
ಉತ್ತರಾರ್ಧ ಗೋಳದಲ್ಲಿ ಉತ್ತರದೀಪದ (Northern lights) ಜ್ಯೋತಿರಾಶಿಯನ್ನು ‘ಅರೋರಾ ಬೋರಿಯಾಲಿಸ್’ ಎಂದು ಕರೆಯುತ್ತಾರೆ. ಬಣ್ಣಬಣ್ಣದ ಪ್ರಕಾಶಮಾನ ದೀಪಗಳು ನೋಡುಗರ ಕಣ್ಣುಸೆಳೆದು ಮಂತ್ರಮುಗ್ಧರನ್ನಾಗಿ ಮಾಡುತ್ತದೆ. ಕೈಲಾಸಂರವರ ಭರ್ಜರಿ ವಾಗ್ಝರಿಯನ್ನು ಗಿeಡಿbಚಿಟ Verbal Arora Borealis ಎಂದು ವರ್ಣಿಸಿದಲ್ಲಿ ಅತಿಶಯವೇನಲ್ಲ. ವಿಸ್ಮಯ ಹುಟ್ಟಿಸುವ ವೈವಿಧ್ಯ, ಅರ್ಥಗರ್ಭಿತ ಮಾತುಗಳ ಪ್ರಖರತೆ ಆ ಹೋಲಿಕೆಯ ಹಿನ್ನೆಲೆ.
ಕನ್ನಡ ಸಾಹಿತ್ಯ ಚರಿತ್ರೆಯನ್ನು ಬರೆಯುವಾತನು ಮರೆಯಲಾಗದ, ಮರೆಯಬಾರದ ಹೆಸರುಗಳಲ್ಲಿ ಕೈಲಾಸಂ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ ಎಂದು ಡಿ.ವಿ.ಜಿ. ಹೇಳುತ್ತಾರೆ. ಕೇವಲ ನಾಟಕ ಬರೆದಿದ್ದಕ್ಕಾಗಿ ನಾಟಕಕಾರರಾಗಿ ಉಳಿಯದೆ ಒಬ್ಬ ನಿರ್ದೇಶಕನಾಗಿ, ನಟನಾಗಿ, ದಾರ್ಶನಿಕನಾಗಿ, ಶಿಕ್ಷಣತಜ್ಞನಾಗಿ, ಸಮಾಜಸುಧಾರಕನಾಗಿ ಕಾರ್ಯನಿರ್ವಹಿಸಿದ್ದು ಆ ವ್ಯಕ್ತಿಯ ಕಾರ್ಯಬಾಹುಳ್ಯದ ಸೂಚಕ.
ಭೂಗರ್ಭಶಾಸ್ತ್ರದಲ್ಲಿ ಉನ್ನತ ಶಿಕ್ಷಣಕ್ಕಾಗಿ
ಇಂಗ್ಲೆಂಡಿಗೆ ಹೋಗಿ ಆರು ವರ್ಷ ಕಾಲವಿದ್ದು ಹಿಂದಿರುಗುತ್ತಾರೆ. ಇಬ್ಸನ್, ಬರ್ನಾರ್ಡ್ ಶಾ, ಗಾಲ್ರ್ಸ್ವರ್ದಿ ಹಾಗೂ ಆಸ್ಕರ್ ವೈಲ್ಡ್ ಪ್ರಭಾವಕ್ಕೆ ತೀವ್ರವಾಗಿ ಒಳಗಾಗುತ್ತಾರೆ. ಫುಟ್ಬಾಲ್ ಪಂದ್ಯಗಳನ್ನು ನೋಡುವುದು, ಗೋಲ್ಕೀಪರ್ ಆಗಿ ಪರಿಣತಿ ಹೊಂದುವುದು, ದೈಹಿಕ ಮಾಂತ್ರಿಕ ಸ್ಯಾಂಡೋರವರ ಹತ್ತಿರ ದೈಹಿಕ ಕಸರತ್ತನ್ನು ಮಾಡುವುದು ಹವ್ಯಾಸವಾಯಿತು. ತೋಳಿನಲ್ಲಿ ಬೈಸೆಪ್ಸ್ ಕುಣಿಸುವುದನ್ನು ಆ ಸ್ಯಾಂಡೋವಿನಿಂದ ಕಲಿಯುತ್ತಾರೆ. ಯಾವುದನ್ನೇ ಕಲಿಯಲಿ ಅದು ಶ್ರೇಷ್ಠಮಟ್ಟದ್ದಾಗಿರಬೇಕು ಎನ್ನುವುದು ಅವರ ನಿಲವು. ಧೂಮಪಾನ ಕಲಿತಾಗ ಹೊಗೆಯಲ್ಲಿ ತಮ್ಮ ಸಿಗ್ನೇಚರ್ ಮಾಡುವುದನ್ನು ರೂಢಿಸಿಕೊಂಡರಂತೆ. ಇಷ್ಟೆಲ್ಲದರ ನಡುವೆ ವ್ಯಾಸಂಗದಲ್ಲಿಯೂ ಮೊದಲಿಗರೇ ಆಗಿದ್ದರು.
ಭಾರತಕ್ಕೆ ಹಿಂದಿರುಗಿದಾಗ ಸಮಾಜದ ಸ್ಥಿತಿಯನ್ನು ನೋಡಿ ಬಂಡಾಯವೆದ್ದು ಜಾಗೃತಿಯನ್ನುಂಟು ಮಾಡಲು ನಾಟಕ ರಚನೆಯನ್ನು ಪ್ರಾರಂಭಿಸಿದರು. ಬುದ್ಧಿಮಾತನ್ನು ಭಾಷಣ ರೂಪದಲ್ಲಿ ಹೇಳಿದರೆ ಯಾರೂ ಕೇಳುವುದಿಲ್ಲವೆಂದು ನಾಟಕದ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡರು. ಹಾಸ್ಯ ಒಂದು ಶಕ್ತಿಯುತ ಪರಿಣಾಮಕಾರಿ ಸಂವಹನವೆಂದು ಸಂಭಾಷಣೆಯಲ್ಲಿ ಸ್ವಾರಸ್ಯ ತುಂಬಿದರು. ಸ್ತ್ರೀ ಶೋಷಣೆ ಅಗಾಧವಾಗಿದ್ದ ಪರಿಸರದಲ್ಲಿ ಮಡಿಹೆಂಗಸರನ್ನು ವೇದಿಕೆಯ ಮೇಲೆ ತಂದು ಒಂದು ದೊಡ್ಡ ಕ್ರಾಂತಿಗೆ ಅಡಿಪಾಯ ಹಾಕಿದರು. ‘ಟೊಳ್ಳುಗಟ್ಟಿ’ಯ ನಾಗತ್ತೆ, ‘ಹೋಂರೂಲ್’ನ ಸುಬ್ಬಮ್ಮ, ‘ವೈದ್ಯನ ವ್ಯಾಧಿ’ಯ ಸಾವಿತ್ರಮ್ಮ, ಲಕ್ಷ್ಮೀದೇವಮ್ಮ, ಸೀಕರ್ಣೆ ಸಾವಿತ್ರಿ, ಸಹವಿತಂತು ಸೀತಮ್ಮ ಇವೆಲ್ಲ ಪಾತ್ರಗಳನ್ನು ತಾವೇ ನಟಿಸಿ ‘ವಿಧವಾಭಿನಯ ವಿಶಾರದ’ ಎನಿಸಿಕೊಂಡರು. ಪಾತ್ರನಿರ್ವಹಣೆಯ ಉತ್ಕೃಷ್ಟ ಮಟ್ಟದಿಂದಾಗಿ ‘ಬಾರ್ನ್ ವಿಡೋ’ ಎಂದೇ ಬಿರುದಾಂಕಿತರಾದರು!
