ, ನ ದಂಡ್ಯಸೇ ಚ? ಭಗವನ್ ಶಿಷ್ಯೋsಸ್ಮಿ ತೇ ಶಾಧಿ ಮಾಮ್’ ||
(ಮಂತ್ರಿಯೊಬ್ಬನು ಕಳ್ಳನಿಗೆ ಹೀಗೆಂದ: ‘ಅಯ್ಯೋ ನೀಚ, ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಗೋಡೆಗಳಿಗೆ ಕನ್ನ ಹಾಕಿ ದೋಚುವೆಯಲ್ಲಾ, ನಿನಗೆ ಧಿಕ್ಕಾರ!’ ಇದನ್ನು ಕೇಳಿದ ಕಳ್ಳ ಹೇಳಿದ: ‘ನೀನು ಅದೇ ಜನರ ಹಣವನ್ನು ಕನ್ನ ಹಾಕದೆಯೇ ಕದಿಯುವೆ. ಹಾಗೆ ಮಾಡಿಯೂ ದಂಡನೆಗೆ ಪಾತ್ರನಾಗುವುದಿಲ್ಲ. ಆಚಾರ್ಯರೇ, ನಾನು ನಿಮ್ಮ ಶಿಷ್ಯ; ನನಗೆ ದಯೆತೋರಿ!’)
ಇಂಥ ಮಂತ್ರಿಗಳ ಬೂಟಾಟಿಕೆಯನ್ನೂ ಸೋಗಲಾಡಿತನವನ್ನೂ ಮುಂದಿನ ಪದ್ಯ ಸೊಗಸಾಗಿ ಬಣ್ಣಿಸಿದೆ. ಗತಿಸಿದ ನಾಯಕನನ್ನು ಸ್ಮರಿಸುವ ಸೋಗಿನಲ್ಲಿ ತನ್ನ ಕಾರ್ಯವನ್ನು ಸಾಧಿಸಿಕೊಳ್ಳುತ್ತಿರುವ ಒಬ್ಬ ಮಂತ್ರಿಯ ಮಾತಿದು. ಆವರಣದಲ್ಲಿರುವ ವಾಕ್ಯಗಳು ಆತ ಮನಸ್ಸಿನಲ್ಲಿ ಅಂದುಕೊಂಡಂಥವು:
ಹಾ ನೇತಃ ಕ್ವ ಗತೋsಸಿ? (ನಾಸ್ತಿ ಮುಕುಟಸ್ಯಾರ್ಹೋ ಮದನ್ಯಃ ಪುಮಾನ್)
ದೀರ್ಣಂ ಮೇ ಹೃದಯಂ ಶುಚಾ (ಭವತಿಚೇತ್ ಸ್ಪರ್ಧಾರಣಃ ಕಾ ಕ್ಷತಿಃ?) |
ಮಾ ನಃ ಸ್ತಾತ್ತವ ವಿಸ್ಮೃತಿಃ (ಯದಿ ಪದಂಕುರ್ಯಾಂ ವಿಪಕ್ಷೋರಸಿ)
ಶಾಂತಿಂ ಪ್ರಾಪ್ನುಹಿ ಶಾಶ್ವತೀಂ (ಜನಮತಂ?) ತಸ್ಮೈ ನಿವಾಪಾಂಜಲಿಃ ||
(ಹಾ! ಎಲ್ಲಿ ಹೋದಿರಿ ನಾಯಕರೇ? [ಪದವಿಗೇರಲು ನನ್ನನ್ನು ಬಿಟ್ಟು ಬೇರಾರುತಾನೆ ಇರುವರು?] ನನ್ನ ಹೃದಯವು ಶೋಕದಿಂದ ಸೀಳಿಹೋಗಿದೆ! [ಚುನಾವಣೆಯು ರಣರಂಗವಾದರೆ ನನ್ನದೇನು ಹೋಗುತ್ತದೆ?] ನಾವೆಂದೂ ನಿಮ್ಮನ್ನು ಮರೆಯುವುದಿಲ್ಲ [ವಿರೋಧಪಕ್ಷದವರ ಎದೆಯ ಮೇಲೆ ಕಾಲನ್ನು ಇಟ್ಟೇಬಿಡಲೇ?] ನೀವು ಶಾಶ್ವತಶಾಂತಿಯನ್ನು ಪಡೆಯಿರಿ [ಜನರ ತೀರ್ಪು ಏನಾಗುವುದೋ?] ಇಗೋ, ಎಳ್ಳು-ನೀರು!)
ಈ ಪದ್ಯವು ತನ್ನ ಕಟುವಾದ ಕಟಕಿಯಿಂದ ಮಾತ್ರವಲ್ಲದೆ ರಚನಾವೈಚಿತ್ರ್ಯದಿಂದಲೂ ವಿಶಿಷ್ಟವೆನಿಸಿದೆ.
ಮಂತ್ರಿಗಳು ಇಷ್ಟು ಸ್ವಾರ್ಥಿಗಳೂ ಠಕ್ಕಿನವರೂ ಆದಾಗ ನಮ್ಮ ದೇಶದ ಸರಕುಗಳನ್ನು ಪರದೇಶಕ್ಕೆ ಸಾಗಿಸುವಲ್ಲಿ ಏನೆಲ್ಲ ಅನಾಹುತಗಳು ಆಗುವುವೆಂದು ಹೇಳಲೇಬೇಕಿಲ್ಲ. ಅಂಥ ಪರಿಸ್ಥಿತಿಯಲ್ಲಿ ಪ್ರಜೆಗಳ ದುಃಸ್ಥಿತಿ ಹೀಗಿರುತ್ತದೆ:
‘ಆಮ್ರಾಣಿ ಕ್ವ ಗತಾನಿ?’ ‘ಅಮೇರಿಕಭುವಂ’ ‘ಕಾಜೂಗರಾಃ?’ ‘ಕ್ವಾನ್ಯತೋ?’
‘ದುರ್ದರ್ಶಂ ಕದಲೀಫಲಂ’ ‘ತದಖಿಲಂ ರೂಸಾಯ ನಿಷ್ಪ್ರೇಷಿತಮ್’ |
‘ಪೇಯೇsಸ್ತ್ಯದ್ಯ ನ ಶರ್ಕರಾ’ ‘ನ ವಿದಿತಂ? ಸಾದ್ಯ ಪ್ರಯಾತಾ ದಿವಂ’
‘ತನ್ನೋsಪಿ ಪ್ರಹಿಣೋತು ಶಾಸನಪದಂ ಯತ್ರಾಸ್ತಿ ಸರ್ವಂಗತಮ್’ ||
(‘ಮಾವುಗಳೆಲ್ಲಿ?’ ‘ಅವನ್ನು ಅಮೆರಿಕೆಗೆ ಕಳುಹಿಸಿ ಆಯಿತು.’ ‘ಗೋಡಂಬಿ?’ ‘ಅದು ಇನ್ನೆಲ್ಲಿ ತಾನೆ ಹೋಗಲು ಸಾಧ್ಯ?’ ‘ಈ ನಡುವೆ ಬಾಳೆಹಣ್ಣು
ಕಣ್ಮರೆಯಾಗಿದೆ!’ ‘ಅದಷ್ಟೂ ರಷಿಯಾದ ಪಾಲಾಗಿದೆ.’ ‘ನಾವು ಕುಡಿಯುತ್ತಿರುವ ಪಾನೀಯದಲ್ಲಿ ಸಕ್ಕರೆಯೇ ಇಲ್ಲವಲ್ಲ!’ ‘ಅಷ್ಟೂ ಗೊತ್ತಿಲ್ಲವೇ? ಅದು ಈ ಹೊತ್ತಷ್ಟೇ ಸ್ವರ್ಗ ಸೇರಿತು.’ ‘ಹಾಗಿದ್ದರೆ ಸರ್ಕಾರವು ಇವೆಲ್ಲವೂ ಎಲ್ಲಿ ಹೋದವೋ ಅಲ್ಲಿಗೇ ನಮ್ಮನ್ನು ಕಳಿಸಲಿ!’)