ಮೌಲ್ಯಪ್ರತಿಪಾದನೆ
ಕೈಲಾಸಂ ಕೃತಿಗಳು ಎರಡು ರೀತಿಯವು. ಒಂದು ಸಮಾಜದ ಮುಖಕ್ಕೆ ಕನ್ನಡಿ ಹಿಡಿದರೆ ಮತ್ತೊಂದು ಮನುಷ್ಯನ ಮಹತ್ತ್ವವನ್ನು ಕಾಣಿಸುವಂತಹದ್ದು. ಸಮಾಜದ ಸಾವುನೋವುಗಳನ್ನು ತೋರಿಸುವ ಅಣಕಾಟದಲ್ಲಿ ಆ ವಿಕಾರಗಳನ್ನು ಅದು ಸರಿಪಡಿಸಿಕೊಳ್ಳಬೇಕೆನ್ನುವ ಸಲಹೆ ಕೊಡುತ್ತ ಬರುವ, ಅಡಚಣೆಗಳನ್ನು ಬಗೆಹರಿಸುವ ಸೂಚನೆಗಳನ್ನಿತ್ತರು. ‘ಟೊಳ್ಳುಗಟ್ಟಿ’ ಅಥವಾ ‘ಮಕ್ಕಳ ಸ್ಕೂಲು ಮನೇಲಲ್ವೇ’ ಎಂಬ ಮೊದಲನೇ ಕೃತಿ ಕೊಟ್ಟರು. ಅದರ ಜನನವಾದದ್ದು ಶಿವಮೊಗ್ಗದಲ್ಲಿ. ಅದಕ್ಕೆ ಅವರು ಕೊಟ್ಟ ಪ್ರಾಸಪದ್ಯ
ತುಂಗಾ ಪಾನದ ಸವಿಸುಖ ಕಟ್ಟಿ
ಜನ್ಮ ತಾಳಿತು ಟೊಳ್ಳುಗಟ್ಟಿ.
ಜೀವನದಲ್ಲಿ ಟೊಳ್ಳು ಯಾವುದು, ಗಟ್ಟಿ ಯಾವುದು ಎಂಬ ತಿಳಿವನ್ನು ಒಬ್ಬ ಸಾಮಾನ್ಯ(layman)ನಿಗೂ ಅರ್ಥವಾಗುವ ರೀತಿಯಲ್ಲಿ ಮಾನವೀಯ ಮೌಲ್ಯವನ್ನು ಪ್ರತಿಪಾದಿಸಿದರು. ಮನುಷ್ಯನ ಮಹಾಗುಣವನ್ನರಸುವ ಪ್ರವೃತ್ತಿ ಕೈಲಾಸಂಗೆ ಸಹಜವಾಗಿ ಸಿದ್ಧಿಸಿತ್ತು. ನಾಟಕದಲ್ಲಿ ಕಾಯಿಲೆ ಮಲಗಿದ್ದ ಪತ್ನಿಗೆ “ಸ್ವಲ್ಪ ವಾಸಿ, ವಾಸಿ ಅಂತ ಎಂಟ್ಹತ್ತು ದಿನದಿಂದ ಕಾಲ್ಚಾಚ್ಕೊಂಡು ಬಿದ್ದಿದೀಯಲ್ಲ ಈಗ ನಿನ್ನೀ ಹಾಳ್ ಕೂಸ್ನೊಡ್ಕೊಳ್ಳೋರಾರು?” ಅಂತ ರೇಗುತ್ತಾ ಮಡದಿ ಹೊದ್ದ ಹೊದಿಕೆಯನ್ನೇ ಕಿತ್ತುಕೊಂಡು ಕೋಣೆಯಲ್ಲಿ ಮಲಗಲು ಹೋಗುವ ಕ್ರೌರ್ಯ ಹೆಣ್ಣಿನ ಶೋಷಣೆಯ ಸ್ವರೂಪವನ್ನು ಅನಾವರಣಗೊಳಿಸುತ್ತದೆ. ‘ಬಹಿಷ್ಕಾರ’ ನಾಟಕದಲ್ಲಿ ಮಗಳನ್ನೇ ‘ಶನಿ’ ಎನ್ನುವ ತಂದೆ-ತಾಯಿ. ಅವಳಿಂದಾಗಿ ಶ್ರಾದ್ಧದಲ್ಲಿ ಪಿಂಡ ಸಿಗುವುದಿಲ್ಲ ಎಂಬ ಕಾರಣಕ್ಕೆ ಬೈಯುತ್ತಾರೆ. ವರದಕ್ಷಿಣೆ ಹಾವಳಿ ವಿರುದ್ಧ ಸಿಡಿದೇಳಬೇಕು, ವ್ಯವಸ್ಥೆ ಧಿಕ್ಕರಿಸಿ ಬಂಡಾಯವೇಳಬೇಕೆಂದೇ ತಮ್ಮ ನಾಟಕಗಳಲ್ಲಿ ಹೆಣ್ಣು ಘಟವಾಣಿ, ಗಂಡ ಹೆನ್ಪೆಕ್ಡ್ ಹಸ್ಬೆಂಡ್ ಆಗಿ ಬರುವುದು. ಆಡಳಿತ ಹೆಣ್ಣಿನ ಕೈಯಲ್ಲಿರಬೇಕು ಎಂದು ‘ಹೋಂರೂಲ್’ನಲ್ಲಿ ಸೂಚಿಸಲಾಗಿದೆ. ಸಂಸಾರ ನಡೆಸಲು ಹೆಣ್ಣಿಗೆ ಗಂಡ ಎಲ್ಲ ಕೆಲಸಗಳಲ್ಲಿ ನೆರವು ನೀಡಬೇಕೆಂದು ಸಂದೇಶ ಕೊಡುತ್ತಾರೆ. ಮಗುವನ್ನು ನೋಡಿಕೊಳ್ಳುವ ಗಂಡನು ಒಂದು ಸಣ್ಣ ಬ್ರೇಕ್ಗಾಗಿ ಹೆಂಡತಿಯನ್ನು ‘ವಿಲ್ ಯು ರೂಲ್ ದಿ ವಲ್ರ್ಡ್ ಫಾರ್ ಎ ಟೈಮೂ’ ಎಂದು ಕೇಳಿಕೊಳ್ಳುತ್ತಾನೆ. ಸರಿಸಮಾನತೆಗಾಗಿ ಮೊದಲು ಧ್ವನಿಯೆತ್ತಿದ್ದ ಕೈಲಾಸಂಗೆ ಸ್ತ್ರೀಯರು ಮಿಲಿಟರಿಯಲ್ಲಿ ಉನ್ನತ ಹುದ್ದೆಗೆ ಅರ್ಹರು ಎಂಬ ಈಗಿನ ತೀರ್ಮಾನದ ವ್ಯವಸ್ಥೆ ಖುಷಿ ತಂದಿರಬಹುದು.
ಇಂಗ್ಲೆಂಡಿನಿಂದ ವಾಪಸ್ಸಾಗುವಷ್ಟರಲ್ಲಿ ತಾಯಿಯನ್ನು ಕಳೆದುಕೊಂಡ ಕೈಲಾಸಂ ಒಮ್ಮೆ ತನ್ನ ಗೆಳೆಯ ತಾಯಿಯನ್ನು ಪರಿಚಯಿಸಿದಾಗ ‘ಯು ಆರ್ ಎ ಲಕ್ಕಿ ಬಗ್ಗರ್’ ಎನ್ನುತ್ತಾರೆ. ಅವರ ಕೃತಿಗಳಲ್ಲಿ ತಾಯಿಗೆ ಮಹತ್ತರವಾದ ಸ್ಥಾನ. ಏಕಲವ್ಯನ ತಾಯಿ, ಮುದ್ಮಣಿಯ ಜೀವು, ಟೊಳ್ಳುಗಟ್ಟಿಯ ತಾಯಿ ಭಾಗೀರಥಮ್ಮ, ಸಾಕುತಾಯಿ ನರಸಮ್ಮ ಎಲ್ಲರೂ ಪ್ರಾತಿನಿಧಿಕ ಮಾತೆಯರು. ಕಡೆಗಾಲದಲ್ಲಿ ಡಾ| ಎಂ. ಶಿವರಾಮ್ರವರ ಮನೆಯಲ್ಲಿದ್ದಾಗ ಒಂದುದಿನ ರಾಶಿದಂಪತಿಗಳು ಮೊದಲು ಊಟಕ್ಕೆ ಕೂಡ್ರಬೇಕೆಂದು ಕೈಲಾಸಂ ಹಠಹಿಡಿದು ಅವರಿಗೆ ನಮಸ್ಕರಿಸುತ್ತ, “ಇಂದು ನನ್ನ ತಾಯಿಯ ಶ್ರಾದ್ಧ” ಎಂದು ಹೇಳಿ ಅಚ್ಚರಿಗೊಳಿಸಿದರಂತೆ. ಸಂಪ್ರದಾಯಕ್ಕೆ ವಿರೋಧಿ ಎಂದು ಕೈಲಾಸಂರವರನ್ನು ದೂರುವಂತಿಲ್ಲ. ‘ಶ್ರದ್ಧೆ ಇದ್ದರೆ ಅದು ಶ್ರಾದ್ಧ’ ಎಂಬುದನ್ನು ಸೂಕ್ಷ್ಮವಾಗಿ ತಮ್ಮ ನಡವಳಿಕೆಯ ಮೂಲಕ ತಿಳಿಸುತ್ತಾರೆ.