ಇಷ್ಟೆಲ್ಲ ನಯವಂಚನೆ ಮಾಡಬೇಕಾದರೆ ಮಂತ್ರಿಗಳಿಗೆ ಪುಂಡ-ಪೆÇೀಕರಿಗಳ ಬೆಂಬಲ ಅತ್ಯವಶ್ಯ. ಹಾಗಾಗಿ ಅವರನ್ನಿವರು ಚೆನ್ನಾಗಿ ಗಮನಿಸಿಕೊಳ್ಳುತ್ತಾರೆ. ಆ ಪೋಕರಿಗಳೆಂಥವರು? ನೋಡಿ:
ಮಂತ್ರೀ ರಾಷ್ಟ್ರಸಭಾ ಚ ಯಸ್ಯ ಪಿತರಾವಾರಕ್ಷಕಾ ಭ್ರಾತರಃ
ಕಾರಾಸೌ ಭಗಿನೀ ಸುರಾ ಚ ಗೃಹಿಣೀ ಲಕ್ಷ್ಮೀಃ ಶುಭಾಂಗೀ ಸುತಾ |
ನ್ಯಾಯೇಶಃ ಶ್ವಶುರಶ್ಚ ಯಸ್ಯ ವಿಧಿವಿಚ್ಛ್ಯಾಲಃ ಕುಠಾರಃ ಸಖಾ
ತಸ್ಯಾಸ್ಯಾಮವನೌ ನ ಹಿ ತ್ರಿಭುವನೇ ಗುಂಡಸ್ಯ ಕಸ್ಮಾದ್ಭಯಮ್ ||
(ಈ ಜಗತ್ತಿನಲ್ಲಿ-ಅಲ್ಲಲ್ಲ, ಇಡಿಯ ಮೂರು ಲೋಕಗಳಲ್ಲಿ-ಪೋಕರಿಯಾದವನು ಯಾರಿಗೂ ಹೆದರುವುದಿಲ್ಲ. ಏಕೆಂದರೆ, ಮಂತ್ರಿ ಮತ್ತು ದೇಶಸಭೆಗಳೇ ಅವನ ತಂದೆ-ತಾಯಿ, ಪೊಲೀಸರೇ ಸೋದರರು, ಕಾರಾಗೃಹವೇ ಸೋದರಿ, ಹೆಂಡವೇ ಹೆಂಡತಿ, ಹಣವೇ ಹೆಣ್ಣುಮಗಳು, ನ್ಯಾಯಾಧೀಶನೇ ಮಾವ, ವಕೀಲರೇ ಭಾವಮೈದುನರು, ಮಚ್ಚು-ಲಾಂಗುಗಳೇ ಸ್ನೇಹಿತರು.)
ಇಂಥ (ಅ)ವ್ಯವಸ್ಥೆಯಲ್ಲಿ ಪ್ರಜೆಗಳಾದರೂ ಏನು ಕೇಳಿಕೊಳ್ಳಬೇಕು? ಕಂಟಕಾರ್ಜುನ ಹೇಳುತ್ತಾನೆ:
ಶಂ ನಃ ಸಂತ್ವಿಹ ಮಂತ್ರಿಣಃ ಶಮಪಿ ತದ್ದ್ವಾರರಕ್ಷಿಣಃ ಸಂತು ನಃ
ಶಂ ಗುಂಡಾ ಭಿಷಜಶ್ಚ ಶಂ ಧನಹರಾಃ ಶಂ ಶಂ ಚ ನೋ ರಕ್ಷಕಾಃ |
ಶಂ ನಃ ಸಾ ಪುರಪಾಲಿಕಾ ಶಮಪಿ ನಃ ಕೃಷ್ಣಾಪಣಾಧೀಶ್ವರಾಃ
ಶಂ ನಃ ಕರ್ಮಕರಾ ನಮೋsಸ್ತು ವ ಇದಂ ಮಾ ನೋ ವಧಿಷ್ಟೇಶ್ವರಾಃ ||
(ಮಂತ್ರಿಗಳು ನಮಗೆ ಒಳಿತು ಮಾಡಲಿ; ಅವರ ದ್ವಾರಪಾಲಕರು ನಮಗೆ ಸುಮುಖರಾಗಿರಲಿ. ಗೂಂಡಾಗಳು, ವೈದ್ಯರು, ಕಳ್ಳರು, ಪೊಲೀಸರು, ನಗರಪಾಲಿಕೆಗಳು, ಕಾಳಸಂತೆಯ ಮಾಲೀಕರು, ಸೇವಕರು – ಎಲ್ಲರೂ ನಮಗೆ ಒಳಿತು ಮಾಡಲಿ. ನಿಮಗೆಲ್ಲಾ ನಮ್ಮ ನಮಸ್ಕಾರ. ದಯವಿಟ್ಟು ನಮ್ಮನ್ನು ಕೊಲ್ಲಬೇಡಿ!)
“ಶಂ ನೋ ಮಿತ್ರಃ ಶಂ ವರುಣಃ” ಎಂಬ ಶಾಂತಿಮಂತ್ರವನ್ನು ಇದಕ್ಕಿಂತಲೂ ಪರಿಣಾಮಕರವಾಗಿ ಪರಿವರ್ತಿಸಬಹುದೇ?
ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವಿದೆ. ಅರ್ಜುನವಾಡ್ಕರ್ ಅವರು ದೇಶಭಾಷೆಗಳಲ್ಲಿ ಪ್ರಚುರವಾಗಿರುವ ಪದಗಳನ್ನು ಯಥಾವತ್ತಾಗಿ ಅಥವಾ ಕೊಂಚ ಸವರಣೆಯೊಡನೆ ಸಂಸ್ಕೃತದಲ್ಲಿ ಬಳಸಲು ಹಿಂದೆಗೆದವರಲ್ಲ (ಉದಾ: ಗೂಂಡಾ, ಗುಂಡ, ಚಹಾ, ಭೇಲಪುರಿ). ಅವರು ಎಷ್ಟೋಬಾರಿ ಇಂಗ್ಲಿಷ್ ಪದಗಳನ್ನೂ ಬಳಸಿಕೊಂಡಿದ್ದಾರೆ (ಉದಾ: ರೇಲ್ವೆ, ಕಾಲೇಜ್, ಕ್ಯಾಂಟೀನ್, ಸಿನೆಮಾ). ವ್ಯಾಕರಣಶಾಸ್ತ್ರದಲ್ಲಿ ಅಪಾರ ಆಸಕ್ತಿಯನ್ನೂ ವಿದ್ವತ್ತತೆಯನ್ನೂ ಹೊಂದಿದ್ದ ಅರ್ಜುನವಾಡ್ಕರ್ ಅವರ ಈ ನಿಲವು ಪರಾಮರ್ಶಯೋಗ್ಯವಾಗಿದೆ. ಇದನ್ನವರು ತಮ್ಮ ಪ್ರಸ್ತಾವನೆಯಲ್ಲಿ ಚರ್ಚಿಸಿಯೂ ಇದ್ದಾರೆ. ಒಟ್ಟಿನಲ್ಲಿ ಕಂಟಕಾಂಜಲಿಯಂಥ ಅಣಕುಗಬ್ಬದಲ್ಲಿ ಈ ಬಗೆಯ ಪದಗಳ ಬಳಕೆ ಸ್ವಾಗತಾರ್ಹವೇ.