ಪರಸ್ತ್ರೀಯನ್ನು ನೋಡುವ ದೃಷ್ಟಿ ಒಂದೇ ರೀತಿ ಇರಬೇಕು, ಗೌರವದಿಂದ ಕಾಣಬೇಕು ಎಂದು ಅವರು ಪ್ರತಿಪಾದಿಸುತ್ತಿದ್ದರು. ಒಮ್ಮೆ ಯುವಕ ಶಿವರಾಮ್ ಜೊತೆ ಹೋಗುತ್ತಿದ್ದಾಗ ಒಂದು ಗಾಡಿಯಲ್ಲಿ ಇಬ್ಬರು ಸ್ಫುರದ್ರೂಪಿ ಹೆಂಗಸರು ಹೋಗುತ್ತಿದ್ದುದನ್ನು ಶಿವರಾಮ್ ತದೇಕಚಿತ್ತದಿಂದ ನೋಡುತ್ತಿದ್ದದ್ದನ್ನು ಗಮನಿಸಿ ‘ಅವರ್ಯಾರು ನಿನಗೆ ಗೊತ್ತೇ?’ ಎಂದು ಕೇಳುತ್ತಾರೆ. ‘ಇಲ್ಲ’ ಎಂಬ ಉತ್ತರ ಬರುತ್ತಿದ್ದಂತೆ ‘ಅವರ ಪೈಕಿ ಒಬ್ಬಳು ನನ್ನ ಪತ್ನಿ, ಇನ್ನೊಬ್ಬಳು ನನ್ನ ಪುತ್ರಿ’ ಎನ್ನುತ್ತಾರೆ. ತಕ್ಷಣವೇ ಶಿವರಾಮ್ರ ದೃಷ್ಟಿ ಬೇರೆ ಕಡೆ ಹೊರಳಿತÀಂತೆ. ಎಷ್ಟೋ ದಿನಗಳ ನಂತರ ವೈಟ್ಹೌಸಿನಲ್ಲಿ ಕೈಲಾಸಂ ಹೆಂಡತಿಯನ್ನು ನೋಡಿದಾಗಲೇ ತಿಳಿದಿದ್ದು, ಅಂದು ಕೈಲಾಸಂ ಸುಳ್ಳು ಹೇಳಿದ್ದ ವಿಷಯ. ಅತ್ಯಂತ ಸೂಕ್ಷ್ಮವಾಗಿ ಹಾಗೂ ಪರಿಣಾಮಕಾರಿಯಾಗಿ ಪರಸ್ತ್ರೀಯನ್ನು ನೋಡುವ ದೃಷ್ಟಿಯ ಬಗ್ಗೆ ಹೀಗೆ ಪಾಠ ಹೇಳಿದ್ದರು.
ಅತ್ತೆ ಸೊಸೆಯರ ಜಗಳ ಸರ್ವವ್ಯಾಪಿ. ‘ಹಲ್ಬಿದ್ ಹದ್ದು’ ಎಂದು ಅತ್ತೆಯನ್ನು ಬೈಯುವ ಸೊಸೆ, ‘ಚಿತ್ರಾಂಗಿ’ ಎಂದು ಪ್ರತಿಕ್ರಿಯಿಸುವ ಅತ್ತೆ ಸಮಾಧಾನವಾಗುವಷ್ಟು ಕಿತ್ತಾಡುತ್ತಾರೆ. ಅವರಲ್ಲಿ ನಾವು ಯಾರ ಕಡೆ ಅನುಕಂಪ ತೋರಬೇಕೆಂಬ ಜಿಜ್ಞಾಸೆಯಲ್ಲಿದ್ದಾಗ ಒಮ್ಮೆ ಅತ್ತೆಯ ಕಡೆ ಮತ್ತೊಮ್ಮೆ ಸೊಸೆಯ ಪಕ್ಷ ವಹಿಸುವಂತೆ ಪಾತ್ರ ರಚನೆಯಾಗಿದೆ. ಕೆಲವೊಮ್ಮೆ ಇಬ್ಬರದೂ ತಪ್ಪು ಅಥವಾ ಇಬ್ಬರದೂ ಸರಿ, ಮಧ್ಯೆ ಸಿಲುಕಿ ಒದ್ದಾಡುವ ಮನೆ ಯಜಮಾನನ ಮೇಲೆ ಅನುಕಂಪ ಬರುವ ಹಾಗೆ ಮಾಡುತ್ತಾರೆ: ಭಾಸನ ಪಾತ್ರಸೃಷ್ಟಿಯ ರೀತಿ. ಯಾರೂ ಕೆಟ್ಟವರಲ್ಲ, ಎಲ್ಲರಿಗೂ ಅವರದೇ ಆದ ಕಾರಣಗಳಿರುತ್ತವೆ ಎನ್ನಿಸುವಂತೆ ‘ಹುತ್ತದಲ್ಲಿ ಹುತ್ತ’ದಲ್ಲಿ ಮುಗ್ಧರನ್ನು ಮೋಸಗೊಳಿಸುವ ನಯವಂಚಕ ದಂಪತಿಗಳ ಬಗ್ಗೆ ಎಚ್ಚರಿಕೆ ಗಂಟೆ
ಬಾರಿಸುತ್ತಾರೆ. ಯಾರನ್ನೂ ಅತಿಯಾಗಿ ನಂಬುವ ಅಪಾಯದ ಬಗ್ಗೆ ಎಚ್ಚರಿಕೆಯಿದೆ.
ಗುಣವಿಶೇಷ
ಒಮ್ಮೆ ನಾಟಕವನ್ನು ನೋಡಲು ಮಾಸ್ತಿಯವರು ತಮ್ಮ ಪತ್ನಿಯನ್ನು ಕರೆದುಕೊಂಡು ಬರುತ್ತಾರೆ.
ಸಾಕಷ್ಟು ಸಂಖ್ಯೆಯಲ್ಲಿ ಪ್ರೇಕ್ಷಕರು ಬರದೇ ಇದ್ದು ನಾಟಕ ಪ್ರದರ್ಶನ ರದ್ದಾಗುತ್ತದೆ. ಆದರೆ ಕೈಲಾಸಂ ಮಾಸ್ತಿಯವರ ಹೆಂಡತಿ ಬಂದಿದ್ದರಿಂದ ಕಲೆಕ್ಷನ್ನನ್ನು ಕಡೆಗಣಿಸಿ ನಾಟಕವಾಡಲು ಹಠ ಹಿಡಿಯುತ್ತಾರೆ.
ಮತ್ತೊಮ್ಮೆ ಖಂಡಿತ ಕರೆತರುವ ಭರವಸೆ ಮಾಸ್ತಿಯವರಿಂದ ಬಂದಾಗ “ಹಾಗಾದ್ರೆ ಐದು ನಿಮಿಷ ಇರಿ. ನಾನು ಮುಖ ತೊಳೆದುಕೊಂಡು ಬಂದು ಆ ತಾಯಿಯ ಕ್ಷಮೆ ಕೇಳುತ್ತೇನೆ” ಎಂದು ಹೇಳಿ ಹಾಗೇ ನಡೆದುಕೊಳ್ಳುತ್ತಾರೆ ಕೂಡ.
ತಿ.ತಾ. ಶರ್ಮರ ಪತ್ನಿ ಭಾರತಿಯವರ ಮನೆಗೆ ಒಮ್ಮೆ ಒಬ್ಬ ವಿಲಾಯಿತಿ ಡ್ರೆಸ್ಸಿನಲ್ಲಿದ್ದ ಅಪರಿಚಿತ ಬಂದು “ಶಾಮಣ್ಣನವರು ಮನೆಯಲ್ಲಿ ಇರುವ ಬೆಂಚು ಹಾಗೂ ಕುರ್ಚಿಗಳನ್ನು ತರಲು ಹೇಳಿದ್ದಾರೆ,

ತೆಗೆದುಕೊಂಡು ಹೋಗ್ತೀನಿ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮಹಡಿಯ ಮೇಲೆ ಹೋಗಿ ಭುಜದ ಮೇಲೆ ಎರಡು ಬೆಂಚುಗಳನ್ನೂ ಮೂರು ಕುರ್ಚಿಗಳನ್ನೂ ಹೊತ್ತು ಹೊರಗಡೆ ಮೈದಾನಕ್ಕೆ ಹೊರಡುತ್ತಾನೆ. ರಾತ್ರಿ ಶಾಮಣ್ಣನವರು ಮನೆಗೆ ಬಂದಾಗ ಭಾರತಿಯವರು “ಅದ್ಯಾವನೋ ದೈತ್ಯ ಅಷ್ಟೊಂದು ಭಾರವನ್ನು ಹೊತ್ತು ಹೋದವನು?” ಎಂದು ಕೇಳಿದಾಗ “ಮೊನ್ನೆ ತಾನೆ ಭಾರತಕ್ಕೆ ಹಿಂದಿರುಗಿದ ಟಿ.ಪಿ. ಕೈಲಾಸಂ” ಎಂದು ಹೇಳಿದಾಗ ಆಶ್ಚರ್ಯವಾಗುತ್ತದೆ. ಮೈದಾನದಲ್ಲಿ ನಾಟಕ ನೋಡಲು ಬಂದ ಅನೇಕ ಹೆಂಗಸರಿಗೆ ಕುರ್ಚಿಗಳಿಲ್ಲದೆ ನಿಂತೇ ನಾಟಕ ನೋಡಲು ತಯಾರಾದಾಗ ಕೈಲಾಸಂ ತಕ್ಷಣವೇ ಮನೆಯಿಂದ ಬೆಂಚು ಕುರ್ಚಿಗಳನ್ನು ಹೊತ್ತು ತರುತ್ತಾರೆ. ಅವರ ಡ್ರೆಸ್ ಆಗಲಿ ಸ್ಟೇಟಸ್ ಆಗಲಿ ಅಡ್ಡ ಬರುವುದಿಲ್ಲ. ಹೆಂಗಸರ ಬಗ್ಗೆ ಕೈಲಾಸಂಗಿದ್ದ ಕಾಳಜಿಗೆ ಇದೂ ಸಾಕ್ಷಿ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಒಂದು ಹೆರಿಗೆ ಆಸ್ಪತ್ರೆ ಕಟ್ಟಲು ಡಾ|| ಆಲ್ಬುಕರ್ಕ್ ನಿರ್ಧರಿಸಿ, ಅದಕ್ಕೆ ಬೇಕಾದ ಹಣವನ್ನು ಬೆನೆಫಿಟ್ ಶೋ ಮೂಲಕ ಸಂಗ್ರಹಿಸಿ ಕೊಡಲು ಕೈಲಾಸಂಗೆ ಶಿವರಾಮ್ ಮೂಲಕ ವಿನಂತಿಸಿದಾಗ ತಕ್ಷಣ ಒಪ್ಪಿದರು. ಖರ್ಚು ಕಡಮೆಯಾಗಲಿ ಎಂದು ಎಲ್ಲ ಹೊಸ ಕಲಾವಿದರನ್ನೇ ಹಾಕಿಕೊಂಡು ನಾಟಕವಾಡಿ 35 ಸಾವಿರ ರೂಪಾಯಿ (ಅಂದಿನ ಕಾಲಕ್ಕೆ ಇದು ದೊಡ್ಡದಾದ ರಖಂ) ಕೊಟ್ಟರು. ಅದರ ಫಲವೇ ಲಕ್ಷಾಂತರ ಹೆಣ್ಣುಮಕ್ಕಳಿಗೆ ಸೇವೆ ಸಲ್ಲಿಸುತ್ತಿರುವ ವಾಣೀವಿಲಾಸ ಆಸ್ಪತ್ರೆ. ಈ ವಿಷಯ ಬಹಳಷ್ಟು ಜನಕ್ಕೆ ತಿಳಿದಿಲ್ಲ. ಸಿನೆಮಾ ನಟನಾಗಬಯಸಿದ್ದ ಶಿವರಾಮ್ನನ್ನು ಸಂದರ್ಶನದಲ್ಲಿ ಫೇಲಾಗುವಂತೆ ಮಾಡಿ ವಿದ್ಯಾಭ್ಯಾಸ ಮುಂದುವರಿಸಿ ಮುಂದೆ ಖ್ಯಾತ ವೈದ್ಯನನ್ನಾಗಿ ಮಾಡಿದ್ದು ಕೈಲಾಸಂ. ಬೆಂಗಳೂರು ಮೆಡಿಕಲ್ ಕಾಲೇಜು ಸ್ಥಾಪನೆಯಾಗಲು ಪರೋಕ್ಷವಾಗಿ ಕಾರಣರಾದವರು ಕೈಲಾಸಂ. ಒಬ್ಬ ಲೇಖಕ ತನ್ನ ಕೃತಿಗಳೇ ಸಮಾಜಕ್ಕೆ ಕೊಡುಗೆ ಎಂದು ಕೈಕಟ್ಟಿ ಕುಳಿತರೆ ಏನು ಪ್ರಯೋಜನ? ಏನಾದರೂ ಒಳ್ಳೆಯದನ್ನು ಮಾಡಬೇಕೆಂದು ಎಲ್ಲ ಕ್ರಿಯಾಶೀಲ ಯೋಜನೆಗಳಲ್ಲಿ ಭಾಗಿಯಾಗಿದ್ದ ಒಬ್ಬ ನಾಟಕಕಾರ ಪ್ರಪಂಚದ ಯಾವ ಭಾಗದಲ್ಲೂ ಸಿಕ್ಕ ಉದಾಹರಣೆಯಿಲ್ಲ. ‘ಪೆÇೀಲಿ ಕಿಟ್ಟಿ’ಯಲ್ಲಿರುವ ಪರರ ಸಹಾಯಕ್ಕೆ ಯಾವಾಗಲೂ ‘ಬಿ ಪ್ರಿಪೇರ್ಡ್’ ಎಂಬ ಸ್ಕಾಟ್ ಸಿದ್ಧಾಂತ ನಾಟಕದ ಪ್ರದರ್ಶನಕ್ಕೆ ಸೀಮಿತವಾಗದೆ ಮೈಸೂರಿನ ಕೆ.ಆರ್. ಮಿಲ್ಸ್ನಲ್ಲಿ ಅಗ್ನಿ ಅವಘಡವಾದಾಗ ನಾಟಕವಾಡಿದ ರೋವರ್ಸ್ ಅಗ್ನಿಯನ್ನು ಶಮನಮಾಡುವ ಕಾರ್ಯದಲ್ಲಿ ಭಾಗವಹಿಸಿ ಮೈಸೂರು ಒಡೆಯರಿಂದ ಪ್ರಶಂಸೆಗೆ ಒಳಗಾಗುತ್ತಾರೆ.

ಹಾಸ್ಯದ ಮೂಲಕ ಅತ್ಯುತ್ತಮ ವಿಚಾರಗಳನ್ನು ತಿಳಿಸುವಾಗ ‘ಬಂಡ್ವಾಳವಿಲ್ಲದ ಬಡಾಯಿ’ ನಾಟಕದಲ್ಲಿ ಬರುವ ಮುದ್ಮಣಿ ಪಾತ್ರ ಸರಿಯಾಗಿ ಅರ್ಥವಾಗಲಿಲ್ಲ. ಕಡುಕಪ್ಪಿನ ಧಡಿಯ, ಚಡ್ಡಿ, ಕೋಟು, ಒಂದು ಕೈ ಉದ್ದ, ಇನ್ನೊಂದು ಗಿಡ್ಡ, ಕೋಟಿನ ಗುಂಡಿ ಏರುಪೇರು, ಜಡೆ, ಹೂ, ಟೋಪಿ ಎಲ್ಲ ಸೊಟ್ಟಂಬಟ್ಟ. ಗೊಣ್ಣೆ ಸುರಿಸಿಕೊಂಡು ವೇದಿಕೆ ಮೇಲೆ ಪ್ರತ್ಯಕ್ಷವಾದಾಗ ನಗುವುದನ್ನು ತಡೆದುಕೊಳ್ಳಲು ಸಾಧ್ಯವೇ? ಇನ್ನು ಬಾಯಿಬಿಟ್ಟರೆ ದೇವರೇ ಗತಿ! “ಸ್ಫರ್ಕೆದ್ಬೆಲ್ಲಾ, ತಾಕುಪೊಪ್ಪು ಫರ್ ಫರ್ ಭಾಗ…” ಎನ್ನುವಾಗ ಎದುರಿಗಿದ್ದವರ ಮುಖಕ್ಕೆ ಪ್ರಕ್ಷಾಳನ. ಅದಕ್ಕೆ ‘ಪನ್ನೀರು ದಾನಿ’ ಎಂಬ ಬಿರುದು.