ಹಣಹಿಡುಕರ ವಿಡಂಬನೆ
‘ಹಣವಿಲ್ಲದೆ ಹೆಣ ಸುಡುವುದೂ ಕಷ್ಟ’ ಎಂದು ನಮಗೆ ಹರಿಶ್ಚಂದ್ರನ ಕಾಲದಿಂದ ತಿಳಿದಿದೆ. ಈಗಂತೂ ನಮ್ಮ ಸಮಾಜ ನಿಂತಿರುವುದೇ ಹಣದ ಮೇಲೆ. ಹೀಗಿರಲು ಜೀವನದ ಎಲ್ಲ ಆಯಾಮಗಳಲ್ಲಿಯೂ ಹಣದ ಪ್ರಭಾವ ಕಂಡುಬರುವುದು ಅಚ್ಚರಿಯಲ್ಲ. ಮುಂದಿನ ಪದ್ಯದಲ್ಲಿ ಇಂಥ ಒಂದು ಸಂಗತಿಯತ್ತ ಕವಿಯು ನಮ್ಮ ಗಮನವನ್ನು ಸೆಳೆಯುತ್ತಾರೆ:
ಅಕ್ಷ್ಣೈಕೇನ ವಿಲೋಕನೇ ದಶ ತಥಾ ದ್ವಾಭ್ಯಾಂಕೃತೇ ವಿಂಶತಿಃ
ಷಷ್ಟಿರ್ಗಂಧವಿಮರ್ದನೇ ಸ್ರಜಉರಸ್ಯಾಧಾಪನೇದ್ವೇ ಶತೇ |
ಶುಲ್ಕಂ ರೂಪ್ಯಸಹಸ್ರಮರ್ಧಘಟಿಕಾ- ಭೋಗಾರ್ಥಮಿತ್ಯಾದಿಭಿ-
ರ್ಧೂರ್ತೈಃ ಸಂಪ್ರತಿ ಕುಟ್ಟನೀವ್ಯವಸಿತೈರ್ದೇವೋsಪಿ ವೇಶ್ಯೀಕೃತಃ ||
(ಒಂದು ಕಣ್ಣಿನಿಂದ ನೋಡುವುದಕ್ಕೆ ಹತ್ತುರೂಪಾಯಿ; ಎರಡು ಕಣ್ಣುಗಳಿಂದ ನೋಡುವುದಕ್ಕೆ ಇಪ್ಪತ್ತು. ಅನುಲೇಪನದ ಸೇವೆಗೆ ಅರವತ್ತುರೂಪಾಯಿ; ಹೂವಿನ ಹಾರ ಸಮರ್ಪಿಸುವುದಕ್ಕೆ ಇನ್ನೂರು. ಅರ್ಧಘಂಟೆಯ ಸೇವೆಗೆ ಸಾವಿರರೂಪಾಯಿ – ಇವೇ ಮುಂತಾದ ವ್ಯವಹಾರದ ಮಾತುಗಳಿಂದ ನೀಚರು ಭಗವಂತನನ್ನು ವೇಶ್ಯೆಯಾಗಿ ಮಾಡಿಬಿಟ್ಟಿದ್ದಾರೆ!)
ಇಲ್ಲಿಯ ಮೊನಚು ಯಾವ ನಾರಾಚಕ್ಕೂ ಇಲ್ಲ! ಸಮಾಜಜೀವನದ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆಪಾತತಃ ಆಪ್ಯಾಯನವೆನಿಸದ ಇಂಥ ಕಟೂಕ್ತಿಗಳು ನೆರವಾಗುತ್ತವೆ.
ಹಣವು ಹೀಗೆ ಎಲ್ಲೆಲ್ಲೂ ತಾಂಡವಿಸುತ್ತಿರುವಾಗ ಅದಕ್ಕೆ ಹೋಲಿಕೆಯಾಗಿ ಕೊಡಲು ಬ್ರಹ್ಮವಸ್ತುವನ್ನು ಬಿಟ್ಟರೆ ಬೇರೆ ಯಾವುದೂ ಸಮಂಜಸವಾಗುವುದಿಲ್ಲ. ಈ ಕಲ್ಪನೆಯನ್ನೇ ಬಳಸಿಕೊಂಡು ಅರ್ಜುನವಾಡ್ಕರ್ ಅವರು ಭರ್ತೃಹರಿಯ ಅತ್ಯುಜ್ಜ್ವಲ ಪದ್ಯಗಳಲ್ಲಿ ಒಂದಾದ “ಮಾತರ್ಮೇದಿನಿ ತಾತ ಮಾರುತ…” ಎಂಬುದನ್ನು ಅದ್ಭುತವಾಗಿ ಅಣಕಿಸಿದ್ದಾರೆ:
ಮಾತರ್ಮಾನವತೇ ಪಿತಃ ಪಶುಪತೇ ಭ್ರಾತಃ ಸ್ವಧರ್ಮ ಪ್ರಿಯೇ
ಲಜ್ಜೇ ಗೇಹಿನಿ ಪುತ್ರಧೈರ್ಯದುಹಿತರ್ಭೂತಾನುಕಂಪೇಕ್ಷಮೇ |
ಶಾಸ್ತ್ರಾದೇಶ ಸಖೇ ನಮೋsಸ್ತು ಸಕಲಾನಾಮಂತ್ರಯೇ ಸ್ವಸ್ತಿ ವೋ
ವ್ಯುಚ್ಛಿನ್ನಾಖಿಲಬಂಧನಃ ಪರಮಿತೋ ಲೀನೇ ಧನಬ್ರಹ್ಮಣಿ ||
(ಅಮ್ಮಾ ಮಾನವತೆಯೇ! ಅಪ್ಪಾ ಪಶುಪತಿಯೇ! ಅಣ್ಣಾ ಸ್ವಧರ್ಮವೇ! ಮಡದಿ ನಾಚಿಕೆಯೇ! ಪುತ್ರಧೈರ್ಯವೇ! ಪುತ್ರಿ ಅನುಕಂಪೆಯೇ! ಕ್ಷಮೆಯೇ! ಗೆಳೆಯಾ ಶಾಸ್ತ್ರೋಪದೇಶವೇ! – ನಿಮಗೆಲ್ಲರಿಗೂ ಒಳ್ಳೆಯದಾಗಲಿ. ನಾನು ನಿಮಗೆಲ್ಲ ಕೊನೆಯ ಬಾರಿ ನಮಿಸಿ ತೆರಳುತ್ತಿದ್ದೇನೆ. ಎಲ್ಲ ಬಂಧನಗಳನ್ನೂ ಕಡಿದುಕೊಂಡು ಇದೀಗ ಧನಬ್ರಹ್ಮದಲ್ಲಿ ಲೀನವಾಗಲಿರುವೆ!)
ಇಲ್ಲಿರುವ ಸೂಚನೆ ಸ್ಪಷ್ಟ: ಹುಚ್ಚುಹಿಡಿದಂತೆ ಹಣದ ಹಿಂದೆ ಓಡಲು ಮೊದಲು ಮಾನವತೆ, ಸ್ವಧರ್ಮ, ನಾಚಿಕೆ, ಅನುಕಂಪ, ದಯೆ, ಶಾಸ್ತ್ರಪಾಲನೆ ಮುಂತಾದ ಎಲ್ಲ ಸುಗುಣಗಳನ್ನೂ ಬಿಟ್ಟುಬಿಡಬೇಕು.
ವಿದ್ಯೆಯ ವಿಡಂಬನೆ
ಸ್ಕೂಲು-ಕಾಲೇಜುಗಳಲ್ಲಿ ಅನುದಿನವೂ ಕಂಡುಬರುವ ದೃಶ್ಯವನ್ನು ಮುಂದಿನ ಪದ್ಯರಮ್ಯವಾಗಿ ಚಿತ್ರಿಸಿದೆ:
ವರ್ಗೇ ಕರ್ಗಜಸಾಯಕೈಃ ಪ್ರಹರಣಂ ಕನ್ಯಾಜನತ್ರಾಸನಂ
ತನ್ನಿರ್ವಾಚನಯುದ್ಧಕೌಶಲಮಪಿ ಕ್ರೀಡಾಂಗಣೇ ಹಿಂಡನಮ್ |
ಕ್ಯಾಂಟೀನೇ ವಸತಿಃ ಸಿನೇಗೃಹರತಿಸ್ತದ್ದೀಪಿಕಾಚರ್ವಣಂ
ಕ್ಲಾಸೋಪಾಸನಮಂತತೋ ವಿಫಲತಾ ವಿದ್ಯಾರ್ಥಿರಾಮಾಯಣಮ್ ||
(ಕ್ಲಾಸಿನಲ್ಲಿ ಕಾಗದದ ಬಾಣಗಳಿಂದ ಹೊಡೆದಾಡುವುದು, ಹೆಣ್ಣುಮಕ್ಕಳನ್ನು ಚುಡಾಯಿಸುವುದು, ಚುನಾವಣೆಯ ಚಕಮಕಿಯಲ್ಲಿ ಸೆಣಸುವುದು, ಮೈದಾನದಲ್ಲಿ ಅಲೆದಾಡುವುದು, ಕ್ಯಾಂಟೀನಿನಲ್ಲಿ ಠಿಕಾಣಿ ಊರುವುದು, ಸಿನಿಮಾ ಟಾಕೀಸುಗಳತ್ತ ಠಳಾಯಿಸುವುದು, ಗೈಡುಗಳನ್ನು ಓದುವುದು, ಕೊನೆಗೊಮ್ಮೆ ಪಾಠಕ್ಕೆ ಹಾಜರಾಗಿ ಪರೀಕ್ಷೆಯಲ್ಲಿ ವಿಫಲವಾಗುವುದು – ಇದಿಷ್ಟೇ ವಿದ್ಯಾರ್ಥಿರಾಮಾಯಣ.)
ಇದು ಪೋಲಿಹುಡುಗರ ಪಾಡಾಯಿತು. ಎಲ್ಲರೂ ಹೀಗಿರುವುದಿಲ್ಲವಲ್ಲ? ಉತ್ತಮ ವಿದ್ಯಾರ್ಥಿಗಳ ಜಾಡೇನು ಎಂದು ಕೇಳುವಿರಾ? ಅಂಥವರನ್ನು ಅಧ್ಯಾಪಕರು ಹೇಗೆ ನಡೆಸಿಕೊಳ್ಳುವರೆಂದು ನೀವೇ ನೋಡಿ:
ಶುದ್ಧಂ ವತ್ಸತವೋತ್ತರಂ ನಯನಯೋಃ ಪ್ರೀತಿಂ ಕರೋತ್ಯಕ್ಷರಂ
ಪೂರ್ಣಂ ಚಾಪಿ ವಿವೇಚನಂ ನವಮಪಿ ಕ್ವಾಪ್ಯಸ್ತಿ ಸಂಯೋಜನಮ್ |
ಏತಾವದ್ಧಿ ಪುರಾ ಮಯಾಪಿ ಲಿಖಿತಂ ನಾಸೀತ್ಪರೀಕ್ಷಾರ್ಥಿನಾ
ಸಿದ್ಧಿರ್ಯಾ ಹಿ ಮಯಾರ್ಜಿತಾತದಧಿಕಾಂ ಮತ್ತಃ ಕಥಂ ಲಪ್ಸ್ಯಸೇ? ||
(“ಮಗೂ, ನೀನು ಬರೆದಿರುವ ಉತ್ತರ ಉತ್ತಮವಾಗಿದೆ. ನಿನ್ನ ಕೈಬರೆಹವನ್ನು ಓದುವುದೇ ಕಣ್ಣಿಗೆ ಹಬ್ಬ. ವಿಷಯವನ್ನು ಎಲ್ಲ ಆಯಾಮಗಳಿಂದಲೂ ವಿವೇಚಿಸಿದ್ದೀಯ; ಅಲ್ಲಲ್ಲಿ ಹೊಸ ಹೊಳಹುಗಳೂ ಇವೆ. ವಿದ್ಯಾರ್ಥಿಯಾಗಿದ್ದಾಗ ನಾನೂ ಇಷ್ಟು ಸೊಗಸಾದ ಉತ್ತರ ಬರೆದಿರಲಿಲ್ಲ. ಆದರೆ ಆಗ ನಾನು ಪಡೆದ ಅಂಕಗಳಿಗಿಂತ ಹೆಚ್ಚನ್ನು ನಿನಗೆ ಹೇಗೆ ಕೊಡಲಿ?”)
ಇಂಥ ಅಧ್ಯಾಪಕರಿದ್ದರೆ ಉತ್ಕೃಷ್ಟತೆಗೆ ಎಲ್ಲಿಂದ ಬೆಲೆ ಬರುವುದು? ನಮ್ಮ ಸಮಾಜದಲ್ಲಿ ಅಧಮತೆಗೇ ಆದ್ಯತೆ ಸಂದಿರುವುದಕ್ಕೆ ಇಂಥವರೂ ಒಂದು ಕಾರಣ.