ಕೈಲಾಸಂ ಚಿತ್ರಿಸಿದ ಒಬ್ಬ ಬುದ್ಧಿಮಾಂದ್ಯ ಮಗು ಮುದ್ಮಣಿ. ತಂದೆ ಅಹೋಬ್ಲು ತಾಯಿ ಚೀವು. ತಮ್ಮ ಸ್ಪೆಷಲ್ ಚೈಲ್ಡ್ಅನ್ನು ಅನಿವಾರ್ಯದಿಂದ ಆಲಂಗಿಸಿಕೊಂಡು ತಮ್ಮ ಸಂಕಟವನ್ನೆಲ್ಲ ಹೊಟ್ಟೆಯಲ್ಲಿ ಅದುಮಿಕೊಂಡು ತಮಾಷೆ ಮಾಡಿಕೊಂಡು ಜೀವನ ಸಾಗಿಸುವ ಸರ್ಕಸ್ ನಗುವಿನ ಅಲೆಯಲ್ಲಿ ಕೊಚ್ಚಿಕೊಂಡು ಹೋಯಿತು. ಕೈಲಾಸಂ ದಿನಾಚರಣೆಯಲ್ಲಿ ಮೈಸೂರಿನ ವಾಕ್ ಮತ್ತು ಶ್ರವಣ ತಜ್ಞ ಡಾ|| ನ. ರತ್ನರವರು ಮುದ್ಮಣಿಯ ಪಾತ್ರವನ್ನು ಎಳೆಎಳೆಯಾಗಿ ಬಿಡಿಸಿದಾಗ ಪ್ರೇಕ್ಷಕರಾಗಿ ಕೈಲಾಸಂರ ಬಗ್ಗೆ ಹೊಸ ಆಯಾಮದ ಅರಿವಾಯಿತು. ಡಾ|| ನ. ರತ್ನರವರು ಆ ಪಾತ್ರವನ್ನು ಆಡಿ ಅನುಭವಿಸಿದವರು. ಸಫರಿಂಗ್ ಲಂಬೋದರ ಸರ್ವತ್ರ… ಸತ್ಮೇಲೆ ವಿಮೋಚನೆ ಎಂದು ಒಪ್ಪಿಕೊಂಡ ಅಹೋಬ್ಲು ಮಗನನ್ನೇ ರೇಗಿಸುತ್ತಾನೆ. “ನನ್ಮಗನ
ಬಣ್ಣಕ್ಕೆ ಮಾಧ್ವರ ಮನೆ ಸಾದುನೆ ಗಂಧದ ತರ ಕಾಣುತ್ತೆ” ಎನ್ನುತ್ತಾನೆ. ಅದಕ್ಕೆ ಜೀವು “ಕಪ್ಪಾಗಿದ್ರು ಮುಖ ಕೆಂಪಗೆ ಕಾಣೊ ಹಾಗೆ ಮಾಡಕ್ಕಾಗೊಲ್ವ?” ಎಂದು ಕೇಳುತ್ತಾಳೆ. ಅದಕ್ಕೆ “ಆಗದೆ ಏನು, ಆಗುತ್ತೆ ಆದರೆ ದಿ ಆನ್ಸರ್ ಈಸ್ ಇನ್ ದಿ ನೆಗೆಟಿವ್” ಅಂತ ಪನ್ ಮಾಡುತ್ತಾನೆ.
ವಿಚಾರ ಮಂಡನೆ
ಉಚ್ಚಾರಣೆಯಲ್ಲಿ ಅಡೆತಡೆಗಳನ್ನು ಗುರುತಿಸಿ ಮುದ್ಮಣಿಯನ್ನು ಕಿವುಡು ಮೂಕರ ಶಾಲೆಗೆ ಸೇರಿಸುತ್ತಾರೆ. ಸ್ಕೂಲಿನಲ್ಲಿ ಬೇರೆ ಹುಡುಗರು ಅಣಕಿಸಬಾರದು ಎಂಬ ಉದ್ದೇಶ. ಅವನ ತಪ್ಪು ಉಚ್ಚಾರಣೆ ಕೇಳುವುದಕ್ಕೆ ಅವರಿಗೆ (ಕಿವುಡರಿಗೆ) ಕೇಳಿಸುವುದಿಲ್ಲ. ಮೂಕನನ್ನು ಅಣಕಿಸುವುದಕ್ಕೆ ಮೂಗರಿಗೆ ಸಾಧ್ಯವೇ ಇಲ್ಲ ಎನ್ನುವ ಸಮಾಧಾನ ಪೇರೆಂಟ್ಸ್ಗೆ. ಎಷ್ಟೇ ನ್ಯೂನತೆ ಕಾಡುತ್ತ ಇದ್ದರೂ ತಮ್ಮ ಮಗನು ಯಾವುದಾದರೂ ಆಟದಲ್ಲಿ ಗೆಲ್ಲಲಿ ಎಂಬ ಆಸೆ ಇರುವುದಿಲ್ಲವೆ? ಒಮ್ಮೆ ಮುದ್ಮಣಿ ತಂಡ ಇನ್ನೊಂದು ಶಾಲೆಯ ಮೇಲೆ ಗೆಲ್ಲುತ್ತಾರೆ. ಫುಟ್ಬಾಲ್ನಲ್ಲಿ ಸೆಂಟರ್ ಫಾರ್ವರ್ಡ್ (ಹೊಟ್ಟೆ ಡುಮ್ಮ) ಮುದ್ಮಣಿ ಗೆಲ್ಲುವಲ್ಲಿ ಪಾತ್ರವಹಿಸುತ್ತಾನೆ. ವಿಡಂಬನೆ ಏನೆಂದರೆ ಆ ಪಂದ್ಯ ಕುರುಡರ ಶಾಲೆಯ ಮೇಲೆ ಎನ್ನುವ ವಿಚಾರ! ಈ ಸಂದರ್ಭದಲ್ಲಿ ಜೀವನ ನಡೆಸುವುದಕ್ಕೆ ಕುರುಡರಿಗಿಂತ ಕಿವುಡ ಮೂಕರೇ ವಾಸಿ ಎನ್ನುವ ವಾಸ್ತವ. ಎಂತಹ ದಾರುಣ ಚಿತ್ರಣವನ್ನು ಕೈಲಾಸಂ ಕಟ್ಟಿಕೊಡುತ್ತಾರೆ! ಇಲ್ಲಿ ದಾರ್ಶನಿಕ ಕೈಲಾಸಂ ಅದ್ಭುತ ವಿಚಾರಗಳನ್ನು ಮುಂದಿಡುತ್ತಾರೆ. ಸೂರ್ಯಗ್ರಹಣ, ಚಂದ್ರಗ್ರಹಣ ಇರುವಂತೆ ಎಕ್ಲಿಪ್ಸ್ ಆಫ್ ದಿ ಅರ್ಥ್ ಇದೆ ಎಂದು ಅಹೋಬ್ಲು ಪ್ರತಿಪಾದಿಸುತ್ತಾನೆ. ‘ಶಾಡೋ ಆಫ್ ಮೈ ಸನ್ ಆನ್ ದಿ ಎಟರ್ನಲ್ ಮದರ್ ಮೇಲೆ ಬಿದ್ದಾಗ ಆಗುತ್ತೆ’ ಎಂಬ ಕಟುಸತ್ಯ ತಿಳಿಸುತ್ತಾನೆ. ಹಾಗೆ ಅದರ ವಿಶೇಷವೆಂದರೆ ವಿಮೋಚನೆ ಇಲ್ಲದ ಗ್ರಹಣವೆಂದು ತಿಳಿಸುತ್ತಾರೆ. ‘ಹೆತ್ತವರಿಗೆ ಹೆಗ್ಗಣ ಮುದ್ದು ಸರಿ ಆದರೆ ಹೆಗ್ಗಣಕ್ಕೆ ಹೆತ್ತವರು ಮುದ್ದೆ?’ ಎಂಬ ಪ್ರಶ್ನೆ ಎತ್ತಿ ತನ್ನನ್ನು ಹೀಗೆ ಹೆತ್ತವರ ಮೇಲೆ ಆ ಮಗುವಿಗೆ ಅದು ಎಷ್ಟು ಕೋಪವಿರಬೇಕು ಎಂಬುದನ್ನು ಮಾರ್ಮಿಕವಾಗಿ ತಿಳಿಸುತ್ತಾರೆ. ಇಷ್ಟಾದರೂ ಮಗುವನ್ನು ‘ಮೊದ್ಮಣಿ’ ಎಂದು ಕರೆಯದೆ ‘ಮುದ್ಮಣಿ’ ಎಂದು ಕರೆದು ಮುದ್ದಿಸುತ್ತಾರೆ.
ಸವ್ಯಸಾಚಿ
‘ಕನ್ನಡಕ್ಕೊಬ್ಬನೇ ಕೈಲಾಸಂ’ ಎಂದು ಕೇವಲ ಒಂದು ಭಾಷೆಗೆ ಅವರನ್ನು ಕಟ್ಟಿಹಾಕುವುದು ನ್ಯಾಯವಲ್ಲ. ಬಳಸುತ್ತಿದ್ದ ಭಾಷೆ ಆಂಗ್ಲೋಕನ್ನಡ ಅಥವಾ ಕಂಗ್ಲಿಷ್ ಬೆರಕೆ ಭಾಷೆ ಎಂದು ಅನೇಕರು ಆರೋಪಿಸುತ್ತಾರೆ. ಉತ್ತರ ಕರ್ನಾಟಕದ ಮಂದಿ ಕೈಲಾಸಂ ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡಬೇಕೆಂದು ಲೇವಡಿ ಮಾಡಿದ್ದೂ ಇದೆ. ಯಾವ ಭಾಷೆಯೂ ಅವರಿಗೆ ಪೂರ್ತಿ ಬರುವುದಿಲ್ಲ ಎಂದಲ್ಲ. ಹಾಗೆ ನೋಡಿದರೆ ಎಲ್ಲ ಭಾಷೆಗಳ ಮೇಲೆ ಸಂಪೂರ್ಣ ಪರಿಣತಿ ಹೊಂದಿದ್ದವರು ಕೈಲಾಸಂ. ಮಹಾಭಾರತದಲ್ಲಿ ಅವರು ಭೀಷ್ಮ, ದ್ರೋಣ, ಏಕಲವ್ಯ, ಕರ್ಣ ಅವರ ಬಗ್ಗೆ ಇಂಗ್ಲಿಷಿನಲ್ಲಿ ನಾಟಕ ರಚಿಸಿದ್ದಾರೆ. ಹಾಗೆ ಒಂದು ಇಂಗ್ಲಿಷ್ ಪದ ಪ್ರಯೋಗವೆ ಇಲ್ಲದೆ ಸೀಕರ್ಣೆ ಸಾವಿತ್ರಿ, ವೈದ್ಯನ ವ್ಯಾಧಿ, ತಾವರೆಕೆರೆ ಎಂಬ ಕಥಾನಕ ರಚಿಸಿದ್ದಾರೆ. ಚಿಂತನ-ಮಂಥನ ಮಾಡುತ್ತಿದ್ದದ್ದು ಇಂಗ್ಲಿಷಿನಲ್ಲೇ. ಗಂಭೀರ ವಿಷಯಗಳನ್ನು ಮಾಮೂಲಿನ ಬೆರಕೆ ಭಾಷೆಯಲ್ಲಿ ಬರೆದರೆ ಅದನ್ನು ಲಘುವಾಗಿ ತೆಗೆದುಕೊಳ್ಳಬಹುದೆಂಬ ಭಯವಿತ್ತು ಅವರಿಗೆ. ಗಾಂಧಿಯವರನ್ನು ಹತ್ತಿರದಿಂದ ಕಾಣುವ ಅವಕಾಶ ಬಂದಾಗಲೂ ದೂರದಿಂದಲೇ ನಮಸ್ಕರಿಸುತ್ತಾರೆ. ಗಾಂಧಿಯವರ ಇಡೀ ವ್ಯಕ್ತಿತ್ವವನ್ನು ‘ದಿ ರಿಸಿಪಿ’ ಎಂಬ ಪುಟ್ಟ ಕವನದಲ್ಲಿ ಹಿಡಿದಿಟ್ಟಿದ್ದಾರೆ. ಆದರೆ ನಾಟಕದಲ್ಲಿ ಸಂಸ್ಕೃತ, ತಮಿಳು, ತೆಲುಗು, ಉರ್ದು, ಮಲಯಾಳಂ ಎ¯್ಲ ಭಾಷೆಗಳನ್ನು ಸಹಜವಾಗಿ ಬಳಸಿ ಭಾಷಾತೀತರಾಗುತ್ತಾರೆ. ಎಲ್ಲ ಜಾತಿಯ ಅಯ್ಯರ್, ಅಯ್ಯಂಗಾರ್, ಸ್ಮಾರ್ತ, ಮಾಧ್ವ, ಶೆಟ್ಟಿ, ಸಾಬಿ ಎಲ್ಲರೂ ಬರುತ್ತಾರೆ. ಜಾತ್ಯತೀತರು ಆಗುತ್ತಾರೆ. ಜಾತಿಯಲ್ಲಿ ನಂಬಿಕೆಯಿಲ್ಲದ “Caste is determined on the basis of his/her worth to this earth and not by incidental or accidental birth” ಎನ್ನುತ್ತಾರೆ. ವಿಶೇಷವಾಗಿ ಕರ್ಣ ಮತ್ತು ಏಕಲವ್ಯನ ಮೇಲೆ ಪ್ರೀತಿ ಮತ್ತು ಅನುಕಂಪ. ಅತ್ಯಂತ ಶೋಷಿತರೆಂಬ ಕಾರಣ. ‘ದಿ ಪರ್ಪಸ್’, ‘ಬರ್ಡನ್, ‘ದಿ ಬ್ರಾಹ್ಮಿನ್ಸ್ ಕರ್ಸ್’, ‘ಫುಲ್ಫಿಲ್ಮೆಂಟ್’, ‘ಕೀಚಕ’ ಉನ್ನತಮಟ್ಟದ ನಾಟಕಗಳು. ಕರ್ಣನ ಬಗ್ಗೆ ಒಂದು ಸಾನೆಟ್ ಕೂಡ ಬರೆದಿದ್ದರು. ಕರ್ಣನ ಬಗ್ಗೆ ಸಿನೆಮಾ ತಯಾರಿಸಿ ತಾನೆ ನಿರ್ದೇಶನ ಮಾಡಲು ಹವಣಿಸುತ್ತಿದ್ದರು. ಅದು ನನಸಾಗದಿದ್ದುದು ನಮ್ಮೆಲ್ಲರ ದೌರ್ಭಾಗ್ಯ.

ಮೂಲ ಮಹಾಭಾರತದ ಘಟನೆಗಳನ್ನು ಮಾರ್ಪಾಡು ಮಾಡಿ ಅವಕ್ಕೆ ಹೆಚ್ಚಿನ ಘನತೆ ತಂದರು. ತುಂಬಿದ ಸಭೆಯಲ್ಲಿ ದ್ರೌಪದಿಯ ಸೀರೆಯನ್ನು ಎಳೆಯಲು ದುಶ್ಶಾಸನ ಮುಂದಾದಾಗ ಕರ್ಣ ‘ಇನ್ನೊಂದು ಹೆಜ್ಜೆ ಮುಂದಿಟ್ಟರೆ ನಿನ್ನನ್ನು ಕೊಂದುಹಾಕುತ್ತೇನೆ’ ಎಂದು ಬೆದರಿಸುತ್ತಾನೆ. ಪರೋಕ್ಷ ಶಿಷ್ಯನೊಬ್ಬನನ್ನು ಹೆಬ್ಬೆರಳನ್ನು ಗುರುದಕ್ಷಿಣೆ ಕೇಳುವಷ್ಟು ಕೀಳುಮಟ್ಟಕ್ಕೆ ದ್ರೋಣ ಇಳಿಯುವುದಿಲ್ಲ. ಗುರುವಿನ ಸಂದಿಗ್ಧ ಪರಿಸ್ಥಿತಿಯಿಂದ ಪಾರುಮಾಡಲು ಏಕಲವ್ಯನೇ ತನ್ನ ಹೆಬ್ಬೆರಳನ್ನು ಕೊಯ್ದುಕೊಳ್ಳುತ್ತಾನೆ. ಇಂತಹ ಮಾರ್ಪಾಡು ಮೂಲಕ್ಕೆ ಮಾಡಿದ ಅಪಚಾರ ಎಂದು ಯಾರೂ ತಕರಾರು ತೆಗೆಯಲಿಲ್ಲ.