ಸಾಂಪ್ರದಾಯಿಕರ ಸ್ಥಿತಿ
ಸಂಪ್ರದಾಯವನ್ನು ಅನುಸರಿಸುವವರು ಆಧುನಿಕ ಜಗತ್ತಿನಲ್ಲಿ ಹಲವು ಬಗೆಯ ಕ್ಲೇಶಗಳನ್ನು ಅನುಭವಿಸಬೇಕಾಗುತ್ತದೆ. ಇದನ್ನು ವಿವರಿಸಲು ಶಿಖಾಧಾರಿಯಾದ ಹುಡುಗನೊಬ್ಬ ಅನುಭವಿಸುವ ಅವಮಾನವನ್ನು ಕವಿ ವರ್ಣಿಸಿದ್ದಾರೆ:
‘ವತ್ಸ ಕ್ರಂದಸಿ?’ ‘ತಾಡಿತೋsಸ್ಮಿ ವಿಶಿಖೈರ್ಮಿತ್ರೈಃ ಶಿಖಾವಾನಹಂ’
‘ಜ್ಞಾಪ್ಯಂತಾಂ ಗುರವೋ’ ‘ನ ತೇsಪಿ ಶಿಖಿನಾಮಾಕರ್ಣಯಂತಿ ಧ್ವನಿಮ್’ |
‘ತತ್ತಾತಂ ವ್ರಜ’ ‘ಹಾ ಹತೋsಸ್ಮಿ ಕುರುತೇ ನಾತ್ಮೀಯತಾಂ ಮಯ್ಯಸೌ’
‘ಮಾತಾತೇsಸ್ತಿ’ ‘ಪತಿವ್ರತಾ ಕಿಮಬಲಾ ಸಾ ತಾತಮುಲ್ಲಂಘಯೇತ್?’ ||
(“ಮಗೂ, ಏಕೆ ಅಳುತ್ತಿರುವೆ?” “ನಾನು ಶಿಖೆ ಬಿಟ್ಟಿರುವುದರಿಂದ ಸ್ನೇಹಿತರು ನನ್ನನ್ನು ಹಿಡಿದು ಬಡಿದರು.” “ಇದನ್ನು ಈ ಕೂಡಲೆ ಗುರುಗಳಿಗೆ ತಿಳಿಸು!” “ಶಿಖೆ ಬಿಟ್ಟ ನಮ್ಮಂಥವರ ಮಾತನ್ನು ಅವರೂ ಕೇಳುವುದಿಲ್ಲ.” “ಹಾಗಿದ್ದರೆ ಅಪ್ಪನಿಗೆ ಹೇಳು.” “ಅಯ್ಯೋ, ಅಪ್ಪ ನನ್ನನ್ನು ಪ್ರೀತಿಯಿಂದ ಕಾಣುವುದೇ ಇಲ್ಲ!” “ನಿಮ್ಮ ತಾಯಿ ಇರುವರೋ?” “ಅಶಕ್ತಳೂ ಪತಿವ್ರತೆಯೂ ಆದ ಆಕೆ ತಂದೆಯ ಮಾತನ್ನು ಹೇಗೆ ತಾನೆ ಮೀರುತ್ತಾಳೆ?”)
ಧಾರ್ಮಿಕ ಆಚಾರಗಳನ್ನು ಗೇಲಿ ಮಾಡುವುದರಲ್ಲಿಯೇ ತಾತ್ಪರ್ಯವುಳ್ಳ ಜನರು ಎಷ್ಟು ಹೀನರೋ ಸಂಪ್ರದಾಯಪಾಲನೆಯ ಹೆಸರಿನಲ್ಲಿ ಭಾವನೆಗಳನ್ನು ಬತ್ತಿಸಿಕೊಂಡು ಅಮಾನುಷವೆನಿಸುವಷ್ಟು ಶುಷ್ಕರಾದ ‘ಧಾರ್ಮಿಕ’ರೂ ಹೀನರಲ್ಲವೇ?
ತುಂಟರ ಬಯಕೆ
ಸಾಂಪ್ರದಾಯಿಕರ ಪರಿಯನ್ನು ಪರಿಶೀಲಿಸಿದ್ದಾಯಿತು. ಇನ್ನು ತುಂಟಹುಡುಗರು ದೊಡ್ಡವರಾದ ಮೇಲೆ ತಮ್ಮ ತಾರುಣ್ಯವನ್ನು ಹೇಗೆ ನೆನೆಯುತ್ತಾರೆಂದು ನೋಡೋಣ:
ಚೌಪಾಟೀಪುಲಿನೇsಭಿನೀಯ ಸುಚಿರಂ ಶಂಬೂಕಕಂಬುಗ್ರಹಂ
ಸೇತುಂ ಸೈಕತಮಾರಚಯ್ಯ ಸುಭಗಾಜಂಘಾಶ್ಚ ನೇತ್ರೈಃ ಪಿಬನ್ |
ಸಾನಂದಂ ನಗರೀಮಹೋದರರಿಚಃ ಪಾಶ್ರ್ವೇ ಪ್ರಣಾಲ್ಯಾಃ ಸ್ಥಿತಃ
ಖಾದನ್ ಭೇಲಪುರೀಂ ಪುರೋ ಬಲಿಭುಜಾಂ ನೇಷ್ಯೇsಪರಾಹ್ಣಾನ್ ಕದಾ ||
(ಮುಂಬಯಿಯ ‘ಚೌಪಾಟಿ’ ಸಮುದ್ರತಟದಲ್ಲಿ ಮರಳ ಸೇತುವೆಯನ್ನು ನಿರ್ಮಿಸುತ್ತ, ಕವಡೆಗಳನ್ನೂ ಕಪ್ಪೆಚಿಪ್ಪುಗಳನ್ನೂ ಹೆಕ್ಕುವಂತೆ ನಟಿಸಿ ಹುಡುಗಿಯರ ಹಿಂಗಾಲುಗಳನ್ನು ಕಣ್ಣಿಂದ ಹೀರುತ್ತ, ಮಧ್ಯಾಹ್ನದ ವೇಳೆ ಆನಂದವಾಗಿ ದೊಡ್ಡಮೋರಿಯ ಪಕ್ಕದಲ್ಲಿ ನಿಂತು ಸುತ್ತುವರಿದ ಕಾಗೆಗಳೆದುರು ಮತ್ತೆಂದು ಭೇಲಪುರಿಯನ್ನು ತಿನ್ನುವೆನೋ!)
ಇದು ವೈರಾಗ್ಯದ ಶಿಖರಾಗ್ರದಲ್ಲಿ ನಿಂತು ಭರ್ತೃಹರಿ ನುಡಿದ “ಕದಾ ವಾರಾಣಸ್ಯಾಮ್ ಅಮರತಟಿನೀರೋದಸಿ ವಸನ್…” ಎಂಬ ಪದ್ಯದ ಅಣಕು. ಮೂಲದಲ್ಲಿಯ ಉದಾತ್ತತೆಯು ಕಂಟಕಾರ್ಜುನರ ಕೈಗೆ ಸಿಲುಕಿ ಹೇಳಹೆಸರಿಲ್ಲದಂತೆ ಆಗಿದೆ.
ಸಂಸ್ಕೃತಪಂಡಿತರ ಪಾಡು
ತನ್ನ ವೃತ್ತಿಯನ್ನು, ತನ್ನ ಜನರನ್ನು, ಕೊನೆಗೆ ತನ್ನನ್ನೂ ಗೇಲಿಮಾಡಿ ಮಾಡಿಸಿಕೊಳ್ಳಬಲ್ಲವನೇ ನಿಜವಾದ ಹಾಸ್ಯರಸಿಕ. ನಮ್ಮ ಕಂಟಕಾರ್ಜುನರು ಇಂಥವÀರು. ಸ್ವಯಂ ಸಂಸ್ಕೃತವಿದ್ವಾಂಸರಾದ ಅವರಿಗೆ ಸಾಂಪ್ರದಾಯಿಕ ಪಂಡಿತರ ಕೂಪಮಂಡೂಕತನ ಚೆನ್ನಾಗಿ ತಿಳಿದಿತ್ತು. ಅವರು ಹೇಳುತ್ತಾರೆ:
ಜಾಪಾನೇಷ್ವಭವತ್ಪುರಾ ಬತ ಬತ ಸ್ಫೋಟಃ ಕ್ಷಿಪನ್ ರೋದಸೀಂ
ಕಶ್ಮೀರೇಷ್ವಭವದ್ (ಭವಿಷ್ಯತಿ ಪುನಃ) ಮುಂಬಾನಗರ್ಯಾಮಪಿ |
ಗೋವಾಯಾಮಚಿರಾದಿತಃ ಪುನರಭೂದೌರಂಗಬಾದೋದರೇ
ಲೋಕಃ ಸೀದತಿ ಶಾಬ್ದಿಕಃ ಪುನರಸೌ ಹರ್ಷಾನ್ನರೀನೃತ್ಯತೇ ||
(ಹಿಂದೆ ಜಪಾನಿನಲ್ಲಿ ಆದ ‘ಸ್ಫೋಟ’ ಲೋಕವನ್ನೆಲ್ಲ ಕಂಪಿಸಿತು. ಅದೇ ತೆರನಾದ ಸ್ಫೋಟಗಳು ಕಾಶ್ಮೀರದಲ್ಲೂ ಆದವು [ಆಗುತ್ತವೆ ಕೂಡ]. ಇವಕ್ಕೆ ಮುಂಬಯಿ ನಗರವೂ ಹೊರತಲ್ಲ. ಗೋವಾ, ಔರಂಗಾಬಾದ್ ಮುಂತಾದ ಸ್ಥಳಗಳಿಗೂ ಅದರ ಬಿಸಿ ತಟ್ಟಿದೆ. ಇದರಿಂದ ಲೋಕವೆಲ್ಲ ಪರಿತಪಿಸುತ್ತಿರುವಾಗ ವ್ಯಾಕರಣವಿದ್ವಾಂಸನು ಮಾತ್ರ ಸಂತೋಷದಿಂದ ನರ್ತಿಸುತ್ತಾನೆ!)