ಸಂಗೀತಜ್ಞಾನ ಅಪಾರವಾಗಿದ್ದ ಕೈಲಾಸಂ ಮೈಸೂರಿನಲ್ಲಿ ಪ್ರತಿರಾತ್ರಿ ವರದಾಚಾರ್ಯರ ನಾಟಕ ನೋಡುತ್ತಿದ್ದರು. ಸಂಗೀತ ಸವಿಯಲೆಂದೇ ಹಾಗೆ ಮಾಡುತ್ತಿದ್ದರು. ಜೊತೆಯಲ್ಲಿ ಗೆಳೆಯ ಅಡ್ವೊಕೇಟ್
ಎಚ್. ಸುಬ್ಬರಾವ್ (ಸುಬ್ಬಣ್ಣಿ) ಇರಲೇಬೇಕು. ವಾಪಸ್ಸಾಗುವಾಗ ನಾಟಕದ ಹಾಡುಗಳನ್ನು ಅದೇ ರಾಗದಲ್ಲಿ ಇಂಗ್ಲಿಷಿಗೆ ತರ್ಜುಮೆ ಮಾಡಿ ಹಾಡುತ್ತಿದ್ದರಂತೆ. ಇಂಗ್ಲೆಂಡ್ನಲ್ಲಿ ಇದ್ದಾಗಲೇ ‘ಕಾನ್ಸ್ಟೆಂಟಿನೋಪಲ್’ ಹಾಡನ್ನು ‘ಕೋಳಿ ಕೆ ರಂಗ’ ಆಗಿ ಪರಿವರ್ತಿಸುತ್ತಾರೆ. ‘ತಿಪ್ಪಾರಳ್ಳಿ ಬಲು ದೂರ’ ಎಂಬುದು ‘ಇಟ್ ಈಸ್ ಎ ಲಾಂಗ್ ಲಾಂಗ್ ವೇ ಟು ಟಿಪ್ಪೆರರಿ’ ಎಂಬುದರ ರೂಪಾಂತರ. ‘ನಂಕಂಪ್ನಿ’ ನಾಟಕದಲ್ಲಿ ಕೈಲಾಸಂರವರ ಸಂಗೀತ ಪ್ರೌಢಿಮೆಯ ಝಲಕ್ ನೋಡಬಹುದು. ಶ್ಲೇಷೆಯಲ್ಲಿ ಅಪ್ರತಿಮರು. ಕಟ್ಟಿಹಾಕಿರುವ ನಾಯಿಯ ದ್ವಂದ್ವವನ್ನು “ಟು ಕಿತ್ಕೊಳ್ಳೊ ನಾಟ್ ಟು ಕಿತ್ಕೊಳ್ಳೊ’ ಎಂದು ಪ್ರಯೋಗಿಸುತ್ತಾರೆ. ‘ನಾಟ್’ ಶಬ್ದದ ಎರಡೂ ಅರ್ಥದಲ್ಲಿ ಪನ್ ಮಾಡಿ ಹ್ಯಾಮ್ಲೆಟ್ನ ‘ಟು ಬಿ ಆರ್ ನಾಟ್ ಟು ಬಿ’ ದ್ವಂದ್ವವನ್ನು ನೆನಪಿಸುತ್ತಾರೆ. ಪ್ರಾಸ ಪ್ರಿಯತೆ ಆವಶ್ಯಕತೆಗಿಂತ ಜಾಸ್ತಿ ಪ್ರಯೋಗಿಸಿದ್ದು ಅವರ ವೀಕ್ನೆಸ್ ಇರಬಹುದು. ‘ಬೀದಿಲಿ ಬಿಡಗಾಸು ಬಿದ್ದಿದೆ ಅಂತ ಬಗ್ ನೋಡ್ಕಂಡು ಬರ್ತಿದ್ಯಾ ಬಕವೆ’ ಎಂಬ ‘ಬ’ಕಾರದ ದೀರ್ಘ ಪ್ರಾಸವನ್ನು ಉದಾಹರಣೆಗೆ ಕೊಡಬಹುದು.
ಬಹುಮುಖ ವ್ಯಕ್ತಿತ್ವ
ಕೈಲಾಸಂರವರಿಗೆ ರಿಪಾರ್ಟಿ (Repartee) ಹೇರಳವಾಗಿತ್ತು. ಅವರೊಬ್ಬ ಪ್ರತ್ಯುತ್ತರ ಪ್ರವೀಣ ಎನ್ನಬಹುದು. ಕಸದ ಮಧ್ಯದಲ್ಲೇ ಕಮ್ಫರ್ಟಬಲ್ ಆಗಿರುತ್ತಿದ್ದ ಅವರನ್ನು ಒಬ್ಬರು ‘ಎಷ್ಟೊಂದು ಕಸ ಇದೆಯಲ್ಲಾ…’ ಎಂದಾಗ, ಕೈಲಾಸಂ ‘ಕಸವೆಂದರೆ ಏನು ಗೊತ್ತಾ?’ ಎಂದು ಕೇಳುತ್ತಾರೆ. ಆ ವ್ಯಕ್ತಿ ಡಿಫೆಂಡ್ ಮಾಡಲು ತಡಬಡಾಯಿಸುತ್ತಾಗ ತಾನೇ ‘ಯಾವ ವಸ್ತು ಎಲ್ಲಿ ಇರಬಾರದು ಅದು ಅಲ್ಲಿದ್ದರೆ ಕಸ. ಫಾರ್ ಎಕ್ಸಾಂಪಲ್ ಯು ಇನ್ ಮೈ ರೂಮು’ ಎನ್ನುತ್ತಾರೆ. ಅಭಿಮಾನಿಯೊಬ್ಬ “ಸಾರ್, ನಿಮ್ಮನ್ನ ಎಲ್ಲರೂ ಡ್ರಂಕರ್ಡ್ ಅಂತಾರಲ್ಲ…..” ಎಂದಾಗ, ಕೈಲಾಸಂ “ಬರಿ ಡ್ರಂಕರ್ಡ್ ಅಲ್ಲ ಥಿಂಕ್ ಹಾರ್ಡ್ ಅಂತ ಹೇಳಬೇಕಾಗಿತ್ತು” ಎನ್ನುತ್ತಾರೆ. ತಂದೆ ಸಾಯುವ ಸ್ಥಿತಿಯಲ್ಲಿದ್ದಾಗ ಕೈಲಾಸಂರನ್ನು ಕರೆದು “ಆಸ್ತಿಯನ್ನು ನಿನ್ನ ಹೆಸರಿಗೆ ಬರೆಯಲೋ ಅಥವಾ ನಿನ್ನ ಪತ್ನಿಯ ಹೆಸರಿಗೆ ಬರಿಲಾ?” ಎಂದು ಕೇಳಿದಾಗ “ನನಗೆ ಕೊಟ್ಟರೂ ನಾನು ಅವಳಿಗೇ ವರ್ಗಾಯಿಸಬೇಕು. ನೀವೇ ನೇರವಾಗಿ ಕೊಟ್ಟುಬಿಡಿ” ಎನ್ನುತ್ತಾರೆ. ಅದಕ್ಕೆ
ಪರಮಶಿವ ಅಯ್ಯರ್ “ಆರ್ ಯೂ ಸೀರಿಯಸ್ ಪಾಪಣ್ಣಿ?” ಎಂದು ಕೇಳುತ್ತಾರೆ. ತಕ್ಷಣವೇ ಕೈಲಾಸಂ “ಪಪ್ಪಾ, ಯು ಆರ್ ಸೀರಿಯಸ್, ಐಯಾಮ್ ಅರ್ನೆಸ್ಟ್” ಎಂದು ಹೇಳಿ ಆಂಗ್ಲ ಪದದ ಸರಿಯಾದ ಪ್ರಯೋಗದ ಬಗ್ಗೆ ಅಂತಹ ಸ್ಥಿತಿಯಲ್ಲೂ ತಿದ್ದುತ್ತಾರೆ.