ನಮ್ಮ ಹೆಚ್ಚಿನ ಮಂದಿ ವ್ಯಾಕರಣವಿದ್ವಾಂಸರಿಗೆ ‘ಸ್ಫೋಟ’ ಎಂದರೆ ಭೂಮಿಯನ್ನು ಬೆಚ್ಚಿಬೀಳಿಸುವ ಆಸ್ಫೋಟವಲ್ಲ; ಭರ್ತೃಹರಿಯೇ ಮೊದಲಾದವರು ಪ್ರತಿಪಾದಿಸಿದ ‘ಸ್ಫೋಟ’ವಾದ! (ವ್ಯಾಕರಣದ ಪ್ರಕಾರ ಸ್ಫೋಟವೆಂದರೆ ಒಂದು ಶಬ್ದತತ್ತ್ವ. ಅದರ ಮೂಲಕವೇ ಅರ್ಥವು ಸ್ಫುಟವಾಗಿ ತಿಳಿಯುವುದು.) ಹೀಗೆ ಹೊರಗಿನ ಪ್ರಪಂಚದ ಆಗು-ಹೋಗುಗಳಿಗೆ ಕುರುಡಾಗಿರುವುದೇ ಪಾಂಡಿತ್ಯದ ಕುರುಹಾದರೆ ಗತಿಯೇನು!
ಮುಂದಿನ ಪದ್ಯ ಸಂಸ್ಕೃತಪಂಡಿತರ ಹುರುಳಿಲ್ಲದಿದ್ದರೂ ಆಡಂಬರದ ಆಟಾಟೋಪವನ್ನು ವರ್ಣಿಸುತ್ತದೆ:
‘ಕಸ್ತ್ವಂ?’ ‘ಸಂಸ್ಕೃತಪಂಡಿತಃ’ ‘ಕಿಮಧುನಾ ಗ್ರಥ್ನಾಸಿ?’ ‘ಟೀಕಾಂ ನವಾಂ’
‘ಗ್ರಂಥೇ ಕಸ್ಯ?’ ‘ಮಮೈವ’ ‘ಕುತ್ರ ಸ’ ‘ಸಖೇ ಪಶ್ಚಾತ್ಸ ಲೇಖಿಷ್ಯತೇ’ |
‘ಧಿಙ್ನೆನೀಪಥ್ಯಮನಂಗಮ್’ ‘ಅಂಗವಿದಿತಃ ಪಂಥಾ ಬುಧಾನಾಂ ನ ತೇ
ಯೇಷಾಂ ಶುಷ್ಕತೃಣಾಯಿತಾತ್ಮವಪುಷಾಂ ನೇಪಥ್ಯಮೇವಾಖಿಲಮ್’ ||
(“ಯಾರು ನೀವು?” “ನಾನೊಬ್ಬ ಸಂಸ್ಕೃತಪಂಡಿತ.” “ಈಗ ಏನು ಬರೆಯುತ್ತಿರುವಿರಿ?” “ಒಂದು ಹೊಸ ವ್ಯಾಖ್ಯಾನ ಬರೆಯುತ್ತಿದ್ದೇನೆ.” “ಯಾರ ಗ್ರಂಥದ ಮೇಲೆ ವ್ಯಾಖ್ಯಾನ?” “ನನ್ನದೇ.” “ಯಾವುದು ಆ ಗ್ರಂಥ?” “ಅದನ್ನಿನ್ನೂ ಬರೆದಿಲ್ಲ.” “ಅರೇ, ಇದೇನಿದು! ದೇಹವೇ ಇಲ್ಲದಿದ್ದಾಗ ಬಟ್ಟೆ ತೊಡಿಸಿದಂತಾಯಿತಲ್ಲಾ, ಛೇ!” “ನಿನಗೆ ವಿದ್ವಾಂಸರ ಜಾಡು ತಿಳಿದಿಲ್ಲ. ಯಾರಿಗೆ ದೇಹವೂ ಆತ್ಮವೂ ಒಣಹುಲ್ಲಿಗೆ ಸಮವೋ ಅಂಥವರಿಗೆ ಎಲ್ಲವೂ ಬರಿಯ ಬಟ್ಟೆಯೇ!)
ಹೀಗೆ ವಿದ್ವಾಂಸರನ್ನು ಹೀಯಾಳಿಸುವುದೇ ಅರ್ಜುನವಾಡ್ಕರ್ ಅವರ ಉದ್ದೇಶವಲ್ಲ. ಸಂಸ್ಕೃತಜ್ಞರು ಅನುಭವಿಸುವ ಕಷ್ಟಪರಂಪರೆಗಳ ಅರಿವು ಅವರಿಗೆ ಚೆನ್ನಾಗಿದೆ. ಲೇಖಕರನ್ನು ಕುರಿತು ಅವರು ಹೇಳುತ್ತಾರೆ:
ಕಲ್ಯಾಣೇ ಯದಿ ತೇ ಸ್ಪೃಹಾಸ್ತಿ ಸುಮತೇ ಮಾ ಪುಸ್ತಕಂ ಲಿಖ್ಯತಾಂ
ಲೇಖ್ಯಂ ಚೇಚ್ಛಿಶುವಾಙ್ಮಯಂ ಲಿಖ ಸಖೇ ಶಾಸ್ತ್ರೇ ರುಚಿಸ್ತ್ಯಜ್ಯತಾಮ್ |
ಶಾಸ್ತ್ರೇ ಸಾಹಸಿಕೋsಪಿ ಮಾ ಜಡಮತೇ ಗ್ರಂಥಂ ಬೃಹಂತಂ ಕುರು
ತತ್ರಾಪಿ ಸ್ಖಲಿತೋsಸಿ ಚೇದ್ಧತಮತೇ ಭಿಕ್ಷಾಟನಂ ಸ್ವೀಕುರು ||
(ಓ ಜಾಣ, ಇಲ್ಲಿ ಕೇಳು. ಉದ್ಧಾರವಾಗುವುದರಲ್ಲಿ ನಿನಗೆ ಆಸಕ್ತಿಯಿದ್ದರೆ ಪುಸ್ತಕ ಮಾತ್ರ ಬರೆಯಬೇಡ. ಬರೆಯುವುದೇ ಆದರೆ ಮಕ್ಕಳ ಪುಸ್ತಕಗಳನ್ನು ಬರಿ. ಶಾಸ್ತ್ರದಲ್ಲಿ ಕುತೂಹಲವನ್ನು ಕೈಬಿಟ್ಟುಬಿಡು. ಒಂದು ಪಕ್ಷ ಶಾಸ್ತ್ರವನ್ನು ಕುರಿತೇ ಬರೆಯುವೆಯಾದರೆ – ನಿನ್ನ ಪೆದ್ದುತನಕ್ಕೆ ಏನು ಹೇಳುವುದು! – ಪುಸ್ತಕವನ್ನು ದೊಡ್ಡದಾಗಿಸಬೇಡ. ಅದರಲ್ಲಿಯೂ ಎಡುವಿದೆಯೆಂದರೆ ನಿನಗಿನ್ನು ಭವಿಷ್ಯವಿಲ್ಲ. ಭಿಕ್ಷೆ ಬೇಡುವುದಕ್ಕೆ ಮೊದಲುಮಾಡು!)