ಸಮೀಪಕ್ಕೆ ಬಂದವರನ್ನೆಲ್ಲ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಕೈಲಾಸಂರವರ ನಾಟಕಗಳನ್ನು ನೋಡಲು ನೀ ಮುಂದು ತಾ ಮುಂದು ಎಂದು ಸರದಿಗಾಗಿ ಕಾಯುತ್ತಿದ್ದರು. ಅವರ ಪೈಕಿ ಬಿ.ಎಸ್. ರಾಮರಾವ್, ಬಿ.ಎಸ್. ವೆಂಕಟರಾಮ್, ಇ.ಆರ್. ಸೇತುರಾಮ್, ವೈ.ಎನ್.ಕೆ. ಮುಖ್ಯವಾದವರು. ಇದೇ ರಾತ್ರಿ ಡಿಕ್ಟೇಶನ್. ಕೈಲಾಸಂ ತಾವೇ ಬರೆಯದಿದ್ದಕ್ಕೆ ಮುಖ್ಯ ಕಾರಣ ಅವರ ಆಲೋಚನೆಗಳಿಗೆ ಅವರ ಕೈ ಸ್ಪಂದಿಸುತ್ತಿರಲಿಲ್ಲ. ವೈಟ್ಹೌಸ್ನ (ತಂದೆಯ ನಿವಾಸ) ಹಿಂದಿನ ಒಂದು ಕೋಣೆಯಲ್ಲಿ ನಾಟಕಗಳ ರಚನೆಯಾಗುತ್ತಿದ್ದವು. ಆ ರೂಮನ್ನು ನೂಕ್ (Nook) ಎಂದು ಕರೆಯುತ್ತಿದ್ದರು. ವೈಟ್ಹೌಸಿನ ‘ಬ್ಲಾಕ್ಸ್ಪಾಟ್’ ಎಂದು ತಮ್ಮನ್ನು ತಾವೇ ಕರೆದುಕೊಳ್ಳುತ್ತಿದ್ದರು. ಮನೆಯಲ್ಲಿ ದುಡಿಯುತ್ತಿದ್ದ ಕೃಷ್ಣ ಸಾಹಿತ್ಯದ ಚರ್ಚೆ ಮಾಡಿಸುವಷ್ಟು ಕೈಲಾಸಂ ಪ್ರಭಾವ ಬೀರಿದ್ದರು. ಅದನ್ನು ಕಂಡ ಕೆ.ವಿ. ಅಯ್ಯರ್ ಸಾಹಿತ್ಯಾಭ್ಯಾಸ ಮಾಡಿ ಮುಂದೆ ರೂಪದರ್ಶಿ, ಶಾಂತಲಾ ಕಾದಂಬರಿ ಬರೆದದ್ದು ಇತಿಹಾಸ. ಅವರ ವ್ಯಾಯಾಮಶಾಲೆಯಲ್ಲಿ ಪ್ರತಿದಿನ ಕಸರತ್ತು ಮಾಡುತ್ತಿದ್ದರು ಕೈಲಾಸಂ.
ಚಿನ್ನದ ಗಣಿ
ಅಗೆವಾಗ್ಗೆ ಮೊದಲು ಕೋಶಾವಸ್ಥೆ ಮಣ್ಣು
ಕೆಳಕ್ಕೆ ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ
ಕಂಡೀತು ಗೆರೆಮಿರಿವ ಚಿನ್ನದದಿರು
ಮೇಲಿನ ಗೋಪಾಲಕೃಷ್ಣ ಅಡಿಗರ ವರ್ಣನೆ ಕೈಲಾಸಂರವರನ್ನೇ ಕುರಿತು ಬರೆದಿದ್ದಿರಬೇಕು ಎನ್ನುವಷ್ಟರಮಟ್ಟಿಗೆ ಹೋಲಿಕೆಯಾಗುತ್ತದೆ. ಭೂವಿಜ್ಞಾನಿಯಾದ ಕೈಲಾಸಂ ಸ್ವತಃ ಎಂದೂ ಬತ್ತದ ಚಿನ್ನದ ಗಣಿಯಾಗಿರುವುದು ಕಾಕತಾಳೀಯವೇ ಸರಿ.
ಒಮ್ಮೆ ‘ಕೈಲಾಸಂವಾರ’ದ ಆಚರಣೆಮಾಡಿ ನಾಟಕಗಳನ್ನಾಡಿ ಕೈಲಾಸಂ ಹಾಡುಗಳ ಗಾಯನ, ವಿಚಾರಸಂಕಿರಣ ನಡೆಯಿತಂತೆ. ಅದು ಕಿವಿಗೆ ಬಿದ್ದೊಡನೆ ಮಿತ್ರರೊಬ್ಬರಿಗೆ ಕಾಗದ ಬರೆದು “ಈ ರೀತಿ ಕೆಲಸಗಳಲ್ಲಿ ತೊಡಗಿಕೊಳ್ಳುವುದರ ಬದಲು ನಿಮ್ಮ ನಿಮ್ಮ ಮನೆ ಸಾತುಪಾತುಗಳನ್ನು ಸಂತೋಷಪಡಿಸುವುದರಲ್ಲಿ ಆಸಕ್ತಿ ತೋರಬಾರದೆ?” ಎಂದು ಕೇಳಿದರಂತೆ. ಇದೇ ಕೈಲಾಸಂರವರಿಗೆ ಇದ್ದ ಕಾಳಜಿ.
ನಾಟಕಗಳಲ್ಲಿ ಕಣ್ಣೀರಿನ ಹೂರಣದ ಸಂತ ನಗುವಿನ ಕಣಕವನ್ನು ಹೊಂದಿಸುತ್ತಾರೆ ಎಂದು ತ.ಸು. ಶಾಮರಾಯರು ಬಹಳ ಅರ್ಥಗರ್ಭಿತವಾಗಿ ಒಂದೇ ಮಾತಿನಲ್ಲಿ ಕೈಲಾಸಂರವರ ಧ್ಯೇಯ ಧೋರಣೆಗಳನ್ನು ಹಿಡಿದಿಟ್ಟಿದ್ದಾರೆ. ಅದರ ಫಲವಾಗಿ ನಗು ಉಕ್ಕುತ್ತಿದ್ದಂತೆ ಮಾತು ಅರ್ಥವಾಗುತ್ತಾ ಹೋದಂತೆ ಕಣ್ಣಾಲಿಗಳು ತುಂಬಿಕೊಳ್ಳುತ್ತವೆ. ಕಣ್ಣೀರಿನ ಕಡಲಿನ ಮೇಲೆ ಹಾಸ್ಯದ ಹರಿಗೋಲನ್ನು ಹಾಯಿಸುವ ಕೈಲಾಸಂರವರ ಕಲ್ಪನಾಶಕ್ತಿ ಸದಾಕಾಲದಲ್ಲೂ ಬೆರಗುಗೊಳಿಸುವಂತಹದ್ದು. ಎಲ್ಲ ಕಾಲಕ್ಕೂ ಸಲ್ಲುವ ಮಹಾಭಾರತದಂತೆ ಕೈಲಾಸಂ ನಾಟಕಗಳು ಪ್ರಸ್ತುತ.
ಶ್ರೀಮಂತಿಕೆಯನ್ನು ಧಿಕ್ಕರಿಸಿ ಸಾಮಾನ್ಯರೊಡನೆ ಅತಿಸಾಮಾನ್ಯರಾಗಿ ಬಾಳಿ ಬದುಕಿದರು ಕೈಲಾಸಂ. ಅವರ ಅಲೆಮಾರಿ ಜೀವನದಿಂದಾಗಿ ಅನೇಕ ಊಹಾಪೆÇೀಹಗಳಿಗೆ ದಾರಿಯಾಗಿರಬಹುದು. ಹೆಂಡತಿ ಮತ್ತು ಎರಡು ಹೆಣ್ಣುಮಕ್ಕಳ ಜೀವನ ಚೆನ್ನಾಗಿಯೇ ಇತ್ತು. ಪ್ರತಿಯೊಬ್ಬರೂ ಅವರದೇ ಪ್ರತಿಭೆಯಲ್ಲಿ ಬೆಳಗಿದವರು. ಮಹಾಭಾರತದ ಮೇಲೆ ಒಬ್ಬ ಮಗಳು ಪುಸ್ತಕ ಬರೆದಿದ್ದಾರೆ. ಹೆಂಡತಿ ಕಮಲಮ್ಮ ಒಳ್ಳೆ ಗಾಯಕರು. ಗಾಯನ ಸಮಾಜದ ಸಂಸ್ಥಾಪಕ ಸದಸ್ಯರು. ಕೈಲಾಸಂ ಸಂಸಾರಕ್ಕೆ ಅಂಟಿಕೊಂಡಿರಲಿಲ್ಲವಾದರೂ ಯಾರಿಗೂ ತೊಂದರೆ ಕೊಡದ ಜೀವವದು. ಅವರಿಂದ ಸಮಾಜಕ್ಕೆ ಸಲ್ಲಬೇಕಾದದ್ದು ಸಿಗಲೆಂದೇ ಬಹುಶಃ ಅವರು ಹಾಗಿದ್ದರೆನಿಸುತ್ತದೆ.