ಹೀಗೆ ಎಲ್ಲವನ್ನೂ ವಿಶ್ಲೇಷಕದೃಷ್ಟಿಯಿಂದ ನೋಡುವವರು ಭಾವಾದ್ರ್ರವಾದ ಸಾಹಿತ್ಯ ರಚಿಸಬಲ್ಲರೇ? ಬಲು ಚೆಲುವಾಗಿ ರಚಿಸಬಲ್ಲರು. ಇದಕ್ಕೆ ಮುಂದಿನ ಕೆಲವು ಪದ್ಯಗಳೇ ನಿದರ್ಶನಗಳು.
ಮಕ್ಕಳ ಮುಗ್ಧತೆ
‘ಕಂಟಕಾಂಜಲಿ’ಯ ಮುಳ್ಳುಗಳಿಂದ ಚುಚ್ಚಿಸಿಕೊಂಡು ನೊಂದವರನ್ನು ಸಾಂತ್ವಯಿಸಲೋ ಎಂಬಂತೆ ಅರ್ಜುನವಾಡ್ಕರ್ ಅವರು ಹಲಕೆಲವು ಸುಂದರವಾದ ಅಕುಟಿಲಕವಿತೆಗಳನ್ನು ಈ ಕಾವ್ಯದಲ್ಲಿ ಸೇರಿಸಿದ್ದಾರೆ. ಇಲ್ಲಿರುವುದೆಲ್ಲ ಪ್ರೇಯೋರಸದ ಪ್ರವಾಹÀ:
ಜಾತಾಜಾತು ವಿಲಾಪ್ಯ ವಕ್ಷಸಿ ದೃಢಂ ಪಿತ್ರಾ ಭೃಶಂ ಚುಂಬಿತಾ
ದಷ್ಟಾ ಕೋಮಲಯೋಃ ಕಪೋಲಫಲಯೋಃ ಶಲ್ಯೋಪಮೈಃ ಶ್ಮಶ್ರುಭಿಃ |
ಮಾತುಃ ಸಂಸ್ಪೃಶತೀ ಮುಖಂ ಮೃದು ಸುಖಂ ಸಭ್ರೂವಿಭಂಗಾಬ್ರವೀತ್
‘ತಾತಂತಾಲಯ’ ನ ತ್ವಬುದ್ಧಜನನೀಹಾಸಸ್ಯ ಮುಗ್ಧಾಶಯಮ್ ||
(ಅಳುತ್ತಿದ್ದ ಮಗುವನ್ನು ತಂದೆ ಎದೆಗಪ್ಪಿಕೊಂಡು ಮುದ್ದಿಸಿದ. ಅವನ ಹರಿತವಾದ ಮೀಸೆ ಮಗುವಿನ ಕೋಮಲವಾದ ಕೆನ್ನೆಗಳನ್ನು ತಿವಿಯಿತು. ಆಗ ತಾಯಿಯ ಮೃದುಮುಖವನ್ನು ಸುಖವಾಗಿ ಸವರುತ್ತಿದ್ದ ಮಗು ತನ್ನ ಹುಬ್ಬನ್ನು ಗಂಟುಮಾಡಿ, “ಅಮ್ಮಾ, ಅಪ್ಪನಿಗೆ ಒಂದು ಕೊಡು” ಎಂದಳು. ಅಮ್ಮನ ಮಂದಹಾಸದ ಕಾರಣ ಮಾತ್ರ ಆಕೆಗೆ ತಿಳಿಯಲಿಲ್ಲ.)
‘ಯಕ್ತಾಂತಾತ ಫುಗಾಂ ಗಿಹಾನ ಬಯಪೀಮಾಂಬ್ಯತ್ಯ ಮಾಮಾನಯ
ತ್ಯೋಕಂ ಪಾಥಯ ನೂತನಂ ಕಥಯ ವಾ ಕ್ಯುತ್ನತ್ಯ ಮಯ್ಯಂಕಥಾಮ್ |
ತುಯ್ಯಂದೇವ ನಮಚ್ಕಯೋಮಿತುಮತೀ ತಾತಸ್ಯ ಮೇ ದೀಯತಾಂ’
ಮಾ ಭೂತ್ಸಾಧುಪದಪ್ರಯೊಗಸುಕೃತಂ ಜಾತೇ ಪ್ರಿಯಂತೇ ವಚಃ ||
(“ಅಪ್ಪಾ, ನಂಗೆ ಕೆಂಪು ಬಲೂನ್ ತೆಕ್ಕೊಲು. ನಂಗೇ ಮಾವಿನ ಬಪ್ಫಿ ಬೇಕು. ಹೊತತ್ಯೋಕ ಹೇಕೊಡು! ನಂಗೆ ಕಿಷ್ಷನಕತೆ ಹೇಳು. ಮಾಮಿ, ನಾನು ನಿಂಗೆ ಜೋತ ಮಾತ್ತೀನಿ; ಅಪ್ಪಂಗೆ ಒಳ್ಳೇ ಬುದ್ದಿ ಕೊಡೂ.” ಮಗಳೇ ನಿನ್ನ ಮಾತೇ ಚಂದ; ಸಾಧುಪದಗಳ ಪ್ರಯೋಗದಿಂದ ಲಭಿಸುವ ಯಾವ ಸುಕೃತವೂ ನನಗೆ ಬೇಡ.)
ಕಾಳಿದಾಸನೆನ್ನುವಂತೆ ಮಕ್ಕಳದು “ಅವ್ಯಕ್ತ-ವರ್ಣ-ರಮಣೀಯ-ವಚಃಪ್ರವೃತ್ತಿ”. ಅದನ್ನು ಅವಲಂಬಿಸಿ ಪದ್ಯ ರಚಿಸಿರುವುದು ಏಕಕಾಲದಲ್ಲಿ ಕವಿಯ ಅಕೃತ್ರಿಮವಾದ ಭಾವಶ್ರೀಮಂತಿಕೆಗೂ ಭಾಷೆಯ ಮೇಲಣ ಹಿರಿದಾದ ಹಿಡಿತಕ್ಕೂ ಸಾಕ್ಷಿಯಾಗಿದೆ.
ಸಾಯಂದ್ಯೋತಿತದೀಪವಂದನವಿಧೇರೂಧ್ರ್ವಂ ಜನನ್ಯೋದಿತಂ
‘ತಾತಾದೀನಧುನಾ ನಮಸ್ಕುರು ಸುತೇ’ ವತ್ಸಾ ಚ ಭಕ್ತ್ಯಾನಮತ್ |
ಅಂಬಾಂ ತಾತಮಥಾನಯೋಃ ಪಿತೃಗಣಂ ಭ್ರಾತೃನ್ ಸ್ವಸೃಃ ಕಿಂಕರಾನ್
ಮಾರ್ಜಾರಂ ಶುಕಮಪ್ಯಹೋ ಸಮದೃಶೇ ಬಾಲ್ಯಾಯ ತಸ್ಮೈ ನಮಃ ||
(ಸಂಜೆ ದೀಪ ಬೆಳಗಿ ಅದಕ್ಕೆ ವಂದಿಸಿದ ಬಳಿಕ ತಾಯಿ ಹೇಳಿದಳು, “ಪುಟ್ಟಿ, ಅಪ್ಪತಾತ ಎಲ್ಲರಿಗೂ ನಮಸ್ಕಾರ ಮಾಡು.” ಅದನ್ನು ಅನುಸರಿಸುತ್ತ ತಾಯಿಗೆ, ತಂದೆಗೆ, ಅಜ್ಜ-ಅಜ್ಜಿಯರಿಗೆ, ಅಣ್ಣ-ತಂಗಿಯರಿಗೆ, ಸೇವಕರಿಗೆ, ಕೊನೆಗೆ ಸಾಕಿದ ಬೆಕ್ಕು-ಗಿಳಿಗಳಿಗೂ ಮಗು ಭಕ್ತಿಯಿಂದ ನಮಸ್ಕರಿಸಿತು. ಎಲ್ಲರಲ್ಲಿಯೂ ಎಲ್ಲದರಲ್ಲಿಯೂ ಐಕ್ಯವನ್ನು ಕಾಣುವ ಬಾಲ್ಯಕ್ಕೆ ನಮಸ್ಕಾರ!)
ಭಗವದ್ಗೀತೆಯು ಹೇಳುವ “ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ” ಎಂಬುದಕ್ಕೆ ಇದಕ್ಕಿಂತ ಸೊಗಸಾದ ನಿದರ್ಶನ ಬೇಕೇ? ಹೌದು, ಮಕ್ಕಳೂ ಪಂಡಿತರಾಗಬಲ್ಲರು!
ಸಂಸ್ಕೃತಭಾರತೀ
ನಮ್ಮ ಕಾಲಕ್ಕೂ ಎಲ್ಲ ಕಾಲಕ್ಕೂ ಸಂಸ್ಕೃತಭಾಷೆಯನ್ನು ಹೇಗೆ ಪರಿಭಾವಿಸಬೇಕೆಂದು ಅರ್ಜುನವಾಡ್ಕರ್ ಅವರು ತಿಳಿಸಿರುವ ಪದ್ಯಗಳನ್ನು ಉಲ್ಲೇಖಿಸಿ ಈ ಲೇಖನವನ್ನು ಸಂಪನ್ನಗೊಳಿಸಬಹುದು:
ಸರ್ವಾಸಾಂ ಜನನೀಗಿರಾಂ ವಿಬುಧಗೀರ್ನೋ ವಾ ನ ಜಾನೀಮಹೇ
ತಸ್ಯಾಮೇವ ಹಿ ಸಂಸ್ಕೃತಿಃ ಶ್ವಸಿತಿ ವಾ ನೋ ವಾ ನ ಜಾನೀಮಹೇ |
ರಾಷ್ಟ್ರಸ್ಯಾಭ್ಯುದಯಸ್ತಯೈವ ಭವಿತಾ ನೋ ವಾ ನ ಜಾನೀಮಹೇ
ವಾಲ್ಮೀಕೌ ತು ದೃಢಂರತಾ ಮತಿರಿತಿ ಪ್ರೀಣಾತಿ ನಃ ಸಂಸ್ಕೃತಮ್ ||
(ಸಂಸ್ಕೃತಭಾಷೆಯು ಬೇರೆಲ್ಲ ಭಾಷೆಗಳ ಜನನಿಯೇ? ನಮಗದು ತಿಳಿಯದು. ಅದರಲ್ಲಿಯೇ ಏನು ನಮ್ಮ ಸಂಸ್ಕೃತಿ ಉಸಿರಾಡುತ್ತಿರುವುದು? ನಮಗದು ತಿಳಿಯದು. ಅದರಿಂದ ನಮ್ಮ ದೇಶದ ಅಭ್ಯುದಯ ಸಾಧ್ಯವೇ? ನಮಗದೂ ತಿಳಿಯದು. ವಾಲ್ಮೀಕಿಯಲ್ಲಿ ಮಿಗಿಲಾದ ಪ್ರೀತಿಯುಂಟೆಂಬ ಒಂದೇ ಕಾರಣಕ್ಕೆ ನಮಗೆ ಸಂಸ್ಕೃತ ಸೊಗಸೆನಿಸುತ್ತದೆ, ಇಷ್ಟವಾಗುತ್ತದೆ.)
ಸ್ಪೃಷ್ಟಂ ಸ್ತ್ರೀವಿಟಚೇಟ-ಶೂದ್ರಯವನೈರ್ಗೀರ್ವಾಣವಾಙ್ಮಂದಿರಂ
ಭ್ರಷ್ಟಂ ಸ್ಯಾದಿತಿತಾಲಯಂತ್ರಿತಮಿದಂ ಕುರ್ವಂತಿ ತೇಭ್ಯೋ ನಮಃ |
ಠಿಕಿಂ ಗಾಲೀಷು ಕಿಮರ್ಚನೇಷು ಕಿಮು ವಾ ಶಾಸ್ತ್ರೇಷು ಕಿಂ ಪ್ರೇಮಸು
ಸರ್ವೇ ಸಂಸ್ಕೃತಭಾಷಿಣೋ ಯದಿ ತದಾದೇವಾಯಕುರ್ಯಾಂ ಬಲಿಮ್ ||
(ಹೆಂಗಸರು, ಜಾರರು, ಪುಂಡರು, ಶೂದ್ರರು, ಮ್ಲೇಚ್ಛರೇ ಮೊದಲಾದವರು ಪವಿತ್ರವಾದ ಸಂಸ್ಕೃತಮಂದಿರವನ್ನು ಪ್ರವೇಶಿಸಿ ಮೈಲಿಗೆ ಮಾಡಿಬಿಡುತ್ತಾರೆಂದು ಕೆಲವರು ಅದಕ್ಕೆ ಬೀಗಜಡಿದಿದ್ದಾರೆ. ಅಂಥವರಿಗೆಲ್ಲ ನಮ್ಮ ದೊಡ್ಡ ನಮಸ್ಕಾರ. ಸಂಸ್ಕೃತಭಾಷೆಯನ್ನು ಬೈಗುಳಕ್ಕೆ, ಪೂಜೆಗೆ, ಶಾಸ್ತ್ರರಚನೆಗೆ, ಸರಸಸಲ್ಲಾಪಕ್ಕೆ – ಹೀಗೆ ಎಲ್ಲದಕ್ಕೂ ಎಂದು ಎಲ್ಲ ಜನರೂ ಬಳಸುವಂತಾಗುವುದೋ ಆಗ ನಾನು ದೇವರಿಗೆ ನಮಿಸುತ್ತೇನೆ.)